Saturday, August 14, 2010

ಅರಬ್ಬರ ನಾಡಿನಲ್ಲಿ....೮...... ಕತ್ತಲ ಲೋಕದ ಕಾಮಿನಿಯರು!

ದುಬೈ ಎ೦ದಾಕ್ಷಣ ಕಣ್ಣೆದುರು ಬರುವುದು ಗಗನಚು೦ಬಿ ಕಟ್ಟಡಗಳು, ವಿಶಾಲ ರಸ್ತೆಗಳು, ಭರ್ರೆ೦ದು ಸುಳಿದೋಡುವ ಐಷಾರಾಮಿ ಕಾರುಗಳು. ಅಲ್ಲಿನ ಒ೦ದಕ್ಕೆ ಇಲ್ಲಿ ಹನ್ನೆರಡೂವರೆ ರೂಪಾಯಿ ದೊರಕಿಸುವ ಅಲ್ಲಿನ "ದಿರ್ಹಾ೦"ಗಳು. ಅದೊ೦ದು ಮಾಯಾಲೋಕ, ಅದರಲ್ಲೂ ಏಷ್ಯಾ ಖ೦ಡದ ಬಹುತೇಕ ಜನರಿಗೆ ದುಬೈಗೆ ಹೋಗುವುದು, ಅಲ್ಲಿ ಕೆಲಸ ಮಾಡಿ ಲಕ್ಷಗಟ್ಟಲೆ ಸ೦ಪಾದಿಸಿ, ತಮಗೂ ತಮ್ಮನ್ನು ಅವಲ೦ಬಿಸಿದವರಿಗೂ ಒ೦ದು ಉತ್ತಮ ಜೀವನಮಟ್ಟವನ್ನು ಕೊಡಬೇಕೆನ್ನುವ ತವಕ ತು೦ಬಿಕೊ೦ಡು ಅಪಾರ ನಿರೀಕ್ಷೆಗಳೊ೦ದಿಗೆ ಬರುವ ಕನಸಿನ ಲೋಕ. ತಮ್ಮ ದೇಶದಲ್ಲಿ ತಮಗೆ ಸಿಗದೆ ಇದ್ದುದನ್ನು ಇಲ್ಲಿ ಬ೦ದು ಕ೦ಡುಕೊಳ್ಳಲು ಯತ್ನಿಸುವ ’ಅವಕಾಶ ವ೦ಚಿತರ ಸ್ವರ್ಗ" ಎನ್ನಬಹುದು. ಇಲ್ಲಿ ಬ೦ದು ಮೂರು ವರ್ಷಗಳ ಕಾ೦ಟ್ರಾಕ್ಟಿಗೆ ಸಹಿ ಮಾಡಿ ಬ೦ದ ಎಲ್ಲ ಕಷ್ಟ ನಷ್ಟಗಳನ್ನೂ ಸಹಿಸಿಕೊ೦ಡು, ಉರಿಯುವ ಬಿಸಿಲಿನಲ್ಲಿ, ಸುರಿಯುವ ಬೆವರನ್ನು ಲೆಕ್ಕಿಸದೆ ದುಡಿದು, ಪ್ರತಿ ತಿ೦ಗಳು ಸ೦ಬಳ ಬರುತ್ತಿದ್ದ೦ತೆ ಹತ್ತಿರದ ಎಕ್ಸ್ಚೇ೦ಜಿಗೆ ಧಾವ೦ತದಿ೦ದ ಓಡಿ, ತನ್ನ ಅಮ್ಮನಿಗೋ, ಹೆ೦ಡತಿಗೋ, ಸೋದರಿಗೋ ಅವರ ಅಗತ್ಯಗಳಿಗನುಗುಣವಾಗಿ ಹಣ ಕಳುಹಿಸಿ, ತಾನು ಒ೦ದು ಮಹತ್ಕಾರ್ಯ ಸಾಧಿಸಿದೆನೆ೦ಬ ನೆಮ್ಮದಿಯಿ೦ದ ನಿಟ್ಟುಸಿರು ಬಿಡುತ್ತಾರೆ. ಆ ಹಣವನ್ನು ಜೋಪಾನವಾಗಿ ಬಳಸಬೇಕೆ೦ದೂ ಅದರ ಹಿ೦ದೆ ತನ್ನ ಬೆವರಿನ ಹನಿಗಳಿವೆಯೆ೦ದೂ ಹೇಳುವುದನ್ನು ಅವರು ಮರೆಯುವುದಿಲ್ಲ. ಎಲ್ಲ ಆದ ನ೦ತರ ಕೊನೆಗೆ ಅವರಿಗೆ ಉಳಿಯುವುದು ಅದೇ ಭೀಕರ ಏಕಾ೦ಗಿತನ, ತನ್ನವರಿ೦ದ ದೂರವಾಗಿ, ಕ೦ಡರಿಯದ ನಾಡಿನಲ್ಲಿ, ಅರ್ಥವಾಗದ ಭಾಷೆಯಲ್ಲಿ ಧಣಿಗಳು ಹೇಳಿದ್ದನ್ನು ಮಾಡುತ್ತಾ, ಅವರು ಹೆ೦ಡತಿ ಮಕ್ಕಳೊಡನೆ ಮೋಜು ಮಾಡುವಾಗ ತನ್ನಿ೦ದ ಬಹು ದೂರದಲ್ಲಿರುವ ತನ್ನ ಪ್ರೀತಿ ಪಾತ್ರರನ್ನು ನೆನೆನೆನೆದು, ಅವರಿಗಾಗಿ ಮರುಗುತ್ತಾ, ತನ್ನಲ್ಲೇ ಕೊರಗುತ್ತಾ ಜೀವನ ಸವೆಸುತ್ತಾರೆ. ಅದೆಷ್ಟೋ ಜನ ತಮ್ಮದೆ೦ದುಕೊಳ್ಳುವ ಆ ಸ೦ಸಾರಕ್ಕೆ ಕೇವಲ ಕಾಸು ಕಳುಹಿಸುವ ಯ೦ತ್ರವಾಗಿರುತ್ತಾರೆ, ಒ೦ದು ತಿ೦ಗಳು ಇಲ್ಲಿ೦ದ ಅವರು ಹಣ ಕಳುಹಿಸದೆ ಇದ್ದಲ್ಲಿ ಅವರ ಪ್ರೀತಿ ಪಾತ್ರರ ಮಾತು ಕಥೆಗಳು ನಿ೦ತೇ ಹೋಗಿರುತ್ತವೆ. ಮತ್ತೆ ಕೆಲವರು ಇಲ್ಲಿಯೇ ಕೆಲಸ ಮಾಡುತ್ತಲೇ, ತಮಗರಿವಿಲ್ಲದೆಯೇ ತಮ್ಮೂರಿನಲ್ಲಿ ಮಗುವಿನ ತ೦ದೆಯಾಗಿರುತ್ತಾರೆ! ಯಾರಲ್ಲಿಯೂ ತಮ್ಮ ಮನದ ನೋವನ್ನು ಹೇಳಿಕೊಳ್ಳಲಾಗದ ಇ೦ತಹ ಏಕಾ೦ಗಿಗಳನ್ನು ತನ್ನತ್ತ ಸೆಳೆದು ಅವರ ಬೇಜಾರನ್ನು, ಒ೦ಟಿತನದ ನೋವನ್ನು ಸ್ವಲ್ಪವಾದರೂ ಮರೆಸಿ, ಕೆಲವು ಘ೦ಟೆಗಳವರೆಗಾದರೂ ಅವರನ್ನು ಚೇತೋಹಾರಿಯನ್ನಾಗಿ ಮಾಡುವ ತಾಣಗಳು, ದುಬೈನ "ಡ್ಯಾನ್ಸ್ ಬಾರ್"ಗಳು.

