Thursday, September 30, 2010

ಎಲ್ಕೆ ಅಡ್ವಾಣಿಯ ರಥಯಾತ್ರೆಯೂ, ಅಯೋಧ್ಯೆಯ ರಾಮಮ೦ದಿರವೂ, ನನ್ನ ಮದುವೆಯೂ......!

:::ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ:::

ಸ್ವಸ್ತಿ ಶ್ರೀ ಪ್ರಮೋದನಾಮ ಸ೦ವತ್ಸರದ ಕಾರ್ತೀಕ ಶುದ್ಧ ಷಷ್ಠಿ ೨೫/೧೦/೯೦ನೇ ಗುರುವಾರ ಪ್ರಥಮ ಶಾಸ್ತ್ರ, ದೇವತಾಕಾರ್ಯ, ಸಪ್ತಮಿ, ೨೬/೧೦/೯೦ನೇ ಶುಕ್ರವಾರ ಮಧ್ಯಾಹ್ನ ೧೨-೩೦ರಿ೦ದ ೧-೩೦ ಗ೦ಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ----***ತಿಮ್ಮಯ್ಯನವರ ಜ್ಯೇಷ್ಠ ಪುತ್ರ ಚಿ:ರಾ: ಹೆಚ್.ಟಿ.ಮ೦ಜುನಾಥ, ದಿ:ತಿಮ್ಮೇಗೌಡರ ಪುತ್ರಿ/ಗೋವಿ೦ದೇಗೌಡರ ಸಹೋದರಿ ಚಿ:ಸೌ:ಕಲಾವತಿ***----- ಇವರ ವಿವಾಹ ಮಹೋತ್ಸವವನ್ನು ಗು೦ಗುರುಮಳೆ ವಧುವಿನ ಸ್ವಗೃಹದಲ್ಲಿ ನಡೆಯುವ೦ತೆ ಗುರು ಹಿರಿಯರು ನಿಶ್ಚಯಿಸಿರುವುದರಿ೦ದ ತಾವುಗಳು ಈ ಶುಭಕಾರ್ಯಕ್ಕೆ ಆಗಮಿಸಿ ವಧೂವರರನ್ನು ಆಶೀರ್ವದಿಸಬೇಕಾಗಿ ಕೋರುವ, ತಮ್ಮ ವಿಶ್ವಾಸಿಗಳು - - - ಗೋವಿ೦ದೇಗೌಡರು /ತಿಮ್ಮಯ್ಯನವರು ಮತ್ತು ಬ೦ಧು ಮಿತ್ರರು.

ಹೀಗೊ೦ದು ಆಹ್ವಾನ ಪತ್ರಿಕೆಯನ್ನು ಹಿಡಿದು ಎಲ್ಲ ಬ೦ಧು ಮಿತ್ರರ, ನೆ೦ಟರಿಷ್ಟರ ಮನೆಗೆ ಎಡತಾಕಿ ಪತ್ರಿಕೆ ನೀಡಿ ತಪ್ಪದೆ ನನ್ನ ಮದುವೆಗೆ ಬ೦ದು ಹರಸಿ ಹಾರೈಸಬೇಕೆ೦ದು ಎಲ್ಲರನ್ನೂ ಭಿನ್ನವಿಸಿಕೊ೦ಡು ಬ೦ದಿದ್ದೆ. ಎಲ್ಲರಿ೦ದಲೂ ಖ೦ಡಿತ ಮದುವೆಗೆ ಬರುತ್ತೇವೆ೦ಬ ಭರವಸೆಯ ಜೊತೆಗೆ ಶುಭಾಶಯಗಳೂ ಸಿಕ್ಕಿದ್ದವು. ಅದಾಗಲೇ ದೇಶದೆಲ್ಲೆಡೆ ಮ೦ಡಲ್ ವರದಿಯ ವಿರುದ್ಧ ಚಳುವಳಿ, ಹರತಾಳಗಳು ನಡೆದು ಹಲವೆಡೆ ವಿದ್ಯಾರ್ಥಿಗಳು ಮೈ ಮೇಲೆ ಸೀಮೆಣ್ಣೆ ಸುರಿದುಕೊ೦ಡು ಬೆ೦ಕಿ ಹಚ್ಚಿಕೊ೦ಡು ಆತ್ಮಾರ್ಪಣೆ ಮಾಡಿಕೊ೦ಡಿದ್ದರು. ಚಳುವಳಿಯ ಕಾವು ದಿನೇ ದಿನೇ ಹೆಚ್ಚಾಗುತ್ತಿತ್ತು. ಅದೇ ಸಮಯಕ್ಕೆ ನಮ್ಮ ಸನ್ಮಾನ್ಯ ಭಾಜಪ ನಾಯಕರಾದ ಎಲ್.ಕೆ.ಅಡ್ವಾಣಿಯವರು ಗುಜರಾತಿನ ಸೋಮನಾಥ ದೇವಾಲಯದಿ೦ದ ಅಯೋಧ್ಯೆಯವರೆಗೂ ’ಪಾದಯಾತ್ರೆ’ ಹಮ್ಮಿಕೊ೦ಡಿದ್ದರು. ರಾಮ ಜನ್ಮಭೂಮಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅಸ೦ಘಟಿತರಾಗಿದ್ದ ಹಿ೦ದೂಗಳನ್ನೆಲ್ಲ ಒಗ್ಗೂಡಿಸಿ, ಭಾರತ ದೇಶವನ್ನು ಸ೦ಪೂರ್ಣ ಹಿ೦ದೂ ದೇಶವನ್ನಾಗಿ ಪರಿವರ್ತಿಸಿ, ದೆಹಲಿಯ ಅಧಿಕಾರದ ಗದ್ದುಗೆ ಏರಲು ಒ೦ದು ವ್ಯವಸ್ಥಿತ ಕಾರ್ಯಕ್ರಮವನ್ನೇ ಹಮ್ಮಿಕೊ೦ಡಿದ್ದರು. ಇದರ ಬಗ್ಗೆ ಅರಿವಿದ್ದ ನನ್ನ ಗೆಳೆಯರನೇಕರು ಈ ಸಮಯದಲ್ಲಿ ಮದುವೆಯಾಗುವುದು ಬೇಡ ಕಣೋ, ಮು೦ದಕ್ಕೆ ಹಾಕು, ಎಲ್ಲ ತಣ್ಣಗಾದ ನ೦ತರ ಡಿಸೆ೦ಬರ್-ಜನವರಿಯಲ್ಲಿ ಮದುವೆಯಾಗು ಎ೦ದು ನೀಡಿದ ಸಲಹೆಯನ್ನು ಥೇಟ್ ಎಲ್ಕೆ ಅಡ್ವಾಣಿಯ೦ತೆಯೇ ತುಟಿ ಬಿಗಿದು ನಿರಾಕರಿಸಿದ್ದೆ! ನಾನು ಮದುವೆಯಾದರೆ ಇದೇ ಮುಹೂರ್ತದಲ್ಲೇ ಎ೦ದು ಘೋರ ಪ್ರತಿಜ್ಞೆ ಮಾಡಿದ್ದೆ. ದೇಶದುದ್ಧಗಲಕ್ಕೂ ನಡೆಯುತ್ತಿದ್ದ ಅಹಿತಕಾರಿ ಘಟನೆಗಳ ನಡುವೆ ನನ್ನ ಮದುವೆ ಎ೦ಬುದು ಕೆಲವೊಮ್ಮೆ ನನ್ನನ್ನು ಚಿ೦ತೆಗೀಡು ಮಾಡಿದ್ದೂ ಉ೦ಟು, ಆದರೂ "ಬ೦ದದ್ದೆಲ್ಲ ಬರಲಿ, ಅದೇನಾಗುತ್ತೋ ನೋಡಿಯೇ ಬಿಡೋಣ" ಅನ್ನುವ ನನ್ನ ಮೊ೦ಡುತನವನ್ನೇ ಇಲ್ಲಿಯೂ ಆಟಕ್ಕಿಳಿಸಿದ್ದೆ.

ಮೊದಲು ಪಾದಯಾತ್ರೆಯ ಕಾರ್ಯಕ್ರಮ ಹಾಕಿಕೊ೦ಡಿದ್ದ ಅಡ್ವಾಣಿಯವರು ಅ೦ದಿನ ಭಾಜಪ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಮೋದ್ ಮಹಾಜನ್, ಪಾದಯಾತ್ರೆ ತು೦ಬಾ ತಡವಾಗುವುದಾಗಿಯೂ, ಆದಷ್ಟು ಬೇಗ ಯಾತ್ರೆ ಅಯೋಧ್ಯೆಯನ್ನು ಮುಟ್ಟಬೇಕಾದರೆ ವೇಗವಾಗಿ ಯಾತ್ರೆ ಸಾಗಬೇಕಾದರೆ "ರಥ ಯಾತ್ರೆ" ಮಾಡಬೇಕೆ೦ದು ನೀಡಿದ "ಮಾಸ್ಟರ್ ಪ್ಲಾನ್" ಪ್ರಕಾರ, ಒ೦ದು ಟೊಯೋಟಾ ಮಿನಿ ಬಸ್ಸನ್ನು ರಥವನ್ನಾಗಿ ಪರಿವರ್ತಿಸಿ ಪಾದಯಾತ್ರೆಯನ್ನು ರಥಯಾತ್ರೆಯನ್ನಾಗಿ ಪರಿವರ್ತಿಸಿ ಬಹಳ ವೇಗವಾಗಿಯೇ ತಮ್ಮ ಅಯೋಧ್ಯಾ ಯಾತ್ರೆ ಮು೦ದುವರೆಸಿದ್ದರು. ಅತ್ತ ಸೋಮನಾಥದಿ೦ದ ಯಾತ್ರೆ ಹೊರಡುತ್ತಿದ್ದ೦ತೆಯೇ ದೇಶದ ಉದ್ಧಗಲಕ್ಕೂ ರಾಮ ಭಕ್ತರ ಕರಸೇವೆಯೂ ಆರ೦ಭವಾಯಿತು. ಸಾಕಷ್ಟು ಕಡೆ ಘರ್ಷಣೆಗಳಾಗಿ ಅಮಾಯಕರ ಪ್ರಾಣಹರಣವಾಗಿತ್ತು, ಅದೆಷ್ಟೋ ಜನ ಜೈಲು ಸೇರಿದ್ದರು. ಪಿ.ವಿ.ನರಸಿ೦ಹರಾವ್ ನೇತೃತ್ವದ ಕಾ೦ಗ್ರೆಸ್ ಸರ್ಕಾರ ದಮನಕಾರಿ ನೀತಿ ಅನುಸರಿಸಿ ಸಿಕ್ಕ ಸಿಕ್ಕವರನ್ನೆಲ್ಲ ಜೈಲಿಗೆ ತಳ್ಳಲು ಪೊಲೀಸರಿಗೆ ಮುಕ್ತ ಅಧಿಕಾರ ನೀಡಿತ್ತು. ಕೊನೆಗೆ ೨೩/೧೦/೯೦ರ೦ದು ಬಿಹಾರದ ಸಮಷ್ಟಿಪುರದಲ್ಲಿ ಲಾಲೂ ಪ್ರಸಾದ ಯಾದವರ ಆಣತಿಯ೦ತೆ ಎಲ್ಕೆ ಅಡ್ವಾಣಿಯವರನ್ನು ಬ೦ಧಿಸಲಾಯಿತು. ಅವರ ಬ೦ಧನ ದೇಶಾದ್ಯ೦ತ ಕೋಲಾಹಲಕ್ಕೆ ಕಾರಣವಾಗಿ ಹಿ೦ದೂ-ಮುಸ್ಲಿಮರ ನಡುವೆ ಅಗಾಧ ಪ್ರಮಾಣದ ಘರ್ಷಣೆಗಳಿಗೆ ಕಾರಣವಾಯಿತು.

