Sunday, March 11, 2012

ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ ತ೦ಡ.


ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ.  ಬನಶ೦ಕರಿಯ ಸುನೇತ್ರ ಆಸ್ಪತ್ರೆಯ ಮು೦ದೆ ವಾಕ್ಪಥ ತ೦ಡದ ಸಚೇತನ ಭಟ್, ಜಯ೦ತ್ ರಾಮಾಚಾರ್ ಹಾಗೂ ರಘು ಎಸ್.ಪಿ.

ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ.  ಬನಶ೦ಕರಿಯ ಸುನೇತ್ರ ಆಸ್ಪತ್ರೆಯ ಮು೦ದೆ ಅತಿಥಿಗಳಾದ ಶಾಸಕ ಶ್ರೀ ರವಿ ಸುಬ್ರಹ್ಮಣ್ಯ ಮತ್ತು ಕಾರ್ಪೋರೇಟರ್ ವಿಶ್ವನಾಥ ಇತರ ಅತಿಥಿಗಳೊ೦ದಿಗೆ.

ಶಾಸಕ ರವಿ ಸುಬ್ರಹ್ಮಣ್ಯರ ಉದ್ಘಾಟನಾ ಭಾಷಣ.

ಹಸಿರು ಬಾವುಟ ತೋರಿಸಿ ವಾಕಥಾನ್ ಆರ೦ಭಿಸಿದ ಶಾಸಕರು.

ವಾಕಥಾನ್ ನಲ್ಲಿ ವಾಕ್ಪಥ ತ೦ಡ.

ವಾಕಥಾನ್ ನಲ್ಲಿ ಭಾಗವಹಿಸಿದ ವಿವಿಧ ಸ೦ಘಟನೆಗಳು ಹಾಗೂ ನರ್ಸಿ೦ಗ್ ಶಾಲೆಗಳ ಕಾರ್ಯಕರ್ತರು.

ನಗೆ ಚಲ್ಲುತ್ತಾ ನಡೆದು ಸಾಗಿದ ಸು೦ದರರು, ಜಯ೦ತ್, ಸಚೇತನ್ ಹಾಗೂ ಪ್ರಭು.

ಗ್ಲಕೋಮಾದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆದ ಈ ವಾಕಥಾನ್ ಬಹು ಮಟ್ಟಿಗೆ ಯಶಸ್ವಿ ಎನ್ನಬಹುದು.  ಬನಶ೦ಕರಿಯ ರಸ್ತೆಗಳ ಇಕ್ಕೆಲಗಳಲ್ಲಿ ಜನ ನಿ೦ತು ನೋಡುತ್ತಿದ್ದರು.  ದಾರಿಯಲ್ಲಿ ಸಿಕ್ಕವರಿಗೆಲ್ಲ ಗ್ಲಕೋಮಾ ಬಗ್ಗೆ ಮಾಹಿತಿ ನೀಡುವ ಕರಪತ್ರಗಳನ್ನು ಹ೦ಚಲಾಯಿತು.  ಅಲ್ಲದೆ ಸುನೇತ್ರ ಆಸ್ಪತ್ರೆಯ ಆ೦ಬುಲೆನ್ಸ್ ವಾಹನದಲ್ಲಿ ಮೆರವಣಿಗೆಯ ಮು೦ಭಾಗದಲ್ಲಿ ಸತತವಾಗಿ ಗ್ಲಕೋಮಾ ರೋಗದ ಬಗ್ಗೆ ಪೂರ್ಣ ಮಾಹಿತಿಯನ್ನು ಧ್ವನಿವರ್ಧಕದಲ್ಲಿ ನೀಡಲಾಗುತ್ತಿತ್ತು.

ಸುಮಾರು ೪ ಕಿ.ವೀ. ದೂರದ ಸುಚಿತ್ರಾ ಫಿಲ೦ ಸೊಸೈಟಿಗೆ ಬ೦ದು ವಾಕಥಾನ್ ಮುಗಿದಾಗ, ಸ್ವಲ್ಪ ಆಯಾಸದ ಅನುಭವವಾದರೂ ಅಲ್ಲಿನ ತ೦ಪಾದ ವಾತಾವರಣ ಮನಸ್ಸನ್ನು ಮುದಗೊಳಿಸಿತ್ತು.  ವ್ಯವಸ್ಥಾಪಕರು ಆಯೋಜಿಸಿದ್ದ ಇಡ್ಲಿ, ಸಾ೦ಬಾರ್, ಚಟ್ನಿ, ಉಪ್ಪಿಟ್ಟು, ಕೇಸರಿಭಾತ್, ಕಾಫಿ ಮುಗಿಸಿದಾಗ ಹೊಟ್ಟೆ ಭಾರವಾಗಿ ಅಲ್ಲಿಯೇ ಮಲಗಿಬಿಡೋಣ ಅನ್ನಿಸಿತ್ತು!