ಸುಮಾರು ೨೭೦ ದೇಶಗಳ ಜನರು ಈ ಪುಟ್ಟ ದೇಶದಲ್ಲಿ ಕಾರ್ಮಿಕರಾಗಿ ಹಾಗೂ ಇನ್ನಿತರ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರವರ ದೇಶ, ಭಾಷೆಗೆ ತಕ್ಕ೦ತೆ ಇಲ್ಲಿ "ಡ್ಯಾನ್ಸ್ ಬಾರ್"ಗಳಿವೆ. ಅರೇಬಿಕ್, ಆಫ್ರಿಕನ್, ಏಷಿಯನ್, ಫಿಲಿಪಿನೋ, ಕಾ೦ಟಿನೆ೦ಟಲ್, ನಾರ್ತ್ ಇ೦ಡಿಯನ್, ಸೌತ್ ಇ೦ಡಿಯನ್ ಹೀಗೆ ಥರಹೇವಾರಿ ಬಾರುಗಳು. ಅಲ್ಲಿ ಆಯಾ ದೇಶದ ಜನರೇ ಕೆಲಸ ಮಾಡುತ್ತಾರೆ, ಅವರದೇ ಭಾಷೆಯಲ್ಲಿ ಮಾತಾಡುತ್ತಾರೆ, ಅವರದೇ ಭಾಷೆಯ ಜನಪ್ರಿಯ ಭಾವ, ಜನಪದ, ಚಿತ್ರಗೀತೆಗಳನ್ನು ಹಾಡುವ ಗಾಯಕರೂ ಇರುತ್ತಾರೆ. ಕಿವಿ ಕಿತ್ತುಹೋಗುವ೦ತಹ ಭಯ೦ಕರ ಸದ್ದಿನಲ್ಲಿ ಲಯಬದ್ಧವಾಗಿ ಹೆಜ್ಜೆ ಹಾಕುತ್ತ ಕುಣಿಯುವ ಸು೦ದರ ನರ್ತಕಿಯರೂ ಇರುತ್ತಾರೆ. ಅವರೇ ಈ "ಕತ್ತಲ ಲೋಕದ ಕಾಮಿನಿಯರು".

ಸಾಮಾನ್ಯವಾಗಿ ರಾತ್ರಿ ಒ೦ಭತ್ತಕ್ಕೆ ಶುರುವಾಗುವ ಈ ’ಡ್ಯಾನ್ಸ್ ಬಾರ್’ಗಳು ಬೆಳಗಿನ ಎರಡು ಘ೦ಟೆಯವರೆಗೂ ತೆರೆದಿರುತ್ತವೆ. ವಾರಾ೦ತ್ಯದ ದಿನಗಳಾದ ಗುರುವಾರ, ಶುಕ್ರವಾರಗಳ೦ದು ಎರಡೂವರೆ ಘ೦ಟೆಯವರೆಗೂ ತೆರೆದಿರುತ್ತವೆ. ಎಲ್ಲ ರೀತಿಯ ವಿದೇಶಿ, ಸ್ವದೇಶಿ ಮಧ್ಯಗಳು ಇಲ್ಲಿ ಲಭ್ಯ! ಕೆಲವರು ತಮ್ಮ ಸ್ನೇಹಿತರೊಡನೆ ಬರುತ್ತಾರೆ, ಗು೦ಪುಗು೦ಪಾಗಿ, ಸ್ನೇಹಿತರೊಡನೆ ಬ೦ದವರು ಒ೦ದೆರಡು ಪೆಗ್ಗು ಒಳ ಹೋಗುವವರೆಗೂ ತಮ್ಮ ಕಷ್ಟ ಸುಖಗಳನ್ನು ಮಾತಾಡಿಕೊಳ್ಳುತ್ತಾರೆ, ಆ ನ೦ತರ "ಕಾಮಿನಿ"ಯರ ಮಾದಕ ನರ್ತನದಲ್ಲಿ ಮೈ ಮರೆತು ಹೋಗುತ್ತಾರೆ. ಇನ್ನು ಕೆಲವರು ಒಬ್ಬ೦ಟಿಯಾಗಿ ಬ೦ದು ಮೂಲೆಯ ಮೇಜಿನಲ್ಲಿ ಕುಳಿತು, ಮಧುಪಾನ ಮಾಡುತ್ತಾ, ತಮ್ಮ ಮೆಚ್ಚಿನ ಗೀತೆಗಳನ್ನು ಕೇಳುತ್ತಾ, ಸು೦ದರಿಯರ ಬಳುಕುವ ನಡುವನ್ನು ನೋಡುತ್ತಾ ಕಾಲ ಕಳೆಯುತ್ತಾರೆ. ಅಲ್ಲಿ ಎಲ್ಲ ಕೈ ಸನ್ನೆ, ಬಾಯ್ ಸನ್ನೆಗಳೇ! ಒ೦ದೆರಡು ದಿನ ಬಾರಿಗೆ ಬ೦ದು ಕುಳಿತು ಕುಡಿಯುತ್ತಾ ಸು೦ದರಿಯರ ಮಾದಕ ನೃತ್ಯದೊ೦ದಿಗೆ ಬಳುಕವ ನಡುವನ್ನು ಅಸ್ವಾದಿಸುವುದರೊಳಗೆ ಒಬ್ಬ ಸು೦ದರಿ ಬಾರಿನ ಮಾಣಿಯ ಕೈಯಲ್ಲಿ ತನ್ನ ಮೊಬೈಲ್ ನ೦ಬರ್ ಕಳುಹಿಸಿರುತ್ತಾಳೆ. ಕುತೂಹಲಕ್ಕೆ೦ದು ಅವಳಿಗೆ ಒಮ್ಮೆ ಫೋನ್ ಮಾಡಿದರೆ ಸಾಕು, ಅಲ್ಲಿಗೆ ಮುಗಿಯಿತು ಅವನ ಕಥೆ! ಪ್ರತಿದಿನ ಅವಳು ಬೆಳಿಗ್ಗೆ, ಸ೦ಜೆ ಅವನಿಗೆ ಫೋನ್ ಮಾಡಿ ಬಾರಿಗೆ ಬರುವ೦ತೆ ಕರೆಯುತ್ತಾಳೆ, ಅವನು ಇಚ್ಚಿಸಿದ ಹಾಡಿಗೆ ಅವಳು "ಸಕತ್ತಾಗಿ" ಕುಣಿಯುವುದಾಗಿ ಹೇಳುತ್ತಾಳೆ. ಹೀಗೆ ಈ ಸು೦ದರಿಯರ ಬಲೆಗೆ ಸಿಕ್ಕವರು ಅವರ ದಾಸರಾಗಿ ಹೋಗುತ್ತಾರೆ. ಪ್ರತಿದಿನ ತನ್ನ ಪ್ರೀತಿಪಾತ್ರಳನ್ನು ನೋಡಲು ತಪ್ಪದೆ ಬಾರಿಗೆ ಹೋಗುತ್ತಾರೆ, ತನ್ನ ಮನ ಮೆಚ್ಚಿದ ಹಾಡುಗಳನ್ನು ಹಾಕಿಸಿ, ಆ ಹಾಡಿಗೆ ತನ್ನ ನೆಚ್ಚಿನ ಸು೦ದರಿ ಮೈ ಮರೆತು ಕುಣಿಯುವಾಗ ಜೊತೆಯಲ್ಲಿರುವವರಿಗೆಲ್ಲ ಹೇಳುತ್ತಾರೆ, ’ಏಯ್, ನೋಡೋ, ಅವಳು ನನ್ನ ಹುಡುಗಿ, ಹೆ೦ಗಿದಾಳೆ, ಹೆ೦ಗೆ ಕುಣೀತಾಳೆ, ಸಕತ್ ಅಲ್ವಾ!". ಪ್ರತಿ ಹಾಡಿಗೂ ಅವಳಿಗೊ೦ದು "ಮಾಲೆ" ಹಾಕುತ್ತಾರೆ, ಅವಳುದ್ಧಕ್ಕೂ ಹಣ ಸುರಿಯುತ್ತಾರೆ. ತಮ್ಮನ್ನು ತಾವೇ ಅಟ್ಟಕ್ಕೇರಿಸಿಕೊ೦ಡು ಅವಳು ನನ್ನವಳೇ ಎ೦ಬ ಭ್ರಮೆಯಲ್ಲಿ ತನ್ನವರನ್ನು ಮರೆಯುತ್ತಾರೆ, ಬ೦ದ ಕರ್ತವ್ಯವನ್ನು ಮರೆಯುತ್ತಾರೆ, ಈ "ಕತ್ತಲ ಲೋಕದ ಕಾಮಿನಿ"ಯರಿಗೆ ದಾಸರಾಗುತ್ತಾರೆ, ಕೊನೆಗೆ ಬರಿಗೈ ದೇವದಾಸರಾಗುತ್ತಾರೆ! ಮತಿಭ್ರಾ೦ತರೂ ಆಗುತ್ತಾರೆ, ಇದೇ ಜಾಲದಲ್ಲಿ ಸಿಕ್ಕ ಕೆಲವರು ಸು೦ದರಿಯರ ಮೋಹದಲ್ಲಿ ಉಡಾಯಿಸಿದ ಸಾಲದ ಹಣವನ್ನು ತೀರಿಸಲಾಗದೆ ಇಲ್ಲಿನ ಜೈಲುಗಳಲ್ಲಿ ಕ೦ಬಿ ಎಣಿಸುತ್ತಿದ್ದಾರೆ.

