Friday, July 31, 2015

ಭದ್ರತೆಯ ಲೋಕದಲ್ಲಿ - ೮






ಕೇವಲ ಎರಡು ದಿನಗಳಲ್ಲಿ ನಂದಿಬೆಟ್ಟದ ಬುಡದಿಂದ ಬಂಗಾಳಕೊಲ್ಲಿಯ ದಡದಲ್ಲಿದ್ದ ಸುಂದರ ಐತಿಹಾಸಿಕ ನಗರ ಮಹಾಬಲಿಪುರದ ತಾರಾ ಹೋಟೆಲ್ಲಿನಲ್ಲಿ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದೆವು.  ಹೊಸ ಜಾಗ, ಹೊಸ ಜನ, ಹೊಸ ಪರಿಸರ, ಜೊತೆಗೆ ನಮಗೆ ಮಾತನಾಡಲು ಬಾರದ ತಮಿಳು ಭಾಷೆ, ಹೋಟೆಲ್ಲಿನ ಹಾಗೂ ಊರಿನ ತುಂಬಾ ಎಲ್ಲೆಂದರಲ್ಲಿ ಕಾಣುತ್ತಿದ್ದ ವಿದೇಶಿ ಪ್ರವಾಸಿಗರು.  ಎಲ್ಲವೂ ನಮಗೆ ಹೊಸದೊಂದು ಪ್ರಪಂಚಕ್ಕೆ ಕಾಲಿಟ್ಟಂತೆ ಅನ್ನಿಸುತ್ತಿತ್ತು.  ನಿಧಾನವಾಗಿ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಹೋಟೆಲ್ಲಿನ ಅಗತ್ಯಗಳಿಗೆ ತಕ್ಕಂತೆ ಭದ್ರತೆಯ ಉಸ್ತುವಾರಿ ನೋಡಿಕೊಳ್ಳತೊಡಗಿದ್ದೆವು.  ಸಮುದ್ರ ತಟದಲ್ಲಿ ಪ್ರತ್ಯೇಕ ಬಂಗಲೆಗಳಂಥ ಕೊಠಡಿಗಳಿದ್ದ ಆ ಹೋಟೆಲ್ಲಿಗೆ ಹೆಚ್ಚಾಗಿ ಬರುತ್ತಿದ್ದವರು ಯೂರೋಪಿಯನ್ನರು.  ಅವರೊಡನೆ ಪ್ರತಿದಿನ ಸಂಭಾಷಿಸುತ್ತಾ ನಮ್ಮ ಆಂಗ್ಲಭಾಷೆಯ ಪ್ರೌಢಿಮೆ ದಿನೇ ದಿನೇ ಸುಧಾರಿಸುತ್ತಿತ್ತು. ಯೂರೋಪಿಯನ್ನರೆಂದರೆ ಬಹಳ ಶ್ರೀಮಂತರೆಂದೇ ಭಾವಿಸಿದ್ದ ಅಲ್ಲಿಯ ಜನರು  ಕಂಡ ಕಂಡಲ್ಲಿ ಅವರ ಮುಂದೆ ವಿಚಿತ್ರ ದೇಹಭಂಗಿಗಳನ್ನು ಪ್ರದರ್ಶಿಸಿ ಕಾಸಿಗಾಗಿ ಕೈಯೊಡ್ಡುತ್ತಿದ್ದರು. ಇನ್ನು ಕೆಲವರು ಅತ್ಯಂತ ಅಗ್ಗದ ಸಾಮಾನುಗಳನ್ನು ಐತಿಹಾಸಿಕ ಮಹತ್ವವಿರುವ ವಸ್ತುಗಳೆಂದು ತೋರಿಸಿ, ಸರಿಯಾಗಿ ಟೋಪಿ ಹಾಕಿ ಹೆಚ್ಚು ಹಣ ಸಂಪಾದಿಸುತ್ತಿದ್ದರು.  ಸ್ಥಳದ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿದ್ದ ಕೆಲವು ವಿದ್ಯಾವಂತ ಯುವಕರು ಸೈಕಲ್ಲುಗಳನ್ನು ಬಾಡಿಗೆಗೆ ಕೊಡುವುದರ ಜೊತೆಗೆ ವಿದೇಶೀ ಪ್ರವಾಸಿಗರನ್ನು ಮಹಾಬಲಿಪುರದ ಎಲ್ಲ ಮಹತ್ವದ ಸ್ಥಳಗಳಿಗೆ ಕರೆದೊಯ್ದು ವಿವರಣೆ ನೀಡುತ್ತಾ ಪ್ರವಾಸಿ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿದ್ದರು.

ಶತಮಾನಗಳ ಕಾಲದಿಂದಲೂ ಹೊರ ಜಗತ್ತಿನೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪಲ್ಲವ ರಾಜರ ಬಂದರು ನಗರಿ ಮಹಾಬಲಿಪುರ ತನ್ನ ಒಡಲಲ್ಲಿ ಅತ್ಯಮೂಲ್ಯವಾದ ಶಿಲ್ಪಕಲೆಯ ಸೊಬಗನ್ನು ಬಚ್ಚಿಟ್ಟುಕೊಂಡಿತ್ತು.  ಉರುಟಾದ ಗ್ರಾನೈಟ್ ಕಲ್ಲುಗಳು ಪರಿಣತ ಶಿಲ್ಪಿಗಳ ಕೈಗೆ ಸಿಕ್ಕಿ ಬೆಣ್ಣೆಯ ಮುದ್ದೆಯಂತೆ ಕೆತ್ತಲ್ಪಟ್ಟಿದ್ದು ಸುಂದರ ಶಿಲಾ ದೇವಾಲಯಗಳನ್ನು ಹೊಂದಿತ್ತು.  ಸಮುದ್ರ ತಟದ ಮಹಾಬಲಿ ದೇಗುಲ, ಹಲವಾರು ಶಿವ ಹಾಗೂ ವಿಷ್ಣು ದೇಗುಲಗಳು, ಕಲ್ಲಿನ ರಥಗಳು, ಕಲ್ಲು ಬಂಡೆಗಳನ್ನೇ ಗುಹೆಯಂತೆ ಕೆತ್ತಿ ರಚಿಸಿದ್ದ ಮಹಾಭಾರತ, ರಾಮಾಯಣದ ಕಥೆಗಳು, ಕಲ್ಲಿನಲ್ಲಿ ಅರಳಿದ್ದ ಕಾವ್ಯಗಳಾಗಿದ್ದವು.  ಹಲವಾರು ಶಿಲ್ಪಕಲಾ ತರಬೇತಿ ಕೇಂದ್ರಗಳೂ ಅಲ್ಲಿ ನಡೆಯುತ್ತಿದ್ದವು, ದೇಶ ವಿದೇಶಗಳಿಂದ ಬಂದ ಶಿಲ್ಪಕಲೆಯಲ್ಲಿ ಆಸಕ್ತಿ ಹೊಂದಿದ್ದ ವಿದ್ಯಾರ್ಥಿಗಳು ಅಲ್ಲಿ ಶಿಲ್ಪಕಲೆಯನ್ನು ಅಭ್ಯಾಸ ಮಾಡುತ್ತಿದ್ದರು. ಒಟ್ಟಾರೆ ಬೆಂಗಳೂರಿನಿಂದ ಹೋಗಿದ್ದ ನಮಗೆ ಅದೊಂದು ಸ್ವರ್ಗ ಸದೃಶ ಸ್ಥಳದಂತೆ ಕಾಣುತ್ತಿತ್ತು.

