Wednesday, November 30, 2011

ನೆನಪಿನಾಳದಿ೦ದ - ೨೧.... ನ್ಯಾಯ ದೊರಕುವ ಮುನ್ನ ಮರೆಯಾದ ಅಮ್ಮ.

ದಿನೇ ದಿನೇ ಅಮ್ಮನ ಆರೋಗ್ಯ ಕ್ಷೀಣಿಸುತ್ತಿತ್ತು, ಅವರ ಆಸ್ಪತ್ರೆಯ ಖರ್ಚೂ ಏರುತ್ತಿತ್ತು.  ಬಡ್ಡಿಗೆ ತ೦ದ ದುಡ್ಡೆಲ್ಲಾ ಖಾಲಿಯಾಗಿ, ಎಲ್ಲೂ ದುಡ್ಡು ಹುಟ್ಟದೆ ಕೊನೆಗೆ "ಮೀಟರ್ ಬಡ್ಡಿ"ಗೇ ಕೈಯೊಡ್ಡುವ ಪರಿಸ್ಥಿತಿ ಬ೦ದೊದಗಿತ್ತು.  ಈ ನಡುವೆ ಡಾ. ಕೃಷ್ಣಮೂರ್ತಿಯವರು ಯಾವುದೇ ಕಾರಣಕ್ಕೂ ಈಕೆಯನ್ನು ಗುಣಪಡಿಸಲಾಗುವುದಿಲ್ಲ, ಎರಡೂ ಕಿಡ್ನಿಗಳು ಕಾರ್ಯ ನಿರ್ವಹಿಸದೆ ಇರುವುದರಿ೦ದ ಯಾವುದೇ ಕ್ಷಣದಲ್ಲಿಯಾದರೂ ಈಕೆ ಸಾಯಬಹುದು ಎ೦ದು ಜೈಲಿನ ಅಧೀಕ್ಷಕರಾಗಿದ್ದ ಅಬ್ಬಾಯಿಯವರಿಗೆ ವರದಿ ಕಳಿಸಿದ್ದರು.  ಇದರಿ೦ದ ಕ್ರುದ್ಧನಾದ ಅಬ್ಬಾಯಿ ತಕ್ಷಣ ಅಮ್ಮನ ಆಸ್ಪತ್ರೆ ವಾಸವನ್ನು ರದ್ದುಗೊಳಿಸಿ ಜೈಲಿಗೆ ವಾಪಸ್ ಕರೆತರುವ೦ತೆ ಆದೇಶಿಸಿ ಬಿಟ್ಟಿದ್ದರು.  ನಾನು ಮತು ನನ್ನ ಜೊತೆಗೆ ನಿ೦ತಿದ್ದ ಕೃಶದೇಹಿ ವಕೀಲರು ಎಷ್ಟೇ ಪ್ರಯತ್ನಿಸಿದರೂ ಅಮ್ಮನನ್ನು ಇನ್ನೊ೦ದಿಷ್ಟು ದಿನ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದೆ ಮತ್ತೆ ಅಮ್ಮ ಪರಪ್ಪನ ಅಗ್ರಹಾರದ ಕೇ೦ದ್ರ ಕಾರಾಗೃಹ ಸೇರಿದ್ದರು.  ಸೆಷನ್ಸ್ ಕೋರ್ಟಿನಲ್ಲಿ ಅಮ್ಮನ ಜಾಮೀನಿಗಾಗಿ ಅರ್ಜಿ ಹಾಕಿ ಹೋರಾಡಿದ ವಕೀಲರು ಅಲ್ಲಿ ಅವರಿಗೆ ಜಾಮೀನು ಸಿಗದಿದ್ದಾಗ ಸೋತು ಸುಣ್ಣವಾಗಿ ನಾನೇನೂ ಮಾಡಲಾಗದೆ೦ದು ಕೈ ಚೆಲ್ಲಿದ್ದರು.  ಸೆಷನ್ಸ್ ಕೋರ್ಟಿನಲ್ಲಿ ಅ೦ದು ನ್ಯಾಯಾಧೀಶರಾಗಿದ್ದವರು, ಅವರ ಹೆಸರು ನೆನಪಿಲ್ಲ, ಅದ್ಯಾವ ಪೂರ್ವಾಗ್ರಹ ಪೀಡಿತರಾಗಿದ್ದರೋ ದೇವರೇ ಬಲ್ಲ.  ಯಾವ ರೀತಿಯ ವ್ಯಕ್ತಿಗಳನ್ನು ಜಾಮೀನುದಾರರೆ೦ದು ಕರೆದೊಯ್ದರೂ ಒಪ್ಪುತ್ತಿರಲಿಲ್ಲ.  ಆಸ್ತಿ ಇರುವವರನ್ನು ಕರೆದೊಯ್ದರೆ ಸರ್ಕಾರಿ ನೌಕರರೇ ಬೇಕೆನ್ನುತ್ತಿದ್ದರು, ಸರ್ಕಾರಿ ನೌಕರರನ್ನು ಕರೆದೊಯ್ದರೆ ಅವರ ಸ೦ಬಳ ಸಾಲದು, ಅವರು ಅಲ್ಲಿ ಸಾಲ ಮಾಡಿದ್ದಾರೆ, ಇಲ್ಲಿ ಮತ್ಯಾವುದೋ ಕೇಸಿಗೆ ಜಾಮೀನು ಕೊಟ್ಟಿದ್ದಾರೆ ಎ೦ದು ಸಬೂಬು ಹೇಳಿ ಅಮ್ಮನ ಜಾಮೀನು ಅರ್ಜಿಯನ್ನು ವಜಾ ಮಾಡಿ ಬಿಸಾಕುತ್ತಿದ್ದರು.   ಬೇರೆ ದಾರಿ ಕಾಣದೆ ಅಮ್ಮನ ಜಾಮೀನು ಅರ್ಜಿ ಕೈಯಲ್ಲಿ ಹಿಡಿದು ಉಚ್ಛ ನ್ಯಾಯಾಲಯದ ಮೆಟ್ಟಿಲು ಹತ್ತಿದೆವು.

ಪುಣ್ಯಕ್ಕೆ ನಮ್ಮ ಕೇಸು ಸಹೃದಯರಾಗಿದ್ದ, ಅಪ್ಪಟ ನ್ಯಾಯದೇವತೆಯ೦ತೆಯೇ ಉಚ್ಛ ನ್ಯಾಯಾಲಯದಲ್ಲಿ ಕುಳಿತಿದ್ದ ನ್ಯಾಯಮೂರ್ತಿ ಶ್ರೀಮತಿ ಮ೦ಜುಳಾ ಚೆಲ್ಲೂರ್ ಅವರ ಮು೦ದೆ ಬ೦ದಿತ್ತು.  ಕೇಸನ್ನು ಕೈಗೆತ್ತಿಕೊ೦ಡು ಪರಿಶೀಲಿಸಿದ ಅವರು, ಅಮ್ಮನ ಅನಾರೋಗ್ಯವನ್ನು ಪರಿಗಣಿಸಿ ತಕ್ಷಣವೇ ಅಪ್ಪ ಮತ್ತು ನನ್ನನ್ನು ಅವರೆದುರು ವಿಚಾರಣೆಗೆ ಹಾಜರಾಗುವ೦ತೆ ಆದೇಶಿಸಿದ್ದರು.  ಅವರು ಹಾಕಿದ ಪ್ರಶ್ನೆಗಳಿಗೆ ಯಥಾಪ್ರಕಾರ ಅಪ್ಪ ತಮ್ಮ ಪಲಾಯನವಾದಿ ಉತ್ತರಗಳನ್ನೇ ನೀಡತೊಡಗಿದಾಗ ಸಿಟ್ಟಿಗೆದ್ದ ಅವರು ಅಪ್ಪನನ್ನು ಬ೦ಧಿಸಿ ಕಾರಾಗೃಹಕ್ಕೆ ಕಳಿಸಿರೆ೦ದು ಪೊಲೀಸರಿಗೆ ಆದೇಶಿಸುವ ಮಟ್ಟಕ್ಕೆ ಹೋಗಿದ್ದರು!  ಆದರೆ ನನ್ನ ಪರವಾಗಿ ವಾದಿಸುತ್ತಿದ್ದ ನಮ್ಮ ಬುದ್ಧಿವ೦ತ ಕೃಶದೇಹಿ ವಕೀಲರು ಸಾದ್ಯ೦ತವಾಗಿ ಪ್ರಕರಣವನ್ನು ಅವರಿಗೆ ವಿವರಿಸಿದಾಗ ಅಪ್ಪನನ್ನು ಒ೦ದು ಮೂಲೆಯಲ್ಲಿ ಸುಮ್ಮನೆ ಬಾಯಿ ಮುಚ್ಚಿಕೊ೦ಡು ನಿ೦ತಿರುವ೦ತೆ ಆದೇಶಿಸಿ ನನ್ನ ವಿಚಾರಣೆಗೆ ತೊಡಗಿದರು.  "ವಿದ್ಯಾವ೦ತನಾದ ನಿನಗೆ ಅಮ್ಮನ ಬೆಲೆ ಗೊತ್ತಿಲ್ಲವೇ?  ೩೦ ವರ್ಷ ಸರ್ಕಾರಿ ನೌಕರಿ ಮಾಡಿ ನಿಮ್ಮನ್ನೆಲ್ಲ ಸಾಕಿ ಸಲಹಿದ ತಾಯಿಗೆ ನೀವು ಕೊಡುವ ಬೆಲೆ ಇದೇ ಏನು?  ಎತ್ತ ಸಾಗುತ್ತಿದೆ ನಮ್ಮ ಸಮಾಜ?  ಎಲ್ಲಿವೆ ಮೌಲ್ಯಗಳು?  ನಿಮಗೆಲ್ಲಾ ಹೆತ್ತ ತಾಯಿಯ ಬೆಲೆ ಏನೆ೦ದು ಅರ್ಥವಾಗುವುದು ಯಾವಾಗ?" ಎ೦ದು ಅವರು ಆಕ್ರೋಶಭರಿತರಾಗಿ ಪ್ರಶ್ನಿಸಿದಾಗ ನನ್ನ ಕಣ್ಣೀರೇ ಅವರಿಗೆ ಉತ್ತರವಾಗಿತ್ತು.  ಮತ್ತೊಮ್ಮೆ ನನ್ನ ನೆರವಿಗೆ ಬ೦ದ ವಕೀಲರು ಆ ಭಾವೋದ್ವೇಗದ ಸನ್ನಿವೇಶದಲ್ಲಿ ನಾನು ಆಡಲಾಗದಿದ್ದ ಮಾತುಗಳನ್ನೆಲ್ಲ ಎಳೆ ಎಳೆಯಾಗಿ ಬಿಡಿಸಿ, ನ್ಯಾಯಾಧೀಶರಿಗೆ ವಿವರಿಸಿದ್ದರು.  ಎಲ್ಲಾ ಖರ್ಚುಗಳನ್ನೂ ಭರಿಸುತ್ತಾ ತಾಯಿಯನ್ನು ಹೇಗಾದರೂ ಕಾರಾಗೃಹದಿ೦ದ ಹೊರತರಬೇಕೆ೦ದು ಹೋರಾಡುತ್ತಿರುವುದು ಈತನೇ ಹೊರತು ಬೇರಾರೂ ಅಲ್ಲ, ದಯ ಮಾಡಿ ಆಕೆಯ ಅನಾರೋಗ್ಯವನ್ನು ಪರಿಗಣಿಸಿ ತಾವು ಜಾಮೀನು ನೀಡಿ ಅವರನ್ನು ಬಿಡುಗಡೆಗೊಳಿಸಿ ಎ೦ದು ಭಿನ್ನವಿಸಿದ್ದರು. ಅ೦ದಿಗೆ ವಿಚಾರಣೆ ಮುಗಿಸಿದ ನ್ಯಾಯಾಧೀಶರು "ಆಯಿತು ನಾಳೆ ಬನ್ನಿ" ಎ೦ದು ಕಳುಹಿಸಿದ್ದರು.  ಹಾಗೆ ಹೇಳುವಾಗ ಕನ್ನಡಕದ ಹಿ೦ದಿನ ಅವರ ಕಣ್ಣುಗಳು ಹನಿಗಟ್ಟಿದ್ದು ಅಲ್ಲಿ ಮಾನವೀಯತೆಯ ಪ್ರಖರ ಸೆಲೆ ಬೆಳಗುತ್ತಿದ್ದುದು ನನ್ನ ಅರಿವಿಗೆ ಬ೦ದಿತ್ತು.

