Friday, July 31, 2015

ಭದ್ರತೆಯ ಲೋಕದಲ್ಲಿ - ೮


ಕೇವಲ ಎರಡು ದಿನಗಳಲ್ಲಿ ನಂದಿಬೆಟ್ಟದ ಬುಡದಿಂದ ಬಂಗಾಳಕೊಲ್ಲಿಯ ದಡದಲ್ಲಿದ್ದ ಸುಂದರ ಐತಿಹಾಸಿಕ ನಗರ ಮಹಾಬಲಿಪುರದ ತಾರಾ ಹೋಟೆಲ್ಲಿನಲ್ಲಿ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದೆವು.  ಹೊಸ ಜಾಗ, ಹೊಸ ಜನ, ಹೊಸ ಪರಿಸರ, ಜೊತೆಗೆ ನಮಗೆ ಮಾತನಾಡಲು ಬಾರದ ತಮಿಳು ಭಾಷೆ, ಹೋಟೆಲ್ಲಿನ ಹಾಗೂ ಊರಿನ ತುಂಬಾ ಎಲ್ಲೆಂದರಲ್ಲಿ ಕಾಣುತ್ತಿದ್ದ ವಿದೇಶಿ ಪ್ರವಾಸಿಗರು.  ಎಲ್ಲವೂ ನಮಗೆ ಹೊಸದೊಂದು ಪ್ರಪಂಚಕ್ಕೆ ಕಾಲಿಟ್ಟಂತೆ ಅನ್ನಿಸುತ್ತಿತ್ತು.  ನಿಧಾನವಾಗಿ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಹೋಟೆಲ್ಲಿನ ಅಗತ್ಯಗಳಿಗೆ ತಕ್ಕಂತೆ ಭದ್ರತೆಯ ಉಸ್ತುವಾರಿ ನೋಡಿಕೊಳ್ಳತೊಡಗಿದ್ದೆವು.  ಸಮುದ್ರ ತಟದಲ್ಲಿ ಪ್ರತ್ಯೇಕ ಬಂಗಲೆಗಳಂಥ ಕೊಠಡಿಗಳಿದ್ದ ಆ ಹೋಟೆಲ್ಲಿಗೆ ಹೆಚ್ಚಾಗಿ ಬರುತ್ತಿದ್ದವರು ಯೂರೋಪಿಯನ್ನರು.  ಅವರೊಡನೆ ಪ್ರತಿದಿನ ಸಂಭಾಷಿಸುತ್ತಾ ನಮ್ಮ ಆಂಗ್ಲಭಾಷೆಯ ಪ್ರೌಢಿಮೆ ದಿನೇ ದಿನೇ ಸುಧಾರಿಸುತ್ತಿತ್ತು. ಯೂರೋಪಿಯನ್ನರೆಂದರೆ ಬಹಳ ಶ್ರೀಮಂತರೆಂದೇ ಭಾವಿಸಿದ್ದ ಅಲ್ಲಿಯ ಜನರು  ಕಂಡ ಕಂಡಲ್ಲಿ ಅವರ ಮುಂದೆ ವಿಚಿತ್ರ ದೇಹಭಂಗಿಗಳನ್ನು ಪ್ರದರ್ಶಿಸಿ ಕಾಸಿಗಾಗಿ ಕೈಯೊಡ್ಡುತ್ತಿದ್ದರು. ಇನ್ನು ಕೆಲವರು ಅತ್ಯಂತ ಅಗ್ಗದ ಸಾಮಾನುಗಳನ್ನು ಐತಿಹಾಸಿಕ ಮಹತ್ವವಿರುವ ವಸ್ತುಗಳೆಂದು ತೋರಿಸಿ, ಸರಿಯಾಗಿ ಟೋಪಿ ಹಾಕಿ ಹೆಚ್ಚು ಹಣ ಸಂಪಾದಿಸುತ್ತಿದ್ದರು.  ಸ್ಥಳದ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿದ್ದ ಕೆಲವು ವಿದ್ಯಾವಂತ ಯುವಕರು ಸೈಕಲ್ಲುಗಳನ್ನು ಬಾಡಿಗೆಗೆ ಕೊಡುವುದರ ಜೊತೆಗೆ ವಿದೇಶೀ ಪ್ರವಾಸಿಗರನ್ನು ಮಹಾಬಲಿಪುರದ ಎಲ್ಲ ಮಹತ್ವದ ಸ್ಥಳಗಳಿಗೆ ಕರೆದೊಯ್ದು ವಿವರಣೆ ನೀಡುತ್ತಾ ಪ್ರವಾಸಿ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿದ್ದರು.

