Saturday, December 31, 2016

ಎಲ್ಲರಿಗೂ ಶುಭವಾಗಲಿ!

ಹೊಸನೀರು ಬಂದಾಗ
ಹಳೆಯ ನೀರು ಕೊಚ್ಚಿ
ಹೋಗುವ ತೆರದಲಿ
ಹಳೆಯ ವರ್ಷದ
ಹಳೆಯ ಗಾಯಗಳು
ಮನದಾಳದ ನೋವು
ಹೃದಯ ಹಿಂಡುವ ಬೇನೆ
ನಿರಾಶೆ, ವೈಫಲ್ಯ, ಅಸಹನೆ
ಎಲ್ಲವೂ ತೊಡೆದು ಹೋಗಿ
ಹೊಸಬೆಳಕಿನ ಬೆಳ್ಳಿಕಿರಣ
ಮೂಡಿಬರಲಿ ನಗುನಗುತಾ
ನಗುವರಳಿಸಲಿ ಜಗದೆಲ್ಲಾ
ಸ್ನೇಹಜೀವಿಗಳ ಮೊಗದಲ್ಲಿ
ಹೊಸವರ್ಷ ಹೊತ್ತುತರಲಿ
ಹೊಸ ಹೊಸ ಹೊಸತುಗಳ
ಹರುಷ ತುಂಬಿದ ಕ್ಷಣಗಳ
ಶುಭವಾಗಲಿ ಎಲ್ಲರಿಗೂ
ಈಗ ಬೇಡ ಎನ್ನುವವರಿಗೂ
ಯುಗಾದಿಯಂದು ಬರಲಿರುವ
ಹರ್ಷ ಸಂತೋಷ ಇಂದೇ ಬರಲಿ
ಇದೂ ಇರಲಿ ಅದೂ ಇರಲಿ
ನಮ್ಮತನದ ಜೊತೆ ಜೊತೆಗೆ
ವಿಶ್ವಮಾನವತ್ವವೂ ಇರಲಿ! 
ಕೊನೆಗೊಂದೇ ಮನದಾಶಯ 
ಎಲ್ಲರಿಗೂ ಶುಭವಾಗಲಿ! :-) :-) 


Friday, December 23, 2016

ನೋಡೇ ತಿಮ್ಮಿ ತಾವ್ರೆ ಹುವ್ವ,,,,,,,,,,,,,,


ನೋಡೇ ತಿಮ್ಮಿ ತಾವ್ರೆ ಹುವ್ವ 
ಕೆಟ್ಟ ಕೆಸ್ತ್ರೀನಾಗೆ ಅರಳೈತೆ!

ನಿನ್ನ ನೋಡಿ ನಿನ್ ಸಂಕ್ಟ ನೋಡಿ 
ನಗ್ತಾ ನಗ್ತಾ ಏನೋ ಹೇಳೈತೆ!

ಕೆಸ್ತ್ರೀನಾಗೆ ಇದ್ರೂ ನಾನು 
ಲೋಕ ನನ್ನ ಮೆಚ್ಚತೈತೆ !

ಬೇರು ಒಳ್ಗೆ ಕೆಸ್ತ್ರೀನಾಗೆ 
 ಮ್ಯಾಲೆ ನಾನು ಸುಂದ್ರಿ ನೋಡೇ! 

ಲೋಕದ್ ಕಣ್ಣಿಗ್ ಕಾಣೋದೆಲ್ಲ 
ಮ್ಯಾಲಿನ್ ಥಳ್ಕು ಬಳ್ಕು ಕಣೆ! 

ಒಳ್ಗಿನ್ ಹುಳ್ಕು ಯಾರ್ಗು ಬ್ಯಾಡ
ಮ್ಯಾಲಿನ್ ಬಣ್ಣ ಚಂದ ಕಣೆ!

ನಿನ್ ನೋವು ದುಃಖ ಏನೇ ಇರ್ಲಿ 
ನಗ್ತಾ ಬಾಳ್ವೆ ಮಾಡ್ಬೇಕ್ ತಿಮ್ಮಿ !

ಹುವ್ವ ಹೇಳೋ ಕಥೆಯಾ ಕೇಳಿ 
ನೀ ನಗ್ತಾ ಇರೇ ತಿಮ್ಮಿ!

 ನೋಡೇ ತಿಮ್ಮಿ ತಾವ್ರೆ ಹುವ್ವ 
ಕೆಟ್ಟ ಕೆಸ್ತ್ರೀನಾಗೆ ಅರಳೈತೆ!

ನಿನ್ನ ನೋಡಿ ನಿನ್ ಸಂಕ್ಟ ನೋಡಿ 
ನಗ್ತಾ ನಗ್ತಾ ಏನೋ ಹೇಳೈತೆ!


(ಚಿತ್ರ: ೩ ಕನ್ನಡ ಕಥೆ ಕವಿತೆ ಗುಂಪಿನಿಂದ)

Tuesday, December 13, 2016

ತಾರೆ ಆದ್ಳು ತಿಮ್ಮಿ!

ಬಿಂದ್ಗೆ ತುಂಬಾ ಹುಳಿ ಹೆಂಡ
ತುಂಬ್ಕೊಂಡ್ ಬಂದ್ಲು ತಿಮ್ಮಿ!
ಕೋಳಿ ಕಾಲ್ಗೆ ಖಾರ ಹಚ್ಚಿ
ಸುಟ್ಕೊಂಡ್ ತಂದ್ಳು ತಿಮ್ಮಿ!
ಕಾಲಂದ್ಗೆ ಚಿಮ್ಕೊಂಡ್ ಚಿಮ್ಕೊಂಡ್
ನಡ್ಕೊಂಡ್ ಬಂದ್ಲು ತಿಮ್ಮಿ!
ಎದ್ಯಾ ಬ್ಯಾಸ್ರಾ ಓಡ್ಸೋಕ್ಕಂತ
ಹಾಡ್ಕೊಂಡ್ ಬಂದ್ಲು ತಿಮ್ಮಿ!
ಬದ್ಕಲ್ ಹಸ್ರು ಚಿಗುರ್ಸಕ್ಕಂತ
ನಕ್ಕೊಂಡ್ ಬಂದ್ಲು ತಿಮ್ಮಿ!
ತಿಮ್ಮನ್ ಬಾಳಿನ್ ಆಕಾಶ್ದಾಗೆ
ಚೆಲ್ವಿನ್ ತಾರೆ ಆದ್ಳು ತಿಮ್ಮಿ!
ತಾರೆ ಆದ್ಳು ತಿಮ್ಮಿ!
ತಾರೆ ಆದ್ಳು ತಿಮ್ಮಿ!
ತಾರೆ ಆದ್ಳು ತಿಮ್ಮಿ!
ತಾರೆ ಆದ್ಳು ತಿಮ್ಮಿ!
(ಚಿತ್ರ: ಅಂತರ್ಜಾಲದಿಂದ)