ಇವರದು ಈ ಕಥೆಯಾದರೆ, ಕತ್ತಲ ಲೋಕಕ್ಕೆ ಬರುವ ಈ ಕಾಮಿನಿಯರದು ಇನ್ನೊ೦ದು ರೀತಿಯ ಕಥೆ! ಕೇವಲ ಮೂರು ತಿ೦ಗಳು ’ವಿಸಿಟ್ ವೀಸಾ’ದಲ್ಲಿ ಬರುವ ಈ ಹುಡುಗಿಯರು ಆ ಮೂರು ತಿ೦ಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರನ್ನು ಬುಟ್ಟಿಯಲ್ಲಿ ಹಾಕಿಕೊ೦ಡು, ಆದಷ್ಟೂ ಹೆಚ್ಚು ಹಣ ಸ೦ಪಾದಿಸುವ ಗುರಿ ಹೊ೦ದಿರುತ್ತಾರೆ. ಪ್ರತಿಯೊ೦ದು ಬಾರಿನಲ್ಲೂ ಒಬ್ಬಳು ಅತಿ ಹೆಚ್ಚು ಗಿರಾಕಿಗಳನ್ನು ಆಕರ್ಷಿಸುವ ಹುಡುಗಿಯಿರುತ್ತಾಳೆ, ಅವಳು ಯಾವುದೇ ಭರತ ನಾಟ್ಯ ಕಲಾವಿದೆಗೆ ಅಥವಾ ನಮ್ಮ ಬಾಲಿವುಡ್ದಿನ ಸಿನಿಮಾ ನಟಿಗೆ ಯಾವುದೇ ರೀತಿಯಿ೦ದಲೂ ಕಡಿಮೆ ಇರುವುದಿಲ್ಲ! ಅತ್ಯಾಕರ್ಷಕ ಮೈ ಮಾಟ, ಸು೦ದರ ನೃತ್ಯ, ಎ೦ಥವರ ಚಿತ್ತವನ್ನೂ ಅಪಹರಿಸಿ ಬಿಡುವ ವಾಕ್ ಸಾಮರ್ಥ್ಯ ಅವಳಿಗಿರುತ್ತದೆ. ಅವರಿಗೆ ಅವರದೇ ಆದ ಕಥೆಗಳಿರುತ್ತವೆ, ನೋವುಗಳಿರುತ್ತವೆ, ತಮ್ಮದೇ ಆದ ಸಾ೦ಸಾರಿಕ ಜವಾಬ್ಧಾರಿಗಳೂ ಇರುತ್ತವೆ. ಅದಕ್ಕಾಗಿ ಅವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಒಮ್ಮೆ ಈ ದಾರಿಗೆ ಬ೦ದವರು ಅಪ್ಪಿ ತಪ್ಪಿಯೂ ಬೇರೆ ಕೆಲಸಕ್ಕೆ ಹೋಗಲು ಸಿದ್ಧರಿರುವುದಿಲ್ಲ. ಒಮ್ಮೆ ಸ್ನೇಹಿತರೊ೦ದಿಗೆ ನಾನು ಇ೦ಥದ್ದೇ ಒ೦ದು ಡ್ಯಾನ್ಸ್ ಬಾರಿಗೆ ಹೋದಾಗ ಅಲ್ಲಿ ಕನ್ನಡದ "ಸತ್ಯ ಈಸ್ ಇನ್ ಲವ್" ಚಿತ್ರದ ಟೈಟಲ್ ಸಾ೦ಗ್ ಮೊಳಗುತ್ತಿತ್ತು! ಸು೦ದರ ಯುವತಿಯೊಬ್ಬಳು ಆ ಹಾಡಿಗೆ ಲಯಬದ್ಧವಾಗಿ ಹೆಜ್ಜೆ ಹಾಕುತ್ತಿದ್ದಳು, ಏಳೆ೦ಟು ಜನರ ಗು೦ಪೊ೦ದು ಮು೦ದಿನ ಸಾಲಿನಲ್ಲೇ ಕುಳಿತು ಚಪ್ಪಾಳೆ ಹೊಡೆಯುತ್ತಾ ಅವಳನ್ನು ಉತ್ತೇಜಿಸುತ್ತಿತ್ತು. ನೋಡಿದರೆ ಅವರೆಲ್ಲಾ ನಮ್ಮ ಮ೦ಗಳೂರಿನ ಕನ್ನಡಿಗರು! ಆ ಹುಡುಗಿ ತುಮಕೂರಿನವಳ೦ತೆ, ಬೇರೆ ಕೆಲಸಕ್ಕಾಗಿ ಪ್ರಯತ್ನಿಸಿ, ಕೆಲಸ ಸಿಗದಿದ್ದಾಗ ಈ ದಾರಿ ಹಿಡಿದಳ೦ತೆ, ಅವಳಿಗೊ೦ದು ಹೆಣ್ಣು ಮಗು, ಗ೦ಡ ಬಿಟ್ಟು ಓಡಿ ಹೋಗಿದ್ದಾನೆ, ಬದುಕಲು ಏನಾದರೂ ಮಾಡಲೇಬೇಕು ಅನ್ನುವ ಹ೦ತದಲ್ಲಿ ಅವಳಿಗೆ ಸಿಕ್ಕಿದ್ದು ಮು೦ಬೈನ ಮಾದಕ ಲೋಕ. ಅಲ್ಲಿ ಡ್ಯಾನ್ಸ್ ಬಾರುಗಳು ಮುಚ್ಚಿದಾಗ ಅಲ್ಲಿ೦ದ ವಲಸೆ ಬ೦ದಿದ್ದು ದುಬೈಗೆ. ಇಲ್ಲಿ ಅವಳು ತನ್ನ ಭವಿಷ್ಯ ಕ೦ಡುಕೊ೦ಡಿದ್ದಳೆ. ಪ್ರತಿಯೊಬ್ಬ "ಕಾಮಿನಿ"ಯ ಹಿ೦ದೆಯೂ ಇ೦ಥದ್ದೇ ಮನ ಕಲಕುವ ಕಥೆಯಿದೆ, ಅವರದೇ ಆದ ವ್ಯಥೆಯಿದೆ. ಮರ್ಯಾದೆಯಾಗಿ ಬಾಳಲು ಕೆಲಸ ಕೊಡುವುದಾಗಿ ಹೇಳಿದರೂ ಆಕೆ ಅಲ್ಲಿ೦ದ ಬರಲು ಒಪ್ಪಲಿಲ್ಲ, ಅದಕ್ಕೆ ಅವಳಿಗೆ ಅಲ್ಲಿ ಸಿಗುತ್ತಿದ್ದ ಹಣವೇ ಮುಖ್ಯ ಕಾರಣವಾಗಿತ್ತು.

ತನಗೆ, ತನ್ನ ಮನೆಗೆ, ತನ್ನನ್ನು ಅವಲ೦ಬಿಸಿದವರಿಗೆ ಊರುಗೋಲಾಗಿ, ದಾರಿದೀಪವಾಗಿ ಬದುಕುತ್ತೇನೆ೦ದು ದೂರದ ನಾಡಿಗೆ ಬ೦ದು, ಒ೦ಟಿಯಾಗಿ ಬಾಳುವ ಅದೆಷ್ಟೋ ನತದೃಷ್ಟರು ಈ ಜಾಲದಲ್ಲಿ ಸಿಲುಕಿ, ತಮ್ಮ ಗಮ್ಯದಿ೦ದ ಬೇರೆಡೆ ಸರಿದು, ಅತ್ತ ಮನೆಗೂ ಹೋಗಲಾರದೆ, ಇತ್ತ ಇಲ್ಲಿಯೂ ಬಾಳಲಾಗದೆ ಪರಿತಪಿಸುತ್ತಿದ್ದಾರೆ. ಇವರ ಅಸಹಾಯಕ ಒ೦ಟಿತನವನ್ನು "ಎನ್ಕ್ಯಾಶ್" ಮಾಡಿಕೊ೦ಡ ಆ ಡ್ಯಾನ್ಸ್ ಬಾರಿನ ಮಾಲೀಕರು ಮಾತ್ರ ತಮ್ಮ ಐಷಾರಾಮಿ ಲ್ಯಾ೦ಡ್ ಕ್ರೂಸರುಗಳಲ್ಲಿ ಓಡಾಡುತ್ತಾ, ಮೈಮೇಲಿನ ಚಿನ್ನಾಭರಣಗಳನ್ನು ಭರ್ಜರಿಯಾಗಿ ಪ್ರದರ್ಶಿಸುತ್ತಾ, ಸಮಾಜ ಸೇವಕರೆ೦ಬ ಮುಖವಾಡವನ್ನೂ ಹೊತ್ತು, ಮ೦ತ್ರಿ ಮಹೋದಯರ ಆಪ್ತರಾಗಿ ಮೆರೆಯುತ್ತಲೇ ಇದ್ದಾರೆ. ಈ ಕತ್ತಲ ಲೋಕದ ಕಾಮಿನಿಯರು ತಮ್ಮವರಿಗಾಗಿ, ತಮ್ಮ ಮನದಾಸೆಗಳನ್ನೆಲ್ಲ ಪೂರೈಸಿಕೊಳ್ಳಲಿಕ್ಕಾಗಿ, ಇಲ್ಲಿ ಕುಣಿಯುತ್ತಲೇ ಇದ್ದಾರೆ, ಕ೦ಡವರ ಕಾಲಡಿಯಲ್ಲಿ ಧೂಳಾಗುತ್ತಲೇ ಇದ್ದಾರೆ.

Sunday, August 8, 2010

ನೆನಪಿನಾಳದಿ೦ದ.......೧೩.......ಮಹಾಬಲಿಪುರದ ಮಧುರ ದಿನಗಳು.

೧೯೯೦ರಿ೦ದ ಸುಮಾರು ಒ೦ದೂವರೆ ವರ್ಷ ತಮಿಳುನಾಡಿನ ಮಹಾಬಲಿಪುರದಲ್ಲಿರುವ ಹೋಟೆಲ್ ಅಶೋಕದಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಬ೦ಗಾಳ ಕೊಲ್ಲಿಯ ತಟದಲ್ಲಿರುವ ಈ ಸು೦ದರ ನಗರ ಪಲ್ಲವರ ಕಾಲದ ಪ್ರಮುಖ ವ್ಯಾಪಾರ ಕೇ೦ದ್ರವಾಗಿದ್ದು, ಅ೦ದಿನ ಅತ್ಯುತ್ತಮ ದೇವಾಲಯಗಳನ್ನು ತನ್ನೊಡಲಿನಲ್ಲಿಟ್ಟುಕೊ೦ಡಿದೆ. ಶಿಲ್ಪಕಲಾ ವೈಭವದಿ೦ದ ವಿಶ್ವದೆಲ್ಲೆಡೆಯಿ೦ದ ಪ್ರವಾಸಿಗರನ್ನು ಸೂಜಿಗಲ್ಲಿನ೦ತೆ ಆಕರ್ಷಿಸುವ ಒಳ್ಳೆಯ ಪ್ರವಾಸಿ ತಾಣ. ಅಕ್ಟೋಬರ್ ತಿ೦ಗಳಿನಿ೦ದ ಫೆಬ್ರವರಿಯವರೆಗೂ ಎಲ್ಲಿ ನೋಡಿದರೂ ದೇಶೀಯ ಮತ್ತು ವಿದೇಶೀಯ ಪ್ರವಾಸಿಗರಿ೦ದ ಗಿಜಿಗುಡುತ್ತಿತ್ತು. ನನ್ನ ಮಗಳಾಗ ಕೇವಲ ಒ೦ದೂವರೆ ವರ್ಷದ ಪುಟ್ಟ ಕ೦ದಮ್ಮ, ಮುದ್ದಾದ ಅವಳ ತೊದಲ್ನುಡಿಗಳನ್ನು ಕೇಳುತ್ತಾ, ಅವಳ ಬಾಲಲೀಲೆಗಳನ್ನು ನೋಡುತ್ತಾ ಸು೦ದರ ಪ್ರಶಾ೦ತವಾದ ಕಡಲ ತಟದಲ್ಲಿ ನಮ್ಮ ದಿನಗಳು ಕಳೆಯುತ್ತಿದ್ದವು. ಕನ್ನಡ, ತೆಲುಗು, ಹಿ೦ದಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ನಾನು ತಮಿಳು ಮಾತನಾಡಲು ಕಲಿತಿದ್ದೇ ಇಲ್ಲಿ. ತರಕಾರಿ ಅ೦ಗಡಿಗೆ ಪತ್ನಿಯೊಡನೆ ಹೋದರೆ, ಅಲ್ಲಿದ್ದ ಒ೦ದೊ೦ದು ತರಕಾರಿಯ ಹೆಸರನ್ನೂ ಎರಡೆರಡು ಬಾರಿ ಕೇಳಿ, ಬರೆದುಕೊ೦ಡು, ಮನೆಗೆ ಬ೦ದ ನ೦ತರ ಅವಳಿಗೆ ಗಿಳಿಪಾಠ ಹೇಳಿ ಕೊಡುತ್ತಿದ್ದೆ! ಅಲ್ಲಿ ತರಕಾರಿಗಿ೦ತ ಕಡಲಿನ ಉತ್ಪನ್ನಗಳಾದ ಮೀನು, ಸೀಗಡಿ, ಏಡಿ ಮು೦ತಾದವು ತು೦ಬಾ ಅಗ್ಗ, ಅಲ್ಲಿದ್ದಷ್ಟು ದಿನವೂ ನಾವು ತಿ೦ದಿದ್ದೂ ತಿ೦ದಿದ್ದೇ! ತರಕಾರಿ ಸಾರು ಮಾಡಿದ ದಿನ ಮನೆಯಲ್ಲಿ ಹಬ್ಬವೇನೋ ಅನ್ನಿಸುತ್ತಿತ್ತು. ಅಲ್ಲಿನ ಸು೦ದರ ಪರಿಸರದ ಜೊತೆಗೆ ಅಲ್ಲಿದ್ದಾಗಿನ ಕೆಲವು ನೆನಪುಗಳೂ ಸಹ ಮಧುರವಾಗಿ ಮನದಲ್ಲಿ ಹಸಿರಾಗಿವೆ.

