Friday, April 29, 2016

ಹಿಂಗಂದ್ರೆ ಹೆಂಗಿರ್ತದೆ???



ಕನಸಿನೂರಿನ ಬೀದಿಯಲ್ಲಿ 
ನಿನ್ನ ನೆನಪಿನರಮನೆಯಲ್ಲಿ 
ಕನಸುಗಳ ತಂಗಾಳಿಯಲ್ಲಿ 
ನಿರೀಕ್ಷೆ ತುಂಬಿದ ಕಂಗಳಲ್ಲಿ 
ಕಾತುರದಿ ಕಾಯುತಿರುವಲ್ಲಿ 
ಹೋದೆ ಮರೆಯಾಗಿ ನೀನೆಲ್ಲಿ?
ಬರದೆ ದೂರಾಗಿ ಕಾರಿರುಳಿನಲ್ಲಿ?

ನೀ ಬರುವೆ ನೀಬರುವೆ ಒಂದೇ ರಾಗ 
ನೀ ಬರದೆ ನೀ ಬರದೆ ಬರಿದೀ ಜಗ!
ನೀನಿರದೆ ನೀನಿರದೆ ನನದೇನಿದೆ 
ನೀನಿರದ ಈ ಬಾಳು ಸಾಕಾಗಿದೆ
ನಿನಗಿಂದು ಕೇಳಿಸದೆ ಕಾಣಿಸದೆ  
ಬಡಿತ ನಿಂತಲ್ಲಿ ಈ ಹೃದಯದೆ
ಏನಿಲ್ಲ ನಿನಗಲ್ಲಿ ನಿನಗರಿಯದೆ! 

ನೀ ಬಂದರೂ ಬರದಿದ್ದರೂ 
ಮಣ್ಣಲ್ಲಿ  ಸೇರುವುದೀ ಶರೀರ 
ಬರುವುದಾದರೆ ಬಂದು ಬಿಡು 
ಆ ಜವರಾಯ ಬರುವ ಮುನ್ನವೇ 
ತಡವಾಗಿ ನೀ ಬಂದರೂ ಏನಿಲ್ಲ 
ಕೊನೆಗೆ ನಿನಗೇನೂ ಸಿಗದಲ್ಲ
ನೀ ಬಂದರೂ ಉಪಯೋಗವಿಲ್ಲ!

Monday, April 25, 2016

ಮೊದಲ ಮಳೆಯ ಮಣ್ಣ ಈ ಘಮಲಿನಲಿ ,,,,,,,,,,,,,,,,,



ಮೊದಲ ಮಳೆಯ ಮಣ್ಣ ಈ ಘಮಲಿನಲಿ 
ನಿನ್ನ ಮೊದಲ ನೋಟದ ಸೆಳೆತ ಕಂಡೆನಲ್ಲೆ!

ಆಗಸದಿ ಫಳಾರನೆ ಹೊಳೆದ ಆ ಮಿಂಚಿನಲ್ಲಿ 
ನಿನ್ನಾ ಕಪಟ ನಾಟಕದ ಸಂಚ ಕಂಡೆನಲ್ಲೆ!

ಕಿವಿಗಡಚಿಕ್ಕುವ ಗುಡು ಗುಡು ಗುಡುಗಿನಲ್ಲಿ 
ನಿನ್ನ ಕೋಪ ತಾಪದ ಆರ್ಭಟವ ಕಂಡೆನಲ್ಲೆ!

ಭೋರೆಂದು ಸುರಿವ ಈ ಮುಸಲಧಾರೆಯಲ್ಲಿ
ನಿನ್ನ ಪ್ರೀತಿಯ ವರ್ಷಧಾರೆಯನೇ ಕಂಡೆನಲ್ಲೆ!

ನೀನೇಕೆ ಹೀಗೆ ನೀನೇಕೆ ಹೀಗೆ ಚೆಂಡು ಮಲ್ಲೆ 
ನನ್ನ ಬಿಡದೆ ಕಾಡುವೆ ಓ ನನ್ನಾ ಮುದ್ದು ನಲ್ಲೆ!  

(ಮಳೆಯ ಚಿತ್ರ:  Ramesh Bhadravathi, ಸುಂದರಿಯ ಚಿತ್ರ: ಅಂತರ್ಜಾಲದಿಂದ)







Saturday, April 16, 2016

ಪಯಣವಿದು ಸಾಗುತಿರಲಿ,,,,,,,,,,,,,,,,,,,,,,,,,,,,




ನಡೆವ ಹಾದಿ ದೂರವಿರಲು 
ಗಮ್ಯ ಸಿಗದೆ ತಡವುತಿರಲು 
ಮಬ್ಬುಗತ್ತಲು ಮುಸುಕುತಿರಲು 
ಒಂಟಿ ಮನವು ತೊಳಲುತಿರಲು

ನಡೆವ ಹೆಜ್ಜೆ ಎಡವುತಿರಲು 
ಜತೆಗಾತಿ ಕೈ ಹಿಡಿಯದಿರಲು 
ಉತ್ಸಾಹ ಬತ್ತಿ ಹೋಗುತಿರಲು 
ಪಯಣವಿದು ದೀರ್ಘವಾಗಿರಲು 

ಕುಗ್ಗುವಾ ಎದೆಯ ಮೇಲೆತ್ತುತಲಿ 
ಬತ್ತಿದಾ ತುಟಿಗಳ ಚಪ್ಪರಿಸುತಲಿ 
ಸೋಲದಾ ಛಲದಿ ನಡೆಯುತಲಿ 
ಆ ಬೆಳ್ಳಿ ಬೆಳಕಿನ ನಿರೀಕ್ಷೆಯಲಿ

ಈ ಪಯಣವಿದು ಸಾಗುತಿರಲಿ 
ಆ ಆಸೆಯಿದು ಕೊನರದಿರಲಿ 
ಈ ಭರವಸೆಯು ಬತ್ತದಿರಲಿ 
ಆ ಗುರಿಯೆಡೆಗೆ ಸಾಗುತಿರಲಿ 

Friday, April 15, 2016

ಶ್ರೀರಾಮನವಮಿಯ ಹಗದೂರಿನ ಬ್ರಹ್ಮರಥೋತ್ಸವದ ಚಿತ್ರ ಕಲಕಿದ ಚಿತ್ತ!


ಸುಮಾರು ೩೦ ವರ್ಷಗಳ ಸುದೀರ್ಘ ಸೇವೆಯ ನಂತರ ೨೦೦೨ರಲ್ಲಿ ನಿವೃತ್ತರಾದ ಅಮ್ಮ, ತಮ್ಮ ಕೈಗೆ ಬಂದ ಹಣದಲ್ಲಿ ಸೈಟೊಂದನ್ನು ಖರೀದಿಸಿ ಸ್ವಂತ ಮನೆ ಕಟ್ಟಬೇಕೆಂಬ ಆಲೋಚನೆಯಲ್ಲಿದ್ದರು.  ಆಗ ಲಗ್ಗೆರೆಯಲ್ಲಿದ್ದ ನಾನು ಇಲ್ಲಿಗೇ ಬನ್ನಿ, ಇಲ್ಲಿಯೇ ಒಂದು ಸೈಟು ತೊಗೊಂಡು ದೊಡ್ಡದೊಂದು ಮನೆಯನ್ನು ಕಟ್ಟಿ ಎಲ್ಲರೂ ಒಟ್ಟಿಗೇ ಇರೋಣ ಎಂದಿದ್ದೆ.   ಆಯಿತು, ನಿಮ್ಮಪ್ಪನನ್ನೊಂದು ಮಾತು ಕೇಳಿ ಹೇಳುತ್ತೇನೆ ಎಂದು ಹೇಳಿ ಹೋದ ನನ್ನ ಅಮ್ಮ ಮತ್ತೆ ನನ್ನ ಮನೆಗೆ ಬರಲೇ ಇಲ್ಲ!  ಅದಕ್ಕೆ ಕಾರಣ ಅಪ್ಪ ಹೇಳಿದ ಮಾತು, "ಅವನು ಮಾಡಿದ ಮನೆಗೆ ನಾನು ಹೋಗುವುದಾ?  ನಾನು ಮಾಡುವ ಮನೆಗೆ ಅವನನ್ನೇ ಬರಲು ಹೇಳು, ನಾನು ಅಲ್ಲಿಗೆ ಬರುವುದಿಲ್ಲ!"  ಹೀಗಾಗಿ ಅಪ್ಪನ ಮಾತಿಗೆ ಕಟ್ಟು ಬಿದ್ದ ಅಮ್ಮ ಅವರಿಚ್ಛೆಯಂತೆ, ಅಪ್ಪನ ಹುಟ್ಟೂರಾದ ಹಗದೂರಿನಲ್ಲಿ ಒಂದು ೫೦/೬೦ ಅಳತೆಯ ಸೈಟು ತೆಗೆದು ಮನೆ ಕಟ್ಟಿಸಿದ್ದರು.  ಇಬ್ಬರು ಗಂಡು ಮಕ್ಕಳೊಡನೆ, ಸೊಸೆ ಮೊಮ್ಮಕ್ಕಳೊಡನೆ ಇರಬೇಕೆಂಬ ಆಸೆ ಮನದಲ್ಲಿದ್ದರೂ ಅಪ್ಪನಿಗೆ ನನ್ನ ಮೇಲಿದ್ದ ಕೋಪ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ!  ನನ್ನ ಮೇಲೆ ಅವರಿಗಿರುವ ಕೋಪಕ್ಕೆ ನಿಮ್ಮೆಲ್ಲರ ನೆಮ್ಮದಿ ಹಾಳಾಗುವುದು ಬೇಡ, ನೀವು ಚೆನ್ನಾಗಿರಿ ಎಂದು ನಾನು ದೂರದ ಲಗ್ಗೆರೆಯಲ್ಲಿ, ನನ್ನ ಪುಟ್ಟ ಬಾಡಿಗೆ ಮನೆಯಲ್ಲಿಯೇ ಉಳಿದಿದ್ದೆ!

ಮನೆ ಕಟ್ಟಿದ ನಂತರ  ತಮ್ಮನ ಅದೃಷ್ಟ ಖುಲಾಯಿಸಿ ದುಬೈನಲ್ಲಿ ಕೆಲಸ ಸಿಕ್ಕಿತ್ತು.  ಗೃಹಪ್ರವೇಶ ಮುಗಿಸಿ ತಮ್ಮ ದುಬೈಗೆ ಹೊರಟುಬಿಟ್ಟಿದ್ದ, ಆಗಲೂ ನನ್ನ ಮೇಲೆ ಕರುಬಿದ ಅಪ್ಪ, ತನ್ನ ಕಟು ಮಾತುಗಳ ಗದಾಪ್ರಹಾರವನ್ನು ಮುಂದುವರೆಸಿ ನನ್ನನ್ನೂ, ಪತ್ನಿಮಕ್ಕಳನ್ನೂ ಉಗಿದು ಹೊಸಮನೆಯಿಂದ ಆಚೆಗಟ್ಟಿದ್ದ!  ಅಲ್ಲಿಂದ ಅವಮಾನಿತರಾಗಿ ಬಂದ ನಮ್ಮ ಮನೆಯಲ್ಲಿ ಮೂರು ದಿನಗಳ ಕಾಲ ನೀರವಮೌನ!  ನನ್ನ ಪುಟ್ಟ ಮಕ್ಕಳಿಬ್ಬರೂ ತಮ್ಮ ಮನಸ್ಸಿಗಾದ ಆಘಾತದಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿದಿತ್ತು.

ಕಾಲಕ್ರಮೇಣ ಎಲ್ಲವನ್ನೂ  ಜೀವನ ನಿರಾಳವಾಗಿ ನಡೆಯುತ್ತಿದ್ದಾಗ ಅಮ್ಮ ಕೇಸೊಂದರಲ್ಲಿ ಸಿಲುಕಿಕೊಂಡು, ಮೊದಲೇ ಕೆಟ್ಟಿದ್ದ ಅವರ ಆರೋಗ್ಯ ಮತ್ತಷ್ಟು ಉಲ್ಬಣಿಸಿ, ಎರಡೂ ಕಿಡ್ನಿಗಳು ವಿಫಲವಾಗಿ, ಸುಮಾರು ಏಳೆಂಟು ತಿಂಗಳ ಹೋರಾಟದ ನಂತರ ಕಣ್ಮುಚ್ಚಿದ್ದರು.  ಅಮ್ಮನ ಅಂತ್ಯಸಂಸ್ಕಾರಕ್ಕೂ ದುಬೈನಿಂದ ಬರಲಾಗದ ತಮ್ಮಅಲ್ಲಿಂದಲೇ ಶ್ರದ್ಧಾಂಜಲಿ ಕೋರಿದ್ದ.  ಅಮ್ಮನ ಕ್ರಿಯಾಕರ್ಮಗಳನ್ನೆಲ್ಲ ಮುಗಿಸಿ ನಾವು ನಮ್ಮ ಮನೆಗೆ ಹೊರಟು ನಿಂತಾಗಲೂ ಅಮ್ಮನ ಒಡವೆಗಳನ್ನು ನನ್ನ ಹೆಂಡತಿ ಕದ್ದಿರಬಹುದೆಂಬ ಅನುಮಾನದಲ್ಲಿ ಅಪ್ಪ ಆರ್ಭಟಿಸಿದ್ದ!  ಆದರೆ ಅಮ್ಮನ ಒಡವೆಗಳೆಲ್ಲಾ ಎಲ್ಲಿದ್ದವೋ ಅಲ್ಲಿಯೇ ಭದ್ರವಾಗಿದ್ದವು, ನನ್ನ ಹೆಂಡತಿ ಅವುಗಳನ್ನು ಎಡಗೈನಲ್ಲಿಯೂ ಮುಟ್ಟಿರಲಿಲ್ಲ!  ಮತ್ತೊಮ್ಮೆ ಎಲ್ಲರೆದುರು ಅಪ್ಪನಿಂದ ಅವಮಾನಿತರಾಗಿ ಬಂದಿದ್ದೆವು.

ಅಪ್ಪ ಆ ದೊಡ್ಡ ಮನೆಯಲ್ಲಿ ಏಕಾಂಗಿಯಾಗಿದ್ದರು.  ತಾರಸಿಯ ಮೇಲೆ ಎರಡು ರೂಮುಗಳನ್ನು ಕಟ್ಟಿಸಿ ಒಂದರಲ್ಲಿ ತಾವಿದ್ದುಕೊಂಡು, ಇನ್ನೊಂದರಲ್ಲಿ ನನ್ನ ಎರಡನೆಯ ಅಕ್ಕನ ಸಂಸಾರವಿರಲು ಅವಕಾಶ ಮಾಡಿ ಕೊಟ್ಟು ಕೆಳಗಿನ ವಿಶಾಲ ಮನೆಯನ್ನು ಯಾರಿಗೋ ಬಾಡಿಗೆಗೆ ಕೊಟ್ಟಿದ್ದರು.   ಕಾಲ ಓಡುತ್ತಾ ಹೋದಂತೆ ದುಬೈನಲ್ಲಿದ್ದ  ತಮ್ಮ ಸಂಸಾರದೊಡನೆ ಹಿಂದಿರುಗಿ ಬಂದಿದ್ದ, ಅವನೊಡನೆಯೂ ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದು ಕಿತ್ತಾಡಿಕೊಂಡ ಅಪ್ಪ ಹೋಗಿ ತಿಪಟೂರು ಸೇರಿಕೊಂಡಿದ್ದರು.  ಉನ್ನತ ಉದ್ಯೋಗಗಳು ಅರಸಿ ಬಂದು ತಮ್ಮ ಮತ್ತೆ ಕುಟುಂಬದೊಡನೆ ದೆಹಲಿ ಸೇರಿಕೊಂಡ, ನನಗೆ ಉದ್ಯೋಗ ದೊರೆತು ನಾನು ಬಂದು ದುಬೈನಲ್ಲಿ ನೆಲೆ ನಿಂತೆ.

ಪುಟ್ಟ ಬಾಡಿಗೆ ಮನೆಯೊಂದರಲ್ಲಿ ಕ್ಯಾನ್ಸರ್ ಪೀಡಿತೆ ಅಕ್ಕ, ಅಪಘಾತಕ್ಕೀಡಾಗಿ ಮುಖ ಸೊಟ್ಟಗಾದ ಅವಳ ಮಗ, ಅವನ ಹೆಂಡತಿ, ಚಿನಕುರಳಿಯಂಥಾ ಅವರ ಪುಟ್ಟ ಮಗ ಮಾತ್ರ ಅಲ್ಲಿದ್ದಾರೆ. ಅಮ್ಮನ ಕನಸಿನ ಮನೆಯಲ್ಲಿ ಬಾಡಿಗೆದಾರರಿದ್ದಾರೆ!   ನಾನು ದುಬೈನಲ್ಲಿ, ತಮ್ಮನ ಕುಟುಂಬ ದೆಹಲಿಯಲ್ಲಿ, ಅಪ್ಪ ತಿಪಟೂರಿನಲ್ಲಿ!  ಒಂದೊಮ್ಮೆ ಎಲ್ಲರಂತೆ ಅಪ್ಪ ಸ್ಥಿತಪ್ರಜ್ಞನಾಗಿದ್ದು ಅಂದು ಜವಾಬ್ಧಾರಿಯಿಂದ ವರ್ತಿಸಿದ್ದಿದ್ದರೆ ನಮ್ಮ ಕೂಡು ಕುಟುಂಬ ಇಂದು ಹಗದೂರಿನಲ್ಲಿಯೇ ನೆಲೆಯಾಗಿ ನಿಂತಿರುತ್ತಿತ್ತು.  ನೀರವ ಮೌನ ತುಂಬಿರುವ ಆ ಮನೆಯಲ್ಲಿ ಸೊಸೆಯಂದಿರ ಮೊಮ್ಮಕ್ಕಳ ನಗು, ಕೇಕೆ, ಕಲರವ, ತುಂಟಾಟಗಳ ನಡುವೆ ೮೬ ವರ್ಷದ ಅಪ್ಪ ಕೊನೆಯದಿನಗಳನ್ನು ಸಂತಸಮಯವಾಗಿ ಕಳೆಯಬಹುದಿತ್ತು.  ಉದ್ಧಕ್ಕೂ ದುಡುಕುಬುದ್ಧಿ, ಆವೇಶ, ಕೋಪ, ದರ್ಪ, ಒಣಜಂಭಗಳಿಂದಲೇ ಬದುಕಿದ ಅಪ್ಪ ಈಗ ತನ್ನ ಕೊನೆಗಾಲದಲ್ಲಿಯೂ ತನ್ನ ಹಳೆಚಾಳಿಗೇ ಅಂಟಿಕೊಂಡು ಒಬ್ಬಂಟಿಯಾಗಿರುವುದು ಮಾತ್ರ ಈ ಬದುಕಿನ ಬಹು ದೊಡ್ಡ ವಿಪರ್ಯಾಸ.