Saturday, November 19, 2016

ವಿಶ್ವ ಪುರುಷರ ದಿನ!!ತೇದು ತೇದು ಉಳಿದ ಗಂಧ,
ಉರಿದು ಉಳಿದ ಕರಕಲು ಬತ್ತಿ,
ದೀಪದಡಿಯೇ ಉಳಿದ ಕತ್ತಲು,
ಮಳೆ ನಿಂತರೂ ತೊಟ್ಟಿಕ್ಕುವ ಹನಿ,
ಅಪಾರ ನೋವಿನ ಹಿಂದಿನ ನಗು!

ತನ್ನವರ ಏಳಿಗೆಗೆ ಬಿದಿರಿನ ಏಣಿ,
ಅವರ ಆಶ್ರಯಕೆ ತಂಪು ಛಾವಣಿ,
ಅವರ ಅಳಲಿಗೆ ಇಂಪು ಲಾವಣಿ,
ಕಟು ಬಾಣಗಳ ತಡೆವ ಗುರಾಣಿ,
ಒಬ್ಬನೇ ಕೊರಗುವ ಒಂಟಿ ಪ್ರಾಣಿ

Tuesday, November 15, 2016

ಪೂರ್ಣ ಚಂದ್ರನ ಮರೆಯಲ್ಲಿ,,,,,,,,,,,,,,,,,,,,,


ಅಂದು ಬಾಲ್ಯದಲ್ಲಿ ಅಮ್ಮ ಕೈ ತುತ್ತು ತಿನಿಸುವಾಗ  
ಕೂಗಿ ಕರೆಯುತ್ತಿದ್ದಳು ಅಲ್ಲಿ ನೋಡು  ಚಂದಮಾಮ
ಒಲವಿನಿಂದ ಮುದ್ದಾಡಿ ತೋರಿಸುತ್ತಿದ್ದಳು ಆಗಸದ 
ಕೈಗೆಟುಕದ ಎಲ್ಲಿ ಹೋದರಲ್ಲಿ ಬರುತ್ತಿದ್ದ ಚಂದಮಾಮನ!

ನಾ ಕೈ ಬೀಸಿದಾಗ ಪುಟ್ಟ ಕೈಗೆ ಸಿಗದೇ ಓಡುತ್ತಿದ್ದ ಚಂದ್ರಮ
ಅವ ಬೇಕೆಂದು ಅಳುವಾಗ ಅಮ್ಮನ ಸಿಹಿ ಮುತ್ತು ಮರೆಸಿತ್ತು 
ಹೊಟ್ಟೆ ತುಂಬಿಸಿತ್ತು ಆ ಕೈ ತುತ್ತು ಸಿಗದಿದ್ದ ಚೋರ ಚಂದಿರ 
ಅತ್ತರೂ ನಕ್ಕರೂ ಕೈಗೆ ಸಿಗದೇ ಓಡುತ್ತಲೇ ಇದ್ದ ಆ ಚಕೋರ!

ಅಮ್ಮ ದೂರಾದಾಗ ಅಕ್ಕನಾದಳು ನನ್ನ ಎರಡನೆಯ ಅಮ್ಮ 
ಸೊಂಟದ ಮೇಲೆನ್ನ ಎತ್ತಿ ಆಡಿಸುತ ತೋರಿದಳು ಚಂದ್ರಮನ 
ಒಲ್ಲೆನೆಂದ ತುತ್ತ ಬಾಯ್ತುಂಬಾ ತುಂಬಿಸಿ ಪೋಷಿಸಿದಳವಳಂದು 
ಓಡುವ ಚಂದಿರನಿಗೆ ಕೈ ಚಾಚುತ್ತಲೇ ದೊಡ್ಡವನಾದೆ ನಾನು !

ಅಂದು ಕೈಗೆ ಸಿಗದ ಆ ಚಂದ್ರಮ ಇಂದು ಸಿಕ್ಕಿದ ನನ್ನ ಕೈಯ್ಯಲ್ಲಿ 
ಮನ ಖುಷಿಯಾಗಿ ಅವನ ಶೀತಲ ಕಿರಣಗಳ ಸವಿಯುತ ಕಡಲ 
ತೀರದ ತಂಗಾಳಿಯಲಿ ಮೈ ಮನಗಳು ಹೊಯ್ದಾಡುತಿರಲು 
ಆ ಸುಂದರ ಚಂದ್ರಮನ ಅಂದವ ಮನತುಂಬಿ ಸವಿಯುತಿರಲು!

ಎನ್ನ ಕಂಗಳು ಹುಡುಕುತಿದ್ದವು ಆ ಚಂದ್ರಮನ ಅಕ್ಕಪಕ್ಕದಲ್ಲಿ 
ಕಾಣಬಹುದೇನೋ ಅವನ ಸನಿಹದಲ್ಲಿ ಅಮ್ಮ ಅಕ್ಕನ ನೆರಳು 
ಅವರ ವಾತ್ಸಲ್ಯದ ಪ್ರೀತಿಯ ಸವಿಯಾದ ಅಕ್ಕರೆಯ ಛಾಯೆ 
ಸ್ವಾರ್ಥಿ ಚಂದ್ರಮ ಅವನೊಬ್ಬನೇ ಇದ್ದ ನಗುತ ಆಗಸದಲ್ಲಿ!