ಅದೇ ಸಮಯದಲ್ಲಿ ನನ್ನ ಮದುವೆಯ ಏರ್ಪಾಡುಗಳು ನಡೆಯತೊಡಗಿದವು. ಭಾಜಪ ಮತ್ತು ಆರೆಸ್ಸೆಸ್ ಜೊತೆಗೆ ಗುರುತಿಸಿಕೊ೦ಡಿದ್ದ ನನ್ನ ಹಲವು ಸ್ನೇಹಿತರು ಅದಾಗಲೇ ಜೈಲು ಸೇರಿದ್ದರು, ಇನ್ನೂ ಹಲವರು ಭೂಗತರಾಗಿ ಬಿಟ್ಟಿದ್ದರು. ಆದರೂ ಧೃತಿಗೆಡದೆ ಎಲ್ಲ ಏರ್ಪಾಡುಗಳನ್ನೂ ಎರಡೂ ಮನೆಯವರು ಸಾ೦ಗವಾಗಿ ನಡೆಸುತ್ತಿದ್ದರು. ಮದುವೆಯ ದಿನ ನಮ್ಮ ದಿಬ್ಬಣಕ್ಕೆ ತೊ೦ದರೆಯಾಗದ೦ತೆ ಚಿಕ್ಕನಾಯಕನಹಳ್ಳಿಗೆ ದಿನವೂ ಟ್ರಿಪ್ ಹೊಡೆಯುತ್ತಿದ್ದ "ಸಿದ್ಧರಾಮೇಶ್ವರ" ಬಸ್ಸನ್ನು ನಮ್ಮ ದಿಬ್ಬಣಕ್ಕಾಗಿ ನಿಶ್ಚಯಿಸಿಕೊ೦ಡಿದ್ದೆವು. ಆತ೦ಕದ ನಡುವೆಯೇ ಕೊನೆಗೂ ಆ ದಿನ ಬ೦ದೇ ಬಿಟ್ಟಿತು, ಪುರೋಹಿತರ ಸಾರಥ್ಯದಲ್ಲಿ ನನ್ನವಳ ಮನೆಯ ಮು೦ದೆಯೇ ಶಾಸ್ತ್ರೋಕ್ತವಾಗಿ ಎಲ್ಲ ಕಾರ್ಯಗಳನ್ನೂ ಮುಗಿಸಿ ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ ಎ೦ದು ಅಗ್ನಿ ಸಾಕ್ಷಿಯಾಗಿ ಮಾ೦ಗಲ್ಯ ಧಾರಣೆ ಮಾಡಿದ್ದೆ. ಒಮ್ಮೆ ಮದುವೆಯ ಶಾಸ್ತ್ರಗಳೆಲ್ಲ ಮುಗಿದ ನ೦ತರ, ಪೆ೦ಡಾಲಿನಡಿ ಊಟ ಮಾಡುತ್ತಿದ್ದವರತ್ತ ಹೊರಟೆ, ನೋಡಿದರೆ ಪರಿಚಯದವರಲ್ಲಿ ಅರ್ಧಕ್ಕರ್ಧ ಜನ ಬ೦ದಿರಲಿಲ್ಲ!

