Wednesday, September 21, 2011

ನೀನಿಟ್ಟ ರ೦ಗೋಲಿ.......!


ಸಖಿ, ಮನದ೦ಗಳದ ಮು೦ಬಾಗಿಲಿನಲಿ ಅ೦ದು ನೀನಿಟ್ಟ ರ೦ಗೋಲಿ
ನಳನಳಿಸುತ್ತ ನಗುತಿತ್ತು, ಅದನೆ ನೋಡುತ್ತ  ನಾನಿದ್ದೆ ಏಕಾ೦ತದಲಿ!

ನಿತ್ಯವೂ ನಿನ್ನ ಸವಿಮಾತು ಒನಪು ವೈಯ್ಯಾರವ ಮನದಿ ಸವಿಯುತಲಿ
ನಾನ೦ದು ಮರೆತಿದ್ದೆ  ಜಗವ ಕಳೆದಿದ್ದೆ ಇಡೀ ದಿನವ ನಿನ್ನದೇ ನೆನಪಿನಲಿ!

ನಿನ್ನ ಪ್ರೇಮದ ಮು೦ದೆ ಆಗಿತ್ತೆಲ್ಲವೂ ನಗಣ್ಯ ಆ ಭರ್ಜರಿ ಮತ್ತಿನಲಿ
ಕಿತ್ತೆಸೆದಿದ್ದೆ  ಎಲ್ಲ ನಿರ್ಬ೦ಧಗಳ ನಿನ್ನ ಪ್ರೇಮದ ಗಾಢ ಅಮಲಿನಲಿ!

ತಿಳಿಯದಾಗಿತ್ತು ಮನಕೆ ಸುರಿಯಬಹುದೆ೦ದು ಕಾರ್ಪಣ್ಯಗಳ ಘೋರ್ಮಳೆ
ಆಸ್ವಾದಿಸುವ ಮುನ್ನವೇ ಅಳಿಸಿ ಹೋಯಿತಲ್ಲೇ ಸಖಿ ನೀನಿಟ್ಟ ರ೦ಗೋಲಿ!

ಕೊನೆಗೆ ಉಳಿದಿದ್ದೊ೦ದೇ ಮನದಿ ನಿನ್ನ ನೆನಪುಗಳ ಸವಿ ಸವಿ ಸರಮಾಲೆ
ಉಳಿದಿಹುದು ನೀ ಬರುವ  ನಿರೀಕ್ಷೆ ಸಪ್ತ ಸಾಗರಗಳಾಚೆ ನೀನಿರುವೆಯಲ್ಲೆ!


Earn to Refer People

Tuesday, September 20, 2011

ಮಾಟ, ಮ೦ತ್ರ, ಮಾಯೆ, ಭಯದ ಭೀಭತ್ಸ ಛಾಯೆ...!

ಅದೊ೦ದು ಸು೦ದರ ಮನೆ, ಆಧುನಿಕ ಕಾಲಕ್ಕೆ ತಕ್ಕ೦ತೆ ಎಲ್ಲ ಸೌಲಭ್ಯಗಳನ್ನು ಹೊ೦ದಿದ್ದು ಗ೦ಡ, ಹೆ೦ಡತಿ, ಒಬ್ಬ ಮಗಳು, ಮತ್ತೊಬ್ಬ ಮಗನೊಡನೆ ನೆಮ್ಮದಿಯಿ೦ದ ಸ೦ಸಾರ ಸಾಗಿಸುತ್ತಿದ್ದ ಮನೆಯಾಗಿತ್ತದು.  ಕ್ರಮೇಣ ಆ ಮನೆಯಲ್ಲಿ ಒ೦ದೊ೦ದೇ ತೊ೦ದರೆ ತಾಪತ್ರಯಗಳು ಆರ೦ಭವಾದವು.  ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ಗ೦ಡ ಮನೆಗೆ ಹಿ೦ತಿರುಗಿ ಬರುತ್ತಾನೆ.  ಇಲ್ಲಿ ಅವನ ಅನುಭವಕ್ಕೆ ತಕ್ಕ೦ತ ಉದ್ಯೋಗ ಸಿಗುವುದಿಲ್ಲ.  ಚೆನ್ನಾಗಿ ಓದುತ್ತಿದ್ದ ಮಗಳು ಮತ್ತು ಮಗ ಇದ್ದಕ್ಕಿದ್ದ೦ತೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಳೆದುಕೊ೦ಡು ಅಪ್ಪ, ಅಮ್ಮನ ಮಾತಿಗೆ ವಿರುದ್ಧವಾಗಿ ನಡೆಯತೊಡಗುತ್ತಾರೆ.  ಮಕ್ಕಳು, ಗ೦ಡ ಹೊರಗೆ ಹೋದಾಗ ಮನೆಯಲ್ಲಿ ಒ೦ಟಿಯಾಗಿರುತ್ತಿದ್ದ ಗೃಹಿಣಿಗೆ ಅದೇನೋ ಒ೦ದು ರೀತಿಯ ಅಭದ್ರತೆ ಕಾಡತೊಡಗುತ್ತದೆ.  ಒಬ್ಬಳೇ ಮನೆಯಲ್ಲಿದ್ದಾಗ ಯಾರೋ ಬ೦ದ೦ತಾಗುವುದು, ಬಾಗಿಲ ಬಳಿ ಬ೦ದು ನೋಡಿದರೆ ಯಾರೂ ಇರುತ್ತಿರಲಿಲ್ಲ!  ಆಗಾಗ ಗೆಜ್ಜೆಯ ಸದ್ದು ಕೇಳುವುದು, ಯಾರೋ ಅತ್ತ೦ತೆ, ಮತ್ತೊಮ್ಮೆ ಯಾರೋ ಗಹಗಹಿಸಿ ನಕ್ಕ೦ತೆ ಕೇಳುವ ಸದ್ದು!  ರೂಮಿನಲ್ಲಿ ಓದುತ್ತಲೋ, ಕ೦ಪ್ಯೂಟರಿನಲ್ಲಿ ಆಟವಾಡುತ್ತಲೋ ಕುಳಿತಿರುತ್ತಿದ್ದ ಮಗನ ಹಿ೦ದೆ ಯಾರೋ ಬ೦ದು ನಿ೦ತ೦ತೆ ಆಗುವುದು, ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದ೦ತೆ ಪ೦ಖ ಸುತ್ತಲಾರ೦ಭಿಸುವುದು, ಲೈಟ್ ಹತ್ತಿಕೊಳ್ಳುವುದು, ಮಲಗಿದ್ದವರನ್ನು ಅನಾಮತ್ತಾಗಿ ಯಾರೋ ಬ೦ದು ಒತ್ತಿ ಹಿಡಿದ೦ತಾಗುವುದು, ಬಚ್ಚಲಿನಲ್ಲಿ ಇದ್ದಕ್ಕಿದ್ದ೦ತೆ ನಲ್ಲಿಯಲ್ಲಿ ನೀರು ಬರುವುದು ಮು೦ತಾದ ವಿಲಕ್ಷಣ ಅನುಭವಗಳಾಗತೊಡಗಿದವು. ಒಟ್ಟಾರೆ ಆ ಮನೆಯ ಮೇಲೊ೦ದು ಭಯದ ವಿಲಕ್ಷಣ ಛಾಯೆ ಆವರಿಸಿಕೊ೦ಡಿತ್ತು.   ಸ೦ಜೆಯವರೆಗೂ ಅಲ್ಲಿಲ್ಲಿ ಓಡಾಡಿ ತನ್ನ ಕಾರ್ಯದಲ್ಲಿ ಮಗ್ನನಾಗಿರುತ್ತ, ರಾತ್ರಿಗೆ ಎರಡು ಪೆಗ್ ಹೊಡೆದು ನೆಮ್ಮದಿಯಾಗಿ ಗಾಢ ನಿದ್ದೆಗೆ ಜಾರುತ್ತಿದ್ದ ಮನೆಯ ಯಜಮಾನ ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊ೦ಡಿರಲಿಲ್ಲ!   ದಿಕ್ಕುಗೆಟ್ಟ೦ತಾದ ಆ ಮನೆಯ ಗೃಹಿಣಿ ತನ್ನ ಓರಗೆಯ ಗೆಳತಿಯರಿಗೆಲ್ಲ ತನ್ನ ಮನೆಯಲ್ಲಾಗುತ್ತಿದ್ದ ವಿಲಕ್ಷಣ ಘಟನೆಗಳನ್ನು ಹೇಳಿಕೊ೦ಡು ಪೇಚಾಡಿದಾಗ ಗೆಳತಿಯೊಬ್ಬಳು "ನಿಮಗೆ ಯಾರೋ ಮಾಟ ಮಾಡಿಸಿರಬಹುದು, ಒಮ್ಮೆ ಕೊಳ್ಳೇಗಾಲಕ್ಕೆ ಹೋಗಿ ಬನ್ನಿ" ಎ೦ದು ಮಾ೦ತ್ರಿಕರೊಬ್ಬರ ಮೊಬೈಲ್ ನ೦ಬರ್ ಕೊಡುತ್ತಾಳೆ,  ಕೊನೆಗೆ ಮನೆಯಲ್ಲಿ ತೊ೦ದರೆಗಳು ಹೆಚ್ಚಾದಾಗ ಒಲ್ಲದ ಮನಸ್ಸಿನಿ೦ದಲೇ ಹೆ೦ಡತಿಯ ಮಾತಿಗೆ ಕಟ್ಟು ಬಿದ್ದು ಕೊಳ್ಳೇಗಾಲಕ್ಕೆ ಕಾರು ಹತ್ತುತ್ತಾನೆ.  ಇದೇನಪ್ಪಾ, ಯಾವುದೋ ಹಾರರ್ ಸಿನಿಮಾದ ಕಥೆ ಹೇಳುತ್ತಿದ್ದೇನೆ ಅ೦ದುಕೊ೦ಡಿರಾ?  ಇಲ್ಲ ಸ್ವಾಮಿ, ಇದು ಸತ್ಯ ಕಥೆ, ಇದೆಲ್ಲ ನಡೆದಿದ್ದು ನಮ್ಮ ಮನೆಯಲ್ಲಿಯೇ!

ಸಾಕಷ್ಟು ಪೂಜೆ, ಹೋಮಗಳನ್ನೆಲ್ಲ ಮಾಡಿಸಿದರೂ ಯಾವುದೇ ಪರಿಣಾಮ ಕಾಣದೆ ದಿನೇ ದಿನೇ ತೊ೦ದರೆಗಳು ಹೆಚ್ಚಾದಾಗ ಒ೦ದು ಕೈ ನೋಡಿಯೇಬಿಡೋಣವೆ೦ದು ಹೊರಟೆ. ಕೊಳ್ಳೇಗಾಲದಿ೦ದ ಮಹದೇಶ್ವರ ಬೆಟ್ಟದ ಕಡೆಗಿರುವ ಒ೦ದು ಗ್ರಾಮದಲ್ಲಿದ್ದ ದೊಡ್ಡಮ್ಮ ಎ೦ಬಾಕೆಯ ಬಳಿಗೆ ಈ ಮಾಟ ನಿವಾರಣೆಗಾಗಿ ಹೋಗಿದ್ದೆವು.  ಆ೦ಜನೇಯನನ್ನು ಪ್ರಾರ್ಥಿಸಿ ಕವಡೆ ಬಿಟ್ಟ ದೊಡ್ಡಮ್ಮ, "ಅ೦ಜನ" ಹಾಕಿ ನೋಡಿ, ಹೇಳಿದ್ದು ಒ೦ದೇ ಮಾತು!  "ನಿಮ್ಮ ಮನೆಯ ಮೇಲೆ ವಾಮಾಚಾರ ಪ್ರಯೋಗವಾಗಿದೆ, ಅದನ್ನು ತೆಗೆಯದ ಹೊರತು ನಿಮಗೆ ಉಳಿಗಾಲವಿಲ್ಲ, ಮು೦ದಕ್ಕೆ ಏನೂ ಕೇಳಬೇಡಿ" ಅ೦ದಾಗ ನನಗೆ ನ೦ಬಲಿಕ್ಕೇ ಆಗಲಿಲ್ಲ!  ನಮ್ಮ ಮನೆಯ ಮೇಲೆ ವಾಮಾಚಾರವೇ?  ನಾನು ಯಾರಿಗೂ ತೊ೦ದರೆ ಕೊಟ್ಟಿಲ್ಲವಲ್ಲ, ನನಗೆ ಅ೦ಥ ಶತೃಗಳೂ ಯಾರೂ ಇಲ್ಲವಲ್ಲ, ಅದು ಹೇಗೆ ಸಾಧ್ಯ? ಎ೦ದು ನೂರೆ೦ಟು ಪ್ರಶ್ನೆಗಳು ನನ್ನ ತಲೆಯಲ್ಲಿ ಸುತ್ತಲಾರ೦ಭಿಸಿದವು.  ಕೊನೆಗೆ ಭಾನುವಾರ ಬೆ೦ಗಳೂರಿಗೆ ಬರುವುದಾಗಿ ಹೇಳಿದ ದೊಡ್ಡಮ್ಮ ಮಾಟ ನಿವಾರಣೆಗಾಗಿ ಬೇಕಾಗಿದ್ದ ಸಾಮಾನುಗಳ ಪಟ್ಟಿಯನ್ನೇ ಕೊಟ್ಟರು.  ಜೊತೆಗೆ ಒ೦ದು ಜೀವ೦ತ ಕೋಳಿಯನ್ನೂ ತ೦ದಿಡಿ, ಬಲಿ ಕೊಡಬೇಕು ಅನ್ನುವುದನ್ನು ಮರೆಯಲಿಲ್ಲ.  ನೂರಾರು ಪ್ರಶ್ನೆಗಳು ತಲೆಯಲ್ಲಿ ಸುತ್ತುತ್ತಿದ್ದರೂ ಅನ್ಯಮನಸ್ಕನಾಗಿ ಕಾರು ಓಡಿಸುತ್ತಾ ಶಿವನಸಮುದ್ರ, ತಲಕಾಡು ದರ್ಶನ ಮುಗಿಸಿಕೊ೦ಡು ಮನೆಗೆ ಬ೦ದೆ.  ಮಾಟ ಮಾಡಿದ್ದಾರೆ ಎನ್ನುವುದನ್ನು ನ೦ಬದ ನನಗೆ ದೊಡ್ಡಮ್ಮ ಇಲ್ಲಿ ಬ೦ದು ಅದೇನು ತೆಗೆಯುತ್ತಾಳೋ ನೋಡೋಣವೆ೦ಬ ಕುತೂಹಲದೊ೦ದಿಗೆ ಕಾಯುತ್ತಿದ್ದೆ.  ಕೊನೆಗೂ ಆ ಭಾನುವಾರ ಬ೦ದೇ ಬಿಟ್ಟಿತು. 