ಬಹುಶಃ ಹಗದೂರಿನ ಸ್ಮಶಾನದಲ್ಲಿ ಮಲಗಿರುವ ಅಮ್ಮನ ಆತ್ಮ ಈ ಶ್ರೀರಾಮನವಮಿಯ ದಿನದಂದು ಮೌನವಾಗಿ ಬಿಕ್ಕುತ್ತಿರಬಹುದು!

Tuesday, April 12, 2016

ಕನ್ನಡಕ್ಕೊಬ್ಬರೆ ರಾಜಣ್ಣ,,,,,,,,,,,,,,,,,




ಕನ್ನಡಕ್ಕೊಬ್ಬರೆ ರಾಜಣ್ಣ,,,,ಅದೆಷ್ಟು ಬೇಗ ಹತ್ತು ವರ್ಷಗಳಾಗಿ ಹೋದವು ಕನ್ನಡದ ಧೃವತಾರೆ ಮರೆಯಾಗಿ?  ಅಂದು,,,,ಏಪ್ರಿಲ್ ೧೨, ೨00೬, ಬೆಂಗಳೂರಿನ ಹಲಸೂರಿನ ಆದರ್ಶ ಚಿತ್ರಮಂದಿರದ ಹತ್ತಿರದಲ್ಲಿದ್ದ ಕಚೇರಿಯಲ್ಲಿ ಆಗ ತಾನೇ ಊಟ ಮಾಡಿ ಬಂದು ಕುಳಿತಿದ್ದೆ.  ಸುಮಾರು ೨ ಘಂಟೆಯ ಹೊತ್ತಿಗೆ ಕನ್ನಡದ ಕಣ್ಮಣಿ ಡಾ. ರಾಜ್ ಕುಮಾರ್ ಇನ್ನಿಲ್ಲವೆಂಬ ಸುದ್ಧಿ ದೊರಕಿತ್ತು.  ಜೊತೆಗೆ ತಕ್ಷಣವೇ ಹಲಸೂರು ಹಾಗೂ ಅಶೋಕ್ ನಗರ ಪೊಲೀಸ್ ಠಾಣೆಗಳಿಂದ ದೂರವಾಣಿ ಕರೆಗಳು ಬಂದು, ಪ್ರಮುಖ ಸ್ಥಳಗಳಲ್ಲಿ ಹೆಚ್ಚು ಭದ್ರತಾ ರಕ್ಷಕರನ್ನು ನಿಯೋಜಿಸಿ ಯಾವುದೇ ಅವಘಡವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ನಿರ್ದೇಶನ ಬಂದಿತ್ತು!   ನನ್ನ ನೆಚ್ಚಿನ ನಟ, ಗಾಯಕ, ಇಡೀ ಕರ್ನಾಟಕದ ಕಣ್ಮಣಿ ಹಠಾತ್ತಾಗಿ ನಿಧನರಾಗಿದ್ದು ಕ್ಷಣಕಾಲ ನನ್ನನ್ನು ದಂಗುಬಡಿಸಿದ್ದರೂ ಕರ್ತವ್ಯಪ್ರಜ್ಞೆ ಜಾಗೃತವಾಗಿ ನಮ್ಮ ಎಲ್ಲಾ ಭದ್ರತಾ ಸಿಬ್ಬಂದಿಗೂ ಒಂದು ಸುತ್ತು ದೂರವಾಣಿ ಕರೆ ಮಾಡಿ ಎಲ್ಲಾ ಕಡೆಯಲ್ಲಿಯೂ ಹುಶಾರಾಗಿರುವಂತೆ ನಿರ್ದೇಶನ ನೀಡಿ, ಕೆಲವು ಪ್ರಮುಖ ಗುತ್ತಿಗೆಗಳಿದ್ದ ಬ್ಯಾಂಕ್, ಚಿನ್ನಾಭರಣಗಳ ಮಳಿಗೆಗಳು ಹಾಗೂ ಕಾಲ್ ಸೆಂಟರ್ಗಳಿಗೆ ಭೇಟಿ ನೀಡಲೆಂದು ನನ್ನ ರೋಡ್ ಕಿಂಗ್ ಬೈಕನ್ನೇರಿದ್ದೆ!  ಹಲಸೂರಿನಿಂದ ರಿಚ್ಮಂಡ್ ವೃತ್ತಕ್ಕೆ ಬರುವಷ್ಟರಲ್ಲಿ ಸಾಕು ಸಾಕಾಗಿತ್ತು.  ಎಲ್ಲೆಲ್ಲಿಯೂ ಟ್ರಾಫಿಕ್ ಜಾಮ್, ಹುಚ್ಚೆದ್ದಂತೆ ಧಾವಿಸುತ್ತಿದ್ದ ಜನಸಮೂಹ, ಅಲ್ಲೊಂದು ಸಮೂಹ ಸನ್ನಿಯೇ ಸೃಷ್ಟಿಯಾಗಿತ್ತು!    

ಅದೆಷ್ಟೇ ಜಾಗ್ರತೆ ವಹಿಸಿದ್ದರೂ, ಇಡೀ ಬೆಂಗಳೂರಿನ ಪೊಲೀಸ್ ಸಿಬ್ಬಂದಿ, ಗೃಹರಕ್ಷಕರು ಹಾಗೂ ಖಾಸಗಿ ಭದ್ರತಾ ರಕ್ಷಕರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಅಂದು ಕರ್ತವ್ಯ ನಿರ್ವಹಿಸಿದರೂ, ಹರಿದು ಬಂದ ಆ ಮಹಾನ್ ಜನಸಾಗರವನ್ನು ನಿಯಂತ್ರಿಸಲು ಅಸಾಧ್ಯವಾಗಿತ್ತು.   ಆ ಸಮೂಹಸನ್ನಿಯಲ್ಲಿ ದೇವರು ಹಾಗೂ ದೆವ್ವಗಳೆರಡೂ ಮೈಮೇಲೆ ಬಂದಂತೆ ಆಡುತ್ತಿದ್ದ ಅಭಿಮಾನಿ ದೇವರುಗಳನ್ನು, ಅವರ ಕಂಬನಿಯನ್ನು ದುಃಖವನ್ನು, ಆವೇಶವನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವಿಲ್ಲದೆ ಹೋಯಿತು.  ಇಡೀ ಬೆಂಗಳೂರು ನಗರ ಅಘೋಷಿತ ಬಂದ್ ಆಚರಿಸಿತ್ತು.  ಅಂಗಡಿ ಮುಂಗಟ್ಟುಗಳೆಲ್ಲಾ ಮುಚ್ಚಿದ್ದವು, ಅಲ್ಲಿಲ್ಲಿ ತೆರೆದಿದ್ದ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು.  ಅಸಾಧ್ಯ ಕರೆಗಳ ಪರಿಣಾಮದಿಂದಾಗಿ ಎಲ್ಲಾ ಮೊಬೈಲ್ ನೆಟ್ವರ್ಕ್ಗಳು  ಸ್ಥಗಿತಗೊಂಡಿದ್ದವು.  ಯಾರಿಗೂ ಮೊಬೈಲಿನಲ್ಲಿ ಕರೆ ಮಾಡಲಾಗುತ್ತಿರಲಿಲ್ಲ, ಸಂದೇಶ ಕಳಿಸಲಾಗುತ್ತಿರಲಿಲ್ಲ,  ಸಾಕಷ್ಟು ಕಟ್ಟಡಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. 