ಕಾಣದ ನಕ್ಶತ್ರಗಳ ರಾಶಿಯಲ್ಲಿ ಉಜ್ವಲ ಬೆಳಕಿನ ನಡುವಿನಲ್ಲಿ 
ಹುಡುಕಿ ಸೋತಿದ್ದವು ಕಂಗಳು ಅರಿಯದೆ ಉದುರಿದ್ದವು ಕಂಬನಿ 
ಅಲ್ಲಿ ಅಮ್ಮನೂ ಇರಲಿಲ್ಲ ಅಕ್ಕನೂ ಇರಲಿಲ್ಲ ಅವರ ಪ್ರೀತಿಯೂ 
ನೀಲ ನಿರಭ್ರ ಆಗಸದಲ್ಲಿ ಬರಿ ಚಂದಿರನದ್ದೇ ಪ್ರಕಾಂಡ ಪ್ರಕಾಶ!!  

Friday, October 21, 2016

ಹೀಗೊಬ್ಬನಿದ್ದ ಅಪ್ಪ; ಭಾಗ -೩ಭಾನುವಾರದ ನಸುಕಿನ ಚುಮು ಚುಮು ಚಳಿಗೆ ರಗ್ಗನ್ನು ಇನ್ನಷ್ಟು ಗಾಢವಾಗಿ ಹೊದ್ದು ಮಲಗಿದ್ದ ಅವನುವಾರವೆಲ್ಲಾ ದುಡಿದು ದಣಿದ ದೇಹಕ್ಕೆ ಸಾಕಷ್ಟು ವಿಶ್ರಾಂತಿಯ ಅಗತ್ಯವಿತ್ತು, ಶನಿವಾರ ರಾತ್ರಿಯ ಎರಡು ಪೆಗ್  ವಿಸ್ಕಿ, ಖಾರ ಹೆಚ್ಚಾಗಿದ್ದ ಹುರಿದ ಕೋಳಿ ಕಾಲು, ಪತ್ನಿಯೊಡನೆ ಸುಮಧುರ ಸರಸ ಸಂಭಾಷಣೆ ಅವನಿಗೆ ವಿಚಿತ್ರ ಮತ್ತೇರಿಸಿ ಗಾಢ ನಿದ್ರೆಗೆ ತಳ್ಳಿದ್ದವುಬೆಳಗ್ಗಿನ ಚಳಿಗೆ ಅವನು ಮಗ್ಗುಲು ಬದಲಿಸಿ ರಗ್ಗೆಳೆದು ಇನ್ನಷ್ಟು ನಿದ್ದೆಗೆ ಯತ್ನಿಸುವಾಗಲೇ ಪುಟ್ಟ ತುಟಿಯೊಂದು ಕೆನ್ನೆಗೆ ಮುತ್ತಿಕ್ಕಿತ್ತು ಪುಟ್ಟ ಜೀವದ ಬಿಸಿಯುಸಿರು ಇವನ ಮುಖಕ್ಕೆ ರಾಚುತ್ತಿದ್ದಂತೆ ನಿದ್ದೆಯ ಭಾರದಿಂದ ಬಿಡಲಾಗದ ಕಣ್ಣುಗಳನ್ನು ಕೊಂಚ ತೆರೆದು ನೋಡಿದಆರು ವರ್ಷದ ಪುಟ್ಟ ಮಗ  ತನ್ನೆದೆಯ ಮೇಲೆ  ಮಲಗಿ, ತನ್ನ ಪುಟ್ಟ ಕೈಗಳಿಂದ ಅವನನ್ನು ತಬ್ಬಿ ಹಿಡಿದು ಕೆನ್ನೆಗೆ, ಗಲ್ಲಕ್ಕೆ ಸಿಹಿಮುತ್ತು ನೀಡುತ್ತಾ ನಿದ್ದೆಯಿಂದ ಎಬ್ಬಿಸಲು ಪ್ರಯತ್ನಿಸುತ್ತಿದ್ದ. ಅವನನ್ನು ಹಾಗೆಯೇ  ತಬ್ಬಿಕೊಂಡು ಇನ್ನು ಸ್ವಲ್ಪ ಹೊತ್ತು ಮಲಗಬೇಕು ಸುಮ್ನಿರೋ ಮಗಾ ಎಂದು ಮತ್ತೆ ಮಲಗಲು ಯತ್ನಿಸುತ್ತಿದ್ದಆದರೆ ತನ್ನ ಹಠ ಬಿಡದ ಪುಟ್ಟ ಮಗ ತನ್ನ ಸಿಹಿ ಮುತ್ತುಗಳಿಂದಲೇ ಅವನನ್ನು ಎಬ್ಬಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದ!

