Sunday, March 29, 2015

ಭದ್ರತೆಯ ಲೋಕದಲ್ಲಿ - ೪




ಪ್ರತಿಷ್ಠಿತ ಕಾಲೇಜಿನ ರ್ಯಾಗಿಂಗ್ ಹಾವಳಿಯನ್ನಡಗಿಸಿದ ನಮ್ಮ ತಂಡಕ್ಕೆ ಕೇವಲ ಆರೇ ತಿಂಗಳಿನಲ್ಲಿ ಅಲ್ಲಿಂದ ಗೇಟ್ ಪಾಸ್ ಕೊಟ್ಟಿದ್ದರು!  ಆಡಳಿತ ಮಂಡಳಿಯ ಮೊದಲನೆಯ ಗುಂಪಿನ ಕೈ ಮೇಲಾಗಿ ನಮ್ಮ ಅವಶ್ಯಕತೆ ಇಲ್ಲವೆಂದು ನಮ್ಮಗುತ್ತಿಗೆ ಆಧಾರಿತ  ಸೇವೆಯನ್ನು ರದ್ದುಗೊಳಿಸಿದ್ದರು.  ಭಾರವಾದ ಹೃದಯದಿಂದ ಕಾಲೇಜಿನಿಂದ ನಾನು ನನ್ನ ತಂಡದೊಡನೆ ಹೊರಬಂದಿದ್ದೆ!  ಅದಾದ ನಂತರ ಒಂದಷ್ಟು ಜನ ಕೆಲಸ ಬಿಟ್ಟು ಬೇರೆ ಕಡೆಗೆ ಹೋದರೆ ಉಳಿದವರನ್ನು ಅಲ್ಲೊಬ್ಬರು ಇಲ್ಲೊಬ್ಬರಂತೆ ಚೆಲ್ಲಾಪಿಲ್ಲಿಯಾಗಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು!  ವಿಪ್ಲವದಲ್ಲಿ ಭದ್ರತಾ ಸಂಸ್ಥೆಯವರು ನನ್ನ ಜೊತೆಗೆ ಮತ್ತಾರು ಜನರನ್ನು ಸೇರಿಸಿ ಹೊಸಕೋಟೆ ಬಳಿಯ ಪಿಲ್ಲಗುಂಪ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರ ಭದ್ರತಾ ಉಸ್ತುವಾರಿಗಾಗಿ ಕಳುಹಿಸಿ ಕೊಟ್ಟಿದ್ದರು.  ಕಾರ್ಖಾನೆಯ ಆವರಣದಲ್ಲೇ ನಮ್ಮ ವಸತಿ, ಉಚಿತ ನೀರು, ಸದಾಕಾಲ ವಿದ್ಯುತ್, ಕಡಿಮೆ ದರದಲ್ಲಿ ಸಿಗುತ್ತಿದ್ದ ಹಚ್ಚ ಹಸಿರು ತರಕಾರಿಗಳು, ನಗರದ ಗೌಜು ಗದ್ದಲವಿಲ್ಲದ ಸುತ್ತಲಿನ ಸುಂದರ ವಾತಾವರಣ, ನನಗೂ ನನ್ನ ಜೊತೆಗಿದ್ದ ರಕ್ಷಕರಿಗೂ ಸ್ವರ್ಗಕ್ಕೆ ಬಂದ ಅನುಭವ!

ಕಾರ್ಖಾನೆಯ ವಾತಾವರಣಕ್ಕೆ ಹೊಂದಿಕೊಂಡು ನಮ್ಮ ದಿನನಿತ್ಯದ ಕಾರ್ಯವನ್ನು ಆರಂಭಿಸಿದ್ದೆವು.  ಕಾರ್ಖಾನೆಯ ಮಾಲೀಕರು ವೈಮಾನಿಕ ತಂತ್ರಜ್ಞರು, ವಿಮಾನಗಳ ಬಿಡಿ ಭಾಗಗಳನ್ನು ತಯಾರಿಸಿ ವಿಮಾನ ಸಂಸ್ಥೆಗಳಿಗೆ ಪೂರೈಸುತ್ತಿದ್ದರು.  ಅಲ್ಲಿ ತಯಾರಾಗುತ್ತಿದ್ದ ವಸ್ತುಗಳಿಗೆ ಮೂಲಧಾತು ಬಹುತೇಕ ತಾಮ್ರ ಅಥವಾ ಅಲ್ಯುಮಿನಿಯಂ ಆಗಿತ್ತು!  ಅಲ್ಲಿದ್ದ ಸುಮಾರು ನೂರು ಜನ ಕೆಲಸಗಾರರಲ್ಲಿ, ತಂತ್ರಜ್ಞರಾಗಿದ್ದ  ಒಂದು ಮುವ್ವತ್ತು ನಲವತ್ತು ಜನ ಪ್ರತಿದಿನ ಬೆಂಗಳೂರಿನಿಂದ ಬಂದು ಹೋಗುತ್ತಿದ್ದರೆ ಇನ್ನುಳಿದ ಸಹಾಯಕರೆಲ್ಲ ಅಕ್ಕ ಪಕ್ಕದ ಹಳ್ಳಿಗಳಿಂದ ಬರುತ್ತಿದ್ದರು.  ಅವರ ಹಾಜರಾತಿ ನೋಡುವುದು, ಕೆಲಸದ ಸಮಯದಲ್ಲಿ ಯಾವುದೇ ಅವಘಡಗಳಾಗದಂತೆ ಎಚ್ಚರಿಕೆ ವಹಿಸುವುದು, ಆಕಸ್ಮಾತ್ ಯಾರಿಗಾದರೂ ಏಟು ಬಿದ್ದು ಗಾಯವಾದಲ್ಲಿ ಪ್ರಥಮ ಚಿಕಿತ್ಸೆ ಮಾಡುವುದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವುದು, ಹೊಸಕೋಟೆಯಿಂದ ಬರುತ್ತಿದ್ದ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರ ಜೊತೆಗೆ ಉತ್ತಮ ಸಂಪರ್ಕ ಇಟ್ಟುಕೊಳ್ಳುವುದು, ಕಾರ್ಖಾನೆಗೆ ಸರಬರಾಜಾಗುತ್ತಿದ್ದ ಮೂಲವಸ್ತುಗಳು, ಹೊರಹೋಗುತ್ತಿದ್ದ ಸಿದ್ಧವಸ್ತುಗಳನ್ನು ತಪಾಸಣೆ ಮಾಡಿ ಲೆಕ್ಕ ಇಡುವುದು ನಮ್ಮ ಜವಾಬ್ಧಾರಿಯಾಗಿತ್ತು.  ಹಾಗೆಯೇ ಎಲ್ಲ ಕೆಲಸಗಾರರು ಮನೆಗೆ ಹೋದ ನಂತರ ರಾತ್ರಿ ಪಾಳಿಯಲ್ಲಿ ಕೇವಲ ಎಂಟು-ಹತ್ತು ಜನ ಕೆಲಸ ಮಾಡುತ್ತಿದ್ದರು.   ಎಲ್ಲ ಪ್ರವೇಶದ್ವಾರಗಳನ್ನು ಮುಚ್ಚಿ, ಹೊರಗಿನವರು ಯಾರೂ ಒಳ ಬರದಂತೆ, ತನ್ಮೂಲಕ ಯಾವುದೇ ಕಳ್ಳತನಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಬೇಕಾಗಿತ್ತು.

 ದಿನ ನಿತ್ಯದ ಕೆಲಸಗಳು ಯಾವುದೇ ತೊಂದರೆಯಿಲ್ಲದೆ ನಡೆಯುತ್ತಿದ್ದವು, ಸಾಕಷ್ಟು ಓದಿಕೊಂಡಿದ್ದ ನನ್ನ ಸಹಾಯಕರು ಆಗೀಗ ತಮ್ಮ ಮನೆಯ ಕಷ್ಟ ಸುಖಗಳನ್ನು ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದರು.  ಅವರಲ್ಲೊಬ್ಬ ಶಿವಣ್ಣ ಎಂಬಾತ ಯಾರದ್ದೋ ಮಾತು ಕೇಳಿ, ಸಾವಿರಾರು ರೂಪಾಯಿ ಖರ್ಚು ಮಾಡಿ, ಸಿವಿಲ್ ಇಂಜಿನಿಯರಿಂಗಿನಲ್ಲಿ  ಡಿಪ್ಲೊಮಾ ಮಾಡಿ, ಎಲ್ಲೂ ಕೆಲಸ ಸಿಗದೇ, ಸ್ವಂತವಾಗಿ ಏನಾದರೂ ಮಾಡಲು ಹಣವಿಲ್ಲದೆ, ನಿರುದ್ಯೋಗಿಯಾಗಿ, ಹೊಟ್ಟೆಗೆ ಊಟವಿಲ್ಲದೆ ತಾನು ಪಟ್ಟ ಬವಣೆಗಳನ್ನೆಲ್ಲ ಹೇಳಿಕೊಳ್ಳುತ್ತಿದ್ದಾಗ, ನನಗಂತೂ ನಮ್ಮ ವ್ಯವಸ್ಥೆಯ ಮೇಲೆ ಕೋಪ ಉಕ್ಕೇರುತ್ತಿತ್ತು!  ದುಡಿಯುವ ಕೈಗಳಿಗೆ ಕೆಲಸ ಕೊಡಲು ಯೋಗ್ಯತೆಯಿಲ್ಲದೆ ಸಮಾಜೋದ್ಧಾರದ ಬಗ್ಗೆ ಉದ್ಧುದ್ಧ ಭಾಷಣ ಬಿಗಿಯುವ ಪುಢಾರಿಗಳನ್ನು ಹಿಡಿದು ತದುಕಬೇಕನ್ನಿಸುತ್ತಿತ್ತು!  ಮತ್ತೊಬ್ಬ ನಾಗರಾಜು ಎಂಬಾತ ಕನ್ನಡ ಭಾಷೆಯಲ್ಲಿ ಎಮ್.. ಮಾಡಿದ್ದ.  ಆದರೆ ಎಲ್ಲರಿಗೂ ತಾನು ಹತ್ತನೇ ತರಗತಿಯವರೆಗೆ ಮಾತ್ರ ಓದಿದ್ದೇನೆಂದು ಹೇಳಿಕೊಳ್ಳುತ್ತಿದ್ದ.  ಅವನೊಡನೆ ಕೆಲವು ದಿನ ಆತ್ಮೀಯವಾಗಿ ಮಾತನಾಡಿದಾಗ ಅವನ ಮನದಾಳದ ನೋವನ್ನೆಲ್ಲ ನನ್ನ ಮುಂದೆ ಬಿಚ್ಚಿಟ್ಟಿದ್ದ.  ಮೂರು ಹೊತ್ತಿನ ಊಟ ನೀಡಲು ತಾಕತ್ತಿಲ್ಲದ ಕನ್ನಡ ಎಮ್.. ಪದವಿ ಯಾರಿಗೆ ಬೇಕು ಸಾರ್?  ಅನ್ನ ಕೊಡುತ್ತಿರುವ ಹತ್ತನೆಯ ತರಗತಿಯೇ ನಮಗೆ ಸಾಕಲ್ಲವೇ ಎನ್ನುತ್ತಿದ್ದ.  ಊರಿನಲ್ಲಿ ವಯಸ್ಸಾದ ಅಮ್ಮ, ಮದುವುಎಗೆ ಬಂದು ನಿಂತಿರುವ ತಂಗಿಯರ ಜವಾಬ್ಧಾರಿ ನನ್ನ ಮೇಲಿದೆ, ನಾನು ಪ್ರತಿ ತಿಂಗಳು ಕಳುಹಿಸುವ ಮನಿ  ಆರ್ಡರಿಗಾಗಿ ಅವರು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ, ಒಂದೊಮ್ಮೆ ನಾನು ಹಣ ಕಳುಹಿಸದೆ ಇದ್ದರೆ ಅವರಿಗೆ ಉಪವಾಸವೇ ಗತಿ ಎಂದು ಕಣ್ಣೀರು ಹಾಕಿದ್ದ. ಹೀಗೆ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಿದ್ದಿದ್ದ ಖಾಸಗಿ ಕ್ಷೇತ್ರದಲ್ಲಿ, ಅಕ್ಕ ಪಕ್ಕದ ರಾಜ್ಯಗಳಿಂದ ಬಂದು, ನಿರರ್ಗಳವಾಗಿ   ಆಂಗ್ಲ ಭಾಷೆಯಲ್ಲಿ ಮಾತನಾಡುವವರ ಮುಂದೆ ಇಲ್ಲೇ ಹುಟ್ಟಿ ಬೆಳೆದು,  ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಗೇಟು ಕಾಯುವ ಗತಿ ಬಂತಲ್ಲಾ ಎಂದು ಹಲವು ಸಲ ನಾವು ನಮ್ಮಲ್ಲಿಯೇ ಚರ್ಚಿಸುತ್ತಿದ್ದೆವು.  ಆದರೆ ವಿಧಿಯಿರಲಿಲ್ಲ, ಹೊಟ್ಟೆಪಾಡಿಗಾಗಿ ನಾವು ಯಾವುದಾದರೊಂದು ಉದ್ಯೋಗವನ್ನು ಮಾಡಲೇಬೇಕಿತ್ತಲ್ಲ?  ಅಸಹಾಯಕತೆ ನಮ್ಮ ಕೈಗಳನ್ನು ಕಟ್ಟಿ ಹಾಕಿತ್ತು.

ಹೀಗಿರುವಾಗ ಕಾರ್ಖಾನೆಗೆ ಹೊಸ ಹೊಸ ಕೆಲಸಗಳು ಸಿಕ್ಕಿದ್ದು, ಅದಕ್ಕಾಗಿ ಸಾಕಷ್ಟು ಬೆಲೆ ಬಾಳುವ ಉಪಕರಣಗಳು ಹಾಗೂ ಬಿಡಿ ಭಾಗಗಳನ್ನು ತರಿಸಿ ಉಗ್ರಾಣದಲ್ಲಿ ದಾಸ್ತಾನು ಮಾಡಿದ್ದರು.  ಅದಕ್ಕಾಗಿ ಕೆಲವು ಹೊಸ ತಂತ್ರಜ್ಞರನ್ನು ಹಾಗೂ ಅಕ್ಕ ಪಕ್ಕದ ಹಳ್ಳಿಗಳಿಂದ ದಿನವೂ ಕೆಲಸ ಕೇಳಿಕೊಂಡು ಬರುತ್ತಿದ್ದ ಯುವಕರಲ್ಲಿ ಒಂದಷ್ಟು ಜನರನ್ನು ಸಹಾಯಕರನ್ನಾಗಿ ನೇಮಕಾತಿ ಮಾಡಿದ್ದರು. ಹೊಸದಾಗಿ ಬಂದ ಕೆಲಸಗಾರರಲ್ಲಿ ಕೆಲವರ ನಡವಳಿಕೆ ಅನುಮಾನಾಸ್ಪದವಾಗಿದ್ದು ಅವರು ಸದಾ ಕಾಲ ಕಾರ್ಖಾನೆಯ ಆಯಕಟ್ಟಿನ ಪ್ರದೇಶಗಳನ್ನೆಲ್ಲ ವೀಕ್ಷಿಸುತ್ತಾ, ಎಲ್ಲೆಲ್ಲಿ ಏನೇನಿದೆ ಎಂದು ಮಾಹಿತಿ ಕಲೆ ಹಾಕುತ್ತಿದ್ದರು.  ಇವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಮ್ಮ ಭದ್ರತಾ ವಿಭಾಗದವರು ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಬಗ್ಗೆ ಮಾಹಿತಿ ಕೊಟ್ಟಿದ್ದೆವು.  ಆದರೂ ಯಾವುದೇ ಅವಘಡವಾಗಿರಲಿಲ್ಲವಾಗಿ ಅವರ ಮೇಲೆ ಯಾವುದೇ ಕ್ರಮ ಜರುಗಿಸಿರಲಿಲ್ಲ!     ಕಾರ್ಖಾನೆಯ ದಿನದ ಪಾಳಿಯವರ ಕೆಲಸ ಮುಗಿದ ನಂತರ ಸಂಜೆ ಆರರ ಸುಮಾರಿಗೆ ಬೆಂಗಳೂರಿನಿಂದ ಬರುತ್ತಿದ್ದವರೆಲ್ಲ ಹೋಗಿ ಬಿಡುತ್ತಿದ್ದರು.  ಕೊನೆಯದಾಗಿ ಹೋಗುತ್ತಿದ್ದ ಕಾರ್ಖಾನೆಯ ಮುಖ್ಯಸ್ಥರು ಹೋಗುವ ಮುನ್ನ ನನ್ನನ್ನು ಅವರ ಕಛೇರಿಗೆ ಕರೆದು ಯಾವುದಾದರೂ ಮುಖ್ಯ ವಿಷಯಗಳಿದ್ದರೆ ತಿಳಿಸಿ ಜಾಗ್ರತೆಯಾಗಿರುವಂತೆ ಹೇಳುತ್ತಿದ್ದರು.  ಹಾಗೆಯೇ ಒಂದು ದಿನ ನನ್ನನು ಅವರ ಕಛೇರಿಗೆ ಕರೆದು ಇತ್ತೀಚೆಗೆ ಕಾರ್ಖಾನೆಯಲ್ಲಿ ಸಣ್ಣ ಪುಟ್ಟ ಬಿಡಿ ಭಾಗಗಳು ಕಾಣೆಯಾಗುತ್ತಿವೆ, ಆದರೆ ಹೇಗೆಂದು ಯಾರಿಗೂ ಗೊತ್ತಾಗುತ್ತಿಲ್ಲ!  ಎಲ್ಲ ಕೆಲಸಗಾರರು ಕೆಲಸ ಮುಗಿಸಿ ಮನೆಗೆ ಹೋಗುವಾಗ ಕೂಲಂಕುಷವಾಗಿ ತಪಾಸಣೆ ಮಾಡಬೇಕೆಂದು ನಿರ್ದೇಶಿಸಿದ್ದರು.

 ಹೀಗೆ ಕಾರ್ಖಾನೆಯ ಮುಖ್ಯಸ್ಥರಿಂದ ನಿರ್ದೇಶನ ಬಂದಿದ್ದೇ ತಡ, ನಮ್ಮ ಭದ್ರತಾ ತಂಡ ಚುರುಕಾಗಿತ್ತು, ಪ್ರತಿನಿತ್ಯ ಎಲ್ಲ ಕೆಲಸಗಾರರ ತಪಾಸಣೆ ಶುರುವಾಯಿತು, ಜೊತೆಗೆ ಸಾಮಾನು ಸರಂಜಾಮುಗಳನ್ನು ಒದಗಿಸುತ್ತಿದ್ದವರ ಮೇಲೆಯೂ ಕಣ್ಣಿಡಲಾಯಿತು.  ಅಲ್ಲೊಬ್ಬರು ಇಲ್ಲೊಬ್ಬರು ಸಣ್ಣ ಪುಟ್ಟ ವಸ್ತುಗಳನ್ನು ಕದ್ದು ಸಿಕ್ಕಿ ಹಾಕಿಕೊಳ್ಳುತ್ತಿದ್ದರು, ಅವರನ್ನು ಮಾನವ ಸಂಪನ್ಮೂಲ ವಿಭಾಗದವರು ಎಚ್ಚರಿಕೆ ನೀಡಿ ಬಿಡುತ್ತಿದ್ದರು, ಕೆಲವೊಮ್ಮೆ ಎಚ್ಚರಿಕೆ ಪತ್ರಕ್ಕೆ ಸಹಿ ಮಾಡಿಸಿಕೊಂಡು ಇನ್ನೊಮ್ಮೆ ಹೀಗೆ ಮಾಡಿದ್ದಲ್ಲಿ ಕೆಲಸದಿಂದ ತೆಗೆದು ಹಾಕುತ್ತೇವೆಂದು ಬೆದರಿಸಿ. ಮತ್ತೊಮ್ಮೆ ಕಳ್ಳತನ ಮಾಡದಂತೆ ನಿರ್ಬಂಧಿಸುತ್ತಿದ್ದರು.  ಆದರೆ ಇದೆಲ್ಲದಕ್ಕೂ ಮೀರಿ ಕಳ್ಳರ ಗುಂಪೊಂದು ಕಾರ್ಖಾನೆಯ ಮೇಲೆರಗಿತ್ತು!  ಚೆನ್ನಾಗಿಯೇ ಯೋಜಿಸಿ ಕಳ್ಳತನಕ್ಕೆಂದು ಬಂದಿದ್ದ ಗುಂಪು ಆಯ್ಕೆ ಮಾಡಿಕೊಂಡಿದ್ದು ಅಮಾವಾಸ್ಯೆಯ ರಾತ್ರಿಯನ್ನು!  ಕಾರ್ಖಾನೆಗೆ ವಿದ್ಯುತ್ ಸಂಪರ್ಕವನ್ನು ತುಂಡರಿಸಿ, ಅಂಧಕಾರದಲ್ಲಿ ಹಿಂಭಾಗದ ಬೇಲಿ ಮುರಿದು ಒಳಬಂದಿದ್ದರು.  ನಿಶ್ಯಬ್ಧವಾಗಿ ಸೀದಾ ದಾಸ್ತಾನು ಉಗ್ರಾಣದತ್ತ ತೆರಳಿದ್ದ ಕಳ್ಳರ ಗುಂಪು ಬೀಗ ಒಡೆದು ಒಳ ನುಗ್ಗಿ ಅಲ್ಲಿದ್ದ ಬೆಲೆಬಾಳುವ ತಾಮ್ರ ಹಾಗೂ ಅಲ್ಯುಮಿನಿಯಂನಿಂದ ತಯಾರಿಸಿದ್ದ ಬಿಡಿಭಾಗಗಳು ಹಾಗೂ ಉಪಕರಣಗಳನ್ನು ಚೀಲಗಳಲ್ಲಿ ತುಂಬಿಕೊಂಡು ಇನ್ನೇನು ಪರಾರಿಯಾಗುವ ಯತ್ನದಲ್ಲಿದ್ದರು.

ಉಗ್ರಾಣದ ಬೀಗ ಒಡೆದ ಶಬ್ದ ಕೇಳಿದ ರಾತ್ರಿ ಪಾಳಿಯ ಭದ್ರತಾ ರಕ್ಷಕ ಶಿವಣ್ಣ ತನ್ನಲ್ಲಿದ್ದ ಟಾರ್ಚ್ ಹಿಡಿದು ಅತ್ತ ಬಂದಾಗ ಅಲ್ಲಿನ ದೃಶ್ಯ ನೋಡಿ ಜೋರಾಗಿ ಸೀಟಿ ಊದಿ  ಸಹಾಯಕ್ಕಾಗಿ ಕೂಗಿದ್ದಾನೆ. ಇವನು ಸೀಟಿ ಊದಿದ ಸದ್ದು ಕೇಳಿ ಉಳಿದ ಭದ್ರತಾ ರಕ್ಷಕರು ಅಲ್ಲಿಗೆ ತೆರಳುವಷ್ಟರಲ್ಲಿ ಕಳ್ಳರ ಗುಂಪು ಶಿವಣ್ಣನ ಮೇಲೆ ಆಕ್ರಮಣ ಮಾಡಿ ಕೈಗೆ ಸಿಕ್ಕಿದ ಕಬ್ಬಿಣದ ರಾಡುಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದರು. ಕಾರ್ಖಾನೆಯ ಆವರಣದಲ್ಲೇ ಇದ್ದ ನಮ್ಮ ವಸತಿಗೆ ಒಬ್ಬ ಭದ್ರತಾ ರಕ್ಷಕ ಓಡಿ ಬಂದು ವಿಷಯ ಮುಟ್ಟಿಸಿದ್ದ, ಉಟ್ಟ ಬಟ್ಟೆಯಲ್ಲೇ ತಕ್ಷಣ ಸ್ಥಳಕ್ಕೆ ಧಾವಿಸಿದ ನಮ್ಮ ತಂಡ, ಕದ್ದ ಮಾಲಿನೊಡನೆ ಓಡಿ ಹೋಗಲು ಯತ್ನಿಸುತ್ತಿದ್ದ ಕಳ್ಳರ ಗುಂಪನ್ನು ಬೆನ್ನಟ್ಟಿ, ಹಿಡಿದು, ಚೆನ್ನಾಗಿ ಬಾರಿಸಿ, ಹೆಡೆಮುರಿ ಕಟ್ಟಿ ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದೆವು.  ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ಶಿವಣ್ಣನಿಗೆ ಪ್ರಥಮ ಚಿಕಿತ್ಸೆ ಮಾಡಿ, ಕಾರ್ಖಾನೆಯ ಕಚೇರಿಯಿಂದ ಹೊಸಕೋಟೆಯ ಪೊಲೀಸು ಠಾಣೆಗೆ ಮತ್ತು ಆಸ್ಪತ್ರೆಗೆ ದೂರವಾಣಿ ಕರೆ ಮಾಡಿ ತಕ್ಷಣ ಕಾರ್ಖಾನೆಗೆ ಬರುವಂತೆ ವಿನಂತಿಸಿದ್ದೆ.  ಸುಮಾರು ಒಂದು ಘಂಟೆಯ ನಂತರ ಬಂದ ಆಂಬುಲೆನ್ಸಿನಲ್ಲಿ ಶಿವಣ್ಣನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದೆವು.  ನಮ್ಮಿಂದ ಹಿಗ್ಗಾಮುಗ್ಗಾ ಒದೆ ತಿಂದು ಬಿದ್ದಿದ್ದ ನಾಲ್ವರು ಕಳ್ಳರನ್ನು ಹೊಸಕೋಟೆಯ ಪೊಲೀಸು ಅಧಿಕಾರಿಗಳು ಬಂಧಿಸಿ, ಮರುದಿನ ಕಚೇರಿಯ ವ್ಯವಸ್ಥಾಪಕರೊಂದಿಗೆ ಠಾಣೆಗೆ ಬಂದು ಅಧಿಕೃತವಾಗಿ ದೂರು ನೀಡುವಂತೆ ತಿಳಿಸಿ ಹೋಗಿದ್ದರು.

ಮರುದಿನ ಬೆಳಿಗ್ಗೆ ಕಾರ್ಖಾನೆಗೆ ಬಂದ ಮಾಲೀಕರು ಹಾಗೂ ಇತರ ಸಿಬ್ಬಂದಿಗೆ ರಾತ್ರಿ ನಡೆದ ಕಳ್ಳತನ ಹಾಗೂ ಹಲ್ಲೆಯ ವಿಚಾರ ಗೊತ್ತಾಗಿ ಎಲ್ಲರಿಗೂ ದಿಗ್ಭ್ರಮೆಯಾಗಿತ್ತು.  ಮಾಲೀಕರು ಹಾಗೂ ಮಾನವ ಸಂಪನ್ಮೂಲ ಅಧಿಕಾರಿಗಳು ತಕ್ಷಣ  ಆಸ್ಪತ್ರೆಗೆ ಧಾವಿಸಿ ಶಿವಣ್ಣನ ಯೋಗಕ್ಷೇಮ ವಿಚಾರಿಸಿದ್ದರು. ಚಿಕಿತ್ಸೆಗೆ ಎಷ್ಟೇ ವೆಚ್ಚವಾದರೂ ಸರಿ, ತಾವೇ ಭರಿಸುವುದಾಗಿಯೂ, ಉತ್ತಮ ಚಿಕಿತ್ಸೆ ನೀಡುವಂತೆಯೂ ವೈದ್ಯರಿಗೆ ಸೂಚಿಸಿದ್ದರು.  ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕಿದ್ದುದರಿಂದ ಪ್ರಾಣಾಪಾಯದಿಂದ ಶಿವಣ್ಣ ಬಚಾವಾಗಿದ್ದ, ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ನೀಡಿ ಕಳ್ಳರ ಹಿಂದೆ ಯಾರಿದ್ದಾರೆ, ಅವರಿಗೆ ಹೇಗೆ ದಾಸ್ತಾನು ಉಗ್ರಾಣದ ಮಾಹಿತಿ ಸಿಕ್ಕಿತೆಂದು ಪತ್ತೆ ಮಾಡುವಂತೆ ಪೊಲೀಸು ಅಧಿಕಾರಿಗಳಿಗೆ ಭಿನ್ನವಿಸಿದ್ದರು. ಕಳ್ಳರೊಡನೆ ಹೋರಾಡಿ ಗಾಯಗೊಂಡಿದ್ದ ಶಿವಣ್ಣ ಬೆಳಗಾಗುವುದರೊಳಗೆ ಕಾರ್ಖಾನೆಯ "ಹೀರೋ" ಆಗಿದ್ದ!  ಪೊಲೀಸರ ರಾಜಾತಿಥ್ಯದಿಂದ ಬಾಯಿಬಿಟ್ಟ ಕಳ್ಳರು, ಪಕ್ಕದ ಹಳ್ಳಿಯಿಂದ ಬಂದು ಕೆಲಸಕ್ಕೆ ಸೇರಿದ್ದ ಯುವಕರೇ ತಮಗೆ ಮಾಹಿತಿ ನೀಡಿ, ಕಳ್ಳತನ ಮಾಡುವಂತೆ ಪ್ರೇರೇಪಿಸಿದ್ದಾಗಿಯೂ, ಕದ್ದ ಮಾಲಿನಲ್ಲಿ ಅವರಿಗೂ ಅರ್ಧ ಭಾಗ ಕೊಡಬೇಕೆಂದು ಒಪ್ಪಂದವಾಗಿತ್ತೆಂದೂ ತಿಳಿಸಿದ್ದರು.  ಸಂಸ್ಥೆಯ ರಹಸ್ಯವನ್ನು ಬಯಲು ಮಾಡಿದ್ದು ಹಾಗೂ ಕಳ್ಳತನಕ್ಕೆ ಪ್ರೇರೇಪಿಸಿದ್ದಕ್ಕಾಗಿ ಪಕ್ಕದ ಹಳ್ಳಿಯ ಮೂರು ಜನ ಯುವಕರನ್ನು ಕೆಲಸದಿಂದ ತೆಗೆದು ಹಾಕಿದ್ದರು.   
ಭದ್ರತಾ ತಂಡದ ಕಾರ್ಯ ಎಲ್ಲರ ಶ್ಲಾಘನೆಗೆ ಪಾತ್ರವಾಗಿತ್ತು, ವರ್ಷದ ಆಯುಧಪೂಜೆಯಂದು ಎಲ್ಲ ಕೆಲಸಗಾರರ ಜೊತೆಗೆ ಭದ್ರತಾತಂಡಕ್ಕೂ ಒಂದು ತಿಂಗಳ ಸಂಬಳವನ್ನು ಬೋನಸ್ ಎಂದು ಕೊಡಲಾಯಿತಲ್ಲದೆ ಎಲ್ಲರಿಗೂ ಪ್ರಶಂಸಾಪತ್ರವನ್ನೂ ನೀಡಲಾಗಿತ್ತು.  ಕಳ್ಳರ ದಾಳಿಯಿಂದ ಗಾಯಗೊಂಡು ಆಸ್ಪತ್ರೆಗೆ ಸೇರಿ "ಹೀರೋ" ಆಗಿದ್ದ ಶಿವಣ್ಣ ಕೆಲಸಕ್ಕೆ ಮರುಹಾಜರಾಗಿದ್ದ. ವಹಿಸಿದ ಜವಾಬ್ಧಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ ಆತ್ಮ ಸಂತೃಪ್ತಿ ನಮ್ಮದಾಗಿತ್ತು.