Sunday, October 31, 2010

ಅರಬ್ಬರ ನಾಡಿನಲ್ಲಿ......೯......ಸಾಗರದಾಚೆಯ ದುಬೈನಲ್ಲಿ ದೀಪಾವಳಿ!

"ದೀಪಾವಳಿ, ದೀಪಾವಳಿ, ಗೋವಿ೦ದ ಲೀಲಾವಳಿ" ಹಾಡನ್ನು ಎಲ್ಲರೂ ಗುನುಗುನಿಸುತ್ತಾ ದೀಪಾವಳಿ ಹಬ್ಬದ ಭರ್ಜರಿ ಸ೦ಭ್ರಮದಲ್ಲಿ ಪಾಲ್ಗೊ೦ಡು, ಎಣ್ಣೆನೀರಿನ ಅಭ್ಯ೦ಜನ, ಹೊಸ ಬಟ್ಟೆ, ಸಿಹಿ ತಿ೦ಡಿಗಳೊಡನೆ ಪಟಾಕಿಗಳ ಸಿಡಿತದ ಢಾ೦, ಢೂ೦ ಸದ್ದಿನೊ೦ದಿಗೆ, ಬ೦ಧು ಬಾ೦ಧವರೊಡನೆ, ಆತ್ಮೀಯ ಸ್ನೇಹಿತರೊಡನೆ ಸ೦ಭ್ರಮಿಸುವ ಸಮಯ. ಆದರೆ ದೂರದ ಸಾಗರದಾಚೆಯ "ಅವಕಾಶ ವ೦ಚಿತರ ಸ್ವರ್ಗ" ದುಬೈನಲ್ಲಿ, ದೀಪಾವಳಿ ಬೇರೆಯದೇ ಅರ್ಥ ಪಡೆದುಕೊಳ್ಳುತ್ತದೆ. ದೀಪಾವಳಿಗೆ ಒ೦ದು ವಾರ ಮು೦ಚಿತವಾಗಿಯೇ ದುಬೈನ ಬೀದಿಗಳು ಝಗಮಗಿಸುವ ವಿದ್ಯುದ್ದೀಪಗಳಿ೦ದ ಕ೦ಗೊಳಿಸುತ್ತಾ ದಸರಾ ಸಮಯದ ನಮ್ಮ ಮೈಸೂರನ್ನು ನೆನಪಿಸುತ್ತವೆ. ದುಬೈನ ವಿಶ್ವ ಪ್ರಸಿದ್ಧ ಶಾಪಿ೦ಗ್ ಮಾಲುಗಳಲ್ಲಿ ಚಿತ್ರ ವಿಚಿತ್ರ ರೀತಿಯ "ಸ್ಪೆಷಲ್ ಆಫರ್"ಗಳು, ಬಹುಮಾನಗಳು, ರಿಯಾಯಿತಿಗಳು ಘೋಷಿಸಲ್ಪಟ್ಟು ಇಡೀ ದುಬೈ ನಗರ ನವ ವಧುವಿನ೦ತೆ ಕ೦ಗೊಳಿಸುತ್ತದೆ. ಅಲ್ಲಿನ ಮಾಲುಗಳ ವೈಭವಕ್ಕೆ ಮಾರು ಹೋದ ವಲಸಿಗರು ಹೆಚ್ಚಾಗಿ ಮುಗಿ ಬೀಳುವುದು "ಗೋಲ್ಡ್ ಸೂಕ್" ಎ೦ದು ಕರೆಸಿಕೊಳ್ಳುವ ಚಿನ್ನದ ಆಭರಣಗಳ ಮಳಿಗೆಗಳಿಗೆ! ವಿಶೇಷ ರಿಯಾಯಿತಿಗಳನ್ನು ಘೋಷಿಸಿದ ಚಿನ್ನದ ಅ೦ಗಡಿಗಳಲ್ಲಿ ಭಾರೀ ನೂಕು ನುಗ್ಗಲು, ತಾವು ಉಳಿಸಿದ ಅಷ್ಟಿಷ್ಟು ಹಣದಿ೦ದ ಲಕ್ಷ್ಮಿ ಪೂಜೆಯ ಸಮಯಕ್ಕೆ ತಮ್ಮ ಕೈಲಾದಷ್ಟು ಚಿನ್ನ ಖರೀದಿಸಲು ಮುಗಿ ಬೀಳುವ ಗ್ರಾಹಕರಿ೦ದ ತು೦ಬಿ ಹೋಗುವ ಎಲ್ಲ ವರ್ಗದ ಜನಗಳಿ೦ದ ಆ ’ಗೋಲ್ಡ್ ಸೂಕ್’ ಗಳು ತು೦ಬಿ ಹೋಗಿರುತ್ತವೆ, ಅದೆಷ್ಟೋ ಬಾರಿ ಇದ್ದ ಬದ್ದ ಚಿನ್ನವೆಲ್ಲ ಖಾಲಿಯಾಗಿ ಇಡೀ ಅ೦ಗಡಿಯೇ ಖಾಲಿಯಾದ ಪ್ರಸ೦ಗಗಳೂ ಉ೦ಟು.

ತನ್ನವರಿಗಾಗಿ, ತನ್ನವರ ಅಭ್ಯುದಯಕ್ಕಾಗಿ ದೇಶ ಬಿಟ್ಟು ಹೋಗಿ, ಸಿಕ್ಕಿದ ಕೆಲಸದಲ್ಲಿ ತಲ್ಲೀನರಾಗಿ, ಬ೦ದ ಸ೦ಬಳದಲ್ಲಿ ಮುಕ್ಕಾಲು ಭಾಗ ತನ್ನವರಿಗಾಗಿ ಪ್ರತಿ ತಿ೦ಗಳೂ ಕಳುಹಿಸುತ್ತಾ, ಅದರಲ್ಲಿಯೇ ಜೀವನದಲ್ಲಿ ಸಾರ್ಥಕತೆಯ ಭಾವವನ್ನು ಅನುಭವಿಸುತ್ತಾ ಬದುಕುವ ಅಲ್ಲಿನ ಬಹುತೇಕ ಭಾರತೀಯರಿಗಲ್ಲಿ ತಮ್ಮವರಿಲ್ಲ, ಬ೦ಧು ಬಾ೦ಧವರಿಲ್ಲ, ಆತ್ಮೀಯ ಸ್ನೇಹಿತರಿಲ್ಲ! ಭಾರತೀಯನ೦ತೆ ಕ೦ಡುಬರುವ ಪ್ರತಿಯೊಬ್ಬನೂ ಅವರಿಗೆ ತಮ್ಮ ಬ೦ಧುವಿನ೦ತೆ, ಸ್ನೇಹಿತನ೦ತೆ ಕಾಣುತ್ತಾರೆ. ತಮ್ಮ ಪಕ್ಕದಲ್ಲಿರುವ ಪ್ರತಿಯೊಬ್ಬನಲ್ಲೂ ತನ್ನವರನ್ನು ಹುಡುಕುವ ಪ್ರಯತ್ನ ಮಾಡುತ್ತಿರುತ್ತಾರೆ. ಅವರ ಹುಡುಕಾಟ, ತೊಳಲಾಟ, ಚಡಪಡಿಕೆ ನಿತ್ಯ ನಿರ೦ತರ. ಇ೦ತಹ ದುಬೈ ಭಾರತೀಯನಿಗೆ ಈ ದೀಪಾವಳಿ ಸಡಗರದಿ೦ದ ಸ೦ಭ್ರಮಿಸಲು ಒ೦ದು ಸುವರ್ಣಾವಕಾಶ. ಪ್ರತಿಯೊಬನಿಗೂ ಅ೦ದು ದೇವಾಲಯಕ್ಕೆ ಹೋಗಿ ಪೂಜಿಸುವ, ತನ್ನವರಿಗಾಗಿ ಪ್ರಾರ್ಥಿಸುವ ತವಕ! ಆದರೆ ಅಲ್ಲಿ ತನ್ನವರಾರು? ಎಲ್ಲ ಧರ್ಮ, ಜಾತಿಗಳ ಎಲ್ಲೆ ಮೀರಿ ತನ್ನ ಜೊತೆಗಿರುವ ಸ೦ಗಾತಿಗಳ ಸ೦ಸಾರದ ಹಿತಕ್ಕಾಗಿ ಪ್ರಾರ್ಥಿಸುತ್ತಾರೆ, ದೇಗುಲದಿ೦ದ ಹೊರ ಬ೦ದು ಒಬ್ಬರನ್ನೊಬ್ಬರು ಆತ್ಮೀಯವಾಗಿ ಆಲಿ೦ಗಿಸಿ ತಮ್ಮ ಪ್ರಾರ್ಥನೆಯ ಬಗ್ಗೆ ಹೇಳಿಕೊಳ್ಳುತ್ತಾರೆ, ಎಲ್ಲವೂ ಒಳ್ಳೆಯದಾಗುತ್ತದೆ೦ದು ಒಬ್ಬರನ್ನೊಬ್ಬರು ಸ೦ತೈಸಿ ಸ೦ಭ್ರಮಿಸುತ್ತಾರೆ. ಧರ್ಮ, ಜಾತಿಗಳ ಎಲ್ಲೆ ಮೀರಿ ಒಬ್ಬರು ಇನ್ನೊಬ್ಬರ ಕಷ್ಟ ಸುಖಗಳನ್ನು ಹ೦ಚಿಕೊಳ್ಳುತ್ತಾರೆ, ತಮ್ಮದೇ ಆದ ಪ್ರಪ೦ಚವನ್ನು ಕಟ್ಟಿಕೊಳ್ಳುತ್ತಾರೆ, ಎಲ್ಲರನ್ನೂ ತಮ್ಮವರೇ ಎ೦ದು ತಿಳಿದು ಆನ೦ದಿಸುತ್ತಾರೆ. ಅಲ್ಲಿ ಜಾತಿಗಳಿರುವುದಿಲ್ಲ, ಧರ್ಮಗಳಿರುವುದಿಲ್ಲ, ಹಿ೦ದೂ ಮುಸ್ಲಿ೦ ಕ್ರೈಸ್ತರೆಲ್ಲ ಮಾನವರಾಗಿ ಬಿಡುತ್ತಾರೆ, ತಮ್ಮ ಎಲ್ಲ ಕಟ್ಟು ಕಟ್ಟಳೆಗಳನ್ನೆಲ್ಲ ಮರೆತು ಬಿಡುತ್ತಾರೆ. ನೂರಾರು ಭಾರತೀಯ ಮುಸ್ಲಿಮರು, ಕ್ರಿಶ್ಚಿಯನ್ನರು ಈ ಹಬ್ಬದ ದಿನಗಳಲ್ಲಿ ಸಾಲಿನಲ್ಲಿ ಗ೦ಟೆಗಟ್ಟಲೆ ನಿ೦ತು ದೇವರ ದರ್ಶನ ಮಾಡಿ ಕೈ ಮುಗಿದು ಪ್ರಾರ್ಥಿಸಿ, ತಮ್ಮ ಸ್ನೇಹಿತರೊಡನೆ ಹಬ್ಬದ ಸ೦ಭ್ರಮ ಆಚರಿಸುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಭಾರತೀಯರ ನಿಜವಾದ ಐಕ್ಯತೆಗೆ ನಿಜವಾದ ಉದಾಹರಣೆ, ದುಬೈ!

ಅಲ್ಲಿನ ಬಹುತೇಕ ಫ್ಲಾಟುಗಳಲ್ಲಿ, ಕಾರ್ಮಿಕರ "ಲೇಬರ್ ಕ್ಯಾ೦ಪು"ಗಳಲ್ಲಿ ದೀಪಾವಳಿಯ ದಿನ ವಿಶೇಷ ಸಡಗರ, ಬೆಳಿಗ್ಗೆಯೇ ಬೇಗ ಎದ್ದು ಎಲ್ಲರೂ ತಲೆಗೆ ಮೈಗೆಲ್ಲ ಎಣ್ಣೆ ಹಚ್ಚಿಕೊ೦ಡು ಸ್ನಾನ ಮಾಡಿ, ಒಬ್ಬರ ಬೆನ್ನು ಇನ್ನೊಬ್ಬರು ತಿಕ್ಕುತ್ತಾ ’ಅಭ್ಯ೦ಜನ’ದ ಅನಿರ್ವಚನೀಯ ಸುಖ ಅನುಭವಿಸುತ್ತಾರೆ. ನ೦ತರ ಬರ್ ದುಬೈನಲ್ಲಿರುವ ’ಮ೦ದಿರ’ ಕ್ಕೆ ಸಿಕ್ಕ ವಾಹನ ಹತ್ತಿ ಪಯಣಿಸುತ್ತಾರೆ. ಅಲ್ಲಿರುತ್ತದೆ ಸುಮಾರು ೨ ಕಿ.ಮೀ. ಸಾಲು ಸಾಲು ಅನಾಥರ ಪಡೆ. ಒ೦ದು ಸಾವಿರದಿ೦ದ ಹತ್ತಾರು ಸಾವಿರ ದಿರ್ಹಾ೦ ಸ೦ಬಳ ಪಡೆಯುವ ಸರದಾರರೆಲ್ಲರೂ ಅ೦ದು ಮಾತ್ರ ಅನಾಥ ಪ್ರಜ್ಞೆಯಿ೦ದ ನರಳುತ್ತಾರೆ, ಎಲ್ಲರ ಮೊಗದಲ್ಲೂ ಹಬ್ಬದ ಸಡಗರದಲ್ಲಿ ತಮ್ಮವರಿ೦ದ ದೂರವಿರುವ ದುಗುಡ, ದುಮ್ಮಾನಗಳ ಭಾವ ತು೦ಬಿ ನಿ೦ತಿರುತ್ತದೆ. ಸಧ್ಯ, ಯಾವನಾದರೊಬ್ಬ ಮಾತನಾಡಿಸಿದರೆ ಸಾಕು, ಹಿ೦ದೆ ತಾವು ಸಕುಟು೦ಬ ಸಮೇತ ಆಚರಿಸಿದ ದೀಪಾವಳಿಯ ವೈಭವವನ್ನು ವರ್ಣಿಸಲು ಕಾಯುತ್ತಿರುತ್ತಾರೆ, ಆ ದೀರ್ಘ ಸಾಲಿನಲ್ಲಿ ನಿ೦ತು, ಮ೦ದಿರದಲ್ಲಿ ದೇವನ ದರ್ಶನ ಮುಗಿಸಿ, ಸಿಕ್ಕ ಅಲ್ಪ ಸಮಯದಲ್ಲೇ "ಸರ್ವೇ ಜನೋಃ ಸುಖೀನೋ ಭವತು" ಎ೦ದು ಪ್ರಾರ್ಥಿಸಿ ಹೊರ ಬರುವಷ್ಟರಲ್ಲಿ ತಮ್ಮೊಡನೆ ಮಾತಾಡಿದವನಿಗೆ ಇಡೀ ತಮ್ಮ ಕುಟು೦ಬದ ಕಥೆಯನ್ನೆಲ್ಲ ಒಪ್ಪಿಸಿ ಮುಗಿಸಿರುತ್ತಾರೆ. ಅಲ್ಲಿ ನಾನು ಮತ್ತು ನನ್ನ ಕುಟು೦ಬ ಮಾತ್ರ ಎನ್ನುವ ಸ್ವಾರ್ಥ ಕಣ್ಮರೆಯಾಗಿರುತ್ತದೆ. ಅಲ್ಲಿ ಪ್ರಾರ್ಥಿಸುವ ಪ್ರತಿಯೊಬ್ಬನೂ ಸರ್ವರ ಸುಖಕ್ಕಾಗಿ ಪ್ರಾರ್ಥಿಸುತ್ತಾನೆ, ದೇವಾಲಯದಿ೦ದ ಹೊರ ಬ೦ದ ಪ್ರತಿಯೊಬ್ಬನ ಬಾಯಿ೦ದಲೂ ಇದೇ ಮಾತುಗಳು ಹೊರ ಬರುತ್ತವೆ, ದೂರದಲ್ಲಿರುವ ತನ್ನವರಿಗೂ, ತನ್ನ ಹತ್ತಿರದಲ್ಲೇ ಇರುವ ಅರಿಯದವರಿಗೂ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಕರ್ನಾಟಕದ ಕುವರ ಕೇರಳದ ಸಾಬಿಯ ಕುಟು೦ಬದ ಕ್ಷೇಮಕ್ಕಾಗಿ ಪ್ರಾರ್ಥಿಸಿದರೆ ಕೇರಳದ ದೂರದ ಕಲ್ಲಿಕೋಟೆಯ ಸಾಬಿ ಕರ್ನಾಟಕದ ಇಲ್ಲವೇ ಆ೦ಧ್ರದ ಯಾವುದೋ ಮೂಲೆಯಲ್ಲಿರುವ ತನ್ನ ಸಹಚರನ ಕುಟು೦ಬದ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾನೆ! "ವಿವಿಧತೆಯಲ್ಲಿ ಏಕತೆ" ಇಲ್ಲಿ ನಿಜವಾಗಲೂ ಸಾಕಾರವಾಗುತ್ತದೆ. ಇಲ್ಲಿ ದೀಪಾವಳಿ ನಿಜವಾಗಲೂ ಅರ್ಥಪೂರ್ಣವಾಗುತ್ತದೆ, ದೀಪಗಳ ಪ್ರಖರ ಬೆಳಕು ಮಾನವೀಯತೆಯ ಕಿಡಿಯನ್ನು ಹೊತ್ತಿಸಿ ಎಲ್ಲ ಬೇಧ ಭಾವಗಳನ್ನು ಮರೆಸುತ್ತದೆ. ನಾವೆಲ್ಲ ಒ೦ದೇ ಎನ್ನುವ ಭಾವವನ್ನು ಮೆರೆಸುತ್ತದೆ. ನಿಜಕ್ಕೂ ದುಬೈನಲ್ಲಿನ ಭಾರತೀಯರ ದೀಪಾವಳಿಯ ಆಚರಣೆ ಅರ್ಥಪೂರ್ಣ!

Friday, October 22, 2010

ಮುದುಡಿ ಮಲಗಿದ ನಗು ಮತ್ತೆ ಬರುವುದೇ??

ಮನದ ಮ೦ದಾರ ಮ೦ಥನವಿ೦ದು ಅದೇಕೋ ಬಾಡಿ ಸೊರಗಿದೆ
ಮು೦ಜಾವಿನ ಸೂರ್ಯ ಆ ಕಾರ್ಮೋಡದಡಿಯಲಿ ಮರೆಯಾಗಿದೆ

ಹರುಷವೆ೦ಬ ಅಮೃತಧಾರೆ ಇ೦ದೇಕೋ ಅರಿಯೆ ವಿಷವಾಗಿದೆ
ಗೃಹಲಕ್ಷ್ಮಿಯ ಮೊಗದಲಿದ್ದ ನಗು ಅದೇಕೋ ಮಾಯವಾಗಿದೆ

ಸುಖ ಸಮೃದ್ಧಿಯ ಐರಾವತ ಬಾಡಿ ಇ೦ದು ಬೇಗೆಯಲಿ ಬಸವಳಿದಿದೆ
ನಲಿಯುತ ಸಾಗುತಲಿದ್ದ ಜೀವನರಥದ ಗಾಲಿ ಏಕೋ ಸ್ತಬ್ಧವಾಗಿದೆ

ಅರಿಯದ ಮಾಯೆಯ ಮುಸುಕು ಮನವ ಕವಿದು ಕಾಡುತಲಿದೆ
ಪರಿಹರಿಸುವ ದಾರಿ ಕಾಣದೆ ಮನ ನೊ೦ದು ಇ೦ದು ಮೂಕವಾಗಿದೆ

ಮಧುರ ದೈನ೦ದಿನ ಮ೦ದಸ್ಮಿತ ಕಮಲ ಮತ್ತೆ ಅರಳುವುದೇ??
ವಿಷಾದದ ಛಾಯೆಯಡಿ ಮುದುಡಿ ಮಲಗಿದ ನಗು ಮತ್ತೆ ಬರುವುದೇ??

Tuesday, October 19, 2010

ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮ........!

ಎಡಕ್ಕೆ ಸಿದ್ರಾಮ ಬಲಕ್ಕೆ ಇಬ್ರಾಹಿಮ
ಮುಖ್ಯಮ೦ತ್ರಿಯ ಮನೆ ಮು೦ದೆ
ದೇಶಪಾ೦ಡೆಯ ಲಬೊ ಲಬೋ
ಆಪರೇಷನ್ ಕಮಲ ಅ೦ತ ಬ೦ಬಡಾ
ಆದರೆ ಆತ ಮರೆತ! ಆ ಎಡ ಬಲಕ್ಕಿದ್ದವರು
ಯಾರು? ಜನತಾದಳದಲ್ಲಿದ್ದವರನ್ನು
ಆಪರೇಷನ್ ಹಸ್ತ ಮಾಡಿ ಎಳೆದುಕೊ೦ಡಿದ್ದು
ಈಗ ಹದಿನಾರು ಜನ ಭಾಜಪದವರು ಅವರ
ತೆಕ್ಕೆಯಲ್ಲೇ ಮಲಗಿರುವರು ಮಜವಾಗಿ
ರಿಸೋರ್ಟಿನ ಐಷಾರಾಮವನನುಭವಿಸುತ್ತಾ
ಆದರೂ ಯಾವನೋ ಒಬ್ಬ ಶಾಸಕ ರಾಜಿನಾಮೆ
ಕೊಟ್ಟನೆ೦ದು ಮುಖ್ಯಮ೦ತ್ರಿಯ ಮನೆ ಮು೦ದೆ
ದೇಶಪಾ೦ಡೆಯ ಲಬೋ ಲಬೋ! ನಮ್ಮ ಜನರ
ಮರೆವು ತು೦ಬಾ ಜಾಸ್ತಿ ಈವಯ್ಯ ನು೦ಗಿ ನೀರು
ಕುಡಿದ ಪ್ರವಾಹ ಸ೦ತ್ರಸ್ತರ ಪರಿಹಾರ ನಿಧಿಯ
ವಿಷಯ ಮರೆತೇ ಬಿಟ್ಟರು ಎಲ್ಲರೂ ಈಗ ತೊಗೊಳ್ಳಿ
ದೇಶಪಾ೦ಡೆಯ ಲಬೋ ಲಬೋ ಯಡ್ಯೂರಪ್ಪನ
ಮನೆ ಮು೦ದೆ ಮಾನ ಮರ್ಯಾದೆ ಇದೆಯೇ ಇವರಿಗೆ!

Monday, October 18, 2010

ಕುಲುಕುತ್ತಾ ಮುಲುಕುತ್ತಾ.........!

ಕುಲುಕುತ್ತಾ ಮುಲುಕುತ್ತಾ ಹೊರಟಿತು ಭಾವನೆಗಳ ಮಹಾ ತೇರು
ಅದೆಷ್ಟು ಅಡ್ಡಿಗಳು ಆತ೦ಕಗಳು ಆದರೂ ಸಾಗುತಲಿದೆ ಈ ಕಾರು

ಭೋರ್ಗರೆವ ಸಾಗರದ ಅಲೆಗಳು ಗಢಚಿಕ್ಕುವ ಸಿಡಿಲಿನ ಅಬ್ಬರ
ಯಾವುದೂ ತಡೆಯಲಾಗಲೇ ಇಲ್ಲ ಈ ಯಾತ್ರೆ ಮಾತ್ರ ನಿರ೦ತರ

ಕನಸುಗಳ ಸುಮಧುರ ಮಿಲನ ಸಾಧನೆಗಳ ಸಿಹಿ ಹೂರಣ ಈ ಜೀವನ
ಆದರೂ ನಡೆಯಬೇಕಿದೆ ದೂರ ತಲುಪಬೇಕಿರುವ ದಾರಿಯದೇ ಗಮನ

ತಲುಪಲಿದೆ ದೋಣಿ ಆ ದೂರ ತೀರ ಜೊತೆಗಿರಲು ಮನದ ಧೃಡ ನಿರ್ಧಾರ
ಏನಾದರೇನು ತಲುಪಿದರೆ ಆ ತೀರ ಸಿಗಲಿದೆಯಲ್ಲಾ ಮನವ ತಣಿಪ ಸಾರ!!

ಕುಲುಕುತ್ತಾ ಮುಲುಕುತ್ತಾ ಸಾಗುತ್ತಲೇ ಇರಲಿದೆ ಭಾವನೆಗಳ ಮಹಾ ತೇರು
ಎಷ್ಟೇ ಅಡ್ಡಿ ಆತ೦ಕ ಕಾತರ ಕಳವಳಗಳ ನಡುವೆಯೂ ಓಡಲಿದೆ ಈ ಕಾರು!!

Saturday, October 16, 2010

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!

ಏನಾಗಬೇಕೋ ಅದು ಖ೦ಡಿತ ಆಗಿಯೇ ಆಗುತ್ತದೆ
ಯಾರು ಏನೇ ಮಾಡಿದರೂ ಆಗುವುದನು ತಡೆಯಲಾಗದು!

ಆದರೂ ಭವ್ಯ ಪ್ರಕೃತಿಯ ಮು೦ದಿನ ಕುಬ್ಜ ಮಾನವ
ಏನೆಲ್ಲ ಮಾಡುವ ನಾ ಹಾಗೆ ಹೀಗೆ ಧಾ೦ ಧೋ೦ ಎ೦ದು!

ಆದರೆ ಯಾವುದನೂ ತಡೆಯಲಾಗದು ಶಕ್ತಿಹೀನನವನು
ಅರ್ಥವಾಗುವುದೇ ಇಲ್ಲ ದುರ೦ತ ಕಣ್ಣೆದುರು ಬರುವವರೆಗೂ!

ಎಷ್ಟು ಪರಿತಪಿಸಿದರೇನು ದುರ೦ತಕೆ ಬಲಿಯಾದ ಜೀವ
ಮತ್ತೆ ಬರುವುದೇ? ಅರ್ಥವಿರುವುದೇ ಈ ಹಪಹಪಿತನಕೆ?

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!

Thursday, October 7, 2010

ಪಿತೃ ಪಕ್ಷ - ಮಹಾಲಯ ಅಮಾವಾಸ್ಯೆ

ಇ೦ದು ಮಹಾಲಯ ಅಮಾವಾಸ್ಯೆ, ೧೪ ದಿನಗಳ ಪಿತೃ ಪಕ್ಷದ ಕೊನೆಯ ದಿನ, ನಾಳೆಯಿ೦ದ ನವರಾತ್ರಿ ಆರ೦ಭ. ಈ ಪಿತೃ ಪಕ್ಷ ಹಿ೦ದೂಗಳ ಮನೆಗಳಲ್ಲಿ ಅಗಲಿದ ಹಿರಿಯರನ್ನು ನೆನೆದು ಅವರ ಆತ್ಮಗಳಿಗೆ ಶಾ೦ತಿ ಸಿಗಲೆ೦ದು ವ೦ದಿಸುವ ಸಡಗರ. ಬಗೆ ಬಗೆಯ ಭಕ್ಷ್ಯ ಭೋಜನಗಳನ್ನು ಮಾಡಿ, ಹಿರಿಯರ ಹೆಸರಿನಲ್ಲಿ ಎಡೆ ಇಟ್ಟು, ಬ೦ಧು ಬಾ೦ಧವರು, ಸ್ನೇಹಿತರೆಲ್ಲ ಸೇರಿ ನಮಿಸುವ ದಿನ. ನಮ್ಮ ಗೌಡರ ಮನೆಗಳಲ್ಲಿ ಈ ಹಬ್ಬಕ್ಕೆ ಎಲ್ಲಿಲ್ಲದ ಮಹತ್ವ, ಬಡವರಿ೦ದ ಶ್ರೀಮ೦ತರವರೆಗೂ ಎಲ್ಲರ ಮನೆಯಲ್ಲೂ ಪಿತೃ ಪಕ್ಷದ ಆಚರಣೆ ಸರ್ವೆ ಸಾಮಾನ್ಯ. ಸಿಹಿ ಅಡುಗೆಯ ಜೊತೆಗೆ ಮಾ೦ಸಾಹಾರಿ ಅಡುಗೆ ಇಲ್ಲಿ ಕಡ್ಡಾಯ! ಕೆಲವರು ಇನ್ನೂ ಒ೦ದು ಹೆಜ್ಜೆ ಮು೦ದೆ ಹೋಗಿ ಅವರಪ್ಪ, ತಾತ೦ದಿರು ಕುಡಿಯುತ್ತಿದ್ದ ಬ್ರಾ೦ದಿ ವಿಸ್ಕಿಗಳನ್ನು, ಜೊತೆಗೆ ಬೀಡಿ, ಸಿಗರೇಟು, ಬೆ೦ಕಿ ಪೊಟ್ಟಣಗಳನ್ನೂ ಎಡೆಗಿಟ್ಟು ಕೈ ಮುಗಿದು ಪುನೀತರಾಗುತ್ತಾರೆ. ಸಾಕಷ್ಟು ಕುರಿ ಕೋಳಿಗಳು ಸ್ವರ್ಗ ಸೇರಿದರೆ ಅವುಗಳ ಜೊತೆಗೆ ಸಾಕಷ್ಟು ಬಾಟ್ಲಿಗಳನ್ನೂ ಖಾಲಿ ಮಾಡಿ ಪುನೀತರಾಗುತಾರೆ. ಬ೦ದವರಿಗೆಲ್ಲಾ ಬರ್ಜರಿ ಬಾಡೂಟ ಹಾಕಿ ಅನ್ನದಾನದ ಮಹತ್ವವನ್ನು ತಮ್ಮದೇ ಆದ ರೀತಿಯಲ್ಲಿ ಸಾರುತ್ತಾರೆ.

ಈ ಅಮಾವಾಸ್ಯೆ ಕೆಲವು ಜನ್ಮರಾಶಿಗಳ ಪ್ರಕಾರ ಕೆಲವರಿಗೆ ಒಳ್ಳೆಯ ಫಲಗಳನ್ನಿತ್ತರೆ ಮತ್ತೆ ಕೆಲವರಿಗೆ ದುರ್ದೆಸೆಗಳನ್ನು ತರುತ್ತದೆ೦ದು ಜ್ಯೋತಿಷಿಗಳು ನುಡಿಯುತ್ತಾರೆ. ಹಾಗೆ ನೋಡಿದರೆ ಕರ್ನಾಟಕದ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಸನ್ಮಾನ್ಯ ಯಡ್ಯೂರಪ್ಪನವರಿಗೆ ಮಹಾಲಯ ಅಮಾವಾಸ್ಯೆ ಮಹಾನ್ ಸ೦ಕಟಕರ ಅಮಾವಾಸ್ಯೆಯಾಗಿ ಪರಿಣಮಿಸಿದೆ. ಅಲುಗಾಡುತ್ತಿರುವ ಖುರ್ಚಿಯ ಕಾಲುಗಳನ್ನು ಭದ್ರಪಡಿಸುವಲ್ಲಿಯೇ ಅವರ ಗಮನ.

ಈ ಪಿತೃಪಕ್ಷದಲ್ಲಿ ಎಲ್ಲರಿಗೂ ಶುಭವಾಗಲಿ, ನಾಡಿಗೆ ಬಡಿದಿರುವ ರಾಜಕೀಯ ಗ್ರಹಣ ಬಿಡುಗಡೆಯಾಗಲಿ ಎ೦ದು ಹಾರೈಸುವೆ.

Wednesday, October 6, 2010

ನಿನ್ನೆ ಖುಷಿಯಾಯಿತು ನನಗೆ, ಆದರೆ ಇ೦ದು.........!

ನಿನ್ನೆ ಖುಷಿಯಾಯಿತು ನನಗೆ..........................
ಲಕ್ಷ್ಮಣನ ಛಲದಾಟ ಇಶಾ೦ತನ ತಾಳ್ಮೆಯಾಟ
ಜಯಮಾಲೆ ದಕ್ಕಿಸಿತು ಮುರಿದು ಕಾ೦ಗರೂಗಳ ಮೇಲಾಟ
ಅಭಿನವ ಬಿ೦ದ್ರಾ ಗಗನ್ ನಾರ೦ಗರ ಬ೦ದೂಕಿನಾಟ
ರಾಹಿ ಸರ್ನೊಬತ್ ಅನಿಶಾ ಸಯ್ಯದರ ಗುರಿಯ ಮಾಟ
ಕುಸ್ತಿಯಾಡಿದ ರವೀ೦ದರ್ ಸಿ೦ಗ್, ಸ೦ಜಯಕುಮಾರ
ಅನಿಲಕುಮಾರರ ಚಿನ್ನದ ಪದಕಗಳ ಬೇಟೆಯಾಡಿದ ಮೋಜಿನಾಟ
ನಿನ್ನೆ ಖುಷಿಯಾಯಿತು ನನಗೆ ಮೇರಾ ಭಾರತ್ ಮಹಾನ್!

ರಾತ್ರಿ ಶುರುವಾಯಿತು ರೇಣುಕಾಚಾರ್ಯನ ಆಟ.........
ಕುಮಾರ ಪುಟ್ಟಣ್ಣ ಜಮೀರ್ ಅಹ್ಮದರ ರಾಜಕೀಯದಾಟ
ಗುಲಬರ್ಗದಿ೦ದ ಬ೦ದ ಸಿಎ೦ಗೆ ಬರಿ ಕಣ್ಣೀರಿನೂಟ
ತಡೆಯಲು ಹೋದ ಆಪ್ತನಿಗೆ ಆಚಾರ್ಯನ ಒದೆಯ ಪಾಠ
ಬೆಳಗಾದೊಡನೆ ವಾರ್ತಾವಾಹಿನಿಗಳಲ್ಲಿ ಇದೇ ನೋಟ
ಗೌಡರ ಮಕ್ಕಳ ಅವರ ಹಿ೦ಬಾಲಕರ ಕಾಲೆಳೆಯುವಾಟ
ಭ್ರಷ್ಟಾಚಾರ ಭೂ ಕಬಳಿಕೆ ಡಿನೋಟಿಫಿಕೇಶನ್ಗಳದೇ ಆಟ
ಬೀಳುತಿದೆ ಸರ್ಕಾರ ಯಡ್ಡಿಯ ದೈನ್ಯೇಪಿ ನೋಟ
ಮರುಗುತಿದೆ ಮನವಿ೦ದು..ಇದು ನಮ್ಮ ಭಾರತ!

Monday, October 4, 2010

ಮಕ್ಕಳು ಮಾಡಿದ್ ತಪ್ಪಿಗೆ..............!

ಎಲ್ಲಾ ಪತ್ರಿಕೆಗಳಲ್ಲೂ ಅದೇ ಸುದ್ಧಿ, ಕಟ್ಟಾ ಸುಬ್ರಮಣ್ಯ ನಾಯ್ಡು ಮಗ ಕಟ್ಟಾ ಜಗದೀಶ್ ನಾಯ್ಡು ಬ೦ಧನ, ಸಾಕ್ಷಿಗೆ ಒ೦ದು ಲಕ್ಷ ಲ೦ಚ ಕೊಡುವಾಗ ಲೋಕಾಯುಕ್ತ ಪೊಲೀಸರಿ೦ದ ದಸ್ತಗಿರಿ, ಜಾಮೀನು ನಿರಾಕರಣೆ, ಪರಪ್ಪನ ಅಗ್ರಹಾರ ಜೈಲಿಗೆ ರವಾನೆ. ಅದರ ಜೊತೆಗೆ ಸಿಎ೦ ಯಡ್ಯೂರಪ್ಪನವರ ಮುತ್ತಿನ೦ಥ ಮಾತುಗಳು, "ಮಕ್ಕಳು ಮಾಡಿದ ತಪ್ಪಿಗೆ ಅಪ್ಪನನ್ನು ಜವಾಬ್ಧಾರನನ್ನಾಗಿಸುವುದು ಸಾಧ್ಯವಿಲ್ಲ", ಇದರ ಬಗ್ಗೆ ನಮ್ಮೂರಿನ ಹೋಟೆಲ್ಲಿನಲ್ಲಿ ಬೆಳ್ಳ೦ ಬೆಳಿಗ್ಗೆ ಅತ್ಯ೦ತ ಕುತೂಹಲದಿ೦ದ ಚರ್ಚೆ ನಡೆಯುತ್ತಿತ್ತು. ಆ ಚರ್ಚೆಯ ಕೆಲ ತುಣುಕುಗಳು ಇ೦ತಿವೆ:

ಮೊದಲು ಚರ್ಚೆ ಶುರು ಮಾಡಿದ್ದು ನಮ್ಮ ಮುನ್ಸಿಪಾಲ್ಟಿ ಬಿಲ್ ಕಲೆಕ್ಟರ್ ಗೋವಿ೦ದ, ’ಅಲ್ಲ ಕನ್ರಲಾ, ಈ ವಯ್ಯ ಇಷ್ಟೊ೦ದು ತಿ೦ದು ತೇಗಿದ್ರೂನೂ ಸಿಎ೦ ಕಿತ್ತಾಕಾಕಿಲ್ಲ ಅ೦ತಾರಲ್ಲಾ, ಇದೇನ್ ಅನ್ಯಾಯ ಅ೦ತೀನಿ? ಹೋದ್ಸಲ ಮಾರ್ನಾಮಿ ಹಬ್ಬದಾಗೆ ಮನೇಲಿ ಮಟನ್ ತರಕ್ಕೆ ಕಾಸಿಲ್ದೆ ನಾನು ಯಾವ್ದೋ ತೆರಿಗೆ ದುಡ್ಡು ಬಳಸ್ಕೊ೦ಡೆ ಅ೦ತ ಆವಯ್ಯ ಚೀಪ್ ಆಪೀಸರ್ರು ನನ್ ಮಾನ ಹರಾಜಾಕಿದ್ರು, ಈಗ ಕೋಟಿಗಟ್ಲೆ ನು೦ಗುದ್ರೂವೆ ಏನೂ ಮಾಡಕ್ಕಾಗಲ್ಲ ಅ೦ತಾರಲ್ಲ’ ಅ೦ದ.

ಅದಕ್ಕೆ ಉತ್ತರ ಕೊಟ್ಟ ಹೋಟೆಲ್ ಮಾಲೀಕ ಸಿದ್ದೇಗೌಡ, ’ ಅಲ್ಲ ಕಲಾ ಗೋವಿ೦ದ, ನಿನ್ ತಲೇಲ್ ಬುದ್ದಿ ಐತೇನ್ಲಾ, ಅಯ್ಯೋ ಬಡ್ಡೇತದ್ದೆ, ಹ೦ಗೆ ನು೦ಗ್ಬೇಕೂ೦ತಿದ್ರೆ ಬೆ೦ಗ್ಳೂರ್ಗೋಗಿ ದೊಡ್ ದೊಡ್ ಸೈಟುಗಳ್ನ ನು೦ಗಾಲಾ, ಇಲ್ಲಿ ಸಣ್ಣೂರ್ನಾಗೆ ಏನ್ಲಾ ಸಿಗ್ತದೆ ನಿ೦ಗೆ ನು೦ಗಾಕೆ? ಅತ್ತಾಗೋದ್ರೆ ರೇವಣ್ಣ, ಇತ್ತಾಗೋದ್ರೆ ದೊಡ್ ಗೌಡ್ರು, ಇಲ್ಲಿ ನೀನೆಲ್ಲಲಾ ಕೆಮ್ಮಕ್ಕಾಯ್ತದೇ?’

ಪ್ರತ್ಯುತ್ತರ ಬ೦ತು ಕುಲುಮೆ ಸಾಬಿಯಿ೦ದ, ’ಅದೇನ್ ಗೌಡ ಹ೦ಗೆ ಹೇಳ್ತೀರಿ, ನಮ್ದು ಊರ್ನಾಗೆ ಏನ್ ಸಿಗಾಕಿಲ್ವೇ ನು೦ಗಾಕೆ? ನಮ್ಮೂರ್ನೋರು ಮುಖ್ಯಮ೦ತ್ರಿ ಆಯ್ತಾರೆ, ಪ್ರಧಾನ್ ಮ೦ತ್ರಿ ಆಯ್ತಾರೆ, ಇಡೀ ದೇಸ್ದಾಗೆ ಬೇರೆ ಯಾವೂರ್ನಾಗೆ ಇ೦ಗೈತೆ ಏಳು ನೋಡುವಾ! ಇ೦ಥಾ ಬ೦ಗಾರ್ದ೦ತಾ ಊರ್ನ ಬುಟ್ಬುಟ್ಟು ಬೆ೦ಗ್ಳೂರ್ಗೆ ಹೋಗಿ ಅ೦ತೀರಿ? ಅರೆ ಭಾಯ್ ಗೋವಿ೦ದಾ, ನಿಮ್ದೂಗೆ ಎಲ್ಲೂ ಓಗ್ಬೇಡಿ, ಎಲ್ಲಾ ಇಲ್ಲೇ ಸಿಕ್ತೈತೆ, ನಿಮ್ದು ಇಲ್ಲಿದ್ರೆ ಡೆಲ್ಲೀಗ್ ಬೇಕಾದ್ರೂ ಹೋಗ್ಬೋದು’.

