Monday, March 28, 2016

ಮರಳುಗಾಡಿನ ಸುಡುಗಾಳಿ,,,,,,,,,,,,,,,,,,,,,,,,,,,,,,,,,


ಮಾತು ಬೇಡ ಕಥೆಯು ಬೇಡ
ಯಾವ ತಂಟೆ ತಕರಾರು ಬೇಡ!

ಮೌನವಾಗಿ ಕುಳಿತು ಕೇಳಲೆನ್ನ
ಮನದೊಳಗಿನ ಪಿಸುಮಾತನ್ನ!

ಮರಳುಗಾಡಿನ ಸುಡುಗಾಳಿಯಂತೆ
ಹೃದಯ ನರಳಿ ನಿಡುಸುಯ್ದಂತೆ!

ಅಲ್ಲ್ಲಿ ನವರಸಗಳ ರುದ್ರನರ್ತನ
ನವೋಲ್ಲಾಸದ ಭಾವಕೀರ್ತನ!  :-)

Monday, March 21, 2016

ಏನೇ ತಿಮ್ಮಿ ನಿಂಗೇನ್ ಕಮ್ಮಿ,,,,,,,,,,,,,,,


ಏನೇ ತಿಮ್ಮಿ ನಿಂಗೇನ್ ಕಮ್ಮಿ 
ಬರ್ತಾ ಬರ್ತಾ ಆದೆ ಢುಮ್ಮಿ !

ನನ್ನ ಮಾತ್ನೆಲ್ಲಾ ಕೇಳ್ದೆ ನೀನು 
ಮೂತಿ ತಿರುವ್ತಿ ಅದೇನ್ ನೀನು 

ನಾನು ಅಂದ್ರೆ ಲೆಕ್ಕಾ ಇಲ್ಲಾ 
ಸುಮ್ಕೆ ಹಂಗೇ ಹೋಗ್ತೀಯಲ್ಲಾ 

ಬಿಸಿ ರೊಟ್ಟಿ ತಟ್ಟಿ ತುಪ್ಪಾ ಹಾಕಿ 
ಖಾರ ಜಾಸ್ತಿ ಕಾಯಿ ಚಟ್ನಿ ಬಡ್ಸಿ 

ಪಕ್ದಾಗ್ ಮಲ್ಗೆ ನಗ್ತಾ ಕುಂತ್ರೆ ನೀನು 
ಪರ್ಪಂಚಾ ಮರ್ತು ತಿಂತೀನ್ ನಾನು 

ಯಾಕ್ನಿಂಗಿದು ಗೊತ್ತಾಗಲ್ವೋ ತಿಮ್ಮಿ 
ನಿಂಗೆ ಬುದ್ಧಿ ಬರೋದ್ಯಾವಾಗ್ಲೇ ತಿಮ್ಮಿ! :-) 

ಚಿತ್ರ: ಅಂತರ್ಜಾಲದಿಂದ. 

ಏನ ಬರೆಯಲೇ ಗೆಳತಿ ಅದಿನ್ನೇನ ಬರೆಯಲೇ! :-( :-(





 ಗೊತ್ತೇನೆ ವಿಶ್ವ ಕವನದ ದಿನವಂತೆ ಇಂದು 
ನಾನೇನ ಬರೆಯಲೇ ಗೆಳತಿ ನಾನೇನ ಬರೆಯಲೇ?

