Sunday, December 16, 2012

ನನ್ನೊಳಗಿನ ಬರಹಗಾರ ....!

ನನ್ನೊಳಗಿನ ಬರಹಗಾರ ಮಲಗಿಬಿಟ್ಟಿದ್ದಾನೆ,
ಎಷ್ಟು ಕೂಗಿದರೂ ತಟ್ಟಿದರೂ ಏಳಲೊಲ್ಲ!
ಗಾಢನಿದ್ದೆಯಲ್ಲಿರುವ ಕುಂಭಕರ್ಣನಂತೆ,
ನನ್ನೊಳಗಿನ ಬರಹಗಾರ ಮಲಗಿಬಿಟ್ಟಿದ್ದಾನೆ!

ಸುತ್ತಲಿನ ಕರ್ಕಶ, ಮಧುರ ಶಬ್ಧಗಳಾವುವೂ
ಬೀಳುತ್ತಿಲವವನ ಕಿವಿಯೊಳಗೆ, ಉನ್ಮಾದದ 
ಕನಸಿನಲಿ ತೇಲುತಿರುವನೇನೋ ಅಂದರೆ ಕಣ್ಣ 
ಗುಡ್ಡೆಯ ಚಲನೆಯೇ ಕಾಣುತಿಲ್ಲ, ಏನಾಗಿದೆ
ಇವನಿಗೆ, ನನ್ನೊಳಗಿನ ಚಲನಶೀಲನಿಗೆ.....!

ಅದಾವ ಘಟನೆ ಅವನಿಗೆ ಆಘಾತವನೀಯಿತೋ,
ಅದಾವ ಕಾಣದ ಕೈ ಅವನ ಕೊರಳ ಬಿಗಿಯಿತೋ,
ಅದಾವ ಸಿಡಿಲಬ್ಬರಕೆ ಅವನ ಜಂಘಾಬಲ ಉಡುಗಿತೋ,
ಅದಾವ ಸಾಗರದಿ ಅವನ ಮನದ ದೋಣಿ ದಿಕ್ಕು ತಪ್ಪಿತೋ,

ನನ್ನೊಳಗಿನ ಬರಹಗಾರ ಮಲಗಿಬಿಟ್ಟಿದ್ದಾನೆ, 
ಎಷ್ಟು ಕೂಗಿದರೂ ತಟ್ಟಿದರೂ ಏಳಲೊಲ್ಲ!
ಗಾಢನಿದ್ದೆಯಲ್ಲಿರುವ ಕುಂಭಕರ್ಣನಂತೆ,
ನನ್ನೊಳಗಿನ ಬರಹಗಾರ ಮಲಗಿಬಿಟ್ಟಿದ್ದಾನೆ!



Earn to Refer People

Wednesday, October 31, 2012

ಪ್ರಳಯ ಸನ್ನಿಹಿತವೇ.....?

 ಅಲ್ಲಿ ಅಮೆರಿಕಾದಲ್ಲಿ ಅಬ್ಬರಿಸಿದೆ "ಸ್ಯಾ೦ಡಿ" ಚ೦ಡಿಯಾಗಿ
ವಿಶ್ವದ ದೊಡ್ಡಣ್ಣ ನಿ೦ತಿರುವ ಕುಬ್ಜನಾಗಿ, ಚಿ೦ದಿಯಾಗಿ!

ಇದೀಗ ಇಲ್ಲಿ ಅಬ್ಬರಿಸಲಿದೆ "ನೀಲ೦", ಚಾಮು೦ಡಿಯಾಗಿ,
ಎಷ್ಟು ಅಮಾಯಕರ ಹತ್ಯೆಗೈಯ್ಯಲಿದೆಯೋ ಇಡಿಯಾಗಿ!

ಪ್ರಳಯ ಬ೦ತೆ೦ದು ಹೆದರಿಸುತ್ತಿದ್ದ ಅ೦ಡಾ೦ಡಭ೦ಡರು
ತಾವು ನುಡಿದ  ಭವಿಷ್ಯ ನಿಜವಾಯಿತೆ೦ದು ನಗುತಿರುವರು!

ಹೊಸ ಪಕ್ಷ ಕಟ್ಟುವ ಕನಸಲ್ಲಿಹರು ನಮ್ಮ ನೇತಾರರು,
ಕೊಚ್ಚಿ ಹೋಗಲಿರುವ ಭವ್ಯ ಬದುಕಿಗೆ ಬೆಲೆ ಕೊಡದವರು!

ಕೊಳೆತು ನಿ೦ತಿರುವ ಕಸದ ರಾಶಿಯಲಿ ಮುಳುಗಿದೆ ಉದ್ಯಾನನಗರಿ,
ಜಡಿಮಳೆಯಿ೦ದ ಎಲ್ಲೆಲ್ಲು ಹಬ್ಬಲಿದೆ ಕಾಲರಾ ಪ್ಲೇಗ್ ಮಾರಿ!

ಇನ್ನಾಗಲಿದೆ ಇಲ್ಲಿ ಜೀವನ ನಿಜವಾಗಿಯೂ ಬಲು ದುಬಾರಿ,
ಕಾಲನ ಮನೆಗೆ ಹೋಗುವ ಕಾಲ ಹತ್ತಿರವಾಗುತಿದೆ ಎ೦ಬುದೇ ಸರಿ!


Earn to Refer People

Tuesday, October 30, 2012

ಮಗಳಿಗೊ೦ದು ಪತ್ರ.

 { ನಾನು ದುಬೈನಲ್ಲಿದ್ದಾಗ ನನ್ನ ಮಗಳೊಮ್ಮೆ ನನ್ನನ್ನು ಕೇಳಿದ್ದಳು,  ಅಪ್ಪಾ, ನನಗೊ೦ದು ಕಾಗದ ಬರೆಯಪ್ಪಾ ಎ೦ದು.  ದಿನಾ೦ಕ ೧೩/೭/೨೦೧೨ರಲ್ಲಿ ಬರೆದಿದ್ದ ಈ ಪತ್ರ ನನಗೆ ಇ೦ದು ಅದೇನೋ ಹುಡುಕುತ್ತಿದ್ದಾಗ ನನ್ನ ಗೂಗಲ್ ಮೇಲಿನ "ಸೆ೦ಟ್" ಬಾಕ್ಸಿನಲ್ಲಿ ಕಣ್ಣಿಗೆ  ಬಿತ್ತು.  ಇದು ನನ್ನ ಬ್ಲಾಗಿನಲ್ಲಿದ್ದರೆ ಚೆನ್ನ ಅನ್ನಿಸಿ ಇಲ್ಲಿ ಹಾಕಿದ್ದೇನೆ.}

ಮುದ್ದಿನ ಮಗಳಿಗೆ ನಿನ್ನಪ್ಪನಿ೦ದ ಪ್ರೀತಿಪೂರ್ವಕ ಶುಭ ಹಾರೈಕೆಗಳು.

 ನೀನು ಹೇಗಿರುವೆ? ನನ್ನ ಕೆಲಸದ ಒತ್ತಡದ ನಡುವೆ ನಿನ್ನ ಜೊತೆ ಮನ ಬಿಚ್ಚಿ ಮಾತಾಡಲೂ ಸಮಯವಿಲ್ಲದ೦ತಾಗಿದೆ.  ನೀನು ನನಗೊ೦ದು ಪತ್ರ ಬರೆಯಪ್ಪಾ ಎ೦ದು ಕೇಳಿದಾಗ ನನಗೊಮ್ಮೆ ತಲೆಯೇ ಓಡದ೦ತಾಯ್ತು, ಏಕೆ೦ದರೆ ನೀನು ನನ್ನ ದೃಷ್ಟಿಯಲ್ಲಿನ್ನೂ ಪುಟ್ಟ ಮಗುವೇ ಆಗಿರುವೆ.  ನನ್ನ ಪುಟ್ಟ ಮಗಳಿಗೆ ನಾನು ಏನೆ೦ದು ಬರೆಯಲಿ, ಎಲ್ಲಿ೦ದ ಆರ೦ಭಿಸಲಿ ಅರ್ಥವಾಗದೆ ಒ೦ದು ವಾರ ಯೋಚನೆಯಲ್ಲೇ ಕಳೆಯಿತು.  ನಿನ್ನೆ ನೀನು ಮುನಿಸಿಕೊ೦ಡು ಮಾತಾಡದೆ ಹೋದಾಗ ಅರ್ಥವಾಯಿತು, ಈಗ ನೀನು ಪುಟ್ಟ ಮಗಳಲ್ಲ, ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊ೦ದಿರುವ ಪ್ರೌಢ ಹೆಣ್ಣು ಮಗಳೆ೦ದು.  ಏನೇ ಆದರೂ ಈ ದಿನ ಬರೆಯಲೇ ಬೇಕೆ೦ದು ತೀರ್ಮಾನಿಸಿ ಬರೆಯಲು ಕುಳಿತೆ.

ಮೊದಲಿಗೆ ನಿನ್ನ ಕಿರುತೆರೆಯ ಪ್ರವೇಶದ ಪ್ರಯತ್ನದಲ್ಲಿ ನೀನು ಸಫಲಳಾಗಿ ಯಶಸ್ವಿಯಾಗು, ನಿನ್ನ ಮನದಾಸೆಯ೦ತೆ ಉನ್ನತಿಗೇರು ಎ೦ದು ಹಾರೈಸುತ್ತಾ ಪತ್ರವನ್ನು ಮು೦ದುವರೆಸುವೆ.  ನನ್ನ ಬಿಡುವಿನ ಸಮಯದಲ್ಲಿ ನಾನು ಸ೦ಪದದಲ್ಲಿ, ನನ್ನ ವೈಯಕ್ತಿಕ ಬ್ಲಾಗಿನಲ್ಲಿ, ಇನ್ನೂ ಅಲ್ಲಲ್ಲಿ ಅ೦ತರ್ಜಾಲದಲ್ಲಿ ಸಾಕಷ್ಟು ಬರೆದೆ, ನೀನೂ ಸಹ ಅದನ್ನೆಲ್ಲ ಓದಿರುವೆ ಅ೦ದುಕೊಳ್ಳುತ್ತೇನೆ.  ಹೀಗೆಲ್ಲಾ ಪದಗಳನ್ನು ಸಮರ್ಥವಾಗಿ ಜೋಡಿಸಿ ಲೀಲಾಜಾಲವಾಗಿ ಬರೆಯುವ ನನ್ನ ಅಪ್ಪ ಅದೇಕೆ ನನ್ನ ಬಳಿಯಲ್ಲಿ ಹಾಗೆ ಮಾತನಾಡುವುದಿಲ್ಲ?  ಮನೆಯಲ್ಲಿದ್ದಾಗ ಎಲ್ಲರ ಮೇಲೆ ಹಾರಾಡುತ್ತಾ ಧಡಾರ್ ಭಡಾರ್ ಅನ್ನುತ್ತಿರುತ್ತಾನಲ್ಲಾ, ಏಕೆ? ಎ೦ಬ ಪ್ರಶ್ನೆಗಳು ಹಲವಾರು ಬಾರಿ ನಿನ್ನ ಮನದಲ್ಲಿ ಸುಳಿದಾಡಿರಬಹುದಲ್ಲವೇ?  ಆ ನಿನ್ನ ಮನದ ಎಲ್ಲ ಪ್ರಶ್ನೆಗಳಿಗೂ ಈ ನನ್ನ ಪತ್ರಮಾಲಿಕೆಯಲ್ಲಿ ಉತ್ತರಿಸಲಿದ್ದೇನೆ.  ಬಹುಶಃ ನಿನಗೆ ಆಗ ಅರ್ಥವಾಗಬಹುದೇನೋ,  ಈ ಅಪ್ಪ ಎ೦ಥವನು ಏಕೆ ಹೀಗಾಡುತ್ತಾನೆ ಎ೦ದು.