ಅಷ್ಟರಲ್ಲಿ ಅಡಿಗೆ ಮನೆಯಿಂದ ಬಿಸಿ ಬಿಸಿ ಕಾಫಿಯ ಲೋಟ ಹಿಡಿದು ಬಂದ ಅವನ ಮಡದಿ ಅವನು ಹೊದ್ದಿದ್ದ ರಗ್ಗನ್ನು ಕಿತ್ತೆಸೆದು ರೀ ಏಳಿ ಮ್ಯಾಲೆ, ಎಷ್ಟೊತ್ತು ಮಲಗೋದು, ವಾರವೆಲ್ಲಾ ಕೆಲಸ ಕೆಲಸ ಅಂತೀರಿ, ಭಾನುವಾರ ಒಂದು ದಿನವಾದ್ರೂ  ಮಕ್ಕಳ ಜೊತೆಗೆ  ಮಾತಾಡ್ತಾ ಇರೋದಿಕ್ಕೆ ಆಗೋದಿಲ್ವಾ ಅಂತ ರಾಗ ಎಳೆದಿದ್ದಳು. ಹತ್ತು ವರ್ಷದ ಅವನ ಮಗಳು ಮಂಚದ ಕಾಲ ಬದಿಯಲ್ಲಿ ಕುಳಿತು ,ಅಪ್ಪ ಎದ್ದೇಳಪ್ಪಾ, ಮಾರ್ಕೆಟ್ಟಿಗೆ ಹೋಗೋಣ, ಟೈಮಾಗುತ್ತೆ ಎದ್ದೇಳಪ್ಪಾ ಎಂದು ಇವನನ್ನು ಕುಂಭಕರ್ಣ ನಿದ್ರೆಯಿಂದ ಎಬ್ಬಿಸಲು ಯತ್ನಿಸುತ್ತಿದ್ದಳುಕೊನೆಗೂ ಅವರ ಕಾಟ ತಡೆಯಲಾಗದೆ ಅವನು ಮೈ ಕೊಡವಿ ಎದ್ದಬಚ್ಚಲಿಗೆ ಹೋಗಿ ಬಾಯಿ ಮುಕ್ಕಳಿಸಿ ಉಗಿದು, ಅಡಿಗೆ  ಮನೆಗೆ  ಬಂದು ಒಂದು ಚೊಂಬು ನೀರನ್ನು ಗಟಗಟನೆ ಕುಡಿದು ಹಾಲಿನಲ್ಲಿದ್ದ ದಿವಾನ್ ಕಾಟ್ ಮೇಲೆ ಕುಳಿತು, ಕಾಫಿ ಕುಡಿಯುತ್ತಾ ಅಂದಿನ ವೃತ್ತ  ಪತ್ರಿಕೆಯ ಮೇಲೆ ಕಣ್ಣಾಡಿಸತೊಡಗಿದ. ಮಗ ಹಾಗೂ ಮಗಳು ಅವನ ಎಡಬಲದಲ್ಲಿ ಆಸೀನರಾಗಿ ಅವನು ಕಾಫಿ ಕುಡಿದು ಮುಗಿಸುವುದನ್ನೇ ಕಾತರದಿಂದ ಕಾಯುತ್ತಿದ್ದರುವಾರೆಗಣ್ಣಿನಲ್ಲಿ ಅವರಿಬ್ಬರನ್ನೂ  ನೋಡುತ್ತಲೇ ಪತ್ರಿಕೆ ಓದಿ ಮುಗಿದರೂ  ಇನ್ನೂ ಓದುತ್ತಿರುವವನಂತೆ  ನಟಿಸುತ್ತಿದ್ದ. ಅಪ್ಪ ಬೇಗ ಪತ್ರಿಕೆ ಓದಿ ಮುಗಿಸಿ ಎದ್ದು ಮಾರ್ಕೆಟ್ಟಿಗೆ ಹೊರಡಲಿಲ್ಲವಲ್ಲಾ ಎಂದು ಮಕ್ಕಳಿಬ್ಬರೂ ಚಡಪಡಿಸುತ್ತಿದ್ದರುಅಪ್ಪ ಮಕ್ಕಳ ಆಟವನ್ನು ನೋಡುತ್ತಾ ಅಡಿಗೆ ಮನೆ ಬಾಗಿಲಲ್ಲಿ ನಿಂತು ನೋಡುತ್ತಿದ್ದ ಅವನ ಪತ್ನಿ ಒಳಗೊಳಗೇ ನಗುತ್ತಿದ್ದಳು.   ಕೊನೆಗೆ ಮಗಳು ಧೈರ್ಯವಾಗಿ ಅವನ ಕೈಯ್ಯಲ್ಲಿದ್ದ ಪತ್ರಿಕೆಯನ್ನು ಕಿತ್ತು ಅತ್ತ ಬಿಸಾಕಿ ಏಳಪ್ಪಾ ಮೇಲೆ, ಮಾರ್ಕೆಟ್ಟಿಗೆ ಹೋಗೋಣ, ಎಷ್ಟೊತ್ತು ಕಾಯೋದು ಎಂದು ಹುಸಿಮುನಿಸಿನಿಂದ ಮುಖ ಉಬ್ಬಿಸಿದ್ದಳು.   ಇನ್ನು ಮಕ್ಕಳನ್ನು ಸತಾಯಿಸುವುದು ಬೇಡವೆಂದು ಮೇಲೆದ್ದ ಅವನು ಮುಖ ತೊಳೆದು, ಬಟ್ಟೆ ಬದಲಿಸಿ ಹೊರಟ. ಬಾಗಿಲಿನ ಬಳಿಯೇ ಕುಳಿತು ಇವನು ಹೊರಗೆ ಬರುವುದನ್ನೇ ಕಾಯುತ್ತಿದ್ದ ಮುದ್ದಿನ ನಾಯಿಮರಿ ಟಾಮಿ ಇವನ ಕಾಲುಗಳನ್ನು ನೆಕ್ಕಿ ಎಗರಾಡಿ ಪ್ರೀತಿ ತೋರಿಸಿತ್ತು