ಮುಗ್ಧ ಮನಸ್ಸಿನ ಮೇಲೆ ನೂರೊಂದು 
ಹೊಡೆತಗಳ ನೀಡಿ ಹೊಡೆದು ಮಲಗಿಸಿ 

ಹರಿವ ಭಾವನೆಗಳಿಗೆ ಅನಿವಾರ್ಯತೆಯ 
ಮಹಾನ್ ಕಟ್ಟೆಯೊಂದನು ಕಟ್ಟಿ ನಿಲ್ಲಿಸಿ 

ಸಂವೇದನಗಳನ್ನೆಲ್ಲ ಸುಟ್ಟು ಕರಕಲಾಗಿಸಿ 
ಕಣ್ತುಂಬಿದ್ದ ಕನಸುಗಳನೆಲ್ಲ ಸಮಾಧಿಯಾಗಿಸಿ 

ಮನದ ತುಂಬ ತುಂಬಿದ್ದ ಭರವಸೆಯ ಬೆಳ್ಳಿ 
ಬೆಳಕನ್ನು ಆರಿಸಿ ಸುತ್ತ ಬರಿ ಕಗ್ಗತ್ತಲಾಗಿಸಿ 

ಆತ್ಮವಿಶ್ವಾಸವ ದಿನವೂ ಕೊಂಚ ಕೊಂಚ ಕುಗ್ಗಿಸಿ 
ಬದುಕ ನರಕ ಮಾಡಿದ ಜನರನ್ನೇ ಸುತ್ತ ತುಂಬಿಸಿ 

ವಿಧಿರಾಯ ವಿಕಟಾಟ್ಟಹಾಸಗೈದು ನಗುತಿರಲು 
ಏನ  ಬರೆಯಲೇ ಗೆಳತಿ ಅದಿನ್ನೇನ  ಬರೆಯಲೇ!  :-( :-( 

Saturday, March 19, 2016

ಅಮ್ಮ ಅಂದ್ರೆ ಸುಮ್ಕೆ ಅಲ್ಲ,,,,,,,,,,,,,,,,,,,,,,,,,,,




ಅಮ್ಮ ಅಂದ್ರೆ ಸುಮ್ಕೆ ಅಲ್ಲ ಗೊತ್ತಾ ನಿಂಗೆ ತಿಮ್ಮಿ 
ಅಮ್ಮ ಅಂದ್ರೆ ಭಾರೀ ಖುಷಿ ಗೊತ್ತಾ ನಿಂಗೆ ತಿಮ್ಮಿ!

ಅಮ್ಮ ಅಂದ್ರೆ ಆಕಾಶದಂಗೆ ಗೊತ್ತಾ ನಿಂಗೆ ತಿಮ್ಮಿ 
ಅಮ್ಮ ಇದ್ರೆ ಆನೆ ಬಲ ಗೊತ್ತೇನೇ ನಿಂಗೆ ತಿಮ್ಮಿ !

ಅಮ್ಮ ಅಂದ್ರೆ ಪ್ರೀತಿ ಕಣೆ ಅವ್ಳೇ ನನ್ನಾ ಬಾಳು ಕಣೇ 
ಅಮ್ಮ ಇಲ್ದೆ ಯಾರಿದ್ರೇನು ಪ್ರಯೋಜ್ನ ಇಲ್ಲ ತಿಮ್ಮಿ!

ಅಮ್ಮ ಕೊಟ್ಟ ಪ್ರೀತಿ ಬ್ಯಾರೆ ಯಾರೂ ಕೊಡ್ಲಾರ್ಕಣೆ ತಿಮ್ಮಿ 
ಅಮ್ಮಂಗ್ ಎಂದೂ ಅವ್ಳೇ ಸಾಟಿ ಬೇರ್ಯಾರಿಲ್ಲಾ ತಿಮ್ಮಿ! 

ಅಮ್ಮನ ನೆನಪು ಆದಾಗೆಲ್ಲಾ ಕಣ್ಣಾಗ್ ನೀರೇ ತಿಮ್ಮಿ 
ಅಮ್ಮ ಇಲ್ದೆ ಯಾರಿದ್ರೇನು ಅದು ದಟ್ದರಿದ್ರಾ ತಿಮ್ಮಿ! :-( :-( 

ಇವ್ರ ಬಾಳೊಂದ್ ಬಾಳಾ ತಿಮ್ಮಿ!

ಎಲ್ಲಿದ್ದೀಯೇ ಹೆಂಗಿದ್ದೀಯೇ ನನ್ನಾ ಮುದ್ದು ತಿಮ್ಮಿ
ಸುತ್ತಾಮುತ್ತಾ ಎಲ್ಲೇ ನೋಡು ಬರೀ ರಾಜಕೀಯ ತಿಮ್ಮಿ
ಜಾತಿ ಗೀತಿ ದಲಿತ ಬಲಿತ ಅಂತಾ ಸಾಯ್ತಾರಲ್ಲೇ ತಿಮ್ಮಿ!
ಎಲ್ಲೋ ಹುಟ್ದೋನು ಎಲ್ಲೋ ಬೆಳ್ದು ಬಲ್ತೋದೋನು
ಮಾನಾ ಬುಟ್ಟು ಪಕ್ಕದ್ ದೇಶಾದ್ ಬಾವ್ಟಾ ಹಿಡ್ದು
ತನ್ನ ಸ್ಥಾನಾ ಮರ್ತು ಜೈ ಜೈ ಅಂತಾನಲ್ಲೇ ತಿಮ್ಮಿ!