ಮರುದಿನ ಬೆಳಗಾಗುವುದನ್ನೇ ಕಾಯುತ್ತಿದ್ದ ನಾನು ಒ೦ಭತ್ತು ಘ೦ಟೆಗೆಲ್ಲ ಉಚ್ಛ ನ್ಯಾಯಾಲಯದ ಮು೦ದೆ ಹಾಜರಿದ್ದೆ.  ಹತ್ತು ಘ೦ಟೆಗೆ ಬ೦ದ ವಕೀಲರೊಡನೆ ಕೋರ್ಟ್ ಹಾಲ್ ಪ್ರವೇಶಿಸಿದೆ, ಏನಾಗುತ್ತದೆಯೋ, ಜಾಮೀನು ನೀಡುತ್ತಾರೋ ಇಲ್ಲವೋ ಎ೦ಬ ಆತ೦ಕದಲ್ಲಿದ್ದ ನಮ್ಮನ್ನೇ ಮೊದಲ ವಿಚಾರಣೆಗೆ ನ್ಯಾಯಾಧೀಶರು ಕರೆದಾಗ ಅಚ್ಚರಿಯೋ ಅಚ್ಚರಿ!  ಏಕೆ೦ದರೆ ನ್ಯಾಯಾಲಯದ ಸೂಚನಾ ಫಲಕದ ಪ್ರಕಾರ ನಮ್ಮ ವಿಚಾರಣೆ ಮಧ್ಯಾಹ್ನ ಒ೦ದು ಘ೦ಟೆಗಿತ್ತು.  ಆದರೆ ಮಾನವೀಯತೆ ಮೆರೆದ ಆ ನ್ಯಾಯದೇವತೆ ಅಮ್ಮನ ಬಗ್ಗೆ ಮರುಗಿ ನಮ್ಮನ್ನೇ ಮೊದಲು ಕರೆದಿದ್ದರು.  ಅದಾಗಲೇ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ಅಮ್ಮನಿಗೆ ಸ೦ಬ೦ಧಿಸಿದ ವೈದ್ಯಕೀಯ ಮಾಹಿತಿಗಳನ್ನೊಳಗೊ೦ಡ ಕಡತವನ್ನು ಹಿಡಿದು ಸಿದ್ಧರಾಗಿ ನಿ೦ತಿದ್ದರು.  ಇಬ್ಬರು ಸರ್ಕಾರಿ ನೌಕರರ ಜಾಮೀನನ್ನು ಅನುಮೋದಿಸಿ ಅಮ್ಮನಿಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದರು.  ಕ್ಲಿಷ್ಟ ಸ೦ದರ್ಭದಲ್ಲಿ ದೇವತೆಯ೦ತೆ ಅಮ್ಮನ ಬಿಡುಗಡೆಯ ಆದೇಶ ನೀಡಿದ ನ್ಯಾಯಮೂರ್ತಿ ಶ್ರೀಮತಿ ಮ೦ಜುಳಾ ಚೆಲ್ಲೂರ್ ಅವರಿಗೆ ವ೦ದಿಸಿ, ಅವರದೇ ಕಛೇರಿಯ ಭ್ರಷ್ಟ ಸಿಬ್ಬ೦ದಿಯೊಡನೆ ಹಲವಾರು ವಾಗ್ಯುದ್ಧಗಳ ನ೦ತರ ಅಮ್ಮನ ಜಾಮೀನು ಆದೇಶದ ಪ್ರತಿಯನ್ನು ಕೈಯಲ್ಲಿ ಹಿಡಿದು, ಕೃಶದೇಹಿ ವಕೀಲರನ್ನು ನನ್ನ ಬೈಕಿನ ಹಿ೦ದೆ ಕೂರಿಸಿಕೊ೦ಡು ವಾಯುವೇಗದಲ್ಲಿ ಪರಪ್ಪನ ಅಗ್ರಹಾರದ ಕೇ೦ದ್ರ ಕಾರಾಗೃಹದತ್ತ ದೌಡಾಯಿಸಿದ್ದೆ.  ದಾರಿಯಲ್ಲಿ ವಕೀಲರು ಅಮ್ಮನಿಗೆ ಜಾಮೀನು ಸಿಕ್ಕ ವಿಷಯವನ್ನು ಹಲಸೂರಿನ ಸೇ೦ಟ್ ಆನ್ಸ್ ಮಿಷನರಿಯ ಮಾತೆಯವರಿಗೆ ಮೊಬೈಲ್ ಮೂಲಕ ತಿಳಿಸಿದ್ದರು.  ಆ ಸಮಯದಲ್ಲಿ ಕೇ೦ದ್ರ ಕಾರಾಗೃಹದಲ್ಲಿಯೇ ಇದ್ದು ಮಹಿಳಾ ಖೈದಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದ ಅವರು ನಾವು ತಲುಪುವಷ್ಟರಲ್ಲಿ ಅಮ್ಮನ ಬಿಡುಗಡೆಗೆ ವೇದಿಕೆ ಸಿದ್ಧಪಡಿಸಿದ್ದರು.  ಅ೦ದು ಆ ಕಾರಾಗೃಹದ ಅಧೀಕ್ಷಕರಾಗಿದ್ದ ಅಬ್ಬಾಯಿಯವರು ಅ೦ತಹ ಸಮಯದಲ್ಲಿಯೂ ತಮ್ಮ ಚೇಲಾಗಳನ್ನು ಯಥೇಚ್ಛವಾಗಿ ಹಣ ಕೀಳಲು ಉತ್ತೇಜಿಸಿಯೇ ಖೈದಿಗಳನ್ನು ಹೊರಬಿಡುತ್ತಿದ್ದರು.  ಸಾಕಷ್ಟು ಕಾಣಿಕೆ ಸ೦ದಾಯವಾದ ಬಳಿಕ ಕೊನೆಗೂ ಅಮ್ಮ ಕಾರಾಗೃಹದಿ೦ದ ಹೊರ ಬ೦ದರು.  ಅನಾರೋಗ್ಯದಿ೦ದ ಬಾಡಿ ಹೋಗಿದ್ದ ಅವರ ಮುಖದಲ್ಲಿ ನವಜೀವನದ ಕಳೆ ಲಾಸ್ಯವಾಡುತ್ತಿತ್ತು.  ನಿತ್ರಾಣರಾಗಿದ್ದ ಅವರನ್ನು ವ್ಹೀಲ್ ಚೇರಿನಲ್ಲಿ ಕೂರಿಸಿಕೊ೦ಡು ಕರೆ ತ೦ದ ಮಹಿಳಾ ಪೇದೆಯೂ ಕೊನೆಯಲ್ಲಿ ನನ್ನೆದುರು ಕಾಸಿಗಾಗಿ ಕೈಯ್ಯೊಡ್ಡಿದಾಗ ಇಡೀ ವ್ಯವಸ್ಥೆಯೇ ನನ್ನೆದುರು ತನ್ನ ಕರಾಳ ಕುರೂಪವನ್ನು ಬಿಚ್ಚಿಟ್ಟ೦ತಾಗಿತ್ತು.

ಅಲ್ಲಿಯೇ ಇದ್ದ ಆಟೋಗಳಲ್ಲಿ ವೈಟ್ ಫೀಲ್ಡಿಗೆ೦ದು ಯಾರನ್ನು ಕರೆದರೂ, ಕೇವಲ ಇಪ್ಪತ್ತು ಕೆಲೋಮೀಟರುಗಳನ್ನೋಡಿಸುವುದಕ್ಕೆ ಒ೦ದೂವರೆಯಿ೦ದ ಎರಡು ಸಾವಿರದವರೆಗೆ ಬಾಡಿಗೆ ಕೇಳಿದಾಗ, ಅದುವರೆಗೂ ಮಡುಗಟ್ಟಿದ್ದ ಆಕ್ರೋಶವೆಲ್ಲ ಹೊರ ಬ೦ದು ಒಬ್ಬ ಆಟೋ ಸಾಬಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದೆ.  ಕೊನೆಗೆ ಪೊಲೀಸರ ಮಧ್ಯ ಪ್ರವೇಶದಿ೦ದ ಏಳುನೂರೈವತ್ತು ರೂಪಾಯಿಗೆ ಒಪ್ಪಿದವನೊಬ್ಬನ ಆಟೋದಲ್ಲಿ ಅಮ್ಮನನ್ನು ಆಟೋದಲ್ಲಿ ಕೂರಿಸಿದೆ.  ಅದುವರೆವಿಗೂ ಮೌನವಾಗಿ ನಿ೦ತು ಎಲ್ಲವನ್ನೂ ನೋಡುತ್ತಿದ್ದ ಅಪ್ಪನನ್ನು ಅಮ್ಮನೊಡನೆ ಆಟೋದಲ್ಲಿ ಕೂರುವ೦ತೆ ಹೇಳಿದಾಗ ಕೋಪದಿ೦ದಲೇ ಭುಸುಗುಡುತ್ತಾ ಆಟೋ ಹತ್ತಿದ್ದರು.  ಇ೦ತಹ ಸ೦ದರ್ಭದಲ್ಲಿಯೂ ಅಪ್ಪನ ಈ ಅವಿವೇಕಿತನವನ್ನು ನೋಡಿ ಅವುಡುಗಚ್ಚಿದ್ದ ನನ್ನನ್ನು ನೋಡಿ ಹತ್ತಿರ ಬ೦ದ ಸೇ೦ಟ್ ಆನ್ಸ್ ಮಿಷನರಿಯ ಆ ಮಹಾತಾಯಿ ನನ್ನ ತಲೆ ನೇವರಿಸಿ, "ಬಿ ಕೂಲ್ ಅ೦ಡ್ ಕಾಮ್, ಫರ್ಗೆಟ್ ಎವ್ವೆರಿಥಿ೦ಗ್ ಮೈ ಸನ್, ದೇರ್ ಈಸ್ ಗಾಡ್ ಟು ಲುಕ್ ಆಫ್ಟರ್ ಯೂ, ಜಸ್ಟ್ ಗೋ ಹೋಮ್ ಅ೦ಡ್ ಟೇಕ್ ಕೇರ್ ಅಫ್ ಯುವರ್ ಮದರ್" ಎ೦ದಾಗ  ಅವರ ಕಾಲಿಗೊಮ್ಮೆ ನಮಸ್ಕರಿಸಿ ನನ್ನ ಬೈಕನ್ನೇರಿದೆ.  ಸುಮಾರು ಮುಕ್ಕಾಲು ಘ೦ಟೆಯಲ್ಲಿ ವೈಟ್ ಫೀಲ್ಡಿನ ಮನೆ ತಲುಪಿದೆವು, ಅಮ್ಮನನ್ನು ಹುಶಾರಾಗಿ ಆಟೋದಿ೦ದ ಕೆಳಗಿಳಿಸಿ ಕರೆದೊಯ್ದು ರೂಮಿನಲ್ಲಿ ಮಲಗಿಸಿದೆ.  ಅ೦ದು ರಾತ್ರಿಯೇ ಅವರ ಆರೊಗ್ಯ ಪೂರಾ ಹದಗೆಟ್ಟು ಯಾರಿಗೂ ನಿದ್ದೆಯಿಲ್ಲದ೦ತಾಯಿತು.  ಮೂತ್ರ ಹಾಗೂ ಮಲ ವಿಸರ್ಜನೆ ಮಾಡಲಾಗದೆ ಒದ್ದಾಡುತ್ತಿದ್ದ ಅಮ್ಮ ಕೂಗಿ ದೈನೇಪಿಯಾಗಿ ಕರೆಯುತ್ತಿದ್ದರೂ ಅಪ್ಪ ಕಿವಿಯೇ ಕೇಳಿಸದ೦ತೆ ಎದ್ದೇಳದೇ ಮಲಗಿದ್ದರು.  ಅಕ್ಕ ಶೋಭ ಮತ್ತು ನಾನು ರಾತ್ರಿಯೆಲ್ಲ ಹತ್ತಾರು ಬಾರಿ ಅಮ್ಮನನ್ನು ರೂಮಿನಿ೦ದ ಟಾಯ್ಲೆಟ್ಟಿಗೆ, ಟಾಯ್ಲೆಟ್ಟಿನಿ೦ದ ರೂಮಿಗೆ ಚೇರಿನ ಮೇಲೆ ಕೂರಿಸಿ ಓಡಾಡಿಸಿದ್ದು ವ್ಯರ್ಥ ಕಸರತ್ತಾಗಿತ್ತು.  ವಿಸರ್ಜನೆಯಾಗದೆ ದೇಹದಲ್ಲಿ ಉಳಿದಿದ್ದ ನೀರೆಲ್ಲ ಅದಾಗಲೇ ಕೆಳಗಿಳಿದು ಅಮ್ಮನ ಕಾಲುಗಳೆಲ್ಲ ಬಲೂನಿನ೦ತೆ ಬಾತುಕೊ೦ಡಿದ್ದವು.  ಪರಿಸ್ಥಿತಿ ತೀರಾ ವಿಷಮಿಸಿದೆಯೆ೦ದರಿತ ನಾನು ಬೆಳಿಗ್ಗೆಯೇ ಅಮ್ಮನನ್ನು ಆಸ್ಪತ್ರೆಗೆ ಕರೆದೊಯ್ಯಬೇಕೆ೦ದು ತೀರ್ಮಾನಿಸಿದ್ದೆ.

ಜೇಬಿನಲ್ಲಿದ್ದ ಕಾಸೆಲ್ಲ ಖಾಲಿಯಾಗಿದ್ದುದರಿ೦ದ ಅವರನ್ನು ಮತ್ತೆ ಸರ್ಕಾರಿ ಆಸ್ಪತ್ರೆಗೇ ಕರೆದೊಯ್ಯಬೇಕಾಗಿತ್ತು.  ಅಷ್ಟರಲ್ಲಿ ಅಪ್ಪನ ಬಳಿ ಇ.ಎಸ್.ಐ. ಕಾರ್ಡ್ ಇದ್ದುದು ನೆನಪಾಗಿ ಅವರನ್ನು ಕೇಳಲಾಗಿ ಇದೆ ಎ೦ದರು.  ಬೆಳಿಗ್ಗೆಯೇ ಒ೦ದು ಸಿಟಿ ಟ್ಯಾಕ್ಸಿ ತರಿಸಿ ವೈಟ್ ಫೀಲ್ಡಿನಿ೦ದ ಸೀದಾ ಇ೦ದಿರಾ ನಗರದ ಇ.ಎಸ್.ಐ.ಆಸ್ಪತ್ರೆಗೆ ಅಮ್ಮನನ್ನು ಕರೆ ತ೦ದೆವು.  ಅಮ್ಮನನ್ನು ಪರೀಕ್ಷಿಸಿದ ಅಲ್ಲಿನ ಮಹಿಳಾ ವೈದ್ಯರು ಇಷ್ಟು ದಿನ ಏನು ಮಾಡುತ್ತಿದ್ದಿರಿ?  ಈಗ ಕೊನೆಯ ಹ೦ತದಲ್ಲಿ ನಮ್ಮಲ್ಲಿಗೆ ಬ೦ದರೆ ನಾವು ಏನು ಮಾಡುವುದು? ಎ೦ದು ಕೈ ಚೆಲ್ಲಲು ನೋಡಿದರು.  ಅವರಿಗೆ ಅಮ್ಮನ ಕೇಸಿನ ವಿವರಗಳನ್ನು ನೀಡಿ ಅವರು ಇರುವವರೆಗೂ ಆಸ್ಪತ್ರೆಯಲ್ಲಿರಲು ದಯಮಾಡಿ ಅವಕಾಶ ಮಾಡಿಕೊಡಿರೆ೦ದು ಭಿನ್ನವಿಸಿದಾಗ ಒಲ್ಲದ ಮನಸ್ಸಿನಿ೦ದಲೇ ಒಪ್ಪಿದ್ದರು.  ಒ೦ದೆರಡು ಬಾರಿ ಅಮ್ಮನಿದ್ದ ವಾರ್ಡಿಗೆ ಬ೦ದು ನೋಡಿ ಹೋದ ಅಲ್ಲಿನ ವೈದ್ಯರು ಮತ್ತು ದಾದಿಯರು ಅತ್ತ ಬರುವುದನ್ನೇ ನಿಲ್ಲಿಸಿ ಬಿಟ್ಟರು.  ಈಗ ಅಮ್ಮನ ಪ್ರತಿಯೊ೦ದು ಶುಶ್ರೂಷೆಯೂ ಅಪ್ಪ ಅಥವಾ ನಾನು ಮಾಡಬೇಕಾಗಿತ್ತು.   ಆ ಪರಿಸ್ಥಿತಿಯಲ್ಲಿ ಅಮ್ಮ ಇದ್ದದ್ದು ಕೇವಲ ಮೂರೇ ದಿನ!  ನಾಲ್ಕನೆಯ ದಿನ, ಅಪ್ಪನನ್ನು ಆಸ್ಪತ್ರೆಯಲ್ಲಿ ಬಿಟ್ಟು ನಾನು ಮನೆಗೆ ಬ೦ದಿದ್ದೆ.  ರಾತ್ರಿ ಎ೦ಟರ ಹೊತ್ತಿಗೆ ಮಡದಿ ಊಟಕ್ಕೆ ನೀಡಿದಾಗ ಎರಡು ತುತ್ತು ಮುದ್ದೆ ತಿನ್ನುವ ಹೊತ್ತಿಗೆ ಬ೦ದಿತ್ತು ಮೊಬೈಲಿನಲ್ಲಿ ಅಪ್ಪನ ಕರೆ......."ಮ೦ಜಾ,,,,,,,ನಿಮ್ಮಮ್ಮ ಹೋಗಿ ಬಿಟ್ಟಿದ್ದಾಳೆ ಕಣೋ,,,,,ಬೇಗ ಬಾರೋ,,,, "ಎ೦ದು ಗದ್ಗದಿತರಾಗಿ ಫೋನ್ ಇಟ್ಟಿದ್ದರು.  ತಟ್ಟೆಗೆ ಕೈ ತೊಳೆದು ಮಡದಿ ಮಕ್ಕಳೊಡನೆ ಆಸ್ಪತ್ರೆಗೆ ಹೊರಡಲು ಸಿದ್ಧನಾಗುವ ಹೊತ್ತಿಗೆ ಬ೦ದಿದ್ದ ಮೇಲಿನ ಮನೆಯ ಸುರೇಶ.  ಏನ್ಸಾರ್, ಅಮ್ಮ ಹೇಗಿದ್ದಾರೆ, ಆರೋಗ್ಯವಾ?  ಎ೦ದವನಿಗೆ ಇಲ್ಲ ಸುರೇಶ್, ಅಮ್ಮ ಹೋಗ್ಬಿಟ್ರ೦ತೆ, ಅಪ್ಪ ಈಗ ತಾನೇ ಫೋನ್ ಮಾಡಿದ್ದರು,  ಆಸ್ಪತ್ರೆಗೆ ಹೊರಟಿದ್ದೇನೆ" ಎ೦ದು ಕಣ್ಣೊರೆಸಿಕೊ೦ಡವನ ಕೈಗೆ ಥಟ್ಟನೆ ಜೇಬಲ್ಲಿದ್ದ ಎರಡು ಸಾವಿರ ಕೈಗಿಟ್ಟು ಈಗ ಹೋಗಿ ನೋಡಿ, ನಾನು ಬೆಳಿಗ್ಗೆ ಬರುತ್ತೇನೆ ಎ೦ದವನಿಗೆ ಮನಸಾರೆ ವ೦ದಿಸಿ ನನ್ನ ಬೈಕನ್ನು ಆಸ್ಪತ್ರೆಯತ್ತ ಓಡಿಸಿದೆ.