ಶತಮಾನಗಳ ಕಾಲದಿಂದಲೂ ಹೊರ ಜಗತ್ತಿನೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪಲ್ಲವ ರಾಜರ ಬಂದರು ನಗರಿ ಮಹಾಬಲಿಪುರ ತನ್ನ ಒಡಲಲ್ಲಿ ಅತ್ಯಮೂಲ್ಯವಾದ ಶಿಲ್ಪಕಲೆಯ ಸೊಬಗನ್ನು ಬಚ್ಚಿಟ್ಟುಕೊಂಡಿತ್ತು.  ಉರುಟಾದ ಗ್ರಾನೈಟ್ ಕಲ್ಲುಗಳು ಪರಿಣತ ಶಿಲ್ಪಿಗಳ ಕೈಗೆ ಸಿಕ್ಕಿ ಬೆಣ್ಣೆಯ ಮುದ್ದೆಯಂತೆ ಕೆತ್ತಲ್ಪಟ್ಟಿದ್ದು ಸುಂದರ ಶಿಲಾ ದೇವಾಲಯಗಳನ್ನು ಹೊಂದಿತ್ತು.  ಸಮುದ್ರ ತಟದ ಮಹಾಬಲಿ ದೇಗುಲ, ಹಲವಾರು ಶಿವ ಹಾಗೂ ವಿಷ್ಣು ದೇಗುಲಗಳು, ಕಲ್ಲಿನ ರಥಗಳು, ಕಲ್ಲು ಬಂಡೆಗಳನ್ನೇ ಗುಹೆಯಂತೆ ಕೆತ್ತಿ ರಚಿಸಿದ್ದ ಮಹಾಭಾರತ, ರಾಮಾಯಣದ ಕಥೆಗಳು, ಕಲ್ಲಿನಲ್ಲಿ ಅರಳಿದ್ದ ಕಾವ್ಯಗಳಾಗಿದ್ದವು.  ಹಲವಾರು ಶಿಲ್ಪಕಲಾ ತರಬೇತಿ ಕೇಂದ್ರಗಳೂ ಅಲ್ಲಿ ನಡೆಯುತ್ತಿದ್ದವು, ದೇಶ ವಿದೇಶಗಳಿಂದ ಬಂದ ಶಿಲ್ಪಕಲೆಯಲ್ಲಿ ಆಸಕ್ತಿ ಹೊಂದಿದ್ದ ವಿದ್ಯಾರ್ಥಿಗಳು ಅಲ್ಲಿ ಶಿಲ್ಪಕಲೆಯನ್ನು ಅಭ್ಯಾಸ ಮಾಡುತ್ತಿದ್ದರು. ಒಟ್ಟಾರೆ ಬೆಂಗಳೂರಿನಿಂದ ಹೋಗಿದ್ದ ನಮಗೆ ಅದೊಂದು ಸ್ವರ್ಗ ಸದೃಶ ಸ್ಥಳದಂತೆ ಕಾಣುತ್ತಿತ್ತು.