ಮಾನ್ಗೆಟ್ ಜನಾ ತಾವುಟ್ಟಿದ್ ದೇಶಾ ಮರ್ತು
ತಮ್ ಧರ್ಮಾ ಮರ್ತು ಮತ್ನಾಗಿದ್ದಂಗ್
ತೂರಾಡ್ಕೊಂಡು ಮಾತಾಡ್ತಾರಲ್ಲೇ ತಿಮ್ಮಿ!
ಇವ್ರಿಗಿಲ್ಲಿ ಅರಿವೇ ಇಲ್ಲಾ ಪ್ರಾಣ ಕೊಟ್ಟೋರ್ ಲೆಕ್ಕ
ಸ್ವಾತಂತ್ರ್ಯ ಅಂದ್ರೆ ಸ್ವೇಚ್ಛೆ ಅಂತಂದ್ಕೊಂಡವ್ರೆ
ಯಾರೇ ಹೇಳೋದ್ ಬುದ್ಧಿ ಇವ್ರಿಗ್ ತಿಮ್ಮಿ!

ಅಪ್ಪ ಯಾರೋ ಅಮ್ಮ ಯಾರೋ ಎಲ್ಲವ್ರೋ
ಅವ್ರ ಕಷ್ಟ ಸುಖ ನೋಡಂಗಿಲ್ಲಸುಮ್ನೆ ಮಾತು
ತುತ್ತು ಅನ್ನ ನೀಡಂಗಿಲ್ಲ ನ್ಯಾಯ ಏನೇ ತಿಮ್ಮಿ!
ಹೆತ್ತಮ್ಮಂಗೆ ಅನ್ನ ಹಾಕ್ದೆ ದೇಶ ಉದ್ಧಾರದ್ ಮಾತು
ಬೇರೇವ್ರ ತಟ್ಟೆ ನೋಡೋ ಇವ್ರಾ ತಟ್ಟೆ ದೊಡ್ಡ ತೂತು
ಬೇಕಿತ್ತೇನೆ ಇಂಥಾ ಕೆಟ್ ಬಾಳು ಇವ್ರಿಗಿಂದು ತಿಮ್ಮಿ! 

ರಟ್ಟೆ ಮುರ್ದು ದುಡ್ಯಾಕಾಗ್ದೆ ಬಿಟ್ಟಿ ದುಡ್ನಾಗ್ ಬದುಕ್ಕೊಂಡು
ಸಿಕ್ದೋರ್ ಕಾಲ್ನ ಹಿಡ್ಕೊಂಡಿವ್ರು ಎಲ್ಲಾರ್ನೂ ಬೈಕೊಂಡಿವ್ರು
ಬದ್ಕೋ ತಿರ್ಪೆ ಬಾಳು ಯಾವ ದೇವ್ರು ಮೆಚ್ತಾನೇಳು ತಿಮ್ಮಿ!
ಬಾಳೋರನ್ನ ಬಾಳೋಕ್ಕೆ ಬುಡ್ದೆ ಆಳೋರನ್ನ ಆಳೋಕ್ಕೆ ಬುಡ್ದೆ
ನಗೋರ್ನೆಲ್ಲಾ ಅಳುಸ್ತಾ ಅಳೋರ್ನೆಲ್ಲಾ ಸಾಯುಸ್ತಾ
ಬದ್ಕೋ ಇವ್ರ ಬಾಳೊಂದ್ ಬಾಳಾ ಹೇಳೇ ನೀನು ತಿಮ್ಮಿ!

(ಚಿತ್ರ: ಅಂತರ್ಜಾಲದಿಂದ)

ಕಾಂಚಾಣಂ,,,,,,,ಕಾಂಚಾಣಂ.....!




ಕಾಂಚಾಣಂ ಕಾರ್ಯ ಸಿದ್ಧಿಃ ಅಂದರು ನಮ್ಮ ಹಿರಿಯರು
ಕಾಂಚಾಣವಿದ್ದಲ್ಲಿ ಪ್ರೀತಿ ಜಾಸ್ತಿ ಅಂದರು ಇನ್ನು ಕೆಲವರು
ಕಾಂಚಾಣವಿಲ್ಲದಿರೆ ಪ್ರೀತಿ ನಾಸ್ತಿ ಅಂದರು ಈಗಿನವರು!
 
ಕಾಂಚಾಣವಿರಲು ಕೈತುಂಬಾ ಏನೆಲ್ಲಾ ಕಾರುಬಾರು
ಕಾಂಚಾಣವಿಲ್ಲದಿರೆ ಬಾಳು ಬರೀ ಬೋರೋ ಬೋರು
ಕಾಂಚಾಣವಿಲ್ಲದಿರೆ ಕೇಳು ನಿನ್ನ ಬಾಳು ಬರಿ ಗೋಳು!













Monday, March 7, 2016

ಭದ್ರತೆಯ ಲೋಕದಲ್ಲಿ - ೧೫. ಕನ್ನಡಿಗರಿಗೇ ಮುಳುವಾದ ಕನ್ನಡಿಗ!