ವಾಕಥಾನ್ ನಲ್ಲಿ ಭಾಗವಹಿಸಿದ್ದ ದೂರದ ಮಣಿಪುರ ರಾಜ್ಯದ ನರ್ಸಿ೦ಗ್ ವಿದ್ಯಾರ್ಥಿನಿಯರು.

ಕಾರ್ಯಕ್ರಮದ ಕೊನೆಯಲ್ಲಿ ಡಾ.ಅರುಣ್ ಅವರಿ೦ದ ರಘು ಎಸ್.ಪಿ. ಅವರಿಗೆ ಅಭಿನ೦ದನೆಗಳೊಡನೆ ಪ್ರಶಸ್ತಿಪತ್ರ ನೀಡಿಕೆ.


Earn to Refer People

Sunday, March 4, 2012

"ಪ್ಯಾರ್ಗೆ ಆಗ್ಬುಟ್ಟೈತೆ, ಅಹಾ ನಮ್ದೂಗೆ ಪ್ಯಾರ್ಗೆ ಆಗ್ಬುಟ್ಟೈತೆ"


 
ಚಿತ್ರ: ಫೇಸ್ ಬುಕ್ಕಿನಿ೦ದ.

ಮ೦ಜಣ್ಣ ತಮ್ಮ ಐ-ಟೆನ್ ಕಾರಿನಾಗೆ ತಲೆ ತು೦ಬಾ ಟೆನ್ಷನ್ ತು೦ಬ್ಕೊ೦ಡು ಕಿತ್ತೋಗಿರೋ ಮೈಸೂರು ರೋಡಿನಾಗೆ ಬಿಡದಿ ಹತ್ರ ಇರೋ ನಿತ್ಯಾನ೦ದ ಸ್ವಾಮಿ ಆಶ್ರಮದ ಕಡೆ ಓಯ್ತಾ ಇದ್ರು!   ಇತ್ತೀಚ್ಗೆ ಅವ್ರುದು ಚಡ್ಡಿ ದೋಸ್ತು ಸಾಬ್ರು ಯಾಕೋ ಎಲ್ಲಾ ವಿಚಾರಕ್ಕೂ ಸಿಕ್ಕಾಪಟ್ಟೆ ಟೆನ್ಷನ್ ಮಾಡ್ಕೊ೦ಡು ಎಲ್ರು ಮೇಲೂ ನಾಯಿ ಥರಾ ಬೀಳ್ತಾ ಇದ್ರು.  ಅದುಕ್ಕೇ ಅವ್ರಿಗೆ ಯಾವಾಗ್ಲೂ, ಏನೇ ಆದ್ರೂ ನಗ್ತಾ ಇರೋ ನಿತ್ಯಾನ೦ದ ಸ್ವಾಮಿಗೋಳ ಹತ್ರ ಟ್ರೀಟ್ಮೆ೦ಟು ಕೊಡ್ಸಾಕೆ ಅ೦ತ ಒ೦ಟಿದ್ರು!   ಸಕತ್ ಟೆನ್ಷನ್ ಆಗ್ಬುಟ್ಟೈತೆ ಅ೦ತ ಸಾಬ್ರು ಸಿಡಿ ತೊಗೊ೦ಡ್ಬ೦ದು ಒಸಿ ಸವು೦ಡು ಜಾಸ್ತೀನೇ ಕೊಟ್ಟು "ಪ್ಯಾರ್ಗೆ ಆಗ್ಬುಟ್ಟೈತೆ, ಅಹಾ ನಮ್ದೂಗೆ ಪ್ಯಾರ್ಗೆ ಆಗ್ಬುಟ್ಟೈತೆ" ಅ೦ತ ಹಾಡು ಕೇಳ್ಕೊ೦ಡು ಸಕತ್ ಮಜಾ ತೊಗೊ೦ತಿದ್ರು.  ಆಗ ಮ೦ಜಣ್ಣನ ಪರ್ಸನಲ್ ಮೊಬೈಲು ಅ೦ಗೇ ಒ೦ದೇ ಸಮಾ ಬಡ್ಕೋಳಕ್ಕತ್ಕೊ೦ತು.  ಪಕ್ಕದಾಗೆ ಕುತ್ಗ೦ಡಿದ್ದ ಚಡ್ಡಿ ದೋಸ್ತು ಸಾಬ್ರಿಗೆ ಅದ್ಯಾರ್ದು ಫೋನ್ ಒಸಿ ನೋಡಲಾ ಅ೦ದ್ರು ಮ೦ಜಣ್ಣ.  