Friday, August 28, 2009

ನೆನಪಿನಾಳದಿಂದ.1. ಅಪ್ಪನಿಂದ ಒದೆ ತಿಂದು ಮನೆ ಬಿಟ್ಟು ಓಡಿ ಹೋದ ಪ್ರಸಂಗ.

ಇದು 1984ರಲ್ಲಿ ನಾವು ತಿಪಟೂರಿನಲ್ಲಿದ್ದಾಗ ನಡೆದ ಪ್ರಸಂಗ, ಸಂಪದ ಓದುಗರೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಅಮ್ಮ ಮೈಸೂರಿನವರು, ತುಂಬಾ ಸಾಧು ಸ್ವಭಾವ, ಅಪ್ಪನನ್ನು ಕಂಡರೆ ತುಂಬಾ ಪ್ರೀತಿ ಹಾಗೂ ಗೌರವ, ಮೈಸೂರಿನ ವಿಶೇಷಣವಾದ "ಏನೂಂದ್ರೆ" ಅನ್ನದೆ ಅಪ್ಪನೊಡನೆ ಮಾತೇ ಇಲ್ಲ. ಆಗ ಸರ್ಕಾರಿ ಆಸ್ಪತ್ರೆಯ ದಾದಿಯ ಕೆಲಸದಲ್ಲಿದ್ದರು. ಅಪ್ಪ ಸ್ವಭಾವತಹ ಮುಂಗೋಪಿ ಹಾಗೂ ಸದಾ ಸಿಡುಕು ಬುದ್ಧಿ, ಒಂದು ಸಣ್ಣ ಹೋಟೆಲ್ ನಡೆಸುತ್ತಿದ್ದರು. ನಾನಾಗ ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಓದುತ್ತಿದ್ದೆ. ಬೆಳಿಗ್ಗೆ ಬೇಗನೆ ಎದ್ದು ಅಪ್ಪನೊಂದಿಗೆ ಹೋಟೆಲಿಗೆ ಬಂದು ಅವರ ಕೆಲಸದಲ್ಲಿ ಸಹಾಯ ಮಾಡಿ ನಂತರ ತಿಂಡಿ ತಿಂದು ಸ್ಕೂಲಿಗೆ ಹೋಗಬೇಕಿತ್ತು. ಸಂಜೆ ಮತ್ತೆ ಬಂದು ಅವರ ಸಣ್ಣ ಪುಟ್ಟ ಕೆಲಸಗಳನ್ನು ಮುಗಿಸಿ ಕೊಟ್ಟು ಸಂಜೆ "ಸ್ಪೆಷಲ್ ಕ್ಲಾಸಿಗೆ" ಹೋಗಬೇಕಿತ್ತು. ಹೀಗೆ ನನ್ನ ವಿದ್ಯಾಭ್ಯಾಸ ಸಾಗಿತ್ತು. ಅಪ್ಪನ ಹೋಟೆಲಿನಲ್ಲಿ ಕೆಲವು ಬಡ ಮೇಷ್ಟ್ರುಗಳು ಲೆಕ್ಕ ಬರೆಸಿ ತಿಂಗಳೆಲ್ಲಾ ಊಟ - ತಿಂಡಿ ಮಾಡಿ ಸಂಬಳ ಬಂದಾಗ ಲೆಕ್ಕ ಚುಕ್ತಾ ಮಾಡುತ್ತಿದ್ದರು.

ಅಂಥ ಮೇಷ್ಟ್ರುಗಳಲ್ಲಿ ಒಬ್ಬರು, ಗುಂಡಣ್ಣ ಮೇಷ್ಟ್ರು, ನಾನು ಹತ್ತನೆ ತರಗತಿಯ ಪರೀಕ್ಷೆ ಮುಗಿಸಿ ಬಂದು ಅಪ್ಪನೊಂದಿಗೆ ಮಾತಾಡುವಾಗ ಬಂದವರು ಹೇಳಿದರು, "ನಿನ್ನ ದಾಖಲಾತಿ ಸಂಖ್ಯೆ ಕೊಡು, ನಾನು ಮೌಲ್ಯಮಾಪನಕ್ಕೆ ಹೋಗುತ್ತಿದ್ದೇನೆ, ನಿನಗೆ ಹೆಚ್ಚು ಅಂಕ ಹಾಕಿಸುತ್ತೇನೆ " ಅದಕ್ಕೆ ನಾನು ಹೇಳಿದೆ, " ನಾನು ಚೆನ್ನಾಗಿ ಓದಿ ಪರೀಕ್ಷೆ ಬರೆದಿದ್ದೇನೆ, ಆ ರೀತಿ ಪುಕ್ಕಟೆ ಹೆಚ್ಚು ಅಂಕಗಳು ನನಗೆ ಬೇಕಾಗಿಲ್ಲ". ಆಗ ಅಪ್ಪ ನನಗೆ ಸುಮ್ಮನೆ ಹೆಚ್ಚು ಮಾತಾಡದೆ ನನ್ನ ದಾಖಲಾತಿ ಸಂಖ್ಯೆಯನ್ನು ಕೊಡುವಂತೆ ಹೇಳಿದರು. ಅದಕ್ಕೆ ನಾನು ನಿರಾಕರಿಸಿದೆ. ಹಿಂದೆಯೇ ಬಿದ್ದವು ನೋಡಿ ಅಪ್ಪನ ಕೈಯಿಂದ ದಬದಬ ಒದೆಗಳು, ನನಗೆ ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ, ಚೆನ್ನಾಗಿ ಓದಿ ಪರೀಕ್ಷೆ ಬರೆದಿದ್ದ ಹಾಗೂ ಖಂಡಿತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುವ ಭರವಸೆಯಿಂದಿದ್ದ ನನಗೆ ಆ ಒದೆಗಳು ಅನಿರೀಕ್ಷಿತ,

ಆ ಸಮಯದಲ್ಲಿ ಹೋಟೆಲಿನಲ್ಲಿದ್ದ ನಾಲ್ಕಾರು ಜನರ ಮುಂದೆ ಬಿದ್ದ ಒದೆಗಳು ನನ್ನ ಪುಟ್ಟ ಮನಸ್ಸಿಗೆ ಆರದ ಗಾಯವನ್ನೇ ಮಾಡಿ ಬಿಟ್ಟಿದ್ದವು. ಆ ಒದೆಗಳು ನನ್ನ ಸ್ವಾಭಿಮಾನಕ್ಕೆ, ಏನನ್ನಾದರೂ ಸಾಧಿಸಬಲ್ಲೆನೆಂಬ ಭರವಸೆಯ ಬುಡಕ್ಕೆ ಬಿದ್ದ ಕೊಡಲಿ ಪೆಟ್ಟುಗಳಾಗಿದ್ದವು. ಆದರೆ ಅದು ಸಿಡುಕು ಬುದ್ಧಿಯ ಅಪ್ಪನಿಗೆ ಅರ್ಥವಾಗಿರಲಿಲ್ಲ. ಆ ಕ್ಷಣವೇ ನಿರ್ಧರಿಸಿದ್ದು ನಾನು, "ಇಂಥ ಅಪ್ಪನೊಂದಿಗೆ ಇರಬಾರದು", ಅಳುತ್ತಾ ಮನೆಗೆ ಬಂದು ಒಂದು ಬ್ಯಾಗಿಗೆ ಎರಡು ಬಟ್ಟೆಗಳನ್ನು ಹಾಕಿಕೊಂಡು ಬಟ್ಟೆ ಒಗೆಯುತ್ತಿದ್ದ ಅಮ್ಮನಿಗೆ ಹೊರಗಿನಿಂದಲೇ ಹೋಗಿ ಬರುತ್ತೇನೆಂದು ಹೇಳಿ ದೂರದ ದಾವಣಗೆರೆಗೆ ಹೋಗಿ ಬಿಟ್ಟೆ. ಗೊತ್ತಿದ್ದದ್ದು ಆಗ ಹೋಟೆಲ್ ಕೆಲಸ ಮಾತ್ರ, ಒಂದು ಹೋಟೆಲಿನಲ್ಲಿ ಮಾಣಿಯ ಕೆಲಸಕ್ಕೆ ಸೇರಿಕೊಂಡು ಅಲ್ಲೇ ಇದ್ದು ಬಿಟ್ಟೆ.

ಕೆಲ ದಿನಗಳು ಕಳೆದ ನಂತರ ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾಯಿತು. ದಾವಣಗೆರೆಯಿಂದ ತಿಪಟೂರಿಗೆ ಬಂದು ಸೀದಾ ಶಾಲೆಯ ಬಳಿ ಹೋದೆ, ನನ್ನ ಫಲಿತಾಂಶ ನೋಡಿದೆ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದೆ, ಆನಂದದಿಂದ ಕಣ್ಗಳು ಒದ್ದೆಯಾದವು. ಅಂದು ಮುಖ್ಯೋಪ್ೞ್ಧ್ಯಾಯರಾಗಿದ್ದ ಜಿ. ಆರ್. ಮಹಲಿಂಗಯ್ಯನವರು ನನ್ನನ್ನು ಕರೆದು ಅಭಿನಂದಿಸಿ ಅಂಕಪಟ್ಟಿಯನ್ನು ಕೈಗಿತ್ತು ಶುಭ ಹಾರೈಸಿದ್ದರು. ಅಂಕಪಟ್ಟಿಯೊಡನೆ ಸೀದಾ ಮನೆಗೆ ಬಂದೆ, ಅಲ್ಲಿ ಇಲ್ಲಿ ನನಗಾಗಿ ಹುಡುಕಾಡಿ ಅಪ್ಪ ಅಮ್ಮ ಸೋತಿದ್ದರು, ಅಮ್ಮ ಕೊಂಚ ಸೊರಗಿದ್ದರು, ಅಮ್ಮನಿಗೆ ಹೇಳಿದೆ, "ನಾನು ಪ್ರಥಮ ದರ್ಜೆಯಲ್ಲಿ ಹತ್ತನೆ ತರಗತಿಯಲ್ಲಿ ಉತ್ತೀರ್ಣನಾಗಿದ್ದೇನೆ, ನೋಡಮ್ಮ, ಆ ದಿನಾ ವಿನಾ ಕಾರಣ ಅಪ್ಪ ನನ್ನನ್ನು ಎಲ್ಲರ ಮುಂದೆ ಹೊಡೆದರು". ಅಮ್ಮ ಕಣ್ಣಲ್ಲಿ ನೀರು ತುಂಬಿಕೊಂಡು ನನ್ನನ್ನು ಸಂತೈಸಿದರು, ನಿನ್ನಪ್ಪ ಮುಂಗೋಪಿ, ಅವರನ್ನು ಕ್ಶಮಿಸಿಬಿಡು ಎಂದರು. ಸಂಜೆ ಮನೆಗೆ ಬಂದ ಅಪ್ಪ ನನ್ನನ್ನು ಸಿಟ್ಟಿನಿಂದ ಕೆಕ್ಕರಿಸಿ ನೋಡಿ ಇಷ್ಟು ದಿನ ಎಲ್ಲಿ ಹಾಳಾಗಿ ಹೋಗಿದ್ದೆ ಎಂದು ಹೊಡೆಯಲು ಬಂದರು, ಅಮ್ಮನ ಸೀರೆಯ ಹಿಂದೆ ಅಡಗಿ ಅಂಕಪಟ್ಟಿ ತೋರಿಸಿದೆ, ಅಂಕಪಟ್ಟಿ ನೋಡಿದ ಅಪ್ಪನ ಕಣ್ಣಲ್ಲೂ ಕಂಬನಿ ತುಂಬಿ ಹರಿಯಿತು. ನಿನ್ನ ಭರವಸೆಯ ಮಾತನ್ನು ಅಂದು ಅರ್ಥ ಮಾಡಿಕೊಳ್ಳದೆ ಅನ್ಯಾಯವಾಗಿ ನಿನ್ನನ್ನು ಹೊಡೆದು ಮನೆ ಬಿಟ್ಟು ಹೋಗುವಂತೆ ಮಾಡಿ ಬಿಟ್ಟೆನಲ್ಲ, ನನ್ನನ್ನು ಕ್ಶಮಿಸು ಮಗನೇ ಎಂದಾಗ ನಾನು ಪಟ್ಟ ಕಷ್ಟಗಳೆಲ್ಲ ನನಗೆ ಮರೆತೇ ಹೋಯಿತು.

ಅಂದು ನನಗೆ ಅರ್ಥವಾಗದಿದ್ದ ಆ ಅಪ್ಪ ಇಂದಿಗೂ ನನಗೆ ಅರ್ಥವಾಗಿಯೇ ಇಲ್ಲ, ಅಮ್ಮ ಈಗಿಲ್ಲ, ಅಪ್ಪ ಕಲ್ಲು ಗುಂಡಿನಂತೆ ದೂರವೇ ಉಳಿದು ಹೋದರು. 25 ವರ್ಷಗಳ ನಂತರ ದುಬೈನಲ್ಲಿ ಕುಳಿತು ಆ ಪ್ರಸಂಗವನ್ನು ನೆನಪಿಸಿಕೊಂಡಾಗ ಕಣ್ಗಳು ಒದ್ದೆಯಾದವು.

ನೆನಪಿನಾಳದಿಂದ..2..ಅಪ್ಪನ ಸಿಂಗಲ್ ನಂಬರ್ ಲಾಟರಿ ಖಯಾಲಿಯ ಕಥೆ.

1985 ರಿಂದ 2005 ರ ಸಮಯದಲ್ಲಿ ನಮ್ಮ ಘನ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಿಂಗಲ್ ನಂಬರ್ ಲಾಟರಿ ಟಿಕೆಟ್ ಗಳ ಭರ್ಜರಿ ಮಾರಾಟ, ಎಲ್ಲೆಲ್ಲಿ ನೋಡಿದರಲ್ಲಿ ಜಾಹೀರಾತುಗಳು, ಅದೇನು ಮೋಡಿ,, ಅದೇನು ಕಥೆ. ಈಗ ನೆನಪಿಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ, ಅದೆಷ್ಟು ಕುಟುಂಬಗಳು ಆ ದಿನಗಳಲ್ಲಿ ತಮ್ಮ ನೆಮ್ಮದಿಯನ್ನು ಕಳೆದುಕೊಂಡವೋ ? ಅದೆಷ್ಟು ಬಾಳಿ ಬದುಕಬೇಕಾದ ಜೀವಗಳು ಕಣ್ಮುಚ್ಚಿಕೊಂಡವೋ, ದೇವರಿಗೇ ಗೊತ್ತು. ಅಂಥ ಸಮಯದಲ್ಲಿ ನನ್ನ ಅಪ್ಪನದೂ ಒಂದು ದೊಡ್ಡ ಕಥೆ. ಪ್ರತಿ ದಿನ ಸಿಂಗಲ್ ನಂಬರ್ ಲಾಟರಿ ಆಡಿದ್ದೂ ಆಡಿದ್ದೇ, ಕನುಸು ಕಂಡಿದ್ದೂ ಕಂಡಿದ್ದೇ!! ಸರ್ವಗ್ನ್ಯನ ಒಂದು ವಚನವನ್ನು ಆ ಸಮಯದಲ್ಲಿ ಹೀಗೆ ಬದಲಿಸಲಾಗಿತ್ತು, " ಸಿಂಗಲ್ ನಂಬರ್ ಲಾಟರಿ ಆಡಿ, ಇದ್ದುದೆಲ್ಲವ ನೀಗಿ, ಸಾಲಗಾರನಾಗಿ ಬರುವವನ, ಸದ್ದಡಗಿ ಸಂತಾನವೆದ್ದು ಹೋಗುವುದು, ಸರ್ವಗ್ನ್ಯ"

ಸಿಕ್ಕಿಂ, ಹರ್ಯಾಣ, ಭೂತಾನ್ ಮೊದಲಾದ ಹೊರ ರಾಜ್ಯಗಳ ಲಾಟರಿ ಟಿಕೆಟ್ ಗಳು ಅತಿ ಹೆಚ್ಚು ಬಹುಮಾನದ ಆಸೆ ಹುಟ್ಟಿಸಿ ಬಹುತೇಕ ಜನರ ಇಡೀ ದಿನದ ವರಮಾನವನ್ನೇ ಕಬಳಿಸಿ ಹಾಕುತ್ತಿದ್ದವು. ಆ ಮೋಹದ ಜಾಲಕ್ಕೆ ನನ್ನ ಅಪ್ಪನೂ ಸಿಲುಕಿದರು. ಅವರು ನಡೆಸುತ್ತಿದ್ದ ಸಣ್ಣ ಹೋಟೆಲಿನಲ್ಲಿ ಬರುತ್ತಿದ್ದ ಆದಾಯವನ್ನೆಲ್ಲ ಜೈ ದುರ್ಗಿ, ಮಹಾಲಕ್ಷ್ಮಿ, ಲಾಭಲಕ್ಷ್ಮಿ ಮುಂತಾದ ಲಕ್ಷ್ಮಿಯರು ಸ್ವಾಹಾ ಮಾಡಿ ಸಂಜೆಯಾದರೆ ಸಾಕು, ಅಪ್ಪನ ಪಿತ್ತ ನೆತ್ತಿಗೇರಿ ಲಾಟರಿಯಲ್ಲಿ ಸೋತ ಸೋಲಿನ ಸೇಡನ್ನು ಎಳೆ ವಯಸ್ಸಿನ ನನ್ನ ಮೇಲೋ, ಇಲ್ಲ, ಮೈಸೂರಿನ ಸಾಧು ಪ್ರಾಣಿಯಾದ ಅಮ್ಮನ ಮೇಲೋ ತೀರಿಸಿಕೊಳ್ಳತೊಡಗಿದರು. ಇದು ಹೀಗೇ ಮುಂದುವರೆದು ಅಪ್ಪ ಸಿಕ್ಕ ಸಿಕ್ಕವರಲ್ಲಿ ಸಾಲ ಮಾಡತೊಡಗಿದರು. ಅವರಿಗೆ ಲಾಟರಿಯಲ್ಲಿ "ಜಯಲಕ್ಷ್ಮಿ" ಒಲಿಯಲೇ ಇಲ್ಲ, ಅವರು ಮಾಡಿದ ಸಾಲಕ್ಕೆ ದಾದಿಯ ಕೆಲಸ ಮಾಡುತ್ತಿದ್ದ ಅಮ್ಮ, ತನ್ನ ಸಂಬಳದ ಹಣದಿಂದ ಬಡ್ಡಿ ಕಟ್ಟುವ ಪರಿಸ್ಥಿತಿ ಬಂದೊದಗಿತು. ಮನೆ ಎಂಬ ಮನೆಯೇ ನರಕವಾಗಿ ಹೋಯಿತು.

ಅಪ್ಪನ ಲಕ್ಕಿ ನಂಬರ್ ಗಳಾದ 05, 09 ತಿಪಟೂರಿನ ಯಾವುದೇ ಅಂಗಡಿಯಲ್ಲಿದ್ದರೂ ಬಿಡುತ್ತಿರಲಿಲ್ಲ. ಯಾರಾದರೂ ಒಬ್ಬ ಶಿಷ್ಯನನ್ನು ಕಳುಹಿಸಿ ಇದ್ದಬದ್ದ ಟಿಕೆಟ್ ಗಳನ್ನೆಲ್ಲ ಖರೀದಿಸುತ್ತಿದ್ದರು. ಸಂಜೆ ಫಲಿತಾಂಶ ಬಂದಾಗ, ಅವರ ನಂಬರ್ ಗೆದ್ದಿದ್ದರೆ, ಆಹಾ, ಪ್ರಪಂಚವನ್ನೇ ಗೆದ್ದಂತೆ ಸಂತೋಷ ಪಡುತ್ತಿದ್ದರು. ಆಕಸ್ಮಾತ್ ಸೋತಿದ್ದರೆ, ಗೋವಿಂದಾ,,,,,,,, ಗೋವಿಂದ,, ಅವರ ಕಣ್ಮುಂದೆ ಬರಲು ಎಲ್ಲರೂ ಹೆದರುತ್ತಿದ್ದರು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ, ಸಂಜೆ 5 ಘಂಟೆಗೆ ಆ ದರಿದ್ರ ಲಾಟರಿ ಫಲಿತಾಂಶ ಬರುವ ಸಮಯಕ್ಕೆ ಸರಿಯಾಗಿ, ಅಪ್ಪಿತಪ್ಪಿಯೂ ಯಾವ ಗಿರಾಕಿಯೂ ಅಪ್ಪನ ಹೋಟೆಲ್ ಕಡೆ ತಲೆ ಹಾಕುತ್ತಿರಲಿಲ್ಲ. ಅರ್ಧ ಟೀ ಕುಡಿಯುವ ಗಿರಾಕಿ ಹೋಟೆಲಿಗೆ ಬಂದರೆ, ಮುಗಿಯಿತು ಅವನ ಕಥೆ, ಅಪ್ಪನ ಲಾಟರಿ ಪ್ರವರ, ಅವರ " ಭರ್ಜರಿ ಕ್ಯಾಲ್ಕುಲೇಷನ್ಸ್" ಗಳ ಕಥೆಯನ್ನೆಲ್ಲಾ ಕೇಳುವ ಘೋರ ಶಿಕ್ಷೆಗೆ ಒಳಗಾಗಬೇಕಿತ್ತು.

ಈ ಕಥೆ ಎಲ್ಲಾ ಕಡೆ ಹರಡಿ ಕೊನೆಗೆ ಹೋಟೆಲಿನ ವ್ಯಾಪಾರವೇ ಬಿದ್ದು ಹೋಯಿತು. ಈಗ ಅಪ್ಪ ಎಲ್ಲರ ಕಣ್ಣಿಗೆ ಒಬ್ಬ "ಭಯೋತ್ಪಾದಕ" ನಂತೆ ಕಾಣುತ್ತಿದ್ದರು. ಅವರನ್ನು ಕಂಡರೆ ಸಾಕು, ಅವರ ಆಪ್ತ ಮಿತ್ರರೂ ಸಹ ಕದ್ದು ಬೇರೆ ದಾರಿಯಿಂದ ಹೋಗಲು ಶುರುವಿಟ್ಟರು. ಈಗ ಅಪ್ಪ ಅಕ್ಷರಶ: ಏಕಾಂಗಿಯಾಗಿದ್ದರು. ಅವರಿಗೆ ಸಿಕ್ಕಿದ್ದು ಈಗ ಅವರ ಸಾಲಕ್ಕೆ ಬಡ್ಡಿ ಕಟ್ಟಲು ಅಮ್ಮ, ಅವರ ಸಿಟ್ಟು, ಸೆಡವುಗಳಿಗೆಲ್ಲ "ಒದೆ" ತಿಂದು ಅವರನ್ನು ಸಮಾಧಾನಿಸಲು ಬಡಪಾಯಿ ನಾನು! ಜೀವನ ನಿಜವಾಗಲೂ ನನಗೆ, ನನ್ನ ಅಮ್ಮನಿಗೆ ನುಂಗಲಾರದ ಬಿಸಿ ತುಪ್ಪವಾಗಿ ಹೋಗಿತ್ತು. ಆಗಲೇ ಅಪ್ಪ ನನ್ನನ್ನು ಒಂದು ದಿನ ವಿನಾ ಕಾರಣ ಎಲ್ಲರೆದುರು ತದುಕಿ ಮನೆ ಬಿಟ್ಟು ಓಡಿ ಹೋಗುವಂತೆ ಮಾಡಿದ್ದು, ಹೇಗೋ ಹತ್ತನೆ ತರಗತಿಯ ಫಲಿತಾಂಶ ಬಂದ ನಂತರ ಹಿಂತಿರುಗಿ ಬಂದ ನಾನು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮಾ ಮಾಡುವೆನೆಂದಾಗ, ಕೇವಲ ಮೂರು ಸಾವಿರ ರೂಪಾಯಿ ಕಟ್ಟಲು ನಿರಾಕರಿಸಿ, ನನ್ನ ಭವಿಷ್ಯಕ್ಕೆ ಕಲ್ಲು ಹಾಕಿದ್ದು. ಅಮ್ಮ ಮೊದಲೇ ಸಾಧು ಪ್ರಾಣಿ, ಅವರಲ್ಲಿ ಗಂಡನಿಗೆ ಎದುರಾಡುವುದಿರಲಿ, ಗಟ್ಟಿಯಾಗಿ ಮಾತಾಡಲೂ ಶಕ್ತಿಯಿರಲಿಲ್ಲ. ಅಮ್ಮನೂ ಸಹಾ ನಿಸ್ಸಹಾಯಕತೆಯಿಂದ ಕೈ ಚೆಲ್ಲಿದರು.

ಆಗ ಮತ್ತೆ ನಾನು ಓಡಿದೆ ನೋಡಿ, ಮನೆ ಬಿಟ್ಟು, ತಿಪಟೂರಿನಿಂದ, ಸೀದಾ ಹೋಗಿದ್ದು, ಹೊಳೆ ನರಸೀಪುರಕ್ಕೆ, ಚಿಕ್ಕಪ್ಪನ ಮನೆಗೆ. ಆಗ ನನಗೆ ಆಶ್ರಯ ನೀಡಿ ಕಾಲೇಜಿಗೆ ಸೇರಿಸಿ, ಓದಿ ಪದವೀಧರನಾಗಲು ಪ್ರೇರೇಪಿಸಿದ್ದು ಅದೇ ನನ್ನ ಚಿಕ್ಕಪ್ಪ. ಆಕಸ್ಮಾತ್, ಅಂದು ಅವರು ನನ್ನ ಕೈ ಹಿಡಿಯದೆ ಇದ್ದಿದ್ದರೆ, ನಾನು ಇಂದು ಯಾವುದೋ ಒಂದು ಹೋಟೆಲಿನಲ್ಲಿ ಮಾಣಿಯಾಗಿಯೇ ನನ್ನ ಜೀವನ ಕಳೆಯಬೇಕಾಗಿರುತ್ತಿತ್ತು.

ಹೇಮಾವತಿ ನದಿಯ ದಡ ನನ್ನ ಅಚ್ಚು ಮೆಚ್ಚಿನ ತಾಣವಾಯಿತು, ಸಂಜೆಯ ಹೆಚ್ಚು ಹೊತ್ತನ್ನು ನಾನು ಅಲ್ಲಿಯೇ ಕಳೆಯುತ್ತಿದ್ದೆ. ನನ್ನ ಮುಂದಿನ ಜೀವನ ಹೇಗಿರಬೇಕು, ಇಂಥ ಪರಿಸ್ಥಿತಿಯಲ್ಲಿ ಹೇಗೆ ನನ್ನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತುಂಬ ದೀರ್ಘವಾಗಿ ಯೋಚಿಸುತ್ತಿದ್ದ್ದೆ. ಹಲವಾರು ತಾಕಲಾಟಗಳ ನಡುವೆಯೂ ತಾಯಿ ಹೇಮಾವತಿ, ತನ್ನ ಮಡಿಲಲ್ಲಿ ನೊಂದಿದ್ದ ನನ್ನ ಮನಕ್ಕೆ ತಂಪನ್ನೆರೆದು, ಒಂದು ಸುಂದರ ಭವಿಷ್ಯ ರೂಪಿಸುವ ಛಲಕ್ಕೆ ನನ್ನನ್ನು ಸಿದ್ಧಗೊಳಿಸಿದಳು. ತಾಯಿ ಹೇಮಾವತಿಗೆ ನನ್ನ ನಮನ. ಆ ದಿನದ ಧ್ರುಡ ನಿರ್ಧಾರದ ಫಲವೇ ಇಂದು ನಾನು ದುಬೈನಲ್ಲಿ ಕುಳಿತು ಕೆಲಸ ಮಾಡುವುದಕ್ಕೆ ಕಾರಣವೆನ್ನಬಹುದು.

ಕಾರಿನ ಕಥೆ.


ದುಬೈನಲ್ಲಿ ಕೆಲಸ ಮಾಡಲು ಬಂದ ನಂತರ ಇಲ್ಲಿನ ವಾಹನ ಚಾಲನಾ ಪರವಾನಗಿ ಪಡೆದೆ. ಕಂಪನಿಯಿಂದ ಒಳ್ಳೆಯ ಕಾರ್ ಕೂಡ ಸಿಕ್ಕಿತು. ಕಾರು ನನ್ನ ಕೆಲಸದ ಅವಿಭಾಜ್ಯ ಅಂಗ. ನನಗೆ ಇಲ್ಲಿ ಕಾರು ಸಿಕ್ಕಿದ ದಿನ ಅಲ್ಲಿ ಬೆಂಗಳೂರಿನಲ್ಲಿ ಪತ್ನಿ - ಮಕ್ಕಳು ಅಕ್ಕ ಪಕ್ಕದವರಿಗೆಲ್ಲಾ ಸಿಹಿ ಹಂಚಿ ಸಂತೋಷಪಟ್ಟಿದ್ದರು. ಸ್ವಲ್ಪ ದಿನಗಳು ಕಳೆದ ನಂತರ ಶುರುವಾಯಿತು ನೋಡಿ, ಒಮ್ಮೆ ಮೆತ್ತಗೆ ಮಗ ಶುರು ಮಾಡಿದ, ಅಪ್ಪ, ನಮಗೂ ಒಂದು ಕಾರ್ ಕೊಡಿಸಪ್ಪ, ಮತ್ತೊಮ್ಮೆ ಮುದ್ದಿನ ಮಗಳು ಕೇಳಿಸಿಯೂ ಕೇಳಿಸದಂತಹ ಧ್ವನಿಯಲ್ಲಿ ಉಸುರಿದ್ದಳು, ಅಪ್ಪಾ, ನಮಗೊಂದು ಕಾರ್.

ಕೊನೆಗೆ ಪತ್ನಿ, ಕಲಾ, ಫೋನಿನಲ್ಲಿ "ಮಕ್ಕಳು ತುಂಬಾ ಆಸೆ ಪಡ್ತಿದಾರೆ, ಎಲ್ಲಾದ್ರೂ ಹೋಗ್ಲಿ, ಒಂದು ಕಾರ್ ಕೊದಿಸಿಬಿಡ್ರೀ" ಅಂತ ಬೇರೆ ಶಿಫಾರಸ್ಸು ಮಾಡಿದಳು. ಮೊದಲು ಅವಳಿಗೆ ವಾಹನ ಚಾಲನಾ ಪರವಾನಗಿ ಪಡೆಯುವಂತೆ ಹೇಳಿದೆ. ತರಬೇತಿ ಪಡೆದು ಕೇವಲ ಎರಡೇ ತಿಂಗಳಲ್ಲಿ ಕಲಾ ಪರವಾನಗಿ ಪಡೆದೇ ಬಿಟ್ಟಳು. ನನಗೆ ಅನುಮಾನ, ಕಾರ್ ನಿಜವಾಗಲೂ ಬೇಕಿದ್ದದ್ದು ಮಕ್ಕಳಿಗಾ ಅಥವಾ ಇವಳಿಗಾ ?? ಈಗ ಕಾರಿಗಾಗಿ ಬೇಡಿಕೆ ಮತ್ತಷ್ಟು ಹೆಚ್ಚಾಯಿತು. ಮಕ್ಕಳಿಬ್ಬರೂ ದಿನಕ್ಕೊಮ್ಮೆ ನನಗೆ ಕಾರಿನ ಬಗ್ಗೆ ಕುಯ್ಯತೊಡಗಿದರು. ಕೊನೆಗೆ ಅವರಿಗೆ " ಈ ಸಲ ರಜಕ್ಕೆ ಬಂದಾಗ" ಕಾರ್ ಕೊಡಿಸುವ ಭರವಸೆ ಕೊಟ್ಟೆ.

ಭರವಸೆ ಕೊಟ್ಟಂತೆ ಈ ಸಲ ರಜಕ್ಕೆ ಬೆಂಗಳೂರಿಗೆ ಹೋದಾಗ ಹೊಸ ಕಾರ್- - ಹ್ಯುಂಡೈ - ಐ 10, ಟೆಸ್ಟ್ ಡ್ರೈವ್ ಮಾಡಿದೆ, ತುಂಬಾ ಚೆನ್ನಾಗಿದೆ ಅನ್ನಿಸಿತು. ಖರೀದಿಸಿಯೇ ಬಿಟ್ಟೆ, ಕಲಾ ಮತ್ತು ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ. ಎಲ್ಲರಿಗೂ ಸಿಹಿ ತಿನ್ನಿಸಿದ್ದೇ ತಿನ್ನಿಸಿದ್ದು, ಎಲ್ಲರಿಗೂ ಹೇಳಿದ್ದೇ ಹೇಳಿದ್ದು, ಹೊಸ ಕಾರ್ ತಂದ್ವಿ ಅಂತ.

ಅವರನ್ನು ಚೆನ್ನಾಗಿ ಕಾರಿನಲ್ಲಿ ಸುತ್ತಾಡಿಸಿದೆ, ಕಲಾ ಮತ್ತು ಮಗಳು ಗೌತಮಿಗೆ ಕಾರ್ ಓಡಿಸಲು ಕೊಟ್ಟು ಪ್ರೋತ್ಸಾಹಿಸಿದೆ. ನಾನು ರಜೆ ಮುಗಿದು ದುಬೈಗೆ ಹೊರಟಾಗ ಎಲ್ಲರ ಕಣ್ಣಲ್ಲೂ ನೀರು, ಮಗ ವಿಷ್ಣು ಅಳುವಾಗ ಹ್ರುದಯ ಹಿಂಡಿದಂತಾಗಿ ದುಬೈಗೆ ಹೋಗುವುದೇ ಬೇಡ ಅನ್ನಿಸಿತ್ತು. ಆದರೆ ಇನ್ನೂ ನಿರ್ವಹಿಸಬೇಕಾದ ಜವಾಬ್ಧಾರಿಗಳು ತುಂಬಾ ಇವೆ, ಹೋಗಲೇಬೇಕು ಎಂದ ಮನಸ್ಸಿನ ಮಾತು ಕೇಳಿ ಹೊರಟು ಬಂದೆ,, ಭಾರವಾದ ಹ್ರುದಯದೊಂದಿಗೆ.

ನೆನಪಿನಾಳದಿಂದ...3...ತುರ್ತು ಪರಿಸ್ಥಿತಿಯ ದಿನಗಳಲ್ಲಿ ಹೀರೋ ಆಗಿ ಮೆರೆದ ಅಪ್ಪ.

ಅಪ್ಪ ಮೈಸೂರಿನಲ್ಲಿ ಶಿವರಾಂ ಪೇಟೆಯಲ್ಲಿದ್ದ ಎಲ್ಲಾ ಹೋಟೆಲ್ ಗಳಲ್ಲಿ ಅಡಿಗೆ ಭಟ್ಟರಾಗಿ, ಮಾಣಿಯಾಗಿ, ದೋಸೆ ಭಟ್ಟರಾಗಿ ಕೆಲಸ ಮಾಡಿ, ಎಲ್ಲರೊಡನೆ ಒಂದಿಲ್ಲೊಂದು ಕಾರಣಕ್ಕೆ ಜಗಳ ಮಾಡ್ಕೊಂಡು ಕೊನೆಗೆ ಮಂತ್ರಿ ದಂಪತಿಗಳಾಗಿದ್ದ ಯಶೋಧರಮ್ಮ ದಾಸಪ್ಪನವರ ಮನೆಯಲ್ಲಿ ಅಡುಗೆ ಭಟ್ಟರಾಗಿ ಕೆಲಸಕ್ಕೆ ಸೇರಿಕೊಂಡರಂತೆ. ಇದು ನನಗೆ ಅಪ್ಪನೇ ಹೇಳಿದ್ದು, ನಾನು ಇದುವರೆಗೂ ಅವರನ್ನು ನೋಡಿಯೇ ಇಲ್ಲ ಬಿಡಿ. ಹೇಗೋ ಅವ್ರಿಗೆ ಮಸ್ಕಾ ಹೊಡೆದು ಅಪ್ಪ, ಅಮ್ಮನಿಗೆ ಮೈಸೂರಿನ ಕ್ರುಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ದಾದಿಯ ಕೆಲಸದ ತರಬೇತಿಗೆ ಒಂದು ಸೀಟು ಗಿಟ್ಟಿಸಿದರಂತೆ. ಆಗ ನನಗೆ ಕೇವಲ ಒಂದೂವರೆ ವರ್ಷ ವಯಸ್ಸಂತೆ, ಬನುಮಯ್ಯ ವ್ರುತ್ತದ ಕ್ಷೇತ್ರಯ್ಯ ರಸ್ತೆಯಲ್ಲಿ ನಮ್ಮ ಬಾಡಿಗೆ ಮನೆ, ಮನೆಯ ಒಡತಿ ಪುಟ್ಟತಾಯಮ್ಮ, ಅವರು ಈಗಿಲ್ಲ, ನನಗೆ ಸಮಾಧಾನ ಮಾಡಲು ಅಮ್ಮನಂತೆ ನನ್ನನ್ನು ತಮ್ಮ ಸೊಂಟದ ಮೇಲೆ ಎತ್ತಿಕೊಂಡು ಚಂದಮಾಮನನ್ನು ತೋರಿಸಿ ರಮಿಸುತ್ತಿದ್ದರಂತೆ. ನಾನು ದೊಡ್ಡವನಾದ ಮೇಲೂ ಸಾಕಷ್ಟು ಸಲ ಹೋಗಿ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿ ಬಂದೆ.

ನಾಲ್ಕು ವರ್ಷದ ತರಬೇತಿಗೆ ಸೇರಿದ ಅಮ್ಮ ಕ್ರುಷ್ಣರಾಜೇಂದ್ರ ಆಸ್ಪತ್ರೆಯ ದಾದಿಯರ ವಸತಿ ಗ್ರುಹದಲ್ಲಿ ಬಂಧಿಯಾಗಿ ಹೋದರು. ನಾನು ಅಮ್ಮ ಬೇಕೆಂದು ಅತ್ತಾಗಲೆಲ್ಲ ಅಪ್ಪ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಮ್ಮನನ್ನು ತೋರಿಸಿ ವಾಪಸ್ ಕರೆದುಕೊಂಡು ಬರುತ್ತಿದ್ದರಂತೆ. ಹೀಗೆ ಕ್ರುಷ್ಣ ರಾಜೇಂದ್ರ‍ ಆಸ್ಪತ್ರೆ ನನ್ನ ಬಾಲ್ಯದ ನೆನಪುಗಳ ಅವಿಭಾಜ್ಯ ಅಂಗವಾಗಿ ಹೋಯ್ತು. ಒಮ್ಮೆ ಅದೇ ಆಸ್ಪತ್ರೆಯ ಮೇಲಿನ ಬಾಲ್ಕನಿಯಲ್ಲಿ, ಮೈಸೂರಿನ ವಿಶ್ವ ಪ್ರಸಿದ್ಧ ದಸರಾ ಸಮಯದಲ್ಲಿ ಅಮ್ಮನೊಂದಿಗೆ ನಿಂತು " ಜಂಬೂ ಸವಾರಿ" ನೋಡಿದ್ದು ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿ ನಿಂತಿದೆ.

ನಾಲ್ಕು ವರ್ಷಗಳ ತರಬೇತಿ ಮುಗಿದ ನಂತರ, ಅಮ್ಮನಿಗೆ ಮೊದಲ ಕೆಲಸದ ಅವಕಾಶ ಸಿಕ್ಕಿದ್ದು, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಒಂದು ಪುಟ್ಟ ಸುಂದರ ಗ್ರಾಮ, ಮಂಡಿಕಲ್ಲು, ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವ್ರುತವಾಗಿದ್ದು, ಹೆಚ್ಚು ಕಡಿಮೆ ಕಾಡು ಪ್ರದೇಶದಂತೆ ಇತ್ತು. ಆಂಧ್ರದ ಗಡಿಗೆ ಹೊಂದಿಕೊಂಡಿರುವ ಆ ಗ್ರಾಮದಲ್ಲಿನ ಜನರು ಓದುವುದು, ಬರೆಯುವುದು ಕನ್ನಡ, ಆದರೆ ಮಾತನಾಡುವುದು ತೆಲುಗಿನಲ್ಲಿ. ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ಒಂದನೆ ತರಗತಿಯಲ್ಲಿ ಓದುತ್ತಿದ್ದ ನನ್ನನ್ನು, ನಾಲ್ಕನೆ ಕ್ಲಾಸಿನಲ್ಲಿದ್ದ ನನ್ನ ಅಕ್ಕನನ್ನು ಅನಾಮತ್ತಾಗಿ ಎತ್ತಿಕೊಂಡು ಅಪ್ಪ ಅಮ್ಮನೊಂದಿಗೆ ಬಂದು ಮಂಡಿಕಲ್ಲಿನಲ್ಲಿ ಇಳಿದರು. ಒಂದು ಬಾಡಿಗೆ ಮನೆ ಹಿಡಿದು ಅಮ್ಮ ತಮ್ಮ ಕೆಲಸ ಪ್ರಾರಂಭಿಸಿದರಂತೆ, ನನ್ನನ್ನು, ಅಕ್ಕ ಮಂಜುಳಳನ್ನು ಅಲ್ಲೇ ಶಾಲೆಗೆ ಹಾಕಿದರು. ಅದುವರೆಗೂ ಮೈಸೂರಿನ ಅಪ್ಪಟ ಕನ್ನಡದಲ್ಲಿ ಓದಿ ಬರೆದು ಮಾತಾಡುತ್ತಿದ್ದ ನಾನು ಮತ್ತು ನನ್ನ ಅಕ್ಕ ತಂತಾನೇ ತೆಲುಗಿನಲ್ಲಿ ಮಾತಾಡಲು ಆರಂಭಿಸಿದ್ದು ಇಲ್ಲಿಂದಲೇ. ಅಮ್ಮ ಆ ಮಂಡಿಕಲ್ಲಿನ ಜೊತೆಗೆ ಸುತ್ತಲಿನ ಸುಮಾರು ಹತ್ತು ಹಳ್ಳಿಗಳಿಗೆ ಭೇಟಿ ಕೊಟ್ಟು ಅಲ್ಲಿನ ಬಸುರಿ-ಬಾಣಂತಿಯರ, ಮಕ್ಕಳ ಯೋಗಕ್ಷೇಮ ನೋಡುವುದರ ಜೊತೆಗೆ ಎಲ್ಲ ದಾಖಲಾತಿಯನ್ನೂ ಮಾಡಬೇಕಿತ್ತು. ಇದೇ ಗ್ರಾಮದಲ್ಲಿ ನನ್ನ ಒಲವಿನ ತಮ್ಮ "ವಿಜಿ" ಹುಟ್ಟಿದ್ದು.

ಅಪ್ಪ ಯಾವಾಗಲೂ ಅಮ್ಮನ ಜೊತೆಯಲ್ಲಿ ಹೋಗುವುದು, ಎಲ್ಲರಿಗೂ ಅವರನ್ನು ಪರಿಚಯಿಸಿ ಕೊಡುವುದು ಮುಂತಾಗಿ ಅಮ್ಮನ ಕೆಲಸ ಸುಗಮವಾಗಿ ನಡೆಯಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಿದರಂತೆ. ಹೀಗೆ ಎಲ್ಲಾ ಒಂದು ರೀತಿಯಲ್ಲಿ ಪರವಾಗಿಲ್ಲ ಅನ್ನಿಸಿದಾಗ ಅದೇ ಊರಿನ ಬಸ್ ನಿಲ್ದಾಣದಲ್ಲಿ ಒಂದು ಚಿಕ್ಕ ಹೋಟೆಲ್ ಶುರು ಮಾಡಿದರಂತೆ. ಅಲ್ಲಿಂದ ಶುರುವಾಯ್ತು ನೋಡಿ, ಅಪ್ಪನ "ಹೀರೋಗಿರಿ", ಆ ಪ್ರದೇಶದಲ್ಲಿ. ಅದು ಮೊದಲೇ ನಗರಗಳಿಂದ ತುಂಬಾ ದೂರದಲ್ಲಿರುವ ಒಂದು ಕುಗ್ರಾಮ. ಜೊತೆಗೆ ಜನರು ಅಂಥ ವಿದ್ಯಾವಂತರಲ್ಲ, ಎಲ್ಲೆಲ್ಲಿ ನೋಡಿದರೂ ಚೆಡ್ಡಿ ಹಾಕಿಕೊಂಡು ಓಡಾಡುವ ಜನಗಳೇ ಕಾಣುತ್ತಿದ್ದರಂತೆ, ಯಾರಾದರೂ ಅವರ ಮುಂದೆ ಪ್ಯಾಂಟು ಹಾಕಿಕೊಂಡು ಬಂದರೆ ಕೈ ಮುಗಿದು ನಮಸ್ಕರಿಸುತ್ತಿದ್ದರಂತೆ.

ಈ ರೀತಿಯ ಪ್ಯಾದೆಗಳು ಸಿಕ್ಕಿದಾಗ, ಹೊಳೆ ನರಸೀಪುರದಲ್ಲಿ ಹುಟ್ಟಿ ಬೆಳೆದು, ಹೇಮಾವತಿಯ ನೀರು ಕುಡಿದು, ಅಲ್ಲಿಂದ ಮೈಸೂರಿಗೆ ಬಂದು, ಕಾವೇರಿಯ ನೀರು ಕುಡಿದು, ಸಿಕ್ಕಿದ ಹೋಟೆಲ್ ಗಳಲ್ಲೆಲ್ಲಾ ಕೆಲಸ ಮಾಡಿ, ಚೆನ್ನಾಗಿ ತಿಂದುಂಡು, ಅಲ್ಲದೆ ಮಂತ್ರಿ ದಂಪತಿಗಳಾದ ಯಶೋಧರಮ್ಮ ದಾಸಪ್ಪನವರ ಮನೆಯಲ್ಲಿ ಕೆಲಸ ಮಾಡಿ ಬಂದ, ಆರಡಿ ಎತ್ತರದ ಆಜಾನುಬಾಹು ಅಪ್ಪ, ಆ ಗ್ರಾಮದವರ ಮುಂದೆ ದೊಡ್ಡ "ಹೀರೋ" ಆಗಿ ಕಂಡಿದ್ದರೆ ತಪ್ಪೇನಿಲ್ಲ ಬಿಡಿ, ಅದೂ ಇಲ್ಲಿಗೆ ಸುಮಾರು ೩೫ ವರ್ಷಗಳ ಹಿಂದೆ. ಯಾವ ಗಿರಾಕಿಯೇ ಹೋಟೆಲಿಗೆ ಬರಲಿ, ಅವನ ಪೂರ್ವಾಪರಗಳೇನನ್ನೂ ಲೆಕ್ಕಿಸದೆ ಅಪ್ಪ ಅವನಿಗೆ ಮೈಸೂರಿನ ಅನುಭವಗಳ ಬಗ್ಗೆ ವರ್ಣಿಸುತ್ತಿದ್ದರಂತೆ. ಅವರ ಮೈಸೂರಿನ ಅನುಭವಗಳನ್ನು ಕೇಳುವುದರ ಜೊತೆಗೆ ಆ ಗಿರಾಕಿಗಳಿಗೆ ಒಳ್ಳೆ ರಸವತ್ತಾದ ಮೈಸೂರು ಶೈಲಿಯ ತಿಂಡಿಗಳೂ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದುದರಿಂದ ಅಪ್ಪನ ಹೋಟೆಲ್ ವ್ಯಾಪಾರ ಚೆನ್ನಾಗಿಯೇ ಕುದುರಿತ್ತು. ಅದೆಷ್ಟೋ ಜನ ಅಪ್ಪನನ್ನು ಜೊತೆಯಲ್ಲಿ ಕರೆದುಕೊಂಡು, ತಮ್ಮ ಕೈಯಲ್ಲಿ ದುಡ್ಡಿಲ್ಲದಿದ್ದರೆ, ಸಾಲ-ಸೋಲವನ್ನಾದರೂ ಮಾಡಿ ಮೈಸೂರಿನ ದರ್ಶನ ಮಾಡಿ ಬಂದ ಕಥೆಗಳೂ ಸಾಕಷ್ಟಿವೆ.

ಇದೇ ಸಮಯದಲ್ಲಿ, ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ತಮ್ಮ ರಾಜಕೀಯ ಜೀವನದ ಏರು ಪೇರುಗಳಿಂದ ತಬ್ಬಿಬ್ಬುಗೊಂಡು ದೇಶದಲ್ಲಿ "ತುರ್ತು ಪರಿಸ್ಥಿತಿ" ಯನ್ನು ಘೋಷಿಸಿದ್ದರು. ಆಗ ಬಂದ ಒಂದು ಹೊಸ ಕಾಯಿದೆ, " ಕಡ್ಡಾಯ ಸಂತಾನ ನಿಯಂತ್ರಣ". ಈ ಹೊಸ ಕಾನೂನು ಬಂದಿದ್ದೇ ಬಂದಿದ್ದು, ಆ ಇಡೀ ಮಂಡಿಕಲ್ಲು ಮತ್ತದರ ಸುತ್ತ ಮುತ್ತಿನ ಗ್ರಾಮಗಳ ಜನರ ಜೀವನವೇ ದುರ್ಭರವಾಗಿ ಹೋಯಿತಂತೆ. ಪ್ರತಿದಿನ ಚಿಕ್ಕಬಳ್ಳಾಪುರದಿಂದ ಬರುತ್ತಿದ್ದ ಆರೋಗ್ಯ ಇಲಾಖೆಯ ವಾಹನಗಳು ಸಿಕ್ಕ ಸಿಕ್ಕವರನ್ನೆಲ್ಲಾ ತುಂಬಿಕೊಂಡು ಹೋಗಿ ಹೆಂಗಸಿಗರಿಗೆ "ಟ್ಯುಬೆಕ್ಟಮಿ", ಗಂಡಸರಿಗೆ "ವ್ಯಾಸೆಕ್ಟಮಿ" ಆಪರೇಷನ್ ಗಳನ್ನು ಬಲವಂತವಾಗಿ ಮಾಡತೊಡಗಿದರಂತೆ. ಅದುವರೆಗೂ ಸುತ್ತ ಮುತ್ತಲಿನ ಹಳ್ಳಿಗಳ ಬಸುರಿ ಬಾಣಂತಿಯರ ಆರೈಕೆ ಮಾಡಿ ಒಳ್ಳೆಯ ಹೆಸರನ್ನು ಪಡೆದಿದ್ದ ಅಮ್ಮ, ಈಗ ಎಲ್ಲರ ಮುಂದೆ " ಶೂರ್ಪನಖಿ" ಯಾಗಿದ್ದರು. ಸುತ್ತಲಿನ ಹಳ್ಳಿಗಳ ಹೆಣ್ಮಕ್ಕಳೆಲ್ಲ ಅಮ್ಮನಿಗೆ ಹಿಡಿ ಶಾಪ ಹಾಕುತ್ತಿದ್ದರಂತೆ. ಜೊತೆಗೆ ಆಗಿನ ವೈದ್ಯಾಧಿಕಾರಿಗಳಿಗೆ ಸರ್ಕಾರದಿಂದ " ಟಾರ್ಗೆಟ್" ಫಿಕ್ಸ್ ಮಾಡುತ್ತಿದ್ದರಂತೆ, ಇಂತಿಷ್ಟೆ ಆಪರೇಷನ್ಗಳನ್ನು ಸಾಧಿಸಬೇಕು ಎಂದು. ಇಲ್ಲದಿದ್ದರೆ ಅವರ ಸಂಬಳ ಗೋತಾ ಆಗುತ್ತಿತ್ತಂತೆ. ಇಂತಿಪ್ಪ ಪರಿಸ್ಥಿತಿಯಲ್ಲಿ ಅಮ್ಮ ಸೋತರು, ಅವರು ಯಾವುದೇ ಹಳ್ಳಿಗೆ ಹೋದರೂ ಅಲ್ಲಿ ಅವರ "ಟಾರ್ಗೆಟ್" ಮುಟ್ಟಲು ಸಾಧ್ಯವಾಗುತ್ತಿರಲಿಲ್ಲವಂತೆ.

ಆಗ ತಲೆ ಓಡಿಸಿದ ಅಲ್ಲಿನ ವೈದ್ಯಾಧಿಕಾರಿಗಳು, ಮಂಡಿಕಲ್ಲಿನಲ್ಲಿ ಹೋಟೆಲ್ ನಡೆಸಿಕೊಂಡು ತುಂಬಾ ಜನಾನುರಾಗಿಯಾಗಿದ್ದ ಅಪ್ಪನನ್ನು ತಮ್ಮ "ಟಾರ್ಗೆಟ್" ಸಾಧಿಸಿ, ತಮ್ಮ ಕೆಲಸ ಉಳಿಸಿಕೊಳ್ಳಲು ಒಂದು ಆಯುಧವಾಗಿ ಬಳಸಿಕೊಳ್ಳಲು ತೀರ್ಮಾನಿಸಿದರಂತೆ. ಅದರಂತೆ ಅವರಲ್ಲಿ ಒಪ್ಪಂದವಾಗಿ ಯಾವಾಗ ಅಪ್ಪ ವೈದ್ಯಾಧಿಕಾರಿಗಳ ಜೊತೆಯಲ್ಲಿ ಹೋಗುವರೋ, ಆಗ ಅಮ್ಮ ಮನೆಯಲ್ಲಿ ಉಳಿಯುವುದು, ಆಸ್ಪತ್ರೆಯ ಪಕ್ಕದಲ್ಲಿಯೇ ನಮಗೆ ಆಗ ಕ್ವಾರ್ಟರ್ಸ್ ಕೊಟ್ಟಿದ್ದರು, ಮನೆ ಮತ್ತು ಆಸ್ಪತ್ರೆ ಎರಡನ್ನೂ ನೋಡಿಕೊಳ್ಳುವುದು ಎಂದು ತೀರ್ಮಾನವಾಯ್ತು. ಆಗ ಶುರುವಾಯ್ತು ನೋಡಿ, ಅಪ್ಪನ ಪರಾಕ್ರಮ, ಆ ಹಳ್ಳಿಗಾಡಿನಲ್ಲಿ, ಚಿಕ್ಕಬಳ್ಳಾಪುರದಿಂದ ಬರುತ್ತಿದ್ದ ಆಸ್ಪತ್ರೆಯ ವ್ಯಾನ್ ಡ್ರೈವರ್ " ಜಾಫರ್" ಎಂಬುವವರಿಗೆ ನನ್ನನ್ನು ಕಂಡರೆ ತುಂಬಾ ಪ್ರ‍ೀತಿ, ೧೩ ಹೆಣ್ಣು ಮಕ್ಕಳ ತಂದೆಯಾಗಿದ್ದ ಆತನಿಗೆ ಗಂಡು ಮಕ್ಕಳಿರಲಿಲ್ಲವಂತೆ, ಅದೇಕೋ, ಅವನಿಗೆ ನಾನೆಂದರೆ ಪ್ರಾಣ, ಬರುವಾಗಲೆಲ್ಲಾ ನನಗಾಗಿ ಬಿಸ್ಕಟ್, ಚಾಕಲೇಟ್ಗಳನ್ನು ಮರೆಯದೆ ತರುತ್ತಿದ್ದ. ಈ "ಆಪರೇಷನ್ ಖೆಡ್ಡಾ" ಶುರುವಾಗಿ ಅಪ್ಪ ಅದರ " ಹೀರೋ" ಆದಾಗ, ಅವನು ನನ್ನನ್ನು ಪ್ರತಿ ಸಲವೂ ತನ್ನ ಹಂದಿ ಮೂತಿಯ "ದೊಡ್ಜೆ" ವ್ಯಾನಿನಲ್ಲಿ, ಮುಂದಿನ ಸೀಟಿನಲ್ಲಿ ತನ್ನ ಜೊತೆಯಲ್ಲೇ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದ. "ಹೀರೋ" ಮಗನಾಗಿದ್ದುದರಿಂದ ಯಾರೂ ಅದಕ್ಕೆ ಆಕ್ಷೇಪ ಮಾಡುತ್ತಿರಲಿಲ್ಲ.

ಈ "ಕಡ್ಡಾಯ ಸಂತಾನ ನಿಯಂತ್ರಣ" ಕಾಯಿದೆ ಬಂದ ಮೇಲೆ, ಆ ಹಳ್ಳಿಗಾಡಿನ ಜನ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ, ಅಪ್ಪನನ್ನು ಕರೆದುಕೊಂಡು ಸುತ್ತಲಿನ ಹಳ್ಳಿಗಳಿಗೆ ಹೋಗಲು ಶುರುವಿಟ್ಟ ಮೇಲೆ ಆ ವೈದ್ಯಾಧಿಕಾರಿಗಳಿಗೆ ಶುಕ್ರ ದೆಸೆ ಶುರುವಾಯಿತಂತೆ. ಹೋಟೆಲಿನಲ್ಲಿ ಅವರು ಬಂದು ಟೀ ಕುಡಿದು ಮೈಸೂರಿನ ಕಥೆಗಳನ್ನು ಕೇಳಿ ಹೋಗಿದ್ದ ಪರಿಚಯವನ್ನೇ ಉಪಯೋಗಿಸಿಕೊಂಡು, ಅಪ್ಪ ಆ ಹಳ್ಳಿಯ ಜನಗಳಿಗೆ ಸಂತಾನ ನಿಯಂತ್ರಣ, ಅದರಿಂದಾಗುವ ಉಪಯೋಗಗಳು, ಅದರಿಂದ ದೇಶಕ್ಕಾಗುವ ನೆರವು ಎಲ್ಲವನ್ನೂ ಅವರ ಮನದಟ್ಟಾಗುವಂತೆ ವಿವರಿಸುತ್ತಿದ್ದರಂತೆ. ಅವರ ಮಾತಿಗೆ ತಲೆದೂಗಿ, ಒಪ್ಪಿ, ಸಾಕಷ್ಟು ಜನ, ತಾವಾಗೇ ಮುಂದೆ ಬಂದು, ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದರಂತೆ. ಈ ಮೊದಲು ಪುಟ್ಟ ಆಸ್ಪತ್ರೆಯಲ್ಲಿ ಮಾಡುತ್ತಿದ್ದ ಆಪರೇಷನ್ ಗಳು ಈಗ ಪಕ್ಕದ ಪೆರೇಸಂದ್ರದ " ಟೆಂಟ್ ಸಿನಿಮಾ" ಗೆ ವರ್ಗಾವಣೆಗೊಂಡವಂತೆ. ಆ ಟೆಂಟ್ ಸಿನಿಮಾವನ್ನೇ ಒಂದು ದೊಡ್ಡ ಆಪರೇಷನ್ ಥಿಯೇಟ್ರ್ನಂತೆ ಪರಿವರ್ತಿಸಿ ಸಾವಿರಾರು ಆಪರೇಶನ್ ಗಳನ್ನು ಮಾಡಿದ ಕೀರ್ತಿ ಆಗಿನ ವೈದ್ಯಾಧಿಕಾರಿಗಳಿಗೆ ಸಲ್ಲುತ್ತದೆ.

ಹೀಗಿರುವಾಗ, ಆಪರೇಷನ್ಗಳ ಸಂಖ್ಯೆ ಹೆಚ್ಚಾದಂತೆ ಅಲ್ಲಿ ಸಂಭವಿಸುವ ಅವಘಡಗಳ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತಂತೆ. ಅದು ಯಾವ ಮಟ್ಟಕ್ಕೆ ಮುಟ್ಟಿತ್ತೆಂದರೆ, "ಆಪರೇಷನ್, ಡಾಕ್ಟರ್" ಎಂಬ ಎರಡು ಪದಗಳು ಮಂಡಿಕಲ್ಲಿನ ಸುತ್ತ ಮುತ್ತಲಿನ ಹಳ್ಳಿಗಳ ಜನರಿಗೆ ಸಖತ್ ಜ್ವರ ಬರಿಸಿ ನಿದ್ದೆಗೆಡಿಸುತ್ತಿದ್ದವಂತೆ. ಹೀಗಿರುವಾಗ, ಅಪ್ಪನ " ಹೀರೋಗಿರಿ" ಮುಗಿಯುವ ಮಟ್ಟಕ್ಕೆ ಬಂದಿತ್ತು. ಈಗ ಯಾರೂ ಮೊದಲಿನಂತೆ ಅಪ್ಪನ " ಮೈಸೂರು" ಮಾತಿಗೆ ಬೆರಗಾಗಿ ಆಪರೇಷನ್ ಮಾಡಿಸಿಕೊಳ್ಳಲು ಮುಂದೆ ಬರುತ್ತಿರಲಿಲ್ಲವಂತೆ. ಆದರೆ ವೈದ್ಯಾಧಿಕಾರಿಗಳು ಅವರಿಗೆ ಸರ್ಕಾರದಿಂದ ಬರುತ್ತಿದ್ದ ಒತ್ತಡವನ್ನು ತಡೆಯಲಾರದೆ ಬಲವಂತದ ಆಪರೇಷನ್ ಗಳಿಗೆ ಮುಂದಾದರಂತೆ. ಈ ಮಾತನ್ನು ನನಗೆ ಅಪ್ಪ ಆಗಾಗ ಹೇಳುತ್ತಿದ್ದರು, ಆಗ ಶುರುವಾಯ್ತು ನೋಡಿ, ನಿಜವಾದ "ಖೆಡ್ಡಾ ಆಪರೇಷನ್".

ಅಮ್ಮ ಯಾವ್ಯಾವ ಹಳ್ಳಿಗಳಿಗೆ ಹೋಗಿ ಎಲ್ಲರ ಯೋಗಕ್ಷೇಮ ನೋಡಿ ಮಾತ್ರೆ, ಟಾನಿಕ್ಕು ಕೊಟ್ಟು ಬರುತ್ತಿದ್ದರೋ, ಯಾವ್ಯಾವ ಹಳ್ಳಿಗಳ ಜನರು ಬಂದು ಅಪ್ಪನ ಹೋಟೆಲಿನಲ್ಲಿ ಮಧುರವಾದ ಮೈಸೂರಿನ ಮಾತು ಕೇಳಿ, ಮೈಸೂರ್ ಪಾಕ್ ತಿಂದು ಹೋಗಿದ್ದರೋ, ಅಲ್ಲೆಲ್ಲಾ ಈ "ಖೆಡ್ಡಾ ಆಪರೇಶನ್" ಶುರುವಾಯ್ತಂತೆ. ಸಿಕ್ಕ ಸಿಕ್ಕ ಹಳ್ಳಿಗಳಿಗೆ ನುಗ್ಗುವುದು, ಸಿಕ್ಕವರನ್ನು ಆ ಹಂದಿ ಮೂತಿಯಂಥ "ದೊಡ್ಜೆ" ವ್ಯಾನಿಗೆ ತುಂಬಿ ಪೆರೇಸಂದ್ರದ "ಟೆಂಟ್ ಸಿನಿಮಾ" ಗೆ ತೊಗೊಂಡು ಹೋಗಿ ಆಪರೇಷನ್ ಮಾಡಿ, ಸರ್ಕಾರಕ್ಕೆ ನಾವು ಇಂತಿಷ್ಟು "ಗುರಿ" ಸಾಧಿಸಿ ಬಿಟ್ಟೆವು ಎಂದು ವರದಿ ನೀಡಿ, ತಮ್ಮ ಕೆಲಸ ಉಳಿಸಿಕೊಂಡು ಸಮಾಧಾನದಿಂದ ನಿಟ್ಟುಸಿರು ಬಿಡುವುದು ವೈದ್ಯಾಧಿಕಾರಿಗಳ ನಿತ್ಯ ಕರ್ಮವಾಯ್ತಂತೆ. ಈ ಸಮಯದಲ್ಲಿ ಅಮ್ಮನ ಕೆಲಸ ಮನೆಯಲ್ಲಿ, ಅಪ್ಪನ ಕೆಲಸ ಹಳ್ಳಿಗಳಲ್ಲಿ, ಕೆಲಸ ಅಪ್ಪನದು, ಸಂಬಳ ಅಮ್ಮನಿಗೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದ ಎಲ್ಲಾ ವೈದ್ಯಾಧಿಕಾರಿಗಳೂ ಸಹ ತಮ್ಮ ಕೆಲಸ ಉಳಿಸಿಕೊಳ್ಳಲು ಅಪ್ಪನನ್ನು ಬಲವಾಗಿ ಅವಲಂಬಿಸಿದ್ದರಂತೆ. ಅವರ ಪಾಲಿಗೆ ಅಪ್ಪನೊಬ್ಬ "ಆಪದ್ಬಾಂಧವ" ಆಗಿಬಿಟ್ಟಿದ್ದರು.

ಕೊನೆಗೆ ಇದು ಯಾವ ಮಟ್ಟಕ್ಕೆ ಹೋಯಿತೆಂದರೆ, ಪ್ರತಿಯೊಂದು ಹಳ್ಳಿಯಲ್ಲೂ ಕೆಲವು ಧೈರ್ಯವಂತರನ್ನು ಬೆಳ್ಳಂ ಬೆಳಗ್ಗೆ ಊರ ಮುಂದಿನ ಅತಿ ಎತ್ತರದ ಮರ ಹತ್ತಿ ಕೂರಿಸುವುದು, ಅವರು ದೂರದಲ್ಲಿ ಈ ಆರೋಗ್ಯ ಇಲಾಖೆಯ ಗಾಡಿಗಳು ಬರುವುದನ್ನು ಕಂಡು ಜೋರಾಗಿ, ಇಡೀ ಊರಿಗೇ ಕೇಳುವಂತೆ, ಎದೆ ಬಿರಿದು "ಶಿಳ್ಳೆ" ಹೊಡೆಯುವುದು, ಆ ಶಿಳ್ಳೆಯ ಧ್ವನಿ ಕೇಳಿದ ಕೂಡಲೇ ಊರಲ್ಲಿ ಇದ್ದ ಬದ್ದ ಗಂಡಸರೆಲ್ಲಾ ಸುತ್ತಲಿನ ಬೆಟ್ಟ, ಗುಡ್ಡಗಾಡುಗಳ ಕಡೆಗೆ ನುಗ್ಗಿ, ಯಾವುದೋ ಗುಹೆಗಳಲ್ಲೋ. ಎತ್ತರದ ಮರಗಳ ಮೇಲೇರಿಯೋ, ತಲೆ ಮರೆಸಿಕೊಂಡು ತಮ್ಮ ದಿನ ಕಳೆದು, ಸೂರ್ಯ ಅಸ್ತಮಿಸಿದ ನಂತರ, ಹತ್ತಿರದಲ್ಲಿ ಯಾರೂ ಅವರನ್ನು ಹಿಡಿದೊಯ್ಯಲು ಕಾಯುತ್ತಿಲ್ಲವೆಂದು ಖಾತ್ರಿ ಪಡಿಸಿಕೊಂಡ ನಂತರವೇ ತಮ್ಮ ಮನೆಗಳಿಗೆ ಮರಳಿ ಬರುತ್ತಿದ್ದದ್ದಂತೆ. ಈಗ ಅಪ್ಪ ಆ ಸುತ್ತಲಿನ ಹಳ್ಳಿಗಳ ಜನರ ಪಾಲಿಗೆ ಒಬ್ಬ " ನರಭಕ್ಷಕ" ನಂತೆ ಕಂಡಿರಬೇಕು. ಅವರ ಹೆಸರನ್ನು ಹೇಳಿದರೆ ಸಾಕು, ಜನಗಳು ಬೆಚ್ಚಿ ಬೀಳುತ್ತಿದ್ದರು. ಏಕೆಂದರೆ, ಆಗಿನ ಯಾವುದೇ ವೈದ್ಯಾಧಿಕಾರಿಯಾಗಲಿ, ಪೋಲೀಸ್ ಅಧಿಕಾರಿಯಾಗಲಿ ಅಥವಾ ಸುತ್ತಲಿನ ಹಳ್ಳಿಗಳ ಜನರಾಗಲಿ, ಅಪ್ಪನ ಆಜಾನುಬಾಹು ವ್ಯಕ್ತಿತ್ವದ ಮುಂದೆ ಕುಬ್ಜರಾಗಿ ಕಾಣುತ್ತಿದ್ದರು.

ಡ್ರೈವರ್ ಜಾಫರ್ ಚಿಕ್ಕಬಳ್ಳಾಪುರದಿಂದ ನನಗಾಗಿ ತಂದ ಚಾಕಲೇಟ್ಗಳನ್ನು ತಿನ್ನುತ್ತಾ, ಅವನ ಪಕ್ಕ ಮುಂದಿನ ಸೀಟಿನಲ್ಲೇ ಕುಳಿತು, "ಇವನ ಹಂದಿ ಮೂತಿಯ ದೊಡ್ಜೆ ಗಾಡಿಯನ್ನು ಕಂಡೊಡನೆ, ಅದು ಅವರ ಪ್ರಾಣವನ್ನು ಕೊಂಡೊಯ್ಯಲು ಬಂದ ಯಮನ ಕೋಣವನ್ನೇ ಕಂಡಂತಾಗಿ", ಎದ್ದು ಬಿದ್ದು ಓಡಿ ಹೋಗುತ್ತಿದ್ದ ಜನಗಳನ್ನು ನೋಡಿ ನಾನು ಕೇಕೆ ಹಾಕಿ ನಗುತ್ತಿದ್ದೆ (ಕ್ಷಮೆಯಿರಲಿ, ನನಗಾಗ ಕೇವಲ ೭-೮ ವರ್ಷದ ಪ್ರಾಯ). ಕೊನೆಗೊಂದು ದಿನ ಇಂದಿರಮ್ಮನವರ ಸರ್ಕಾರ ಉರುಳಿ, ಜನತಾ ಪಕ್ಷದ ಮೊರಾರ್ಜಿ ದೇಸಾಯಿಯವರ ಸರ್ಕಾರ ಬಂದಾಗಲೇ ಈ ಎಲ್ಲ ಪ್ರಸಂಗಗಳಿಗೂ ಒಂದು ಕೊನೆ ಎಂಬುದು ಕಂಡಿದ್ದು.

ಅದಾದ ಮೇಲೆ ಆ ವೈದ್ಯಾಧಿಕಾರಿಗಳು, ಪೋಲೀಸರು, ಅದೆಲ್ಲೆಲ್ಲಿ ಹೋಗಿ ಬಿಟ್ಟರೋ ಗೊತ್ತಿಲ್ಲ, ಆದರೆ ಅಪ್ಪ ಅದೇ ಊರಿನಲ್ಲಿ ಮತ್ತೆ ತಮ್ಮ ಹಳೇ " ಮೈಸೂರು" ಶೈಲಿಯ ಹೋಟೆಲ್ ಪ್ರಾರಂಭಿಸಿದರು. ಆಗ ಬಿದ್ದವು ನೋಡಿ, ಅಪ್ಪನಿಗೆ, ಸಖತ್ ಧರ್ಮದೇಟುಗಳು, ಇಂದಿರಮ್ಮನ ಸರ್ಕಾರ ಆ ಹಳ್ಳಿಯ ಜನಗಳಿಗೆ ಕೊಟ್ಟ " ಕಡ್ಡಾಯ ಸಂತಾನ ನಿಯಂತ್ರಣ" ಕಾಯ್ದೆಯಿಂದ ಅವರು ಅನುಭವಿಸಿದ ಕಷ್ಟ ಕೋಟಲೆಗಳನ್ನೆಲ್ಲಾ ಅಪ್ಪನಿಗೆ ಬೇಜಾನ್ ಧರ್ಮದೇಟುಗಳನ್ನು ಕೊಡುವ ಮೂಲಕ ತೀರಿಸಿಕೊಂಡಿದ್ದರು. ಆಗ ವಿಧಿಯಿಲ್ಲದೆ ಅಪ್ಪ, ಅಲ್ಲಿಂದ ದೂರ, ತುಮಕೂರು ಜಿಲ್ಲೆಯ ಕೊರಟಗೆರೆಗೆ ಅಮ್ಮನನ್ನು ವರ್ಗಾವಣೆ ಮಾಡಿಸಿ, ಅಲ್ಲಿಂದ ಜಾಗ ಖಾಲಿ ಮಾಡಿದರು,

ನೆನಪಿನಾಳದಿಂದ....4....ಹೇಮಾವತಿಯ ದಡದಲ್ಲಿ.....


ಈ ಸಲ ರಜಕ್ಕೆ ಬೆಂಗಳೂರಿಗೆ ಹೋಗಿದ್ದಾಗ ಹೊಸ ಕಾರ್ ತೊಗೊಂಡು ಎಲ್ಲಾ ಕಡೆ ಸುತ್ತಿದ್ದೇ ಸುತ್ತಿದ್ದು. ಹಾಗೆ ಸುತ್ತಾಡುತ್ತಾ ಹೊಳೆ ನರಸೀಪುರಕ್ಕೆ ಬಂದಾಗ ರಾತ್ರಿ ೧೧ ಘಂಟೆಯಾಗಿತ್ತು. ಚಿಕ್ಕಮ್ಮ ನಮಗಾಗಿ ಕಾಯುತ್ತಾ ಕುಳಿತಿದ್ದರು, ಬಂದೊಡನೆ ಕುಶಲೋಪರಿ ವಿಚಾರಿಸಿ, ನನ್ನನ್ನು ಹುಸಿ ಕೋಪದಿಂದ ಬೈದರು, ಅಷ್ಟು ಹೊತ್ತಿನಲ್ಲಿ ಕಾರ್ ಓಡಿಸಿಕೊಂಡು ಬಂದಿದ್ದಕ್ಕೆ. ಅವರು ಪ್ರೀತಿಯಿಂದ ಬಡಿಸಿದ ಊಟ ಮಾಡುತ್ತಾ ದುಬೈನ ಸಾಕಷ್ಟು ಕಥೆಗಳನ್ನು ಹೇಳಿದೆ. ಮಲಗಿದಾಗ ರಾತ್ರಿ ೧ ದಾಟಿತ್ತು.

ಮರುದಿನ ಎದ್ದಾಗ ಮಗ ವಿಷ್ಣು ತನ್ನ ಪ್ರವರ ಶುರು ಮಾಡಿದ, "ಅಪ್ಪ, ನಡಿ, ಹೊಳೆಗೆ ಹೋಗೋಣ" ಅಂತ. ಅವನ ಹಿಂದೆ ಚಿಕ್ಕ ತಮ್ಮನ ಇಬ್ಬರು ಪುಟಾಣಿ ಮಕ್ಕಳೂ ಹೊರಟರು. ಅವರೆಲ್ಲಾ ಹರಿವ ಹೇಮಾವತಿಯ ನೀರಿನಲ್ಲಿ ಬಿದ್ದು ಆಡಿದ್ದೇ ಆಡಿದ್ದು, ನಾನು ಹಲವಾರು ವರ್ಷಗಳ ಹಿಂದೆ, ಕಂಗಾಲಾಗಿ ಕುಳಿತು ಭವಿಷ್ಯದ ಬಗ್ಗೆ ತುಂತುಂಬಾ ಯೋಚಿಸುತ್ತಾ ಕುಳಿತಿರುತ್ತಿದ್ದ ಕಲ್ಲಿನ ಮೇಲೆ ಕುಳಿತು ಅವರ ಆಟವನ್ನೇ ನೋಡುತ್ತಿದ್ದೆ.

ಆದರೆ ನನ್ನ ಮನಸ್ಸು ಆ ಹಿಂದಿನ ದಿನಗಳನ್ನೆಲ್ಲಾ ಮೆಲುಕು ಹಾಕುತ್ತಿತ್ತು. ಅದೆಂಥಾ ದೈತ್ಯ ಶಕ್ತಿಯಿದೆ, ಆ ತಾಯಿ ಹೇಮಾವತಿಯ ಒಡಲಲ್ಲಿ ಹರಿವ ನೀರಿಗೆ, ಅಪ್ಪನಿಂದ ಒದೆ ತಿಂದು ಮನೆ ಬಿಟ್ಟು ಓಡಿ ಹೋಗಿದ್ದ ನನ್ನನ್ನು ಒಬ್ಬ ಯಶಸ್ವಿ ಮಾನವನಾಗುವಂತೆ ಮಾಡಿದ ಅವಳಿಗೆ ಹೇಗೆ ವಂದನೆ ಸಲ್ಲಿಸಲಿ ಎಂದೆಲ್ಲಾ ತರ್ಕಿಸುತ್ತಿತ್ತು.

ಇದೇ ನೋಡಿ, ಆ ಕಲ್ಲು, ನಾ ಅಂದು ಕುಳಿತು ಚಿಂತಿಸಿ, ಯಾವುದೋ ಒಂದು ಧೃಡ ನಿರ್ಧಾರಕ್ಕೆ ಬಂದು ಅಪ್ಪನಿಗೆ ತಿರುಗಿ ಬಿದ್ದು, ಒಬ್ಬ "ಮಹಾ ಒರಟನಾಗಿ" ಪರಿವರ್ತನೆಯಾದ ಸಂಕ್ರಮಣ ಕಾಲದಲ್ಲಿ ನನಗೆ ಕುಳಿತುಕೊಳ್ಳಲು ಜಾಗ ಕೊಟ್ಟು, ನನ್ನ ಆಗಿನ ಹತಾಶ ಮನದ ಯೋಚನೆಗಳಿಗೊಂದು ಮೂರ್ತ ರೂಪ ಕೊಟ್ಟು ನನ್ನನ್ನು ಯಶಸ್ಸಿನ ದಾರಿಗೆ ಸಜ್ಜುಗೊಳಿಸಿದ ಕಲ್ಲು.

ಈಗ ನನ್ನ ಮಗ 'ವಿಷ್ಣು' ಅಲ್ಲಿ ಕುಳಿತು ಹೇಮಾವತಿಯ ನೀರಿನಲ್ಲಿ ಆಡುತ್ತಿರುವ ತನ್ನ ತಮ್ಮಂದಿರನ್ನು ನೋಡಿ ನಗುತ್ತಿದ್ದಾನೆ.

ರೆಸೆಷನ್ ಸ್ವಾಮಿ, ರೆಸೆಷನ್, ಆರ್ಥಿಕ ಹಿಂಜರಿತ.....

ಏನು ಮಾಡಲಿ,, ನಾನು ಏನು ಮಾಡಲಿ,
ಎಲ್ಲಿ ಹೋಗಲಿ, ನಾನು ಏನು ಕೊಳ್ಳಲಿ ?

ಈ ರೆಸೆಷನ್ ಸಮಯದಲ್ಲಿ
ಕೈಲಿರುವ ಈ ಪುಡಿಗಾಸಿನಲ್ಲಿ
ಅಕ್ಕಿ, ಬೇಳೆ, ತರಕಾರಿಗಳ ಬೆಲೆಗಳೆಲ್ಲ
ಮುಗಿಲು ಮುಟ್ಟಿರುವಾಗ,

ಏನು ಮಾಡಲಿ,, ನಾನು ಏನು ಮಾಡಲಿ ?
ಎಲ್ಲಿ ಹೋಗಲಿ, ನಾನು ಏನು ಕೊಳ್ಳಲಿ ?

ಮಗನಿಗೆ ಕಬಾಬು, ಮಗಳಿಗೆ ಗೋಬಿ ಮಂಚೂರಿ,
ನಮ್ಮ ಟಾಮಿಗೆ ಬಿಸ್ಕತ್ತು, ಹೇಗೆ ತರಲಿ ?

ಪಕ್ಕದ ಮನೆಯವರು ತಂದ ಹೊಸ ಓವನ್ನು,
ಎದುರು ಮನೆಯವರು ತಂದ ಹೊಸ ಕಾರು,
ಹಿಂದಿನ ಮನೆಯವರು ತಂದ ರೇಷ್ಮೆ ಸೀರೆ,
ಹೇಗೆ ತರಲಿ, ನಾ ಹೇಗೆ ತರಲಿ ?

ಓ ರೆಸೆಷನ್ನೇ, ನೀನೇಕೆ ಬಂದೆ ?
ಹೋಗಿ ಕಾಡು ಜಾರ್ಜ್ ಬುಷ್ನನ್ನು,
ಬಾರಕ್ ಒಬಾಮಾನನ್ನು,
ನೀನು ಇಲ್ಲೇಕೆ ಬಂದೆ ?

ಏನು ಮಾಡಲಿ,, ನಾನು ಏನು ಮಾಡಲಿ ?
ಎಲ್ಲಿ ಹೋಗಲಿ, ನಾನು ಏನು ಕೊಳ್ಳಲಿ ?

ಅಭಯ ನೀಡಿ ತಲೆ ಕಾಯ್ದ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆಶೀರ್ವಾದ.

ಆಗ ಅಪ್ಪ ಅಮ್ಮ ಇನ್ನೂ ಅಜ್ಜಿ ತಾತನೊಟ್ಟಿಗೆ ಹೊಳೆ ನರಸೀಪುರದಲ್ಲೇ ಇದ್ದರಂತೆ. ಅಮ್ಮನಿಗೆ ಒಂದರ ಹಿಂದೊಂದರಂತೆ ಐದು ಹೆಣ್ಮಕ್ಕಳು ಹುಟ್ಟಿ ಅವರಲ್ಲಿ ಮೂರು ಅದ್ಯಾವುದೋ ಕಾಯಿಲೆಯಿಂದ ಕಣ್ಮುಚ್ಚಿಕೊಂಡವಂತೆ. ಸದಾ ಅಜ್ಜಿಯ ಕಿರಿಕಿರಿ ಮನೆಯಲ್ಲಿ, ನೆಮ್ಮದಿಯೇ ಇರಲಿಲ್ಲವಂತೆ. ಒಂದು ದಿನ ತಲೆ ಕೆಟ್ಟ ಅಪ್ಪ, ಅಜ್ಜಿ ತಾತನೊಂದಿಗೆ ಜಗಳವಾಡಿಕೊಂಡು ಅಮ್ಮನೊಟ್ಟಿಗೆ ಮೈಸೂರಿನ ಪ್ಯಾಸೆಂಜರ್ ರೈಲು ಹತ್ತಿದರಂತೆ. ಚಿಕ್ಕವಳಾಗಿದ್ದ ಶೋಭಕ್ಕನನ್ನು ಅಜ್ಜಿಯ ಬಳಿಯೇ ಬಿಟ್ಟು ಸ್ವಲ್ಪ ದೊಡ್ಡವಳಾಗಿದ್ದ ಮಂಜುಳಕ್ಕನನ್ನು ಜೊತೆಯಲ್ಲಿ ಕರೆದುಕೊಂದು ಬಂದರಂತೆ.

ಮೈಸೂರಿನ ಕ್ಷೇತ್ರಯ್ಯ ರಸ್ತೆಯಲ್ಲಿ ಒಂದು ಬಾಡಿಗೆ ಮನೆ ಹಿಡಿದು ಶಿವರಾಂ ಪೇಟೆಯ ವಿವಿಧ ಹೋಟೆಲ್ ಗಳಲ್ಲಿ ಮಾಣಿಯಾಗಿ, ದೋಸೆ ಭಟ್ಟರಾಗಿ, ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅಮ್ಮ ಮತ್ತೆ ಗರ್ಭಿಣಿಯಾದಾಗ ಸೀದಾ ಧರ್ಮಸ್ಥಳಕ್ಕೆ ಹೋಗಿ ದರ್ಶನ ಮಾಡಿ, ಹರಕೆ ಕಟ್ಟಿದರಂತೆ. "ಗಂಡು" ಮಗು ಹುಟ್ಟಿದರೆ ನಿನ್ನ ಹೆಸರೇ ಇಡುತ್ತೇವೆ, ದೇವಾ, ವಂಶೋದ್ಧಾರಕನನ್ನು ಕರುಣಿಸು ಎಂದು ಬೇಡಿಕೊಂಡರಂತೆ. ಆಗ ಹುಟ್ಟಿದ್ದೇ ನಾನು, ಅಂದುಕೊಂಡಂತೆ ನನಗೆ ಆ ದೇವನ ಹೆಸರನ್ನೇ ಇಟ್ಟು ಮೊದಲ ಮುಡಿ ಅಲ್ಲಿಯೇ ತೆಗೆಸಿದರಂತೆ. ನಾನು ದೊಡ್ಡವನಾದ ಮೇಲೆ ನನ್ನ ಬಾಲ್ಯದ ತುಂಟಾಟಗಳನ್ನು ಅಮ್ಮ ನನಗೆ ಆಗಾಗ ಬಹಳ ರಸವತ್ತಾಗಿ " ಸ್ವಚ್ಚ ಮೈಸೂರು ಭಾಷೆಯಲ್ಲಿ" ವರ್ಣಿಸಿ ಹೇಳುತ್ತಿದ್ದರು.

ಹಾಗೆಯೇ ಅಪ್ಪನ ಅದ್ರುಷ್ಟ ಖುಲಾಯಿಸಿ, ಅಂದಿನ ಮಂತ್ರಿ ದಂಪತಿಗಳಾಗಿದ್ದ ಯಶೋಧರಮ್ಮ ದಾಸಪ್ಪನವರ ಮನೆಯಲ್ಲಿ ಅಡಿಗೆ ಭಟ್ಟರಾಗಿ ಕೆಲಸಕ್ಕೆ ಸೇರಿ, ಹೇಗೋ ಮಸ್ಕಾ ಹೊಡೆದು ಅಮ್ಮನಿಗೆ ಕ್ರುಷ್ಣ ರಾಜೇಂದ್ರ ಆಸ್ಪತ್ರೆಯಲ್ಲಿ ದಾದಿಯ ತರಬೇತಿಗೆ ಒಂದು ಸೀಟನ್ನೂ ಗಿಟ್ಟಿಸಿ ಬಿಟ್ಟರಂತೆ. ಆಗ ನನಗೆ ಇನ್ನೂ ಎರಡು ವರ್ಷ ತುಂಬಿರಲಿಲ್ಲ, ಅಮ್ಮನಿಂದ ಅನಿವಾರ್ಯವಾಗಿ ಅಗಲಬೇಕಾಯಿತು. ಆಗ ನನಗೆ ತಾಯಿಯಾದವಳು, ನನ್ನ ಅಕ್ಕ "ಮಂಜುಳ". ಅಮ್ಮ ಈ ಎಲ್ಲಾ ಕ್ರೆಡಿಟ್ಟನ್ನೂ ಹೋಲ್ ಸೇಲ್ ಆಗಿ ಧರ್ಮಸ್ಥಳದ ಮಂಜುನಾಥನಿಗೆ ಕೊಟ್ಟು ಬಿಟ್ಟರಂತೆ. ನಾಲ್ಕು ವರ್ಷಗಳ ತರಬೇತಿಯ ನಂತರ ಅಮ್ಮನಿಗೆ ಕೆಲಸ ಸಿಕ್ಕಿ ದೂರದ ಚಿಕ್ಕಬಳ್ಳಾಪುರ ಜಿಲ್ಲೆಯ " ಮಂಡಿಕಲ್ಲಿಗೆ " ನಮ್ಮ ಪ್ರಯಾಣ. ಅಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಮುಂದುವರೆಯಿತು. ಆದರೆ ಅಪ್ಪ ಅಲ್ಲಿಂದಲೂ ನಮ್ಮನ್ನು ಪ್ರತಿ ವರ್ಷ ತಪ್ಪದೆ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಹಲವಾರು ಏಳು ಬೀಳುಗಳನ್ನು ಕಂಡು ಹಲವಾರು ಸಲ ಜೀವನದಲ್ಲಿ ಬಿದ್ದೆದ್ದ ನನಗೆ ಪ್ರತಿ ವರ್ಷ ಧರ್ಮಸ್ಥಳಕ್ಕೆ ಹೋಗುವುದು ಒಂದು ಚಟವಾಗಿ ಹೋಯ್ತು. ಅಲ್ಲಿ ಅಭಿಷೇಕದ ಚೀಟಿಯನ್ನೇ ತಗೆದುಕೊಂಡು, ಸಿಕ್ಕ ಅಲ್ಪ ಸಮಯದಲ್ಲೇ, ಆ ಗರ್ಭಗುಡಿಯ ಮುಂದೆ ನಿಂತು, ನನ್ನ ಎಲ್ಲಾ ನೋವುಗಳನ್ನೂ, ಕಷ್ಟಗಳನ್ನೂ ಹೇಳಿಕೊಂಡು, ದೇವಾ ಕರುಣೆ ತೋರು ಎಂದು ಪ್ರಾರ್ಥಿಸಿ ಆಚೆಗೆ ಬಂದಾಗ, ಅದೆಂಥಾ ನಿರುಮ್ಮಳ ಭಾವನೆ ಬರುತ್ತಿತ್ತು ಗೊತ್ತೇ ? ನಾನು ಮಾಡುತ್ತಿದ್ದ ಕೆಲಸಗಳಲ್ಲಿ ಅನೇಕ ಬಾರಿ ತೊಂದರೆಗಳಾಗಿ, ಕೆಲವೊಮ್ಮೆ ಊಟಕ್ಕೂ ಲಾಟರಿಯಾಗಿ ಬಿಡುತ್ತಿತ್ತು. ಮಗ ವಿಷ್ಣುವಿಗೆ ಅದೆಂಥದೋ ಖಾಯಿಲೆ ಬಂದು, ಕುಡಿದ ಹಾಲು - ನೀರೆಲ್ಲಾ ಹೊಟ್ಟೆಯಲ್ಲಿ ನಿಲ್ಲದೆ, ಮೇಲಿಂದಲೂ ಕೆಳಗಿನಿಂದಲೂ ಆಚೆಗೆ ಬಂದು ಬಿಡುತ್ತಿತ್ತು. ತೋರಿಸಿದ ವೈದ್ಯರೆಲ್ಲಾ ಒಂದಿಲ್ಲೊಂದು ರೋಗದ ಹೆಸರಿಟ್ಟು, ಪರೀಕ್ಷೆಗೆ ಬರೆದು ಕೊಟ್ಟು, ಬೆಂಗಳೂರಿನ ಎಲ್ಲಾ " ಲ್ಯಾಬ್" ಗಳಲ್ಲೂ ಅವನ ರಕ್ತ ಕೊಟ್ಟಿದ್ದಾಯ್ತು. ಒಬ್ಬ ಪುಣ್ಯಾತ್ಮ ವೈದ್ಯ ಅವನ ಲಿವರ್ ಹೋಗಿದೆ, ಲಿವರ್ ಬಯಾಪ್ಸಿ ಮಾಡಬೇಕಾಗುತ್ತದೆ ಎಂದಾಗ ನನ್ನ ಧೈರ್ಯವೇ ಉಡುಗಿ ಹೋಗಿತ್ತು.

ಕೊನೆಗೆ ದೇವರೇ ಗತಿಯೆಂದು ಸೀದಾ ಹೋಗಿದ್ದು ಧರ್ಮಸ್ಥಳಕ್ಕೆ, ಅಲ್ಲಿ , ಈ ಮಗನಿಗೆ ವಾಸಿಯಾದರೆ ಮುಂದಿನ ಸಲ ಬಂದಾಗ ಅವನಿಗೆ ಅಕ್ಕಿಯಲ್ಲಿ ತುಲಾಭಾರ ಮಾಡಿಸುತ್ತೇನೆಂದು ಹರಕೆ ಕಟ್ಟಿ ಬಂದೆವು. ಮಗನ ಖಾಯಿಲೆ ವಾಸಿಯಾಯ್ತು, ಇತ್ತೀಚಿನ ದಿನಗಳಲ್ಲಿ ಅವನಿಗೆ ಒಂದು ಆರ್ಡಿನರಿ ಜ್ವರವೂ ಬಂದಿಲ್ಲ, ಹರಕೆ ಕಟ್ಟಿದಂತೆ ಕಲಾ ಮತ್ತು ಮಕ್ಕಳೊಂದಿಗೆ ಹೋಗಿ ಮಗನ ಜೊತೆಗೆ ನನ್ನ ತುಲಾಭಾರವನ್ನೂ ಮಾಡಿಸಿದೆ. ಶ್ರೀ ವೀರೇಂದ್ರ ಹೆಗ್ಗಡೆಯವರು ಮುಂದೆ ನಿಂತು ತುಲಾಭಾರ ಮಾಡಿಸಿ, ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿ, ನಿಮ್ಮ ಹರಕೆ ಸಲ್ಲಿಕೆಯಾಗಿದೆ, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳುವಾಗ, ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಸಾಕ್ಷಾತ್ ಆ ಮಂಜುನಾಥನೇ ನಮ್ಮ ಮುಂದೆ ನಿಂತು ಅಭಯವನ್ನಿತ್ತಂತಾಯಿತು.

ಅವನ ಅನುಗ್ರಹದಿಂದ ಎಲ್ಲವೂ ಒಳ್ಳೆಯದೇ ಆಗಿದೆ, ಕಂಡ ಕನಸುಗಳೆಲ್ಲ ಕೈಗೂಡುತ್ತಿವೆ. ಬಾಳಿನ ಬಂಡಿ, ಏರು ಪೇರುಗಳನ್ನೆಲ್ಲಾ ದಾಟಿ, ಸುಗಮವಾಗಿ ಸಾಗುತ್ತಿದೆ. ಅವನ ಕರುಣೆ ನಮ್ಮ ಮೇಲೆ ಸದಾ ಹೀಗೇ ಇರಲಿ ಎಂಬುದೇ ನನ್ನ ಆಸೆ.

ನೆನಪಿನಾಳದಿಂದ.....5..... ಅಕ್ಕನ ಬಾಳಿಗೆ ಕೊರಟಗೆರೆಯಲ್ಲಿ ಕೊಳ್ಳಿಯಿಟ್ಟ ಅಪ್ಪ.....

ತುರ್ತು ಪರಿಸ್ಥಿತಿಯ ದಿನಗಳ ನಂತರ ಅಪ್ಪ, ನಮ್ಮ ಶಾಲಾ ಪರೀಕ್ಷೆಗಳೆಲ್ಲ ಮುಗಿಯುವ ಹೊತ್ತಿಗೆ ಅಮ್ಮನನ್ನು ತುಮಕೂರು ಜೆಲ್ಲೆಯ ಕೊರಟಗೆರೆಗೆ ವರ್ಗಾವಣೆ ಮಾಡಿಸಿದರು. ಅಲ್ಲಿನ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲೇ ಇದ್ದ ಕ್ವಾರ್ಟರ್ಸ್ ನಮಗೆ ಸಿಕ್ಕಿತು. ನಾನು ೫ನೆ ತರಗತಿಗೆ, ಅಕ್ಕ "ಮಂಜುಳ" ೮ನೆ ತರಗತಿಗೆ ದಾಖಲಾದೆವು. ಅಮ್ಮನ ಕೆಲಸ ಪ್ರಾರಂಭವಾಯಿತು. ಅಪ್ಪ ಯಥಾ ಪ್ರಕಾರ ತಮ್ಮ ಹೋಟೆಲ್ ಪ್ರಾರಂಭಿಸಿದರು. ಈ ಸಲ ಅಪ್ಪನಿಗೆ ಅಲ್ಲಿನ ಮಾಜಿ ಮಂತ್ರಿಗಳಾಗಿದ್ದ ದಿವಂಗತ ಚೆನ್ನಿಗರಾಮಯ್ಯನವರ ಮನೆಯ ಮುಂದೆಯೇ ಹೋಟೆಲ್ ನಡೆಸಲು ಜಾಗ ಸಿಕ್ಕಿತ್ತು. ಅಪ್ಪನ ಮಾತಿನ ಚಾಣಾಕ್ಷತೆಯೇ ಅಂಥದು, ಅದು ಹೇಗೆ ಅವರು ಆ ಮಂತ್ರಿಗಳ ಶ್ರೀಮತಿಯವರನ್ನು ಒಪ್ಪಿಸಿ ಅಲ್ಲಿ ಜಾಗ ಗಿಟ್ಟಿಸಿದರೋ ಗೊತ್ತಿಲ್ಲ. ಒಳ್ಳೆಯ ಜಾಗ, ಮಾಮೂಲಿನಂತೆ ಅಪ್ಪನ ಕೈಚಳಕದ "ಮೈಸೂರಿನ" ಬಗೆ ಬಗೆಯ ತಿಂಡಿಗಳು ಅಲ್ಲಿನ ಜನರ "ಜಿಹ್ವಾ ಚಾಪಲ್ಯ" ವನ್ನು ತಣಿಸಿ, ಭರ್ಜರಿ ವ್ಯಾಪಾರವೇ ಆಗತೊಡಗಿತು. ವ್ಯಾಪಾರ ಕುದುರಿದಂತೆ ಈ ಆರಡಿ ಎತ್ತರದ ಆಜಾನುಬಾಹುವಿನ "ಮೈಸೂರಿನ" ಮಾತುಗಳಿಗೆ ಮನ ಸೋತು ತುಂಬ ಜನ ಅಪ್ಪನ ಸ್ನೇಹಿತರಾಗಿಬಿಟ್ಟರು. ಪುಟ್ಟಕಾಮ, ಬಸವರಾಜು, "ಗರಡಿ ಮನೆಯ" ಶಂಕರ ಮುಂತಾಗಿ ಕೆಲವರಂತೂ ಯಾವಾಗಲೂ ಅಪ್ಪನ ಜೊತೆಗೇ ಇರುತ್ತಿದ್ದರು. ಅವರು ಬೆಳಿಗ್ಗೆ ಎದ್ದು ಅಪ್ಪನ ಹೋಟೆಲಿನಲ್ಲಿ ಕಾಫಿ ಕುಡಿದು, ತಿಂಡಿ ತಿನ್ನದೆ ಇದ್ದರೆ ಅವರ ಮನಸ್ಸಿಗೆ ಸಮಾಧಾನವೇ ಆಗುತ್ತಿರಲಿಲ್ಲವೆನ್ನುವಷ್ಟರ ಮಟ್ಟಿಗೆ ಅಪ್ಪ ಅವರೊಂದಿಗೆ ಬೆರೆತು ಬಿಟ್ಟಿದ್ದರು. ಅಪ್ಪನೂ ಆಗಾಗ ಸಂಜೆಯ ಹೊತ್ತಿನಲ್ಲಿ ಶಂಕರನ ಗರಡಿ ಮನೆಗೆ ಹೋಗಿ ತಾಲೀಮು ಮಾಡುತ್ತಿದ್ದರು.

ದಿವಂಗತ ಚೆನ್ನಿಗರಾಮಯ್ಯನವರ ಮಕ್ಕಳಾದ ಶ್ರೀ ರಾಜವರ್ಧನ್, ಶಿವರಾಮ್ ಅವರೂ ಸಹ ಅಪ್ಪನ ಹೋಟೆಲಿನಿಂದ ತಿಂಡಿ, ಕಾಫಿ ತರಿಸಿಕೊಳ್ಳುತ್ತಿದ್ದರು. ಹೈದರಾಬಾದಿನಲ್ಲಿದ್ದ ಅವರ ಅಕ್ಕಂದಿರು ಬಂದರಂತೂ ಅಪ್ಪ ವಿಶೇಷ ತಿಂಡಿಗಳನ್ನೇ ಮಾಡಿ ಅವರ ಮನೆಗೆ ಕಳುಹಿಸುತ್ತಿದ್ದರು. ಚಿಕ್ಕವನಾಗಿದ್ದ ನಾನು ಅವರ ಮನೆಗೆ ಯಾವಾಗ ಬೇಕಾದರೂ ಹೋಗಿ ಬರುವಷ್ಟು ಅವರೊಂದಿಗೆ ಹೊಂದಿಕೊಂಡಿದ್ದೆ. ಅವರ ತಾಯಿಯವರಿಗೆ ಸಕ್ಕರೆ ಖಾಯಿಲೆಯಿತ್ತು, ಅವರು ತುಂಬಾ ಒಳ್ಳೆಯವರು, ಅವರಿಗಾಗಿ ಅಪ್ಪ "ಶುಗರ್ ಲೆಸ್" ಕಾಫಿ ಮಾಡಿ ನನ್ನ ಕೈಲಿ ಕಳಿಸುತ್ತಿದ್ದರು. ಆದರೆ ಆ ಅಜ್ಜಿ ಪ್ರತಿಯೊಂದಕ್ಕೂ ಲೆಕ್ಕ ಹಾಕಿ ಸರಿಯಾಗಿ ಹಣ ಕೊಟ್ಟು ಕಳಿಸುತ್ತಿದ್ದರು.

ನಾನು ಶಾಲೆಗೆ ಹೋಗುವ ಮುಂಚೆ ಹೋಟೆಲಿಗೆ ಹೋಗಿ, ಅಪ್ಪ ಮಾಡಿದ್ದ ತಿಂಡಿ ತಿಂದು ಅಮ್ಮ-ಅಕ್ಕನಿಗೂ ತಂದು ಕೊಡುತ್ತಿದ್ದೆ. ಅಲ್ಲಿಂದ ಮುಂದಕ್ಕೆ ಅವರ ದಿನಚರಿ ಶುರುವಾಗುತ್ತಿತ್ತು. ಮಂಡಿಕಲ್ಲಿನಲ್ಲಿ ಹುಟ್ಟಿದ ನನ್ನ ಪುಟ್ಟ ತಮ್ಮ ಈಗ ಬೆಳೆದಿದ್ದ, ಅವನನ್ನೂ " ಶಿಶು ವಿಹಾರಕ್ಕೆ" ಸೇರಿಸಿದ್ದರು. ಒಬ್ಬಳು ಆಯಾ, ಆಕೆಯ ಹೆಸರು ನನಗೆ ಈಗಲೂ ಚೆನ್ನಾಗಿ ನೆನಪಿದೆ, " ಕಾಳಮ್ಮ". ಆಕೆ ತನ್ನ ಹೆಸರಿಗೆ ತಕ್ಕಂತೆ ಕಪ್ಪಗೆ, ಭಯಂಕರವಾಗಿ, ಭದ್ರಕಾಳಿಯಂತೆ ಇದ್ದಳು! ಅದ್ಯಾರು ಅವಳನ್ನು ಶಿಶುವಿಹಾರಕ್ಕೆ ಮಕ್ಕಳನ್ನು ಕರೆ ತರುವ ಕೆಲಸಕ್ಕೆ ಸೇರಿಸಿಕೊಂಡಿದ್ದರೋ ಗೊತ್ತಿಲ್ಲ, ಅವಳನ್ನು ಕಂಡರೆ ಸಾಕು, ನನ್ನ ಪುಟ್ಟ ತಮ್ಮ "ವಿಜಿ", ಹೆದರಿ ಓಡಿ ಹೋಗಿ ಅಡುಗೆ ಮನೆಯಲ್ಲಿ ಅವಿತುಕೊಳ್ಳುತ್ತಿದ್ದ. ಕೆಲವೊಮ್ಮೆ ಅಮ್ಮ, ಮತ್ತೆ ಕೆಲವೊಮ್ಮೆ ಅಕ್ಕ ಅವನನ್ನು ಸಂತೈಸಿ ಶಿಶುವಿಹಾರಕ್ಕೆ ಆ ಕಾಳಮ್ಮನ ಜೊತೆಯಲ್ಲಿ ಕಳಿಸಿ ಕೊಡುತ್ತಿದ್ದರು. ಆದರೆ, ಒಂದು ದಿನ ಅದೇನಾಯ್ತೋ ಗೊತ್ತಿಲ್ಲ, ಅವಳ ಜೊತೆ ತಾನು ಹೋಗುವುದೇ ಇಲ್ಲವೆಂದು ರಚ್ಚೆ ಹಿಡಿದು ಬಿಟ್ಟ. ಅಂದಿನಿಂದ ಅವನನ್ನು ಪ್ರತಿ ದಿನ ಶಿಶುವಿಹಾರಕ್ಕೆ ಬಿಡುವುದು, ಕರೆ ತರುವುದು ನನ್ನ ಕೆಲಸವಾಯಿತು. ಅಪ್ಪನಿಂದ ದಿನಾ ಎಂಟಾಣೆ ಈಸಿಕೊಂಡು ಗೋಪಾಲ ಶೆಟ್ಟರ ಅಂಗಡಿಯಲ್ಲಿದ್ದ ಥರಾವರಿ ಸಣ್ಣ ಸೈಕಲ್ ಗಳನ್ನೆಲ್ಲ ತೆಗೆದುಕೊಂಡು, ಬಿದ್ದು ಎದ್ದು ಸೈಕಲ್ ಹೊಡೆಯುವುದನ್ನು ಕಲಿತುಬಿಟ್ಟೆ. ಆಗ ಅಪ್ಪ ನನಗೊಂದು ಹಳೆಯ ಸೈಕಲ್ ಕೊಡಿಸಿದರು. ಆರನೆ ಕ್ಲಾಸಿಗೇ ನಾನೊಂದು ಸೈಕಲ್ ನ ಒಡೆಯನಾಗಿದ್ದೆ!!

ಬೆಳಿಗ್ಗೆ ಎದ್ದು ಅಪ್ಪನ ಜೊತೆಯಲ್ಲಿ ಹೋಟೆಲಿಗೆ ಹೋಗುವುದು, ಅವರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಕೊಟ್ಟು, ತಿಂಡಿ ತಿಂದು, ಅಕ್ಕ-ಅಮ್ಮನಿಗೆ ತಿಂಡಿ ತಂದು ಕೊಟ್ಟು, ಪುಟಾಣಿ ತಮ್ಮನನ್ನ ಶಿಶುವಿಹಾರಕ್ಕೆ ಬಿಟ್ಟು ಶಾಲೆಗೆ ಹೋಗುವುದು ನನ್ನ ನಿತ್ಯ ದಿನಚರಿಯಾಯಿತು. ಆಗ ಕೊರಟಗೆರೆಯಲ್ಲಿ ಸೀಮೆ ಎಣ್ಣೆಗೆ ಎಲ್ಲಿಲ್ಲದ ಬರಗಾಲ, ಅಪ್ಪನಿಗೆ ಹೋಟೆಲಿಗೆ ಬೇಕೇ ಬೇಕು, ಶಾಲೆಯಿಂದ ಬಂದ ನಂತರ ನನಗೆ ಸೀಮೆ ಎಣ್ಣೆ ಬೇಟೆಯಾಡುವ ಕೆಲಸವನ್ನೂ ವಹಿಸಿದರು. ನಾನು ಸೈಕಲ್ ಒಡೆಯನಾಗಿದ್ದೆನಲ್ಲ, ಅಲ್ಲಿ ಇಲ್ಲಿ ಸೈಕಲ್ ತುಳಿಯುತ್ತಾ ಓಡಾಡುವುದೇ ನನಗೆ ಖುಷಿಯಾಗಿತ್ತಲ್ಲ, ಈ ಸೀಮೆಣ್ಣೆ ಬೇಟೆ ಶುರುವಾದ ಮೇಲೆ ನನ್ನ ಓಡಾಟ ಅಕ್ಕಪಕ್ಕದ ಗ್ರಾಮಗಳಿಗೂ ಹಬ್ಬಿತು. ಸಂಜೆ ಡಬ್ಬವನ್ನು ಕ್ಯಾರಿಯರ್ ಮೇಲೆ ಇಟ್ಟುಕೊಂಡು ಯಾವುದೋ ಹಾಡನ್ನು ಗುನುಗುತ್ತಾ ಹೊರಟು ಬಿಡುತ್ತಿದ್ದೆ. ಹೇಗಾದರೂ ಮಾಡಿ, ಎಲ್ಲಿಯಾದರೂ ಹುಡುಕಿ ಸೀಮೆಣ್ಣೆ ತೊಗೊಂಡೇ ಬರುತ್ತಿದ್ದೆ. ಆಗೆಲ್ಲಾ ಅಪ್ಪ ನನ್ನನ್ನು ಶಹಬ್ಬಾಸ್ ಮಗನೆ ಎಂದು ಹೊಗಳುತ್ತಿದ್ದರು. ಆ ಭರ್ಜರಿ ದೇಹದ ಅಪ್ಪನಿಂದ ಹೊಗಳಿಸಿಕೊಂಡ ನಾನು ಉಬ್ಬಿ ಹೋಗುತ್ತಿದ್ದೆ.

ಇದೇ ಸಮಯದಲ್ಲಿ ನನ್ನ ಅಕ್ಕ ಮಂಜುಳ ಹೈಸ್ಕೂಲಿನಲ್ಲಿ ಓದುತ್ತಿದ್ದಳು. ತುಂಬಾ ಚೂಟಿಯಾಗಿದ್ದ ಅವಳು ಅಪ್ಪನದೇ ರೂಪ, ಅದಕ್ಕೆ ಅಪ್ಪನಿಗೂ ಅವಳನ್ನು ಕಂಡರೆ ಸ್ವಲ್ಪ ಹೆಚ್ಚೇ ಪ್ರೀತಿ. ಅಪ್ಪನಿಗೆ ಒಳ್ಳೆಯ ಓದುವ ಅಭಿರುಚಿ ಇತ್ತು. ಅವರು ಓದಿದ್ದು ಆ ಕಾಲದ ಮೂರನೆ ಕ್ಲಾಸಂತೆ, ಆದರೆ ಕನ್ನಡವನ್ನು ವ್ಯಾಕರಣಬದ್ಧವಾಗಿ ಒಂಚೂರು ತಪ್ಪಿಲ್ಲದೆ ಓದುತ್ತಿದ್ದರು. ಪ್ರಜಾವಾಣಿ ದಿನಪತ್ರಿಕೆ ಪ್ರತಿದಿನ ತರಿಸುತ್ತಿದ್ದರು, ತಾವೂ ಓದಿ ನಮ್ಮನ್ನೂ ಓದುವಂತೆ ಪ್ರೇರೇಪಿಸುತ್ತಿದ್ದರು. ಸುಧಾ, ಮಯೂರ, ಚಂದಮಾಮ, ಬಾಲಮಿತ್ರ ಪುಸ್ತಕಗಳು ನಮ್ಮ ಮನೆಗೆ ಖಾಯಮ್ಮಾಗಿ ಬರುತ್ತಿದ್ದವು. ಚಂದಮಾಮದಲ್ಲಿ ರವಿವರ್ಮರ ಸುಂದರ ಚಿತ್ರಗಳೊಂದಿಗೆ ಓದಿದ ರಾಮಾಯಣ, ಮಹಾಭಾರತದ ಕಥೆಗಳು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿವೆ. (ಈ ಅನುಭವದ ಆಧಾರದ ಮೇಲೇ ನಾನು ನನ್ನ ಪದವಿ ತರಗತಿಯಲ್ಲಿ ಕುವೆಂಪುರವರು ಬರೆದ " ರಾಮಾಯಣ ದರ್ಶನಂ" ಸುಲಲಿತವಾಗಿ ಓದಿ ಕನ್ನಡದಲ್ಲಿ ಕಾಲೇಜಿಗೇ ಅತಿ ಹೆಚ್ಚು ಅಂಕ ಗಳಿಸಿದ್ದೆ.) ಸುಧಾ ವಾರಪತ್ರಿಕೆ ಬಂದ ದಿನವಂತೂ ಅಕ್ಕನಿಗೂ ನನಗೂ ದೊಡ್ಡ ಯುದ್ಧವೇ ಆಗಿ ಬಿಡುತ್ತಿತ್ತು. ಅದರಲ್ಲಿ ಬರುತ್ತಿದ್ದ ಫ್ಯಾಂಟಮ್ ಹಾಗೂ ಡಾಬು ಕಾಮಿಕ್ಸ್ ಗಳನ್ನು ಓದಲು ನಾನು ನಾನೆಂದು ಇಬ್ಬರೂ ಕಿತ್ತಾಡುತ್ತಿದ್ದ್ದೆವು. ಅವಳು ಸದಾ ಓದಿನಲ್ಲಿ ಮುಂದು, ಯಾವುದೇ ಪದ್ಯವಿರಲಿ, ಗಣಿತದ ಸಮಸ್ಯೆಗಳಿರಲಿ, ಕಂಠಪಾಠ ಮಾಡಿ ಒಪ್ಪಿಸಿ ಎಲ್ಲಾ ಶಿಕ್ಷಕರಿಂದ ಹೊಗಳಿಸಿಕೊಳ್ಳುತ್ತಿದ್ದಳು. ಆದರೆ ಸ್ವಲ್ಪ ಚೆಲ್ಲಾಟದ ಸ್ವಭಾವ, ಮುಂಗೋಪಿಯಾದ ಅಪ್ಪನಿಗೆ ಅದು ಹಿಡಿಸುತ್ತಿರಲಿಲ್ಲ. ಅದಕ್ಕಾಗಿ ಅದೆಷ್ಟೋ ಸಲ ಅವಳು ಅಪ್ಪನಿಂದ ಒದೆ ತಿಂದಿದ್ದಳು.

ಆಗ ಗಣಪತಿ ಹಬ್ಬದ ಸಮಯ, ಅಪ್ಪ ಆ ಉತ್ಸವದ ದಿನ ರಾತ್ರಿಯಿಡೀ ಹೋಟೆಲ್ ತೆರೆದಿರುತ್ತಿದ್ದರು, ಅವರ ಶಿಷ್ಯಗಣಗಳೂ ಅವರ ಜೊತೆಯಲ್ಲೇ ಇದ್ದು ಅವರಿಗೆ ಕಂಪನಿ ಕೊಡುತ್ತಿದ್ದರು. ಒಮ್ಮೊಮ್ಮೆ ನಾನೂ ಅವರೊಂದಿಗೆ ಹೋಟೆಲಿನಲ್ಲಿ ಇರುತ್ತಿದ್ದೆ. ಊರಿನ ಜನರೆಲ್ಲ ಗಣಪತಿ ಉತ್ಸವದಲ್ಲಿ ಸಡಗರದಿಂದ ಪಾಲ್ಗೊಂಡು, ರಾತ್ರಿಯೆಲ್ಲ ತಿರುಗಾಡಿ, ಸಿಕ್ಕದ್ದನ್ನೆಲ್ಲ ತಿಂದು, ಗಣಪತಿಯ ವಿಸರ್ಜನೆಯಾದ ನಂತರ ತಂತಮ್ಮ ಮನೆಗಳಿಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಅಪ್ಪ ಮಾಡುತ್ತಿದ್ದ "ಮೈಸೂರು ಶೈಲಿಯ" ತಿಂಡಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿತ್ತು. ಹೀಗಿರುವಾಗ ಅಪ್ಪನ ಒಬ್ಬ ಶಿಷ್ಯ, ’ಪುಟ್ಟ ಕಾಮ’ ಬೆಳಿಗ್ಗೆ ನಾಲ್ಕು ಘಂಟೆಯಲ್ಲಿ ಒಂದು ಸುದ್ಧಿಯನ್ನು ಅಪ್ಪನಿಗೆ ಕೊಟ್ಟ. ಅದು ಅಕ್ಕ ಮಂಜುಳ ತನ್ನ ಸ್ನೇಹಿತರೊಂದಿಗೆ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಶೈಲಜ ರೆಸ್ಟೋರೆಂಟಿನಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದಾಳೆ ಅನ್ನುವುದಾಗಿತ್ತು. ಒಡನೆ ಅಪ್ಪ ಒಂದು ಸೈಕಲ್ ತೊಗೊಂಡು ಸೀದಾ ಅಲ್ಲಿಗೆ ಹೋದರು. ಅಲ್ಲಿ ತನ್ನ ತರಗತಿಯ ಹುಡುಗ - ಹುಡುಗಿಯರೊಂದಿಗೆ ಅಕ್ಕ ಕಾಫಿ ಕುಡಿಯುತ್ತ ಕುಳಿತಿದ್ದಳಂತೆ, ಚಕ್ಕನೆ ರೌದ್ರಾವತಾರ ತಾಳಿದ ಅಪ್ಪ ಹಿಂದು ಮುಂದೆ ಯೋಚಿಸದೆ ಅವಳಿಗೆ ಚೆನ್ನಾಗಿ ತದುಕಿ ಮನೆಗೆ ಎಳೆದುಕೊಂಡು ಬಂದರಂತೆ. ಅಕ್ಕನಿಗೆ ಅವಳ ಎಲ್ಲ ಸ್ನೇಹಿತರೆದುರು ಭಯಂಕರ ಅವಮಾನವಾಗಿ ಹೋಗಿತ್ತು.

ಮಾರನೆಯ ದಿನ ಅಪ್ಪ ಹೋಟೆಲ್ ಬಾಗಿಲು ಹಾಕಿದರು. ಅವರಿಗೆ ಅಕ್ಕ ಮಾಡಿದ್ದು ಅಕ್ಷಮ್ಯ ಅಪರಾಧವಾಗಿತ್ತು, ಆ ಬೆಳಗಿನ ನಾಲ್ಕು ಘಂಟೆಯ ಸಮಯದಲ್ಲಿ ಅವಳು ಅದು ಹೇಗೆ ಅವಳ ಸ್ನೇಹಿತರ ಜೊತೆಗೆ ಹೋಟೆಲಿಗೆ ಹೋಗಿದ್ದು ಎಂದು ಸಾಕಷ್ಟು ವಾಗ್ಯುದ್ಧಗಳಾಗಿ ಮತ್ತೆ ಅಕ್ಕನಿಗೆ ಮನೆಯಲ್ಲಿ ಸಾಕಷ್ಟು ಒದೆಗಳು ಬಿದ್ದವು. ಆದರೆ ನಿರಪರಾಧಿ ಅಕ್ಕ, ಅಮ್ಮನಿಗೆ ಹೇಳಿ, ಪರ್ಮಿಷನ್ ತೆಗೆದುಕೊಂಡೇ ಹೋಗಿದ್ದಳು, ಅದು ಕ್ರೋಧದಿಂದ ವ್ಯಾಘ್ರನಾಗಿದ್ದ ಅಪ್ಪನಿಗೆ ಅರ್ಥವಾಗಲೇ ಇಲ್ಲ. ಅಮ್ಮನನ್ನೂ ಸಾಕಷ್ಟು ಬೈದು ಅವಳನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಶಾಲೆಗೆ ಕಳುಹಿಸಬಾರದು ಎಂದು ತಾಕೀತು ಮಾಡಿದರು. ಅಕ್ಕ ಅಳುತ್ತಾ ಅಪ್ಪನ ಕಾಲು ಹಿಡಿದು ತಪ್ಪಾಯಿತೆಂದು ಗೋಗರೆದರೂ ಅಪ್ಪನ ಮನಸ್ಸು ಕರಗಲೇ ಇಲ್ಲ. ಊರಿನಲ್ಲಿದ್ದ ಅಪ್ಪನ ದೊಡ್ಡಣ್ಣನಿಗೆ ಪತ್ರ ಬರೆದು ಕರೆಸಿದರು. ದೊಡ್ಡಪ್ಪನ ಮೂಲಕ ದೂರದ ಸಂಬಂಧಿಯಾಗಿದ್ದ "ಚಂದ್ರಪ್ಪ"ನ ಜೊತೆ ಅಕ್ಕನ ಮದುವೆ, ಅದೂ ಒಂದೇ ವಾರದಲ್ಲಿ, ನಿಶ್ಚಯ ಮಾಡಿ ಬಿಟ್ಟರು. ಅಕ್ಕ ಅದೆಷ್ಟೇ ವಿರೋಧಿಸಿದರೂ ಸಹ ಕೇಳದೆ ಕೇವಲ ಒಂದು ತಿಂಗಳಿನೊಳಗಾಗಿ ಅದೇ ಕೊರಟಗೆರೆಯ ಸರ್ಕಾರಿ ಆಸ್ಪತ್ರೆಯ "ಕ್ವಾರ್ಟರ್ಸ್" ಮುಂದೆ ಚಪ್ಪರ ಹಾಕಿಸಿ, ಸಂಬಂಧಿಕರಿಗೆಲ್ಲಾ ಕರೆಸಿ, ಮದುವೆ ಊಟ ಹಾಕಿಸಿ, ಚಂದ್ರಪ್ಪನ ಜೊತೆ ಮದುವೆ ಮಾಡಿ ಕಳುಹಿಸಿಯೇ ಬಿಟ್ಟರು. ಆದರೆ ಅದು ಅಕ್ಕನ ಮದುವೆಯ ಊಟವಾಗಿರಲಿಲ್ಲ, ಬದಲಾಗಿ ಅವಳ ದುರಂತ ಜೀವನದ ಶ್ರಾದ್ಧದ ಊಟವಾಗಿತ್ತು. ಅದು ಅಂದು ಅಪ್ಪನಿಗೆ ಅರ್ಥವಾಗಿರಲಿಲ್ಲ, ಅವರಿಗೆ ಅರ್ಥವಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು!!

ಅಲ್ಲಿಗೆ ಅಕ್ಕನ ಓದಿನ ಅಧ್ಯಾಯ ಮುಗಿಯಿತು, ಅವಳು ಭವಿಷ್ಯದ ಬಗ್ಗೆ ಕಂಡಿದ್ದ ಸುಂದರ ಕನಸುಗಳನ್ನು ಅಪ್ಪ ದೊಡ್ಡದೊಂದು ಗೋರಿ ತೋಡಿ ಮುಚ್ಚಿಬಿಟ್ಟರು. ಮುಂದೆ ಅವಳ ಬಾಳಿನ ಕಥೆ ದುರಂತದಲ್ಲಿ ಮುಕ್ತಾಯವಾಗಲು ಮುನ್ನುಡಿ ಬರೆದರು.

ಅಪ್ಪನ ದಿನದ ನೂರೊಂದು ನೆನಪು, ಎದೆಯಾಳದಿಂದ....

ಇಂದು ವಿಶ್ವ ಅಪ್ಪನ ದಿನ. ಈ ಸಂದರ್ಭಕ್ಕಾಗಿ ಈ ಲೇಖನ.

ನಮ್ಮ ಮನೆಯಲ್ಲಿ ನಾವು ನಾಲ್ಕು ಜನ ಮಕ್ಕಳು, ಇಬ್ಬರು ಅಕ್ಕಂದಿರು, ನಾನು, ನನ್ನ ಪುಟ್ಟ ತಮ್ಮ. ಅಪ್ಪ ಅಮ್ಮನನ್ನು ತುಂಬಾನೇ ಪ್ರೀತಿಸುತ್ತಿದ್ದರು. ಅಮ್ಮನಿಗೆ ದಾದಿಯ ಕೆಲಸ ಸಿಕ್ಕ ನಂತರವಂತೂ ಅವರನ್ನು ನೆರಳಿನಂತೆ ಕಾಯ್ದು, ಅವರ ಕೆಲಸದಲ್ಲಿ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಯಾವಾಗಲೂ ಮನೆಯಲ್ಲಿ ಇಂಥದ್ದು ಇಲ್ಲ ಅನ್ನಬಾರದು ಎನ್ನುವ ರೀತಿಯಲ್ಲಿ ಮನೆಯ ಅಗತ್ಯಗಳನ್ನು ಪೂರೈಸಲು ಯತ್ನಿಸುತ್ತಿದ್ದರು. ಯಾವುದಾದರೂ ವಸ್ತುವನ್ನು ಒಂದು ಜಾಗದಲ್ಲಿಟ್ಟರೆ ಅದು ಅಲ್ಲಿಯೇ ಇರಬೇಕು, ಅವರಿಗೆ ಬೇಕೆಂದಾಗ ಥಟ್ಟನೆ ಕೈಗೆ ಸಿಗಬೇಕು, ಆ ರೀತಿ ಇರುವಂತೆ ನಮ್ಮನ್ನು ಯಾವಾಗಲೂ ತಿದ್ದುತ್ತಿದ್ದರು. ಅವರ ಆ ಶಿಸ್ತು ಇಂದಿಗೂ ಅನುಕರಣೀಯ.

ಊಟ - ತಿಂಡಿಯ ವಿಚಾರದಲ್ಲಿ ಅಪ್ಪ ಯಾವಾಗಲೂ ಮುತುವರ್ಜಿ ವಹಿಸುತ್ತಿದ್ದರು. ಆಗ ನಮ್ಮೆಲ್ಲರ ಊಟ - ತಿಂಡಿ ಅಪ್ಪನ ಹೋಟೆಲಿನಲ್ಲೇ ಆಗಿ ಬಿಡುತ್ತಿತ್ತು. ಮಕ್ಕಳಲ್ಲಿ ಯಾರಾದರೊಬ್ಬರು ಊಟ ಮಾಡಿಲ್ಲವೆಂದರೆ, ಸ್ವಲ್ಪವಾದರೂ ಸರಿ, ತಿನ್ನುವವರೆಗೂ ಬಿಡುತ್ತಿರಲಿಲ್ಲ. ಕೆಲವೊಮ್ಮೆ ಸೊಗಸಾದ ಅಡುಗೆ ಮಾಡಿ " ಮೈಸೂರು " ಶೈಲಿಯ ತಿನಿಸುಗಳನ್ನು ತಿನ್ನಿಸುತ್ತಿದ್ದರು. ಅವರು ವಿಶೇಷವಾಗಿ ಮಾಡುತ್ತಿದ್ದ "ಮದ್ದೂರು ವಡೆ, ಗರಂ ಪಕೋಡ, ಕಜ್ಜಾಯಗಳು" ಈಗಲೂ ನನ್ನ ಬಾಯಲ್ಲಿ ನೀರೂರಿಸುತ್ತವೆ. ಯಾವುದೇ ಹಬ್ಬ - ಹರಿದಿನಗಳಲ್ಲಿ ಎಲ್ಲರಿಗೂ ಹೊಸ ಬಟ್ಟೆ ಖಂಡಿತ ಕೊಡಿಸುತ್ತಿದ್ದರು. ಕೆಲವೊಮ್ಮೆ ತಾವು ತೆಗೆದುಕೊಳ್ಳದಿದ್ದರೂ ಮಕ್ಕಳಿಗೆ ಎಂದೂ ತಪ್ಪಿಸುತ್ತಿರಲಿಲ್ಲ. ದೈವ ಭಕ್ತರಾಗಿದ್ದ ಅಪ್ಪ ನಮ್ಮ ಮನೆ ದೇವರಾದ " ಗೌತಮಗಿರಿಯ ತಿಮ್ಮರಾಯಸ್ವಾಮಿ ಹಾಗೂ ಧರ್ಮಸ್ಥಳದ ಮಂಜುನಾಥ ಸ್ವಾಮಿಯ" ಬಗ್ಗೆ ಅಪಾರ ಒಲವನ್ನು ಹೊಂದಿದ್ದು ಸೋಮವಾರ, ಶನಿವಾರಗಳಂದು ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದರು. ನಮ್ಮನ್ನೆಲ್ಲ ಆಗಾಗ್ಗೆ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು.

ಪ್ರತಿ ದಿನ ಪ್ರಜಾವಾಣಿ ಪತ್ರಿಕೆ ಓದುತ್ತಿದ್ದರು. ಅವರಿಗೆ ಬಹುಶ: ನಡೆಯುತ್ತಿದ್ದ ಎಲ್ಲಾ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಅರಿವಿರುತ್ತಿತ್ತು, ರಾಜಕೀಯ, ಸಿನಿಮಾ ವಿಚಾರಗಳ ಬಗ್ಗೆ ತಮ್ಮ ಹೋಟೆಲಿನಲ್ಲಿ ಸ್ನೇಹಿತರ ಜೊತೆ, ಗಿರಾಕಿಗಳ ಜೊತೆ, ನಿರರ್ಗಳವಾಗಿ ಮಾತಾಡುತ್ತಿದ್ದರು. ಸುಧಾ, ತರಂಗ, ವಾರ ಪತ್ರಿಕೆ, ಮಂಗಳ, ಮಯೂರ, ಮಲ್ಲಿಗೆಗಳನ್ನು ತಪ್ಪದೆ ತರಿಸಿ ಅದರಲ್ಲಿ ಬರುತ್ತಿದ್ದ ಕಥೆಗಳು, ಧಾರಾವಾಹಿಗಳನ್ನು ಒಂದೂ ಬಿಡದಂತೆ ಓದುತ್ತಿದ್ದರು. ಸುಧಾದಲ್ಲಿ ಬರುತ್ತಿದ್ದ ಹೆಚ್. ಕೆ. ಅನಂತರಾವ್ ಬರೆದ "ಅಂತ" ಅವರಿಗೆ ತುಂಬಾ ಪ್ರಿಯವಾದ ಧಾರಾವಾಹಿಯಾಗಿತ್ತು. ಮಕ್ಕಳಿಗಾಗಿ ಬಾಲಮಿತ್ರ, ಚಂದಮಾಮಗಳನ್ನು ಮರೆಯದೆ ತರುತ್ತಿದ್ದರು. ಹೀಗೆ ನಮಗೆ ಓದಿನ ಹುಚ್ಚು ಹಿಡಿಸಿದ್ದು ಅಪ್ಪ. ಈಗಲೂ ಅಪ್ಪನ ಹೋಟೆಲಿನಲ್ಲಿ ಈ ಪುಸ್ತಕಗಳನ್ನು ಕಾಣಬಹುದು. ಇಂದಿಗೂ ಅಪ್ಪ ತಮ್ಮ ಓದುವ ಹವ್ಯಾಸ ಮುಂದುವರಿಸಿದ್ದಾರೆ.

ಅಪ್ಪನ ಇನ್ನೊಂದು ಮುಖ್ಯ ಅಭ್ಯಾಸ, "ರೇಡಿಯೋ", ಆಕಾಶವಾಣಿಯ ' ವಿವಿಧ ಭಾರತಿ' ಅವರ ನೆಚ್ಚಿನ ಚಾನಲ್. ಯಾವಾಗಲೂ ಅದು ಹೋಟೆಲಿನಲ್ಲಿ ಹಾಡುತ್ತಲೇ ಇರಬೇಕು, ವಾರ್ತೆಗಳು ಬರುವ ಸಮಯಕ್ಕೆ ಸರಿಯಾಗಿ ಚಾನಲ್ ಬದಲಿಸಿ ವಾರ್ತೆಗಳನ್ನು ಕೇಳಿದ ನಂತರ ಮತ್ತೆ ವಿವಿಧ ಭಾರತಿಗೆ ಮರಳುತ್ತಿದ್ದರು. ಘಂಟಸಾಲರ ತೆಲುಗು ಹಾಗೂ ಪಿ. ಬಿ. ಶ್ರೀನಿವಾಸ್ ಅವರ ಕನ್ನಡ ಹಾಡುಗಳು, ಮಹಮದ್ ರಫಿ ಹಾಡಿದ ಹಿಂದಿ ಗೀತೆಗಳೆಂದರೆ ಅಪ್ಪನಿಗೆ ಬಹಳ ಇಷ್ಟ. ಅಂದು, ಬಾಲ್ಯದಲ್ಲಿ ಅಪ್ಪ ಹಿಡಿಸಿದ " ಹಾಡು ಕೇಳುವ ಗೀಳು" ಇಂದಿಗೂ ನನ್ನನ್ನು ಬಿಟ್ಟಿಲ್ಲ.

ಆಜಾನುಬಾಹುವಾಗಿದ್ದ ಅಪ್ಪ, ಯಾರಿಗೂ ಹೆದರುತ್ತಿರಲಿಲ್ಲ, ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಇರುತ್ತಿದ್ದರು. ಆಕಸ್ಮಾತ್ ಯಾರಾದರೂ ಹೋಟೆಲಿನಲ್ಲಿ ಏನಕ್ಕಾದರೂ ಕ್ಯಾತೆ ತೆಗೆದರೆ ಹಿಂದು ಮುಂದೆ ನೋಡದೆ ಜಾಡಿಸಿ ಬಿಡುತ್ತಿದ್ದರು. ಬಾಲ್ಯದಲ್ಲಿ ನಡೆದ ಅದೆಷ್ಟೋ " ಬಾಕ್ಸಿಂಗ್"ಗಳು ಇನ್ನೂ ನನ್ನ ನೆನಪಿನಿಂದ ಮಾಸಿಲ್ಲ.

ಹೇಗಿದ್ದರು ಬಾಲ್ಯದ ಆ ಅಪ್ಪ ! ಆ ನೆನಪುಗಳೇ ಮಧುರ.
ಆದರೆ ಹೇಗಾದರು ಮುಂದೆ, ಅದು ಬಹಳ ಘೋರ!!

ನೆನಪಿನಾಳದಿಂದ......೬.. ದುರಂತ ನಾಯಕಿಯಾದ ಅಕ್ಕ..

ದುರಂತ ನಾಯಕಿಯಾದ ಅಕ್ಕ....ಮಿನುಗು ತಾರೆ ಕಲ್ಪನಾಳಂತೆ.

ನನ್ನ ಅಕ್ಕ ಮಂಜುಳ, ತನ್ನ ಹೆಸರಿಗೆ ತಕ್ಕಂತೆ, ಮುಖದ ಮೇಲೊಂದು ಮಾಸದ ಮುಗುಳ್ನಗೆಯೊಂದಿಗೆ, ಜುಳು ಜುಳನೆ ಹರಿವ ನೀರಿನಂತೆ, ಓಡಾಡುತ್ತಿದ್ದವಳು, ಅವಳ ಕಂಗಳಲ್ಲಿ ನೂರೆಂಟು ಕನಸುಗಳಿದ್ದವು. ಅವಳನ್ನು ಕಂಡವರು ತಪ್ಪದೆ ಹೇಳುತ್ತಿದ್ದರು, ಓಹ್, ಇವಳೆಂಥಾ ಹೆಣ್ಣು, ಖಂಡಿತ ಇವಳು ನಮ್ಮ ಸಮಾಜ ಬೆಳಗುವ ಜ್ಯೋತಿಯಾಗುತ್ತಾಳೆಂದು. ಅವಳ ಮಾತುಗಳಲ್ಲಿ ಅಷ್ಟೊಂದು ಆತ್ಮ ವಿಶ್ವಾಸವಿರುತ್ತಿತ್ತು, ಜೀವನದ ಬಗ್ಗೆ ಅಷ್ಟೊಂದು ಪ್ರೀತಿಯಿರುತ್ತಿತ್ತು. ಹತ್ತನೆಯ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದ ಅಕ್ಕನಿಗೆ ಮಿನುಗುತಾರೆ ಕಲ್ಪನಾಳ ಚಿತ್ರಗಳೆಂದರೆ ತುಂಬಾ ಅಚ್ಚು ಮೆಚ್ಚು, ಹೇಗಾದರೂ ಮಾಡಿ ಅಮ್ಮನಿಗೆ ’ಬೆಣ್ಣೆ’ ಹೊಡೆದು, ಕಲ್ಪನಾಳ ಹೊಸ ಚಿತ್ರ ನೋಡಿ ಬಿಡುತ್ತಿದ್ದಳು. ಅಕ್ಕ ಮತ್ತು ಅವಳ ಸ್ನೇಹಿತೆಯರು ಆಗ ಚಿಕ್ಕ ಕರವಸ್ತ್ರಗಳ ಮೇಲೆ ಅದೆಂಥೆಂಥದೋ ಕಸೂತಿಗಳನ್ನೆಲ್ಲಾ ಬಿಡಿಸಿ, ಪರಸ್ಪರ ಪ್ರೀತಿಯಿಂದ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ. ಅದರಲ್ಲಿ ಕಲ್ಪನಾಳ ಚಿತ್ರದ ಪಾತ್ರಗಳ ಹೆಸರು, ಹಾಡಿನ ಮೊದಲ ಸಾಲು, ಸೇರಿರುತ್ತಿದ್ದವು. ಒಂದು ಭಾವಪೂರ್ಣ ಸನ್ನಿವೇಶದಲ್ಲಿ ಕಲ್ಪನಾಳು ಅಳುತ್ತಿದ್ದರೆ, ಅಕ್ಕ ತನ್ನ ಸ್ನೇಹಿತೆಯರ ಜೊತೆಯಲ್ಲಿ ಕುಳಿತು, ತಾನೂ ಮುಸುಮುಸು ಅಳುತ್ತಾ ಅದೆಷ್ಟೋ ಕರವಸ್ತ್ರಗಳನ್ನು ಒದ್ದೆ ಮಾಡಿಬಿಡುತ್ತಿದ್ದಳಂತೆ. ಅಂಥಾ ನನ್ನ ಅಕ್ಕ ಒಂದು ದಿನ ಯಾರಿಗೂ ಗೊತ್ತಿಲ್ಲದಂತೆ, ಈ ಜಗದಿಂದ ದೂರವಾದಳು. ಅದು ನನಗೆ ನಂಬಲಾರದ ಸತ್ಯ, ಇಂದಿಗೂ, ಎಂದೆಂದಿಗೂ, ನನಗೆ ಈಗಲೂ ಅಕ್ಕ ಎಲ್ಲೋ ಇದ್ದಾಳೆ ಅನ್ನಿಸುತ್ತದೆಯೇ ಹೊರತು ಅವಳು ನಮ್ಮ ಮಧ್ಯೆ ಇಲ್ಲ ಅಂತ ಅನ್ನಿಸುವುದೇ ಇಲ್ಲ.

ಯಾವುದೇ ದೊಡ್ಡ ತಪ್ಪು ಮಾಡಿರದಿದ್ದರೂ ಕೂಡ, ಅಂದು, ಆ ಗಣೇಶನ ಹಬ್ಬದ ದಿನದಂದು, ಕೇವಲ ತನ್ನ ಒಡನಾಡಿಗಳೊಂದಿಗೆ, ಹೋಟೆಲಿನಲ್ಲಿ ಕಾಫಿ ಕುಡಿದ ತಪ್ಪಿಗಾಗಿ, ಅವಳು ತನ್ನ ಮುಂದಿನ ಜೀವನವನ್ನೇ ಬಲಿ ಕೊಡ ಬೇಕಾಯಿತು. ಅಪ್ಪನ ಆ ಒಂದು ತಪ್ಪು ನಿರ್ಧಾರ, ಅವಳ ಮುಂದಿನ ಜೀವನದ ಹೊಂಗನಸುಗಳನ್ನು ಸುಟ್ಟು ಹಾಕಿತ್ತು. ಅಪ್ಪನ ಧಿಡೀರ್ ನಿರ್ಧಾರದಿಂದಾಗಿ ಯಾರು, ಏನು ಎಂದು ಗೊತ್ತಿಲ್ಲದ "ಚಂದ್ರಪ್ಪ"ನ ಹೆಂಡತಿಯಾದ ಅಕ್ಕ, ತನ್ನ ವಿವಾಹ ಪೂರ್ವದ ಎಲ್ಲ ಸಂಗತಿಗಳನ್ನೂ ಮರೆತು ಅವನಿಗೆ ಒಬ್ಬ ಒಳ್ಳೆಯ ಹೆಂಡತಿಯಾಗಲು, ಅವನ ಮನೆಯ ಜ್ಯೋತಿಯಾಗಲು ತುಂಬಾನೇ ಪ್ರಯತ್ನಿಸಿದಳು. ಹೊಳೆ ನರಸೀಪುರದಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದು, ಕೊರಟಗೆರೆಯಲ್ಲಿ ಓದುತ್ತಿದ್ದ ಅಕ್ಕ, ಒಬ್ಬ ಹಳ್ಳಿ ಹೈದನ ಹೆಂಡತಿಯಾಗಿ, ಹಳ್ಳಿಯಲ್ಲಿ ಬದುಕಬೇಕಾಯಿತು. ಆದರೆ, ಆ ಭಾವ ಚಂದ್ರಪ್ಪ, ತನ್ನ ಸ್ನೇಹಿತರೊಂದಿಗೆ ಆ ಊರು, ಈ ಊರು ತಿರುಗುತ್ತಾ, ನಾಟಕಗಳನ್ನು ನೋಡುತ್ತಾ, ಹಲವಾರು ಸನ್ನಿವೇಶಗಳಲ್ಲಿ, "ಅಣ್ಣಾವ್ರ" ಸಿನಿಮಾಗಳ ಕೆಲವು ದ್ರುಶ್ಯಗಳ, ಸಂಭಾಷಣೆಗಳ ಅನುಕರಣೆ ಮಾಡುತ್ತಾ, ಪರರನ್ನು ನಗಿಸುವ ಕಾಯಕದಲ್ಲಿ ತೊಡಗಿಬಿಟ್ಟನಂತೆ. ಆ ಸಮಯದಲ್ಲಿ ಆತನಿಗೆ, ಮನೆಯಲ್ಲಿ ತನಗಾಗಿ ಕಾಯುತ್ತಿರುವ ಪತ್ನಿಯ, ಅವಳ ಗರ್ಭದಲ್ಲಿ ಬೆಳೆಯುತ್ತಿದ್ದ ವಂಶದ ಕುಡಿಯ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲ.

ಹೆಣ್ಣು ಸಹನೆಯ ಮತ್ತೊಂದು ರೂಪವಂತೆ, " ಕ್ಷಮಯಾ ಧರಿತ್ರಿ", ಅಕ್ಕ ಎಲ್ಲ ನೋವನ್ನೂ ಸಹಿಸಿಕೊಂಡು, ತನ್ನ ಮಗುವಿಗೆ ಜನ್ಮ ಕೊಟ್ಟು, ಹುಟ್ಟಿದ ಬಂಗಾರ ಬಣ್ಣದ ಹೆಣ್ಣು ಮಗುವಿಗೆ, " ಉಷ" ಎಂದು ನಾಮಕರಣ ಮಾಡಿ ಊರಿಗೆಲ್ಲ ಸಿಹಿ ತಿನ್ನಿಸಿದ್ದಳು. ಆಗ ಅಪ್ಪ - ಅಮ್ಮ ಚಂದ್ರಪ್ಪನಿಗೆ ಸಾಕಷ್ಟು ಬುದ್ಧಿ ಹೇಳಿ, ತನ್ನ ಪತ್ನಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿ ಬಂದಿದ್ದರಂತೆ. ಮಗಳು ಹುಟ್ಟಿದ ಖುಷಿಯಲ್ಲಿ ಸ್ವಲ್ಪ ದಿನ ಸರಿಯಿದ್ದ ಭಾವ, ಮತ್ತೆ ತನ್ನ ಹಳೆಯ ಚಾಳಿಯನ್ನೇ ಪ್ರಾರಂಭಿಸಿದಾಗ, ಅಕ್ಕ ಬಹು ನೊಂದಿದ್ದಾಳೆ, ಅಲವತ್ತುಕೊಂಡಿದ್ದಾಳೆ, ಆದರೆ ಅದೆಲ್ಲಾ ಘೋರ್ಕಲ್ಲ ಮೇಲೆ ಮಳೆ ಸುರಿದಂತಾಗಿ, ಕಣ್ಣೀರೇ ಅವಳ ನಿತ್ಯ ನೆಂಟನಾಗಿದೆ. ಒಮ್ಮೊಮ್ಮೆ ಮಗುವಿನ ಹಾಲಿಗೂ ತತ್ವಾರವಾಗಿ, ಅಪ್ಪ - ಅಮ್ಮನಿಗೆ ಬಹು ಖಾರವಾಗಿ ಪತ್ರ ಬರೆದು, ತನ್ನ ಕಷ್ಟಗಳನ್ನೆಲ್ಲಾ ತೋಡಿಕೊಂಡಿದ್ದಳು ಅಕ್ಕ. ಆದರೆ, ಅಪ್ಪ ಏನೂ ಮಾಡದಂಥಾ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದರು. ಹೀಗೇ ಕಥೆ ಮುಂದುವರೆದಾಗ ಅಕ್ಕನಿಗೆ ಒಂದು ಭರವಸೆಯ ಬೆಳ್ಳಿ ಕಿರಣವಾಗಿ ಬಂದಿದ್ದು, ದಾದಿಯ ಕೆಲಸದ ತರಬೇತಿಗಾಗಿ, ಪತ್ರಿಕೆಯಲ್ಲಿ ಬಂದ ಜಾಹೀರಾತು. ಅದನ್ನು ಭಾವನಿಗೆ ತೋರಿಸಿ ಕೇಳಿಕೊಂಡಳಂತೆ, ತನ್ನನ್ನು ತರಬೇತಿಗೆ ಸೇರಿಸಲು, ಹಲವು ಬಗೆಯಲ್ಲಿ ತಿಳಿ ಹೇಳಿದರೂ ಭಾವ ಅರ್ಥ ಮಾಡಿಕೊಳ್ಳದೆ, ಸಂಜೆ, ಸ್ವಲ್ಪ "ಏರಿಸಿ" ಬಂದು, ಅಕ್ಕನಿಗೆ ಚೆನ್ನಾಗಿ ತದುಕಿದನಂತೆ.

ತನಗೆ ಬಿದ್ದ ಒದೆಗಳು, ತಾನಿದ್ದ ಪರಿಸ್ಥಿತಿ, ಕೈಯಲ್ಲಿದ್ದ ಹೆಣ್ಣು ಮಗುವಿನ ಆಕ್ರಂದನ, ಅಕ್ಕನನ್ನು ಒಂದು ಧ್ರುಡ ನಿರ್ಧಾರದೊಂದಿಗೆ ತನ್ನ ಬದುಕಿನ ಮುಂದಿನ ದಾರಿಯನ್ನು ಕಂಡುಕೊಳ್ಳಲು ಪ್ರೇರೇಪಿಸಿ, ಅವಳು ಸೀದಾ ಒಂದು ದಿನ ತಾನಿದ್ದ ಹಳ್ಳಿಯಿಂದ, ಕೋಲಾರದ ನರಸಿಂಹರಾಜ ಆಸ್ಪತ್ರೆಗೆ ಹೋಗಿ, ದಾದಿಯರ ತರಬೇತಿಗೆ ಅರ್ಜಿ ಗುಜರಾಯಿಸಿ ಬಂದಿದ್ದಾಳೆ. ಕೊನೆಗೆ ಅವಳಿಗೆ ತರಬೇತಿಗೆ ಅವಕಾಶ ಸಿಕ್ಕಿ, ತನ್ನ ಗಂಡನೊಂದಿಗೆ ಸಂದರ್ಶನಕ್ಕೆ ಬಂದು, ಬಾಕಿಯಿದ್ದ ದಾಖಲಾತಿಗಳನ್ನು ಪೂರೈಸಿ, ತರಬೇತಿಗೆ ಸೇರಿಕೊಳ್ಳುವಂತೆ ಪತ್ರ ಬಂದ ದಿನ, ಭಾವನಿಗೆ, ಅಳುಕುತ್ತಲೇ ಹೇಳಿದ್ದಾಳೆ, ಆದರೆ ಅಷ್ಟೊತ್ತಿಗಾಗಲೇ, ’ಏರಿಸಿ’ ಬಂದಿದ್ದ ಭಾವ, ಅಕ್ಕನನ್ನು ಹಿಡಿದು, ಹಿಗ್ಗಾ ಮುಗ್ಗಾ ಥಳಿಸಿದ್ದಾನೆ. ಅವಳು ದಾದಿಯರ ತರಬೇತಿಗೆ ಸೇರಲು ನಿರ್ಧರಿಸಿದ್ದು, ಭಾವನ " ಅಹಂ" ಗೆ ದೊಡ್ಡ ಪೆಟ್ಟಾಗಿತ್ತು. ಸ್ವಂತ ಮನೆ, ಸಾಕಷ್ಟು ಜಮೀನು ಇರುವಾಗ, ತನ್ನ ಹೆಂಡತಿ, ದಾದಿಯರ ತರಬೇತಿಗೆ ಹೋದರೆ ಊರಿನಲ್ಲಿ ತನಗೆ ಮರ್ಯಾದೆ ಇರುವುದಿಲ್ಲವೆಂದೆ ಭಾವನ ಚಿಂತನೆಯಾಗಿತ್ತು. ಇದನ್ನೆಲ್ಲಾ ಮೊದಲಿನಿಂದ ನೋಡುತ್ತಿದ್ದ ಪಕ್ಕದ ಮನೆಯ ಮಹಾನುಭಾವನೊಬ್ಬ ಅಕ್ಕನ ನೆರವಿಗೆ ಬಂದು, ಮಾರನೆಯ ದಿನ ಕೋಲಾರಕ್ಕೆ ಬರುವಂತೆ ಹೇಳಿ, ತಾನೇ ಅವಳ ಗಂಡ, ಅವಳು ತರಬೇತಿಗೆ ಸೇರಲು ತನ್ನದೇನೂ ಅಭ್ಯಂತರವಿಲ್ಲ, ಎಂದು ಬರೆದು ಸಹಿ ಮಾಡಿ ಕೊಟ್ಟನಂತೆ. ಆಗ ಯಾವುದೇ ಫೋಟೋಗಳು ಕಡ್ಡಾಯವಾಗಿರಲಿಲ್ಲ. ಹೀಗೆ ಅಕ್ಕನಿಗೆ ದಾದಿಯರ ತರಬೇತಿಗೆ ಪ್ರವೇಶ ಸಿಕ್ಕಿತು. ಆಗ ಅಪ್ಪನಿಗೆ ಕಾಗದ ಬರೆದು, ತನ್ನ ನಿರ್ಧಾರವನ್ನು ತಿಳಿಸಿದ್ದಾಳೆ. ಒಡನೆ ಅಲ್ಲಿಗೆ ಹೋದ ಅಪ್ಪ, ಯಾವುದೇ ಅವಘಡವಾಗದಂತೆ ನೋಡಿಕೊಂಡು, ಅಕ್ಕನನ್ನು ತರಬೇತಿಗೆ ಸೇರಿಸಿ, ಭಾವನ ಮನವೊಲಿಸಿ, ಅವನನ್ನು "ಉಷಾ"ಳ ಜೊತೆಯಲ್ಲಿ ತಿಪಟೂರಿಗೆ ಕರೆತಂದರು. ಅಪ್ಪನ ಹೋಟೆಲಿನಲ್ಲಿ ಅವರಿಗೆ ಸಹಾಯ ಮಾಡುತ್ತಾ, ಚಂದ್ರಪ್ಪ ನಮ್ಮ ಮನೆಯವನೇ ಅಗಿ ಹೋದ, ಅಕ್ಕನ ಮಗಳು ಉಷ, ನಮ್ಮೆಲ್ಲರ ಕಣ್ಮಣಿಯಾದಳು.

ತಿಪಟೂರಿನ ಪ್ರಸಿದ್ಧ ಭರತ ನಾಟ್ಯ ಕಲಾವಿದೆ ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ಭರತ ನಾಟ್ಯವನ್ನು ಹೇಳಿ ಕೊಟ್ಟು ಧಾರೆಯೆರೆದ, ಶ್ರೀಮತಿ ಲಲಿತಾ ರಾಜ್ ( ಇವರಿಗೆ ಈ ಸಲದ ಕರ್ನಾಟಕ ಸರ್ಕಾರದ " ರಾಜ್ಯೋತ್ಸವ ಪ್ರಶಸ್ತಿ" ಸಿಕ್ಕಿದೆ.) ರವರಲ್ಲಿ ಉಷಾಳನ್ನು ಭರತ ನಾಟ್ಯ ತರಬೇತಿಗೆ ಸೇರಿಸಿ, ಅವಳನ್ನು ಕರೆದೊಯ್ಯುವ, ಕರೆತರುವ ಕೆಲಸ ನನ್ನದಾಯಿತು. ನನ್ನನ್ನು ಬಹುವಾಗಿ ಹಚ್ಚಿಕೊಂಡ ಉಷ, ಅಮ್ಮನನ್ನು ಮರೆತು ಬೆಳೆಯತೊಡಗಿದಳು. ತನ್ನ ಮೂರು ವರ್ಷದ ತರಬೇತಿ ಮುಗಿದ ನಂತರ ಅಕ್ಕ ನಮ್ಮ ಮನೆಗೇ ಬಂದಳು, ಅಪ್ಪ ಬೆಂಗಳೂರಿಗೆ ಹೋಗಿ, ಅವರಿವರ ಶಿಫಾರಸಿನಿಂದ, ಅಕ್ಕನಿಗೆ ತಿಪಟೂರಿನ ಪಕ್ಕದ "ಗುಂಗುರುಮಳೆ"ಯಲ್ಲಿ ಖಾಲಿಯಿದ್ದ ದಾದಿಯ ಕೆಲಸಕ್ಕೆ ಅವಕಾಶ ಗಿಟ್ಟಿಸಿ ಕೊಟ್ಟರು. ಅಲ್ಲಿಯೇ ಸರ್ಕಾರದ ಕ್ವಾರ್ಟರ್ಸ್ ಸಿಕ್ಕಿತು. ಅಕ್ಕನ ಮುಂದಿನ ಬದುಕಿನ ಪಯಣ ಅಲ್ಲಿ ಆರಂಭವಾಯಿತು. ಅದೇ ಊರಿನಲ್ಲಿ ಅವಳಿಗೆ ಇನ್ನೊಬ್ಬಳು ಮಗಳು ಹುಟ್ಟಿ, ಅವಳಿಗೆ, "ತಾರ" ಎಂದು ನಾಮಕರಣ ಮಾಡಿದ್ದಳು. ಆಗ ನಾನು ದ್ವಿತೀಯ ಪಿಯುಸಿ ಓದುತ್ತಿದ್ದೆ. ಅದಾಗಲೇ ಅಪ್ಪನಿಗೆ ತಿರುಗಿ ಬಿದ್ದಿದ್ದ ನಾನು, ಮಹಾ ಒರಟನಾಗಿ, ಯಾರಿಗೂ ಹೆದರದ, ಎಲ್ಲದಕ್ಕೂ ಸೈ ಎನ್ನುವಂಥ ಪುಂಡನಾಗಿ ಬದಲಾಗಿದ್ದೆ. ( ಇದಕ್ಕೆ ಕಾರಣ ನನ್ನ ಹಿಂದಿನ ಲೇಖನಗಳಲ್ಲಿದೆ). ಈಗ ಅಕ್ಕನ ಸಂಸಾರದ ಬಗ್ಗೆ ಕಾಳಜಿ ವಹಿಸುವ, ಅವಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಕೆಲಸವನ್ನು ಅಪ್ಪ ನನಗೆ ವಹಿಸಿದರು. ನಾನು ಮನ:ಪೂರ್ತಿ ಆ ಕೆಲಸವನ್ನು ವಹಿಸಿಕೊಂಡು, ಪ್ರತಿ ಶನಿವಾರ ಸಂಜೆ ಅಕ್ಕನ ಮನೆಗೆ ಹೋಗುತ್ತಿದ್ದೆ, ಭಾನುವಾರ ಅಲ್ಲಿಯೇ ಉಳಿದು, ಸೋಮವಾರ ಅಲ್ಲಿಂದ ಸೀದಾ ಕಾಲೇಜಿಗೆ ಬರುತ್ತಿದ್ದೆ. ನನ್ನ ಮಾತುಕಥೆ, ನನ್ನ ಸ್ನೇಹಿತರು, ಎಲ್ಲವನ್ನೂ ನೋಡಿದ ಭಾವ, ನಾನಿದ್ದಾಗ ಅಕ್ಕನೊಂದಿಗೆ ಯಾವುದೇ ತಂಟೆ, ತಕರಾರು ತೆಗೆಯುತ್ತಿರಲಿಲ್ಲ. ಎಲ್ಲವೂ ಸರಿಯಿದೆ ಎನ್ನುವಂತೆ ನಟಿಸಿ, ಏನಾದರು ಒಂದು ವಿಶೇಷ ಔತಣ ಮಾಡಿ, ನಾನು ಅಲ್ಲಿಂದ ಬಂದ ನಂತರ, ಅಕ್ಕನಿಗೆ ಹಿಂಸಿಸುತ್ತಿದ್ದನಂತೆ.

ಹೀಗೆ ನಾವು ಎಷ್ಟೇ ಪ್ರಯತ್ನ ಪಟ್ಟರೂ, ಅವರಿಬ್ಬರ ಮಧ್ಯೆ ಏರ್ಪಟ್ಟಿದ್ದ ಬಿರುಕನ್ನು ಮುಚ್ಚಲು ಸಾಧ್ಯವೇ ಆಗಲಿಲ್ಲ. ಕೊನೆಗೊಂದು ದಿನ, ಭಾವ ಹೀಗೆಯೆ ಕುಡಿದು ಗಲಾಟೆ ಮಾಡುತ್ತಿದ್ದಾಗ, ಅಚಾನಕ್ಕಾಗಿ ಬಂದ ಅಪ್ಪ, ಅದನ್ನು ಕಂಡು, ತನ್ನ ತಾಳ್ಮೆ ಕಳೆದುಕೊಂಡು, ಚೆನ್ನಾಗಿ ಬಾರಿಸಿ, ಭಾವನಿಗೆ ಅವನೂರಿನ ಬಸ್ಸು ಹತ್ತಿಸಿದರಂತೆ. ಅಲ್ಲಿಗೆ ಅಕ್ಕನ ವೈವಾಹಿಕ ಜೀವನ ಮುಗಿಯಿತು. ಮತ್ತೆಂದೂ ಅವರು ಒಂದಾಗಲಿಲ್ಲ. ಊರಿಗೆ ವಾಪಸ್ ಹೋದ ಭಾವ ಅಲ್ಲಿ ತನ್ನವರಿಂದಾದ ಅವಮಾನವನ್ನು ಸಹಿಸಲಾರದೆ ಚೆನ್ನಾಗಿ ಕುಡಿದು, ರೋಗಗಳಿಗೆ ತುತ್ತಾಗಿ ಒಂದು ದಿನ ಕಣ್ಮುಚ್ಚಿದ. ದೊಡ್ಡಪ್ಪನ ಮಗ ಬಂದು ಭಾವ ಸತ್ತ ಸುದ್ಧಿ ಹೇಳಿದಾಗ, ನಾನು ಅಪ್ಪನನ್ನು ಕರೆದೆ. ಆದರೆ ಅಪ್ಪ ಅವನ ಕ್ರಿಯಾಕರ್ಮಕ್ಕೆ ಬರಲು ನಿರಾಕರಿಸಿದರು. ಆಗ ಚಿಕ್ಕನಾಯಕನ ಹಳ್ಳಿಯಲ್ಲಿದ್ದ ಅಕ್ಕನಿಗೆ ಫೋನ್ ಮಾಡಿ, ವಿಷಯ ತಿಳಿಸಿ, ನಾನು ಸೀದಾ ಭಾವನ ಹಳ್ಳಿಗೆ ಹೋದೆ. ಎಷ್ಟೇ ಕಾದರೂ ಅವಳು ಬರಲಿಲ್ಲ, ಕೊನೆಗೆ ಸೂರ್ಯಾಸ್ತವಾಗುವ ಹೊತ್ತಿಗೆ, ಭಾವನ ಕ್ರಿಯಾ ಕರ್ಮಗಳನ್ನು ಮುಗಿಸಿ ಬೆಂಗಳೂರಿಗೆ ಹಿಂತಿರುಗಿದೆ.

ಆ ನಂತರ ಅಕ್ಕ ಮೌನಿಯಾದಳು, ಅವಳು ಯಾರೊಂದಿಗೂ ಹೆಚ್ಚು ಮಾತಾಡುತ್ತಿರಲಿಲ್ಲ, ಅಕ್ಕನ ದೊಡ್ಡ ಮಗಳು "ಉಷ" ಮೈಸೂರಿನಲ್ಲಿ ಅಂತಿಮ ವರ್ಷದ ಪದವಿ ಓದಿ, ಪರೀಕ್ಷೆ, ಮುಗಿದು, ಇನ್ನೇನು ಫಲಿತಾಂಶ ಬರಬೇಕು ಅನ್ನುವ ಸಮಯದಲ್ಲಿ, ಅಕ್ಕ ಸಾವಿಗೆ ಶರಣಾದಳು. ತನ್ನ ಗಂಡನನ್ನು ಬಿಟ್ಟು, ನೂರಾರು ಜನರ ಮಧ್ಯೆ ಓಡಾಡಿ, ಕೆಲಸ ಮಾಡಿ, ಅವರ ಕುಹಕಗಳನ್ನೆಲ್ಲಾ ಕೇಳಿ, ಸಹಿಸಿಕೊಂಡು ಬಾಳುವಷ್ಟು ಸಂಯಮ ಅವಳಿಗಿಲ್ಲದೆ ಹೋಯಿತು. ಕೇವಲ ತನ್ನ ಮುವ್ವತ್ತೆಂಟನೆ ವಯಸ್ಸಿನಲ್ಲಿ ನಮ್ಮೆಲ್ಲರಿಂದ ದೂರಾಗಿ ನಡೆದು ಬಿಟ್ಟಳು, ಮರಳಿ ಬಾರದ ಲೋಕದೆಡೆಗೆ. ಆ ಸಮಯದಲ್ಲಿಯೂ ಸಹ ಅಪ್ಪ ಯಾವುದೇ ಜವಾಬ್ಧಾರಿ ತೆಗೆದುಕೊಳ್ಳದೆ, ತಮ್ಮ ಎಂದಿನ " ಪಲಾಯನ ವಾದ" ಕ್ಕೇ ಅಂಟಿಕೊಂಡು, ಸಾಕಷ್ಟು ಕಿರಿಕಿರಿ ಮಾಡಿ, ನನ್ನಿಂದ ಬೈಸಿಕೊಂಡು ಸುಮ್ಮನಾಗಿದ್ದರು. ಬೇಕಾಗಿದ್ದ ದಾಖಲಾತಿಗಳನ್ನೆಲ್ಲಾ ಒದಗಿಸಿ, " ಸಹಾನುಭೂತಿಯ" ಆಧಾರದ ಮೇಲೆ, ಪದವೀಧರಳಾಗಿದ್ದ ಉಷಾಳಿಗೆ ಅಕ್ಕನ ಕೆಲಸ ಸಿಗುವಂತೆ ಮಾಡಿ, ದ್ವಿತೀಯ ಪಿಯುಸಿಯಲ್ಲಿ ೯೩% ಅಂಕ ಗಳಿಸಿದ್ದ ತಾರಾಳನ್ನು ಮೈಸೂರಿನಲ್ಲಿ ಬಿಇ ಓದಲು ಸೇರಿಸಿ, ಅವರ ಜೀವನಕ್ಕೆ ಏನೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಿ, ಅಮ್ಮನಿಲ್ಲದಿದ್ದಾಗ ನನ್ನನ್ನು ಎತ್ತಿ ಆಡಿಸಿ, ತುತ್ತು ತಿನ್ನಿಸಿದ್ದ ಅಕ್ಕನ ಋಣ ತೀರಿಸಿದೆ. ಏನಾದರೇನು, ಆ ಇಬ್ಬರು ಹೆಣ್ಣು ಮಕ್ಕಳು, ಅಪ್ಪ - ಅಮ್ಮ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಗಳಾದರು.

ಅಪ್ಪ, ತನ್ನ ದುಡುಕುಬುದ್ಧಿಯಿಂದ ಮಾಡಿದ ಅಚಾತುರ್ಯದಿಂದಾಗಿ, ಇನ್ನೂ ಬಾಳಿ ಬದುಕಬೇಕಿದ್ದ ಎರಡು ಜೀವಗಳು, ಇಹಲೋಕವನ್ನು ತೊರೆದು ಹೋದವು.

ಅಪ್ಪನನ್ನು ಮೀರಿಸಿದ ಮಗಳು....

ನಾನೂ ಸಾಕಷ್ಟು ಸಾಧನೆ ಮಾಡಿದೆ, ( ಅದನ್ನು ನನ್ನ ಮುಂದಿನ ಲೇಖನಗಳಲ್ಲಿ ಬರೆಯುತ್ತೇನೆ.), ಆದರೆ ನಾನು ಓದಿದ ಎಲ್ಲಾ ತರಗತಿಗಳಲ್ಲೂ ನನ್ನ ಅಂಕಗಳ ಗಳಿಕೆ, ೬೨ ರಿಂದ ೬೫ % ಗೆ ನಿಂತು ಬಿಡುತ್ತಿತ್ತು. ಎಂದೂ ನನಗೆ ಅದಕ್ಕಿಂತಾ ಹೆಚ್ಚಿಗೆ ಅಂಕಗಳು ಬರಲೇ ಇಲ್ಲ. ಬಹುಶ: ನನ್ನ ಮೆದುಳು ಅಷ್ಟಕ್ಕೇ " ಕಂಡಿಷನಿಂಗ್’ ಆಗಿ ಬಿಟ್ಟಿರಬೇಕು ಅನ್ನಿಸುತ್ತದೆ. ಆದರೆ ನನ್ನ ಮಗಳು ನೋಡಿ, ಎಲ್ಲ ತರಗತಿಗಳಲ್ಲೂ ೯೦ % ರ ಮೇಲೇ ಅಂಕಗಳನ್ನು ಪಡೆದು, ಹತ್ತನೆಯ ತರಗತಿಯಲ್ಲಿಯೂ ೯೩ % ಗಳಿಸಿ, " ಪ್ರತಿಭಾ ಪುರಸ್ಕಾರ" ಪಡೆದು ತನ್ನ ಹೆಸರನ್ನು ಕೆತ್ತಿ ಬಿಟ್ಟಳು. ಇಂಥಾ ಹೆಮ್ಮೆಯ ಕ್ಷಣಗಳು, ಜೀವನದಲ್ಲಿ ಅದೆಷ್ಟು ಸಲ ಬರಬಹುದು ? ಅಂದು, ದುಬೈನಲ್ಲಿ ಕುಳಿತು ಮಗಳು ಕಳುಹಿಸಿದ ಫೋಟೊ, ಅದರ ವಿವರಗಳನ್ನು ಓದುತ್ತಾ, ಆನಂದ ತುಂದಿಲನಾಗಿ, ನನ್ನನ್ನೇ ಮರೆತು, ಅತ್ತು ಬಿಟ್ಟಿದ್ದೆ. ಜೊತೆಯಲ್ಲಿದ್ದವರೆಲ್ಲಾ ’ ಏನಾಯ್ತು’ ಎಂದು ಕಾತುರದಿಂದ ಕೇಳಿದ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಇದು ಆ ದೇವನ ಅತ್ಯುತ್ತಮ ಕಾಣಿಕೆ, ನನಗೆ. ಅವನಿಗೆ ನನ್ನ ನಮನಗಳು.

ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..

ಬಹು ದಿನಗಳಿಂದ ಇವನು ನನ್ನ ಮನದಲ್ಲಿ ಕುಳಿತು ಕಾಡುತ್ತಿದ್ದ, ಇಂದು, ಅವನ ಕಾಟ ತಡೆಯಲಾಗದೆ, ಅವನ ಬಗ್ಗೆ ಬರೆದೇ ತೀರಬೇಕೆಂದು ನಿರ್ಧರಿಸಿ, ಕೊನೆಗೂ ಬರೆದು ಮುಗಿಸಿದೆ, ಇಲ್ಲಿ ಸುಡುತ್ತಿರುವ ಬೇಸಿಗೆಯ ದಿನಗಳಲ್ಲಿ, ಸತತ ಹದಿನಾರು ಘಂಟೆಗಳ ದುಡಿತದ ನಂತರ, ಈ ಬರೆಯಬೇಕೆಂಬ ತುಡಿತವೇ ಅಂಥಾದ್ದು ಎಂದು ನನ್ನ ಭಾವನೆ.

ಅವನೊಬ್ಬ ಬಡ ಹುಡುಗ, ನಾನು ನೇಪಾಳಕ್ಕೆ, ನಾನು ಕೆಲಸ ಮಾಡುವ ಸಂಸ್ಥೆಗೆ, ಯುವಕರನ್ನು ನೇಮಕಾತಿ ಮಾಡಲು ಹೋಗಿದ್ದಾಗ ನನ್ನ ಹಿಂದೆ ಬಿದ್ದಿದ್ದ, ಹೇಗಾದರೂ ಮಾಡಿ ಕೆಲಸ ಗಿಟ್ಟಿಸಬೇಕು, ದುಬೈಗೆ ಹೋಗಬೇಕು ಎಂದು. ಸುಮಾರು ಮೂರು ಸಾವಿರ ಜನ ಕೆಲಸ ಮಾಡುವ ನಮ್ಮ ಸಂಸ್ಥೆಯಲ್ಲಿ ಆಗಾಗ ಇದ್ದಕ್ಕಿದ್ದಂತೆ ಧಿಡೀರ್ ಕೆಲಸಗಾರರ ಕೊರತೆ ಎದುರಾಗಿ ಬಿಡುತ್ತದೆ. ಆಗ ನಾವು ನಾಲ್ಕಾರು ಮಂದಿ, ಎರಡು-ಮೂರು ತಂಡಗಳಲ್ಲಿ ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕ, ಫಿಲಿಫೈನ್ಸ್ ಮುಂತಾದ ದೇಶಗಳನ್ನು ಸುತ್ತಾಡಿ ನಮಗೆ ಬೇಕಾದಂಥ ಯುವಕರನ್ನು ನೇಮಿಸಿಕೊಂಡು ಬಂದು ಸಂಸ್ಥೆಯ ಕೆಲಸ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವುದು ಒಂದು ಮಾಮೂಲಿನ ಅಭ್ಯಾಸ. ಇದರಲ್ಲಿ ನನ್ನ ಪಾಲು ಹೆಚ್ಚಾಗಿ ನನ್ನ ನೆಚ್ಚಿನ ಭಾರತ ಹಾಗೂ ನೇಪಾಳ, ಹಾಗೆ ನಾನು "ಧಿಡೀರ್ ನೇಮಕಾತಿ" ಗಾಗಿ ಹೋದಾಗ ಸಿಕ್ಕಿದವನೇ ಈ ಅಪರೂಪದ ಹುಡುಗ.

ಮೂರು ದಿನಗಳ ಅವಿರತ ಪ್ರಯಾಣ, ಸಂದರ್ಶನಗಳು, ನೂರೆಂಟು ಪ್ರಶ್ನೆಗಳು, ಸಾವಿರಾರು ಉತ್ತರಗಳಿಂದ ರೋಸಿ ಹೋಗಿದ್ದ ಮನಸ್ಸಿಗೆ ಆ ಒಂದು ಸೋಮವಾರ, ಬಿಡುವಿನ ದಿನವಾಗಿತ್ತು. ಕಾಕತಾಳೀಯವಾಗಿ, ಅಂದು, " ವಿಶ್ವ ತಾಯಂದಿರ ದಿನ" ವೂ ಆಗಿತ್ತು. ಅಗಲಿ ಹೋದ ಅಮ್ಮನ ನೆನಪಿನಲ್ಲಿ ಅಂದು, ನಾನು ನೇಪಾಳದ ರಾಜಧಾನಿ, ಪುರಾಣ ಪ್ರಸಿದ್ಧ "ಭಾಗಮತಿ" ನದಿ ತೀರದಲ್ಲಿರುವ ಕಾಠ್ಮಂಡು ನಗರದ, ಪ್ರಖ್ಯಾತ ’ ಪಶುಪತಿನಾಥ’ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಕಾರ್ಯಕ್ರಮವನ್ನಿಟ್ಟುಕೊಂಡಿದ್ದೆ. ಅಲ್ಲಿಗೆ ಪ್ರವೇಶಿಸುವಾಗ ಅಲ್ಲಿನ ಪ್ರತಿಯೊಂದು ದೃಶ್ಯವೂ ನನಗೆ ಕುತೂಹಲಕಾರಿಯಾಗಿ ಕಾಣಿಸುತ್ತಿತ್ತು. ಅಲ್ಲಿ ಒಬ್ಬ ಹುಡುಗ ನನ್ನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸಿ, ನೇಮಕಾತಿ ಕಂಪನಿಯವರ ಆಜಾನುಬಾಹು ’ರಕ್ಷಕರ’ ಬೆದರಿಕೆಗೆ ಹೆದರಿ ದೂರ ಸರಿದಿದ್ದ. ಆಗ ನಾನು ಅವನನ್ನು ಅಷ್ಟಾಗಿ ಗಮನಿಸಿರಲಿಲ್ಲ. ಆ ದೇವಾಲಯದಲ್ಲಿ ನೂರಾರು ವರ್ಷಗಳಿಂದ ಪೂಜೆ ನೆರವೇರಿಸುತ್ತಿದ್ದ ಅರ್ಚಕರು, ನಮ್ಮ ಕನ್ನಡಿಗರು, ಗೋಕರ್ಣ ಮತ್ತು ಉಡುಪಿಯ ಸುತ್ತ ಮುತ್ತಿನ ಬ್ರಾಹ್ಮಣರು. ಇವರ ಬಗ್ಗೆ ನಾನು ಪತ್ರಿಕೆಗಳಲ್ಲಿ ಓದಿದ್ದೆ, ಅದರೆ ಕಣ್ಣಾರೆ ಕಾಣುವ ಅವಕಾಶ ಅಂದು ಒದಗಿ ಬಂದಿತ್ತು. ಅಲ್ಲಿನ ಜನ ಜಂಗುಳಿಯನ್ನು, ಆ ತಳ್ಳಾಟವನ್ನು ನೋಡಿ ಸಾಕಾದ ನನಗೆ ದೇವಾಲಯದ ಪ್ರವೇಶ ದ್ವಾರವನ್ನು ದಾಟುವಾಗ, ಅದೇನೋ ಆವೇಶ ಬಂದು ಆ ಅರ್ಚಕರಿಗೆ, ಜೋರಾಗಿ ಕೂಗಿ, ’ಸ್ವಾಮಿಗಳೆ, ನಾನು ಕರ್ನಾಟಕದವನು, ಹೇಗಾದರೂ ದರ್ಶನಕ್ಕೆ ಅವಕಾಶ ಮಾಡಿ ಕೊಡಿ’ ಎಂದು ಹೇಳಿದೆ. ನಿಜಕ್ಕೂ ಇದು ನಮ್ಮ " ಕನ್ನಡ ಭಾಷೆಯ" ಹಿರಿಮೆ. ಹಾಗೊಂದು ವೇಳೆ ನಾನು ಅವರಿಗೆ ಆ ರೀತಿ ಕೂಗಿ ಹೇಳದೆ ಇದ್ದಿದ್ದರೆ, ಆ ಜನ ಜಾತ್ರೆಯಲ್ಲಿ ನನಗೆ ದರ್ಶನ ಭಾಗ್ಯವೇ ಸಿಗುತ್ತಿರಲಿಲ್ಲವೇನೋ ?? ನಾನು ಅವರ ಬಳಿ ಸರಿದಂತೆ, ಅವರು ನನ್ನನ್ನು ಒಂದು ಪಕ್ಕದಲ್ಲಿ ನಿಲ್ಲಿಸಿ, ಅಭಿಷೇಕ ಹಾಗೂ ಪೂಜೆಗಳನ್ನು ಕಣ್ತುಂಬಾ ನೋಡಿ ಆನಂದಿಸಲು ಅವಕಾಶ ಮಾಡಿ ಕೊಟ್ಟರು. ಪ್ರಸಾದ ಸ್ವೀಕರಿಸಿದ ನಂತರ, ತಮ್ಮ ಪರಿಚಯ ಪತ್ರವೊಂದನ್ನು ಕೊಟ್ಟು, ಸಂಜೆಯ ಹೊತ್ತಿನಲ್ಲಿ ಮನೆಗೆ ಬಂದು ಭೇಟಿಯಾಗುವಂತೆ ಹೇಳಿ ಕಳುಹಿಸಿದಾಗ, ಮನಸ್ಸು ಹಕ್ಕಿಯಂತೆ ಹಗುರಾಗಿ ಹಿಮಾಲಯದ ಮೇಲೆ ಹಾರಾಡುತ್ತಿತ್ತು.

ಪ್ರಫುಲ್ಲವಾದ ಮನದೊಂದಿಗೆ ನಾನು ದೇಗುಲದಿಂದ ಹೊರ ಬರುತ್ತಿದ್ದೆ, ನನ್ನ ಜೊತೆಯಿದ್ದ ನೇಮಕಾತಿ ಕಂಪನಿಯ ಅಧಿಕಾರಿಗಳು ನಗುನಗುತ್ತಾ, ನನ್ನ ’ಪಶುಪತಿನಾಥನ’ ದರ್ಶನದ ಬಗ್ಗೆ, ಆ ದಿವ್ಯ ಅನುಭವದ ಬಗ್ಗೆ ಮಾತಾಡುತ್ತಿದ್ದರು. ಅಷ್ಟರಲ್ಲಿ ನಮ್ಮ ಮುಂದೆ ಹೋಗುತ್ತಿದ್ದ ನಮ್ಮ ’ರಕ್ಷಕರ’ ಪಡೆಗೂ ಮತ್ತೊಬ್ಬ ಯುವಕನಿಗೂ ಅದೇನೊ ಘರ್ಷಣೆಯಾಗುತ್ತಿತ್ತು. ಅದೇನೆಂದು ನೋಡಿದರೆ, ಮತ್ತೆ ಅದೇ ಹುಡುಗ!! ತದೇಕಚಿತ್ತನಾಗಿ ನನ್ನನ್ನೇ ನೋಡುತ್ತಾ, ಅದೇನನ್ನೋ ತನ್ನ ಕಣ್ಣುಗಳಲ್ಲೇ ಭಿನ್ನವಿಸಿಕೊಳ್ಳುತ್ತಾ, ನನ್ನತ್ತಲೇ ನೋಡುತ್ತಿದ್ದ. ಆದರೆ ಆ ನೇಪಾಳಿ ರಕ್ಷಕರ ಶಕ್ತಿಯನ್ನು ದಾಟಿ ಅವನು ನನ್ನ ಬಳಿ ಬರಲಾಗದೆ ಅಸಹಾಯಕನಾಗಿ ದೂರ ಸರಿದಿದ್ದ. ನಾನು ಆ ನೇಮಕಾತಿಯ ಕಂಪನಿಯ ವ್ಯವಸ್ಥಾಪಕರಿಗೆ ಕೇಳಿದಾಗ ಅವನೊಂದು ಉದಾಸೀನದ ನಗು ಚೆಲ್ಲಿ, "ಇವರೆಲ್ಲಾ ಹೀಗೆಯೇ ಸಾರ್, ಕೆಲಸ ಗಿಟ್ಟಿಸಲು ಎಲ್ಲ ರೀತಿಯ ನಾಟಕ ಮಾಡುತ್ತಾರೆ, ನೀವು ತಲೆ ಕೆಡಿಸಿಕೊಳ್ಳಬೇಡಿ" ಅಂದ. ಆದರೂ ಅದೇಕೋ ನನ್ನ ಮನಸ್ಸಿಗೆ ಸಮಾಧಾನವಾಗಲಿಲ್ಲ. ನಾನು ತಂಗಿದ್ದ ಹೋಟೆಲಿಗೆ ಬಂದ ನಂತರ ಸುಮ್ಮನೆ ಮಲಗಿಬಿಟ್ಟೆ, ಅದೇಕೋ ಆ ಬಡ ಹುಡುಗ ನನ್ನನ್ನು ಕಾಡ ಹತ್ತಿದ್ದ, ಕಣ್ಮುಚ್ಚಿದರೆ ಅವನ ಮುಗ್ಧ ಮುಖ, ಅದೇನೋ ಹೇಳಬೇಕೆಂದು ತವಕಿಸುತ್ತಿದ್ದ ಅವನ ಕಣ್ಣೋಟ ನೆನಪಾಗಿ, ಆ ರಜದ ದಿನ, ನನ್ನ ನಿದ್ದೆಯನ್ನೇ ಕಸಿದುಕೊಂಡು ಬಿಟ್ಟಿತು.

ಮರುದಿನ, ಮಾಮೂಲಿನಂತೆ ನಮ್ಮ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಯಿತು, ಬೆಳಗಿನಿಂದ ಸಂಜೆಯವರಿಗೂ ಸಾಕಷ್ಟು ಜನರನ್ನು ನೋಡಿ, ಅವರ ಪೂರ್ವಾಪರಗಳನ್ನೆಲ್ಲಾ ವಿಷ್ಲೇಶಿಸಿ, ಕೆಲವರನ್ನು ನೇಮಕಾತಿ ಮಾಡಿ, ಮತ್ತೆ ಹಲವರನ್ನು ಹಿಂದೆ ಕಳುಹಿಸಿ, ಸಾಕಾಗಿ, ಆ ಕಛೇರಿಯ ಬಾಲ್ಕನಿಗೆ ಬಂದು ಸಿಗರೇಟು ಹತ್ತಿಸಿದೆ, ಒಂದೆರಡು ದಮ್ಮೆಳೆದು ಹೊರಗೆ ನೋಡಿದರೆ, ಮತ್ತದೇ ಹುಡುಗ!!! ತನ್ನ ಕೈನಲ್ಲಿ ತನ್ನ ಕಡತವೊಂದನ್ನು ಹಿಡಿದು, ತಾನು ನಿಂತಿದ್ದಲ್ಲಿಂದಲೇ, ನನ್ನ ಕಡೆಗೇ ನೋಡುತ್ತಾ ಅದೇನೋ " ಮೇಘ ಸಂದೇಶ" ಕಳುಹಿಸಲು ಆರಂಭಿಸಿದ. ನನಗೆ ತಲೆ ಕೆಟ್ಟು ಹೋಯಿತು. ಒಳಗೆ ಬಂದು, ಆ ಸಂಸ್ಥೆಯ ವ್ಯವಸ್ಥಾಪಕರನ್ನು ಕರೆದು, ಬಾಲ್ಕನಿಗೆ ಕರೆ ತಂದು, ದೂರದಲ್ಲಿ, ರಸ್ತೆಯಲ್ಲಿ ನಿಂತಿದ್ದ ಆ ಹುಡುಗನನ್ನು ತೋರಿಸಿ, ಅವನನ್ನು ಸಂದರ್ಶನಕ್ಕೆ ಕಳುಹಿಸುವಂತೆ ಹೇಳಿದೆ. ಅದಕ್ಕೆ ಅವರು ಹೇಳಿದ್ದೇನು ಗೊತ್ತೇ ? " ಆ ಹುಡುಗನಿಗೆ ಆಂಗ್ಲ ಭಾಷೆ ಸ್ವಲ್ಪವೂ ಬರುವುದಿಲ್ಲ ಸಾರ್, ಜೊತೆಗೆ ಅವನು ಪೀಚಲು, ನಿಮ್ಮ ಕೆಲಸಕ್ಕೆ ಸರಿ ಹೋಗುವುದೇ ಇಲ್ಲ, ಅದಕ್ಕೇ ಅವನನ್ನು ನಾವು ಗೇಟಿನಿಂದ ಒಳಕ್ಕೇ ಬಿಟ್ಟಿಲ್ಲ".