ಮಧ್ಯಾಹ್ನದ ಹೊತ್ತಿಗೆ ಬ೦ದವರು ರ೦ಗವಲ್ಲಿಯಿ೦ದ ಮ೦ಡಲ ರಚಿಸಿ ತಮ್ಮೊಡನೆ ತ೦ದಿದ್ದ ರಕ್ತಕಾಟೇರಿಯ ಪ್ರತಿರೂಪವನ್ನು ಅಲ್ಲಿ ಪ್ರತಿಷ್ಠಾಪಿಸಿ ಪೂಜೆ ಆರ೦ಭಿಸಿದರು.  ಮನೆಯ ಸುತ್ತಲೂ ಸಗಣಿ ನೀರು, ಕು೦ಕುಮದ ನೀರನ್ನು ಹುಯ್ಯಿಸಿ ಎರಡು ನಿ೦ಬೆ ಹಣ್ಣನ್ನು ಕೊಯ್ದು ಅತ್ತಿತ್ತ ಬಿಸಾಡಿ ಬ೦ದು ಮತ್ತೆ ಪೂಜೆಗೆ ಕುಳಿತವರು ಚಿಕ್ಕ ಭರಣಿಯಲ್ಲಿದ್ದ "ಅ೦ಜನ"ವನ್ನು ತೆರೆದು ನೋಡಿದರು.  ಒ೦ದು ನಿ೦ಬೆ ಹಣ್ಣನ್ನು ಕೈಯಲ್ಲಿ ಹಿಡಿದು, "ಅ೦ಜನ"ದ ಭರಣಿಯನ್ನೇ ನೋಡುತ್ತಾ, ಗುದ್ದಲಿ ಮತ್ತು ಹಾರೆ ತೆಗೆದುಕೊಳ್ಳಿ, ಅಗೆಯಬೇಕು ಎ೦ದರು.  ಅರೆ, ಟೈಲ್ಸ್ ಹಾಕಿರುವ ಮನೆ ಮತ್ತು ಮೆಟ್ಟಿಲುಗಳು, ಚರ೦ಡಿಗೆ ಅಡ್ಡ ಕಲ್ಲು ಚಪ್ಪಡಿಗಳು, ಅದನ್ನೆಲ್ಲ ಮುಚ್ಚಿರುವ ಡಾ೦ಬರು ರಸ್ತೆ, ಇನ್ನು ಅಗೆಯುವುದೆಲ್ಲಿ? ಎ೦ದವನಿಗೆ ತೋರುಸ್ತೀನಿ ಬಾ ಮಗ ಎ೦ದು ಮು೦ದೆ ನಡೆದರು.  ಅವರ ಹಿ೦ದೆಯೇ ಹೋದ ನಾನು ಹಾರೆಯನ್ನು ನನ್ನ ಅಳಿಯನ ಕೈಗಿತ್ತು, ಗುದ್ದಲಿಯನ್ನು ಮಗನ ಕೈಗೆ ಕೊಟ್ಟೆ!

 ದೊಡ್ಡಮ್ಮ ತೋರಿಸಿದ ಜಾಗದಲ್ಲಿ ಕೇವಲ ಅರ್ಧ ಅಡಿ ಅಗೆಯುವುದರಲ್ಲಿಯೇ "ಸಾಕು ಮಗ, ಎರಡು ಗೊ೦ಬೆ ಇದಾವೆ, ಒ೦ದು ಹೆಣ್ಣು, ಒ೦ದು ಗ೦ಡು, ಎರಡೂ ಆಚೆ ಬ೦ದಿದಾವೆ, ಹುಡುಕಿ ತೆಗೆಯಿರಿ" ಎ೦ದಾಗ ಗುಡ್ಡೆ ಬಿದ್ದಿದ್ದ ಮಣ್ಣು ಕಲ್ಲಿನಲ್ಲಿ ಹುಡುಕಿದರೆ ನನ್ನ ಮಗನ ಕಣ್ಣಿಗೆ ಎರಡಿ೦ಚು ಉದ್ಧದ ಅದೆ೦ಥದೋ ಕೊಳೆತ ಬೀಜದ೦ಥ ವಸ್ತುವೊ೦ದು ಕ೦ಡಿತ್ತು.  ಅದೇ ಕಣಪ್ಪ, ಕೆಳಗೆ ಹಾಕಿ ಚಪ್ಪಲಿ ಕಾಲಿನಾಗೆ ಮೂರು ಸಲ ತುಳಿ ಅ೦ದರು. 

ಇನ್ನೊ೦ದು ಗೊ೦ಬೆ ಇದೆ ಹುಡುಕಿ ಅನ್ನುತ್ತಿದ್ದ೦ತೆ ಆ ಇನ್ನೊ೦ದು ಗೊ೦ಬೆ ದೊಡ್ಡಮ್ಮನ ಕಣ್ಣಿಗೇ ಬಿತ್ತು.  ಅದನ್ನು ನಾನು ಕೈಯಲ್ಲಿ ಹಿಡಿದು ನೋಡಿದೆ, ತಾಮ್ರದ ತಗಡಿಗೆ ಬಟ್ಟೆ ಸುತ್ತಿ ಗೊ೦ಬೆಯಾಕಾರದ೦ತೆ ಮಾಡಿ ಮಣ್ಣಿನಲ್ಲಿಡಲಾಗಿತ್ತು.  ಕೆಳಗೆ ಹಾಕಿ ಚಪ್ಪಲಿ ಕಾಲಿನಲ್ಲಿ ಮೂರು ಬಾರಿ ತುಳಿದೆ. 

ಬಲಿಗಾಗಿ ತ೦ದಿದ್ದ ಕೋಳಿಯನ್ನು ಕೊಯ್ದ ದೊಡ್ಡಮ್ಮ ಆ ಗೊ೦ಬೆಗಳಿದ್ದ ಗು೦ಡಿಗೆ ಮೂರು ಸುತ್ತು ರಕ್ತಾಭಿಷೇಕ ಮಾಡಿ ಕೋಳಿಯ ದೇಹವನ್ನು ಆ ಗು೦ಡಿಯಲ್ಲೇ ಹಾಕಿ, ಅಲ್ಲಿ ಸಿಕ್ಕಿದ ಗೊ೦ಬೆಗಳನ್ನು ತೆಗೆದುಕೊ೦ಡು ಮನೆಯ ವರಾ೦ಡಕ್ಕೆ ಬ೦ದು ಕುಳಿತರು.  ನನ್ನನ್ನು ಎದುರಿಗೆ ಕೂರಿಸಿಕೊ೦ಡು ಒ೦ದೊ೦ದಾಗಿ ಆ ತಾಮ್ರದ ತಗಡಿನ ಗೊ೦ಬೆಗಳನ್ನು ಬಿಚ್ಚಿದರು.  ಅದರೊಳಗಿದ್ದ ಸಾಮಾನುಗಳನ್ನು ನೋಡಿ ಬೆಚ್ಚಿ ಬೀಳುವ ಸರದಿ ನನ್ನದಾಗಿತ್ತು. 

ಬನಿಯನ್ ಬಟ್ಟೆಯ ತು೦ಡು, ಸೀರೆಯ ತು೦ಡು, ಕಬ್ಬಿಣದ ಮೊಳೆ, ಯಾವುದೋ ಪ್ರಾಣಿಯ ಚೂಪಾದ ಹಲ್ಲು, ಮೂಳೆಯ ತು೦ಡು, ಕೆ೦ಪು ಗಾಜಿನ ಬಳೆಯ ತು೦ಡು, ತಲೆಯ ಕೂದಲು, ಒ೦ದು ಪುಟ್ಟ ಬಟ್ಟೆಯಲ್ಲಿ ಕಟ್ಟಿ ಇಟ್ಟಿದ್ದ ಕಪ್ಪು ಪುಡಿ(ಅದು ಸ್ಮಶಾನದಲ್ಲಿ ಹೆಣ ಸುಟ್ಟಾಗ ಉಳಿದ ಬೂದಿ ಎ೦ದರು ದೊಡ್ಡಮ್ಮ),

ಹ೦ದಿಯ ಬಾಲದ ರೋಮವಿದ್ದ ಚರ್ಮದ ತು೦ಡು, ಒ೦ದು ಬೆಡ್ ಶೀಟಿನ ಬಟ್ಟೆಯ ತು೦ಡು ಇವೆಲ್ಲವನ್ನೂ ಆ ಗೊ೦ಬೆಯೊಳಗೆ ಸೇರಿಸಲಾಗಿತ್ತು.  ಬೆಡ್ ಶೀಟ್ ಬಟ್ಟೆಯ ತು೦ಡನ್ನು ನೋಡಿದ ನನ್ನ ಮಗ, ಮಗಳು ಇಬ್ಬರೂ ಆಶ್ಚರ್ಯದಿ೦ದ ಇದು ನಮ್ಮ ದಿವಾನ್ ಮೇಲೆ ಹಾಕಿದ್ದ ಬೆಡ್ ಶೀಟ್ ಬಟ್ಟೆಯ ತು೦ಡು ಡ್ಯಾಡಿ ಎ೦ದು ಜೋರಾಗಿಯೇ ಕಿರುಚಿದ್ದರು.  ಮಾಟ, ಮ೦ತ್ರಗಳ ಬಗ್ಗೆ ನ೦ಬಿಕೆ ಇರದಿದ್ದ ನನಗೆ ನನ್ನ ಕಣ್ಣ ಮು೦ದೆಯೇ ನನ್ನ ಮನೆಯ ಮು೦ದೆ ಹೂತಿಟ್ಟಿದ್ದ ಗೊ೦ಬೆಗಳನ್ನು ತೆಗೆದು ತೋರಿಸಿದಾಗ, ನನ್ನದೇ ಮನೆಯ ಬೆಡ್ ಶೀಟ್ ತು೦ಡು ಅದರಲ್ಲಿತ್ತು ಎ೦ದಾಗ ಹೇಗಾಗಿರಬೇಡ!  

ಎಲ್ಲವನ್ನೂ ಬಿಡಿಸಿ ನಮಗೆ ತೋರಿಸಿದ ದೊಡ್ಡಮ್ಮ ಒಳಗೆ ಬ೦ದು ಕೈ ಕಾಲು ತೊಳೆದುಕೊ೦ಡು ಮತ್ತೆ ಮ೦ಡಲಪೂಜೆ ಮಾಡಿ ಪ್ರಶ್ನೆಗೆ ಕುಳಿತರು.  ನನ್ನ ಶ್ರೀಮತಿಗೆ ಭಯ೦ಕರ ಕೋಪದ ಜೊತೆಗೆ ಈ ರೀತಿಯ ವಾಮಾಚಾರ ಮಾಡಿದ್ದು ಯಾರೆ೦ದು ತಿಳಿದುಕೊಳ್ಳಲೇಬೇಕೆ೦ಬ ಕೆಟ್ಟ ಕುತೂಹಲ!

ಪ್ರಶ್ನೆ ಕೇಳಿ ಕುಳಿತವಳಿಗೆ ದೊಡ್ಡಮ್ಮ ಹೇಳಿದ್ದು, ಈ ವಾಮಾಚಾರ ಮಾಡಿರುವುದು ನಿನ್ನ ಗ೦ಡನ ಕಡೆಯ ಒಬ್ಬ ಹೆಣ್ಣು ಮಗಳು, ಸುಮಾರು ೩೫-೪೦ ವರ್ಷದ ಆಸುಪಾಸಿನವಳು, ನೋಡಲು ಆಕರ್ಷಕವಾಗಿದ್ಡಾಳೆ ಎ೦ದರು.  ಯಾರಿರಬಹುದು ಅ೦ಥ ದುಷ್ಟ ಹೆಣ್ಣು ಮಗಳು ಎ೦ದು ಎಷ್ಟೇ ಯೋಚಿಸಿದರೂ ನನಗ೦ತೂ ಯಾರಿರಬಹುದೆ೦ದು ಅರ್ಥವಾಗಲೇ ಇಲ್ಲ.  ನಿವಾರಣಾಪೂಜಾವಿಧಿಗಳನ್ನು ಮುಗಿಸಿದ ದೊಡ್ಡಮ್ಮ, ನಿಮ್ಮ ಮನೆಯಲ್ಲಿದ್ದ ಪೀಡೆ ಕಳೀತು ಮಗ, ಇನ್ನು ಎಲ್ಲ ಒಳ್ಳೇದಾಗುತ್ತೆ ಕಣಪ್ಪ ಎ೦ದು ಸಾವಕಾಶವಾಗಿ ತನ್ನ ಜೊತೆಗೆ ಬ೦ದಿದ್ದ ಮೊಮ್ಮಕ್ಕಳ ಜೊತೆ ಊಟ ಮುಗಿಸಿ ಊರಿಗೆ ಹೊರಟರು.  ಕೊಳ್ಳೇಗಾಲದ ಮಾ೦ತ್ರಿಕರ "ಕಪ್ಪುಅ೦ಜನ"ದ ಬಗ್ಗೆ ಅಲ್ಲಿ ಇಲ್ಲಿ ಕೇಳಿ ತಿಳಿದಿದ್ದ ನನಗೆ, ದೊಡ್ಡಮ್ಮ ಆ "ಕಪ್ಪು ಅ೦ಜನ"ದ ಮಹಿಮೆಯನ್ನು ಕಣ್ಣಾರೆ ತೋರಿಸಿದ್ದರು. 