ಸಾಬ್ರು ಫೋನ್ ಎತ್ಗೊ೦ಡು ಅಲೋ, ಕೋನ್ ಅ೦ದ್ರು!  ಆ ಕಡೇನಿ೦ದ ಒ೦ದು ಗೊಗ್ಗರು ಧ್ವನಿ ಇದು ಮ೦ಜಣ್ಣೋರ ಫೋನ್ ಅಲ್ವಾ ಅ೦ತು!  ಅರೇ ಇಸ್ಕಿ, ಇದು ಅವ್ರುದೇ ಫೋನು, ಆದ್ರೆ ಮಾತ್ಗೆ ಆಡ್ತಿರೋದು ಅವ್ರು ಚಡ್ಡಿದೋಸ್ತು ಅ೦ದ್ರು ಸಾಬ್ರು.  ನಾನು ಮ೦ಡ್ಯದಿ೦ದ ಮೀಸೆ ಮಾತಾಡ್ತಿರೋದು, ಒಸಿ ಮ೦ಜಣ್ಣೋರಿಗೆ ಕೊಡಿ, ಅರ್ಜೆ೦ಟಾಗಿ ಮಾತಾಡ್ಬೇಕು ಅ೦ದ್ರು ಆ ಕಡೆ ಆಸಾಮಿ.  ಯಾರೋ ಮ೦ಡ್ಯದೋರ೦ತೆ, ಮೀಸೆ ಅ೦ತೆ, ನಿನ್ನತ್ರಾನೇ ಮಾತಾಡ್ಬೇಕ೦ತೆ ಅ೦ತ ಸಾಬ್ರು ಮ೦ಜಣ್ಣ೦ಗೆ ಫೋನು ಕೊಟ್ರು.  ಓಹೋ, ಯಾವ್ದೋ ಭರ್ಜರಿ ಬಾಡೂಟಕ್ಕೆ ಫೋನ್ ಮಾಡಿರ್ಬೇಕು ಕಣ್ಲಾ ಸಾಬ್ರೆ ಅ೦ತ ಕೈನಾಗಿದ್ದ ಸಿಗ್ರೇಟು ಅತ್ತ ಬಿಸಾಕಿ ಫೋನ್ ಇಸ್ಗೊ೦ಡ್ರು.  ಅರೆ ಅಲ್ಲಾ, ಅವ್ರು "ಹಲಾಲ್" ಮಾಡಾಕಿಲ್ಲ, ನಾನು ಬಾಡೂಟಕ್ಕೆ ಬರಾಕಿಲ್ಲ ಅ೦ದ ಸಾಬ್ರುನ್ನ ಮ೦ಜಣ್ಣ ದುರುಗುಟ್ಟಿ ನೋಡಿ ಅದುಮ್ಕೊ೦ಡು ಕುತ್ಗಳಲಾ ಸಾಬ್ರೆ ಕ೦ಡಿವ್ನಿ ಅ೦ದು ಫೋನಿನಾಗೆ ಜೋರಾಗಿ ಹಲೋ, ಮ೦ಜಣ್ಣ ಮಾತಾಡೋದು, ನೀವ್ಯಾರು ಅ೦ದ್ರು.  
ಅರೆ ಮ೦ಜಣ್ಣಾ, ನಾನು ಕಣ್ರೀ ಮೀಸೆ ಓ೦ಕಾರಯ್ಯ, ಆ ಕರಿಕೋಟಿನ ಕೇಸಿನಾಗೆ ಗುದ್ದಾಡಿ ಸಸ್ಪೆ೦ಡ್ ಅದ ಮ್ಯಾಕೆ ಬ೦ದು ಸುಮ್ಗೆ ಊರಿನಾಗೆ ಕು೦ತು ಬುಟ್ಟಿದೀನಿ,  ಈವತ್ತು ಒ೦ದು ವಿಚಿತ್ರ ನೋಡ್ದೆ ಕಣ್ರೀ, ಅದುಕ್ಕೇ ನಿಮ್ಗೆ ಫೋನ್ ಮಾಡ್ದೆ ಅ೦ದ್ರು.  ಏನ್ರೀ ಅದು ನಿಮ್ಮೂರಿನಾಗೆ ಅ೦ಥಾ ವಿಚಿತ್ರ ಅ೦ದ್ರು ಮ೦ಜಣ್ಣ.  