.
;;
 
ಪ್ರಾಥಮಿಕ ಶಾಲೆಯಿಂದಲೂ ಕನ್ನಡ ಮಾಧ್ಯಮದಲ್ಲಿಯೇ ಓದಿದ ನನಗೆ ಕನ್ನಡ ಭಾಷೆಯೆಂದರೆ ಯಾವಾಗಲೂ ಅಚ್ಚುಮೆಚ್ಚು.  ಉದ್ಯೋಗದ ನಿಮಿತ್ತ  ನಮ್ಮ ದೇಶದ ಹಲವಾರು ರಾಜ್ಯಗಳಲ್ಲಿ ಅಡ್ಡಾಡಿದರೂ, ಈಗ ದುಬೈಗೆ ಬಂದು ನೆಲೆಸಿದ್ದರೂ, ರಸ್ತೆಯಲ್ಲಿ ನಡೆದು ಹೋಗುವಾಗಲೋ, ಯಾವುದೋ ಶಾಪಿಂಗ್ ಮಾಲಿನಲ್ಲೋ, ಮತ್ತಾವುದೋ ಹೋಟೆಲ್ಲಿನಲ್ಲೋ ಯಾರಾದರೂ ಕನ್ನಡದಲ್ಲಿ ಮಾತನಾಡುತ್ತಿದ್ದರೆ ಅಚಾನಕ್ಕಾಗಿ ಕಣ್ಣು ಅತ್ತ ಹೊರಳುತ್ತವೆ, ಕಿವಿಗಳು ಅವರ ಮಾತುಗಳನ್ನು ಕೇಳುತ್ತಿರುತ್ತವೆ, ಮನಸ್ಸು ಅವರೊಡನೆ ಮಾತಾಡಲು ಪ್ರೇರೇಪಿಸುತ್ತದೆ. 

ಅಂಥಾ ಕನ್ನಡಾಭಿಮಾನಿಯಾದ ನನಗೆ ಮಲೆಯಾಳಿಗಳೇ ಹೆಚ್ಚಾಗಿದ್ದ ಒಂದು ಸಂಸ್ಥೆಯಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುವಾಗ ನನಗೆ ತುಂಬಾ ಆತ್ಮೀಯನಾಗಿದ್ದವನು ನನ್ನದೇ ಹೆಸರಿನ ಒಬ್ಬ ಆಡಳಿತಾಧಿಕಾರಿ, ಜೊತೆಗೆ ಅವನು ಹುಟ್ಟಿದ್ದೂ ಸಹ ಮೈಸೂರಿನಲ್ಲೇ!  ಸ್ವಾಭಾವಿಕವಾಗಿಯೇ ಅವನು ನನಗೆ ಆತ್ಮೀಯನಾಗಿಬಿಟ್ಟಿದ್ದ, ಜೊತೆಯಲ್ಲಿಯೇ ಕಛೇರಿಯ ತಾರಸಿಯ ಮೇಲಿದ್ದ ಉಪಾಹಾರಗೃಹದಲ್ಲಿ ಕಾಫಿ ಕುಡಿಯುತ್ತಿದ್ದೆವು, ಊಟ ಮಾಡುತ್ತಿದ್ದೆವು,  ಸೋಮವಾರದ ಮಧ್ಯಾಹ್ನ ನಾನು ಮನೆಯಿಂದ ತೆಗೆದುಕೊಂಡು ಹೊಗುತ್ತಿದ ಸಾಂಬಾರಿಗೆ ಅವನು ಯಾವಾಗಲೂ ಪಾಲುದಾರನಾಗಿರುತ್ತಿದ್ದ!  ಏಕೆಂದರೆ ಅಂದು ನನ್ನ ಊಟದ ಡಬ್ಬಿಯಲ್ಲಿ ಕೇವಲ ಸಸ್ಯಾಹಾರಿ ಸಾಂಬಾರು ಇರುತ್ತಿತ್ತು, ಬ್ರಾಹ್ಮಣನಾದ ಅವನಿಗೆ ಗೌಡರ ಮನೆಯ ನಾಲಿಗೆ ಚುರ್ರೆನ್ನಿಸುವ ಖಾರದ ಬಸ್ಸಾರು, ಮಸ್ಸೊಪ್ಪು, ಮಸಾಲೆ ಸಾರು ಅಂದರೆ ತುಂಬಾ ಇಷ್ಟವಾಗಿತ್ತು. 

ನಮ್ಮ ಉದ್ಯಾನ ನಗರಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಿಂದ ಕೇವಲ ಕೂಗಳತೆ ದೂರದಲ್ಲಿದ್ದ ಸಂಸ್ಥೆಯ ಕಚೇರಿಯಲ್ಲಿ ಏನಿಲ್ಲವೆಂದರೂ ಸುಮಾರು ಐದು ನೂರು ಜನ ತಂತ್ರಜ್ಞರು ಕೆಲಸ ಮಾಡುತ್ತಿದ್ದರು.   ಸಾಕಷ್ಟು ಬೆಲೆಬಾಳುವ ಯಂತ್ರೋಪಕರಣಗಳಿಂದ ಕೂಡಿದ್ದ ಸಂಸ್ಥೆಯಲ್ಲಿ ಸ್ವತಃ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಹಲವಾರು ಖಾಸಗಿ ಸಂಸ್ಥೆಗಳ ತಂತ್ರಜ್ಞರಿಗೆ ತರಬೇತಿಯನ್ನು ನೀಡುತ್ತಿದ್ದರು.  ಹೀಗಾಗಿ ಪ್ರತಿದಿನ ಸಂಸ್ಥೆಗೆ ಬಂದು ಹೋಗುವವರ ಸಂಖ್ಯೆ ಗಣನೀಯವಾಗಿತ್ತು.  ಉತ್ತಮ ನಿಯಂತ್ರಣಕ್ಕಾಗಿ ಸುಮಾರು ಇಪ್ಪತ್ತು ಜನರ ಭದ್ರತಾ ತಂಡವಿತ್ತು, ಅವರಲ್ಲಿ ಹೆಚ್ಚಿನವರು ಕನ್ನಡಿಗರಾಗಿದ್ದರು, ಉಸ್ತುವಾರಿಯಾಗಿ ನಾನಿದ್ದೆ!  ಹೀಗಿರುವಲ್ಲಿ ನಮ್ಮ ಭದ್ರತಾ ರಕ್ಷಕರ ತಂಡದ ವಿರುದ್ಧ  ನನ್ನೊಡನೆ ಚೆನ್ನಾಗಿಯೇ ಇದ್ದ ಮಂಜುನಾಥನ ಕಡೆಯಿಂದ  ದೂರುಗಳು ಬರಲಾರಂಭಿಸಿದವು.  ಆರಂಭದಲ್ಲಿ ಅವನ ದೂರುಗಳನ್ನು ಕೇಳಿ ಒಂದಿಬ್ಬರು ಭದ್ರತಾ ರಕ್ಷಕರನ್ನು ಬದಲಾಯಿಸಿ ಅವನನ್ನು ತೃಪ್ತಿಗೊಳಿಸಿದ್ದೆ,  ಆದರೆ ಕ್ರಮೇಣ ಅವನ ದೂರುಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ನಾನು ಸ್ವಲ್ಪ ಜಾಗೃತನಾಗತೊಡಗಿದ್ದೆ. 

ಅವನ ದೂರುಗಳ ಬಗ್ಗೆ ನಮ್ಮ ತಂಡದಲ್ಲಿದ್ದ ಭದ್ರತಾ ರಕ್ಷಕರೊಡನೆ ಚರ್ಚಿಸಿದಾಗ ನನಗೆ ತಿಳಿಯದಿದ್ದ ಅನೇಕ ಕುತೂಹಲಕರ ವಿಷಯಗಳು ತಿಳಿದು ಬಂದಿದ್ದವು.  ನನ್ನೊಡನೆ ಮೃದುವಾಗಿ ಮಾತನಾಡುತ್ತಾ  ಸ್ನೇಹದಿಂದಿದ್ದ ಮೈಸೂರಿನ ಮಂಜುನಾಥ ಅದೊಂದು ರೀತಿಯ ಕೀಳರಿಮೆಯಿಂದ ಬಳಲುತ್ತಿದ್ದ.  ತನಗಿಂತಲೂ ಹೆಚ್ಚು ಸಂಬಳ ಪಡೆಯುತ್ತಿದ್ದ ತಂತ್ರಜ್ಞರ ಮುಂದೆ ಕೇವಲ ಬಿ.. ಪದವೀಧರನಾಗಿದ್ದ ಅವನು ಆತ್ಮವಿಶ್ವಾಸದಿಂದ  ಮಾತನಾಡಲು ತಡವರಿಸುತ್ತಿದ್ದ.  ಹೆಚ್ಚಿನ ಸಂದರ್ಭಗಳಲ್ಲಿ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಸಮಯಕ್ಕೆ ಸರಿಯಾಗಿ  ಮಾಡಲಾಗದೆ ಅವರಿಂದ ಮೂದಲಿಕೆಗೊಳಗಾಗುತ್ತಿದ್ದ, ಅವನಿಗೆ ಕೋಪ ಬಂದರೂ ಅವರ ಮೇಲೆ ತೋರಿಸಲಾಗದೆ ಮನಸ್ಸಿನಲ್ಲೇ ಇಟ್ಟುಕೊಂಡು ಅದೇ ಕೋಪ ಹಾಗೂ ಅಸಮಾಧಾನವನ್ನು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಭದ್ರತಾ ರಕ್ಷಕರ ಮೇಲೆ ಹರಿಹಾಯ್ದು ತೋರ್ಪಡಿಸುತ್ತಿದ್ದ.  ಇವನ ಅಸಮಾಧಾನಕ್ಕೆ ಬಲಿಯಾಗಿ  ಹಲವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಭದ್ರತಾ ರಕ್ಷಕರು ಹಾಗೂ ಸ್ವಚ್ಛತಾ ಸಂಸ್ಥೆಯ ನೌಕರರು ಅಲ್ಲಿಂದ ಎತ್ತಂಗಡಿಯಾಗಿದ್ದರು.  ಅವನ ಸ್ನೇಹಕ್ಕೆ ಕಟ್ಟು ಬಿದ್ದಿದ್ದ ನನಗೆ ನಿಜಾಂಶ ಅರ್ಥವಾಗುವುದರಲ್ಲಿ ಸಾಕಷ್ಟು ವಿಳಂಬವಾಗಿತ್ತು.  ಎಚ್ಚೆತ್ತುಕೊಂಡ ನಾನು  ಅವನ ದೂರುಗಳಿಗೆ ಬೆಲೆ ಕೊಡದೆ, ಯಾವುದೇ ಭದ್ರತಾ ರಕ್ಷಕರನ್ನು ಅಲ್ಲಿಂದ ಬದಲಿಸದೆ ಸ್ಥಿತಪ್ರಜ್ಞನಂತೆ ವರ್ತಿಸತೊಡಗಿದೆ. 

