Wednesday, December 30, 2015

ನಗ್ತಾ ಯಾತ್ರೆ ಮುಗುಸ್ಬೇಕೇ ತಿಮ್ಮಿ!

ನಿನ್ನ ಚಂದದ್ ಮೋರೆ ಸಪ್ಪಗಾಗ್ದೆ
ನೀ ನಗ್ತಾ ನಗ್ತಾ ಇರ್ಲಿ ಅಂತ
ಏನೆಲ್ಲಾ ಮಾಡ್ದೆ ನಾನು ತಿಮ್ಮಿ!

ಊಟಾ ತಿಂಡಿ ನಿದ್ದೆ ಇಲ್ದೆ
ನೀ ಸಂದಾಗಿರ್ಬೇಕೂಂತಾ
ಏನೆಲ್ಲಾ ಮಾಡ್ದೆ ನಾನು ತಿಮ್ಮಿ!

ಬೆಳ್ಗಿಂದ ಸಂಜೀವರ್ಗೂ ಕ್ಯಾಮೆ ಮಾಡಿ
ಸುಸ್ತಾಗಿ ಮನೇಗ್ ಬಂದ್ರೆ ಕಾಣ್ಬೇಕಿತ್ತು
ನಿನ್ನಾ ಚಂದ್ರಾಮನ್ ನಗು ತಿಮ್ಮಿ! 

ಬ್ಯಾರೇನ್ ನಂಗೆ ಬೇಕಿರ್ನಿಲ್ಲಾ
ಬುಲ್ಡೆ ಎಂಡ ಮೋಟು ಬೀಡಿ
ಎಲ್ಲಾ ಚಟ ಬುಟ್ಟಿದ್ನಲ್ಲೆ ತಿಮ್ಮಿ!

ಕೊನ್ಗು ನಿನ್ಬುದ್ಧಿ ತೋರ್ಸೇ ಬುಟ್ಟೆ
ನನ್ನಾ ಬುಟ್ಟು ಅಂಗೇ ಓಗೇ ಬುಟ್ಟೆ
ಈಪಾಟಿ ಕ್ವಾಪಾ ಯಾಕೇ ನಿಂಗೆ ತಿಮ್ಮಿ! 

ಕಣ್ಣಾ ಮುಂದೈತ್ ನೂರೆಂಟ್ ಕನ್ಸು
ನನ್ಮಾತೇ ಕೇಳ್ದೆ ಒದ್ದಾಡ್ತೈತ್ ಮನ್ಸು
ಬದ್ಕು ಸಾಗೋದೆಂಗೆ ಯೋಳೇ ತಿಮ್ಮಿ! 

ನಾಲ್ಕೈದ್ ದಿನುದ್ ಈ ಬಾಳಿನಾಗೆ
ಈ ಮುನ್ಸು ಗಿನ್ಸು ಯಾಕೇ ನಿಂಗೆ
ನಗ್ತಾ ಯಾತ್ರೆ ಮುಗುಸ್ಬೇಕೇ ತಿಮ್ಮಿ!

Sunday, December 27, 2015

ಲಹರಿ ಬಂದಂತೆ ,,,,,,,,೧೫,,,,,,

ಮರಳುಗಾಡಿನ ಬಾನಲ್ಲಿ
ದಟ್ಟೈಸಿವೆ ಮೋಡಗಳು
ಹಗಲಲ್ಲೇ ಕತ್ತಲಾಗಿದೆ
ಬಾಯಾರಿ ದಾಹದಿ
ಬಾಯ್ಬಿಟ್ಟ ಇಳೆಯ
ಒಡಲ ತಣಿಸುತಿದೆ!
ಅದೆಷ್ಟಾದರೂ ಬಡಿದು
ಬಾರಿಸಲಿ ಬಿಡು
ಈ ತುಂತುರುಮಳೆ
ಸಧ್ಯ ಬರದಿದ್ದರೆ ಸಾಕು
ಬರಿದಾದ ಈ ಮನದಲ್ಲಿ
ನಿನ್ನ ನೆನಪುಗಳ
ಕುಂಭದ್ರೋಣ ಮಳೆ!
ಕೊಚ್ಚಿ ಹೋದೇನು
ಮತ್ತೆ ನೆಲೆ ಸಿಗದಂತೆ!!

Friday, December 25, 2015

ಲಹರಿ ಬಂದಂತೆ,,,,,,,,,,,,,,,೧೪,,,,,,,,,,,

ಕಡಿದ ತನ್ನ ಬೇರುಗಳ ನೆನೆಯುತಾ
ಮುರಿದ ತನ್ನ ರೆಂಬೆಗಳಿಗೆ ಮರುಗುತಾ
ಸುಡು ಭೀಕರ ಸುಡುಗಾಡಿನಲ್ಲಿ ಸುಟ್ಟು
ಕರಕಲಾದ ಆ ಮರದ ತುಂಡಿನಲ್ಲಿ 

ಬೇರು ನೆಲಕ್ಕಿಳಿದು ನೀರನೆಳೆದು
ಮತ್ತೊಮ್ಮೆ ಮೊಳಕೆಯೊಡೆಯುವ
ಹೊಸ ಹಚ್ಚ ಹಸಿರು ಚಿಗುರಿಸುವ
ಮತ್ತೊಮ್ಮೆ ಮುಗಿಲೆತ್ತರಕ್ಕೆ ಬೆಳೆಯುವ 

ನೂರಾರು ಹಕ್ಕಿಗಳಿಗೆ ಆಸರೆಯಾಗುವ
ದಾರಿಹೋಕರಿಗೆ ತಂಪು ನೆರಳನೀಯುವ
ಫಲಗಳಿಂದ ತುಂಬಿ ತೊನೆದಾಡುವ
ನಗುನಗುತ್ತಾ ಸದಾ ನಳನಳಿಸುವ 

ಸವಿ ಕನಸದು ಅದೆಷ್ಟು ಸುಂದರ!

Monday, December 21, 2015

ಲಹರಿ ಬಂದಂತೆ,,,,,,,,,,,,,,,,,13,,,,,,,,,,,,

ಏನಿದ್ದರೇನಮ್ಮಾ ಏನಾದರೇನಮ್ಮಾ
ಅಂದು ಜನ್ಮ ಕೊಟ್ಟಿದ್ದು ನೀನಲ್ಲವೇ
ನೋವನನುಭವಿಸಿದ್ದು ನೀನಲ್ಲವೇ?? 

ನನಗೇನು ಗೊತ್ತು ಆ ನಿನ್ನಸಾಧ್ಯ ವೇದನೆ!
ನಾ ಬಂದೆ ಈ ಜಗೆಕೆ ಅಳುತಳುತಾ ರೊಯ್ಯನೆ
ಮೊಲೆಹಾಲನೂಡಿಸಿ ತನುವ ಸಂತೈಸುತ
ಬೆಳೆಸಿ ಬಾಳ ಬೆಳಗಿದ್ದು ನೀನಲ್ಲವೇ,,,,,,,!

ನೀನಿಲ್ಲದಿರೆ ನಾನಿನ್ನೆಲ್ಲಿ ಈ ಜಗದಲ್ಲಿ
ಆದರೆ ನಾ ಕಣ್ಣು ಬಿಡುವ ಮುನ್ನವೇ ನೀ
ನನ್ನ ತೊರೆದೆಯಲ್ಲೇ ಓ ನನ್ನ ತಾಯೇ
ನನ್ನ ಮರೆತೆಯಲ್ಲೇ ಓ ನನ್ನ ತಾಯೇ !!

ತಿಮ್ಮಿ ಬರ್ತಾಳಂತಾ ಕಾದು,,,,,,,,,,,,,,,,,,

ತಿಮ್ಮಿ ಬರ್ತಾಳಂತಾ ಕಾದು
ನನ್ತಿಮ್ಮಿ ಬರ್ತಾಳಂತ ಕಾದು
ಹೊತ್ತು ಮುಳ್ಗಿ ಕತ್ಲಾಗೋಯ್ತು !

ಮಲ್ಗೆ ಹೂವು ಮಲ್ಕೊಂಬುಡ್ತು
ಗುಲಾಬಿ ಗುಂಡಿ ಸೇರ್ಕೊಂಬುಡ್ತು
ಸಂಪ್ಗೆ ಹೂವು ಸತ್ತೇ ಹೋಯ್ತು !

ಇನ್ನೂ ಬರ್ನೇ ಇಲ್ಲಾ ತಿಮ್ಮಿ
ಎಲ್ಲವ್ಳೋ ಅದೆಂಗವ್ಳೋ
ಎಲ್ಲವ್ಳೋ ನನ್ನಾ ಮುದ್ದಿನ್ತಿಮ್ಮಿ!

ಬ್ಯಾರೇ ಮಾತು ಬುಟ್ಟೆ ನಾನು
ಗಡ್ಗೆ ಎಂಡಾ ಬುಟ್ಟೆ ನಾನು
ಬೀಡಿ ಮೋಟು ಬುಟ್ಟೆ ನಾನು !

ಒತ್ತಾರಿಂದ ಸಂಜೇಗಂಟ
ಕತ್ತೆ ಅಂಗೇ ದುಡ್ದೆ ನಾನು
ಆದ್ರೂನೂವೆ ಬರ್ನೇ ಇಲ್ಲಾ ತಿಮ್ಮಿ!

ಈ ಕ್ವಾಪಾ ತಾಪಾ ಬ್ಯಾಡಾ ತಿಮ್ಮಿ
ಮೂರು ದಿನುದ್ ಬಾಳ್ವೆ ಕಣೇ
ಸತ್ತಾಗ್ ಹೊತ್ಕಂಡ್ ಹೋಗೋದೇನು!

ಬಾರೇ ಬೇಗ ಓಡ್ಕೊಂಡೋಡ್ಕೊಂಡ್
ಸೊಪ್ಪಿನ್ಸಾರು ರಾಗಿ ಮುದ್ದೆ ತಗಂಡ್
ನನ್ಗೆ ನೀನು ನಿನ್ಗೆ ನಾನು ಅಷ್ಟೇ ಕಣೇ ತಿಮ್ಮಿ!

Wednesday, December 16, 2015

ಲಹರಿ ಬಂದಂತೆ,,,,,,,,,,,,,,,,12,,,,,,,,,,,,,,


ಕೆಲವರ ಜೀವನ
ಬಸ್ ನಿಲ್ದಾಣದಂತೆ
ಇನ್ನು ಕೆಲವರದು
ರೈಲು ನಿಲ್ದಾಣದಂತೆ
ಅಲ್ಲಿ ಬರುವವರು
ಬರುತ್ತಿರುತ್ತಾರೆ
ಹೋಗುವವರು
ಹೋಗುತ್ತಿರುತ್ತಾರೆ
ಅಪರಿಚಿತರಾದರೂ
ಅಲ್ಲಿ ತುಸು ಗದ್ದಲ
ಅಳು ನಗು ಸಂತೋಷ
ಕೋಪ ವಿಷಾದ ಉನ್ಮಾದ
ಸಣ್ಸಣ್ಣ ಆಕ್ರೋಶ
ಒಂದಷ್ಟು ಆತ್ಮೀಯತೆ
                                          ಎಲ್ಲವೂ ಇರುತ್ತದೆ!                                          
ಆದರೆ ನನ್ನದು ಮಾತ್ರ
ದೊಡ್ಡ ವಿಮಾನ ನಿಲ್ದಾಣ
ಅಲ್ಲಿ ಯಾವಾಗಲೂ
ಸದಾ ಮೌನದ್ದೇ ರಾಜ್ಯ
ಬರುವವರು ಭರ್ರೆಂದು
ಬಂದಿಳಿದೇ ಬಿಡುತ್ತಾರೆ
ಕೆಲವಷ್ಟು ನೆನಪುಳಿಸಿ
ಪುರ್ರೆಂದು ಹಾರಿ
ಹೋಗಿಯೇ ಬಿಡುತ್ತಾರೆ
ಮತ್ತೆಂದೂ ಬಾರದಂತೆ
ಕಣ್ಣಿಗೇ ಕಾಣದಂತೆ
ದಿವ್ಯ ವೇಗದಲ್ಲಿ!!!!

ಲಹರಿ ಬಂದಂತೆ,,,,,,,,,,,,,,,,,,,,,,,,೧೧,,,,,,,,,

ನಿದಿರಾದೇವಿಯು
ತಬ್ಬಿ ತಡವುತ
ಅತಿ ಅಕ್ಕರೆಯಲಿ
ಮೈದಡವಿ ಮುದ್ದಿಸುತ
ಸಮಾಧಾನಿಸುವಾಗ
ದಿನದ ದುಡಿಮೆಯ
ನೋವ ಮರೆಯುತ
ಹಾಸಿಗೆಯಲಿ ಅಡ್ಡಾಗಿ
ಮಲಗಬೇಕಿರುವಾಗ
ಧಿಡೀರನೆ ಬರುವ
ಕೆಲ ಕಹಿ ನೆನಪುಗಳು
ಎದೆಯೊಳಗೆ ತಣ್ಣನೆಯ
ಛಳುಕು ಹೊಡೆಸುವುದು
ಯಾಕೆಂದು ನನಗಂತೂ
ಅರ್ಥವಾಗಿಯೇ ಇಲ್ಲವಿನ್ನೂ
ಅರ್ಧ ಜೀವನ ಮುಗಿದರೂ! !!!!

ಲಹರಿ ಬಂದಂತೆ,,,,,,,,,,,,,,,,,,,,,,,,೧೦,,,,,,,,,

ನನ್ನ ಇನಿಯ
ಬರುವ ಸಮಯ
ತುಂಟ ಗೌರಿ
ತಂಟೆ ಮಾಡಿ
ಕೆಣಕಬೇಡವೆ!

ನಿನ್ನ ಅಮ್ಮ
ಬರುವಳೀಗ
ಹಾಲನುಂಡು
ಮಲಗು ಬೇಗ
ಏಕೆ ಕಾಡುವೆ?

ಇನಿಯ ಬರಲು
ಸನಿಹವಿರಲು
ಅವನ ಮೋಹದ
ಮುರಳಿಗಾನಕೆ
ಮೈಮರೆಯಬೇಕಿದೆ!

ಲಹರಿ ಬಂದಂತೆ,,,,,,,,,,,,,,,,,,,,,,,,,,,೯,,,,,,,,,


ಇನಿಯ ನಿನ್ನ ನೆನಪೆನಗೆ
ಸಿಹಿಯ ಕಾಯಿ ಹೋಳಿಗೆ
ಸನಿಹ ಬಾರೋ ಮೆಲ್ಲಗೆ
ಮನದಿ ನಿಲ್ಲೋ ಧಿಮ್ಮಗೆ!

ಘಲ್ಲೆನುವ ಗೆಜ್ಜೆ ಕಾಲಿಗೆ
ಝಲ್ಲೆನುವ ಹಿತವು ಮನಸ್ಸಿಗೆ
ನೀನಿರಲು ಸದಾ ಜೊತೆಗೆ
ಬರವು ಎಲ್ಲಿ ನಗುವಿಗೆ!

Monday, December 14, 2015

ಭದ್ರತೆಯ ಲೋಕದಲ್ಲಿ - ೧೨: ನ್ಯಾಯ ನೀಡದ ನ್ಯಾಯದೇವತೆ!
ಪೊಲೀಸರ ರಾಜಾತಿಥ್ಯದಿಂದಾಗಿ ಜರ್ಝರಿತವಾಗಿದ್ದ ನನ್ನ ಕೈ ಕಾಲುಗಳು ಕೆಲವು ದಿನ ನನಗೆ ಸಹಕಾರವನ್ನೇ ನೀಡಲಿಲ್ಲ!  ಸ್ವಲ್ಪ ಸುಧಾರಿಸಿಕೊಂಡ ನಂತರ ಲಾಯರ್ ಕುಮಾರನನ್ನು ಭೇಟಿ ಮಾಡಿ ಹೊಸಕೋಟೆಯ ಪೊಲೀಸರ ವಿರುದ್ಧ ಒಂದು ಕ್ರಿಮಿನಲ್ ಕೇಸ್ ಹಾಗೂ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ.  ಲಾಯರ್ ಕುಮಾರ ತನಗಿಂತಲೂ ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯರಾದ ಹೊನ್ನೇಗೌಡ ಎನ್ನುವವರನ್ನು ನಮ್ಮ ಪರವಾಗಿ ವಾದಿಸಲು ನಿಯೋಜಿಸಿದ್ದ.  ಹೊನ್ನೇಗೌಡರ ಅನುಭವದಿಂದ ನಮ್ಮ ಪ್ರಕರಣ ಹೊಸಕೋಟೆಯ ನ್ಯಾಯಾಲಯದಲ್ಲಿ ಒಂದು ರೀತಿಯ ಸಂಚಲನವನ್ನೇ ಸೃಷ್ಟಿಸಿತ್ತು.  ನನ್ನ ಜೊತೆಗೆ ಪೊಲೀಸರ ರಾಜಾತಿಥ್ಯವನ್ನು ಅನುಭವಿಸಿದ್ದ ಇತರ ಭದ್ರತಾ ರಕ್ಷಕರು ಈ ಎರಡೂ ಪ್ರಕರಣಗಳಲ್ಲಿ ಸಾಕ್ಷಿಗಳಾಗಿ ನಿಂತು ತಮ್ಮ ಹೇಳಿಕೆಗಳನ್ನು ದಾಖಲಿಸಿದರು.  ಹೆಣ್ಣೊಬ್ಬಳನ್ನು ಬಂಧಿಸಿ ನ್ಯಾಯಧೀಶರ ಮುಂದೆ ಹಾಜರುಪಡಿಸದೆ ಇಪ್ಪತ್ನಾಲ್ಕು ಘಂಟೆಗಳ ಕಾಲ ಬಂಧನದಲ್ಲಿಟ್ಟದ್ದು, ಜೊತೆಗೆ ನಿರಪರಾಧಿಗಳಾದ ನಮ್ಮನ್ನು ಅಪರಾಧಿಗಳೆಂದು ಬಿಂಬಿಸಿ, ಬಂಧನದಲ್ಲಿಟ್ಟು ಚಿತ್ರಹಿಂಸೆ ಕೊಟ್ಟಿದ್ದು ಹಾಗೂ ಹಲ್ಲೆ ಮತ್ತು ಕೊಲೆ ಪ್ರಯತ್ನದ ಸುಳ್ಳು ಪ್ರಕರಣ ದಾಖಲಿಸಿ ಸುಖಾಸುಮ್ಮನೆ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿ ಸಮಾಜದಲ್ಲಿ ನಮ್ಮ ಮರ್ಯಾದೆ ಕಳೆದಿದ್ದು ನಮ್ಮ ದೂರಿನ ಮುಖ್ಯಾಂಶಗಳಾಗಿದ್ದವು.  ಸಾಕ್ಷಿಗಳ ಹೇಳಿಕೆ ದಾಖಲಾಗಿ ಪ್ರಕರಣ ದಿನಕ್ಕೊಂದು ಹೊಸ ರೂಪ ತಳೆಯುತ್ತಾ ಕುತೂಹಲಕರವಾಗಿ ಮುಂದುವರೆಯುತ್ತಿದ್ದಂತೆ ನಮ್ಮ ಬಂಧನದಲ್ಲಿ ಭಾಗಿಗಳಾಗಿದ್ದ ಪೊಲೀಸರಲ್ಲಿ ಸಣ್ಣದೊಂದು ನಡುಕ ಶುರುವಾಗಿತ್ತು.  

ಕೆಲ ತಿಂಗಳುಗಳ ನಂತರ ಇದ್ದಕ್ಕಿದ್ದಂತೆ ಸರ್ಕಾರಿ ವಕೀಲನ ಕುಟಿಲ ತಂತ್ರದಿಂದಾಗಿ ನಮ್ಮ ಪ್ರಕರಣ ಹೊಸಕೋಟೆ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲವೆಂದು ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾಯಿಸಿಬಿಟ್ಟರು.  ಅದುವರೆಗೂ ಹೊಸಕೋಟೆ ನ್ಯಾಯಾಲಯದಲ್ಲಿ ದಾಖಲಾಗಿದ್ದ ಸಾಕ್ಷಿ ಹೇಳಿಕೆಗಳನ್ನು ಹೊಸ ನ್ಯಾಯಾಧೀಶರ ಮುಂದೆ ಮತ್ತೊಮ್ಮೆ ದಾಖಲಿಸಬೇಕಿತ್ತು.  ಇದರಿಂದಾಗಿ ನಮ್ಮ ತಂಡದ ಆತ್ಮಸ್ಥೈರ್ಯ ಕೊಂಚ ಕುಗ್ಗಿತ್ತು.   ಇದೇ ಸಮಯಕ್ಕೆ ನಮ್ಮ ಪ್ರಕರಣದಲ್ಲಿ ನಮ್ಮ ಪರವಾಗಿ ವಾದಿಸುತ್ತಿದ್ದ ಹಿರಿಯ ನ್ಯಾಯವಾದಿ ಹೊನ್ನೇಗೌಡರು ಒಂದು ಕರಾಳ ರಾತ್ರಿಯಲ್ಲಿ ಮಲಗಿದ್ದಂತೆಯೇ ಹೃದಯಾಘಾತದಿಂದ ಮರಣ ಹೊಂದಿದ್ದರು.  ಅವರ ಮರಣದಿಂದಾಗಿ ನಮ್ಮ ಹೋರಾಟಕ್ಕೆ ದೊಡ್ಡ ಹೊಡೆತವೇ ಬಿದ್ದಂತಾಗಿತ್ತು.  ಅದೇ ಸಮಯಕ್ಕೆ ಹೊನ್ನೇಗೌಡರ ಸಲಹೆಯಂತೆ ಕಪ್ಪುಬಿಳುಪು ಪತ್ರಿಕೆಯೊಂದಕ್ಕೆ ನಮ್ಮ ಇಡೀ ಪ್ರಕರಣದ ಬಗ್ಗೆ ಮಾಹಿತಿ ನೀಡಿ ಪ್ರಕಟಿಸುವಂತೆ ವಿನಂತಿಸಿಕೊಂಡಿದ್ದೆವು.  ಆದರೆ ಆ ಸಂಪಾದಕ ಮಹಾಶಯ ಪೊಲೀಸ್ ಅಧಿಕಾರಿಗಳೊಡನೆ ವ್ಯವಹಾರ ಕುದುರಿಸಿ ನಮ್ಮ ಪ್ರಕರಣದ ಬಗ್ಗೆ ಯಾವ ವರದಿಯನ್ನೂ ಪ್ರಕಟಿಸದೆ ದುಡ್ಡು ಮಾಡಿಕೊಂಡಿದ್ದ.   ಇತ್ತ ಲಾಯರ್ ಹೊನ್ನೇಗೌಡರ ಮರಣದ ನಂತರ ನಮ್ಮ ಪರವಾಗಿ ವಕಾಲತ್ತು ವಹಿಸಿಕೊಂಡಿದ್ದ ಲಾಯರ್ ಕುಮಾರನೂ ಸಹ ಪೊಲೀಸ್ ಅಧಿಕಾರಿಗಳೊಡನೆ ಕೈ ಮಿಲಾಯಿಸಿ, ನಮ್ಮ ಪ್ರಕರಣಗಳೆರಡನ್ನೂ ಹಳ್ಳ ಹಿಡಿಸಿದ್ದ.

ಮಾಡದೆ ಇದ್ದ ಕಳ್ಳತನದ ಅಪವಾದ ಹೊತ್ತು, ಪೊಲೀಸರಿಂದ ಚಿತ್ರಹಿಂಸೆಗೊಳಗಾಗಿ, ಸುತ್ತಮುತ್ತಲಿನವರ ಕುಹಕದ ನೋಟಗಳನ್ನೆದುರಿಸಲಾಗದೆ ನ್ಯಾಯ ದೊರಕುತ್ತದೆಂಬ ಭರವಸೆಯಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ ನಮಗೆ  ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ್ದ ಕಪ್ಪುಪಟ್ಟಿ ಅಣಕವಾಡಿ ನಕ್ಕಂತಾಗಿತ್ತು.  ಕ್ರಮೇಣ ನ್ಯಾಯಾಲಯದಲ್ಲಿ ಪ್ರಕರಣ ಆಮೆಗತಿಯಲ್ಲಿ ನಡೆಯತೊಡಗಿದಾಗ ಬೇಸರಗೊಂಡ ನಮ್ಮ ತಂಡದ ಸದಸ್ಯರು ಒಬ್ಬೊಬ್ಬರಾಗಿ ಕಳಚಿಕೊಂಡಿದ್ದರು.   ಪೊಲೀಸರ ವಿರುದ್ಧ ನಾವು ದಾಖಲಿಸಿದ್ದ ಪ್ರಕರಣಗಳೂ ವಜಾಗೊಂಡಿದ್ದಲ್ಲದೆ ಪೊಲೀಸರು ನಮ್ಮ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವೂ ಸಹ ಸಾಕ್ಷಿಗಳಿಲ್ಲದೆ ಬಿದ್ದು ಹೋಗಿ ನಮ್ಮನ್ನು ಖುಲಾಸೆಗೊಳಿಸಿದ್ದರು.  ಎಲ್ಲ ಕೇಸುಗಳ ಜಂಜಾಟದಿಂದ ಮುಕ್ತರಾಗಿ, ನೆಮ್ಮದಿಯ ನಿಟ್ಟುಸಿರು ಬಿಟ್ಟು ಮತ್ತೆ ನಮ್ಮ ದೈನಂದಿನ ಜೀವನಕ್ಕೆ ಹೊಂದಿಕೊಂಡು ಬದುಕುವಲ್ಲಿ ಅಮೂಲ್ಯವಾದ ಮೂರು ವರ್ಷಗಳು ಅನ್ಯಾಯವಾಗಿ ಕಳೆದು ಹೋಗಿದ್ದವು.   ನಮ್ಮ ನ್ಯಾಯವ್ಯವಸ್ಥೆ ಹಾಗೂ ಪೊಲೀಸರ ಮೇಲಿದ್ದ ನಂಬಿಕೆ ಚೂರುಚೂರಾಗಿತ್ತು.  ಮತ್ತೆಂದಿಗೂ ಪೊಲೀಸರಿಗೆ ನಮ್ಮ ಕಾರ್ಯದಲ್ಲಿ ಸಹಾಯ ಮಾಡಬಾರದು, ಯಾರೇನೇ ಮಾಡುತ್ತಿದ್ದರೂ ಕಂಡೂ ಕಾಣದಂತೆ ಇದ್ದುಬಿಡಬೇಕೆಂದು ತೀರ್ಮಾನಿಸಿ ಮತ್ತೊಂದು ಹೊಸ ಕೆಲಸದ ಹುಡುಕಾಟದಲ್ಲಿ ತೊಡಗಿಕೊಂಡೆವು.


Tuesday, December 8, 2015

ಲಹರಿ ಬಂದಂತೆ...... ೮,,,,,,,,,,,,,,,,,,,,,,,,,,,,,,

 
 
ಹೊತ್ತು ಮುಳ್ಗೋ ಹೊತ್ತಾಯ್ತಲ್ಲೇ
ನಿನ್ನಾ ಮನ್ಸಾಗೇನೋ ತುಂಬೈತಲ್ಲೇ
ನಿನ್ಕಣ್ಣಾಗ್ ಕಂಬ್ನಿ ತುಂಬೈತಲ್ಲೇ
ನಿನ್ಮೂತಿ ಭಾರೀ ಕೆಂಪು ಆಗೈತಲ್ಲೇ
ಮೊಗ್ದಾಗ್ ನಗು ಮಾಯ್ವಾಯ್ತಲ್ಲೇ
ಯಾಕೇ ಹಿಂಗೇ ಹೇಳೇ ನಂಗೆ ತಿಮ್ಮಿ!

ಬಾಗ್ಲಾ ಹಿಂದೆ ನಿಂತ್ಗೊಂಡ್ ನೀನು
ಮಾತಾಡ್ದಂಗೆ ಮುನುಸ್ಕೊಂಡಿದ್ರೆ
ನನ್ನೆದ್ಯಾಗೇನೋ ಭಾರೀ ನೋವು
ಈ ಕ್ವಾಪಾ ತಾಪಾ ಬ್ಯಾಡಾ ಕಣೇ
ಬ್ಯಾಸ್ರಾ ಗೀಸ್ರಾ ಬ್ಯಾಡಾ ನೋಡು
ಹೂವಿನಂಗೆ ನಗ್ತಾ ಇರೆ ತಿಮ್ಮಿ!

