Friday, August 28, 2009

ನೆನಪಿನಾಳದಿಂದ.....5..... ಅಕ್ಕನ ಬಾಳಿಗೆ ಕೊರಟಗೆರೆಯಲ್ಲಿ ಕೊಳ್ಳಿಯಿಟ್ಟ ಅಪ್ಪ.....

ತುರ್ತು ಪರಿಸ್ಥಿತಿಯ ದಿನಗಳ ನಂತರ ಅಪ್ಪ, ನಮ್ಮ ಶಾಲಾ ಪರೀಕ್ಷೆಗಳೆಲ್ಲ ಮುಗಿಯುವ ಹೊತ್ತಿಗೆ ಅಮ್ಮನನ್ನು ತುಮಕೂರು ಜೆಲ್ಲೆಯ ಕೊರಟಗೆರೆಗೆ ವರ್ಗಾವಣೆ ಮಾಡಿಸಿದರು. ಅಲ್ಲಿನ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲೇ ಇದ್ದ ಕ್ವಾರ್ಟರ್ಸ್ ನಮಗೆ ಸಿಕ್ಕಿತು. ನಾನು ೫ನೆ ತರಗತಿಗೆ, ಅಕ್ಕ "ಮಂಜುಳ" ೮ನೆ ತರಗತಿಗೆ ದಾಖಲಾದೆವು. ಅಮ್ಮನ ಕೆಲಸ ಪ್ರಾರಂಭವಾಯಿತು. ಅಪ್ಪ ಯಥಾ ಪ್ರಕಾರ ತಮ್ಮ ಹೋಟೆಲ್ ಪ್ರಾರಂಭಿಸಿದರು. ಈ ಸಲ ಅಪ್ಪನಿಗೆ ಅಲ್ಲಿನ ಮಾಜಿ ಮಂತ್ರಿಗಳಾಗಿದ್ದ ದಿವಂಗತ ಚೆನ್ನಿಗರಾಮಯ್ಯನವರ ಮನೆಯ ಮುಂದೆಯೇ ಹೋಟೆಲ್ ನಡೆಸಲು ಜಾಗ ಸಿಕ್ಕಿತ್ತು. ಅಪ್ಪನ ಮಾತಿನ ಚಾಣಾಕ್ಷತೆಯೇ ಅಂಥದು, ಅದು ಹೇಗೆ ಅವರು ಆ ಮಂತ್ರಿಗಳ ಶ್ರೀಮತಿಯವರನ್ನು ಒಪ್ಪಿಸಿ ಅಲ್ಲಿ ಜಾಗ ಗಿಟ್ಟಿಸಿದರೋ ಗೊತ್ತಿಲ್ಲ. ಒಳ್ಳೆಯ ಜಾಗ, ಮಾಮೂಲಿನಂತೆ ಅಪ್ಪನ ಕೈಚಳಕದ "ಮೈಸೂರಿನ" ಬಗೆ ಬಗೆಯ ತಿಂಡಿಗಳು ಅಲ್ಲಿನ ಜನರ "ಜಿಹ್ವಾ ಚಾಪಲ್ಯ" ವನ್ನು ತಣಿಸಿ, ಭರ್ಜರಿ ವ್ಯಾಪಾರವೇ ಆಗತೊಡಗಿತು. ವ್ಯಾಪಾರ ಕುದುರಿದಂತೆ ಈ ಆರಡಿ ಎತ್ತರದ ಆಜಾನುಬಾಹುವಿನ "ಮೈಸೂರಿನ" ಮಾತುಗಳಿಗೆ ಮನ ಸೋತು ತುಂಬ ಜನ ಅಪ್ಪನ ಸ್ನೇಹಿತರಾಗಿಬಿಟ್ಟರು. ಪುಟ್ಟಕಾಮ, ಬಸವರಾಜು, "ಗರಡಿ ಮನೆಯ" ಶಂಕರ ಮುಂತಾಗಿ ಕೆಲವರಂತೂ ಯಾವಾಗಲೂ ಅಪ್ಪನ ಜೊತೆಗೇ ಇರುತ್ತಿದ್ದರು. ಅವರು ಬೆಳಿಗ್ಗೆ ಎದ್ದು ಅಪ್ಪನ ಹೋಟೆಲಿನಲ್ಲಿ ಕಾಫಿ ಕುಡಿದು, ತಿಂಡಿ ತಿನ್ನದೆ ಇದ್ದರೆ ಅವರ ಮನಸ್ಸಿಗೆ ಸಮಾಧಾನವೇ ಆಗುತ್ತಿರಲಿಲ್ಲವೆನ್ನುವಷ್ಟರ ಮಟ್ಟಿಗೆ ಅಪ್ಪ ಅವರೊಂದಿಗೆ ಬೆರೆತು ಬಿಟ್ಟಿದ್ದರು. ಅಪ್ಪನೂ ಆಗಾಗ ಸಂಜೆಯ ಹೊತ್ತಿನಲ್ಲಿ ಶಂಕರನ ಗರಡಿ ಮನೆಗೆ ಹೋಗಿ ತಾಲೀಮು ಮಾಡುತ್ತಿದ್ದರು.

ದಿವಂಗತ ಚೆನ್ನಿಗರಾಮಯ್ಯನವರ ಮಕ್ಕಳಾದ ಶ್ರೀ ರಾಜವರ್ಧನ್, ಶಿವರಾಮ್ ಅವರೂ ಸಹ ಅಪ್ಪನ ಹೋಟೆಲಿನಿಂದ ತಿಂಡಿ, ಕಾಫಿ ತರಿಸಿಕೊಳ್ಳುತ್ತಿದ್ದರು. ಹೈದರಾಬಾದಿನಲ್ಲಿದ್ದ ಅವರ ಅಕ್ಕಂದಿರು ಬಂದರಂತೂ ಅಪ್ಪ ವಿಶೇಷ ತಿಂಡಿಗಳನ್ನೇ ಮಾಡಿ ಅವರ ಮನೆಗೆ ಕಳುಹಿಸುತ್ತಿದ್ದರು. ಚಿಕ್ಕವನಾಗಿದ್ದ ನಾನು ಅವರ ಮನೆಗೆ ಯಾವಾಗ ಬೇಕಾದರೂ ಹೋಗಿ ಬರುವಷ್ಟು ಅವರೊಂದಿಗೆ ಹೊಂದಿಕೊಂಡಿದ್ದೆ. ಅವರ ತಾಯಿಯವರಿಗೆ ಸಕ್ಕರೆ ಖಾಯಿಲೆಯಿತ್ತು, ಅವರು ತುಂಬಾ ಒಳ್ಳೆಯವರು, ಅವರಿಗಾಗಿ ಅಪ್ಪ "ಶುಗರ್ ಲೆಸ್" ಕಾಫಿ ಮಾಡಿ ನನ್ನ ಕೈಲಿ ಕಳಿಸುತ್ತಿದ್ದರು. ಆದರೆ ಆ ಅಜ್ಜಿ ಪ್ರತಿಯೊಂದಕ್ಕೂ ಲೆಕ್ಕ ಹಾಕಿ ಸರಿಯಾಗಿ ಹಣ ಕೊಟ್ಟು ಕಳಿಸುತ್ತಿದ್ದರು.

ನಾನು ಶಾಲೆಗೆ ಹೋಗುವ ಮುಂಚೆ ಹೋಟೆಲಿಗೆ ಹೋಗಿ, ಅಪ್ಪ ಮಾಡಿದ್ದ ತಿಂಡಿ ತಿಂದು ಅಮ್ಮ-ಅಕ್ಕನಿಗೂ ತಂದು ಕೊಡುತ್ತಿದ್ದೆ. ಅಲ್ಲಿಂದ ಮುಂದಕ್ಕೆ ಅವರ ದಿನಚರಿ ಶುರುವಾಗುತ್ತಿತ್ತು. ಮಂಡಿಕಲ್ಲಿನಲ್ಲಿ ಹುಟ್ಟಿದ ನನ್ನ ಪುಟ್ಟ ತಮ್ಮ ಈಗ ಬೆಳೆದಿದ್ದ, ಅವನನ್ನೂ " ಶಿಶು ವಿಹಾರಕ್ಕೆ" ಸೇರಿಸಿದ್ದರು. ಒಬ್ಬಳು ಆಯಾ, ಆಕೆಯ ಹೆಸರು ನನಗೆ ಈಗಲೂ ಚೆನ್ನಾಗಿ ನೆನಪಿದೆ, " ಕಾಳಮ್ಮ". ಆಕೆ ತನ್ನ ಹೆಸರಿಗೆ ತಕ್ಕಂತೆ ಕಪ್ಪಗೆ, ಭಯಂಕರವಾಗಿ, ಭದ್ರಕಾಳಿಯಂತೆ ಇದ್ದಳು! ಅದ್ಯಾರು ಅವಳನ್ನು ಶಿಶುವಿಹಾರಕ್ಕೆ ಮಕ್ಕಳನ್ನು ಕರೆ ತರುವ ಕೆಲಸಕ್ಕೆ ಸೇರಿಸಿಕೊಂಡಿದ್ದರೋ ಗೊತ್ತಿಲ್ಲ, ಅವಳನ್ನು ಕಂಡರೆ ಸಾಕು, ನನ್ನ ಪುಟ್ಟ ತಮ್ಮ "ವಿಜಿ", ಹೆದರಿ ಓಡಿ ಹೋಗಿ ಅಡುಗೆ ಮನೆಯಲ್ಲಿ ಅವಿತುಕೊಳ್ಳುತ್ತಿದ್ದ. ಕೆಲವೊಮ್ಮೆ ಅಮ್ಮ, ಮತ್ತೆ ಕೆಲವೊಮ್ಮೆ ಅಕ್ಕ ಅವನನ್ನು ಸಂತೈಸಿ ಶಿಶುವಿಹಾರಕ್ಕೆ ಆ ಕಾಳಮ್ಮನ ಜೊತೆಯಲ್ಲಿ ಕಳಿಸಿ ಕೊಡುತ್ತಿದ್ದರು. ಆದರೆ, ಒಂದು ದಿನ ಅದೇನಾಯ್ತೋ ಗೊತ್ತಿಲ್ಲ, ಅವಳ ಜೊತೆ ತಾನು ಹೋಗುವುದೇ ಇಲ್ಲವೆಂದು ರಚ್ಚೆ ಹಿಡಿದು ಬಿಟ್ಟ. ಅಂದಿನಿಂದ ಅವನನ್ನು ಪ್ರತಿ ದಿನ ಶಿಶುವಿಹಾರಕ್ಕೆ ಬಿಡುವುದು, ಕರೆ ತರುವುದು ನನ್ನ ಕೆಲಸವಾಯಿತು. ಅಪ್ಪನಿಂದ ದಿನಾ ಎಂಟಾಣೆ ಈಸಿಕೊಂಡು ಗೋಪಾಲ ಶೆಟ್ಟರ ಅಂಗಡಿಯಲ್ಲಿದ್ದ ಥರಾವರಿ ಸಣ್ಣ ಸೈಕಲ್ ಗಳನ್ನೆಲ್ಲ ತೆಗೆದುಕೊಂಡು, ಬಿದ್ದು ಎದ್ದು ಸೈಕಲ್ ಹೊಡೆಯುವುದನ್ನು ಕಲಿತುಬಿಟ್ಟೆ. ಆಗ ಅಪ್ಪ ನನಗೊಂದು ಹಳೆಯ ಸೈಕಲ್ ಕೊಡಿಸಿದರು. ಆರನೆ ಕ್ಲಾಸಿಗೇ ನಾನೊಂದು ಸೈಕಲ್ ನ ಒಡೆಯನಾಗಿದ್ದೆ!!

ಬೆಳಿಗ್ಗೆ ಎದ್ದು ಅಪ್ಪನ ಜೊತೆಯಲ್ಲಿ ಹೋಟೆಲಿಗೆ ಹೋಗುವುದು, ಅವರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಕೊಟ್ಟು, ತಿಂಡಿ ತಿಂದು, ಅಕ್ಕ-ಅಮ್ಮನಿಗೆ ತಿಂಡಿ ತಂದು ಕೊಟ್ಟು, ಪುಟಾಣಿ ತಮ್ಮನನ್ನ ಶಿಶುವಿಹಾರಕ್ಕೆ ಬಿಟ್ಟು ಶಾಲೆಗೆ ಹೋಗುವುದು ನನ್ನ ನಿತ್ಯ ದಿನಚರಿಯಾಯಿತು. ಆಗ ಕೊರಟಗೆರೆಯಲ್ಲಿ ಸೀಮೆ ಎಣ್ಣೆಗೆ ಎಲ್ಲಿಲ್ಲದ ಬರಗಾಲ, ಅಪ್ಪನಿಗೆ ಹೋಟೆಲಿಗೆ ಬೇಕೇ ಬೇಕು, ಶಾಲೆಯಿಂದ ಬಂದ ನಂತರ ನನಗೆ ಸೀಮೆ ಎಣ್ಣೆ ಬೇಟೆಯಾಡುವ ಕೆಲಸವನ್ನೂ ವಹಿಸಿದರು. ನಾನು ಸೈಕಲ್ ಒಡೆಯನಾಗಿದ್ದೆನಲ್ಲ, ಅಲ್ಲಿ ಇಲ್ಲಿ ಸೈಕಲ್ ತುಳಿಯುತ್ತಾ ಓಡಾಡುವುದೇ ನನಗೆ ಖುಷಿಯಾಗಿತ್ತಲ್ಲ, ಈ ಸೀಮೆಣ್ಣೆ ಬೇಟೆ ಶುರುವಾದ ಮೇಲೆ ನನ್ನ ಓಡಾಟ ಅಕ್ಕಪಕ್ಕದ ಗ್ರಾಮಗಳಿಗೂ ಹಬ್ಬಿತು. ಸಂಜೆ ಡಬ್ಬವನ್ನು ಕ್ಯಾರಿಯರ್ ಮೇಲೆ ಇಟ್ಟುಕೊಂಡು ಯಾವುದೋ ಹಾಡನ್ನು ಗುನುಗುತ್ತಾ ಹೊರಟು ಬಿಡುತ್ತಿದ್ದೆ. ಹೇಗಾದರೂ ಮಾಡಿ, ಎಲ್ಲಿಯಾದರೂ ಹುಡುಕಿ ಸೀಮೆಣ್ಣೆ ತೊಗೊಂಡೇ ಬರುತ್ತಿದ್ದೆ. ಆಗೆಲ್ಲಾ ಅಪ್ಪ ನನ್ನನ್ನು ಶಹಬ್ಬಾಸ್ ಮಗನೆ ಎಂದು ಹೊಗಳುತ್ತಿದ್ದರು. ಆ ಭರ್ಜರಿ ದೇಹದ ಅಪ್ಪನಿಂದ ಹೊಗಳಿಸಿಕೊಂಡ ನಾನು ಉಬ್ಬಿ ಹೋಗುತ್ತಿದ್ದೆ.

ಇದೇ ಸಮಯದಲ್ಲಿ ನನ್ನ ಅಕ್ಕ ಮಂಜುಳ ಹೈಸ್ಕೂಲಿನಲ್ಲಿ ಓದುತ್ತಿದ್ದಳು. ತುಂಬಾ ಚೂಟಿಯಾಗಿದ್ದ ಅವಳು ಅಪ್ಪನದೇ ರೂಪ, ಅದಕ್ಕೆ ಅಪ್ಪನಿಗೂ ಅವಳನ್ನು ಕಂಡರೆ ಸ್ವಲ್ಪ ಹೆಚ್ಚೇ ಪ್ರೀತಿ. ಅಪ್ಪನಿಗೆ ಒಳ್ಳೆಯ ಓದುವ ಅಭಿರುಚಿ ಇತ್ತು. ಅವರು ಓದಿದ್ದು ಆ ಕಾಲದ ಮೂರನೆ ಕ್ಲಾಸಂತೆ, ಆದರೆ ಕನ್ನಡವನ್ನು ವ್ಯಾಕರಣಬದ್ಧವಾಗಿ ಒಂಚೂರು ತಪ್ಪಿಲ್ಲದೆ ಓದುತ್ತಿದ್ದರು. ಪ್ರಜಾವಾಣಿ ದಿನಪತ್ರಿಕೆ ಪ್ರತಿದಿನ ತರಿಸುತ್ತಿದ್ದರು, ತಾವೂ ಓದಿ ನಮ್ಮನ್ನೂ ಓದುವಂತೆ ಪ್ರೇರೇಪಿಸುತ್ತಿದ್ದರು. ಸುಧಾ, ಮಯೂರ, ಚಂದಮಾಮ, ಬಾಲಮಿತ್ರ ಪುಸ್ತಕಗಳು ನಮ್ಮ ಮನೆಗೆ ಖಾಯಮ್ಮಾಗಿ ಬರುತ್ತಿದ್ದವು. ಚಂದಮಾಮದಲ್ಲಿ ರವಿವರ್ಮರ ಸುಂದರ ಚಿತ್ರಗಳೊಂದಿಗೆ ಓದಿದ ರಾಮಾಯಣ, ಮಹಾಭಾರತದ ಕಥೆಗಳು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿವೆ. (ಈ ಅನುಭವದ ಆಧಾರದ ಮೇಲೇ ನಾನು ನನ್ನ ಪದವಿ ತರಗತಿಯಲ್ಲಿ ಕುವೆಂಪುರವರು ಬರೆದ " ರಾಮಾಯಣ ದರ್ಶನಂ" ಸುಲಲಿತವಾಗಿ ಓದಿ ಕನ್ನಡದಲ್ಲಿ ಕಾಲೇಜಿಗೇ ಅತಿ ಹೆಚ್ಚು ಅಂಕ ಗಳಿಸಿದ್ದೆ.) ಸುಧಾ ವಾರಪತ್ರಿಕೆ ಬಂದ ದಿನವಂತೂ ಅಕ್ಕನಿಗೂ ನನಗೂ ದೊಡ್ಡ ಯುದ್ಧವೇ ಆಗಿ ಬಿಡುತ್ತಿತ್ತು. ಅದರಲ್ಲಿ ಬರುತ್ತಿದ್ದ ಫ್ಯಾಂಟಮ್ ಹಾಗೂ ಡಾಬು ಕಾಮಿಕ್ಸ್ ಗಳನ್ನು ಓದಲು ನಾನು ನಾನೆಂದು ಇಬ್ಬರೂ ಕಿತ್ತಾಡುತ್ತಿದ್ದ್ದೆವು. ಅವಳು ಸದಾ ಓದಿನಲ್ಲಿ ಮುಂದು, ಯಾವುದೇ ಪದ್ಯವಿರಲಿ, ಗಣಿತದ ಸಮಸ್ಯೆಗಳಿರಲಿ, ಕಂಠಪಾಠ ಮಾಡಿ ಒಪ್ಪಿಸಿ ಎಲ್ಲಾ ಶಿಕ್ಷಕರಿಂದ ಹೊಗಳಿಸಿಕೊಳ್ಳುತ್ತಿದ್ದಳು. ಆದರೆ ಸ್ವಲ್ಪ ಚೆಲ್ಲಾಟದ ಸ್ವಭಾವ, ಮುಂಗೋಪಿಯಾದ ಅಪ್ಪನಿಗೆ ಅದು ಹಿಡಿಸುತ್ತಿರಲಿಲ್ಲ. ಅದಕ್ಕಾಗಿ ಅದೆಷ್ಟೋ ಸಲ ಅವಳು ಅಪ್ಪನಿಂದ ಒದೆ ತಿಂದಿದ್ದಳು.

ಆಗ ಗಣಪತಿ ಹಬ್ಬದ ಸಮಯ, ಅಪ್ಪ ಆ ಉತ್ಸವದ ದಿನ ರಾತ್ರಿಯಿಡೀ ಹೋಟೆಲ್ ತೆರೆದಿರುತ್ತಿದ್ದರು, ಅವರ ಶಿಷ್ಯಗಣಗಳೂ ಅವರ ಜೊತೆಯಲ್ಲೇ ಇದ್ದು ಅವರಿಗೆ ಕಂಪನಿ ಕೊಡುತ್ತಿದ್ದರು. ಒಮ್ಮೊಮ್ಮೆ ನಾನೂ ಅವರೊಂದಿಗೆ ಹೋಟೆಲಿನಲ್ಲಿ ಇರುತ್ತಿದ್ದೆ. ಊರಿನ ಜನರೆಲ್ಲ ಗಣಪತಿ ಉತ್ಸವದಲ್ಲಿ ಸಡಗರದಿಂದ ಪಾಲ್ಗೊಂಡು, ರಾತ್ರಿಯೆಲ್ಲ ತಿರುಗಾಡಿ, ಸಿಕ್ಕದ್ದನ್ನೆಲ್ಲ ತಿಂದು, ಗಣಪತಿಯ ವಿಸರ್ಜನೆಯಾದ ನಂತರ ತಂತಮ್ಮ ಮನೆಗಳಿಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಅಪ್ಪ ಮಾಡುತ್ತಿದ್ದ "ಮೈಸೂರು ಶೈಲಿಯ" ತಿಂಡಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿತ್ತು. ಹೀಗಿರುವಾಗ ಅಪ್ಪನ ಒಬ್ಬ ಶಿಷ್ಯ, ’ಪುಟ್ಟ ಕಾಮ’ ಬೆಳಿಗ್ಗೆ ನಾಲ್ಕು ಘಂಟೆಯಲ್ಲಿ ಒಂದು ಸುದ್ಧಿಯನ್ನು ಅಪ್ಪನಿಗೆ ಕೊಟ್ಟ. ಅದು ಅಕ್ಕ ಮಂಜುಳ ತನ್ನ ಸ್ನೇಹಿತರೊಂದಿಗೆ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಶೈಲಜ ರೆಸ್ಟೋರೆಂಟಿನಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದಾಳೆ ಅನ್ನುವುದಾಗಿತ್ತು. ಒಡನೆ ಅಪ್ಪ ಒಂದು ಸೈಕಲ್ ತೊಗೊಂಡು ಸೀದಾ ಅಲ್ಲಿಗೆ ಹೋದರು. ಅಲ್ಲಿ ತನ್ನ ತರಗತಿಯ ಹುಡುಗ - ಹುಡುಗಿಯರೊಂದಿಗೆ ಅಕ್ಕ ಕಾಫಿ ಕುಡಿಯುತ್ತ ಕುಳಿತಿದ್ದಳಂತೆ, ಚಕ್ಕನೆ ರೌದ್ರಾವತಾರ ತಾಳಿದ ಅಪ್ಪ ಹಿಂದು ಮುಂದೆ ಯೋಚಿಸದೆ ಅವಳಿಗೆ ಚೆನ್ನಾಗಿ ತದುಕಿ ಮನೆಗೆ ಎಳೆದುಕೊಂಡು ಬಂದರಂತೆ. ಅಕ್ಕನಿಗೆ ಅವಳ ಎಲ್ಲ ಸ್ನೇಹಿತರೆದುರು ಭಯಂಕರ ಅವಮಾನವಾಗಿ ಹೋಗಿತ್ತು.

ಮಾರನೆಯ ದಿನ ಅಪ್ಪ ಹೋಟೆಲ್ ಬಾಗಿಲು ಹಾಕಿದರು. ಅವರಿಗೆ ಅಕ್ಕ ಮಾಡಿದ್ದು ಅಕ್ಷಮ್ಯ ಅಪರಾಧವಾಗಿತ್ತು, ಆ ಬೆಳಗಿನ ನಾಲ್ಕು ಘಂಟೆಯ ಸಮಯದಲ್ಲಿ ಅವಳು ಅದು ಹೇಗೆ ಅವಳ ಸ್ನೇಹಿತರ ಜೊತೆಗೆ ಹೋಟೆಲಿಗೆ ಹೋಗಿದ್ದು ಎಂದು ಸಾಕಷ್ಟು ವಾಗ್ಯುದ್ಧಗಳಾಗಿ ಮತ್ತೆ ಅಕ್ಕನಿಗೆ ಮನೆಯಲ್ಲಿ ಸಾಕಷ್ಟು ಒದೆಗಳು ಬಿದ್ದವು. ಆದರೆ ನಿರಪರಾಧಿ ಅಕ್ಕ, ಅಮ್ಮನಿಗೆ ಹೇಳಿ, ಪರ್ಮಿಷನ್ ತೆಗೆದುಕೊಂಡೇ ಹೋಗಿದ್ದಳು, ಅದು ಕ್ರೋಧದಿಂದ ವ್ಯಾಘ್ರನಾಗಿದ್ದ ಅಪ್ಪನಿಗೆ ಅರ್ಥವಾಗಲೇ ಇಲ್ಲ. ಅಮ್ಮನನ್ನೂ ಸಾಕಷ್ಟು ಬೈದು ಅವಳನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಶಾಲೆಗೆ ಕಳುಹಿಸಬಾರದು ಎಂದು ತಾಕೀತು ಮಾಡಿದರು. ಅಕ್ಕ ಅಳುತ್ತಾ ಅಪ್ಪನ ಕಾಲು ಹಿಡಿದು ತಪ್ಪಾಯಿತೆಂದು ಗೋಗರೆದರೂ ಅಪ್ಪನ ಮನಸ್ಸು ಕರಗಲೇ ಇಲ್ಲ. ಊರಿನಲ್ಲಿದ್ದ ಅಪ್ಪನ ದೊಡ್ಡಣ್ಣನಿಗೆ ಪತ್ರ ಬರೆದು ಕರೆಸಿದರು. ದೊಡ್ಡಪ್ಪನ ಮೂಲಕ ದೂರದ ಸಂಬಂಧಿಯಾಗಿದ್ದ "ಚಂದ್ರಪ್ಪ"ನ ಜೊತೆ ಅಕ್ಕನ ಮದುವೆ, ಅದೂ ಒಂದೇ ವಾರದಲ್ಲಿ, ನಿಶ್ಚಯ ಮಾಡಿ ಬಿಟ್ಟರು. ಅಕ್ಕ ಅದೆಷ್ಟೇ ವಿರೋಧಿಸಿದರೂ ಸಹ ಕೇಳದೆ ಕೇವಲ ಒಂದು ತಿಂಗಳಿನೊಳಗಾಗಿ ಅದೇ ಕೊರಟಗೆರೆಯ ಸರ್ಕಾರಿ ಆಸ್ಪತ್ರೆಯ "ಕ್ವಾರ್ಟರ್ಸ್" ಮುಂದೆ ಚಪ್ಪರ ಹಾಕಿಸಿ, ಸಂಬಂಧಿಕರಿಗೆಲ್ಲಾ ಕರೆಸಿ, ಮದುವೆ ಊಟ ಹಾಕಿಸಿ, ಚಂದ್ರಪ್ಪನ ಜೊತೆ ಮದುವೆ ಮಾಡಿ ಕಳುಹಿಸಿಯೇ ಬಿಟ್ಟರು. ಆದರೆ ಅದು ಅಕ್ಕನ ಮದುವೆಯ ಊಟವಾಗಿರಲಿಲ್ಲ, ಬದಲಾಗಿ ಅವಳ ದುರಂತ ಜೀವನದ ಶ್ರಾದ್ಧದ ಊಟವಾಗಿತ್ತು. ಅದು ಅಂದು ಅಪ್ಪನಿಗೆ ಅರ್ಥವಾಗಿರಲಿಲ್ಲ, ಅವರಿಗೆ ಅರ್ಥವಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು!!

ಅಲ್ಲಿಗೆ ಅಕ್ಕನ ಓದಿನ ಅಧ್ಯಾಯ ಮುಗಿಯಿತು, ಅವಳು ಭವಿಷ್ಯದ ಬಗ್ಗೆ ಕಂಡಿದ್ದ ಸುಂದರ ಕನಸುಗಳನ್ನು ಅಪ್ಪ ದೊಡ್ಡದೊಂದು ಗೋರಿ ತೋಡಿ ಮುಚ್ಚಿಬಿಟ್ಟರು. ಮುಂದೆ ಅವಳ ಬಾಳಿನ ಕಥೆ ದುರಂತದಲ್ಲಿ ಮುಕ್ತಾಯವಾಗಲು ಮುನ್ನುಡಿ ಬರೆದರು.

1 comment:

Anonymous said...
This comment has been removed by a blog administrator.