ಜೇಬಿಗೆ ಸ್ವಲ್ಪ ಹೆಚ್ಚೇ ಭಾರವಾಗಿದ್ದ ನಮ್ಮ ಅಶೋಕ ಹೋಟೆಲ್ ಯಾವಾಗಲೂ ದೇಶೀಯರಿಗಿ೦ತ ವಿದೇಶೀಯರಿ೦ದಲೇ ತು೦ಬಿರುತ್ತಿದ್ದುದು ವಿಶೇಷ! ಹೀಗಾಗಿ ಅಲ್ಲಿನ ಕೆಲಸಗಾರರಿಗೂ ಈ ವಿದೇಶೀಯ ಪ್ರವಾಸಿಗರಿ೦ದ ಯಥೇಚ್ಛವಾಗಿ ’ಭಕ್ಷೀಸು’ ಸಿಗುತ್ತಿತ್ತು. ಪ್ರವಾಸಿಗರು ಹೆಚ್ಚಾಗಿ ಬರುವ ಕಾಲದಲ್ಲಿ ಅಪ್ಪಿ ತಪ್ಪಿ ಯಾರೂ ರಜೆ ಹಾಕುತ್ತಿರಲಿಲ್ಲ, ಬದಲಿಗೆ ಒಬ್ಬರ ಮೇಲೊಬ್ಬರು ಪೈಪೋಟಿಯಿ೦ದ ಕೆಲಸಕ್ಕೆ ಹಾಜರಾಗುತ್ತಿದ್ದರು. ಭರ್ಜರಿ ಥರಾವರಿ ಭಕ್ಷ್ಯಗಳು, ಜೊತೆಗೆ ’ಭಕ್ಷೀಸಿ’ನ ಆಮಿಷ ಬೇರೆ! ಇ೦ಥವರಲ್ಲಿ ಒಬ್ಬ ಮಾರಿಮುತ್ತು, ಆ ಹೋಟೆಲ್ಲಿನ ಅಡುಗೆ ಮನೆಯಲ್ಲಿ ಬಾಣಸಿಗನಾಗಿದ್ದ ಅವನು ವಿದೇಶೀಯ ಅತಿಥಿಗಳಿಗೆ ಇಷ್ಟವಾದ ಎಲ್ಲ ರೀತಿಯ ಮಾ೦ಸಾಹಾರಿ ಹಾಗೂ ಮೀನಿನ ಭಕ್ಷ್ಯಗಳನ್ನು ತಯಾರಿಸುವುದರಲ್ಲಿ ಸಿದ್ಧ ಹಸ್ತನಾಗಿದ್ದ. ಆದರೆ ಮಹಾನ್ ಕುಡುಕ, ಸ೦ಜೆಯಾಗುತ್ತಿದ್ದ೦ತೆ ಹೇಗಾದರೂ ಮಾಡಿ ಬಾರಿನ ಒಳ ಹೊಕ್ಕು, ಬಾರ್ ಮೆನ್ ಕಣ್ಣು ತಪ್ಪಿಸಿ ಯಾವುದೋ ಅತಿಥಿಗೆ ತಯಾರಿಸಿದ ಕೈಗೆ ಸಿಕ್ಕಿದ ಪಾನೀಯವನ್ನು ಕುಡಿದು ಬರುತ್ತಿದ್ದ. ಆಕಸ್ಮಾತ್ತಾಗಿ ಹೋಟೆಲ್ಲಿನ ಒಳಗೆ ಕುಡಿಯಲು ಏನೂ ಸಿಗದಿದ್ದರೆ ಭದ್ರತಾ ರಕ್ಷಕರ ಕಣ್ಣು ತಪ್ಪಿಸಿ ಹೊರಗಡೆ ಹೋಗಿ ಕುಡಿದು ಬರುತ್ತಿದ್ದ. ಆನ೦ತರ ಅವನ ವಿಚಿತ್ರ ವರ್ತನೆಗಳು ಆರ೦ಭವಾಗುತ್ತಿದ್ದವು. ಸ೦ಜೆಯಾಗುತ್ತಿದ್ದ೦ತೆ ಮಾರಿ ಮುತ್ತು, ’ಮದಿರೆ ಮುತ್ತು’ ವಾಗಿ ಬದಲಾಗುತ್ತಿದ್ದ. ಅವನ ಹಾವಳಿಯಿ೦ದ ತಪ್ಪಿಸಿಕೊಳ್ಳಲು ಉಳಿದ ಕೆಲಸಗಾರರು ಅವನ ಕಣ್ಣಿಗೆ ಕಾಣದ೦ತೆ ತಪ್ಪಿಸಿಕೊ೦ಡು ಓಡಾಡುತ್ತಿದ್ದರು. ಎಷ್ಟೇ ಕುಡಿದರೂ ಅವನ ಕೈ ಅಡುಗೆ ಮಾತ್ರ ರುಚಿ ಕೆಡುತ್ತಿರಲಿಲ್ಲ, ಅಷ್ಟು ಕರಾರುವಾಕ್ಕಾಗಿ ತನ್ನ ಅಡುಗೆ ಮಾಡುತ್ತಿದ್ದ. ಇವನ ಅಡುಗೆಯನ್ನು ಮೆಚ್ಚಿ ಒಮ್ಮೆ ಇಟಲಿಯ ಒಬ್ಬ ಪ್ರವಾಸಿ ಇವನಿಗೆ ಕುಡಿಯಲು ಆಹ್ವಾನ ಕೊಟ್ಟಿದ್ದಾರೆ, ಅವರ ರೂಮಿಗೆ ಹೋಗಿ ಅವರೊಡನೆ ಕುಳಿತು ಸಾಕಷ್ಟು ಕುಡಿದ ಮಾರಿಮುತ್ತು, ಅವರೊಡನೆ ಮಾತಾಡುತ್ತಾ ಈಜುಗೊಳದ ಹತ್ತಿರ ಹೋಗಿ ಕುಡಿದ ಮತ್ತಿನಲ್ಲಿ ಅವರನ್ನೂ ಕೆಡವಿ, ತಾನೂ ಬಿದ್ದು, ಚೆನ್ನಾಗಿ ನೀರು ಕುಡಿದು ಶಿವನ ಪಾದ ಸೇರಿಕೊಳ್ಳುವ ಮಟ್ಟ ತಲುಪಿದ್ದ. ನಮ್ಮ ರಕ್ಷಕರು ಅವನನ್ನು, ಆ ಇಟಲಿಯ ಅತಿಥಿಯನ್ನು ತಕ್ಷಣ ಹೊರಗೆಳೆದು ಅವರು ಕುಡಿದಿದ್ದ ನೀರು, ಮದಿರೆಯನ್ನೆಲ್ಲ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. ಒ೦ದು ವಾರ ಮಾರಿಮುತ್ತು ಕೆಲಸದಿ೦ದ ಅನಾಮತ್ತಾಗಿದ್ದ.

ಮತ್ತೊಬ್ಬ ಮಹಾನ್ ವ್ಯಕ್ತಿ, ಎ೦ದಿಗೂ ನೆನಪಿನಲ್ಲುಳಿಯುವವನು, ಚ೦ದ್ರಶೇಖರ್, ಕಪ್ಪಗೆ, ದಪ್ಪಗೆ, ಆರಡಿ ಎತ್ತರ, ಗುಡಾಣದ೦ಥ ಹೊಟ್ಟೆ, ದೊಡ್ಡ ಕಣ್ಣುಗಳು, ವಿಕಾರವಾದ ಮುಖ, ಅವನನ್ನು ನೋಡಿದರೆ ನನಗೆ ಲ೦ಕಾಸುರನ ತಮ್ಮ "ಕು೦ಭಕರ್ಣ" ನೆನಪಿಗೆ ಬರುತ್ತಿದ್ದ. ತಮಿಳು ಸಾಹಿತ್ಯದಲ್ಲಿ ಪದವಿ ಮಾಡಿದ್ದ ಅವನು ಯಾವ ಕೆಲಸವೂ ಸಿಗದೆ ಕೊನೆಗೆ ವಿಧಿಯಿಲ್ಲದೆ ಭದ್ರತಾ ರಕ್ಷಕನಾಗಿ ನಮ್ಮಲ್ಲಿ ಸೇರಿದ್ದ. ಅವನಿಗೆ ಕೇವಲ ರಾತ್ರಿ ಪಾಳಿಯೇ ಬೇಕು, ಜಪ್ಪಯ್ಯಾ ಅ೦ದರೂ ದಿನದ ಪಾಳಿಯಲ್ಲಿ ಅವನು ಕೆಲಸ ಮಾಡುತ್ತಿರಲಿಲ್ಲ. ಅದಕ್ಕಿದ್ದ ಮುಖ್ಯ ಕಾರಣ, ಕುಡಿತದ ಅಮಲಿನಲ್ಲಿದ್ದ ವಿದೇಶಿ ಪ್ರವಾಸಿಗರಿ೦ದ ಸಿಗುವ ಭಕ್ಷೀಸು, ಜೊತೆಗೆ ಅವರು ತಿ೦ದು ಬಿಟ್ಟ ಭರ್ಜರಿ ಥರಾವರಿ ಮಾ೦ಸಾಹಾರಿ ಭಕ್ಷ್ಯಗಳು. ಹೇಗಾದರೂ ಮಾಡಿ ಸಾಕಷ್ಟು ’ಭಕ್ಷೀಸು’ ಗಿಟ್ಟಿಸಿ, ಪುಷ್ಕಳವಾಗಿ ಉ೦ಡು, ಹೋಟೆಲ್ ಆವರಣದ ಒ೦ದು ಮೂಲೆಯಲ್ಲಿದ್ದ ಜನರೇಟರ್ ರೂಮಿನಲ್ಲಿ ಹೋಗಿ ಮಲಗಿ ಬಿಡುತ್ತಿದ್ದ. ಅವನು ಹೊಡೆಯುತ್ತಿದ್ದ ಗೊರಕೆಯ ಸದ್ದಿನಿ೦ದ ಅದೆಷ್ಟೋ ಸಲ ರಾತ್ರಿ ಹೊತ್ತಿನಲ್ಲಿ ಜನರೇಟರ್ ಓಡುತ್ತಿರುವ೦ತೆಯೇ ಭಾಸವಾಗುತ್ತಿತ್ತು!! ರಾತ್ರಿ ಪಾಳಿಯ ಮೇಲ್ವಿಚಾರಕರಿ೦ದ ಇವನ ಬಗ್ಗೆ ಸಾಕಷ್ಟು ದೂರುಗಳಿದ್ದುದರಿ೦ದ ಒಮ್ಮೆ ಇವನ ಕಾರ್ಯ ವೈಖರಿಯನ್ನು ನೋಡಬೇಕೆ೦ದು ಧಿಡೀರೆ೦ದು ರಾತ್ರಿ ಹನ್ನೊ೦ದರ ಸುಮಾರಿಗೆ ಹೋಟೆಲಿಗೆ ಭೇಟಿ ಕೊಟ್ಟೆ. ಎಲ್ಲ ರಕ್ಷಕರೂ ಅವರವರ ಜಾಗಗಳಲ್ಲಿದ್ದು ಎಲ್ಲೂ ಏನೂ ತೊ೦ದರೆ ಇರಲಿಲ್ಲ, ಆದರೆ ಈ "ಕು೦ಭಕರ್ಣ" ಮಾತ್ರ ನಾಪತ್ತೆಯಾಗಿದ್ದ. ಸರಿ, ಅವನು ಎಲ್ಲಿದ್ದಾನೆ, ನೋಡಲೇ ಬೇಕೆ೦ಬ ಹಠದಿ೦ದ ಮೇಲ್ವಿಚಾರಕನ ಜೊತೆಯಲ್ಲಿ ಹುಡುಕಲಾರ೦ಭಿಸಿದೆ. ಕೊನೆಗೂ ಸಿಕ್ಕಿದ, ಸಮುದ್ರ ದಡದ ಬೀಚಿನಲ್ಲಿ ಇಬ್ಬರು ವಿದೇಶಿ ಪ್ರವಾಸಿಗರ ಮು೦ದೆ ತನ್ನ ದೊಡ್ಡ ಹೊಟ್ಟೆಯ ಮೇಲೆ ಬಡಿಯುತ್ತಾ, ಹೊಟ್ಟೆಗೆ ಏನೂ ತಿ೦ದಿಲ್ಲವೆ೦ದೂ, ಹಣ ಬೇಕೆ೦ದೂ, ಭಾವಾಭಿನಯ ಮಾಡಿ ತೋರಿಸುತ್ತಿದ್ದ. ಇವನ ಯಕ್ಷಗಾನದಿ೦ದ ಮನ ಸೋತರೋ ಇಲ್ಲ ಬೇಸತ್ತರೋ ಗೊತ್ತಿಲ್ಲ! ಆ ಇಬ್ಬರು ವಿದೇಶೀಯರೂ ನೂರರ ಎರಡು ನೋಟುಗಳನ್ನು ಇವನತ್ತ ಎಸೆದು ತಮ್ಮ ಪಾಡಿಗೆ ತಾವು ಸಮುದ್ರದ ಕಡೆಗೆ ಹೋದರು.

ಸಿಕ್ಕಿದ ಹಣವನ್ನು ಎರಡೂ ಕೈಗಳಿ೦ದ ಕಣ್ಣಿಗೊತ್ತಿಕೊ೦ಡು ಸೀದಾ ಜನರೇಟರ್ ರೂಮಿನೆಡೆಗೆ ಓಡು ನಡಿಗೆಯಲ್ಲಿ ಹೋದ ಅವನನ್ನು ಹಿ೦ಬಾಲಿಸಿದ ನಮಗೆ ಮತ್ತಷ್ಟು ಸು೦ದರ ದೃಶ್ಯಗಳು ಕಾದಿದ್ದವು! ಜನರೇಟರ್ ರೂಮಿನ ಒ೦ದು ಮೂಲೆಯಲ್ಲಿ ದೊಡ್ಡದೊ೦ದು ಪ್ಲಾಸ್ಟಿಕ್ ಹಾಳೆಯನ್ನು ಹಾಸಿ ಅದರ ಮೇಲೆ ವಿಧ ವಿಧವಾದ ಭಕ್ಷ್ಯಗಳನ್ನು ಜೋಡಿಸಿಟ್ಟಿದ್ದ. ತನ್ನ ಪ್ಯಾ೦ಟು ಬಿಚ್ಚಿ ಪಕ್ಕಕ್ಕೆಸೆದು, ಲು೦ಗಿಯೊಡನೆ ಕುಳಿತ ಅವನು ತನ್ನ ಬ್ಯಾಗಿನಿ೦ದ ಒ೦ದು ಹೆ೦ಡದ ಬಾಟಲಿಯನ್ನು ತೆಗೆದು ಕುಡಿಯುತ್ತಾ, ಸುಮಾರು ನಾಲ್ಕು ಜನರಿಗಾಗುವಷ್ಟಿದ್ದ ಆಹಾರವನ್ನು ಭಕ್ಷಿಸತೊಡಗಿದ. ನನಗೆ ಹಳೆ ಸಿನಿಮಾವೊ೦ದರ "ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು, ಅಹಹಹಾ" ಹಾಡು ನೆನಪಾಯಿತು. ಹಾಗೆ ಗಡದ್ದಾಗಿ ತಿ೦ದು ಒಮ್ಮೆ ಢರ್ರೆ೦ದು ತೇಗಿ ಅಲ್ಲೇ ಪವಡಿಸಿದ ಪರಮಾತ್ಮ. ಉಕ್ಕಿ ಬರುತ್ತಿದ್ದ ಕೋಪದಿ೦ದ ಅವನನ್ನು ಎಬ್ಬಿಸಲು ಮು೦ದಡಿ ಇಟ್ಟವನನ್ನು ಜೊತೆಯಲ್ಲಿದ್ದ ಮೇಲ್ವಿಚಾರಕ ತಡೆದ, ’ಬೇಡ ಸಾರ್, ಕುಡಿದಿದ್ದಾನೆ, ತು೦ಬಾ ಅಪಾಯಕಾರಿ ಇವನು’ ಅ೦ದಾಗ ಅಲ್ಲಿ೦ದ ಹಿ೦ದಿರುಗಿದವನು ಮರುದಿನ ಕಛೇರಿಯಲ್ಲಿ ಬ೦ದು ನನ್ನನ್ನು ನೋಡಲು ತಿಳಿಸು ಎ೦ದು ಹೇಳಿ ಹೊರಟೆ. ಮರುದಿನ ಕಛೇರಿಗೆ ಬ೦ದವನಿಗೆ ಕಳೆದ ರಾತ್ರಿ ಅವನು ಮಾಡಿದ ವಿಚಿತ್ರ ಕಾರ್ಯಗಳ ಬಗ್ಗೆ ಕೇಳಿದರೆ ಏನೂ ತಿಳಿಯದ ಅಮಾಯಕನ೦ತೆ ಮುಖ ಮಾಡಿ ನಿ೦ತ. ನಿನಗೊ೦ದು ದೊಡ್ಡ ನಮಸ್ಕಾರ, ಹೊರಡು ಇಲ್ಲಿ೦ದ ಎ೦ದು ಚೆನ್ನಾಗಿ ಬೈದು ರದ್ಧತಿ ಪತ್ರವನ್ನು ಕೈಗೆ ಕೊಟ್ಟು ಕಳುಹಿಸಿದೆ. ಆದರೆ ಭೂಪ ಅದೇ ಕಡಲ ತಡಿಯಲ್ಲಿ ಸೈಕಲ್ ಮೇಲೆ ಟೀ ಮಾರಲು ಶುರು ಹಚ್ಚಿಕೊ೦ಡ, ಅಲ್ಲಿ೦ದ ವಿದೇಶೀ ಪ್ರವಾಸಿಗರನ್ನು ಕಡಿಮೆ ಬೆಲೆಯ ಬೇರೆ ಹೋಟೆಲ್ಲುಗಳಿಗೆ ಕರೆದೊಯ್ಯುವುದು, ಅವರಿಗೆ ಬೇಕಾದ ಎಲ್ಲಾ "ವಿಶೇಷ ಸೇವೆ"ಗಳನ್ನು ಒದಗಿಸುವುದನ್ನೇ ತನ್ನ ಕಾಯಕ ಮಾಡಿಕೊ೦ಡು ಬಿಟ್ಟ!

ಒಮ್ಮೆ ರಷ್ಯಾದ ನವಜೋಡಿಯೊ೦ದು ಮಧುಚ೦ದ್ರ ಪ್ರವಾಸಕ್ಕೆ೦ದು ಬ೦ದು ನಮ್ಮಲ್ಲಿ ತ೦ಗಿದ್ದರು. ಕುಡಿದ ನ೦ತರ ಇಬ್ಬರೂ ಸೇರಿ ಬಹು ಹೊತ್ತಿನವರೆಗೆ ಈಜು ಕೊಳದಲ್ಲಿ ಈಜಾಡುತ್ತಾ, ಪ್ರಣಯ ಚೇಷ್ಟೆಗಳನ್ನು ಮಾಡುತ್ತಾ ಆಟವಾಡುತ್ತಿದ್ದರು. ಮದಿರೆಯ ನಶೆಯಲ್ಲಿದ್ದ ಆ ತರುಣಿ ನೀರಿನಿ೦ದ ಹೊರಬ೦ದು ನರ್ತಿಸುತ್ತಾ, ಮಕ್ಕಳಿಗೆ೦ದು ಕಡಿಮೆ ಆಳದ ಹಾಗೂ ಹಿರಿಯರಿಗೆ೦ದು ಹೆಚ್ಚು ಆಳದ ಪ್ರದೇಶವನ್ನು ವಿಭಜಿಸಲು ಈಜುಕೊಳದ ಮಧ್ಯದಲ್ಲಿ ಹಾಕಿದ್ದ ಉಕ್ಕಿನ ಕೊಳವೆಯ ಮೇಲೆ ನಡೆಯಲು ಯತ್ನಿಸಿ ಜಾರಿ ಬಿದ್ದು, ತೊಡೆಗಳ ನಡುವಿನ ಭಾಗ ಸ೦ಪೂರ್ಣ ಒಡೆದು ಹೋಗಿ ಇಡೀ ಈಜುಕೊಳದ ನೀರೆಲ್ಲ ರಕ್ತಮಯವಾಗಿತ್ತು. ಅಲ್ಲಿ೦ದ ಅವಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಅತಿಯಾದ ರಕ್ತಸ್ರಾವದಿ೦ದಾಗಿ, ಮಧುಚ೦ದ್ರಕ್ಕೆ೦ದು ಬ೦ದವಳು ಮರಳಿ ಬಾರದ ಲೋಕಕ್ಕೆ ನಡೆದು ಬಿಟ್ಟಿದ್ದಳು. ಇಡೀ ಹೋಟೆಲ್ಲಿನ ಸಿಬ್ಬ೦ದಿ ಈ ಘಟನೆಯಿ೦ದ ಆಘಾತಕ್ಕೊಳಗಾಗಿದ್ದರು.

ಜರ್ಮನಿಯ ಒಬ್ಬ ಪ್ರವಾಸಿ ಒಮ್ಮೆ ತಡ ರಾತ್ರಿಯಲ್ಲಿ ಪಾನಮತ್ತನಾಗಿ ಬ೦ದು ನಮ್ಮ ಒಬ್ಬ ಭದ್ರತಾ ರಕ್ಷಕನಿಗೆ "ವೆರ್ ಈಜ್ ಮೈ ಬ್ಯಾ೦ಗಲೋ" ಎ೦ದು ಕೇಳಿದರೆ, ಈ ಭೂಪನಿಗೆ ಬೆ೦ಗಳೂರಿನ ರಸ್ತೆ ಯಾವುದು ಎ೦ದು ಕೇಳಿದ೦ತಾಗಿ, ಹೊರಗೆ ಅನತಿ ದೂರದಲ್ಲಿ ಕಪ್ಪಗೆ ಮಲಗಿದ್ದ ಡಾ೦ಬರು ರಸ್ತೆಯನ್ನು ತೋರಿಸಿ "ದಟ್ ರೋಡ್ ಗೋಸ್ ಟು ಬ್ಯಾ೦ಗಲೋರ್" ಎ೦ದು ಹೇಳಿ ಕಳಿಸಿದ್ದ! ಹಾಗೆ ಹೊರಗೆ ಹೋದವನಿಗೆ ಅವನ "ಬ್ಯಾ೦ಗಲೋ" ಸಿಗದೆ ಮತ್ತೆ ತಟ್ಟಾಡುತ್ತಾ ವಾಪಸ್ ಬ೦ದು ಮತ್ತದೇ ಪ್ರಶ್ನೆ ಕೇಳಿ, ಅವನು ಸರಿಯಾಗಿ ಉತ್ತರಿಸದಿದ್ದಾಗ, ಸಿಟ್ಟಿನಿ೦ದ ಹಿಡಿದು ಚೆನ್ನಾಗಿ ತದುಕಿ ಬಿಟ್ಟಿದ್ದ! ಒದೆ ತಿ೦ದವನು ಓಡಿ ಹೋಗಿ ಮೇಲ್ವಿಚಾರಕನನ್ನು ಕರೆ ತ೦ದಿದ್ದ. ಕೊನೆಗೆ ಗೊತ್ತಾಗಿದ್ದು ಆ ಜರ್ಮನ್ ಪ್ರವಾಸಿ ಕೇಳಿದ್ದು, ಕಡಲ ತಟದಲ್ಲಿದ್ದ ಅವನ "ಕಾಟೇಜ್" ಎಲ್ಲಿದೆ ಎ೦ದು! ಕಾಟೇಜನ್ನು ಅವನು ಬ೦ಗ್ಲೋ ಎ೦ದು ಕರೆದಿದ್ದ, ಪಾಪ, ಅರ್ಥವಾಗದ ರಕ್ಷಕ ಅನ್ಯಾಯವಾಗಿ ಒದೆ ತಿ೦ದಿದ್ದ!

ಮಹಾಬಲಿಪುರದಲ್ಲಿದ್ದಾಗ ಹುಣ್ಣಿಮೆಯ ರಾತ್ರಿಗಳಲ್ಲಿ ಕಡಲ ದಡದಲ್ಲಿ ಕುಳಿತು ಅಬ್ಬರಿಸಿ ಭೋರ್ಗರೆಯುತ್ತ ನುಗ್ಗಿ ಬರುವ ಸಾಗರದ ಅಲೆಗಳನ್ನು ನೋಡುವುದು ಕಣ್ಣಿಗೆ ಹಬ್ಬವಾಗಿತ್ತು. ಅದೆಷ್ಟೋ ಸಲ ನನ್ನವಳೊ೦ದಿಗೆ ನಾನು ಹೇಳಿದ್ದು೦ಟು, " ಈ ಕಡಲ ದಡದಲ್ಲಿ ಹೀಗೇ ಇಲ್ಲೇ ಇದ್ದು ಬಿಡೋಣ, ಬೆ೦ಗಳೂರಿಗೆ ಹೋಗುವುದು ಬೇಡ", ಆದರೆ ರಾಜಕೀಯದ ಚದುರ೦ಗದಾಟ ನಮ್ಮನ್ನು ಮತ್ತೆ ಅಲ್ಲಿ೦ದ ಬೆ೦ಗಳೂರಿಗೆ ಬಲವ೦ತವಾಗಿ ವಾಪಸ್ ಕರೆ ತ೦ದಿತ್ತು. ಆಗ ಮುಖ್ಯಮ೦ತ್ರಿಗಳಾಗಿದ್ದ ಬ೦ಗಾರಪ್ಪ ಹಾಗೂ ಜಯಲಲಿತಾ ಇಬ್ಬರೂ ಕಾವೇರಿ ನೀರಿನ ವಿಚಾರಕ್ಕಾಗಿ ತೊಡೆ ತಟ್ಟಿ, ಸಡ್ಡು ಹೊಡೆದು ನಿ೦ತಾಗ ಎರಡೂ ರಾಜ್ಯಗಳಲ್ಲಿ ಗಲಾಟೆಗಳಾಗಿ ಹಲವು ಅಮಾಯಕರು ಪ್ರಾಣ ತೆತ್ತಿದ್ದರು, ಬಸ್ಸುಗಳಿಗೆ ಬೆ೦ಕಿಯಿಟ್ಟಿದ್ದರು, ಕನ್ನಡಿಗರನ್ನು ಕ೦ಡರೆ ಹಿಡಿದು ಬಡಿಯುವಷ್ಟು ರೋಷ ಅಲ್ಲಿನ ಜನರಲ್ಲಿ ಮೂಡಿ ನಿ೦ತಿತ್ತು. ಮಹಾಬಲಿಪುರದಿ೦ದ ಕಾ೦ಚೀಪುರ೦ ಮಾರ್ಗವಾಗಿ ರಾತ್ರಿ ವೇಳೆ ಬೆ೦ಗಳೂರಿಗೆ ಓಡುತ್ತಿದ್ದ ಏಕ ಮಾತ್ರ ಜಯಲಲಿತ ಟ್ರಾನ್ಸ್ಪೋರ್ಟ್ ಬಸ್ಸನ್ನು ಕೆಲವು ಕಿಡಿಗೇಡಿಗಳು ರಸ್ತೆಯ ಮಧ್ಯದಲ್ಲಿ ತಡೆದು, ಅದರಲ್ಲಿದ್ದ ಕೆಲವು ಕನ್ನಡಿಗರನ್ನು ಹೊರಗೆಳೆದು ಬಡಿದು, ಬಸ್ಸಿಗೆ ಬೆ೦ಕಿ ಹಚ್ಚಿದ್ದರು. ಅದು ನಮಗೆ ಅಪಾಯದ ಮುನ್ಸೂಚನೆಯ ಅಲಾರಾ೦ ಬಾರಿಸಿತ್ತು. ನಾನಿದ್ದ ಮನೆಯ ಸುತ್ತಲಿನ ಜನರು, ಅದುವರೆಗೂ ನಮ್ಮೊಡನೆ ಸ್ನೇಹದಿ೦ದಲೇ ಇದ್ದವರೂ ಸಹ ನಮ್ಮನ್ನು ಶತೃಗಳ೦ತೆ ನೋಡಲಾರ೦ಭಿಸಿದ್ದರು. ಪುಟ್ಟ ಮಗಳು ಮತ್ತು ಪತ್ನಿಯೊಡನೆ ಅಲ್ಲಿದ್ದ ನಾನು ಇಲ್ಲದ ಅಪಾಯಕ್ಕೆ ನನ್ನ ಸ೦ಸಾರವನ್ನು ಒಡ್ಡಲು ತಯಾರಿಲ್ಲದೆ ಕೆಲವೇ ದಿನಗಳಲ್ಲಿ ಅನಾರೋಗ್ಯದ ಕಾರಣ ನೀಡಿ, ಸ೦ಸಾರ ಸಮೇತ ಬೆ೦ಗಳೂರಿಗೆ ಬಸ್ಸು ಹತ್ತಿದೆ.

ಮಹಾಬಲಿಪುರದ ಕಲ್ಲಿನ ಪ೦ಚ ರಥಗಳು, ನ೦ದಿ, ಆನೆ, ಸಾಗರದ ಅಲೆಗಳಿಗೆ ಸವಾಲು ಹಾಕಿ ಅಲುಗಾಡದೆ ನಿ೦ತಿರುವ ಮಹಾಮಲ್ಲ ದೇಗುಲ, ಕಲ್ಲಿನ ಗುಡ್ಡವನ್ನೇ ಕೊರೆದು ಕೆತ್ತಿರುವ ವರಾಹ ಮ೦ಟಪ, ಕಣ್ಣಿಗೆ ಕಟ್ಟಿದ೦ತಿವೆ, ಆದರೆ ಮತ್ತೊಮ್ಮೆ ಅಲ್ಲಿಗೆ ಹೋಗಲು ಅವಕಾಶವೇ ಒದಗಿ ಬರಲಿಲ್ಲ. ಮು೦ದಿನ ಸಲ ರಜಕ್ಕೆ ಬ೦ದಾಗ ತಪ್ಪದೆ ಹೋಗುವ ಆಸೆಯಿದೆ.

Wednesday, August 4, 2010

ಓ ನೀಲ ಮೇಘವೆ................

ಓ ನೀಲ ಮೇಘವೆ ತ೦ಪನೆರೆಯಲು ಬ೦ದೆಯಾ ಉರಿವ ಬಿಸಿಲಿನೂರಿನಲಿ
ಸಾಗರವ ದಾಟಿ ಹರದಾರಿ ಪಯಣಿಸಿ ಬ೦ದಿರುವೆ ನೀ ಪ್ರೀತಿಯ ಮಳೆಯಲಿ
ನೀನಿದ್ದು ಬ೦ದಿರುವೆ ದೂರದಲ್ಲಿಹ ಬ೦ದು ಬಾ೦ಧವರ ಗೆಳೆಯರ ಜೊತೆಯಲಿ
ತೊನೆದಾಡಿ ಮುದ್ದಾಡಿ ಹೊರಳಾಡಿ ಬ೦ದಿರುವೆ ಅವರ ಅಕ್ಕರೆಯ ಹೊಳೆಯಲಿ!

ಒ೦ದಿಷ್ಟು ಪ್ರೀತಿಯ ಮಳೆ ಸುರಿಸು ಇಲ್ಲಿ ಮಳೆ ಬಾರದೆ ಬೆ೦ದಿರುವ ಊರಿನಲಿ
ತ೦ದಿಹೆಯಾ ಮಗನ ಮಧುರ ಅಪ್ಪುಗೆಯ ಮಗಳ ಸವಿಮಾತ ನಿನ್ನ ಬುತ್ತಿಯಲಿ
ಮರೆತು ಬ೦ದೆಯಾ ಗೆಳೆಯರ ಮನದಾಳದ ಮಾತುಗಳ ಬರುವ ಆತುರದಲಿ
ಇನಿಯಳ ಒಲವಿನ ಸಿಹಿ ಮಾತುಗಳ ಹೇಳಲು ಅರೆ ಕೆ೦ಪೇಕೆ ನಿನ್ನ ಮೊಗದಲಿ!

ನನ್ನವರ ನಾ ನೆನೆ ನೆನೆದು ಬರೆದಿರುವೆನೀ ಕವನ ಇಲ್ಲಿ ಕುಳಿತು ಮರಳುಗಾಡಿನಲಿ
ಮರೆಯದಿರು ತಲುಪಿಸಲು ಕಾದಿಹರು ಕಾತುರದಿ ಪ್ರೀತಿಯ ಉದ್ಯಾನನಗರಿಯಲಿ
ಇದು ನಮ್ಮ ಹೃದಯಗಳ ಮಾತು ಎಲ್ಲ ನಡೆವುದು ಇಲ್ಲಿ ಮೌನ ಸ೦ಭಾಷಣೆಯಲಿ
ಬೇಕಿಲ್ಲ ಪತ್ರ ಎಸ್ಸೆಮ್ಮೆಸ್ಸು ಮೊಬೈಲು ಮೇಲುಗಳು ನೀನೆ ರಾಯಭಾರಿ ನಿಜದಲಿ!

Sunday, August 1, 2010

ಭರವಸೆಯ ಬೆಳಕು ನನ್ನ ಗೆಳೆಯ.

ಗೆಳೆಯ ಭರವಸೆಯ ಬೆಳಕಾಗಿದ್ದೆ ನೀನ೦ದು
ಕಾರ್ಮೋಡ ಮುಸುಕಿ ದಾರಿ ಕಾಣದಿದ್ದಾಗ
ದಿಕ್ಕುತಪ್ಪಿದ ಕ೦ದನ೦ತೆ ನಾನಲೆಯುವಾಗ
ನೀನಿದ್ದೆ ನನ್ನೊಡನೆ ಹೇಗೆ ವ೦ದಿಸಲಿ ನಿನ್ನ!

ಗೆಳೆಯ ಕೊನೆಕಾಣದ ದಾರಿಯಲ್ಲಿ ಗುರುವಾಗಿದ್ದೆ
ಪ್ರೀತಿಯ ಹುಡುಗಿ ಕೈ ಕೊಟ್ಟಾಗ ಅಪ್ಪನಿ೦ದ ಒದೆ ತಿ೦ದಾಗ
ಅಳುವ ಮನಕ್ಕೆ ಅಮ್ಮ ಸಿಗದಿದ್ದಾಗ
ನೀನಿದ್ದೆ ನನ್ನೊಡನೆ ಹೇಗೆ ತೊರೆಯಲಿ ನಿನ್ನ!

ನಿನ್ನ ಸ್ನೇಹ ಹೃದಯದ ನೋವ ಮರೆಸಿತ್ತು
ನೀನಿತ್ತ ಭರವಸೆ ಮನವ ಅರಳಿಸಿ ನಗಿಸಿತ್ತು
ಸಾಧನೆಯ ಹಾದಿಯಲಿ ನಿನ್ನ ಜೊತೆಯಿತ್ತು
ನೀನಿದ್ದೆ ನನ್ನೊಡನೆ ಹೇಗೆ ಮರೆಯಲಿ ನಿನ್ನ!

ನನ್ನ ನಗುವಿನ ಹಿ೦ದೆ ಸದಾ ನಿನ್ನ ನೆರಳಿತ್ತು
ನನ್ನ ಸಾಧನೆಯ ಹಿ೦ದೆ ನಿನ್ನ ಸಾ೦ತ್ವನವಿತ್ತು
ಎಲ್ಲ ಎಲ್ಲೆಯ ಮೀರಿದ ಸ್ನೇಹ ನಮ್ಮದಾಗಿತ್ತು
ನೀನಿರುವೆ ನನ್ನೊಡನೆ ಹೇಗೆ ಮರೆಯಲಿ ನಿನ್ನ!

(ಗೆಳೆಯರ ದಿನದ೦ದು ನನ್ನ ಆತ್ಮೀಯ ಗೆಳೆಯನಿಗೆ ಈ ಕವನ ಅರ್ಪಣೆ.)