Monday, December 7, 2015

ಲಹರಿ ಬಂದಂತೆ ,,,,,,,,,,,,,,,೭,,,,,,,,,,,,,,,,,,,,,,,,,ಸಂಭ್ರಮದ ಸಡಗರದಲ್ಲಿ
ದೀಪ ಹಚ್ಚುವ ವೇಳೆಯಲ್ಲಿ
ತುಂಬಿದ ಎಣ್ಣೆ ಬಟ್ಟಲಿನಲ್ಲಿ
ನಿನ್ನದೇ ರೂಪ ಕಂಡೆನಲ್ಲೇ
ಸುಂದರ ಮಣ್ಣಿನ ಹಣತೆಯಲ್ಲಿ
ಹೊಸ ಬೆಳಕ ನಿರೀಕ್ಷೆಯಿತ್ತಲ್ಲೆ
ನಿನ್ನದೇ ಭ್ರಾಮಕ ಲೋಕದಲ್ಲಿ
ಬತ್ತಿಯನ್ನೇ ಮರೆತು ಬಿಟ್ಟೆಯಲ್ಲೇ
ಇನ್ನು ಬೆಳಕೆಲ್ಲೇ ಓ ಪೆದ್ದು ನಲ್ಲೆ!
***********************
***********************
 
 

ಬ್ಯಾಡಾ ಕಣೇ
ಬ್ಯಾಡಾ ಕಣೇ
ಅಂದ್ರೂ
ಕೇಳ್ನಿಲ್ಲಾ ನೀನೂ
ತಿರುವ್ಕೊಂಡೋಗಿ
ಮುಚ್ಗಂಡೆ ಕದವಾ!
ಬ್ಯಾಡಾ ಬ್ಯಾಡಾ
ಅಂದ್ರೂ ಬತ್ತಾನೇ ಐತೆ
ರಾಗಿಮುದ್ದೆ ಕೋಳಿಸಾರು
ವಾಸ್ನೆ ಘಮ್ಮಂತಾ!
ತೆಗ್ಯೇ ಕದವಾ
ತೆಗ್ಯೇ ಕದವಾ ತಿಮ್ಮಿ
ನಗ್ತಾ ನಗ್ತಾ
ಉಣ್ಣಾಕಿಕ್ಕೆ ತಿಮ್ಮಿ
ನಿನ್ನಾಣ್ಗೂವೆ
ದ್ಯಾವ್ರಾಣ್ಗೂವೆ
ಕುಡ್ಯಾಕಿಲ್ಲ ತಿಮ್ಮಿ
ನಿನ್ನ ಬುಡಾಕಿಲ್ಲ ತಿಮ್ಮಿ!
-:-)
******************
*********************
 
ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿಯ
ಹಂಚಬೇಕು ಮಾನವ
ಬೇಧವಿಲ್ಲ ಬೆಂಕಿಗೆ
ದ್ವೇಷವಿಲ್ಲ ಬೆಳಕಿಗೆ
ಎಂಬ ಹಾಡು ಕೇಳಿ
ಮನ ಮೈಮರೆತಿತ್ತು
ಹೊಸ ನಿರೀಕ್ಷೆಯ
ಕನಸು ಕಣ್ತುಂಬಿತ್ತು
ಆದರೆ ಆ ಹೆಣ್ಣು, ,,,
ಮದದಿಂದ ಮೆರೆದಿತ್ತು
ಮನದ ಕದವ ಮುಚ್ಚಿತ್ತು
ಅಹಂಕಾರ ಆರ್ಭಟಿಸಿತ್ತು
ದೀಪಾವಳಿಯ ನಂದಾದೀಪ
ಬೆಳಗದೆ ನಂದಿಹೋಗಿತ್ತು
ಅರಳಿದ ಮೃದು ಮನಸ್ಸು
ಹಾಗೆಯೇ ಮುದುಡಿ ಹೋಗಿತ್ತು
ಬಾಳಬೇಕಿದ್ದ ಬಾಳ ಲತೆ
ಅರಳದೆ ಬಾಡಿ ಹೋಗಿತ್ತು
ಬೆಳಗಬೇಕಿದ್ದ ಬಾಳ ಹಣತೆ
ಅಂಧಕಾರದಲಿ ಮುಳುಗಿತ್ತು
ಕಣ್ಮುಂದಿನ ನೀರವ ಹಾದಿಯಲ್ಲಿ
ಬರೀ ಕಗ್ಗತ್ತಲೇ ತುಂಬಿ ನಿಂತಿತ್ತು
ಆದರೂ ಕಿವಿಗಳಲ್ಲಿ ಕೇಳುತ್ತಿತ್ತು
ದೀಪದಿಂದ ದೀಪವ
ಹಂಚಬೇಕು ಮಾನವ
ಪ್ರೀತಿಯಿಂದ ಪ್ರೀತಿಯ
ಹಂಚಬೇಕು ಮಾನವ
ಬೇಧವಿಲ್ಲ ಬೆಂಕಿಗೆ
ದ್ವೇಷವಿಲ್ಲ ಬೆಳಕಿಗೆ
ಮತ್ತೊಂದು ದೀಪಾವಳಿಯ
ನಿರೀಕ್ಷೆಯಿದೆ ಮನದಲ್ಲಿ! 
******************
******************

Tuesday, October 20, 2015

ಮಾಟ ಮಂತ್ರ ಮಾಯೆ,,ಭಯದ ಭೀಭತ್ಸ ಛಾಯೆ - ಭಾಗ ೨: ಮಿಡಿ ನಾಗರ ಕಡಿದಾಗ,,,,,,

ಅದೊಂದು ಅಮಾವಾಸ್ಯೆಯ ಸಂಜೆ, ದಿನಕರನಾಗಲೆ ತನ್ನ ದಿನದ ವ್ಯವಹಾರ ಮುಗಿಸಿ ಕೆಂಪಗಾಗಿ ಮನೆಯೆಡೆಗೆ ಓಡುತ್ತಿದ್ದ!  ಶಾಲೆಯ ಕೆಲಸ ಮುಗಿಸಿ ಬಸ್ಸಿಗಾಗಿ ಕಾಯುತ್ತಿದ್ದ ನಮ್ಮಲ್ಲಿಗೆ ಹುಡುಗನೊಬ್ಬ ಏದುಸಿರು ಬಿಡುತ್ತಾ ಓಡೋಡಿ ಬಂದು ಗೌಡ್ರ ಮನೆಗೆ ಬರಬೇಕಂತೆ ಅಂದಾಗ ವಿಧಿಯಿಲ್ಲದೆ ಎದ್ದು ಅವನೊಡನೆ ಹೆಜ್ಜೆ ಹಾಕಿದ್ದೆ. ಗೌಡರ ಮನೆ ತಲುಪಿದಾಗ ಅಲ್ಲಿ ಕಂಡ ದೃಶ್ಯ ಭಯಾನಕವಾಗಿತ್ತು!   ಭಯವೆಂದರೇನೆಂದೇ ಅರಿಯದ ನನ್ನ ಬೆನ್ನ ಹುರಿಯಲ್ಲಿಯೂ ಸಣ್ಣದೊಂದು ಛಳುಕು ಹೊಡೆದಂತಾಗಿತ್ತು.  ನಾನು ಅಲ್ಲಿಗೆ ಹೋಗುವಷ್ಟರಲ್ಲಿ  ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಹನುಮಂತೇಗೌಡರು ಸಹ ಬಂದಿದ್ದರು.  ಅವರ ಸಂಬಂಧಿಕ, ಶಿರಾದ ಬಳಿ ಯಾವುದೋ ಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ರಂಗಪ್ಪ ಗೌಡ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದ.  ಮನೆಯ ಹಾಲಿನಲ್ಲಿದ್ದ ಸಾಮಾನುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ತನ್ನ ಶರೀರದಲ್ಲಿ ಆಗುತ್ತಿದ್ದ ಅಪಾರ ನೋವಿನಿಂದ, ಉರಿಯಿಂದ ತಡೆದುಕೊಳ್ಳಲಾಗದೆ ಉರಿ, ಉರಿ ಎಂದು ಚೀರಾಡುತ್ತಿದ್ದ.  ಅವನ ಕಾಲಿನ ಹೆಬ್ಬೆರಳಿನಿಂದ ಶುರುವಾದ ಉರಿ ಕ್ರಮೇಣ ಇಡೀ ಶರೀರವನ್ನೆಲ್ಲಾ ವ್ಯಾಪಿಸಿ ತಡೆಯಲಾಗದ ಯಾತನೆಯಿಂದ ಆತ  ನರಳುತ್ತಿದ್ದ.

ಬಗ್ಗೆ ಹನುಮಂತೇಗೌಡರು ನನಗೆ ಕೆಲವು ಬಾರಿ ಹೇಳಿದ್ದರೂ ನಾನು ನಂಬಿರಲಿಲ್ಲ!   ಅಮಾವಾಸ್ಯೆಯ ದಿನ ಅವನಿಗೆ ರೀತಿ ಉರಿ ಶುರುವಾಗುತ್ತದೆ, ಅವನ ಕಾಲಿನ ಹೆಬ್ಬೆರಳಿನಿಂದ ಶುರುವಾಗುವ ಉರಿ ಇಡೀ ದೇಹಕ್ಕೆಲ್ಲಾ ವ್ಯಾಪಿಸಿ, ಇಡೀ ರಾತ್ರಿ ಅವನು ನೋವಿನಿಂದ ಒದ್ದಾಡುತ್ತಾನೆ, ಆಸ್ತಿಯ ವಿಚಾರಕ್ಕಾಗಿ ಅಪ್ಪ ಮಕ್ಕಳ ನಡುವೆಯೇ ಜಗಳವಾಗಿ ಕೊನೆಗೆ ಮಾಟ ಮಂತ್ರ ಮಾಡಿಸಿ ಒಬ್ಬರಿಗೊಬ್ಬರು ತೊಂದರೆ ಕೊಟ್ಟುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾಗ ವೈಜ್ಞಾನಿಕ ಯುಗದಲ್ಲಿ ಅದು ಹೇಗೆ ಸಾಧ್ಯ? ಮಾಟ ಮಂತ್ರ ಏನೂ ಇಲ್ಲ ಎಂದು ವಾದಿಸಿದ್ದೆ.   ಯಾವುದು ಸಾಧ್ಯವಿಲ್ಲ ಎಂದು ನಾನು ನಂಬಿದ್ದೆನೋ ಅದು ಸಾಧ್ಯವೆಂಬುದನ್ನು ನಾನು ಈಗ ಕಣ್ಣಾರೆ ಕಾಣುತ್ತಿದ್ದೆ.  ಅವನ ನರಳಾಟ ಇಡೀ ರಾತ್ರಿ ಮುಂದುವರೆಯುವುದು ನಿಶ್ಚಿತವಾಗಿತ್ತು.  ಅಲ್ಲಿದ್ದು ನಾನು ಮಾಡುವುದು ಏನೂ ಇರಲಿಲ್ಲವಾಗಿ ರಾತ್ರಿ ಒಂಭತ್ತು ಘಂಟೆಯ ಪ್ರಕಾಶ ಬಸ್ಸಿಗೆ ಮನೆಗೆ ಹಿಂದಿರುಗಿದ್ದೆ.  ಆದರೆ ರಾತ್ರಿಯಿಡೀ ನನ್ನ ತಲೆಯ ತುಂಬಾ ವಾಮಾಚಾರದ ಪರಿಣಾಮಗಳ ವಿಚಾರವೇ ಸುಳಿದಾಡುತ್ತಾ ಕಣ್ಣಿಗೆ ನಿದ್ದೆ ಹತ್ತಿರಲಿಲ್ಲ.ನಾನು ಬಹಳ ವರ್ಷಗಳ ಹಿಂದೆ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಉಪಾಧ್ಯಾಯನಾಗಿ ಕೆಲಸ ಮಾಡಿದ್ದೆ.  ಅಲ್ಲಿ ನಡೆದ ಮಾಟ ಮಂತ್ರದ   ಘಟನೆ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.  ಅದೊಂದು ಗೌಡರ ಮನೆ, ಸಾಕಷ್ಟು ಅಡಿಕೆ, ತೆಂಗಿನ ತೋಟ, ಹೊಲ, ಮನೆಗಳೆಲ್ಲ ಇದ್ದು ಚೆನ್ನಾಗಿ ಬಾಳಿ ಬದುಕಿದ ಮನೆತನ.  ಆಸ್ತಿಯ ವಿಚಾರವಾಗಿ ಅಪ್ಪ ಮಕ್ಕಳ ನಡುವೆ ಭುಗಿಲೆದ್ದ ಅಸಮಾಧಾನ ಕೊನೆಗೆ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡಿತ್ತು.   ಟಿಸಿಎಚ್ ಪಾಸ್ ಮಾಡಿಕೊಂಡು ಸರ್ಕಾರಿ ಶಾಲೆಯಲ್ಲಿ ಉಪಾಧ್ಯಾಯನಾಗಿದ್ದ ಗೌಡರ ಮಗನಿಗೆ  ಸ್ವತ: ತಂದೆಯೇ ಮಾಟ ಮಾಡಿಸಿದ್ದನಂತೆ,  ಅದನ್ನು ತೆಗೆಸಲು ಹೋದ ಮಗ ಅಪ್ಪನ ಮೇಲೆ ಪ್ರತಿ ವಾಮಾಚಾರ ಮಾಡಿಸಿದ್ದನಂತೆ!   ವಾಮಾಚಾರದ ಯುದ್ಧದಲ್ಲಿ ಮೊದಲು ಮಗ ಸತ್ತು ನಂತರ ಅಪ್ಪನೂ ಹೆಣವಾದ ದುರಂತ ಕಥೆ ಇಲ್ಲಿದೆ.