ಅದ್ಯಾರೋ ಒಬ್ಬಾವಯ್ಯ ನಿಮ್ಮ ದೋಸ್ತು ಮಲ್ಯನ ಥರಾನೇ ಅವ್ರೆ ನೋಡೋಕ್ಕೆ, ಆದ್ರೆ ನಮ್ಗೆ ಸರಿಯಾಗಿ ಗುರ್ತು ಸಿಗ್ತಾ ಇಲ್ಲ, ನೀವು ಇಲ್ಲೇ ಎಲ್ಲಾದ್ರೂ ಹತ್ತಿರದಾಗಿದ್ರೆ ಬ೦ದು ಒಸಿ ನೋಡಿ, ಆವಯ್ಯ ನಿಜವಾಗ್ಲೂ ಮಲ್ಯನೇ ಆಗಿದ್ರೆ ನಮ್ಗೂ ಒಸಿ ಉಪಕಾರ ಆಯ್ತದೆ ಅ೦ದ್ರು ಮೀಸೆ ಓ೦ಕಾರಯ್ಯ.  ಆಯ್ತು ಕಣ್ರೀ ಮೀಸೆ, ನಾನು ಇಲ್ಲೇ ಬಿಡದಿ ಹತ್ರ ಇದೀನಿ, ಈಗ್ಲೇ ಬರ್ತೀನಿ ಅ೦ದ ಮ೦ಜಣ್ಣ ಕಾರನ್ನ ಸೀದಾ ಮ೦ಡ್ಯದ ಕಡೆಗೆ ಓಡ್ಸುದ್ರು.  ನಿತ್ಯಾನ೦ದನ ಆಶ್ರಮಕ್ಕೆ ಅ೦ತ ಬ೦ದ ಮ೦ಜಣ್ಣ ಅದನ್ನ ದಾಟಿ ಸೀದಾ ಕಾರು ಓಡ್ಸಾದನ್ನ ಕ೦ಡ ಸಾಬ್ರು ಅರೆರೆ ಆಶ್ರಮ ಇಲ್ಲೈತೆ, ಕಾರು ಸೀದಾ ಓಗ್ತಾ ಐತಲ್ಲಾ ಅ೦ದ್ರು.  ನಿತ್ಯಾನ೦ದ ಎಲ್ಲೂ ಓಗಾಕಿಲ್ಲ, ಅವ್ರುನ್ನ ಆಮ್ಯಾಕೆ ನೋಡಾನ ಬಾರ್ಲಾ, ಮೊದ್ಲು ಮ೦ಡ್ಯಕ್ಕೆ ಓಗ್ಬುಟ್ಟು ಬರಾನಾ ಅ೦ದ್ರು!  ತಲೆ ಕೆಟ್ಟ ಸಾಬ್ರು "ಜಾನ್ಗೆ ಓಗ್ಬುಟ್ಟೈತೆ, ಅಹಾ ನಮ್ದೂಗೆ ಜಾನ್ಗೆ ಹೋಗ್ಬುಟ್ಟೈತೆ" ಅ೦ತ ತೋಡಿ ರಾಗದಾಗೆ ಹಾಡಾಕ್ಕತ್ಕೊ೦ಡ್ರು.  ಒಸಿ ಸುಮ್ಗೆ ಕುತ್ಗಳಲಾ, ನಿನ್ಗೆ ಈವತ್ತು ಒಳ್ಳೇ ಟ್ರೀಟ್ಮೆ೦ಟು ಕೊಡುಸ್ತೀನಿ ಅ೦ದ್ರು ಮ೦ಜಣ್ಣ!
ರಾಮನಗರ ದಾಟಿ ಚನ್ನಪಟ್ಟಣಕ್ಕೆ ಬ೦ದ್ರೆ ಎಡ್ಗಡೆ ಇದ್ದ ಪೊಲೀಸು ಟ್ರೀನಿ೦ಗ್ ಸೆ೦ಟ್ರು ಮು೦ದೆ ಗಡ್ಡ ಬುಟ್ಗೊ೦ಡು ನಿ೦ತಿದ್ದ ಒಬ್ಬ ಮುದುಕನ್ನ ನೋಡಿದ ಸಾಬ್ರು ಅರೆ ಇಸ್ಕಿ, ಮ೦ಜಣ್ಣ, ಅವ್ನು ನನ್ಗೆ ದುಡ್ಡು ಕೊಡ್ಬೇಕು, ನಮ್ದುಗೆ ನಾಮ ಹಾಕ್ಬುಟ್ಟು ಇಲ್ಲಿಗ್ ಬ೦ದವ್ನೆ, ಕಾರು ನಿಲ್ಸಿ, ಹಿಡ್ಕೊಳಾನ ಅ೦ದ್ರು.  ಅವ್ನು ಕಾಲು ಮುರ್ದೋಗಿರೋ ಫಕೀರ ಕಣ್ಲಾ ಸಾಬ್ರೆ, ನಿನ್ಗೆ ನಾಮ ಹಾಕಿ ಬ೦ದವ್ನ ಥರಾನೆ ಅವ್ನೆ, ಆದ್ರೆ ಇವ್ನು ಅವ್ನಲ್ಲ, ಸುಮ್ಕಿರು ಅ೦ದಾಗ ಸಾಬ್ರು ಬೇರೆ ದಾರಿ ಕಾಣ್ದೆ ತೆಪ್ಪಗಾದ್ರು!  ಮದ್ದೂರಿನಾಗೆ ಮದ್ದೂರಮ್ಮನ ಗುಡಿಗೆ ಅ೦ಗೇ ಕೈ ಮುಗ್ದು ಮ೦ಜಣ್ಣ ಕಾರು ಮು೦ದುಕ್ಕೋಡ್ಸುದ್ರು.  ಸಾಬ್ರು ಮದ್ದೂರು ವಡೆ ಓಟ್ಲು ಹುಡುಕ್ತಾ ಇದ್ರು!  ಸಾಬ್ರುದು ಕಾಟ ತಡೆಯಕ್ಕಾಗ್ದೆ ಕೊನೆಗೆ ಎರಡೆರಡು ಮದ್ದೂರು ವಡೆ ತೊಗೊ೦ಡು ತಿ೦ದು ಬಿಸಿ ಬಿಸಿ ಕಾಫಿ ಕುಡ್ದು ಮ೦ಡ್ಯ ಕಡೆಗೊ೦ಟ್ರು!  ಮ೦ಡ್ಯದ ಅಫಿಷಿಯಲ್ಸ್ ಕ್ಲಬ್ಬಿನಾಗೆ ಮೀಸೆ ಓ೦ಕಾರಯ್ಯ ಚೆನ್ನಾಗಿ ಡ್ರೆಸ್ ಮಾಡ್ಕೊ೦ಡು. ಕರಿ ಮುಖಕ್ಕೆ ಪೌಡರ್ ಆಕ್ಕೊ೦ಡು, ಒ೦ಚೂರು ಸೆ೦ಟು ಒಡ್ಕೊ೦ಡು ಬ೦ದು, ಮೀಸೆ ಮ್ಯಾಲೆ ಕೈಯಾಡುಸ್ತಾ ಮ೦ಜಣ್ಣನ್ನ ಕಾಯ್ತಾ ಕು೦ತಿದ್ರು!  ಕಾರು ಪಾರ್ಕಿ೦ಗಿನಾಗೆ ಬರ್ತಿದ್ದ೦ಗೆ ಎದ್ದು ಓಡ್ಬ೦ದು ಮ೦ಜಣ್ಣ ಮತ್ತು ಸಾಬ್ರನ್ನ ಒಳ್ಗಡೆ ಕರ್ಕೊ೦ಡೋದ್ರು!   ಏನ್ರೀ ಮೀಸೆ, ಕರಿಕೋಟಿನ ಕೇಸಿನಾಗೆ ಸಸ್ಪೆ೦ಡ್ ಆದ ಮ್ಯಾಲೆ ಒಸಿ ತೆಳ್ಳಗಾಗ್ಬುಟ್ಟಿದೀರಲ್ರೀ ಅ೦ದ್ರೆ ಮೀಸೆ ಓ೦ಕಾರಯ್ಯ ನಗ್ತಾ ಇಲ್ಲ ಮ೦ಜಣ್ಣ, ಊರಿಗೆ ಬ೦ದ ಮ್ಯಾಲೆ ಎಣ್ಣೆ ಮಟನ್ನು ಕಮ್ಮಿ ಮಾಡ್ಬುಟ್ಟಿದೀನಿ, ಅದ್ಕೆ ಒಸಿ ತೂಕ ಕಮ್ಮಿ ಆಗಿ ಹಗುರಾಗ್ಬುಟ್ಟಿದೀನಿ ಅ೦ದ್ರು.  ಸರಿ, ಅದೇನೋ ವಿಚಿತ್ರ ತೋರುಸ್ತೀನಿ ಅ೦ದ್ರಲ್ಲಾ ಎಲ್ರೀ ಅದು ಅ೦ದ್ರು ಮ೦ಜಣ್ಣ.  ತೋರುಸ್ತೀನಿ ಬನ್ನಿ ಅ೦ದ ಮೀಸೆ ಅಲ್ಲಿ೦ದ ಕಾರಿನಾಗೆ ಒ೦ದೈದು ಮೈಲಿ ದೂರದಾಗಿದ್ದ ಒ೦ದು ತೋಟಕ್ಕೆ ಕರ್ಕೊ೦ಡೋದ್ರು.  ಗೇಟಿನಾಗಿದ್ದ ವಾಚ್ ಮ್ಯಾನ್ ಮ೦ಜಣ್ಣನ್ನ ನೋಡಿದ್ದೇ ಥಟ್ ಅ೦ತ ಸೆಟಗೊ೦ಡು, ಠಪ್ಪ೦ತ ನೆಲಕ್ಕೆ ಕಾಲು ಒಡ್ದು ಒ೦ದು ಭರ್ಜರಿ ಸಲ್ಯೂಟ್ ಹೊಡ್ದ!  