ಅದೆಷ್ಟೇ ಎಚ್ಚರಿಕೆ ವಹಿಸಿದರೂ ತಮ್ಮ ನೆಚ್ಚಿನ ನಟನ ಸಾವಿನ ಸುದ್ಧಿಯಿಂದ ಆಘಾತಗೊಂಡಿದ್ದ ಅಭಿಮಾನಿ ದೇವರುಗಳನ್ನು ನಿಯಂತ್ರಿಸಲಾಗದೆ ಪೊಲೀಸರು ಸಹ ಅಶಾಯಕರಾಗಿದ್ದರು.  ಸದಾಶಿವನಗರದ ಅವರ ಮನೆಯ ಮುಂದೆ ದೊಡ್ಡ ಜಾತ್ರೆಯೇ ನೆರೆದಿತ್ತು, ಇತ್ತ ಕಂಠೀರವ ಸ್ಟೇಡಿಯಂಗೆ ಅವರ ಶರೀರವನ್ನು ಕೊಂಡು ತರಲಿದ್ದಾರೆಂಬ ಸುದ್ಧಿಯಿಂದಾಗಿ ಅಲ್ಲಿಯೂ ಸಹಸ್ರಾರು ಜನರು ನೆರೆದಿದ್ದರು.  ಒಟ್ಟಾರೆ ಇಡೀ ಬೆಂಗಳೂರು ನಗರವೇ ಅವ್ಯವಸ್ಥೆಯ  ಆಗರವಾಗಿ ಹೋಗಿತ್ತು.  ಕೊನೆಗೆ ದುಃಖದಿಂದ ಆಕ್ರೋಶಭರಿತರಾಗಿದ್ದ ಅಭಿಮಾನಿಗಳು ಕಲ್ಲು ತೂರಾಟಕ್ಕೂ ಇಳಿದಿದ್ದರು, ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದರು.  ಈ ನಡುವೆ ನಾವು ಭದ್ರತೆ ನೀಡಿದ್ದ ಹಲವು ಕಟ್ಟಡಗಳು ಅಭಿಮಾನಿ ದೇವರುಗಳ ಆಕ್ರೋಶಕ್ಕೆ ಗುರಿಯಾಗಿದ್ದವು, ನಮ್ಮ ಭದ್ರತಾ ರಕ್ಷಕರ ತಲೆಗಳು ಸಹಾ ಅವರ ಕಲ್ಲೇಟಿಗೆ ಸಿಕ್ಕಿ ತೂತು ಬಿದ್ದಿದ್ದವು!  ಹತ್ತಿರದ ಬೌರಿಂಗ್ ಆಸ್ಪತ್ರೆಗೆ ಕೊಂಡೊಯ್ದರೆ ಅಲ್ಲಿ ನೂರಾರು ಗಾಯಾಳುಗಳು ಚಿಕಿತ್ಸೆಗಾಗಿ ಕಾದಿದ್ದರು!  ಯಾವುದು ಆಗಬಾರದೆಂದು ಇಡೀ ಪೊಲೀಸ್ ಪಡೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದಿದ್ದರೋ ಅದೇ ಆಗಿ ಹೋಗಿತ್ತು!  ಅಭಿಮಾನಿ ದೇವರುಗಳ ಹಿಂಸಾಚಾರದಲ್ಲಿ ನೂರಾರು ವಾಹನಗಳು ಸುಟ್ಟು ಕರಕಲಾಗಿ ಹೋದರೆ, ಅಮೂಲ್ಯವಾದ ಎಂಟು ಜೀವಗಳು ಬಲಿಯಾಗಿ ಹೋಗಿದ್ದವು. 

ಆ ಎಂಟು ಜನರಲ್ಲಿ ಮಂಜುನಾಥ ಎಂಬ ನನ್ನದೇ ಹೆಸರಿನ ಪೊಲೀಸ್ ಇನ್ಸ್ಪೆಕ್ಟರ್ ಕೂಡಾ ಸೇರಿದ್ದರು.  ಬೆಳಿಗ್ಗೆ ಎಂಟು ಘಂಟೆಗೆ ಮನೆ ಬಿಟ್ಟಿದ್ದ ನಾನು ಈ ಗಲಾಟೆಗಳೆಲ್ಲಾ ಶುರುವಾಗುವ ಹೊತ್ತಿಗೆ ಮೊಬೈಲಿನಲ್ಲಿ ಕರೆ ಮಾಡಿ ಮಕ್ಕಳನ್ನು ಶಾಲೆಯಿಂದ ಕರೆ ತಂದು ಮನೆಯೊಳಗೇ ಇರುವಂತೆ ನನ್ನ ಪತ್ನಿಗೆ ಹೇಳಿದ್ದೆ!  ಆನಂತರ ಮತ್ತೆ ಅವಳೊಡನೆ ಮಾತನಾಡಲು ಸಾಧ್ಯವೇ ಆಗಿರಲಿಲ್ಲ,  ಯಾವಾಗ ಮಂಜುನಾಥ ಎನ್ನುವ ಹೆಸರಿನೊಡನೆ ಸಾವಿನ ಸುದ್ಧಿ ಪ್ರಸಾರವಾಯಿತೋ ಆಗಿನಿಂದ ನಾನು ಮಧ್ಯರಾತ್ರಿ ೧೨ರ  ನಂತರ ಮನೆ ತಲುಪುವವರೆಗೂ ಅವಳ ಅಳು ನಿಂತಿರಲಿಲ್ಲ!  

ಇಪ್ಪತ್ತೆಂಟು ವರ್ಷಗಳ ನನ್ನ ವೃತ್ತಿಜೀವನದಲ್ಲಿ ನಾನೆಂದೂ ಕಂಡರಿಯದಿದ್ದ ಸಮೂಹ ಸನ್ನಿ, ದುಃಖ, ಆಕ್ರೋಶ, ಅವೇಶ,ಆವೇಗ, ದೊಂಬಿ, ಹಿಂಸಾಚಾರವನ್ನು ಅಂದು, ನನ್ನ ನೆಚ್ಚಿನ ನಟಸಾರ್ವಭೌಮನ ಸಾವಿನ ದಿನದಂದು ಕಂಡಿದ್ದೆ!  ಅಬ್ಬಾ,,,ಆ ಕರಾಳ ನೆನಪುಗಳಿಗೆ ಅದೆಷ್ಟು ಬೇಗ ಹತ್ತು ವರ್ಷಗಳಾಗಿ ಹೋಯಿತು?   ನಮ್ಮ ನೆಚ್ಚಿನ ನಟಸಾರ್ವಭೌಮನ ಆತ್ಮಕ್ಕೆ ಶಾಂತಿ ಸಿಗಲಿ,  ಅವರು ಪಾಲಿಸಿದ ಆದರ್ಶಗಳು, ಬಳಸಿದ ಭಾಷೆ, ಕನ್ನಡ ಭಾಷೆಗೆ, ಕರ್ನಾಟಕಕ್ಕೆ ಅವರು ತಂದಿತ್ತ ಮೌಲ್ಯ ಇಂದಿನ ಕಂಗ್ಲೀಷ್ ನಟರ ಕಣ್ಣುತೆರೆಸಲಿ, ಸ್ವಚ್ಚ ಕನ್ನಡ ಮಾತಾಡುವಂತಾಗಲಿ.
ಬಾಳಲಿ ಕನ್ನಡ ತಾಯಿ, ಬೆಳಗಲಿ ನೂರ್ಕಾಲ ಕನ್ನಡತಾಯಿ. :-)   

Thursday, April 7, 2016

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,,,,,



ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,,,,,

ಬೇವು ಬೆಲ್ಲವ ಮೆದ್ದು,, ಯುಗಾದಿಯ ಸಂಭ್ರಮವನ್ನಾಚರಿಸುವ ಸಂದರ್ಭದಲ್ಲಿಜೀವನದಲ್ಲಿ ಎದುರಾಗುವ ಕಷ್ಟ ಸುಖಗಳನ್ನು ಸಮನಾಗಿ ಎದುರಿಸುವ ಕಂಕಣ ತೊಡುವ, ಕಷ್ಟವೆಷ್ಟೇ ಇದ್ದರೂ ತೋರಿಸಿಕೊಳ್ಳದೆ, ಎಲ್ಲವನ್ನೂ ನೀಲಕಂಠನಂತೆ ನುಂಗಿ ಮೇಲೆ ನಗುನಗುತ್ತಲೇ ಇರುವ, ತಾವು ಹುಟ್ಟಿದ ನೆಲ, ಕುಡಿದ ಜಲ, ಆಡಿ ಬೆಳೆದ ಗೆಳೆಯರು, ಬಂಧು ಬಳಗ ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಬಂದು ಹಗಲಿರುಳೆನ್ನದೆ ದುಡಿಯುತ್ತಾ, ತಮ್ಮವರ ಏಳಿಗೆಗೆ ಶ್ರಮಿಸುತ್ತಾ, ಸುರಿಯುವ ಬೆವರನ್ನೊರೆಸುತ್ತಾ ವಿಷಾದದ ನಗುವನ್ನು ಮುಖದ ಮೇಲೆ ತೋರಿಸುತ್ತಾ, ಹೃದಯದೊಳಗಿನಿಂದ ನುಗ್ಗಿ ಬರುವ ನೋವಿನ ನಿಟ್ಟುಸಿರನ್ನು ತಡೆಯಲೆತ್ನಿಸುತ್ತಾ,, ಏನೇ ಆದರೂ ನಗುನಗುತ್ತಾ "ಹ್ಯಾಪ್ಪಿ ಯುಗಾದಿ,,,ಈದ್ ಮುಬಾರಕ್,,,ಹ್ಯಾಪ್ಪಿ ಬಿಶು,,,,ಯುಗಾದಿಯ ಶುಭಾಶಯಗಳು" ಎಂದು ಎಲ್ಲಿಂದಲೋ ಬಂದು ಜೊತೆಯಾಗಿರುವ ಇತರ ಭಾರತೀಯರೊಡನೆ ಹಬ್ಬದ ಸಂಭ್ರಮ ಹಂಚಿಕೊಳ್ಳುವ, ಅರಬ್ ದೇಶಗಳಲ್ಲಿರುವ ಲಕ್ಷಾಂತರ ಭಾರತೀಯರಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ಲೇಖನದ ಅರ್ಪಣೆ ಬರಹ ಅವರಿಂದ, ಅವರಿಗಾಗಿ!