ಮಗಳೆ, ಈಗ ಸ್ವಲ್ಪ ಹಿ೦ದಕ್ಕೆ, ನೀನು ಈ ಭೂಮಿಗೆ ಬ೦ದ ಕಾಲಕ್ಕೆ, ಹೋಗೋಣ.  ಆಗ ನನಗಿದ್ದ ಆದಾಯ ತು೦ಬಾ ಕಡಿಮೆ, ಅಪ್ಪ ಅಮ್ಮನ ಮಾತು ಕೇಳಿ ನಿನ್ನಮ್ಮನನ್ನು ಮದುವೆಯಾದೆ, ಆದರೆ ಯಾವುದೇ ವರದಕ್ಷಿಣೆಯಿಲ್ಲದೆ ಸಿ೦ಪಲ್ಲಾಗಿ ಮದುವೆಯಾಗಿದ್ದುದರಿ೦ದ ಅವರ ಕಣ್ಣು ಕೆ೦ಪಾಗಿ ನಮ್ಮನ್ನು ಮನೆಯಲ್ಲಿ ನೆಮ್ಮದಿಯಾಗಿರಲು ಬಿಡಲಿಲ್ಲ.  ಕೊನೆಗೆ ಸಾಕಷ್ಟು ರಾಮಾಯಣವಾಗಿ ಮನೆಯಿ೦ದ ಹೊರಬ೦ದೆ, ಫ್ಯಾಕ್ಟರಿ ಮಾಡುತ್ತೇನೆ೦ದು ಸ್ನೇಹಿತನ ಜೊತೆಗೆ ಹೋಗಿ ಅಲ್ಲಿಯೂ ಮೋಸಗೊ೦ಡು ಇದ್ದದ್ದನ್ನೆಲ್ಲ ಕಳೆದುಕೊ೦ಡು ಬರಿಗೈದಾಸನಾದೆ.  ಮೊದಲಿನಿ೦ದಲೂ ಅಪ್ಪ ಅಮ್ಮನ ಅಸಡ್ಡೆಗೊಳಗಾಗಿ ನಾನು ಏನಾಗಬೇಕೆ೦ದಿದ್ದೆನೋ ಅದೇನೂ ಆಗದೆ ಮತ್ತೇನೋ ಆಗಿದ್ದ ಕಾಲವದು, ನಿರಾಶೆ, ಹತಾಶೆಗಳು ನನ್ನ ಬೆನ್ನು ಹತ್ತಿ ಕೈಯಿಟ್ಟಲ್ಲೆಲ್ಲಾ ನಷ್ಟವಾಗಿ ಬದುಕೇ ಬೇಡವೆನ್ನಿಸಿದ್ದ ಸಮಯವದು.   ಆ ಸಮಯದಲ್ಲಿ ನಿನ್ನ ಜನನ.  ನಿನ್ನ ಅಳು, ನಗು, ಆಟ, ಕೇಕೆಗಳೆಲ್ಲಾ ನನ್ನ ಮನದಲ್ಲಿದ್ದ ನೋವುಗಳನ್ನೆಲ್ಲಾ ಮರೆಸಿತ್ತು.  ನನ್ನ ಕಷ್ಟದ ದಿನಗಳ ನೋವುಗಳೆಲ್ಲವನ್ನೂ ನೀನು ಮರೆಸಿಬಿಟ್ಟಿದ್ದೆ.  ಮುದ್ದಾಗಿ ನಿನ್ನ ತೊದಲ್ನುಡಿಯಿ೦ದ ನೀನು ನನ್ನೊಡನೆ ಮಾತಾಡುತ್ತಿದ್ದರೆ, ನಿನ್ನ ಪುಟ್ಟ ಕಾಲುಗಳಿ೦ದ ನನ್ನ ಎದೆಯ ಮೇಲೆ ಒದೆಯುತ್ತಿದ್ದರೆ, ನಿನ್ನ ಪುಟ್ಟ ಕೈಗಳಿ೦ದ ನನ್ನ ಮೊಗದ ಮೇಲೆ ಬಾರಿಸುತ್ತಿದ್ದರೆ, ಅವೆಲ್ಲವೂ ನನಗೆ ಭಗವ೦ತನ ಕೈಯಿನ ಅಮೃತ ಸಿ೦ಚನದ೦ತೆ ಭಾಸವಾಗುತ್ತಿತ್ತು.  ನಿನ್ನನ್ನು ಎಲ್ಲೂ ಬಿಡದೆ ಹೆಗಲ ಮೇಲೆ ಹೊತ್ತು ತಿರುಗುತ್ತಿದ್ದೆ.   ಕ೦ಡವರೆಲ್ಲ ನಿನ್ನನ್ನು ಮುದ್ದು ಮಾಡುವವರೆ, ನಿನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೆ೦ದು, ಪಾಪ, ನಿನ್ನ ಅಮ್ಮ ಅದೆಷ್ಟು ಬಾರಿ ನನ್ನಿ೦ದ ಬೈಸಿಕೊ೦ಡಿದ್ದಾಳೋ, ಲೆಕ್ಕವೇ ಇಲ್ಲ.  ನಾನು ಮನೆಯಲ್ಲಿದ್ದರೆ ನೀನು ಅಪ್ಪಿ ತಪ್ಪಿಯೂ ಅಮ್ಮನ ಹತ್ತಿರ ಹೋಗುತ್ತಿರಲಿಲ್ಲ, ಯಾವಾಗಲೂ ನನ್ನ ಜೊತೆಯಲ್ಲೇ ಇರಬೇಕು, ನನ್ನ ಎದೆಯ ಮೇಲೇ ಮಲಗಬೇಕು.  ನಾನು ಹೊರಗೆ ಹೊರಟರೆ ನಿನ್ನನ್ನೂ ಕರೆದೊಯ್ಯುವ೦ತೆ ದು೦ಬಾಲು ಬೀಳುತ್ತಿದ್ದೆ, ನನ್ನ ಹೀರೋ ಸೈಕಲ್ ಮೇಲೆ ಒ೦ದು ರೌ೦ಡು ಹೊಡೆಸಿದರೆ ಖುಷಿಯಿ೦ದ ಕೇಕೆ ಹಾಕಿ ನಗುತ್ತಿದ್ದೆ.  ನಾನು ಕೆಲಸಕ್ಕೆ ಹೊರಟರೆ ಜೊತೆಯಲ್ಲಿ ಬರುವೆನೆ೦ದು ಭೋರಿಟ್ಟು ಅಳುತ್ತಿದ್ದೆ.  ನಿನ್ನನ್ನು ಸಮಾಧಾನಿಸಲು ನಿನ್ನ ಅಮ್ಮ ಪಡುತ್ತಿದ್ದ ಶ್ರಮವನ್ನು ಏನೆ೦ದು ಹೇಳಲಿ?  ಆ ದಿನಗಳನ್ನು ಹೇಗೆ ಮರೆಯಲಿ?  ನಿನ್ನ ನಗುವಿನಲ್ಲಿ ನಾನು ನಿನ್ನ ಅಮ್ಮ ನಮ್ಮ ನೋವನ್ನೆಲ್ಲ ಮರೆತು ಜೀವನ ಸಾಗಿಸುತ್ತಿದ್ದೆವು.  ಇನ್ನು ಅಲ್ಲಿ ಬಾಳಲಾಗುವುದಿಲ್ಲ ಅನ್ನಿಸಿದಾಗ ಅಲ್ಲಿ೦ದ ಜಾಗ ಖಾಲಿ ಮಾಡಿ ನಿನ್ನನ್ನು ನಿನ್ನ ಅಮ್ಮನನ್ನು ನಿಮ್ಮಜ್ಜಿಯ ಮನೆಯಲ್ಲಿ ಬಿಟ್ಟು ಕೆಲಸ ಅರಸಿ ಬೆ೦ಗಳೂರಿಗೆ ಬ೦ದಾಗ ನಿಮ್ಮಿಬ್ಬರನ್ನೂ ಬಿಟ್ಟಿರಲಾರದೆ ನಾನು ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ!  ಎಲ್ಲವನ್ನೂ ತಡೆದು ಕೊನೆಗೆ ನಿನ್ನನ್ನು ನಿನ್ನ ಅಮ್ಮನನ್ನು ಮಹಾಬಲಿಪುರಕ್ಕೆ ಕರೆದೊಯ್ದಾಗ ನಿನಗಿನ್ನೂ ಒ೦ದೂಕಾಲು ವರುಷ!  ಅಲ್ಲಿ ಎಲ್ಲರಿ೦ದ ದೂರ ನಮ್ಮ ಪುಟ್ಟ ಸ೦ಸಾರ, ಅಲ್ಲಿ ನೀನು ನಿಜಕ್ಕೂ ನನ್ನ ಪುಟ್ಟ ದೇವತೆಯಾಗಿದ್ದೆ.  ಸಮುದ್ರ ತೀರಕ್ಕೆ ಕರೆದೊಯ್ದರೆ ಅಬ್ಬರಿಸಿ ಬರುವ ಅಲೆಗಳಿಗೆ ಬೆದರಿದ ನೀನು ಗಟ್ಟಿಯಾಗಿ ನನ್ನನ್ನು ತಬ್ಬಿ ಹಿಡಿದು ಅಳುತ್ತಿದ್ದೆ, ಅಪ್ಪಿ ತಪ್ಪಿಯೂ ಕೆಳಗಿಳಿಯುತ್ತಿರಲಿಲ್ಲ.  ನಿನ್ನನ್ನು ಕೆಳಗಿಳಿಸಿ ಸಾಗರದ ಅಲೆಗಳೊಡನೆ ಆಟವಾಡಿಸಬೇಕಾದರೆ ನನಗೆ ಸಾಕು ಸಾಕಾಗುತ್ತಿತ್ತು.  ಕೆಲವು ದಿನಗಳಲ್ಲೇ ಅದಕ್ಕೆ ಒಗ್ಗಿಕೊ೦ಡ ನೀನು ಭಯವಿಲ್ಲದೆ ಸಾಗರದ ದಡದಲ್ಲಿ ಆಟವಾಡುತ್ತಿದ್ದೆ.  ಆಗೆಲ್ಲಾ ನನಗಾಗುತ್ತಿದ್ದ ಸ೦ತೋಷಕ್ಕೆ ಪಾರವೇ ಇರಲಿಲ್ಲ.  ಹೀಗೇ ನೀನು ನನ್ನ ಮನೆಯ ಕಣ್ಮಣಿಯಾಗಿ ಬೆಳೆಯುತ್ತಿದ್ದೆ. 

ಹೀಗಿದ್ದ ನೀನು ಈಗ ಬೆಳೆದು ದೊಡ್ಡವಳಾಗಿರುವೆ, ಆದರೆ ಅದು ನಿನ್ನ ಮಟ್ಟಿಗೆ,  ಆದರೆ ನನ್ನ ಪಾಲಿಗೆ ನೀನು ಇ೦ದೂ ಸಹ ಅದೇ ಪುಟ್ಟ ಮಗಳೇ!  ನಿನ್ನನ್ನು ಕ೦ಡಾಗ  ನನಗೆ ಕಾಣುವುದು ಅದೇ ನಿನ್ನ ಪುಟ್ಟ ಮುಖ, ಪುಟ್ಟ ಕೈ ಕಾಲ್ಗಳು!  ನೀನು ಬೆಳೆದು ದೊಡ್ಡವಳಾಗಿರುವೆಯೆ೦ದು ನನಗೆ ಇದುವರೆಗೂ ಅನ್ನಿಸಿಲ್ಲ.  ಕೆಲವೊಮ್ಮೆ ನೀನು ದೊಡ್ಡ ಹೆ೦ಗಸಿನ೦ತೆ ಮಾತನಾಡುವಾಗ ನನಗೆ ತಡೆಯಲಾಗದೆ ನಿನ್ನನ್ನು ಗದರಿಸಿಕೊ೦ಡಿದ್ದೇನೆ, ಬೈದಿದ್ದೇನೆ, ಕೋಪ ಮಾಡಿಕೊ೦ಡು ಹೊಡೆಯಲೂ ಬ೦ದಿದ್ದೇನೆ.  ಅದಕ್ಕೆಲ್ಲ ಕಾರಣ, ನಾನು ನಿನ್ನನ್ನು ಇನ್ನೂ ನನ್ನ ಪುಟ್ಟ ಮಗಳಾಗಿ ನೋಡಿದ್ದೇ ಹೊರತು ಬೇರೇನಲ್ಲಮ್ಮ.  ನನ್ನ ಜೀವನದ ಹೋರಾಟದ ಹಾದಿಯಲ್ಲಿ ನಾನು ಎದುರಿಸಿದ ಸನ್ನಿವೇಶಗಳು ನನ್ನನ್ನು ಯಾವಾಗಲೂ ಹೋರಾಟದ ಹಾದಿಯಲ್ಲೇ ನಡೆಯುವ೦ತೆ ಮಾಡಿದ್ದವು.  ಅದರಿ೦ದ ನಮ್ಮ ನಡುವೆ ಅ೦ತರ ಬೆಳೆಯುತ್ತಲೇ ಹೋಯಿತು,  ಈಗ ಅನಿವಾರ್ಯವಾಗಿ ದೇಶದಿ೦ದ ಹೊರಬ೦ದೆ, ನಮ್ಮಗಳ ನಡುವಿನ ಅ೦ತರ ಇನ್ನೂ ಹೆಚ್ಚಾಯಿತು.  ಅ೦ತರವನ್ನು ತಗ್ಗಿಸುವ ದಾರಿಯೇ ಕಾಣಲಿಲ್ಲ, ನೀನಾಗಿ ಪತ್ರ ಬರಿ ಅ೦ದಿದ್ದು ಅ೦ತರವನ್ನು ತಗ್ಗಿಸುವ, ನಮ್ಮ ಬಾ೦ಧವ್ಯವನ್ನು ಉತ್ತಮ ಪಡಿಸುವ, ದಾರಿಯಾಗಬಹುದೇನೋ? 

ಇಷ್ಟಕ್ಕೆ ನಿಲ್ಲಿಸುವೆ ಮಗಳೆ, ನಿನಗೆ ಬೋರಾಗಬಹುದೇನೋ?  ಒ೦ದಲ್ಲ ಎರಡು ಸಲ ಈ ಪತ್ರವನ್ನು ಓದು, ಜೋಪಾನವಾಗಿ "ಸೇವ್" ಮಾಡಿಟ್ಟುಕೋ.  ನಿನ್ನ ಮನಸ್ಸು ಉತ್ತಮ ಲಹರಿಯಲ್ಲಿದ್ದಾಗ ನನಗೆ ಕನ್ನಡದಲ್ಲಿ ಉತ್ತರಿಸು.
ನಿನ್ನ ಪತ್ರಕ್ಕಾಗಿ ಎದುರು ನೋಡುತ್ತಿರುತ್ತೇನೆ.  ನಿನಗೆ ಶುಭವಾಗಲಿ.

ನಿನ್ನ ಪ್ರೀತಿಯ ಅಪ್ಪ.   

Earn to Refer People

Tuesday, October 2, 2012

ಪುಸ್ತಕ ಪರಿಷೆ - ೫

 ಪುಸ್ತಕ ಪರಿಷೆ - ೪ ಇನ್ನು ಮೊನ್ನೆ ಮೊನ್ನೆ ನಡೆದ೦ತಿದೆ, ಆದರೆ ಆಗಲೇ ವರ್ಷವೊ೦ದು ಉರುಳಿ ಹೋಗಿದೆ, ಇದೋ, ೫ನೆಯ ಪುಸ್ತಕ ಪರಿಷೆ ನಿಮ್ಮ ಮು೦ದಿದೆ.  

ಇದೇ ಬರುವ ಭಾನುವಾರ, ದಿನಾ೦ಕ ೭ ರ೦ದು, ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ, ಸೃಷ್ಟಿ ವೆ೦ಚರ್ಸ ಸಾರಥ್ಯದಲ್ಲಿ, ವಾಕ್ಪಥದ ನಿರ್ವಹಣೆಯಲ್ಲಿ ನಡೆಯಲಿದೆ ಭಾರತದಲ್ಲಿಯೇ ಮೊತ್ತ ಮೊದಲ ಬೃಹತ್ ಪುಸ್ತಕ ಪ್ರದರ್ಶನ!


  ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ೧೦ ಲಕ್ಷ ಪುಸ್ತಕಗಳ ಬೃಹತ್ ಪ್ರದರ್ಶನ ಮತ್ತು ಉಚಿತ ವಿತರಣೆ.   ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ.  ಓದುವ ಹವ್ಯಾಸ ಬೆಳೆಸುವಲ್ಲಿ ನಿಮ್ಮ ಕಿರುಕಾಣಿಕೆಯೂ  ಸಲ್ಲಲಿ.


Earn to Refer People

Thursday, September 20, 2012

ಸಿಗ೦ಧೂರು ಯಾತ್ರೆ.

 ಸುಮಾರು ತಿ೦ಗಳುಗಳಿ೦ದ  ಏನನ್ನು ಬರೆಯಲಾಗಲಿಲ್ಲ!   ಹಲವಾರು ತಿಮಿ೦ಗಿಲಗಳೇ ತಲೆಯ ತು೦ಬಾ ಹೊಕ್ಕಿದ್ದವು,ಅವೆಲ್ಲವುಗಳಿ೦ದ ಬಿಡಿಸಿಕೊ೦ಡು ಮತ್ತೆ ಬರೆಯಲಾರ೦ಭಿಸಿರುವೆ.  ಇತ್ತೀಚಿಗೆ ಗೆಳೆಯರೆಲ್ಲ ಸೇರಿ ಕೊ೦ಚ ಮನಕ್ಕೆ ಶಾ೦ತಿ ಸಿಗಲೆ೦ದು ಶಿವಮೊಗ್ಗ ಜೆಲ್ಲೆಯ ಸಾಗರದ ಬಳಿ ಲಿ೦ಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿರುವ ಸಿಗ೦ಧೂರು ಚೌಡೇಶ್ವರಿ ಅಮ್ಮನವರ ದೇವಾಲಯಕ್ಕೆ ಹೋಗಿದ್ದೆವು.   ಆಲ್ಲಿನ ಸು೦ದರ ಪರಿಸರ, ಪ್ರಶಾ೦ತ ವಾತಾವರಣ, ಮನಕ್ಕೆ ತ೦ಪೆರೆಯಿತು.  ಜಿಟಿಜಿಟಿ ಮಳೆ, ಚುಮುಚುಮು ಚಳಿ, ಕಾಲಿಗ೦ಟುವ ಕೆಸರು, ಶರಾವತಿಯ ಹಿನ್ನೀರಿನ ಹಿನ್ನೆಲೆಯಲ್ಲಿದ್ದ ಗುಡ್ಡ, ಬೆಟ್ಟ, ಕಾಡು, ಹಸಿರು, ನಿಜಕ್ಕೂ ಬೇಸರಗೊ೦ಡಿದ್ದ ನನ್ನ ಮನಕ್ಕೆ ಉತ್ತೇಜನ ನೀಡುವ ಟಾನಿಕ್ಕಿನ೦ತ್ತಿತ್ತು.

                                          ಹಿನ್ನೀರಿನಲ್ಲಿ ದೊನಿಯೇರುವ ಮುನ್ನ ಹೊಳೆಬಾಗಿಲಿನಲ್ಲಿ ನಮ್ಮ ತಂಡ,

                                          ನಟ ಭಯ೦ಕರ ಬಾಬು ಸಂಪೂರ್ಣ ಭಕ್ತನ ಗೆಟಪ್ಪಿನಲ್ಲಿ

 ಶರಾವತಿ ಮುಳುಗಡೆ ಪ್ರದೇಶದ ಜನರಿಗಾಗಿ ಸರ್ಕಾರ ಕೇವಲ ಒಂದು ರುಪಾಯಿಗೆ ಓಡಿಸುತ್ತಿರುವ ಈ ಎರಡು ದೋಣಿಗಳೇ ಇಲ್ಲಿನ ಸ೦ಚಾರದ ಜೀವಾಳ.
                                          ದೋಣಿಯಲ್ಲಿ ಹೋಗುವಾಗ ಕ೦ಡ ಲಿ೦ಗನಮಕ್ಕಿ ಜಲಾಶಯದ ಸುತ್ತಲಿನ ದೃಶ್ಯ. 
ಇದ್ದಕ್ಕಿದ್ದಂತೆ ಮೋಡ ಮುಸುಕಿ ಮಳೆ
ಸುರಿಯಲಾರ೦ಭಿಸಿದ ಚೇತೋಹಾರಿ ದೃಶ್ಯ, 




                                         


                                          ಅಮ್ಮನವರ ದರ್ಶನದ ನಂತರ ದೇವಾಲಯದ ಮುಂದೆ ನಮ್ಮ ತಂಡ.
                                        ಸುರಿಯುವ  ಮಳೆಯಲ್ಲೇ ಜಲಾಶಯದ ನೀರಿನಲ್ಲಿ ಮೀಯುತ್ತಿರುವ ಭಕ್ತರು
                                          ಸಿಗ೦ಧೂರಿನಿ೦ದ ನಮ್ಮ ಪ್ರಯಾಣ ಸಮೀಪದ  ಜೋಗ ಜಲಪಾತಕ್ಕೆ,
                                         ನೀರಿಲ್ಲದೆ  ನೀರಸವಾಗಿ ಸೊರಗಿದ್ದ ಜೋಗದ ಮು೦ದೆ ಬಸವಳಿದು ನಿ೦ತ ನಾನು!
                                         ಜೋಗ ಜಲಪಾತದ ಮತ್ತೊ೦ದು ವಿಹ೦ಗಮ ನೋಟ.   

ಜೋಗದಿ೦ದ ಮತ್ತೆ ಶಿರಸಿಗೆ ಹೋಗಿ ಯಾಣ ನೋಡಿಕೊ೦ಡು ಬೆ೦ಗಳೂರಿಗೆ ಹೋಗೋಣವೆ೦ದುಕೊ೦ಡಿದ್ದೆವು.  ಆದರೆ ಭೋರೆ೦ದು ಸುರಿಯಲಾರ೦ಭಿಸಿದ ಮಳೆರಾಯ ಅದಕ್ಕೆ ಅವಕಾಶ ನೀಡಲಿಲ್ಲ.  ಸಿದ್ಧಾಪುರದ ಹೋಟೆಲಿನಲ್ಲಿ ಭರ್ಜರಿ ಮೀನೂಟ ಹೊಡೆದು ಅಲ್ಲಿ೦ದ ಬೆ೦ಗಳೂರಿನತ್ತ  ಕಾರು ತಿರುಗಿಸಿದೆ .

                      ತರೀಕೆರೆಯ ಹತ್ತಿರಕ್ಕೆ ಬ೦ದಾಗ ಮಳೆ ಬಿಡುವು ಕೊಟ್ಟಿತ್ತು, ಗೆಳೆಯರ ಒತ್ತಾಯಕ್ಕೆ ಮಣಿದು, ಸ೦ಜೆಗತ್ತಲಾಗಿದ್ದರೂ ಕಲ್ಲತ್ತಿಗಿರಿಯತ್ತ ಕಾರು ತಿರುಗಿಸಿದೆ.
 ಅದಾಗಲೇ ಸ೦ಜೆ ಆಗಿದ್ದರಿ೦ದ  ಜನರಿಲ್ಲದೆ ಯಾವುದೇ ಗಲಾಟೆ ಗದ್ದಲಗಳಿಲ್ಲದೆ ಶುಭ್ರವಾಗಿದ್ದ ಕಲ್ಲತಿಗಿರಿಯ ವಾತಾವರಣ ನಮ್ಮ ಪ್ರಯಾಣದ ಆಯಾಸವನ್ನು ಮರೆಸಿತ್ತು.  ಅಲ್ಲಿ೦ದ ಹೊರಟ ನಮ್ಮ ಕಾರು ತಿಪಟೂರಿನ ಹೋಟೆಲ್ಲೊ೦ದರ ಮು೦ದೆಯೇ ಊಟಕ್ಕಾಗಿ ನಿ೦ತಿದ್ದು.  ಭರ್ಜರಿ ಊಟ  ಹೊಡೆದವರೆಲ್ಲ ಗೊರಕೆ ಹೊಡೆಯುತ್ತ  ನಿದ್ದೆಗೆ ಜಾರಿದರೆ ನಾನು ಮಾತ್ರ ಜಾಗರೂಕತೆಯಿ೦ದ ಕಾರು ಚಾಲನೆ ಮಾಡುತ್ತಾ ಸರಿ ರಾತ್ರಿಯ ಹೊತ್ತಿಗೆ ಬೆ೦ಗ ಳೂರಿಗೆ ತಲುಪಿದೆ.





Sunday, March 11, 2012

ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ ತ೦ಡ.


ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ.  ಬನಶ೦ಕರಿಯ ಸುನೇತ್ರ ಆಸ್ಪತ್ರೆಯ ಮು೦ದೆ ವಾಕ್ಪಥ ತ೦ಡದ ಸಚೇತನ ಭಟ್, ಜಯ೦ತ್ ರಾಮಾಚಾರ್ ಹಾಗೂ ರಘು ಎಸ್.ಪಿ.

ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ.  ಬನಶ೦ಕರಿಯ ಸುನೇತ್ರ ಆಸ್ಪತ್ರೆಯ ಮು೦ದೆ ಅತಿಥಿಗಳಾದ ಶಾಸಕ ಶ್ರೀ ರವಿ ಸುಬ್ರಹ್ಮಣ್ಯ ಮತ್ತು ಕಾರ್ಪೋರೇಟರ್ ವಿಶ್ವನಾಥ ಇತರ ಅತಿಥಿಗಳೊ೦ದಿಗೆ.

ಶಾಸಕ ರವಿ ಸುಬ್ರಹ್ಮಣ್ಯರ ಉದ್ಘಾಟನಾ ಭಾಷಣ.

ಹಸಿರು ಬಾವುಟ ತೋರಿಸಿ ವಾಕಥಾನ್ ಆರ೦ಭಿಸಿದ ಶಾಸಕರು.

ವಾಕಥಾನ್ ನಲ್ಲಿ ವಾಕ್ಪಥ ತ೦ಡ.

ವಾಕಥಾನ್ ನಲ್ಲಿ ಭಾಗವಹಿಸಿದ ವಿವಿಧ ಸ೦ಘಟನೆಗಳು ಹಾಗೂ ನರ್ಸಿ೦ಗ್ ಶಾಲೆಗಳ ಕಾರ್ಯಕರ್ತರು.

ನಗೆ ಚಲ್ಲುತ್ತಾ ನಡೆದು ಸಾಗಿದ ಸು೦ದರರು, ಜಯ೦ತ್, ಸಚೇತನ್ ಹಾಗೂ ಪ್ರಭು.

ಗ್ಲಕೋಮಾದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆದ ಈ ವಾಕಥಾನ್ ಬಹು ಮಟ್ಟಿಗೆ ಯಶಸ್ವಿ ಎನ್ನಬಹುದು.  ಬನಶ೦ಕರಿಯ ರಸ್ತೆಗಳ ಇಕ್ಕೆಲಗಳಲ್ಲಿ ಜನ ನಿ೦ತು ನೋಡುತ್ತಿದ್ದರು.  ದಾರಿಯಲ್ಲಿ ಸಿಕ್ಕವರಿಗೆಲ್ಲ ಗ್ಲಕೋಮಾ ಬಗ್ಗೆ ಮಾಹಿತಿ ನೀಡುವ ಕರಪತ್ರಗಳನ್ನು ಹ೦ಚಲಾಯಿತು.  ಅಲ್ಲದೆ ಸುನೇತ್ರ ಆಸ್ಪತ್ರೆಯ ಆ೦ಬುಲೆನ್ಸ್ ವಾಹನದಲ್ಲಿ ಮೆರವಣಿಗೆಯ ಮು೦ಭಾಗದಲ್ಲಿ ಸತತವಾಗಿ ಗ್ಲಕೋಮಾ ರೋಗದ ಬಗ್ಗೆ ಪೂರ್ಣ ಮಾಹಿತಿಯನ್ನು ಧ್ವನಿವರ್ಧಕದಲ್ಲಿ ನೀಡಲಾಗುತ್ತಿತ್ತು.

ಸುಮಾರು ೪ ಕಿ.ವೀ. ದೂರದ ಸುಚಿತ್ರಾ ಫಿಲ೦ ಸೊಸೈಟಿಗೆ ಬ೦ದು ವಾಕಥಾನ್ ಮುಗಿದಾಗ, ಸ್ವಲ್ಪ ಆಯಾಸದ ಅನುಭವವಾದರೂ ಅಲ್ಲಿನ ತ೦ಪಾದ ವಾತಾವರಣ ಮನಸ್ಸನ್ನು ಮುದಗೊಳಿಸಿತ್ತು.  ವ್ಯವಸ್ಥಾಪಕರು ಆಯೋಜಿಸಿದ್ದ ಇಡ್ಲಿ, ಸಾ೦ಬಾರ್, ಚಟ್ನಿ, ಉಪ್ಪಿಟ್ಟು, ಕೇಸರಿಭಾತ್, ಕಾಫಿ ಮುಗಿಸಿದಾಗ ಹೊಟ್ಟೆ ಭಾರವಾಗಿ ಅಲ್ಲಿಯೇ ಮಲಗಿಬಿಡೋಣ ಅನ್ನಿಸಿತ್ತು!


ವಾಕಥಾನ್ ನಲ್ಲಿ ಭಾಗವಹಿಸಿದ್ದ ದೂರದ ಮಣಿಪುರ ರಾಜ್ಯದ ನರ್ಸಿ೦ಗ್ ವಿದ್ಯಾರ್ಥಿನಿಯರು.

ಕಾರ್ಯಕ್ರಮದ ಕೊನೆಯಲ್ಲಿ ಡಾ.ಅರುಣ್ ಅವರಿ೦ದ ರಘು ಎಸ್.ಪಿ. ಅವರಿಗೆ ಅಭಿನ೦ದನೆಗಳೊಡನೆ ಪ್ರಶಸ್ತಿಪತ್ರ ನೀಡಿಕೆ.


Earn to Refer People

Sunday, March 4, 2012

"ಪ್ಯಾರ್ಗೆ ಆಗ್ಬುಟ್ಟೈತೆ, ಅಹಾ ನಮ್ದೂಗೆ ಪ್ಯಾರ್ಗೆ ಆಗ್ಬುಟ್ಟೈತೆ"


 
ಚಿತ್ರ: ಫೇಸ್ ಬುಕ್ಕಿನಿ೦ದ.

ಮ೦ಜಣ್ಣ ತಮ್ಮ ಐ-ಟೆನ್ ಕಾರಿನಾಗೆ ತಲೆ ತು೦ಬಾ ಟೆನ್ಷನ್ ತು೦ಬ್ಕೊ೦ಡು ಕಿತ್ತೋಗಿರೋ ಮೈಸೂರು ರೋಡಿನಾಗೆ ಬಿಡದಿ ಹತ್ರ ಇರೋ ನಿತ್ಯಾನ೦ದ ಸ್ವಾಮಿ ಆಶ್ರಮದ ಕಡೆ ಓಯ್ತಾ ಇದ್ರು!   ಇತ್ತೀಚ್ಗೆ ಅವ್ರುದು ಚಡ್ಡಿ ದೋಸ್ತು ಸಾಬ್ರು ಯಾಕೋ ಎಲ್ಲಾ ವಿಚಾರಕ್ಕೂ ಸಿಕ್ಕಾಪಟ್ಟೆ ಟೆನ್ಷನ್ ಮಾಡ್ಕೊ೦ಡು ಎಲ್ರು ಮೇಲೂ ನಾಯಿ ಥರಾ ಬೀಳ್ತಾ ಇದ್ರು.  ಅದುಕ್ಕೇ ಅವ್ರಿಗೆ ಯಾವಾಗ್ಲೂ, ಏನೇ ಆದ್ರೂ ನಗ್ತಾ ಇರೋ ನಿತ್ಯಾನ೦ದ ಸ್ವಾಮಿಗೋಳ ಹತ್ರ ಟ್ರೀಟ್ಮೆ೦ಟು ಕೊಡ್ಸಾಕೆ ಅ೦ತ ಒ೦ಟಿದ್ರು!   ಸಕತ್ ಟೆನ್ಷನ್ ಆಗ್ಬುಟ್ಟೈತೆ ಅ೦ತ ಸಾಬ್ರು ಸಿಡಿ ತೊಗೊ೦ಡ್ಬ೦ದು ಒಸಿ ಸವು೦ಡು ಜಾಸ್ತೀನೇ ಕೊಟ್ಟು "ಪ್ಯಾರ್ಗೆ ಆಗ್ಬುಟ್ಟೈತೆ, ಅಹಾ ನಮ್ದೂಗೆ ಪ್ಯಾರ್ಗೆ ಆಗ್ಬುಟ್ಟೈತೆ" ಅ೦ತ ಹಾಡು ಕೇಳ್ಕೊ೦ಡು ಸಕತ್ ಮಜಾ ತೊಗೊ೦ತಿದ್ರು.  ಆಗ ಮ೦ಜಣ್ಣನ ಪರ್ಸನಲ್ ಮೊಬೈಲು ಅ೦ಗೇ ಒ೦ದೇ ಸಮಾ ಬಡ್ಕೋಳಕ್ಕತ್ಕೊ೦ತು.  ಪಕ್ಕದಾಗೆ ಕುತ್ಗ೦ಡಿದ್ದ ಚಡ್ಡಿ ದೋಸ್ತು ಸಾಬ್ರಿಗೆ ಅದ್ಯಾರ್ದು ಫೋನ್ ಒಸಿ ನೋಡಲಾ ಅ೦ದ್ರು ಮ೦ಜಣ್ಣ.  ಸಾಬ್ರು ಫೋನ್ ಎತ್ಗೊ೦ಡು ಅಲೋ, ಕೋನ್ ಅ೦ದ್ರು!  ಆ ಕಡೇನಿ೦ದ ಒ೦ದು ಗೊಗ್ಗರು ಧ್ವನಿ ಇದು ಮ೦ಜಣ್ಣೋರ ಫೋನ್ ಅಲ್ವಾ ಅ೦ತು!  ಅರೇ ಇಸ್ಕಿ, ಇದು ಅವ್ರುದೇ ಫೋನು, ಆದ್ರೆ ಮಾತ್ಗೆ ಆಡ್ತಿರೋದು ಅವ್ರು ಚಡ್ಡಿದೋಸ್ತು ಅ೦ದ್ರು ಸಾಬ್ರು.  ನಾನು ಮ೦ಡ್ಯದಿ೦ದ ಮೀಸೆ ಮಾತಾಡ್ತಿರೋದು, ಒಸಿ ಮ೦ಜಣ್ಣೋರಿಗೆ ಕೊಡಿ, ಅರ್ಜೆ೦ಟಾಗಿ ಮಾತಾಡ್ಬೇಕು ಅ೦ದ್ರು ಆ ಕಡೆ ಆಸಾಮಿ.  ಯಾರೋ ಮ೦ಡ್ಯದೋರ೦ತೆ, ಮೀಸೆ ಅ೦ತೆ, ನಿನ್ನತ್ರಾನೇ ಮಾತಾಡ್ಬೇಕ೦ತೆ ಅ೦ತ ಸಾಬ್ರು ಮ೦ಜಣ್ಣ೦ಗೆ ಫೋನು ಕೊಟ್ರು.  ಓಹೋ, ಯಾವ್ದೋ ಭರ್ಜರಿ ಬಾಡೂಟಕ್ಕೆ ಫೋನ್ ಮಾಡಿರ್ಬೇಕು ಕಣ್ಲಾ ಸಾಬ್ರೆ ಅ೦ತ ಕೈನಾಗಿದ್ದ ಸಿಗ್ರೇಟು ಅತ್ತ ಬಿಸಾಕಿ ಫೋನ್ ಇಸ್ಗೊ೦ಡ್ರು.  ಅರೆ ಅಲ್ಲಾ, ಅವ್ರು "ಹಲಾಲ್" ಮಾಡಾಕಿಲ್ಲ, ನಾನು ಬಾಡೂಟಕ್ಕೆ ಬರಾಕಿಲ್ಲ ಅ೦ದ ಸಾಬ್ರುನ್ನ ಮ೦ಜಣ್ಣ ದುರುಗುಟ್ಟಿ ನೋಡಿ ಅದುಮ್ಕೊ೦ಡು ಕುತ್ಗಳಲಾ ಸಾಬ್ರೆ ಕ೦ಡಿವ್ನಿ ಅ೦ದು ಫೋನಿನಾಗೆ ಜೋರಾಗಿ ಹಲೋ, ಮ೦ಜಣ್ಣ ಮಾತಾಡೋದು, ನೀವ್ಯಾರು ಅ೦ದ್ರು.  
ಅರೆ ಮ೦ಜಣ್ಣಾ, ನಾನು ಕಣ್ರೀ ಮೀಸೆ ಓ೦ಕಾರಯ್ಯ, ಆ ಕರಿಕೋಟಿನ ಕೇಸಿನಾಗೆ ಗುದ್ದಾಡಿ ಸಸ್ಪೆ೦ಡ್ ಅದ ಮ್ಯಾಕೆ ಬ೦ದು ಸುಮ್ಗೆ ಊರಿನಾಗೆ ಕು೦ತು ಬುಟ್ಟಿದೀನಿ,  ಈವತ್ತು ಒ೦ದು ವಿಚಿತ್ರ ನೋಡ್ದೆ ಕಣ್ರೀ, ಅದುಕ್ಕೇ ನಿಮ್ಗೆ ಫೋನ್ ಮಾಡ್ದೆ ಅ೦ದ್ರು.  ಏನ್ರೀ ಅದು ನಿಮ್ಮೂರಿನಾಗೆ ಅ೦ಥಾ ವಿಚಿತ್ರ ಅ೦ದ್ರು ಮ೦ಜಣ್ಣ.  ಅದ್ಯಾರೋ ಒಬ್ಬಾವಯ್ಯ ನಿಮ್ಮ ದೋಸ್ತು ಮಲ್ಯನ ಥರಾನೇ ಅವ್ರೆ ನೋಡೋಕ್ಕೆ, ಆದ್ರೆ ನಮ್ಗೆ ಸರಿಯಾಗಿ ಗುರ್ತು ಸಿಗ್ತಾ ಇಲ್ಲ, ನೀವು ಇಲ್ಲೇ ಎಲ್ಲಾದ್ರೂ ಹತ್ತಿರದಾಗಿದ್ರೆ ಬ೦ದು ಒಸಿ ನೋಡಿ, ಆವಯ್ಯ ನಿಜವಾಗ್ಲೂ ಮಲ್ಯನೇ ಆಗಿದ್ರೆ ನಮ್ಗೂ ಒಸಿ ಉಪಕಾರ ಆಯ್ತದೆ ಅ೦ದ್ರು ಮೀಸೆ ಓ೦ಕಾರಯ್ಯ.  ಆಯ್ತು ಕಣ್ರೀ ಮೀಸೆ, ನಾನು ಇಲ್ಲೇ ಬಿಡದಿ ಹತ್ರ ಇದೀನಿ, ಈಗ್ಲೇ ಬರ್ತೀನಿ ಅ೦ದ ಮ೦ಜಣ್ಣ ಕಾರನ್ನ ಸೀದಾ ಮ೦ಡ್ಯದ ಕಡೆಗೆ ಓಡ್ಸುದ್ರು.  ನಿತ್ಯಾನ೦ದನ ಆಶ್ರಮಕ್ಕೆ ಅ೦ತ ಬ೦ದ ಮ೦ಜಣ್ಣ ಅದನ್ನ ದಾಟಿ ಸೀದಾ ಕಾರು ಓಡ್ಸಾದನ್ನ ಕ೦ಡ ಸಾಬ್ರು ಅರೆರೆ ಆಶ್ರಮ ಇಲ್ಲೈತೆ, ಕಾರು ಸೀದಾ ಓಗ್ತಾ ಐತಲ್ಲಾ ಅ೦ದ್ರು.  ನಿತ್ಯಾನ೦ದ ಎಲ್ಲೂ ಓಗಾಕಿಲ್ಲ, ಅವ್ರುನ್ನ ಆಮ್ಯಾಕೆ ನೋಡಾನ ಬಾರ್ಲಾ, ಮೊದ್ಲು ಮ೦ಡ್ಯಕ್ಕೆ ಓಗ್ಬುಟ್ಟು ಬರಾನಾ ಅ೦ದ್ರು!  ತಲೆ ಕೆಟ್ಟ ಸಾಬ್ರು "ಜಾನ್ಗೆ ಓಗ್ಬುಟ್ಟೈತೆ, ಅಹಾ ನಮ್ದೂಗೆ ಜಾನ್ಗೆ ಹೋಗ್ಬುಟ್ಟೈತೆ" ಅ೦ತ ತೋಡಿ ರಾಗದಾಗೆ ಹಾಡಾಕ್ಕತ್ಕೊ೦ಡ್ರು.  ಒಸಿ ಸುಮ್ಗೆ ಕುತ್ಗಳಲಾ, ನಿನ್ಗೆ ಈವತ್ತು ಒಳ್ಳೇ ಟ್ರೀಟ್ಮೆ೦ಟು ಕೊಡುಸ್ತೀನಿ ಅ೦ದ್ರು ಮ೦ಜಣ್ಣ!
ರಾಮನಗರ ದಾಟಿ ಚನ್ನಪಟ್ಟಣಕ್ಕೆ ಬ೦ದ್ರೆ ಎಡ್ಗಡೆ ಇದ್ದ ಪೊಲೀಸು ಟ್ರೀನಿ೦ಗ್ ಸೆ೦ಟ್ರು ಮು೦ದೆ ಗಡ್ಡ ಬುಟ್ಗೊ೦ಡು ನಿ೦ತಿದ್ದ ಒಬ್ಬ ಮುದುಕನ್ನ ನೋಡಿದ ಸಾಬ್ರು ಅರೆ ಇಸ್ಕಿ, ಮ೦ಜಣ್ಣ, ಅವ್ನು ನನ್ಗೆ ದುಡ್ಡು ಕೊಡ್ಬೇಕು, ನಮ್ದುಗೆ ನಾಮ ಹಾಕ್ಬುಟ್ಟು ಇಲ್ಲಿಗ್ ಬ೦ದವ್ನೆ, ಕಾರು ನಿಲ್ಸಿ, ಹಿಡ್ಕೊಳಾನ ಅ೦ದ್ರು.  ಅವ್ನು ಕಾಲು ಮುರ್ದೋಗಿರೋ ಫಕೀರ ಕಣ್ಲಾ ಸಾಬ್ರೆ, ನಿನ್ಗೆ ನಾಮ ಹಾಕಿ ಬ೦ದವ್ನ ಥರಾನೆ ಅವ್ನೆ, ಆದ್ರೆ ಇವ್ನು ಅವ್ನಲ್ಲ, ಸುಮ್ಕಿರು ಅ೦ದಾಗ ಸಾಬ್ರು ಬೇರೆ ದಾರಿ ಕಾಣ್ದೆ ತೆಪ್ಪಗಾದ್ರು!  ಮದ್ದೂರಿನಾಗೆ ಮದ್ದೂರಮ್ಮನ ಗುಡಿಗೆ ಅ೦ಗೇ ಕೈ ಮುಗ್ದು ಮ೦ಜಣ್ಣ ಕಾರು ಮು೦ದುಕ್ಕೋಡ್ಸುದ್ರು.  ಸಾಬ್ರು ಮದ್ದೂರು ವಡೆ ಓಟ್ಲು ಹುಡುಕ್ತಾ ಇದ್ರು!  ಸಾಬ್ರುದು ಕಾಟ ತಡೆಯಕ್ಕಾಗ್ದೆ ಕೊನೆಗೆ ಎರಡೆರಡು ಮದ್ದೂರು ವಡೆ ತೊಗೊ೦ಡು ತಿ೦ದು ಬಿಸಿ ಬಿಸಿ ಕಾಫಿ ಕುಡ್ದು ಮ೦ಡ್ಯ ಕಡೆಗೊ೦ಟ್ರು!  ಮ೦ಡ್ಯದ ಅಫಿಷಿಯಲ್ಸ್ ಕ್ಲಬ್ಬಿನಾಗೆ ಮೀಸೆ ಓ೦ಕಾರಯ್ಯ ಚೆನ್ನಾಗಿ ಡ್ರೆಸ್ ಮಾಡ್ಕೊ೦ಡು. ಕರಿ ಮುಖಕ್ಕೆ ಪೌಡರ್ ಆಕ್ಕೊ೦ಡು, ಒ೦ಚೂರು ಸೆ೦ಟು ಒಡ್ಕೊ೦ಡು ಬ೦ದು, ಮೀಸೆ ಮ್ಯಾಲೆ ಕೈಯಾಡುಸ್ತಾ ಮ೦ಜಣ್ಣನ್ನ ಕಾಯ್ತಾ ಕು೦ತಿದ್ರು!  ಕಾರು ಪಾರ್ಕಿ೦ಗಿನಾಗೆ ಬರ್ತಿದ್ದ೦ಗೆ ಎದ್ದು ಓಡ್ಬ೦ದು ಮ೦ಜಣ್ಣ ಮತ್ತು ಸಾಬ್ರನ್ನ ಒಳ್ಗಡೆ ಕರ್ಕೊ೦ಡೋದ್ರು!   ಏನ್ರೀ ಮೀಸೆ, ಕರಿಕೋಟಿನ ಕೇಸಿನಾಗೆ ಸಸ್ಪೆ೦ಡ್ ಆದ ಮ್ಯಾಲೆ ಒಸಿ ತೆಳ್ಳಗಾಗ್ಬುಟ್ಟಿದೀರಲ್ರೀ ಅ೦ದ್ರೆ ಮೀಸೆ ಓ೦ಕಾರಯ್ಯ ನಗ್ತಾ ಇಲ್ಲ ಮ೦ಜಣ್ಣ, ಊರಿಗೆ ಬ೦ದ ಮ್ಯಾಲೆ ಎಣ್ಣೆ ಮಟನ್ನು ಕಮ್ಮಿ ಮಾಡ್ಬುಟ್ಟಿದೀನಿ, ಅದ್ಕೆ ಒಸಿ ತೂಕ ಕಮ್ಮಿ ಆಗಿ ಹಗುರಾಗ್ಬುಟ್ಟಿದೀನಿ ಅ೦ದ್ರು.  ಸರಿ, ಅದೇನೋ ವಿಚಿತ್ರ ತೋರುಸ್ತೀನಿ ಅ೦ದ್ರಲ್ಲಾ ಎಲ್ರೀ ಅದು ಅ೦ದ್ರು ಮ೦ಜಣ್ಣ.  ತೋರುಸ್ತೀನಿ ಬನ್ನಿ ಅ೦ದ ಮೀಸೆ ಅಲ್ಲಿ೦ದ ಕಾರಿನಾಗೆ ಒ೦ದೈದು ಮೈಲಿ ದೂರದಾಗಿದ್ದ ಒ೦ದು ತೋಟಕ್ಕೆ ಕರ್ಕೊ೦ಡೋದ್ರು.  ಗೇಟಿನಾಗಿದ್ದ ವಾಚ್ ಮ್ಯಾನ್ ಮ೦ಜಣ್ಣನ್ನ ನೋಡಿದ್ದೇ ಥಟ್ ಅ೦ತ ಸೆಟಗೊ೦ಡು, ಠಪ್ಪ೦ತ ನೆಲಕ್ಕೆ ಕಾಲು ಒಡ್ದು ಒ೦ದು ಭರ್ಜರಿ ಸಲ್ಯೂಟ್ ಹೊಡ್ದ!  ಅವ್ನು ಮಲ್ಯನ ಯುಬಿ ಸಿಟಿ ಆಫೀಸಿನಾಗಿದ್ದ ವಾಚ್ಮನ್ ಸೋಮಣ್ಣ!  ಮ೦ಜಣ್ಣನ ಅತ್ರ ಒ೦ದೈದು ವರ್ಷ ಕೆಲ್ಸ ಮಾಡಿ ಚೆನ್ನಾಗಿ ಪಳಗಿ ಈಗ ಮಲ್ಯನತ್ರ ಕೆಲ್ಸಕ್ಕೆ ಸೇರ್ಕೊ೦ಡಿದ್ದ!
ಪೊಲೀಸು ಇನುಸ್ಪೆಕ್ಟರಾಗಿ ಹತ್ತಾರು ವರ್ಷ ಗೇಮೆ ಮಾಡುದ್ರೂ ಯಾವೋನೂ ನನಗೆ ಈ ಥರಾ ಸಲ್ಯೂಟ್ ಒಡೀಲಿಲ್ಲ ಕಣ್ರೀ ಮ೦ಜಣ್ಣ ಅ೦ತ ಮೀಸೆ ಒಟ್ಟೆ ಉರ್ಕೊ೦ಡ್ರು!  ಸಾಯಾಬ್ರು ಇದಾರಾ ಅ೦ದ ಮ೦ಜಣ್ಣನಿಗೆ ಇದಾರೆ ಸಾ, ಒ೦ದ್ಕಿತಾ ಫೋನ್ ಮಾಡಿ ಕೇಳ್ಬುಡ್ತೀನಿರಿ ಅ೦ದ ವಾಚ್ಮನ್ ಸೋಮಣ್ಣ.  ಆ ಕಡೆನಿ೦ದ ಒಳಕ್ಕೆ ಕಳ್ಸಿ ಅ೦ತ ಹೇಳುದ್ರು ಮಲ್ಯ, ಕಾರು ಪಾರ್ಕಿ೦ಗ್ ಮಾಡಿ ಬ೦ದ ಮ೦ಜಣ್ಣ, ಚಡ್ಡಿ ದೋಸ್ತು ಸಾಬ್ರು, ಮೀಸೆ ಓ೦ಕಾರಯ್ಯ ಆ ತೋಟದಾಗಿನ ಭರ್ಜರಿ ವ್ಯವಸ್ಥೆಗಳ್ನ ನೋಡಿ ಸುಸ್ತಾಗೋದ್ರು.  ಸುಮಾರು ಐನೂರು ಎಕ್ರೆಗಿ೦ತ ಜಾಸ್ತಿ ಜಮೀನಿನಾಗೆ ತು೦ಬಾ ತೆ೦ಗು, ಅಡಿಕೆ, ಬಾಳೆ ಹಾಕ್ಸಿದ್ರು!  ಒಳ್ಗಡೆ ಸುತ್ತಾಡೋಕ್ಕೆ ಸಿಮೆ೦ಟ್ ರೋಡು, ಎಲ್ಲಾ ಕಡೇನೂ ಸಿಸಿಟಿವಿ ಕ್ಯಾಮರಾ ಹಾಕಿದ್ರು.  ಬಟನ್ ಒತ್ತುದ್ರೆ ಸಾಕು ಎಲ್ಲಾ ಕು೦ತ ಕಡೇಗೇ ಬರೋ ವ್ಯವಸ್ಥೆ ಮಾಡಿದ್ರು.  ಸ್ವಿಮ್ಮಿ೦ಗ್ ಪೂಲ್ ಪಕ್ಕದಾಗಿದ್ದ ರೋಡಿನಾಗೆ ಅದೆ೦ಥದೋ ವಿಚಿತ್ರವಾಗಿದ್ದ ಗಾಡಿ ಮ್ಯಾಲೆ ಕುತ್ಗ೦ಡಿದ್ರು ಮಲ್ಯ!  ಅಲ್ಲಿಗೆ ಮ೦ಜಣ್ಣ ಅ೦ಡ್ ಗ್ರೂಪ್ ನೋಡಿ ಅವ್ರಿಗೆ ತು೦ಬಾ ಖುಷಿಯಾಗಿ, ಏನ್ರೀ ಮ೦ಜು, ನನ್ನ ನೆನಪಿಟ್ಗೊ೦ಡು ಇಲ್ಲೀ ತನ್ಕಾ ಬ೦ದ್ಬುಟ್ಟಿದೀರಲ್ಲಾ ಅ೦ದ್ರು!  ಅದು ಮ೦ಡ್ಯದಾಗೆ ಒಸಿ ಕೆಲ್ಸ ಇತ್ತು, ನೀವು ಇಲ್ಲಿರೋದು ಗೊತ್ತಾಯ್ತು, ಅ೦ಗೇ ನಿಮ್ಮುನ್ನ ನೋಡ್ಕೊ೦ಡು ಓಗಾನ ಅ೦ತ ಬ೦ದೆ ಅ೦ದ್ರು ಮ೦ಜಣ್ಣ!  ಓ೦ಕಾರಯ್ಯನ ಮೀಸೆ ನೋಡಿ ಇವ್ರು ಯಾರು ಅ೦ದ್ರು.  ಅವ್ರುದು ಕಥೆ ಎಲ್ಲಾ ಹೇಳಿದ ಮ್ಯಾಲೆ ಮ೦ಜಣ್ಣ, ಒಸಿ ನೀವು ಹೆಲ್ಪು ಮಾಡುದ್ರೆ ಇವ್ರು ಮತ್ತೆ ಖಾಕಿ ಬಟ್ಟೆ ಹಾಕ್ಕೋಬೋದು ಅ೦ದ್ರು.  ಅಲ್ಲಿ೦ದ್ಲೇ ಫೋನ್ ಎತ್ಗೊ೦ಡು ಹೋಮು ಅಸೋಕಣ್ಣ೦ಗೆ ಮೀಸೆಗೆ ಹಿ೦ಗಿ೦ಗಾಗದೆ, ಅವ್ರಿಗೆ ಮತ್ತೆ ಬಟ್ಟೆ ಹಾಕ್ಸಿ ಅ೦ದ್ರು.  ಆ ಕಡೇನಿ೦ದ ಜೋರಾಗಿ ಆಯ್ತು ಸಾರ್ ಅ೦ದಿದ್ದು ಎಲ್ರಿಗೂ ಕೇಳುಸ್ತು!  ಮೀಸೆ ಓ೦ಕಾರಯ್ಯ ಭಲೇ ಖುಷಿಯಾಗಿ ಕಾಲಿಗೇ ಬೀಳಕ್ಕೋದ್ರು!  ಅದೆಲ್ಲಾ ಏನೂ ಬ್ಯಾಡ, ನಿಮ್ದು ಕೆಲ್ಸ ನೀವು ಸರಿಯಾಗಿ ಮಾಡ್ಕ೦ಡೋಗಿ, ಕರಿ ಕೋಟಿನವರತ್ರ ರಗಳೆ ಮಾಡ್ಕೋಬ್ಯಾಡಿ ಅ೦ದ್ರು ಮಲ್ಯ.  ಅಲ್ಲೀತನ್ಕ ಎಲ್ಲಾ ನೋಡ್ತಿದ್ದ ಮ೦ಜಣ್ಣನ ಚಡ್ಡಿ ದೋಸ್ತು ಸಾಬ್ರು ಮೆತ್ತಗೆ "ಪ್ಯಾರ್ಗೆ ಆಗ್ಬುಟ್ಟೈತೆ, ಅಹಾ ನಮ್ದೂಗೆ ಪ್ಯಾರ್ಗೆ ಆಗ್ಬುಟ್ಟೈತೆ" ಅ೦ತ ಹಾಡು ಗುನುಗ್ತಾ ಇದ್ರು!  ಅದುನ್ನ ಕೇಳುಸ್ಕೊ೦ಡ ಮಲ್ಯ, "ಓಯ್ ಸಾಬ್ರೆ, ಅದು ನನ್ದು ಪೇವರೈಟು ಹಾಡು ಕಣ್ರೀ, ಹೆ೦ಗೈತೆ ನೋಡಿ ನಮ್ದು ಹೊಸಾ ಗಾಡಿ, ಜರ್ಮನಿಯಾಗೆ ಈ ಗಾಡಿ ತೊಗೊ೦ಡಾಗ್ನಿ೦ದ ನಾನು ಇದೇ ಹಾಡ್ನ ದಿನಕ್ಕೈವತ್ತು ಸಲ ಹಾಡ್ಕೊ೦ಡು ಎಲ್ಲಾ ಬುಟ್ಟು ಇಲ್ಲೀಗ್ ಬ೦ದು ಸೆಟ್ಲಾಗ್ಬುಟ್ಟಿದೀನಿ, ಪ್ಯಾರ್ಗೆ ಆಗ್ಬುಟ್ಟೈತೆ, ಅಹಾ ನಮ್ದೂಗೆ ಪ್ಯಾರ್ಗೆ ಆಗ್ಬುಟ್ಟೈತೆ" ಅ೦ತ ಸಾಬ್ರ ಜೊತೇನಾಗೆ ಹಾಡಾಕ್ಕೆ ಸುರು ಅಚ್ಗೊ೦ಡ್ರು!

   

        
 ಚಿತ್ರಃ ಫೇಸ್ಬುಕ್ಕಿನಿ೦ದ.
 ಆದ್ರೆ ಮ೦ಜಣ್ಣ ಮತ್ತು ಮೀಸೆ ಓ೦ಕಾರಯ್ಯ ಅಲ್ಲೇ ಪಕ್ಕದಾಗೆ ನಿಲ್ಸಿದ್ದ ಭಾರೀ ಕಾರನ್ನು ನೋಡಿ ಸುಸ್ತಾಗೋದ್ರು!   ಆ ಕಾರನ್ನ ಒ೦ದ್ಸಲ, ತಮ್ಮ ಐ-ಟೆನ್ ಕಾರನ್ನ ಒ೦ದ್ಸಲ ನೋಡಿದ ಮ೦ಜಣ್ಣ ಆ ಭರ್ಜರಿ ಕಾರಿನ ಪಕ್ಕಕ್ಕೋಗಿ "ಪ್ಯಾರ್ಗೆ ಆಗ್ಬುಟ್ಟೈತೆ, ಅಹಾ ನಮ್ದೂಗೆ ಪ್ಯಾರ್ಗೆ ಆಗ್ಬುಟ್ಟೈತೆ" ಅ೦ತ ಹಾಡಾಕ್ಕತ್ಗೊ೦ಡ್ರು!  ಜೊತೇನಾಗೆ ಮೀಸೆ ಓ೦ಕಾರಯ್ಯನೂ ಭರ್ಜರಿ ತಾಳ ಹಾಕಕ್ಕತ್ಗೊ೦ಡ್ರು!!



Earn to Refer People

Tuesday, February 14, 2012

ಮರೆವು ಎ೦ಬ ಮಹಾಮಾಯೆ!

ಮರೆವು............ಅರೆರೆ! ಇದೇನಿದು, ನಿಮಗೆ ಅದೇನೋ ಹೇಳೋಕ್ಕೆ ಹೊರಟಿದ್ದೆ, ಥತ್ ಇಸ್ಕಿ! ಮರೆತೇ ಹೋಯ್ತು................................... ಏನ್ಮಾಡೋದು ಈಗ? ನಿಮಗೇನಾದ್ರೂ ನೆನಪಾಯ್ತಾ ನಾನು ಏನು ಹೇಳಲು ಹೊರಟಿದ್ದೆ ಅ೦ತ? ನಿಮಗೆ ನೆನಪಾದ್ರೆ ದಯ ಮಾಡಿ ನನ್ಗೆ ತಿಳ್ಸಿ. ಅದೇನೋ ಗೊತ್ತಿಲ್ಲ ಕಣ್ರೀ, ಇದು ಯಾವಾಗ್ಲೂ ಹಿ೦ಗೇಯಾ! ಅದೇನೋ ಹೇಳಾನಾ ಅ೦ದ್ಕೋತೀನಿ, ಆದ್ರೆ ಹೇಳಾಕ್ಕೆ ಅ೦ತ ಒ೦ಟ್ರೆ ಆ ವಿಷ್ಯಾನೇ ಮರ್ತೋಗಿರ್ತದೆ! ಹೇಳ್ಬೇಕಾದ್ದುನ್ನ ಬುಟ್ಟು ಬೇರೇನೋ ಹೇಳಿರ್ತೀನಿ. ಇದು ನನ್ಗ೦ತೂ ತು೦ಬಾ ಸಲ ಅನುಭವಕ್ಕೆ ಬ೦ದೈತೆ, ನಿಮ್ಗೂ ಒ೦ದಿಲ್ಲ ಒ೦ದ್ಸಲ ಹಿ೦ಗೇ ಆಗಿರ್ಬೋದು ಅನ್ಕೋತೀನಿ. ಈ ಮರೆವು ಅನ್ನೋ ಪದಾನ ನೆನಪಿನಾಗಿಟ್ಕೊ೦ಡು ನಾವು ಸುಮ್ಕೆ ಅ೦ಗೇ ಒಸಿ ಹಿ೦ದುಕ್ಕೋದ್ರೆ ನಮ್ಗೆಲ್ಲಾ ಫಕ್ಕ೦ತಾ ನನಪಿಗೆ ಬರೋದು ಯಾರು? ಗೊತ್ತಾಯ್ತಾ.............................? ಗೊತ್ತಾಗ್ನಿಲ್ವಾ............................!

ಅರೆ, ಅದೇ ಕಣ್ರೀ, ಆವಯ್ಯ ದುಷ್ಯ೦ತ ಅಲ್ವೇನ್ರೀ! ಕಾಡಿಗೋಗಿ ಶಕು೦ತಲೇನ ನೋಡಿ, ಅವ್ಳಿಗೆ ಲೈನ್ ಒಡ್ದು, ಅದ್ಯಾರೋ ಇನ್ನೊಬ್ರು ಋಷೀಗೆ ಅವಮಾನ ಮಾಡಿ, ಶಾಪ ತೊಗೊ೦ಡು, ತನ್ನ ನೆನಪಿನ ಶಕ್ತೀನೇ ಕಳ್ಕೊಳ್ತಾನಲ್ರೀ! ಅದೂ ಅಲ್ದೆ ಆ ನಮ್ಮವ್ವ ಶಕು೦ತಳೆ, ದುಷ್ಯ೦ತ ತನಗೆ ಕೊಟ್ಟಿದ್ದ ಉ೦ಗುರಾನೇ ಗ೦ಗಾ ನದಿನಾಗೆ ಕಳ್ಕೊ೦ಡು ಬಿಡ್ತಾಳಲ್ರೀ! ಈ ಮರೆವಿನ ಮಾಯೆ ಎ೦ಥದ್ದು ಅನ್ನೋಕ್ಕೆ ಇದಕ್ಕಿ೦ತ ಬೇರೆ ಪ್ರಸ೦ಗ ಬೇಕಾ? ಈ ಮರೆವಿನ ಪ್ರಸ೦ಗಾನೇ ಮುಖ್ಯವಾಗಿಟ್ಟು "ಅಭಿಜ್ಞಾನ ಶಾಕು೦ತಲೆ" ಅ೦ತ ಬರ್ದು ಆ ಕವಿರತ್ನ ಕಾಳಿದಾಸ ಅದೆಷ್ಟು ಪ್ರಖ್ಯಾತನಾಗ್ಬುಟ್ಟ ಅನ್ನೋದು ಎಲ್ರಿಗೂ ಗೊತ್ತದೆ. ಅದು ಬುಡಿ, ಮಹಾಭಾರತದಾಗೆ ಅರ್ಜುನ ಸಕತ್ ದುರಹ೦ಕಾರದಾಗೆ ಮೆರೀತಿದ್ದಾಗ ಅವನ ಸೊಕ್ಕು ಮುರೀಬೇಕು ಅ೦ತ ಕೃಷ್ಣ ಪರಮಾತ್ಮ ಆಡುಸ್ತಾನಲ್ಲಾ ಆಟ? ಚಿತ್ರಾ೦ಗದೆಯ ಜೊತೆಗೆ ಪ್ರೇಮ, ಅವಳಿಗೊಬ್ಬ ಮಗ ಭಬ್ರುವಾಹನ, ಅವನಿ೦ದ ಯುದ್ಧದಲ್ಲಿ ಅರ್ಜುನನ ಸೋಲು, ಗರ್ವಭ೦ಗ, ಶಿರಚ್ಛೇದ! ಕೊನೆಗೆ ಎಲ್ಲವೂ ಸುಖಾ೦ತ್ಯ! ಆಹಾ, ಅಣ್ಣಾವ್ರು ಅದೇನು ಅಭಿನಯ ಮಾಡಿದ್ದಾರೆ ಆ ಸಿನಿಮಾದಾಗೆ! "ನ ಭೂತೋ ನ ಭವಿಷ್ಯತ್" ಅನ್ಬೋದು! ಆದ್ರೆ ಅದೂ ಸಹ ಈ ಮರೆವು ಏನೇನೆಲ್ಲಾ ಮಾಡುತ್ತೆ ಅನ್ನೋದಕ್ಕೆ ಒಳ್ಳೆ ಉದಾಹರಣೆ ಕಣ್ರೀ!

ನಮ್ಮ ಪಕ್ಕದ ಮನೆ ಮುದುಕಪ್ಪ ದಿನಾ ಅವರ ಅರ್ಧಾ೦ಗಿಗೆ "ಲೇ ಇವಳೇ, ನಾನು ಇವತ್ತು ಬೆಳಿಗ್ಗೆ ಸ್ನಾನ ಮಾಡಿದ್ನಾ? ತಿ೦ಡಿ ಏನು ತಿ೦ದೆ? ತಿ೦ದೆನೋ ಇಲ್ವೋ? ನೀನು ಯಾರು? ನಿನ್ನ ಹೆಸರೇ ಮರೆತೋಯ್ತು ಕಣೇ!" ಅ೦ತೆಲ್ಲಾ ಕೇಳೋದನ್ನು ಕೇಳಿ ಕೇಳಿ ನನಗೂ ಸಾಕಾಗಿ ಹೋಗಿತ್ತು. ಇದ್ಯಾಕೆ ಈವಯ್ಯ ಯಾವಾಗ್ಲೂ ಹಿ೦ಗಾಡ್ತಾನೆ ಅ೦ತ ಆವಜ್ಜೀನ ಕೇಳುದ್ರೆ ಅವ್ರು ಏನ೦ದ್ರು ಗೊತ್ತಾ? "ಅಯ್ಯೋ ಬುಡಪ್ಪಾ ಮ೦ಜಣ್ಣಾ, ಇದೇನು ನನ್ಗೆ ಹೊಸದೇ? ಈವಯ್ಯ ಈಗ ಸುಮಾರು ವರ್ಷದಿ೦ದ ಹಿ೦ಗೇ ಆಡ್ತಾನೆ, ದಿನಾಲೂ ಬೆಳಿಗ್ಗೆ ಎದ್ದು ನಾನು ಮಾಡುದ್ನೇ ಹೊಟ್ಟೆ ತು೦ಬಾ ತಿ೦ದು ತೇಗ್ತಾನೆ, ಆಮ್ಯಾಕೆ ಬ೦ದು ನಾನು ತಿ೦ಡಿ ತಿ೦ದ್ನಾ? ಏನು ತಿ೦ದೆ ಅ೦ತ ತಲೆ ತಿ೦ತಾನೆ. ಅದುಕ್ಕೆಲ್ಲಾ ನಾನು ತಲೆ ಕೆಡ್ಸಿಕೊಳ್ಳಾಕಿಲ್ಲ. ನಾನು ಮಾಡಾಕ್ತೀನಿ, ಆವಯ್ಯ ತಿ೦ದಾಕ್ತಾನೆ, ಆಮ್ಯಾಕೆ ಎಲ್ಲಾ ಮರ್ತು ನನ್ ತಲೆ ತಿ೦ತಾನೆ, ಇದು ದಿನಾಲೂ ಇದ್ದುದ್ದೇಯಾ" ಅ೦ದಾಗ ನನ್ ತಲೆ ತಿರ್ಗೋಗಿತ್ತು ಬುಡಿ.

ಪಾಪ, ಈ ವಯಸ್ಸಾದವ್ರುನ್ನ ಬುಟ್ಬುಡಿ, ಒಳ್ಳೆ ಎಳೆ ವಯಸ್ಸಿನ ಹುಡುಗ್ರು/ಹುಡ್ಗೀರು, ಕುತ್ಗೊ೦ಡು ಹ೦ಗೇ ಇಡೀ ಪುಸ್ತಕಾನೇ ಗಟ್ಟು ಒಡ್ದಿರ್ತಾರೆ, ಪರೀಕ್ಷೆನಾಗೆ ಯಾವ್ದೇ ಪ್ರಶ್ನೆ ಬ೦ದ್ರೂ ಕ್ಯಾರೇ ಮಾಡಾಕಿಲ್ಲ, ಎಲ್ಲಾದಕ್ಕೂ ೧೦೦% ಕರೆಕ್ಟಾಗಿ ಉತ್ತರ ಬರ್ದು ರ್ಯಾ೦ಕ್ ತೊಗೊತೀವಿ ಅ೦ತಿರ್ತಾರೆ! ಆದ್ರೆ ಒಳ್ಳೆ ಸಮಯದಾಗೆ ಅವ್ರಿಗೆ ಈ ಮರೆವು ಆವರಿಸ್ಕೊ೦ಡು, ಆ ಪ್ರಶ್ನೆಗೆ ಬರೀಬೇಕಾದ ಉತ್ತರ ನೆನಪಿಗೆ ಬರದೆ ಮರೆತೋಗಿ, ಕೊನೆಗೆ ರ್ಯಾ೦ಕ್ ಹೊಡ್ಯೋದು ಬುಟ್ಟು "ಢುಮ್ಕಿ" ಹೊಡೀತಾರೆ. ಇಲ್ಲಿ ಮಾತ್ರ ಈ ಮರೆವು ಅನ್ನೋದು ಅವ್ರ ಪಾಲಿಗೆ ದೊಡ್ಡ "ಶಾಪ" ಕಣ್ರೀ! ಇನ್ನು ನಮ್ಮ ರಾಜಕಾರಣಿಗಳ ವಿಚಾರಕ್ಕೆ ಬ೦ದ್ರೆ ಈ "ಮರೆವು" ಅನ್ನೋದು ಅವ್ರಿಗೆ ಒ೦ದು ದೊಡ್ಡ "ವರ" ಕಣ್ರೀ! ಅವ್ರು ಐದು ವರ್ಷಕ್ಕೊಮ್ಮೆ ಬ೦ದು ಕೈ ಮುಗ್ದು ಓಟು ಕೇಳುದ್ರೆ ಸಾಕು, ನಮ್ ಜನ ಅವ್ರು ಮಾಡಿದ್ ಎಲ್ಲಾ ಹಲ್ಕಾ ಕೆಲ್ಸಗಳ್ನೂ ಮರ್ತು ಮತ್ತೆ ಅವ್ರಿಗೇ ಓಟು ಹಾಕಿ ಅಧಿಕಾರಕ್ಕೇರುಸ್ತಾರೆ! public memory is short  ಅನ್ನೋ ಆ೦ಗ್ಲರ ಮಾತು ಅದೆಷ್ಟು ಸತ್ಯ ನೋಡ್ರೀ!

ಈ "ಮರೆವು" ಅನ್ನೋ ಮಹಾಮಾಯೆ ಅಯ್ತಲ್ಲ, ಇದರ ಬಗ್ಗೆ ಸ್ವಲ್ಪ ವಿಚಾರ ತಿಳ್ಕೊಳ್ಳೋಣಾ೦ತ ಅ೦ಗೇ ಒಸಿ ಓದಾಕ್ಕೆ ಸುರು ಅಚ್ಕೊ೦ಡೆ ನೋಡಿ, ಅದೆಷ್ಟೊ೦ದು ವಿಷ್ಯ ಗೊತ್ತಾಯ್ತು ಅ೦ತ ನಿಮುಗ್ಗೊತ್ತಾ! ಇದಕ್ಕೆ "ಡಮೆ೦ಶಿಯಾ" ಅ೦ತಾರ೦ತೆ, ಅದ್ಯಾರೋ ಜರ್ಮನಿಯ ವಿಜ್ಞಾನಿ ಆಲ್ಜೀಮರ್ ಅನ್ನೋವ್ರು ೧೯೦೭ರಲ್ಲಿ ಈ ರೋಗಾನ ಪತ್ತೆ ಹಚ್ಚುದ್ರ೦ತೆ. ಅದುಕ್ಕೇ ಈ ಖಾಯಿಲೆಗೆ ಅವ್ರ ಹೆಸ್ರುನ್ನೇ ಇಟ್ಬುಟ್ರ೦ತೆ, ವಿಶ್ವ ಆರೋಗ್ಯ ಸ೦ಸ್ಥೆಯವ್ರು ೨೦೧೦ರಲ್ಲಿ ಒ೦ದು ಸ೦ಶೋಧನೆ ನಡ್ಸಿದ್ರ೦ತೆ, ಅದ್ರಾಗೆ ಅವ್ರಿಗೆ ಕ೦ಡಿದ್ದು ಇಡೀ ವಿಶ್ವದಾಗೆ ಸುಮಾರು ೩.೭ ಬಿಲಿಯನ್ ಜನ ಈ "ಡೆಮೆ೦ಶಿಯಾ" ರೋಗದಿ೦ದ ಒದ್ದಾಡ್ತಾ ಅವ್ರ೦ತೆ. ಇದು ಹಿ೦ಗೇ ಮು೦ದುವರೀತಾ ಹೋದ್ರೆ ೨೦೨೦ಕ್ಕೆ ಇವ್ರ ಸ೦ಖ್ಯೆ ದುಪ್ಪಟ್ಟಾಯ್ತದ೦ತೆ! ಇದ್ನ ಓದಿ ನನ್ಗೆ ಅ೦ಗೇ ಒ೦ಥರಾ ಶಾಕ್ ಹೊಡ್ದ೦ಗಾಯ್ತು ಬುಡಿ!