ಇಂತಿಪ್ಪ ಮಹಾಬಲಿಪುರದ ಐಶಾರಾಮಿ ಹೋಟೆಲ್ಲಿನಲ್ಲಿ ಭದ್ರತೆಯ ಉಸ್ತುವಾರಿ ಮಹಿಸಿಕೊಂಡ ಎರಡೇ ತಿಂಗಳಿನಲ್ಲಿ ಹೋಟೆಲ್ಲಿಗೆ ಹತ್ತಿರದಲ್ಲೇ ಬಾಡಿಗೆಗೆ ಒಂದು ಪುಟ್ಟ ಮನೆ ಮಾಡಿಕೊಂಡು ನನ್ನ ಮಡದಿ ಹಾಗೂ ಪುಟ್ಟ ಮಗಳನ್ನು ಅಲ್ಲಿಗೇ ಕರೆತಂದಿದ್ದೆ. ತಮಿಳಿನ ಗಂಧವೇ ಗೊತ್ತಿಲ್ಲದ ನನ್ನ ಮಡದಿಗೆ ನಮ್ಮ ಮನೆಯ ಮಾಲೀಕರ ಪತ್ನಿ ಅತ್ಯಂತ ಆಪ್ತಗೆಳತಿಯಾಗಿದ್ದಳು, ಮನೆಗೆ ಬೇಕಾದ ಸಾಮಾನುಗಳನ್ನು ತರಲು ಇಬ್ಬರೂ ಜೊತೆಯಾಗಿ ಮಾರುಕಟ್ಟೆಗೆ ಹೋಗುತ್ತಿದ್ದರು, ದಿನಬಳಕೆಯ ವಸ್ತುಗಳನ್ನು ಒಂದೊಂದಾಗಿ ತೋರಿಸುತ್ತಾ ಅವುಗಳಿಗೆ ತಮಿಳಿನಲ್ಲಿ ಏನನ್ನುತ್ತಾರೆಂದು ಆಕೆ ನನ್ನ ಮಡದಿಗೆ ಕಲಿಸಿ ಕೊಟ್ಟಿದ್ದಳು.   ಅವರ ಮೂವರು ಮಕ್ಕಳು ನನ್ನ ಪುಟ್ಟ ಮಗಳನ್ನು ಯಾವಾಗಲೂ ಹೆಗಲ ಮೇಲೆ ಹೊತ್ತುಕೊಂಡು ತಿರುಗುತ್ತಿದ್ದರು.  ಇನ್ನು ಮನೆಯ ಮಾಲೀಕ ಸಾರಾಯಿ ಮುನಿಸ್ವಾಮಿ ನನಗೆ ಅತ್ಯಂತ ಆಪ್ತನಾಗಿಬಿಟ್ಟಿದ್ದ.  ಅವರಪ್ಪನ ಕಾಲದಲ್ಲಿ ಅವರದ್ದು ಸಾರಾಯಿ ಅಂಗಡಿ ಇತ್ತಂತೆ, ಅವರಪ್ಪನಿಗೆ ಸಾರಾಯಿ ರಾಮಸ್ವಾಮಿ ಎಂದೇ ಎಲ್ಲರೂ ಕರೆಯುತ್ತಿದ್ದರಂತೆ.  ಈತ ಸಾರಾಯಿ ಅಂಗಡಿ ಮುಚ್ಚಿ ಬೇರೆ ಉದ್ಯೋಗ ಮಾಡುತ್ತಿದ್ದರೂ ಅವನಿಗೆ ಅದೇ ಹೆಸರು ಅಂಟಿಕೊಂಡಿತ್ತು!  ನನ್ನ ಬಿಡುವಿನ ಸಮಯದಲ್ಲಿ ಮೀನು ಹಿಡಿಯುವುದು, ತಮಿಳುನಾಡಿನ ಶೈಲಿಯಲ್ಲಿ ಥರಾವರಿ ಮೀನು ಮತ್ತು ಸೀಗಡಿ ಅಡಿಗೆ ಮಾಡುವುದರ ಬಗ್ಗೆ ಹೇಳಿ ಕೊಡುತ್ತಿದ್ದ.  ಅವನೊಡನೆ ಆಗಾಗ ನಾನೂ ಸಹ ಮೀನು ಹಿಡಿಯುವ ದೋಣಿ ಹತ್ತಿ ಆಳ ಸಮುದ್ರದ ಕಡೆಗೆ ಹೋಗುತ್ತಿದ್ದುದುಂಟು!  ಅಗಾಧವಾದ ವಿಶಾಲ ಗಂಭೀರ ನೀಲ ಕಡಲಿನ ಮೇಲೆ ಪುಟ್ಟ ದೋಣಿಯೊಂದರಲ್ಲಿ ಕುಳಿತು ಘಂಟೆಗಟ್ಟಲೆ ತೇಲಾಡುವುದು ನಿಜಕ್ಕೂ ಜೀವನದ  ಅನುಭವವೇ ಸರಿ!  ಅಲ್ಲಿದ್ದಷ್ಟು ದಿನಗಳೂ ನಮ್ಮ ಮನೆಯಲ್ಲಿ ಒಂದಿಲ್ಲೊಂದು ಮೀನಿನ ಅಡುಗೆ ಇದ್ದೇ ಇರುತ್ತಿತ್ತು!  ನಮ್ಮ ಜನ್ಮದಲ್ಲಿಯೇ ಅಷ್ಟೊಂದು ವಿಧದ ಮೀನುಗಳನ್ನು ನಾವು ತಿಂದಿರಲಿಲ್ಲ, ಬಹುಶಃ ಇನ್ನು ಮುಂದೆ ತಿನ್ನಲಾಗುವುದೂ ಇಲ್ಲವೇನೋ!

ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಹೋಟೆಲ್ಲಿನ ಹಿಂಭಾಗದ ಸಮುದ್ರ ತೀರದ ಕಡೆಗಿನ ಗೇಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭದ್ರತಾ ರಕ್ಷಕರು ಅಲ್ಲಿ ನಿಲ್ಲದೆ ಮಾಯವಾಗಿ ಜನರೇಟರ್ ರೂಮಿನಲ್ಲೋ, ಆಡಳಿತ ಕಚೇರಿಯ ಕಟ್ಟಡದ ಒಂದು ಮೂಲೆಯಲ್ಲೋ ಅವಿತು ನಿದ್ರೆ ಹೊಡೆಯುತ್ತಿದ್ದರು.  ಧಿಡೀರೆಂದು ನಾನೊಮ್ಮೆ ರಾತ್ರಿಯಲ್ಲಿ ಭೇಟಿ ಕೊಟ್ಟಾಗ ಅಲ್ಲಿರಬೇಕಾದವರು ಸಿಗದೇ ಎಲ್ಲಿದ್ದಾರೆಂದು ಹುಡುಕಬೇಕಾಗುತ್ತಿತ್ತು, ಇದಕ್ಕೆ ಕಾರಣವೇನೆಂದು ಹುಡುಕಿದಾಗ ಕಂಡು ಬಂದ ವಿಷಯಗಳು ಕುತೂಹಲಕಾರಿಯಾಗಿದ್ದವು.  ಅಮಾವಾಸ್ಯೆಯ ದಿನಗಳಲ್ಲಿ ಕಡಲು ಶಾಂತವಾಗಿ ದಡದಿಂದ ಸುಮಾರು ಐವತ್ತು ಮೀಟರಿನಷ್ಟು ದೂರಕ್ಕೆ ಕಡಲಿನ ನೀರು ಹಿಂದೆ ಸರಿಯುತ್ತಿತ್ತು.  ಆ ಸಮಯದಲ್ಲಿ ಕಡಲಿನ ಆಮೆಗಳು, ವಿಚಿತ್ರ ರೀತಿಯ ಮೊಂಡು ಬಾಲದ ಹಾವುಗಳು, ಧಡೂತಿ ಕಪ್ಪೆಗಳು ದಡದಲ್ಲಿ ವಿಹರಿಸುತ್ತಿದ್ದವು.  ಅಗಾಧ ಕಡಲಿನ ಕತ್ತಲಿನ ನೀರವತೆಯ ಜೊತೆಗೆ ಈ ಕಡಲ ಪ್ರಾಣಿಗಳ ಓಡಾಟವೂ ನಮ್ಮ ಭದ್ರತಾ ರಕ್ಷಕರ ಭಯಕ್ಕೆ ಕಾರಣವಾಗಿದ್ದವು.  ಇನ್ನು ಹುಣ್ಣಿಮೆಯ ದಿನ ಬಂತೆಂದರೆ ಸಾಕು, ಅದುವರೆಗೂ ತಣ್ಣಗಿರುತ್ತಿದ್ದ ಕಡಲು ಒಮ್ಮೆಗೆ ಅಬ್ಬರಿಸಿ ಬೊಬ್ಬಿರಿಯುತ್ತಿತ್ತು.  