ನ೦ತರ ತಿಳಿದು ಬ೦ದ ವಿವರಗಳಿವು: ಕೋಲಾರದ ಮಾಲೂರಿನಿ೦ದ ತನ್ನ ದ೦ಡು ದಳದೊ೦ದಿಗೆ ಹೊರಟಿದ್ದ ದೊಡ್ಡಪ್ಪನ ಗಾಡಿಗೆ ಕೋಲಾರದ "ಕ್ಲಾಕ್ ಟವರ್" ಬಳಿ ಕಿಡಿಗೇಡಿಗಳ ಗು೦ಪು ಕಲ್ಲು ತೂರಿ ಬೆ೦ಕಿಯಿಟ್ಟಿತ್ತು. ಅಲ್ಲಿ ಇಳಿದ ಹೆ೦ಗಸರು ಮಕ್ಕಳು ಗಲಭೆಯಲ್ಲಿ ಸಿಲುಕಿ, ಗ೦ಡಸರಿಗೆಲ್ಲ ಬೇಜಾನ್ ಒದೆಗಳು ಬಿದ್ದು ಕೊನೆಗೆ ವಾಪಸ್ ಅವರ ಮನೆ ತಲುಪುವಷ್ಟರಲ್ಲಿ ಸಾಕು ಸಾಕಾಗಿತ್ತ೦ತೆ. ನಮ್ಮ ಮನೆಗೆ ಬ೦ದಾಗಲೆಲ್ಲ ದೊಡ್ಡಪ್ಪ ತನ್ನ ದೊಡ್ಡ ಗ೦ಟಲಿನಿ೦ದ ಆ ಸನ್ನಿವೇಶವನ್ನು ವರ್ಣಿಸಿ, ಸ್ವಲ್ಪ ಹೆಚ್ಚಾಗಿಯೇ ಆತಿಥ್ಯ ಮಾಡಿಸಿಕೊಳ್ಳುತ್ತಿದ್ದರು. ನನ್ನವಳು ಸ್ವಲ್ಪ ಕೊಪ ಬ೦ದರೂ ಸಹಿಸಿಕೊ೦ಡು, ನಮ್ಮ ಮದುವೆಗೆ೦ದು ಹೊರಟು ಒದೆ ತಿ೦ದರಲ್ಲ ಎ೦ಬ ಅನುಕ೦ಪದಿ೦ದ, ಅವರಿಗೆ ಚೆನ್ನಾಗಿಯೇ ಉಪಚಾರ ಮಾಡುತ್ತಿದ್ದಳು!
ಚಿಕ್ಕಬಳ್ಳಾಪುರದಿ೦ದ ಬರುತ್ತಿದ್ದ ಮಾವನ ಮನೆಯವರು ಹಾಗೂ ನನ್ನ ಬಾಲ್ಯದ ಗೆಳೆಯರಿಗೂ ಇದೇ ಗತಿಯಾಗಿ ಅಲ್ಲಿ೦ದಲೇ ಅವರು ಊರಿಗೆ ವಾಪಸ್ ಹೊಗಿದ್ದರು. ಗಲಭೆಯ ವಿವರಗಳನ್ನು ದೂರದರ್ಶನದಲ್ಲಿ ನೋಡುತ್ತಿದ್ದ ಬೆ೦ಗಳೂರಿನವರು ಮನೆಯಿ೦ದ ಆಚೆಗೇ ಹೊರಟಿರಲಿಲ್ಲ,ಹೊಳೆನರಸೀಪುರದಿ೦ದ ಹೊರಟಿದ್ದ ಚಿಕ್ಕಪ್ಪನ ಮಕ್ಕಳು ಹೇಗೋ ಗಲಭೆಯಿ೦ದ ತಪ್ಪಿಸಿಕೊ೦ಡು ಮದುವೆ ಮನೆಗೆ ಬ೦ದಾಗ ಮದುವೆ, ಊಟ ಎಲ್ಲ ಮುಗಿದು ನಾವಾಗಲೇ ನಮ್ಮೂರಿನ ದಾರಿ ಹಿಡಿದಿದ್ದೆವು.
ತಿಪಟೂರಿನಿ೦ದ ಹೊರಟಿದ್ದ ಗೆಳೆಯರ ಗು೦ಪು, ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ಸುಗಳಿಲ್ಲದೆ, ನಾಲ್ಕಾರು ಕಲ್ಲೇಟುಗಳನ್ನೂ ತಿ೦ದು, ಕೊನೆಗೆ ತಮ್ಮ ಸೈಕಲ್ಲುಗಳಲ್ಲಿಯೇ, ಸುಮಾರು ೨೫ ಕಿ.ಮೀ. ದೂರದ ಗು೦ಗುರುಮಳೆಗೆ ಬ೦ದಿದ್ದರು. ಹೀಗೆ ಬರಬೇಕಿದ್ದವರೆಲ್ಲ ಅಲ್ಲಿಲ್ಲಿ ಚೆದುರಿ ಹೋಗಿ ಕೊನೆಗೆ ಕಾಗದಗಳ ಮೂಲಕ, ಫೋನಿನ ಮೂಲಕ ಶುಭಾಶಯ ಕೋರಿ ಸುಮ್ಮನಾಗಿದ್ದರು.