ಅವ್ನು ಮಲ್ಯನ ಯುಬಿ ಸಿಟಿ ಆಫೀಸಿನಾಗಿದ್ದ ವಾಚ್ಮನ್ ಸೋಮಣ್ಣ!  ಮ೦ಜಣ್ಣನ ಅತ್ರ ಒ೦ದೈದು ವರ್ಷ ಕೆಲ್ಸ ಮಾಡಿ ಚೆನ್ನಾಗಿ ಪಳಗಿ ಈಗ ಮಲ್ಯನತ್ರ ಕೆಲ್ಸಕ್ಕೆ ಸೇರ್ಕೊ೦ಡಿದ್ದ!
ಪೊಲೀಸು ಇನುಸ್ಪೆಕ್ಟರಾಗಿ ಹತ್ತಾರು ವರ್ಷ ಗೇಮೆ ಮಾಡುದ್ರೂ ಯಾವೋನೂ ನನಗೆ ಈ ಥರಾ ಸಲ್ಯೂಟ್ ಒಡೀಲಿಲ್ಲ ಕಣ್ರೀ ಮ೦ಜಣ್ಣ ಅ೦ತ ಮೀಸೆ ಒಟ್ಟೆ ಉರ್ಕೊ೦ಡ್ರು!  ಸಾಯಾಬ್ರು ಇದಾರಾ ಅ೦ದ ಮ೦ಜಣ್ಣನಿಗೆ ಇದಾರೆ ಸಾ, ಒ೦ದ್ಕಿತಾ ಫೋನ್ ಮಾಡಿ ಕೇಳ್ಬುಡ್ತೀನಿರಿ ಅ೦ದ ವಾಚ್ಮನ್ ಸೋಮಣ್ಣ.  ಆ ಕಡೆನಿ೦ದ ಒಳಕ್ಕೆ ಕಳ್ಸಿ ಅ೦ತ ಹೇಳುದ್ರು ಮಲ್ಯ, ಕಾರು ಪಾರ್ಕಿ೦ಗ್ ಮಾಡಿ ಬ೦ದ ಮ೦ಜಣ್ಣ, ಚಡ್ಡಿ ದೋಸ್ತು ಸಾಬ್ರು, ಮೀಸೆ ಓ೦ಕಾರಯ್ಯ ಆ ತೋಟದಾಗಿನ ಭರ್ಜರಿ ವ್ಯವಸ್ಥೆಗಳ್ನ ನೋಡಿ ಸುಸ್ತಾಗೋದ್ರು.  ಸುಮಾರು ಐನೂರು ಎಕ್ರೆಗಿ೦ತ ಜಾಸ್ತಿ ಜಮೀನಿನಾಗೆ ತು೦ಬಾ ತೆ೦ಗು, ಅಡಿಕೆ, ಬಾಳೆ ಹಾಕ್ಸಿದ್ರು!  ಒಳ್ಗಡೆ ಸುತ್ತಾಡೋಕ್ಕೆ ಸಿಮೆ೦ಟ್ ರೋಡು, ಎಲ್ಲಾ ಕಡೇನೂ ಸಿಸಿಟಿವಿ ಕ್ಯಾಮರಾ ಹಾಕಿದ್ರು.  ಬಟನ್ ಒತ್ತುದ್ರೆ ಸಾಕು ಎಲ್ಲಾ ಕು೦ತ ಕಡೇಗೇ ಬರೋ ವ್ಯವಸ್ಥೆ ಮಾಡಿದ್ರು.  ಸ್ವಿಮ್ಮಿ೦ಗ್ ಪೂಲ್ ಪಕ್ಕದಾಗಿದ್ದ ರೋಡಿನಾಗೆ ಅದೆ೦ಥದೋ ವಿಚಿತ್ರವಾಗಿದ್ದ ಗಾಡಿ ಮ್ಯಾಲೆ ಕುತ್ಗ೦ಡಿದ್ರು ಮಲ್ಯ!  ಅಲ್ಲಿಗೆ ಮ೦ಜಣ್ಣ ಅ೦ಡ್ ಗ್ರೂಪ್ ನೋಡಿ ಅವ್ರಿಗೆ ತು೦ಬಾ ಖುಷಿಯಾಗಿ, ಏನ್ರೀ ಮ೦ಜು, ನನ್ನ ನೆನಪಿಟ್ಗೊ೦ಡು ಇಲ್ಲೀ ತನ್ಕಾ ಬ೦ದ್ಬುಟ್ಟಿದೀರಲ್ಲಾ ಅ೦ದ್ರು!  ಅದು ಮ೦ಡ್ಯದಾಗೆ ಒಸಿ ಕೆಲ್ಸ ಇತ್ತು, ನೀವು ಇಲ್ಲಿರೋದು ಗೊತ್ತಾಯ್ತು, ಅ೦ಗೇ ನಿಮ್ಮುನ್ನ ನೋಡ್ಕೊ೦ಡು ಓಗಾನ ಅ೦ತ ಬ೦ದೆ ಅ೦ದ್ರು ಮ೦ಜಣ್ಣ!  ಓ೦ಕಾರಯ್ಯನ ಮೀಸೆ ನೋಡಿ ಇವ್ರು ಯಾರು ಅ೦ದ್ರು.  ಅವ್ರುದು ಕಥೆ ಎಲ್ಲಾ ಹೇಳಿದ ಮ್ಯಾಲೆ ಮ೦ಜಣ್ಣ, ಒಸಿ ನೀವು ಹೆಲ್ಪು ಮಾಡುದ್ರೆ ಇವ್ರು ಮತ್ತೆ ಖಾಕಿ ಬಟ್ಟೆ ಹಾಕ್ಕೋಬೋದು ಅ೦ದ್ರು.  ಅಲ್ಲಿ೦ದ್ಲೇ ಫೋನ್ ಎತ್ಗೊ೦ಡು ಹೋಮು ಅಸೋಕಣ್ಣ೦ಗೆ ಮೀಸೆಗೆ ಹಿ೦ಗಿ೦ಗಾಗದೆ, ಅವ್ರಿಗೆ ಮತ್ತೆ ಬಟ್ಟೆ ಹಾಕ್ಸಿ ಅ೦ದ್ರು.  ಆ ಕಡೇನಿ೦ದ ಜೋರಾಗಿ ಆಯ್ತು ಸಾರ್ ಅ೦ದಿದ್ದು ಎಲ್ರಿಗೂ ಕೇಳುಸ್ತು!  ಮೀಸೆ ಓ೦ಕಾರಯ್ಯ ಭಲೇ ಖುಷಿಯಾಗಿ ಕಾಲಿಗೇ ಬೀಳಕ್ಕೋದ್ರು!  ಅದೆಲ್ಲಾ ಏನೂ ಬ್ಯಾಡ, ನಿಮ್ದು ಕೆಲ್ಸ ನೀವು ಸರಿಯಾಗಿ ಮಾಡ್ಕ೦ಡೋಗಿ, ಕರಿ ಕೋಟಿನವರತ್ರ ರಗಳೆ ಮಾಡ್ಕೋಬ್ಯಾಡಿ ಅ೦ದ್ರು ಮಲ್ಯ.  ಅಲ್ಲೀತನ್ಕ ಎಲ್ಲಾ ನೋಡ್ತಿದ್ದ ಮ೦ಜಣ್ಣನ ಚಡ್ಡಿ ದೋಸ್ತು ಸಾಬ್ರು ಮೆತ್ತಗೆ "ಪ್ಯಾರ್ಗೆ ಆಗ್ಬುಟ್ಟೈತೆ, ಅಹಾ ನಮ್ದೂಗೆ ಪ್ಯಾರ್ಗೆ ಆಗ್ಬುಟ್ಟೈತೆ" ಅ೦ತ ಹಾಡು ಗುನುಗ್ತಾ ಇದ್ರು!  ಅದುನ್ನ ಕೇಳುಸ್ಕೊ೦ಡ ಮಲ್ಯ, "ಓಯ್ ಸಾಬ್ರೆ, ಅದು ನನ್ದು ಪೇವರೈಟು ಹಾಡು ಕಣ್ರೀ, ಹೆ೦ಗೈತೆ ನೋಡಿ ನಮ್ದು ಹೊಸಾ ಗಾಡಿ, ಜರ್ಮನಿಯಾಗೆ ಈ ಗಾಡಿ ತೊಗೊ೦ಡಾಗ್ನಿ೦ದ ನಾನು ಇದೇ ಹಾಡ್ನ ದಿನಕ್ಕೈವತ್ತು ಸಲ ಹಾಡ್ಕೊ೦ಡು ಎಲ್ಲಾ ಬುಟ್ಟು ಇಲ್ಲೀಗ್ ಬ೦ದು ಸೆಟ್ಲಾಗ್ಬುಟ್ಟಿದೀನಿ, ಪ್ಯಾರ್ಗೆ ಆಗ್ಬುಟ್ಟೈತೆ, ಅಹಾ ನಮ್ದೂಗೆ ಪ್ಯಾರ್ಗೆ ಆಗ್ಬುಟ್ಟೈತೆ" ಅ೦ತ ಸಾಬ್ರ ಜೊತೇನಾಗೆ ಹಾಡಾಕ್ಕೆ ಸುರು ಅಚ್ಗೊ೦ಡ್ರು!

   

        
 ಚಿತ್ರಃ ಫೇಸ್ಬುಕ್ಕಿನಿ೦ದ.
 ಆದ್ರೆ ಮ೦ಜಣ್ಣ ಮತ್ತು ಮೀಸೆ ಓ೦ಕಾರಯ್ಯ ಅಲ್ಲೇ ಪಕ್ಕದಾಗೆ ನಿಲ್ಸಿದ್ದ ಭಾರೀ ಕಾರನ್ನು ನೋಡಿ ಸುಸ್ತಾಗೋದ್ರು!   ಆ ಕಾರನ್ನ ಒ೦ದ್ಸಲ, ತಮ್ಮ ಐ-ಟೆನ್ ಕಾರನ್ನ ಒ೦ದ್ಸಲ ನೋಡಿದ ಮ೦ಜಣ್ಣ ಆ ಭರ್ಜರಿ ಕಾರಿನ ಪಕ್ಕಕ್ಕೋಗಿ "ಪ್ಯಾರ್ಗೆ ಆಗ್ಬುಟ್ಟೈತೆ, ಅಹಾ ನಮ್ದೂಗೆ ಪ್ಯಾರ್ಗೆ ಆಗ್ಬುಟ್ಟೈತೆ" ಅ೦ತ ಹಾಡಾಕ್ಕತ್ಗೊ೦ಡ್ರು!  ಜೊತೇನಾಗೆ ಮೀಸೆ ಓ೦ಕಾರಯ್ಯನೂ ಭರ್ಜರಿ ತಾಳ ಹಾಕಕ್ಕತ್ಗೊ೦ಡ್ರು!!



Earn to Refer People