Monday, August 31, 2015

ಭದ್ರತೆಯ ಲೋಕದಲ್ಲಿ - ೯




ಹೀಗೆ ದಿನಗಳು ಸಾಗುತ್ತಿರುವಾಗಲೇ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಡುವಿನ ಮಾತುಕತೆ ಮುರಿದುಬಿದ್ದು ಕಾವೇರಿ ನೀರಿನ ವ್ಯಾಜ್ಯ ತಾರಕಕ್ಕೇರಿತ್ತು. ತತ್ಸಂಬಂಧಿ ಗಲಾಟೆಗಳಲ್ಲಿ ಬೆಂಗಳೂರಿನಲ್ಲಿ ಒಂದಷ್ಟು ಜನ ತಮಿಳರ ಮೇಲೆ ಹಲ್ಲೆಯಾಗಿತ್ತು, ಕರ್ನಾಟಕದ ಬಸ್ಸುಗಳಿಗೆ ಚೆನ್ನೈನಲ್ಲೂ, ತಮಿಳುನಾಡಿನ ಬಸ್ಸುಗಳಿಗೆ ಬೆಂಗಳೂರಿನಲ್ಲೂ ಕಲ್ಲು ತೂರಿ ಜಖಂಗೊಳಿಸಲಾಗಿತ್ತು!  ಅದುವರೆಗೂ ನನ್ನ ಜೊತೆಗೆ ಸ್ನೇಹದಿಂದಿದ್ದ ಅಲ್ಲಿನ ಬಹುತೇಕ ತಮಿಳರು ಈಗ ನನ್ನನ್ನು ಹೊರಗಿನವನಂತೆ ಅನುಮಾನದ ಕಣ್ಣುಗಳಿಂದ ನೋಡುತ್ತಾ ಸಣ್ಣ ಪುಟ್ಟ ಕಿರುಕುಳ ನೀಡಲಾರಂಭಿಸಿದ್ದರು.  ಇದು ಯಾವ ಮಟ್ಟಕ್ಕೆ ಹೋಯಿತೆಂದರೆ ಬಚ್ಚಲು ಮನೆಯಲ್ಲಿ ನಾನು ಸ್ನಾನ ಮಾಡುತ್ತಿದ್ದರೆ, ಮನೆಯ ಮೇಲಿನಿಂದ ನಲ್ಲಿಯಲ್ಲಿ ನೀರು ನಿಲ್ಲಿಸಿ ಬಿಡುತ್ತಿದ್ದರು.  ಮಾರುಕಟ್ಟೆಗೆ ದಿನನಿತ್ಯದ ಸಾಮಾನು ತರಲು ಹೋಗುತ್ತಿದ್ದ ನನ್ನ ಮಡದಿಯನ್ನು ಅವಹೇಳನ ಮಾಡಿ ನಗುತ್ತಿದ್ದರು, ಕೆಲವು ಹೆಂಗಸರಂತೂ ಅದೇನೇನೋ ತಮಿಳಿನಲ್ಲಿ ಬೈಯ್ಯುತ್ತಲೂ ಇದ್ದರೆಂದು ನನ್ನ ಮಡದಿ ಹೇಳುತ್ತಿದ್ದಳು.  ಆದರೆ ಮನೆಯ ಮಾಲೀಕ ಮುನಿಸ್ವಾಮಿ ಮಾತ್ರ ನಮಗೆ ಧೈರ್ಯ ತುಂಬುತ್ತಿದ್ದ, ಯಾವುದಕ್ಕೂ, ಯಾರಿಗೂ ಹೆದರಬೇಡಿ, ನೀವು ನಮ್ಮ ಮನೆಯವರಿದ್ದಂತೆ, ನಿಮ್ಮ ರಕ್ಷಣೆ ನನ್ನ ಜವಾಬ್ಧಾರಿ ಅನ್ನುತ್ತಿದ್ದ.  ಆದರೂ ಮಡದಿ ಮತ್ತು ಪುಟ್ಟ ಮಗಳೊಡನೆ ಆ ಉದ್ರಿಕ್ತ ವಾತಾವರಣದಲ್ಲಿ ಮುಂದುವರೆಯಲು ನನ್ನ ಮನಸ್ಸು ಒಪ್ಪದಿದ್ದಾಗ ಬೆಂಗಳೂರಿನಲ್ಲಿದ್ದ ನಮ್ಮ ಕಚೇರಿಯಲ್ಲಿನ ವ್ಯವಸ್ಥಾಪಕರೊಂದಿಗೆ  ಮಾತನಾಡಿ ಒಂದು ದಿನ ರಾತ್ರಿ ಹೆಂಡತಿ ಮಗುವಿನೊಡನೆ ಬೆಂಗಳೂರಿನ ಬಸ್ಸು ಹತ್ತಿದ್ದೆ.  ಸುಂದರ ಮಹಾಬಲಿಪುರದೊಡನೆ ನಮ್ಮ ನಂಟು ಎರಡು ರಾಜ್ಯಗಳ ಕಾವೇರಿ ನೀರಿನ ವ್ಯಾಜ್ಯದೊಂದಿಗೆ ಮುಗಿದಿತ್ತು.

ಬಸ್ ನಿಲ್ದಾಣದವರೆಗೂ ನಮ್ಮೊಡನೆ ಬಂದು ನಮ್ಮ ಲಗೇಜನ್ನು ಬಸ್ಸಿಗೆ ಹಾಕಿ, ಸೀಟು ಮಾಡಿ ಕೊಟ್ಟ ಸಾರಾಯಿ ಮುನಿಸ್ವಾಮಿ ಮತ್ತು ಅವರ ಪತ್ನಿ ಕಣ್ಣೀರುಗರೆಯುತ್ತಿದ್ದರು.  ಭಾರವಾದ ಹೃದಯದೊಡನೆ ಅವರಿಗೆ ವಿದಾಯ ಹೇಳಿ ಬಂದವನು ಮತ್ತೆ ಅವರನ್ನು ಭೇಟಿಯಾಗಿದ್ದು ಇಪ್ಪತ್ತು ವರ್ಷಗಳ ನಂತರ!   ಮಹಾಬಲಿಪುರದಿಂದ ಅದೇ ಜಯಲಲಿತಾ ಟ್ರಾನ್ಸ್ಪೋರ್ಟ್ ಬಸ್ಸಿನಲ್ಲಿ ಲಗೇಜಿನೊಡನೆ ಹೆಂಡತಿ ಮಗಳ ಜೊತೆ ಬೆಂಗಳೂರಿಗೆ ಬಂದಿಳಿದ ನಾನು ಮಾರತ್ ಹಳ್ಳಿಯಲ್ಲಿದ್ದ ತಮ್ಮನ ರೂಮಿನಲ್ಲಿ ಲಗೇಜುಗಳನ್ನಿಟ್ಟು ನಮ್ಮ ಕಚೇರಿಗೆ ಬಂದಿದ್ದೆ.  ಬೆಂಗಳೂರಿನಲ್ಲಿಯೇ ಕೆಲಸ ಕೊಡುತ್ತೇನೆಂದಿದ್ದ ಮಲೆಯಾಳಿ ವ್ಯವಸ್ಥಾಪಕ ತನ್ನ ಮಾತನ್ನು ಉಳಿಸಿಕೊಳ್ಳದೆ ಕೈಯ್ಯೆತ್ತಿದ್ದ.  ಅವನೊಂದಿಗೆ ಜಗಳವಾಡಿ ಬರಬೇಕಾಗಿದ್ದ ಹಣವನ್ನೆಲ್ಲಾ ವಸೂಲಿ ಮಾಡಿಕೊಂಡು ಕೆಲಸಕ್ಕೆ ರಾಜೀನಾಮೆ ಬಿಸಾಕಿ ಬಂದವನು ತಲೆ ಕೆಟ್ಟಂತಾಗಿ ಹೆಂಡತಿ ಮಗಳೊಡನೆ ಸೀದಾ ಹೊಳೆನರಸೀಪುರಕ್ಕೆ ತೆರಳಿದ್ದೆ.  ಒಂದು ವಾರದ ವಿರಾಮದ ನಂತರ ಮತ್ತೆ ಬೆಂಗಳೂರಿಗೆ ಬಂದು ಬೇರೆ ಭದ್ರತಾ ಸಂಸ್ಥೆಗಳಲ್ಲಿ ಕೆಲಸಕ್ಕೆ ಪ್ರಯತ್ನ ನಡೆಸಿದ್ದೆ.  ಹಲವಾರು ದಿನ ಅಲ್ಲಿಲ್ಲಿ ಅಲೆದಾಡಿದ ನಂತರ ಒಂದು ಬಹುರಾಷ್ಟ್ರೀಯ ಭದ್ರತಾ ಸಂಸ್ಥೆಯಲ್ಲಿ ಭದ್ರತಾ ಮೇಲ್ವಿಚಾರಕನಾಗಿ ಕೆಲಸ ಸಿಕ್ಕಿತ್ತು.  ಒಂದು ತಿಂಗಳು  ಕೆಲಸ ಮಾಡಿ ಸಂಬಳ ಕೈಗೆ ತೆಗೆದುಕೊಂಡು ಪುಟ್ಟದೊಂದು ಮನೆ ಮಾಡಿ ಹೆಂಡತಿ- ಮಗಳನ್ನು ಬೆಂಗಳೂರಿಗೆ ಕರೆತಂದಿದ್ದೆ.  ಅದುವರೆಗೂ ಒಬ್ಬಂಟಿಯಾಗಿದ್ದುಕೊಂಡು ಕೆಲಸ ಮಾಡುತ್ತಿದ್ದ ನನ್ನ ತಮ್ಮನೂ ನನ್ನೊಡನೆ ಸೇರಿಕೊಂಡಿದ್ದ.  ನಮ್ಮ ಹೊಸಜೀವನ ಬೆಂಗಳೂರಿನಲ್ಲಿ ಆರಂಭವಾಗಿತ್ತು.  ಹೊಸಕೋಟೆ ಬಳಿಯ ಬಹುರಾಷ್ಟ್ರೀಯ ಸಂಸ್ಥೆಯೊಂದರ ೩೦ಜನರ ಭದ್ರತಾ ತಂಡಕ್ಕೆ ಮೇಲ್ವಿಚಾರಕನನ್ನಾಗಿ ನನ್ನನ್ನು ನೇಮಿಸಲಾಗಿತ್ತು.

ನಾನು ಕೆಲಸ ನಿರ್ವಹಿಸುತ್ತಿದ್ದ ಕಾರ್ಖಾನೆಯಲ್ಲಿ ಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ಕಾರ್ಮಿಕರು  ಕೆಲಸ ಮಾಡುತ್ತಿದ್ದರು, ಬಹುರಾಷ್ಟ್ರೀಯ ಸಂಸ್ಥೆಯಾದುದರಿಂದ ಕೈತುಂಬಾ ಸಂಬಳ, ಕಾರ್ಖಾನೆಗೆ ಬಂದು ಹೋಗಲು ವಾಹನ ಸೌಕರ್ಯ, ರುಚಿರುಚಿಯಾದ ಊಟ ತಿಂಡಿಗಾಗಿ ಉತ್ತಮ ಫಲಾಹಾರ ಮಂದಿರ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಆರೋಗ್ಯ ತಪಾಸಣೆಗಾಗಿ ವಿಮಾ ಸೌಲಭ್ಯ ಹೀಗೆ ಹತ್ತು ಹಲವು ವಿಶೇಷ ಸೌಲಭ್ಯಗಳಿದ್ದುದರಿಂದ ಅದೊಂದು ರೀತಿಯ ಕೊಬ್ಬಿದ ಗೂಳಿಗಳನ್ನು ಕೂಡಿ ಹಾಕಿದ್ದ ಕೊಟ್ಟಿಗೆಯಂತಿತ್ತು.  ಹಲವಾರು ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡುತ್ತಾ, ಆರ್ಥಿಕವಾಗಿ ಬಲಿಷ್ಠವಾಗಿದ್ದ ಕಾರ್ಮಿಕರು ಸಂಸ್ಥೆಯ ರೀತಿ ರಿವಾಜುಗಳನ್ನು ಪಾಲಿಸುತ್ತಿರಲಿಲ್ಲ, ಏನಾದರೂ ಭದ್ರತಾ ರಕ್ಷಕನೊಬ್ಬ ಪ್ರಶ್ನಿಸಿದರೆ ಬಾಯಿಗೆ ಬಂದಂತೆ ಬೈಸಿಕೊಳ್ಳಬೇಕಿತ್ತು!  ಅದರಲ್ಲೂ ಕೆಲವರು ಹೊಸಕೋಟೆಯ ಸುತ್ತಲಿನ ಹಳ್ಳಿಗಳಿಂದ ಬರುತ್ತಿದ್ದವರು ಕೆಲವು ರಾಜಕೀಯ ಪಕ್ಷಗಳ ನಾಯಕರಾಗಿದ್ದು ಹಳ್ಳಿಯ ರಾಜಕಾರಣವನ್ನು ಕಾರ್ಖಾನೆಗೂ ತಂದು ದೊಡ್ಡ ನಾಯಕರಂತೆ ಮೆರೆಯುತ್ತಿದ್ದರು.  ಅವರು ಕೆಲಸ ಮಾಡುವುದಿರಲಿ, ಸಧ್ಯ, ಇತರರನ್ನು ನೆಮ್ಮದಿಯಿಂದ ಕೆಲಸ ಮಾಡಲು ಸಹಾ ಬಿಡುತ್ತಿರಲಿಲ್ಲ!  ಇಂತಿಪ್ಪ ಆ ಕಾರ್ಖಾನೆಯಲ್ಲಿ ಗುಲ್ಬರ್ಗಾ ಕಡೆಯವನೊಬ್ಬ ನಿವೃತ್ತ ಸೈನಿಕ ಮುಖ್ಯ ಭದ್ರತಾ ಅಧಿಕಾರಿಯಾಗಿದ್ದ, ಅವನಿಗೆ ಸಹಾಯಕರಾಗಿ ಇನ್ನೂ ನಾಲ್ಕು ಜನ ನಿವೃತ್ತ ಸೈನಿಕರಿದ್ದರು, ಇವರ ಆಣತಿಗೆ ತಕ್ಕಂತೆ ಕಾರ್ಖಾನೆಯ ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲು ಬಹುರಾಷ್ಟ್ರೀಯ ಖಾಸಗಿ ಭದ್ರತಾ ಸಂಸ್ಥೆಯಿಂದ ಮುವ್ವತ್ತು ಜನ ಭದ್ರತಾ ರಕ್ಷಕರ ತಂಡವನ್ನು ನೇಮಿಸಿಕೊಳ್ಳಲಾಗಿತ್ತು.  ಆ ತಂಡಕ್ಕೆ ನಾನು ನಾಮಕಾವಾಸ್ತೆಯ ಮುಖಂಡನಾಗಿದ್ದೆ, ಎಲ್ಲವೂ ಸಂಸ್ಥೆಯ ಮುಖ್ಯ ಭದ್ರತಾ ಅಧಿಕಾರಿಯ ಇಚ್ಚೆಯಂತೆಯೇ ನಡೆಯುತ್ತಿತ್ತು.  ಈ ಐದು ಜನ ನಿವೃತ್ತ ಸೈನಿಕರು ಸೇರಿ ಮಾಡುತ್ತಿದ್ದ ಅನಾಚಾರಗಳನ್ನು ನೋಡಿ ಅದುವರೆಗೂ ನನಗೆ ನಿವೃತ್ತ ಸೈನಿಕರ ಮೇಲಿದ್ದ ಗೌರವವೆಲ್ಲ ಧೂಳೀಪಟವಾಗಿ ಹೋಯಿತು.  ಯಾವಾಗಲೂ ನ್ಯಾಯ, ನೀತಿ ಎಂದು ನೋಡುತ್ತಾ, ನಿಯತ್ತಿನಿಂದ ಕೆಲಸ ಮಾಡುತ್ತಿದ್ದ ನನಗೆ ಅವರು ಸಂಸ್ಥೆಯ ಸಾಮಾನುಗಳನ್ನು ಲೂಟಿ ಹೊಡೆಯುತ್ತಿದ್ದ ರೀತಿ ನೋಡಿ ಕಕ್ಕಾಬಿಕ್ಕಿಯಾಗಿತ್ತು.   ಅಲ್ಲಿ ಕೆಲಸ ಮಾಡಬೇಕಿದ್ದರೆ ಅವರ ಜೊತೆಗೆ ಶಾಮೀಲಾಗಬೇಕಿತ್ತು, ಇಲ್ಲದಿದ್ದರೆ ಬೇರೆ ಕಡೆಗೆ ಹೋಗಬೇಕಿತ್ತು.  ಇಂಥಾ ಮಾನಸಿಕ ತುಮುಲಾಟದಲ್ಲಿಯೇ ನನ್ನ ದಿನನಿತ್ಯದ ಕೆಲಸ ನಡೆಯುತ್ತಿತ್ತು.  ಆದಷ್ಟೂ ನನ್ನನ್ನು ಮುಖ್ಯದ್ವಾರದಿಂದ ದೂರವೇ ಇಡುತ್ತಿದ್ದ ಆ ಮುಖ್ಯ ಭದ್ರತಾ ಅಧಿಕಾರಿ, ತನ್ನ ಮಾತನ್ನು ಕೇಳುವ, ತನಗೆ ನಿಯತ್ತಾಗಿರುವ ಕೆಲವು ಆಯ್ದ ಭದ್ರತಾ ರಕ್ಷಕರನ್ನು ಮಾತ್ರ ಮುಖ್ಯದ್ವಾರದಲ್ಲಿ ಕೆಲಸಕ್ಕೆ ನಿಯೋಜಿಸಿದ್ದ!   ಯಾವುದೇ ಗೇಟ್ ಪಾಸ್ ಇಲ್ಲದೆ ಪ್ರತಿದಿನ ಸಾವಿರಾರು ರೂಪಾಯಿ ಬೆಲೆ ಬಾಳುವ ಸಂಸ್ಥೆಯ ವಸ್ತುಗಳು ನಿರಾತಂಕವಾಗಿ ಮುಖ್ಯದ್ವಾರದಿಂದ ಹೊರಹೋಗುತ್ತಿದ್ದವು.  ಈ ಬಗ್ಗೆ ಇತರ ಭದ್ರತಾ ರಕ್ಷಕರು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು, ಏನೂ ಮಾಡಲಾಗದ ತಮ್ಮ ಅಸಹಾಯಕತೆಗೆ ಕೈಕೈ ಹಿಸುಕಿಕೊಳ್ಳುತ್ತಿದ್ದರು.   ಹೀಗೊಮ್ಮೆ ಎಲ್ಲರೂ ಸೇರಿ ಯಾವುದೋ ಒಂದು ತರಬೇತಿ ಕಾರ್ಯಕ್ರಮದ ಬಗೆ ಚರ್ಚಿಸುತ್ತಿದ್ದಾಗ  ತಮ್ಮಲ್ಲಿದ್ದ ಅಸಮಾಧಾನವನ್ನು ಹೊರಹಾಕಿದ್ದರು.  ಕಾರ್ಖಾನೆಯಲ್ಲಿ ನಡೆಯುತ್ತಿದ್ದ ಅವ್ಯವಹಾರಗಳೆ ಸುದ್ಧಿ ತನ್ಮೂಲಕ ನಮ್ಮ ಕೆಂದ್ರ ಕಚೇರಿಯನ್ನು ತಲುಪಿತ್ತು. 
ಎಲ್ಲಾ ವಿಚಾರ ತಿಳಿದ ನಮ್ಮ ಭದ್ರತಾ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ, ಅವನೊಬ್ಬ ಮಲೆಯಾಳಿ,  ನನ್ನನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದ.  ಇದು ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು ವಿಶ್ವದೆಲ್ಲೆಡೆಯ ಅವರ ಕಾರ್ಖಾನೆಗಳಲ್ಲಿ ನಮ್ಮ ಸಂಸ್ಥೆಯೇ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿದೆ, ಅಲ್ಲಿ ಏನೇ ನಡೆಯುತ್ತಿದ್ದರೂ ನೀನು ಕಣ್ಣು ಮುಚ್ಚಿಕೊಂಡು ಕಂಡೂ ಕಾಣದವನಂತೆ ಇದ್ದು ಬಿಡಬೇಕು, ಯಾವುದೇ ಕಾರಣಕ್ಕೂ ಅಲ್ಲಿನ ಮುಖ್ಯ ಭದ್ರತಾ ಅಧಿಕಾರಿಯನ್ನು ಎದುರು ಹಾಕಿಕೊಳ್ಳಬೇಡ, ಅವನು ಹೇಳಿದಂತೆ ಕೇಳಿಕೊಂಡು ಹೋಗು ಎಂದು ಬುದ್ಧಿವಾದ ಹೇಳಿ ಕಳಿಸಿದ್ದ.  ಅದುವರೆಗೂ ಮಲೆಯಾಳಿ ಮಾಫಿಯಾದ ಬಗ್ಗೆ ಕೇಳಿದ್ದ ನಾನು ಈಗ ಅವರ ಪ್ರಭಾವ ಒಂದು ಬೃಹತ್ ಸಂಸ್ಥೆಯಲ್ಲಿ ಹೇಗಿರುತ್ತದೆಂದು ಕಣ್ಣಾರೆ ಕಾಣುವಂತಾಗಿತ್ತು.  ಸಂಸ್ಥೆಯಲ್ಲಿ ನಡೆಯುತ್ತಿದ್ದ ಕಳ್ಳತನಗಳನ್ನು ನೋಡಿಯೂ ನೋಡದವನಂತೆ ಸುಮ್ಮನಿರುವುದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ, ಅದರಲ್ಲೂ ಬೇಲಿಯೇ ಎದ್ದು ಹೊಲ ಮೇಯ್ದಂತೆ, ನಿವೃತ್ತ ಸೈನಿಕನೊಬ್ಬ ನಮ್ಮನ್ನೆಲ್ಲಾ ಬೆದರಿಸಿ, ನಮ್ಮ ಭದ್ರತಾ ರಕ್ಷಕರ ಸಹಾಯದಿಂದಲೇ ಆ ಕಾರ್ಖಾನೆಯನ್ನು ಲೂಟಿ ಹೊಡೆಯುತ್ತಿದ್ದುದು ನನ್ನ ಹಲವು ನಿದ್ರಾಹೀನ ರಾತ್ರಿಗಳಿಗೆ ಕಾರಣವಾಗಿತ್ತು.   ಒಂದೆಡೆ ಸಂಸಾರದ ಜವಾಬ್ಧಾರಿ, ಮತ್ತೊಂದೆಡೆ ಎನೂ ಮಾಡಲಾಗದ ಅಸಹಾಯಕತೆ ಎರಡೂ ಸೇರಿ ನನ್ನನ್ನು ಬಹುವಾಗಿ ಘಾಸಿಗೊಳಿಸಿದ್ದವು.  ಕೊನೆಗೂ ಬಹಳ ಯೋಚಿಸಿದ ನಂತರ ಈ ಕಳ್ಳರ ಮಾಫಿಯಾವನ್ನು ಅಂತ್ಯಗೊಳಿಸಲೇಬೇಕೆಂದು ತೀರ್ಮಾನಿಸಿದ್ದೆ.   ನನಗೇನಾದರೂ ಚಿಂತೆಯಿಲ್ಲ, ಅವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಯೋಚಿಸಿ ಆ ನಿಟ್ಟಿನಲ್ಲಿ ಕಾರ್ಯಾರಂಭಿಸಿದೆ.  ಇದು ಪ್ರವಾಹದೆದುರಿಗೆ ಈಜುವ ಹುಚ್ಚು ಸಾಹಸವಾಗಲಿದೆಯೆಂದು ಗೊತ್ತಿದ್ದರೂ ರಾಜಿ ಮಾಡಿಕೊಳ್ಳಲು ನನ್ನ ಮನಸ್ಸು ಒಪ್ಪಿರಲಿಲ್ಲ!

ಮೊದಲ ಹೆಜ್ಜೆಯಾಗಿ ನಮ್ಮ ಭದ್ರತಾ ರಕ್ಷಕರ ತಂಡದಲ್ಲಿದ್ದ ಸಮಾನ ಮನಸ್ಕರನ್ನು ಒಂಡುಗೂಡಿಸಿದೆ,  ಹೇಗಾದರೂ ಮಾಡಿ ಈ ಕಳ್ಳವ್ಯವಹಾರವನ್ನು ತಡೆಯಬೇಕೆಂದು, ಶಾಮೀಲಾಗಿರುವ ಎಲ್ಲರನ್ನೂ ಮಾಲುಸಹಿತ  ಹಿಡಿದು ಕೊಡಬೇಕೆಂದು ಅವರ ಮನವೊಲಿಸಿದೆ.  ನನ್ನ ಮಾತಿಗೆ ಸರಿಯೆಂದವರನ್ನು ಒಬ್ಬೊಬ್ಬರನ್ನಾಗಿ ಆಯಕಟ್ಟಿನ ಜಾಗಗಳಲ್ಲಿ ನಿಯಮಿಸಲು ತೊಡಗಿದೆ.  ಆದರೆ ಮುಖ್ಯದ್ವಾರದಲ್ಲಿ ಮಾತ್ರ ಆ ಭ್ರಷ್ಟ ನಿವೃತ್ತ ಸೈನಿಕನಿಗೆ ನಿಷ್ಟರಾಗಿದ್ದವರನ್ನು ಬಿಟ್ಟು ಬೇರೆಯವರಿಗೆ ಕಾರ್ಯ ನಿರ್ವಹಿಸಲು ಅವಕಾಶ ಸಿಗಲಿಲ್ಲ!   ಅವನೊಡನೆ ಸೆಣಸಿ ಆನೆಯನ್ನು ಖೆಡ್ಡಾಗಿ ತಳ್ಳುವ ದುಸ್ಸಾಹಸಕ್ಕೆ ನಾನೇ ತಯಾರಾದೆ, ಮುಖ್ಯದ್ವಾರದ ಮೂಲಕ ಹೊರಹೋಗುವ ಎಲ್ಲಾ ಸರಕು ಸಾಗಣೆ ಹಾಗೂ ಇತರ ವಾಹನಗಳನ್ನು ನಾನೇ ಖುದ್ದಾಗಿ ತಪಾಸಣೆ ನಡೆಸಲು ತೊಡಗಿದೆ!  ಇದ್ದಕ್ಕಿದ್ದಂತೆ ನಾನು ಹೀಗೆ ಅಖಾಡಕ್ಕಿಳಿದಿದ್ದನ್ನು ಕಂಡ ಆ ಭ್ರಷ್ಟ ಮತ್ತವನ ಪಟಾಲಂ ಬೆಚ್ಚಿಬಿದ್ದರು, ಎಲ್ಲಿ ತಮ್ಮ ಅವ್ಯವಹಾರಗಳೆಲ್ಲ ನನಗೆ ಗೊತ್ತಾಗಿಬಿಡುತ್ತದೋ ಎಂದು ಅಂಡು  ಸುಟ್ಟ ಬೆಕ್ಕಿನಂತೆ ಓಡಾಡತೊಡಗಿದರು.  ನನ್ನ ಧಿಡೀರ್ ತಪಾಸಣೆಯಲ್ಲಿ ಗೇಟ್ ಪಾಸ್ ಇಲ್ಲದೆ ಹೊರಗೆ ಹೋಗುತ್ತಿದ್ದ ಹಲವಾರು ವಾಹನಗಳಲ್ಲಿದ್ದ ಅನಧಿಕೃತ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ನನ್ನದೇ ಆದ ವರದಿಯನ್ನು ಸಿದ್ಧಪಡಿಸಿ. ಅದೇ ಭ್ರಷ್ಟ ಮುಖ್ಯ ಭದ್ರತಾ ಅಧಿಕಾರಿಗೆ ಕೊಟ್ಟಿದ್ದಲ್ಲದೆ ಸಂಸ್ಥೆಯ ಆಡಳಿತಾಧಿಕಾರಿಗೂ ಒಂದು ಪ್ರತಿಯನ್ನು ತಲುಪಿಸಿದ್ದೆ. ಇದ್ದಕ್ಕಿದ್ದಂತೆ ತಮ್ಮಲ್ಲಿಗೆ ಬಂದ ಈ ರೀತಿಯ ವಿಶೇಷ ವರದಿಯನ್ನು ಕಂಡ ಸಂಸ್ಥೆಯ ಆಡಳಿತಾಧಿಕಾರಿಗೆ ಆಶ್ಚರ್ಯವಾಗಿ ನನ್ನನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು.  ಅದುವರೆವಿಗೂ ನನ್ನಲ್ಲಿ ಅದುಮಿಟ್ಟಿದ್ದ ಆಕ್ರೋಶವೆಲ್ಲಾ ಅಂದು ಒಂದಾಗಿ ಹೊರಹೊಮ್ಮಿತ್ತು!  ಅವರ ಮುಂದೆ ಸಂಸ್ಥೆಯಲ್ಲಿ ನಡೆಯುತ್ತಿದ್ದ ಅಕ್ರಮಗಳೆಲ್ಲವನ್ನೂ ಇಂಚಿಂಚಾಗಿ ಬಿಚ್ಚಿಟ್ಟಿದ್ದೆ!

ಕೊನೆಗೆ ಮುಖ್ಯ ಭದ್ರತಾ ಅಧಿಕಾರಿ ಮತ್ತವನ ತಂಡಕ್ಕೆ ಆಡಳಿತಾಧಿಕಾರಿಯ ಕಚೇರಿಯಿಂದ ವಿಚಾರಣೆಗಾಗಿ ಬುಲಾವ್ ಬಂದಿತ್ತು.  ಒಬ್ಬೊಬ್ಬರನ್ನಾಗಿ ಎಲ್ಲ ಐವರನ್ನೂ ಕರೆಸಿ ವಿಚಾರಣೆ ನಡೆಸಿದ ಅವರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಮುಖ್ಯದ್ವಾರದಲ್ಲಿ ನಡೆಯುವ ಎಲ್ಲ ಆಗುಹೋಗುಗಳನ್ನೂ  ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಹಾಗೂ ಪ್ರತಿದಿನವೂ ಅವರ ಕಚೇರಿಗೆ ಹೋಗಿ ಮುಖತಃ ವರದಿ ನೀಡುವಂತೆ ನನಗೆ ಆದೇಶಿಸಿದ್ದರು.   ಇದರಿಂದಾಗಿ ನನ್ನನ್ನು ಮುಖ್ಯದ್ವಾರದಿಂದ ಆದಷ್ಟೂ ದೂರವೇ ಇಟ್ಟಿದ್ದ ಆ ಭ್ರಷ್ಟ ನಿವೃತ್ತ ಸೈನಿಕನಿಗೆ ಭಾರೀ ಮುಖಭಂಗವಾಗಿತ್ತು!  ಪ್ರತಿಯೊಂದು ಗೇಟ್ ಪಾಸ್ ನನ್ನ ಮೂಲಕವೇ ಅವನಿಗೆ ಹೋಗುತ್ತಿತ್ತು ಹಾಗೂ ಸಂಸ್ಥೆಯಿಂದ ಹೊರಹೋಗುವ ಪ್ರತಿಯೊಂದು ವಾಹನವನ್ನು ನಾನು ಕೂಲಂಕುಷ ಪರಿಶೀಲಿಸಿಯೇ ಕಳುಹಿಸುತ್ತಿದ್ದೆ, ಅದಕ್ಕಾಗಿ ನನ್ನದೇ ತಂಡದಿಂದ ಮೂವರು ನಂಬಿಕಸ್ತರನ್ನು ಮೂರು ಪಾಳಿಗಳಲ್ಲಿ ಒಬ್ಬೊಬ್ಬರಂತೆ ನಿಯೋಜಿಸಿದ್ದೆ!  ಹಲವು ವರ್ಷಗಳಿಂದ ನಡೆದು ಬಂದಿದ್ದ ಅವರ ಲೂಟಿ ಅಚಾನಕ್ಕಾಗಿ ನಿಂತುಹೋಗಿತ್ತು.  ನಾನೀಗ ಅವರ ಪಾಲಿಗೆ ನುಂಗಲಾಗದ ಬಿಸಿತುಪ್ಪವಾಗಿಬಿಟ್ಟಿದ್ದೆ.
(ಮುಂದೇನಾಯ್ತು,,,ಮುಂದಿನ ಸಂಚಿಕೆಯಲ್ಲಿ..... )
 

Tuesday, August 25, 2015

ಲಹರಿ ಬಂದಂತೆ,,,,,,,,,,,,,,,,,,,,,೫,,,,,,,,,,,,!

ಬಿರುಬಿಸಿಲ
ಸಂಜೆಯಲ್ಲಿ
ಕಾರುಗಳ
ಸಂತೆಯಲ್ಲಿ
ಕರ್ಕಶವಾಗಿ
ಕಿರುಚುತ್ತಿದ್ದ
ರೇಡಿಯೋ
ಜಾಕಿಯ
ಧ್ವನಿಯಲ್ಲಿ
ಮತ್ತೆ ಬಂದ
ಹಿಂದಿ ಚಿತ್ರದ
ಗೀತೆಯಲ್ಲಿ
ಮುಳುಗಿ
ಹೋಗಿದ್ದಾಗಲೂ
ನಿನ್ನದೇ
ನೆನಪು
ಕಾಡ್ತಿತ್ತು
ಕಣೇ
ನನ್ತಿಮ್ಮಿ!
*************
*************

ಮತ್ತಿಂದು
 ರಾತ್ರಿಯಲಿ 
ಬಂದು
ಮತ್ತೊಮ್ಮೆ 
ಕಾಡದಿರಿ
 ಕನಸುಗಳೆ!
ನೆಮ್ಮದಿಯಲಿ 
ನಿದ್ರಿಸಬೇಕಿದೆ
ಮತ್ತೆಂದೂ 
ಬರದಿರಿ 
ದಯ ಮಾಡಿ!
**********
***********
 ಜೋರಾಗಿ 
ಬೀಸದಿರು
 ಬಿರುಗಾಳಿಯೇ
ಅತ್ತಲಿನ
 ಮೋಡಗಳೆಲ್ಲ 
ಇತ್ತ ಬಂದಾವು!
ಬೇಡದಿರುವ 
ನೆನಪುಗಳ 
ಹೊತ್ತು ತಂದಾವು!
ಇಟ್ಟುಕೊಳಲು 
ಜಾಗವಿಲ್ಲ 
ಅವಲ್ಲೇ ಇರಲಿ!
************
************

Friday, August 21, 2015

ಹೆಂಡದ್ಗಡ್ಗೆ ತುಂಬ್ಕೊಂಡ್ನಾನು,,,,,,,,,,,,,,,,,

ಹೆಂಡದ್ಗಡ್ಗೆ ತುಂಬ್ಕೊಂಡ್ನಾನು
ಮನಸಿನ್ಗಡ್ಗೆ ತುಂಬಾ ನೀನು!
ಮಾತು ಮರ್ತಾ ಮೂಕ ನಾನು
ನನ್ನಾ ಮರ್ತಾ ಮಿಕ ನೀನು !
ಆ ನಿನ್ನಾ ಮಾತು ಆ ನಿನ್ನಾ ಪ್ರೀತಿ
ಬುಟ್ಟು ಮುಂದೆ ಬದ್ಕೋ ರೀತಿ!
ಗೊತ್ತಾಗ್ದೇನೇ ಮನ್ಸು ಒದ್ದಾಡ್ತೈತಿ
ನಿದ್ದೆ ಇಲ್ದೆ ರಾತ್ರಿ ಎಲ್ಲಾ ಗೋಳಾಗೈತಿ!
ಬಗ್ದು ಬೊಗ್ಸೆ ತುಂಬಾ ಕೊಟ್ಟಿದ್ನೆಲ್ಲ
ನೀನಿಷ್ಟು ಬೇಗ ಮರ್ತೋದ್ಯಲ್ಲಾ !
ನಾ ಮಾಡಿದ್ದೆಲ್ಲಾ ನೀರ್ನಾಗ್ ಹೋಮ
ನನ್ನೆದ್ಯಾಗಿದ್ದ ಪ್ರೀತಿ ಎಲ್ಲಾ ನಿರ್ನಾಮ!
ಲೋಕ ಎಲ್ಲಾ ನಿನ್ನಂಗಾದ್ರೆ ಬದ್ಕೋದೆಂಗೆ
ಕಾಯ್ಕ ಕರ್ಮ ಪ್ರೀತಿ ಪ್ರೇಮ ಮಾಡೋದೆಂಗೆ!
ಮನ್ಸಾ ಮನ್ಸನ್ ನಂಬೋದೆಂಗೆ
ಬದ್ಕು ಮುಂದೆ ನಡೆಯೋದೆಂಗೆ!
ಹೇಳೇ ನೀನು ತಿಮ್ಮಿ
ನನ್ ಮನ್ಸು ಕದ್ದಾ ತಿಮ್ಮಿ!
ಸುಮ್ಕಿದ್ರೆಂಗೇ ತಿಮ್ಮಿ
ಮಾತಾಡ್ ನೀನು ತಿಮ್ಮಿ!

ಲಹರಿ ಬಂದಂತೆ,,,,,,,,,,,,,೪,,,,,,,,,,,,

ಮತ್ತೆ ಮತ್ತೇರಿಸುವ ಮತ್ತದೇ ಸಂಜೆಯಲಿ
ಸುತ್ತ ಮುತ್ತಿರುವ ಅದೇ ಸಂಜೆಗತ್ತಲಿನಲ್ಲಿ
ಹೊತ್ತು ಗೊತ್ತಿಲ್ಲದೆ ನೀನಿತ್ತ ಸಿಹಿ ಮುತ್ತಿನಲಿ
ಅದೆಂಥಾ ಮಾದಕತೆ ಗೊತ್ತೇನೇ,,,,,ತಿಮ್ಮಿ!
******************************
******************************
 ಬೇಡ ಬೇಡವೆಂದರೂ
ಅದೇಕೆ ನೀ ಹೀಗೆ ಬರುವೆ?
ತುಸು ತಡೆದು ಬರಬಾರದೆ?
ನನಗೆ ಸ್ವಲ್ಪ ಕೆಲಸವಿದೆ,
ಓ, ಅದೇನಂಥಾ
ಘನಕಾರ್ಯವೆಂದೆಯಾ?
ನಿನ್ನ ನೆನಪುಗಳ ಶವಗಳಿಗೆ
ಮಣ್ಣು ಮುಚ್ಚಬೇಕಿದೆ!! 😕😑
*****************************
*****************************

ಹುಣ್ಣಿಮೆಯ
ಚಂದ್ರಮನ
ಶೀತಲ ಕಿರಣಗಳ
ತಂಪ ಸವಿಯುತ
ನಿರಾಳದಲಿರುವ
ಕೊಳವು ನಾನು!
ನಿನ್ನ ನೆನಪುಗಳ
ಘನಘೋರ
ಬಂಡೆಯನೆಸೆಯದಿರು
ಗೆಳತಿ!
ತಳ ಸೇರಿರುವ
ಬಗ್ಗಡವೆಲ್ಲ ಮೇಲೆದ್ದು
ಓಡಿ ಹೋದಾನು
ಚಂದ್ರಮ !! 😕😑
*****************************
*****************************

Wednesday, August 19, 2015

ಅರಬ್ಬರ ನಾಡಿನಲ್ಲಿ ೧೭: ನಮೋ ಇನ್ ದುಬೈ - ಮೋದಿ ಎಂಬ ಮಾಯಗಾರ!


