Thursday, January 1, 2015

ಭದ್ರತೆಯ ಲೋಕದಲ್ಲಿ - ೧ (ಬಹು ದಿನಗಳಿಂದ ನನ್ನ ಮನದಲ್ಲಿ ಕೊರೆಯುತ್ತಿದ್ದ ಒಂದು ಕೊರಗು ಇಂದು ಹೊಸವರ್ಷದಲ್ಲಿ ಬಗೆಹರಿದ ಸಂತಸ ಗೆಳೆಯರೆ, ಸುಮಾರು ೨೫ ವರ್ಷಗಳಿಂದ ಬರಿಗೈಲಿ ಬಂದವನಿಗೆ ಅನ್ನ ಕೊಟ್ಟು ಸಲಹಿದ ನನ್ನ ಭದ್ರತಾ ಲೋಕದ ಬಗ್ಗೆ ಬರೆಯಬೇಕು ಅಂತನ್ನಿಸಿದಾಗೆಲ್ಲಾ ಏನಾದರೊಂದು ಅಡಚಣೆಯಾಗಿ ಅದು ಹಾಗೆಯೇ ಉಳಿದು ಬಿಡುತ್ತಿತ್ತು!  ಈ ಬಾರಿ ಸಹೃದಯ ಶ್ರೀ ಗಣೇಶ್ ಕೋಡೂರ್ ಅವರ ಪ್ರೋತ್ಸಾಹದಿಂದ ಅದು ಈಡೇರಿದೆ, ಇದಿನ್ನು ನಿರಂತರವಾಗಿ ಹರಿದು ಬರಲಿದೆ, ಕಾಲು ಶತಮಾನವನ್ನು ಇದೇ ಉದ್ಯೋಗದಲ್ಲಿ ಕಳೆದಾಯಿತು, ಸಾವಿರಾರು ಜನರನ್ನು, ಸಾವಿರಾರು ಘಟನೆಗಳನ್ನು, ಜೀವನ್ಮರಣ ಹೋರಾಟಗಳನ್ನು, ಕೊನೆಗೆ ಸಾವನ್ನು, ಬಹಳ ಹತ್ತಿರದಿಂದ ಕಂಡಾಯ್ತು !  ನಿಮ್ಮ ಪ್ರೋತ್ಸಾಹವಿರಲಿ. :-)  ಇದು ಈ ಬಾರಿಯ ನಿಮ್ಮೆಲ್ಲರ ಮಾನಸ ಮಾಸ ಪತ್ರಿಕೆಯಲ್ಲಿ ಹೊಸ ಅಂಕಣವಾಗಿ ಪ್ರಕಟವಾಗಿದೆ, ಒಮ್ಮೆ ಓದಿ ನೋಡಿ. )


ಪ್ರತಿನಿತ್ಯ ನಾವು ನಡೆದಾಡುವೆಡೆಗಳಲ್ಲಿ ಇವರನ್ನು ಒಮ್ಮೆ  ನೋಡಿಯೇ ಇರುತ್ತೇವೆ.  ಆದರೆ ಎಲ್ಲೋ ಒಮ್ಮೊಮ್ಮೆ ಮಾತ್ರ ಮಾತನಾಡಿಸಿರುತ್ತೇವೆ ಅಥವಾ ಮಾತನಾಡಿಸಿರುವುದೇ ಇಲ್ಲ!  ಆದರೂ ಅವರು ನಮ್ಮ ಇಂದಿನ ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ, ಅವರೇ "ಭದ್ರತಾ ರಕ್ಷಕರು".  ಆಂಗ್ಲದಲ್ಲಿ "ಸೆಕ್ಯುರಿಟಿ ಗಾರ್ಡ್" ಎಂದು ಕರೆದರೆ ಕೆಲವೊಮ್ಮೆ ಇವರು ಕೇವಲ "ವಾಚ್ಮನ್" ಎಂದೂ ಕರೆಯಲ್ಪಡುತ್ತಾರೆ.  ಬ್ಯಾಂಕುಗಳಲ್ಲಿ, ದೊಡ್ಡ ದೊಡ್ಡ ಹೋಟೆಲ್ಲುಗಳಲ್ಲಿ, ಆಸ್ಪತ್ರೆಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ವಸತಿ ಸಂಕೀರ್ಣಗಳಲ್ಲಿ, ಕಾರ್ಖಾನೆಗಳಲ್ಲೀ, ಸಮವಸ್ತ್ರ ಧರಿಸಿದ ಇವರನ್ನು ನಿತ್ಯವೂ ಕಾಣಬಹುದು.  ನಿಮ್ಮ ದೈನಂದಿನ ಕಾರ್ಯಗಳಿಗೆಂದು ನೀವು ತಲೆ ಕೆಡಿಸಿಕೊಳ್ಳುವಾಗ ಒಂದಿಲ್ಲೊಂದು ಸಮಯದಲ್ಲಿ ಅವರು ನಿಮಗೆ ಸಹಾಯ ಮಾಡುತ್ತಿರುತ್ತಾರೆ, ಕೆಲವೊಮ್ಮೆ ಒಂದು ಮುಗುಳ್ನಗುವಿನೊಡನೆ ಒಂದು "ಥ್ಯಾಂಕ್ಸ್" ಸಿಕ್ಕರೆ ಬಹಳ ಖುಷಿಯಾಗುತ್ತಾರೆ.  ಎಲ್ಲರೂ ತಂತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ, ಮನೆಗೆ ಹಿಂದಿರುಗಿ, ತಮ್ಮ ಕುಟುಂಬದೊಡನೆ ಇದ್ದಾಗ, ಇವರು ಮಾತ್ರ ತಮ್ಮ ಕೆಲಸದಲ್ಲೇ ಇರುತ್ತಾರೆ!  ರಾತ್ರಿ ಪಾಳಿಯ ಜೊತೆಗಾರ ಬರುವವರೆಗೂ ದಿನದ ಪಾಳಿಯವನು ಕಣ್ಣಲ್ಲಿ ಕಣ್ಣಿಟ್ಟು ತಾನಿರುವ ಜಾಗದ ರಕ್ಷಣೆಯ ಹೊಣೆ ಹೊತ್ತಿರುತ್ತಾನೆ.

ದೇಶ ಕಾಯಲು ಸೈನಿಕರು, ಊರಿನ ರಕ್ಷಣೆಗೆ ಪೊಲೀಸರು ಇದ್ದಂತೆ, ಒಂದು ಸಂಸ್ಥೆಯ ರಕ್ಷಣೆಗೆ ಈ ಭದ್ರತಾ ರಕ್ಷಕರಿರುತ್ತಾರೆ.  ಹಿಂದೆಲ್ಲಾ ಒಂದು ಖಾಕಿ ಶರ್ಟು, ಪ್ಯಾಂಟು ತೊಟ್ಟು, ಗೇಟಿನ ಬಳಿಯಲ್ಲಿ ಬೀಡಿ ಸೇದುತ್ತಾ ನಿಂತಿರುವ "ವಾಚ್ಮನ್"ಗಳನ್ನು ಕಾಣಬಹುದಾಗಿತ್ತು.  ಅವರಿಗೆ ಯಜಮಾನರ ಕಾರು ಬಂದರೆ ಗೇಟು ತೆಗೆಯುವ ಮತ್ತು ಮುಚ್ಚುವ ಕಾಯಕವಷ್ಟೇ ಗೊತ್ತಿರುತ್ತಿತ್ತು.  ಆದರೆ ಜಾಗತೀಕರಣದ ಪರಿಣಾಮವಾಗಿ ಉದ್ಯಮಗಳ ಹಾಗೂ ನಿತ್ಯಜೀವನದ ರೂಪ ಬದಲಾಗುತ್ತಾ ಹೋದಂತೆ ಈ "ವಾಚ್ಮನ್"ಗಳ ಸ್ವರೂಪವೂ ಬದಲಾಯಿತು.  ಕೇವಲ ಕೆಲವು ನಿವೃತ್ತ ಸೈನಿಕರು ನಡೆಸುತ್ತಿದ್ದ ಭದ್ರತಾ ಉದ್ಯಮದಲ್ಲಿಯೂ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶವಾಯಿತು.  ತತ್ಫಲವಾಗಿ ಇಡೀ ಉದ್ಯಮದ ಚಿತ್ರಣವೇ ಬದಲಾಗಿ ಹೋಯಿತು.  ಇಂದು ನಮ್ಮ ಉದ್ಯಾನನಗರಿ ಬೆಂಗಳೂರಿನಲ್ಲಿಯೇ ಸುಮಾರು ಎರಡು ಲಕ್ಷಕ್ಕಿಂತ ಹೆಚ್ಚು ಭದ್ರತಾ ರಕ್ಷಕರಿದ್ದಾರೆ ಎಂದರೆ ನಂಬಲಸಾಧ್ಯ!  ಮುಂಬೈ ಮೇಲೆ ನಡೆದ ಉಗ್ರರ ಧಾಳಿಯ ನಂತರವಂತೂ ಇಡೀ ಭದ್ರತಾ ಸಂಸ್ಥೆಗಳ ಸ್ವರೂಪ ತೀವ್ರತರವಾಗಿ ಬದಲಾಗಿ ಇಂದು ದೇಶದಲ್ಲಿರುವ ಪೊಲೀಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ರಕ್ಷಕರನ್ನು ಕಾಣಬಹುದಾಗಿದೆ.  ಒಂದು ಅಧ್ಯಯನದ ಪ್ರಕಾರ  ದೇಶದಾದ್ಯಂತ ಸುಮಾರು ಹದಿನೈದು ಸಾವಿರ ಖಾಸಗಿ ಭದ್ರತಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು ಐವತ್ತು ಲಕ್ಷಕ್ಕಿಂತ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ.  ಇಡೀ ದೇಶದಲ್ಲಿನ ಪೊಲೀಸರ ಸಂಖ್ಯೆ ಸುಮಾರು ಮುವ್ವತ್ತೈದು ಲಕ್ಷವೆಂದು ಅದೇ ವರದಿ ತಿಳಿಸುತ್ತದೆ. ಇತ್ತೀಚೆಗಿನ ವರದಿಗಳ ಪ್ರಕಾರ ಭದ್ರತಾ ಉದ್ಯಮದ ವಾರ್ಷಿಕ ವಹಿವಾಟು ರೂ. ೨೨,೦೦೦ ಕೋಟಿಯಿದ್ದು ೨೦೧೫ರಲ್ಲಿ ಇದು ರೂ. ೪೦,೦೦೦ ಕೋಟಿಗಳನ್ನು ದಾಟಬಹುದೆಂದು ಅಂದಾಜಿಸಲಾಗಿದೆ೨೦೦೬ರಲ್ಲಿ ಸುಮಾರು ೧೦,೦೦೦ ಕೋಟಿಯನ್ನು ಪ್ರಾವಿಡೆಂಟ್ ಫಂಡ್, .ಎಸ್ಆಯ್  ಮತ್ತು ಸರ್ವೀಸ್ ಟ್ಯಾಕ್ಸ್ ಎಂದು ಸರ್ಕಾರಕ್ಕೆ ಪಾವತಿಸಲಾಗಿರುವುದು ಭದ್ರತಾ ಉದ್ಯಮದ ಹಿರಿಮೆಗೆ ಸಾಕ್ಷಿಯಾಗಿದೆಬರಲಿರುವ ವರ್ಷಗಳಲ್ಲಿ ಇದು ಅದಿನ್ನೆಷ್ಟು ಕೋಟಿಗಳನ್ನು ಮುಟ್ಟಲಿದೆಯೋ ಎಂದು ಆರ್ಥಿಕ ತಜ್ಞರೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆಂದರೆ ಅತಿಶಯೋಕ್ತಿಯಾಗಲಾರದುಇಷ್ಟೊಂದು ಬೃಹತ್ತಾಗಿ ಬೆಳೆಯುತ್ತಿರುವ ಭದ್ರತಾ ವಲಯದಲ್ಲಿ, ಬರಲಿರುವ ವರ್ಷಗಳಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು ವಿದ್ಯಾವಂತ ನಿರುದ್ಯೋಗಿಗಳಿಗೆ ಭವಿಷ್ಯದ ಆಶಾಕಿರಣವಾಗಿದೆ
ಉದ್ಯೋಗಕ್ಕಾಗಿ ಬರುವವರಲ್ಲಿಯೂ ವಿವಿಧ ರೀತಿಯ ಜನರನ್ನು ಕಾಣಬಹುದುಓದಲಾಗದೆ ಕಾಲೇಜು ಬಿಟ್ಟವರು, ಓದಿಯೂ ಸರಿಯಾದ ಕೆಲಸ ಸಿಗದೇ ನಿರುದ್ಯೋಗಿಗಳಾಗಿ ಅತಂತ್ರರಾಗಿರುವವರು, ಪೊಲೀಸ್ ಅಥವಾ ಮಿಲಿಟರಿಗೆ ಸೇರಬೇಕೆಂದುಕೊಂಡು ಸಾಧ್ಯವಾಗದೆ ನಿರಾಶರಾದವರು, ಮನೆಯಲ್ಲಿ ಮಕ್ಕಳಿಂದ, ಸೊಸೆಯಂದಿರಿಂದ ತಿರಸ್ಕೃತರಾದ ಹಿರಿಯ ಜೀವಗಳು, ಮನೆಯ ಜವಾಬ್ಧಾರಿಯನ್ನು ನಿಭಾಯಿಸಲೇಬೇಕಾದ ಒತ್ತಡದಲ್ಲಿ ಬೇರಾವುದೇ ಕೆಲಸ ಸಿಗದೇ ನಿರಾಶರಾದವರು, ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಜೀವನದಲ್ಲಿ ನೊಂದವರೆಲ್ಲಾ ಇಲ್ಲಿ ಸಿಗುತ್ತಾರೆಪ್ರತಿಯೊಬ್ಬ ಭದ್ರತಾ ರಕ್ಷಕನ ಬೆನ್ನ ಹಿಂದೆ ಒಂದು ೭೦ ಎಂ ಎಂ ಸಿನಿಮಾಸ್ಕೋಪ್ ಚಲನಚಿತ್ರ ತೆಗೆಯಬಹುದಾದಂಥ ರಮ್ಯವಾದ ಕಥೆಯಿರುತ್ತದೆಅದೆಷ್ಟೋ ಪದವೀಧರರು ನಮ್ಮ ದೇಶದ ಜಾತಿ ರಾಜಕೀಯ, ಮೀಸಲಾತಿಗಳಿಂದ ಸರ್ಕಾರಿ ನೌಕರಿ ಸಿಗದೇ ನಗರಗಳಿಗೆ ವಲಸೆ ಬಂದು ಭದ್ರತಾ ರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆಭಾರತೀಯ ಸೇನೆ, ನೌಕಾಪಡೆ, ವಾಯುಸೇನೆಯಿಂದ ನಿವೃತ್ತರಾದ ಅದೆಷ್ಟೋ ಅಧಿಕಾರಿಗಳು ತಮ್ಮದೇ ಆದ ಸಂಸ್ಥೆಗಳನ್ನು ಸ್ಥಾಪಿಸಿ , ಇಂತಹ ವಿದ್ಯಾವಂತರನ್ನು ತರಬೇತುಗೊಳಿಸಿ ಸಮಾಜದ ಭದ್ರತೆಗೆ, ತಮ್ಮ ನಿವೃತ್ತಿಯ ನಂತರವೂ, ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆಒಟ್ಟಾರೆ ಹೇಳಬೇಕೆಂದರೆ ಭದ್ರತಾ ಉದ್ಯಮದಲ್ಲಿ ತೊಡಗಿಸಿಕೊಂಡ  ಪ್ರತಿಯೊಬ್ಬ ಭದ್ರತಾ ರಕ್ಷಕನೂ ದೇಶ ಕಾಯುವ ಸೈನಿಕನಿಗಿಂತ ಯಾವುದೇ ರೀತಿಯಲ್ಲಿಯೂ ಕಡಿಮೆಯಿಲ್ಲ.
ಇಂತಹ ಭದ್ರತೆಯ ಲೋಕದಲ್ಲಿ ಕೆಲಸ ಮಾಡುವವರು ಎಂಥವರುಅವರ ಸ್ಥಿತಿಗತಿಗಳೇನುತಮ್ಮ ದೈನಂದಿನ ಕೆಲಸದಲ್ಲಿ ಅವರು ಎದುರಿಸುವ ಸಮಸ್ಯೆಗಳೇನುಸಮಾಜ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದೆಹೇಗೆ ಅವರ ಜೀವನಮಟ್ಟವನ್ನು ಸುಧಾರಿಸಬಹುದುಹೇಗೆ ಮತ್ತಷ್ಟು ಪರಿಣಾಮಕಾರಿಯಾಗಿ ಈ ಭದ್ರತಾ ರಕ್ಷಕರನ್ನು ಉಪಯೋಗಿಸಿಕೊಂಡು ನಮ್ಮ ಸಮಾಜವನ್ನು ಮತ್ತಷ್ಟು ಸುಭದ್ರಗೊಳಿಸಬಹುದು? ನಮ್ಮ ದೇಶದಲ್ಲಿರುವಂತೆಯೇ ಹೊರದೇಶಗಳಲ್ಲಿಯೂ ಭದ್ರತಾ ರಕ್ಷಕರ ಜೀವನ ಹೇಗಿದೆನಮ್ಮ ಹಾಗೂ ಮುಂದುವರಿದ ದೇಶಗಳ ಭದ್ರತಾ ರಕ್ಷಕರಿಗೂ ಏನು ವ್ಯತ್ಯಾಸ? ಹೀಗೆ ನೂರೆಂಟು ಅಂಶಗಳ ಬಗ್ಗೆ ಈ ಅಂಕಣದಲ್ಲಿ ವಿವರಿಸಲಿದ್ದೇನೆ.  ಓದಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.  ಕೊನೆಯದಾಗಿ ಒಂದು ಮಾತು: ಎಲ್ಲಾದರೂ ನಿಮ್ಮ ನಿತ್ಯ ಜೀವನದಲ್ಲಿ ಒಬ್ಬ ಭದ್ರತಾ ರಕ್ಷಕನ ಜೊತೆ ನೀವು ಮುಖಾಮುಖಿಯಾಗುವಂಥ ಸನ್ನಿವೇಶ ಬಂದಲ್ಲಿ ಅವನಿಗೊಂದು "ಥ್ಯಾಂಕ್ಸ್" ಹೇಳಲು ಮರೆಯದಿರಿ!

2 comments:

Vivek R said...

Nice article sir.. please continue... Nimma baravanigae shaili thumba chennagide...

manju said...

Thank you Vivek.