" ಅವನು ಹೇಗಿದ್ದರೂ ಸರಿ, ಪರವಾಗಿಲ್ಲ, ಅವನನ್ನು ನನ್ನ ಬಳಿ ಕಳುಹಿಸು" ಎಂದು ತಾಕೀತು ಮಾಡಿ ಕಳುಹಿಸಿದೆ. ಕೊನೆಗೂ ಬಂದೇ ಬಿಟ್ಟ, ನನ್ನ ನಿದ್ದೆಗೆಡಿಸಿದ ಆ ಪೀಚಲು ದೇಹದ ಹುಡುಗ, ನನ್ನ ಮುಂದೆ. ಅವನನ್ನೇ ದಿಟ್ಟಿಸಿ ನೋಡಿದೆ, ಮುಖದ ತುಂಬಾ ನಿರಿಗೆಗಳು ಮೂಡಿ, ಇಪ್ಪತ್ತೈದು ವರ್ಷದ ಹುಡುಗ, ಎಪ್ಪತ್ತರ ಮುದುಕನಂತೆ ಕಾಣುತ್ತಿದ್ದ, ಅವನ ದೇಹದಲ್ಲಿ ಎಲುಬು ಮತ್ತು ಚರ್ಮವನ್ನು ಬಿಟ್ಟರೆ, ಎಲ್ಲಿಯೂ ಮಾಂಸವಿರುವ ಕುರುಹೇ ಕಾಣುತ್ತಿರಲಿಲ್ಲ. ನನ್ನ ತೀಕ್ಷ್ಣ ದೃಷ್ಟಿಯನ್ನೆದುರಿಸಲಾಗದೆ ಅವನು ತಲೆ ಬಗ್ಗಿಸಿದ. ಅವನನ್ನು ಕೇಳಿದೆ, " ನೀನ್ಯಾಕೆ ನನ್ನ ಹಿಂದೆ ಬಿದ್ದಿದ್ದೀಯಾ, ನನ್ನನ್ನೇ ಹಿಂಬಾಲಿಸಿ ನನ್ನ ನಿದ್ದೆಗೆಡಿಸುತ್ತಿದ್ದೀಯಾ" ಎಂದು. ಅದಕ್ಕೆ ಅವನು ಹೇಳಿದ," ನಾನ್ಯಾಕೆ ನಿಮ್ಮ ನಿದ್ದೆಗೆಡಿಸಲಿ ಸಾರ್, ತಾವು ದೊಡ್ಡವರು, ಕೃಪೆ ಮಾಡಿ ನನಗೊಂದು ಉದ್ಯೋಗ ಕೊಟ್ಟರೆ ನಿಮ್ಮ ಹೆಸರು ಹೇಳಿಕೊಂಡು ಬದುಕಿಕೊಳ್ಳುತ್ತೇನೆ, ನಾನು ನಿದ್ದೆ ಮಾಡಿ, ಹೊಟ್ಟೆ ತುಂಬಾ ಊಟ ಮಾಡಿ, ಅದ್ಯಾವುದೋ ಕಾಲವಾಯ್ತು ಸಾರ್, ನಾನು ಕೆಲಸ ಮಾಡಲು ದುಬೈಗೆ ಬರಬೇಕು, ಜೀವನದಲ್ಲಿ ಮುಂದುವರೆಯಬೇಕು, ಇದಷ್ಟೇ ನನ್ನ ಜೀವನದ ಉದ್ಧೇಶ, ಅದು ಸಾಧ್ಯವಾಗದಿದ್ದಲ್ಲಿ ಸಾವೊಂದೇ ನನಗೆ ಉಳಿದಿರುವ ದಾರಿ".

ಅವನ ತಾಯಿ ಅದ್ಯಾವುದೊ ಖಾಯಿಲೆಗೆ ತುತ್ತಾಗಿ ಸತ್ತಳಂತೆ, ಅವನಪ್ಪ ಇನ್ನೊಬ್ಬಳನ್ನು ಮದುವೆಯಾಗಿ, ಅವಳಿಗೆ ಮೂರು ಮಕ್ಕಳಾಗಿ, ಆ ಮಹಾ(ಲ)ತಾಯಿ ಇವನಿಗೆ ಹೊಟ್ಟೆಗೆ ಅನ್ನ ನೀಡದೆ ಭಾರೀ ಹಿಂಸೆ ಕೊಟ್ಟು ಇವನನ್ನು ನರಪೇತಲನನ್ನಾಗಿಸಿದಳಂತೆ. ನಮ್ಮಲ್ಲಿ ಕೆಲಸಕ್ಕೆ ಸೇರಬೇಕಾದರೆ, ಐದಡಿ ಏಳಿಂಚು ಎತ್ತರವಿರಬೇಕು, ೬೦ ಕಿಲೋ ತೂಕವಿರಬೇಕು, ಆಂಗ್ಲ ಭಾಷೆಯಲ್ಲಿ ಉತ್ತಮ ಸಂವಹನ ಸಾಮರ್ಥ್ಯವಿರಬೇಕು. ಇದರಲ್ಲಿ ಅವನಿಗಿದ್ದದ್ದು, ಎತ್ತರವೊಂದೇ, ದೇಹ ಪೀಚಲಾಗಿತ್ತು, ಅವನ ಆಂಗ್ಲ ಭಾಷೆಯಂತೂ ಏನಕ್ಕೂ ಬೇಕಿರಲಿಲ್ಲ, ಆದರೂ ಅವನ ಬಗ್ಗೆ ಅದೇಕೋ ನನ್ನ ಅಂತ:ಕರಣ ಮಿಡಿಯುತ್ತಿತ್ತು. ಅವನನ್ನು ಒಂದು ಪ್ರಶ್ನೆ ಕೇಳಿದೆ, ’ ನೀನು ಸಧ್ಯಕ್ಕಿರುವ ಪರಿಸ್ಥಿತಿಯಲ್ಲಿ ನಾನು ನಿನ್ನನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ, ಏನಾದರೂ ನಿನ್ನ "ವಿಶೇಷ" ಗುಣಗಳಿದ್ದರೆ ಹೇಳು’ ಅದಕ್ಕವನು ಹೇಳಿದ, ’ ನಾನು ತುಂಬಾ ಚೆನ್ನಾಗಿ ಹಾಡುತ್ತೇನೆ’ ಆಗ ನಾನವನಿಗೆ ಹೇಳಿದೆ, " ನೀನು ತುಂಬಾ ಮೆಚ್ಚುವ ಒಂದು ಹಾಡನ್ನು ಹಾಡಿ ತೋರಿಸು, ನೋಡೋಣ".

ಅದಕ್ಕಾಗಿಯೇ ಕಾಯುತ್ತಿದ್ದವನಂತೆ ಅವನು ಆರಂಭಿಸಿಯೇ ಬಿಟ್ಟ, ಭಾವ ತನ್ಮಯತೆಯಿಂದ ಹಾಡಲು, " ಜಿಂದಗೀ ಕಿ ರಾಹೋಂ ಮೆ, ರಂಜೊ ರಂಕಿ ಮೇಲೇ ಹೈ", ಪಂಕಜ್ ಉದಾಸ್ ರವರು ಹಾಡಿದ್ದ ಒಂದು ಹೃದಯಂಗಮ ಭಾವಗೀತೆ, " ಕನ್ನಡಿಯನ್ನು ನೂರು ತುಂಡು ಮಾಡಿದೆ, ಕಂಡೆ ಸಾವಿರಾರು ಪ್ರತಿಬಿಂಬ, ಅದರೆ ಕೊನೆಗೆ ನಾ ಒಂಟಿಯಾಗಿಯೇ ಉಳಿದಿದ್ದೆ" ಎಂಬ ಭಾವಾನುಭವದ ಆ ಗೀತೆ (http://www.youtube.com/watch?v=s-SY5s3Awxs&feature=related) ನನ್ನ ಹೃದಯವನ್ನೇ ಹಿಂಡಿ, ಸಹಸ್ರಾರು ತರಂಗಗಳ, ಭಾವ ದೀಪ್ತಿಯನ್ನೇ ಬೆಳಗಿಸಿ ಬಿಟ್ಟಿತ್ತು. ನಾನು ಹಾಗೇ ಆ ಹುಡುಗನನ್ನು ನೋಡುತ್ತಿದ್ದೆ, ಅವನು ಈ ಲೋಕದ ಪರಿವೆಯೇ ಇಲ್ಲದಂತೆ ಉಚ್ಛ ಸ್ವರದಲ್ಲಿ, ತಲ್ಲೀನನಾಗಿ ಹಾಡುತ್ತಿದ್ದ, ಮುಚ್ಚಿದ್ದ ಅವನ ಕಂಗಳಿಂದ ಅಶ್ರು ಧಾರೆ ಹರಿಯುತ್ತಿತ್ತು. ಆ ಹಾಡು ಅವನ ಜೀವನದಲ್ಲಿ ಅವನು ಅನುಭವಿಸಿದ್ದ ಎಲ್ಲಾ ನೋವಿಗೂ ಅಂದು ಸಾಕ್ಷಿಯಾಗಿ ಬಿಟ್ಟಿತ್ತು. ಅವನ ಆ ಭೀಕರ ಒಂಟಿತನದ ಪ್ರತಿರೂಪವಾಗಿತ್ತು.

ಕೊನೆಗೂ ನಾನು ಅವನನ್ನು ನಮ್ಮ ಸಂಸ್ಥೆಯ ಕೆಲಸಕ್ಕೆ ಆಯ್ಕೆ ಮಾಡಿದೆ. ನನ್ನ ನಿರ್ಧಾರವನ್ನು ಅವನಿಗೆ ತಿಳಿಸಿದಾಗ, ಅವನು ಭಾವ ತನ್ಮಯತೆಯಿಂದ ನನ್ನ ಕಾಲು ಹಿಡಿದು ನಮಸ್ಕರಿಸಲು ಬಂದ, ಅವನನ್ನು ತಡೆದು, ಮುಂದೆ ಅಲ್ಲಿ ಬಂದಾಗ, ಅವನು ಏನು ಮಾಡಬೇಕೆಂದು ತಿಳಿ ಹೇಳಿದೆ. ಅದಕ್ಕವನದು ಒಂದೇ ಉತ್ತರ, " ಅದೆಂಥದೇ ಕಷ್ಟವಿರಲಿ ಸಾರ್, ನಾನು ಖಂಡಿತ ಜಯ ಸಾಧಿಸುತ್ತೇನೆ ”. ಅಂದಿನ ಅವನ ಆ ಆತ್ಮ ವಿಶ್ವಾಸ ನನಗೆ ಮೆಚ್ಚಿಗೆಯಾಯಿತು.

ಇದಾದ ಸುಮಾರು ಎರಡು ಮೂರು ತಿಂಗಳ ನಂತರ ಆ ಹುಡುಗ ಅಬುಧಾಬಿಗೆ ಬಂದ. ಆಗ ನಮ್ಮ ಸಂಸ್ಥೆಯಲ್ಲಿನ ತರಬೇತಿ ಇಲಾಖೆಯ ಮುಖ್ಯಸ್ಥ, ಕಣ್ಣನ್, ಆ ಹುಡುಗ ಹಾಗೂ ಅವನ ಜೊತೆ ಬಂದಿದ್ದ ಇನ್ನೂ ಐವತ್ತು ಹುಡುಗರನ್ನು, ಅವರ ದೇಹ ಧಾರ್ಡ್ಯತೆ, ಆಂಗ್ಲ ಭಾಷಾ ವಿಶಾರದತೆ ಎಲ್ಲವನ್ನೂ ಪರೀಕ್ಷಿಸಿ, ಸಂಸ್ಥೆಯ ಮುಖ್ಯಸ್ಥರಿಗೆ ವರದಿ ಕೊಟ್ಟಿದ್ದ. ಅವನ ವರದಿಯ ಪ್ರಕಾರ ಈ ಹುಡುಗ ಎಲ್ಲರಿಗಿಂತ ಕೀಳು ಮಟ್ಟದಲ್ಲಿದ್ದ. ಸರಿ! ಹಾಗಾದರೆ, ಇಂತಹ ಕೀಳು ಮಟ್ಟದ ಹುಡುಗನನ್ನು ನೇಮಕಾತಿ ಮಾಡಿದ್ದು ಯಾರು ಎಂಬ ಪ್ರಶ್ನೆ ಎದ್ದು ಕೊನೆಗೆ ನನ್ನನ್ನು ಎಂಡಿ ಸಾಹೇಬರು ತಮ್ಮ ಕಛೇರಿಗೆ ಕರೆಸಿ, ಅವನನ್ನು ನೇಮಕಾತಿ ಹೇಗೆ ಮತ್ತು ಯಾವ ಆಧಾರದ ಮೇಲೆ ಮಾಡಿದ್ದು ಎಂದು ಪ್ರಶ್ನೆಗಳ ಮಳೆಯನ್ನೇ ಸುರಿಸಿದರು. ಅವನಲ್ಲಿ ಕಂಡ ಆತ್ಮ ವಿಶ್ವಾಸದಿಂದ ನಾನು ಅವನನ್ನು ನೇಮಕಾತಿ ಮಾಡಿದೆ ಎಂದರೂ ಸಮಾಧಾನವಾಗದ ಎಂಡಿ ಸಾಹೇಬರು, ಅವನು ಆಕಸ್ಮಾತ್ ಪೊಲೀಸ್ ಇಲಾಖೆಯ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿಬಿಟ್ಟರೆ, ಸಂಸ್ಥೆಗೆ ಆಗುವ ನಷ್ಟಕ್ಕೆಲ್ಲಾ ನಾನೇ ಹೊಣೆ ಎಂದು ಬರೆದು ಕೊಟ್ಟಲ್ಲಿ ಮಾತ್ರ ಆ ಹುಡುಗನನ್ನು ಪೊಲೀಸರ ಬಳಿಗೆ ಪರವಾನಗಿಗಾಗಿ ಕಳುಹಿಸುತ್ತೇವೆಂದಾಗ, ನಾನು ಮತ್ತೊಮ್ಮೆ ಆ ಹುಡುಗನ ಮುಖ ನೋಡಿದೆ. ದೈನ್ಯತೆಯೇ ಮೂರ್ತಿವೆತ್ತಂತೆ ಕಾಣುತ್ತಿದ ಅವನು ನನಗೆ ಧೈರ್ಯ ಹೇಳಿದ, " ಸಾರ್, ದಯವಿಟ್ಟು ನೀವು ಬರೆದು ಕೊಡಿ, ನಾನು ಆ ಪೋಲೀಸರ ಪರೀಕ್ಷೆಯನ್ನು ಖಂಡಿತ ಪಾಸು ಮಾಡಿ ತೋರಿಸುತ್ತೀನಿ" ಅವನ ಕಣ್ಗಳಲ್ಲಿ ಅದೇನೋ ಆತ್ಮ ವಿಶ್ವಾಸದ ಜ್ವಾಲೆ ಉರಿಯುತ್ತಿದ್ದುದನ್ನು ನೋಡಿ, ಅದನ್ನು ನಂಬಿ ನಾನು ನನ್ನ ಎಂಡಿಯವರಿಗೆ, ಅದೂ ಜೀವನದಲ್ಲಿ ಮೊದಲ ಬಾರಿಗೆ, ಕಂಡು ಕೇಳಿಲ್ಲದ ಒಬ್ಬ ಅಪರಿಚಿತನಿಗಾಗಿ ಬರೆದು ಕೊಟ್ಟೇ ಬಿಟ್ಟೆ. ಅದೇನಾಗುತ್ತದೋ ನೋಡೇ ಬಿಡೋಣವೆಂದು.

ಮುಂದಿನ ಕೆಲವು ದಿನಗಳು, ನನ್ನ ಕೆಲಸದ ಒತ್ತಡಗಳ ನಡುವೆ ನಾನು ಈ ಪ್ರಸಂಗವನ್ನು ಮರೆತೇ ಬಿಟ್ಟಿದ್ದೆ. ಒಂದು ದಿನ ಖುದ್ದು ಎಂಡಿಯವರೇ ಫೋನ್ ಮಾಡಿ ನನ್ನನ್ನು ತಮ್ಮ ಕಛೇರಿಗೆ ಬರ ಹೇಳಿದಾಗ, ಆತಂಕದಿಂದಲೇ ಅವರನ್ನು ಭೇಟಿಯಾಗಲು ಹೊರಟೆ. ಅಲ್ಲಿ, ಎಂಡಿಯವರ ಕಛೇರಿಯಲ್ಲಿ ಮತ್ತದೇ ಹುಡುಗ ಆಸೀನನಾಗಿದ್ದ. ಇದೇನೋ ಗ್ರಹಚಾರ ವಕ್ಕರಿಸಿಕೊಂಡಿತು ಅಂದುಕೊಳ್ಳುತ್ತಿರುವಾಗಲೇ, ನನ್ನನ್ನು ಕಂಡ ಎಂಡಿಯವರು, ತಮ್ಮ ಆಸನದಿಂದ ಎದ್ದು ಬಂದು, ನನ್ನ ಕೈ ಕುಲುಕಿ, " ನಿನ್ನ ಹೃದಯದೊಳಗಿನ ಮಾನವೀಯತೆಯನ್ನು ನಾನು ಮೆಚ್ಚುತ್ತೇನೆ ಮಂಜು, " ಎಂದಾಗ ನನಗೆ ತಲೆ ಬುಡ ಅರ್ಥವಾಗಲಿಲ್ಲ. ಆ ಬಡ ನೇಪಾಳಿ ಹುಡುಗ, ಪಿಳಿ ಪಿಳಿ ಕಣ್ಣು ಬಿಡುತ್ತಾ, ತನ್ನ ಕೈಲಿದ್ದ ದಾಖಲೆ ಪತ್ರವನ್ನು ನನ್ನ ಕೈಗಿತ್ತು, ನನಗೆ ಕೈ ಮುಗಿದಾಗಲೇ ನನಗೆ ಅರ್ಥವಾಗಿದ್ದು!!!

ಅವನು ಪೊಲೀಸರು ನಡೆಸಿದ ಪರೀಕ್ಷೆಯಲ್ಲಿ ನೂರಕ್ಕೆ ತೊಂಭತ್ತೆಂಟು ಅಂಕಗಳನ್ನು ಗಳಿಸಿ, ಆ ತಂಡದಲ್ಲಿಯೇ ಮೊದಲಿಗನಾಗಿ ಹೊರಬಂದಿದ್ದ. ಅಂದು ಅವನು ಹಾಡಿದ್ದ ಆ ಹಾಡನ್ನು ಕೇಳಿ, ಅದ್ಯಾವುದೋ ಕಾಣದ ಭರವಸೆಯಿಂದ ಅವನನ್ನು ನೇಮಕ ಮಾಡಿ, ಅವನ ಆತ್ಮ ವಿಶ್ವಾಸವನ್ನು ನಂಬಿದ್ದಕ್ಕೆ, ಆ ಹುಡುಗ ನನಗೆ ಅತ್ಯುತ್ತಮ ಉಡುಗೊರೆಯನ್ನೇ ನೀಡಿದ್ದ. ಅಂದು, ಅವನ ಕಂಗಳಲ್ಲಿ ಕಂಡಿದ್ದ ಆ ಜ್ವಾಲೆ, ಅದು ಬರೀ ಜ್ವಾಲೆಯಾಗಿರಲಿಲ್ಲ, ಅದು ಅವನ ಅಪ್ರತಿಮ ಆತ್ಮ ವಿಶ್ವಾಸದ ಪ್ರತೀಕವಾಗಿತ್ತು. ಅವನನ್ನು ಯಶಸ್ವಿಯಾಗುವಂತೆ ಮಾಡಿತ್ತು.

ಅವನು ಹಾಡಿದ ಒಂದು ಭಾವ ಪೂರ್ಣ ಗೀತೆಗೆ ಮರುಳಾಗಿ, ನೇಮಕಾತಿ ಮಾಡಿದ್ದರೂ, ಕೊನೆಗೆ ಅವನು ಗೆದ್ದ ರೀತಿ, ನನಗೆ ತುಂಬಾ ಹಿಡಿಸಿತು. ಅವನು ಈಗಲೂ ಇಲ್ಲೇ ಇದ್ದಾನೆ, ಕೆಲಸ ಮಾಡುತ್ತಾ, ಕೈ ತುಂಬಾ ಸಂಪಾದನೆ ಮಾಡುತ್ತಾ!

ಅಂದು ಕೇವಲ ಐವತ್ತು ಕೇಜಿಯಿದ್ದವನು ಈಗ ಚೆನ್ನಾಗಿ ತಿಂದುಂಡು, ಮೈ ಕೈ ತುಂಬಿಕೊಂಡು ಎಪ್ಪತ್ತೈದು ಕೇಜಿ ತೂಗುತ್ತಾನೆ. ನನ್ನನ್ನು ಕಂಡರಂತೂ ಅವನಿಗೆ ವಿಪರೀತ ಭಕ್ತಿ ಭಾವ !! ಅವನನ್ನು ಕಂಡರೆ ನನಗದೇನೋ ಒಂದು ರೀತಿಯ ಧನ್ಯತಾ ಭಾವ.

ನೆನಪಿನಾಳದಿಂದ.........೭. ಸಾಧನೆಯ ಹಾದಿಯಲ್ಲಿ,

ನಾನು ಹತ್ತನೆಯ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದರೂ ಅಪ್ಪ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಕಲ್ಲು ಹಾಕಿದಾಗ, ತಿಪಟೂರಿನಿಂದ ಹೊಳೆನರಸೀಪುರಕ್ಕೆ ಓಡಿ ಹೋಗಿ, ಚಿಕ್ಕಪ್ಪನ ಆಶ್ರಯದಲ್ಲಿ ಪ್ರಥಮ ಪಿ.ಯು.ಸಿ. ಮುಗಿಸಿದೆ. ಆ ಹೊತ್ತಿಗಾಗಲೆ, ಅಪ್ಪ - ಅಮ್ಮನ ಸಂಬಂಧದಲ್ಲಿ ದೊಡ್ಡ ಬಿರುಕೊಂದು ಶುರುವಾಗಿ ಅವರ ದಾಂಪತ್ಯ ಜೀವನ ಕೊನೆಗೊಳ್ಳುವ ಹಂತ ತಲುಪಿತ್ತು. ಅಪ್ಪನ ಆರ್ಭಟ, ಮಾಡುತ್ತಿದ್ದ ಸಾಲಗಳು, ಕಟ್ಟಬೇಕಿದ್ದ ಬಡ್ಡಿ, ಕೊನೆಗೆ ತುತ್ತಿಗೂ ಲಾಟರಿಯಾದಾಗಿನ ಅಸಹಾಯಕತೆಗಳಿಂದ ನೊಂದಿದ್ದ ಅಮ್ಮ ಇದಕ್ಕೊಂದು ಪೂರ್ಣ ವಿರಾಮ ಹಾಕಬೇಕೆಂದು ತೀರ್ಮಾನಿಸಿದ್ದರಂತೆ. ಆಗ ಮತ್ತೆ ಬಂದರು ಅಪ್ಪ! ನನ್ನನ್ನು ಹುಡುಕಿಕೊಂಡು, ಹೊಳೆನರಸೀಪುರಕ್ಕೆ. ಅಪ್ಪ ಬಂದಾಗ ನಾನು ಹೇಮಾವತಿಯ ದಡದಲ್ಲಿ, ನನ್ನ ಮೆಚ್ಚಿನ "ಕಲ್ಲಿನ" ಮೇಲೆ ಕುಳಿತು ಹರಿವ ನೀರಿನಲ್ಲಿ ಆಡುತ್ತಿದ್ದ ಮೀನುಗಳನ್ನೂ, ದೂರದಲ್ಲಿ ಮುಳುಗುತ್ತಿದ್ದ ಸೂರ್ಯನನ್ನೂ ನೋಡುತ್ತಾ ಕುಳಿತಿದ್ದೆ. ನನ್ನ ಪುಟ್ಟ ತಮ್ಮನೊಬ್ಬ ಬಂದು ಅಪ್ಪ ಬಂದಿರುವ ವಿಚಾರ ತಿಳಿಸಿ ಬರಹೇಳಿದರು ಅಂದಾಗ ಆತಂಕದಿಂದಲೇ ಮನೆಗೆ ಬಂದಿದ್ದೆ.

ಮನೆಗೆ ಬಂದವನು ಹಿತ್ತಿಲ ಬಾಗಿಲಿನಿಂದ ಸೀದಾ ಅಡುಗೆ ಮನೆಗೆ ಹೋದೆ, ನನ್ನ ಪ್ರೀತಿಯ ಚಿಕ್ಕಮ್ಮ, ನನಗೆ ಅಪ್ಪನೊಂದಿಗೆ ಸರಿಯಾಗಿ ಮಾತಾಡುವಂತೆ ಬುದ್ಧಿ ಹೇಳಿ ಕಳುಹಿಸಿದರು. ಹೊರಗೆ ಬಂದರೆ ಅಪ್ಪ, ಚಿಕ್ಕಪ್ಪನೊಂದಿಗೆ ಮಾತಾಡುತ್ತಾ ಕುಳಿತಿದ್ದರು. ನನ್ನನ್ನು ಕಂಡ ಅಪ್ಪ, ’ ಏನು, ಹೇಗಿದ್ದೀಯ ? ಚೆನ್ನಾಗಿ ಓದುತ್ತಾ ಇದ್ದೀಯ ಅಂತ ನನ್ನ ತಮ್ಮ ಹೇಳ್ತಿದ್ದಾನೆ’ ಅಂದರು. ನಾನು ಸುಮ್ಮನೆ ಹೂಗುಟ್ಟಿದೆ. ಮತ್ತೆ ಮುಂದುವರೆದ ಅಪ್ಪ ’ ಹೊರಡು, ನನ್ನ ಜೊತೆಗೆ, ನೀನು ಎಷ್ಟು ಓದ್ತೀಯಾ, ನಾನು ಓದಿಸ್ತೀನಿ, ನೀನು ನನ್ನ ಮಗ, ನನ್ನ ಮನೆಯಲ್ಲೇ ಇರಬೇಕು’ ಅಂದಾಗ ನನಗೆ ಏನು ಮಾಡಬೇಕೆಂದು ತಿಳಿಯದಾಗಿ ಚಿಕ್ಕಪ್ಪನ ಮುಖ ನೋಡಿದೆ. ಅವರು ನನಗೆ ಧೈರ್ಯ ಹೇಳಿ, ’ ನೀನು ಅಪ್ಪನ ಜೊತೆ ಹೋಗಿ ಅಲ್ಲೇ ಕಾಲೇಜಿಗೆ ಸೇರು, ಏನಾದರೂ ತೊಂದರೆಯಾದರೆ ನಾನಿದ್ದೇನೆ’ ಅಂದರು. ಒಳಗಿನಿಂದ ಚಿಕ್ಕಮ್ಮ ಅದೇ ಮಾತಿಗೆ ಬೆಂಬಲ ಸೂಚಿಸಿದರು. ಒಲ್ಲದ ಮನಸ್ಸಿನಿಂದಲೇ ಅಪ್ಪನ ಜೊತೆ ಮತ್ತೆ ತಿಪಟೂರಿಗೆ ಬಂದೆ, ಬರುವಾಗ ಅಪ್ಪಿ ತಪ್ಪಿಯೂ ಅಪ್ಪನ ಜೊತೆ ಒಂದೇ ಒಂದು ಮಾತನ್ನೂ ಆಡಲಿಲ್ಲ. ನನ್ನ ಮನ ಅನಿಶ್ಚಿತತೆಯಲ್ಲಿ ಹೊಯ್ದಾಡುತ್ತಿತ್ತು.

ನಾನು ಹಿಂದಿರುಗಿ ಬಂದಾಗ ಅಮ್ಮ ನನ್ನನ್ನು ನಗುಮುಖದಿಂದ ಸ್ವಾಗತಿಸಿದರು, ಆದರೆ ಅಪ್ಪ - ಅಮ್ಮನ ನಡುವೆ ಮಾತು ಕಥೆ ನಿಂತು ಹೋಗಿತ್ತು. ಅಮ್ಮನ ಮುಖ ನೋಡಿದಾಗ, ನನ್ನ ಕಣ್ಗಳಲ್ಲಿದ್ದ ಹಲವಾರು ಪ್ರಶ್ನೆಗಳಿಗೆ ಅವರ ಮೌನವೇ ಉತ್ತರವಾಯಿತು!

ನನ್ನ ಸ್ನೇಹಿತರೆಲ್ಲಾ ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅದಾಗಲೇ ಪ್ರಥಮ ಪಿ.ಯು.ಸಿ. ಮುಗಿಸಿ ಎರಡನೇ ವರ್ಷಕ್ಕೆ ಸಿದ್ಧವಾಗಿದ್ದರು. ನಾನು ಅವರೊಂದಿಗೆ ಸೇರಿ, ಅದೇ ಕಾಲೇಜಿನಲ್ಲಿ ಸೇರಿಕೊಂಡೆ. ನನ್ನ ಹಿಂದಿನ ಕಹಿ ಅನುಭವಗಳೆಲ್ಲಾ ಗೊತ್ತಿದ್ದ ನನ್ನ ಸ್ನೇಹಿತರು ನನಗೆ ಯಾವಾಗಲೂ " ಯಾವುದೇ ಕಾರಣಕ್ಕೂ ಇನ್ನು ಮುಂದೆ ಅಪ್ಪನಿಗೆ ಹೆದರದೆ, ಧೈರ್ಯದಿಂದ ಬದುಕುವಂತೆ" ನನಗೆ ಉಪದೇಶ ಮಾಡತೊಡಗಿದರು. ಕಾಲೇಜಿಗೆ ಸೇರಿದೊಡನೆ, ಸ್ನೇಹಿತರೊಡಗೂಡಿ, ಎನ್.ಸಿ.ಸಿಗೆ ಸೇರಿಕೊಂಡೆ. ಪ್ರತಿ ಭಾನುವಾರದ " ಪೆರೇಡಿಗೆ" ಆ ಖಾಕಿ ಸಮವಸ್ತ್ರದಲ್ಲಿ ಠಾಕುಠೀಕಾಗಿ ನಾವೆಲ್ಲ ಸ್ನೇಹಿತರು ಬರುತ್ತಿದ್ದರೆ, ಜನ ನಮ್ಮನ್ನು ನಿಂತು ನೋಡುತ್ತಿದ್ದರು! ಜೊತೆಗೆ ತಿಪಟೂರಿನ " ಯೂತ್ ಹಾಸ್ಟೆಲ್ ಅಸೋಸಿಯೇಷನ್ " ನ ಸಕ್ರಿಯ ಸದಸ್ಯರಾಗಿಯೂ ನಾವು ಐದು ಜನ ಸ್ನೇಹಿತರೂ ನೋಂದಾಯಿಸಿಕೊಂಡು ಬಿಟ್ಟೆವು. ಅದು ನಮ್ಮ "ಭಾರತ ದರ್ಶನ" ಯಾತ್ರೆಗೆ ನಾವು ಬರೆದ ಮುನ್ನುಡಿಯಾಗಿತ್ತು.

ನಾನು, ಬಸವರಾಜ, ಗಂಗಾಧರ, ಇನಾಯತ್, ಭೀಮೇಶ ಐದೂ ಜನ ಆಗ ಒಂದೆ ಜೀವ, ಐದು ದೇಹ ಎಂಬಂತಾಗಿಬಿಟ್ಟೆವು, ಒಬ್ಬನು ತರಗತಿಗೆ ಬರಲಿಲ್ಲವೆಂದರೆ ಐದೂ ಜನ ಚಕ್ಕರ್! ಯಾವುದೇ ಸಿನಿಮಾ ಬಿಡುಗಡೆಯಾದರೆ, ಐದೂ ಜನ ಜೊತೆಯಲ್ಲಿ ಮೊದಲ ದಿನವೇ ಹಾಜರ್! ರವಿಚಂದ್ರನ್ ಅಭಿನಯಿಸಿದ ರಣಧೀರ ಹಾಗು ಪ್ರೇಮಲೋಕ ಚಿತ್ರಗಳು ಬಹುಶ: ನಾನು ಜೀವನದಲ್ಲಿ ಅತಿ ಹೆಚ್ಚು ಬಾರಿ ನೋಡಿದ ಚಲನಚಿತ್ರಗಳಾಗಿ ಆ ದಿನಗಳಲ್ಲಿ ದಾಖಲಾಗಿ ಬಿಟ್ಟವು. ತರಗತಿಯಲ್ಲಿ ಕೊನೆಯ ಬೆಂಚು ನಮ್ಮದು, ಹಿಂದೆ ಕುಳಿತು, ಗೀತಾದೇವಿ, ಸರಿತಾ, ಕುಲ್ಸುಂ, ಪದ್ಮ, ಎಲ್ಲರಿಗೂ ತೀಟೆ ಮಾಡಿ, ಪೇಪರ್ ಬಾಣವೆಸೆದು, ಕುಚೋದ್ಯ ಮಾಡುತ್ತಾ ಕಳೆದ ದಿನಗಳದೆಷ್ಟೋ ! ಗಾಯತ್ರಿಬಾಯಿ,ತಂಗಮ್ಮ, ಪೂರ್ಣಾದೇವಿ, ಶಚೀದೇವಿ ಯಂತಹ ಮಹಿಳಾ ಉಪನ್ಯಾಸಕರಿಗೆ ನಾವು " ಪಂಚ ಮಹಾ ಪಾತಕಿ" ಗಳಾಗಿಯೂ, ರೇಣುಕಾರ್ಯ, ಫಾಲಾಕ್ಷ, ಶರಣಪ್ಪ, ಚನ್ನಬಸವಯ್ಯ, ರಮೇಶ್, ಶ್ರೀನಿವಾಸಮೂರ್ತಿ, ನಂಜುಂಡಪ್ಪನವರಂಥ ಪುರುಷ ಉಪನ್ಯಾಸಕರ ಪಾಲಿಗೆ "ಪಂಚ ನಕ್ಷತ್ರ"
( ಫೈವ್ ಸ್ಟಾರ್ಸ್) ಗಳಾಗಿಯೂ ನಾವು ಕಂಡು ಬರುತ್ತಿದ್ದೆವು. ಪ್ರಾಂಶುಪಾಲರಾಗಿದ್ದ ಶ್ರೀಮತಿ ಸುಜಯರವರು ನಮ್ಮ ಎಲ್ಲಾ ಪಠ್ಯೇತರ ಚಟುವಟಿಕೆಗಳಿಗೆ ತಮ್ಮ ತುಂಬು ಹೃದಯದ ಬೆಂಬಲವನ್ನು ನೀಡಿ ಹರಸುತ್ತಿದ್ದರು.

ಜೊತೆಗೆ, ಗ್ರಂಥಾಲಯದಲ್ಲಿ ಲಭ್ಯವಿದ್ದ ಎಲ್ಲಾ ಉತ್ತಮ ಪುಸ್ತಕಗಳನ್ನೂ ಓದುತ್ತಾ, ಎಲ್ಲಿಯೇ ಚರ್ಚಾ ಸ್ಪರ್ಧೆ, ಪ್ರಬಂಧ, ಆಶುಭಾಷಣ, ಸ್ವರಚಿತ ಕವನ ಸ್ಪರ್ಧೆಗಳು ನಡೆಯಲಿ, ಅಲ್ಲಿ ಹೋಗಿ ನಮ್ಮ ಕಾಲೇಜನ್ನು ಪ್ರತಿನಿಧಿಸಿ, ಒಂದಿಲ್ಲೊಂದು ಪ್ರಶಸ್ತಿ ಪಡೆದೇ ಬರುತ್ತಿದ್ದೆವು. ಎಲ್ಲಾ ಪರೀಕ್ಷೆಗಳಲ್ಲೂ ಅತಿ ಹೆಚ್ಚು ಅಂಕಗಳು ನಮ್ಮ ಗುಂಪಿಗೇ ಬರುತ್ತಿದ್ದುದುಒಂದು ವಿಶೇಷ!! ನಮಗಿಂತ ಒಂದೆರಡು ವರ್ಷಗಳು ಓದಿನಲ್ಲಿ ಮುಂದಿದ್ದ ಹಿರಿಯ ಸ್ನೇಹಿತರೂ ಕೂಡ ನಮ್ಮೆಡೆಗೆ ವಿಸ್ಮಯದ ದೃಷ್ಟಿ ಹರಿಸುವಂತೆ ಮಾಡಿದ್ದೊಂದು ದೊಡ್ಡ ಸಾಧನೆ. ಇದೇ ಸಮಯದಲ್ಲಿ ನಮ್ಮ ದೃಷ್ಟಿ ಬಿದ್ದಿದ್ದು ಸೈಕಲ್ ರೇಸ್ ಹಾಗೂ ಸೈಕಲ್ ಪ್ರವಾಸಗಳ ಕಡೆಗೆ!!

ಯೂತ್ ಹಾಸ್ಟೆಲ್ ನವರು ಪ್ರತಿವರ್ಷ ಆಯೋಜಿಸುತ್ತಿದ್ದ " ಕರ್ನಾಟಕ ದರ್ಶನ " ಸೈಕಲ್ ಪ್ರವಾಸದಲ್ಲಿ ಪಾಲ್ಗೊಳ್ಳುವಂತೆ ಅಂದಿನ ಕಾರ್ಯದರ್ಶಿಗಳಾಗಿದ್ದ ಬಸವರಾಜುರವರು ನಮ್ಮನ್ನು ಕೇಳಿದಾಗ ನಾವು ಐದೂ ಜನ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡು, ಜೀವನದ ಮೊದಲ ಸೈಕಲ್ ಪ್ರವಾಸವನ್ನು ಆರಂಭಿಸಿಯೇ ಬಿಟ್ಟೆವು. ತಿಪಟೂರಿನಿಂದ ಹೊರಟು, ಶ್ರವಣ ಬೆಳಗೊಳ, ಹಾಸನ, ಬೇಲೂರು, ಹಳೇಬೀಡು, ಚಿಕ್ಕಮಗಳೂರು, ಬಾಳೆ ಹೊನ್ನೂರು, ಶೃಂಗೇರಿ, ಆಗುಂಬೆ, ತೀರ್ಥಹಳ್ಳಿ, ಮಂಡಗದ್ದೆ, ಗಾಜನೂರು, ಶಿವಮೊಗ್ಗ, ಭದ್ರಾವತಿ, ಲಕ್ಕವಳ್ಳಿ, ತರೀಕೆರೆ, ಕೆಮ್ಮಣ್ಣುಗುಂಡಿ, ಬಾಬಾ ಬುಡೇನ್ ಗಿರಿ, ಹೀಗೆ ಒಂದು ಸುತ್ತು ಹೊಡೆದು ೧೫ ದಿನಗಳ ನಂತರ ತಿಪಟೂರಿಗೆ ಹಿಂತಿರುಗಿ ಬಂದಾಗ ನಮಗೆ ’ಅಭೂತ ಪೂರ್ವ ಸ್ವಾಗತ’, ಎಲ್ಲರಿಂದ ! ಹೀಗೆಯೇ ಸುಮಾರು ನಾಲ್ಕು ಬಾರಿ
" ಕರ್ನಾಟಕ ದರ್ಶನ " ಸೈಕಲ್ ಪ್ರವಾಸಗಳನ್ನು ಕೈಗೊಂಡು, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ, ಕರ್ನಾಟಕದಲ್ಲಿ ನಾವು ನೋಡದ ಸ್ಥಳವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇಡೀ ಕರ್ನಾಟಕವನ್ನೇ ಸುತ್ತಿ ಬಂದೆವು.

ಇದರ ಜೊತೆಗೆ ಎನ್.ಸಿ.ಸಿ.( ನ್ಯಾಷನಲ್ ಕೆಡೆಟ್ ಕೋರ್), ಭಾರತೀಯ ಸೈನ್ಯದ ಒಂದು ಅಂಗ, ವಿಶೇಷವಾಗಿ ಯುವಕರನ್ನು ತರಬೇತುಗೊಳಿಸಿ, ಅವರಲ್ಲಿ ಒಂದು ಶಿಸ್ತುಬದ್ಧ ಜೀವನವನ್ನು ರೂಪಿಸಿ, ಸೈನ್ಯದ ಅಧಿಕಾರಿಗಳ ಕೆಲಸಕ್ಕೆ ಸಿದ್ಧ ಮಾಡುವುದು, ಸೈನ್ಯಕ್ಕೆ ಸೇರದಿದ್ದರೂ ಒಂದು ಶಿಸ್ತಿನ ಜೀವನ ನಡೆಸಲು ಯುವಕರನ್ನು ಮಾನಸಿಕವಾಗಿ ತಯಾರು ಮಾಡುವುದು ಅದರ ಉದ್ಧೇಶ. ನಾವು ಐದೂ ಜನ ಸಕ್ರಿಯವಾಗಿ ಪ್ರತಿ ಭಾನುವಾರ " ಪೆರೇಡ್" ಗಳಲ್ಲಿ ಭಾಗವಹಿಸಿ, ತುವಕೂರು, ಬೆಂಗಳೂರುಗಳಲ್ಲಿ ನಡೆದ " ತರಬೇತಿ ಶಿಬಿರ " ಗಳಲ್ಲಿ , ಯಾವ್ಯಾವ ಪಂದ್ಯಾವಳಿಗಳಿದ್ದವೋ, ಅದು ಶೂಟಿಂಗ್, ಬೈನಟ್ ಫೈಟಿಂಗ್, ರನ್ನಿಂಗ್ ರೇಸ್, ಕ್ರಾಸ್ ಕಂಟ್ರಿ, ಫೈರ್ ಫೈಟಿಂಗ್, ಪ್ರಥಮ ಚಿಕಿತ್ಸೆ, ಯಾವುದೇ ಇರಲಿ, ಮನ:ಪೂರ್ತಿ ಭಾಗವಹಿಸಿ, ಜಯಗಳಿಸಿ, ಪದಕಗಳೊಂದಿಗೆ ಹಿಂತಿರುಗಿ ಬರುತ್ತಿದ್ದೆವು. ಆಗೆಲ್ಲಾ ನಮಗೆ
" ವೀರೋಚಿತ ಸತ್ಕಾರ, ಆದರ, ಉಪಚಾರ ". ಕೊನೆಗೆ ಪದವಿ ಮುಗಿಯುವ ಹೊತ್ತಿಗೆ ೧೬೦ ಕೆಡೆಟ್ ಗಳಿದ್ದ ನಮ್ಮ ಕಂಪನಿಗೆ ನಾನೇ " ಅಂಡರ್ ಆಫೀಸರ್ " ಆಗಿ ನಿಯುಕ್ತಿಗೊಂಡು, ಕರ್ನಾಟಕ ಹಾಗು ಗೋವಾ ವಲಯದಲ್ಲಿ " ಅತ್ಯುತ್ತಮ ಅಂಡರ್ ಆಫೀಸರ್ " ಎಂದು ಆಯ್ಕೆಗೊಂಡು, " ಸಿ " ಪ್ರಮಾಣಪತ್ರವನ್ನು ಪಡೆದೆ. ಅದೇ ಇಂದು ನನಗೆ ಅನ್ನ ನೀಡುತ್ತಿರುವುದು.

ನನ್ನ ಮತ್ತು ನನ್ನ ಸ್ನೇಹಿತರ ಈ ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅಪ್ಪ, ಈಗ ಆದಷ್ಟೂ ತಣ್ಣಗಾಗಿದ್ದರು, ಮನೆಯಲ್ಲಿ ನಿತ್ಯ ನಡೆಯುತ್ತಿದ್ದ ಜಗಳಗಳು ಕಣ್ಮರೆಯಾಗಿ, ಅದರ ಜಾಗದಲ್ಲಿ ಅದೇನೋ ಅಸಹನೀಯವಾದ ಮೌನ ಮನೆ ಮಾಡಿತ್ತು. ಅಮ್ಮನ ಮೊಗದಲ್ಲಿ ನಗು ಉಕ್ಕುತ್ತಿತ್ತು, ಈ ಮಗ ಏನಾದರೂ ಒಂದು ಸಾಧನೆ ಮಾಡಿ, ನಮಗೆ ಒಳ್ಳೆಯ ಹೆಸರನ್ನು ತರುತ್ತಾನೆಂದು ಎಲ್ಲರ ಬಳಿ ಹೇಳುತ್ತಿದ್ದರು, ಆದರೆ ಅಪ್ಪ ಒಮ್ಮೆಯೂ, ಅಪ್ಪಿ ತಪ್ಪಿ, ನನ್ನ ಸಾಧನೆಗಳ ಸಂತೋಷದಲ್ಲಿ ಭಾಗಿಯಾಗಲೇ ಇಲ್ಲ ! ಹಾಗೆಯೇ ನಾನು ಸಹಾ ಅಪ್ಪನನ್ನು ಯಾವುದಕ್ಕೂ ಏನನ್ನೂ ಕೇಳದೆ, ಆನೆ ನಡೆದದ್ದೇ ದಾರಿ ಎನ್ನುವಂತೆ, ನನ್ನದೇ ಆದ ಹಾದಿಯಲ್ಲಿ ನಡೆಯತೊಡಗಿದೆ. ದ್ವಿತೀಯ ಪಿ.ಯು.ಸಿ., ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುವ ಸಮಯಕ್ಕೆ ಸರಿಯಾಗಿ ನಾನು ಕನ್ನಡ ಮತ್ತು ಆಂಗ್ಲ ಬೆರಳಚ್ಚು ತರಗತಿಗಳ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಮುಗಿಸಿ, ಪದವಿ ತರಗತಿಗೆ ಕಾಲಿಟ್ಟೆ. ಈಗ ಅಪ್ಪ ಮತ್ತು ನನ್ನ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿತ್ತು.

ಅಪ್ಪನ ಬಳಿ ಮಾತಾಡುವುದಾಗಲಿ, ಏನಕ್ಕಾದರೂ ಹಣ ಕೇಳುವುದಾಗಲಿ, ಈಗ ಸಂಪೂರ್ಣ ನಿಂತು ಹೋಗಿತ್ತು. ಕನ್ನಡ ಮತ್ತು ಆಂಗ್ಲ ಎರಡೂ ಬೆರಳಚ್ಚಿನಲ್ಲಿ ಪಾರಂಗತನಾಗಿದ್ದ ನಾನು ನನ್ನ ಕಾಲೇಜು ಸಮಯ ಮುಗಿದ ನಂತರ, ಗೆಳೆಯ ರಂಗಸ್ವಾಮಿಯ ಅಂಗಡಿಯಲ್ಲಿ ಕುಳಿತು, ತಾಲ್ಲೂಕು ಕಛೇರಿ ಮತ್ತಿತರ ಸರ್ಕಾರಿ ಕಛೇರಿಗಳಿಂದ ಅವನಿಗೆ ಬರುತ್ತಿದ ಬೆರಳಚ್ಚು ಕೆಲಸಗಳಲ್ಲಿ ಪಾಲುದಾರನಾಗಿ ಸಾಕಷ್ಟು ಹಣ ಸಂಪಾದಿಸಲು ಆರಂಭಿಸಿದೆ. ಜೊತೆಗೆ ದಯಾಮಯಿ ಪ್ರಾಂಶುಪಾಲರಾದ ಶ್ರೀಮತಿ ಸುಜಯ ರವರು ಪ್ರತಿವರ್ಷ ನನಗೆ ನಾಲ್ಕೈದು ಸಾವಿರ " ಪ್ರತಿಭಾ ಶಿಷ್ಯ ವೇತನ " ಬರುವಂತೆ ಅನುಗ್ರಹಿಸಿದ್ದರು. ನನ್ನ ಪದವಿ ವ್ಯಾಸಂಗ, ಅಪ್ಪ-ಅಮ್ಮನ ಹಂಗಿಲ್ಲದೆ ಸ್ವತಂತ್ರವಾಗಿ ನಡೆಯತೊಡಗಿತು. ಹೀಗಿದ್ದಾಗ ನಮಗೆ ಸಿಕ್ಕ ಅವಕಾಶ, ೧೯೮೮ರ ಜನವರಿ ೧೨ ( ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ಭಾರತದ ರಾಷ್ಟ್ರೀಯ ಯುವಕರ ದಿನ) ರಂದು ನವದೆಹಲಿಯಲ್ಲಿ ನಡೆಯಲಿದ್ದ " ಅಖಿಲ ಭಾರತ ಯುವಕರ ಸೈಕಲ್ ರ‍್ಯಾಲಿ ಮತ್ತು ಭಾವೈಕ್ಯತಾ ಶಿಬಿರ " ದಲ್ಲಿ ಭಾಗವಹಿಸಲು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದವರಿಂದ. ಅದನ್ನು ಎರಡು ಕೈಗಳಲ್ಲೂ ಬಾಚಿಕೊಂಡ ನಾವು ಐದೂ ಜನರು ದೆಹಲಿಗೆ ಹೊರಡಲು ಸಿದ್ಧತೆಯನ್ನು ಆರಂಭಿಸಿದೆವು.

ಕೇವಲ ಐದು ಜನರು ಹೋದರೆ ಸಾಲದು ಎಂದ ಕಾರ್ಯದರ್ಶಿ ಬಸವರಾಜುರವರ ಮಾತಿಗೆ ಬೆಲೆ ಕೊಟ್ಟು ನಮ್ಮ ಸ್ನೇಹಿತರನ್ನು ಓಲೈಸಲು ಪ್ರಾರಂಭಿಸಿದೆವು, ಅವರ ಮನೆಗಳಿಗೆ ಹೋಗಿ, ಅವರ ಅಪ್ಪ ಅಮ್ಮಂದಿರೊಡನೆ ಮಾತಾಡಿ, ಅವರ ಮನವೊಲಿಸಿ, ಕೊನೆಗೆ ೩೧ ಜನರ ದೊಡ್ಡ ತಂಡವನ್ನು ಆ ಮಹಾನ್ ಸೈಕಲ್ ರ‍್ಯಾಲಿಗೆ ಸಿದ್ಧ ಮಾಡಿಯೇ ಬಿಟ್ಟೆವು. ಸಾಕಷ್ಟು ಸೈಕಲ್ ಪ್ರವಾಸಗಳ ಅನುಭವವಿದ್ದ ನನ್ನನ್ನು ಆ ತಂಡದ ನಾಯಕನಾಗಿ ನಿಯುಕ್ತಿ ಮಾಡಲಾಯಿತು. ಓಹ್! ಅದೊಂದು ಮಹಾನ್ ಅನುಭವ, ೧೯೮೭ರ ಡಿಸೆಂಬರಿನಲ್ಲಿ ಆರಂಭಿಸಿ, ೩೦ ದಿನಗಳು ತಿಪಟೂರಿನಿಂದ ನವದೆಹಲಿಯವರೆಗೆ ಸೈಕಲ್ ತುಳಿದು, ದಾರಿಯಲ್ಲಿ ಸಿಕ್ಕ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲಾ ನೋಡುತ್ತಾ, ಪ್ರತಿಯೊಂದು ಅನುಭವಗಳನ್ನೂ ನಮ್ಮೆದೆಯಲ್ಲಿ ದಾಖಲು ಮಾಡುತ್ತಾ, ಕೊನೆಗೆ ೧೯೮೮ರ ಜನವರಿ ೧೧ ರಂದು ದೆಹಲಿ ತಲುಪಿ, ಮಹಾತ್ಮ ಗಾಂಧಿಯವರ ಸಮಾಧಿ, " ರಾಜ್ ಘ್ಹಾಟ್" ನ ಪಕ್ಕದಲ್ಲಿರುವ ’ ಗಾಂಧಿ ದರ್ಶನ ’ ಮೈದಾನದಲ್ಲಿದ್ದ ನಮ್ಮ " ರಾಷ್ಟ್ರೀಯ ಭಾವೈಕ್ಯತಾ ಶಿಬಿರ " ವನ್ನು ತಲುಪಿದಾಗ ನಮಗೆಲ್ಲಾ ಜಗವನ್ನೇ ಗೆದ್ದ ಅನುಭವವಾಗಿ ರೋಮಾಂಚಿತವಾಗಿದ್ದೆವು. ಭಾರತದ ಎಲ್ಲಾ ರಾಜ್ಯಗಳಿಂದ ತಮ್ಮ ಸೈಕಲ್ಗಳಲ್ಲಿ ಬಂದಿದ್ದ ಸುಮಾರು ನಾಲ್ಕು ಸಾವಿರ ಯುವಕರೊಂದಿಗೆ ನಮ್ಮೆಲ್ಲಾ ಅನುಭವಗಳನ್ನು ಹಂಚಿಕೊಂಡು, ಅವರ ಅನುಭವಗಳ ಬುತ್ತಿಯನ್ನೂ ಕಟ್ಟಿಕೊಂಡೆವು.

೧೫ ದಿನಗಳ ಶಿಬಿರವನ್ನು ಮುಗಿಸಿ, ದೆಹಲಿಯ ಇಂಚಿಂಚನ್ನೂ ನಮ್ಮ ಸೈಕಲ್ಗಳೊಂದಿಗೆ ಸುತ್ತಾಡಿ ನೋಡಿ, ಆನಂದಿಸಿ, ಅನುಭವಿಸಿ, ತಿಪಟೂರಿಗೆ ಹಿಂತಿರುಗಿ ಬಂದಾಗ ಅದೆಂಥಾ ಸ್ವಾಗತ ನಮಗೆ ಕಾದಿತ್ತು ಗೊತ್ತೇ ?? ಈ ಜೀವದಲ್ಲಿ ಉಸಿರಿರುವವರೆಗೂ ಅದನ್ನು ಮರೆಯಲಾಗದು! ಕಲ್ಪತರು ನಾಡು ತಿಪಟೂರಿನ ಅಸಂಖ್ಯಾತ ಮಾತೆಯರ ಆಶೀರ್ವಾದ ನಮ್ಮ ಬೆನ್ನ ಹಿಂದೆ ನಿಂತು ನಮ್ಮನ್ನು ಸಾಧನೆಯ ಉತ್ತುಂಗಕ್ಕೆ ಎಳೆದೊಯ್ದಿತ್ತು. ಅಂದು ಹರಸಿದ ಆ ಮಾತೆಯರಿಗಿದೋ ನನ್ನ ನಮನ. ಆಗ ಕರ್ನಾಟಕ ಸರ್ಕಾರದ ಮಂತ್ರಿಗಳಾಗಿದ್ದ ಶ್ರೀ ಲಕ್ಷ್ಮೀನರಸಿಂಹಯ್ಯನವರು, ವಿಭಾಗಾಧಿಕಾರಿಗಳಾಗಿದ್ದ ಶಿವಪ್ಪನವರು, ಅಂದಿನ ಶಾಸಕರಾಗಿದ್ದ ಟಿ.ಎಂ.ಮಂಜುನಾಥ್ ರವರು ನೆರೆದಿದ್ದ ಸಾವಿರಾರು ಜನರೆದುರು ನಮ್ಮ ಸಾಹಸಯಾತ್ರೆಯನ್ನು ಕೊಂಡಾಡಿ, ನಮ್ಮನ್ನು ಸನ್ಮಾನಿಸಿದಾಗ, ನಮಗೆ ಜಗತ್ತನ್ನೇ ಗೆದ್ದ ಅನುಭವವಾಗಿತ್ತು. ದೂರದಲ್ಲಿ ಜನರ ಮಧ್ಯೆ ಕುಳಿತು ನೋಡುತ್ತಿದ್ದ ಅಮ್ಮನ ಕಣ್ಗಳಲ್ಲಿ ಕಂಬನಿ ಕಟ್ಟೆಯೊಡೆದಿತ್ತು.

ಆದರೆ ಅಂದೂ ಸಹಾ ಅಪ್ಪ ಬರದೆ ಇದ್ದ ನೋವು ನನ್ನ ಎದೆಯನ್ನು ಹಿಂಡುತ್ತಿತ್ತು!

ಗೋಡೆಗಳು!

ಇವು ನಾವೇ ಕಟ್ಟಿದ ಗೋಡೆಗಳು,
ಬೀಳದ ಕುಸಿಯದ ಗೋಡೆಗಳು ,
ಬಹು ಸುಭದ್ರ ಗೋಡೆಗಳು
ಎಲ್ಲೆಡೆ ರಾರಾಜಿಸುವ ಗೋಡೆಗಳು!

ಎಂಥಾ ಸುನಾಮಿಯೇ ಬರಲಿ,
ಭೂಕಂಪವೇ ಆಗಲಿ,
ಬಿರುಗಾಳಿಯೇ ಬೀಸಲಿ,
ಅಲುಗಾಡದ ಗೋಡೆಗಳು!

ಮನಗಳ ನಡುವಿನ ಗೋಡೆಗಳು,
ಪ್ರೀತಿಯ ನಡುವಿನ ಗೋಡೆಗಳು,
ಭಾವನೆಗಳ ನಡುವಿನ ಗೋಡೆಗಳು,
ವಾತ್ಸಲ್ಯದ ನಡುವಿನ ಗೋಡೆಗಳು!

ಅಣ್ಣ ತಮ್ಮಂದಿರ ನಡುವಿನ ಗೋಡೆಗಳು,
ತಾಯಿ ಮಕ್ಕಳ ನಡುವಿನ ಗೋಡೆಗಳು,
ಕಂದಮ್ಮಗಳ ಕಣ್ಣೀರಿನ ಗೋಡೆಗಳು,
ಸತಿ ಪತಿಯರ ನಡುವೆಯೂ ಗೋಡೆಗಳು!

ಭಾಷೆಗಳ ನಡುವೆ ಗೋಡೆಗಳು,
ರಾಜ್ಯಗಳ ನಡುವೆ ಗೋಡೆಗಳು,
ನೀರಿನ ನಡುವೆಯೂ ಗೋಡೆಗಳು,
ಅಧಿಕಾರದ ಮದದ ಗೋಡೆಗಳು!

ಬರೆವವರ ಮನದಲಿ ಗೋಡೆಗಳು,
ಓದುಗರ ಮನದಲೂ ಗೋಡೆಗಳು,
ನಿರ್ವಹಿಸುವವರ ಮನದಲೂ ಗೋಡೆಗಳು,
ನಿರ್ಲಿಪ್ತರ ಮನದಲೂ ಗೋಡೆಗಳು!

ಕೊನೆಗೆ " ನಲ್ಮೆಯ" ಸಂಪದಿಗರ ನಡುವೆಯೂ
ಕೊನೆಗಾಣದ ಕೊಂಕಿನ ಗೋಡೆಗಳು!!!

ಗೋಡೆಗಳು!

ಇವು ನಾವೇ ಕಟ್ಟಿದ ಗೋಡೆಗಳು,
ಬೀಳದ ಕುಸಿಯದ ಗೋಡೆಗಳು ,
ಬಹು ಸುಭದ್ರ ಗೋಡೆಗಳು
ಎಲ್ಲೆಡೆ ರಾರಾಜಿಸುವ ಗೋಡೆಗಳು!

ಎಂಥಾ ಸುನಾಮಿಯೇ ಬರಲಿ,
ಭೂಕಂಪವೇ ಆಗಲಿ,
ಬಿರುಗಾಳಿಯೇ ಬೀಸಲಿ,
ಅಲುಗಾಡದ ಗೋಡೆಗಳು!

ಮನಗಳ ನಡುವಿನ ಗೋಡೆಗಳು,
ಪ್ರೀತಿಯ ನಡುವಿನ ಗೋಡೆಗಳು,
ಭಾವನೆಗಳ ನಡುವಿನ ಗೋಡೆಗಳು,
ವಾತ್ಸಲ್ಯದ ನಡುವಿನ ಗೋಡೆಗಳು!

ಅಣ್ಣ ತಮ್ಮಂದಿರ ನಡುವಿನ ಗೋಡೆಗಳು,
ತಾಯಿ ಮಕ್ಕಳ ನಡುವಿನ ಗೋಡೆಗಳು,
ಕಂದಮ್ಮಗಳ ಕಣ್ಣೀರಿನ ಗೋಡೆಗಳು,
ಸತಿ ಪತಿಯರ ನಡುವೆಯೂ ಗೋಡೆಗಳು!

ಭಾಷೆಗಳ ನಡುವೆ ಗೋಡೆಗಳು,
ರಾಜ್ಯಗಳ ನಡುವೆ ಗೋಡೆಗಳು,
ನೀರಿನ ನಡುವೆಯೂ ಗೋಡೆಗಳು,
ಅಧಿಕಾರದ ಮದದ ಗೋಡೆಗಳು!

ಬರೆವವರ ಮನದಲಿ ಗೋಡೆಗಳು,
ಓದುಗರ ಮನದಲೂ ಗೋಡೆಗಳು,
ನಿರ್ವಹಿಸುವವರ ಮನದಲೂ ಗೋಡೆಗಳು,
ನಿರ್ಲಿಪ್ತರ ಮನದಲೂ ಗೋಡೆಗಳು!

ಕೊನೆಗೆ " ನಲ್ಮೆಯ" ಸಂಪದಿಗರ ನಡುವೆಯೂ
ಕೊನೆಗಾಣದ ಕೊಂಕಿನ ಗೋಡೆಗಳು!!!

ಎಂಟು ಕಣ್ಣಿನ ಪ್ರೇಮಿಗಳು - ೨

ಬೆಂಗಳೂರಿಗೆ ಹೊರಟು ನಿಂತ ನನ್ನ ಮೀನಾ ಮತ್ತೆ ನನ್ನನ್ನು ಯಾವಾಗ ಕಾಣುವಳೋ, ಯಾವಾಗ ತನ್ನ ಅಳಿಸದ ಮುಗುಳ್ನಗುವಿನೊಂದಿಗೆ ನನ್ನೊಡನೆ ಮಾತಾಡುವಳೋ ಗೊತ್ತಿಲ್ಲದೆ ಮನ ಕಂಗಾಲಾಗಿತ್ತು. ಈ ನಡುವೆ ನಮ್ಮ ಪ್ರಾಂಶುಪಾಲರ ಸಲಹೆಯಂತೆ ಮೈಸೂರು ವಿಶ್ವ ವಿದ್ಯಾಲಯದಲ್ಲೇ ಮನ: ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಮಹದಾಸೆಯಿಂದ ಅರ್ಜಿ ಹಾಕಿ ಕಾಯುತ್ತಿದ್ದೆ. ಒಂದೆರಡು ಸಲ ಏನಾಯ್ತೆಂದು ತಿಳಿಯಲು ಮೈಸೂರಿಗೂ ಹೋಗಿ ಬಂದೆ. ಆಗಿನ ಮನ:ಶಾಸ್ತ್ರ ವಿಭಾಗದ ಮುಖ್ಯಸ್ಥರು, ಬೇರೆ ವಿಶ್ವ ವಿದ್ಯಾಲಯಗಳಲ್ಲಿ ಪದವಿ ವ್ಯಾಸಂಗ ಮಾಡಿದವರಿಗೆ ಸ್ನಾತಕೋತ್ತರ ಪದವಿಯಲ್ಲಿ ಕೇವಲ ಎರಡು ಸೀಟುಗಳನ್ನು ಮಾತ್ರ ನೀಡಲು ಸಾಧ್ಯವೆಂದೂ, ಉದ್ಧನೆಯ ಪಟ್ಟಿ ತೋರಿಸಿ, ೭೪% ಅಂಕಗಳಿದ್ದರೂ ೧೪ನೆ ಸ್ಥಾನದಲ್ಲಿದ್ದ ನನಗೆ ಬಹುಶ: ಸೀಟು ಸಿಗುವ ಅವಕಾಶ ಇಲ್ಲವೇ ಇಲ್ಲ ಎಂದಾಗ, ನಿರಾಸೆಯಿಂದ ತಿಪಟೂರಿಗೆ ಮರಳಿದೆ.

ಮೀನಾ ಹಾಗೂ ನನ್ನ ಪ್ರಣಯ ಕಥೆ ಗೊತ್ತಾಗಿದ್ದ ಅಪ್ಪ ಈಗ ನನ್ನ ಬಗ್ಗೆ ಇನ್ನೂ ಹೆಚ್ಚು ಉದಾಸೀನ ತೋರಿಸಲಾರಂಭಿಸಿದರು, ಅಮ್ಮನದು ಅದೇ ಮಾಮೂಲಿನ ಅಸಹಾಯಕತೆ. ಇದರಿಂದ ಬೇಸತ್ತ ನಾನು ಒಂದು ದಿನ, ನನ್ನ ಗೆಳೆಯರೊಂದಿಗೆ ಚರ್ಚಿಸಿ, ಮುಂದಿನ ವಿದ್ಯಾಭ್ಯಾಸಕ್ಕೆ ಕಲ್ಲು ಹಾಕಿ ಬೆಂಗಳೂರಿಗೆ ಹೋಗಿ ಕೆಲಸಕ್ಕೆ ಸೇರಿ, ಹಾಗೆಯೇ ಆಗಾಗ್ಗೆ ಮೀನಾಳನ್ನು ಭೇಟಿಯಾಗುತ್ತಾ, ಜೀವನದಲ್ಲಿ ನೆಲೆ ಕಂಡುಕೊಳ್ಳಬೇಕೆಂದು ನಿರ್ಧರಿಸಿದೆ. ಹಾಗೆ ಹೊರಟಾಗ ಮನೆಯಲ್ಲಿ ಯಾವುದೇ ಬೆಂಬಲ ಸಿಗಲಿಲ್ಲ, ಆದರೂ ಧೃತಿಗೆಡದೆ, ಸಹಪಾಠಿ ಬಸವರಾಜುವಿನ ಜೊತೆಯಲ್ಲಿ ಕೆಲವು ದಿನ ಇರಬಹುದೆಂದು ಭರವಸೆ ಸಿಕ್ಕ ನಂತರ ಬೆಂಗಳೂರಿನ ಬಸ್ಸು ಹತ್ತಿದೆ. ಬೆಂಗಳೂರಿಗೆ ಬಂದವನು ಮೊದಲು ಹೋಗಿದ್ದು ಗುಬ್ಬಿ ತೋಟದಪ್ಪನವರ ವಿದ್ಯಾರ್ಥಿ ನಿಲಯಕ್ಕೆ, ಅಲ್ಲಿದ್ದ ಸ್ನೇಹಿತ ಬಸವರಾಜುವಿನ ರೂಮಿನಲ್ಲಿ ಕೆಲವು ದಿನ ಇದ್ದು ಒಂದು ಕೆಲಸ ಹುಡುಕಿಕೊಂಡೆ. ಮೊದಲ ಸಂಬಳ ಬಂದ ನಂತರ ಮೀನಾಳನ್ನು ಭೇಟಿಯಾಗಲು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಬಂದೆ. ಸ್ವಲ್ಪ ಹೊತ್ತು ಕಾದ ನಂತರ ತನ್ನ ಸಹಪಾಠಿ ದಾದಿಯರೊಂದಿಗೆ ಶ್ವೇತವಸ್ತ್ರಧಾರಿಣಿಯಾಗಿ ಬಂದವಳನ್ನು ಹಾಗೇ ಬೆರಗುಗಣ್ಣುಗಳಿಂದ ನೋಡುತ್ತಾ ನಿಂತೆ. ನನ್ನನ್ನು ನೋಡದವಳಂತೆ ಮುಂದೆ ಹೋದದ್ದನ್ನು ಕಂಡು ಮೊದಲು ಮನಸ್ಸಿಗೆ ಬೇಜಾರಾದರೂ, ಅಲ್ಲಿನ ರೀತಿ ರಿವಾಜುಗಳು ಏನಿರುತ್ತವೋ ಅದಕ್ಕೆ ಹೀಗೆ ಹೋಗಿರಬಹುದೆಂದು ಸಮಾಧಾನ ಮಾಡಿಕೊಂಡೆ. ನಾನಂದುಕೊಂಡಂತೆ ಕೆಲ ಕ್ಷಣಗಳ ನಂತರ ಹಿಂದಿರುಗಿ ಬಂದಳು, ನನ್ನ ಮೀನಾ !

ಬಹುದಿನಗಳ ನಂತರ ಅವಳನ್ನು ನೋಡಿ ನನಗೆ ಮಾತೇ ಹೊರಬರದಂತಾಗಿತ್ತು, ತನ್ನ ತರಬೇತಿಯ ಬಗ್ಗೆ, ಗೆಳತಿಯರಬಗ್ಗೆ, ಅಲ್ಲಿನ ಕಟ್ಟುನಿಟ್ಟಾದ ರೀತಿ ನೀತಿಗಳ ಬಗ್ಗೆ ವರ್ಣಿಸಿದ ಅವಳು, ಒಳ್ಳೆಯ ಕೆಲಸ ಹಿಡಿದು ಜೀವನದಲ್ಲಿ ಮುಂದೆ ಬಾ, ನಾನು ನಿನಗಾಗಿ ಕಾಯುತ್ತಿರುತ್ತೇನೆ ಎಂದು ಕೈ ಬೀಸಿ ಹೊರಟಾಗ ಮನಸ್ಸು ಮೂಕವಾಗಿ ರೋದಿಸಿತ್ತು. ಹೀಗೆ ತಿಂಗಳಲ್ಲಿ ಎರಡು ಮೂರು ಬಾರಿ ಅವಳ ಭೇಟಿಯ ಭಾಗ್ಯ ಸಿಗುತ್ತಿತ್ತಷ್ಟೇ, ಮಿಕ್ಕಂತೆ ನಾನಾಯಿತು, ನನ್ನ ಕೆಲಸವಾಯಿತು ಎಂಬಂತೆ ಜೀವನ ಯಾಂತ್ರಿಕವಾಗಿ ನಡೆಯುತ್ತಿತ್ತು. ಅದೇ ಸಮಯದಲ್ಲಿ ಬೆಂಗಳೂರಿನಲ್ಲಿಯೇ ಕೆಲಸ ಸಿಕ್ಕಿ ಮುಂಬೈನಿಂದ ಹಿಂತಿರುಗಿ ಬಂದ ಆತ್ಮೀಯ ಸ್ನೇಹಿತ ಇನಾಯತ್ ನನ್ನ ಪಾಲಿಗೆ ದೇವದೂತನಾದ. ಬಿಡುವಾದಾಗಲೆಲ್ಲಾ ನಾವಿಬ್ಬರೂ ಒಟ್ಟಿಗೆ ಕುಳಿತು ಮುಂದಿನ ಜೀವನದ ಬಗ್ಗೆ ಸಾಕಷ್ಟು ಚರ್ಚಿಸುತ್ತಿದ್ದೆವು. ಒಮ್ಮೆ ಅವನೂ ನನ್ನ ಜೊತೆ ಆಸ್ಪತ್ರೆಗೆ ಬಂದು ಮೀನಾಳನ್ನು ಭೇಟಿಯಾಗಿ ಬಂದ. ಏನೇ ಬಂದರೂ ಬೇರೆಯಾಗಬೇಡಿ, ನಿಮ್ಮ ಗುರಿ ಸಾಧಿಸಿ, ಒಟ್ಟಿಗೆ ಬದುಕಿ ಎಂದು ನಮ್ಮಿಬ್ಬರಿಗೂ ಉಪದೇಶ ಮಾಡುತ್ತಿದ್ದ.

ಈ ಮಧ್ಯೆ ಅಪ್ಪನಿಂದ ಬಂದ ಕಾಗದ ನನ್ನನ್ನು ಸ್ವಲ್ಪ ವಿಚಲಿತನಾಗಿಸಿ, ಆತುರಾತುರವಾಗಿ ತಿಪಟೂರಿಗೆ ಹೋಗುವಂತೆ ಮಾಡಿತ್ತು. ನಾನು ಬೆಂಗಳೂರಿಗೆ ಕೆಲಸಕ್ಕೆ ಬಂದ ನಂತರ ಮೈಸೂರು ವಿಶ್ವ ವಿದ್ಯಾಲಯದಿಂದ ನಿಮಗೆ ಸ್ನಾತಕೋತ್ತರ ಪದವಿಗೆ ಸೀಟು ಕೊಡಲಾಗಿದೆ, ಒಡನೆ ಬಂದು ಸೇರಿಕೊಳ್ಳಿ ಎಂದು ಕಾಗದ ಬರೆದಿದ್ದರಂತೆ. ಅಪ್ಪ ಅದನ್ನು ನೋಡಿ, ನನಗೆ ಕಾಗದ ಬರೆದು, ನಾನು ಅಲ್ಲಿಗೆ ಹೋಗಿ ಮುಟ್ಟುವಾಗ, ತುಂಬಾ ತಡವಾಗಿ, ನನಗೆ ಸಿಗಬೇಕಿದ್ದ ಜಾಗ ಕೇವಲ ೬೩% ಅಂಕಗಳಿದ್ದವನ ಪಾಲಾಗಿತ್ತು. ನನ್ನ ಅವಕಾಶದ ಬಾಗಿಲು ಮುಚ್ಚಿತ್ತು. ಮೀನಾಳ ಹಿಂದೆ ಬೆಂಗಳೂರಿಗೆ ಬಂದ ನನಗೆ "ಜೀವನದ ಮೊದಲ ರೈಲು, ಮಿಸ್ಸಾಗಿತ್ತು" !

ನಿರಾಶೆಯಿಂದ ಮತ್ತೆ ಬೆಂಗಳೂರಿಗೆ ಹಿಂತಿರುಗಿದೆ. ಮತ್ತೊಮ್ಮೆ ಮೀನಾಳನ್ನು ಭೇಟಿಯಾದಾಗ ಅವಳಿಗೆ ಈ ಬಗ್ಗೆ ಹೇಳಿದೆ, ಉದಾಸೀನದಿಂದ ಪ್ರತಿಕ್ರಿಯಿಸಿದ ಅವಳು ಹೋಗಲಿ ಬಿಡು, ಏನ್ಮಾಡೋಕ್ಕಾಗುತ್ತೆ ಅಂದಾಗ ಅವಳ ಮುಖವನ್ನೇ ದಿಟ್ಟಿಸಿದೆ. ನಿರ್ಭಾವುಕವಾಗಿದ್ದ ಅವಳ ಮುಖ, ಏಕೋ ಎಂದಿನಂತಿಲ್ಲ ಅನ್ನಿಸಿತು. ಅಲ್ಲಿಂದ ಹೊರಟವನು ಸೀದಾ ಇನಾಯತ್ ಮನೆಗೆ ಹೋದೆ. ಆಗ ಅವನು ಹೇಳಿದ ಮಾತುಗಳು ನನ್ನ ಮನಕ್ಕೆ ಕಿಚ್ಚು ಹಚ್ಚಿದ್ದವು. ನಾನು ಮೈಸೂರಿಗೆ ಹೋಗಿದ್ದಾಗ ಅವನು ಆಸ್ಪತ್ರೆಗೆ ಹೋಗಿ ಅವಳನ್ನು ಭೇಟಿಯಾಗಿದ್ದನಂತೆ, ನನ್ನ ಬಗ್ಗೆ ತುಂಬಾ ಮಾತಾಡಿ, ಅವನು ನೊಂದಿದ್ದಾನೆ, ಅವನಿಗೆ ಮೋಸ ಮಾಡಬೇಡ, ನಿನ್ನನ್ನು ತುಂಬಾ ಹಚ್ಚಿಕೊಂಡಿದ್ದಾನೆ ಎಂದವನಿಗೆ ಮೀನಾ, ನಾನು ಅವನಿಗೆ ಒಬ್ಬ ಒಳ್ಳೆಯ ಗೆಳತಿಯಾಗಿ ಮಾತ್ರ ಇರಬಲ್ಲೆ, ಅವನಿಗೆ ಜೀವನ ಸಂಗಾತಿಯಾಗಲು ಸಾಧ್ಯವಿಲ್ಲ ಎಂದಳಂತೆ. ಅದಲ್ಲದೆ ಇವನು ಹೋಗಿ ಅವಳನ್ನು ಭೇಟಿಯಾಗಿದ್ದು ಅವರ ಹಾಸ್ಟೆಲ್ ವಾರ್ಡನ್ಗೆ ಗೊತ್ತಾಗಿ, ಅವರಪ್ಪ-ಅಮ್ಮನನ್ನು ಕರೆಸಿ ಮಂಗಳಾರತಿ ಮಾಡಿ, ಇನ್ನೊಮ್ಮೆ ಹೀಗಾದರೆ ಹಾಸ್ಟೆಲಿನಿಂದ ಅವಳನ್ನು ಹೊರಹಾಕುವ ಎಚ್ಚರಿಕೆಯನ್ನೂ ಕೊಟ್ಟಿದ್ದರಂತೆ. ಕೇವಲ ಹದಿನೈದಿಪ್ಪತ್ತು ದಿನಗಳಲ್ಲಿ ಏನೆಲ್ಲಾ ಆಗಿ ಹೋಯ್ತೆಂದು ಯೋಚಿಸುತ್ತಾ, ಮುಂದೆ ಏನು ಮಾಡಬೇಕೆಂದು ತಿಳಿಯದೆ, ಕಬ್ಬನ್ ಪಾರ್ಕಿನ ದೊಡ್ಡ ಮರದ ಕೆಳಗೆ ಸುಮ್ಮನೆ ಅಂಗಾತ ಮಲಗಿ ಬಿಟ್ಟೆ. ಅವಳೊಡನೆ ಮತ್ತೆ ಮನ ಬಿಚ್ಚಿ ಮಾತಾಡುವವರೆಗೂ ನನಗೆ ಸಮಾಧಾನವಾಗುವಂತಿರಲಿಲ್ಲ.

ಮತ್ತೊಮ್ಮೆ ಅವಳನ್ನು ಭೇಟಿಯಾದೆ, ಅವಳು ಹೇಳಿದ್ದು ಒಂದೇ ಮಾತು, " ನಾನು ನೀನು ಈ ಜೀವನದಲ್ಲಿ ಸಮಾನಾಂತರ ರೇಖೆಗಳು, ನಾವಿಬ್ಬರೂ ಒಂದಾಗಲು ಸಾಧ್ಯವಿಲ್ಲ. ನಾನು ಕ್ರಿಶ್ಚಿಯನ್, ನೀನು ಹಿಂದೂ, ಮುಂದೆ ನಾವು ಮದುವೆಯಾಗಿ ಎರಡು ಮಕ್ಕಳಾದರೆ ಅವರ ಸಾಮಾಜಿಕ ಬದುಕು ಏನಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀಯಾ" ? ಎಂದವಳ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಆದರೂ ಅವಳಿಗೆ ಸಮಾಧಾನ ಹೇಳಲು ಯತ್ನಿಸಿದೆ, "ನಿನ್ನ ಧರ್ಮ ನೀನು ಪಾಲಿಸು, ನನ್ನ ಧರ್ಮ ನಾನು ಪಾಲಿಸುತ್ತೇನೆ, ಯಾವಾಗಲೂ ಅದಕ್ಕೆ ನಾನು ಅಡ್ಡಿ ಪಡಿಸುವುದಿಲ್ಲ" ಎಂದೆ. ಅವಳು ಮುಂದಿಟ್ಟ ಒಂದು ಪ್ರಶ್ನೆಗೆ ಉತ್ತರ ಕೊಡಲಾಗಲಿಲ್ಲ, "ನನ್ನನ್ನು ಇಷ್ಟೆಲ್ಲಾ ಪ್ರೀತಿಸುವ ನೀನೇಕೆ ನನ್ನ ಧರ್ಮಕ್ಕೆ ಮತಾಂತರವಾಗಬಾರದು" ? ಎಂದವಳ ಮುಖ ನೋಡಿದೆ, ಅಲ್ಲಿ ಅಸಹಾಯಕತೆಯಿತ್ತೋ, ಅವಳ ಧರ್ಮದ ಬಗ್ಗೆ ಅಪಾರ ಪ್ರೀತಿಯಿತ್ತೋ ಅಥವಾ ನನ್ನ ತಾಳ್ಮೆಯನ್ನು ಪರೀಕ್ಷಿಸಬೇಕೆಂಬ ತುಂಟ ಬುದ್ಧಿಯಿತ್ತೋ, ಏನೂ ಅರ್ಥವಾಗಲಿಲ್ಲ. ಆದರೂ ಸಾವರಿಸಿಕೊಂಡು ಅವಳಿಗೆ ಹೇಳಿದೆ, "ನಾನು ಅಪಾರವಾಗಿ ಪ್ರೀತಿಸುವ ನನ್ನ ಧರ್ಮವನ್ನು ಬಿಡುವ ಮಾತೇ ಇಲ್ಲ, ಅದು ಕೇವಲ ಕನಸು. ಆ ಮಾತು ಬಿಡು, ನಿನ್ನ ಜೀವನ ಚೆನ್ನಾಗಿರುವಂತೆ ನೋಡಿಕೊಳ್ಳುವ ಹೊಣೆ ನನ್ನದು, ಎಂದಿಗೂ ನಿನ್ನ ಧರ್ಮಕ್ಕೆ, ನಿನ್ನ ನಂಬಿಕೆಗಳಿಗೆ ಅಪಚಾರವಾಗದಂತೆ ನಾನು ನಡೆದುಕೊಳ್ಳುತ್ತೇನೆಂಬ ಭರವಸೆಯನ್ನು ನಾನು ನಿನಗೆ ಕೊಡಬಲ್ಲೆ, ಆದರೆ ನನ್ನ ಧರ್ಮವನ್ನು ಬಿಡುವ ಮಾತನ್ನು ಎಂದೂ ನನ್ನ ಮುಂದೆ ಹೇಳಬೇಡ" ಎಂದ ನನ್ನನ್ನು ಒಮ್ಮೆ ದೀರ್ಘವಾಗಿ ನೋಡಿ ಎದ್ದು ನಿಂತವಳು, " ಸರಿ ಹಾಗಾದರೆ ನನ್ನನ್ನು ಮರೆತು ಬಿಡು, ಇನ್ನೆಂದೂ ನನ್ನ ದಾರಿಗೆ ದಯವಿಟ್ಟು ಅಡ್ಡ ಬರಬೇಡ, ನಾನು ಸಾಧಿಸಬೇಕಾದ್ದು ಬಹಳಷ್ಟಿದೆ, ಇನ್ನು ಮುಂದೆ ನಿನ್ನಿಂದ ನನಗೆ ಸಹಾಯಕ್ಕಿಂತ ತೊಂದರೆಯೇ ಹೆಚ್ಚಾಗಬಹುದು. ಅದಕ್ಕಿಂತ ನಾವಿಬ್ಬರೂ ದೂರವೇ ಉಳಿದು, ಒಬ್ಬರು ಇನ್ನೊಬ್ಬರ ಏಳ್ಗೆಯನ್ನು ನೋಡಿ ಸಂತೋಷ ಪಡೋಣ, ಈ ಜನ್ಮಕ್ಕೆ ನನ್ನ ನಿನ್ನ ಸಂಬಂಧ ಇಷ್ಟೇ " ಎಂದು ಕೈಗೊಂದು ಮುತ್ತನಿತ್ತು ಹೊರಟೇ ಬಿಟ್ಟಳು. ಹಾಗೆ ಹೋದವಳ ದಾರಿಯನ್ನೇ ನೋಡುತ್ತಾ ಅದೆಷ್ಟೋ ಹೊತ್ತು ಆ ಆಸ್ಪತ್ರೆಯ ಮುಂದಿನ ಕಲ್ಲು ಬೆಂಚಿನ ಮೇಲೆ ನಾನು ಕುಳಿತೇ ಇದ್ದೆ, ಕಲ್ಲಿನಂತೆ.

ಅಂದು, ಧರ್ಮದೆದುರು ನಮ್ಮ ಪ್ರೀತಿ ಸೋತಿತ್ತು. ಒಬ್ಬ ಹಿಂದೂ ಹುಡುಗ, ಮತ್ತೊಬ್ಬ ಕ್ರಿಶ್ಚಿಯನ್ ಹುಡುಗಿಯನ್ನು ಒಂದಾಗಿಸಲು ಮತ್ತೊಬ್ಬ ಮುಸ್ಲಿಂ ಗೆಳೆಯ ಕೈ ಮೀರಿ ಪ್ರಯತ್ನಿಸಿದ್ದ. ಧರ್ಮಗಳ ಸಾಮರಸ್ಯ ಸಾಧಿಸಲು ಯಶಸ್ವಿಯಾದ ಪ್ರೀತಿಗೆ, ಜೀವಗಳನ್ನು ಒಂದುಗೂಡಿಸುವಲ್ಲಿ ಎಂದೂ ಕಾಣದ ಸೋಲಾಗಿತ್ತು! ನಾವು ಕಟ್ಟಿ ಬೆಳೆಸಿದ ಧರ್ಮಗಳು, ನಮ್ಮ ನಡುವೆಯೇ ಗೋಡೆಯಂತೆ ಎದ್ದು ನಿಂತು, ವಿಕಟಾಟ್ಟಹಾಸ ಮಾಡಿದಂತಾಯ್ತು.

" ಜೀವನದಲ್ಲಿ ಎರಡನೆಯ ಬಾರಿ ಅತ್ಯಮೂಲ್ಯ ರೈಲುಗಾಡಿ, ಮಿಸ್ಸಾಗಿತ್ತು " !! ಮನಸ್ಸು ಬರಿದಾಗಿತ್ತು, ಭಾವನೆಗಳು ಚಿಂದಿಯಾಗಿದ್ದವು, ಪ್ರೀತಿ ಪ್ರೇಮದ ಮಾತುಗಳೆಲ್ಲ ಅರ್ಥ ಕಳೆದುಕೊಂಡು, ಪ್ರೇತಾತ್ಮಗಳು ನನ್ನ ಸುತ್ತ ಕುಣಿಯುತ್ತಿರುವಂತೆ ಭಾಸವಾಗತೊಡಗಿತು. ಕೆಲವು ದಿನ ಇದೇ ಯೋಚನೆಯಲ್ಲಿದ್ದ ನಾನು, ಕಬ್ಬನ್ ಪಾರ್ಕಿನ ಆ ದೈತ್ಯ ಮರದ ಕೆಳಗೆ ಕುಳಿತು ಕಡಲೆಕಾಯಿ ತಿನ್ನುತ್ತಾ, ಆಗಿದ್ದೆಲ್ಲವನ್ನೂ ಮನನ ಮಾಡುತ್ತಾ, ಬೆಂಗಳೂರಿನ ಯಾಂತ್ರಿಕ ಜೀವನಕ್ಕೆ ನಿಧಾನವಾಗಿ ಹೊಂದಿಕೊಂಡು, ಆದದ್ದನ್ನೆಲ್ಲಾ ಮರೆತು, ಮುಂದಿನ ಜೀವನ ಕಟ್ಟುವ ನಿರ್ಧಾರ ತೆಗೆದುಕೊಂಡೆ. ಮತ್ತೆಂದೂ ಅವಳನ್ನು ನೋಡುವ ಪ್ರಯತ್ನವನ್ನೇ ಮಾಡಲಿಲ್ಲ. " ಮಹಾ ಒರಟ " ನೆಂಬ ಅನ್ವರ್ಥಕವನ್ನು ಅದಾಗಲೇ ಹೊತ್ತುಕೊಂಡಿದ್ದ ನಾನು, ಈ ಪ್ರೇಮ ವೈಫಲ್ಯದಿಂದ ಕುಗ್ಗದೆ, ಇನ್ನೂ ಹೆಚ್ಚು ಒರಟನಾಗಿ, ಎಲ್ಲಕ್ಕಿಂತ ನನ್ನ ಕೆಲಸವೇ ಹೆಚ್ಚೆಂದು ಪರಿಗಣಿಸಿ, ಯಶಸ್ವಿಯಾಗಿ ಇಂದು ದುಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ತನ್ನ ಗುರಿ ಸಾಧಿಸಲು ತನ್ನ ಧರ್ಮಕ್ಕಾಗಿ ತನ್ನ ಪ್ರೀತಿಯನ್ನು ಬಲಿ ಹೊಡೆದ ನನ್ನ ಮೀನಾ, ತನ್ನ ತರಬೇತಿ ಮುಗಿಸಿ, ಬೆಂಗಳೂರಿನಲ್ಲೇ ಕೆಲ ಕಾಲ ಕೆಲಸ ಮಾಡಿ, ಇತ್ತೀಚೆಗೆ ನನಗೆ ಸಿಕ್ಕ ಸುದ್ಧಿಯಂತೆ, ಈಗ ದೂರದ ಅಮೇರಿಕಾದ ಯಾವುದೋ ಆಸ್ಪತ್ರೆಯಲ್ಲಿದ್ದಾಳಂತೆ. ವೃತ್ತಿ ಜೀವನದಲ್ಲಿ ಇಬ್ಬರೂ ಯಶಸ್ವಿಯಾಗಿದ್ದೇವೆ, ನಮ್ಮ ನಮ್ಮ ಗುರಿ ಸಾಧಿಸಿದ್ದೇವೆ.

ಆದರೆ ನಡುವೆ ಸೋತಿದ್ದು,,,, ಪ್ರೀತಿ !!

ನೆನಪಿನಾಳದಿಂದ..೮.. ಎಂಟು ಕಣ್ಣಿನ ಪ್ರೇಮಿಗಳು.

ದ್ವಿತೀಯ ಪಿ.ಯು.ಸಿ ಮುಗಿಸಿ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭವಾಗಿದ್ದವು. ನಾವು ಐದೂ ಜನ ಪ್ರಾಣ ಸ್ನೇಹಿತರು, ಇತಿಹಾಸ, ಅರ್ಥಶಾಸ್ತ್ರ, ಮನ:ಶಾಸ್ತ್ರಗಳನ್ನು ಐಚ್ಚಿಕ ವಿಷಯಗಳನ್ನಾಗಿ ತೆಗೆದುಕೊಂಡಿದ್ದೆವು. ಸಾಂಗವಾಗಿ ತರಗತಿಗಳು ನಡೆಯುತ್ತಿದ್ದವು, ಕಾಲೇಜಿನ ದಿನಗಳು ನಮ್ಮ ಮಾಮೂಲಿನ ಹಾಸ್ಯ, ಮೂದಲಿಕೆ, ಪ್ರವಾಸ, ಸಾಹಸಗಳೊಂದಿಗೆ ನಿರುಮ್ಮಳವಾಗಿ ಸಾಗುತ್ತಿದ್ದವು. ಹೀಗಿರುವಾಗ ನನ್ನ ಜೀವನದಲ್ಲಿ ಪ್ರವೇಶ ಕೊಟ್ಟವಳು, " ಮೀನಾ ".

" ಉತ್ತುಂಗ ನಾಡಿನಿಂದ ಒಂದು ಚೆಲುವಿ ಬಂದಾಳವ್ವ, ಎಂಥ ಚೆಲುವಿ ಕಾಣ್ತಾಳವ್ವ, ಚೆಲುವೀಯವ್ವಾ " ಎಂಬ ಜಾನಪದ ಗೀತೆಯನ್ನು ನೂರಾರು ಸಾರಿ ಹಾಡಿ, ಅನುಭವಿಸಿ, ಅದರ ಭಾವಕ್ಕೆ ತಕ್ಕಂತೆ ನನಗೊಂದು ಚೈತನ್ಯದ ಚಿಲುಮೆಯಾಗಿದ್ದವಳು. ನನ್ನ ಕಾಲೇಜಿನ ದಿನಗಳ ಸಾಧನೆಗಳ ಬೆನ್ನೆಲುಬಾಗಿ ನಿಂತವಳು. ಉತ್ತುಂಗ ನಾಡಿನಿಂದ ನನಗಾಗಿ ಧರೆಗಿಳಿದು ಬಂದವಳು, ಮನದಲ್ಲಾಗಿದ್ದ ಮಾಯದ ಗಾಯಗಳಿಗೆ ದಿವ್ಯೌಷಧವಾಗಿ ಹೊಸ ಚೈತನ್ಯ ತುಂಬಿದವಳು,
ನನ್ನ " ಮತ್ಸ್ಯೆ " .

ದಾದಿಯಾಗಿದ್ದ ಅಮ್ಮನ ಮೇಲ್ವಿಚಾರಕಿಯೊಬ್ಬರಿಗೆ ಯಾವಾಗಲೂ ತಮ್ಮ ಇಲಾಖೆಯ ವರದಿಗಳನ್ನು ನನ್ನ ಮೂಲಕ ಕಳುಹಿಸುತ್ತಿದ್ದರು. ಗಾಂಧಿನಗರದಲ್ಲಿದ್ದ ನಮ್ಮ ಮನೆಗೂ, ಸರ್ಕಾರಿ ಆಸ್ಪತ್ರೆಯ ಬಳಿಯಿದ್ದ ಅವರ ವಸತಿಗೂ ಸುಮಾರು ನಾಲ್ಕು ಕಿಲೋಮೀಟರ್ ದೂರವಿತ್ತು. ಕಾಲೇಜಿಗೆ ಹೋಗುವಾಗ ದಾರಿಯಲ್ಲಿದ್ದ ಅವರ ಮನೆಗೆ ಅಮ್ಮನ ವರದಿಗಳನ್ನು ನಿಯಮಿತವಾಗಿ ನಾನು " ಕೊರಿಯರ್ ಬಾಯ್ " ನಂತೆ ತಲುಪಿಸಿಬಿಡುತ್ತಿದ್ದೆ. ಹಾಗೆಲ್ಲಾ ಹೋದಾಗ, ಕ್ರಿಶ್ಚಿಯನ್ನರಾಗಿದ್ದ,
ಸಹೃದಯರಾದ ಅವರು ನನಗೆ ಕಾಫಿ ಕುಡಿಸಿ, ನನ್ನ ಓದಿನ ಬಗ್ಗೆ, ಎನ್.ಸಿ.ಸಿ ಕ್ಯಾಂಪ್ ಗಳ ಬಗ್ಗೆ, ಅಪ್ಪನ ಆರ್ಭಟದ ಬಗ್ಗೆ ವಿಚಾರಿಸುತ್ತಿದ್ದರು. ಚೆನ್ನಾಗಿ ಓದಿ ಜೀವನದಲ್ಲಿ ನೆಲೆಯಾಗಿ ನಿಲ್ಲುವಂತೆ ಶುಭ ಹಾರೈಸುತ್ತಿದ್ದರು. ತಮ್ಮ ಮನೆಯ ಕಷ್ಟ ಸುಖಗಳನ್ನೂ ಹೇಳಿಕೊಳ್ಳುತ್ತಿದ್ದರು.

ಒಂದು ದಿನ ಹೀಗೆಯೇ ಹೋದಾಗ ಆಶ್ಚರ್ಯ ಕಾದಿತ್ತು. ಯಾವಾಗಲೂ ಕಾಫಿ ಕೊಡುತ್ತಿದ್ದ ಅವರ ಜಾಗದಲ್ಲಿ " ಕೃಷ್ಣ ಸುಂದರಿ " ಯೊಬ್ಬಳು ಕಾಫಿ ಲೋಟ ಹಿಡಿದು ವಯ್ಯಾರದಿಂದ ಬಳುಕುತ್ತಾ ನನ್ನತ್ತ ಬಂದಾಗ, ಯಾರೆಂದು ಗೊತ್ತಾಗದೆ ಕುಳಿತಿದ್ದವನು ಕಕ್ಕಾಬಿಕ್ಕಿಯಾಗಿ ಎದ್ದು ನಿಂತೆ ! ಮುದ್ದಾದ ದುಂಡು ಮುಖ, ವಿಶಾಲವಾದ ಭಾವ ಪೂರ್ಣ ನಯನಗಳು, ಸಂಪಿಗೆಯ ಎಸಳಿನಂಥ ಮೂಗು, ಎತ್ತರದ ನಿಲುವು, ಸ್ವಲ್ಪ ಕಪ್ಪಿದ್ದರೂ ಮತ್ತೆ ಮತ್ತೆ ನೋಡಬೇಕೆನ್ನುವಂಥ ಮೈ ಮಾಟದ ಈ ಸುಂದರಿ ಯಾರು ? ಹುಡುಗಿಯರೆಂದರೆ ಕಾಲೇಜಿನಲ್ಲಿ ಸ್ವಲ್ಪ ದೂರವೇ ಇರುತ್ತಿದ್ದ ನನಗೆ ಒಬ್ಬ ಅಪರಿಚಿತ ಹುಡುಗಿಯನ್ನು ಅಷ್ಟು ಹತ್ತಿರದಿಂದ ನೋಡಿ ಏನು ಮಾತಾಡಬೇಕೆಂದು ತಿಳಿಯದೆ ಒದ್ದಾಡುತ್ತಿದ್ದಾಗ, ಒಳಗಿನಿಂದ ಬಂದ ಅವರು, " ಇವಳು ನನ್ನ ದೊಡ್ಡ ಮಗಳು, ಮೀನಾ, ಬೆಂಗಳೂರಿನಲ್ಲಿ ಓದುತ್ತಿದ್ದಳು, ದ್ವಿತೀಯ ಪಿ.ಯು.ಸಿ ಫೇಲಾಗಿ ಬಂದಿದ್ದಾಳೆ " ಎಂದು ಪರಿಚಯ ಮಾಡಿಸಿದಾಗ ಜೀವ ನಿರಾಳವಾಯಿತು. ಫಿಲೋಮಿನಾ ಎಂಬ ಅವಳ ಹೆಸರನ್ನು ಕಟ್ ಮಾಡಿ ಮುದ್ದಾಗಿ
" ಮೀನಾ" ಎಂದು ಕರೆಯುತ್ತಿದ್ದರಂತೆ. ಅವಳು ಕೊಟ್ಟ ಕಾಫಿಯ ಲೋಟ ತೆಗೆದುಕೊಂಡು ಪೆಚ್ಚುಪೆಚ್ಚಾಗಿ ಅವಳ ಮುಖ ನೋಡಿದರೆ ಅವಳ ಕಣ್ಣಂಚಿನಲ್ಲಿ ತುಂಟನಗೆ ಹೊರ ಸೂಸುತ್ತಿತ್ತು.

ಹೀಗೆ ಆರಂಭವಾದ ನಮ್ಮ ಸ್ನೇಹ ತುಂಬಾ ಗಾಢವಾಯಿತು, ಫೇಲಾಗಿದ್ದ ಅವಳನ್ನು, ಅವರಮ್ಮನ ಆಣತಿಯಂತೆ, ನಮ್ಮದೇ ಕಾಲೇಜಿನ ಪರಿಚಿತ ಉಪನ್ಯಾಸಕರಲ್ಲಿ ಟ್ಯೂಷನ್ಗೆ ಸೇರಿಸಿದೆ. ಮತ್ತೆ ನಾನು ಟೈಪಿಂಗಿಗೆ ಹೋಗುತ್ತಿದ್ದ ಠಾಗೂರ್ ವಾಣಿಜ್ಯ ವಿದ್ಯಾಲಯದಲ್ಲಿ ಟೈಪಿಂಗಿಗೆ ಸೇರಿಸಿದೆ. ಹೀಗೆ ನಮ್ಮ ಓಡಾಟ ಶುರುವಾಗಿ, ಬೆಳಿಗ್ಗೆ ಮತ್ತು ಸಂಜೆ, ದಿನಕ್ಕೆರಡು ಬಾರಿ, ಟೈಪಿಂಗ್ನಲ್ಲಿ ಒಬ್ಬರಿಗೊಬ್ಬರು ಭೇಟಿಯಾಗತೊಡಗಿದೆವು. ಸಮೀಪ ದೃಷ್ಟಿ ದೋಷವಿದ್ದ ಅವಳು ಟೈಪಿಂಗಿಗೆ ಬರುವಾಗ ಕನ್ನಡಕ ಧರಿಸಿ ಬರುತ್ತಿದ್ದಳು. ಟೈಪಿಂಗ್ ಹಾಗೂ ಟ್ಯೂಷನ್ ಎರಡೂ ಅವರ ಮನೆಯಿಂದ ಸುಮಾರು ದೂರ ಇದ್ದುದರಿಂದ ಅವರಮ್ಮ ಒಂದು ಹೀರೋ ಸೈಕಲ್ ಕೊಡಿಸಿದ್ದರು. ಮೊದ ಮೊದಲು ಅವಳ ಆಂಗ್ಲ ಮಿಶ್ರಿತ ಬೆಂಗಳೂರು ಭಾಷೆಗೆ ಬೆದರಿದ ನಾನು ಅವಳ ಜೊತೆ ಮಾತಾಡಲು ತಡವರಿಸುತ್ತಿದ್ದೆ. ಏಕೆಂದರೆ ಅಪ್ಪಟ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ನನಗೆ ಆಂಗ್ಲದ ವ್ಯಾಮೋಹವಿರಲ್ಲಿಲ್ಲವಲ್ಲದೆ ಮಾತಾಡುವಷ್ಟು ಪ್ರೌಢಿಮೆಯೂ ಇರಲಿಲ್ಲ ! ಇದು ಅವಳಿಗೆ ಅರ್ಥವಾಗಿ ಸಾಧ್ಯವಾದಷ್ಟೂ ನನ್ನೊಂದಿಗೆ ಕನ್ನಡದಲ್ಲಿಯೇ ಮಾತಾಡಲು ಪ್ರಯತ್ನಿಸುತ್ತಿದ್ದಳು. ಚಿಕ್ಕಂದಿನಿಂದ ಬೆಂಗಳೂರಿನ ಹಾಸ್ಟೆಲಿನಲ್ಲಿದ್ದುಕೊಂಡು ಆಂಗ್ಲ ಮಾಧ್ಯಮದಲ್ಲಿ ಓದಿದ್ದ ಅವಳಿಗೆ ಅದೆಷ್ಟೋ ಕನ್ನಡ ಪದಗಳು ಗೊತ್ತೇ ಇರಲಿಲ್ಲ. ನಾನು ಅವಳಿಗೆ ಆತ್ಮೀಯ ಕನ್ನಡ ಮೇಷ್ಟ್ರಾದೆ ! ಅವಳ ಬೆಂಗ್ಳೂರ್ಗನ್ನಡಕ್ಕೂ, ನಮ್ಮ ಕಲ್ಪತರು ನಾಡಿನ ಕನ್ನಡಕ್ಕೂ ತುಂಬಾನೇ ಅಂತರವಿತ್ತು, ಕೆಲವೊಮ್ಮೆ ನನ್ನೊಡನೆ ತಪ್ಪು ತಪ್ಪಾಗಿ ಮಾತಾಡಿ, ಆಮೇಲೆ ಅದರರ್ಥ ಗೊತ್ತಾಗಿ ಬಾಯ್ತುಂಬಾ ನಗುತ್ತಿದ್ದಳು. ನಾನು ಅವಳ ನಗುವನ್ನೇ ನೋಡುತ್ತಾ, ಅವಳನ್ನು ನನ್ನ ಕಣ್ಗಳಲ್ಲಿ ತುಂಬಿಕೊಳ್ಳುತ್ತಾ ಅವಳ ಕೈಸೆರೆಯಾಗಿ ಹೋದೆ.

ಈ ನಮ್ಮ ಸ್ನೇಹದ ಸುದ್ಧಿ ನಮ್ಮ ಸ್ನೇಹಿತರ ಬಳಗದಲ್ಲೆಲ್ಲಾ ಕಾಡ್ಗಿಚ್ಚಿನಂತೆ ಹಬ್ಬಿ, ಎಲ್ಲರ ಬಾಯಲ್ಲಿ ಬಿಸಿ ಬಿಸಿ ಚರ್ಚೆಯಾಗತೊಡಗಿತು. ಯಾವಾಗಲೂ ದೂರ್ವಾಸ ಮುನಿಯಂತೆ ಮುಖ ಗಂಟು ಹಾಕಿಕೊಂಡು, ನಾನಾಯಿತು, ನನ್ನ ಕೆಲಸವಾಯಿತು ಎಂಬಂತೆ ಯಾರಿಗೂ ಕೇರ್ ಮಾಡದೆ, ಯಾರ ತಂಟೆಗೂ ಹೋಗದೆ, ಕೇವಲ ಗುರಿ ಸಾಧಿಸುವ ಬಗ್ಗೆ ಭಾಷಣ ಮಾಡುತ್ತಿದ್ದ ನಾನು, ಒಬ್ಬ ಕ್ರಿಶ್ಚಿಯನ್ ಹುಡುಗಿ, ಅದೂ ಬೆಂಗ್ಳೂರ್ ರಿಟರ್ನ್ಡ್ ಜೊತೆ ಸ್ನೇಹದಿಂದಿದ್ದೇನೆಂದರೆ, ಅದೊಂದು ದೊಡ್ಡ ಸುದ್ಧಿಯೇ ಆಗಿ ಹೋಯಿತು. ಅವಳ ಮೇಲೆ ಎಲ್ಲಾರ ಕಣ್ಣು ಬೀಳಲಾರಂಭಿಸಿ, ಸಣ್ಣ ಪುಟ್ಟ ತೊಂದರೆಗಳು ಶುರುವಾದವು. ಒಂದು ದಿನ ಅವಳು ಸಂಜೆಯ ಟೈಪಿಂಗ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಪುಂಡನೊಬ್ಬ ತನ್ನ ಗೆಳೆಯರೊಂದಿಗೆ ಅವಳ ಹಿಂದೆ ಬಿದ್ದು ಚುಡಾಯಿಸಿದ್ದಾನೆ, ಕೆಣಕಿದ್ದಾನೆ, ಇವಳು ಕೋಪದಿಂದ ಅವನ ಕೆನ್ನೆಗೆ ಹೊಡೆದು ಮನೆಗೆ ಹೋಗಿದ್ದಾಳೆ. ಅಂದಿನಿಂದ ಅವನು ಪ್ರತಿದಿನ ತನ್ನ ಗ್ಯಾಂಗಿನೊಂದಿಗೆ ಇವಳಿಗೆ ಕಾಟ ಕೊಡಲು ಆರಂಭಿಸಿದ್ದಾನೆ. ಇದನ್ನು ನನ್ನ ಜೊತೆ ಒಮ್ಮೆಯೂ ಹೇಳದ ಅವಳು ಮನೆಯಲ್ಲಿ ತನ್ನ ಅಮ್ಮನೊಂದಿಗೆ ಹೇಳಿದ್ದಾಳೆ. ಪಕ್ಕದ ನುಗ್ಗೇಹಳ್ಳಿಯಲ್ಲಿ ಅದೆಂಥದೋ ಒಂದು ಅಂಗಡಿ ಇಟ್ಟುಕೊಂಡಿದ್ದ ಅವರಪ್ಪ ಬೆಳಿಗ್ಗೆ ಹೋದರೆ ಬರುತ್ತಿದ್ದುದು ರಾತ್ರಿಗೆ ಮಾತ್ರ. ಹೀಗಿರುವಾಗ ಅವಳಿಗೆ ಯಾರು ರಕ್ಷಣೆ ? ಅದೇ ಸಮಯದಲ್ಲೆ ಅಮ್ಮನನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಅವರು ನನ್ನನ್ನು ಮನೆಗೆ ಕಳುಹಿಸುವಂತೆ ಕೋರಿದ್ದಾರೆ, ಅಮ್ಮ ನನಗೆ ಯಾಕೋ " ಭಾಗ್ಯರತ್ನ " ಅವರು ನಿನ್ನನ್ನು ಬರಹೇಳಿದರು, ಅದೇನು ಹೋಗಿ ನೋಡು ಅಂದಾಗ ಕುತೂಹಲದಿಂದ ಅವರ ಮನೆಗೆ ಹೋಗಿದ್ದೆ. ಅಮ್ಮ ಮಗಳಿಬ್ಬರೂ ಮನೆಯಲ್ಲೇ ಇದ್ದರು. ನಾನು ಹೋದೊಡನೆ ಆಕೆ ಉಪಚರಿಸಿ ಕುಳ್ಳಿರಿಸಿ, ನಡೆದ ಕಥೆ ಎಲ್ಲಾ ಹೇಳಿ, ಯಾವುದೇ ಗಲಾಟೆಯಾಗದಂತೆ ಆ ಹುಡುಗ ಮತ್ತು ಅವನ ಗ್ಯಾಂಗಿನಿಂದ ಮಗಳಿಗಾಗುತ್ತಿದ್ದ ತೊಂದರೆಯನ್ನು ತಪ್ಪಿಸುವಂತೆ ನಿವೇದಿಸಿಕೊಂಡರು. ನನಗೆ ಯಾಕೆ ಹೇಳಲಿಲ್ಲ ಎಂದು ಮೀನಾಳ ಮುಖ ನೋಡಿದರೆ ಮೌನವಾಗಿ ತಲೆ ತಗ್ಗಿಸಿದಳು. ಏನೂ ಹೆದರಬೇಡಿ, ನಾನಿದ್ದೇನೆ ಎಂದು ಧೈರ್ಯ ಹೇಳಿ ಕಾಲೇಜಿಗೆ ಬಂದೆ. ನನ್ನ ಸ್ನೇಹಿತರೊಡನೆ ಚರ್ಚಿಸಿದೆ, ಬಿಸಿರಕ್ತದ ನಾವು ಒಮ್ಮೆಲೇ ತೆಗೆದುಕೊಂಡ ತೀರ್ಮಾನ, ಅಂದು ಸಂಜೆಯೇ ಆ ಕೀಚಕರ ಗುಂಪನ್ನು ರಿಪೇರಿ ಮಾಡಬೇಕೆಂದು !

ಅಂದು ಸಂಜೆಗೆ ಕೀಚಕರ ಗುಂಪಿನ ದಮನಕ್ಕೆ ಮುಹೂರ್ತವಿಟ್ಟ ನಾವು ಆರೇಳು ಜನ ಸ್ನೇಹಿತರು, ಮೀನಾ, ಟೈಪಿಂಗ್ ಮುಗಿಸಿ ಮನೆಗೆ ಬರುವ ದಾರಿಯಲ್ಲಿ ಕಾದು ನಿಂತೆವು. ಅವಳು ಬರುವ ಸ್ವಲ್ಪ ಮುಂಚೆ ನಾಲ್ಕೈದು ಜನ " ಬಚ್ಚಾ" ಗಳ ಗುಂಪೊಂದು ನಮ್ಮಿಂದ ಸ್ವಲ್ಪ ದೂರದಲ್ಲಿ ನಿಂತು ಯಾರನ್ನೋ ಕಾಯುತ್ತಿದ್ದರು. ಸರಿಯಾಗಿ ಅವಳು ಅಲ್ಲಿಗೆ ಬಂದಾಗ, ಅವರೆಲ್ಲಾ ಜೋರಾಗಿ ಕೂಗಾಡುತ್ತಾ, ತಮ್ಮ ಸೈಕಲ್ಲುಗಳಲ್ಲಿ ಅವಳ ಹಿಂದೆಯೇ ಸ್ವಲ್ಪ ದೂರ ಹೋಗಿ ಅವಳನ್ನು ಚುಡಾಯಿಸಿ, ಗೋಳು ಹೊಯ್ದುಕೊಂಡು, ಸೀದಾ ನಮ್ಮ ಕಾಲೇಜಿನ ಮುಂದಿದ್ದ " ಹಾಸನ ಸರ್ಕಲ್ " ಕಡೆಗೆ ಹೋದರು. ಇದನ್ನೆಲ್ಲಾ ನೋಡುತ್ತಿದ್ದ ನನ್ನ ರಕ್ತ ಕುದಿಯುತ್ತಿತ್ತು, ಆದರೆ ನನ್ನ ಸ್ನೇಹಿತರು ಅವಳು ಮನೆಗೆ ಹೋಗುವವರೆಗೂ ಏನೂ ಮಾಡುವುದು ಬೇಡ ಎಂದು ತಡೆದು ನಿಂತಿದ್ದರು. ಅವಳು ಮನೆ ತಲುಪಿದ್ದನ್ನು ಖಚಿತಪಡಿಸಿಕೊಂಡು, ಸೀದಾ " ಹಾಸನ ಸರ್ಕಲ್ " ಗೆ ಬಂದ ನಾವು, ಅಲ್ಲಿ ಕುಳಿತು ತಮ್ಮ ಸಾಹಸಗಾಥೆಯ ಕುರಿತು ಮಾತಾಡಿಕೊಳ್ಳುತ್ತಾ, ತಮ್ಮದೇ ಲೋಕದಲ್ಲಿದ್ದ ಆ ಐವರು ಕೀಚಕರಿಗೆ ಹಿಗ್ಗಾ ಮುಗ್ಗಾ ಥಳಿಸಿ ಬಿಟ್ಟೆವು. ಅನಿರೀಕ್ಷಿತವಾಗಿ ಬಿದ್ದ ಒದೆಗಳಿಂದ ದಿಕ್ಕುಗೆಟ್ಟ ಅವರು ದಿಕ್ಕಿಗೊಬ್ಬೊಬ್ಬರಂತೆ ಓಡತೊಡಗಿದರು. ಅವರ ಬೆನ್ನಟ್ಟಿದ ನಾವು ಮತ್ತೆ ಅವರು ಜೀವನದಲ್ಲಿ ಇನ್ನೆಂದೂ ಯಾವ ಹುಡುಗಿಯ ತಂಟೆಗೂ ಹೋಗದಷ್ಟು ತದುಕಿ ಬಿಟ್ಟೆವು!! ಈ ವಿಚಾರ ಕಾಲೇಜಿನಲ್ಲಿ ಒಬ್ಬರಿಂದೊಬ್ಬರಿಗೆ ಹಬ್ಬಿ ಆ ದಿನಗಳಲ್ಲಿ ಬಹು ಆಸಕ್ತಿಯ, ಚರ್ಚೆಯ ವಿಷಯವಾಗಿ " ಮೀನಾ - ಮಂಜು " ಎಂಬ ಪ್ರಣಯ ಕಥೆ ಎಲ್ಲರ ಬಾಯಲ್ಲಿ ನಲಿದಾಡತೊಡಗಿತು.

ಮಾರನೆಯ ದಿನ ಬೆಳಿಗ್ಗೆ ಅವಳಿಗೆ ಹಿಂದಿನ ದಿನದ ನಮ್ಮ " ಬೊಂಬಾಟ್ ಸಾಹಸ " ದ ಬಗ್ಗೆ ಬಣ್ಣಿಸಿ ಹೇಳುತ್ತಿದ್ದರೆ, ಬಿಟ್ಟ ಕಣ್ಣು ಬಿಟ್ಟಂತೆ ಕೇಳುತ್ತಿದ್ದ ಅವಳು, ಸುತ್ತಲಿನ ಪರಿವೆಯೇ ಇಲ್ಲದೆ ಥಟ್ಟಂತ ನನ್ನ ಕೆನ್ನೆಗೊಂದು ಮುತ್ತನ್ನಿತ್ತು ಬಾಚಿ ತಬ್ಬಿಕೊಂಡು ಬಿಟ್ಟಳು! ಆ ದಿನ ಸೆಪ್ಟೆಂಬರ್, ೭, ೧೯೮೭, ನನ್ನ ಹೆಸರಿನೊಂದಿಗೆ ಅಂದಿನಿಂದ ಇಂದಿನವರೆಗೂ ಥಳುಕು ಹಾಕಿಕೊಂಡು ಬಿಟ್ಟಿದೆ!! ಅಲ್ಲಿಂದ ಮುಂದಕ್ಕೆ " ಹನಿ ಹನಿ ಪ್ರೇಮ್ ಕಹಾನಿ " ಆಗಿ ಹೋಯಿತು, ಕಾಲೇಜಿನ ನನ್ನೆಲ್ಲಾ ಗೆಳೆಯ ಗೆಳತಿಯರಿಗೂ ಅವಳು ಆತ್ಮೀಯಳಾದಳು, ಎಲ್ಲರೊಡನೆ ಬೆರೆತು, ತುಂಬಾ ಸ್ನೇಹದಿಂದಿರುತ್ತಿದ್ದಳು. ತಿಪಟೂರೆಂಬ ತಿಪಟೂರಿಗೆ ನಮ್ಮ ಪ್ರಣಯ ಕಥೆ ಗೊತ್ತಾಗಿ, ಎಲ್ಲೆಂದರಲ್ಲಿ ನಮ್ಮ ಸೈಕಲ್ ಗಳ ಮೇಲೆ ಸುತ್ತುತ್ತಿದ್ದ ನಮ್ಮಿಬ್ಬರಿಗೆ ಒಂದು ಅನ್ವರ್ಥಕ ನಾಮ ತಗುಲಿಕೊಂಡಿತು, " ಎಂಟು ಕಣ್ಣಿನ ಪ್ರೇಮಿಗಳು " . ಆಗ ತಿಪಟೂರಿನ ಗಣೇಷೋತ್ಸವ ತುಂಬಾ ಪ್ರಸಿದ್ಧವಾಗಿತ್ತು, ಪ್ರತಿದಿನ ಸಂಜೆ ಒಂದು ವಿಶೇಷ ಕಾರ್ಯಕ್ರಮವಿರುತ್ತಿತ್ತು, ತಪ್ಪದೆ ನಾವಿಬ್ಬರೂ ಸಂಜೆ ಗಣೇಷನ ಮುಂದೆ ಕುಳಿತು ಬಿಡುತ್ತಿದ್ದೆವು. ಕಾರ್ಯಕ್ರಮವನ್ನು ಆಸ್ವಾದಿಸಿ, ನಡುವೆ ಸಾಕಷ್ಟು ಮಾತಾಡಿ, ಕೊನೆಗೆ ಪ್ರಸಾದ ಸ್ವೀಕರಿಸಿ, ಅವಳನ್ನು ಅವರ ಮನೆಯವರೆಗೂ ಬಿಟ್ಟು ಬರುತ್ತಿದ್ದೆ. ನಾನು ೧೯೮೪ರಿಂದಲೂ ಕನ್ನಡಕಧಾರಿ, ಅವಳೂ ಸಹ ಯಾವಾಗಲೂ ಕನ್ನಡಕ ಧರಿಸುತ್ತಿದ್ದಳು. ಅವಳದೊಂದು ಫೋಟೊ ನನ್ನ ಪರ್ಸಿನಲ್ಲಿ ಭದ್ರವಾಗಿ ಕುಳಿತಿತು. ನಾನು ಸೈಕಲ್ ಟೂರ್ ಹೊರಟರೆ, ಎನ್. ಸಿ. ಸಿ. ಕ್ಯಾಂಪಿಗೆ ಹೊರಟರೆ, ಸಿಹಿ ಮುತ್ತನ್ನಿತ್ತು ಹೋಗಿ ಬಾ ಶುಭವಾಗಲಿ ಎಂದು ಹಾರೈಸಿ ಕಳುಹಿಸುತ್ತಿದ್ದಳು. ನಾನು ಹಿಂತಿರುಗಿ ಬಂದೊಡನೆ ಗಂಟೆಗಟ್ಟಲೆ ನನ್ನೊಡನೆ ಕುಳಿತು ನನ್ನ ಅನುಭವಗಳನ್ನು ಕೇಳಿ, ಭಾವನಾ ಲಹರಿಯಲ್ಲಿ ತೇಲಿ ಹೋಗುತ್ತಿದ್ದಳು. ನೀನು ಬಹಳ ದೊಡ್ಡ ವ್ಯಕ್ತಿಯಾಗಬೇಕು, ಜೀವನದಲ್ಲಿ ಬಹು ಮಹತ್ವವಾದುದನ್ನು ಸಾಧಿಸಬೇಕು, ಎಲ್ಲರಿಗಿಂತ ಎಲ್ಲದರಲ್ಲೂ ಮುಂದಿರಬೇಕು, ನಾನು " ನನ್ನ ಮಂಜು " ಇಂಥವನು ಎಂದು ಎದೆ ತಟ್ಟಿ ಹೇಳಬೇಕು ಎಂದೆಲ್ಲಾ ನನಗೆ ಸ್ಫೂರ್ತಿ ತುಂಬುತ್ತಿದ್ದಳು. ನಾನು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ, ಅಲ್ಲಿ ಬಂದು ಮುಂದಿನ ಸಾಲಿನಲ್ಲಿ ಕುಳಿತು ನನ್ನನ್ನು ಉತ್ತೇಜಿಸುತ್ತಿದ್ದಳು, ಗೆಲ್ಲುವಂತೆ ಪ್ರೇರೇಪಿಸುತ್ತಿದ್ದಳು, ನನ್ನ ಮೀನಾ.

ನಾನು ದೆಹಲಿಗೆ ಸೈಕಲ್ ಪ್ರವಾಸ ಹೊರಟಾಗ, ಸುಮಾರು ಒಂದೂವರೆ ತಿಂಗಳು ದೂರವಿರಬೇಕೆಂದು, ನನ್ನನ್ನು ಅಪ್ಪಿ ಗೋಳಾಡಿದ್ದಳು, ನಿನಗೇನು ಬೇಕು ದೆಹಲಿಯಿಂದ ಎಂದು ಕೇಳಿದರೆ, ಆಗ್ರಾದ ತಾಜಮಹಲಿನ ಪುಟ್ಟದೊಂದು ಪ್ರತಿಕೃತಿ ತಂದು ಕೊಡುವಂತೆ ಕೇಳಿದ್ದಳು. ನಾನು ದೆಹಲಿಯಿಂದ ಹಿಂತಿರುಗಿ ಬಂದಾಗ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ, ಎಲ್ಲರಿಗೂ ಸಿಹಿ ತಿನ್ನಿಸಿ ತನ್ನ ಸಂಭ್ರಮವನ್ನು ವ್ಯಕ್ತ ಪಡಿಸಿದ್ದಳು. ನಾನು ಅವಳಿಗಾಗಿ ಆಗ್ರ‍ಾದಿಂದ ತಂದು ಕೊಟ್ಟ ಪುಟ್ಟ ತಾಜಮಹಲನ್ನು ಯಾವಾಗಲೂ ತನ್ನ ಹಾಸಿಗೆಯ ಪಕ್ಕದಲ್ಲೇ ಇಟ್ಟುಕೊಂಡಿರುತ್ತಿದ್ದಳು. ಅದು ಅವಳ ಜೀವನದ ಅತ್ಯಮೂಲ್ಯ ವಸ್ತುವಾಗಿ ಸ್ಥಾನ ಪಡೆದಿತ್ತು.

ಪದವಿ ತರಗತಿಗಳು ಕೊನೆಯ ಹಂತಕ್ಕೆ ಬಂದಾಗ ನಾನು ಪ್ರಥಮ ದರ್ಜೆಯಲ್ಲಿ ಕಾಲೇಜಿಗೇ ಮೊದಲಿಗನಾಗಿ ಬರಬೇಕೆಂದು ನನ್ನಿಂದ ಭಾಷೆ ತೆಗೆದುಕೊಂಡು, ಅದರಂತೆಯೇ ನಾನು ಓದಲು ಒತ್ತಾಯಿಸುತ್ತಿದ್ದಳು. ದ್ವಿತೀಯ ಪಿ.ಯು.ಸಿ ಫೇಲಾಗಿದ್ದ ಅವಳು ಮುಂದಿನ ಪ್ರಯತ್ನದಲ್ಲೆ ಉತ್ತೀರ್ಣಳಾಗಿ, ಬೆಂಗಳೂರಿನ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಬಿ.ಎಸ್ಸಿ ನರ್ಸಿಂಗಿಗೆ ಅರ್ಜಿ ಹಾಕಿ ಕಾಯುತ್ತಿದ್ದಳು. ನಾನು ಪದವಿ ಪರೀಕ್ಷೆ ಹಾಗೂ ಪ್ರೌಢ ದರ್ಜೆಯ ಕನ್ನಡ ಹಾಗು ಆಂಗ್ಲ ಬೆರಳಚ್ಚು ಪರೀಕ್ಷೆ, ಮೂರನ್ನೂ ಒಟ್ಟಿಗೆ ತೆಗೆದುಕೊಂಡು, ಮೂರರಲ್ಲೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ ಬಂದಾಗ ನನ್ನನ್ನು ಎತ್ತಿಕೊಂಡು ಕುಣಿದಾಡಿಬಿಟ್ಟಿದ್ದಳು. ನನ್ನ ಬಾಯ್ತುಂಬಾ ಸಕ್ಕರೆ ತುಂಬಿ ಮೌನದಲ್ಲೇ ಮಾತಾದಳು !

ಹೀಗೆ ನನಗೆ ಸ್ಫೂರ್ತಿಯ ಚಿಲುಮೆಯಾಗಿ, ನನ್ನ ಬೆನ್ನ ಹಿಂದಿನ ಅದೃಶ್ಯ ಶಕ್ತಿಯಾಗಿ ನಿಂತ ನನ್ನ ಮೀನಾ, ನನ್ನನ್ನು ಬಿಟ್ಟು ಮತ್ತೆ ಬೆಂಗಳೂರಿಗೆ ಹೋಗುವ ಕಾಲ ಬಂದೇ ಬಿಟ್ಟಿತು. ಅವಳು ಅರ್ಜಿ ಹಾಕಿದ್ದ ಬಿ.ಎಸ್ ಸಿ ನರ್ಸಿಂಗ್ ನಲ್ಲಿ ಅವಳಿಗೆ ಪ್ರವೇಶ ಸಿಕ್ಕಿ ಹೊರಟೇ ಬಿಟ್ಟಳು. ಪ್ರಶ್ನಾರ್ಥಕವಾಗಿ ನಿಂತ ನನ್ನನ್ನು ನೋಡಿ ನಗುತ್ತಾ, "ನೀನು ನಿನ್ನ ಗುರಿ ಸಾಧಿಸಿದೆಯಲ್ಲಾ, ನನಗೆ ಸಂತೋಷ, ಈಗ ನಾನು ನನ್ನ ಗುರಿ ಸಾಧಿಸಬೇಕಿದೆ, ನಾನು ಬಿಎಸ್ ಸಿ ನರ್ಸಿಂಗ್ ಮಾಡಬೇಕು, ಕೆಲಸಕ್ಕೆ ನಿಲ್ಲಬೇಕು, ನನ್ನ ತಮ್ಮ ತಂಗಿಯರ ಯೋಗಕ್ಷೇಮ ನೋಡಬೇಕು, ನೊಂದಿರುವ ಅಮ್ಮನಿಗೆ ಹೆಗಲು ಕೊಡಬೇಕು, ಅಲ್ಲಿಯವರೆಗೂ ನೀನು ನನಗಾಗಿ ಕಾಯಬೇಕು " ಅಂದಾಗ ಮೌನವಾಗಿ ಒಪ್ಪಿಗೆ ಸೂಚಿಸಿ ಅವಳಿಗೆ ಶುಭವಾಗಲೆಂದು ಹೃದಯ ತುಂಬಿ ಹಾರೈಸಿದೆ.

ನೆನಪಿನಾಳದಿಂದ... ೯.............ಅರಸಿ ಬಂದ ಪ್ರೇಯಸಿ.........

ಇವಳೇ ನನ್ನ ಜೀವ, ಇವಳಿಂದಲೇ ನನ್ನ ಜೀವನ ಎಂದು ಭ್ರಮಿಸಿ ಎಲ್ಲವನ್ನೂ ಬಿಟ್ಟು ಹಿಂದೆ ಹೋದಾಗ, ಮೀನಾಳ ಸ್ಪಷ್ಟ ಪ್ರೇಮ ನಿರಾಕರಣೆಯಿಂದ ನೊಂದ ಮನಸ್ಸಿನೊಂದಿಗೆ ನಾನು, ನನ್ನ ಪಾಲಿಗೆ ಪಂಚಾಮೃತವಾಗಿ ಬಂದ ನನ್ನ ಕೆಲಸದ ಬಗ್ಗೆ ಹೆಚ್ಚೆಚ್ಚು ಗಮನ ಕೊಡಲಾರಂಭಿಸಿ, ನನ್ನ ತತ್ವ ಆದರ್ಶಗಳಿಗೆ ಅಂಟಿಕೊಂಡು, ತಪ್ಪು ಮಾಡಿದ ಹಲವಾರು ನಿಷ್ಪಾಪಿ ಜೀವಗಳ ಪಾಲಿಗೆ "ಯಮಕಿಂಕರ" ನಾಗಿಬಿಟ್ಟಿದ್ದೆ. ವೃತ್ತಿಜೀವನದಲ್ಲಿ ಬಂದ ಹಲವಾರು ಸಮಸ್ಯೆಗಳಿಗೆ ಥಟ್ಟಂತ ಪರಿಹಾರ ಕಂಡು ಹಿಡಿದು, ಕೆಲವರು, ಹಲವಾರು ವರ್ಷಗಳಿಂದ ನಡೆಸುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿ, ಆ ನೆಪದಲ್ಲಿ, ಪೊಲೀಸು, ಕೋರ್ಟು, ಕಛೇರಿ ಎಲ್ಲಾ ನೋಡಿ,
" ಮಂಜುನಾಥ " ಎಂದರೆ ಅವನೊಬ್ಬ ಮಹಾನ್ ಕ್ರೂರಿ, ನಿರ್ದಯಿ, ಸಣ್ಣ ತಪ್ಪುಗಳಿಗೂ ದೊಡ್ಡ ಶಿಕ್ಷೆಯನ್ನೇ ನೀಡುವ ಕಟುಕ ಎನ್ನುವ ಮಟ್ಟಕ್ಕೆ ಬಂದು ನಿಂತು ಬಿಟ್ಟೆ. ಪ್ರೀತಿ, ಪ್ರೇಮ, ಮಮಕಾರ, ವಾತ್ಸಲ್ಯ, ಕರುಣೆ ಇವೆಲ್ಲಾ ನನ್ನ ವೃತ್ತಿ ಜೀವನದ ಪದಕೋಶದಿಂದ ಕಣ್ಮರೆಯಾಗಿ ಬಿಟ್ಟಿದ್ದವು. ಆಗ ನನ್ನ ಮುಂದಿದ್ದದ್ದು ಏನಿದ್ದರೂ, ಕೆಲಸ, ಅದಕ್ಕೆ ಸಂಬಂಧಿಸಿದ ಕಾನೂನುಗಳು, ರೀತಿ ರಿವಾಜುಗಳು ಅಷ್ಟೇ! ಅವುಗಳ ಮುಂದೆ ನಾನು ಬೇರೆ ಯಾವುದೇ ಸಂಬಂಧಕ್ಕೂ ಬೆಲೆ ಕೊಡದ
" ಕಲ್ಲು ಬಂಡೆ " ಯಾಗಿ ಬಿಟ್ಟೆ. ಆದರೆ, ಆ ನಿರ್ದಯಿ ಮನ:ಸ್ಥಿತಿ ಹಲವಾರು ರೀತಿಯಲ್ಲಿ ಉತ್ತಮ ಫಲಿತಾಂಶಗಳನ್ನೇ ನೀಡಿ, ವೃತ್ತಿ ಜೀವನದದಲ್ಲಿ ನನಗೇ ಗೊತ್ತಿಲ್ಲದಂತೆ, ನನ್ನನ್ನು ಮೇಲೆ ತಂದು ನನ್ನದೇ ಆದ " ಐಡೆಂಟಿಟಿ " ಯನ್ನು ಸೃಷ್ಟಿಸಿಬಿಟ್ಟಿತು !

ಹೀಗೇ ಒಮ್ಮೆ, ಆಯುಧಪೂಜೆಯ ಸಿಹಿಯ ಡಬ್ಬದೊಂದಿಗೆ ತಿಪಟೂರಿಗೆ ಬಂದವನು ಅಪ್ಪ - ಅಮ್ಮನ ನಿರ್ಭಾವುಕ ಮುಖಗಳನ್ನು ನೋಡಲಾಗದೆ ಸೀದಾ ಹೋಗಿದ್ದು ಅಕ್ಕನ ಮನೆಗೆ. ಅಲ್ಲಿ ಅವಳ ಮಕ್ಕಳ ಜೊತೆ ಸಿಹಿ ಸಿಹಿ ಮಾತುಗಳೊಂದಿಗೆ ದಿನ ಕಳೆಯುತ್ತಿದ್ದಾಗ ಅಕ್ಕ ಒಮ್ಮೆ ಕೇಳಿದಳು, " ಏನಾಯ್ತೋ, ನಿನ್ನ ಪ್ರೇಮಕಥೆ! ". ಅವಳಿಗೆ ನನ್ನ-ಮೀನಾಳ ಪ್ರೇಮ ಕಥೆಯ ಬಗ್ಗೆ ಅಷ್ಟಿಷ್ಟು ಗೊತ್ತಿತ್ತು, ಯಾರಾದರೊಬ್ಬರು ಆ ಬಗ್ಗೆ ಏನಾಯ್ತೆಂದು ಕೇಳಿದರೆ ಸಾಕೆಂದು ಕಾದಿದ್ದ ಮನ, ಥಟಕ್ಕನೆ ಅವಳಿಗೆ ನಡೆದ ಕಥೆಯನ್ನೆಲ್ಲಾ, ನನ್ನ ಆಣತಿಯನ್ನೂ ಮೀರಿ, ಎಲ್ಲವನ್ನೂ ಹೇಳಿ ಬಿಟ್ಟಿತ್ತು. ನೊಂದುಕೊಂಡ ಅವಳು, " ಯಾವುದಕ್ಕೂ ಹೆದರದೆ ಯಾವಾಗಲೂ ಎಲ್ಲದಕ್ಕೂ ಸೈ ಎಂದು ಮುಂದೆ ನುಗ್ಗುತ್ತಿದ್ದ ನಿನಗೆ ಈ ರೀತಿಯ ಸೋಲಾಗಬಾರದಿತ್ತು, ಆದರೂ ನನಗೆ ನಂಬಿಕೆಯಿದೆ, ನೀನು ಈ ಸೋಲಿನಿಂದ ಹೊರಬಂದು ಜೀವನದಲ್ಲಿ ಗೆಲ್ಲುವೆ " ಎಂದವಳ ಮಾತು ಮನಕ್ಕೆ ಸ್ವಲ್ಪ ಹರುಷ ನೀಡಿತ್ತು. ಶುಭ ಹಾರೈಸಿದ ಅಕ್ಕನಿಂದ ಬೀಳ್ಕೊಂಡು ಮತ್ತೆ ಬೆಂಗಳೂರಿನ ಯಾಂತ್ರಿಕ ಜೀವನಕ್ಕೆ ಮರಳಿದೆ.

ಕೆಲ ಸಮಯದ ನಂತರ ಮತ್ತೆ ಬಂದರು ಅಪ್ಪ, ನನ್ನನ್ನು ಹುಡುಕಿಕೊಂಡು. ಆಯುಧಪೂಜೆಯ ನಂತರ ಅಕ್ಕ, ಅಪ್ಪ, ಅಮ್ಮನ ನಡುವೆ ಅದೇನೇನು ಮಾತುಕಥೆ ನಡೆದಿತ್ತೋ, ಅದೇನು ಮಸಲತ್ತು ಮಾಡಿದ್ದರೋ ಆಗ ನನಗೆ ಅರಿವಿರಲಿಲ್ಲ. ಒಟ್ಟಾರೆ ಹುಡುಕಿಕೊಂಡು ಬಂದ ಅಪ್ಪ, ನನಗೆ ಸಾಕಷ್ಟು ಬೆಣ್ಣೆ ಹೊಡೆದು, ಒಳ್ಳೆಯ ಸರ್ಕಾರಿ ಕೆಲಸ ಕೊಡಿಸುವುದಾಗಿ ನನ್ನ ಮನವೊಲಿಸಿ, ಇದ್ದ ಕೆಲಸ ಬಿಡಿಸಿ ಮತ್ತೆ ನನ್ನನ್ನು ತಿಪಟೂರಿಗೆ ಕರೆದುಕೊಂಡು ಹೊರಟರು. ಆದರೆ ಅಲ್ಲಿ ಹೋದ ನಂತರ ತಿಳಿಯಿತು ನನಗೆ, ಅವರೇಕೆ ಅಷ್ಟೊಂದು ಆಸಕ್ತಿ ತೆಗೆದುಕೊಂಡು ನನ್ನನ್ನು ಹುಡುಕಿಕೊಂಡು ಬಂದಿದ್ದು ಅಂತ! ಅವರ ಪ್ಲಾನ್ ಈ ರೀತಿಯಿತ್ತು, ನಮ್ಮ ಗೌಡರ ಮನೆಗಳಲ್ಲಿ ಯಾರಾದರೂ ಒಬ್ಬ ಪದವೀಧರ ಹುಡುಗ ಸಿಗುತ್ತಾನೆಂದರೆ, ಅವನುದ್ಧಕ್ಕೂ ಸುರಿದು, ಕನ್ಯಾದಾನ ಮಾಡಿ ಕೊಡಲು ಕನ್ಯಾ ಪಿತೃಗಳು ಸಿದ್ಧರಿರುತ್ತಿದ್ದರು. ಅಪ್ಪನ ತಂತ್ರದ ಪ್ರಕಾರ, ಸರಿಯಾಗಿ " ವರದಕ್ಷಿಣೆ " ತೆಗೆದುಕೊಂಡು, ಅದೇ ದುಡ್ಡನ್ನು ಯಾರಾದರೂ ಒಬ್ಬ ರಾಜಕಾರಣಿಯನ್ನು ಹಿಡಿದು, ಖರ್ಚು ಮಾಡಿ, ನನಗೊಂದು ಸರ್ಕಾರಿ ಕೆಲಸ ಕೊಡಿಸಿ, ಜೀವನದಲ್ಲಿ ನೆಲೆಯಾಗಿ ನಿಲ್ಲಿಸುವುದು! ಈ ತಂತ್ರವನ್ನು ಕಾರ್ಯರೂಪಕ್ಕಿಳಿಸಲು ಅಪ್ಪ, ನನ್ನ ಅಕ್ಕನನ್ನೇ ನನ್ನ ಮುಂದೆ ದಾಳವಾಗಿ ಆಟಕ್ಕಿಳಿಸಿಬಿಟ್ಟಿದ್ದರು. ನನಗೆ ಇದು ಅರ್ಥವಾಗುವ ಹೊತ್ತಿಗೆ ನಾನು ಅಪ್ಪ, ಅಮ್ಮ, ಅಕ್ಕನ ಮಾತಿಗೆ ಮರುಳಾಗಿ ನಾಲ್ಕಾರು ಕಡೆ ಹೆಣ್ಣು ನೋಡುವ ಶಾಸ್ತ್ರಕ್ಕೆ ಹೋಗಿ, ನೋಡಲು ಚೆನ್ನಾಗಿಯೂ ಇದ್ದು, ಸಾಕಷ್ಟು ವಿದ್ಯಾವಂತರಾಗಿಯೂ ಇದ್ದ ಹೆಣ್ಣು ಮಕ್ಕಳನ್ನು ನೋಡಿ ಬಂದು, ನಾನು ಓಕೆ ಅಂದಿದ್ದರು ಸಹಾ ಆ ಸಂಬಂಧಗಳು ಮುರಿದು ಹೋಗಿದ್ದವು. ನನಗಾಗ ಆಶ್ಚರ್ಯವಾಗಿತ್ತು, ಅದು ಹೇಗೆ ಅವರು ನನ್ನನ್ನು ನಿರಾಕರಿಸಿದರು ಅಂತ! ಆದರೆ ನಿಜವಾದ ವಿಷಯವೇನೆಂದರೆ, ನನಗೆ ಹೆಣ್ಣು ತೋರಿಸಿದ ಶಾಸ್ತ್ರ ಮಾಡಿದ ಅಪ್ಪ-ಅಮ್ಮ ತೆರೆಯ ಹಿಂದೆ ದೊಡ್ಡ ವ್ಯಾಪಾರವನ್ನೇ ಶುರು ಮಾಡಿ ಬಿಟ್ಟಿದ್ದರು! ತುರುವೇಕೆರೆಯಲ್ಲಿ ನಾನು ನೋಡಿ ಒಪ್ಪಿ ಬಂದಿದ್ದ ರಾಜೇಶ್ವರಿ ಎಂಬ ಹುಡುಗಿಯ ಅಣ್ಣ, ತಿಪಟೂರಿನ ಬಸ್ ನಿಲ್ದಾಣದಲ್ಲಿ ಸಿಕ್ಕಿ, ಅಪ್ಪ-ಅಮ್ಮ ಮಾಡಿದ ಚೌಕಾಸಿ ವ್ಯಾಪಾರದ ಬಗ್ಗೆ ಹೇಳುವವರೆಗೂ ನನಗೆ ಈ ಬಗ್ಗೆ ಗೊತ್ತೇ ಆಗಿರಲಿಲ್ಲ. ನನಗೇ ಗೊತ್ತಿಲ್ಲದಂತೆ ಮದುವೆಯ ಮಾರುಕಟ್ಟೆಯಲ್ಲಿ ನನ್ನನ್ನು ಮಾರಾಟಕ್ಕಿಟ್ಟ ಅಪ್ಪ-ಅಮ್ಮನ ಬಗ್ಗೆ ನನಗೆ ಎಲ್ಲಿಲ್ಲದ ಸಿಟ್ಟು, ತಿರಸ್ಕಾರಗಳು ಮೂಡಿ, ಅವರನ್ನು ಹಿಗ್ಗಾ ಮುಗ್ಗಾ " ಕ್ಲಾಸ್ " ತೆಗೆದುಕೊಂಡು, ಇನ್ನೆಂದೂ ಅವರು ನನ್ನ ಮದುವೆಯ ಬಗ್ಗೆ ತಲೆ ಹಾಕಬಾರದೆಂದು ತಾಕೀತು ಮಾಡಿಬಿಟ್ಟೆ.

ಇದೇ ಸಿಟ್ಟಿನಲ್ಲಿ ಅಕ್ಕನ ಮನೆಗೆ ಹೋಗಿ, ಅವಳಿಗೂ ಸಾಕಷ್ಟು ಮಂಗಳಾರತಿ ಮಾಡಿದೆ. ಆಗ ಅವಳು ಹೇಳಿದ ಒಂದು ವಿಷಯ ನನ್ನ ಎದೆ ತಟ್ಟಿತು. ಅವಳೇನೂ ನನ್ನನ್ನು ವರದಕ್ಷಿಣೆಯೊಡನೆ ಮದುವೆಯಾಗಲಿ ಎಂದು ಬಯಸಿರಲಿಲ್ಲವಂತೆ, ಅಪ್ಪ-ಅಮ್ಮನೇ ಅವಳನ್ನು ಹೇಗಾದರೂ ನನ್ನನ್ನು ಒಪ್ಪಿಸುವಂತೆ ಕಾಡಿ ದುಂಬಾಲು ಬಿದ್ದಿದ್ದರಂತೆ. ಇದರಿಂದ ಅವರ ಸಾಲಗಳೂ ಸಾಕಷ್ಟು ತೀರುತ್ತವೆಂಬ ನಿರೀಕ್ಷೆಯಲ್ಲಿದ್ದರಂತೆ. ಇದನ್ನು ಕೇಳಿ ನನ್ನ ಕಿವಿಗೆ ಕಾದ ಸೀಸ ಹೊಯ್ದಂತಾಯಿತು. ಸಿಟ್ಟಿನ ಭರದಲ್ಲಿ, ವಿದ್ಯಾವಂತೆಯಾದ ನೀನೂ ಸಹ ಹೀಗೆ ಮಾಡಬಹುದೇ ಎಂದು ಕೂಗಾಡಿದಾಗ ಅವಳದು ಒಂದೇ ಶಾಂತ ಉತ್ತರ. " ಇಲ್ಲಿ ನಿನಗಾಗಿ ಇನ್ನೊಂದು ಜೀವ ಕಾದು ಕುಳಿತಿದೆ, ನಿನ್ನ ಪ್ರೇಮ ವೈಫಲ್ಯ, ಅಪ್ಪ-ಅಮ್ಮನ ವರದಕ್ಷಿಣೆಯ ಆಸೆ, ನೋಡಿ ನಾನು ಅಸಹಾಯಕಳಾಗಿ ನಿನಗೆ ಆ ಬಗ್ಗೆ ಏನೂ ಹೇಳಲಾಗಲಿಲ್ಲ, ಈಗ ಹೇಳುತ್ತೇನೆ, ಕೇಳು, ಸುಮಾರು ಮೂರು ವರ್ಷಗಳಿಂದ ಈ ಹುಡುಗಿ, ನಿನಗಾಗಿ ಕನಸು ಕಾಣುತ್ತಾ, ಮದುವೆಯಾದರೆ ಈ ಜನ್ಮದಲ್ಲಿ ಅದು ನಿನ್ನನ್ನು ಮಾತ್ರ ಅಂತ ತೀರ್ಮಾನ ತೊಗೊಂಡು, ಬಂದ ಸಂಬಂಧಗಳನ್ನೆಲ್ಲಾ ನಿರಾಕರಿಸಿ, ನಿನ್ನ ದಾರಿ ಕಾಯುತ್ತಿದ್ದಾಳೆ, ಅವಳ ಈ ಒಮ್ಮುಖ ಪ್ರೇಮ, ಅವರ ಮನೆಯ ನೆಮ್ಮದಿಯನ್ನೇ ಹಾಳು ಮಾಡಿದೆ " ಎಂದ ಅಕ್ಕನ ಮಾತುಗಳು ನನ್ನ ಸಿಟ್ಟನ್ನೆಲ್ಲಾ ಝರ್ರೆಂದು ಇಳಿಸಿ, ಒಂದು ಕ್ಷಣ ನನ್ನನ್ನು ಅಯೋಮಯನನ್ನಾಗಿ ಮಾಡಿ ಬಿಟ್ಟಿತ್ತು. ಸಾವರಿಸಿಕೊಂಡ ನಾನು ಅಕ್ಕನಿಗೆ ಹೇಳಿದೆ, " ಸರಿ, ಆ ಹುಡುಗಿಯನ್ನು ಕರೆಸು, ನಾನು ಅವಳ ಜೊತೆ ಮಾತಾಡಬೇಕು ". ಅಕ್ಕನ ಮಗಳು ಉಷಾ, ಓಡಿ ಹೋಗಿ, ಆ ಸುಂದರಿಯನ್ನು ಕರೆ ತಂದೇ ಬಿಟ್ಟಳು, ನೋಡಿದರೆ ಅವಳು ಬೇರಾರೂ ಅಲ್ಲ, ನಾನು ಆಗಾಗ್ಗೆ ಕುಳಿತು ಬಿಯರ್ ಕುಡಿಯುತ್ತಾ, ದಮ್ ಹೊಡೆಯಲು ಹೋಗುತ್ತಿದ್ದ ಅಂಗಡಿ ನಂಜೆಗೌಡನ ತಂಗಿ ಕಲಾವತಿ!!

ನಾನು ಸಾಕಷ್ಟು ಸಲ ಅಕ್ಕನ ಮನೆಗೆ ಹೋದಾಗ ಅವಳು, ತಾನು ಪ್ರತಿ ದಿನಾ ಶುಶ್ರೂಷೆ ಮಾಡುತ್ತಿರುವ, ಕ್ಯಾನ್ಸರ್ ಪೀಡಿತನಾಗಿ ಸಾವಿನ ದಡದಲ್ಲಿ ನಿಂತಿರುವ ಒಬ್ಬ ವಯಸ್ಕ ರೋಗಿಯ ಬಗ್ಗೆ ಹೇಳುತ್ತಿದ್ದಳು. ನಾನೂ ಸಹ ಒಂದೆರಡು ಬಾರಿ ಅವರ ಮನೆಗೆ ಭೇಟಿ ಕೊಟ್ಟು ಅವರ ಆಗಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡು, ಕಾಲೇಜಿನಲ್ಲಿ, ಮನ:ಶಾಸ್ತ್ರದ ವಿದ್ಯಾರ್ಥಿಯಾಗಿ, ಸಾವಿನ ಬಗ್ಗೆ, ಸಾವಿನ ಹೆದರಿಕೆಯ ಬಗ್ಗೆ ಮಾನವರಲ್ಲಿ ಹುಟ್ಟುವ ಭಾವನೆಗಳ ಬಗ್ಗೆ ನಾನು ಸಿದ್ಧಪಡಿಸುತ್ತಿದ್ದ ಪ್ರಬಂಧಕ್ಕಾಗಿ ಅವರ ಬಗ್ಗೆ ಕೆಲವಾರು ಲೇಖನಗಳನ್ನೂ ಬರೆದಿದ್ದೆ. ಇವಳು ಅದೇ ತಿಮ್ಮೇಗೌಡರ ಮಗಳು! ಅದಾಗಲೇ ಕ್ಯಾನ್ಸರ್ ಆ ತಿಮ್ಮೇಗೌಡರನ್ನು ಬಲಿ ತೆಗೆದುಕೊಂಡಾಗಿತ್ತು, ಆರು ಗಂಡು ಹಾಗೂ ನಾಲ್ಕು ಹೆಣ್ಮಕ್ಕಳ ದೊಡ್ಡ ಸಂಸಾರದಲ್ಲಿ ಇವಳೇ ಕೊನೆಯ ಮಗಳಾಗಿದ್ದು ಇಬ್ಬರು ಅಣ್ಣಂದಿರು ಮದುವೆಯಾಗಲು ಇವಳು ದೊಡ್ಡ ತೊಡಕಾಗಿದ್ದಳಂತೆ. ನನ್ನ ಕಾಲೇಜಿನ ದಿನಗಳ ಸಾಹಸಗಳನ್ನು ಅಕ್ಕ ಒಬ್ಬ ದೊಡ್ಡ ಹೀರೋನ ಕಥೆಯಂತೆ ವರ್ಣಿಸುವುದನ್ನು ಕೇಳಿ, ನಾನು ಅಕ್ಕನ ಮನೆಗೆ ಹೋಗುವಾಗೆಲ್ಲಾ, ಭಾವನನ್ನು ಹೆದರಿಸಲು ದೊಡ್ಡ ಹೀರೋನಂತೆ ಕೊಡುತ್ತಿದ್ದ ಫೋಸುಗಳನ್ನೆಲ್ಲಾ ನೋಡಿ, ಈ ಹಳ್ಳಿಯ ಹುಡುಗಿ, " ಕ್ಲೀನ್ ಬೌಲ್ಡಾಗಿ " ಮದುವೆಯಾದರೆ, ಜೀವನದಲ್ಲಿ ನನ್ನನ್ನೇ ಎಂದು ತೀರ್ಮಾನಿಸಿ, ಬಂದ ಸಂಬಂಧಗಳನ್ನೆಲ್ಲಾ ನಿರಾಕರಿಸಿ, ನನ್ನ ಅಕ್ಕನೊಡನೆ ತನ್ನ ಮನದ ಮಾತುಗಳನ್ನೆಲ್ಲಾ ಹೇಳಿಕೊಂಡು, ನನಗಾಗಿ, " ಅಹಲ್ಯೆ " ಯಂತೆ ಕಾಯುತ್ತಿದ್ದಳಂತೆ! ಮೀನಾಳ ಹಿಂದೆ ಬೆಂಗಳೂರಿಗೆ ಹೋಗಿ, ನನ್ನ ಮುಂದಿನ ವಿದ್ಯಾಭ್ಯಾಸಕ್ಕೂ ಕಲ್ಲು ಹಾಕಿಕೊಂಡು, ಅಲ್ಲಿಯೂ ಮುಟ್ಟದೆ, ಇಲ್ಲಿಯೂ ಮುಟ್ಟದೆ ತ್ರಿಶಂಕು ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದ ನನಗೆ ಈ ಹಳ್ಳಿಯ ಹುಡುಗಿಯ ಒಮ್ಮುಖ ಪ್ರೇಮ ದೊಡ್ಡ ಒಗಟಾಗಿ ಕಂಡಿತ್ತು.

ಅಕ್ಕನ ಮಗಳು ಉಷಾ, ಕರೆದೊಡನೆ, ತನ್ನ ಮಾಮೂಲಿ ಹಳ್ಳಿಯುಡುಪಿನಲ್ಲಿ ನನ್ನ ಮುಂದೆ ಬಂದು ನಿಂತವಳನ್ನು ಹಾಗೇ ಅಡಿಯಿಂದ ಮುಡಿಯವರೆಗೂ ನೋಡಿದೆ, ಅದೇ ಮುಗ್ಧ ಮುಖ, ಅಪ್ಪ ಸಾವಿನ ಹಾಸಿಗೆಯಲ್ಲಿ ಮಲಗಿದ್ದರೂ, ಅವರನ್ನು ಖುಷಿಯಾಗಿಡಲು, ದಿನಾ ಏನಾದರೊಂದು ಹೊಸ ಮಾಂಸಾಹಾರಿ ಅಡುಗೆ ಮಾಡಿ, ಅವರಿಗೆ ತಿನ್ನಲಾಗದಿದ್ದರೂ, ಒಂದಿಷ್ಟು ತುತ್ತು ಮಾಡಿ ತಿನ್ನಿಸಿ, ಅವರು ಇರುವವರೆಗೂ ಅವರನ್ನು ಕಣ್ಣೆವೆಯಲ್ಲಿಟ್ಟು ಕಾಪಾಡಲು ಯತ್ನಿಸಿದ್ದ ತ್ಯಾಗಮೂರ್ತಿ, ಆ ಹಳ್ಳಿ ಹುಡುಗಿ, ನನ್ನ ಮುಂದೆ ತುಂಬಾ ಎತ್ತರಕ್ಕೆ ಬೆಳೆದು ನಿಂತು ನನ್ನನ್ನು ಕುಬ್ಜನನ್ನಾಗಿಸಿದ್ದಳು. ಆದರೂ ನನ್ನ ಬಿಂಕ ಬಿಡದೆ, ಅಕ್ಕನ ಮುಂದೆ, ಅವಳನ್ನು ಕೇಳಿದೆ,
" ನೀನೇಕೆ ಬಂದ ಸಂಬಂಧಗಳನ್ನೆಲ್ಲಾ ನಿರಾಕರಿಸಿ ಮದುವೆಯಾಗದೆ ನಿನ್ನ ಅಣ್ಣಂದಿರಿಗೆ ನೋವು ಕೊಡುತ್ತಿದ್ದೀಯಾ? ಇದು ತಪ್ಪಲ್ಲವೇ ?" ಅದಕ್ಕೆ ಅವಳು ಏನು ಹೇಳಿದಳು ಗೊತ್ತೇ ? " ಮಂಜಪ್ಪೋರೇ, ಅದೇಕೋ ಗೊತ್ತಿಲ್ಲ, ನಿಮ್ಮನ್ನ ಮೊದಲು ನಿಮ್ಮಕ್ಕನ ಮನೆಯಲ್ಲಿ ನೋಡಿದ ದಿನವೇ ನಾನು ನಿಮ್ಮನ್ನ ಪ್ರೀತಿಸಲು ಶುರು ಮಾಡ್ಬಿಟ್ಟೆ, ನನ್ನಲ್ಲಿ ನಾನೇ ತೀರ್ಮಾನ ಮಾಡ್ಬಿಟ್ಟೆ, ಮದ್ವೆ ಅಂತ ಈ ಜನ್ಮದಲ್ಲಿ ಆದ್ರೆ ಅದು ನಿಮ್ಮ ಜೊತೆ ಮಾತ್ರ, ಇಲ್ದಿದ್ರೆ ನನ್ಗೆ ಮದ್ವೇನೇ ಬೇಡ ಅಂತ, ಅದೇನು ಮಾಯೆ ಅಂತ ನನ್ಗೆ ಗೊತ್ತಿಲ್ಲ, ನಾನು ನಿಮ್ಮಷ್ಟು ಓದಿಲ್ಲ, ಆದ್ರೆ ಈ ಮಾತಂತೂ ನಿಜ, ನೀವು ನನ್ನ ಮದ್ವೆ ಮಾಡ್ಕೊಳ್ಳಿಲ್ಲಾಂದ್ರೆ ನಾನು ಹೀಗೇ ಇದ್ಬಿಡ್ತೀನೇ ಹೊರ್ತು ಬೇರೆ ಯಾರನ್ನೂ ಮದ್ವೆ ಮಾಡ್ಕೊಳ್ಳೋಲ್ಲಾ ". ಅವಳ ಈ ಮಾತು ಕೇಳಿ ಏನು ಹೇಳಬೇಕಂತ ಗೊತ್ತಾಗದೆ ಒದ್ದಾಡುತ್ತಿದ್ದೆ, ಆಗ ನಡುವೆ ಬಂದ ಅಕ್ಕ ಹೇಳಿದಳು,
" ಇವಳು ನೀನು ಕಾಲೇಜಿನಲ್ಲಿ ಯಾವುದಾದರೂ ಒಂದು ಬಹುಮಾನ ಗೆದ್ದಾಗಲೆಲ್ಲಾ ಬಂದು ನನಗೆ ಹೇಳ್ತಾ ಇದ್ದಳು, ಇವತ್ತು ನಿಮ್ಮ ತಮ್ಮ ಅದು ಗೆದ್ರು, ಇದು ಗೆದ್ರು ಅಂತ, ನಿನ್ನ ಬಗ್ಗೆ ಅವಳು ಸುತ್ತ ಮುತ್ತಿನ ಹುಡುಗ-ಹುಡುಗಿಯರಿಂದ ಎಲ್ಲಾ ವಿಷಯ ಸಂಗ್ರಹ ಮಾಡಿಟ್ಟಿದ್ದಾಳೆ, ನಿನ್ನ ಹಾಗು ಮೀನಾಳ ಪ್ರೀತಿಯ ಬಗ್ಗೆಯೂ ಅವಳಿಗೆ ಗೊತ್ತು, ಆದರೆ ಅವಳು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ, ಅವಳ ಜೀವನದ ಅಂತಿಮ ಗುರಿ, ನಿನ್ನನ್ನು ಮದುವೆಯಾಗುವುದು ಅಷ್ಟೇ " ಈಗ ನಾನು ಅಕ್ಷರಶ: ಮೂಕನಾಗಿ ಬಿಟ್ಟಿದ್ದೆ!

ನನ್ನದೆಂದು ಭ್ರಮಿಸಿ, ಮರೀಚಿಕೆಯ ಹಿಂದೆ ಹೋಗಿ, ಅವಮಾನಿತನಾಗಿ, ಕೈಗೆಟುಕದ ಕಾಮನಬಿಲ್ಲಿಗೆ ಕೈ ಚಾಚಿ, ಅದು ಸಿಕ್ಕದಿದ್ದಾಗ, ಜೀವನವೇ ವ್ಯರ್ಥವೆಂದುಕೊಂಡು, ಮನದ ಭಾವನೆಗಳನ್ನೆಲ್ಲಾ ಕೊಂದುಕೊಂಡು, ಕಲ್ಲಾಗಿ ಬಿಟ್ಟಿದ್ದ ನನಗೆ ಇದೊಂದು ಹೊಸ ಅನುಭವವಾಗಿತ್ತು. ಅಪ್ಪ-ಅಮ್ಮನ ತೀವ್ರ ವಿರೋಧದ ನಡುವೆಯೂ ಅವಳನ್ನು ನನ್ನ ಬಾಳ ಸಂಗಾತಿಯಾಗಿ ಸ್ವೀಕರಿಸುವ ನಿರ್ಧಾರ ತೆಗೆದುಕೊಂಡೆ. ಅವರಣ್ಣ ನಂಜೇಗೌಡನೊಡನೆ ಮಾತಾಡಿ, ಯಾವುದೇ ವರದಕ್ಷಿಣೆ, ವರೋಪಚಾರವಿಲ್ಲದೆ, " ಸಿಂಪಲ್ಲಾಗಿ " ಅವರ ಮನೆಯ ಮುಂದೆ ಚಪ್ಪರ ಹಾಕಿಸಿ ನನಗೆ ಧಾರೆಯೆರೆದು ಕೊಡಬೇಕೆಂದ ನನ್ನ ಮಾತಿಗೆ ಅಕ್ಕ, ಭಾವ ಬೆಂಗಾವಲಾಗಿ ನಿಂತಾಗ, ನನಗೆ ನನ್ನ ಜನ್ಮ ಸಾರ್ಥಕ ಎನ್ನಿಸಿ, ಪುರೋಹಿತರ ಮುಂದೆ, ಅಗ್ನಿ ಸಾಕ್ಷಿಯಾಗಿ, " ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ " ಎಂದು ಪ್ರಮಾಣಿಸಿ, ಸಪ್ತಪದಿ ತುಳಿದು, ಕಲಾವತಿಯನ್ನು ನನ್ನ ಬಾಳ ಸಂಗಾತಿಯಾಗಿ ಸ್ವೀಕರಿಸಿದೆ. ೧೮ ವರ್ಷಗಳ ನಮ್ಮ ಸಿಹಿ ಸಂಸಾರ, ಇಂದು ಒಬ್ಬ ಮಗಳು, ಒಬ್ಬ ಮಗನ ಸಿಹಿಫಲದ ಜೊತೆಗೆ ಯಶಸ್ವಿಯಾಗಿ ನಡೆಯುತ್ತಿದೆ. ತನ್ನ ಗುರಿ ಸಾಧನೆಗಾಗಿ, ತನ್ನ ಧರ್ಮಕ್ಕಾಗಿ, ಪ್ರೀತಿಯನ್ನು ಕೊಂದು ಜಾಗ ಖಾಲಿ ಮಾಡಿ ಹೋದ ನನ್ನ " ಮೀನಾ " ಳ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ ಕಲಾ, ನನ್ನ ಮುದ್ದಿನ ಮಡದಿಯಾಗಿ, ನನ್ನ ಮಕ್ಕಳ ಪ್ರೀತಿಯ ತಾಯಿಯಾಗಿ, ನನ್ನ ಸಕಲ ಸಂಬಂಧಗಳಲ್ಲಿ ನೆಚ್ಚಿನ ಕಲಮ್ಮನಾಗಿ, ಕಲರ್ ಕಲರ್ ಕನಸುಗಳನ್ನು ನನ್ನಲ್ಲಿ ಬೆಳಗಿಸಿ, ನನ್ನ ಇಂದಿನ ಯಶಸ್ವಿ ಜೀವನದ ಹಿಂದೆ ಆರದ ಬೆಳಕಾಗಿ ನಿಂತು ಬಿಟ್ಟಳಲ್ಲಾ !

" ಬಾಳೋದು ಹೆಣ್ಣಿಂದ, ಮನುಜ ಬೀಳೋದು ಹೆಣ್ಣಿಂದ,
ಆಳೋದು ಹೆಣ್ಣಿಂದ, ಅವನು ಅಳುವುದು ಹೆಣ್ಣಿಂದ "
ಎಂಬ ಚಲನಚಿತ್ರ ಗೀತೆ ನಮ್ಮ ಬಾಳಿನಲ್ಲಿ ನಿಜವಾಯಿತು.

ಇದಲ್ಲವೇ ಆ ದೇವರ ಆಟ ! ಇದಲ್ಲವೇ ನಿಜವಾದ ಪ್ರೀತಿಯ ಮಾಟ!!

ಧರೆಗಿಳಿದು ಬಾ ದೇವ,

ಧರೆಗಿಳಿದು ಬಾ ದೇವ, ನೋಡೀ ಅಪ್ರಬುದ್ಧರ ವಿಕಟಾಟ್ಟಹಾಸ,
ಇವರಿಗೆ ಕಂಡಿದ್ದು ಲಂಗೋಟಿಯ ಹಿಂದಿನ ಬೆತ್ತಲೆ ಮೈ,
ಕಾಣಲೇ ಇಲ್ಲ ಇವರ ಕುರುಡು ಕಣ್ಗಳಿಗೆ, ಅವನೂರಿದ ಹೆಜ್ಜೆ,
ಅವ ನಡೆದ ದಾರಿ, ಅವ ಮಾಡಿದ ತ್ಯಾಗ, ಹರಿದ ಅವನ ನೆತ್ತರು.
ಧರೆಗಿಳಿದು ಬಾ ದೇವ, ನೋಡಿವರ ಅಟ್ಟಹಾಸ!

’ಗ್ಯಾಂಡಿ’ಯ ಕಟ್ಟಿಕೊಂಡಳು, ಗಾಂಧಿಯೆಂದು ಬದಲಿಸಿದಳು,
ಅಪ್ಪನಾರೆಂದು ಅರಿಯದೆ ಮೆರೆದ ಮಗನ ಕೊಲಿಸಿದಳು,
ಉತ್ತರ ದಕ್ಷಿಣ, ಪೂರ್ವ ಪಶ್ಚಿಮವೆಲ್ಲೇ ಕೇಳಲಿ, ಜನ
ಮೊರೆಯುವಂತೆ ಮೋಡಿಯ ಮಾಡಿದಳು, ತಾ ಗಾಂಧಿಯ
ಮಗಳೆಂದು, ಸತ್ಯವ ಕೊಂದಳು, ತಾ ಮೆರೆದಳು.
ಧರೆಗಿಳಿದು ಬಾ ದೇವ, ನೋಡೀ ಅಪ್ರಬುದ್ಧರ ವಿಕಟಾಟ್ಟಹಾಸ!

ಮತದಾನವ ಮರೆತರು, ದೇಶ ಕಟ್ಟುವ ಕಾಯಕ ಮರೆತರು,
ಮಾನವತ್ವವ ಮರೆತರು, ಹಸಿದವರಿಗೆ ಅನ್ನ ನೀಡದೆ ಮೆರೆದರು,
ಕಂಗಾಲಾಗಿ ನಿಂತ ಹೆಂಗಳೆಯರ ಮರೆತರು, ಹಿಂದೆ ಬಂದವರ,
ಮುಂದೆ ನಿಂತವರನೆಲ್ಲಾ ಮರೆತರು, ಸ್ವಾರ್ಥಿಗಳಾದರು,
ಸ್ವಾರ್ಥವನೇ ಮೆರೆದರು, ದೇಶವ ಕೊಂದರು, ತಮ್ಮತನವ ಮರೆತರು,
ಅಂಧಾನುಕರಣೆ ಮಾಡಿದರು, ಥರಾವರಿ ರೋಗಗಳ ತಂದರು,
ಧರೆಗಿಳಿದು ಬಾ ದೇವ, ನೋಡೀ ಅಪ್ರಬುದ್ಧರ ವಿಕಟಾಟ್ಟಹಾಸ!

ಕಾಣರಿವರು, ಕೇಳರಿವರು, ವಿದ್ಯಾವಂತರಿವರು, ಹೈಟೆಕ್ ಮಂದಿಯಿವರು,
ಕಾಣದಿವರಲ್ಲಿ, ನಮ್ಮ ಸಂಸ್ಕೃತಿ, ಕಾಣುವುದು ಬರೀ ಅಮೇರಿಕಾದ ನೆರಳು,
ಗುಲಾಮರಾಗಿಹರು, ಪರದೇಶಿ ಆಚಾರಕೆ, ಸಂಸ್ಕಾರವಿಲ್ಲ ಇವರ ಆತ್ಮಗಳಿಗೆ,
ಕೊನೆಗೊಮ್ಮೆ ಸಾಯುವರು, ಮಹಡಿಯಿಂದ ಹಾರಿ, ಆತ್ಮಸ್ಥೈರ್ಯವಿಲ್ಲದೆ ಜಾರಿ,
ಧರೆಗಿಳಿದು ಬಾ ದೇವ, ನೋಡೀ ಅಪ್ರಬುದ್ಧರ ವಿಕಟಾಟ್ಟಹಾಸ!!

ನಿನ್ನ ಕೈಲಾದರೆ, ಕೊಡು ಮದ್ದು, ಈ ವಿಕೃತ ಮರೆತ ಮನಗಳಿಗೆ,
ಆಗಲಾದರೂ ಬರಲಿ, ನೆನಪು, ದೇಶ ಕಟ್ಟುವ ಕಾಯಕಕೆ,
ಸಂಸ್ಕೃತಿಯ ನೆನೆದು ಹೆಮ್ಮೆ ಪಡುವ, ನಮ್ಮವರೆಂದು ಉಪಚರಿಸುವ,
ನಮ್ಮ ದೇಶವೆಂದು ಬೀಗುವ, ನೈತಿಕತೆಯಿಂದ ಬಾಳುವ ಛಲಕೆ,
ಧರೆಗಿಳಿದು ಬಾ ದೇವ, ಅಳಿಸಿವರ ಮೌಢ್ಯವ, ನೀಡಿವರ ಬಾಳ್ಗೆ ಮುಕುತಿ,
ಧರೆಗಿಳಿದು ಬಾ ದೇವ, ತೆರೆಸಿವರ ಕಣ್ಣನು, ಮರೆಸಿವರ ಹಮ್ಮನು!!

ಕಾಡತಾವ ಬೆಂಗ್ಳೂರ ನೆನಪು!

ಕಾಡತಾವ ಬೆಂಗ್ಳೂರ ನೆನಪು!

ಇಲ್ಲಿ ಬೈಕುಗಳಿಲ್ಲ, ಆಟೋಗಳಿಲ್ಲ,
ಪುಸಕ್ಕನೆ ಬರುವ ಪಾದಚಾರಿಗಳಿಲ್ಲ,
ಯಮದೂತರಂತೆ ಬರುವ
ಬಿಎಂಟಿಸಿ ಬಸ್ಸುಗಳಿಲ್ಲ,
ಕಾಡತಾವ ಬೆಂಗ್ಳೂರ ನೆನಪು !

ಅಲ್ಲಿ ಹಸಿರುಂಟು, ಇಲ್ಲಿ ಹಸಿರಿಲ್ಲ,
ಅಲ್ಲಿ ತಂಗಾಳಿಯುಂಟು, ಇಲ್ಲಿ ಬಿರುಬಿಸಿಲುಂಟು,
ಅಡ್ಡರಿಸುವ ಧೂಳುಂಟು, ಅಬ್ಬರಿಸುವ ಕಾರುಗಳುಂಟು,
ಜೀಬ್ರಾ ಲೈನಲ್ಲೇ ದಾಟುವ ಹಾದಿಹೋಕರುಂಟು,
ಕಾಡತಾವ ಬೆಂಗ್ಳೂರ ನೆನಪು !

ಅಲ್ಲಿ ಲಾಲ್ಬಾಗುಂಟು, ಕಬ್ಬನ್ ಪಾರ್ಕುಂಟು,
ಇಲ್ಲಿ ಕ್ರೀಕ್ ಪಾರ್ಕು, ಝಬೀಲ್ ಪಾರ್ಕುಂಟು,
ಆದರೆ ಆ ಕೋಗಿಲೆಯ ಗಾನ ಎಲ್ಲುಂಟು,
ತನುವ ಸುಡುವ ಬಿಸಿಗಾಳಿ ಇಲ್ಲುಂಟು,
ಕಾಡತಾವ ಬೆಂಗ್ಳೂರ ನೆನಪು !

ಇಲ್ಲಿ ಬ್ರಿಗೇಡ್ ರೋಡಿಲ್ಲ, ಎಂಜಿ ರೋಡಿಲ್ಲ,
ಕಮರ್ಶಿಯಲ್ ಸ್ಟ್ರೀಟಿಲ್ಲ, ಅವೆನ್ಯೂ ರೋಡಿಲ್ಲ,
ಶೇಖ್ ಝಾಯೆದ್ ರೋಡುಂಟು, ಅಲ್ಲಿ
ದೊಡ್ಡ ಸಾವಿನ ಮನೆಯುಂಟು,
ಕಾಡತಾವ ಬೆಂಗ್ಳೂರ ನೆನಪು !

ಇಲ್ಲಿ ಹಳ್ಳಿ ಮನೆಯಿಲ್ಲ, ಅಡಿಗಾಸ್ ಇಲ್ಲ,
ಕೈಗೆಟುಕುವ ದರ್ಶಿನಿಗಳಿಲ್ಲ,
ಮಲ್ಬಾರಿ ಹೋಟೆಲ್ಗಳುಂಟು,
ಒಂದೇ ಎಂಪೈರ್ ಹೋಟೆಲುಂಟು,
ಕಾಡತಾವ ಬೆಂಗ್ಳೂರ ನೆನಪು !

ಇಲ್ಲಿ ಆತ್ಮೀಯರಿಲ್ಲ, ಸ್ನೇಹಿತರಿಲ್ಲ,
ಜೊತೆಗಾರರುಂಟು, ಯಾಂತ್ರಿಕ ಜೀವನವುಂಟು,
ಇಲ್ಲಿ ನಗುವಿಲ್ಲ, ಕೇವಲ ಹುಸಿನಗುವುಂಟು,
ಇಲ್ಲಿ ಮನಸ್ಸುಗಳಿಲ್ಲ, ಮಾನವರುಂಟು,
ಕಾಡತಾವ ಬೆಂಗ್ಳೂರ ನೆನಪು !

ಅಲ್ಲಿ ಮಡದಿಯುಂಟು, ಅವಳ ಪ್ರೀತಿಯುಂಟು,
ಮಕ್ಕಳುಂಟು, ಅವರ ಕಲರವವುಂಟು,
ಬಂಧುಗಳುಂಟು, ಅವರ ಆದರವುಂಟು,
ಅವರ ಕುಹಕಗಳುಂಟು, ಕಣ್ಣೋಟಗಳುಂಟು,
ಕಾಡತಾವ ಬೆಂಗ್ಳೂರ ನೆನಪು !

ಅಲ್ಲಿ ಮಾನವೀಯತೆಯುಂಟು, ಇಲ್ಲಿ ಹಣವುಂಟು,
ಅಲ್ಲಿ ನನ್ನ ತಾಯ್ನುಡಿಯುಂಟು, ಇಲ್ಲಿ ಬೇರೆ ನುಡಿಯುಂಟು,
ಅಲ್ಲಿ ಮರಳಿಗೆ ಬೆಲೆಯುಂಟು, ಇಲ್ಲಿ ಎಲ್ಲೆಲ್ಲೂ ಮರಳೇ ಉಂಟು,
ಮನವು ಮರಳಾಗುವುದುಂಟು, ಕನಸು ನನಸಾಗುವುದುಂಟು,
ಕೊನೆಗೆ ಜೀವ ಒಂಟಿಯಾಗಿ ನರಳುವುದುಂಟು,

ಕಾಡತಾವ ಬೆಂಗ್ಳೂರ ನೆನಪು !

ಕಾಡತಾವ ಬೆಂಗ್ಳೂರ ನೆನಪು!

ಕಾಡತಾವ ಬೆಂಗ್ಳೂರ ನೆನಪು!

ಇಲ್ಲಿ ಬೈಕುಗಳಿಲ್ಲ, ಆಟೋಗಳಿಲ್ಲ,
ಪುಸಕ್ಕನೆ ಬರುವ ಪಾದಚಾರಿಗಳಿಲ್ಲ,
ಯಮದೂತರಂತೆ ಬರುವ
ಬಿಎಂಟಿಸಿ ಬಸ್ಸುಗಳಿಲ್ಲ,
ಕಾಡತಾವ ಬೆಂಗ್ಳೂರ ನೆನಪು !

ಅಲ್ಲಿ ಹಸಿರುಂಟು, ಇಲ್ಲಿ ಹಸಿರಿಲ್ಲ,
ಅಲ್ಲಿ ತಂಗಾಳಿಯುಂಟು, ಇಲ್ಲಿ ಬಿರುಬಿಸಿಲುಂಟು,
ಅಡ್ಡರಿಸುವ ಧೂಳುಂಟು, ಅಬ್ಬರಿಸುವ ಕಾರುಗಳುಂಟು,
ಜೀಬ್ರಾ ಲೈನಲ್ಲೇ ದಾಟುವ ಹಾದಿಹೋಕರುಂಟು,
ಕಾಡತಾವ ಬೆಂಗ್ಳೂರ ನೆನಪು !

ಅಲ್ಲಿ ಲಾಲ್ಬಾಗುಂಟು, ಕಬ್ಬನ್ ಪಾರ್ಕುಂಟು,
ಇಲ್ಲಿ ಕ್ರೀಕ್ ಪಾರ್ಕು, ಝಬೀಲ್ ಪಾರ್ಕುಂಟು,
ಆದರೆ ಆ ಕೋಗಿಲೆಯ ಗಾನ ಎಲ್ಲುಂಟು,
ತನುವ ಸುಡುವ ಬಿಸಿಗಾಳಿ ಇಲ್ಲುಂಟು,
ಕಾಡತಾವ ಬೆಂಗ್ಳೂರ ನೆನಪು !

ಇಲ್ಲಿ ಬ್ರಿಗೇಡ್ ರೋಡಿಲ್ಲ, ಎಂಜಿ ರೋಡಿಲ್ಲ,
ಕಮರ್ಶಿಯಲ್ ಸ್ಟ್ರೀಟಿಲ್ಲ, ಅವೆನ್ಯೂ ರೋಡಿಲ್ಲ,
ಶೇಖ್ ಝಾಯೆದ್ ರೋಡುಂಟು, ಅಲ್ಲಿ
ದೊಡ್ಡ ಸಾವಿನ ಮನೆಯುಂಟು,
ಕಾಡತಾವ ಬೆಂಗ್ಳೂರ ನೆನಪು !

ಇಲ್ಲಿ ಹಳ್ಳಿ ಮನೆಯಿಲ್ಲ, ಅಡಿಗಾಸ್ ಇಲ್ಲ,
ಕೈಗೆಟುಕುವ ದರ್ಶಿನಿಗಳಿಲ್ಲ,
ಮಲ್ಬಾರಿ ಹೋಟೆಲ್ಗಳುಂಟು,
ಒಂದೇ ಎಂಪೈರ್ ಹೋಟೆಲುಂಟು,
ಕಾಡತಾವ ಬೆಂಗ್ಳೂರ ನೆನಪು !

ಇಲ್ಲಿ ಆತ್ಮೀಯರಿಲ್ಲ, ಸ್ನೇಹಿತರಿಲ್ಲ,
ಜೊತೆಗಾರರುಂಟು, ಯಾಂತ್ರಿಕ ಜೀವನವುಂಟು,
ಇಲ್ಲಿ ನಗುವಿಲ್ಲ, ಕೇವಲ ಹುಸಿನಗುವುಂಟು,
ಇಲ್ಲಿ ಮನಸ್ಸುಗಳಿಲ್ಲ, ಮಾನವರುಂಟು,
ಕಾಡತಾವ ಬೆಂಗ್ಳೂರ ನೆನಪು !

ಅಲ್ಲಿ ಮಡದಿಯುಂಟು, ಅವಳ ಪ್ರೀತಿಯುಂಟು,
ಮಕ್ಕಳುಂಟು, ಅವರ ಕಲರವವುಂಟು,
ಬಂಧುಗಳುಂಟು, ಅವರ ಆದರವುಂಟು,
ಅವರ ಕುಹಕಗಳುಂಟು, ಕಣ್ಣೋಟಗಳುಂಟು,
ಕಾಡತಾವ ಬೆಂಗ್ಳೂರ ನೆನಪು !

ಅಲ್ಲಿ ಮಾನವೀಯತೆಯುಂಟು, ಇಲ್ಲಿ ಹಣವುಂಟು,
ಅಲ್ಲಿ ನನ್ನ ತಾಯ್ನುಡಿಯುಂಟು, ಇಲ್ಲಿ ಬೇರೆ ನುಡಿಯುಂಟು,
ಅಲ್ಲಿ ಮರಳಿಗೆ ಬೆಲೆಯುಂಟು, ಇಲ್ಲಿ ಎಲ್ಲೆಲ್ಲೂ ಮರಳೇ ಉಂಟು,
ಮನವು ಮರಳಾಗುವುದುಂಟು, ಕನಸು ನನಸಾಗುವುದುಂಟು,
ಕೊನೆಗೆ ಜೀವ ಒಂಟಿಯಾಗಿ ನರಳುವುದುಂಟು,

ಕಾಡತಾವ ಬೆಂಗ್ಳೂರ ನೆನಪು !