 ತನ್ನ ಅಪ್ಪ ಆಸ್ತಿಯಲ್ಲಿ ತನಗೆ ಸಮಪಾಲು ಕೊಡಲಿಲ್ಲ, ಅಣ್ಣನಿಗೆ ಹೆಚ್ಚಿಗೆ ಕೊಟ್ಟು ತನಗೆ ಕಡಿಮೆ ಕೊಟ್ಟಿದ್ದಾನೆ ಎನ್ನುವುದು ರಂಗಪ್ಪಗೌಡನ ಕೊರಗಾಗಿತ್ತು.  ಇದನ್ನು ತನ್ನ ತಾಯಿ ಹಾಗೂ ದೊಡ್ಡಪ್ಪಂದಿರ ಮುಂದೆಯೂ ಸಾಕಷ್ಟು ಸಲ ತೋಡಿಕೊಂಡಿದ್ದಾನೆ.  ವಿದ್ಯಾವಂತನಲ್ಲದ ಅಣ್ಣ ಊರಿನಲ್ಲಿಯೇ ರೈತನಾಗಿ ಬದುಕಬೇಕಾಗಿದೆ, ನಿನಗಾದರೆ ಸರ್ಕಾರಿ ನೌಕರಿಯಿದೆ, ಸುಮ್ಮನೆ ರಗಳೆ ಮಾಡದೆ ಹೊಂದಿಕೊಂಡು ಹೋಗು ಎಂದು ದೊಡ್ಡಪ್ಪಂದಿರು ಬುದ್ಧಿವಾದ ಹೇಳಿದರೂ ಕೇಳದೆ ತನಗೆ ಆಸ್ತಿ ಹಂಚ್ವಿಕೆಯಲ್ಲಿ ಮೋಸ ಮಾಡಿದ ಅಪ್ಪ ಹಾಗೂ ಅಣ್ಣನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆಂದು ಕೋರ್ಟ್ ಮೆಟ್ಟಿಲೇರಿದ್ದ.  ಕೋರ್ಟಿನಲ್ಲಿ ಕೇಸು ವಿಚಾರಣೆ ನಡೆಯುತ್ತಿರುವಾಗಲೆ ಶಿರಾ ನಗರದ ಜಾಜಿಕಟ್ಟೆಯ ಬಳಿಯಿದ್ದ ಕೊಳ್ಳೇಗಾಲದ ಮಾಂತ್ರಿಕನೊಬ್ಬನ ಬಳಿ ಹೋಗಿ ಅಣ್ಣ ಹಾಗೂ ಅಪ್ಪನ ಮೇಲೆ ವಾಮಾಚಾರ ಪ್ರಯೋಗ ಮಾಡಿಸಿ, ಪೂಜಿಸಿದ ನಿಂಬೆಹಣ್ಣು, ಕೋಳಿಮೊಟ್ಟೆ ಇತ್ಯಾದಿಗಳನ್ನು ತಂದು ಅವರ ಮನೆ ಬಾಗಿಲಿನ ಮುಂದೆ ರಾತ್ರೋರಾತ್ರಿ ಹಾಕಿ ಹೆದರಿಸುತ್ತಿದ್ದ.   ಬಹಳ ದಿನ ತಾಳ್ಮೆಯಿಂದಲೇ ಇದ್ದು ಕೊನೆಗೆ ಇವನ ಉಪಟಳದಿಂದ ರೋಸಿ ಹೋದ ಅವನ ಅಪ್ಪ ಹಾಗೂ ಅಣ್ಣ ಇವನಿಗೆ ಹೇಗಾದರೂ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿ ಅವನ ವಿರುದ್ಧವಾಗಿ ತೊಡೆ ತಟ್ಟಿ ಅಖಾಡಕ್ಕಿಳಿದಾಗಲೇ ನಡೆದಿದ್ದು ವಿಶಿಷ್ಟ ವಾಮಾಚಾರ!

ಸರ್ಕಾರಿ ಶಾಲೆಯ ಕೆಲಸಕ್ಕೆ ಹೋಗಲು ಪ್ರತಿ ದಿನವೂ ಶಿರಾಗೆ ಹೋಗುತ್ತಿದ್ದ ರಂಗಪ್ಪನಿಗೆ ಶಿರಾ ನಗರದಲ್ಲಿ ಸಾಕಷ್ಟು ಪರಿಚಿತರಿದ್ದರು,  ಆದರೆ ಅವನಿಗಿಂತ ಮುಂಚಿನಿಂದಲೂ ಅವನ ಅಪ್ಪ ದೊಡ್ಡ ಗೌಡ ಶಿರಾ ನಗರದಲ್ಲಿ ವ್ಯವಹಾರ ನಡೆಸುತ್ತಿದ್ದುದರಿಂದ ಅವನಿಗೂ ಎಲ್ಲರೂ ಪರಿಚಿತರೇ!  ಅವನಿಗೆ ತಿಳಿದಿದ್ದ ಮಾಂತ್ರಿಕರಲ್ಲಿ ರೀತಿ ವಾಮಾಚಾರದ ನಿಂಬೆಹಣ್ಣು, ಕೋಳಿಮೊಟ್ಟೆ ಮುಂತಾದವುಗಳನ್ನು ತಂದು ಮನೆಯ ಮುಂದೆ ಹಾಕುತ್ತಿರುವುದರ ಬಗ್ಗೆ ಹೇಳಿಕೊಂಡಾಗ ಒಬ್ಬ ಕೊಳ್ಳೇಗಾಲದ ಮಾಂತ್ರಿಕ ಅವನಿಗೆ ಸರಿಯಾಗಿ ಬುದ್ಧಿ ಕಲಿಸುವುದಾಗಿ ಹೇಳಿ ಒಂದು ಅಮಾವಾಸ್ಯೆಯ ದಿನ ವಾಮಾಚಾರ ಪ್ರಯೋಗ ಮಾಡುತ್ತಾನೆ.  ಅದರಂತೆ ವಾಮಾಚಾರಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನೂ ಸಿದ್ಧಪಡಿಸಿ, ಜೊತೆಗೆ ಒಂದು ನಾಗರಹಾವಿನ ಮರಿಯನ್ನು ತರಿಸುತ್ತಾನೆ.  ಅಮಾವಾಸ್ಯೆಯ ರಾತ್ರಿಯಲ್ಲಿ ಶಿರಾದ ರುದ್ರಭೂಮಿಯಲ್ಲಿ ಕುಳಿತು ವಾಮಾಚಾರವನ್ನು ನಡೆಸಿ ಜೀವಂತವಿದ್ದ ನಾಗರಹಾವಿನ ಮರಿಯನ್ನು ವಾಮಾಚಾರದ ಎಲ್ಲ ವಸ್ತುಗಳೊಡನೆ ಒಂದು ಕುಡಿಕೆಯೊಳಗೆ ಹಾಕಿ ಬಾಯನ್ನು ಭದ್ರವಾಗಿ ಮುಚ್ಚಿ, ಅದನ್ನು ತೆಗೆದುಕೊಂಡು ಹೋಗಿ ರಂಗಪ್ಪಗೌಡನ ಮನೆಯ ಗೋಡೆಯಲ್ಲಿ ಅವಿತಿಡಲು ಹೇಳುತ್ತಾನೆ. ಅದರಂತೆಯೇ ದೊಡ್ಡಗೌಡ ತನ್ನಮನೆಯ ಗೋಡೆಯೊಂದಲೇ ರಂಧ್ರ ಕೊರೆದು ಮಗನಿಗೆ ಭಾಗ ಕೊಟ್ಟಿದ್ದ ಅದೇ ಮನೆಯ ಗೋಡೆಯಲ್ಲಿ ಕುಡಿಕೆಯನ್ನಿಟ್ಟು ಮಣ್ಣು ಮುಚ್ಚಿಬಿಡುತ್ತಾನೆ.

ಅದರ ನಂತರದ ಅಮಾವಾಸ್ಯೆಯಿಂದ ರಂಗಪ್ಪಗೌಡನಿಗೆ ವಾಮಾಚಾರದ ಪ್ರಭಾವ ಆರಂಭವಾಗುತ್ತದೆ, ಕಾಲಿನ ಹೆಬ್ಬೆರಳಿಗೆ ನಾಗರಹಾವು ಕಚ್ಚಿದರೆ ವಿಷದ ಪ್ರಭಾವದಿಂದ ಹೇಗೆ ಉರಿ ಶುರುವಾಗುತ್ತದೆಯೋ ಅದೇ ರೀತಿ ಅವನ ಕಾಲಿನ ಹೆಬ್ಬೆರಳಿನಿಂದ ಉರಿ ಶುರುವಾಗುತ್ತಿತ್ತು, ಕ್ರಮೇಣ ಹಾವಿನ ವಿಷ ಇಡಿ ದೇಹವನ್ನೆಲ್ಲಾ ವ್ಯಾಪಿಸಿಕೊಂಡಂತೆ  ಉರಿ  ದೇಹದ ಎಲ್ಲಾ ಭಾಗಗಳಿಗೂ ಪ್ರಸರಿಸಿ ಒದ್ದಾಡುವಂತೆ ಮಾಡುತ್ತಿತ್ತು.  ಸತತವಾಗಿ ಆರು ತಿಂಗಳು ಹೀಗೆ ಒದ್ದಾಡಿ ಆರನೆಯ ತಿಂಗಳಿನ ಅಮಾವಾಸ್ಯೆಯ ರಾತ್ರಿಯಂದು ಅವನು ಸಾಯುವ ಹಾಗೆ  ವಾಮಾಚಾರ ಮಾಡಲಾಗಿತ್ತು.   ಮಗನ ಪರವಾಗಿದ್ದ ಮಂತ್ರವಾದಿಯೊಬ್ಬ ರೀತಿ ನಾಗರಹಾವಿನ ಮರಿಯೊಡನೆ ವಾಮಾಚಾರವಾಗಿರುವುದನ್ನು ಪತ್ತೆ ಹಚ್ಚಿ, ಮನೆಯೊಳಗೆ ಅವಿತಿಟ್ಟಿದ್ದ ಕುಡಿಕೆಯನ್ನು ತೆಗೆದು ನಾಶ ಮಾಡುತ್ತಾನೆ. ಅದರಿಂದ ಮುಕ್ತಿ ಸಿಗಬೇಕಾದರೆ ಆಂಜನೇಯನ ದೇವಾಲಯದಲ್ಲಿಯೇ ಇವನನ್ನು ಇರಿಸಬೇಕು, ಮನೆಯಲ್ಲಿದ್ದರೆ ಮೃತ್ಯು ಕಟ್ಟಿಟ್ಟಬುತ್ತಿ ಎಂದು ಹೇಳುತ್ತಾನೆ.  ಅದರಂತೆ ಅವನನ್ನು ಊರಾಚೆಯ ಕೆರೆಯ ಪಕ್ಕದಲ್ಲಿದ್ದ ಆಂಜನೇಯನ ಗುಡಿಗೆ ಸಾಗಿಸಿ ಅವನ ಸೇವೆಗಾಗಿ ಇಬ್ಬರನ್ನು ನೇಮಿಸಲಾಗುತ್ತದೆ.  

ಹಗಲು ರಾತ್ರಿ ಅವನ ಸೇವೆ ಮಾಡುತ್ತಾ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಇಬ್ಬರು ಸಂಬಂಧಿಕರಿಗೆ ಕೊನೆಯ ಅಮಾವಾಸ್ಯೆಯ ರಾತ್ರಿಯಲ್ಲಿ ತಡೆಯಲಾಗದಂಥ ನಿದ್ದೆ ಬಂದು ಮಲಗಿ ಬಿಡುತ್ತಾರೆ.  ಕೆಲ ಸಮಯದ ನಂತರ ಎಚ್ಚೆತ್ತ ಅವರಿಗೆ ರಂಗಪ್ಪಗೌಡ ಕಾಣಿಸುವುದಿಲ್ಲ!  ಸುತ್ತಮುತ್ತ ಎಲ್ಲೆಡೆ ಹುಡುಕಿದರೂ ಅವನ ಸುಳಿವೇ ಇರುವುದಿಲ್ಲ, ಕೊನೆಗೆ ಅವನ ನಿಗೂಢ ಕಣ್ಮರೆಯ ಬಗ್ಗೆ  ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗುತ್ತದೆ.  ಪೊಲೀಸರು ಸಹಾ ರಂಗಪ್ಪಗೌಡನ ಬಗ್ಗೆ ಹುಡುಕಾಟದಲ್ಲಿ ತೊಡಗಿಕೊಳ್ಳುತ್ತಾರೆ.  ಆದರೆ ಯಾವುದೇ ಫಲ ದೊರೆಯುವುದಿಲ್ಲ,  ಮೂರು ದಿನಗಳ ನಂತರ ದೇವಾಲಯದಿಂದ ಅನತಿ ದೂರದಲ್ಲಿದ್ದ ಕೆರೆಯಲ್ಲಿ ರಂಗಪ್ಪಗೌಡನ ಶವ ತೇಲಿ ಬರುತ್ತದೆ! ಅವನ ಮೇಲೆ ನಡೆದ ವಾಮಾಚಾರದ ಪ್ರಭಾವಕ್ಕೆ ತಕ್ಕಂತೆ ಅವನ ಸಾವು ಆರನೆಯ ತಿಂಗಳಿನ ಅಮಾವಾಸ್ಯೆಯಂದೇ ಆಗಿರುತ್ತದೆ.

ಪೊಲೀಸರ ಮಹಜರು ಎಲ್ಲಾ ಮುಗಿದು ಅವನ ಅಂತ್ಯಸಂಸ್ಕಾರದ ನಂತರ ಅವನ ದೊಡ್ಡಪ್ಪನ ಮಗನೊಬ್ಬ ಅವನ ಸಾವಿಗೆ ಕಾರನನಾದವರ ಮೇಲೆ ಸೇಡು ತೀರಿಸಿಕೊಳ್ಳಲೇಬೇಕೆಂದು ಹಗೆ ತೊಟ್ಟು ಮಗನ ಪರವಾಗಿದ್ದ ಮಂತ್ರವಾದಿಯ ಬಳಿಗೆ ಹೋಗುತ್ತಾನೆ. ಆದರೆ ಮಂತ್ರವಾದಿ ಮತ್ತೇನೋ ಮಾಡುವಷ್ಟರಲ್ಲಿಯೇ, ಕೇವಲ ಒಂದೇ ತಿಂಗಳಿನಲ್ಲಿ, ಶಿರಾ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದೊಡ್ಡಗೌಡ ಸತ್ತು ಹೋಗುತ್ತಾನೆ, ಅಲ್ಲಿಂದ ಒಂದು ತಿಂಗಳಿನೊಳಗೆ ನಾಗರಹಾವಿನ ಮಾಟ ಮಾಡಿದ್ದ ಕೊಳ್ಳೇಗಾಲದ ಮಾಂತ್ರಿಕನೂ ರಕ್ತ ಕಾರುತ್ತಾ ಸತ್ತು ಹೋಗುತ್ತಾನೆ.  ದೊಡ್ಡಗೌಡ ಮತ್ತು ಮಾಂತ್ರಿಕನ ಸಾವು ಮಾತ್ರ ನಿಗೂಢವಾಗಿಯೇ ಉಳಿದು ಹೋಗುತ್ತದೆ.  ಪೊಲೀಸರು ಅಸಹಜ ಸಾವಿನ ಪ್ರಕರಣ ಎಂದು ಷರಾ ಬರೆದು ಕೈ ತೊಳೆದುಕೊಳ್ಳುತ್ತಾರೆ.

ಘಟನೆಯ ಸಂಪೂರ್ಣ ವಿವರವನ್ನು ಮುಖ್ಯೋಪಾಧ್ಯಾಯರಾದ ಹನುಮಂತೇಗೌಡರಿಂದ ಕೇಳಿದ ನಂತರ ನಾನು ಮಾತಿಲ್ಲದ ಮೂಕನಂತಾಗಿದ್ದೆ. ಕ್ಷುಲ್ಲಕ ವಿಚಾರಕ್ಕೆ ಅಪ್ಪ ಮಕ್ಕಳ ನಡುವಿನ ಮನಸ್ತಾಪ ಇಡೀ ಕುಟುಂಬದ ಶಾಂತಿ ನೆಮ್ಮದಿಯನ್ನು ನಾಶ ಮಾಡಿದ್ದಲ್ಲದೆ ಇಬ್ಬರ ಸಾವಿಗೂ ಕಾರಣವಾಗಿತ್ತು.

 (ಸಾಂದರ್ಭಿಕ ಚಿತ್ರಗಳು: ಅಂತರ್ಜಾಲದಿಂದ)