ನಿಧಾನಕ್ಕೆ ತನ್ನ ಟಿವಿಎಸ್ ಸ್ಟಾರ್ ಸಿಟಿ  ಬೈಕ್  ರಸ್ತೆಗೆ ಇಳಿಸಿ ಸ್ಟಾರ್ಟ್  ಮಾಡಿದ್ದ. ಪುಟ್ಟ ಮಗ ಮುಂದೆ ಕುಳಿತರೆ ಮಗಳು ಹಿಂದೆ ಕುಳಿತಿದ್ದಳು. ಅಲ್ಲಿಂದ ಅವರ ಸವಾರಿ  ಪೀಣ್ಯ ಎರಡನೇ ಹಂತದ ಮಾರ್ಕೆಟ್ಟಿಗೆ ಬಂದಿತ್ತುಅಬ್ದುಲ್ಲಾನ ಕೋಳಿ ಅಂಗಡಿಯಲ್ಲಿ ಒಂದೂವರೆ ಕೆಜಿಯ ಬ್ರಾಯ್ಲರ್ ಕೋಳಿಯನ್ನು, ಶುದ್ಧಗೊಳಿಸಿ ಬಿರಿಯಾನಿ ಪೀಸ್ ಹೊಡೆಯುವಂತೆ ಹೇಳಿ ಕಟ್ಟಿಸಿಕೊಂಡಿದ್ದ. ಅದನ್ನು ಮಗ ತನ್ನ ಕೈಯ್ಯಲ್ಲಿದ್ದ    ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ, ಅದು ಅವನಿಗೆ ಇಷ್ಟವಾದ ಚಿಕನ್ ಬಿರಿಯಾನಿಗೆ!   ಪಕ್ಕದಲ್ಲಿದ್ದ ಮುನಿರಾಜನ ಮೀನು ಅಂಗಡಿಗೆ ಬಂದು ಮಗಳಿಗೆ ಇಷ್ಟವಾದ  ಒಂದು ಕೆಜಿ ಮೀನು ಖರೀದಿಸಿ ಫ್ರೈ ಪೀಸ್ ಮಾಡಿಸಿದ್ದ. ಮೀನಿನ ತುಂಡುಗಳಿದ್ದ ಕವರನ್ನು ಮಗಳು ಜಾಗರೂಕತೆಯಿಂದ ತನ್ನ ಕೈಯ್ಯಲ್ಲಿ ಹಿಡಿದುಕೊಂಡಿದ್ದಳು, ಏಕೆಂದರೆ ಅದು ಅವಳ ಪಾಲುಅಲ್ಲಿಂದ ಅನ್ವರನ ಮಾಂಸದ ಅಂಗಡಿಗೆ ಬಂದು ತನಗೂ ಪತ್ನಿಗೂ ಇಷ್ಟವಾದ ಮಟನ್ ಖೈಮಾ ಒಂದು ಕೆಜಿ ಕಟ್ಟಿಸಿಕೊಂಡು ತರಕಾರಿ ಅಂಗಡಿಯ ರತ್ನಮ್ಮಜ್ಜಿಯ ಬಳಿ ಸೌತೆಕಾಯಿ, ಕ್ಯಾರೆಟ್, ಟೊಮ್ಯಾಟೋ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಪುದಿನಾ, ಹಸಿಮೆಣಸಿನಕಾಯಿ, ನಿಂಬೆಹಣ್ಣು ಖರೀದಿಸಿದ್ದ. ಜೊತೆಗೆ ಅವಳ ಅಂಗಡಿಯ ಪಕ್ಕದಲ್ಲಿದ್ದ ಚೆಲುವಿಯ ಹೂವಿನಂಗಡಿಯಲ್ಲಿ ಪತ್ನಿಗಾಗಿ ಒಂದು ಮಾರು ಮಲ್ಲಿಗೆ  ಹಾಗೂ ಕನಕಾಂಬರ ಖರೀದಿಸಿದ್ದಎಲ್ಲವನ್ನೂ ಬ್ಯಾಗುಗಳಲ್ಲಿ ತುಂಬಿಕೊಂಡು ಹೊರಟಾಗ ಮಗಳು ಗಾಯತ್ರಿ ಬ್ಯಾಂಗಲ್ ಸ್ಟೋರ್ಸ್ ತೋರಿಸಿ ಅಲ್ಲಿಗೆ ಹೋಗೋಣ ಅಂದಿದ್ದಳುಅಲ್ಲಿ ಅವಳಿಗೆ ಬೇಕಾದ ಟೇಪು, ಪೆನ್ನು, ಪೆನ್ಸಿಲ್, ಬಣ್ಣದ ಕ್ರೆಯಾನ್ಸ್, ಮಗನಿಗೆ ಬಣ್ಣದ ಸೀಮೆ ಸುಣ್ಣ ಎಲ್ಲಾ ಕೊಡಿಸಿದ್ದಎಲ್ಲವನ್ನೂ ಮುಗಿಸಿ ಮತ್ತೆ ಮನೆ   ಕಡೆಗೆ ಹೊರಡುವಾಗ ಸಾಕಷ್ಟು ಸಮಯವಾಗಿತ್ತು.

ಮನೆಯ ಬಳಿಗೆ ಬಂದು ಬೈಕು ನಿಲ್ಲಿಸುತ್ತಿದ್ದಂತೆ ಬ್ಯಾಗುಗಳನ್ನು ತೆಗೆದುಕೊಳ್ಳಲು ಮಡದಿ ಬಂದರೆ ಮಾಂಸದ ವಾಸನೆ ಹಿಡಿದ ಟಾಮಿ ಎಲ್ಲಿಯೂ ನಿಲ್ಲದೆ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿತ್ತುಮನೆಯೊಳಗೆ ಬಂದ ನಂತರ ಮಡದಿ ಅಡಿಗೆಗೆ ಶುರು ಹಚ್ಚಿಕೊಂಡರೆ ಇವನು ತರಕಾರಿಗಳನ್ನೆಲ್ಲ ಒಪ್ಪವಾಗಿ ಹಚ್ಚಿ ಕೊಡುತ್ತಿದ್ದ. ಮಗಳು ತನ್ನ ವಸ್ತುಗಳನ್ನೆಲ್ಲಾ ನೀಟಾಗಿ ಜೋಡಿಸಿಟ್ಟ ನಂತರ ಬಂದು ಅಪ್ಪನೊಡನೆ ಕುಳಿತಳುಈಗ ಇಬ್ಬರೂ ಸೇರಿ ತರಕಾರಿ ಸಲಾಡ್ ಮಾಡಲು ಶುರು ಹಚ್ಚಿಕೊಂಡರುಸೌತೆಕಾಯಿಯ ಎರಡೂ ತುದಿಗಳನ್ನು ಕತ್ತರಿಸಿ ವಿಷವನ್ನೆಲ್ಲ ತೆಗೆದು ನೀಟಾಗಿ ಇವನು ಕತ್ತರಿಸಿ ಕೊಟ್ಟರೆ ಮಗಳು ಅವನ್ನೆಲ್ಲಾ ಒಂದು ದೊಡ್ಡ ತಟ್ಟೆಯಲ್ಲಿ  ಜೋಡಿಸುತ್ತಿದ್ದಳು. ನಂತರ ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋಗಳನ್ನೂ ಸೌತೆಕಾಯಿಯೊಡನೆ ಸುಂದರವಾಗಿ ಜೋಡಿಸಿಟ್ಟು ಎರಡು ನಿಂಬೆಹಣ್ಣು ಕುಯ್ದು ರಸ ಹಿಂಡಿ , ಮೇಲೆ ಒಂದಿಷ್ಟು ಉಪ್ಪು ಮತ್ತು ಕಾಳು  ಮೆಣಸಿನಪುಡಿ ಉದುರಿಸಿ ಸುಂದರ ಸಲಾಡ್ ಸಿದ್ಧಪಡಿಸಿದ್ದಅವನೊಡನೆ ಕೈ ಜೋಡಿಸಿದ ಮಗಳು  ಅಪ್ಪಾ, ನಾನು ದೊಡ್ಡವಳಾದ ಮೇಲೆ ಪ್ರತಿ ಭಾನುವಾರವೂ ನಿನಗೆ ಇದೇ ಥರಾ ಸಲಾಡ್ ಮಾಡಿ ಕೊಡುತ್ತೇನೆ ಎಂದು ಮುದ್ದಾಗಿ ಉಲಿದಿದ್ದಳುಅವನು  ಪ್ರೀತಿಯಿಂದ ಮಗಳ ತಲೆ ನೇವರಿಸಿದ್ದ. ನೀನು ದೊಡ್ಡವನಾದ ಮೇಲೆ ನನಗೆ ಏನು ಮಾಡಿ ಕೊಡ್ತಿಯೋ ಮಗನೇ ಅಂದರೆ ಪುಟ್ಟ ಮಗ ಮುಗ್ಧವಾಗಿ ನಗುತ್ತಾ ನಾನು ನಿನಗೆ ಖಾರ ಜಾಸ್ತಿ ಹಾಕಿ ಚಿಕನ್ ಬಿರಿಯಾನಿ ಮಾಡಿ ಕೊಡುತ್ತೇನೆ ಎಂದಿದ್ದ. ಅಡಿಗೆ ಮನೆಯಲ್ಲಿ ಚಿಕನ್ ಬಿರಿಯಾನಿ ಮಾಡುತ್ತಿದ್ದ ಮಡದಿ ಮಗನ ಮಾತು  ಕೇಳಿ ಘೊಳ್ಳೆಂದು ಜೋರಾಗಿ ನಕ್ಕಿದ್ದಳು.

ಅಷ್ಟರಲ್ಲಿ ಘಮ ಘಮಿಸುವ ಚಿಕನ್ ಬಿರಿಯಾನಿ ಸಿದ್ಧವಾಗಿತ್ತು. ಹಣೆಯಲ್ಲಿ ಮೂಡಿದ್ದ ಬೆವರಿನ ಬಿಂದುಗಳನ್ನು ಒರೆಸಿಕೊಳ್ಳುತ್ತಾ ಮಡದಿ   ನಾಲ್ಕು ತಟ್ಟೆಗಳಲ್ಲಿ ಬಿರಿಯಾನಿ ಹಾಕಿ ಹಾಲಿನಲ್ಲಿ ತಂದಿಟ್ಟಿದ್ದಳು, ಮಧ್ಯದಲ್ಲಿ ತರಕಾರಿ ಸಲಾಡ್ ತಟ್ಟೆ , ಜೊತೆಗೆ ಮೊಸರು ಬಜ್ಜಿ, ಹಬೆಯಾಡುತ್ತಿದ್ದ ಬಿರಿಯಾನಿ ಸ್ವಲ್ಪ ತಣ್ಣಗಾಗಲೆಂದು ಜೋರಾಗಿ   ಫ್ಯಾನ್ ತಿರುಗಿಸಿದ್ದಳು. ನಾಲ್ವರೂ ಒಟ್ಟಿಗೆ ಕುಳಿತು ಬಿರಿಯಾನಿ ಭಕ್ಷಣೆಗೆ ತೊಡಗಿದ್ದರು, ಮಕ್ಕಳ ತುಂಟಾಟ, ಮಡದಿಯ ಪ್ರೀತಿಯ ನುಡಿಗಳು, ನಾಲಿಗೆಗೆ ಹಿತವಾದ ಅಡಿಗೆ, ಮನಸ್ಸಿಗೆ ಹಿತವಾದ ವಾತಾವರಣ ಅವನಿಗೆ ತಾನು ಸ್ವರ್ಗದಲ್ಲಿಯೇ ಇದ್ದೇನೇನೋ  ಎನ್ನುವಂಥ ಅನುಭವವನ್ನು ಉಂಟು ಮಾಡಿತ್ತುವಾರವೆಲ್ಲಾ ದುಡಿದು ಹೈರಾಣಾದ ದೇಹ ಹಾಗೂ ಮನಸ್ಸಿಗೆ ಭಾನುವಾರದ ಬೆಳಗು ನಿಜಕ್ಕೂ ಚೇತೋಹಾರಿಯಾಗಿತ್ತುಬಿರಿಯಾನಿ ಹಾಗೂ ಕೋಳಿ ಮಾಂಸದ ವಾಸನೆ ಹಿಡಿದ ನಾಯಿಮರಿ ಟಾಮಿ ಬಾಗಿಲಲ್ಲೇ ಕುಳಿತು ಒಂದೇ ಸಮನೆ ಚಡಪಡಿಸುತ್ತಿತ್ತುಏನೇ ಮಾಡಿದರೂ ಬಾಗಿಲು ದಾಟಿ ಒಳಕ್ಕೆ ಬಾರದ ಮುದ್ದು ನಾಯಿಗೆ ಎಲ್ಲರೂ ತಿಂದು ಆದ ನಂತರ ಉಳಿದ ಮೂಳೆಯ ತುಂಡುಗಳ ಜೊತೆಗೆ ತಣ್ಣಗಾಗಿದ್ದ ಬಿರಿಯಾನಿಯನ್ನು ಅದಕ್ಕೆಂದೇ ಮೀಸಲಾಗಿಟ್ಟಿದ್ದ ತಟ್ಟೆಯಲ್ಲಿ ಹಾಕಿ  ಅದರ ತಲೆ ನೇವರಿಸಿದ್ದಸಾವಕಾಶವಾಗಿ ಬಿರಿಯಾನಿ ತಿಂದ ಟಾಮಿ ಸ್ವಲ್ಪ ನೀರು ಕುಡಿದು ಇವನ ಜೊತೆಗೆ ಆಟವಾಡಲು ತೊಡಗಿತ್ತು.       