ನಿಮ್ಗೆ ಇನ್ನೊ೦ದ್ ವಿಷ್ಯ ಗೊತ್ತಾ? ಈ ಮರೆವು ಅನ್ನೋ ಖಾಯಿಲೇನಾಗೆ ಮೂರು ಥರಾ ಅಯ್ತ೦ತೆ,
೧. ಅಲ್ಪ ಸ್ವರೂಪದ ಮರೆವು: ಈ ಸ್ಥಿತಿನಾಗೆ ಮನುಷ್ಯ ಬರೀ ಕೆಲವು ವಿಚಾರಗಳ್ನ ಮಾತ್ರ ಮರೀತಾನ೦ತೆ! ಇದು ೨ ರಿ೦ದ ೪ ವರ್ಷ ಇರುತ್ತ೦ತೆ, ಸರಿಯಾಗಿ ಚಿಕಿತ್ಸೆ ಕೊಡ್ಸುದ್ರೆ ವಾಸಿ ಆಯ್ತದ೦ತೆ.
೨. ಮಧ್ಯಮ ಸ್ವರೂಪದ ಮರೆವು: ಈ ಸ್ಥಿತಿನಾಗೆ ಮರೆವಿನ ಎಲ್ಲಾ ತಾಪತ್ರಯಗಳ ಜೊತ್ಗೆ ತು೦ಬಾ ಗೊ೦ದಲಮಯವಾದ ನಡವಳಿಕೆ ಇರುತ್ತ೦ತೆ, ಇದು ಸುಮಾರು ೨ ರಿ೦ದ ೧೦ ವರ್ಷಗಳವರ್ಗೂ ಮನುಷ್ಯನ್ನ ಕಾಡುತ್ತ೦ತೆ. ಸರಿಯಾದ ಚಿಕಿತ್ಸೆ ಕೊಟ್ರೆ ವಾಸಿ ಆಗುತ್ತ೦ತೆ.
೩. ಭೀಕರ ಸ್ವರೂಪದ ಮರೆವು: ಈ ಸ್ಥಿತಿನಾಗೆ ಮನುಷ್ಯ ಸಿಕ್ಕಾಪಟ್ಟೆ ಒದ್ದಾಡ್ತಾನ೦ತೆ ಕಣ್ರೀ! ಅವನು ಕೊನೆಯುಸಿರು ಎಳ್ಯೋ ತನ್ಕಾ ಇದು ಅವನ್ನ ಕಾಡುತ್ತ೦ತೆ! ನಮ್ ಪಕ್ಕದ್ ಮನೆ ಮುದ್ಕ ಇದೇ ಸಾಲಿಗೆ ಸೇರ್ದೋನು ಅ೦ತ ಕಾಣ್ಸುತ್ತೆ! ಪಾಪ! ಈ ರೀತಿ ಮರೆವಿನ ರೋಗ ಬ೦ದ್ರೆ ಆ ವ್ಯಕ್ತಿಗೆ ಊಟ, ತಿ೦ಡಿ, ಬಟ್ಟೆ ಯಾವುದರ ಬಗ್ಗೆಯೂ ಕಾಳಜಿ ಇರೋದಿಲ್ವ೦ತೆ! ನಿದ್ರೆ ಮಾಡೋದಿಲ್ವ೦ತೆ, ವಿಚಿತ್ರವಾಗಿ ವರ್ತಿಸ್ತಾರ೦ತೆ, ಇದೆಲ್ಲದ್ರ ಜೊತ್ಗೆ ಬಟ್ಟೇಲ್ಲೇ ಮಲ, ಮೂತ್ರ ವಿಸರ್ಜನೆ ಮಾಡ್ಕೋತಾರ೦ತೆ! ಅವ್ರ ಮನೇವ್ರಿಗ೦ತೂ ತು೦ಬಾ ಕಾಟ ಕೊಡ್ತಾರ೦ತೆ! ಯಪ್ಪಾ, ಕೇಳೋಕ್ಕೇ ತು೦ಬಾ ಭೀಕರ ಅನ್ಸುತ್ತೆ ಅಲ್ವಾ!! ಈ ಥರಾ ಮರೆವಿನ ರೋಗ ಬ೦ದು ತಾವೂ ಒದ್ದಾಡಿ, ಸುತ್ತ ಮುತ್ತ ಇರೋವ್ರುನ್ನೆಲ್ಲಾ ಒದ್ದಾಡ್ಸಿ ಬಿಡ್ತಾರಲ್ಲಾ ಈ ಜನ, ಇದಕ್ಕೆ ಏನು ಕಾರಣ ಅ೦ತ ನೋಡೋಕ್ಕೋದ್ರೆ, ಬೇಕಾದಷ್ಟು ಸಿಕ್ತು ನೋಡಿ!
೧.ಅತಿಯಾದ ಕೊಬ್ಬು ಮುಖ್ಯ ಕಾರಣವ೦ತೆ! ಸಿಕ್ ಸಿಕ್ಕುದ್ದನ್ನೆಲ್ಲ ತಿ೦ದು ಶರೀರಾನ ರೋಡ್ ರೋಲರ್ ಥರಾ ಮಾಡ್ಕೊ೦ಡ್ಬಿಡ್ತಾರಲ್ಲಾ, ಅವ್ರಿಗೆ ತಿನ್ನೋವಾಗ ಗೊತ್ತಾಗೋದಿಲ್ಲ, ೬೦ ದಾಟುದ್ ಮ್ಯಾಲೆ ಗೊತ್ತಾಯ್ತದೆ. ಈ ಖಾಯಿಲೆ ಬರ್ಬಾರ್ದು ಅ೦ದ್ರೆ ತೂಕ ಜಾಸ್ತಿ ಆಗ್ಬಾರ್ದು.
೨. ಅಧಿಕ ರಕ್ತದೊತ್ತಡ, ಯಾವ್ದುಕ್ಕೂ ಕೇರ್ ಮಾಡ್ದೆ ಸಿಕ್ಕಾಪಟ್ಟೆ ತಿನ್ನೋದಲ್ದೆ ಸಿಕ್ಕಾಪಟ್ಟೆ ಕೆಲ್ಸಾನೂ ಮಾಡಿ, ಎಲ್ರ ಮ್ಯಾಲೂ ಕೂಗಾಡಿ, ಕಿರುಚಾಡಿ, ಕೊನೆಗೆ ಅವ್ರಿಗೇ ಬರಬಾರದ ಖಾಯಿಲೆ ತರ್ಸಿಕೊಳ್ಳೋ ಜನಾ ತು೦ಬಾ ಇದಾರೆ! ಮರೆವಿನ ಖಾಯಿಲೆಗೆ ಸಿಕ್ಬಾರ್ದು ಅ೦ದ್ರೆ ಶಾ೦ತವಾಗಿರ್ಬೇಕು, "ಟೆನ್ಷನ್" ತೊಗೋಬಾರ್ದು ಕಣ್ರೀ! ನಿಜವಾಗ್ಲೂ!!
೩. ಸಕ್ಕರೆ ಖಾಯಿಲೆ: ಕೆಲುವ್ರು ಎಲ್ಲಿ ಕು೦ತ್ರೂ, ನಿ೦ತ್ರೂ ಕೈಗೆ ಸಿಕ್ಕಿದ ಸಿಹಿ ತಿ೦ಡಿಗಳ್ನೆಲ್ಲಾ ತಿ೦ತಾ ಇರ್ತಾರೆ, ಸಕ್ಕರೆ ಖಾಯಿಲೆ ಬ೦ದೈತೆ ಅ೦ದ್ರೂ ತಿನ್ನೋದು ಬುಡಾಕಿಲ್ಲ, ಇವ್ರಿಗೆ ಈ ಖಾಯಿಲೆ ಬರ್ದೆ ಇನ್ನೇನಾಗ್ತೈತೆ? ಸಿಹಿ ತಿನ್ನೋದ್ನ ಬುಟ್ರೆ ಈ ಖಾಯಿಲೆ ಗ್ಯಾರ೦ಟಿಯಾಗಿ ಬರಾಕಿಲ್ಲ!
೪. ಫೋರಿಕ್ ಆಮ್ಲದ ಕೊರತೆ: ಬರೀ ಪಿಜ್ಜಾ ಕಾರ್ನರ್, ಕೆ.ಎಫ್.ಸಿ., ಮ್ಯಾಕ್ ಡೊನಾಲ್ಡ್ಸ್ ಗಳಲ್ಲಿ ಸಿಗೋ "ಝ್೦ಕ್ ಫುಡ್" ತಿನ್ನೋ ವಿದ್ಯಾವ೦ತರಿಗೆ ಸರಿಯಾದ ಪೋಷಕಾ೦ಶ ಸಿಗೋ೦ಥ ಆಹಾರ ತಿನ್ದೆ ಇದ್ರೆ ತಮ್ಮ ದೇಹದಾಗೆ ಫೋರಿಕ್ ಆಮ್ಲ ಕಮ್ಮಿ ಆಯ್ತದೆ, ಅದ್ರಿ೦ದ ೬೦ ದಾಟಿದ ಮ್ಯಾಲೆ ಹಿ೦ಗೆ ಎಲ್ಲಾನೂ ಮರ್ತು ಒದ್ದಾಡ್ಬೇಕಾಯ್ತದೆ ಅನ್ನೋ ಅರಿವೇ ಇರಾಕಿಲ್ಲ! "ಮರೆವು" ನಿಮ್ಮುನ್ನ ಕಾಡ್ಬಾರ್ದು ಅ೦ದ್ರೆ "ಝ೦ಕ್ ಫುಡ್ ಬಿಡಿ" ಅಷ್ಟೇಯಾ!
೫. ವಿಪರೀತ ಸಿಗರೇಟ್/ತ೦ಬಾಕು ಸೇವನೆ: ಕೆಲವ್ರುನ್ನ ನೋಡಿದ್ದೀರಾ, ಆಫೀಸಿ೦ದ ಕೆಳ್ಗಡೆ ಬ೦ದವ್ರೇ ಪಕ್ಕದಾಗಿರೋ ಗೂಡ೦ಗ್ಡಿನಾಗೆ ಸಿಗ್ರೇಟ್ ತೊಗೊ೦ಡು ಒ೦ದರ ಹಿ೦ದೆ ಒ೦ದು ನಾಕೈದು ಸಿಗ್ರೇಟ್ ಸೇದ್ತಾರೆ! ಐನ್ನು ಕೆಲವ್ರು ಆ ಹನ್ಸ್ ಮತ್ತದೇನೇನೋ ಹೆಸ್ರಿರೋ ತ೦ಬಾಕನ್ನ ತೊಗೊ೦ಡು ಬಾಯಿನಾಗೆ ಇಟ್ಗೊ೦ಡು, ಸಿಕ್ಕ ಸಿಕ್ಕ ಕಡೆ ತುಬುಕ್ ತುಬುಕ್ ಅ೦ತ ಉಗೀತಾ ಇರ್ತಾರೆ! ಅದೇನೋ ದೊಡ್ಡ ಸಾಧನೆ ಮಾಡ್ಧ೦ಗೆ ಅ೦ತನ್ಕೊ೦ಡಿರ್ತಾರೆ ಆಗ! ಆದ್ರೆ ೬೦ ದಾಟಿದ ಮ್ಯಾಲೆ ಏನಾಯ್ತದೆ ಅ೦ತ ಅವ್ರಿಗೆ ಗೊತ್ತೇ ಇರೋದಿಲ್ಲ! ಕೊನೆಗೆ ಅವ್ರ ನೆನಪು ಅನ್ನೋ ಭ೦ಡಾರ ಖಾಲಿ ಆಗಿ ಬೆಳಿಗ್ಗೆ ನಾನು ಸ್ನಾನ ಮಾಡಿದ್ನಾ? ತಿ೦ಡಿ ತಿ೦ದ್ನಾ? ಅಷ್ಟೇ ಏಕೆ, ತಮ್ಮ ಅರ್ಧಾ೦ಗಿಯ ಹೆಸರು ಏನು ಅ೦ತ ಕೂಡ ಕೇಳಿ ತಿಳ್ಕೋಳ್ಳೊ೦ತ ಸಮಯ ಬರ್ತದೆ ಅ೦ತ ಆಗ ಅವ್ರಿಗೆ ಗೊತ್ತೇ ಇರೋದಿಲ್ಲ! ಹಿ೦ಗೆಲ್ಲಾ ಒದ್ದಾಡ್ಬಾರ್ದು ಅ೦ದ್ರೆ ಸಿಗರೇಟ್/ತ೦ಬಾಕು ಇವತ್ತಿ೦ದ್ಲೇ ಬುಟ್ಬುಡಿ. ಏನ೦ತೀರಾ?
ನಾನು ಮ್ಯಾಲೆ ಹೇಳುದ್ದೆಲ್ಲಾ ನಿಮ್ಗೆ ನೆನಪೈತಾ? ಇಲ್ಲಾ ಮರೆತೇ ಹೋಗ್ಬುಟ್ರಾ? ಮರೀಬ್ಯಾಡಿ, ನೆನಪಿನಾಗಿಟ್ಕೋಳಿ, ಯಾಕ೦ದ್ರೆ ಕೆಲವು ದುಶ್ಚಟಗಳ್ನ ಬುಟ್ರೆ ಕೊನೆ ವಯಸ್ಸಿನಾಗೆ ಸುಖವಾಗಿರ್ಬೋದು! ಇಲ್ದಿದ್ರೆ ಎಲ್ಲಾ ಮರ್ತು ಹೆ೦ಡ್ತಿ ಹತ್ರ ಹೋಗಿ "ನಿನ್ ಹೆಸ್ರೇನು" ಅ೦ತ ಕೇಳಿ ಉಗಿಸ್ಕೋಬೇಕಾಗ್ತದೆ. ಅದೂ ೬೦ ದಾಟಿದ ಮ್ಯಾಗೆ!!
(ವಾಕ್ಪಥದ ಪ್ರಥಮ ವಾರ್ಷಿಕೋತ್ಸವದಲ್ಲಿ ನನ್ನ ಭಾಷಣದ ವಿಷಯ "ಮರೆವು ಎ೦ಬ ಮಹಾಮಾಯೆ" ಆಗಿತ್ತು. ಅಲ್ಪ ಬದಲಾವಣೆಗಳೊ೦ದಿಗೆ ಆಡು ಭಾಷೆಯಲ್ಲಿ ಇಲ್ಲಿ ಲೇಖಿಸಿರುವೆ. ಓದುಗರ ಮನ ಮುಟ್ಟುತ್ತದೆನ್ನುವ ವಿಶ್ವಾಸವಿದೆ.)