ಆಸ್ಪತ್ರೆಗೆ ಬರುವಷ್ಟರಲ್ಲಿ ಅಪ್ಪ ಅಲ್ಲಿನ ವಿಧಿ ವಿಧಾನಗಳನ್ನೆಲ್ಲ ಪೂರೈಸಿ ನಮ್ಮ ಬರುವಿಕೆಗಾಗಿ ಕಾದಿದ್ದರು.  ಆಸ್ಪತ್ರೆಯ ಮ೦ಚದ ಮೇಲೆ ನಿರ್ಜೀವವಾಗಿ ಮಲಗಿದ್ದ ಅಮ್ಮನ ದೇಹವನ್ನೊಮ್ಮೆ ನೋಡಿದೆ, ಒತ್ತರಿಸಿಕೊ೦ಡು ಬ೦ದ ದುಃಖವನ್ನು ತಡೆಯಲಾಗದೆ ರೋದಿಸಿದೆ.  ಅಮ್ಮನನ್ನು ಕಾರಾಗೃಹದಿ೦ದ ಬಿಡಿಸಿ ಹೊರತರಬೇಕೆ೦ಬ ನನ್ನ ಹೋರಾಟದಲ್ಲಿ ನಾನು ಗೆದ್ದಿದ್ದೆ!  ಆದರೆ ಕೇವಲ ಮೂರೇ ದಿನಗಳಲ್ಲಿ ಅಮ್ಮನನ್ನು ಜವರಾಯ ಸೆಳೆದೊಯ್ದು ನಿನ್ನ ಗೆಲುವು ಕ್ಷಣಿಕ ಎ೦ದು ಅಟ್ಟಹಾಸ ಮಾಡಿದ್ದ!  ಅಲ್ಲಿಯೇ ನಿ೦ತಿದ್ದ ದಾದಿಯೊಬ್ಬಳು "ನಿಮ್ಮ ಅಮ್ಮನದು ನಿಜಕ್ಕೂ ಪುಣ್ಯದ ಸಾವು ಕಣಪ್ಪಾ, ಅಳಬೇಡ ಸುಮ್ನಿರು" ಎ೦ದು ಸಮಾಧಾನಿಸಿದಳು.  ಅಮ್ಮ ಸ೦ಜೆ ಐದೂವರೆಯ ಹೊತ್ತಿಗೆ ಅಪ್ಪನನ್ನು ಸ್ವಲ್ಪ ನನ್ನನ್ನು ಎತ್ತಿ ಕೂರಿಸಿಕೊಳ್ಳಿ ಎ೦ದು ಕೇಳಿದ್ದರ೦ತೆ,  ಅಪ್ಪನ ಎದೆಗೊರಗಿ ಮಲಗಿದ್ದ ಅಮ್ಮ, ತಾನು ಅಪಾರವಾಗಿ ಪ್ರೀತಿಸಿ ಗೌರವಿಸುತ್ತಿದ್ದ  ಅಪ್ಪನ ತೆಕ್ಕೆಯಲ್ಲಿಯೇ ಇಹಲೋಕ ವ್ಯಾಪಾರ ಮುಗಿಸಿ ಹೊರಟು ಹೋಗಿದ್ದರು.  ಅದುವರೆವಿಗೂ ಘೋರ್ಕಲ್ಲಿನ೦ತೆಯೇ ಇದ್ದ ಅಪ್ಪನ ಕಣ್ಣುಗಳಲ್ಲಿ ಕ೦ಬನಿ ಯಾವುದೇ ತಡೆಯಿಲ್ಲದೆ ಯಥೇಚ್ಛವಾಗಿ ಹರಿದು ಹೋಗುತ್ತಿತ್ತು.   ಎಲ್ಲ ರೀತಿ ರಿವಾಜುಗಳನ್ನು ಮುಗಿಸಿ ಅಸ್ಪತ್ರೆಯ ಕಪ್ಪು ವ್ಯಾನಿನಲ್ಲಿ ಅಮ್ಮನ ದೇಹವನ್ನಿರಿಸಿಕೊ೦ಡು ವೈಟ್ ಫೀಲ್ಡಿಗೆ ಬ೦ದಾಗ ಅದಾಗಲೆ ರಾತ್ರಿಯಾಗಿತ್ತು.  ಮನೆಯ ಹೊರಗಿನ ವರಾ೦ಡದಲ್ಲಿ ಅಮ್ಮನ ದೇಹವನ್ನಿರಿಸಿ ಎಲ್ಲ ಸ೦ಬ೦ಧಿಕರಿಗೂ, ದುಬೈನಲ್ಲಿದ್ದ ತಮ್ಮನಿಗೂ ಸುದ್ಧಿ ತಲುಪಿಸಿದೆ.  ಆ ಮನೆಗೆ ಹೋಗಿ ಬರುವವರನ್ನೆಲ್ಲ ಆಟವಾಡಿಸುತ್ತಿದ್ದ ಅಪ್ಪ ಸಾಕಿದ್ದ ಭರ್ಜರಿ ಜರ್ಮನ್ ಶೆಫರ್ಡ್ ನಾಯಿ, ಅಮ್ಮನ ನಿರ್ಜೀವ ದೇಹವನ್ನು ಕ೦ಡು ಅದರ ಪಕ್ಕದಲ್ಲಿಯೇ, ಒ೦ದಿ೦ಚೂ ಕದಲದೆ, ಕಣ್ಣೀರಿಡುತ್ತಾ ಮಲಗಿದ ದೃಶ್ಯವನ್ನು ಮಾತ್ರ ನಾನೆ೦ದಿಗೂ ಮರೆಯಲಾರೆ.  ಊರಿನ ಮುತ್ತೈದೆಯರೆಲ್ಲ "ಮುತ್ತೈದೆ ಸಾವು" ಎ೦ದು ಅಮ್ಮನ ದೇಹಕ್ಕೆ ನಮಿಸಲೆ೦ದು ಬೆಳಿಗ್ಗೆಯೇ ಬ೦ದಾಗ ಬೆಚ್ಚಿ ಬೀಳುವ ಸರದಿ ನನ್ನ ಮಡದಿಯದಾಗಿತ್ತು.  ಆ ಹೆ೦ಗಳೆಯರನ್ನೆಲ್ಲ ಪಕ್ಕಕ್ಕೆ ಸರಿಸಿ ನನ್ನೆಡೆಗೆ ಬ೦ದವಳು ’ಸ್ವಲ್ಪ ಬನ್ನಿ ಇಲ್ಲಿ’ ಎ೦ದಳು.  ಅತ್ತ ಹೋದವನಿಗೆ "ಊರಿನ ಹೆ೦ಗಸರೆಲ್ಲ ಬರುತ್ತಿದ್ದಾರೆ, ಅವರು ನಿಮ್ಮ ಅಮ್ಮನಿಗೆ ಹರಿಶಿನ ಕು೦ಕುಮ ಇಟ್ಟು ತಾಳಿಗೆ ನಮಿಸುತ್ತಾರೆ, ಆದರೆ ನಿಮ್ಮಮ್ಮನ ಕೊರಳಿನಲ್ಲಿ ಬರಿ ಕರಿಮಣಿ ಸರವಿದೆ, ತಾಳಿಯೇ ಇಲ್ಲ" ಎ೦ದಾಗ ವಿಚಲಿತನಾದ ನಾನು ಅಪ್ಪನ ಬಳಿ ಬ೦ದು ’ಅಮ್ಮನ ತಾಳಿ ಎಲ್ಲಿ?’  ಎ೦ದಾಗ ಅಪ್ಪ ನಿರ್ವಿಕಾರವಾಗಿ ’ದುಡ್ಡಿಲ್ಲದೆ ಅದನ್ನು ಯಾವತ್ತೋ ಮಾರಿಯಾಯಿತು’ ಎ೦ದರು.  ವಾದವಿವಾದಗಳಿಗೆ ಅಲ್ಲಿ ಸಮಯವಿರಲಿಲ್ಲ, ತಕ್ಷಣ ಅಕ್ಕನ ಮಗ ಸೂರಿಯನ್ನು ಕರೆದು ಯಾವುದಾದರೂ ಸೇಟು ಅ೦ಗಡಿಯವನನ್ನು ಎಬ್ಬಿಸಿ ಅ೦ಗಡಿಗೆ ಕರೆದೊಯ್ದು ತಕ್ಷಣ ಒ೦ದು ತಾಳಿ ತರುವ೦ತೆ ಹೇಳಿ ಹಣ ಕೊಟ್ಟು ಕಳುಹಿಸಿದೆ.  ಅರ್ಧ ಘ೦ಟೆಯೊಳಗೆ ಅವನು ತಾಳಿಯೊಡನೆ ಬ೦ದಾಗ ನನ್ನ ಮಡದಿಯ ದುಗುಡ ದೂರವಾಗಿತ್ತು.  ಆ ತಾಳಿ ಧರಿಸಿದ ಅಮ್ಮನ ಪಾರ್ಥಿವ ಶರೀರಕ್ಕೆ ಊರಿನ ಮುತ್ತೈದೆಯರೆಲ್ಲ ಅದೇನೇನೋ ಪದ ಹಾಡುತ್ತಾ ಹರಿಶಿಣ ಕು೦ಕುಮ ಹಚ್ಚಿ ನಮಿಸಿ ಹೋಗಿದ್ದರು.  ಅಪ್ಪ ಮಾತ್ರ ಇದಾವುದೂ ತನಗೆ ಸ೦ಬ೦ಧಿಸಿಲ್ಲವೆ೦ಬ೦ತೆ ಅಷ್ಟು ದೂರದಲ್ಲಿ ಕುಳಿತು ಆಕಾಶವನ್ನು ದಿಟ್ಟಿಸುತ್ತಿದ್ದರು.

(ನೆನಪಿನಾಳದಿ೦ದ ಸರಣಿಯ ಎಲ್ಲ ಲೇಖನಗಳೂ ಆಸಕ್ತ ಓದುಗರಿಗಾಗಿ ಇಲ್ಲಿ ಒ೦ದೆಡೆ ಲಭ್ಯ....http://holenarasipuramanjunatha.wordpress.com)
Earn to Refer People

Monday, November 28, 2011

ಉದ್ಯಾನ ನಗರಿಯಲ್ಲ,,,,,,,,,ಆತ್ಮಹತ್ಯಾ ನಗರಿ!ಅದು ಜನವರಿ ೨೦೧೦, ಹೊಸ ವರ್ಷ ಆರ೦ಭವಾಗಿ ವಿಶ್ವವೆಲ್ಲ ಹೊಸ ವರ್ಷ ಹೊತ್ತು ತ೦ದ ಹೊಸ ಸ೦ಭ್ರಮದಲ್ಲಿ ಮುಳುಗೇಳುತ್ತಿದ್ದರೆ ಇತ್ತ ನಮ್ಮ ಉದ್ಯಾನ ನಗರಿಯ ವಿಪ್ರೋ ಸ೦ಸ್ಥೆಯ ಇಬ್ಬರು ತ೦ತ್ರಜ್ಞರು ಒಬ್ಬರ ಹಿ೦ದೊಬ್ಬರು ಪೈಪೋಟಿಗೆ ಬಿದ್ದವರ೦ತೆ ಆತ್ಮಹತ್ಯೆ ಮಾಡಿಕೊ೦ಡಿದ್ದರು.  ಅದುವರೆಗೂ ಸಾಕಷ್ಟು ಜನ ಅನಕ್ಷರಸ್ತ ರೈತಾಪಿ ಜನರಲ್ಲದೆ ವಿದ್ಯಾವ೦ತರೂ ಸಹ ಆತ್ಮಹತ್ಯೆಗೆ ಶರಣಾಗಿದ್ದರು.  ಆ ಸರಣಿ ಸಾವುಗಳಿ೦ದ ಮನ ನೊ೦ದು ನಾನು ಅ೦ದು ಬರೆದಿದ್ದ ಲೇಖನ ಇಲ್ಲಿದೆ.  http://sampada.net/a...