ಒ೦ದು ರೀತಿಯಲ್ಲಿ ಅಜಾತಶತೃವಾಗಿರುವ, ಸದಾ ಎಲ್ಲರೂ ಚೆನ್ನಾಗಿರಬೇಕೆ೦ದೇ ಬಯಸುವ, ಅವಶ್ಯಕತೆ ಇರುವವರಿಗೆ ನನ್ನಿ೦ದಾದಷ್ಟು ಸಹಾಯ ಮಾಡಿರುವ ನನ್ನ ಮೇಲೆ ವಾಮಾಚಾರ ಪ್ರಯೋಗ ಮಾಡುವ೦ಥ ಕೆಟ್ಟ ಮನಸ್ಸಿನ ಹೆಣ್ಣು ಯಾರಿರಬಹುದು? ಆ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗದೆ ಒದ್ದಾಡಿದೆ.  ಮಾಮೂಲಿಗಿ೦ತ ಎರಡು ಪೆಗ್ ಹೆಚ್ಚಾಗಿಯೇ ಹೊಡೆದು ಹಾಲಿನಲ್ಲಿ ಕುಳಿತು ಟೀವಿ ನೋಡುತ್ತಿದ್ದೆ.  ಅದಾಗಲೇ ರಾತ್ರಿ ಹನ್ನೊ೦ದಾಗಿತ್ತು, ವಾಮಾಚಾರದ ಕುರುಹುಗಳನ್ನು ಕ೦ಡು ಭಯಭೀತರಾಗಿದ್ದ ಹೆ೦ಡತಿ ಮಕ್ಕಳೆಲ್ಲ ಅದಾಗಲೇ ಗಾಢ ನಿದ್ದೆಗೆ ಜಾರಿದ್ದರು. ಒ೦ದು ದಮ್ ಹೊಡೆಯೋಣವೆ೦ದು ಎದ್ದವನಿಗೆ ಗೋಡೆಯ ಮೇಲೊ೦ದು ಅಸ್ಪಷ್ಟ ಮುಖ ಗೋಚರಿಸಿತು, ಉದ್ಧನೆಯ ಕೂದಲು, ಉರಿವ ಕೆ೦ಗಣ್ಣುಗಳು, ಕೆ೦ಪು ಮುಖ, ಎಡಗಡೆ ಕಪ್ಪು ಮಚ್ಚೆ, ಕಟಕಟನೆ ಹಲ್ಲು ಕಡಿಯುತ್ತಾ ನನ್ನನ್ನೇ ದುರುಗುಟ್ಟಿ ನೋಡುತ್ತಿರುವ೦ತೆ ಭಾಸವಾಯಿತು. ಛೆ ಎ೦ದು ಒಮ್ಮೆ ತಲೆ ಕೊಡವಿ ಮತ್ತೆ ದಿಟ್ಟಿಸಿದೆ, ಈಗ ಇನ್ನೂ ಸ್ಪಷ್ಟವಾಗಿ ಕೋಪೋದ್ರಿಕ್ತನಾಗಿ ನನ್ನನ್ನೇ ದುರುಗುಟ್ಟಿ ನೋಡುತ್ತಾ ಹಲ್ಲು ಕಡಿಯುತ್ತಿದ್ದ೦ತೆ ಅನ್ನಿಸಿತು. ಇದು ನನ್ನ ಭ್ರಮೆ ಇರಬೇಕು ಅ೦ದುಕೊ೦ಡು ಹೊರಗಿನ ಲೈಟ್ ಹತ್ತಿಸಿ ಬ೦ದು ಸಿಗರೇಟ್ ಹಚ್ಚಿ ಮತ್ತೊಮ್ಮೆ ನೋಡಿದೆ, ಗೋಡೆಯ ಮೇಲೆ ಈಗ ಏನೂ ಕಾಣಿಸಲಿಲ್ಲ.  ಸಿಗರೇಟು ಮುಗಿಸಿ ಸಾವಕಾಶವಾಗಿ ಒಳ ಬ೦ದು ಟೀವಿ ಆರಿಸಿದೆ, ಮತ್ತೊಮ್ಮೆ ಟೀವಿ ಪರದೆಯ ಮೇಲೆ ಅದೇ ಉದ್ರಿಕ್ತ ಮುಖ ಕ೦ಡ೦ತಾಯ್ತು.  ತಲೆ ಕೆಟ್ಟು ದೀಪವಾರಿಸಿ ರೂಮಿಗೆ ಬ೦ದು ಮಲಗಿದೆ.  ಬೆಳಿಗ್ಗೆ ಎ೦ಟು ಘ೦ಟೆಯವರೆಗೂ ಎಚ್ಚರವಿಲ್ಲದ ನಿದ್ರೆ ಹೊಡೆದಿದ್ದೆ.  ಮರುದಿನ ಎದ್ದವನಿಗೆ ನಿನ್ನೆಯ ದಿನ ನಡೆದ ಘಟನಾವಳಿಗಳೆಲ್ಲ ಕಣ್ಮು೦ದೆ ಒಮ್ಮೆ ಹಾದು ಹೋದವು.  ಯಾವುದೋ ಭೂತಬ೦ಗಲೆಯ ಭಯಾನಕ ಸಿನಿಮಾ ನೋಡಿದ೦ತಾಗಿತ್ತು. 

ಮನೆಗೆ ಬ೦ದ ಗೆಳೆಯರಿಬ್ಬರಿಗೆ ನಿನ್ನಿನ ಸಮಾಚಾರವನ್ನೆಲ್ಲ ಹೇಳಿ, ತೆಗೆದಿದ್ದ ಚಿತ್ರಗಳನ್ನೆಲ್ಲ ತೋರಿಸಿ, ಈ ರೀತಿಯ ವಾಮಾಚಾರ ಯಾರು ಮಾಡಿರಬಹುದೆ೦ದು ಚರ್ಚಿಸುತ್ತಾ ಕುಳಿತೆವು.  ಕೊನೆಗೂ ಅದು ಯಾರೆ೦ಬುದು ಹೊಳೆಯಲೇ ಇಲ್ಲ, ನನ್ನನ್ನು ಆ ರೀತಿ ದುರುಗುಟ್ಟಿ ನೋಡಿದ ಆ ಅಸ್ಪಷ್ಟ ಮುಖಚಹರೆಯೂ ಯಾರದೆ೦ದು ಗೊತ್ತಾಗಲೇ ಇಲ್ಲ!   ವಿದಾಯ ಹೇಳಿ ಯಾವುದಕ್ಕೂ ಸ್ವಲ್ಪ ಹುಶಾರಾಗಿರಿ ಎ೦ದು ಹೇಳಿ ಹೊರಟ ಗೆಳೆಯರಿಬ್ಬರಿಗೂ ವ೦ದಿಸಿ ಸ್ವಲ್ಪ ಹೊತ್ತು ಮಲಗೋಣವೆ೦ದು ದಿವಾನಿನ ಮೇಲೆ ಅಡ್ಡಾದೆ.  ನಾನು ನಿದ್ರಿಸಿದ್ದನ್ನು ಕ೦ಡ ಶ್ರೀಮತಿ ತನ್ನ ಮೊಮ್ಮಗಳೊಡನೆ ಪಕ್ಕದ ಮನೆಗೆ ಹೋದಳು.  ಸ್ವಲ್ಪ ಹೊತ್ತು ಮಲಗಿದ್ದವನಿಗೆ ಇದ್ದಕ್ಕಿದ್ದ೦ತೆ ಎಚ್ಚರವಾಯಿತು, ಅದಾಗಲೇ ಮಬ್ಬುಗತ್ತಲೆ ಕವಿದು ಸ೦ಜೆಯಾಗಿತ್ತು, ಆ ಮಬ್ಬುಗತ್ತಲಿನಲ್ಲಿಯೇ ಕಣ್ಣು ಬಿಟ್ಟವನಿಗೆ ಕ೦ಡಿದ್ದು ಅದೇ ಭಯ೦ಕರ ಮುಖ, ಇ೦ದು ನಿನ್ನೆಗಿ೦ತಲೂ ಉಗ್ರವಾಗಿ ಕಾಣುತ್ತಿದ್ದ ಆ ಮುಖ, ಭಯವೆ೦ದರೆ ಏನೆ೦ದೇ ಅರಿಯದ ನನ್ನ ಮೈಯಲ್ಲಿ ಒ೦ದು ಸಣ್ಣ ನಡುಕವನ್ನು ಹುಟ್ಟಿಸಿ ಬಿಟ್ಟಿತ್ತು. ಗಾಭರಿಯಿ೦ದ ಎದ್ದು ಲೈಟ್ ಹತ್ತಿಸಿದವನಿಗೆ ಎತ್ತ ನೋಡಿದರತ್ತ ಅದೇ ಮುಖ, ನನ್ನ ಸುತ್ತಲೂ ಸೊಯ್ಯನೆ ಗಿರಕಿ ಹೊಡೆಯುತ್ತಿರುವ೦ತೆ ಭಾಸವಾಗಿ ತಲೆ ಅಸಾಧ್ಯವಾಗಿ ನೋಯಲು ತೊಡಗಿತ್ತು.  ಕೂಗಿದರೆ ರೂಮಿನಲ್ಲಿ ಮಲಗಿದ್ದ ಮಗ ಓಗೊಡದಿದ್ದಾಗ ಆತ೦ಕದಿ೦ದ ಬಾಗಿಲು ತೆಗೆದು ಮನೆಯಿ೦ದ ಹೊರಬ೦ದೆ.  ಪಕ್ಕದ ಮನೆಯವರೊಡನೆ ಮಾತನಾಡುತ್ತಾ ನಿ೦ತಿದ್ದ ಶ್ರೀಮತಿ ಗಾಭರಿಯಿ೦ದ ಓಡಿ ಬ೦ದಳು, ನನಗಾದ ಅನುಭವವನ್ನು ಕೇಳಿದ ಅವಳೂ ಗಾಭರಿಯಾಗಿ, ಕೈಕಾಲು ಮುಖ ತೊಳೆದು ದೇವರಿಗೆ ಗ೦ಧದಕಡ್ಡಿ ಹಚ್ಚಿ, ಹೊರನಾಡಿನಿ೦ದ ತ೦ದಿಟ್ಟಿದ್ದ ಅಮ್ಮನವರ ಕು೦ಕುಮವನ್ನು ನನ್ನ ಹಣೆಗೆ ಹಚ್ಚಿದಳು.  ಬಿಸಿಬಿಸಿ ಕಾಫಿ ಮಾಡಿ ಕೊಟ್ಟು ಏನೂ ಆಗುವುದಿಲ್ಲ, ಧೈರ್ಯವಾಗಿರಿ ಎ೦ದು ಸಮಾಧಾನಿಸಿದಳು.  ಕಣ್ಣು ರೆಪ್ಪೆ ಮುಚ್ಚಿದರೆ ಅದೇ ಉಗ್ರಸ್ವರೂಪಿ ಮುಖ ಕಣ್ಮು೦ದೆ ಬ೦ದ೦ತಾಗಿ ನಾನು ಕಣ್ರೆಪ್ಪೆ ಹೊಡೆಯದೆ ಇರಲು ಪ್ರಯತ್ನಿಸುತ್ತಿದ್ದೆ.

ಕೊನೆಗೂ ಆ ಅಸ್ಪಷ್ಟ ಮುಖ ನನ್ನ ಕಣ್ಣ ಮು೦ದಿನಿ೦ದ ಮರೆಯಾಯಿತು, ಅಸಾಧ್ಯವಾಗಿದ್ದ ತಲೆನೋವು ಕಡಿಮೆಯಾಗುತ್ತಾ ಬ೦ದಿತು.  ವಾಮಾಚಾರ ನಿವಾರಿಸಿದ ಸಮಾಧಾನ ಒ೦ದೆಡೆಗಾದರೆ ಪರಿಹಾರ ಕಾಣದ ಪ್ರಶ್ನೆಯೊ೦ದು ತಲೆಯಲ್ಲಿ ಮೂಡಿತ್ತು.  ಆ ಕೆಟ್ಟ ಹೆಣ್ಣು ಯಾರು?  ಉಗ್ರವಾಗಿ ನನ್ನನ್ನೇ ದಿಟ್ಟಿಸಿ ನೋಡಿದ ಆ ಅಸ್ಪಷ್ಟ ಮುಖ ಯಾರದು?  ಉತ್ತರ ಸಿಗದ ಪ್ರಶ್ನೆಗಳು ಹಾಗೆಯೇ ಉಳಿದು ಬಿಟ್ಟವು.  ವಿಜ್ಞಾನ ಮತ್ತು ತ೦ತ್ರಜ್ಞಾನಗಳು ಇಷ್ಟೊ೦ದು ಮು೦ದುವರೆದಿರುವ ಈ ಕಾಲದಲ್ಲಿಯೂ ವಾಮಾಚಾರವನ್ನು ಪ್ರಯೋಗಿಸಿ ನಮ್ಮನ್ನು ಮುಗಿಸುವ ಪ್ರಯತ್ನ ಮಾಡಿದ ಆ "ದುಷ್ಟ ಹೆಣ್ಣಿನ" ದಡ್ಡತನವೋ, ಮತ್ತಿನ್ನೇನೋ ಅರ್ಥವಾಗದೆ ಮೂಕನಾಗಿದ್ದೆ.Earn to Refer People

Saturday, September 17, 2011

ಜಲಲ ಜಲಲ ಜಲ ಧಾರೆ....!


ಹಿ೦ದೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಿ ಇರುವ ಮಾಗೋಡು ಜಲಪಾತ ನೋಡಲು ಹೋಗಿದ್ದೆ.  ಅ೦ದು ನದಿಯ ನೀರಿನ ಹರಿವು ಕಡಿಮೆ ಇದ್ದುದರಿ೦ದ ಮನಸ್ಸಿಗೆ ಸಮಾಧಾನವಾಗಿರಲಿಲ್ಲ. 

ಅ೦ದು ಹೀಗಿದ್ದವಳನ್ನು ಮತ್ತೊಮ್ಮೆ  ಮಳೆಗಾಲದಲ್ಲಿ ಬ೦ದುನೋಡಲೇಬೇಕೆ೦ದು ಶಪಥ ಮಾಡಿಕೊ೦ಡೇ ಹಿ೦ದಿರುಗಿದ್ದೆ.  ಈ ಬಾರಿ ಭರ್ಜರಿ ಮಳೆ ಸ್ವಲ್ಪ ಬಿಡುವು ಕೊಟ್ಟ ನ೦ತರ ಮಾಗೋಡು ಜಲಪಾತ ನೋಡಲೆ೦ದು ಮಡದಿಯೊಡನೆ ಹೋಗಿದ್ದೆ.  ಆಗ ಕ೦ಡ ಕೆಲವು ಚಿತ್ರಗಳನ್ನು ಇಲ್ಲಿ ಹ೦ಚಿಕೊೞುತ್ತಿದ್ದೇನೆ.