ಇದು ಕೆಲವು ಸಂದರ್ಭಗಳಲ್ಲಿನ ದೂರವಾಣಿ ಸಂಭಾಷಣೆಗಳನ್ನು ಆಧರಿಸಿ, ಇಲ್ಲಿನ ನನ್ನ ಸಹೋದ್ಯೋಗಿಗಳ ಹಾಗೂ ಇತರ ಕಾರ್ಮಿಕರ  ಸ್ವಾನುಭವದ ಆಧಾರದಿಂದ, ರೂಪಿಸಲಾಗಿದೆಹೊಟ್ಟೆ ತುಂಬಿದ ಕೆಲವರ ಹೊರತುಪಡಿಸಿ ಇದು ಬಹುತೇಕ ಭಾರತೀಯರ, ಅಷ್ಟೇ ಏಕೆ, ಕೊಲ್ಲಿ ರಾಷ್ಟ್ರಗಳಲ್ಲಿರುವ ಪ್ರತಿಯೊಬ್ಬ ಕಾರ್ಮಿಕನ ನಿಟ್ಟುಸಿರಿನ ಕಥೆಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದುಇಷ್ಟು ವರ್ಷಗಳ ನನ್ನ ಅನುಭವದಲ್ಲಿ ಇಲ್ಲಿರುವ ಎಲ್ಲ ದೇಶಗಳವರದ್ದೂ ಇದೇ ಕಥೆಇಲ್ಲಿ ಜಾತಿ, ಧರ್ಮ, ಭಾಷೆ, ದೇಶ, ಧರ್ಮಗಳ ಗಡಿಯಿಲ್ಲ,,,,ಎಲ್ಲರೂ ಸಮಾನ ದುಃಖಿತರೇ!   ಕೆಳಗಿನ ಸಂಭಾಷಣೆಗಳನ್ನು ಓದುತ್ತಾ ಹೋದರೆ ಯುಗಾದಿಯ ಬೇವು ಬೆಲ್ಲ ಕುಳಿತಲ್ಲೇ ತಿಂದಂತಾಗುವುದು, ಓದಿದ ನಂತರ ಯಾರಿಗಾದರೂ ಮನಸ್ಸಿಗೆ ನೋವಾದಲ್ಲಿ ದಯವಿಟ್ಟು ಕ್ಷಮೆಯಿರಲಿ

ದೃಶ್ಯ ದಿನ: ಶುಕ್ರವಾರ, ವಾರದ ರಜಾ ದಿನಸ್ಥಳ: ಯು... ಎಕ್ಸ್ಚೇಂಜ್ ಮುಂಭಾಗ, ಹಮದಾನ್ ರಸ್ತೆ, ಅಬುಧಾಬಿ:

ಕಾರ್ಮಿಕನೊಬ್ಬ ತನ್ನ ತಿಂಗಳ ಪಗಾರದ ಹಣ ಕೈಗೆ ಬರುತ್ತಿದ್ದಂತೆ ಉರಿಯುವ ಬಿಸಿಲಿನಲ್ಲಿ ಆತುರಾತುರವಾಗಿ ಬಂದು, ಸುರಿಯುತ್ತಿರುವ ಬೆವರನ್ನೊರೆಸಿಕೊಳ್ಳುತ್ತಾ  ಎಕ್ಸ್ಚೇಂಜಿನೊಳಗೆ ಕಾಲಿಟ್ಟು ಮೊದಲು ಕೇಳುವ ಪ್ರಶ್ನೆ, ಇವತ್ತಿನ ವಿನಿಮಯದ ಬೆಲೆ ಎಷ್ಟುಅಲ್ಲಿ ಸಿಕ್ಕ ಉತ್ತರದಿಂದ ತೃಪ್ತನಾಗದೆ ಹೊರಬಂದು ಅದಾಗಲೇ ತಮ್ಮವರಿಗೆ ಹಣ ಕಳುಹಿಸಿ ಹೊರಗಡೆ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದ ಇತರ ಕಾರ್ಮಿಕರೊಡನೆ ವಿಚಾರ ವಿನಿಮಯ ಮಾಡುತ್ತಾನೆ,   ಅವರ ಮಾತಿನಂತೆ ಯಾವ ಎಕ್ಸ್ಚೇಂಜಿನಲ್ಲಿ ಹೆಚ್ಚು ವಿನಿಮಯ ದೊರೆಯುತ್ತದೋ ಅಲ್ಲಿ ಹೋಗಿ ಸಾಲಿನಲ್ಲಿ ನಿಂತು ತನ್ನ ಕುಟುಂಬದವರಿಗೆ ಹಣ ಕಳುಹಿಸುತ್ತಾನೆನಂತರ ಅಲ್ಲೇ ಪಾದಚಾರಿ ಮಾರ್ಗದ ಪಕ್ಕದಲ್ಲಿ ನಿಂತು  ರೀಚಾರ್ಜ್ ಕಾರ್ಡುಗಳನ್ನು ಮಾರುತ್ತಿದ್ದ ಹುಡುಗನ ಬಳಿಗೆ ಹೋಗಿ ಒಂದು ಇಪ್ಪತ್ತೈದು ದಿರ್ಹಾಂನ ಕಾರ್ಡು ಖರೀದಿಸಿ, ಅದುವರೆಗೂ  ಖಾಲಿಯಾಗಿದ್ದ ತನ್ನ ಮೊಬೈಲನ್ನು ರೀಚಾರ್ಜ್ ಮಾಡಿ ದೂರದಲ್ಲಿರುವ ತನ್ನ ಪತ್ನಿಗೆ/ಅಪ್ಪನಿಗೆ/ಮಗನಿಗೆ/ಮಗಳಿಗೆ ಕಾಲ್ ಮಾಡುತ್ತಾನೆ.   ಖುಷಿಯಿಂದ ಎದೆಯುಬ್ಬಿಸಿ  ತಾನು ಕಳುಹಿಸಿದ ಹಣ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲಾತಿ ಸಂಖ್ಯೆಯನ್ನು ನೀಡಿ, ತಕ್ಷಣ ಹೋಗಿ, ಹಣ ಪಡೆದುಕೊಂಡು, ಮಿಸ್ಡ್ ಕಾಲ್ ಕೊಡಲು ಹೇಳುತ್ತಾನೆಅತ್ತಲಿಂದ ಕರೆ ಬರುವುದನ್ನೇ ಕಾತುರದಿಂದ ಕಾಯುತ್ತಿರುತ್ತಾನೆ, ಕರೆ ಬಂದ ತಕ್ಷಣ ಅದನ್ನು ಕಟ್ ಮಾಡಿ ತಾನೇ ಇಲ್ಲಿಂದ ಕರೆ ಮಾಡಿ ತಾನು ಕಳುಹಿಸಿದ ಹಣದಲ್ಲಿ  ಮನೆಗೆ ಏನೆಲ್ಲಾ ತರಬೇಕು, ಏನೆಲ್ಲಾ ಮಾಡಬೇಕು ಎಂದು ಹತ್ತು ನಿಮಿಷ ಮಾತನಾಡುತ್ತಾನೆಅಷ್ಟರಲ್ಲಿ ಅವನ ಮೊಬೈಲಿನ ಕರೆನ್ಸಿ ಖಾಲಿಯಾಗುತ್ತದೆಇನ್ನೂ ಸಾಕಷ್ಟು ಮಾತನಾಡಬೇಕಿತ್ತಾದರೂ ಸಾಧ್ಯವಿಲ್ಲದ ತನ್ನ ಅಸಹಾಯಕತೆಗೆ ಬೈದುಕೊಳ್ಳುತ್ತಾ ಅನತಿ ದೂರದಲ್ಲಿ ತನಗಾಗಿ ಕಾದಿದ್ದ ಕಂಪನಿಯ ವಾಹನದೆಡೆಗೆ ತನ್ನ ಸಹಕಾರ್ಮಿಕರೊಡನೆ ಹೆಜ್ಜೆ ಹಾಕುತ್ತಾನೆ.   ಕೆಲವರ ಮುಖದಲ್ಲಿ ಯುದ್ಧ ಗೆದ್ದ ಖುಷಿ ಎದ್ದು ಕಾಣುತ್ತಿದ್ದರೆ ಮತ್ತೆ ಕೆಲವರ ಮುಖದಲ್ಲಿ  ತನ್ನ ಸಂಸಾರಕ್ಕೆ ಸಾಕಾಗುವಷ್ಟು ಹಣ ಕಳುಹಿಸಲಾಗದ ಅಸಹಾಯಕತೆ ಎದ್ದು ಕಾಣುತ್ತಿರುತ್ತದೆ!

ದೃಶ್ಯ ದಿನ: ಶುಕ್ರವಾರ, ವಾರದ ರಜಾದಿನಸ್ಥಳ: ಕರಾಮಾ, ದುಬೈ, ಕರಾಮಾ ಸೆಂಟರಿನ ಮುಂಭಾಗದ ಪಾರ್ಕಿಂಗ್ ಲಾಟ್. ಸಮಯ: ಸಂಜೆ ಘಂಟೆ.

ಅವಿವಾಹಿತ ಕಾರ್ಮಿಕನೊಬ್ಬ ಸಂಜೆಯ ತಂಗಾಳಿಯಲ್ಲಿ ಅಡ್ಡಾಡುತ್ತಾ ತನ್ನ ಮೊಬೈಲ್ ಫೋನಿನಲ್ಲಿ ತನ್ನ ಅಪ್ಪನೊಡನೆ ಸಂಭಾಷಿಸುತ್ತಿದ್ದಾನೆಅವನ ಮುಖದಲ್ಲಿ ಸಂತಸದ ಹೊನಲು ಉಕ್ಕಿ ಹರಿಯುತ್ತಿದೆತಂಗಿಯ ಮದುವೆಗಾಗಿ ಅಪ್ಪ ಕೇಳಿದ್ದಷ್ಟು ಹಣವನ್ನು ಹೊಂದಿಸಿ ಅದೇ ತಾನೇ ಕಳುಹಿಸಿ ಬಂದಿದ್ದ ಅವನನ್ನು ಅಪ್ಪ   ಹೊಗಳುತ್ತಿದ್ದರುದೂರದಲ್ಲಿದ್ದರೂ ನಿಮಿಷಗಳಲ್ಲಿ ಅವರ ಕೈಗೆ ಹಣ ಸಿಕ್ಕಿದ್ದಲ್ಲದೆ ಯಾವುದೇ ತೊಂದರೆಯಿಲ್ಲದೆ ತಂಗಿಯ ಮದುವೆಯ ಸಿದ್ಧತೆಗಳು ನಡೆಯುತ್ತಿವೆಯಲ್ಲದೆ  ಇವನು ಕೇವಲ ಒಂದು ವಾರದ ರಜೆಯ ಮೇಲೆ ಊರಿಗೆ ಹೋಗಿ ಬಂದರೆ ಸಾಕು, ನಿರ್ವಿಘ್ನವಾಗಿ ತಂಗಿಯ ಮಾಡುವೆ ನಡೆದು ಹೋಗುತ್ತದೆಯೆನ್ನುವ ಖುಷಿಯಲ್ಲಿ ಅವನು ತೇಲಾಡುತ್ತಿದ್ದಅದೇ ಖುಷಿಯಲ್ಲಿ ಅವನು ರಾತ್ರಿಯ ಊಟವನ್ನೇ ಮರೆತಿದ್ದ

ದೃಶ್ಯ ದಿನ: ಶುಕ್ರವಾರ, ವಾರದ ರಜಾದಿನಸ್ಥಳದೆಯ್ರಾ ಸಿಟಿ ಸೆಂಟರ್ ಮುಂಭಾಗ, ದುಬೈಸಮಯ: ಮಧ್ಯಾಹ್ನ ಘಂಟೆ.

ಅವನೊಬ್ಬ ವಿವಾಹಿತ, ತನ್ನೂರಿನಲ್ಲಿ ತಾನು ಮಾಡುತ್ತಿದ್ದ ಉದ್ಯೋಗದಿಂದ ಬರುತ್ತಿದ್ದ ಆದಾಯದಲ್ಲಿ ಸಂಸಾರವನ್ನು ಸಾಕಲಾಗದೆ ಕಷ್ಟಪಟ್ಟು ಹೇಗೋ ಮಾಡಿ ದುಬೈ ಸೇರಿದ್ದಪ್ರತಿ ತಿಂಗಳು ಸಂಬಳ ಬರುತ್ತಿದ್ದಂತೆ ತನ್ನ ಅರ್ಧಾಂಗಿಗೆ ಫೋನಾಯಿಸಿ, ಅವಳ ಹಾಗೂ ತನ್ನಿಬ್ಬರು ಪುಟ್ಟ ಮಕ್ಕಳ ಅಗತ್ಯಗಳಿಗೆ ತಕ್ಕಂತೆ ಹಣ ಕಳುಹಿಸಿ, ಅವರ ಖುಷಿಯಲ್ಲಿ ತನ್ನ ಜೀವನದ ಔನ್ನತ್ಯವನ್ನು ಕಾಣುತ್ತಿದಪತ್ನಿಯ ಪ್ರೀತಿಯ ನುಡಿಗಳು ಹಾಗೂ ಮುದ್ದು ಮಕ್ಕಳ ತೊದಲು ನುಡಿಗಳಲ್ಲಿಯೇ  ಸಾರ್ಥಕ್ಯವನ್ನು ಕಾಣುತ್ತಾ ತನ್ನೆಲ್ಲ ನೋವುಗಳನ್ನು ಮರೆಯುತ್ತಿದ್ದ

ಮೇಲಿನ ಮೂರು ಸನ್ನಿವೇಶಗಳು ಯುಗಾದಿಯ ಶುಭದಿನದಂದು ಸವಿಯುವ ಬೇವು ಬೆಲ್ಲದಲ್ಲಿ ಬೆಲ್ಲವನ್ನು ಮಾತ್ರ ಪ್ರತಿನಿಧಿಸುತ್ತವೆಬೇವನ್ನು ಪ್ರತಿನಿಧಿಸುವ ಸನ್ನಿವೇಶಗಳು ಮುಂದಿವೆ ನೋಡಿ!

ದೃಶ್ಯ ದಿನ: ಶುಕ್ರವಾರ, ವಾರದ ರಜಾದಿನಸ್ಥಳ: ಕರಾಮಾ, ದುಬೈ, ಕರಾಮಾ ಪಾರ್ಕಿನ ಒಂದು ಮಬ್ಬುಗತ್ತಲ ಮೂಲೆ, ಸಮಯ: ಸಂಜೆ ಘಂಟೆ.