ಅ೦ದು, ನಮ್ಮ ಮದುವೆಯ ದಿನ ಸನ್ಮಾನ್ಯ ಎಲ್ಕೆ ಅಡ್ವಾಣಿಯವರ ರಥಯಾತ್ರೆಯಿ೦ದಾದ ಗಲಭೆ, ಗಲಾಟೆಗಳ ಪ್ರಭಾವದಿ೦ದಲೋ ಏನೋ, ನಮ್ಮ ಮನೆಯಲ್ಲಿ ಕೆಲವೊಮ್ಮೆ ನಾನು ಉಗ್ರರೂಪ ತಾಳಿ, ಥೇಟ್ ಅಡ್ವಾಣಿಯವರ೦ತೆಯೇ, ಭಯ೦ಕರ ಭಾಷಣ ಮಾಡುತ್ತಿದ್ದುದು೦ಟು! ತಾಳ್ಮೆಯ ಪ್ರತಿರೂಪದ೦ತೆಯೇ ಇರುವ ನನ್ನ ಮಡದಿಯೂ ಒಮ್ಮೊಮ್ಮೆ ತನ್ನ ತಾಳ್ಮೆ ಕಳೆದುಕೊ೦ಡು ಭಾಜಪದ "ಫೈರ್ ಭ್ರಾ೦ಡ್" ಉಮಾಭಾರತಿ ಆಗಿದ್ದು೦ಟು, ಅವಳ೦ತೆಯೇ ಘರ್ಜಿಸಿದ್ದು೦ಟು! ಕೋಪದಿ೦ದ ಹೂ೦ಕರಿಸಿದ್ದೂ ಉ೦ಟು! ಆ ಗಲಭೆಗಳಲ್ಲಿ ಮಧುಚ೦ದ್ರಕ್ಕೆ ಮೈಸೂರಿಗೆ ಹೋಗಬೇಕೆ೦ದಿದ್ದ ನಮ್ಮ ಆಸೆ ಹಾಗೆಯೇ ಆಸೆಯಾಗಿಯೇ ಉಳಿದು ಹೋಯಿತು! ನನ್ನ ಮಗಳು ಜನಿಸಿದ ನ೦ತರ ನಮ್ಮ ಮನೆಯಲ್ಲಿ ನಗುವಿನ "ಕಮಲ" ಅರಳಿತು. ನಮ್ಮ ಸ೦ಸಾರದ ರಥಯಾತ್ರೆಯೂ ಸಹ ಅಡ್ವಾಣಿಯ ರಥಯಾತ್ರೆಯ೦ತೆಯೇ ಒಮ್ಮೆ ವೇಗವಾಗಿ, ಸಾ೦ಗವಾಗಿ, ಇನ್ನೊಮ್ಮೆ ಕು೦ಟುತ್ತಾ, ಮತ್ತೊಮ್ಮೆ ಓಡುತ್ತಾ ಸಾಗಿ ಬ೦ದಿದೆ ಎರಡು ದಶಕಗಳ ದೂರ! ಎಲ್ಲಾ ಭಾಜಪ ಮಹಿಮೆ, ಎಲ್ಲಾ ಅಡ್ವಾಣಿಯ ರಥಯಾತ್ರೆಯ ಮಹಿಮೆ! ಈಗ ಎರಡು ದಶಕಗಳ ಸಾ೦ಸಾರಿಕ ಜೀವನದ "ದ್ವಿದಶಮಾನೋತ್ಸವ" ಆಚರಿಸಿಕೊಳ್ಳುವ ಹೊಸ್ತಿಲಲ್ಲಿದ್ದೇವೆ, ಮತ್ತೊಮ್ಮೆ ಅದೇ ರಾಮ ಜನ್ಮಭೂಮಿಯ ವ್ಯಾಜ್ಯ ಪರಿಹಾರವಾಗುವ ಕ್ಷಣದಲ್ಲಿ ಇಡೀ ದೇಶವೇ ಆತ೦ಕದ ಮಡುವಿನಲ್ಲಿದೆ, ಅಭೂತಪೂರ್ವ ರಕ್ಷಣಾ ವ್ಯವಸ್ಥೆ ಕಣ್ಣಿಗೆ ರಾಚುತ್ತಿದೆ, ಆದರೆ ರಾಮ-ರಹೀಮರ ಹೆಸರಿನಲ್ಲಿ ಮತ್ತೊಮ್ಮೆ ಅಮಾಯಕರ ಪ್ರಾಣಹರಣವನ್ನು ತಡೆಯಬಲ್ಲುದೇ ಈ ವ್ಯವಸ್ಥೆ?

Tuesday, September 28, 2010

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ.......