ಅಗಾಧ ಕಡಲಿನಲ್ಲಿ ಬೀಸಿ ಬರುತ್ತಿದ್ದ ದೈತ್ಯ ಅಲೆಗಳು ಎಲ್ಲೆಲ್ಲಿಂದಲೋ ಬೇಕು ಬೇಡದನ್ನೆಲ್ಲಾ ಹೊತ್ತು ತಂದು ಹೋಟೆಲ್ಲಿನ ಹಿಂಬದಿಯ ಗೇಟಿನ ಬದಿಗೆಸೆಯುತ್ತಿದ್ದವು.  ಸುಮಾರು ನೂರು ಮೀಟರಿನಷ್ಟು ಮೇಲಕ್ಕೆ ಬರುತ್ತಿದ್ದ ಕಡಲಿನ ಉಪ್ಪುನೀರು ಒಮ್ಮೊಮ್ಮೆ ಹಿಂಬದಿಯ ಗೇಟನ್ನೂ ದಾಟಿ ಈಜುಕೊಳವನ್ನು ಗಬ್ಬೆಬ್ಬಿಸಿ, ಒಮ್ಮೊಮ್ಮೆ ಕಡಲ ದಂಡೆಯ ಕಡೆಗಿದ್ದ ಕೊಠಡಿಗಳೊಳಕ್ಕೂ ಪ್ರವೇಶಿಸುತ್ತಿತ್ತು. ಆಗೆಲ್ಲಾ ಹೋಟೆಲ್ಲಿನ ಆವರಣದ ತುಂಬಾ ಕಡಲಿನ ಏಡಿಗಳು, ಆಮೆಗಳು, ಕೆಲವು ಬಗೆಯ ಹಾವುಗಳು, ಥರಾವರಿ ಮೀನುಗಳು ಕಂಡುಬರುತ್ತಿದ್ದವು.  ಎಲ್ಲಕ್ಕಿಂತ ಹೆಚ್ಚಾಗಿ ತೊಂದರೆ ಕೊಡುತ್ತಿದ್ದದ್ದು ಲೋಳೆ ಮೀನು, ಕಡಲಿನ ಅಬ್ಬರದ ಅಲೆಗಳೊಡನೆ ತೇಲಿಬರುತ್ತಿದ್ದ ಅವುಗಳು ಎಲ್ಲೋ ಒಂದೆಡೆ ನೀರಿಡುವ ಕಡೆಯಲ್ಲಿ ಮತ್ತು ಈಜುಕೊಳದಲ್ಲಿ ಆಶ್ರಯ ಪಡೆದು ಕಾಲಿಟ್ಟವರಿಗೆ ಅಂಟಿಕೊಂಡುಬಿಡುತ್ತಿದ್ದವು.  ನಂತರದ್ದು ಫಜೀತಿಯೋ ಫಜೀತಿ, ಆ ಲೋಳೆಮೀನು ಅಂಟಿಕೊಂಡ, ಹರಿದಾಡಿದ ಕಡೆಯಲ್ಲೆಲ್ಲಾ ಚರ್ಮ ಕೆಂಪಗಾಗಿ ಭಯಂಕರ ಕೆರೆತ ಉಂಟಾಗುತ್ತಿತ್ತು.  ಸಾಕಷ್ಟು ಜನ ವಿದೇಶಿ ಅತಿಥಿಗಳು ಕೂಡಾ ಈ ಲೋಳೆಮೀನಿನ ಆತಿಥ್ಯ ಅನುಭವಿಸಿ ಮೊದಲೇ ಕೆಂಪಾಗಿದ್ದ ಅವರ ಚರ್ಮ ಇನ್ನಷ್ಟು ಕೆಂಪಗಾಗಿ ರಕ್ತ ತೊಟ್ಟಿಕ್ಕುತ್ತಿತ್ತು.

ಒಮ್ಮೆ ಮಧುಚಂದ್ರಕ್ಕೆಂದು ಇಟಲಿಯಿಂದ ಯುವ ಜೋಡಿಯೊಂದು ಆ ಹೋಟೆಲ್ಲಿನಲ್ಲಿ ಉಳಿದುಕೊಂಡಿತ್ತು.  ಹರೆಯದ ಹುಮ್ಮಸ್ಸಿನಲ್ಲಿ ಚೆನ್ನಾಗಿಯೇ ಪ್ರಣಯ ಕೇಳಿಯನ್ನಾಡುತ್ತಿದ್ದ ಆ ಉನ್ಮತ್ತ ಜೋಡಿ ಈಜುಕೊಳದಲ್ಲಿ ಈಜು ಹೊಡೆಯುವಾಗಲೂ ಸಹಾ ಬಿಯರ್ ಕುಡಿಯುತ್ತಲೇ ಒಬ್ಬರಿಗೊಬ್ಬರು ತಬ್ಬಿಕೊಂಡು, ಸಿಹಿಚುಂಬನಗಳ ವಿನಿಮಯ ಮಾಡಿಕೊಳ್ಳುತ್ತಿದ್ದರು.
ಕದ್ದು ನೋಡುವ ಕೆಟ್ಟ ಚಾಳಿಯಿದ್ದ ನಮ್ಮ ಭದ್ರತಾ ರಕ್ಷಕರಿಗಂತೂ ಅವರಿಬ್ಬರೂ ಮನರಂಜನೆಯ ವಸ್ತುವಾಗಿದ್ದರು.  ಹೀಗಿರುವಾಗ ಒಮ್ಮೆ ಮಧುಪಾನದ ಜೊತೆಗೆ ಗೆಳೆಯನ ಚುಂಬನದಿಂದಲೂ ಉನ್ಮತ್ತಳಾಗಿದ್ದ ಯುವತಿ ಈಜುಕೊಳದಿಂದ ಹೊರ ಬಂದು ಮಧ್ಯದಲ್ಲಿ ಅಳವಡಿಸಲಾಗಿದ್ದ ಅಲ್ಯುಮಿನಿಯಂ ಕಂಬಿಯ ಮೇಲೆ ನಿಂತು ಒಂದೇ ಕಾಲಿನಲ್ಲಿ ನರ್ತಿಸುತ್ತಾ ತನ್ನ ಇನಿಯನಿಗೆ ತಾನೂ ಬರುವಂತೆ ಸನ್ನೆ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಕಾಲು ಜಾರಿ ಬಿದ್ದ ಆಕೆಯ ಮರ್ಮಾಂಗ ಅಲ್ಯುಮಿನಿಯಂ ಕಂಬಿಯ ಮೇಲೆ ಬಿದ್ದು ಕ್ಷಣಾರ್ಧದಲ್ಲಿ ಇಡೀ ಈಜುಕೊಳ ರಕ್ತದಿಂದ ಕೆಂಪಾಗಿತ್ತು.  ಅಸಾಧ್ಯ ನೋವಿನಿಂದ ಆಕೆ ಚೀರಾಡುತ್ತಿದ್ದಳು, ತಕ್ಷಣ ಸ್ಥಳಕ್ಕೆ ಧಾವಿಸಿದ ನಮ್ಮ ಭದ್ರತಾ ರಕ್ಷಕರ ತಂಡ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದೆವು.  ಅಷ್ಟೆತ್ತರದಿಂದ ಬಿದ್ದ ರಭಸಕ್ಕೆ ಆಕೆಯ ಜನನಾಂಗ ಸಂಪೂರ್ಣ ಜರ್ಝರಿತವಾಗಿ ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಯೊಂದಕ್ಕೆ ಶಸ್ತ್ರಚಿಕಿತ್ಸೆಗಾಗಿ ಕಳುಹಿಸಲಾಗಿತ್ತು.  ಆಕೆಯ ಅಜಾಗರೂಕತೆಯಿಂದಾಗಿ ಅವರ ಮಧುಚಂದ್ರದ ಕನಸು ಸಂಪೂರ್ಣವಾಗಿ ಭಗ್ನವಾಗಿತ್ತು. ಆ ರೀತಿಯ ಅಪಘಾತವೊಂದನ್ನು ಈ ಹಿಂದೆ ನೋಡಿರಲಿಲ್ಲ, ಮತ್ತೆ ಇದುವರೆಗೂ ನೋಡಲೂ ಇಲ್ಲ!

ಮತ್ತೊಂದು ಘಟನೆಯಲ್ಲಿ ಮೂವರು ವಿದೇಶೀಯರು ಒಬ್ಬಳು ಕಪ್ಪುಸುಂದರಿಯನ್ನು ಹೋಟೆಲ್ಲಿಗೆ ಕರೆತಂದಿದ್ದರು.  ಅವಳೋ ಥೇಟ್ ನಮ್ಮ ಬೇಲೂರಿನ ಶಿಲಾಬಾಲಿಕೆಯನ್ನೂ ನಾಚಿಸುವಂತಿದ್ದಳು. ಅವಳನ್ನು ಕೊಠಡಿಗೆ ಕರೆದೊಯ್ದ ವಿದೇಶೀಯರು ತಾವೂ ಮಧ್ಯಪಾನ ಮಾಡಿ, ಅವಳಿಗೂ ಚೆನ್ನಾಗಿ ಕುಡಿಸಿ, ನಶೆಯಲ್ಲಿ ಸಾಮೂಹಿಕವಾಗಿ ಭೋಗಿಸಲಾರಂಭಿಸಿದ್ದಾರೆ.  ಮೊದ ಮೊದಲು ಸಣ್ಣಪುಟ್ಟ ಶಬ್ಧಗಳು ಕೇಳುತ್ತಿದ್ದಾಗ ನಮ್ಮ ಭದ್ರತಾ ರಕ್ಷಕರು ಒಬ್ಬರನ್ನೊಬ್ಬರು ನೋಡಿಕೊಂಡು ಮುಸಿಮುಸಿ ನಗುತ್ತಿದ್ದರು.  ಆದರೆ ಕ್ರಮೇಣ ಆ ಹೆಣ್ಣಿನ ಆಕ್ರಂದನ ಜೋರಾಗಿ ಅವಳು ಸಹಾಯಕ್ಕಾಗಿ ಅಂಗಲಾಚುತ್ತ ಕೂಗಾಡುತ್ತಿದ್ದಾಗ ಏನು ಮಾಡಬೇಕೆಂದು ತಿಳಿಯದೆ ಕಚೇರಿಯಲ್ಲಿದ್ದ ನನ್ನ ಬಳಿಗೆ ಬಂದು ವಿಷಯ ತಿಳಿಸಿದ್ದರು.  ಸಮಯ ಅದಾಗಲೇ ರಾತ್ರಿಯ ಹತ್ತಾಗಿತ್ತು, ನಾನು ಮನೆಗೆ ಹೋಗಲು ಸಿದ್ಧನಾಗುತ್ತಿದ್ದೆ. ಒಡನೆಯೇ ಹೋಟೆಲ್ಲಿನ ಆವರಣದಲ್ಲಿಯೇ ಇದ್ದ ವ್ಯವಸ್ಥಾಪಕರ ಮನೆಗೆ ಹೋಗಿ ಅವರಿಗೆ ವಿಷಯ ತಿಳಿಸಿ, ಮುಂದೆ ಏನು ಮಾಡಬೇಕೆಂದು ಕೇಳಿದ್ದೆ.  ನನ್ನ ಜೊತೆಗೇ ಬಂದ ಅವರು "ಮಾಸ್ಟರ್ ಕೀ" ತೆಗೆದುಕೊಂಡು ಬರುವಂತೆ ಆದೇಶಿಸಿದ್ದರು.  ನಾವು ಆ ವಿದೇಶೀಯರು ತಂಗಿದ್ದ ಕೊಠಡಿಯ ಬಳಿಗೆ ಬರುವ ಹೊತ್ತಿಗೆ ಕೊಠಡಿಯೊಳಗಿದ್ದ ಆ ಹೆಣ್ಣಿನ ಆಕ್ರಂದನ ಮುಗಿಲು ಮುಟ್ಟಿತ್ತು!  ಸಹಾಯ ಮಾಡಿರೆಂದು ಕಾಪಾಡಿರೆಂದು ಜೋರಾಗಿ ಕಿರುಚುತ್ತಿದ್ದಳು, ಕೊಠಡಿಯೊಳಗೆ ದೊಡ್ಡದೊಂದು ಸಂಘರ್ಷವೇ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು. ವ್ಯವಸ್ಥಾಪಕರ ಆದೇಶದಂತೆ ಕೊಠಡಿಯ ಬಾಗಿಲನ್ನು "ಮಾಸ್ಟರ್ ಕೀ" ಬಳಸಿ ತೆಗೆಯಲು ಹೋದರೆ ಅದು ಒಳಗಿನಿಂದ ಡಬಲ್ ಲಾಕ್ ಆಗಿತ್ತು!   