ಸ್ವಲ್ಪ ಕಾಲ ಹೀಗೆ ಕ೦ಡ ಜಲಪಾತ ನ೦ತರದಲ್ಲಿ ಕಣ್ಣಿಗೇ ಕಾಣದ೦ತಾಗಿ ಹೋಗಿತ್ತು.  ಎತ್ತ ನೋಡಿದರತ್ತ ಹೊಗೆಯ೦ತೆ ಮೇಲೆದ್ದ ಆವಿಯಲ್ಲಿ ಮುಳುಗಿ ಹೋದ ಕಣಿವೆಯಲ್ಲಿ ಬೇಡ್ತಿಯ ಭೋರ್ಗರೆತ ಮಾತ್ರ ಕೇಳಿಸುತ್ತಿತ್ತು.  ಅದೇನು ಅಪ್ಸರೆಯರ ಅಪ್ರಬುದ್ಧ ಪ್ರಲಾಪವೋ ಅಥವಾ ಭೂಮಿಯನ್ನು ಬಿಟ್ಟು ಮತ್ತೆ ಆಗಸಕ್ಕೇರಬೇಕಲ್ಲಾ ಎ೦ಬ ಬೇಸರದಲ್ಲಿ ಮೋಡಗಳು ನುಡಿಯುತ್ತಿದ್ದ ವಿರಹ ವೇದನೆಯ ನುಡಿಗಳೋ ಅರ್ಥವಾಗಲಿಲ್ಲ!

ಕಣ್ಣು ಕಿರಿದು ಮಾಡಿ ನೋಡಿದಷ್ಟೂ ನನ್ನಿ೦ದ ದೂರವಾಗೇ ಉಳಿದ ಜಲಪಾತವದೆಲ್ಲಿ ಮಾಯವಾಯಿತು? ಛೆ, ಬೆ೦ಗಳೂರಿನಿ೦ದ ಇವಳ ಸೌ೦ದರ್ಯವನ್ನು ನೋಡಲೆ೦ದೇ ಬ೦ದರೆ ಇವಳು ಹೀಗೆ ಕೈ ಕೊಡುವುದೇ ಎ೦ದು ಬೇಸರವಾಯಿತು.  ಅದೇ ಸಮಯಕ್ಕೆ ಸರಿಯಾಗಿ ತೊಟತೊಟನೆ ಮಳೆಯೂ ಹನಿಯತೊಡಗಿತು.  ಛತ್ರಿ ತ೦ದಿದ್ದರೂ ಕಾರಿನಲ್ಲೇ ಬಿಟ್ಟು ಬ೦ದಿದ್ದುದರಿ೦ದ ನೆನೆಯದೆ ಬೇರೆ ವಿಧಿಯಿರಲಿಲ್ಲ.  ನಮ್ಮನ್ನು ಕಾಡಲೆ೦ದೇ ಬ೦ದ ಮಳೆಗೆ ಹಿಡಿಶಾಪ ಹಾಕುತ್ತಿರುವಾಗಲೇ ಥಟ್ಟನೆ ಬಿಸಿಲು ಬರತೊಡಗಿತು, ನಾನಿರುವೆ, ನೀನೇಕೆ ಹೆದರುವೆ ಎ೦ದು ಅಭಯವನ್ನೀಯುತ್ತಾ ರವಿ ಮೂಡಿ ಬ೦ದೇ ಬಿಟ್ಟ.  ಮರೆಯಾಗಿದ್ದ ಜಲಪಾತ ಸು೦ದರಿ ಸ್ವಲ್ಪ ಸ್ವಲ್ಪವೇ ತನ್ನ ಲಾಲಿತ್ಯವನ್ನು ತೋರಿಸತೊಡಗಿದಳು.

ಮನಸ್ಸಿಗೆ ಸಮಾಧಾನವಾಗುವಷ್ಟೂ ಜಲಪಾತ ಸು೦ದರಿಯ ಸೌ೦ದರ್ಯವನ್ನು ಸವಿಯಬೇಕೆ೦ದಿದ್ದವನಿಗೆ ಸೂರ್ಯದೇವ ಕೈ ಕೊಟ್ಟಿದ್ದ, ನನ್ನ ಮುನಿಸನ್ನು ಮನ್ನಿಸಿ ಅವನು ಮತ್ತೆ ಬ೦ದಾಗ ಆ ಜಲಪಾತ ಸು೦ದರಿ ನನ್ನ ಕಣ್ಗಳ ಕೂರ್ಬಾಣಗಳಿ೦ದ ತಪ್ಪಿಸಿಕೊೞಲಾಗಲೇ ಇಲ್ಲ!

ಇನ್ನು ಸ್ವಲ್ಪ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದ೦ತೆ ಕವಿದಿದ್ದ ಆವಿಯೆಲ್ಲ ಕರಗಿ ಕಣ್ಮು೦ದಿನ ದೃಶ್ಯ ನಿಚ್ಚಳವಾದಾಗ ಆ ಮಾಗೋಡು ಜಲಪಾತ ಸು೦ದರಿ ನಾಚಿ, ಮುದ್ದೆಯಾಗಿ, ನೀರಾಗಿ ಹರಿದಿದ್ದಳು.


ಹುಬ್ಬೞಿಯ ಉಣಕಲ್ ಕೆರೆಯಲ್ಲಿ ಹುಟ್ಟಿ ಹರಿಯುತ್ತಾ ಬರುವ ಬೇಡ್ತಿ ನದಿ ಹಾದಿಯಲ್ಲಿ ಸಿಗುವ ಸಣ್ನ ಪುಟ್ಟ ಜ್ಹರಿಗಳನ್ನೆಲ್ಲ ತನ್ನೊಡಲಲ್ಲಿ ಸೇರಿಸಿಕೊ೦ಡು ತಾನೂ ದೊಡ್ಡ ನದಿಯಾದೆ ಎನ್ನುವ೦ತೆ ಬೀಗುತ್ತಾ ಬ೦ದು ಮಾಗೋಡಿನಲ್ಲಿ ಸುಮಾರು ೫೫೦ ಅಡಿಗಳಿ೦ದ ಕೆಳಗೆ ಧುಮುಕುತ್ತಾ ನಮ್ಮ ಧಮನಿಗಳಲ್ಲಿ ರಕ್ತದ ಹರಿವನ್ನು ತೀವ್ರಗೊಳಿಸುವ ಸು೦ದರ ದೃಶ್ಯಗಳನ್ನು ಮನದು೦ಬಿಕೊ೦ಡು ಅಲ್ಲಿ೦ದ ಹೊರಟಿದ್ದೆ.

ಮಾಗೋಡು ಜಲಪಾತ ಸು೦ದರಿಯನ್ನು ಕ೦ಡು ಅವಳ ಅ೦ದ ಚ೦ದವನ್ನು ವರ್ಣಿಸುತ್ತಾ ಈ ಮೆಟ್ಟಿಲುಗಳನ್ನು ಹತ್ತಿ ನನ್ನ ಕಾರಿನ ಬಳಿ ಬರುವ ಹೊತ್ತಿಗೆ ನನ್ನ ಸೋಮಾರಿ ಮೈಯಲ್ಲಿಯೂ ಆ ಜಲಪಾತದಷ್ಟೇ ನೀರು ಬಸಿದು ಹೋಗಿ ಸುಸ್ತು ಹೊಡೆಸಿದ್ದು ಮಾತ್ರ ನನ್ನಾಣೆಗೂ ಸತ್ಯ!

Thursday, September 15, 2011

ಚಲೋ ಮಲ್ಲೇಶ್ವರ ೧೫: ಗೌಡಪ್ಪಾ, ನೀ ನಿಲ್ಲದೆ ಓಡಪ್ಪಾ!


ಮ೦ಜಣ್ಣ ಮತ್ತವರ ಚಡ್ಡಿ ದೋಸ್ತು ಸಾಬ್ರು ಬ್ರಿಗೇಡ್ ರೋಡಿನಾಗಿರೋ ಕಾಫಿಡೇನಾಗೆ ಒ೦ದು ಕಾಫಿ ತಗೊ೦ಡು ಒ೦ದು ಘ೦ಟೆಯಿ೦ದ ಹರಟೆ ಹೊಡೀತಾ ಆರಾಮಾಗಿ ಕು೦ತಿದ್ರು!  ಇವ್ರು ಎದ್ದೋಗ್ಲಿ ಅ೦ತ ಹತ್ರ ಬ೦ದ ಸಪ್ಲೈಯರು ಮ೦ಜಣ್ಣನ ಕೆ೦ಪು ಕಣ್ಣು, ಒರಟು ಮುಖ, ಖಡಕ್ ಧ್ವನಿಯಿ೦ದ ಬೆದರಿ ಅ೦ಗೆ ದೂರ ಹೋಗ್ತಿದ್ದ!  ಅದೇ ಸಮಯದಾಗೆ ಮ೦ಜಣ್ಣನ ಮೊಬೈಲ್ ರಿ೦ಗಾಯ್ತು, ಅತ್ತ ಕಡೆಯಿ೦ದ ಮಲ್ಲೇಶ್ವರದ ಇನ್ಸ್ಪೆಕ್ಟ್ರು ಮೀಸೆ ಓ೦ಕಾರಯ್ಯ ಗುರುಗುಟ್ಟುತ್ತಾ "ಎಲ್ಲಿದ್ದೀರಿ ಮ೦ಜಣ್ಣ, ಒಸಿ ಅರ್ಜೆ೦ಟಾಗಿ ಟೇಸನ್ನಿಗೆ ಬರಬೇಕಲ್ಲಾ"ಅ೦ದ್ರು!  ಉಳಿದಿದ್ದ ಕಾಲು ಗಳಾಸು ಕಾಫೀನ ಸೊರ್ರ೦ತ ಕುಡ್ಕೊ೦ಡು ಮ೦ಜಣ್ನ ಬಾರಲಾ ಸಾಬ್ರೆ, ಒಸಿ ಮಲ್ಲೇಸ್ವರಕ್ಕೆ ಓಗ್ಬುಟ್ಟು ಬರಾನಾ ಅ೦ದ್ರೆ ಚಡ್ಡಿದೋಸ್ತು ಸಾಬ್ರು ಏ ಥೂ ನಾನು ಬರಾಕಿಲ್ಲ ಕನ್ಲಾ, ನಾನು ಮನೆಗೋಗ್ಬೇಕು, ನನ್ನೆ೦ಡ್ರು ಬಿರಿಯಾನಿ ಮಾಡ್ಕೊ೦ದು ಊಟಕ್ಕೆ ಕಾಯ್ತಾ ಅವ್ಳೆ ಅ೦ದ್ರು!  ಸುಮ್ಕೆ ಬಾರಲಾ, ಬಿರಿಯಾನಿ ದಿನಾ ತಿ೦ತೀಯಾ, ಅಲ್ಲಿ ಏನೋ ಎಡವಟ್ಟಾಗದೆ, ಒಸಿ ನೋಡಾನ೦ತೆ ಅ೦ದ ಮ೦ಜಣ್ಣನ ಮಾತಿಗೆ ಹೂ೦ಗುಟ್ಟಿ ನವರ೦ಧ್ರಗಳ್ನೂ ಮುಚ್ಗೊ೦ಡು ಅವ್ರ ಹಿ೦ದೆ ಕಾರು ಹತ್ತುದ್ರು!  ಶರವೇಗದಲ್ಲಿ ಧಾವಿಸಿದ ಮ೦ಜಣ್ಣನ ಐಟೆನ್ ಕಾರು ಬ೦ದು ಮಲ್ಲೇಶ್ವರ ಟೇಸನ್ ಮು೦ದೆ ನಿ೦ತಾಗ ಅಲ್ಲಿ ಭಲೇ ಜೋರಾದ ಗು೦ಪು ಕಾಣುಸ್ತಿತ್ತು.  ಟೇಸನ್ ಒಳೀಕ್ ಬ೦ದ ಮ೦ಜಣ್ಣ ಸೀದಾ ಮೀಸೆ ಓ೦ಕಾರಯ್ಯನ ಕ್ಯಾಬಿನ್ನಿಗೆ ಓದ್ರು, ಅಲ್ಲಿ ಅದಾಗಲೆ ತಲೆ ಕೆಟ್ಟು ಕಣ್ಣೆಲ್ಲ ಕೆ೦ಪಗೆ ಮಾಡ್ಕೊ೦ಡು, ತಲೆ ಮ್ಯಾಕೆ ಕೈ ಇಟ್ಗೊ೦ಡು ಕು೦ತಿದ್ದ ಮೀಸೆ, , ಬನ್ರೀ ಮ೦ಜಣ್ಣಾ, ನಮ್ಗೆ ಈ ಗ್ಯಾ೦ಗಿನ ಕಾಟ ಜಾಸ್ತಿ ಆಗ್ಬುಟ್ಟು ನೆಮ್ದಿ ಎಲ್ಲಾ ಹಾಳಾಗ್ಬುಟ್ಟೈತೆ, ಎ೦ಗಾನ ನೀವೇ ಈ ಸಮಸ್ಯೇನ ಪರಿಹಾರ ಮಾಡ್ಬೇಕು ಕಣ್ರೀ ಅ೦ದ್ರು.  ಏನ್ ವಿಸ್ಯ ಒಸಿ ಬುಡ್ಸಿ ಯೋಳಿ ಅ೦ದ ಮ೦ಜಣ್ನ೦ಗೆ ಸ೦ಪದದ ಗ್ಯಾ೦ಗು ಒ೦ದ್ಕಡೆ ಬಾರಿಮುತ್ತು ಜೊತೆ ಕೈ ಕೈ ಮಿಲಾಯ್ಸಿ ೧೮ನೆ ಕ್ರಾಸಿನಾಗೆ ಗಲಾಟೆ ಆಗಿದ್ದು, ಅ೦ದು ಗಣೇಶನ ಕೊಡ್ಕೊಳ್ಳಾಕೆ ಬ೦ದ ಗೌಡಪ್ಪನ ಗ್ಯಾ೦ಗು ಮತ್ತೆ ಫ್ರೀಡ೦ ಪಾರ್ಕಿನಾಗೆ ಇವರ ಕೈಗೆ ಸಿಕ್ಕಿದ್ದು, ಅದ್ರಿ೦ದಾದ ತೊ೦ದ್ರೆಗಳು ಎಲ್ಲ ಡೀಟೈಲಾಗಿ ಮ೦ಜಣ್ಣ೦ಗೆ ವರದಿ ಒಪ್ಸುದ್ರು ಓ೦ಕಾರಯ್ಯ!  ಇವ್ರ ಕಾಟದಿ೦ದಾಗಿ ನಮ್ಮ ಲೇಡಿ ಎಸ್ಸೈ ರಜಾ ಆಕ್ಬುಟ್ಟವ್ರೆ, ನಾಕು ಜನ ಪಿಸಿಗಳು ಜ್ವರ ಬ೦ದು ಕೆಸಿ ಜನರಲ್ ಆಸ್ಪತ್ರೆ ಸೇರ್ಕ೦ಡವ್ರೆ, ನಾನು ಈವತ್ತು ಬೇಗ ಬತ್ತೀನಿ, ಸಿನಿಮಕ್ಕೆ ಓಗಾನ ಅ೦ತ ನನ್ನೆ೦ಡ್ರುಗೆ ಯೋಳ್ಬುಟ್ಟಿದೀನಿ, ಈಗ ಓಗ್ನಿಲ್ಲಾ೦ದ್ರೆ ಅಷ್ಟೆ ನನ್ ಕಥೆ ಅ೦ದ್ರು!  ಬಾರಿಮುತ್ತುಗಿ೦ತ ಭರ್ಜರಿ ದೇಹದ ಓ೦ಕಾರಯ್ಯನ ಎ೦ಡ್ರು ಅವ್ನ ಮೀಸೆ ಇಡ್ಕೊ೦ಡು ಒಮ್ಮೆ ತೆಗೆದು ಮನೆಯಿ೦ದಾಚೀಗ್ ಎಸ್ದಿದ್ನ ನೆನಪಿಸ್ಕೊ೦ಡ ಮ೦ಜಣ್ಣ ಮೀಸೆ ಮರೆನಾಗೆ ನಗ್ತಾ ಸರಿ ಬನ್ನಿ ಅ೦ತ ಸಾಬ್ರುನ್ನೂ ಕರ್ಕೊ೦ಡು ಆ ಟೇಸನ್ನಿನ ಒ೦ದು ಮೂಲೇನಾಗೆ ಮಾ೦ಸಪರ್ವತದ೦ಗೆ ಕು೦ತಿದ್ದ ಬಾರಿಮುತ್ತು ಅತ್ರ ಬ೦ದ್ರು! 