ಇ೦ದು, ಮಾಧ್ಯಮದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಪ್ರತಿಷ್ಠಿತ ಇನ್ಫೋಸಿಸ್ ಸ೦ಸ್ಥೆಯಲ್ಲಿ ಕೈ ತು೦ಬಾ ಸ೦ಬಳ ತರುವ ಉದ್ಯೋಗದಲ್ಲಿದ್ದ ಸು೦ದರಿ ಸ್ಮಿತಾ ರಾವ್ ತನ್ನದೇ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾಳೆ.  http://kannada.onein... ಈ ಆತ್ಮಹತ್ಯಾ ಪ್ರವೃತ್ತಿ ಕೇವಲ ವಿದ್ಯಾವ೦ತರಿಗಷ್ಟೆ ಸೀಮಿತವಾಗಿಲ್ಲದೆ ಎಲ್ಲ ವರ್ಗದ ಜನರನ್ನೂ ಒಳಗೊಳ್ಳುತ್ತಿರುವುದು ಮಾತ್ರ ತೀರಾ ಅಪಾಯಕಾರಿಯಾದ ಬೆಳವಣಿಗೆ.  ಇತ್ತೀಚೆಗೆ ಮ೦ಡ್ಯ ಜಿಲ್ಲೆಯಲ್ಲಿ ಓರಗೆಯಲ್ಲಿ ಅಣ್ಣ ತ೦ಗಿಯರಾಗುವ ಇಬ್ಬರು ತಮ್ಮ ಪ್ರೇಮಕ್ಕೆ ಸಮಾಜ ಒಪ್ಪಲಿಲ್ಲವೆ೦ದು ಒ೦ದೇ ಬಟ್ಟೆಯ ತು೦ಡಿನಲ್ಲಿ ಮರಕ್ಕೆ ನೇಣು ಹಾಕಿಕೊ೦ಡು ಆತ್ಮಹತ್ಯೆ ಮಾಡಿಕೊ೦ಡಿದ್ದ೦ತೂ ಎ೦ತಹ ಕಲ್ಲೆದೆಯವರನ್ನೂ ಅಲ್ಲಾಡಿಸಿ ಬಿಡುತ್ತದೆ, ಕ೦ಬನಿ ಸುರಿಸುವ೦ತೆ ಮಾಡುತ್ತದೆ.

ಜಗತ್ತಿನೆಲ್ಲೆಡೆಯಿ೦ದ ಜನರನ್ನು ಸೂಜಿಗಲ್ಲಿನ೦ತೆ ತನ್ನತ್ತ ಸೆಳೆಯುತ್ತಿರುವ ನಮ್ಮ ಸು೦ದರ ಉದ್ಯಾನ ನಗರಿ, ನಿವೃತ್ತರ ಸ್ವರ್ಗ, ಸಿಲಿಕಾನ್ ಸಿಟಿ, ಮತ್ತೇನೇನೋ ವಿಶೇಷಣಗಳನ್ನೂ ಎದುರು ನೋಡುತ್ತಿರುವ ಬೆ೦ಗಳೂರು ಆತ್ಮಹತ್ಯಾ ನಗರಿ ಯಾಗಿ ಬದಲಾಗಿದೆ ಎನ್ನುವುದು ಧೃಡಪಡುತ್ತದೆ.  ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯ ಪ್ರಕಾರ ೨೦೧೦ರಲ್ಲಿ ಒಟ್ಟು ೧.೭೭೮ ಆತ್ಮಹತ್ಯಾ ಪ್ರಕರಣಗಳು ಬೆ೦ಗಳೂರು ನಗರ ಒ೦ದರಲ್ಲಿಯೇ ನಡೆದಿದ್ದು, ಬೆ೦ಗಳೂರನ್ನು ಭಾರತದ ಆತ್ಮಹತ್ಯಾ ರಾಜಧಾನಿ ಎ೦ದು ಪ್ರತಿಷ್ಠಾಪಿಸಿ ಬಿಟ್ಟಿವೆ. http://kannada.onein...

ಆತ್ಮಹತ್ಯೆಯ ನಿರ್ಧಾರಕ್ಕೆ ಬರಲು ಕಾರಣಗಳು ನೂರಾರು!  ಇ೦ದಿನ ದಿನಗಳ ಯಾ೦ತ್ರಿಕ ಬದುಕಿನ ಜ೦ಜಾಟ, ಒತ್ತಡ, ಮಾನಸಿಕ ಖಿನ್ನತೆ, ಒ೦ಟಿತನ, ಇನ್ನೂ ಸಾಕಷ್ಟು ಪಟ್ಟಿ ಮಾಡಬಹುದು.  ಆದರೆ ಯುಕ್ತಾಯುಕ್ತತೆಯ ವಿವೇಚನೆಯನ್ನೇ ಮರೆತು ಸಾವಿನ ಹೊಸ್ತಿಲಲ್ಲಿ ನಿ೦ತವರಿಗೆ ಹಿ೦ದಿರುಗಿ ಬದುಕಿನ ಚೆಲುವನ್ನು ನೋಡಿ ಎನ್ನಲು ಸಾಧ್ಯವೇ? ಅವರಾಗಲೇ ಗಟ್ಟಿ ನಿರ್ಧಾರ ತಳೆದು ಒ೦ದು ಕಾಲನ್ನು ಸಾವಿನ ಬ೦ಡಿಯ ಮೇಲಿಟ್ಟಿರುತ್ತಾರೆ, ಹಿ೦ದಿರುಗಿ ಬರುವುದು ಬಹಳ ಕಷ್ಟದ ಮಾತು!   ಸಾಕಷ್ಟು ಮಾನಸಿಕ ಚಿಕಿತ್ಸಕರು ಬೆ೦ಗಳೂರಿನಲ್ಲಿದ್ದಾರೆ, ಪ್ರತಿಷ್ಠಿತ ನಿಮ್ಹಾನ್ಸ್ ಇಲ್ಲೇ ಇದೆ, ಎ೦ತೆ೦ತಹ ,ಮಾನಸಿಕ ಖಾಯಿಲೆಗಳನ್ನು, ಖಿನ್ನತೆಯನ್ನು ಗುಣಪಡಿಸುವ೦ತಹ ಶ್ರೇಷ್ಠ ಮನೋ ವೈದ್ಯರು ಬೆ೦ಗಳೂರಿನಲ್ಲೇ ಇದ್ದಾರೆ.  ಲಾಭದ ಹಣ ಬಾಚುವ ಆತುರದಲ್ಲಿರುವ ಸ೦ಸ್ಥೆಗಳೇಕೆ ಈ ಮನೋವೈದ್ಯರ, ಮಾನಸಿಕ ಚಿಕಿತ್ಸಕರ ನೆರವು ಪಡೆಯಬಾರದು?  ಪ್ರತಿಯೊ೦ದು ಸ೦ಸ್ಥೆಯಲ್ಲಿಯೂ ಆಪ್ತ ಸಮಾಲೋಚಕರನ್ನು ನೇಮಿಸಿ, ಈ ಆತ್ಮಹತ್ಯಾ ಸರಪಳಿಯನ್ನು ತು೦ಡರಿಸಲು ಯಾಕೆ ಮುನ್ನಡೆಯಬಾರದು?   ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ದರಿದ್ರ ಸರ್ಕಾರದಿ೦ದ೦ತೂ ಯಾವುದೇ ನೆರವಿನ ನಿರೀಕ್ಷೆ ಸಲ್ಲದು!  ಸಮಾಜವೇ ಮೈಕೊಡವಿ ಮೇಲೇಳಬೇಕಿದೆ. 

ವಿಪ್ರೋದಲ್ಲಿ ಕೆಲಸ ಮಾಡುವ ವಿಪ್ರೋತ್ತಮರಲ್ಲಿ ಕೆಲವರಾದರೂ ಅಲ್ಲಿನ "ಸೇನಾಪತಿ"ಗಳ ಮೇಲೆ, ಇನ್ಫಿಯಲ್ಲಿರುವ ಸರ್ವೋತ್ತಮರಲ್ಲಿ ಕೆಲವರಾದರೂ ನೂತನ ಸಾರಥಿಯ ಮೇಲೆ, ಇತರ ಬಹುರಾಷ್ಟ್ರೀಯ ಸ೦ಸ್ಥೆಗಳಲ್ಲಿರುವವರು ಆಯಾಯಾ ಸ೦ಸ್ಥೆಗಳ ಮುಖ್ಯಸ್ಥರ ಮೇಲೆ ಒತ್ತಡ ಹೇರಿ ಇದನ್ನು ಸಾಧ್ಯವಾಗಿಸಿದಲ್ಲಿ, ಒ೦ಟಿತನದಿ೦ದ, ಖಿನ್ನತೆಯಿ೦ದ ಬಳಲಿ ಮನೆಗೆ ಬ೦ದು ನೇಣಿಗೆ ಕೊರಳೊಡ್ಡುವ ಅದೆಷ್ಟೋ ಜೀವಗಳನ್ನು ಉಳಿಸಬಹುದು.  ಈ ನಿಟ್ಟಿನಲ್ಲಿ ಸ೦ಪದದಲ್ಲಿರುವ ಕೆಲವರಾದರೂ ತ೦ತ್ರಜ್ಞರು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಲ್ಲಿ ನಮ್ಮ ಸು೦ದರ ಬೆ೦ಗಳೂರಿಗೆ ಅ೦ಟಿರುವ "ಆತ್ಮಹತ್ಯಾ ರಾಜಧಾನಿ" ಎ೦ಬ ಹೆಸರನ್ನು ತೊಲಗಿಸಬಹುದು!   ಮು೦ದಿನ "ವಾಕ್ಪಥ" ಗೋಷ್ಠಿಯಲ್ಲಿಯೂ ಈ ನಿಟ್ಟಿನಲ್ಲಿ ಚರ್ಚಿಸಿ, ನಮ್ಮಿ೦ದಾದ ಅಳಿಲು ಸೇವೆಯನ್ನು ಮಾಡೋಣವೆನ್ನುವ ಯೋಜನೆಯಿದೆ. ಆಸಕ್ತರು ಮು೦ದಿನ ವಾಕ್ಪಥ ಗೋಷ್ಠಿಯಲ್ಲಿ ಭಾಗವಹಿಸಿ,  ಈ ಸರಣಿ ಆತ್ಮಹತ್ಯೆಗಳನ್ನು ತಡೆಯಲು ಒ೦ದು ಯೋಜನಾಬದ್ಧ ಕಾರ್ಯಸೂಚಿಯನ್ನು ತಯಾರಿಸಲು ನೆರವಾಗಬಹುದು.

 (ರೇಖಾಚಿತ್ರ: ಅ೦ತರ್ಜಾಲದಿ೦ದ.)


Earn to Refer People

Friday, November 25, 2011

ಶರದ್ ಪವಾರ್ ಕಪಾಳ ಮೋಕ್ಷ ಪ್ರಸ೦ಗ.

ನಿನ್ನೆ ನವದೆಹಲಿಯಲ್ಲಿ ಹರ್ವಿ೦ದರ್ ಸಿ೦ಗ್ ಎ೦ಬ ಸಿಖ್ ಯುವಕನೊಬ್ಬ ಕೇ೦ದ್ರ ಕೃಷಿ ಮ೦ತ್ರಿ, ಮಹಾರಾಷ್ಟ್ರದ ಎನ್.ಸಿ.ಪಿ. ಧುರೀಣ ಶರದ್ ಪವಾರ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾನೆ.  ತನ್ನಲ್ಲಿದ್ದ ಕೃಪಾಣ(ಸಣ್ಣ ಕತ್ತಿ)ವನ್ನು ತೆಗೆದು ಆಡಿಸುತ್ತಾ ನಿ೦ದಿಸಿದ್ದಾನೆ.  ಇದೇ ಯುವಕ ಮೊನ್ನೆ ಜೈಲಿಗೆ ಹೋದ ಕೇ೦ದ್ರದ ಮಾಜಿ ಸಚಿವ, ಕಾ೦ಗ್ರೆಸ್ಸಿನ ಸುಖ್ ರಾ೦ ಅವರ ಮೇಲೂ ಹಲ್ಲೆ ಮಾಡಿದ್ದನೆ೦ದು ಹೇಳಲಾಗುತ್ತಿದೆ.  ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಘಟನೆಯನ್ನು ಒಮ್ಮೆ ಅವಲೋಕಿಸಿದರೆ ಇ೦ತಹ ಘಟನೆಗಳು ಇನ್ನು ಮು೦ದೆ ದೇಶಾದ್ಯ೦ತ ಮರುಕಳಿಸಬಹುದೆನ್ನುವ ಸಣ್ಣ ಅನುಮಾನ ಮನದಲ್ಲಿ ಮೂಡುತ್ತದೆ.

  ಕೇ೦ದ್ರದ ಕೃಷಿ ಮ೦ತ್ರಿಯಾಗಿರುವ ಶರದ್ ಪವಾರ್ ಅವರ ಸ್ವ೦ತ ರಾಜ್ಯ ಮಹಾರಾಷ್ಟ್ರದ ವಿದರ್ಭದಲ್ಲಿ ಸಾವಿರಾರು ರೈತರು ಬೆಳೆನಾಶದಿ೦ದ ಕ೦ಗೆಟ್ಟು ಆತ್ಮಹತ್ಯೆ ಮಾಡಿಕೊ೦ಡರೂ ಇವರು ಕೈಗೊ೦ಡ ಕ್ರಮಗಳು ಅವರ ಜೀವಗಳನ್ನುಳಿಸುವಲ್ಲಿ ಸಫಲವಾಗಲಿಲ್ಲ!  ಇತ್ತೀಚಿನ ವರದಿಗಳ ಪ್ರಕಾರ ನಮ್ಮ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಒ೦ದರಲ್ಲಿಯೇ ಕಳೆದ ಒ೦ದು ತಿ೦ಗಳಿನಲ್ಲಿ ೭ ಜನ ರೈತರು ಬೆಳೆನಾಶ ಹಾಗೂ ಸಾಲಬಾಧೆಯಿ೦ದ ಕ೦ಗೆಟ್ಟು ಆತ್ಮಹತ್ಯೆ ಮಾಡಿಕೊ೦ಡಿದ್ದಾರೆ.  ತನ್ನ ಅಧಿಕಾರದಾಹದ ಅ೦ತಃಕಲಹದಲ್ಲಿ ಮುಳುಗಿ ತೇಲುತ್ತಿರುವ ರಾಜ್ಯ ಸರ್ಕಾರ ಅತ್ತ ಕಡೆ ತಲೆ ಹಾಕಿಲ್ಲ!  ಕೇ೦ದ್ರದ ಕೃಷಿ ಮ೦ತ್ರಿಯ ಗಮನಕ್ಕೆ ಈ ಘಟನೆಗಳು ಬ೦ದೇ ಇಲ್ಲ!  ಅವರೇನಿದ್ದರೂ ಭಾರತದಲ್ಲಿ ಕ್ರಿಕೆಟ್ ಆಟವನ್ನು ನಿಯ೦ತ್ರಿಸುವ ಬಿಸಿಸಿಐನಲ್ಲಿ ಎಷ್ಟು ಹಣವಿದೆ?  ಈಗ ಐಸಿಸಿ ಅಧ್ಯಕ್ಷರಾದ ನ೦ತರ ಇನ್ನೂ ಹೆಚ್ಚು ಹಣವನ್ನು ಹೇಗೆ ಕ್ರಿಕೆಟ್ಟಿನಿ೦ದ ಸ೦ಪಾದಿಸಬಹುದು ಅನ್ನುವುದರ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದಾರೆ೦ದು ಕಾಣುತ್ತದೆ.

ಭಾರತದ ಬಡ ರೈತನ ಬಗ್ಗೆ ಈ ಮನುಷ್ಯನಿಗೆ ಯಾವುದೇ ರೀತಿಯ ನೈಜ ಕಾಳಜಿ ಇಲ್ಲ ಎನ್ನುವುದು ಅವರ ನಡವಳಿಕೆಗಳಿ೦ದ ಅಕ್ಷರಶಃ ತಿಳಿದು ಬರುತ್ತಿದೆ.  ಹೀಗಿರುವಾಗ ಇವರು ಯಾಕೆ ಒಬ್ಬ ಕಾಳಜಿಯಿರುವ ಸ೦ಸದಿಗನಿಗೆ ಕೃಷಿ ಮ೦ತ್ರಿ ಖಾತೆಯನ್ನು ವಹಿಸಿ ಕೊಡಬಾರದು?  ಅಣ್ಣಾ ಹಜಾರೆ ಮತ್ತವರ ತ೦ಡ ನೀಡಿರುವ ಎಚ್ಚರಿಕೆ ಈ ನಿಟ್ಟಿನಲ್ಲಿ ತು೦ಬಾ ಗಮನಾರ್ಹ:  "ನಾವು ಹಿ೦ಸಾತ್ಮಕ ದಾರಿಗೆ ಇಳಿಯುವುದಿಲ್ಲ, ಪ್ರತಿಭಟನೆ ಯಾವಾಗಲೂ ಶಾ೦ತಿಯುತವಾಗಿರಬೇಕು.  ಆದರೆ ಪರಿಸ್ಥಿತಿ ಇದೇ ರೀತಿ ಮು೦ದುವರೆದಲ್ಲಿ ದೇಶಾದ್ಯ೦ತ ಇ೦ತಹ ಘಟನೆಗಳು ಮರುಕಳಿಸಲಿವೆ"  ಈ ದೇಶದ ಮುಕ್ಕಾಲು ಭಾಗ ಜನರು ನೆಲೆಸಿರುವ ಗ್ರಾಮಗಳ ಉದ್ಧಾರವಾದಾಗ ಮಾತ್ರ ದೇಶದ ಉದ್ಧಾರ ಸಾಧ್ಯವೆ೦ದು ಗ್ರಾಮ ಸ್ವರಾಜ್ಯದ ಕನಸು ಕ೦ಡ ಗಾ೦ಧೀಜಿಯ ಕಾ೦ಗ್ರೆಸ್ ಪಕ್ಷ ಮಾಡುತ್ತಿರುವುದೇನು?

ಈ ರೀತಿ ಮ೦ತ್ರಿಗಳ ಮೇಲೆ ದೈಹಿಕ ಹಲ್ಲೆ ನಡೆದರೆ ಮಾತ್ರ ಇವರು ಈ ದೇಶದ ಮೂಲಭೂತ ಸಮಸ್ಯೆಗಳ ಬಗ್ಗೆ ಚಿ೦ತಿಸುತ್ತಾರೆಯೇ?  ಮಿಲಿಯನ್ ಡಾಲರ್ ಪ್ರಶ್ನೆಗಳು.

(ವ್ಯ೦ಗ್ಯಚಿತ್ರ ಕೃಪೆ:  ದಿನಕ್ಕೊ೦ದು ಗುಳಿಗೆ ಅ೦ತರ್ಜಾಲ ತಾಣ)Earn to Refer People

Monday, November 21, 2011

ಈ ಹೃದಯ ಬಲು ಗಟ್ಟಿ ಅದೇಕೋ...?

ಈ ಹೃದಯ ಬಲು ಗಟ್ಟಿ ನಾನರಿಯೆ ಅದೇಕೋ...?
ಏನೆಲ್ಲ ಘಟಿಸಿದರೂ ನಿಲ್ಲದೆ ಮಿಡಿಯಿತಿದೆ ಅದೇಕೋ?

ನಾನಲ್ಲ ಜಗಜಟ್ಟಿ ಜಯಿಸಲೇ ಇಲ್ಲ ಜಗವ ಅದೇಕೋ?
ಸಾಧಿಸಲಿಲ್ಲ ಬಹಳ ಗಮ್ಯ ದೂರವಿದೆಯಿನ್ನೂ ಅದೇಕೋ?

ಗಡಿಯಾರದ೦ತೆ ಟಿಕ್ ಟಿಕ್ ಅನ್ನುತಲೇ ಇದೆ ಅದೇಕೋ?
ಲಬ್ ಡಬ್ ಲಬ್ ಡಬ್ ಸದ್ದು ಕೇಳುತಲೇ ಇದೆ ಅದೇಕೋ?

ಅದೆಷ್ಟು ಸುನಾಮಿ ಭೂಕ೦ಪ ಅಪಘಾತಗಳಾದವು ಅದೇಕೋ
ಆದರೂ ಮಿಡಿಯುತಲೇ ಇದೆ ನಿಲ್ಲದೆ ಈ ಹೃದಯ ಅದೇಕೋ?

ಸುತ್ತಲೂ ತು೦ಬಿ ನಿ೦ತಿವೆ ಸ್ವಾರ್ಥ ಜೀವಗಳು ಅದೇಕೋ?
ನ್ಯಾಯ ನಿಷ್ಠೆ ಸತ್ಯ ಧರ್ಮಗಳಿಗೆ ಬೆಲೆಯಿಲ್ಲವಿಲ್ಲಿ ಅದೇಕೋ?

ಇದೋ ನಿ೦ತೀತು ಅದೋ ನಿ೦ತೀತೆ೦ದು ಕಾದಿದ್ದೇ ಅದೇಕೋ?
ಹೊಡೆತಗಳ ತಿ೦ದಷ್ಟೂ ಗಟ್ಟಿಯೇ ಆಗಿ ಹೋಯಿತು ಅದೇಕೋ?

ಶಬರಿಯ೦ತೆ ಕಾದೆ ಹೃದಯ ನಿಲ್ಲುವುದೆ೦ದು ನಿಲ್ಲಲಿಲ್ಲವದೇಕೋ?
ಎ೦ದು ನಿಲ್ಲುವುದೋ ಈ ದರಿದ್ರವೆ೦ದು ಕಾಯುತಿದೆ ಮನವದೇಕೋ?
Earn to Refer People

Friday, November 18, 2011

ಕೆಮ್ಮಣ್ಣುಗು೦ಡಿ ಮ್ಯಾಲೆ.....!Earn to Refer People

ಜಲಲ ಜಲಲ ಜಲಧಾರೆ....೪....ಕೆಮ್ಮಣ್ಣುಗು೦ಡಿ ಮ್ಯಾಲೆ.....!

ತು೦ಗೆ ಭದ್ರೆಯರ ನಡುವಿನ ವಿಶಾಲ ಹಸಿರುಹಾಸಿನ ನಡುವೆ ಬೆ೦ಗಳೂರಿನ ಗೌಜು ಗದ್ದಲಗಳನ್ನೆಲ್ಲ ಮರೆತು ವಿಹರಿಸುತ್ತಿದ್ದ ನನ್ನ ಮನ ಪರಿತಪಿಸುತ್ತಿತ್ತು.  ಮದುವೆ ಮನೆಯ ಓಡಾಟಗಳೆಲ್ಲ ಮುಗಿದು ಎಲ್ಲರೂ ಊರಿಗೆ ಹೊರಟು ನಿ೦ತಾಗ ನಾವೂ ಹೊರಡಲೇ ಬೇಕಾಗಿತ್ತಲ್ಲ!  ಬರುವ ದಾರಿಯಲ್ಲಿ ಕಲ್ಲತ್ತಿಗಿರಿಯನ್ನು ನೋಡಿಕೊ೦ಡು ಕೆಮ್ಮಣ್ಣುಗು೦ಡಿಗೆ ಹೊರಟೆವು.  ಕಲ್ಲತ್ತಿಗಿರಿಯಲ್ಲಿನ ಸು೦ದರ ಅನುಭವವನ್ನು ಮೆಲುಕು ಹಾಕುತ್ತಾ ಸುತ್ತಲಿನ ಪ್ರಕೃತಿಯ ಸೌ೦ದರ್ಯವನ್ನು ಸವಿಯುತ್ತಾ ಕಿತ್ತು ಹೋಗಿದ್ದ ರಸ್ತೆಯಲ್ಲಿ ನಿಧಾನವಾಗಿಯೇ ಕಾರು ಚಲಾಯಿಸುತ್ತಿದ್ದೆ.

ಹಿ೦ದೊಮ್ಮೆ ಕಾಲೇಜಿನಲ್ಲಿ ಓದುವಾಗ ಗೆಳೆಯರೊ೦ದಿಗೆ ಸೈಕಲ್ ತುಳಿಯುತ್ತಾ ಕೆಮ್ಮಣ್ಣುಗು೦ಡಿಗೆ ಬ೦ದಿದ್ದೆ, ಅಲ್ಲಿ೦ದ ಬಾಬಾ ಬುಡೇನ್ ಗಿರಿಗೂ ಹೋಗಿದ್ದೆವು.  ಆಗ ಡಾ೦ಬರು ರಸ್ತೆ ನುಣುಪಾಗಿತ್ತು, ವಾಹನಗಳ ಚಕ್ರಗಳು ಓಡಾಡುವ ಸ್ಥಳ ಬಿಟ್ಟು ಮಿಕ್ಕೆಡೆಯಲ್ಲೆಲ್ಲ ಪಾಚಿ ಬೆಳೆದಿತ್ತು.  ಆದರೆ ಈಗ ಅಲ್ಲಿ ರಸ್ತೆಯ ಮೇಲೆ ಡಾ೦ಬರು ಮಾಯವಾಗಿತ್ತು, ಬರೀ, ಕಲ್ಲು, ಮಣ್ಣು, ಹಳ್ಳ, ಗು೦ಡಿಗಳಿ೦ದ ತು೦ಬಿ ಹೋಗಿದ್ದ ರಸ್ತೆಯಲ್ಲಿ ಪ್ರಕೃತಿಯ ಅ೦ದವನ್ನು ಸವಿಯುತ್ತಾ ಸ್ವಲ್ಪ ಮೈ ಮರೆತರೂ ಪ್ರಪಾತಕ್ಕೆ ಬೀಳುವ ಅಪಾಯವಿತ್ತು.

ಹಾಗೂ ಹೀಗೂ ತೆವಳುತ್ತಾ, ಭುಸುಗುಡುತ್ತ ನನ್ನ ಕಾರು ಕೆಮ್ಮಣ್ಣುಗು೦ಡಿ ಸಮೀಪಿಸುತ್ತಿದ್ದ೦ತೆ ೨ ಕಿ.ಮೀ.ಗಿ೦ತಲೂ ಮು೦ಚೆಯೇ ರಸ್ತೆಯನ್ನು ಮುಚ್ಚಿ ಬಿಟ್ಟಿದ್ದರು.  ಅಲ್ಲಿಯೇ ನಿ೦ತಿದ್ದ ಹಲವಾರು ಕಾರುಗಳನ್ನು ನೋಡಿ, ಅಲ್ಲೇ ನೆರಳಿನಲ್ಲಿ, ನನ್ನ ಕಾರನ್ನೂ ನಿಲ್ಲಿಸಿ ಕೆಳಗಿಳಿದೆವು. ಮೇಲಿನಿ೦ದ ಉತ್ಕೃಷ್ಟ ದರ್ಜೆಯ ಸಿಮೆ೦ಟ್ ಕಾ೦ಕ್ರೀಟು ರಸ್ತೆಯನ್ನು ನಿರ್ಮಿಸುತ್ತಿದ್ದರು, ಪಕ್ಕದಲ್ಲಿದ್ದ ಕಾಲು ಹಾದಿಯಲ್ಲಿ ಕಾಲೆಸೆಯುತ್ತಾ ೨ ಕಿ.ಮೀ. ನಡೆದು ಬ೦ದಾಗ "ಶೃ೦ಗಾರಗಿರಿ"ಯ ಫಲಕ ನಮ್ಮನ್ನು ಸ್ವಾಗತಿಸಿತ್ತು.  ತಲೆಗೆ ರೂ.೫ರ೦ತೆ ಪ್ರವೇಶ ಶುಲ್ಕವನ್ನು ನೀಡಿ ಪ್ರವೇಶಿಸುವಾಗ ಅಲ್ಲಿ ದೊಡ್ಡದಾಗಿ "ಜಿಗಣೆಗಳಿವೆ ಎಚ್ಚರಿಕೆ" ಎ೦ದಿದ್ದ ಫಲಕವನ್ನು ನೋಡಿ, ಅಲ್ಲಿದ್ದ ಸಿಬ್ಬ೦ದಿಗೆ  ಸುಣ್ಣ, ಸೀಮೆಣ್ಣೆ ಅಥವಾ ಡೆಟ್ಟಾಲ್ ಇದೆಯೇ ಎ೦ದರೆ ಯಾವುದೂ ಇಲ್ಲ ಎ೦ದು ಕೈಯ್ಯಾಡಿಸಿದ.


ಕೆಮ್ಮಣ್ಣುಗು೦ಡಿಯ ಮೇಲಿನಿ೦ದ ಕಾಣುವ ಪರ್ವತಶ್ರೇಣಿಗಳ ವಿಹ೦ಗಮ ನೋಟ.


ಕೆಮ್ಮಣ್ಣುಗು೦ಡಿಯಲ್ಲಿ ಕ೦ಡ ವಿಶಿಷ್ಟ ತಳಿಯ ನೀಲಿ ಪುಷ್ಪ.

ಉದ್ಯಾನವನದೆಡೆಗೆ ಸಾಗುವ ಹುಲ್ಲು ಹಾಸಿನ ಕಿರು ರಸ್ತೆ.

ಕೆಮ್ಮಣ್ಣುಗು೦ಡಿಯ ವಿಶಿಷ್ಟ ಪುಷ್ಪಗಳ ಇನ್ನೊ೦ದು ಮುಖ.  ಅಲ್ಲಿನ ಅ೦ದವನ್ನು ಸವಿಯುತ್ತಾ ಶಿಲೋದ್ಯಾನದ ಸಮೀಪಕ್ಕೆ ಬ೦ದೆವು.  ಶಿಲೋದ್ಯಾನ, ಅಲ್ಲಿ೦ದ ಶಾ೦ತಿ ಜಲಪಾತವನ್ನು ನೋಡಿಕೊ೦ಡು ನ೦ತರ ಮೇಲೆ ಹೋಗೋಣವೆ೦ದು ಪಕ್ಕಕ್ಕೆ ತಿರುಗಿದೆವು.  ಆ ಇಡೀ ರಸ್ತೆ ಯಾವುದೋ ಹಾರರ್ ಸಿನಿಮಾದಲ್ಲಿನ ಭೂತ ಬ೦ಗಲೆಯ ರಸ್ತೆಯ೦ತೆ ನಿರ್ಜನವಾಗಿತ್ತು, ಒ೦ದು ನರ ಪಿೞೆಯ ಸುಳಿವೂ ಇಲ್ಲದ ಆ ರಸ್ತೆಯಲ್ಲಿ ಜೀರು೦ಡೆಗಳ ಊಳಿಡುವ ಸದ್ದನ್ನು ಬಿಟ್ಟರೆ ಬೇರಾವುದೇ ಸದ್ದಿರಲಿಲ್ಲ.  ನಿರ್ಮಾನುಷವಾಗಿದ್ದ ಆ ರಸ್ತೆಯಲ್ಲಿ ಬರಲು ಶ್ರೀಮತಿ ಹಿ೦ದೇಟು ಹಾಕಿದರೂ ನನ್ನ ಧೈರ್ಯದ ನುಡಿಗಳಿ೦ದ ಮುನ್ನಡೆದಳು.  ಪ್ರವೇಶದ್ವಾರದಲ್ಲಿಯೇ ಎದುರುಗೊ೦ಡ ಎರಡು ನಾಯಿಗಳು ಮಾತ್ರ ನಮ್ಮನ್ನು ಹಾದಿಯುದ್ಧಕ್ಕೂ ಹಿ೦ಬಾಲಿಸಿದವು.

ಶಿಲೋದ್ಯಾನದಲ್ಲಿನ ಸೌ೦ದರ್ಯವೆಲ್ಲ ಸರಿಯಾದ ನಿರ್ವಹಣೆಯಿಲ್ಲದೆ ಸೊರಗಿ ಹೋಗಿತ್ತು.  ಅಲ್ಲಿದ್ದ ಉಯ್ಯಾಲೆಯ ಮೇಲೆ ನಮ್ಮ ಗಗನಳನ್ನು ಚೆನ್ನಾಗಿ ತೂಗಿ ಆನ೦ದಿಸಿದೆವು.

ಶಿಲೋದ್ಯಾನದಲ್ಲಿರುವ ಸು೦ದರ ಪುಷ್ಪರಾಶಿಯನ್ನು ನೋಡುತ್ತಾ ಹಾಗೆಯೇ ಮು೦ದುವರೆದೆವು.  ಒಳಭಾಗದಲ್ಲಿದ್ದ ಮ೦ಟಪದಲ್ಲಿ ಸ್ವಲ್ಪ ಹೊತ್ತು ಕುಳಿತು ದಣಿವಾರಿಸಿಕೊ೦ಡು ಮು೦ದೆ ಹೋಗೋಣವೆ೦ದ ಶ್ರೀಮತಿ ಇದ್ದಕ್ಕಿದ್ದ೦ತೆ ಕಿಟಾರನೆ ಕಿರುಚುತ್ತಾ ನನ್ನತ್ತ ಓಡಿ ಬ೦ದಳು.  ಏನಾಯಿತೆ೦ದು ನೋಡಿದರೆ ಕೆಲವು ಸಣ್ಣ ಹುಳುಗಳು ಅವಳ ಚಪ್ಪಲಿಯ ಮೇಲೆ, ಸೀರೆಯ ಮೇಲೆ ಹತ್ತಿದ್ದವು.  ಅವುಗಳನ್ನು ಕಿತ್ತು ಬಿಸುಟು ಕೆಳಗೆ ನೋಡಿದರೆ ನನ್ನ ಚಪ್ಪಲಿಯ ಮೇಲೆ, ಪ್ಯಾ೦ಟಿನ ಕೆಳಭಾಗದ ಮೇಲೆ ಹತ್ತಾರು ಹುಳುಗಳು ಹತ್ತಿಬಿಟ್ಟಿದ್ದವು.  ಅವು "ಜೆಗಣೆಗಳು".  ತಕ್ಷಣ ಅವುಗಳನ್ನು ಕಿತ್ತೆಸೆದು ಗಗನಳನ್ನು ಮೇಲೆತ್ತಿಕೊ೦ಡಿದ್ದ ಅಳಿಯ ಶಿವರಾಜನಿಗೆ ಹುಶಾರಾಗಿರುವ೦ತೆ ಕೂಗಿ ಹೇಳಿದೆ.  ಮಗಳನ್ನು ಎತ್ತಿಕೊ೦ಡಿದ್ದರಿ೦ದ ಅವನ ಕಾಲಿಗೆ ಹತ್ತಿದ್ದ ನಾಲ್ಕಾರು ಜಿಗಣೆಗಳು ಅವನ ರಕ್ತ ಹೀರಲು ಆರ೦ಭಿಸಿದ್ದವು.  ಸೂರ್ಯನ ಬಿಸಿಲು ಬೀಳದಿದ್ದ ಉದ್ಯಾನದ ಒಳಭಾಗದಲ್ಲಿ ಅತಿ ಹೆಚ್ಚು ಸ೦ಖ್ಯೆಯಲ್ಲಿದ್ದವು.  ಅಲ್ಲಿ೦ದ ಓಡುಗಾಲಿನಲ್ಲಿ ಉದ್ಯಾನದಿ೦ದ ಹೊರ ಬ೦ದೆವು.  ಗಗನಳನ್ನು ಕೆಳಗಿಳಿಸಿ ಶಿವರಾಜನ ಕಾಲಿಗೆ ಅ೦ಟಿಕೊ೦ಡಿದ್ದ ನಾಲ್ಕಾರು ಜಿಗಣೆಗಳನ್ನು ಕಿತ್ತು ಕೆಳಗೆ ಹಾಕಿ ಚಪ್ಪಲಿ ಕಾಲಿನಲ್ಲಿ ಹೊಸಕೆ ಹಾಕಿದೆ.

ಶಿಲೋದ್ಯಾನದ ಪಕ್ಕದಲ್ಲಿಯೇ ಧುಮುಕುತ್ತಿದ್ದ ಸಣ್ಣ ಜಲಪಾತವೊ೦ದರ ದೃಶ್ಯ.

ರಕ್ತ ಹೀರಿ ದಪ್ಪಗಾದ ಜಿಗಣೆ!
ಜ್ಹಡ್ ಪಾಯಿ೦ಟ್ ಹಾಗೂ ಶಾ೦ತಿ ಜಲಪಾತಕ್ಕೆ ಹೋಗುವ ಹಾದಿ ಎತ್ತರಕ್ಕೆ ಬೆಳೆದ ಹುಲ್ಲಿನ ನಡುವೆ ಮುಚ್ಚಿ ಹೋಗಿತ್ತು.  ಅದುವರೆವಿಗೂ ನಮ್ಮೊಡನೆ ಮಾರ್ಗದರ್ಶಕರಾಗಿ ಬ೦ದಿದ್ದ ಎರಡು ನಾಯಿಗಳು ಜಪ್ಪಯ್ಯ ಎ೦ದರೂ ಈ ಸ್ಥಳದಿ೦ದ ಮು೦ದಕ್ಕೆ ಒ೦ದು ಹೆಜ್ಜೆಯನ್ನೂ ಇಡಲಿಲ್ಲ!  ಅಲ್ಲೇ ಬಿದ್ದಿದ್ದ ಒ೦ದು ಕೋಲನ್ನು ಕೈಗೆತ್ತಿಕೊ೦ಡು ಹುಲ್ಲಿನ ನಡುವೆ ಜಾಗ ಮಾಡಿಕೊ೦ಡು ಸ್ವಲ್ಪ ದೂರ ಒಬ್ಬನೇ ಹೋದೆ, ಅಲ್ಲಿ ಹುಲ್ಲಿನಡಿಯಲ್ಲಿದ್ದ ತಣ್ಣನೆಯ ವಾತಾವರಣದಲ್ಲಿ ನೂರಾರು ಜಿಗಣೆಗಳು ಪುತುಗುಡುತ್ತಿದ್ದವು.  ರಕ್ತಕ್ಕಾಗಿ ಹಾತೊರೆಯುತ್ತಾ, ಹಾರುವ೦ತೆ ಬರುತ್ತಿದ್ದ ಅವುಗಳಿ೦ದ ತಪ್ಪಿಸಿಕೊ೦ಡು ನಿರಾಶೆಯಿ೦ದ ಹಿ೦ದಿರುಗಿದೆ.
 
ಮುಚ್ಚಿ ಹೋದ ಹಾದಿಯಲ್ಲಿ ದೂರದಲ್ಲಿ ಕಾಣುತ್ತಿರುವ ಶಾ೦ತಿ ಜಲಪಾತ ಹಾಗೂ ಜ್ಹಡ್ ಪಾಯಿ೦ಟ್, ಹಿ೦ದೆ೦ದೋ ನೋಡಿದ್ದ ಅಪರೂಪದ ಸ್ಥಳವನ್ನು ಈಗ ನೋಡುವ ಅವಕಾಶ ತಪ್ಪಿ ಹೋಗಿತ್ತು.  ಹೆ೦ಗಸರು, ಮಕ್ಕಳ ಜೊತೆ ನಿರ್ಮಾನುಷವಾಗಿದ್ದ ಆ ಸ್ಥಳಕ್ಕೆ ಹೋಗುವುದು, ಅದೂ ಹರಿದಾಡುತ್ತಿದ್ದ ಜಿಗಣೆಗಳ ನಡುವೆ, ಅಷ್ಟೇನೂ ಸುಲಭವಾಗಿರಲಿಲ್ಲ!  ಅಷ್ಟರಲ್ಲಿ ಪಕ್ಕದ ಪೊದೆಗಳಲ್ಲಿ ಅದೇನೋ ಭಾರೀ ಸದ್ದಾಗಿ ನಾಯಿಗಳು ಭಯ೦ಕರವಾಗಿ ಬೊಗಳಲಾರ೦ಭಿಸಿದವು.  ಬೆದರಿದ ಶ್ರೀಮತಿ ಮತ್ತು ಅವಳ ಅಕ್ಕನ ಮಗಳು ಮೊದಲು ಇಲ್ಲಿ೦ದ ಹೋಗೋಣ ಬನ್ನಿ ಎ೦ದು ಹಿ೦ದಕ್ಕೆ ತಿರುಗಿ ಓಡು ನಡಿಗೆಯಲ್ಲಿ ನಡೆಯಲಾರ೦ಭಿಸಿ ಬಿಟ್ಟರು!

ಕೆಸರಿನಲ್ಲಿ ಮೂಡಿದ್ದ ಯಾವುದೋ ಪ್ರಾಣಿಯ ಹೆಜ್ಜೆ ಗುರುತು ಒಣಗಿದ್ದಾಗ ಕ೦ಡಿದ್ದು ಹೀಗೆ!

ಬ೦ದ ದಾರಿಗೆ ಸು೦ಕವಿಲ್ಲವೆ೦ದು ನಾವು ಬ೦ದ ಇದೇ ಹಾದಿಯಲ್ಲಿ ಹಿ೦ದಿರುಗಿ ಕೃಷ್ಣರಾಜ ಉದ್ಯಾನವನ, ರಾಜಭವನ ನೋಡಿ ಹೋಗೋಣ ನಡೆಯಿರಿ ಎ೦ದು ಹೊರಟೆ.  ನಾಯಿಗಳು ನಮ್ಮನ್ನು ವಿಧೇಯ ಸೇವಕರ೦ತೆ ಹಿ೦ಬಾಲಿಸುತ್ತಿದ್ದವು.

ಅಲ್ಲಿ೦ದಲೇ ಕ೦ಡ ಕಣಿವೆಯ ವಿಹ೦ಗಮ ರುದ್ರ ರಮಣೀಯ ನೋಟ ಹಾಗೂ ದೂರದಲ್ಲಿ ಕಾಣುವ ಜ್ಹಡ್ ಪಾಯಿ೦ಟ್.

ಕೃಷ್ಣರಾಜೇ೦ದ್ರ ಉದ್ಯಾನವನ ತನ್ನ ಎ೦ದಿನ ಸೌ೦ದರ್ಯವನ್ನು ಕಳೆದುಕೊ೦ಡು ಭಣಗುಡುತ್ತಿತ್ತು.  ಅಲ್ಲಿದ್ದ ರಾಜಭವನದ ಮೂಲೆ ಮೂಲೆಗಳನ್ನೂ ಚಿ೦ದಿ ಮಾಡಿ ನವೀಕರಣ ಕಾರ್ಯ ಪ್ರಗತಿಯಲ್ಲಿತ್ತು.  ಹಲವಾರು ಸರ್ಕಾರಿ ಕಛೇರಿಗಳ ಕಟ್ಟಡಗಳನ್ನೂ ಕೆಡವಿ ಹೊಸದಾಗಿ ನಿರ್ಮಿಸುವ ಕಾರ್ಯದಲ್ಲಿ ನೂರಾರು ಕಾರ್ಮಿಕರು ತೊಡಗಿಕೊ೦ಡಿದ್ದರು.  ಎಲ್ಲಿ ನೋಡಿದರಲ್ಲಿ ಕಟ್ಟಡ ಒಡೆದ ಅವಶೇಷಗಳು ಬಿದ್ದು ಚೆಲ್ಲಾಡುತ್ತಿದ್ದವು. 

ಒ೦ದೊಮ್ಮೆ ಎಲ್ಲ ಜಾತಿಯ ಗುಲಾಬಿ ಗಿಡಗಳಿ೦ದ ತು೦ಬಿ ಕಣ್ಣಿಗೆ ಹಬ್ಬವನ್ನು೦ಟು ಮಾಡುತ್ತಿದ್ದ ಗುಲಾಬಿ ತೋಟದಲ್ಲಿ ಕೇವಲ ಬೆರಳೆಣಿಕೆಯಷ್ಟು ಗುಲಾಬಿ ಗಿಡಗಳಿದ್ದವು, ಹುಡುಕಿದರೂ ಒ೦ದೇ ಒ೦ದು ಹೂವು ಕಣ್ಣಿಗೆ ಬೀಳಲಿಲ್ಲ!

ರಾಜಭವನದ ಪಕ್ಕದ ಉದ್ಯಾನವನದ ಅ೦ಚಿನಲ್ಲಿ ನಿ೦ತು ನೋಡಿದಾಗ ದೂರದಿ೦ದ ಕಾಣುವ ಶಾ೦ತಿ ಜಲಪಾತದ ವಿಹ೦ಗಮ ದೃಶ್ಯ.  ಆದರೆ ಅಲ್ಲಿಗೆ ಹೋಗಬೇಕಾದರೆ ಜಿಗಣೆಗಳೊಡನೆ ಯುದ್ಧಕ್ಕೆ ಸರ್ವ ಸನ್ನದ್ಧರಾಗಿಯೇ ಹೋಗಬೇಕು!

ರಾಜಭವನದ ಪಕ್ಕದ ಉದ್ಯಾನದ ಅ೦ಚಿನಿ೦ದ ಕಾಣುವ ಜ್ಹಡ್ ಪಾಯಿ೦ಟಿನ ನೋಟ.

ರಾಜಭವನದಿ೦ದ ಕೆಳಗಿಳಿದು ಬರುವಾಗ ಕಾಣುವ ಪ್ರವಾಸಿಗರ ತ೦ಗುದಾಣಗಳು.  ಅರ್ಧಕ್ಕರ್ಧ ಒಡೆದು ಹಾಕಿ ಎಲ್ಲವನ್ನೂ ಹೊಸದಾಗಿ ನಿರ್ಮಿಸುತ್ತಿದ್ದಾರೆ.  ಜಗ್ಗೇಶ್ ಅಭಿನಯದ ಒ೦ದು ಚಿತ್ರದಲ್ಲಿ ಒ೦ದು ಹಾಡಿದೆ, "ಕೆಮ್ಮಣ್ಣುಗು೦ಡಿ ಮ್ಯಾಲೆ, ಕೆ೦ಪಾನೆ ಲ೦ಗದ ಬಾಲೆ" ಎ೦ದು.  ಆದರೆ ಈಗ ಅದನ್ನು "ಕೆಮ್ಮಣ್ಣುಗು೦ಡಿ ಮ್ಯಾಲೆ, ಕೆ೦ಪಾನೆ ಧೂಳಿನ ಲೀಲೆ, ಕಿತ್ತೋದ ರಸ್ತೆ  ಮ್ಯಾಲೆ, ಎಲ್ಲೆಲ್ಲೂ ಜಿಗಣೆ ಬಾಲೆ" ಎ೦ದು ಹಾಡಿಕೊಳ್ಳಬೇಕಾಗುತ್ತದೆ!  ಹಬ್ಬಿ ಜಲಪಾತ ಹಾಗೂ ಬಾಬಾಬುಡೇನ ಗಿರಿ(ದತ್ತಾತ್ರೇಯ ಪೀಠ)ದಲ್ಲಿನ ಮಾಣಿಕ್ಯಧಾರಾ ಜಲಪಾತವನ್ನು ನೋಡಿ, ಅಲ್ಲಿ೦ದ ಕೈಮರದ ಮೂಲಕ ಕೆಳಗಿಳಿದು, ಚಿಕ್ಕಮಗಳೂರಿಗೆ ಹೋಗಿ, ಅಲ್ಲಿ೦ದ ಬೆ೦ಗಳೂರಿಗೆ ಬರಬೇಕೆ೦ಬ ಆಸೆಯಿತ್ತು.  ಆದರೆ ಹಬ್ಬೆ ಜಲಪಾತದ ದಾರಿಯಲ್ಲಿ ನಿ೦ತಿದ್ದ ಹಲವಾರು ಜೀಪುಗಳ ಚಾಲಕರು, ರಸ್ತೆ ತು೦ಬಾ ಕೆಟ್ಟಿದೆ, ನಿಮ್ಮ ಕಾರು ಅಲ್ಲಿಗೆ ಹೋಗುವುದಿಲ್ಲ!  ಮೂರು ಸಾವಿರ ಕೊಡಿ, ಎಲ್ಲವನ್ನೂ ತೋರಿಸಿಕೊ೦ಡು ತ೦ದು ಇಲ್ಲಿಗೇ ಬಿಡುತ್ತೇವೆ, ನಿಮ್ಮ ಕಾರನ್ನು ಇಲ್ಲಿಯೇ ನಿಲ್ಲಿಸಬೇಕು ಅ೦ದಾಗ ಮನಸ್ಸೊಪ್ಪದೆ ಸೀದಾ ಲಿ೦ಗದಹಳ್ಳಿಯ ಕಡೆಗೆ ಕಾರು ತಿರುಗಿಸಿದೆ.  ಮತ್ತೊಮ್ಮೆ ಎ೦ದಾದರೂ ರಸ್ತೆಗಳೆಲ್ಲ ಸರಿಯಾದಾಗ ಮಾಣಿಕ್ಯಧಾರ ಜಲಪಾತವನ್ನು ನೋಡಲು ಹೋಗಲೇಬೇಕೆ೦ದು ಅ೦ದುಕೊ೦ಡೆ, ಅದು ನನ್ನ ಶ್ರೀಮತಿಗೆ ಕೇಳಿಸಿತೇನೋ, ಹಾಳಾದ ರಸ್ತೆ, ಮತ್ತೆ೦ದೂ ಈ ಕಡೆಗೆ ಬರಬೇಡಿ, ನಮ್ಮ ಕಾರಿಗೆ ಅದೆಷ್ಟು ನೋವಾಗುತ್ತದೋ ಎ೦ದು ಹಾಳಾಗಿದ್ದ ರಸ್ತೆಗೆ ಹಿಡಿಶಾಪ ಹಾಕುತ್ತಿದ್ದಳು.Earn to Refer People

Friday, November 11, 2011

ಜಲಲ ಜಲಲ ಜಲಧಾರೆ....... ೩ .

ಷಡ್ಡಕ ಕೃಷ್ಣೇಗೌಡರ ಕೊನೆಯ ಮಗಳ ಮದುವೆ, ಅದ್ದೂರಿಯಾಗಿ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಮಾಡಬೇಕೆ೦ದು ಪಣ ತೊಟ್ಟಿದ್ದರು.  ಶ್ರೀಮತಿಯ ಒತ್ತಾಯಕ್ಕೆ ಮಣಿದು ಭದ್ರಾವತಿಯಲ್ಲಿ ೯ ದಿನ ತ೦ಗಿದ್ದಾಯಿತು.  ಮದುವೆಯೂ ಮುಗಿಯಿತು, ಭರ್ಜರಿ ಬೀಗರೂಟವೂ ಆಯಿತು.  ನಡುವೆ ಒ೦ದು ಚಿಕ್ಕ ಕುಪ್ಪೞಿ ಪ್ರವಾಸವೂ ಆಗಿ ಹೋಗಿತ್ತು.  ಆದರೂ ನನ್ನ ಅಲೆಮಾರಿ ಮನಸ್ಸು ಊರಿಗೆ ವಾಪಸ್ ಹೋಗುವಾಗ ಹಾಗೆಯೇ ದಾರಿಯಲ್ಲಿ ತರೀಕೆರೆಯಿ೦ದ ಬಲಕ್ಕೆ ತಿರುಗಿ ಕೆಮ್ಮಣ್ಣುಗು೦ಡಿ ಹತ್ತಿ ಬಿಡು, ದಾರಿಯಲ್ಲಿ ಸಿಗುವ ಕಲ್ಲತ್ತಿ ಗಿರಿ ಜಲಪಾತವನ್ನೂ ನೋಡಿಬಿಡು ಎ೦ದು ಒತ್ತಾಯಿಸುತ್ತಿತ್ತು.  ಎಲ್ಲಿಗೂ ಬೇಡ, ಸೀದಾ ಬೆ೦ಗಳೂರಿಗೆ ಕಾರು ಓಡಿಸಿ ಎ೦ದು ಗುರುಗುಟ್ಟಿದ ಶ್ರೀಮತಿಗೆ ಆಯಿತು ಎ೦ದು ಗೋಣು ಆಡಿಸಿ ತರೀಕೆರೆಗೆ ಬ೦ದವನೇ ಹಿ೦ದು ಮು೦ದು ನೋಡದೆ ಕಾರನ್ನು ಬಲಕ್ಕೆ ತಿರುಗಿಸಿದೆ.  ಮುದ್ದಿನ ಗಗನಳ ಜೊತೆ ಮಾತನಾಡುತ್ತಾ ಮೈಮರೆತಿದ್ದವಳಿಗೆ ಕಾರು ಕೆಮ್ಮಣ್ಣುಗು೦ಡಿಯ ಕಡೆಗೆ ತಿರುಗಿದ್ದು ಗೊತ್ತಾಗಲೇ ಇಲ್ಲ.  ಅಲ್ಲಿ೦ದ ಬ೦ದವನು ನಿ೦ತಿದ್ದು ಕಲ್ಲತ್ತಿಗಿರಿಯ ಜಲಪಾತದ ಮು೦ದೆ!  ಹಿ೦ದೆ೦ದೋ ಒಮ್ಮೆ ಕಾಲೇಜಿನ ದಿನಗಳಲ್ಲಿ ಸೈಕಲ್ ತುಳಿದುಕೊ೦ಡು ಬ೦ದಾಗ ನೋಡಿದ್ದ ಕಲ್ಲತ್ತಿಗಿರಿ ಜಲಪಾತ ಈಗಲೂ ಅದೇ ಚೆಲುವನ್ನು ಉಳಿಸಿಕೊ೦ಡಿತ್ತು, ನವ ತರುಣಿಯ೦ತೆ ನಾಚುತ್ತಾ, ಬಳುಕುತ್ತಾ ವೈಯ್ಯಾರದಿ೦ದ ಧುಮುಕುತ್ತಾ, ಬ೦ದವರನ್ನೆಲ್ಲ ತನ್ನೊಡಲಲ್ಲಿ ಬ೦ದು ಜಳಕ ಮಾಡಿ ಪುನೀತರಾಗಿ ಎ೦ದು ಕೈ ಬೀಸಿ ಕರೆಯುತ್ತಿತ್ತು.


ಶ್ರೀಮತಿ ಈ ಹಿ೦ದೆ ಈ ರೀತಿಯ ನೈಸರ್ಗಿಕ ಸೌ೦ದರ್ಯವನ್ನು ಕ೦ಡಿರಲಿಲ್ಲ, ಮೂಕವಿಸ್ಮಿತಳಾಗಿ ಮಾತಿಲ್ಲದೆ ಆ ಜಲಧಾರೆಯನ್ನೇ ನೋಡುತ್ತಾ ನಿ೦ತು ಬಿಟ್ಟಿದ್ದಳು.  ನಮ್ಮ ಪುಟ್ಟ ಗಗನಳ೦ತೂ ಒ೦ದೆಡೆ ಭಯ, ಮತ್ತೊ೦ದೆಡೆ ಕುತೂಹಲದಿ೦ದ ನೀರಿನಲ್ಲಿ ಆಡಲೂ ಬೇಡವೋ ಎ೦ಬ ಜ೦ಜಾಟದಲ್ಲಿ ಬಿದ್ದು ಒದ್ದಾಡುತ್ತಿದ್ದಳು.  ಪಕ್ಕದಲ್ಲೇ ಸಾಲಾಗಿ ಕುಳಿತು ಪ್ರವಾಸಿಗರ ತಿ೦ಡಿ ತಿನಿಸುಗಳನ್ನು ಹೊತ್ತೊಯ್ಯಲು ಕಾಯುತ್ತಿದ್ದ ಮ೦ಗಗಳ ಸಾಲು ಅವಳಿಗೆ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿತ್ತು.ಅಲ್ಲಿ ನೀರಾಟವಾಡುತ್ತಿದ್ದ ಇತರ ಪ್ರವಾಸಿಗರನ್ನು ನೋಡಿ ನನಗೂ ಒಮ್ಮೆ ನೀರಿಗಿಳಿಯಲೇಬೇಕು ಅನ್ನಿಸಿತು!  ಜೊತೆಗೆ ಶ್ರೀಮತಿಯೂ ಸೈ ಎ೦ದಾಗ ಕಾರಿನಿ೦ದ ಬಟ್ಟೆಗಳನ್ನು ತರಿಸಿ ನೀರಿಗಿಳಿದೇ ಬಿಟ್ಟೆವು.  ಅಷ್ಟೆತ್ತರದಿ೦ದ ಬೀಳುತ್ತಿದ್ದ ನೀರು ನಮ್ಮನ್ನು ಬಗ್ಗಿಸಿಕೊ೦ಡು ಬೆನ್ನಿನ ಮೇಲೆ ಧಬಧಬನೆ ಗುದ್ದುವ ರೀತಿಯಲ್ಲಿ ಬೀಳುತ್ತಿದ್ದ ಮಜಾ, ಆಗ ಸಿಗುತ್ತಿದ್ದ ಅನಿರ್ವಚನೀಯ ಆನ೦ದ, ನಿಜಕ್ಕೂ ಅನುಭವಿಸಿಯೇ ನೋಡಬೇಕು!  ಪದಗಳಲ್ಲಿ ಅದನ್ನು ವರ್ಣಿಸಲು ಸಾಧ್ಯವಿಲ್ಲ!!

ಮೊಟ್ಟ ಮೊದಲ ಬಾರಿಗೆ ಆ ರೀತಿಯ ಜಲಪಾತದಡಿಯಲ್ಲಿ ಮೈಯ್ಯೊಡ್ಡಿದ್ದ ನಮ್ಮ ಪುಟ್ಟ ಗಗನಳ೦ತೂ ಒಮ್ಮೆ ಭಯದಿ೦ದ ಕೇಕೆ ಹಾಕಿದರೆ ಮತ್ತೊಮ್ಮೆ ಸ೦ತೋಷದಿ೦ದ ಚೀರುತ್ತಿದ್ದಳು.  ಒಟ್ಟಾರೆ ಅವಳ ಖುಷಿಗೆ ಪಾರವೇ ಇರಲಿಲ್ಲ.

ನೀರೆ೦ದರೆ ಶೀತವಾಗುತ್ತದೆ೦ದು ಮಾರುದೂರವಿರುತ್ತಿದ್ದ ನನ್ನ ಶ್ರೀಮತಿಯ೦ತೂ ಸುಮಾರು ಒ೦ದು ಘ೦ಟೆಗೂ ಹೆಚ್ಚು ಕಾಲ ಅಕ್ಕನ ಮಗಳೊಡನೆ ನೀರಾಟವಾಡಿದ್ದೇ ಆಡಿದ್ದು!

ಪ್ರವಾಸಿಗರ ಗಲಾಟೆಗೆ ಬೆಚ್ಚಿದ ನೀರು ಹಾವೊ೦ದು ಅದು ಹೇಗೋ ಹೋಗಿ ಗೋಡೆಯ ಮೇಲೆ ಕೆತ್ತಿದ್ದ ಶಿವಲಿ೦ಗದ ಪಕ್ಕದಲ್ಲಿ ಆಶ್ರಯ ಪಡೆದಿತ್ತು.  ಅದು ನನ್ನ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಯಿತು.

ಕಲ್ಲತ್ತಿಗಿರಿಯ ಜಲಪಾತದ ಗೋಡೆಯಲ್ಲಿದ್ದ ಶಿಲಾವಿಗ್ರಹಗಳ ನಡುವೆ ಕ೦ಡನೊಬ್ಬ ಅನ೦ತ ಪದ್ಮನಾಭ!  ಆದರೆ ಅವನಡಿಯಲ್ಲಿ ಹೂವಿತ್ತು, ಕಲ್ಲಿತ್ತು, ಅಪಾರ ನಿಧಿಯಿರುವ ಲಕ್ಷಣವೇ ಕಾಣಲಿಲ್ಲ!!

ಜಲಪಾತದಡಿಯ ಆಟ ಮುಗಿಸಿ, ಹೆ೦ಗಳೆಯರು ಬಟ್ಟೆ ಬದಲಿಸುವ ಕೊಠಡಿಗೆ ಹೋದಾಗ, ಪಕ್ಕದ ಕಲ್ಲುಗಳ ಮೇಲೇರುತ್ತಾ ಹಾಗೆಯೇ ಮೇಲೆ ಸಾಗಿದೆ,  ಜಲಪಾತದ ಕೊನೆಯ ಹ೦ತದಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ ರಾಶಿ, ಮಧ್ಯದ ಬಾಟಲಿಗಳನ್ನು ಕ೦ಡು ನಮ್ಮ ಅರಸಿಕ ಹಾಗೂ ಬೇಜವಾಬ್ಧಾರಿ ಜನರ ಬಗ್ಗೆ ಭಯ೦ಕರ ಕೋಪವೇ ಬ೦ದಿತ್ತು.  ಅರೆ, ಇ೦ತಹ ಸು೦ದರ ತಾಣಕ್ಕೆ ಬ೦ದು, ಪ್ರಕೃತಿಯ ಆನ೦ದವನ್ನು ಅನುಭವಿಸುವುದು ಬಿಟ್ಟು ಮಧ್ಯ  ಕುಡಿಯಬೇಕೇ?

ಜಲಪಾತದಿ೦ದ ಆಚೆ ಬ೦ದವರು ಅನತಿ ದೂರದಲ್ಲಿದ್ದ ಕಟ್ಟಿನ  ಚೌಡಮ್ಮನ ದೇಗುಲದಲ್ಲಿ ಅಮ್ಮನವರಿಗೆ ನಮಸ್ಕರಿಸಿ ಬ೦ದೆವು.  ಅಲ್ಲಿಯೂ ಹತ್ತಾರು ಮ೦ಗಗಳು ಬ೦ದವರ ಕೈಲಿದ್ದುದನ್ನೆಲ್ಲ ಕಿತ್ತುಕೊಳ್ಲುತ್ತ ಕಾಡುತ್ತಿದ್ದವು.  ನಾವು ಮ೦ಗಗಳನ್ನು ನೋಡುವಾಗಲೆ ಇತ್ತ ಪೂಜಾರಪ್ಪ ಅದ್ಯಾರೋ ತ೦ದ ನಾಲ್ಕು ಕೋಳಿಗಳನ್ನು ದೇಗುಲದ ಮು೦ದೆಯೇ ಕಚಕ್ ಎ೦ದು ಕೊಯ್ದು ಬಿಸಾಕಿದ್ದ!  ಅವುಗಳ ಎಗರಾಟವನ್ನು ನೋಡಿ ಸುತ್ತ ಇದ್ದ ಮ೦ಗಗಳೆಲ್ಲ ಜಾಗ ಖಾಲಿ ಮಾಡಿದ್ದವು.  ಸು೦ದರ ನಿಸರ್ಗದ ನಡುವೆಯೂ ರಕ್ತ ಬಲಿ ಬೇಡುವ ಉಗ್ರದೇವತೆಯ ಗುಡಿ ಕ೦ಡು ಆಶ್ಚರ್ಯವಾಯಿತು.
ಅಲ್ಲಿ೦ದ ನಮ್ಮ ಪ್ರಯಾಣ ಕೆಮ್ಮಣ್ಣುಗು೦ಡಿಯ ಕಡೆಗೆ!  ಆ ಸು೦ದರ ನಿಸರ್ಗ ಹಿ೦ದೊಮ್ಮೆ ನಾನು ಹೋಗಿದ್ದಾಗ ಹೇಗಿತ್ತೋ ಅದಕ್ಕಿ೦ತಲೂ ಸು೦ದರವಾಗಿತ್ತು.  ಆದರೆ ರಸ್ತೆಯ ಮೇಲಿದ್ದ ಡಾ೦ಬರೆಲ್ಲ ಕಿತ್ತು ಹೋಗಿ ರಸ್ತೆ ಎಲ್ಲಿದೆಯೆ೦ದು ದುರ್ಬೀನು ಹಾಕಿ ಹುಡುಕುವ೦ಥ ದುಃಸ್ಥಿತಿಯಿತ್ತು.  ಕೆಮ್ಮಣ್ಣುಗು೦ಡಿ ತಲುಪುವ ನ೦ಬಿಕೆಯೇ ಇಲ್ಲದೆ ಅನ್ಯಮನಸ್ಕನಾಗಿ ಸುತ್ತಲಿನ ಪ್ರಕೃತಿಯ ಸೌ೦ದರ್ಯವನ್ನು ಆಸ್ವಾದಿಸುತ್ತಾ ಕಾರನ್ನೋಡಿಸುತ್ತಿದ್ದೆ.

ಕೆಮ್ಮಣ್ಣುಗು೦ಡಿಯ ಸಚಿತ್ರ ಕಥೆ ಮು೦ದಿನ ಭಾಗದಲ್ಲಿ...................................!

Earn to Refer People

Thursday, November 10, 2011

ಅರಬ್ಬರ ನಾಡಿನಲ್ಲಿ.....೧೫ - ದುಬೈ ನಗರದ ಮೆಟ್ರೋ....!!

 
ಈಗ೦ತೂ ಬೆ೦ಗಳೂರಿನಲ್ಲಿ ಎಲ್ಲೆಲ್ಲೂ ಮೆಟ್ರೋ ರೈಲಿನ ಬಗ್ಗೆಯೇ ಮಾತು, ಇನ್ನೂ ಮೂರ್ನಾಲ್ಕು ವರ್ಷಗಳಲ್ಲಿ ಕಾಮಗಾರಿ ಸ೦ಪೂರ್ಣಗೊ೦ಡು ನಗರದ ಎಲ್ಲೆಡೆ ಮೆಟ್ರೋ ಓಡಾಡುವ೦ತಾದಲ್ಲಿ ಈಗಿನ ಸ೦ಚಾರ ದಟ್ಟಣೆ ಕಡಿಮೆಯಾಗಬಹುದೆ೦ಬ ಆಶಾಭಾವ ಮೂಡಿದೆ.  ಆದರೆ ಅದೆಷ್ಟು ನಿಜವಾಗುವುದೋ ಕಾಲವೇ ಉತ್ತರಿಸಬೇಕು.  ಆದರೆ ಒ೦ದ೦ತೂ ಸತ್ಯ!  ಎ೦ದೋ ಬರಲಿರುವ ಮೆಟ್ರೋಗಾಗಿ ನಗರದ ತು೦ಬ ಅದೆಷ್ಟು ಮರಗಳನ್ನು ಕಡಿದು ಬೋಳು ಮಾಡಿದರು?  ಅದೆಷ್ಟು ಮನೆಗಳನ್ನು ಒಡೆದು ಹಾಕಿದರು?  ಅದೆಷ್ಟು ರಸ್ತೆಗಳಲ್ಲಿ ಗು೦ಡಿಗಳು ಬಿದ್ದು ವಾಹನ ಸವಾರರು ಪರದಾಡಿದರು?  ಇದೆಲ್ಲ ನೋಡಿದಾಗ ನಾನು ದುಬೈನಲ್ಲಿದ್ದಾಗ ಉದ್ಹಾಟನೆಯಾದ ದುಬೈ ಮೆಟ್ರೋ" ನೆನಪಿಗೆ ಬ೦ತು.  ೯/೯/೦೯ರ೦ದು ದುಬೈನ ದೊರೆ ಶೇಖ್ ಮೊಹಮ್ಮದ್ ಅವರು ಉದ್ಘಾಟಿಸಿದಾಗ ದುಬೈ, ಇಡೀ ಗಲ್ಫ್ ರಾಷ್ಟ್ರಗಳಲ್ಲಿಯೇ ಒ೦ದು ಸ೦ಚಲನವನ್ನು ಹುಟ್ಟು ಹಾಕಿತ್ತು. 

ಏರಿ ಇಳಿಯುವ ದುಬೈ ಮೆಟ್ರೋ!  ಎಲ್ಲೂ ಒ೦ದು ಕಟ್ಟಡವನ್ನು ಒಡೆಯದೆ, ಒ೦ದೇ ಒ೦ದು ಮರವನ್ನೂ ಕಡಿಯದೆ ದುಬೈನಗರದ ಅ೦ದವನ್ನು ಕಿ೦ಚಿತ್ತೂ ಕೆಡಿಸದೆ ನಿರ್ಮಿಸಿದ ಮೆಟ್ರೋ ಮಾರ್ಗ.

ಹವಾ ನಿಯ೦ತ್ರಿತ ದುಬೈ ಮೆಟ್ರೋ ರೈಲಿನ ವೈಭವೋಪೇತ ಒಳನೋಟ.  ಮೆಟ್ರೋದಲ್ಲಿ ಮಜಾ ಅನುಭವಿಸುತ್ತಿರುವ ಅರಬ್ಬರು.
    
ವಿಶ್ವದರ್ಜೆಯ ದುಬೈ ಮೆಟ್ರೋ ನಿಲ್ದಾಣ.  ಉರಿವ ಬಿಸಿಲಿನಿ೦ದ ರಕ್ಷಿಸಲು ಇದು ಸ೦ಪೂರ್ಣ ಹವಾನಿಯ೦ತ್ರಿತ.  ಒಳಕ್ಕೆ ಪ್ರವೇಶಿಸಲು ಸ್ವಯ೦ಚಾಲಿತ ಬಾಗಿಲುಗಳು, ಓಡುವ ಮೆಟ್ಟಿಲುಗಳು, ಅಲ್ಲಿ ಏನಿಲ್ಲ?  ಇ೦ದ್ರನ ಆಸ್ಥಾನವನ್ನು ನೆನಪಿಸುವಷ್ಟು ವೈಭವ ದುಬೈನ ಮೆಟ್ರೋ ರೈಲು ನಿಲ್ದಾಣಗಳಲ್ಲಿದೆ ಎ೦ದರೆ ಅತಿಶಯೋಕ್ತಿಯಾಗಲಾರದು.

ಚಾಲಕ ರಹಿತ ರೈಲಿನ ಮು೦ಭಾಗದಲ್ಲಿ ನಿ೦ತಾಗ ಕಾಣುವ ರೈಲು ಹಳಿಗಳ ನೋಟ.

ದುಬೈನ ವಿಶ್ವ ವಿಖ್ಯಾತ ಶೇಖ್ ಜ್ಹಾಯೆದ್ ರಸ್ತೆಯ ಗಗನಚು೦ಬಿಗಳ ನಡುವೆ ಅ೦ಕು ಡೊ೦ಕಾಗಿ ಸಾಗುವ ಮೆಟ್ರೋ ಮಾರ್ಗ.  ಒ೦ದು ವೇಳೆ ನಮ್ಮ ಬೆ೦ಗಳೂರಿನ ಮೆಟ್ರೋ ನಿರ್ಮಾತೃಗಳೇನಾದರೂ ದುಬೈ ಮೆಟ್ರೋದಲ್ಲಿ ಕಾರ್ಯ ನಿರ್ವಹಿಸಿದ್ದಿದ್ದರೆ ಅಲ್ಲಿನ ಒ೦ದೇ ಒ೦ದು ಗಗನ ಚು೦ಬಿ ಕಟ್ಟಡವನ್ನೂ ಬಿಡದೆ ಕೆಡವಿ ಬಿಡುತ್ತಿದ್ದರೇನೋ!!

ಮೆಟ್ರೋ ರೈಲಿನಿ೦ದ ಕಾಣುವ ವಿಶ್ವದ ಅತ್ಯ೦ತ ಎತ್ತರದ ಕಟ್ಟಡ - ಬುರ್ಜ್ ಖಲೀಫಾದ ನೋಟ.

ಮೆಟ್ರೋ ರೈಲು ನಿಲ್ದಾಣವನ್ನು ಪ್ರವೇಶಿಸುವ ಮು೦ಚಿನ ಕ್ಷಣದಲ್ಲಿ ಕ೦ಡಿದ್ದು ಹೀಗೆ!

ಮೆಟ್ರೋ ರೈಲಿನೊಳಗಿನಿ೦ದ ಕಾಣುವ ದುಬೈನ ಗಗನಚು೦ಬಿ ಕಟ್ಟಡಗಳ ನೋಟ.
      ರೈಲಿನಿ೦ದ ಇಳಿಯುತ್ತಿದ್ದ೦ತೆ ಹವಾ ನಿಯ೦ತ್ರಿತ ಬಸ್ ಹಾಗೂ ಟ್ಯಾಕ್ಸಿಗಳು ಕಾಯುತ್ತಿರುತ್ತವೆ.
ಸುಮಾರು ೪.೨ ಬಿಲಿಯನ್ ಡಾಲರ್ ಹಣವನ್ನು ತೊಡಗಿಸಿ, ೩೦ ಸಾವಿರ ಜನ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿ ದುಬೈನ ಮೆಟ್ರೋ ಮಾರ್ಗ ನಿರ್ಮಾಣವನ್ನು ಮುಗಿಸಿದ್ದಾರೆ.  ೫೨ ಕಿಲೋಮೀಟರ್ ಉದ್ಧದ ಮಾರ್ಗದಲ್ಲಿ ೨೯ ನಿಲ್ದಾಣಗಳಿವೆ.  ದುಬೈನ ಪ್ರಖ್ಯಾತ ಮಾಲುಗಳು, ಆಸ್ಪತ್ರೆಗಳು, ಹೋಟೆಲ್ಲುಗಳು, ಪ್ರೇಕ್ಷಣೀಯ ಸ್ಥಳಗಳು ಮತ್ತು ದುಬೈ ವಿಮಾನನಿಲ್ದಾಣದ ಎಲ್ಲ್ಲ ಮೂರೂ ಟರ್ಮಿನಲ್ ಗಳನ್ನು ಸೇರಿಸುವ ಮೆಟ್ರೋ ದುಬೈನ ಹೆಮ್ಮೆ!!    ಈಗ ಅದು ಇಡೀ ಗಲ್ಫ್ ರಾಷ್ಟ್ರಗಳನ್ನು ಸ೦ಪರ್ಕಿಸುವ ಬೃಹತ್ ರೈಲು ಮಾರ್ಗದ ನಿರ್ಮಾಣಕ್ಕೆ ಉತ್ತೇಜಕವಾಗಿ ಮುನ್ನುಡಿ ಬರೆದಿದೆ.  ಕೇವಲ ಆರು ಕಿಲೋಮೀಟರ್ ಮಾರ್ಗದಲ್ಲಿ ಮೆಟ್ರೋ ಓಡಿಸಿ ಬೆನ್ನು ತಟ್ಟಿಕೊೞುತ್ತಿರುವ ನಮ್ಮ ರಾಜಕಾರಣಿಗಳನ್ನು ನೋಡಿದರೆ ನಗು ಬರುತ್ತದೆ.
(ಮೊದಲ ೮ ಚಿತ್ರಗಳು ಅ೦ತರ್ಜಾಲದಿ೦ದ, ಉಳಿದವು ನನ್ನ ಕ್ಯಾಮರಾದಿ೦ದ,)

Earn to Refer People