ಕೊನೆಗೆ ವಿಧಿಯಿಲ್ಲದೆ  ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಬೇಕಾಯಿತು,  ಅದಾಗಲೇ ವ್ಯವಸ್ಥಾಪಕರ ಕಚೇರಿಯಿಂದ ಪೊಲೀಸ್ ಠಾಣೆಗೆ ಕರೆ ಮಾಡಿ ಹೋಟೆಲ್ಲಿಗೆ ತಕ್ಷಣ ಬರುವಂತೆ ವಿನಂತಿಸಲಾಗಿತ್ತು. ನಾವು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಅಲ್ಲಿನ ದೃಶ್ಯ ಭೀಭತ್ಸಕರವಾಗಿತ್ತು!  ಬೆತ್ತಲಾಗಿದ್ದ ಮೂವರು ವಿದೇಶೀಯರು ಮತ್ತು ಕಪ್ಪುಸುಂದರಿಯ ನಡುವೆ ದೊಡ್ಡ ಹೋರಾಟವೇ ನಡೆದಿತ್ತು, ಮೂವರ ಆಕ್ರಮಣದಿಂದ ಸಂಪೂರ್ಣ ಘಾಸಿಗೊಂಡಿದ್ದ ಕಪ್ಪುಸುಂದರಿಯ ಮೈಯೆಲ್ಲಾ ರಕ್ತಮಯವಾಗಿದ್ದು, ಜನನಾಂಗದಿಂದ ರಕ್ತ ಸುರಿಯುತ್ತಿತ್ತು!  ಕಾಡುಪ್ರಾಣಿಗಳಂತೆ ಅವಳ ಮೇಲೆ ಆಕ್ರಮಣ ಮಾಡಿದ್ದ ವಿದೇಶೀಯರು ಆ ಹೆಣ್ಣಿನ ದೇಹದ ಇಂಚಿಂಚನ್ನೂ ಗಾಯಗೊಳಿಸಿದ್ದರು. ಅದೇ ಸಮಯಕ್ಕೆ ತಮ್ಮ ಸಿಬ್ಬಂದಿಯೊಡನೆ ಆಗಮಿಸಿದ ಪೊಲೀಸ್ ಇನ್ಸ್ಪೆಕ್ಟರ್ ಆ ಮೂವರು ವಿದೇಶೀಯರನ್ನು ಬಂಧಿಸಲು ಮುಂದಾದಾಗ ಉನ್ಮತ್ತರಾಗಿದ್ದ ಅವರು ಪೊಲೀಸರ ಮೇಲೆಯೇ ಕೈ ಮಾಡಲು ಮುಂದಾಗಿದ್ದರು.  ನಮ್ಮ ಭದ್ರತಾ ಸಿಬ್ಬಂದಿಯ ಸಹಕಾರದೊಡನೆ ಅವರನ್ನು ಬಂಧಿಸಿ ಕಪ್ಪುಸುಂದರಿಯನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದ್ದರು.  ಬಹುಶಃ ವೇಶ್ಯೆಯೊಬ್ಬಳ ಮೇಲೆ ನಡೆದ ಅತ್ಯಂತ ಹೇಯ ಅತ್ಯಾಚಾರ ಅದಾಗಿತ್ತು!

No comments: