Saturday, July 4, 2015

ಭದ್ರತೆಯ ಲೋಕದಲ್ಲಿ - ೭





ನಂದಿಬೆಟ್ಟದ ಬುಡದಲ್ಲಿದ್ದ ರಮಣೀಯ ವಾತಾವರಣದಲ್ಲಿನ ನಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳ ನಡುವೆಯೇ ಆಗಾಗ ಬೆಂಗಳೂರಿನಿಂದ ಕಂಪನಿಯ ವಾಹನ ಚಾಲಕರೊಡನೆ ಬರುತ್ತಿದ್ದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮೇಲೆ ನಾನು ಹಾಗೂ ನನ್ನ ಆಪ್ತ ಸಹಾಯಕ ವಿನಾಯಕ ಕಣ್ಣಾಡಿಸುತ್ತಲೇ ಇರುತ್ತಿದ್ದೆವು. ಯಾವುದಾದರೂ ಒಳ್ಳೆಯ ಸಂಸ್ಥೆಯಲ್ಲಿ ಉತ್ತಮ ಸಂಬಳದ ಕೆಲಸ ಸಿಗಬಹುದೆಂಬ ನಿರೀಕ್ಷೆ ನಮ್ಮದಾಗಿತ್ತುಕಾರ್ಮಿಕರ ಮುಷ್ಕರದ ನಂತರ ಕಾರ್ಖಾನೆಗೆ ಬೀಗ ಮುದ್ರೆ ಬಿದ್ದ ನಂತರವಂತೂ ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರಕ್ಕೆ ಸಂಚರಿಸುತ್ತಿದ್ದ ಎಸ್.ವಿ. ಬಸ್ಸಿನ ಕ್ಲೀನರೊಬ್ಬನಿಗೆ ಹಣ ಕೊಟ್ಟು ದಿನವೂ ಡೆಕ್ಕನ್ ಹೆರಾಲ್ಡ್ ಪತ್ರಿಕೆ ತರಿಸುತ್ತಿದ್ದೆವುಆದಷ್ಟು ಬೇಗ ನಮಗೆ ಅಲ್ಲಿಂದ ಬೇರೆ ಕೆಲಸ ಹುಡುಕಿಕೊಂಡು ಹೋಗಬೇಕಿತ್ತು, ನಮ್ಮ ನಿರೀಕ್ಷೆಗೆ ತಕ್ಕಂತೆ ಒಂದು ಸುದಿನ ಬಂದೇ ಬಿಟ್ಟಿತು. ಬೆಂಗಳೂರಿನಲ್ಲಿ ಹೊಸದಾಗಿ ಆರಂಭಗೊಂಡಿದ್ದ ಉತ್ತರ ಭಾರತದ ಭದ್ರತಾ ಸಂಸ್ಥೆಯೊಂದಕ್ಕೆ ಅನುಭವಿ ಭದ್ರತಾ ರಕ್ಷಕರು, ಮೇಲ್ವಿಚಾರಕರು ಬೇಕಾಗಿದ್ದಾರೆಂಬ ಜಾಹಿರಾತಿನ ಜಾಡು ಹಿಡಿದು ಫೋನಾಯಿಸಿದಾಗ ನಾಳೆಯೇ ಸಂದರ್ಶನಕ್ಕೆ ಬನ್ನಿ ಎಂದಿದ್ದರುಮರುದಿನ ರಾತ್ರಿ ಪಾಳಿಗೆ ನಮ್ಮ ಕರ್ತವ್ಯವನ್ನು ಬದಲಿಸಿ ನಾನು ಮತ್ತು ವಿನಾಯಕ ಬೆಂಗಳೂರಿನ ಬಸ್ಸು ಹತ್ತಿದ್ದೆವುವಿಳಾಸ ಹುಡುಕಿ ಶಿವಾನಂದ ಸರ್ಕಲ್ ಬಳಿಯಿದ್ದ ಕಛೇರಿಗೆ ತಲುಪುವಷ್ಟರಲ್ಲಿ  ಮಧ್ಯಾಹ್ನವಾಗಿತ್ತುನಮ್ಮಿಬ್ಬರ ಪೂರ್ವಾಪರಗಳನ್ನೆಲ್ಲಾ ವಿಚಾರಿಸಿದ ಸಂಸ್ಥೆಯ ಮಲೆಯಾಳಿ ವ್ಯವಸ್ಥಾಪಕ, ನಮ್ಮಿಬ್ಬರಿಗೂ ನಾವು ಪಡೆಯುತ್ತಿದ್ದ ಸಂಬಳಕ್ಕಿಂತ ದುಪ್ಪಟ್ಟು ಸಂಬಳದೊಂದಿಗೆ ಕೆಲಸ ಕೊಡುವುದಾಗಿ ಆಶ್ವಾಸನೆ ನೀಡಿದ್ದ.    ತಮಗೆ ಇನ್ನೂ ಸಾಕಷ್ಟು ಜನ ಸಿಬ್ಬಂದಿ ಬೇಕಾಗಿರುವುದರಿಂದ ನಮಗೆ ಗೊತ್ತಿರುವ ಇನ್ನೊಂದಿಷ್ಟು ಜನರನ್ನು ಕರೆ ತರುವಂತೆ ನಮ್ಮಲ್ಲಿ ಭಿನ್ನವಿಸಿದ್ದಇದರಿಂದ ಉಬ್ಬಿ ಹೋದ ನಮಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನುವಷ್ಟು ಖುಷಿಯಾಗಿತ್ತು.

ಅಲ್ಲಿಂದ ನಾವಿಬ್ಬರೂ ಸೀದಾ ಬಂದಿದ್ದು ಮೆಜೆಸ್ಟಿಕ್ ಪಕ್ಕದಲ್ಲಿ ನಾವು ಮೊಟ್ಟ ಮೊದಲ ಬಾರಿಗೆ ಸಂಧಿಸಿದ್ದ ಉದ್ಯಾನವನಕ್ಕೆಅಲ್ಲಿ ನಮ್ಮಂತೆಯೇ ಕೆಲಸ ಸಿಗದೇ ನಿರಾಶರಾಗಿರುವ  ಒಂದಷ್ಟು ಜನ ನಿರುದ್ಯೋಗಿಗಳು ಸಿಗಬಹುದೆಂಬ ಭಾವನೆ ನಮ್ಮದಾಗಿತ್ತುನಮ್ಮ ನಿರೀಕ್ಷೆಗೆ ತಕ್ಕಂತೆ ಅಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳು ಕಡಲೇಕಾಯಿ ತಿನ್ನುತ್ತಾ, ಪೇಪರ್ ಓದುತ್ತಾ ಕುಳಿತಿದ್ದರು. ಅವರೆಲ್ಲರಿಗೂ ಇರುವ ಅವಕಾಶದ ಬಗ್ಗೆ ವಿವರಿಸಿದಾಗ ಖುಷಿಯಾಗಿ ನಮ್ಮೊಡನೆ ಬರಲು ಒಪ್ಪಿಕೊಂಡಿದ್ದರುಮೊದಲನೆಯ ದಿನವೇ ಸುಮಾರು ಹದಿನೈದು ಜನರ ತಂಡ ಹೊಸ ಸಂಸ್ಥೆಗೆ ಸೇರ್ಪಡೆಯಾಗಿದ್ದರು. ರಾತ್ರಿಗೆ  ಕಾರ್ಖಾನೆಗೆ ವಾಪಸ್ಸಾದ ನಾವು ಅಲ್ಲಿದ್ದ ನಮ್ಮ ಇತರ ಜೊತೆಗಾರರಿಗೂ ಸುದ್ಧಿ ತಿಳಿಸಿದಾಗ ಅವರೆಲ್ಲರೂ ನಮ್ಮೊಂದಿಗೆ ಬರಲು ಸಿದ್ಧರಾಗಿದ್ದರುಎರಡನೆಯ ದಿನ ಮತ್ತೆ ಹದಿನೈದು ಜನ ನಮ್ಮಿಂದಾಗಿ ಹೊಸ ಸಂಸ್ಥೆಗೆ ಸೇರಿಕೊಂಡಿದ್ದರು, ಹೀಗೆಯೇ ನಮಗೆ ಗೊತ್ತಿದ್ದ ಕಡೆಗಳಲ್ಲಿ ಎಲ್ಲರಿಗೂ ವಿಚಾರ ತಿಳಿಸಲಾಗಿ ಕೇವಲ ಹತ್ತು ದಿನಗಳಲ್ಲಿ ಸುಮಾರು ನೂರು ಜನರು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದರುಇದರಿಂದ ಬಹಳ ಸಂಪ್ರೀತನಾಗಿದ್ದ ಸಂಸ್ಥೆಯ ವ್ಯವಸ್ಥಾಪಕ ನನ್ನನ್ನು ಮುವ್ವತ್ತು ಜನರ ಒಂದು ಗುಂಪಿಗೆ ನಾಯಕನನ್ನಾಗಿ ನಿಯೋಜಿಸುವ ಭರವಸೆ ನೀಡಿದ್ದ!  

ಹತ್ತನೆಯ ತಾರೀಕಿನಂದು  ಲೆಕ್ಕಾಚಾರದಂತೆ ನಮ್ಮ ಸಂಬಳವನ್ನು ಕೈಗೆ ತೆಗೆದುಕೊಂಡು ನಂದಿಬೆಟ್ಟದ ಬುಡಕ್ಕೆ ಒಂದು ನಮಸ್ಕಾರ ಹೊಡೆದು ನಾನು ಮತ್ತು ವಿನಾಯಕ ನಮ್ಮ ಗುಂಪಿನೊಂದಿಗೆ ಬೆಂಗಳೂರು ತಲುಪಿ ಹೊಸ ಸಂಸ್ಥೆಯ ಕಛೇರಿಯಲ್ಲಿ ನಮ್ಮ ಲಗೇಜುಗಳನ್ನಿಟ್ಟು ಮುಂದಿನ ಆಣತಿಗಾಗಿ ಕಾಯುತ್ತಿದ್ದೆವು.  ನಮ್ಮಿಂದಾಗಿ ನೂರು ಜನ ಹೊಸ ಸಂಸ್ಥೆಗೆ ಸೇರಿದ್ದುದರಿಂದಾಗಿ ನಮಗೆ ಅಲ್ಲಿ ರಾಜಾತಿಥ್ಯವೇ ಸಿಕ್ಕಿತ್ತು!  ಬಿಹಾರದ ಪಾಟ್ನಾದಲ್ಲಿ ಕೇಂದ್ರ ಕಛೇರಿಯಿದ್ದ ಆ ಭದ್ರತಾ ಸಂಸ್ಥೆಯವರು ಭಾರತದಾದ್ಯಂತವಿರುವ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅಶೋಕ ಹೋಟೆಲ್ಲುಗಳ ಭದ್ರತೆಯ ಗುತ್ತಿಗೆಯನ್ನು ತೆಗೆದುಕೊಂಡಿದ್ದರು.  ಕರ್ನಾಟಕದಲ್ಲಿ ಅಶೋಕ ಹೋಟೆಲ್ಲುಗಳಿದ್ದುದು ಬೆಂಗಳೂರು, ಮೈಸೂರು ಮತ್ತು ಹಾಸನದಲ್ಲಿ ಮಾತ್ರ!  ಈ ಮೂರು ಕೇಂದ್ರಗಳಲ್ಲಿ ಎಲ್ಲಿಯೇ ಕೆಲಸ ಕೊಟ್ಟರೂ ಹೋಗುವುದಕ್ಕೆ ನಾನು ಸಿದ್ಧನಿದ್ದೆ.   ನನ್ನ ಜೊತೆಯಲ್ಲಿ ಬಂದಿದ್ದವರು ಹಾಗೂ ನಮ್ಮಿಂದಾಗಿ ಸಂಸ್ಥೆಗೆ ಸೇರಿದ್ದವರಿಗೆಲ್ಲಾ ಅವರವರ ವಿದ್ಯಾರ್ಹತೆ ಮತ್ತು ಅನುಭವಕ್ಕೆ ತಕ್ಕಂತೆ ಬೆಂಗಳೂರು, ಮೈಸೂರು ಮತ್ತು ಹಾಸನದಲ್ಲಿ ಕೆಲಸಕ್ಕೆ ನಿಯೋಜಿಸಿ ನನ್ನನ್ನು ಮತ್ತು ನನ್ನ ಆಪ್ತ ಸಹಾಯಕನನ್ನು ಕೊನೆಯಲ್ಲಿ ಕರೆದು ತಮಿಳುನಾಡಿನ ಚೆನ್ನೈ ಸಮೀಪದಲ್ಲಿರುವ ಮಹಾಬಲಿಪುರದಲ್ಲಿದ್ದ ಹೋಟೆಲ್ ಅಶೋಕಾಗೆ ನಿಯೋಜಿಸಿರುವುದಾಗಿ ತಿಳಿಸಿದ್ದರು.  ಬೆಂಗಳೂರಿನ ಪ್ರತಿಷ್ಠಿತ ಅಶೋಕಾ ಹೋಟೆಲ್ಲಿನಲ್ಲಿ ಕೆಲಸ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ನಮಗೆ ಭ್ರಮನಿರಸನವಾಗಿತ್ತು.  ಆದರೆ ದುಪ್ಪಟ್ಟು ಸಂಬಳ ಮತ್ತು ಸವಲತ್ತುಗಳು ಹೊಸ ಸ್ಥಳಕ್ಕೆ ಹೋಗಿ ಹೊಸ ಸವಾಲುಗಳನ್ನು ಸ್ವೀಕರಿಸಲು ನಮಗೆ ಸ್ಫೂರ್ತಿದಾಯಕವಾಗಿದ್ದವು.  ಒಲ್ಲದ ಮನಸ್ಸಿನಿಂದಲೇ ನಾನು ಒಪ್ಪಿಕೊಂಡಿದ್ದೆನನ್ನ ಅನ್ಯಮನಸ್ಕತೆಯನ್ನು ಗಮನಿಸಿದ ಸಂಸ್ಥೆಯ ವ್ಯವಸ್ಥಾಪಕ ನನ್ನನ್ನು ಪ್ರತ್ಯೇಕವಾಗಿ ಕರೆದು, "ನಿನ್ನಲ್ಲಿರುವ ನಾಯಕತ್ವ ಗುಣ ಹಾಗೂ ಸಂಘಟನಾ ಚಾತುರ್ಯವನ್ನು ನೋಡಿಯೇ ನಾನು ನಿನ್ನನ್ನು ಮಹಾಬಲಿಪುರಕ್ಕೆ ಕಳುಹಿಸುತ್ತಿದ್ದೇನೆ, ಅಲ್ಲಿನ ಘಟಕಕ್ಕೆ ನೀನೇ ಬಾಸು, ಚಿಂತಿಸದೆ ಹೋಗಿ ಕೆಲಸ ಆರಂಭಿಸು, ನಿನಗೆ ಇನ್ನೂ ಹೆಚ್ಚಿನ ಸಂಬಳ ಹಾಗೂ ಸವಲತ್ತುಗಳು ಸಿಗುತ್ತವೆ" ಎಂದು ನುಗ್ಗೆಮರ ಹತ್ತಿಸಿದ್ದ.  ಅವನೊಬ್ಬ ಮಲೆಯಾಳಿ, ನಾನು ಇದುವರೆಗೂ ಮಲೆಯಾಳಿಗಳ ಜೊತೆಗೆ ನೇರಾನೇರ ವ್ಯವಹರಿಸಿರಲಿಲ್ಲ.  ಮಲೆಯಾಳಿಗಳ ವ್ಯಾವಹಾರಿಕ ಬುದ್ಧಿ ಹಾಗೂ ಅವಕಾಶವಾದಿತನ ಹೇಗಿರುತ್ತದೆಂದು ಜೀವನದಲ್ಲಿ ಮೊದಲ ಬಾರಿಗೆ ಅನುಭವಕ್ಕೆ ಬಂದಿತ್ತು.

ಅವನ ಯೋಜನೆಯಂತೆ ಅಂದು ರಾತ್ರಿಯೇ ನಾನು, ವಿನಾಯಕ ಹಾಗೂ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಸಹಾಯಕನೊಬ್ಬ ಚೆನ್ನೈಗೆ ಐಷಾರಾಮಿ ಜಯಲಲಿತಾ ಟ್ರಾನ್ಸ್ಪೋರ್ಟ್ ಬಸ್ ಹತ್ತಿದ್ದೆವು.  ಮರುದಿನ ಮುಂಜಾನೆ ಚೆನ್ನೈನ ಪೂಕ್ಕಡೈ ಬಸ್ ನಿಲ್ದಾಣದಲ್ಲಿಳಿದಾಗ ಸುಡುವ ಬಿಸಿಲು ಹಾಗೂ ಧಗೆ ನಮ್ಮನ್ನು ಸ್ವಾಗತಿಸಿತ್ತು!  ಸಮೀಪದ ಹೋಟೆಲ್ಲೊಂದರಲ್ಲಿ ನಮಗಾಗಿ ಒಂದು ರೂಮ್ ಕಾದಿರಿಸಲಾಗಿತ್ತು,  ರೂಮಿಗೆ ಹೋಗಿ ಬೆಳಗಿನ ಕಾರ್ಯಕ್ರಮಗಳನ್ನೆಲ್ಲಾ ಮುಗಿಸಿ ದ ನಂತರ ಮಾನವ ಸಂಪನ್ಮೂಲ ಸಹಾಯಕ ನಮ್ಮನ್ನೂ ಕರೆದುಕೊಂಡು ಕೆಳಭಾಗದ ರೆಸ್ಟೋರೆಂಟಿಗೆ ಬಂದು ಕುಳಿತು ಯಾರಿಗೋ ಕಾಯತೊಡಗಿದ.  ಭದ್ರತಾ ಸಂಸ್ಥೆಯವರು ಮಹಾಬಲಿಪುರದ ಹೋಟೆಲ್ಲಿಗೆ ಭದ್ರತಾ ಸಿಬ್ಬಂದಿ ಬೇಕೆಂದು  ಬೆಂಗಳೂರಿನಿಂದಲೇ  ಚೆನ್ನೈನ ಪ್ರಮುಖ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ್ದರು, ೧೦ ಘಂಟೆಯ ಸುಮಾರಿಗೆ ಒಬ್ಬೊಬ್ಬರಾಗಿ ಅಭ್ಯರ್ಥಿಗಳು ಬರಲಾರಂಭಿಸಿದರು.  ಅಲ್ಲಿಯೂ ಸುಮಾರು ಮೂವತ್ತು ಜನರ ನೇಮಕಾತಿಗಾಗಿ ಸಂದರ್ಶನಗಳನ್ನು ನಡೆಸಿ, ಆ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ನಾನು ಹಾಗೂ ವಿನಾಯಕ ಮಾನವ ಸಂಪನ್ಮೂಲ ಅಧಿಕಾರಿಗೆ ಸಹಾಯ ಮಾಡಿದ್ದೆವು.  ಕೊನೆಗೂ ಮೂವತ್ತು ಜನರ ಹೊಸ ತಂಡ ಮಹಾಬಲಿಪುರದ ಅಶೋಕ ಹೋಟೆಲ್ಲಿನ ಭದ್ರತೆಯ ಗುತ್ತಿಗೆಗಾಗಿ ಸಿದ್ಧವಾಗಿತ್ತು.  ಮರುದಿನ ಬೆಳಿಗ್ಗೆ ಹತ್ತು ಘಂಟೆಗೆ ಚೆನ್ನೈನ ಪೂಕ್ಕಡೈ ಬಸ್ ನಿಲ್ದಾಣದಿಂದ ಮಹಾಬಲಿಪುರಕ್ಕೆ ನಮ್ಮ ತಂಡ ಪ್ರಯಾಣ ಬೆಳೆಸಿತ್ತು. ಮಹಾಬಲಿಪುರದಲ್ಲಿ ಬಸ್ ಇಳಿದವರೇ ಸೀದಾ ಅಶೋಕ ಹೋಟೆಲ್ಲಿಗೆ ಹೋಗಿ ಅಲ್ಲಿನ ವ್ಯವಸ್ಥಾಪಕರಿಗೆ ನಮ್ಮ ಪರಿಚಯ ಮಾಡಿಕೊಂಡು ನಮ್ಮ ಭದ್ರತಾ ತಂಡವನ್ನು ಪರಿಚಯಿಸಿದ್ದೆವು.  ಇಡೀ ತಂಡದಲ್ಲಿ ಅಲ್ಪ ಸ್ವಲ್ಪ ಇಂಗ್ಲೀಷ್ ಮಾತನಾಡುತ್ತಿದ್ದುದು ನಾನೊಬ್ಬನೇ!  ಬೆಂಗಳೂರಿನ ಅನುಭವ ನನಗೆ ಇಲ್ಲಿ ಬಹಳ ಸಹಾಯಕವಾಗಿತ್ತು.  ಅಶೋಕ ಹೋಟೆಲ್ ವ್ಯವಸ್ಥಾಪಕನಿಂದ ಒಪ್ಪಿಗೆ ಪಡೆದು ಹೊರಬಂದ ನಮ್ಮ ತಂಡ ಪುಟ್ಟ ತಮಿಳು ಹೋಟೆಲ್ಲೊಂದರಲ್ಲಿ ಗಡದ್ದಾಗಿ ಊಟ ಮಾಡಿ, ಅವನಿಂದಲೇ ವಿವರ ಸಂಗ್ರಹಿಸಿ, ಮಧ್ಯವರ್ತಿಯೋಬ್ಬನ ಸಹಾಯದಿಂದ ಅಶೋಕ ಹೋಟೆಲ್ಲಿನ ಸಮೀಪದಲ್ಲೇ ನಾಲ್ಕು ಮನೆಗಳನ್ನು ಬಾಡಿಗೆಗೆ ಪಡೆದು ನಮ್ಮ ಭದ್ರತಾ ತಂಡಕ್ಕೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು!


ನಡೆದ ಘಟನೆಗಳೆಲ್ಲಾ ನನಗೆ ಯಾವುದೋ ಸಿನಿಮಾದಲ್ಲಿ ನಡೆಯುತ್ತಿರುವ ಘಟನೆಗಳಂತೆ ಭಾಸವಾಗುತ್ತಿತ್ತು!  ಕೇವಲ ಎರಡೇ ದಿನಗಳಲ್ಲಿ ಇಷ್ಟೆಲ್ಲವೂ ಆಗಿ ಹೋಗಿತ್ತು, ನಂದಿಬೆಟ್ಟದ ಬುಡದಲ್ಲಿದ್ದ ಕಾರ್ಖಾನೆಯಲ್ಲಿ ದಿನ ದೂಡುತ್ತಿದ್ದ ನಾವು ಕೇವಲ ಎರಡೇ ದಿನಗಳಲ್ಲಿ ತಮಿಳುನಾಡಿನ ಬಂಗಾಳ ಕೊಲ್ಲಿ ಸಾಗರ ತಟದ ಮಹಾಬಲಿಪುರಕ್ಕೆ ತಲುಪಿ, ಪ್ರತಿಷ್ಠಿತ ಹೋಟೆಲ್ಲೊಂದರ ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದೆವು. ಮೂರನೆಯ ದಿನ  ಮೊದಲು ಇದ್ದ ಭದ್ರತಾ ಸಂಸ್ಥೆಯ ಸಿಬ್ಬಂದಿಯಿಂದ ಎಲ್ಲ ವಿವರಗಳನ್ನು ಪಡೆದು, ಅವರನ್ನು ಬೀಳ್ಕೊಟ್ಟು, ನಮ್ಮ ಕೆಲಸವನ್ನು ಆರಂಭಿಸಿದ್ದೆವು.  
ದಿನಂಪ್ರತಿ ಎಲ್ಲರ ಕೆಲಸದ ವೇಳಾಪಟ್ಟಿ ತಯಾರಿಸಿ ಅದರಂತೆ ಭದ್ರತಾ ರಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸುವುದುಪ್ರತಿ ತಿಂಗಳೂ ಎಲ್ಲರ ಹಾಜರಾತಿ ತಯಾರಿಸಿ, ಬೆಂಗಳೂರಿನ ಕಛೇರಿಗೆ ಕಳುಹಿಸುವುದು, ಅಲ್ಲಿಂದ ಸಂಬಳದ ಹಣವನ್ನು ತಂದು ಎಲ್ಲರಿಗೂ ಸಂಬಳ ಹಂಚುವುದು, ಅಶೋಕಾ ಹೋಟೆಲ್ಲಿನ ವ್ಯವಸ್ಥಾಪಕರೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಅಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಚರ್ಚಿಸಿ ಸಮಯಕ್ಕೆ ತಕ್ಕಂತೆ ಅವರ ಅವಶ್ಯಕತೆಗಳನ್ನು ಪೂರೈಸುವುದು ಮುಂತಾದ ಜವಾಬ್ಧಾರಿಗಳನ್ನೆಲ್ಲಾ ನನಗೆ ವಹಿಸಲಾಗಿತ್ತು!  ಸಂಸ್ಥೆಯ ಖರ್ಚಿನಲ್ಲಿ ತಿಂಗಳಿಗೊಮ್ಮೆ ಹವಾನಿಯಂತ್ರಿತ ಜಯಲಲಿತಾ ಟ್ರಾನ್ಸ್ಪೋರ್ಟ್ ಬಸ್ಸಿನಲ್ಲಿ ಮಹಾಬಲಿಪುರದಿಂದ ಬೆಂಗಳೂರಿಗೆ ಹೋಗಿ ಬರುವ ಸುಯೋಗ ನನ್ನದಾಗಿತ್ತು.  ಎಂದೂ ನಮ್ಮ ಮುದ್ದಿನ ಕನ್ನಡ ಭಾಷೆ ಮಾತನಾಡುವ ಕರ್ನಾಟಕದಿಂದ ಹೊರಗಡೆ ಕೆಲಸ ಮಾಡಿ ಅಭ್ಯಾಸವಿಲ್ಲದಿದ್ದ ನಮಗೆ ಈ ಊರು, ಜನ, ವಾತಾವರಣ ಹೊಸ ಅನುಭವವಾಗಿತ್ತು. 
ಮರೆಯಲಾಗದ ಅದೆಷ್ಟೋ ಅನುಭವಗಳನ್ನು ಮಹಾಬಲಿಪುರ ನಮಗೆ ಮುಂದಿನ ದಿನಗಳಲ್ಲಿ ಉಣ್ಣ ಬಡಿಸಿತ್ತು.  ಭದ್ರತಾ ಲೋಕದ ಮಹಾಬಲಿಪುರದ ಅನುಭವಗಳು ಮುಂದಿನ ಸಂಚಿಕೆಯಲ್ಲಿ!

No comments: