Saturday, January 30, 2016

ಹೇ ರಾಮ್! ಮಹಾತ್ಮನಿಗೊಂದು ನಮನ.ಅಹಿಂಸಾತ್ಮಕ ಹೋರಾಟದ ಹರಿಕಾರ, ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತು ತಮ್ಮ ಸರಳ ಬದುಕಿನಿಂದ ವಿಶ್ವಮಾನ್ಯರಾದ ಮಹಾತ್ಮ ಮೋಹನದಾಸ್ ಕರಮಚಂದ್ ಗಾಂಧಿ ಹುತಾತ್ಮರಾದ ದಿನವಿಂದು, ಆ ದಿವ್ಯಚೇತನಕ್ಕೆ ಮನಃಪೂರ್ವಕ ನಮನಗಳು. ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷಗಳಾದರೂ ಅವರ ರಾಮರಾಜ್ಯದ ಕನಸು ಇಂದಿಗೂ ನನಸಾಗಲಿಲ್ಲ, ಗ್ರಾಮ ಸ್ವರಾಜ್ಯದ ಕನಸು ಹಾಗೆಯೇ ಉಳಿದಿದೆ. ಶೇ.೭೦ ರಷ್ಟು ಭಾರತೀಯರು ವಾಸಿಸುವ ಗ್ರಾಮಗಳು ಸ್ವರಾಜ್ಯವಿರಲಿ, ಇಂದಿಗೂ ಅಂಧಕಾರದಲ್ಲಿಯೇ ಉಳಿದಿವೆ, ಸರ್ವಋತು ರಸ್ತೆಗಳಿಲ್ಲದೆ ಇಂದಿಗೂ ಕೆಲವು ಗ್ರಾಮಗಳು ದ್ವೀಪಗಳಾಗಿಯೇ ಉಳಿದಿವೆ. ಸ್ವಾತಂತ್ರ್ಯಾನಂತರ ಅಧಿಕಾರವನ್ನನುಭವಿಸಿದ ಖಾನ್-ಗ್ರೇಸ್ ಪಕ್ಷದ ಅಧಿಕಾರ ಲಾಲಸೆಯಿಂದಾಗಿ ಗಾಂಧೀಜಿಯ ತತ್ವಗಳು ಜನಮಾನಸದಿಂದ ಮರೆಯಾಗಿ, ಇಂದು ಗಾಂಧಿ ಎಂದರೆ ಕೆಲಸಕ್ಕೆ ಬಾರದವನು ಎನ್ನುವ ಅನ್ವರ್ಥಕ ನಾಮವಾಗಿ ಬದಲಾಗಿರುವುದು ಮಾತ್ರ ದುರಂತ. ಕಾಲೇಜಿನಲ್ಲಿ ಓದುವ ಯುವಕರು ಮಧುಪಾನ, ಧೂಮಪಾನ ಮಾಡದ ಜೊತೆಯವರನ್ನು ಛೇಡಿಸಲು ಉಪಯೋಗಿಸುವ ಪದವಾಗಿ ಗಾಂಧಿ ಬದಲಾಗಿದ್ದು ಮಾತ್ರ ಅಕ್ಷಮ್ಯ. ಯೂರೋಪಿಯನ್ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಗಾಂಧಿ ತತ್ವವನ್ನು ಅಧ್ಯಯನ ನಡೆಸಲು ವಿಶೇಷ ಪೀಠಗಳನ್ನು ಸ್ಥಾಪಿಸಿದ್ದರೆ ಗಾಂಧಿ ಹುಟ್ಟಿದ ನಾಡಿನಲ್ಲಿಯೇ ಗಾಂಧಿ ಇಂದು ಮೂಲೆಗುಂಪಾಗಿದ್ದಾರೆ. ದೇಶ ವಿಭಜನೆಯಿರಬಹುದು, ಮುಸ್ಲಿಮರ ಬಗೆಗಿನ ಮೃದು ಧೋರಣೆಯಿರಬಹುದು, ಬೇರಾವುದೇ ಕಾರಣಗಳಿರಬಹುದು, ಆದರೆ ಅವರ ಸರಳ ಜೀವನ, ಸತ್ಯದೆಡೆಗಿನ ಸಾಕ್ಶತ್ಕಾರ, ಅಹಿಂಸಾತ್ಮಕ ಧೋರಣೆ, ಅಸಹಕಾರ ಚಳುವಳಿಯ ಮೂಲಕ ಬ್ರಿಟಿಷ್ ಸಾಮ್ರಾಜ್ಯಕ್ಕೆ ನಡುಕ ಹುಟ್ಟಿಸಿದ ರೀತಿ ಯಾರೂ ಮರೆಯುವಂತಿಲ್ಲ. ಆ ಮಹಾತ್ಮ ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದ ಈ ದಿನ ನಿಜಕ್ಕೂ ಭಾರತದ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ! ಮಹಾತ್ಮನ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಹೆಸರನ್ನು ಮಾತ್ರ ಉಪಯೋಗಿಸಿಕೊಂಡು, ಅವರ ತತ್ವ ಆದರ್ಶಗಳನ್ನು ಮರೆತಿರುವ ರಾಜಕೀಯ ನಾಯಕರು ಇನ್ನಾದರೂ ಗ್ರಾಮ ಸ್ವರಾಜ್ಯದ ಬಗ್ಗೆ, ರಾಮರಾಜ್ಯದ ಬಗ್ಗೆ ಚಿಂತಿಸಿ ಅವರ ಕನಸನ್ನು ನನಸಾಗಿಸಲಿ ಎಂದು ಆಶಿಸುವೆ. ಅವರು ಅಂದು ಅತಿಯಾಗಿ ಪೂಜಿಸಿದ ಆ ಶ್ರೀರಾಮನೇ ಇಂದು ಹಲವರ ಬಾಯಿ ಚಪಲದ ವಸ್ತುವಾಗಿ ಪರಿಣಮಿಸಿ ಅಪಹಾಸ್ಯಕ್ಕೀಡಾಗಿರುವುದು ಮಾತ್ರ ಪ್ರಜ್ಞಾವಂತ ಸಮಾಜದ ದುರಂತ.

Monday, January 25, 2016

ಎಲ್ಲರಿಗೂ ೬೭ನೆಯ ಗಣರಾಜ್ಯೋತ್ಸವದ ಶುಭಾಶಯಗಳು.ಒಂದು ಶುಭಾಶಯ ಹೇಳಿ, ಇಷ್ಟವಿದ್ದರೆ ಕೆಲ ಹೊತ್ತು ದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್ ಅಥವಾ ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡಿ, ಅಥವಾ ಇನ್ನೂ ಹೆಚ್ಚೆಂದರೆ ನಮ್ಮ ಏರಿಯಾದಲ್ಲಿನ ಶಾಲೆಯೊಂದರಲ್ಲಿ ನಡೆಯುವ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದರೆ ಆಯಿತು, ಮತ್ತೆ ಮರುದಿನದಿಂದ ನಮ್ಮ ಮಾಮೂಲಿ ದಿನಚರಿಯಲ್ಲಿ ಮುಳುಗಿ ಬಿಡುತ್ತೇವೆ.  ಇಷ್ಟೇನಾ ಗಣರಾಜ್ಯದಿನವೆಂದರೆ!  ಇದರ ಹಿನ್ನೆಲೆಯನ್ನು ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ. 

೧೯೩೦ರ ಜನವರಿ ೨೬ರ ಇದೇ ದಿನ ಲಾಹೋರಿನಲ್ಲಿ ನಡೆದ ಅಧಿವೇಶನದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷರ ಆಡಳಿತವನ್ನು ವಿರೋಧಿಸಿ "ಪೂರ್ಣ ಸ್ವರಾಜ್ಯ"ವನ್ನು ಘೋಷಿಸುತ್ತದೆ.  ಅಧ್ಯಕ್ಷರಾಗಿದ್ದ ಜವಾಹರ್ ಲಾಲ್ ನೆಹರೂ ರಾವಿ ನದಿಯ ದಡದಲ್ಲಿ ಭಾರತದ ಧ್ವಜವನ್ನು ಹಾರಿಸುತ್ತಾರೆ.  ಆ ದಿನದ ನೆನಪಿಗಾಗಿಯೇ ಜನವರಿ ೨೬ನ್ನು "ಗಣರಾಜ್ಯೋತ್ಸವ ದಿನ" ಎಂದು ಕರೆಯಲಾಗುತ್ತದೆ.  ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟ ಹಾಗೂ ಅಸಹಕಾರ ಚಳುವಳಿ, ಸ್ವದೇಶಿ ಚಳುವಳಿಗಳು ಒಂದೆಡೆ, ಮತ್ತೊಂದೆಡೆ ನೇತಾಜಿ ಸುಭಾಷ್ ಚಂದ್ರ ಬೋಸರ "ಆಝಾದ್ ಹಿಂದ್ ಫೌಜ್ ನ ಅಟ್ಟಹಾಸ, ಹೊರದೇಶಗಳಿಂದಲೂ ಬಂದ ಒತ್ತಡ ಇವೆಲ್ಲವುಗಳಿಂದ ಅಲ್ಲಾಡಿ ಹೋದ ಬ್ರಿಟಿಷ್ ಸಾಮ್ರಾಜ್ಯ ಕೊನೆಗೂ ಭಾರತಕ್ಕೆ ಸ್ವಾತಂತ್ರ್ಯ ನೀಡಲು ಒಪ್ಪಿಕೊಳ್ಳುತ್ತದೆ.  ಅದರಂತೆ ೧೯೪೭ರ ಆಗಸ್ಟ್ ೧೫ರ ಮಧ್ಯರಾತ್ರಿ ಪಾರ್ಲಿಮೆಂಟ್ ಭವನದ ಮೇಲೆ ಹಾರಾಡುತ್ತಿದ್ದ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ ಸ್ವತಂತ್ರ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ.  ಬ್ರಿಟಿಷ್ ಸಾಮ್ರಾಜ್ಯದ ಕೊನೆಯ ವೈಸ್ರಾಯ್ ಮೌಂಟ್ ಬ್ಯಾಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದ ನೆಹರೂಗೆ ಅಧಿಕಾರ ಹಸ್ತಾಂತರ ಮಾಡುತ್ತಾರೆ.  ಇದಿಷ್ಟು ಸ್ವಾತಂತ್ರ್ಯ ಪಡೆಯುವವರೆಗಿನ ಕಥೆ.  ಸ್ವಾತಂತ್ರ್ಯಾ ನಂತರ ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ಕರಡು ರಚನಾ ಸಮಿತಿಯನ್ನು ರಚಿಸಲಾಯಿತು.  ಅನೇಕ ಚರ್ಚೆ, ಸಂವಾದ, ತಿದ್ದುಪಡಿಗಳ ನಂತರ ಅಂತಿಮವಾಗಿ ೧೯೫೦ರ ಜನವರಿ ೨೬ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು.  ಅಂದಿನಿಂದ ಇಂದಿನವರೆಗೂ ಜನವರಿ ೨೬ನ್ನು "ಗಣರಾಜ್ಯ ದಿನ"ವನ್ನಾಗಿ ಆಚರಿಸಲಾಗುತ್ತಿದೆ.  

ಭಾರತದಾದ್ಯಂತ ಸರ್ಕಾರಿ ರಜಾದಿನ ಎಂದು ಘೋಷಿಸಿದರೂ ಎಲ್ಲಾ ಶಾಲೆಗಳಲ್ಲಿಯೂ ಅಂದು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ, ಮಕ್ಕಳಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ಕಾರ್ಯಕ್ರಮಗಳನ್ನು ವಿಶೇಷವಾಗಿ ರೂಪಿಸಲಾಗುತ್ತದೆ.  ಸ್ಕೌಟ್, ಏನ್.ಸಿ.ಸಿ. ಪೊಲೀಸ್ ದಳಗಳಿಂದ ರಾಜಧಾನಿ ದೆಹಲಿಯಲ್ಲಿ ಭಾರತೀಯ ಸೇನೆ, ನೌಕಾ ಹಾಗೂ ವಾಯುದಳಗಳ ಆಕರ್ಷಕ ಕವಾಯತು ನಡೆಯುತ್ತದೆ.  ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿಯು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ.  ಜನತೆಯಲ್ಲಿ ದೇಶಪ್ರೇಮದ ಸಂದೇಶ ಸಾರುವ, ದೇಶದ ಹೆಸರಿನಲ್ಲಿ ನಾವೆಲ್ಲರೂ ಒಂದು ಎಂದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸುಂದರ ಕಾರ್ಯಕ್ರಮಗಳು ಈ ದಿನ ನಡೆಯುತ್ತವೆ. 

ಆದರೆ ಸಾಮಾಜಿಕ ಪರಿಸ್ಥಿತಿಗಳು ಹೇಗಿವೆ ಎಂದು ಅವಲೋಕಿಸಿದಾಗ ನಿಜಕ್ಕೂ ದುಃಖವಾಗುತ್ತದೆ.  ಸ್ವಾತಂತ್ರ್ಯ ಪೂರ್ವದಲ್ಲಿ ಅಂದು ಇದ್ದ ಅದೇ ಬಾನು, ಅದೇ ಸೂರ್ಯ, ಅದೇ ಗಾಳಿ,  ಅದೇ ನೀರು, ಅದೇ ಪ್ರಕೃತಿ.  ಆದರೆ ಮನುಷ್ಯರು ಮಾತ್ರ ಬದಲಾಗಿದ್ದಾರೆ, ಆಗ ಬ್ರಿಟಿಷರ ಆಳ್ವಿಕೆಯಲ್ಲಿ ಅವರ ದಬ್ಬಾಳಿಕೆಗೆ ನಲುಗಿ ಜನ ಸಾಯುತ್ತಿದ್ದರು, ಆದರೆ ಈಗಲೂ ಜನ ಅಸಹಾಯಕರಾಗಿ ಸಾಯುತ್ತಲೇ ಇದ್ದಾರೆ, ಆದರೆ ನಮ್ಮಿಂದಲೇ ಆಯ್ಕೆಯಾದ ಜನನಾಯಕರ ದುರಾಡಳಿತದಿಂದ ಅನ್ನುವುದು ವಿಪರ್ಯಾಸ.   ಸ್ವಾತಂತ್ರ್ಯಾನಂತರ ಅಧಿಕಾರಕ್ಕೇರಿದ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಸ್ವಾರ್ಥಿಗಳಾಗಿ, ದೇಶ ಹಿತ, ಜನಹಿತ ಮರೆತು ತಮ್ಮನ್ನು ತಾವು ಚೆನ್ನಾಗಿ ನೋಡಿಕೊಂಡಿದ್ದಲ್ಲದೆ ಬ್ರಿಟಿಷರು ಬಳುವಳಿಯಾಗಿ ಬಿಟ್ಟು ಹೋದ "ಒಡೆದು ಆಳುವ ನೀತಿ"ಯನ್ನು ಚೆನ್ನಾಗಿಯೇ ಪಾಲಿಸಿದ್ದರ ಪರಿಣಾಮ, ಇಂದು ಭಾರತೀಯ ಸಮಾಜ ಒಡೆದು ಚೂರು ಚೂರಾಗಿದೆ.  ಜಾತಿ ಜಾತಿಗಳ ನಡುವೆ, ಧರ್ಮಗಳ ನಡುವೆ ಅಪಾರವಾದ ಕಂದಕ ನಿರ್ಮಾಣವಾಗಿದೆ.   ಸ್ವಾರ್ಥ ರಾಜಕಾರಣಿಗಳು ಬಂಡವಾಳಶಾಹಿಗಳಿಗೆ ಅತಿ ಹೆಚ್ಚು ಬೆಂಬಲ ನೀಡಿದ ಪರಿಣಾಮವಾಗಿ ಸಂಪತ್ತಿನ ಕ್ರೋಢೀಕರಣ ಏಕಮುಖವಾಗಿ ಶ್ರೀಮಂತರು ಅತಿ ಹೆಚ್ಚು ಶ್ರೀಮಂತರಾಗಿದ್ದರೆ ಬಡವರು ಇನ್ನೂ ಬಡವರಾಗಿಯೇ ಉಳಿದಿದ್ದಾರೆ.   ಈ ದಿನ ವಿದೇಶಿ ನಾಯಕರನ್ನು ಕರೆಸಿ ನಮ್ಮ ದೇಶದ ಘನತೆಯನ್ನು ತೋರಿಸುತ್ತಿರುವ ಅದೇ ದೆಹಲಿಯಲ್ಲಿ ಇಂದಿನ ಕೊರೆಯುವ ಛಳಿಯಲ್ಲಿ ಮನೆ ಮಠವಿಲ್ಲದ ನಿರ್ಗತಿಕರು ರಸ್ತೆಬದಿಗಳಲ್ಲಿ ಬೆಂಕಿ ಕಾಯಿಸುತ್ತಾ ಜೀವನ ನಡೆಸುತ್ತಿದ್ದಾರೆನ್ನುವುದು ನಮ್ಮ ದೇಶ ಅಭಿವೃದ್ಧಿಯ ಪಥದಲ್ಲಿ ನಿಜವಾಗಲೂ ಸಾಗಿದೆಯೇ ಎಂದು ಚಿಂತಿಸುವಂತೆ ಮಾಡುತ್ತದೆ. 

ಕಾಂಗ್ರೆಸ್ ಪಕ್ಷದವರು ತಾವು ಅಧಿಕಾರದಲ್ಲುಳಿದುಕೊಳ್ಳಲು ಒಂದೆಡೆ ಪರಿಶಿಷ್ಟ ಜಾತಿ ಪಂಗಡದವರನ್ನು, ಮತ್ತೊಂದೆಡೆ ಮುಸ್ಲಿಮರನ್ನು ಓಲೈಸುತ್ತಾ, ಅವರನ್ನು ತಮ್ಮ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡು, ಮುಖ್ಯವಾಹಿನಿಯಲ್ಲಿ ಬೆರೆಯಲು ಬಿಡದೆ ನಡೆಸಿಕೊಂಡ ಪರಿಣಾಮ ಅವರಲ್ಲಿನ ಅನಕ್ಷರತೆ, ಅಜ್ಞಾನ ಹಾಗೆಯೇ ಉಳಿದುಕೊಂಡಿದೆ.  ಅವೈಜ್ಞಾನಿಕವಾದ ಮೀಸಲಾತಿ ಪದ್ಧತಿಯಿಂದಾಗಿ ಪ್ರತಿಭಾವಂತರಿಗೆ ಅವಕಾಶಗಳು ಸಿಗದೇ ಪ್ರತಿಭಾ ಪಲಾಯನ ನಿರಂತರವಾಗಿ ನಡೆಯುತ್ತಿದೆ.  ಓದಿ ವಿದ್ಯಾವಂತರಾಗಿ ನಮ್ಮ ದೇಶದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲಬೇಕಿದ್ದ ವಿದ್ಯಾವಂತ ಸಮುದಾಯವಿಂದು ಕ್ಷುಲ್ಲಕ ರಾಜಕಾರಣಕ್ಕೆ ಬಲಿಯಾಗಿ, ಅಸಹಾಯಕರಾಗಿ ಹೊರದೇಶಗಳತ್ತ ಮುಖ ಮಾಡಿದ್ದಾರೆ.  ಇದು ಯಾವುದೇ ಅಭಿವೃದ್ಧಿಶೀಲ ದೇಶದ ಬೆಳವಣಿಗೆಗೆ ದೊಡ್ಡ ಹೊಡೆತವಾಗಿ ಪರಿಣಮಿಸುತ್ತದೆ. 

ಇಷ್ಟೆಲ್ಲ ವೈರುಧ್ಯಗಳ ನಡುವೆಯೂ ಜನವರಿ ೨೬ರ ಧ್ವಜಾರೋಹಣದಂದು ಅರಿವಿಲ್ಲದೆಯೇ ದೇಹ ಸೆಟೆದು ನಿಲ್ಲುತ್ತದೆ, ಎದೆ ಉಬ್ಬುತ್ತದೆ, ಕೈಗಳು ತ್ರಿವರ್ಣ ಧ್ವಜಕ್ಕೆ ನಮಗರಿವಿಲ್ಲದೆಯೇ ಸೆಲ್ಯೂಟ್ ಹೊಡೆದಿರುತ್ತವೆ. ವಂದೇ ಮಾತರಂ, ಸಾರೆ ಜಹಾಂಸೆ ಅಚ್ಚಾ, ಹಿಂದೂಸಿತಾನ್  ಹಮಾರಾ, ಎನ್ನುವ ದೇಶಭಕ್ತಿ ಗೀತೆಗಳನ್ನು ಕೇಳಿದಾಗ ಈಗಲೂ ರೋಮಾಂಚನವಾಗುತ್ತದೆ, ಮನಸ್ಸು ಚಿಂತಾಗ್ರಸ್ತವಾಗಿದ್ದರೂ ಅಲ್ಲಿ ದೇಶಪ್ರೇಮದ ಅಲೆ ಚಿಮ್ಮುತ್ತದೆ.  

ಇರುವ ವೈರುಧ್ಯಗಳೆಲ್ಲ ಕಳೆದು ಎಲ್ಲರಿಗೂ ಸಮಾನ ಅವಕಾಶ, ಸಮಾನ ಬದುಕು ನೀಡುವ ಸುಂದರ ಭಾರತದ ಕನಸು ನಮ್ಮಲ್ಲಿ ಜೀವಂತವಾಗಿರಲಿ, ಆ ಕನಸು ಆದಷ್ಟು ಬೇಗ ನನಸಾಗಲಿ ಎಂದು ಹಾರೈಸೋಣ.  ವಂದೇ ಮಾತರಂ.  ಜೈ ಹಿಂದ್. 

Friday, January 22, 2016

ರೋಹಿತ್ ವೇಮುಲ ಆತ್ಮಹತ್ಯೆಯ ಸುತ್ತ........... !

ರೋಹಿತ್ ವೇಮುಲ ಪ್ರಕರಣದಲ್ಲಿ ಕನ್ಫ್ಯೂಸ್ ಆಗುವಂಥದ್ದು ಇಲ್ಲಿ ಏನೂ ಇಲ್ಲ! ಓದಲೆಂದು ವಿಶ್ವವಿದ್ಯಾನಿಲಯ ಸೇರಿದವನು ಓದಬೇಕಿತ್ತು, ಈಗ ಬರುತ್ತಿರುವ ವರದಿಗಳ ಪ್ರಕಾರ ಅವನು ದಲಿತ ಎಂದು ಸುಳ್ಳು ಜಾತಿ ಪ್ರಮಾಣಪತ್ರವನ್ನು ನೀಡಿ ದಾಖಲಾಗಿದ್ದ. ೨೦೦೫ರಲ್ಲಿಯೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವೂ ಆಗಿದ್ದ, ಹಿಂದೂ ವಿರೋಧಿ ನೀತಿ, ಭಯೋತ್ಪಾದಕ ಯಾಕೂಬ್ ಮೆಮನ್ ಗೆ ನೀಡಿದ ಗಲ್ಲು ಶಿಕ್ಷೆಯ ವಿರುದ್ಧ ಅವನ ಹೇಳಿಕೆಗಳು, ವಿವೇಕಾನಂದರನ್ನು ತುಚ್ಚ ಭಾಷೆಯಲ್ಲಿ ನಿಂದಿಸಿದ್ದು, ಎಬಿವಿಪಿ ಹಾಗೂ ಆರೆಸ್ಸೆಸ್ ಬಗ್ಗೆ ಅವನು ಬೆಳೆಸಿಕೊಂಡಿದ್ದ ದ್ವೇಷ, ಇವೆಲ್ಲವೂ ಅವನು ಹೇಗೆ ದಾರಿ ತಪ್ಪಿದ್ದ ಎನ್ನುವುದನ್ನು ತೋರಿಸುತ್ತವೆ. ಓದಲೆಂದು ಹೋದವರು ತಮ್ಮ ಜವಾಬ್ಧಾರಿಯನ್ನು ಮರೆಯಬಾರದು, ಇವನು ಮರೆತ, ಇವನ ದುಂಡಾವರ್ತಿಯನ್ನು ಸಹಿಸಲಾಗದೆ ಇವನನ್ನು ತರಗತಿಗಳಿಂದ ಆಚೆಗಟ್ಟಿದ್ದರು, ಅವನಿಗೆ ಸಿಗುತ್ತಿದ್ದ ಸ್ಕಾಲರ್ ಶಿಪ್ ಕೂಡಾ ನಿಲ್ಲಿಸಿದರು, ಏಕೆಂದರೆ ದಲಿತ ಎಂದು ಅಂಬೇಡ್ಕರ್ ಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು ಏನು ಮಾಡಿದರೂ ನಡೆಯುತ್ತದೆನ್ನುವ ಮನೋಭಾವ ಅವನಲ್ಲಿ ಬಲವಾಗಿ ಬೇರೂರಿತ್ತು. ಅವನು ಮಾಡಿಕೊಂಡ ತಪ್ಪಿಗೆ ಅವನು ಪ್ರಾಣ ಬಿಟ್ಟಿದ್ದಾನೆಯೇ ಹೊರತು ಯಾರನ್ನೂ ದೂಷಿಸುವಂತಿಲ್ಲ. ಅವನು ನಕ್ಷತ್ರವೂ ಅಲ್ಲ, ತ್ಯಾಗಮಯಿಯೂ ಅಲ್ಲ,,,,ವ್ಯವಸ್ಥೆಯ ಬಲಿಪಶುವೂ ಅಲ್ಲ! ತನ್ನ ಸ್ವಯಂಕೃತಾಪರಾಧದಿಂದ ತನಗೆ ತಾನೇ ಮೃತ್ಯುವಾದ ಅಷ್ಟೆ! ಇಲ್ಲಿ "ದಲಿತ" ಎನ್ನುವ ಪದವನ್ನು ಬಳಸುವ ಅವ್ಶ್ಯಕತೆಯಂತೂ ಖಂಡಿತ ಅಲ್ಲ, ಏಕೆಂದರೆ ಅವನು ದಲಿತ ಅಲ್ಲ ಎಂದು ಅವನ ಮನೆಯವರು ಧೃಡಪಡಿಸಿದ್ದಾರೆ. ಮಾಧ್ಯಮಗಳು ಹಾಗೂ ಅವಕಾಶವಾದಿ ಖಾನ್-ಗ್ರೇಸ್ ಪಕ್ಷ ಹಾಗೂ ನಾಚಿಕೆಗೆಟ್ಟ ಅರವಿಂದ್ ಕೇಜ್ರಿವಾಲ್ನಂಥವರು ಇವನ ಸಾವಿನಲ್ಲಿಯೂ ಲಾಭ ಮಾಡಿಕೊಳ್ಳಲು ಹೊರಟಿರುವುದರಿಂದ ಇದೊಂದು ದೊಡ್ಡ ಸುದ್ಧಿಯಾಗಿದೆ. ಇಲ್ಲದಿದ್ದರೆ ಇದೇ ಖಾನ್-ಗ್ರೇಸ್ ಪಕ್ಷದ ಅಧಿಕಾರಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಇತರ ವಿದ್ಯಾರ್ಥಿಗಳ ಬಗ್ಗೆ ಏಕೆ ಯಾವ ಮಾಧ್ಯಮದವರು ಅಥವಾ ರಾಜಕೀಯ ನಾಯಕರು ಬಾಯ್ತೆರೆಯಲಿಲ್ಲ? ಎಲ್ಲವೂ ರಾಜಕೀಯ ಪ್ರೇರಿತ ನಾಟಕವಷ್ಟೆ.
**********************************************************************************************************
************************************************************************************

ಅಂದು ರಾಮಾಯಣದಲ್ಲಿ ಮಂಥರೆಯಿದ್ದಳು
ಮನೆಯೊಡೆಯಲು,,, ಮಗನ ಕಾಡಿಗಟ್ಟಲು !
ಅಂದು ಮಹಾಭಾರತದಲ್ಲಿ ಶಕುನಿಯಿದ್ದ
ನಿರ್ದೋಷಿ ಪಾಂಡವರ ವನವಾಸಕ್ಕಟ್ಟಲು!
ಇಂದೂ ಇದ್ದಾರೆ ಅದೇ ಮಂಥರೆ ಶಕುನಿಯರು
ಟೌನ್ ಹಾಲ್ ಮುಂದೆ ಧರಣಿ ನಡೆಸಲು
ದಲಿತನಲ್ಲದವನ ದಲಿತನೆಂದು ಘೋಷಿಸಲು
ದೇಶದ್ರೋಹಿಯೊಬ್ಬನ ನಕ್ಷತ್ರವಾಗಿಸಲು !
ಅಂತರ್ಜಾಲವಿದ್ದರೇನು ಫೇಸ್ಬುಕ್ ವಾಟ್ಸಪ್ಪಿದ್ದರೇನು
ಇವರು ಅದೇ ಅಸಹಿಷ್ಣು ದರಿದ್ರ ಹಿಂದೂಗಳು !
ಶತಶತಮಾನಗಳಿಂದಲೂ ತಮ್ಮೊಳಗೇ ಕಚ್ಚಾಡುತ್ತ
ತಮ್ಮಸ್ತಿತ್ವವ ಮರೆತು ದೇಶವ ಪರರಿಗೆ ಕೊಟ್ಟವರು! !!!
*********************************************************************************
*********************************************************************************

ಅಂದು, ಕ್ರಿಸ್ತಪೂರ್ವ ೩೨೬ರಲ್ಲಿ ಗ್ರೀಕ್ ದೊರೆ ಅಲೆಕ್ಸಾಂಡರ್ ಭಾರತದ ಮೇಲೆ ಆಕ್ರಮಣ ಮಾಡಿದಾಗ ಅವನ ಮೊದಲ ಯುದ್ಧ ಪುರೂರವನ ಮೇಲೆ,,, ಆದರೆ ಅವನ ಪಕ್ಕದೂರಿನ ದೊರೆ ಅಂಬಿ ಪುರೂರವನಿಗೆ ಬೆಂಬಲಿಸದೆ ಗ್ರೀಕ್ ಆಕ್ರಮಣಕಾರನಿಗೆ ಸಹಾಯ ಮಾಡುತ್ತಾನೆ, ಪುರೂರವ ಸೋತು ಸೆರೆಯಾಗುತ್ತಾನೆ.
ರಾಮಾಯಣದಲ್ಲಿ ನೋಡಿ, ಮಂಥರೆಯ ಮಾತ್ಸರ್ಯಕ್ಕೆ ಶ್ರೀರಾಮಚಂದ್ರ ಸಿಂಹಾಸನ ಕಳೆದುಕೊಳ್ಳುತ್ತಾನೆ, ವನವಾಸ ಅನುಭವಿಸುತ್ತಾನೆ, ರಾವಣನ ಕುಟಿಲ ತಂತ್ರದಿಂದ ಹೆಂಡತಿಯಿಂದ ದೂರಾಗಿ ಕೊರಗುತ್ತಾನೆ, ಕೊನೆಗೆ ರಾವಣನ ವಧೆಯ ನಂತರ ತನ್ನೂರಿಗೆ ಪತ್ನಿಯೊಡನೆ ಹಿಂದಿರುಗಿದರೂ ಅಗಸನೊಬ್ಬನ ಮಾತಿನಿಂದ ಮತ್ತೆ ಸಂಸಾರಸುಖದಿಂದ ವಂಚಿತನಾಗುತ್ತಾನೆ.
ಮಹಾಭಾರತದಲ್ಲಿ ಶಕುನಿಯ ಕುತಂತ್ರದಿಂದಾಗಿ ಪಾಂಡವರು ರಾಜ್ಯ ಕಳೆದುಕೊಂಡು ಗತಿಯಿಲ್ಲದವರಂತೆ ಬದುಕುವ ಪರಿಸ್ಥಿತಿ ಅನುಭವಿಸುತ್ತಾರೆ, ದುಶ್ಯಾಸನ, ದುರ್ಯೋಧನರ ಅಟ್ಟಹಾಸದಲ್ಲಿ ದ್ರೌಪದಿ ನೋಯುತ್ತಾಳೆ, ಕೌರವನ ಸಾವಿಗೆ ಕಾರಣವಾಗುತ್ತಾಳೆ. ಗೀತೋಪದೇಶ ಮಾಡಿದ ಶ್ರೀಕೃಷ್ಣ ಅಂದೇ,(ಅದೆಷ್ಟು ಸಾವಿರ ವರ್ಷಗಳ ಹಿಂದೆಯೋ) ಎಲ್ಲ ಕುಟಿಲತಂತ್ರಗಳನ್ನೂ ಬಳಸುತ್ತಾನೆ, ಇದೆಲ್ಲಾ ಧರ್ಮ ಸಂಸ್ಥಾಪನೆಗಾಗಿಯೇ ಎನ್ನುತ್ತಾನೆ, ಕೌರವರ ಅಂತ್ಯದೊಡನೆಯೇ ಪಾಂಡವರಿಗೆ ಸುಖಪ್ರಾಪ್ತಿ!
ಭಾರತದ ಸಿರಿ ಸಂಪತ್ತಿನ ಬಗ್ಗೆ, ಸುಂದರ ಸ್ತ್ರೀಯರ ಬಗ್ಗೆ ಕೇಳಿ ತಿಳಿದಿದ್ದ ಘಸ್ನಿ ಮೊಹಮ್ಮದ್ ಒಂದಲ್ಲ, ಎರಡಲ್ಲ, ಹದಿನೇಳು ಬಾರಿ ದಂಡಯಾತ್ರೆ ಮಾಡಿ, ಎದುರಿಸಿದವರನ್ನೆಲ್ಲಾ ಕೊಂದು, ಅತ್ಯಂತ ಕ್ರೂರವಾಗಿ ವರ್ತಿಸಿ, ಸಾಕಷ್ಟು ಸುಂದರ ಮಹಿಳೆಯರ ಮಾನಭಂಗ ಮಾಡಿ, ಸಿಕ್ಕದ್ದನ್ನೆಲ್ಲಾ ಲೂಟಿ ಹೊಡೆದು ತನ್ನ ದೇಶಕ್ಕೆ ಅಮೂಲ್ಯ ಸಂಪತ್ತನ್ನೆಲ್ಲಾ ಹೊತ್ತೊಯ್ದ. ಆಗ ಯಾವ ಹಿಂದೂಗಳೂ ಒಂದಾಗಲಿಲ್ಲ, ಅವನ ವಿರುದ್ಧ ನಿಲ್ಲಲಿಲ್ಲ, ಎದುರಿಸಿದ ಮಹಾರಾಣಾ ಪ್ರತಾಪನಿಗೆ ಸೋಲೇ ಗತಿಯಾಯ್ತು. ಪಕ್ಕದವನೇ ಜಯಚಂದ್ರ ಕುಟಿಲತಂತ್ರದಿಂದ ವಿಕಟಾಟ್ಟಹಾಸಗೈದಿದ್ದ.
ನಂತರ ಬಂದ ಘೋರಿ ಮೊಹಮ್ಮದ್ ಅದನ್ನೇ ಮಾಡಿದ, ಆಗಲೂ ಮೆರೆದಿದ್ದು ಇದೇ ಶಕುನಿ ಸಂತಾನಗಳು. ಹೋರಾಟಕ್ಕೆ ಹೊರಟವರೆಲ್ಲಾ ಒಬ್ಬೊಬ್ಬರಾಗಿ ಆಕ್ರಮಣಕಾರರ ಕತ್ತಿಗೆ ಬಲಿಯಾದರೇ ಹೊರತು ಒಂದಾಗಲಿಲ್ಲ, ಒಗ್ಗೂಡಿ ಹೋರಾಡಲಿಲ್ಲ!
ಕೊನೆಗೆ ಬಂದ ಬಾಬರ್ ಹದಿನಾರನೆಯ ಶತಮಾನದಲ್ಲಿ ತನ್ನದೇ ಸಾಮ್ರಾಜ್ಯ ಸ್ಥಾಪಿಸಿ ಇಡೀ ದೇಶವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡ, ಆಗಲೂ ಈ ದೇಶದ ಹಿಂದೂಗಳು ಒಂದಾಗಲಿಲ್ಲ, ಪ್ರತಿರೋಧಿಸಲಿಲ್ಲ, ಹೋರಾಡಲಿಲ್ಲ! ಬದಲಾಗಿ ಹೋರಾಟದ ಹಾದಿ ಹಿಡಿದವರ ಮಾಹಿತಿ ನೀಡಿ ತಮ್ಮವರ ಅಂತ್ಯಕ್ಕೆ ಕಾರಣರಾಗಿ ದೊರೆಗಳ ಬೂಟು ನೆಕ್ಕುತ್ತಾ ಬದುಕಿದ್ದು ಇದೇ ಶಕುನಿ ಸಂತಾನಗಳು. ಅದೆಷ್ಟು ದೇವಾಲಯಗಳು ಮಸೀದಿಗಳಾದವೋ, ಅದೆಷ್ಟು ಹಿಂದೂ ಹೆಣ್ಣು ಮಕ್ಕಳ ಬಲಾತ್ಕಾರವಾಯಿತೋ, ಅದೆಷ್ಟು ಹಿಂದುಗಳ ತಲೆಗಳು ಚಂಡಾಡಲ್ಪಟ್ಟವೋ, ಅದೆಷ್ಟು ಜನ ಬಲವಂತವಾಗಿ ಮತಾಂತರಗೊಂಡರೋ, ನಿಖರವಾದ ಲೆಕ್ಕ ಆ ದೇವರಿಗೇ ಗೊತ್ತು! ಆದರೂ ಹಿಂದೂಗಳು ಒಂದಾಗಲಿಲ್ಲ!!
ತಕ್ಕಡಿ ಹಿಡಿದುಕೊಂಡು ದೈನೇಪಿ ನಗುವನ್ನು ಮೊಗದ ತುಂಬಾ ತುಂಬಿಕೊಂಡು, ಉಡುಗೊರೆಗಳ ಸುರಿಮಳೆಯನ್ನೇ ಸುರಿಸುತ್ತಾ,, ವ್ಯಾಪಾರಕ್ಕೆಂದು ಭರತಖಂಡಕ್ಕೆ ಕಾಲಿಟ್ಟ ಯೂರೋಪಿಯನ್ನರು ಮಾಡಿದ್ದೇನು? ಆಗಲೂ ಇಲ್ಲಿ ಮೆರೆದಿದ್ದು ಇದೇ ಶಕುನಿ ಸಂತಾನಗಳು. ತಮ್ಮ ನಡುವಿನ ಕಿತ್ತಾಟಗಳನ್ನು, ರಹಸ್ಯಗಳನ್ನು, ಭಿನ್ನಾಭಿಪ್ರಾಯಗಳನ್ನು ಅವರ ಮುಂದಿಟ್ಟು, ಅವರ ಸಹಾಯದಿಂದ ಪಕ್ಕದವರನ್ನು ಗೆಲ್ಲುತ್ತೇವೆಂಬ ಭ್ರಮೆಯಲ್ಲಿ ಕೊನೆಗೊಮ್ಮೆ ಇಡೀ ದೇಶವನ್ನೇ ಬ್ರಿಟಿಷರ ಪಾದಕ್ಕೊಪ್ಪಿಸಿ ಉಧೋ ಉಧೋ ಎಂದವರು ಇದೇ ನಮ್ಮ ಹಿಂದೂಗಳು.
ಅಪ್ರತಿಮ ಹೋರಾಟದ ನಂತರ, ಲಕ್ಷಾಂತರ ಜನರ ತ್ಯಾಗ, ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯ ಇಂದು ಮತ್ತೆ ಪರಕೀಯರ ಆಕ್ರಮಣದ ಭಯದಲ್ಲಿ ನರಳುತ್ತಿರುವುದು, ಜಾತಿ, ಧರ್ಮಗಳ ನಡುವಿನ ವೈಷಮ್ಯದಲ್ಲಿ ಮುಳುಗಿ, ಅಭಿವೃದ್ಧಿಯ ಪಥವನ್ನೇ ಮುಚ್ಚಿ ನಗುತ್ತಿರುವುದು ಇಂದು ಅದೇ ಶಕುನಿ ಸಂತಾನಗಳು.
ಈ ಶಕುನಿ ಸಂತಾನಗಳ ಅಂತ್ಯವಾಗಲು ಅಂದು ಶ್ರೀಕೃಷ್ಣನ ಜನ್ಮವಾದಂತೆ ಇಂದೂ ಸಹ ಒಬ್ಬ ಶ್ರೀಕೃಷ್ಣನ ಜನ್ಮವಾಗಬೇಕಿದೆ, ಈ ಶಕುನಿ ಸಂತಾನಗಳ ಸಂಹಾರವಾಗಬೇಕಿದೆ, ದೇಶ ಮುಂದುವರೆಯಬೇಕಿದೆ, ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತೆ,,,,,ಎಂದ ಆ ಶ್ರೀಕೃಷ್ಣನ ಅವಶ್ಯಕತೆ ನಮ್ಮ ಭಾರತಕ್ಕೆ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಮಿಲಿಯನ್ ಡಾಲರ್ ಪ್ರಶ್ನೆಯೆಂದರೆ ಶತಶತಮಾನಗಳಿಂದ ಭಾರತೀಯರ ರಕ್ತದಲ್ಲಿ ಬೆರೆತು ಹೋಗಿರುವ ಮನೆಮುರುಕತನ ಅಷ್ಟು ಸುಲಭವಾಗಿ ಹೋಗಿಬಿಡುವುದೇ? ಈ ದೇಶ ಉದ್ಧಾರವಾಗುವುದೇ? ಮತ್ತೊಮ್ಮೆ ಭಾರತ ವಿದೇಶೀಯರ ಅತಿಕ್ರಮಣಕ್ಕೊಳಗಾಗದೆ ಸ್ವತಂತ್ರವಾಗಿ ಇರಲು ಸಾಧ್ಯವೇ? ಈ ದೇಶವನ್ನು ಒಡೆದು ತುಂಡು ತುಂಡಾಗಿ ಮಾಡಲು ಯಾವುದೇ ಹೊರಗಿನ ಶತೃವಿನ ಅವಶ್ಯಕತೆಯಿಲ್ಲ, ದೇಶದೊಳಗಿನ ಈ ಶಕುನಿಗಳೇ ಸಾಕು! ಮೇರಾ ಭಾರತ್ ಮಹಾನ್,,,,,,,,,,,,,,!!!!!!!!!!!!!!

Tuesday, January 5, 2016

ಭದ್ರತೆಯ ಲೋಕದಲ್ಲಿ - ೧೩ : ಹೊಸವರ್ಷದ ಸಂಭ್ರಮದಲ್ಲಿ :

ಡಿಸೆಂಬರ್ ತಿಂಗಳ ಕೊರೆಯುವ ಚಳಿಯಲ್ಲಿ ನಮ್ಮ ಉದ್ಯಾನನಗರಿ ಮೈ  ಮುರಿದೇಳುತ್ತಿತ್ತುವರ್ಷದ ಕೊನೆಯ ದಿನದ ಬೀಳ್ಕೊಡುಗೆಯ ಹಾಗೂ ಹೊಸವರ್ಷದ ಸ್ವಾಗತಕ್ಕಾಗಿ ಯುವಜನತೆ ಕಾಯುತ್ತಿದ್ದರುಅದಕ್ಕಾಗಿ ನಗರದ ವಿವಿಧೆಡೆಗಳಲ್ಲಿ ತಯಾರಿಗಳು ನಡೆಯುತ್ತಿದ್ದವುಬಹುತೇಕ ನಗರದಲ್ಲಿದ್ದ ಇವೆಂಟ್ ಮೇನೇಜ್ಮೆಂಟ್ ಸಂಸ್ಥೆಗಳು, ಭದ್ರತಾ ಸಂಸ್ಥೆಗಳು, ಥರಾವರಿ ತಿಂಡಿ ತಿನಿಸು ತಯಾರಿಸಿ ಒದಗಿಸುವ ಕ್ಯಾಟರಿಂಗ್ ಸಂಸ್ಥೆಗಳು, ವಿಧ ವಿಧದ ಮಾದಕ ಪಾನೀಯಗಳ ಸರಬರಾಜುದಾರರು, ಸ್ವಚ್ಚತಾ ಸಂಸ್ಥೆಗಳವರು, ಜೊತೆಗೆ ವಿದ್ಯುತ್ ವಿತರಣಾ ಸಂಸ್ಥೆಗಳ ನೌಕರರು, ಬೆಂಗಳೂರು ಮಹಾನಗರ ಪಾಲಿಕೆಯ ನೌಕರರು ಹಾಗೂ ಅಧಿಕಾರಿಗಳು, ಪೊಲೀಸರು ಹೀಗೆ ಎಲ್ಲ ಸ್ತರದವರೂ ತಮ್ಮದೇ ಆದ ಜವಾಬ್ಧಾರಿಗಳನ್ನು ನಿರ್ವಹಿಸಲು ಒಂದು ವಾರ ಮುಂಚೆಯೇ ತೊಡಗಿಸಿಕೊಂಡಿದ್ದರುಹೀಗಿರುವಲ್ಲಿ ನಮ್ಮ ಸಂಸ್ಥೆಗೆ ಬೆಂಗಳೂರು ಅರಮನೆಯ ಆವರಣದಲ್ಲಿ ನಡೆಯಲಿದ್ದ ದೊಡ್ಡ ಹೊಸವರ್ಷದ ಸಮಾರಂಭಕ್ಕೆ ಭದ್ರತೆಯನ್ನೋದಗಿಸುವ ಗುತ್ತಿಗೆ ದೊರಕಿತ್ತುಸುಮಾರು ನೂರೈವತ್ತು ಜನ ಭದ್ರತಾ ರಕ್ಷಕರೊಡನೆ ಸಮಾರಂಭದ ಭದ್ರತಾ ಉಸ್ತುವಾರಿಯನ್ನು ನಿಭಾಯಿಸುವ ಜವಾಬ್ಧಾರಿಯನ್ನು ನನಗೆ ವಹಿಸಲಾಗಿತ್ತುನನ್ನ ಸಹಾಯಕ್ಕಾಗಿ ಸುಮಾರು ೧೫ ಜನ ನುರಿತ ಮೇಲ್ವಿಚಾರಕರನ್ನು ನಿಯುಕ್ತಿಗೊಳಿಸಲಾಗಿತ್ತುಬೆಂಗಳೂರು ನಗರ ಪೊಲೀಸರ ತಂಡವೊಂದು ಹೊಸವರ್ಷದ ಸಂಭ್ರಮಾಚರಣೆಯ ಸಮಾರಂಭಗಳ ಭದ್ರತೆಯ ಉಸ್ತುವಾರಿ ಹೊತ್ತು ಗಸ್ತು ತಿರುಗುತ್ತಿತ್ತು.

 ಕಾರ್ಯಕ್ರಮ ಆರಂಭವಾಗುವ ನಾಲ್ಕು  ದಿನಗಳ ಮುಂಚೆಯೇ ನಮ್ಮ ತಂಡವನ್ನು ನಿಯುಕ್ತಿಗೊಳಿಸಿ ಇಡೀ ಅರಮನೆಯ ಆವರಣದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು, ವಾಹನಗಳು, ವ್ಯಕ್ತಿಗಳು ಇರದಂತೆ ಸಂಪೂರ್ಣ ತಪಾಸಣೆ ಮಾಡಲಾಗಿತ್ತುಸುಮಾರು ಇಪ್ಪತ್ತು ಸಾವಿರ ಜನ ಸೇರುವ ನಿರೀಕ್ಷೆಯಲ್ಲಿದ್ದ ಕಾರ್ಯಕ್ರಮ ನಿರ್ವಾಹಕರು ಅತ್ಯಂತ ಉತ್ಸಾಹದಿಂದ ತಂತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರುಹಗಲು ರಾತ್ರಿ ಭದ್ರತಾ ರಕ್ಷಕರ ಸರ್ಪಗಾವಲಿನಲ್ಲಿ ಕೆಲಸಗಳು ನಡೆಯುತ್ತಿದ್ದವು ಮಧ್ಯೆ ಒಂದಷ್ಟು ಜನ ವಸಂತನಗರ ಹಾಗೂ ಶಿವಾಜಿನಗರದ ಕೊಳಚೆ ಪ್ರದೇಶದ ಹುಡುಗರು ರಾತ್ರಿ ವೇಳೆಯಲ್ಲಿ ಆಗಾಗ್ಗೆ ಕಾಂಪೌಂಡ್ ಗೋಡೆ ಎಗರಿ ಅರಮನೆಯ ಬಳಿಗೆ ಬಂದು, ಭದ್ರತಾ ರಕ್ಷಕರ ಕಣ್ತಪ್ಪಿಸಿ ಕೈಗೆ ಸಿಕ್ಕದ್ದನ್ನೆಲ್ಲಾ ಕದ್ದುಕೊಂಡು ಹೋಗುತ್ತಿದ್ದರುಅಂಥ ಕೆಲವು ಗುಂಪುಗಳನ್ನು ನಮ್ಮ ಭದ್ರತಾ ರಕ್ಷಕರು ಅಟ್ಟಿಸಿಕೊಂಡು ಹೋಗಿ, ಹಿಡಿದು  ಪೊಲೀಸರಿಗೊಪ್ಪಿಸಿದ್ದರೆ ಇನ್ನು ಕೆಲವರು ತಪ್ಪಿಸಿಕೊಂಡು  ಹೋಗಿದ್ದರುಆಗ ನಡೆದ ಸಂಘರ್ಷದಲ್ಲಿ ಕೆಲವು ಭದ್ರತಾ ರಕ್ಷಕರಿಗೆ  ಸಣ್ಣ ಪುಟ್ಟ ಗಾಯಗಳೂ ಆಗಿದ್ದವು.   ಸ್ಥಳಕ್ಕೆ ಭೇಟಿ  ನೀಡಿ ಪರಿಶೀಲಿಸಿದ್ದ ಪೊಲೀಸ್ ಅಧಿಕಾರಿಗಳು ಇಂಥ ಕಿಡಿಗೇಡಿಗಳ ಬಗ್ಗೆ ಎಚ್ಚರದಿಂದಿರುವಂತೆಯೂ, ಇನ್ನೂ ಹೆಚ್ಚು ಭದ್ರತಾ ರಕ್ಷಕರನ್ನು ಹೊರವಲಯದ ಗಸ್ತಿಗಾಗಿ ನಿಯೋಜಿಸುವಂತೆಯೂ, ಹಾಗೊಮ್ಮೆ ಕಿಡಿಗೇಡಿಗಳ ತಂಡ ಮತ್ತೊಮ್ಮೆ ಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸುವಂತೆಯೂ ತಾಕೀತು ಮಾಡಿ ಹೋಗಿದ್ದರು.   ಹೀಗಾಗಿ ಹೊಸವರ್ಷದ ಸಂಭ್ರಮದ ಕಾರ್ಯಕ್ರಮ ಮುಗಿಯುವವರೆಗೂ ನನ್ನ ರೋಡ್ ಕಿಂಗ್ ಗಾಡಿ ಹಗಲು ರಾತ್ರಿಯೆನ್ನದೆ ಬೆಂಗಳೂರು ಅರಮನೆಯ ಸುತ್ತಲೂ ಸುತ್ತುತ್ತಿತ್ತು.

ನಿರೀಕ್ಷೆಯಂತೆ ಅಂದು ಹೊಸವರ್ಷದ ಕಾರ್ಯಕ್ರಮ ಆರಂಭವಾಯಿತುಯಾವುದೋ ಆಂಗ್ಲರ ಬ್ಯಾಂಡ್ ತಂಡವೊಂದು ಸಂಗೀತ ಕಾರ್ಯಕ್ರಮವನ್ನು ನೀಡುತ್ತಿತ್ತು.   ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತಿದ್ದ ಯುವಜನತೆಯಲ್ಲಿ ಬಹುತೇಕರು ಶ್ರೀಮಂತರ ಮನೆಯವರೇ ಆಗಿದ್ದರುಅವರ ಐಷಾರಾಮಿ ಕಾರುಗಳನ್ನು ನಿಲ್ಲಿಸಲು ವಿಶಾಲವಾದ ನಿಲುಗಡೆ ಜಾಗವನ್ನು ವ್ಯವಸ್ಥೆಗೊಳಿಸಲಾಗಿತ್ತುನಿಲುದಾಣದಲ್ಲಿ ಮಾರ್ಗದರ್ಶನ ಮಾಡಲು ಸಾಕಷ್ಟು ಭದ್ರತಾ ರಕ್ಷಕರನ್ನು ನಿಯೋಜಿಸಲಾಗಿತ್ತುಅನುಭವಿಗಳಾದ ಮೇಲ್ವಿಚಾರಕರನ್ನು ನಿಯೋಜಿಸಿ ಯಾವುದೇ ಅಪಘಾತಗಳಾಗದಂತೆ ಗಸ್ತು  ಹೊಡೆಯುತ್ತಾ ಇರುವಂತೆ  ನಿರ್ದೇಶಿಸಲಾಗಿತ್ತುಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಯುವಜನತೆಯ ಕೇಕೆ, ಹರ್ಷೋದ್ಘಾರಗಳು ಮುಗಿಲು ಮುಟುತ್ತಿದ್ದವುಅವರಿಗೆ ಬೇಕಾದ ವಿಧವಿಧವಾದ ಭಕ್ಷ್ಯಗಳ ಜೊತೆಗೆ ಸಾಕಷ್ಟು ಮಾದಕ ಪಾನೀಯಗಳ ಸರಬರಾಜನ್ನೂ  ವ್ಯವಸ್ಥೆ ಮಾಡಿದ್ದುದರಿಂದ ಉನ್ಮಾದಭರಿತರಾಗಿ ಹುಚ್ಚೆದ್ದು ಕುಣಿಯುತ್ತಿದ್ದರುಅಂಥಾ ಮಾದಕ ವಾತಾವರಣದಲ್ಲಿ ಅವರನ್ನು  ನಿಯಂತ್ರಿಸುವುದು ತುಂಬಾ ಕಷ್ಟದ ಕೆಲಸವಾಗಿತ್ತು.   ಹಲವು ಬಾರಿ ಭದ್ರತಾ ರಕ್ಷಕರೊಡನೆ ಹಾಗೂ ಕಾರ್ಯಕ್ರಮದ ಆಯೋಜಕರೊಡನೆ ಸಣ್ಣ ಪುಟ್ಟ ಕಾರಣಗಳಿಗೆ ಜಗಳಕ್ಕೆ ನಿಂತುಬಿಡುತ್ತಿದ್ದವರನ್ನು ಸಮಾಧಾನಿಸಿ ಕಳುಹಿಸುವುದರಲ್ಲಿ ಸಾಕು ಸಾಕಾಗುತ್ತಿತ್ತು.   ಕಾರ್ಯಕ್ರಮ ಯಾವುದೇ ಅವಘಡಗಳಿಲ್ಲದೆ ಸುಸೂತ್ರವಾಗಿ ನಡೆಯಬೇಕೆನ್ನುವುದು ಆಯೋಜಕರ ಉದ್ಧೇಶವಾಗಿದ್ದುದರಿಂದ ಎಲ್ಲರೂ ಬಹಳ ಶಾಂತಚಿತ್ತದಿಂದಲೇ ವರ್ತಿಸಬೇಕೆಂದು ಮೊದಲೇ ಎಲ್ಲಾ ಸಿಬ್ಬಂದಿಗೂ ತರಬೇತಿಯನ್ನು ನೀಡಲಾಗಿತ್ತು

ಅರಮನೆಯ ಆವರಣದಲ್ಲಿ ಹೊಸವರ್ಷವನ್ನು ಸ್ವಾಗತಿಸುವ ಉನ್ಮತ್ತ ವಾತಾವರಣವಿದ್ದರೆ ಹೊರಭಾಗದ ವಾಹನ ನಿಲುದಾಣದಲ್ಲಿ ಕಳ್ಳರ ಕೈಚಳಕದಿಂದ  ಕಾರುಗಳನ್ನು, ದ್ವಿಚಕ್ರವಾಹನಗಳನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿತ್ತುಅತ್ತ ಮಧ್ಯರಾತ್ರಿಯ ಹನ್ನೆರಡಕ್ಕೆ ಸರಿಯಾಗಿ ಹ್ಯಾಪ್ಪಿ ನ್ಯೂ ಇಯರ್ ಎಂಬ ಘೋಷ ಮುಗಿಲು ಮುಟ್ಟಿದ್ದರೆ ಇತ್ತ ಅರಮನೆಯ ಕಾಂಪೌಂಡು  ಗೋಡೆ ಸಮೀಪವೇ ಇದ್ದ ವಾಹನ ನಿಲುದಾಣದಲ್ಲಿ ಕಳ್ಳರು ತಮ್ಮ ಕೈಚಳಕವನ್ನು ಆರಂಭಿಸಿಯೇ ಬಿಟ್ಟಿದ್ದರುಸುಮಾರು ಹತ್ತರಿಂದ ಹದಿನೈದು ಜನರ ತಂಡವೊಂದು ಇದ್ದಕ್ಕಿದ್ದಂತೆ ಗೋಡೆ ನೆಗೆದು ಒಳಬಂದು  ತಮ್ಮಲ್ಲಿದ್ದ ನಕಲಿ ಕೀಗಳಿಂದ ಸಿಕ್ಕಿದ ವಾಹನಗಳ ಬೀಗವನ್ನು ತೆಗೆದು ಕದಿಯಲು ಆರಂಭಿಸಿದ್ದರುಅಲ್ಲಿದ್ದ ಭದ್ರತಾ ರಕ್ಷಕರು ತಮ್ಮ ಶೀಟಿಯನ್ನು ಜೋರಾಗಿ ಊದುತ್ತಾ ಇತರೆಯವರನ್ನು ಅಲ್ಲಿಗೆ ಬರುವಂತೆ ಕೂಗುತ್ತಾ ಅವರ ಮೇಲೆ ಆಕ್ರಮಣ ಆರಂಭಿಸಿದ್ದರುಕಾರ್ಯಕ್ರಮದ ಮುಖ್ಯ ಕೇಂದ್ರಸ್ಥಳದಲ್ಲಿದ್ದ ನನಗೆ ವಿಚಾರ ಗೊತ್ತಾಗುತ್ತಿದ್ದಂತೆಯೇ ಕೆಲವು ಅನುಭವಿ
ಮೇಲ್ವಿಚಾರಕರೊಂದಿಗೆ  ಸ್ಥಳಕ್ಕೆ ಧಾವಿಸಿದ್ದೆನಾವು ಅಲ್ಲಿಗೆ ಧಾವಿಸುವಷ್ಟರಲ್ಲಾಗಲೇ ಅಲ್ಲಿ ದೊಡ್ದ ಹೋರಾಟವೇ ನಡೆದು, ಕೆಲವು ಖದೀಮರನ್ನು ನಮ್ಮ ಭದ್ರತಾ ರಕ್ಷಕರು  ಹೆಡೆಮುರಿ ಕಟ್ಟಿ ಉರುಳಿಸಿದ್ದರುಆದರೆ ಹೊಡೆದಾಟದಲ್ಲಿ ಇಬ್ಬರು ಭದ್ರತಾ ರಕ್ಷಕರಿಗೆ ಕಳ್ಳರು ಚಾಕುವಿನಿಂದ ಇರಿದಿದ್ದರುತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದ ಅವರನ್ನು ತಕ್ಷಣ ಬೌರಿಂಗ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗಾಗಿ ದಾಖಲಿಸಿ ಪೊಲೀಸರಿಗೂ ವಿಚಾರ ಮುಟ್ಟಿಸಿದ್ದೆವುತಮ್ಮ ತಂಡದೊಂದಿಗೆ ಬಂದಿಳಿದ  ವಸಂತ ನಗರ ಹಾಗೂ ಶಿವಾಜಿ ನಗರದ ಪೊಲೀಸ್ ಅಧಿಕಾರಿಗಳು  ಕಳ್ಳರನ್ನು ಬಂಧಿಸಿ ಭದ್ರತಾ ಸಿಬ್ಬಂದಿಯ ಸಂದರ್ಭೋಚಿತ ಸಾಹಸ ಕಾರ್ಯವನ್ನು ಶ್ಲಾಘಿಸಿದ್ದರು

ಹೊಸವರ್ಷದ ಸಂಭ್ರಮಾಚರಣೆ ಮುಗಿಸಿ ಬಂದವರೆಲ್ಲಾ ತೆರಳುವಲ್ಲಿಗೆ ಬೆಳಗಿನ ನಾಲ್ಕು ಘಂಟೆಯಾಗಿತ್ತುಕಾರ್ಯಕ್ರಮದ ಆಯೋಜಕರಿಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವೂ ಯಥಾಸ್ಥಿತಿಯಲ್ಲಿರುವಂತೆ ನೋಡಿಕೊಂಡಿದ್ದಲ್ಲದೆ ಸಂಭಾವ್ಯ ವಾಹನ ಕಳ್ಳತನಗಳನ್ನು ತಪ್ಪಿಸಿದ ಭದ್ರತಾ ಸಿಬ್ಬಂದಿಯ ಕಾರ್ಯವನ್ನು  ಪ್ರತಿಯೊಬ್ಬರೂ ಶ್ಲಾಘಿಸಿದ್ದಲ್ಲದೆ ಬೌರಿಂಗ್ ಆಸ್ಪತ್ರೆಗೆ ತೆರಳಿ ಇರಿತಕ್ಕೊಳಗಾಗಿದ್ದ ಇಬ್ಬರ ಆರೋಗ್ಯ ವಿಚಾರಿಸಿದ್ದರು.   ಆಯೋಜಕರ ಕಡೆಯಿಂದ ಅಧಿಕೃತವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.   ಬೇರಾವುದೇ ಅಹಿತಕರ ಘಟನೆಗಳಿಗೆ ಆಸ್ಪದವನ್ನೀಯದೆ ಕಾರ್ಯಕ್ರಮ ಸುಸೂತ್ರವಾಗಿ ನಡೆದ ಸಂತಸ ಎಲ್ಲರಲ್ಲಿಯೂ ಮನೆಮಾಡಿತ್ತು.  

ಓ ಸಾವೇ,,,,,,,,,,ನಿನಗಿದು ತರವೇ?????

ಓ ಸಾವೇ 
ನೀನೇಕೆ 
ಹೀಗೆ ನಗುವೇ?
ಮುಗ್ಧ 
ಅಮಾಯಕ 
ಜೀವಗಳ 
ಥಟ್ಟನೆ 
ಹೊತ್ತೊಯ್ಯುವೆ !
ಬಲು ಗಟ್ಟಿ 
ಹೃದಯಗಳನ್ನೂ 
ಒಮ್ಮೆಗೇ 
ಅಲ್ಲಾಡಿಸುವೆ!
ಹುಣ್ಣಿಮೆಯ 
ಚಂದ್ರನನ್ನು 
ಮರೆಮಾಡಿ 
ಕಾಳರಾತ್ರಿಯ 
ಭಯ ತರುವೆ!
ಹಾಲುಗಲ್ಲದ 
ಕಂದಮ್ಮಗಳ 
ಅನಾಥರ 
ಮಾಡಿಬಿಡುವೆ!
ಏಕಿಂಥಾ ಆತುರ 
ಅದೇಕೋ 
ನೀನಿಷ್ಟು ಭೀಕರ!
ಓ ಸಾವೇ 
ತುಸು ಕರುಣೆ 
ತುಸು ಮರುಕ 
ಮಾನವೀಯತೆ 
ನಿನಗೆ ಬೇಡವೇ?
ನಿನ್ನಟ್ಟಹಾಸಕೆ 
ಕೊನೆಯಿಲ್ಲವೇ?
ಅಧರ್ಮ 
ಅನ್ಯಾಯದಲ್ಲೇ  
ಬದುಕುವವರ 
ಹೇಗೆ ಮರೆವೆ?
ಕಂಡವರ 
ಮನೆಯ ಹಾಳು 
ಮಾಡುವವರ 
ಹೇಗೆ ಬಿಡುವೆ?
ಒಳ್ಳೆಯವರನ್ನೇ 
ಏಕೆ ಹುಡುಕುವೆ?
ಸುಂದರವಾದ 
ಸುಮಧುರವಾದ 
ಮನಗಳನ್ನೇ ಏಕೆ 
ಹುಡುಕಿ ಕೊಲ್ಲುವೆ?
ನಿನಗಿದು ತರವೇ?
ನಿನಗಿದು ತರವೇ?
ಓ ಸಾವೇ 
ನೀನೇಕೆ 
ಹೀಗೆ ನಗುವೇ????

(ಪಠಾಣ್ ಕೋಟ್ ಉಗ್ರರ ಧಾಳಿಯಲ್ಲಿ ಹುತಾತ್ಮರಾದ ಎಲ್ಲಾ ವೀರ ಯೋಧರಿಗೆ ಹಾಗೂ ಹಠಾತ್ತನೆ ಮರೆಯಾದ ಕನ್ನಡತಿ ಶ್ರೀಮತಿ ಹರಿಣಿಯವರಿಗೆ, ಮಣಿಪುರದ ಭೂಕಂಪದಲ್ಲಿ ಮಡಿದ ಅಮಾಯಕರಿಗೆ ಶ್ರದ್ಧಾಂಜಲಿಯೊಡನೆ, ನೊಂದ ಮನದ ಈ  ಸಾಲುಗಳು.)