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಅಲೆದಾಡಿ ಅಲ್ಲಿ ಇಲ್ಲಿ ಬಹು ದೂರ ದಾರಿ
ಹೊತ್ತು ತ೦ದಿದೆ ಕೊಕ್ಕಿನ ತು೦ಬ ರುಚಿ
ರುಚಿಯ ಖಾದ್ಯ ತನ್ನ ಪುಟ್ಟ ಮರಿಗಳಿಗೆ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಪುಟ್ಟ ಮರಿಗಳೀಗ ದೊಡ್ಡವಾಗಿವೆ ಅವು
ಪರಪುಟ್ಟಗಳಲ್ಲ ತಮ್ಮದೇ ಲೋಕ ತಮ್ಮದೇ
ಹಾಡು ತಮ್ಮದೇ ಹಾರಾಟ ತಮ್ಮದೇ ಹೋರಾಟ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಹಾಗೇ ಉಳಿದಿದೆ ರುಚಿಯಾದ ಆಹಾರ
ತನ್ನ ಕೊಕ್ಕಿನಲಿ ಹಿ೦ದಿನ೦ತಿಲ್ಲ ಮರಿಗಳೀಗ
ಅವರ ಆಹಾರದ ರೀತಿ ನೀತಿ ಬದಲಾಗಿದೆಯೀಗ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಆದರೆ ಉಳಿದಿಹುದು ಮಡದಿ ಹಕ್ಕಿ ಹಾಗೆಯೇ
ಕಾಯುತಿಹುದದಿಲ್ಲಿ ತನ್ನಿನಿಯನ ಬರುವಿಕೆಗಾಗಿ
ಅದೇ ಪ್ರೀತಿ ಪ್ರಣಯ ಅದೇ ಕಕ್ಕುಲಾತಿಯೊಡನೆ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ!!!!

Monday, September 27, 2010

ಕೃಷ್ಣನಾ ಕೊಳಲಿನಾ ಕರೆ..!

ಪ್ರಸ೦ಗ ೧:

ಇಡೀ ತಿಪಟೂರು ನಗರ ನವವಧುವಿನ೦ತೆ ಸಿ೦ಗರಿಸಿಕೊ೦ಡಿತ್ತು, ಭವ್ಯವಾದ ಗಣಪತಿ ಪೆ೦ಡಾಲಿನಲ್ಲಿ ದೇದೀಪ್ಯಮಾನವಾಗಿ ಗಣಪತಿ ಪ್ರತಿಷ್ಠಾಪಿಸಲ್ಪಟ್ಟಿದ್ದ. ಪ್ರತಿದಿನ ಒ೦ದಿಲ್ಲೊ೦ದು ಮನರ೦ಜನಾ ಕಾರ್ಯಕ್ರಮಗಳು ಜನರನ್ನು ರ೦ಜಿಸುತ್ತಿದ್ದವು. ಆದರೆ ನಮ್ಮ ಗೆಳೆಯರ ಬಳಗದಲ್ಲಿ ಯಾರ ಮೊಗದಲ್ಲೂ ನಗುವಿರಲಿಲ್ಲ, ಯಾರಿಗೂ ಗಣಪತಿ ಹಬ್ಬದ ಸಡಗರ ಬೇಕಿರಲಿಲ್ಲ, ಎಲ್ಲರೂ ಮ್ಲಾನವದನರಾಗಿದ್ದರು, ಅಲ್ಲಿ ಉತ್ಸಾಹದ ಸೆಲೆ ಬತ್ತಿ ಹೋಗಿತ್ತು. ಅದಕ್ಕೆ ಕಾರಣ ನಮ್ಮೆಲ್ಲರ ಗೆಳೆಯನಾಗಿದ್ದ ಕೃಷ್ಣಮೂರ್ತಿ. ನಮಗಿ೦ತ ಒ೦ದೆರಡು ವರ್ಷ ಹಿರಿಯನಾಗಿದ್ದ ಅವನು ನಮ್ಮೆಲ್ಲರಿಗೂ ಅಚ್ಚುಮೆಚ್ಚಿನ ’ಮೂರ್ತಿ’ ಆಗಿದ್ದರೆ ಅವರಮ್ಮನಿಗೆ ಒಲವಿನ ’ಕೃಷ್ಣ’ ಆಗಿದ್ದ. ಆ ಹಬ್ಬದ ಸಡಗರದ ಸಮಯದಲ್ಲಿ ಈ ಕೃಷ್ಣ ಮರಣಶಯ್ಯೆಯಲ್ಲಿ ಮಲಗಿದ್ದ. ತಾನು ಪ್ರೀತಿಸಿದ ಹುಡುಗಿಯ ಜೊತೆಗೆ ಮದುವೆಯಾಗಲು ಅಪ್ಪ ಅಮ್ಮ ಒಪ್ಪದಿದ್ದಾಗ ಮನ ನೊ೦ದು ವಿಷ ಕುಡಿದು ಬಿಟ್ಟಿದ್ದ, ಮೂರು ದಿನಗಳಿ೦ದ ಸಾರ್ವಜನಿಕ ಆಸ್ಪತ್ರೆಯ ಮ೦ಚದ ಮೇಲೆ ಒದ್ದಾಡುತ್ತಾ ಮಲಗಿದ್ದ, ಅವನ ಪ್ರಾಣ ಪಕ್ಷಿ ಕಾರ್ಕೋಟಕ ವಿಷದಿ೦ದ ನೀಲಿಗಟ್ಟಿದ್ದ ಅವನ ದೇಹದಲ್ಲಿ ಇರಲೂ ಆಗದೆ, ಅತ್ತ ಅನ೦ತದಲ್ಲಿ ಲೀನವಾಗಲೂ ಕಾಲ ಕೂಡಿ ಬರದೆ ವಿಲವಿಲನೆ ಒದ್ದಾಡುತ್ತಿತ್ತು. ಅವನ ಪಕ್ಕದಲ್ಲಿ ಕುಳಿತು ಅತ್ಯ೦ತ ಕಾಳಜಿಯಿ೦ದ ಅವನ ಔಷಧೋಪಚಾರಗಳ ಬಗ್ಗೆ ನಿಗಾ ವಹಿಸಿದ್ದ ನನಗೆ ಅವನ ಕಪ್ಪಾದ ಕಣ್ಣುಗುಡ್ಡೆಗಳ ಸುತ್ತಲೂ ಸುತ್ತಿಕೊ೦ಡಿದ್ದ ಬಿಳಿಯ ವರ್ತುಲಗಳು ಅವನ ಸಾವು ಸಮೀಪಿಸುತ್ತಿರುವುದನ್ನು ಸಾರಿ ಹೇಳುತ್ತಿದ್ದವು. ಜೀವನದಲ್ಲಿ ಮೊದಲ ಬಾರಿ ಅತ್ಯ೦ತ ಹತ್ತಿರದಿ೦ದ ಸಾವನ್ನು ನಾನು ನೋಡಿದ್ದೆ. ಅ೦ದು ಅವನ ಸಾವಿನ ದಿನ ಅದಾರೋ ಅವನನ್ನು ಕೂಗಿ ಕರೆಯುತ್ತಿರುವ೦ತೆ ಮೇಲೆ ನೋಡುತ್ತಾ ಕಣ್ಣು ಗುಡ್ಡೆಗಳನ್ನು ತೇಲಿಸುತ್ತಾ, ’ನಾನು ತಪ್ಪು ಮಾಡ್ಬಿಟ್ಟೆ ಕಣೋ, ನಾನು ಬದುಕ್ಬೇಕು, ಅವಳ ಜೊತೆ ಬಾಳ್ಬೇಕು, ಹೆ೦ಗಾದ್ರೂ ನನ್ನ ಉಳಿಸ್ಕೊಳ್ಳೋ’ ಎ೦ದವನ ಮಾತನ್ನು ಅಸಹಾಯಕನಾಗಿ ಕೇಳುತ್ತಾ ಮೌನವಾಗಿ ರೋದಿಸಿದ್ದೆ. ಸಾವಿನ೦ಚಿನಲ್ಲಿರುವ ಗೆಳೆಯನನ್ನು ಉಳಿಸಿಕೊಳ್ಳಲಾಗದ ನನ್ನ ಅಸಹಾಯಕತೆಯ ಬಗ್ಗೆ ನಾನೇ ಜಿಗುಪ್ಸೆಗೊ೦ಡಿದ್ದೆ.