ಮಧ್ಯಾಹ್ನದ ಅಡುಗೆಗೆ ಮಟನ್ ಖೈಮಾ ಸಾರು, ಮಗಳಿಗಾಗಿ ಸ್ಪೆಷಲ್ ಮೀನು ತವಾ ಫ್ರೈ ಸಿದ್ಧವಾಗುತ್ತಿತ್ತು, .  ಮಗಳೊಡನೆ ಕುಳಿತು ಅವಳ ಪಠ್ಯ ವಿಷಯಗಳ ಬಗ್ಗೆ ಕೇಳುತ್ತಾ, ಅವಳಿಗೆ ಅನುಮಾನವಿದ್ದ ವಿಚಾರಗಳನ್ನು ಬಗೆಹರಿಸುತ್ತಾ ಮಗನಿಗೆ ಅಕ್ಷರಾಭ್ಯಾಸ ಮಾಡಿಸುತ್ತಾ ಇವನು ಕಾಲ ಕಳೆದಿದ್ದ. ಮಧ್ಯಾಹ್ನವಾಗುತ್ತಾ ಹೋದಂತೆ ಹೊರಗಡೆ ಹೋಗಬೇಕೆಂಬ ಬಯಕೆ ಇವನಲ್ಲಿ ಹೆಚ್ಚಾಗುತ್ತಾ ಹೋಗುತ್ತಿತ್ತು, ಆದರೆ ಮಕ್ಕಳಿಬ್ಬರೂ ಇವನನ್ನು ಆಚೆಗೆ ಹೋಗಲು ಬಿಡುತ್ತಿರಲಿಲ್ಲಕೊನೆಗೊಮ್ಮೆ ಅಡಿಗೆ ಕೆಲಸ ಮುಗಿಸಿ ಮಡದಿ ರೂಮಿಗೆ ಬಂದಾಗ ಅವಳಿಗಾಗಿ ತಂದಿದ್ದ ಹೂವಿನ ಪೊಟ್ಟಣವನ್ನು ಅವಳ ಕೈಗಿತ್ತು, ಮಕ್ಕಳ ಕಣ್ತಪ್ಪಿಸಿ ಚುಂಬಿಸಿದ್ದನಾಚಿ ನೀರಾದ ಅವಳನ್ನು ಒಪ್ಪಿಸಿ, ಅರ್ಧ ಘಂಟೆಯಲ್ಲಿ ಬರುವದಾಗಿ ಮನೆಯಿಂದ ಹೊರಬಂದಿದ್ದಬೈಕಿನವರೆಗೂ ಬಂದ ಅವಳು ಅವನ ಕೈ ಹಿಡಿದು "ಯಾವುದೇ ಕಾರಣಕ್ಕೂ ಜಾಸ್ತಿ ಕುಡಿಬೇಡಿ, ಬೇಕಾದ್ರೆ ಮನೆಗೇ  ತೊಗೊಂಡು ಬನ್ನಿ, ಬಾರಿನಲ್ಲಿ ಜಾಸ್ತಿ ಹೊತ್ತು ಕೂರಬೇಡಿ"ಎಂದು ತಾಕೀತು ಮಾಡಿದ್ದಳು. ಹೂಗುಟ್ಟಿ ಹೊರಟವನು ಸೀದಾ ಹೋಗಿ ಬೈಕ್ ನಿಲ್ಲಿಸಿದ್ದು ವಿಜಯಲಕ್ಷ್ಮಿ ಬಾರಿನ ಮುಂದೆವಾರಕ್ಕೊಮ್ಮೆ ಸಿಗುವ ರಜಾ ದಿನದಂದು ಮನಕ್ಕೆ ಇಷ್ಟವಾದುದನ್ನು ತಿಂದು, ಮನಸ್ಸಿಗೆ ಸಮಾಧಾನವಾಗುವಷ್ಟು ಕುಡಿಯದೆ ಇದ್ದರೆ  ಅವನಿಗೆ ಇರಲಾಗುತ್ತಿರಲಿಲ್ಲಬಾರಿನ ಮೂಲೆಯೊಂದರಲ್ಲಿ ಕುಳಿತು ತನಗಿಷ್ಟವಾದ ಸಿಗ್ನೇಚರ್ ವಿಸ್ಕಿ ತರಿಸಿ  ಹುರಿದ ಕಡಲೆ ಬೀಜದೊಡನೆ ಎರಡು ಪೆಗ್ ಏರಿಸಿದ್ದಅಷ್ಟರಲ್ಲಿ ಒಬ್ಬೊಬ್ಬರಾಗಿ ಬಂದ ಅವನ ಗೆಳೆಯರ ಸೈನ್ಯದಿಂದ ಟೇಬಲ್ ತುಂಬಿ ಹೋಗಿತ್ತುಅಲ್ಲಿಂದ ಶುರುವಾದ ಮಾತು, ಮಾತು, ಮಾತು, ಅಷ್ಟೇ,,,,ಸಮಯ ಸರಿದು ಹೋದ ಪರಿವೆ ಅವರಾರಿಗೂ ಇರಲಿಲ್ಲ!

ಮಧ್ಯಾಹ್ನದ ಊಟಕ್ಕಾಗಿ ಕಾದು ಕಾದು ಸುಸ್ತಾದ ಮಡದಿ ಅವನ ಮೊಬೈಲಿಗೆ ಫೋನ್ ಮಾಡಿದಾಗಲೇ ಅವನಿಗೆ ಗೊತ್ತಾಗಿದ್ದು, ತಾನಿನ್ನೂ ಊಟ ಮಾಡಿಲ್ಲ, ಮನೆಯಲ್ಲಿ ತನಗಾಗಿ ಮಡದಿ, ಮಕ್ಕಳು ಕಾಯುತ್ತಿದ್ದಾರೆಂದುಗೆಳೆಯರಿಗೆಲ್ಲಾ ಬೈ ಬೈ ಹೇಳಿ, ಆತುರಾತುರವಾಗಿ ಬಿಲ್ ಪಾವತಿಸಿ, ರಾತ್ರಿಗೆಂದು ಇನ್ನೊಂದು ಕ್ವಾಟರ್ ಪಾರ್ಸೆಲ್ ಮಾಡಿಸಿಕೊಂಡು ಮನೆಗೆ ಬಂದಿದ್ದಇವನ ಗಾಡಿಯ ಸದ್ದು ಕೇಳಿದೊಡನೆ ಮುದ್ದಿನ ನಾಯಿ ಟಾಮಿ ಕುಣಿದಾಡುತ್ತಾ ಬಂದು ಇವನನ್ನು ಸ್ವಾಗತಿಸಿತ್ತುಮನೆಯೊಳಕ್ಕೆ ಹೋದವನನ್ನು ಧುಮುಧುಮನೆ ಉರಿಯುತ್ತಿದ್ದ ಮಡದಿಯ ಕೋಪೋದ್ರಿಕ್ತ ಮುಖ ಸ್ವಾಗತಿಸಿತ್ತುಎಷ್ಟು ಹೊತ್ತು ನಿಮಗೋಸ್ಕರ ಕಾಯೋದು, ವಾರಕ್ಕೊಂದು ದಿನ ಹೆಂಡತಿ ಮಕ್ಕಳ ಜೊತೆ ಕೂತು ಊಟ ಮಾಡೋದಿಕ್ಕೆ ಆಗೋದಿಲ್ವಾ ನಿಮಗೆ ಎಂದು ಸರಿಯಾಗಿ ಜಾಡಿಸಿದ್ದಳುಅಲ್ಲಿ ನನ್ನ ಗೆಳೆಯರೆಲ್ಲಾ ಬಂದ್ರು, ಅದಕ್ಕೇ ತಡವಾಯ್ತು ಎಂದು ಕೈ ತೊಳೆದು ಊಟಕ್ಕೆ ಕುಳಿತಿದ್ದಮಕ್ಕಳಿಬ್ಬರೂ ಬಂದು ಎದ ಬಲದಲ್ಲಿ ಆಸೀನರಾಗಿದ್ದರು, ಅವರೊಡನೆ ಜಾಲಿಯಾಗಿ ಮಾತನಾಡುತ್ತಾ, ನಗಿಸುತ್ತಾ, ಮುನಿಸಿಕೊಂಡಿದ್ದ ಮಡದಿಯನ್ನೂ ಜೋಕುಗಳನ್ನು ಹೇಳಿ ನಗಿಸುತ್ತಾ ಮಟನ್ ಖೈಮಾ, ರಾಗಿ ಮುದ್ದೆಯ ಊಟ, ಜೊತೆಗೆ ಸ್ವಲ್ಪ ಬಿರಿಯಾನಿ, ಒಂದು ಮೀನು ಫ್ರೈ ತುಂಡು ಖಾಲಿ ಮಾಡಿದ್ದಇಡೀ ಕುಟುಂಬ ಅಂದು ಸಂತೋಷದಿಂದ ಭಾನುವಾರದ ಭರ್ಜರಿ ಬಾಡೂಟದ ಸವಿಯನ್ನು ಸವಿದಿದ್ದರು, ಮೆತ್ತಗೆ ರೂಮು ಸೇರಿದ ಇವನು ಮತ್ತೊಮೆ ಗಾಢ ನಿದ್ರೆಗೆ ಜಾರಿದ್ದ.

ಸುಮಾರು ಎರಡು ಘಂಟೆಗಳ ನಿದ್ದೆಯ ತರುವಾಯ ಮತ್ತೊಮ್ಮೆ ಮಗನ ಗಲಾಟೆಗೆ ಮಣಿದು ಎದ್ದ, ಮುಖ ತೊಳೆದು ಮಡದಿ ತಂದಿತ್ತ ಕಾಫಿ ಕುಡಿದು ಹಾಲಿನಲ್ಲಿದ್ದ ದಿವಾನ್ ಮೇಲೆ  ಪವಡಿಸಿದ. ಸಂಜೆ ಉದಯ ಟಿವಿಯಲ್ಲಿ ವಿಷ್ಣುವರ್ಧನ್ ಅಭಿನಯದ ಚಲನಚಿತ್ರ ಬರುತ್ತಿತ್ತು, ದಿವಾನ್ ಮೇಲೆ ಎರಡು ದಿಂಬು ಹಾಕಿ ಮಲಗಿಕೊಂಡು ಇವನು ಚಿತ್ರ  ವೀಕ್ಷಿಸುತ್ತಿದ್ದರೆ ಅವನ ಎಡ ತೋಳಿನ ಮೇಲೆ ಮಗ, ಬಲ ತೋಳಿನ ಮೇಲೆ ಮಗಳು ಅವನನ್ನು ಅಪ್ಪಿಕೊಂಡೇ ಮಲಗಿ ಚಿತ್ರ ವೀಕ್ಷಿಸುತ್ತಿದ್ದರುಮಡದಿ ದಿವಾನ್ ಪಕ್ಕದಲ್ಲಿ ಕುಳಿತು ಚಿತ್ರದಲ್ಲಿ ಬರುತ್ತಿದ್ದ ರಸವತ್ತಾದ ಸನ್ನಿವೇಶಗಳಿಗೆ ನಗುತ್ತಾ, ಮಕ್ಕಳನ್ನೂ ನಗಿಸುತ್ತಾ ಇದ್ದಳು.    ಚಿತ್ರ ನೋಡುತ್ತಲೇ ಮಕ್ಕಳಿಬ್ಬರೂ ಅವನ ತೋಳಿನ ಮೇಲೆಯೇ ಮಲಗಿ ನಿದ್ದೆ ಹೋಗಿದ್ದರುಒಬ್ಬೊಬ್ಬರನ್ನೇ ಎತ್ತಿಕೊಂಡು ಹೋಗಿ ಅವರ ಹಾಸಿಗೆಯ ಮೇಲೆ ಮಲಗಿಸಿ ಬಂದ  ಮಡದಿ ಈಗ ಅದೇ ದಿವಾನ್ ಮೇಲೆ ಅವನನ್ನು ತಬ್ಬಿ ಮಲಗಿದ್ದಳುಅವಳ ಬೆಚ್ಚನೆಯ ಅಪ್ಪುಗೆ ಅವನಲ್ಲಿ ಕಿಚ್ಚು ಹತ್ತಿಸಿತ್ತು. ಭಾನುವಾರ ಅವರಿಬ್ಬರಿಗೂ ಶೃಂಗಾರಮಯವಾಗಿತ್ತು, ಲೋಕ ಮರೆತ ಪ್ರಣಯಪಕ್ಷಿಗಳಂತೆ ಸುಖದ ಸುಪ್ಪತ್ತಿಗೆಯಲ್ಲಿ ಅವರಿಬ್ಬರೂ ತೇಲಿ ಹೋಗಿದ್ದರು.  

ಅಂದಿನ ತನ್ನ ಸಂಸಾರ ಸುಖವನ್ನು ಕಂಡ ಇವನು ಮನಸ್ಸಿನಲ್ಲಿಯೇ ತನ್ನ ಮನೆದೇವರಿಗೆ ಪ್ರಾರ್ಥಿಸುತ್ತಿದ್ದ, ದೇವರೇ ನನ್ನ ಕುಟುಂಬ ಯಾವಾಗಲೂ ಹೀಗೆಯೇ ನಗುನಗುತ್ತಾ ಇರುವಂತೆ ನೋಡಿಕೋ!