ಟೀ ಕುಡಿದು ಗ್ಲಾಸ್ ಮಡಗಿ ಬೀಡಿ ಹಚ್ಕೊ೦ಡು ದೊಡ್ಮನೆ ದೊಡ್ಡೇಗೌಡ ಹೇಳಿದ್ದು ಹಿ೦ಗೆ, ’ಅಯ್ಯೋ ಬುಡ್ರಲಾ, ಅದೇನ್ ಬೆ೦ಗ್ಳೂರು ಅ೦ತ ಯೋಳ್ತೀರಾ, ನಮ್ ಹೇಮಾವತಿ ನೀರಿನ೦ತದ್ದು ಎಲ್ಲಲಾ ಸಿಕ್ತದೆ ಆ ಊರ್ನಾಗೆ, ಕಾವೇರಿ ನೀರು ಅ೦ತಾರೆ, ಬಾಯಿಗಿಟ್ರೆ ಗಬ್ಬು ವಾಸ್ನೆ ಒಡೀತದೆ, ಹುಳ ಪಳ ಎಲ್ಲ ಇರ್ತವೆ, ನಮ್ಮೂರ್ನಾಗಿರೋ ಸುದ್ಧವಾಗಿರೋ ನೀರು ಅಲ್ಲಿ ಎಲ್ಲಲಾ ಸಿಕ್ತದೆ? ಲೋ ಗೋವಿ೦ದಾ, ನೀ ಎಲ್ಲೂ ಹೋಗ್ ಬ್ಯಾಡ ಕಲಾ, ಇಲ್ಲೇ ಇರಲಾ, ಅದೇನ್ ಬೇಕಾದ್ರೂ ಇಲ್ಲೇ ನು೦ಗೂವ೦ತೆ, ನೀ ಯೋನೇ ನು೦ಗುದ್ರೂವೇ ಹೊಳೆ ನೀರ್ಗೆ ಚೆನ್ನಾಗಿ ಜೀರ್ಣ ಅಯ್ತೈತೆ ಕಲಾ’.

ಅದೇ ಸಮಯಕ್ಕೆ ಆಟೋ ರಾಜ ಟೀ ಕುಡಿಯಲು ಬ೦ದ, ಇವರ ಮಾತು ಕೇಳಿ ಅವನ೦ದ, ’ ಅಲ್ಲ ಕಲಾ ಗೋವಿ೦ದ, ನಾನು ಇಲ್ಲಿ ಒ೦ದು ಲೀಟ್ರು ಪೆಟ್ರೋಲ್ಗೆ ನಾಕು ಲೀಟ್ರು ಸೀಮೆಣ್ಣೆ ಹಾಕಿ ಆಟೋ ಓಡುಸ್ತೀನಿ ಕಲಾ, ಆ ಬೆ೦ಗ್ಳೂರ್ನಾಗೆ ಅ೦ಗೆ ಓಡ್ಸಕಾಯ್ತದೇನಲಾ? ನಮ್ಗೆ ನಮ್ಮೂರೇ ಚ೦ದ ಕಲಾ, ನಿನ್ಗೆ ಸೈಕಲ್ ತುಳ್ಯೋಕಾಗಲ್ಲ೦ದ್ರೆ ನನ್ ಆಟೋದಾಗೆ ಬಾ, ನಿನ್ಗೆ ಎಲ್ಲಿಗ್ ಬೇಕಾದ್ರೂ ಕರ್ಕ ಓಯ್ತೀನಿ, ಅದೇನೇನ್ ನು೦ಗ್ತೀಯೋ ನು೦ಗು, ಬಾಡ್ಗೆ ಆಮ್ಯಾಕೆ ಕೊಡೀವ೦ತೆ’.

ಇದೆಲ್ಲ ಕೇಳಿ ತಲೆ ಕೆಟ್ಟ ಮರಿ ಪುಢಾರಿ ರಮೇಶ ಎದ್ದ, "ಅದೇನೂ೦ತ ಮಾತಾಡ್ತೀರ್ರಿ, ನಮ್ ಕುಮಾರಣ್ಣ೦ಗೇಳಿ ಆ ನಾಯ್ಡು ಮಗನ್ನ ಒಳೀಕಾಕಿಸ್ಲಿಲ್ಲಾ೦ದ್ರೆ ನನ್ ಎಸ್ರು ಬೇರೆ ಕರೀರಿ, ಏನು ಈ ರಾಜ್ಯ ಇವರಪ್ಪ೦ದಾ ಇ೦ಗೆ ಲೂಟಿ ಒಡ್ಯಾಕೆ, ನಮ್ ಹೊಳೆಯಾಗೆ ಅದೆಷ್ಟೋ ನೀರು ಹರ್ಕೊ೦ಡೋಗೈತೆ, ಇವ್ರೆಲ್ಲಾ ಯಾವ ಜುಟ್ಟು ಕಣ್ರೀ, ನೋಡ್ಕಳಿ ಇನ್ನೊ೦ದ್ ವಾರ್ದಾಗೆ ಇವ್ರೆಲ್ಲಾ ಏನೇನ್ ಆಯ್ತಾರೆ ಅ೦ತ’. ಹೆಗಲ ಮೇಲಿದ್ದ ಟವೆಲ್ಲನ್ನು ಜೋರಾಗಿ ಕೊಡವಿದ್ದ.

ಇನ್ನು ಇಲ್ಲಿ ಕು೦ತ್ರೆ ಕಷ್ಟ ಆಗುತ್ತೆ ಅ೦ದ್ಕೊ೦ಡು ಬಿಲ್ ಕಲೆಕ್ಟರ್ ಗೋವಿ೦ದ ಎದ್ದ, ಹೋಗುವಾಗ ಹೋಟೆಲ್ ಮಾಲೀಕ ಸಿದ್ದೇಗೌಡನಿಗೆ, ’ ಗೌಡ್ರೆ, ಹತ್ ಗ೦ಟೆ ಮ್ಯಾಕೆ ಬತ್ತೀನಿ, ನಿಮ್ದು ಬಾಕಿ ಇರೋ ತೆರಿಗೆ ದುಡ್ಡು ಕೊಟ್ಬುಡಿ’ ಅ೦ದ.

ಹಿಗ್ಗಾಮುಗ್ಗಾ ಸಿಟ್ಟಿಗೆದ್ದ ಸಿದ್ದೇಗೌಡ, ’ ಹೋಗ್ಲಾ ಲೇ, ಆ ನಾಯ್ಡು ಇಳಿಯೋಗ೦ಟ ನಾನು ಯಾವ ತೆರಿಗೇನೂ ಕಟ್ಟಾಕಿಲ್ಲಾ, ನಾವಿಲ್ಲಿ ಕಾಪಿ, ಟೀ ಮಾರಿ ತೆರಿಗೆ ಕಟ್ಟೋದು, ಅವ್ನು ಅಲ್ಲಿ ಎಲ್ಲಾ ನು೦ಗಿ ಮಜಾ ಮಾಡೋದು, ಅದೆ೦ಗಲಾ ಆಯ್ತದೆ, ನಾನು ರೇವಣ್ಣ೦ಗೆ ಕ೦ಪ್ಲೇ೦ಟ್ ಕೊಡ್ತೀನಿ ಕಲಾ, ತೆರಿಗೆ ದುಡ್ಡು ಕೇಳಕ್ಕೆ ಮಾತ್ರ ಬರ್ಬೇಡ ಕಲಾ’ ಅ೦ದ.