ಇಂತಿಪ್ಪ ಮಹಾಬಲಿಪುರದ ಐಶಾರಾಮಿ ಹೋಟೆಲ್ಲಿನಲ್ಲಿ ಭದ್ರತೆಯ ಉಸ್ತುವಾರಿ ಮಹಿಸಿಕೊಂಡ ಎರಡೇ ತಿಂಗಳಿನಲ್ಲಿ ಹೋಟೆಲ್ಲಿಗೆ ಹತ್ತಿರದಲ್ಲೇ ಬಾಡಿಗೆಗೆ ಒಂದು ಪುಟ್ಟ ಮನೆ ಮಾಡಿಕೊಂಡು ನನ್ನ ಮಡದಿ ಹಾಗೂ ಪುಟ್ಟ ಮಗಳನ್ನು ಅಲ್ಲಿಗೇ ಕರೆತಂದಿದ್ದೆ. ತಮಿಳಿನ ಗಂಧವೇ ಗೊತ್ತಿಲ್ಲದ ನನ್ನ ಮಡದಿಗೆ ನಮ್ಮ ಮನೆಯ ಮಾಲೀಕರ ಪತ್ನಿ ಅತ್ಯಂತ ಆಪ್ತಗೆಳತಿಯಾಗಿದ್ದಳು, ಮನೆಗೆ ಬೇಕಾದ ಸಾಮಾನುಗಳನ್ನು ತರಲು ಇಬ್ಬರೂ ಜೊತೆಯಾಗಿ ಮಾರುಕಟ್ಟೆಗೆ ಹೋಗುತ್ತಿದ್ದರು, ದಿನಬಳಕೆಯ ವಸ್ತುಗಳನ್ನು ಒಂದೊಂದಾಗಿ ತೋರಿಸುತ್ತಾ ಅವುಗಳಿಗೆ ತಮಿಳಿನಲ್ಲಿ ಏನನ್ನುತ್ತಾರೆಂದು ಆಕೆ ನನ್ನ ಮಡದಿಗೆ ಕಲಿಸಿ ಕೊಟ್ಟಿದ್ದಳು.   ಅವರ ಮೂವರು ಮಕ್ಕಳು ನನ್ನ ಪುಟ್ಟ ಮಗಳನ್ನು ಯಾವಾಗಲೂ ಹೆಗಲ ಮೇಲೆ ಹೊತ್ತುಕೊಂಡು ತಿರುಗುತ್ತಿದ್ದರು.  ಇನ್ನು ಮನೆಯ ಮಾಲೀಕ ಸಾರಾಯಿ ಮುನಿಸ್ವಾಮಿ ನನಗೆ ಅತ್ಯಂತ ಆಪ್ತನಾಗಿಬಿಟ್ಟಿದ್ದ.  ಅವರಪ್ಪನ ಕಾಲದಲ್ಲಿ ಅವರದ್ದು ಸಾರಾಯಿ ಅಂಗಡಿ ಇತ್ತಂತೆ, ಅವರಪ್ಪನಿಗೆ ಸಾರಾಯಿ ರಾಮಸ್ವಾಮಿ ಎಂದೇ ಎಲ್ಲರೂ ಕರೆಯುತ್ತಿದ್ದರಂತೆ.  ಈತ ಸಾರಾಯಿ ಅಂಗಡಿ ಮುಚ್ಚಿ ಬೇರೆ ಉದ್ಯೋಗ ಮಾಡುತ್ತಿದ್ದರೂ ಅವನಿಗೆ ಅದೇ ಹೆಸರು ಅಂಟಿಕೊಂಡಿತ್ತು!  ನನ್ನ ಬಿಡುವಿನ ಸಮಯದಲ್ಲಿ ಮೀನು ಹಿಡಿಯುವುದು, ತಮಿಳುನಾಡಿನ ಶೈಲಿಯಲ್ಲಿ ಥರಾವರಿ ಮೀನು ಮತ್ತು ಸೀಗಡಿ ಅಡಿಗೆ ಮಾಡುವುದರ ಬಗ್ಗೆ ಹೇಳಿ ಕೊಡುತ್ತಿದ್ದ.  ಅವನೊಡನೆ ಆಗಾಗ ನಾನೂ ಸಹ ಮೀನು ಹಿಡಿಯುವ ದೋಣಿ ಹತ್ತಿ ಆಳ ಸಮುದ್ರದ ಕಡೆಗೆ ಹೋಗುತ್ತಿದ್ದುದುಂಟು!  ಅಗಾಧವಾದ ವಿಶಾಲ ಗಂಭೀರ ನೀಲ ಕಡಲಿನ ಮೇಲೆ ಪುಟ್ಟ ದೋಣಿಯೊಂದರಲ್ಲಿ ಕುಳಿತು ಘಂಟೆಗಟ್ಟಲೆ ತೇಲಾಡುವುದು ನಿಜಕ್ಕೂ ಜೀವನದ  ಅನುಭವವೇ ಸರಿ!  ಅಲ್ಲಿದ್ದಷ್ಟು ದಿನಗಳೂ ನಮ್ಮ ಮನೆಯಲ್ಲಿ ಒಂದಿಲ್ಲೊಂದು ಮೀನಿನ ಅಡುಗೆ ಇದ್ದೇ ಇರುತ್ತಿತ್ತು!  ನಮ್ಮ ಜನ್ಮದಲ್ಲಿಯೇ ಅಷ್ಟೊಂದು ವಿಧದ ಮೀನುಗಳನ್ನು ನಾವು ತಿಂದಿರಲಿಲ್ಲ, ಬಹುಶಃ ಇನ್ನು ಮುಂದೆ ತಿನ್ನಲಾಗುವುದೂ ಇಲ್ಲವೇನೋ!

ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಹೋಟೆಲ್ಲಿನ ಹಿಂಭಾಗದ ಸಮುದ್ರ ತೀರದ ಕಡೆಗಿನ ಗೇಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭದ್ರತಾ ರಕ್ಷಕರು ಅಲ್ಲಿ ನಿಲ್ಲದೆ ಮಾಯವಾಗಿ ಜನರೇಟರ್ ರೂಮಿನಲ್ಲೋ, ಆಡಳಿತ ಕಚೇರಿಯ ಕಟ್ಟಡದ ಒಂದು ಮೂಲೆಯಲ್ಲೋ ಅವಿತು ನಿದ್ರೆ ಹೊಡೆಯುತ್ತಿದ್ದರು.  ಧಿಡೀರೆಂದು ನಾನೊಮ್ಮೆ ರಾತ್ರಿಯಲ್ಲಿ ಭೇಟಿ ಕೊಟ್ಟಾಗ ಅಲ್ಲಿರಬೇಕಾದವರು ಸಿಗದೇ ಎಲ್ಲಿದ್ದಾರೆಂದು ಹುಡುಕಬೇಕಾಗುತ್ತಿತ್ತು, ಇದಕ್ಕೆ ಕಾರಣವೇನೆಂದು ಹುಡುಕಿದಾಗ ಕಂಡು ಬಂದ ವಿಷಯಗಳು ಕುತೂಹಲಕಾರಿಯಾಗಿದ್ದವು.  ಅಮಾವಾಸ್ಯೆಯ ದಿನಗಳಲ್ಲಿ ಕಡಲು ಶಾಂತವಾಗಿ ದಡದಿಂದ ಸುಮಾರು ಐವತ್ತು ಮೀಟರಿನಷ್ಟು ದೂರಕ್ಕೆ ಕಡಲಿನ ನೀರು ಹಿಂದೆ ಸರಿಯುತ್ತಿತ್ತು.  ಆ ಸಮಯದಲ್ಲಿ ಕಡಲಿನ ಆಮೆಗಳು, ವಿಚಿತ್ರ ರೀತಿಯ ಮೊಂಡು ಬಾಲದ ಹಾವುಗಳು, ಧಡೂತಿ ಕಪ್ಪೆಗಳು ದಡದಲ್ಲಿ ವಿಹರಿಸುತ್ತಿದ್ದವು.  ಅಗಾಧ ಕಡಲಿನ ಕತ್ತಲಿನ ನೀರವತೆಯ ಜೊತೆಗೆ ಈ ಕಡಲ ಪ್ರಾಣಿಗಳ ಓಡಾಟವೂ ನಮ್ಮ ಭದ್ರತಾ ರಕ್ಷಕರ ಭಯಕ್ಕೆ ಕಾರಣವಾಗಿದ್ದವು.  ಇನ್ನು ಹುಣ್ಣಿಮೆಯ ದಿನ ಬಂತೆಂದರೆ ಸಾಕು, ಅದುವರೆಗೂ ತಣ್ಣಗಿರುತ್ತಿದ್ದ ಕಡಲು ಒಮ್ಮೆಗೆ ಅಬ್ಬರಿಸಿ ಬೊಬ್ಬಿರಿಯುತ್ತಿತ್ತು.  ಅಗಾಧ ಕಡಲಿನಲ್ಲಿ ಬೀಸಿ ಬರುತ್ತಿದ್ದ ದೈತ್ಯ ಅಲೆಗಳು ಎಲ್ಲೆಲ್ಲಿಂದಲೋ ಬೇಕು ಬೇಡದನ್ನೆಲ್ಲಾ ಹೊತ್ತು ತಂದು ಹೋಟೆಲ್ಲಿನ ಹಿಂಬದಿಯ ಗೇಟಿನ ಬದಿಗೆಸೆಯುತ್ತಿದ್ದವು.  ಸುಮಾರು ನೂರು ಮೀಟರಿನಷ್ಟು ಮೇಲಕ್ಕೆ ಬರುತ್ತಿದ್ದ ಕಡಲಿನ ಉಪ್ಪುನೀರು ಒಮ್ಮೊಮ್ಮೆ ಹಿಂಬದಿಯ ಗೇಟನ್ನೂ ದಾಟಿ ಈಜುಕೊಳವನ್ನು ಗಬ್ಬೆಬ್ಬಿಸಿ, ಒಮ್ಮೊಮ್ಮೆ ಕಡಲ ದಂಡೆಯ ಕಡೆಗಿದ್ದ ಕೊಠಡಿಗಳೊಳಕ್ಕೂ ಪ್ರವೇಶಿಸುತ್ತಿತ್ತು. ಆಗೆಲ್ಲಾ ಹೋಟೆಲ್ಲಿನ ಆವರಣದ ತುಂಬಾ ಕಡಲಿನ ಏಡಿಗಳು, ಆಮೆಗಳು, ಕೆಲವು ಬಗೆಯ ಹಾವುಗಳು, ಥರಾವರಿ ಮೀನುಗಳು ಕಂಡುಬರುತ್ತಿದ್ದವು.  ಎಲ್ಲಕ್ಕಿಂತ ಹೆಚ್ಚಾಗಿ ತೊಂದರೆ ಕೊಡುತ್ತಿದ್ದದ್ದು ಲೋಳೆ ಮೀನು, ಕಡಲಿನ ಅಬ್ಬರದ ಅಲೆಗಳೊಡನೆ ತೇಲಿಬರುತ್ತಿದ್ದ ಅವುಗಳು ಎಲ್ಲೋ ಒಂದೆಡೆ ನೀರಿಡುವ ಕಡೆಯಲ್ಲಿ ಮತ್ತು ಈಜುಕೊಳದಲ್ಲಿ ಆಶ್ರಯ ಪಡೆದು ಕಾಲಿಟ್ಟವರಿಗೆ ಅಂಟಿಕೊಂಡುಬಿಡುತ್ತಿದ್ದವು.  ನಂತರದ್ದು ಫಜೀತಿಯೋ ಫಜೀತಿ, ಆ ಲೋಳೆಮೀನು ಅಂಟಿಕೊಂಡ, ಹರಿದಾಡಿದ ಕಡೆಯಲ್ಲೆಲ್ಲಾ ಚರ್ಮ ಕೆಂಪಗಾಗಿ ಭಯಂಕರ ಕೆರೆತ ಉಂಟಾಗುತ್ತಿತ್ತು.  ಸಾಕಷ್ಟು ಜನ ವಿದೇಶಿ ಅತಿಥಿಗಳು ಕೂಡಾ ಈ ಲೋಳೆಮೀನಿನ ಆತಿಥ್ಯ ಅನುಭವಿಸಿ ಮೊದಲೇ ಕೆಂಪಾಗಿದ್ದ ಅವರ ಚರ್ಮ ಇನ್ನಷ್ಟು ಕೆಂಪಗಾಗಿ ರಕ್ತ ತೊಟ್ಟಿಕ್ಕುತ್ತಿತ್ತು.

ಒಮ್ಮೆ ಮಧುಚಂದ್ರಕ್ಕೆಂದು ಇಟಲಿಯಿಂದ ಯುವ ಜೋಡಿಯೊಂದು ಆ ಹೋಟೆಲ್ಲಿನಲ್ಲಿ ಉಳಿದುಕೊಂಡಿತ್ತು.  ಹರೆಯದ ಹುಮ್ಮಸ್ಸಿನಲ್ಲಿ ಚೆನ್ನಾಗಿಯೇ ಪ್ರಣಯ ಕೇಳಿಯನ್ನಾಡುತ್ತಿದ್ದ ಆ ಉನ್ಮತ್ತ ಜೋಡಿ ಈಜುಕೊಳದಲ್ಲಿ ಈಜು ಹೊಡೆಯುವಾಗಲೂ ಸಹಾ ಬಿಯರ್ ಕುಡಿಯುತ್ತಲೇ ಒಬ್ಬರಿಗೊಬ್ಬರು ತಬ್ಬಿಕೊಂಡು, ಸಿಹಿಚುಂಬನಗಳ ವಿನಿಮಯ ಮಾಡಿಕೊಳ್ಳುತ್ತಿದ್ದರು.
ಕದ್ದು ನೋಡುವ ಕೆಟ್ಟ ಚಾಳಿಯಿದ್ದ ನಮ್ಮ ಭದ್ರತಾ ರಕ್ಷಕರಿಗಂತೂ ಅವರಿಬ್ಬರೂ ಮನರಂಜನೆಯ ವಸ್ತುವಾಗಿದ್ದರು.  ಹೀಗಿರುವಾಗ ಒಮ್ಮೆ ಮಧುಪಾನದ ಜೊತೆಗೆ ಗೆಳೆಯನ ಚುಂಬನದಿಂದಲೂ ಉನ್ಮತ್ತಳಾಗಿದ್ದ ಯುವತಿ ಈಜುಕೊಳದಿಂದ ಹೊರ ಬಂದು ಮಧ್ಯದಲ್ಲಿ ಅಳವಡಿಸಲಾಗಿದ್ದ ಅಲ್ಯುಮಿನಿಯಂ ಕಂಬಿಯ ಮೇಲೆ ನಿಂತು ಒಂದೇ ಕಾಲಿನಲ್ಲಿ ನರ್ತಿಸುತ್ತಾ ತನ್ನ ಇನಿಯನಿಗೆ ತಾನೂ ಬರುವಂತೆ ಸನ್ನೆ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಕಾಲು ಜಾರಿ ಬಿದ್ದ ಆಕೆಯ ಮರ್ಮಾಂಗ ಅಲ್ಯುಮಿನಿಯಂ ಕಂಬಿಯ ಮೇಲೆ ಬಿದ್ದು ಕ್ಷಣಾರ್ಧದಲ್ಲಿ ಇಡೀ ಈಜುಕೊಳ ರಕ್ತದಿಂದ ಕೆಂಪಾಗಿತ್ತು.  ಅಸಾಧ್ಯ ನೋವಿನಿಂದ ಆಕೆ ಚೀರಾಡುತ್ತಿದ್ದಳು, ತಕ್ಷಣ ಸ್ಥಳಕ್ಕೆ ಧಾವಿಸಿದ ನಮ್ಮ ಭದ್ರತಾ ರಕ್ಷಕರ ತಂಡ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದೆವು.  ಅಷ್ಟೆತ್ತರದಿಂದ ಬಿದ್ದ ರಭಸಕ್ಕೆ ಆಕೆಯ ಜನನಾಂಗ ಸಂಪೂರ್ಣ ಜರ್ಝರಿತವಾಗಿ ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಯೊಂದಕ್ಕೆ ಶಸ್ತ್ರಚಿಕಿತ್ಸೆಗಾಗಿ ಕಳುಹಿಸಲಾಗಿತ್ತು.  ಆಕೆಯ ಅಜಾಗರೂಕತೆಯಿಂದಾಗಿ ಅವರ ಮಧುಚಂದ್ರದ ಕನಸು ಸಂಪೂರ್ಣವಾಗಿ ಭಗ್ನವಾಗಿತ್ತು. ಆ ರೀತಿಯ ಅಪಘಾತವೊಂದನ್ನು ಈ ಹಿಂದೆ ನೋಡಿರಲಿಲ್ಲ, ಮತ್ತೆ ಇದುವರೆಗೂ ನೋಡಲೂ ಇಲ್ಲ!

ಮತ್ತೊಂದು ಘಟನೆಯಲ್ಲಿ ಮೂವರು ವಿದೇಶೀಯರು ಒಬ್ಬಳು ಕಪ್ಪುಸುಂದರಿಯನ್ನು ಹೋಟೆಲ್ಲಿಗೆ ಕರೆತಂದಿದ್ದರು.  ಅವಳೋ ಥೇಟ್ ನಮ್ಮ ಬೇಲೂರಿನ ಶಿಲಾಬಾಲಿಕೆಯನ್ನೂ ನಾಚಿಸುವಂತಿದ್ದಳು. ಅವಳನ್ನು ಕೊಠಡಿಗೆ ಕರೆದೊಯ್ದ ವಿದೇಶೀಯರು ತಾವೂ ಮಧ್ಯಪಾನ ಮಾಡಿ, ಅವಳಿಗೂ ಚೆನ್ನಾಗಿ ಕುಡಿಸಿ, ನಶೆಯಲ್ಲಿ ಸಾಮೂಹಿಕವಾಗಿ ಭೋಗಿಸಲಾರಂಭಿಸಿದ್ದಾರೆ.  ಮೊದ ಮೊದಲು ಸಣ್ಣಪುಟ್ಟ ಶಬ್ಧಗಳು ಕೇಳುತ್ತಿದ್ದಾಗ ನಮ್ಮ ಭದ್ರತಾ ರಕ್ಷಕರು ಒಬ್ಬರನ್ನೊಬ್ಬರು ನೋಡಿಕೊಂಡು ಮುಸಿಮುಸಿ ನಗುತ್ತಿದ್ದರು.  ಆದರೆ ಕ್ರಮೇಣ ಆ ಹೆಣ್ಣಿನ ಆಕ್ರಂದನ ಜೋರಾಗಿ ಅವಳು ಸಹಾಯಕ್ಕಾಗಿ ಅಂಗಲಾಚುತ್ತ ಕೂಗಾಡುತ್ತಿದ್ದಾಗ ಏನು ಮಾಡಬೇಕೆಂದು ತಿಳಿಯದೆ ಕಚೇರಿಯಲ್ಲಿದ್ದ ನನ್ನ ಬಳಿಗೆ ಬಂದು ವಿಷಯ ತಿಳಿಸಿದ್ದರು.  ಸಮಯ ಅದಾಗಲೇ ರಾತ್ರಿಯ ಹತ್ತಾಗಿತ್ತು, ನಾನು ಮನೆಗೆ ಹೋಗಲು ಸಿದ್ಧನಾಗುತ್ತಿದ್ದೆ. ಒಡನೆಯೇ ಹೋಟೆಲ್ಲಿನ ಆವರಣದಲ್ಲಿಯೇ ಇದ್ದ ವ್ಯವಸ್ಥಾಪಕರ ಮನೆಗೆ ಹೋಗಿ ಅವರಿಗೆ ವಿಷಯ ತಿಳಿಸಿ, ಮುಂದೆ ಏನು ಮಾಡಬೇಕೆಂದು ಕೇಳಿದ್ದೆ.  ನನ್ನ ಜೊತೆಗೇ ಬಂದ ಅವರು "ಮಾಸ್ಟರ್ ಕೀ" ತೆಗೆದುಕೊಂಡು ಬರುವಂತೆ ಆದೇಶಿಸಿದ್ದರು.  ನಾವು ಆ ವಿದೇಶೀಯರು ತಂಗಿದ್ದ ಕೊಠಡಿಯ ಬಳಿಗೆ ಬರುವ ಹೊತ್ತಿಗೆ ಕೊಠಡಿಯೊಳಗಿದ್ದ ಆ ಹೆಣ್ಣಿನ ಆಕ್ರಂದನ ಮುಗಿಲು ಮುಟ್ಟಿತ್ತು!  ಸಹಾಯ ಮಾಡಿರೆಂದು ಕಾಪಾಡಿರೆಂದು ಜೋರಾಗಿ ಕಿರುಚುತ್ತಿದ್ದಳು, ಕೊಠಡಿಯೊಳಗೆ ದೊಡ್ಡದೊಂದು ಸಂಘರ್ಷವೇ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು. ವ್ಯವಸ್ಥಾಪಕರ ಆದೇಶದಂತೆ ಕೊಠಡಿಯ ಬಾಗಿಲನ್ನು "ಮಾಸ್ಟರ್ ಕೀ" ಬಳಸಿ ತೆಗೆಯಲು ಹೋದರೆ ಅದು ಒಳಗಿನಿಂದ ಡಬಲ್ ಲಾಕ್ ಆಗಿತ್ತು!   ಕೊನೆಗೆ ವಿಧಿಯಿಲ್ಲದೆ  ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಬೇಕಾಯಿತು,  ಅದಾಗಲೇ ವ್ಯವಸ್ಥಾಪಕರ ಕಚೇರಿಯಿಂದ ಪೊಲೀಸ್ ಠಾಣೆಗೆ ಕರೆ ಮಾಡಿ ಹೋಟೆಲ್ಲಿಗೆ ತಕ್ಷಣ ಬರುವಂತೆ ವಿನಂತಿಸಲಾಗಿತ್ತು. ನಾವು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಅಲ್ಲಿನ ದೃಶ್ಯ ಭೀಭತ್ಸಕರವಾಗಿತ್ತು!  ಬೆತ್ತಲಾಗಿದ್ದ ಮೂವರು ವಿದೇಶೀಯರು ಮತ್ತು ಕಪ್ಪುಸುಂದರಿಯ ನಡುವೆ ದೊಡ್ಡ ಹೋರಾಟವೇ ನಡೆದಿತ್ತು, ಮೂವರ ಆಕ್ರಮಣದಿಂದ ಸಂಪೂರ್ಣ ಘಾಸಿಗೊಂಡಿದ್ದ ಕಪ್ಪುಸುಂದರಿಯ ಮೈಯೆಲ್ಲಾ ರಕ್ತಮಯವಾಗಿದ್ದು, ಜನನಾಂಗದಿಂದ ರಕ್ತ ಸುರಿಯುತ್ತಿತ್ತು!  ಕಾಡುಪ್ರಾಣಿಗಳಂತೆ ಅವಳ ಮೇಲೆ ಆಕ್ರಮಣ ಮಾಡಿದ್ದ ವಿದೇಶೀಯರು ಆ ಹೆಣ್ಣಿನ ದೇಹದ ಇಂಚಿಂಚನ್ನೂ ಗಾಯಗೊಳಿಸಿದ್ದರು. ಅದೇ ಸಮಯಕ್ಕೆ ತಮ್ಮ ಸಿಬ್ಬಂದಿಯೊಡನೆ ಆಗಮಿಸಿದ ಪೊಲೀಸ್ ಇನ್ಸ್ಪೆಕ್ಟರ್ ಆ ಮೂವರು ವಿದೇಶೀಯರನ್ನು ಬಂಧಿಸಲು ಮುಂದಾದಾಗ ಉನ್ಮತ್ತರಾಗಿದ್ದ ಅವರು ಪೊಲೀಸರ ಮೇಲೆಯೇ ಕೈ ಮಾಡಲು ಮುಂದಾಗಿದ್ದರು.  ನಮ್ಮ ಭದ್ರತಾ ಸಿಬ್ಬಂದಿಯ ಸಹಕಾರದೊಡನೆ ಅವರನ್ನು ಬಂಧಿಸಿ ಕಪ್ಪುಸುಂದರಿಯನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದ್ದರು.  ಬಹುಶಃ ವೇಶ್ಯೆಯೊಬ್ಬಳ ಮೇಲೆ ನಡೆದ ಅತ್ಯಂತ ಹೇಯ ಅತ್ಯಾಚಾರ ಅದಾಗಿತ್ತು!

Wednesday, July 29, 2015

ಎಣ್ಣೆ ತೀರಿದ ಮೇಲೆ,,,,,,,,,,,,




ಎಣ್ಣೆ ತೀರಿದ ಮೇಲೆ 
ದೀಪ ಆರಲೇಬೇಕಲ್ಲವೇ?
ಪಯಣ ಮುಗಿದ ಮೇಲೆ 
ಗಮ್ಯ ಸೇರಲೇಬೇಕಲ್ಲವೇ?
ನಶ್ವರ ದೇಹ ಅಳಿದ ಮೇಲೆ 
ಅವರ ಸಂದೇಶ ಅಮರವಲ್ಲವೇ?
ಕೋಟಿ ಜನರ ಮನದ ತುಂಬಾ 
ಅವರ ನೆನಪಿಂದು ತುಂಬಿಲ್ಲವೇ?
ಮಧುರ ಮಾತುಗಳಿಂದ ಸಜ್ಜನಿಕೆ
ಸಚ್ಚಾರಿತ್ರ್ಯಗಳಿಂದ ವಿಶ್ವ ಮಾನವ 
ರಾಗಿರುವ ಕಲಾಂಜಿ ನಿಮಗಿದೋ 
ಅಶ್ರುತರ್ಪಣ ಅಮರವಾದಿರಿ ನೀವು!
ನಿಮ್ಮ ಸರಳತೆ ಮಗುವಿನ ಮುಗ್ಧತೆ 
ದಾರಿದೀಪವಾಗಲಿ ಯುವಜನತೆಗೆ .😣

Saturday, July 25, 2015

ಸಾಗಬೇಕಿದೆ ನಾ ದೂರ ದೂರ ,,,,,,,,,,,,,


ಸಾಗಬೇಕಿದೆ ನಾ ದೂರ ದೂರ 
ಕೂರಬೇಕಿದೆ ಆತ್ಮದ ಹತ್ತಿರ 
ತಳೆಯಬೇಕಿದೆ ಗಟ್ಟಿ ನಿರ್ಧಾರ 
ಸೇರಬೇಕಿದೆ ಆ ದೂರ ತೀರ!

ಮರೆಯಬೇಕಿದೆ ನಿತ್ಯದ ಜಂಜಡ 
ಮೆರೆಯಬೇಕಿದೆ ಸತ್ಯದ ಸಂಗಡ 
ತಿಳಿಯಾಗಬೇಕಿದೆ ಮನದಾಳದ ಬಗ್ಗಡ  
ಖಾಲಿಯಾಗಬೇಕಿದೆ ಎದೆಯೊಳಗಿನ ಕಚಡ!  

ಸಾಕಾಗಿದೆ ನೋಡಿ ಜಗದ ವಿಕಾರ
ನನಗಿದೆ ನನ್ನದೇ ಆದ ಆಚಾರ
ಚಿಂತಿಸಬೇಕಿದೆ ಮುಂದಿನ ವಿಚಾರ 
ಕೊಡಬೇಕಿದೆ ಹೊಸ ಸಮಾಚಾರ!

 ಕೇಳಬೇಕಿದೆ ಮನದ ಪಿಸುಮಾತ
ಹೇಳಬೇಕಿದೆ ಹರುಷದ ಹೊಸಮಾತ 
ಅಳಿಸಬೇಕಿದೆ ಹಳೆಯ   ಗಾಯವನ್ನ  
ಹಾಡಬೇಕಿದೆ ಹೊಸತು ಹೊಸ ಗಾನ! 


Wednesday, July 22, 2015

ಸುಂಟ್ರುಗಾಳಿ ಸುತ್ತಿಸುತ್ತಿ ,,,,,,,,,,,,,,



ಸುಂಟ್ರುಗಾಳಿ ಸುತ್ತಿಸುತ್ತಿ 
ಕಸ ಕಡ್ಡಿ ಎಲ್ಲಾ ಎತ್ತಿ 
ಕಣ್ಣೇ ಕಾಣ್ದಂಗಾಗೈತೆ 
ಕಿವಿ ಕೇಳ್ದಂಗಾಗೈತೆ!
ಹೆಂಗೆ ನೋಡ್ಲಿ ನಿನ್ನ ನಾನು ತಿಮ್ಮಿ !

ನಿನ್ನ ನಗು ಕಂಡ್ರೆ  ಸಾಕು
ನಿನ್ನ ನೆರಳು ಬಿದ್ರೆ ಸಾಕು 
ಸುಡು ಬಿಸ್ಲ ಮರಳುಗಾಡು   
ಆಗೋಯ್ತೈತೆ ಮಲೆನಾಡು!
ಯಾಕೆ ನೀನು ಬರ್ನೇ ಇಲ್ಲಾ ತಿಮ್ಮಿ! 

ಚುಕ್ಕಿಗಳ್ನ ಎಣ್ಸಿ ಎಣ್ಸಿ               
ಕನ್ಸುಗಳ್ನ ಪೋಣ್ಸಿ ಪೋಣ್ಸಿ 
ಕಾದು ಕಣ್ಣು ಕೆಂಪಾಗೈತೆ
ನಿಂತಾ ನೆಲ ಸುಟ್ಟೋಗ್ತೈತೆ 
ತಂಪಾಗ್ ನೀನು ಬಾರೇ ಬೇಗ ತಿಮ್ಮಿ!  :-)

Tuesday, July 21, 2015

ಮುಂಜಾನಿಂದ ಸಂಜೀವರ್ಗೂ ,,,,,,,,,,,,,,,,,,,,,,,



ಎಂಗಿದ್ದೀಯೇ ಎಲ್ಲಿದ್ದೀಯೇ ತಿಮ್ಮಿ
ಹುಟ್ಟಿದಬ್ಬ ಅಂತಾ ಗೆಳ್ಯಾರೆಲ್ರೂ
ಮ್ಯಾಲಿಂದ್ಮೇಲೆ ನನ್ನ ಹರಸ್ತಾ ಅವ್ರೆ
ಕಳೆದೋದ್ ವಯಸ್ನಾ ಹೇಳ್ತಾ ಅವ್ರೆ
ನನ್  ಕಣ್ಣಾಗ್ ಕಂಬ್ನಿ  ತುಂಬ್ತಾ ಅವ್ರೆ
ನೀನು ಮಾತ್ರ ಬರ್ನೇ ಇಲ್ಲಾ ತಿಮ್ಮಿ!

ಮುಂಜಾನಿಂದ ಸಂಜೀವರ್ಗೂ
ಕೆಲ್ಸ ಮಾಡಿ ಮನೇಗ್ ಬಂದ್ರೂ
ಗೆಳೆಯರ್ ಹರ್ಕೆ ನಿಂತೇ ಇಲ್ಲಾ
ಅಮ್ಮನ್ ಗುಡ್ಯಾಗ್ ಹೊಡ್ದಂಗ್ ಘಂಟೆ
ಶಂಖ ಊದಿ ಬಾರ್ಸ್ದಂಗ್ ಜಾಗ್ಟೆ
 ಬತ್ತಾನೇ ಅವೇ ಹರ್ಕೆಗೋಳು!

ಬಾಯಿ ಮುಚ್ಗೊಂಡ್ ಎಲ್ಲೋದ್ಯೇ ನೀ
ಮುಖಾ ಮುಚ್ಗೊಂಡ್ ಎಲ್ಕುಂತ್ಯೇ ನೀ
ಮಾತು ಬುಟ್ಟು ನನ್  ಸಂಗಾ ಬುಟ್ಟು
ಹರ್ಕೆ ಗಿರ್ಕೆ ಎಲ್ಲಾ ಮರ್ತೇ ಬುಟ್ಟು
ಹೂವಾಗಿದ್ದೋಳ್ ಬಂಡೆ ಕಲ್ಲಾಗ್ಬುಟ್ಟು
ತುಂಟಿ ನಿನ್ನಾ ತಂಟೆ ತೀಟೆ ಎಲ್ಲಾ ಮರ್ತು
ಎಲ್ಲಿದ್ದೀಯೇ,,,,,,,,,ಅದೆಂಗಿದ್ದೀಯೇ ತಿಮ್ಮಿ!  :-( 

Monday, July 20, 2015

ಜೀವನದ ಪಾಠಶಾಲೆಯಲಿ ನಾನಿನ್ನೂ ಮಗುವಾಗಿರುವೆ!



ಜೀವನದ ಪಾಠಶಾಲೆಯಲಿ 
ನಾನಿನ್ನೂ ಮಗುವಾಗಿರುವೆ!
ಅಂಬೆಗಾಲಿಡುತ ಅತ್ತಿತ್ತ 
ಸುತ್ತಮುತ್ತ ನೋಡುತಾ 
ದಿನದಿನವೂ ಒಂದೊಂದು 
ಪಾಠವ ಕಲಿಯುತಿರುವೆ !

ಜನ್ಮದಾತರಿಗೆ ವಂದಿಸುತ 
ಅವರು ಪಟ್ಟ ಕಷ್ಟಗಳಿಗೆ 
ಮನಸಾರೆ ಮರುಗುತಾ 
ಇಷ್ಟದೈವಕೆ ವಂದಿಸುತಾ 
ಹರಸೆಂದು ಬೇಡುತ್ತಾ 
ನಾನಿನ್ನೂ ಅಂಬೆಗಾಲಿಡುತ್ತಿರುವೆ!

ಬಾಳಯಾನದಿ ಬಂದವರ 
ಮನದಲಿ ನಿಂದವರ
ಕೈಹಿಡಿದು ನಡೆಸಿದವರ 
ತಪ್ಪುಗಳ ತಿದ್ದಿದವರ
ಹರಸಿ ಹಾರೈಸಿದವರ 
ನಂಬಿಸಿ ಬೆನ್ನಿಗಿರಿದವರ 
ಕಟುಮಾತುಗಳಲಿ ಮನವ 
ಕರುಣೆಯಿಲ್ಲದೆ ಕೊಂದವರ 
ಅನವರತ ನೆನೆಯುತಿರುವೆ!

ಕಲಿತಿದ್ದು ತೃಣವಷ್ಟೇ 
ಅರಿಯಬೇಕಿದೆ ಬೆಟ್ಟದಷ್ಟು 
ಹಸಿರುಟ್ಟ  ಹಾದಿಯಲಿ          
ದೂರಸಾಗಿ  ಬಂದಿರುವೆ 
ಮರಳುಗಾಡಲಿ ನಿಂದಿರುವೆ 
ನಕ್ಕಷ್ಟೇ ನೊಂದಿರುವೆ 
ಮುಂದಿರುವ ಹಾದಿಯಲಿ 
ಅಡಗಿರುವ ಗುಟ್ಟೇನೋ! 

ಮುಂದಡಿಯ ಇಟ್ಟಿರುವೆ 
ದೈವದಾಶೀರ್ವಾದ ಬೇಡಿರುವೆ 
ಭರವಸೆಯ ಹೊತ್ತಿರುವೆ 
ಕಣ್ಮುಂದೆ ಗುರಿಯನಿಟ್ಟಿರುವೆ
ತಲುಪುವ ಆಸೆಯಲಿರುವೆ 
ಬರುತಿರಲಿ ಜನ್ಮದಿನಗಳು 
ನನಸಾಗುವವರೆಗೆ ಕನಸುಗಳು!
  
ಜೀವನದ ಪಾಠಶಾಲೆಯಲಿ 
ನಾನಿನ್ನೂ ಮಗುವಾಗಿರುವೆ!

Sunday, July 19, 2015

ಮುಂಜಾನೆಯ ಸಿಹಿ ಮಬ್ಬಿನಲಿ ,,,,,,,,,,,,,,,,,,




 ಮುಂಜಾನೆಯ ಸಿಹಿ ಮಬ್ಬಿನಲಿ 
ಉದಯಿಸಿದ ಹೊಸ ರಾಗ
ಅರಳಿಸುತ ಹೊಸ ಮೋಹ 
ಹೃದಯದಿ  ಹೊಸ  ದಾಹ 
ಹೊತ್ತೇರಿದಂತೆ ಮತ್ತೇರಿಸುತ
ನಿನ್ನೊಲವಿನ ಸವಿ ಆಕರ್ಷಣೆ 
ಗಂಟು ಹಾಕಿತ್ತು ಬಿಡದಂತೆ!

ಮುಸ್ಸಂಜೆಯ ಮಧುರ ನಶೆಯಲ್ಲಿ 
ನೀನಿರಲು ಮನದ ಸನಿಹದಲ್ಲಿ 
ಕೇಳಲು ತವಕಿಸುತಿರೆ ಸವಿನುಡಿಯ 
ನೀನಾಡಿದ ಬಿರು ನುಡಿಗಳು 
ಎದೆಗೆ ತಟ್ಟಿರಲು ಬಾಣದಂತೆ 
ಹೃದಯ ನೊಂದಿರಲು ನೋವಲ್ಲಿ 
ಬಿರುಕು ಕಂಡಿತೆ ಬಾಂಧವ್ಯದಲ್ಲಿ!

ಎಂದೆಂದೂ ಬಿಟ್ಟಿರದೆ ನಿನ್ನನು
ಬಾಳುವಂತೆ ಕಂಡ ಕನಸನು 
ಚಿವುಟಿತೆ ಕ್ಷಣಕಾಲದ ಸಿಡುಕು 
ಸವಿಬಾಳಿಗೆ ತಂದು ಕೆಡುಕು 
ಕಣ್ಣಿಂದ ಜಾರಿದ ಕಂಬನಿಯ ಬಿಂದು
ಸಿಹಿಯ ಕಹಿಯಾಗಿಸಿ ಮೆರೆಯಿತಂದು!
ಬರಿ ನೆನಪುಗಳ ಅಟ್ಟಹಾಸವಿಂದು!!  :-( 

ಮತ್ತದೇ ಮುಂಜಾನೆ,,,,,,,,,,,,,,,,,

ಮತ್ತದೇ ಮುಂಜಾನೆ
ಮತ್ತದೇ ಧಾವಂತ
ಮತ್ತದೇ ಸ್ಟ್ರಾಂಗ್ ಕಾಫಿ
ಮತ್ತದೇ ಟಿವಿ ನ್ಯೂಸು
ಮತ್ತದೇ ಫೇಸ್ಬುಕ್ಕು ವಾಟ್ಸಪ್ಪು
ಮತ್ತದೇ ಬಿಸಿ ಸ್ನಾನ
ಮತ್ತದೇ ಸೂಟು ಬೂಟು
ಮತ್ತದೇ ರಸ್ತೆ ಕಾರು
ಮತ್ತದೇ ಕಚೇರಿ ಕೆಲಸ
ಮತ್ತದೇ ತಿಂಡಿ ಊಟ
ಮತ್ತದೇ ಮುಸ್ಸಂಜೆ
ಮತ್ತದೇ ಟ್ರಾಫಿಕ್
ಮತ್ತದೇ ಹಳೆ ಮನೆ
ಮತ್ತದೇ ಟಿವಿ ನ್ಯೂಸು
ಮತ್ತದೇ ಫೇಸ್ಬುಕ್ಕು ವಾಟ್ಸಪ್ಪು
ಮತ್ತದೇ ಬ್ಲಾಗು ಲೋಕ
ಮತ್ತದೇ ನೀರವ ರಾತ್ರಿ
ಮತ್ತದೇ ಅಸಹನೀಯ ಮೌನ!
ಮತ್ತದೇ ಅರೆ ನಿದ್ದೆ
ಮತ್ತದೇ ಅರೆ ಎಚ್ಚರ
ಮತ್ತದೇ ಕನಸುಗಳು
ಮತ್ತದೇ ಮುಂಜಾವು
ಮತ್ತದೇ ಯಾಂತ್ರಿಕ ಬದುಕು!!
ಮತ್ತದೇ ಅಸಹಾಯಕ ನಿಟ್ಟುಸಿರು!!!
ಮತ್ತದೇ ಉದ್ಗಾರ
ಮತ್ತದೇ ಪ್ರಶ್ನೆಗಳು
ಲೈಫು ಇಷ್ಟೇನಾ!!!!!  :-( :-( :-(

Friday, July 17, 2015

ನೆನಪಿನಾಳದಿಂದ : ೨೬. ಹೊಸಬೆಳಕು,,,,,, ಮೂಡುತಿದೆ,,,,,

ನಿನ್ನೆ ಬೆಳಿಗ್ಗೆ ಎದ್ದವನು ಮಾಮೂಲಿನಂತೆ ಕಾಲು ಲೀಟರ್ ಹಾಲಿನ ಸ್ಟ್ರಾಂಗ್ ಕಾಫಿ ಮಾಡಿ, ಜೊತೆಗೆ ನಾಲ್ಕು ಬಿಸ್ಕತ್ ತಿನ್ನುತ್ತಾ ಟಿವಿಯಲ್ಲಿ ನ್ಯೂಸ್ ನೋಡುತ್ತಾ,,ಹಾಗೆಯೇ ನನ್ನ ಸ್ಮಾರ್ಟ್ ಫೋನಿನಲ್ಲಿ ಫೇಸ್ ಬುಕ್ ಮೇಲೆ ಕಣ್ಣಾಡಿಸುತ್ತಾ ಕುಳಿತಿದ್ದೆ.  ಕೆಲಸಕ್ಕೆ ಹೋಗಲು ಇನ್ನೂ ಸಮಯವಿತ್ತು, ನ್ಯೂಸ್ ಚಾನಲ್ಲಿನಲ್ಲಿ ಕೇಜ್ರಿವಾಲನ ಅರಿಭಯಂಕರ ಜಾಹೀರಾತು ಬರುತ್ತಿದ್ದಂತೆಯೇ ಉದಯ ಟಿವಿಗೆ ಬದಲಾಯಿಸಿದೆ.  ಅಲ್ಲಾಗಲೇ ಬೆಳಗಿನ ಕಾರ್ಯಕ್ರಮಗಳೆಲ್ಲಾ ಮುಗಿದು ಲೋಕದ ಸಮಸ್ತರಿಗೂ ಭವಿಷ್ಯವನ್ನು ಹೇಳಿ, ಇದ್ದಬದ್ದ ದೇವಸ್ಥಾನಗಳನ್ನೆಲ್ಲಾ ದರ್ಶನ ಮಾಡಿಸಿ ಯಾವುದೋ ಹಳೆಯ ಚಿತ್ರದ ಟೈಟಲ್ ಕಾರ್ಡ್ ತೋರಿಸುತ್ತಿದ್ದರು.  ಹಾಗೆಯೇ ನೋಡುತ್ತಿದ್ದಂತೆ ಆ ಚಲನಚಿತ್ರ ನಮ್ಮ ಕನ್ನಡದ ಕಣ್ಮಣಿ, ಅಣ್ಣಾವ್ರು,,ರಾಜ್ ಕುಮಾರ್, ಸರಿತಾ ಅಭಿನಯದ "ಹೊಸಬೆಳಕು" ಎಂದು ಗೊತ್ತಾಯ್ತು!  ಚಿತ್ರ ಚೆನ್ನಾಗಿದ್ದುದರಿಂದ ಫೇಸ್ ಬುಕ್ ಪಕ್ಕಕ್ಕಿಟ್ಟು, ಹಾಗೆಯೇ ಕಾಫಿ ಕುಡಿಯುತ್ತಾ ನೋಡುತ್ತಾ ಕುಳಿತೆ.  

ಚಿತ್ರದಲ್ಲಿ ರಾಜ್ ಕುಮಾರ್ ದೆಹಲಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ, ರಜಕ್ಕೆಂದು ಮೈಸೂರಿನಲ್ಲಿದ್ದ ಅಕ್ಕನ ಮನೆಗೆ ಬರುತ್ತಾರೆ.  ಅಲ್ಲಿ ಭಾವನ ಮೊದಲ ಹೆಂಡತಿಯ ಮಗಳು ವತ್ಸಲಾಳ ಪ್ರೇಮಪಾಶದಲ್ಲಿ ಸಿಲುಕುತ್ತಾರೆ.  ಅಕ್ಕನ ಮಗಳು ನಾಗವೇಣಿಯೂ ಅಣ್ಣಾವ್ರಿಗೆ ಲೈನು ಹೊಡೆಯುತ್ತಿರುತ್ತಾಳೆ.  ಆದರೆ ಅಣ್ಣಾವ್ರ ದ್ರಷ್ಟಿ ಮಾತ್ರ ವತ್ಸಲಾಳ ಮೇಲಿರುತ್ತದೆ.  ತಾಯಿಯಿಲ್ಲದ ವತ್ಸಲಾಳಿಗೆ ಅಣ್ಣಾವ್ರ ಅಕ್ಕ ಮಲತಾಯಿಯಾಗಿ ಸಾಕಷ್ಟು ಕಿರುಕುಳ ಕೊಡುತ್ತಿರುತ್ತಾಳೆ, ಅಸಹಾಯಕ ಭಾವ ಅಶ್ವಥ್ ಇದನ್ನೆಲ್ಲಾ ನೋಡಿಕೊಂಡು ಏನೂ ಮಾಡಲಾಗದೆ ಕೈಕೈ ಹಿಸುಕಿಕೊಳ್ಳುತ್ತಿರುತ್ತಾರೆ.   ಅಕ್ಕನ ಜೊತೆ ಸೇರಿ ವತ್ಸಲಾಳಿಗೆ ಇನ್ನಷ್ಟು ತೊಂದರೆ ಕೊಡುವಂತೆ ನಟಿಸುತ್ತಾ ಅಣ್ಣಾವ್ರು ಅವಳಿಗೆ ಕಾಲೇಜಿಗೆ ಸೇರಿ ಓದಲು ಸಹಾಯ ಮಾಡುತ್ತಾರೆ.  ಕೊನೆಗೆ ದೆಹಲಿಗೆ ಹಿಂದಿರುಗಿ ಬಂದರೆ ಅವರ ಮುಳ್ಳುಹಂದಿಯಂಥಾ ಬಾಸ್ ಮಗಳೂ ಸಹಾ ಅವರಿಗೆ ಲೈನು ಹೊಡೆಯಲು ಆರಂಭಿಸುತ್ತಾಳೆ.  ಒಬ್ಬಳೇ ಮಗಳು,, ಸಕಲ ಐಶ್ವರ್ಯವಂತೆ, ರೂಪವಂತೆ,,,ಆದರೆ ಅಣ್ಣಾವ್ರು ಅವಳನ್ನು ತಿರಸ್ಕರಿಸಿ ವತ್ಸಲಾಳಿಗಾಗಿ ಮೈಸೂರಿಗೆ ಹಿಂದಿರುಗಿ ಬರುತ್ತಾರೆ.  ಕೊನೆಗೆ ಹಲವು ನಾಟಕ ಮಾಡಿ ಅವಳನ್ನೇ ಮದುವೆಯೂ ಆಗುತ್ತಾರೆ. ಇದು ಚಿತ್ರದ ಕಥೆ,,,ಸುಂದರ ಸಾಂಸಾರಿಕ ಸನ್ನಿವೇಶಗಳೊಡನೆ ಅತ್ಯಂತ ಹಿತವಾದ ಹಾಡುಗಳೊಡನೆ ಚಿತ್ರ ನಮ್ಮ ಮನಸ್ಸನ್ನ್ಜು ಗೆಲ್ಲುತ್ತದೆ. 

ಅಸಲಿ ವಿಚಾರವೇನೆಂದರೆ ಈ ಚಿತ್ರ ಬಿಡುಗಡೆಯಾದಾಗ ನಾನು ತಿಪಟೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದೆ.  ಗಾಂಧಿನಗರದಲ್ಲಿದ್ದ ಲಕ್ಷ್ಮಿ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಒಮ್ಮೆ ನೋಡಿದ ನನಗೆ ಈ ಚಿತ್ರ ತುಂಬಾ ಹಿಡಿಸಿ ಹಲವಾರು ಬಾರಿ ನೋಡಿದ್ದೆ.  ಆಗಿನ್ನೂ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವ ಯೋಗ್ಯತೆ ನನಗೆ ಸಿಕ್ಕಿತ್ತು, ಅಂದರೆ ೧೮ ವರ್ಷ ವಯಸ್ಸು ತುಂಬಿತ್ತು, ವೃತ್ತಪತ್ರಿಕೆಗಳಲ್ಲಿ ಜಾಹೀರಾತು ಬರುತ್ತಿದ್ದ ಸಿಕ್ಕ ಸಿಕ್ಕ ಕೆಲಸಗಳಿಗೆಲ್ಲಾ ಅರ್ಜಿ ಹಾಕುತ್ತಾ, ಪರೀಕ್ಷೆಗಳನ್ನು ಬರೆಯುತ್ತಾ ಸರ್ಕಾರಿ ಕೆಲಸದ ಕನಸು ಕಾಣುತ್ತಲೇ ಪದವಿ ಓದುತ್ತಿದ್ದೆ!  ಅದೇ ಸಮಯದಲ್ಲಿ ಆಕಾಶವಾಣಿಯಲ್ಲಿ ವಾರ್ತಾ ವಾಚಕರು ಹಾಗೂ ಉದ್ಘೋಷಕರು ಬೇಕಾಗಿದ್ದಾರೆಂದು ಜಾಹೀರಾತು ಬಂದಿತ್ತು.  ಅದಕ್ಕೂ ಅರ್ಜಿ ಗುಜರಾಯಿಸಿ ಸಂದರ್ಶನದ ಕರೆಯನ್ನು ಎದುರು ನೋಡುತ್ತಿದ್ದೆ.  ಅದೇ ಸಮಯದಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.  ಚಿತ್ರದಲ್ಲಿ ಅಣ್ಣಾವ್ರು ಒಬ್ಬ ಗಾಯಕರಾಗಿ ದೆಹಲಿ ದೂರದರ್ಶನದಲ್ಲಿ ಒಂದು ಹಾಡು ಹಾಡುತ್ತಾರೆ,  "ಹೊಸ ಬೆಳಕು ಮೂಡುತಿದೆ,," ಅದು ದೇಶಾದ್ಯಂತ ಪ್ರಸಾರವಾಗಿ ಆ ಹಾಡಿನಿಂದಲೇ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮುಂಗೋಪಿ ಮಾಲೀಕನ ಮಗಳೇ ಅಣ್ಣಾವ್ರನ್ನು ಪ್ರೀತಿಸತೊಡಗುತ್ತಾಳೆ.  ಆ ಸನ್ನಿವೇಶ ನನ್ನ ಹರೆಯದ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನುಂಟು ಮಾಡಿತ್ತು.  ಕುಳಿತಲ್ಲಿ, ನಿಂತಲ್ಲಿ ನಾನು ಅದೇ ಹಾಡು ಹಾಡುತ್ತಾ, ನನಗೂ ಆಕಾಶವಾಣಿಯಲ್ಲಿ ಕೆಲಸ ಸಿಕ್ಕಿ ನಾನೂ ಸಹಾ ದೆಹಲಿಗೆ ಹೋಗಿ ಕೆಲಸ ಮಾಡುತ್ತಾ, ಥೇಟ್ ಅಣ್ಣಾವ್ರ ರೀತಿಯಲ್ಲೇ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಮಂಜು ಮುಸುಕಿದ ಮುಂಜಾವಿನಲ್ಲಿ ಜಾಗಿಂಗ್ ಮಾಡುತ್ತಿರುವಂತೆ ಕನಸು ಕಾಣುತ್ತಿದ್ದೆ!  ಒಂದಿಲ್ಲೊಂದು ಒಳ್ಳೆಯ ಸರ್ಕಾರಿ ಕೆಲಸ ಸಿಕ್ಕಿ ನಾನೂ ಒಬ್ಬ ಉತ್ತಮ ಅಧಿಕಾರಿಯಾಗಿ ಗೌರವಯುತವಾಗಿ ಬದುಕು ಕಟ್ಟಿಕೊಳ್ಳುವೆನೆಂಬ ಭರವಸೆ ನನಗಿತ್ತು.  ಅದಕ್ಕೆ ತಕ್ಕಂತೆ ನನಗೆ ಮಲಗಿದಾಗೆಲ್ಲಾ ಕನಸುಗಳಲ್ಲಿ ಸದಾ ಅಣ್ಣಾವ್ರ ಹೊಸಬೆಳಕು ಚಿತ್ರದ ಸನ್ನಿವೇಶಗಳು ಕಾಡುತ್ತಿದ್ದವು. 

ಆಗಿನ ನನ್ನ ಆತ್ಮವಿಶ್ವಾಸವಂತೂ ಆಗಸದಷ್ಟು ಅಗಾಧವಾಗಿತ್ತು, ನಾನು ಭಾಗವಹಿಸದ ಸ್ಪರ್ಧೆಗಳೇ ಇರಲಿಲ್ಲ!  ಎಲ್ಲಿಯೇ ಚರ್ಚಾಸ್ಪರ್ಧೆ, ಪ್ರಬಂಧ, ಕವನ ರಚನಾ ಸ್ಪರ್ಧೆಗಳು ನಡೆದರೂ ನಾನು ಅಲ್ಲಿ ಹಾಜರಿರುತ್ತಿದ್ದೆ!  ಸುತ್ತ ಮುತ್ತಲಿನ ಯಾವುದೇ ಊರಿನಲ್ಲಿ ಸೈಕಲ್ ರೇಸುಗಳು ಏರ್ಪಡಿಸಿದ್ದರೆ ಅಲ್ಲಿಯೂ ನಾನು ಹಾಜರಾಗಿ ಗೆದ್ದು ಬರುತ್ತಿದ್ದೆ,,,ನನ್ನದೇ ಒಂದು ಗುಂಪು ಕಟ್ಟಿ ಇಡೀ ಕರ್ನಾಟಕವನ್ನೇ ಸೈಕಲ್ಲಿನಲ್ಲಿ ಸುತ್ತಿದ್ದಲ್ಲದೆ ದೂರದ ದೆಹಲಿ ಹಾಗೂ ಭೂಪಾಲಿಗೂ ಸೈಕಲ್ಲಿನಲ್ಲೇ ಹೋಗಿ ಬಂದಿದ್ದೆ.  ಎನ್. ಸಿ. ಸಿ. ಯಲ್ಲಿದ್ದ ನಾನು ಸೀನಿಯರ್ ಅಂಡರ್ ಆಫೀಸರ್ ಆಗಿ "ಸಿ" ಸರ್ಟಿಫಿಕೆಟ್ ಪಡೆದಿದ್ದುದಲ್ಲದೆ ಅಲ್ಲಿ ನಡೆಯುತ್ತಿದ್ದ ಮಾರ್ಚ್ ಫಾಸ್ಟ್, ಫೈರಿಂಗ್ ಹಾಗೂ ಬೈನಟ್ ಫೈಟಿಂಗ್ ಸ್ಪರ್ಧೆಗಳಲ್ಲಿ ಎಲ್ಲರಿಗಿಂತ ಮೊದಲಿಗನಾಗಿ ಗೆದ್ದು "ಬೆಸ್ಟ್ ಅಂಡರ್ ಆಫೀಸರ್" ಅನ್ನುವ ಗೌರವಕ್ಕೆ ಪಾತ್ರನಾಗಿದ್ದೆ. ಅಗಾಧ ಆತ್ಮವಿಶ್ವಾಸದ ಪ್ರತಿರೂಪದಂತಿದ್ದ ನನ್ನ ಕನಸಿನ ಹಕ್ಕಿಗಳಿಗೆ ರೆಕ್ಕೆ ಬಂದಂತೆ ಪದವಿಯಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣನಾಗಿದ್ದೆ.  ಆದರೆ ಕಾಲೇಜು ಜೀವನ ಮುಗಿಸಿ ಆಚೆಗೆ ಬಂದಾಗಲೇ ನನಗೆ ವಾಸ್ತವದ ಅರಿವಾಗಿದ್ದು! 

ಪ್ರಥಮ ದರ್ಜೆಯಲ್ಲಿ ಪದವಿ ಪತ್ರ ಕೈಯಲ್ಲಿ ಹಿಡಿದು ಬೆಂಗಳೂರಿಗೆ ಬಂದು ಖಾಸಗಿ ರಂಗದಲ್ಲಿ ಕೆಲಸ ಮಾಡುತ್ತಲೇ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದ ನನಗೆ ಸುಮಾರು ೫೭ ಪರೀಕ್ಷೆಗಳನ್ನು ಬರೆದರೂ ಸರ್ಕಾರಿ ಕೆಲಸದ ಅವಕಾಶ ಸಿಗಲೇ ಇಲ್ಲ!  ಓದಿದ ತರಗತಿಗಳಲ್ಲಿ ಯಾವಾಗಲೂ ಪ್ರಥಮದರ್ಜೆಯಲ್ಲೇ ಇರುತ್ತಿದ್ದ ನನಗೆ ಅತ್ಯಂತ ಸುಲಭ ಅನ್ನಿಸಿದ್ದ ವೃತ್ತಿ ಸಂಬಂಧಿತ ಪರೀಕ್ಷೆಗಳನ್ನು ಪಾಸು ಮಾಡಲು ಆಗಿರಲಿಲ್ಲ.  ಆದರೆ ನನ್ನ ಜೊತೆಯಲ್ಲಿಯೇ ಓದಿದ ಕೆಲವರು ತಮ್ಮ ಜಾತಿಗೆ ಸಿಗುತ್ತಿದ್ದ ಮೀಸಲಾತಿಯಿಂದಾಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ಈಗ ಉನ್ನತ ಸ್ಥಾನಗಳಲ್ಲಿ ಕುಳಿತಿದ್ದಾರೆ.  ಓದಿದ ವಿದ್ಯೆಗಿಂತ ಹುಟ್ಟಿದ ಜಾತಿಯೇ ಅವರ ಸ್ಥಾನಮಾನಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.  ಅದೇ ನಾನು ಹುಟ್ಟಿದ ಜಾತಿ ನನಗೊಂದು ಸರ್ಕಾರಿ ಕೆಲಸ ಕೊಡಿಸುವಲ್ಲಿ ವಿಫಲವಾಗಿತ್ತು.  ಹಾಗೋ ಹೀಗೋ ಏಳು ಬೀಳಿನಲ್ಲೇ ಸಾಗಿದ ಜೀವನದ ಯಾನದಲ್ಲಿ ಕೊನೆಗೆ ದೇಶ ಬಿಟ್ಟು ಆಚೆಗೆ ಬಂದು ನನ್ನವರು ಅನ್ನಿಸಿಕೊಂಡ ಎಲ್ಲರಿಂದ ದೂರಾಗಿ ಬದುಕಬೇಕಾದ ಪರಿಸ್ಥಿತಿ ಸೃಷ್ಟಿಸಿದ್ದು ಯಾರು?  ಹೊಸಬೆಳಕು ಮೂಡುತಿದೆ ಅನ್ನುವ ಹಾಡು ಈಗಲೂ ನನ್ನ ನಾಲಿಗೆಯ ತುದಿಯಲ್ಲಿಯೇ ಇದೆ,,,ಆದರೆ ಅಂದು ಆ ಹಾಡಿನೊಂದಿಗೆ ಆರಂಭವಾದ ಕನಸು ಮಾತ್ರ ನನಸಾಗಲೇ ಇಲ್ಲ!   

ಒಂದು ಚಲನಚಿತ್ರ ನೋಡಿದಾಗ ಈ ಹುಚ್ಚು ಮನಸ್ಸು ಸುಮಾರು ೩೦ ವರ್ಷ ಹಿಂದಕ್ಕೋಡಿ ಹಳೆಯದನ್ನೆಲ್ಲ ನೆನಪಿಸಿ, ಒಮ್ಮೊಮ್ಮೆ ಕೊಂಚ ದುಃಖವನ್ನೂ ಅಪಾರವಾದ ಸಂತೋಷವನ್ನು ತಂದರೆ, ಕೆಲವೊಮ್ಮೆ ಕೇವಲ ದುಃಖವನ್ನೇ ತುಂಬಿ ಇರುವ ಸಂತೋಷವನ್ನೂ ಹಾಳು ಮಾಡುತ್ತದೆ.  ಮನಸ್ಸಿನ ಈ ಆಟಕ್ಕೆ ಅಂಕುಶವೆಲ್ಲಿ???  

ತಿಮ್ಮಿ ನಿನ್ನ ಉಡ್ಕಿ ಉಡ್ಕಿ ! :-)





ಎಲ್ಲಿದ್ದೀಯೇ ಎಂಗಿದ್ದೀಯೇ ತಿಮ್ಮಿ!

ತಿಮ್ಮಿ ನಿನ್ನ ಉಡ್ಕಿ ಉಡ್ಕಿ 
ಈ ಕಣ್ಣು ಸೋತೆ ಓದ್ವು  
ಹಸ್ರು ಗಿಡ ಮರ ಎಲ್ಲಾ 
ಬೋಳು ಬೋಳಾಗೋದ್ವು! 

ದೋಣಿ ಹತ್ತಿ ಹುಟ್ಟು ಹಾಕಿ 
 ಅಲ್ಲಿ ಇಲ್ಲಿ ನಿನ್ನಾ ಹುಡ್ಕಿ 
ಕೈ ಕಾಲು ಕಣ್ಣು ಎಲ್ಲಾ 
ಸೋತು ಸುಣ್ಣ ಆಗೋದ್ವಲ್ಲಾ!

ಎಲ್ಲಿದ್ದೀಯೇ ಎಂಗಿದ್ದೀಯೇ ತಿಮ್ಮಿ!

ಎದೆಯಾ ತುಂಬಾ ನೋವಾ ಉಳ್ಸಿ
ಮನ್ಸಿನ್ ತುಂಬಾ ಬ್ಯಾಸ್ರಾ ತುಂಬ್ಸಿ 
ಕನ್ಸಿನ್ ತುಂಬಾ ನಿನ್ ಚಿತ್ರಾ ಉಳ್ಸಿ  
ದೂರಾ ಆಗಿ ಹೋಗ್ಬಿಟ್ಟಲ್ಲೇ ತಿಮ್ಮಿ!  

ಏನೋ ಮಾತು ಬಂತು ಓಯ್ತು 
ಕ್ವಾಪಾ ಸಿಟ್ಟು ಸೆಡವು ತುಂಬ್ತು 
ಬಾಳು ಈಗ ಬರಡಾಗೋಯ್ತು 
ನೀನಿಲ್ದೆ ಲೋಕ ಬ್ಯಾಡ್ವಾಗೋಯ್ತು!

ಎಲ್ಲಿದ್ದೀಯೇ ಎಂಗಿದ್ದೀಯೇ ತಿಮ್ಮಿ! :-)

Tuesday, July 14, 2015

ಬ್ರಹ್ಮನಿಟ್ಟ ಒಲವ ಗಂಟು ,,,,,,,,,,,,,,,




ರಾಣಿ ನೀನು ರಾಜ ನಾನು 
ಪ್ರೀತಿ ನೀನು ಮರೆತೆಯೇನು 
ನಿನ್ನ ನೋಟ ನಿನ್ನ ಮಾಟ 
ನನ್ನ ಸೆಳೆದ ಮಾಯದಾಟ!

ಬ್ರಹ್ಮನಿಟ್ಟ ಒಲವ ಗಂಟು 
ಬ್ರಹ್ಮಕಮಲ ನಿನಗೆ ಕೊಟ್ಟು
ನಿನ್ನ ಹೃದಯದೊಳೆನ್ನ ಇಟ್ಟು 
ನಿನ್ನ ಚಿತ್ರವೆನ್ನ ಮನದಿ ಬಿಟ್ಟು!

ನಿನ್ನ ನುಣುಪು ಕಾಲು ಹೆಜ್ಜೆ 
ನಲಿದು ಕುಣಿಯೆ ಒಲವ ಗೆಜ್ಜೆ 
ನಿನ್ನ ಮಾತು ಸಿಹಿಯ ಸಜ್ಜೆ 
ಮೊಗದ ತುಂಬ ಎಂಥ ಲಜ್ಜೆ!

ಅರಿತು ತುಳಿವ ಸಪ್ತಪದಿ 
ಬೆರೆತು ನಡೆವ ಬಾಳಹಾದಿ 
ಹರಿಯುತಿರಲು ಜೀವನದಿ 
ಸದಾ ನಗುವ  ತುಂಬಿ ಮೊಗದಿ!