ಆಗಸ್ಟ್ ೧೫ರ ಸ್ವಾತಂತ್ರ್ಯ ದಿನದ ಆವೇಶವೆಲ್ಲ ಇಳಿಯುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ದುಬೈಗೆ ಬರುತ್ತಾರಂತೆ ಎನ್ನುವ ಸುದ್ಧಿ ಕೇಳುತ್ತಿದ್ದಂತೆ ನಾನು ಹೇಗಾದರೂ ಸರಿ, ಹೋಗಲೇಬೇಕು, ಅವರನ್ನು ನೋಡಬೇಕು, ಅವರ ಮಾತುಗಳನ್ನು ಕೇಳಬೇಕು ಎನ್ನುವ ಆಸೆ ಮನದಲ್ಲಿ ಮೂಡಿ ದಿನದಿಂದ ದಿನಕ್ಕೆ ಘಟ್ಟಿಯಾಗುತ್ತಾ ಹೋಯಿತು.  ಅದಕ್ಕೆ ತಕ್ಕಂತೆ ಆರಂಭವಾದ ಅಂತರ್ಜಾಲ ತಾಣದಲ್ಲಿ ನನ್ನ ಹೆಸರನ್ನು ದಾಖಲಿಸಿ ನನ್ನ ಪಾಸನ್ನು ಜೋಪಾನವಾಗಿ ತೆಗೆದಿರಿಸಿಕೊಂಡು, ಆಗಸ್ಟ್ ೧೭ ಬರುವುದನ್ನೇ ಕಾಯುತ್ತಿದ್ದೆ.  ಕಚೇರಿಯಲ್ಲಿ ಆಪ್ತರಾಗಿದ್ದ ಕೆಲವರನ್ನು, ಮತ್ತೆ ಹಲವು ಸ್ನೇಹಿತರನ್ನು ಬರುವಂತೆ ಕರೆದರೆ ಅವರವರ ಕೆಲಸದಲ್ಲಿ ಪುರುಸೊತ್ತಿಲ್ಲದ ಅವರಿಂದ ಸಿಕ್ಕಿದ್ದು ನಿರಾಶೆಯ ಪ್ರತಿಕ್ರಿಯೆ!  ಹೋಗಲು ಜೊತೆಗೆ ಯಾರೂ ಇಲ್ಲ, ಒಬ್ಬನೇ ಹೋಗಬೇಕಲ್ಲಾ ಎನ್ನುವ ಕೊರಗಿನ ನಡುವೆಯೂ ನಾನು ದಿನಕ್ಕಾಗಿ ಕಾಯುತ್ತಿದ್ದೆ!  ಕೊನೆಗೂ ದಿನ ಬಂದೇ ಬಿಟ್ಟಿತು, ಆದರೆ ಅದೇ ದಿನ ಬೆಳಿಗ್ಗೆಯ ಮಾತುಕತೆಯಲ್ಲಿ ಬಾಸ್ ನನ್ನ ಮೇಲೆ ಕೋಪಗೊಂಡಿದ್ದ!  ಕಾರ್ಯಕ್ರಮಕ್ಕೆ ಹೋಗಲು ಅನುಮತಿ ನೀಡುತ್ತಾನೋ ಇಲ್ಲವೋ ಎನ್ನುವ ಅನುಮಾನದಲ್ಲಿ ಹೊಟ್ಟೆಗೆ ಅನ್ನ ಸೇರದಂತಾಗಿತ್ತು!   ರೆಸ್ಟೋರೆಂಟಿನಲ್ಲಿ ನಾನು ಊಟ ಮುಗಿಸಿ ಹೊರಡುವ ವೇಳೆ ಗೆ ಊಟಕ್ಕಾಗಿ ಒಬ್ಬನೇ ಬಂದ ಬಾಸ್ ಬಳಿ ಹೋಗಿ ನಿಧಾನಕ್ಕೆ ಕಾರ್ಯಕ್ರಮದ ಬಗ್ಗೆ ವಿವರಿಸಿ ಎರಡು ಘಂಟೆ ಮುಂಚಿತವಾಗಿ ಹೋಗಲು ಅನುಮತಿ ಕೇಳಿದರೆ ಖುಷಿಯಾಗಿ ವಾವ್, ನಮೋ ಇನ್ ದುಬೈ, ಗ್ರೇಟ್, ಗೋ ಅಹೆಡ್ ಅಂದಿದ್ದ!  ಮೂರೂ ಮುಕ್ಕಾಲಿಗೆ ಪಂಚೌಟ್ ಮಾಡಿ ಹೊರಟವನು ಕಾರಿನ ವೇಗ ೧೨೦ರಿಂದ ಕೆಳಕ್ಕಿಳಿಯದಂತೆ ಓಡಿಸಿ, ಎಮಿರೇಟ್ಸ್ ರಸ್ತೆಯಲ್ಲಿ ಬಲತಿರುವು ತೆಗೆದು ಮೋಟಾರ್ ಸಿಟಿಯೊಳಗಿನಿಂದ ದುಬೈ ಸ್ಪೋರ್ಟ್ಸ್ ಸಿಟಿ ತಲುಪಿದರೆ ಕ್ರಿಕೆಟ್ ಸ್ಟೇಡಿಯಂನಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರು.  ಧೂಳು ತುಂಬಿದ ಮೈದಾನದಲ್ಲಿ ಕಾರು ನಿಲ್ಲಿಸಿ ಅಲ್ಲಿಯೇ ಸಾಲಾಗಿ ನಿಂತಿದ್ದ ದುಬೈ ನಗರ ಸಾರಿಗೆಯ ಬಸ್ಸು ಹತ್ತಿ ಕ್ರಿಕೆಟ್ ಸ್ಟೇಡಿಯಂ ಹತ್ತಿರ ಬರುವಲ್ಲಿಗೆ ಸಮಯ ಸಂಜೆಯ ನಾಲ್ಕೂಮುಕ್ಕಾಲಾಗಿತ್ತು



ಮೈಲುದ್ಧದ ಸಾಲಿನಲ್ಲಿ ನಿಂತು ನನ್ನ ಸರದಿ ಬಂದಾಗ ಪಾಸ್ ಮತ್ತು ಗುರುತಿನ ಪತ್ರ ತೋರಿಸಿ ಒಳ ಸೇರುವಾಗ ಭದ್ರತಾ ರಕ್ಷಕನೊಬ್ಬ ನನ್ನನ್ನು ತಪಾಸಿಸಿ ಜೇಬಿನಲ್ಲಿದ್ದ ಸಿಗರೇಟು ಮತ್ತು ಲೈಟರ್ ಕಿತ್ತುಕೊಂಡು ಒಳಬಿಟ್ಟಿದ್ದ!  ಅಲ್ಲಿ ನನ್ನಂತೆಯೇ ಬಂದಿದ್ದ ಸಹಸ್ರಾರು ಜನರಲ್ಲಿ ಒಂದೇ ಆತುರ, ಆದಷ್ಟು ಬೇಗ ಒಳಗೆ ಹೋಗಬೇಕು, ನಮ್ಮ ಪ್ರಧಾನಿ ಮೋದಿಯವರನ್ನು ನೋಡಬೇಕು, ಅವರ ಮಾತುಗಳನ್ನು ಕೇಳಬೇಕು!  ಅದೊಂದು ರೀತಿಯ ಉನ್ಮಾದಕರ ವಾತಾವರಣವಾಗಿತ್ತು. ಭವ್ಯವಾಗಿರುವ ದುಬೈ ಕ್ರಿಕೆಟ್ ಸ್ಟೇಡಿಯಂನೊಳಗೆ ಕಾಲಿಡುತ್ತಿದ್ದಂತೆ ನಮಗೆ ಕೇಳಿಸಿದ್ದು ಮೋದಿ, ಮೋದಿ, ಮೋದಿ ಮೋದಿ ಎನ್ನುವ ಮುಗಿಲು ಮುಟ್ಟುವ ಘೋಷಣೆಯೊಂದೇ!  ದುಬೈ ಕ್ರಿಕೆಟ್ ಸ್ಟೇಡಿಯಂ ಭಾರತೀಯರ ದೇಶಭಕ್ತಿಯ ಅಮಲಿನಲ್ಲಿ ಮಿಂದೇಳುತ್ತಿತ್ತು!  ಎಂದೂ ಕಾಣದ ಭಾರತೀಯ ಜನಸಾಗರವನ್ನು ಕಂಡ ಭದ್ರತಾ ಸಿಬ್ಬಂದಿ ಹಾಗೂ ದುಬೈ ಪೊಲೀಸರು ಮಂತ್ರಮುಗ್ಧರಾಗಿದ್ದರು!  ಕೇವಲ ದುಬೈ ಮಾತ್ರವಲ್ಲದೆ, ದೂರದ ಬಹರೇನ್, ಸೌದಿ ಅರೇಬಿಯಾ, ಕುವೈತ್, ಒಮಾನ್ ದೇಶಗಳಿಂದಲೂ ಬೆವರಿಳಿಸುತ್ತಿದ್ದ ಬಿಸಿಲಿನ ಬೇಗೆಯಲ್ಲಿ, ನರೇಂದ್ರ ಮೋದಿಯವರನ್ನು ನೋಡಲು  ಬಂದಿದ್ದವರ ದಾಹ ತಣಿಸಲು ನೀರಿನ ಲೋಟಗಳು, ಗ್ಲುಕೋಸ್, ಹಣ್ಣಿನರಸಗಳನ್ನು ಹಂಚುತ್ತಿದ್ದ ಸ್ವಯಂಸೇವಕರು ತಮ್ಮ ಮನೆಯ ಹಬ್ಬವೇನೋ ಎಂಬಂತೆ ಸಂಭ್ರಮಿಸುತ್ತಾ ಮನೆಗೆ ಬಂದ ನೆಂಟರಿಷ್ಟರನ್ನು ಸತ್ಕರಿಸುವ ರೀತಿಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು!  ಒಟ್ಟಾರೆ ಅಲ್ಲೊಂದು ಮಾಯಾಲೋಕವೇ ನಿರ್ಮಾಣವಾಗಿತ್ತು, ಎಂಟು ವರ್ಷಗಳ ನನ್ನ ಗಲ್ಫ್ ಜೀವನದಲ್ಲಿ ನಾನೆಂದೂ ಇಂತಹ ಸಂಭ್ರಮವನ್ನು ದುಬೈನಲ್ಲಿ ಕಂಡಿರಲಿಲ್ಲ, ಮುಂದೆ ಕಾಣುತ್ತೇನೋ ಇಲ್ಲವೋ ಗೊತ್ತಿಲ್ಲ!  ಲಭ್ಯವಿದ್ದ ಸೀಟುಗಳೆಲ್ಲಾ ಸಾಕಷ್ಟು ಮುಂಚಿತವಾಗಿ ಬಂದವರಿಂದ ಅದಾಗಲೇ ಆಕ್ರಮಿಸಲ್ಪಟ್ಟಿದ್ದರಿಂದಾಗಿ ಕಾರ್ಯಕ್ರಮ ಪೂರಾ ನಾವು ನಿಂತೇ ಇರಬೇಕಾಗಿತ್ತು!  ಸುಮಾರು ಐದು ಘಂಟೆಗಳ ಕಾಲ ಸುರಿಯುವ ಬೆವರಿನಲ್ಲಿ, ನೋಯುತ್ತಾ ಅಸಹಕಾರ ಚಳುವಳಿ ಹೂಡುತ್ತಿದ್ದ ಕಾಲುಗಳನ್ನು ಸಮಾಧಾನಿಸುತ್ತಾ ಅದು ಹೇಗೆ ನಿಂತಿದ್ದೆನೋ ಗೊತ್ತಿಲ್ಲ!  

ಮೋದಿಯವರನ್ನು ನೋಡಲು ಕಾತರಿಸುತ್ತಿದ್ದ ಭಾರತೀಯರನ್ನು ತಣಿಸಲು ಕೆಲವು ದೇಶಭಕ್ತಿ ಗೀತೆಗಳೊಂದಿಗೆ ಸಂಜೆ ಘಂಟೆಗೆ ಸರಿಯಾಗಿ ಕಾರ್ರ್ಯಕ್ರಮ ಆರಂಭವಾಯಿತು.  ಮೊದಲಿಗೆ ಲತಾ ಮಂಗೇಶ್ಕರ್ ಅವರ ಮಧುರ ಕಂಠದ ಅಮರಗೀತೆ "ವಂದೇ ಮಾತರಂ" ಹಾಡು ಧ್ವನಿವರ್ಧಕದಲ್ಲಿ ಹೊರಬರುತ್ತಿದ್ದಂತೆ ಅಷ್ಟು ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿದ್ದ ಸುಮಾರು ಐವತ್ತು ಸಾವಿರ ಜನರಲ್ಲಿ ಒಮ್ಮೆಗೇ ವಿದ್ಯುತ್ ಸಂಚಾರವಾದಂತಾಗಿ ಒಕ್ಕೊರಲಿನಲ್ಲಿ ಹಾಡಿಗೆ ತಾವೂ ಧ್ವನಿ ಸೇರಿಸಿ ಹಾಡುತ್ತಿದ್ದರೆ ದುಬೈನ ಆಗಸ ಮೂಕವಾಗಿತ್ತು.  ಮುಂದಿನ ಹಾಡು " ಮೇರಿ ವತನ್ ಕೆ ಲೋಗ್", ಹೀಗೆಯೇ ಹಲವಾರು ಹಾಡುಗಳಿಗೆ ಸೇರಿದ್ದವರೆಲ್ಲ ಭಾವಪರವಶರಾಗಿ ಧ್ವನಿ ಸೇರಿಸುತ್ತಿದ್ದರು.  ಮೋದಿ, ಮೋದಿ, ಎನ್ನುವ ಕೂಗು ತಾರಕಕ್ಕೇರುತ್ತಾ ಹೋದಂತೆ ಕೊನೆಗೂ ಸುಮಾರು ಸಂಜೆ ಏಳೂಮುಕ್ಕಾಲಿಗೆ ಪ್ರಧಾನಿ ನರೇಂದ್ರಮೋದಿಯವರು ವೇದಿಕೆಗೆ ಆಗಮಿಸಿದಾಗ ಐವತ್ತು ಸಾವಿರಕ್ಕೂ ಹೆಚ್ಚಿದ್ದ ಜನತೆ ಹುಚ್ಚೆದ್ದು ಕುಣಿದಿದ್ದರು. ತಮ್ಮ ಎಂದಿನ ಶೈಲಿಯಲ್ಲಿ ನಮಸ್ಕರಿಸಿ ಮಾತನಾಡಲಾರಂಭಿಸಿದ ಮೋದಿಯವರು ಮೊದಲು ಎಲ್ಲ ಅನಿವಾಸಿ ಭಾರತೀಯರಿಗೂ ಧನ್ಯವಾದಗಳನ್ನು ಅರ್ಪಿಸಿ, ಸಂಯುಕ್ತ ಅರಬ್ ಗಣರಾಜ್ಯದ ದೊರೆಗಳಿಗೆ ವಂದಿಸಿದರು

ಸಕುಟುಂಬ ಸಮೇತ ವಿಮಾನ ನಿಲ್ದಾಣಕ್ಕೆ ಬಂದು ತಮ್ಮನ್ನು ಸ್ವಾಗತಿಸಿದ ಸಂಯುಕ್ತ ಅರಬ್ ಗಣರಾಜ್ಯದ ದೊರೆಯಾ ಮಗ ಶೇಕ್ ಮೊಹಮದ್ ಖಲೀಫಾ ಬಿನ್ ಅಲ ನಹ್ಯಾನ್ ಅವರು ತೋರಿಸಿದ ಗೌರವ ಮೋದಿಗಲ್ಲ, ಅದು ಭಾರತದ ನೂರಿಪ್ಪತ್ತೈದು ಕೋಟಿ ಜನತೆಗೆ ಎಂದಾಗ ನೆರೆದಿದ್ದ ಜನರ ಕರತಾಡನ ಮುಗಿಲು ಮುಟ್ಟಿತ್ತು.  ಇಂದು ಭಾರತವನ್ನು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ, ಏಕೆಂದರೆ ನಮ್ಮಲ್ಲಿರುವ ನೂರಿಪ್ಪತ್ತೈದು ಕೋಟಿ ಜನರಲ್ಲಿ ಶೇ. ೬೫ರಷ್ಟು ಜನತೆ ೩೫ಕ್ಕಿಂತ ಕಡಿಮೆ ವಯಸ್ಸಿನವರು, ಯುವಜನತೆಯೇ ನಮ್ಮ ಆಸ್ತಿ, ಅದಕ್ಕಾಗಿಯೇ ನಾನು ಇಡೀ ವಿಶ್ವಕ್ಕೇ ಕರೆ ಕೊಡುತ್ತಿದ್ದೇನೆ, "ಮೇಕ್ ಇನ್ ಇಂಡಿಯಾ" ಎಂದರು.  ಕಳೆದ ನಲವತ್ತು ವರ್ಷಗಳಿಂದಲೂ  ನಾವು ಭಯೋತ್ಪಾದನೆಯಿಂದ, ಸಂಘರ್ಷದಿಂದ ನೊಂದಿದ್ದ ನಾಗಾಲ್ಯಾಂಡ್ ಸಮಸ್ಯೆಯನ್ನು ಬಗೆಹರಿಸಿದ್ದೇವೆ, ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಇದರಿಂದ ಮತ್ತೊಮ್ಮೆ ಖಾತ್ರಿಯಾಗಿದೆ, ಯಾವುದೇ ಸಮಸ್ಯೆಯಾದರೂ ಮಾತುಕತೆಯಿಂದ ಮಾತ್ರ ಬಗೆಹರಿಸಲು ಸಾಧ್ಯ, ಬಂದೂಕಿನಿಂದಲ್ಲ ಎಂದು ಪರೋಕ್ಷವಾಗಿ ಅವರು ಪಾಕಿಸ್ತಾನಕ್ಕೆ ಚುಚ್ಚಿದ್ದಲ್ಲದೆ ಭಯೋತ್ಪಾದನೆಯ ವಿರುದ್ಧ ಎಚ್ಚರಿಕೆಯನ್ನೂ ನೀಡಿದರು. ಸಂಯುಕ್ತ ಅರಬ್ ಗಣರಾಜ್ಯ ಮತ್ತು ಭಾರತ ಭಯೋತ್ಪಾದನೆಯ ವಿರುದ್ಧ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು ಜಂಟಿಯಾಗಿ ಯಾವುದೇ ಭಯೋತ್ಪಾದಕ ಚಟುವಟಿಕೆಯನ್ನು ಎದುರಿಸಲಿದ್ದೇವೆ ಎಂದು ಘೋಷಿಸಿದರು.   


ಸುಮಾರು ವರ್ಷಗಳಿಂದ ಭಾರತೀಯರ ಕನಸಾಗಿದ್ದ ಹಿಂದೂ ದೇವಾಲಯವನ್ನು ಕಟ್ಟಲು ಅಬುದಾಭಿಯಲ್ಲಿ ಜಾಗ ನೀಡುವುದಾಗಿ ಸಂಯುಕ್ತ ಅರಬ್ ಗಣರಾಜ್ಯದ ಯುವರಾಜ ಒಪ್ಪಿಗೆ ನೀಡಿರುವುದಾಗಿ ಘೋಷಿಸಿದರು. ಜೊತೆಗೆ ಭಾರತದಲ್ಲಿ ಸುಮಾರು ನಾಲ್ಕೂವರೆ ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡುತ್ತಿರುವುದಾಗಿಯೂ ತಿಳಿಸಿದರು. ಇದು ನೆರೆದಿದ್ದ ಜನರ ಅಪಾರ ಹರ್ಷಕ್ಕೆ ಕಾರಣವಾಯಿತು.
 



ಭಾರತದಿಂದ ಸಂಯುಕ್ತ ಅರಬ್ ಗಣರಾಜ್ಯಕ್ಕೆ ವಾರಕ್ಕೆ ಸುಮಾರು ೭೦೦ ವಿಮಾನ ಹಾರಾಟಗಳು ನಡೆಯುತ್ತವೆ, ಕೋಟ್ಯಾಂತರ ರೂಪಾಯಿ ಹಣ ಇಲ್ಲಿಂದ ಭಾರತಕ್ಕೆ ಬರುತ್ತದೆ, ಲಕ್ಷಾಂತರ ಜನರು ಇಲ್ಲಿ ಉದ್ಯೋಗ, ವ್ಯಾಪಾರ ಮಾಡುತ್ತಿದ್ದಾರೆ, ಆದರೆ ಒಬ್ಬ ಪ್ರಧಾನಿ ಇಲ್ಲಿಗೆ ಬರಲು ೩೪ ವರ್ಷಗಳು ಬೇಕಾಯಿತು ಎಂದು ಮಾರ್ಮಿಕವಾಗಿ ಹಿಂದಿನ ಸರಕಾರಗಳ ವೈಫಲ್ಯವನ್ನು ಟೀಕಿಸಿದರು. ಭಾರತೀಯ ದೂತಾವಾಸದ ಅಧಿಕಾರಿಗಳು ತಿಂಗಳಿಗೊಮ್ಮೆ ಕಾರ್ಮಿಕರ ವಾಸಸ್ಥಳಗಳಿಗೇ ಭೇಟಿ ಕೊಟ್ಟು ಅವರ ದೂರು ದುಮ್ಮಾನಗಳನ್ನು ಆಲಿಸಿ, ಅವುಗಳಿಗೆ ಪರಿಹಾರವನ್ನು ನೀಡಬೇಕೆಂದು ಆದೇಶಿಸಿರುವುದಾಗಿಯೂ ತಿಳಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ಭಾರತ ಮಾತಾಕಿ ಜೈ ಎಂದು ಎಲ್ಲರಿಂದ ಜೈಕಾರ ಹಾಕಿಸಿದ ಮೋದಿಯವರು ಮಾಡಿದ್ದು ಮಾತ್ರ ಮಹಾನ್ ಜಾದೂ ಅನ್ನುವಂತೆ ಭಾಸವಾಗುತ್ತಿತ್ತು.

ಒಟ್ಟಾರೆ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ "ನರೇಂದ್ರ ಮೋದಿ" ಎನ್ನುವ ಜಾದೂಗಾರ ದೇಶಭಕ್ತಿ ಎನ್ನುವ ಅಮಲನ್ನು ನೆರೆದಿದ್ದ ಎಲ್ಲ ಅನಿವಾಸಿ ಭಾರತೀಯರಲ್ಲಿ ಏರಿಸಿಬಿಟ್ಟಿದ್ದರು.  ನಶೆಯಲ್ಲಿ ತೇಲಾಡಿದ ಅನಿವಾಸಿ ಭಾರತೀಯರಲ್ಲಿ ಇತಿಹಾಸ ಸೃಷ್ಟಿಸಿದ ಮೋದಿಯ ಜಾದೂಗಾರಿಕೆಯಲ್ಲಿ ತಾವೂ ಪಾಲುದಾರರಾದ ಸಂತೋಷ ಎದ್ದು ಕಾಣುತ್ತಿತ್ತು.  ಇಂದಿನ ಕಲುಷಿತ ರಾಜಕೀಯ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯಂತಹ ಕೆಚ್ಚೆದೆಯ ನಾಯಕರ ಅವಶ್ಯಕತೆ ಭಾರತಕ್ಕೆ ಅತ್ಯವಶ್ಯಕ ಎನ್ನುವುದು ಎಲ್ಲರ ಮನದ ಮಾತಾಗಿತ್ತು. 




ನಿಂತು ಸಾಕಾಗಿ ಪದ ಹೇಳುತ್ತಿದ್ದ ಕಾಲುಗಳು,  ಬೆವರಿ ಬೆಂಡಾಗಿ ಹೋಗಿದ್ದ ದೇಹ, ಆದರೆ ಮೋದಿಯವರ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಖುಷಿಯಿಂದ ಉಲ್ಲಸಿತವಾಗಿದ್ದ ಮನದೊಂದಿಗೆ ಮನೆಗೆ ಹಿಂದಿರುಗಿದಾಗ ರಾತ್ರಿ ಹನ್ನೆರಡಾಗಿತ್ತು.  ಮತ್ತದೇ ಮರುದಿನದ ಧಾವಂತದ ಬದುಕನ್ನು ನೆನೆದು ಬೀಗ ತೆಗೆಯುವ ಮುನ್ನವೇ ಕಣ್ಣುಗಳು ತಂತಾನೇ ಮುಚ್ಚಿಕೊಳ್ಳುತ್ತಿದ್ದವು.