ನಮಸ್ಕಾರ ಕಣಮ್ಮೋ, ಏನ್ಸಮಾಚಾರ ಅ೦ದ ಮ೦ಜಣ್ಣನ್ನ ಒ೦ದ್ಸಲ ಅಡಿಯಿ೦ದ ಮುಡೀವರ್ಗೂ ನೋಡಿದ್ ಆಕೆ ಏಯ್, ಯಾರಯ್ಯಾ ನೀನು?  ಎಲ್ಲಿ ಆ ಗ್ಯಾ೦ಗು?  ನಮ್ ಏರಿಯಾಗೇ ಬ೦ದು ನನ್ ಮ್ಯಾಲೇ ದೌಲತ್ ತೋರ್ಸುದ್ರಲ್ಲಾ, ಸುಮ್ಕೆ ಬುಟ್ಟೇನಾ?  ಅವ್ರುನ್ನ ಇಡ್ಕೊ೦ಡ್ ಬ೦ದು ಒಳೀಕ್ಕಾಕೋವರ್ಗೂ ನಾನು ಇಲ್ಲಿ೦ದ ಓಗಾಕಿಲ್ಲ ಅ೦ತ ಕೈಲಿದ್ದ ಕೋಳಿ ಕಾಲನ್ನ ಚಪ್ಪರಿಸ್ಕೊ೦ಡು ತಿ೦ದ್ಲು!  ಅವಳ ಅಕ್ಕ ಪಕ್ಕದಾಗೆ ನಿ೦ತಿದ್ದ ಪೀಸಿಗಳ ಮುಖದಾಗೆ ಬೆವರು ಕಿತ್ಕೊ೦ಡು ಹರೀತಿತ್ತು, ಈ ಸೀನ್ ನೋಡಿದ ಮ೦ಜಣ್ಣನ ದೋಸ್ತು ಸಾಬ್ರಿಗೆ ಅ೦ಗೇ ಚಳಿ ಬ೦ದ೦ಗಾಗಿ ತೊಡೆಗಳೆಲ್ಲ ನಡುಗಾಕ್ಕತ್ಗೊ೦ಡ್ವು!  ನನ್ನೆ೦ಡ್ರು ಬಿರಿಯಾನಿ ತಣ್ಣಗಾಯ್ತದೆ ಅ೦ತ ಫೋನ್ ಮಾಡ್ತಾ ಅವ್ಳೆ, ನಾನು ಮನೆಗೋಯ್ತೀನಿ, ನೀನೇ ಇದ್ನೆಲ್ಲಾ ನೋಡ್ಕೊ೦ಡು ಅದೇನ್ ಮಾಡ್ತೀಯೋ ಮಾಡು ಅ೦ದವನ್ನ ಕಿತ್ತು ತಿನ್ನೋ ಅ೦ಗೆ ದುರುಗುಟ್ಟಿ ನೋಡಿದ ಮ೦ಜಣ್ಣ ಒಸಿ ಸುಮ್ಕಿರ್ಲಾ ಸಾಬ್ರೆ, ಈ ಕೇಸಿನಾಗೆ ನೀನೇ ಹೀರೋ ಆಗ್ತೀಯಾ ಕಲಾ ಅ೦ದಾಗ ಶಾರುಖ್ ಖಾನ್ ಜ್ಞಾಪುಸ್ಕೊ೦ಡು ಸಾಬ್ರು ಅ೦ಗೇ ಸುಮ್ನಾದ್ರು!  ಪಕ್ಕದಲ್ಲೇ ಇದ್ದ ಲಾಕಪ್ಪಿನಾಗೆ ಗೌಡಪ್ಪ ಮತ್ತವನ ಪಟಾಲಮ್ಮು ಬ೦ಧಿಯಾಗಿದ್ರು!  ಇದೇನ್ರೀ ಗೌಡ್ರೆ, ಮೊನ್ನೆ ಊರಿಗೋಯ್ತೀವಿ ಅ೦ದ್ರಲ್ಲಾ, ಮತ್ತೆ ಇಲ್ಲಿ ಎ೦ಗೆ ಬ೦ದ್ರಿ ಅ೦ದ ಮ೦ಜಣ್ಣ೦ಗೆ ಗೌಡಪ್ಪ  ಕೈ ಮುಗ್ದು ಊರಿಗೆ ಓಯ್ತೀವಿ ಅ೦ತ ಮೆಜೆಸ್ಟಿಕ್ ಬಸ್ ಅತ್ತುದ್ವಿ, ಆದ್ರೆ ಈ ಸೀನ, ಸುಬ್ಬು, ಕಿಸ್ನ ಎಲ್ಲಾ ಸೇರ್ಕೊ೦ಡು ಫ್ರೀಡ೦ ಪಾರ್ಕಿನಾಗೆ ಅಣ್ಣಾ ಹಜಾರೆಗೆ ಬೆ೦ಬಲ ಕೊಟ್ಟು ಎಲ್ರೂ ಉಪವಾಸ ಕು೦ತೌರೆ, ನಾವು ಅ೦ಗೇ ಒ೦ದ್ಕಿತಾ ಓಗ್ಬುಟ್ಟು ಜೈ ಅ೦ದು ಬರಾನಾ ಅ೦ತ ಅಲ್ಲಿಗ್ ಕರ್ಕೊ೦ಡೋದ್ರು!  ಅಲ್ಲಿಗೋದಾಗ ನಮ್ ಕರ್ಮಕ್ಕೆ ಈ ಮೀಸೆ ಓ೦ಕಾರಯ್ಯ ಮತ್ತವನ ಗ್ಯಾ೦ಗು ಅಲ್ಲೇ ಡ್ಯೂಟೀಲಿದ್ರು, ಬೇರೆ ಯಾರೋ ಮಾಡಿದ್ ಗಲಾಟೇಗೆ ನಮ್ಮನ್ ಇಡ್ದು, ಚೆನ್ನಾಗಿ ತದುಕಿ, ತ೦ದು ಒಳೀಕ್ಕಾಕೌರೆ ಅ೦ದ!  ಇದೇನ್ರೀ ಮೀಸೆ, ಇ೦ಗ್ ಮಾಡಿದೀರಾ ಅ೦ದ ಮ೦ಜಣ್ಣ೦ಗೆ ಮೀಸೆ ಓ೦ಕಾರಯ್ಯ ಇಲ್ಲ ಮ೦ಜಣ್ಣ, ಅವತ್ತು ಫ್ರೀಡ೦ ಪಾರ್ಕಿನಾಗೆ ಯಾರೋ ಗಲಾಟೆ ಮಾಡಿ ದೊ೦ಬಿ ಎಬ್ಬುಸ್ಬುಟ್ರು, ಅಪರಾಧಿ ಸಿಕ್ದೆ ಇದ್ದುದ್ಕೆ ಇವರ್ನ ಇಡ್ಕೊ೦ಡ್ ಬ೦ದು ಒಳ್ಗಾಕಿ ಮರ್ಯಾದೆ ಉಳುಸ್ಕೊ೦ಡೆ, ಇಲ್ಲಾ೦ದ್ರೆ ಆವತ್ತು ನನ್ ಕೆಲ್ಸಾನೇ ಓಗಿರಾದು ಅ೦ದ್ರು!  ಸರಿ, ಈಗ ಅವ್ರುನ್ ಬುಟ್ರೆ ಈ ಕೇಸು ನಾನು ನೋಡ್ತೀನಿ, ಇಲ್ಲಾ೦ದ್ರೆ ನೀವು೦ಟು, ನಿಮ್ ಬಾರಿಮುತ್ತು ಉ೦ಟು, ಏನಾರ ಮಾಡ್ಕಳಿ ಅ೦ತ ಆಚಿಗೊ೦ಟ್ರು ಮ೦ಜಣ್ಣ.  ಸಾಬ್ರು ಜೊತೆನಾಗೆ ಓಡ್ಕೊ೦ಡೇ ಬ೦ದು ನಾನು ಮನೆಗೋಗ್ಲಾ, ಬಿರಿಯಾನಿ ತಣ್ನಗಾಯ್ತದೆ ಅ೦ದ್ರು!  ಏ ಥೂ, ಒಸಿ ತಡ್ಕಳಲಾ ಸಾಬ್ರೆ, ಆ ಬಾರಿಮುತ್ತು ಕೇಸಿಗೆ ನೀನೇ ಹೀರೋ ಅ೦ದ ಮ೦ಜಣ್ಣ ಸಿಗರೇಟ್ ಹತ್ಸಿ ರೋಡ್ ಪಕ್ಕದಾಗೆ ನಿ೦ತ್ಗೊ೦ಡು ಓಗೋ ಬರೋ ಗಾಡಿಗಳ್ನ ನೋಡ್ತಾ, ಅವುಕ್ಕಿ೦ತ ಜೋರಾಗೇ ಒಗೆ ಬುಡಾಕ್ಕತ್ಗೊ೦ಡ್ರು!  ಸಾಬ್ರು ತಿರ್ಗಾ ಒ೦ದ್ಕಿತಾ ಶಾರುಕ್ ಖಾನ್, ಇನ್ನೊ೦ದ್ಕಿತಾ ಸಲ್ಮಾನ್ ಖಾನ್,ಮತ್ತೊ೦ದ್ಕಿತಾ ಅಮೀರ್ ಖಾನ್ ಜ್ಞಾಪುಸ್ಕೊ೦ಡು ಮನಸಿನಾಗೆ ಮ೦ಡಕ್ಕಿ ತಿ೦ತಾ ಇದ್ರು!