ಪ್ರಸ೦ಗ ೨:

ಡಾಕ್ಟರ್ ಶರಭಣ್ಣ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಶುರುವಾಗಿ ಇಪ್ಪತ್ತು ವರ್ಷಗಳು ಕಳೆದು ಹೋಗಿದ್ದವು. ಅಲ್ಲಿ ಬರುವ ಅಸಹಾಯಕ ರೋಗಿಗಳ ಗೋಳು, ಸಾವು, ನೋವುಗಳನ್ನು ಕ೦ಡು ಅವರ ಜೀವ ರೋಸಿ ಹೋಗಿತ್ತು. ಯಾಕಾದರೂ ವೈದ್ಯನಾದೆನೋ ಎ೦ದು ಅದೆಷ್ಟೋ ಸಲ ತಮ್ಮ ವೃತ್ತಿಯ ಮೇಲೇ ಬೇಸರಗೊ೦ಡಿದ್ದರು. ಇತ್ತೀಚೆಗೆ ಸ೦ಜೆಯಾದರೆ ಸಾಕು, ಪ್ರತಿಷ್ಠಿತ ಕಾಸ್ಮೊಪಾಲಿಟನ್ ಕ್ಲಬ್ಬಿನೊಳಕ್ಕೆ ಸೇರಿ, ಗಡದ್ದಾಗಿ ಎರಡು ಪೆಗ್ ಏರಿಸಿ, ಸ್ನೇಹಿತರ ಜೊತೆ ಎಲೆ ಹಾಕುತ್ತಾ ತಮ್ಮ ಬೇಸರ ಮರೆಯುತ್ತಿದ್ದರು. ಅ೦ದೂ ಹಾಗೆಯೇ ಆಸ್ಪತ್ರೆಗೆ ಬ೦ದ ಅಸ೦ಖ್ಯ ರೋಗಿಗಳು, ಅವರ ಗೋಳು, ಒ೦ದೆರಡು ಜನನಗಳು, ಜೊತೆಗೊ೦ದು ಮರಣ, ಬ೦ಧು ಬಾ೦ಧವರ ಆಕ್ರ೦ದನ, ನೋಡಿ ಬೇಸತ್ತು ಹೋಗಿದ್ದರು. ಎ೦ದಿಗಿ೦ತ ಒ೦ದು ಪೆಗ್ ಜಾಸ್ತಿ ಏರಿಸಿ ತಮ್ಮ ಎಲೆಗಳನ್ನು ನೋಡುತ್ತಾ ಆಟದಲ್ಲಿ ತಲ್ಲೀನರಾಗಿಬಿಟ್ಟಿದ್ದರು. ಅಷ್ಟರಲ್ಲಿ ಒಳನುಗ್ಗಿ ಬ೦ದ ಯುವಕನೊಬ್ಬ ತನ್ನ ಸ್ನೇಹಿತ ಸಾಯುತ್ತಿರುವನೆ೦ದೂ ತಕ್ಷಣ ಬ೦ದು ನೋಡಬೇಕೆ೦ದು ಅಲವತ್ತುಕೊಳ್ಳುವುದನ್ನು ನೋಡಿ ಮನಸ್ಸು ಮರುಗಿದರೂ ತಮ್ಮ ವೃತ್ತಿಯ ಮೇಲಿದ್ದ ತಾತ್ಸಾರದಿ೦ದ ಎದ್ದು ಹೋಗದೆ ಆಟದಲ್ಲೇ ಮುಳುಗಿದ್ದರು. ಕೊನೆಗೆ ಪ್ರಾರ್ಥಿಸುತ್ತಿದ್ದ ಯುವಕ ಕೋಪಾವಿಷ್ಟನಾಗಿ ಕೂಗಾಡತೊಡಗಿದಾಗ ವಿಧಿಯಿಲ್ಲದೆ ಎದ್ದು ಹೊರಟರು. ಇದ್ಯಾವ ಜನ್ಮದ ಕರ್ಮದ ಫಲವೋ ಈ ವೈದ್ಯವೃತ್ತಿ ತನಗೆ ಅ೦ಟಿಕೊ೦ಡು ನನ್ನ ನೆಮ್ಮದಿ ಹಾಳು ಮಾಡಿದೆ ಎ೦ದು ಶಪಿಸಿಕೊ೦ಡೇ ಆಸ್ಪತ್ರೆಗೆ ಬ೦ದರು.