ಮಬ್ಬುಗತ್ತಲಿನಲ್ಲಿ ಪಾರ್ಕಿನ ಮೂಲೆಯೊಂದರಲ್ಲಿ ಕುಳಿತು ಯಾರೂ ತನ್ನನ್ನು ನೋಡುತ್ತಿಲ್ಲವೆಂದು ಖಚಿತ ಪಡಿಸಿಕೊಂಡ ನಂತರ ನಿಧಾನವಾಗಿ ಮೊಬೈಲ್ ತೆಗೆದು ಊರಿಗೆ ಫೋನ್ ಮಾಡುತ್ತಾನೆ ಬಾರಿ ಅವನ ಸಂಬಳದ ಹಣವೆಲ್ಲಾ ಇಲ್ಲಿನ ಕ್ರೆಡಿಟ್ ಕಾರ್ಡುಗಳಿಗೆ ಕಟ್ಟಿ ಖಾಲಿಯಾಗಿದೆ, ಮನೆಯ ಖರ್ಚಿಗೆ ಎರಡು ತಿಂಗಳಿನಿಂದ ಅವನು ಹಣ ಕಳುಹಿಸಿಲ್ಲ, ಇತ್ತಲಿಂದ ಇವನು  ದಯನೀಯವಾದ ಧ್ವನಿಯಲ್ಲಿ ಮಾತನಾಡಿದರೆ ಅತ್ತಲಿಂದ ಅವನಪ್ಪನ ಬಿರುಸಾದ ಧ್ವನಿಇಷ್ಟೊತ್ತಲ್ಲಿ ಯಾಕೆ ಫೋನ್ ಮಾಡಿದ್ದು, ನೀನು ಅಲ್ಲೇ ಎಲ್ಲಾದರೂ ಸಾಯಿ, ನಮಗೆ ಇನ್ನು ಮುಂದೆ ಫೋನ್ ಮಾಡಲೇಬೇಡ ಎಂದು ಚೆನ್ನಾಗಿ ಝಾಡಿಸಿ  ಫೋನ್ ಕಟ್ ಮಾಡುತ್ತಾನೆ ಅಪ್ಪಪಾರ್ಕಿನ ಹುಲ್ಲುಹಾಸಿನ ಮೇಲೆ ಹಾಗೆಯೇ ಅಂಗಾತ ಮಲಗಿ ಬಿಕ್ಕುತ್ತಾನೆ ಮಗಅವನ ಕಣ್ಣಿನಿಂದ ಹರಿದ ಕಂಬನಿಗೆ ನಿಡುಸುಯ್ಯುತ್ತದೆ ಅವನಡಿಯಲ್ಲಿ ನಲುಗಿದ ಹಸಿರುಹುಲ್ಲುದೂರದ ದೇಶದಲ್ಲಿ ಬಂದು ತನ್ನವರಿಗಾಗಿ ತಾನು ದುಡಿದ ಹಣವನ್ನೆಲ್ಲಾ ಕಳುಹಿಸಿ, ಸಿಕ್ಕ ಸಿಕ್ಕ ಬ್ಯಾಂಕುಗಳಲ್ಲಿ ಸಾಲ ತೆಗೆದು, ಕ್ರೆಡಿಟ್ ಕಾರ್ಡುಗಳನ್ನು ಬಳಸಿ, ಊರಿಗೆ ಹಣ ಕಳುಹಿಸಿ, ಪುಟ್ಟದಾದ ಸುಂದರ ಮನೆಯೊಂದನ್ನು ಕಟ್ಟಿಸಿ, ಸಾಲ ತೀರಿಸಲು ಇಲ್ಲಿ ಪ್ರತಿ ತಿಂಗಳೂ ಹೆಣಗುತ್ತಾ, ಒಮ್ಮೊಮ್ಮೆ ದೈನಂದಿನ ಖರ್ಚುಗಳಿಗೆ ಮನೆಯವರಿಗೆ ಹಣ ಕಳುಹಿಸಲಾಗದೆ ಪರದಾಡುತ್ತಿರುತ್ತಾನೆಒಮ್ಮೆ ಮಾತನಾಡಿಸಲೆಂದು ಅಪ್ಪನಿಗೋ, ಅಮ್ಮನಿಗೋ, ಅಕ್ಕನಿಗೋ, ಹೆಂಡತಿಗೋ ಫೋನ್ ಮಾಡಿದರೆ ಅತ್ತಲಿಂದ ಬಾಣಗಳಂತೆ ಬರುವ ಮಾತುಗಳ ಹೊಡೆತಕ್ಕೆ ಸಿಲುಕಿ  ಒದ್ದಾಡಿ ಹೋಗುತ್ತಾನೆಅವನ ಆತ್ಮ ಸ್ಥೈರ್ಯ ಕುಸಿಯುತ್ತದೆ, ಅದೇ ಕೊರಗಿನಲ್ಲಿ ಅವನು ತನ್ನ ಊಟ ತಿಂಡಿ ಸರಿಯಾಗಿ ಮಾಡದೆ, ಕೊನೆಗೊಮ್ಮೆ ಆರೋಗ್ಯ ಹದಗೆಟ್ಟು ಮೂಳೆ ಚಕ್ಕಳವಾಗಿಬಿಡುತ್ತಾನೆಇಂಥಾ ಸನ್ನಿವೇಶಕ್ಕೆ ಸಿಲುಕಿದ ಕೆಲವರು ಇಲ್ಲಿಯೇ ಕೊರಗಿ ಮಣ್ಣಾಗಿ ಹೋಗಿದ್ದೂ ಉಂಟು!

ದೃಶ್ಯ ದಿನ: ಶುಕ್ರವಾರ, ವಾರದ ರಜಾದಿನಸ್ಥಳ: ಕರಾಮಾ, ದುಬೈ, ಕರಾಮಾ ಹೋಟೆಲ್ಲಿನ "ನಶಾ" ಬಾರಿನ ಮಬ್ಬುಗತ್ತಲ ಮೂಲೆ, ಸಮಯ: ರಾತ್ರಿ ೧೦ ಘಂಟೆ.

ಅದಾಗಲೇ ಎರಡು ಪೆಗ್ ಏರಿಸಿದ್ದ ಯುವಕನೊಬ್ಬ ಸ್ವಲ್ಪ ಜೋರಾಗಿಯೇ ತನ್ನ ಮೊಬೈಲಿನಲ್ಲಿ ಮಾತನಾಡುತ್ತಿದ್ದಾನೆ, ಅಕ್ಕಪಕ್ಕದವರಿಗೆ ಕಿರಿಕಿರಿಯಾಗುತ್ತಿದ್ದರೂ ಅವನ ಮಾತುಗಳಿಂದ ಅವರೂ ಸಹ ಸ್ವಲ್ಪ ಕನಲಿ ಹೋಗುತ್ತಿದ್ದರುಅತ್ತಲಿಂದ ಅವನ ಪತ್ನಿ ಆಡುತ್ತಿದ್ದ ಕಟು ಮಾತುಗಳಿಂದ ನೊಂದಿದ್ದ ಅವನು ತಾನು ಎಷ್ಟೆಲ್ಲಾ ಹಣವನ್ನು ಅವಳಿಗಾಗಿ ಕಳುಹಿಸಿದ್ದ, ಆದರೆ ಅವಳು ಹಣವನ್ನೆಲ್ಲಾ ತನ್ನ ತವರುಮನೆಗೆ ಸಾಗಿಸಿ, ಅಪ್ಪ ಅಮ್ಮನ ಕಾಳಜಿ ನೋಡದೆ ಆದಷ್ಟು ಕಾಲ ಮನೆಯಿಂದ ಹೊರಗೆ ಕಳೆಯುತ್ತಿರುವುದು ಹಾಗೂ ಇತ್ತೀಚೆಗೆ ಅವಳ ಶಾಲಾ ಸ್ನೇಹಿತನೊಬ್ಬ ಅವಳೊಡನೆ ತುಂಬಾ ಸಲಿಗೆಯಿಂದಿರುವುದರ ಬಗ್ಗೆ ಕೋಪದಿಂದ ಮಾತನಾಡುತ್ತಿದ್ದಮಾತು ಬೆಳೆಯುತ್ತಾ ಹೋದಂತೆ ಕೋಪದಿಂದ ಕುದಿಯುತ್ತಾ ಒಂದರ ಮೇಲೊಂದು ಪೆಗ್ ಏರಿಸಿ ಕೊನೆಗೆ ಉನ್ಮತ್ತನಾಗಿ ತಾನು ಮಾತನಾಡುತ್ತಿದ್ದ ಮೊಬೈಲ್ ಫೋನನ್ನೇ ನೆಲಕ್ಕಪ್ಪಳಿಸಿ ಚೂರು ಚೂರು ಮಾಡಿದ್ದ!   ಅದುವರೆಗೂ ಅವನನ್ನು ಅತಿಥಿಯಂತೆ ಸತ್ಕರಿಸಿದ್ದ ಬಾರ್ ಸಿಬ್ಬಂದಿ ಬಲವಂತವಾಗಿ ಅವನಿಂದ ಬಿಲ್ ಚುಕ್ತಾ ಮಾಡಿಸಿಕೊಂಡು ಎಳೆದೊಯ್ದು ಆಚೆಗೆ ನೂಕಿದ್ದರುಅವನ ಮನಸ್ಸಿನ ನೋವೆಲ್ಲಾ ಕರಾಮಾದ ಡಾಂಬರು ರಸ್ತೆಯಲ್ಲಿ ಕಣ್ಣೀರಾಗಿ ಹರಿದಿತ್ತು.    
    
ಬೆಲ್ಲದ ಬಗ್ಗೆ ಬರೆದರೂ ಸಾಕಷ್ಟಿದೆ, ಬೇವಿನ ಬಗ್ಗೆ ಬರೆದರೆ ಅದಕ್ಕಿಂತಲೂ ಹೆಚ್ಚೇ ಇದೆಆದರೆ ಒಂದಂತೂ ಸತ್ಯ, ತನ್ನವರಿಗಾಗಿ ತಾನು ದುಡಿದಿದ್ದನ್ನೆಲ್ಲಾ ಕಳುಹಿಸಿ ಬರಿಗೈಯಾಗುವ ಯಾವನೂ ಇಲ್ಲಿ ಸುಖವಾಗಿಲ್ಲ, ನೆಮ್ಮದಿಯಾಗಿಲ್ಲ!   ಪ್ರತಿ ತಿಂಗಳೂ ಇವನು ಕಳುಹಿಸುವ ಹಣಕ್ಕೆ ಮಾತ್ರ ಬೆಲೆಯಾವಾಗ ಇಲ್ಲಿ ಸ್ವಲ್ಪ ತೊಂದರೆಯಾಗಿ ಹಣ ಕಳುಹಿಸುವುದನ್ನು ನಿಲ್ಲಿಸುತ್ತಾನೋ ಆಗ ಎಲ್ಲಾ ಸಂಬಂಧಗಳೂ ಇದ್ದಕ್ಕಿದ್ದಂತೆ ತುಂಡರಿಸಿ ಹೋಗುತ್ತವೆಅವನು ಮಾಡಿದ ಎಲ್ಲಾ ತ್ಯಾಗವು ನೀರಿನಲ್ಲಿ ಹೋಮ ಮಾಡಿದಂತಾಗಿ ಬಿಡುತ್ತದೆಇದು ಒಬ್ಬಿಬ್ಬರ ಕಥೆಯಲ್ಲ, ಬಹುಶಃ  ಕೊಲ್ಲಿ ರಾಷ್ಟ್ರಗಳಲ್ಲಿರುವ ಎಲ್ಲ ಕಾರ್ಮಿಕರ ಕಥೆ.

ಯುಗಾದಿಯ ಶುಭ ದಿನಕ್ಕೆ ಒಂದು ಸುಂದರ ಸಂದೇಶನಿಮಗಾಗಿ, ನಿಮ್ಮ ಶ್ರೇಯಸ್ಸಿಗಾಗಿ ದೇಶ ಬಿಟ್ಟು ಹೊರದೇಶಕ್ಕೆ ಬಂದು ಹಲವಾರು ಸಂಕಷ್ಟಗಳನ್ನು ಅನುಭವಿಸಿ ದುಡಿಯುತ್ತಿರುವ ನಿಮ್ಮವರನ್ನು ಎಂದಿಗೂ ಅವಮಾನಿಸಬೇಡಿ, ಅವರು ಒಂದೆರಡು ತಿಂಗಳು ನಿಮಗೆ ಹಣ ಕಳುಹಿಸಲಿಲ್ಲವೆನ್ನುವ ಕಾರಣಕ್ಕಾಗಿ ಕಟು ಮಾತುಗಳಿಂದ ಅವರ ಮನಸ್ಸನ್ನು  ಘಾಸಿಗೊಳಿಸದಿರಿ. ಭಾವನಾತ್ಮಕವಾಗಿ ನೊಂದಿರುವವರಿಗೆ ಬೇಕಾದ್ದು ಸ್ವಂತದವರಿಂದ ಸಾಂತ್ವನದ ನುಡಿಗಳೇ ಹೊರತು ಹೃದಯವನ್ನು ಘಾಸಿಗೊಳಿಸುವ ಕಟು ಮಾತುಗಳಲ್ಲ ಯುಗಾದಿ ಎಲ್ಲರಿಗೂ ಶುಭವನ್ನು ತರಲಿಹಣವೊಂದೇ ಎಲ್ಲವೂ ಅಲ್ಲ, ಹಣಕ್ಕೆ ಮೀರಿ ನಿಲ್ಲಬೇಕಿರುವುದು ಪ್ರೀತಿ ಮತ್ತು ವಾತ್ಸಲ್ಯ.  

Saturday, April 2, 2016

ಇದೇನೇ ತಿಮ್ಮಿ ಹಿಂಗಾಯ್ತಲ್ಲೇ ,,,,,,,,,,,,,,,,,,,,,,,,,,,,,,,,,,,,,,,,,,


ಇದೇನೇ ತಿಮ್ಮಿ ಹಿಂಗಾಯ್ತಲ್ಲೇ 
ಓದ್ದೋರ್ ತಲೆ ಕೆಟ್ಟೋಯ್ತಲ್ಲೇ 
ನ್ಯಾಯ ನೀತಿ ಮರ್ತೋದ್ರಲ್ಲೇ 
ಜಾತಿ ಜಾತಿ ಅಂತಾ ಸಾಯ್ತಾರಲ್ಲೇ 
ಇದೇನೇ ತಿಮ್ಮಿ ಹಿಂಗಾಯ್ತಲ್ಲೇ!

ಯಾವಾಗ್ನೋಡು ಮೀಸಲಾತಿ 
ಯಾವಾಗ್ನೋಡು ಜಾತಿ ಜಾತಿ 
ಯಾವಾಗ್ನೋಡು ಇವ್ರು ಕೋತಿ 
ಬದ್ಕೋದಿಕ್ಕೆ ಬೇಕಾ ಮೀಸಲಾತಿ 
ಬೇಡ್ವಾ ಸ್ವಲ್ಪ ಛಲ ಛಾತಿ ಗೀತಿ !

ಕಷ್ಟಪಟ್ಟು ಓದಿ ಡಿಗ್ರಿ ತೆಗ್ದು 
ಫಸ್ಟ್ಕ್ಲಾಸ್ನಾಗೆ ಪಾಸು ಮಾಡಿ 
ಕೆಲ್ಸಾ ಸಿಗ್ದೆ ನಿರುದ್ಯೋಗಿಯಾಗಿ 
ಕೊನ್ಗೆ ಕೈಯಾಗ್ ನೇಣು ಹಗ್ಗ ಹಿಡ್ದು 
ಸಾಯೋ ಹುಡ್ಗರ್ ಮುಂದೆ ಇವ್ರು 
ಮೀಸ್ಲಾತಿ  ಪಡ್ದು ಮೆರೀತಾರಲ್ಲೇ! 

ನ್ಯಾಯ ಎಲ್ಲಿ ನೀತಿ ಎಲ್ಲಿ ತಿಮ್ಮಿ 
ಈ ಮೀಸ್ಲಾತಿಗೆ ಕೊನೆ ಹೆಂಗೆ ತಿಮ್ಮಿ 
ಮೆರ್ಯೋರೆಲ್ಲಾ ಮೆರೀತವ್ರೆ 
ಸಾಯೋರೆಲ್ಲಾ ಸಾಯ್ತಾ ಅವ್ರೆ 
ನಡ್ವೆ  ಅಹಿಂದ ಅಂತಾರಲ್ಲೇ ತಿಮ್ಮಿ!

ಸಮಜ್ವಾದ  ಎಲ್ಲಾ ಸಮಾನ ಅಂದ್ರು 
ಲಕ್ಷಗಟ್ಲೆ ವಾಚು ಪಂಚೆ ಕಟ್ಟಿ ಮೆರೆದ್ರು 
ಕೋಟಿಗಟ್ಲೆ ಆಸ್ತಿ ಪಾಸ್ತಿ ಮಾಡೇ ಬಿಟ್ರು 
ನ್ಯಾಯ ಕೇಳ್ದೋರ್ಗೆಲ್ಲಾ ಲಾಠಿ ತೋರ್ಸಿ 
ಕಾಲಾಗೊದ್ದು ಕೊನ್ಗು ಆಚೆಗಟ್ಟೇ ಬಿಟ್ರು ! 

ಇವತ್ತು ಯಾರೇ ನೋಡು ಎಲ್ಲೇ ನೋಡು ಬುದ್ಧಿವಂತ್ರು 
ಹಿಂದೂ ಧರ್ಮ ತಪ್ಪಂತಾರೆ ಹಿಂದೂಗಳ್ನ ತೆಗಳ್ತಾರೆ 
ಹಿಂದೂಗಳ ಸಣ್ಣ ತಪ್ಪು ಸಿಕ್ಕಿದ್ರೆ ಸಾಕು ಗುರ್ರಂತಾರೆ 
ಹಿಂದೂ ಆಗಿ ತಿಂದು ಕುಡ್ದು ಇಲ್ಲೇ ಹುಟ್ಟಿ ಇಲ್ಲೇ ಬೆಳ್ದು 
ಹಿಂದ್ಗಡೆಯಿಂದ ಬೆನ್ನಿಗ್ ಚಾಕು ಹಾಕ್ತಾರಲ್ಲೇ ತಿಮ್ಮಿ! 

ಈ ಮನೆ ಒಳ್ಗಿನ್ ಶತೃಗಳು ಒಳ್ಗಿಂದಾನೇ ಕೊಲ್ತಾ ಇದ್ರೆ 
ಹೊರ್ಗಿನ್ ಶತೃಗಳು ಬಿಡ್ತಾರೇನೇ ಬದುಕೋದೆಂಗೆ ತಿಮ್ಮಿ 
ಈ ದೇಶಕ್ಕೆಲ್ಲೇ ಭವಿಷ್ಯ ಐತೆ ಯಾರುನ್ ಕೇಳೋದ್ ತಿಮ್ಮಿ
ಮನೆ ಒಳಗೇ ಗೆದ್ಲುಳಾದಂಗೇ ಕೊರ್ಕೊಂಡ್ ತಿಂದ್ರೆ ತಿಮ್ಮಿ 
ಉಳ್ಯೋದೆಂಗೆ ಬೆಳ್ಯೋದೆಂಗೆ ಈ ದೇಶ ಹೇಳೇ ತಿಮ್ಮಿ!!!!