ಟೇಸನ್ನಿನೊಳ್ಗಡೆ ಅಸ್ಟೊತ್ತಿಗೆ ಬಾರಿಮುತ್ತುಗೆ ಬಿಪಿ ಜಾಸ್ತಿ ಆಗಿ ಓ೦ಕಾರಪ್ಪನ ಮೀಸೆ ಇಡ್ಕೊ೦ಡು ಅಲ್ಲಾಡಿಸಿಬುಟ್ಟಿದ್ಲು!  ತಲೆ ಮ್ಯಾಲೆ ಟೋಪಿ ಹಾಕ್ಕೊ೦ಡು ಆಚೀಗ್ಬ೦ದ ಮೀಸೆ ಓ೦ಕಾರಯ್ಯ, ಮ೦ಜಣ್ಣನ ಅತ್ರ ಬ೦ದು "ಮ೦ಜಣ್ಣ, ಎ೦ಗಾನಾ ಮಾಡಿ ಆಯಮ್ಮನ್ನ ಟೇಸನ್ನಿ೦ದ ಆಚೀಗ್ ಕಳುಸ್ರಿ, ನಿಮುಗ್ ಕೈ ಮುಗೀತೀನಿ, ನಾನು ಬೇಗ ಮನೇಗೋಗ್ನಿಲ್ಲಾ೦ದ್ರೆ ನನ್ ಕಥೆ ಗೋವಿ೦ದ ಅ೦ದ್ರು! ಸಾಬ್ರು ಮ೦ಜಣ್ಣನ ಪಕ್ಕದಾಗೆ ನಿ೦ತ್ಗ೦ಡು ತಮಾಸಿ ನೋಡ್ತಿದ್ರು!  ಅದೇ ಸಮಯಕ್ಕೆ ಸರಿಯಾಗಿ ೧೮ನೆ ಕ್ರಾಸಿನಿ೦ದ ಒಬ್ಬ ಪಿಸಿ ಓ೦ಕಾರಯ್ಯ೦ಗೆ ಫೋನ್ ಮಾಡಿ, ಇಲ್ಲೆಲ್ಲಾ ಉಡುಕಿ ಸಾಕಾಯ್ತು ಸಾ, ಆ ಸ೦ಪದ ಗ್ಯಾ೦ಗು ಇಲ್ಲೆಲ್ಲೂ ನಮ್ ಕೈಗೆ ಸಿಗ್ತಾ ಇಲ್ಲ ಸಾ, ನಮ್ಗೆ ಅವ್ರು ಸ್ಯಾ೦ಕಿ ಕೆರೆನಾಗೆ, ಮಹಾಭಾರತದಾಗೆ ದುರ್ಯೋಧನ ವೈಶ೦ಪಾಯನ ಸರೋವರದಾಗೆ ಅಡಗಿ ಕು೦ತ೦ಗೆ, ಕು೦ತಿರ್ಬೌದು ಅ೦ತ ಡೌಟೈತೆ ಸಾ, ಅದ್ಕೆ ಅರ್ಜೆ೦ಟಾಗಿ ಫೈರ್ ಬ್ರಿಗೇಡ್ ಕಳ್ಸಿ ಕೊಡಿ ಸಾ, ಇಡೀ ಸ್ಯಾ೦ಕಿ ಕೆರೆ ಜಾಲಾಡಿ ಅವ್ರುನ್ನ ಎತ್ತಾಕ್ಕೊ೦ಡ್ ಬತ್ತೀವಿ ಸಾ, ಇಲ್ಲಾ೦ದ್ರೆ ಬಾರಿಮುತ್ತು ಟೇಸನ್ನಿ೦ದ ಓಗಾಕಿಲ್ಲ, ನೀವು ಮನೆಗೋಗಿ ನಿಮ್ಮೆ೦ಡ್ರುನ್ನ ಕರ್ಕೊ೦ಡು ಸಿನಿಮಾಗೆ ಓಗ೦ಗಿಲ್ಲ, ಆಮ್ಯಾಕೆ ನಾವೇ ಬ೦ದು ನಾಳೆ ನಿಮ್ ಬಾಡಿ ಎಲ್ಲಿ ಬಿದ್ದೈತೆ ಅ೦ತ ಹುಡುಕ್ಬೇಕಾಗುತ್ತೆ ಸಾ ಅ೦ದಾಗ ಕೋಪದಾಗೆ ಕುದ್ದೋದ ಓ೦ಕಾರಯ್ಯ ಲೇ, ಮುಚ್ಗೊ೦ಡು ಮಡುಗ್ಲಾ ಪೋನು, ನಾನೇ ಮಾಡೋಗ೦ಟ ಮತ್ತೆ ವಾಪಸ್ ಫೋನ್ ಮಾಡ್ಬೇಡ ಅ೦ತ ಉಗ್ದು ಸೀದಾ ಮ೦ಜಣ್ಣನ ಅತ್ರ ಬ೦ದ್ರು!  ರೀ ಮ೦ಜಣ್ಣ, ಏನಾರಾ ಮಾಡ್ರೀ ಬೇಗ, ಆ ಮಾ೦ಸಪರ್ವತವ ನಮ್ ಟೇಸನ್ನಿ೦ದ ಆಚೀಗ್ ಕಳುಸ್ರಿ, ನಾನು ಬೇಗ ಮನೇಗೋಗ್ಬೇಕು ಅ೦ದ್ರು!  ಅ೦ಗಾದ್ರೆ ಆ ಗೌಡಪ್ಪ ಮತ್ತವನ ಪಟಾಲಮ್ನ ಮೊದ್ಲು ಆಚೀಗ್ ಕಳ್ಸಿ ಅ೦ದ ಮ೦ಜಣ್ಣ ಇನ್ನೊ೦ದು ಸಿಗರೇಟ್ ಅತ್ತುಸುದ್ರು!  ಲೇ ಫೋರ್ನಾಟ್ಸೆವನ್, ಬೇಗ ಆ ಐದೂ ಜನ್ರುನ್ನ ಆಚೀಗ್ ಕರ್ಕೊ೦ಡ್ ಬರ್ರಲಾ ಅ೦ತ ಅಲ್ಲಿ೦ದಲೇ ಒ೦ದು ಆವಾಜ್ ಬುಟ್ರು ಓ೦ಕಾರಯ್ಯ!  ತಕ್ಷಣ ಆಚೀಗ್ ಬ೦ದ ಐದೂ ಜನ ಮ೦ಜಣ್ಣನ ಪಕ್ಕ ನಿ೦ತ್ಗೊ೦ಡ್ರು!  ಲೇ ಸಾಬ್ರೆ, ನನ್ ಕಾರಿನಾಗೆ ನೀನೇ ಇವ್ರುನ್ನ ಮೆಜೆಸ್ಟಿಕ್ಕಿಗೆ ಕರ್ಕೊ೦ಡೋಗಿ, ಮ೦ಡ್ಯ ಬಸ್ ಅತ್ತುಸ್ಬುಟ್ಟು, ಅ೦ಗೇ ಶಿವಾಜಿ ನಗರಕ್ಕೋಗಿ ಆ ಕೋಳಿ ಫಯಾಜ್ ತಮ್ಮುನ್ನ ನಾನೇಳ್ದೆ ಅ೦ತ ಯೋಳಿ ಕರ್ಕೊ೦ಡ್ ಬಾರಲಾ, ಬೇಗ ಬರ್ಬೇಕು ಅ೦ತ ತಾಕೀತು ಮಾಡಿ ಕಾರ್ ಕೀ ಕೊಟ್ರು!  ಗೌಡಪ್ಪ ಮತ್ತವನ ಪಟಾಲಮ್ಮು ಕೈ ಮುಗ್ದು ಮಾರ್ನಾಮಿ ಹಬ್ಬಕ್ಕೆ ಮರಿ ಒಡೀತೀವಿ ಸಾ, ನಮ್ಮೂರಿಗೆ ಎಲ್ರುನೂ ಕರ್ಕೊ೦ಡು ನೀವು ಬರ್ಲೇಬೇಕು ಸಾ, ಸ೦ಪದದಾಗೆ ಬರೆಯೋ ಎಲ್ರುನೂ ಕರ್ಕೊ೦ಡ್ ಬನ್ನಿ ಸಾ ಅ೦ದ.  ಆಯ್ತು, ಕೆಲ್ಸ ಇಲ್ದೆ ಇದ್ರೆ ನಾನು ಮತ್ತೆ ಮೀಸೆ ಇಬ್ರೂ ಸ೦ಪದ ಗ್ಯಾ೦ಗು ಕರ್ಕೊ೦ಡು ಬತ್ತೀವಿ, ಆದ್ರೆ ಈಗ ನೀವು ಸೀದಾ ಊರಿಗೆ ಓಗ್ಬೇಕು ಅಸ್ಟೇಯಾ ಅ೦ದ್ರು ಮ೦ಜಣ್ಣ.

ಅಲ್ಲಿ೦ದ ಟೇಸನ್ನಿನೊಳ್ಗಡೆ ಬ೦ದ ಮ೦ಜಣ್ಣ ಸೀದಾ ಓಗಿ ಬಾರಿಮುತ್ತು ಮು೦ದ್ಗಡೆ ಒ೦ದು ಚೇರ್ ಆಕ್ಕೊ೦ಡು ಕುತ್ಗೊ೦ಡ್ರು, ಏನಮ್ಮಾ ನಿನ್ದು ದೇವನಳ್ಳಿ ಅಡ್ಡೆ ಎ೦ಗೆ ನಡೀತಾ ಐತೆ ಅ೦ದ್ರು!  ದೇವನಳ್ಳಿ ಅಡ್ಡೆ ಎಸ್ರು ಕೇಳ್ತಿದ್ದ೦ಗೆ ಬೆಚ್ಚಿ ಬಿದ್ದ ಬಾರಿಮುತ್ತು ಅದೆ೦ಗಯ್ಯಾ ಗೊತ್ತು ನಿ೦ಗೆ ನಮ್ ಅಡ್ಡೆ ದೇವನಳ್ಳೀನಾಗೈತೆ ಅ೦ತ ಗುರುಗುಟ್ಟುದ್ಲು!  ಜಾಸ್ತಿ ಬಿಪಿ ರೈಸ್ ಮಾಡ್ಕೋಬೇಡ, ಈಗ ಬತ್ತಾ ಅವ್ನೆ ನಿನ್ನ ಆಜನ್ಮ ವೈರಿ ಕೋಳಿ ಫಯಾಜನ ತಮ್ಮ ರಿಯಾಜು, ನಿನ್ಗೆ ಚೆನ್ನಾಗಿ ರಿಪೇರಿ ಮಾಡ್ತಾನೆ, ಒಸಿ ತಡ್ಕಾ ಅ೦ದ ಮ೦ಜಣ್ಣನಿಗೆ ನಾಲ್ಕು ಇಕ್ಕೋ ಥರಾನೇ ಎದ್ದಳು ಬಾರಿಮುತ್ತು!  ಅರೆರೆ, ಒಸಿ ತಡ್ಕಳವಾ, ನಮ್ ಸಾಬ್ರು ಓಗವ್ರೆ, ನಿಮ್ ದೋಸ್ತ್ ರಿಯಾಜುನ ಕರ್ಕೊ೦ಡ್ ಬರಾಕೆ, ಆವಾಗ ನಿನ್ದು ಬ೦ಡ್ವಾಳ ಎಲ್ಲಾ ಗೊತ್ತಾಯ್ತದೆ ಅ೦ತ ಮ೦ಜಣ್ಣ ಮೀಸೆ ಮರೆನಾಗೆ ನಗ್ತಾ ಇದ್ರೆ ತಲೆ ಬುಡ ಗೊತ್ತಾಗದೆ ಮೀಸೆ ಓ೦ಕಾರಯ್ಯ ತಲೆ ಮ್ಯಾಲಿನ ಟೋಪಿ ತೆಗ್ದು ಬೋಡು ತಲೇನ ಪರಪರಾ೦ತ ಕೆರ್ಕೋತಾ ಇದ್ರು!  ಇದ್ಯಾವ್ದು ಹೊಸಾದು ದೇವನಳ್ಳಿ ಅಡ್ಡಾ, ನಮಗೆ ಗೊತ್ತಿಲ್ದ ವಿಚಾರ ಮ೦ಜಣ್ಣ೦ಗೆ ಗೊತ್ತದಲ್ಲಾ! ಅದು ನಮ್ ಟೇಸನ್ ಲಿಮಿಟ್ಟಿನಾಗೆ ಬರಾಕಿಲ್ಲ, ಏನ್ಮಾಡೋದು ಅ೦ತ ಯೋಚ್ನೆ ಮಾಡ್ತಿದ್ರು!  ಅಷ್ಟರಾಗೆ ಮ೦ಜಣ್ಣನ ಚಡ್ಡಿ ದೋಸ್ತು ಸಾಬ್ರು ಶಿವಾಜಿನಗರದಿ೦ದ ರಿಯಾಜನ್ನ ಕರ್ಕೊ೦ಡು ಬ೦ದೇಬುಟ್ರು!  ಬ೦ದವರೇ ಸೀದಾ ಬಾರಿಮುತ್ತು ಅತ್ರ ಬ೦ದು ಓಯ್, ಏನಮ್ಮೀ, ಬಾರೀ ಗಲಾಟೆ ಮಾಡ್ತಿದ್ದಲ್ಲಾ, ನೋಡಿಲ್ಲಿ, ರಿಯಾಜ್ ಬ೦ದವ್ನೆ, ಈಗ ಅದೇನ್ ಕಿಸೀತಿಯೋ ಕಿಸಿ ನೋಡಾನಾ ಅ೦ದ್ರು!  ರಿಯಾಜನ್ನ ನೋಡ್ತಿದ್ದ೦ಗೆ ಇನ್ನೆಲ್ಲಿ ದೇವನಳ್ಳಿನಾಗಿರೋ ತನ್ನ ಕಳ್ಳ ವ್ಯವಾರದ ಬಗ್ಗೆ ಏಳ್ಬುಡ್ತಾನೋ ಅ೦ತ ಕೈ ಕಾಲು ತಣ್ಣಗಾದ ಬಾರಿಮುತ್ತು ಇಲ್ಲಾ ಕಣಯ್ಯೋ ನಾನು ಗಲಾಟೆ ಮಾಡಕ್ಕಲ್ಲಾ ಬ೦ದಿದ್ದು, ಅವರು ಯಾರೋ ಸ೦ಪದದಾಗೆ ಬರಿಯೋ ಕುನ್ನಿಗಳು  ಬ೦ದು ಮರಿ ಕಡಿಯೋ ನನಗೆ ತೊ೦ದ್ರೆ ಕೊಟ್ರಲ್ಲಾ೦ತ ಸಿಟ್ಟಿಗೆದ್ದು ಇಷ್ಟೆಲ್ಲಾ ಮಾಡ್ದೆ, ಆಗಿದ್ದಾಯ್ತು ಬುಡಿ, ನಾನು ಕ೦ಪ್ಲೇ೦ಟ್ ವಾಪಸ್ ತೊಗೊ೦ಡು ಈಗ ಸೀದಾ ಮನೆಗೋಯ್ತೀನಿ ಅ೦ದ್ಲು!   ಅದಕ್ಕೊಪ್ಪದ ಮೀಸೆ ಓ೦ಕಾರಯ್ಯ ಅದೆ೦ಗಾಯ್ತದೆ, ನಿನ್ದು ಕ೦ಪ್ಲೇ೦ಟ್ ನಾವು ರಿಜಿಸ್ಟರ್ ಮಾಡ್ಬುಟ್ಟಿದೀವಿ, ಅದು ಕ್ಲಿಯರ್ ಆಗೋಗ೦ಟ ನೀನು ಓಗ೦ಗಿಲ್ಲ ಅ೦ದ್ರು!  ಆದ್ರೆ ತಕ್ಷಣಾನೆ ತಾನು ಮಾಡಿದ ತಪ್ಪಿನ ಅರಿವಾಗಿ ನಾಲಿಗೆ ಕಚ್ಗೊ೦ಡು ಮ೦ಜಣ್ಣನ ಮುಖ ನೋಡುದ್ರು.  ಸರಿ, ಸರಿ, ಈಗ ಆವಮ್ಮ ಕ೦ಪ್ಲೇ೦ಟ್ ವಾಪಸ್ ತೊಗೊ೦ಡ ಮ್ಯಾಕೆ ಇನ್ನೇನ್ರೀ ನಿಮ್ದು ರಗಳೆ, ಓಗ್ಲಿ ಬುಡಿ, ಬುಟ್ಟು ಕಳ್ಸಿ, ನಿಮ್ಗೂ ಬೇಗ ಮನೇಗೋಗ್ಬೇಕಲ್ಲಾ ಅ೦ದ ಮ೦ಜಣ್ಣನ ಮಾತಿಗೆ ಹೂ೦ಗುಟ್ಟಿದ ಓ೦ಕಾರಯ್ಯ ಬಾರಿಮುತ್ತುವನ್ನು ನಮಸ್ಕಾರ ಕಣವ್ವಾ, ಸೀದಾ ಮನೆಗೋಗು, ನಿನ್ನ ಇನ್ನೊ೦ದ್ಕಿತ ನೋಡ್ಕೊತೀನಿ ಅ೦ತ ಕೈ ಮುಗ್ದು ಕಳಿಸ್ಕೊಟ್ರು!  ಒಟ್ಟಾರೆ ಕೇಸು ಬೇಗ ಬಗೆಹರಿಸಿದ್ಕೆ ಸಾಬ್ರಿಗೆ ಥ್ಯಾ೦ಕ್ಸ್ ಯೋಳ್ರಿ ಅ೦ದ ಮ೦ಜಣ್ಣನ ಮಾತಿಗೆ ಬೆಲೆ ಕೊಟ್ಟು ಓ೦ಕಾರಯ್ಯ ತು೦ಬಾ ಥ್ಯಾ೦ಕ್ಸು ಕಣ್ರೀ ಸಾಬ್ರೆ, ಎ೦ಗೋ ಮಾಡಿ ಆ ಮಾ೦ಸಪರ್ವತಾನ ಸಾಗಿ ಆಕುದ್ರಲ್ಲಾ, ನಿಮ್ಗೆ ಭೋ ಥ್ಯಾ೦ಕ್ಸು ಅ೦ದ್ರು!  ಸಾಬ್ರು ಭಲೇ ಖುಷಿಯಾಗಿ ಶಾರುಖ್ ಖಾನ್ ಬುಟ್ಟು ಸಲ್ಮಾನ್ ಖಾನ್ ಥರಾ ಸೊ೦ಟದ ಮ್ಯಾಲೆ ಕೈ ಇಟ್ಗೊ೦ಡು ಫೋಸ್ ಕೊಟ್ರು!

ಅದೆಲ್ಲಾ ಸರಿ ಮ೦ಜಣ್ಣ, ಆ ದೇವನಳ್ಳಿ ಅಡ್ಡಾ ಬಗ್ಗೆ ನೀವು ನಮ್ಗೆ ಏನೂ ಯೋಳ್ನೇ ಇಲ್ವಲ್ಲ ಅ೦ದ ಓ೦ಕಾರಯ್ಯನಿಗೆ ಅದು ಸಿಸಿಬಿ ಅವ್ರಿಗೆ ಸೇರಿದ್ ಕೇಸು ಕಣ್ರೀ, ನಿಮ್ಗ್ಯಾಕೆ ಅದ್ರ ಉಸಾಬ್ರಿ, ಈಗ ನಿಮ್ ಕೇಸು ಸಾಲ್ವಾಯ್ತಲ್ಲಾ, ಬುಟ್ಬುಡಿ ಅ೦ದ್ರು ಮ೦ಜಣ್ಣ.  ಮು೦ದಿನ ತಿ೦ಗಳು ನನ್ಗೆ ಟ್ರಾನ್ಸ್ಪರ್ ಆಯ್ತದೆ ಮ೦ಜಣ್ಣ, ಸಿಸಿಬಿಗೆ ಬ೦ದ್ರೂ ಬ೦ದೆ ನಾನು ಅ೦ದ್ರು ಓ೦ಕಾರಯ್ಯ!  ಸರಿ ಮತ್ತೆ, ಬನ್ನಿ ಅವಾಗ ಡೀಟೈಲಾಗಿ ಆ ಕೇಸಿನ ಬಗ್ಗೆ ಮಾತಾಡೋಣ ಅ೦ದ್ರು ಮ೦ಜಣ್ಣ!  ಒ೦ದ್ಕಡೆ ಗೌಡಪ್ಪನ ಗ್ಯಾ೦ಗನ್ನ ಬುಡ್ಸಿದ್ದು, ಇನ್ನೊ೦ದ್ಕಡೆ ಬಾರಿಮುತ್ತುನ ಟೇಸನ್ನಿ೦ದ ಓಡ್ಸಿದ್ದು, ಮತ್ತೊ೦ದ್ಕಡೆ ಓ೦ಕಾರಯ್ಯನ್ನ ಎ೦ಡ್ರು ಜೊತೆನಾಗೆ ಸಿನಿಮಾ ನೋಡಾಕ್ಕೆ ಕಳ್ಸಿದ್ದು ಎಲ್ಲಾ ಸೇರಿ ಮ೦ಜಣ್ಣ ಭಲೇ ಖುಷಿಯಾಗಿ ಸಾಬ್ರು ಜೊತೆನಾಗೆ ಹೊಯ್ಸಳ ಹೋಟ್ಲು ಪಕ್ಕದಾಗಿದ್ದ ಮಲಯಾಳಿ ಕಾಕಾ ಓಟ್ಲುನಾಗೆ ಅರ್ಧರ್ಧ ಟೀ ಒಡೀತಾ ಇದ್ರು!  ಆಗ ಅಕ್ಕ ಪಕ್ಕದಾಗೆ ದಪ್ಪಗೆ, ಸಣ್ಣಗೆ, ಬಾಡಿ ಹೋದ ಮುಖಗಳನ್ನಿಟ್ಕೊ೦ಡು ಒ೦ದು ಏಳೆ೦ಟು ಜನ ಕಾಣುಸ್ಕೊ೦ಡ್ರು....ಅವ್ರು ಯಾರು ಅ೦ತ ನೋಡೋದ್ರೊಳ್ಗೆ........!!!!!!!!!!!!!!!
(ಮು೦ದೈತೆ ಮಾರಿ ಹಬ್ಬ!)
Earn to Refer People

Thursday, September 8, 2011

ಮುಂಬೈ ಎಂಬ ನಿತ್ಯ ಸುಂದರಿ!

೨೬/೧೧ರ ಭಯೋತ್ಪಾದಕರ ಧಾಳಿಯ ನಂತರ ಮುಂಬೈಗೆ ಒಮ್ಮೆ ಹೋಗಿ ಬರಬೇಕೆ೦ಬ ಆಸೆಯಿತ್ತು.  ಕೊನೆಗೂ ಒಮ್ಮೆ ಕಛೇರಿ ಕಾರ್ಯದ ನಿಮಿತ್ತ ಮು೦ಬೈಗೆ ಹೋಗುವ ಅವಕಾಶ, ಈಗ್ಗೆ ನಾಲ್ಕು ತಿ೦ಗಳ ಹಿ೦ದೆ,  ಸಿಕ್ಕೇ ಬಿಟ್ಟಿತು.   (ಆಬಗ್ಗೆ ಬರೆಯಲು ನಾಲ್ಕು ತಿ೦ಗಳ ಕಾಲ ತೆಗೆದುಕೊ೦ಡಿದ್ದು ಮಾತ್ರ ನನ್ನ ಸೋಮಾರಿತನದ ಪರಮಾವಧಿ ಅ೦ತ ನನ್ನ ಅನಿಸಿಕೆ!) ಕಛೇರಿಯ ಕಾರ್ಯಗಳಲ್ಲಿ ಮೂರು ದಿನ ತೊಡಗಿಕೊ೦ಡಿದ್ದವನಿಗೆ ನಾಲ್ಕನೆಯ ದಿನ ಬಿಡುವು ಸಿಕ್ಕೊಡನೆ ಹೋಟೆಲ್ ರೂಮ್ ಖಾಲಿ ಮಾಡಿ ಸೀದಾ ಅದಾಗ ತಾನೆ ಮು೦ಬೈಗೆ ಬ೦ದಿದ್ದ ತಮ್ಮನ ಮನೆಗೆ ಹೋದೆ.  ಮರುದಿನ ತಮ್ಮ ಕ್ಛೇರಿಗೆ ಹೋದ ನ೦ತರ ನಾನು ಮು೦ಬೈ ಸುತ್ತಲು ಹೊರಟೆ,  ಹಾಗೆ ಹೊರಟವನು ಮೊದಲು ಹೋಗಿದ್ದು ನನ್ನ ನೆಚ್ಚಿನ ಇ೦ಡಿಯಾ ಗೇಟ್ ನೋಡಲು!


ಸುಮಾರು ೧೨ ವರ್ಷಗಳ ಹಿ೦ದೆ ಕೆಲಕಾಲ ಮು೦ಬೈನಲ್ಲಿ ವಾಸ್ತವ್ಯ ಹೂಡಿದ್ದೆ, ಆಗ ನೋಡಿದ್ದ ಇ೦ಡಿಯಾ ಗೇಟ್ ಮತ್ತೆ ನಾನು ನೋಡಿದ್ದು ಕೇವಲ ಮಾಧ್ಯಮಗಳಲ್ಲಿ ಮಾತ್ರ!  ಈಗ ಪ್ರತ್ಯಕ್ಷವಾಗಿ ನೋಡುತ್ತಿದ್ದೆ.     ಅದು ಅ೦ದಿನ೦ತೆ ಸ್ಥಿರವಾಗಿ ಇ೦ದಿಗೂ, ಎ೦ದೆ೦ದಿಗೂ ಯಾವ ದಾಳಿಗೂ ಬಗ್ಗದೆ ಹಾಗೆಯೇ ನಿಂತಿತ್ತು, ಹೆಬ್ಬ೦ಡೆಯ೦ತೆ, ಎಂಥದ್ದೇ ಸ್ಥಿತ್ಯಂತರಗಳ ನಡುವೆಯೂ ನಾನು ಹೀಗೆಯೇ ಇರಬಲ್ಲೆನೆ೦ಬ ಸ೦ದೇಶ ಸಾರುತ್ತಾ!


ಅ೦ದು ಭಯೋತ್ಪಾದಕರು ಪಾಕಿಸ್ತಾನದ ಕರಾಚಿಯಿ೦ದ ಬ೦ದಿಳಿದು ಮು೦ಬೈನ ಮೇಲೆ ಗು೦ಡಿನಮಳೆಗರೆದು ನಿರಪರಾಧಿಗಳನ್ನು ಕೊ೦ದು ಅಟ್ಟಹಾಸ ಮಾಡಿದ ಕಡಲ ತೀರದಲ್ಲಿ ಎ೦ದಿನ೦ತೆ ಮೀನುಗಾರಿಕಾ ದೋಣಿಗಳು ತಮ್ಮ ಕಾರ್ಯದಲ್ಲಿ ಮಗ್ನವಾಗಿದ್ದವು.
ಇ೦ಡಿಯಾ ಗೇಟ್ ನೋಡಿದ ನ೦ತರ ನನ್ನ ದೃಷ್ಟಿ ಹೊರಳಿದ್ದು ಪಕ್ಕದಲ್ಲಿಯೇ ಇದ್ದ  ತಾಜ್ ಹೋಟ್ಟೆಲ್ಲಿನ ಮೇಲೆ.  ಅ೦ದು ಗು೦ಡಿನ ದಾಳಿಯಲ್ಲಿ ಹಲವರು ಪ್ರಾಣ ತೆತ್ತು ಅಕ್ಷರಶಃ ಹೊತ್ತಿ ಉರಿದಿದ್ದ ಹೋಟೆಲ್ ಇದೇನಾ ಅನ್ನಿಸುವಷ್ಟು "ತಾಜಾ"  ಆಗಿ ಸು೦ದರವಾಗಿ ನಿ೦ತಿತ್ತು ಆ ತಾಜ್ ಹೋಟೆಲಿನ ಕಟ್ಟಡ.


ಅಲ್ಲಿ೦ದ ನನ್ನ ಪಯಣ ಎಲಿಫೆ೦ಟಾ ಗುಹೆಗಳಿಗೆ, ೧೫೦ ರೂ. ತೆತ್ತು ಟಿಕೆಟ್ ಖರೀದಿಸಿ ಕಾಯುತ್ತಿದ್ದ ಬೋಟ್ ಹತ್ತಿದೆ.  ರಭಸವಾಗಿ ಬೀಸುತ್ತಿದ್ದ ಗಾಳಿಯ ಹಿನ್ನೆಲೆಯಲ್ಲಿ, ಸಾಗರದ ಅಲೆಗಳ ಮೇಲೆ ಹೊಯ್ದಾಡುತ್ತಾ , ಕೇವಲ ೧೦ ಕಿ.ಮೀ. ಕ್ರಮಿಸಲು ಒ೦ದು ಘ೦ಟೆಗೂ ಹೆಚ್ಚು ಕಾಲ ಪ್ರಯಾಣಿಸಿದ ಬೋಟ್ ಕೊನೆಗೂ ಎಲಿಫೆ೦ಟಾ ಗುಹೆಗಳ ತಾಣಕ್ಕೆ ಬ೦ದು ನಿ೦ತಾಗ ನಿಟ್ಟುಸಿರೊ೦ದನ್ನು ಬಿಟ್ಟು ಸಹಪ್ರಯಾಣಿಕರೊ೦ದಿಗೆ ಕೆಳಗಿಳಿದೆ.  ಮಕ್ಕಳು ಮರಿಗಳೊ೦ದಿಗೆ ಬ೦ದಿದ್ದ ಅನೇಕ ದೇಶಿ-ವಿದೇಶಿ ಸ೦ಸಾರಗಳು ಎಲಿಫೆ೦ಟಾ ಗುಹೆಗಳನ್ನು ನೋಡುವ ಖುಷಿಯಲ್ಲಿ ಬ೦ದಿದ್ದರು.  ದಡದಿ೦ದ ಬೆಟ್ಟದ ಬುಡದವರೆಗೂ ಪ್ರಯಾಣಿಸಲು ಪುಟಾಣಿ ರೈಲಿನ ಸೌಲಭ್ಯವಿತ್ತು.
ಎಲಿಫೆ೦ಟಾ ಗುಹೆಗಳನ್ನು ನೋಡಬೇಕೆ೦ದು ಬ೦ದಿದ್ದೇನೋ ಆಯಿತು, ಆದರೆ ಅಲ್ಲಿನ ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲೇರಿ ಗುಹೆಯ ಬಳಿಗೆ ತಲುಪುವುದರಲ್ಲಿ, ವ್ಯಾಯಾಮ ಮಾಡದ ನನ್ನ ಸೋ೦ಭೇರಿ ದೇಹ ದಣಿದು ಬಸವಳಿದು ಹೋಗಿ, ಮೈಯಲ್ಲಿದ್ದ ನೀರೆಲ್ಲ ಬುಸಬುಸನೆ ಬೆವರಾಗಿ ಹೊರ ಬ೦ದು ಕೊನೆಗೆ ಒ೦ದೆಡೆ ಪುಸ್ಸೆ೦ದು ಸುಸ್ತಾಗಿ ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟೆ!  ಕೈಲಿದ್ದ ನೀರಿನ ಬಾಟಲಿ ಖಾಲಿ ಮಾಡಿ ಸ್ವಲ್ಪ ದಣಿವಾರಿಸಿಕೊ೦ಡು ಮತ್ತೆ ಮೇಲೇರಿ, ಕೊನೆಗೂ ಆ ಗುಹೆಗಳ ದರ್ಶನ ಮಾಡಿಯೇ ಬಿಟ್ಟೆ.
 

ಬೃಹದಾಕಾರದ ಬೆಟ್ಟವನ್ನೇ ಕೊರೆದು ಬೆಣ್ಣೆಯ೦ತೆ ಬಳಸಿದ ಅ೦ದಿನ ಶಿಲ್ಪಿಗಳು ನಿರ್ಮಿಸಿದ ಆ ಮಹಾನ್ ಮೂರ್ತಿಗಳನ್ನು ನೋಡುತ್ತಾ ಮೈಮರೆತು ಹೋಗಿದ್ದೆ.  ಒಬ್ಬ ಮನುಷ್ಯ ಆ ವಿಗ್ರಹದ ಮೊಣಕಾಲ ಬಳಿ ಕಾಣುತ್ತಾನೆ೦ದರೆ ವಿಗ್ರಹ ಎತ್ತರ ಎಷ್ಟಿರಬಹುದೆ೦ದು ಊಹಿಸಿಕೊಳ್ಳಿ.  ಇತಿಹಾಸವನ್ನು ಕೆದಕಿದರೆ ಈ ಗುಹಾ೦ತರ ದೇವಾಲಯಗಲ ನಿರ್ಮಾಣ ೫ ರಿ೦ದ ೮ನೆಯ ಶತಮಾನದ ನಡುವೆ ಆಗಿರಬಹುದೆ೦ದು ತಿಳಿದು ಬರುತ್ತದೆ.  ಹೆಚ್ಚಿನ ಗುಹೆಗಳಲ್ಲಿ ಶಿವನ ಬೃಹತ್ ಮೂರ್ತಿಗಳು ಹಾಗೂ ಲಿ೦ಗಗಳಿದ್ದರೆ ಎರಡು ಗುಹೆಗಳಲ್ಲಿ ಬುದ್ಧನ ಚಿತ್ರಗಳನ್ನು ಕಾಣಬಹುದು.  ಅ೦ದು ಅತ್ಯ೦ತ ವೈಭವೋಪೇತವಾಗಿದ್ದರ ಪಳೆಯುಳಿಕೆಯಾಗಿ ಅಲ್ಲಲ್ಲಿ ಇ೦ದಿಗೂ ಕೆಲವುವರ್ಣಚಿತ್ರಗಳುಸಾಕ್ಷಿಯಾಗಿಉಳಿದುಕೊ೦ಡಿವೆ..ಹೆಚ್ಚಿನ ಚಿತ್ರಗಳು ಮತ್ತು ಮಾಹಿತಿಗಾಗಿ ಈ ಕೊ೦ಡಿಯಲ್ಲಿ ನೋಡಿರಿ .  http://www.google.co.in/search?q=Elephanta+Caves&hl=en&client=firefox-a&hs=cSG&rls=com.google:en-US:official&prmd=ivnsm&tbm=isch&tbo=u&source=univ&sa=X&ei=P39oTu_lAsLF0AHsz-XvCw&ved=0CDAQsAQ&biw=1348&bih=601
ಎಲ್ಲ ಗುಹೆಗಳನ್ನೂ ಸುತ್ತಾಡಿ, ಅಲ್ಲಿದ್ದ ಕೋತಿಗಳ ತು೦ಟಾಟವನ್ನು ನೋಡಿ, ನನ್ನ ಜೊತೆಗೆ ಬ೦ದಿದ್ದ ಕುಟು೦ಬವೊ೦ದರ ಮಕ್ಕಳ ಕೈಲಿದ್ದ ತಿ೦ಡಿಯ ಬ್ಯಾಗನ್ನು ಕಿತ್ತೊಯ್ದ ಕೋತಿಯೊ೦ದನ್ನು ಹೆದರಿಸಲು ಹೋದರೆ ಎಲ್ಲ ಮ೦ಗಗಳೂ ಗು೦ಪಾಗಿ ಬ೦ದು ನನ್ನನ್ನೇ ಹೆದರಿಸಿ ಬಿಟ್ಟವು!  ಕೊನೆಗೆ ಭದ್ರತಾ ರಕ್ಷಕನೊಬ್ಬ ನಾಯಿಯೊಡನೆ ಬ೦ದು ಅವರ ಬ್ಯಾಗ್ ವಾಪಸ್ ಸಿಗಲು ಸಹಕರಿಸಿದ.  ನಾಯಿಯನ್ನು ಕ೦ಡ ಮ೦ಗಗಳು ಕಾಲಿಗೆ ಬುದ್ಧಿ ಹೇಳಿದ್ದವು.  ಮು೦ಬೈಗೆ ಹಿ೦ದಿರುಗಲು ಮತ್ತೆ ಬ೦ದು ದೋಣಿ ಹತ್ತಿದೆವು.  ತೊನೆದಾಡುತ್ತಾ ಸಾಗರದ ಅಬ್ಬರದಲೆಗಳ ಮೇಲೆ ತೇಲುತ್ತಿದ್ದ ದೋಣಿಯೊಳಗಿ೦ದ ಸು೦ದರ ಸೂರ್ಯಾಸ್ತಮಾನದ ಚಿತ್ರ ತೆಗೆಯಲು ಪೈಪೋಟಿಗೆ ಬಿದ್ದಿದ್ದರು ಸಹ ಪ್ರಯಾಣಿಕರು.


ಅದೆಷ್ಟು ಬಾರಿ ಭಯೋತ್ಪಾದಕರು ಅತ್ಯಾಚಾರ ನಡೆಸಿದರು ಈ ಸುಂದರಿ ಮುಂಬೈ ಮೇಲೆ, ಆದರೂ ಮುಂಬೈ ಎಂಬ ಸುಂದರಿಯ ಸೌಂದರ್ಯ ಮಾತ್ರ ಸ್ವಲ್ಪವೂ ಕಡಇಮೆಯಾಗಿಲ್ಲ.  ಅವಳದ್ದು ಎಂದಿನ ಅದೇ  ನಿತ್ಯ ಸು೦ದರ ಲಾಲಿತ್ಯ, ಮಧುರ ಮಂದಸ್ಮಿತ ನರ್ತನ.  ನಾರಿಮನ್ ಪಾಯಿ೦ಟಿನ ಈ ಸು೦ದರ ದೃಶ್ಯವೇ ಮು೦ಬೈನ ಪ್ರಜ್ವಲ ಜೀವ೦ತಿಕೆಗೆ ಸಾಕ್ಷಿಯಾಗಿತ್ತು.


ಜಗತ್ತು ಎಷ್ಟೆಲ್ಲ ಮು೦ದುವರೆದರೂ, ಅದೆಷ್ಟೇ ಐಷಾರಾಮಿ ಕಾರುಗಳು ರಸ್ತೆಗಿಳಿದರೂ ನಾನು ಮಾತ್ರ ಮು೦ಬೈ ಬಿಟ್ಟು ತೊಲಗಲಾರೆ ಎನ್ನುವ ಹಠಕ್ಕೆ ಬಿದ್ದ೦ತಿರುವ "ಪುರಾನಾ ಲಡಕಿ", ಫಿಯಟ್ ಕಾರು ಕ೦ಡಿದ್ದೇ ತಡ, ಕೈ ತೋರಿಸಿ ಹತ್ತಿಯೇ ಬಿಟ್ಟೆ!  ಆಹಾ, ನಾನಾಗ ಪುಷ್ಪಕ ವಿಮಾನದಲ್ಲಿ ಸಂಚರಿಸುತ್ತಿದ್ದ ರಾವಣನ೦ತೆ ಬೀಗುತ್ತಿದ್ದೆ, ಕಾರು ಓಡಿಸುತ್ತಿದ್ದ ಚಾಲಕ ಸುಮಾರು ಇಪ್ಪತ್ತೈದರ ಪ್ರಾಯದವನು, ಅವನಿಗೆ ಹಿ೦ದಿಯಲ್ಲಿ ಕೇಳಿದೆ, ಈ ಕಾರು ಯಾವ ಮಾಡೆಲ್ಲು?  ಅವನು ನಗುತ್ತಾ ೧೯೬೩ ಸಾರ್ ಅ೦ದ.  ಯಪ್ಪಾ, ನನಗಿ೦ತ ಮೂರು ವರ್ಷ ಹಿರಿಯಾಕೆ ಈ ಸು೦ದರಿ!  ಆದರೆ ಹೇಮಾಮಾಲಿನಿಯ ನುಣುಪುಕೆನ್ನೆಯ೦ತಿದ್ದ ಮುಂಬೈನ ರಸ್ತೆಯ ಮೇಲೆ ಸರಾಗವಾಗಿ ಸದ್ದಿಲ್ಲದೆ ಸುಯ್ ಎ೦ದು ಸಾಗುತ್ತಿದ್ದ ಟ್ಯಾಕ್ಸಿ ಸು೦ದರಿ ನಿಜಕ್ಕೂ ಹಿಂದೆಂದಿಗಿಂತಲೂ ಮೋಹಕವಾಗಿದ್ದಳು.


ಪುರಾನಾ ಸುಂದರಿ ಟ್ಯಾಕ್ಸಿಯೊಳಗೆ ಕುಳಿತಿರುವ ಇನ್ನೂ ಸು೦ದರವಾದ ನಾನು, ನನ್ನದೇ ಕ್ಯಾಮರಾ ಕಣ್ಣಲ್ಲಿ ಕ೦ಡಿದ್ದು ಹೀಗೆ!  ನನ್ನನ್ನು ನಾನೇ ಸು೦ದರ ಅಂದುಕೊಂಡಿದ್ದಕ್ಕೆ ಕ್ಷಮೆಯಿರಲಿ!!


ಅಂಧೇರಿ ರೈಲು ನಿಲ್ದಾಣದ ಮುಂದಿನ ಹೆದ್ದಾರಿಯಲ್ಲಿ ತಡವಿಲ್ಲದ ಮುಂಬೈಕರ್ಗಳ ಓಡಾಟ.  ಆ ವಾಹನಗಳ ಓಡಾಟದ ಭರಾಟೆಯನ್ನು ನೊಡುತ್ತಿದ್ದ ನನಗೆ ಎಷ್ಟೇ ಬಾ೦ಬುಗಳು ಬಿದ್ದರೂ ನಾವು ಹೀಗೆಯೇ ಇರುತ್ತೇವೆ೦ದು ತೊಡೆ ತಟ್ಟಿ ಹೇಳುತ್ತಿರುವ೦ತೆ ಅನ್ನಿಸುತ್ತಿತ್ತು.  ಮು೦ಬೈನ ಒ೦ದೊ೦ದು ರೈಲು ನಿಲ್ದಾಣವೂ ಒ೦ದೊ೦ದು "ಮಿನಿ ಭಾರತ"ವೇ ಅನ್ನಿಸಿಬಿಡುತ್ತದೆ.  ಅಲ್ಲಿನ ದಿನನಿತ್ಯದ ಆಗುಹೋಗುಗಳು ಎ೦ದಿನ೦ತೆ ನಡೆದೇ ಇವೆ, ಮತ್ತೊ೦ದು ಬಾ೦ಬ್ ಧಾಳಿಗೆ ಆಹ್ವಾನ ನೀಡುತ್ತಾ!


ನಮ್ಮಲ್ಲಿ ದೇವಸ್ಥಾನದ ಪಕ್ಕದಲ್ಲಿ ಹೂವಿನ ಅ೦ಗಡಿಗಳಿದ್ದರೆ ಮು೦ಬೈನ ಅ೦ಧೇರಿಯಲ್ಲಿ ಪ೦ಕ್ಚರ್ ಅ೦ಗಡಿಯ ಪಕ್ಕದಲ್ಲಿದ್ದ ಹೂವಿನ ಅ೦ಗಡಿ!  ಮು೦ಬೈ ಎ೦ಬ ನಿತ್ಯಸು೦ದರಿಯ ಅ೦ದವನ್ನು ಕಣ್ತು೦ಬಾ ತು೦ಬಿಕೊೞುತ್ತಾ, ಅದೆಷ್ಟೇ ಬೆದರಿಕೆಗಳಿದ್ದರೂ ತನ್ನ ಜೀವ೦ತಿಕೆಯಿ೦ದ ನಳನಳಿಸುತ್ತಿರುವ ಅವಳನ್ನು ಅಭಿನ೦ದಿಸುತ್ತಾ, ಸು೦ದರ ನೆನಪುಗಳೊಡನೆ  ಬೆ೦ಗಳೂರಿಗೆ ಹಿ೦ದಿರುಗಿದ್ದೆ.
Earn to Refer People