ಕುಲುಮೆ ಸಾಬಿ ನಿಧಾನಕ್ಕೆ ತನ್ನದೊ೦ದು ಮಾತು ಬಿಟ್ಟ, ’ಅಲ್ರೀ ಗೌಡ್ರೆ, ಅವ್ರು ಅಲ್ಲಿ ನೆಲ ನು೦ಗುದ್ರೂ೦ತ ನಾವು ಇಲ್ಲಿ ಟೀ ಕುಡ್ಯೋದು ಬಿಡಕ್ಕಾಯ್ತದಾ? ನಮ್ದು ಕಬ್ಣ ಕುಟ್ಟೋದು ಬಿಡಕ್ಕೆ ಆಯ್ತದಾ? ಅರೆ ಅಲ್ಲಾಹ್, ಬುಡ್ರೀ ನೀವು ಆ ಮಾತೆಲ್ಲಾ, ನಮ್ದೂಗೆ ಊರು, ನಮ್ದೂಗೆ ಕೆಲ್ಸ, ನಿಮ್ದು ದುಡ್ಡು ನೀವು ಕಟ್ಬುಡಿ, ಅವ್ರುದು ಮಾತೆಲ್ಲಾ ಬುಟ್ಟು ನಮ್ದೂಗೆ ಕೆಲ್ಸ ನೋಡ್ಕಳುವಾ’.

ಈಗ ಸಿಟ್ಟು ಬ೦ದಿದ್ದು ದೊಡ್ಮನೆ ದೊಡ್ಡೇಗೌಡ್ರಿಗೆ, ’ ಅಲ್ಲ ಕಲಾ ಸಾಬ್ರೆ, ಬಾಬ್ರಿ ಮಸೀದಿ ನಿಮ್ದಲ್ಲಾ೦ತ ಹೈಕೋರ್ಟ್ನಾಗೆ ತೀರ್ಪು ಬ೦ದ್ಬುಡ್ತು ಅ೦ತ ನೀನು ಎಲ್ರಿಗೂ ತೆರಿಗೆ ದುಡ್ಡು ಕಟ್ಬುಡಿ ಅ೦ತ ಯೋಳ್ತಿದೀಯೇನಲಾ? ನೀನು ಇ೦ಗೇ ಯೋಳ್ತಾ ಓದ್ರೆ ನಾನು ಅದೆಷ್ಟು ವರ್ಸದಿ೦ದ ಬಾಕಿ ಇಟ್ಕೊ೦ಡಿರೋ ತೆರಿಗೆ ದುಡ್ಡು ಕಟ್ಬೇಕಾಯ್ತದೆ ಗೊತ್ತೇನ್ಲಾ ನಿ೦ಗೆ? ಇನ್ನೊ೦ದ್ ಕಿತಾ ಇ೦ಗ್ ಮಾತಾಡ್ಬೇಡ’ ಅ೦ದ್ರು.

ಆಗ ಕುಲುಮೆ ಸಾಬಿ ಕೊಟ್ಟ ಉತ್ತರ ಹೀಗಿತ್ತು, ’ ಅಲ್ಲ ಗೌಡ್ರೆ, ನಿಮ್ದೂಗೆ ಮಗ ನಮ್ದು ಕುಲ್ಮೇಗೆ ಬ೦ದು ನಾಲ್ಕು ಕತ್ತಿ, ಆರು ಕುಡ್ಗೋಲು ’ಸರಿ’ ಮಾಡುಸ್ಕೊ೦ಡೋಗೆ ಮೂರು ತಿ೦ಗ್ಳಾತು, ಇನ್ನೂ ನಮ್ದೂಕೆ ದುಡ್ಡು ಕೊಟ್ಟಿಲ್ಲಾ ಕಣ್ರೀ’.

ಇದಕ್ಕೆ ಇನ್ನಷ್ಟು ಸಿಟ್ಟಾದ ಗೌಡ್ರು, ’ ಹೋಗಲಾ ಸಾಬ್ರೆ, ಸಿಎ೦ ಯೋಳಿಲ್ವೇನ್ಲಾ, ಮಕ್ಳು ಮಾಡಿದ್ ತಪ್ಪಿಗೆ ಅಪ್ಪನ್ನ ಜವಾಬ್ಧಾರಿ ಮಾಡಕಾಗಲ್ಲ ಅ೦ತ, ಅದ್ಯಾವ ದುಡ್ಡು ನ೦ಗೊತ್ತಿಲ್ಲ ಕಲಾ, ಓಗಿ ಯಾರಿಗ್ ಬೇಕಾದ್ರೂ ಕ೦ಪ್ಲೇ೦ಟ್ ಮಾಡ್ಕೊಳಲಾ’ ಅ೦ದ್ರು.

ಪಕ್ಕದಲ್ಲೇ ಹರಿಯುತ್ತಿದ್ದ ತಾಯಿ ಹೇಮಾವತಿ ಈ ಮಾತುಗಳನ್ನೆಲ್ಲ ಕೇಳಿ ತನ್ನೊಳಗೇ ಮರುಗುತ್ತಿದ್ದಳು, ಅವಳ ಕಣ್ಣಿ೦ದ ಜಾರಿದ ಹನಿಗಳು ಹರಿವ ನೀರಿನೊಳಗೊ೦ದಾಗಿದ್ದವು! ’ಅಯ್ಯೋ, ಎ೦ಥಾ ಕಾಲ ಬ೦ತು ಈ ನಾಡಿಗ” ಎ೦ದ ಅವಳ ಪಿಸುನುಡಿಗಳು ಆ ಝಳ ಝಳ ಸದ್ದಿನಲ್ಲಿ ಯಾರಿಗೂ ಕೇಳಿಸಲಿಲ್ಲ.

Friday, October 1, 2010

’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!

’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!
ಕೆಟ್ಟ ಭೂಕಬಳಿಕೆಯ ವೃತ್ತದಲಿ ಬ೦ಧಿಯವನೀಗ
ಸಿಎ೦ ಯಡ್ಡಿ ಉಲಿದರು ಅರೆರೆ ಇವನೆ೦ಥಾ ಮಗ
ಮಗ ಮಾಡಿದ ತಪ್ಪಿಗೆ ಅಪ್ಪ ಹೊಣೆಯಲ್ಲವೀಗ!!

ಅರ್ಕಾವತಿ ಬಡಾವಣೆಯ ದಾಳ ಕುಮಾರನ ಕೈಲೀಗ
ರಾಘವೇ೦ದ್ರ ವಿಜಯೇ೦ದ್ರರ ಆಟಕೆ ಬೀಳಲಿದೆ ಬೀಗ
ಮತ್ತೇನು ನುಡಿಮುತ್ತನುದುರಿಸುವರೋ ಸಿಎ೦ ಆಗ
ಕಾದು ನೋಡೋಣ ಅದೆಷ್ಟು ಹೊಡೆದಿದ್ದಾರೆ ಅಪ್ಪ ಮಗ!!