ಅದೇ ಸಮಯದಲ್ಲಿ ಅವನಿಗೆ ಸಹಾಯಕಿಯಾಗಿ ಚೆಂದುಳ್ಳಿ ಚೆಲುವೆಯೊಬ್ಬಳು ಸಂಸ್ಥೆಗೆ ಸೇರಿಕೊಂಡಳು.  ಅವನ ದೂರುಗಳಿಗೆ ನಾನು ತೋರುತ್ತಿದ್ದ ಅಸಡ್ಡೆಯಿಂದಾಗಿ ನನ್ನೊಡನೆ ಮಾತು ಕಡಿಮೆ ಮಾಡಿದ್ದ ಮಂಜುನಾಥ ಈಗ ಹೊಸ ಚೆಲುವೆಯ ಕಣ್ಣೋಟದಲ್ಲಿ ಸೆರೆಯಾಗಿ ಹೋಗಿದ್ದ.  ಯಾವಾಗಲೂ ಒಂಭತ್ತು ಘಂಟೆಗೆ ಐದು ನಿಮಿಷ ಮುಂಚೆ ಕಛೇರಿಗೆ ಬರುತ್ತಿದ್ದವನು ಈಗ ಎಂಟೂವರೆಗೆಲ್ಲಾ ಕಚೇರಿಗೆ ಬರಲು ಆರಂಭಿಸಿದ್ದ,  ಕಛೇರಿಯ ಶುಚಿತ್ವದ ಹೊಣೆ ಹೊತ್ತಿದ್ದ ಸುಂದರಿ ಬೆಳಿಗ್ಗೆ ಎಂಟು ಘಂಟೆಗೆಲ್ಲಾ ಕಛೇರಿಗೆ ಬಂದು ಹತ್ತು ಅಂತಸ್ತಿನ ಕಟ್ಟಡವನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಎಲ್ಲೆಡೆಯೂ ಶುಭ್ರವಾಗಿರುವಂತೆ ಸ್ವಚ್ಛ ಮಾಡಿಸುತ್ತಿದ್ದಳು.  ಮೊದಮೊದಲು ಅವಳೊಡನೆ ಶುರುವಾದ ಸ್ನೇಹದ ಮಾತುಕಥೆ, ಇಬ್ಬರ ನಡುವೆ ಅದೆಂಥದೋ ಹೊಸ ಆಕರ್ಷಣೆಯನ್ನು ಹುಟ್ಟು ಹಾಕಿ, ಔದ್ಯೋಗಿಕ ಸಂಬಂಧಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಹತ್ತಿರವಾಗಿದ್ದರು. 

ಇವರ ಒಡನಾಟವನ್ನು, ಮಾತುಕಥೆಯನ್ನು, ಅವರ ಪ್ರೇಮದಾಟಗಳನ್ನು ಬಹಳ ಹತ್ತಿರದಿಂದಲೇ ನೋಡುತ್ತಿದ್ದ ಭದ್ರತಾ ರಕ್ಷಕರು, ತಮ್ಮ ಸಹೋದ್ಯೋಗಿಗಳನ್ನು ಅವನು ಸುಮ್ಮನೆ ಇಲ್ಲಸಲ್ಲದ ತಪ್ಪುಗಳನ್ನು ಹುಡುಕಿ ಸಂಸ್ಥೆಯಿಂದ ಹೊರಹಾಕಿದ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು, ಅವನ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕೆಂದು ಅವನಿಗೆ ಅರಿವಿಲ್ಲದೆಯೇ ಅವನನ್ನು ಖೆಡ್ಡಾಗೆ ಕೆಡವಬೇಕೆಂದು ಕಾಯುತ್ತಿದ್ದರು.  ಬೆಳಿಗ್ಗೆ ಒಂಭತ್ತಕೆ ಬಂದರೆ ನಾನು ನನ್ನ ಕೆಲಸವನ್ನೆಲ್ಲಾ ಮುಗಿಸಿ ಸಂಜೆ ಆರೂವರೆಗೆ ಕಛೇರಿಯಿಂದ ಹೊರಟು ಬಿಡುತ್ತಿದ್ದೆ.  ಆದರೆ ಪ್ರೇಮದಾಟದಲ್ಲಿ ತೊಡಗಿಕೊಂಡಿದ್ದ ಅವರಿಬ್ಬರೂ ಸಂಜೆ ಏಳೂವರೆಯ ನಂತರವೇ ಕಛೇರಿಯಿಂದ ಹೊರಡುತ್ತಿದ್ದರು. 

ಎಲ್ಲರೂ ಕಛೇರಿಯಿಂದ ಹೊರಟು ಹೋದರೂ ಇವರಿಬ್ಬರು ಮಾತ್ರ ಏಕೆ ಇಷ್ಟೊಂದು ತಡವಾಗಿ ಹೋಗುತ್ತಾರೆ?  ಇದುವರೆಗೂ ಇರದೆ ಇದ್ದ ಅದಾವ ಘನಂದಾರಿ ಕೆಲಸ ಮೈಸೂರಿನ ಮಂಜುನಾಥನಿಗೆ ಈಗ ಅಂಟಿಕೊಂಡಿದೆ?  ಬೆಳಿಗ್ಗೆ ಎಂಟಕ್ಕೆಲ್ಲಾ ಕಛೇರಿಗೆ ಬರುವ ಸುಂದರಿ ರಾತ್ರಿ ಏಳೂವರೆ ಎಂಟರವರೆಗೂ ಯಾಕೆ ಕಛೇರಿಯಲ್ಲಿರುತ್ತಾಳೆನ್ನುವುದು ಈಗ ಭದ್ರತಾ ರಕ್ಷಕರಿಗೆ ಬಿಡಿಸಲಾಗದ ಸಮಸ್ಯೆಯಾಗಿತ್ತು.  ಕಛೇರಿಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳಿದ್ದರೂ ಸಹ ಕಛೇರಿಯ ಒಳಭಾಗದಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತಿರಲಿಲ್ಲ!  ಹೀಗಿರುವಲ್ಲಿ ಠೊಣಪ ಭದ್ರತಾ ರಕ್ಷಕನೊಬ್ಬ ಅವರಿಬ್ಬರ ಹಿಂದೆ ಬಿದ್ದು ಕೊನೆಗೂ ಅವರ "ಲೇಟ್ ಇವ್ನಿಂಗ್" ಪ್ರಹಸನವನ್ನು ಬೇಧಿಸಿಯೇ ಬಿಟ್ಟಿದ್ದ. 

ಅಂದು ನಡೆದಿದ್ದು ಇಷ್ಟೆ,  ಹೊಸದಾಗಿ ಕೆಲಸಕ್ಕೆ ಸೇರಿದ್ದ ಸುಂದರಿಯೂ ಮೈಸೂರು ಮಂಜುನಾಥನೂ ಒಬ್ಬರಿಗೊಬ್ಬರು ಪರಸ್ಪರ ಆಕರ್ಷಣೆಗೊಳಪಟ್ಟು ಕಛೇರಿಯಲ್ಲೇ ಅಲ್ಲದೆ ಲಾಲ್ ಬಾಗ್, ಕಬ್ಬನ್ ಪಾರ್ಕು, ಸಿನಿಮಾ ಅಂತೆಲ್ಲಾ ಸಾಕಷ್ಟು ಸುತ್ತಾಡಿ ಕೊನೆಗೆ, ಕೂಡಿ ನಲಿದು ಸಂತೃಪ್ತಿ ಹೊಂದಲು ಆಯ್ಕೆ ಮಾಡಿದ್ದು ಕಛೇರಿಯೊಳಗಿದ್ದ ಒಂದು ನಿರೀಕ್ಷಣಾ ಕೊಠಡಿಯನ್ನು!  ಸಾಕಷ್ಟು ಪ್ರತಿಷ್ಠಿತ ಸಂಸ್ಥೆಗಳಿಂದ ಇಲ್ಲಿನ ತಂತ್ರಜ್ಞರನ್ನು ಭೇಟಿಯಾಗಲು ಬರುತ್ತಿದ್ದ ಇತರ  ತಂತ್ರಜ್ಞರ ಮಾತುಕಥೆಗೆ ಸಾಕ್ಷಿಯಾಗುತ್ತಿದ್ದ ನಿರೀಕ್ಷಣಾ ಕೊಠಡಿ ಸಂಜೆಯಾಗುತ್ತಿದ್ದಂತೆ ಪ್ರೇಮಪಕ್ಷಿಗಳ ಪ್ರೇಮ ಸಲ್ಲಾಪಕ್ಕೆ, ಕಾಮದಾಟಕ್ಕೆ ಸಾಕ್ಷಿಯಾಗುತ್ತಿತ್ತು.  ಇದನ್ನು ಕಂಡು ಹಿಡಿದ ಭದ್ರತಾ ರಕ್ಷಕನೊಬ್ಬ ಮೊದಲು ಸಂಸ್ಥೆಯ ಮುಖ್ಯಸ್ಥರಿಗೆ ಫೋನ್ ಮೂಲಕ ವಿಚಾರ ತಿಳಿಸಿ ನಂತರ ನನಗೆ ತಿಳಿಸಿದ್ದ! 

ಸಂಸ್ಥೆಯ ಮುಖ್ಯಸ್ಥರು ಮರುದಿನ ಇಬ್ಬರನ್ನೂ ಕರೆದು ವಿಚಾರಿಸಿದಾಗ, ಮೊದಲು ನಿರಾಕರಿಸಿದರೂ  ನಂತರ ಬೇರೆ ದಾರಿಯಿಲ್ಲದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು.  ಮದುವೆಯಾಗಿ ಗಂಡನಿದ್ದರೂ ಅವಿವಾಹಿತ ಮಂಜುನಾಥನೊಡನೆ ಪ್ರೇಮ ಸಂಬಂಧವಿಟ್ಟುಕೊಂಡು, ಕಛೇರಿಯನ್ನೇ  ತಮ್ಮ ಕಾಮದಾಟಕ್ಕೆ ತಾವು ಮಾಡಿಕೊಂಡ ತಪ್ಪಿಗೆ ಸುಂದರಿ ತನ್ನ ಕೆಲಸ ಕಳೆದುಕೊಂಡಿದ್ದಳು.  ಮೈಸೂರಿನಿಂದ ಬಂದು ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಾ ವಾರಕ್ಕೊಮೆ ಊರಿಗೆ ಹೋಗಿ ಬರುತ್ತಿದ್ದ ಮಂಜುನಾಥನನ್ನು ದೂರದ ದೆಹಲಿಯ ಶಾಖೆಗೆ ವರ್ಗಾವಣೆ ಮಾಡಿದ್ದರು.  ಕನ್ನಡಿಗನಾಗಿ ಮಲೆಯಾಳಿಗಳ ನಡುವೆ ಕನ್ನಡಿಗರಿಗೇ ವಿರುದ್ಧವಾಗಿ ವರ್ತಿಸಿದ್ದಲ್ಲದೆ ಹಲವು ಬಡ ಕನ್ನಡಿಗರನ್ನು ಕೆಲಸದಿಂದ ತೆಗೆದು ಹಾಕುವುದಕ್ಕೆ ಕಾರಣನಾಗಿದ್ದ ಮಂಜುನಾಥನ ಮೇಲೆ  ಭದ್ರತಾ ರಕ್ಷಕರು ಬಹಳ ಸಮಂಜಸವಾಗಿಯೇ ಸೇಡು ತೀರಿಸಿಕೊಂಡಿದ್ದರು.  ಕಪ್ಪಿಟ್ಟ ಮುಖದೊಡನೆ  ಅಂತಿಮ ವಿದಾಯ ಹೇಳಲು ಬಂದವನಿಗೆ ನಾನಂತೂ ಏನೂ ಹೇಳದೆ ಸುಮ್ಮನೆ ಅವನ ಮುಖ ನೋಡಿದ್ದೆ.