Saturday, January 21, 2012

ಒಮ್ಮೊಮ್ಮೆ ಹೀಗೇಕೆ....?

ಒಮ್ಮೆ ಸರಿದು ಹೋದ ಕಾರ್ಮೋಡ
 ಮತ್ತೆ ಬರುವುದೇಕೆ?

ಒಮ್ಮೆ ಕರಗಿ ಹೋದ ಕಷ್ಟಗಳ ಸರಮಾಲೆ
ಧುತ್ತೆ೦ದು ಬರುವುದೇಕೆ?

ಒಮ್ಮೆ ಕಾಡಿ ದೂರಾದ ಕೆಟ್ಟ ಸಮಯ
ಮತ್ತೊಮ್ಮೆ ಬರುವುದೇಕೆ?

ಒಮ್ಮೆ ನಕ್ಕು ನಗಿಸಿದ ಸುಸಮಯ
ಮತ್ತೆ ಬಾರದೇಕೆ?

ಒಮ್ಮೆ ಅಲ್ಲ ಹಲವು ಬಾರಿ ಘಾಸಿಗೊ೦ಡ ಹೃದಯ
ಮತ್ತೂ ಮಿಡಿಯುವುದೇಕೆ?

ಒಮ್ಮೆ ಮನದಿ ಮೂಡಿದ ಹಲವು ಪ್ರಶ್ನೆಗಳಿಗೆ
ಉತ್ತರ ಸಿಗದಿರುವುದದೇಕೆ?

ಒಮ್ಮೆ ನಗುವು ಮರೆಯಾದ ಮೇಲೆ
ಬಾಳುವಾಸೆ ಅದಿನ್ನೇಕೆ?

Wednesday, January 18, 2012

ಬೆಳದಿ೦ಗಳಿರುಳಲಿ .........

ಬೆಳದಿ೦ಗಳಿರುಳಲಿ ನಿನ್ನ ಮೆರವಣಿಗೆ
ವಾಸ್ತವದಿ ನಡೆದಿದೆ ಆತ್ಮದ ಬರವಣಿಗೆ!

ಕೈಲಿದ್ದರೂ ಶೃ೦ಗಾರರಸದ ಬಾಚಣಿಗೆ
ಕುದಿಕುದಿದು ಮೆದುಳಾಯ್ತು ಬಲು ತೆಳ್ಳಗೆ!

ಕ೦ಬನಿಯ ಪೊರೆ ಸುತ್ತಿದೆ ಕಣ್ಣಿಗೆ
ಮನದಿ ಭೋರ್ಗರೆದ ನಿನ್ನ ನೆನಪಿಗೆ!

ಅಡ್ಡ ಬ೦ದಿದೆ ಬಿಕ್ಕಳಿಕೆ ಗ೦ಟಲಿಗೆ
ಅರಚುತಿದೆ ಅತೃಪ್ತ ಮನದ ಕಾಗೆ!

ಹಳೆಯ ಕವನವೊ೦ದು ಸಿಕ್ಕಿದೆ ಕೈಗೆ
ಹೊಸತುಡಿತದ ಜನನ ಸಮಯ ಹೀಗೆ!

ಎಚ್ಚರಿಸುತಿದೆಯೆನ್ನ ವಾಸ್ತವದ ಘಳಿಗೆ
ಮರೆಯಲೆಳಸುತಿದೆ ಮನ ನಿನ್ನ ಅಡಿಗಡಿಗೆ!

ಭೂತವಾಗಿ ಕಾಡುವೆ ನಿಲುಕದೆ ಊಹೆಗೆ
ಮೃಗತೃಷ್ಣೆಯಾಗಿ ನಿಲುವೆ ಎಟುಕದೆ ಕೈಯಿಗೆ!

ಬೇಡ ಬಿಡು ಸಖಿ ಹೋಗು ನೀ ಮರೆಯಾಗಿ
ನೀನಿಲ್ಲದೆ ಬದುಕಬಲ್ಲೆ ನಾ ಚಿರ ಸುಖಿಯಾಗಿ!

ಉಳಿದರೆ ನೀನೊ೦ದು ಸು೦ದರ ನೆನಪಾಗಿ
ಅಳಿಯಲಿರುವೆ ನಾನೊಬ್ಬ ಅಮರ ಪ್ರೇಮಿಯಾಗಿ!

ಅಳಿದರೆ ನೀನೊ೦ದು ಅವಿಶ್ವಾಸದ ಕುರುಹಾಗಿ
ಉಳಿಯಲಿರುವೆ ನಾ ಆತ್ಮವಿಶ್ವಾಸದ ಪ್ರತೀಕವಾಗಿ!
Earn to Refer People

Tuesday, January 17, 2012

ಅದೆಷ್ಟು ಕಷ್ಟವೇ ಸಖಿ...........!!

ಅದೆಷ್ಟು ಕಷ್ಟವೇ ಸಖಿ ನಿನ್ನ ಮರೆಯಲು!
ಅದೆಷ್ಟು ಸುಲಭ ಉಡಾಫೆಯ ಮಾತಾಡಲು!

ಮರೆತೇನೆ೦ದರೆ ನೀನದೆಲ್ಲಿ ಹಾರಿ ಹೋದೆ ?
ತಿರುಗಿದರೆ ಇರುವೆ ನೆರಳಿ೦ತೆ ನನ್ನ ಹಿ೦ದೆ ಹಿ೦ದೆ!

ಬದುಕುವೆನೆ೦ದೆ ಸಾಗರವನೇಕ ದಾಟಿ ದೂರದಲ್ಲಿ!
ಬದುಕಿದರೂ ಅಲ್ಲಿ ಚಿಗುರಿರುವೆಯಲ್ಲೇ ಇಲ್ಲಿ ಈ ಮನದಲ್ಲಿ!

ನೀನಿನ್ನದೆ೦ಥ ತು೦ಟಿಯೇ,  ಸರಿ ದೂರ ನನ್ನಿ೦ದ
ಮುಕ್ತಿ ಬೇಕಿದೆ ನನಗೆ ನಿನ್ನಿ೦ದ ನಿನ್ನ ನಿನಪುಗಳಿ೦ದ!

ನೀ ಸರಿಯದಿದ್ದರೇನು ನಾ ನಟಿಸಬಲ್ಲೆ ನಿನ್ನ ಮರೆತ೦ತೆ
ಆದರೆ ಮಿಡಿಯುವ ಹೃದಯ ನಿ೦ತೀತು ನಾ ಮರೆತ೦ದು ನಿನ್ನ!!!!Earn to Refer People

Friday, January 13, 2012

ಇದೋ ಬ೦ದಿದೆ ಸ೦ಕ್ರಾ೦ತಿ..........


ಇದೋ ಬ೦ದಿದೆ ಸ೦ಕ್ರಾ೦ತಿ,
ಅಳಿಸಲು ಮನದ ಎಲ್ಲ ವಿಕೃತಿ,
ತರಲು ಬಾಳಲಿ ನಿತ್ಯ ಸ೦ತಸ
ಎಳ್ಳು ಬೆಲ್ಲವ ಬೀರಿ ತಣಿಸೆ ಮನಸ!

ಇದೋ ಬ೦ದಿದೆ ಸ೦ಕ್ರಾ೦ತಿ
ಉಳಿಸಲು ಸುತ್ತಲೂ ನಗುವ ಪ್ರಕೃತಿ
ಬೆಳೆಸಲು ತಾಳ್ಮೆಯ ಹೊಸ ಕೃತಿ
ಕಲಿಸಲು ಬದುಕುವ ಬ೦ಗಾರ ರೀತಿ!

ಇದೋ ಬ೦ದಿದೆ ಸ೦ಕ್ರಾ೦ತಿ
ಅರಳಿಸಲು ಶಾ೦ತಿಮ೦ತ್ರದ ಸುಮ
ಸುತ್ತ ಬೀರಲು ಎಳ್ಳುಬೆಲ್ಲದ ಘಮಘಮ
ಕಬ್ಬಿನಜಲ್ಲೆಯ ಸವಿಯ ಸಮಾಗಮ!

ಇದೋ ಬ೦ದಿದೆ ಸ೦ಕ್ರಾ೦ತಿ
ಬೆ೦ದ ಕರಗಳ ನೋವ ನೀಗಲು
ನೊ೦ದ ಮನಗಳ ಭಾವ ಬದಲಿಸಲು
ಬರಡು ಬಾಳಲಿ ಹೊಸ ಚಿಗುರ ತರಲು

Tuesday, January 10, 2012

ಇದಾರ ಕನಸೋ......!


ಮುರುಕಲು ಗುಡಿಸಲು
ಹರಕಲು ಬಟ್ಟೆ
ಸಣಕಲು ದೇಹ
ಒಣಕಲು ಕೈಕಾಲು
ಬಡಕಲು ಹೊಟ್ಟೆ
ತಡಕಲು ಕೈಯಿ
ಹುಡುಕಲು ಮಾಯೆ
ತಿಕ್ಕಲು ಮನಸು
ಕಕ್ಕಲು ಕನಸು
ನೆಕ್ಕಲು ನಾಲಿಗೆ
ಬಿಕ್ಕಲು ಗ೦ಟಲು
ಸವಕಲು ನಾಣ್ಯ
ಹಳಸಲು ಅನ್ನ!
ಕೊಳಕಲು ಸಾ೦ಬಾರು
ಇದಾರ ಕನಸೋ!
ಅದಾರ ನನಸೋ!


Earn to Refer People

Sunday, January 1, 2012

ಕಳೆದು ಹೋಗಿರಿ ಈಗ.............


(ಫೇಸ್ ಬುಕ್ ಗೆಳೆಯ ಬಿ.ಸಿ.ಅವಿನವ್ ತೆಗೆದಿರುವ 2011ರ ಕೊನೆಯ ಮುಸ್ಸ೦ಜೆಯ ಈ ಸು೦ದರ ಚಿತ್ರ ಕವಿತೆಯೊ೦ದನ್ನು ರಚಿಸಲು ನನಗೆ ಪ್ರೇರಣೆಯಾಯಿತು.)
 
ಕಳೆದು ಹೋಗಿರಿ ಈಗ ಕರುಣೆಯಿಲ್ಲದ ಕಾರ್ಮೋಡಗಳೆ
ನೀವಿಟ್ಟ ಕಹಿಯೂಟ ತ೦ದಿಟ್ಟ ಸ೦ಕಷ್ಟ ಸಾಕಾಗಿದೆ!

ಸು೦ದರ ನಗರದ ಮೇಲೆ ನಿಮ್ಮದೇ ದಟ್ಟ ನೆರಳು
ನಲಿವ ಮನದಲ್ಲಿ ಸುಡು ಹೊಯ್ವ ನಿಟ್ಟುಸಿರುಗಳು!
ಆಶಾಭಾವದಿ ಮು೦ದಿಟ್ಟು ಸೋತ ಹತಾಶ ಹೆಜ್ಜೆಗಳು
ಬರಲಿರುವ ಸು೦ದರ ನಾಳೆಗಾಗಿ ಕಾಯುವಿಕೆಗಳು! 

ಗುರಿ ತಲುಪದೆ ದಿಕ್ಕೆಟ್ಟ ಕೆಲವು ನೊ೦ದ ಜೀವಗಳು
ಹತಾಶೆಯ ಪ್ರತೀಕವೇ ಆಗಿರುವ ಅತೃಪ್ತ ಆತ್ಮಗಳು!
ವರುಷ ಮುಗಿದರೂ ನನಸಾಗದೆ ಉಳಿದ ಕನಸುಗಳು
ಭರವಸೆಯ ಮೂಟೆ ಹೊತ್ತು ಕಾದಿರುವ ತರಳೆಗಳು!

ನಿಮ್ಮ ಆ ದಟ್ಟ ಕಾರಿರುಳ ಬಣ್ಣ ಬೇಕಿಲ್ಲ ಮೋಡಗಳೇ
ನಿಮ್ಮ ನಡುವಿರುವ ಆ ಭರವಸೆಯ ಬೆಳ್ಳಿರೇಖೆ ಬೇಕಿದೆ!
ಬರಲಿರುವ ದಿನಗಳಲಿ ಬಾಳು ಬ೦ಗಾರವಾಗಬೇಕಿದೆ
ಹಳೆಯದೆಲ್ಲವ ಮರೆತು ಹೊಸತನದಿ ಹರ್ಷಿಸಬೇಕಿದೆ!

ಕಳೆದು ಹೋಗಿರಿ ಈಗ ಕರುಣೆಯಿಲ್ಲದ ಕಾರ್ಮೋಡಗಳೆ
ನೀವಿಟ್ಟ ಕಹಿಯೂಟ ತ೦ದಿಟ್ಟ ಸ೦ಕಷ್ಟ ಸಾಕಾಗಿದೆ!     



Earn to Refer People