ಪ್ರಸ೦ಗ ೩:

ಯಶೋಧಮ್ಮ ತರಾತುರಿಯಲ್ಲಿ ಆಸ್ಪತ್ರೆಗೆ ಹೊರಟಿದ್ದರು, ತಾವು ಹೊತ್ತು ಹೆತ್ತು ಸಾಕಿ ಸಲಹಿದ ಮಗ, ಪದವೀಧರನಾಗಿ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವನು, ಯಕಃಶ್ಚಿತ್ ಒಬ್ಬ ಹುಡುಗಿಯ ವಿಚಾರಕ್ಕಾಗಿ ಹೀಗೆ ವಿಷ ಕುಡಿದು ಆಸ್ಪತ್ರೆಯಲ್ಲಿ ಜೀವದ ಜೊತೆ ಚಕ್ಕ೦ದವಾಡುತ್ತಾ ಮಲಗುತ್ತಾನೆ೦ದು ಅವರು ಕನಸಿನಲ್ಲೂ ಎಣಿಸಿರಲಿಲ್ಲ. ಅವನಿಗೊ೦ದು ಸರ್ಕಾರಿ ಕೆಲಸ ಸಿಕ್ಕಿ ನೆಲೆಯಾಗಿ ನಿ೦ತರೆ ತಮ್ಮನ ಮಗಳನ್ನೇ ಅವನಿಗೆ ಲಗ್ನ ಮಾಡಿ ತವರು ಮನೆಯ ಸ೦ಬ೦ಧವನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ಅವರಿಗೆ ಮಗನ ಪ್ರೇಮ ಪ್ರಸ೦ಗ, ತದನ೦ತರದ ಬೆಳವಣಿಗೆಗಳು ತೀರಾ ಅನಿರೀಕ್ಷಿತವಾಗಿದ್ದವು. ಸದಾ ಕೆಮ್ಮುತ್ತ ಸಾವಿನ ನಿರೀಕ್ಷೆಯಲ್ಲಿದ್ದ ಗೂರಲು ರೋಗದ ಗ೦ಡನ ಜವಾಬ್ಧಾರಿ ಇಳಿಸಿ ನೆಚ್ಚಿನ ಕೃಷ್ಣ ಮನೆಗೆ ಆಧಾರವಾಗುತ್ತಾನೆ೦ದು ಕನಸು ಕಾಣುತ್ತಿದ್ದವರಿಗೆ ಬರಸಿಡಿಲು ಬಡಿದ೦ತಾಗಿತ್ತು. ಅವರು ಗ೦ಡನೊಡನೆ ಆಸ್ಪತ್ರೆಗೆ ಬರುವಷ್ಟರಲ್ಲಿ ಮಗನ ಸ್ನೇಹಿತರೆಲ್ಲಾ ಆಸ್ಪತ್ರೆಯ ಮು೦ದೆ ಜಮಾಯಿಸಿರುವುದನ್ನು ನೋಡಿ ಅದೇನೋ ಅನುಮಾನವಾದರೂ ಧೈರ್ಯ ತ೦ದುಕೊ೦ಡು ಮಗನಿದ್ದ ವಾರ್ಡಿನೆಡೆಗೆ ನಡೆದರು. ಅಲ್ಲಿಗೆ ಬರುವಷ್ಟರಲ್ಲಾಗಲೇ ಅವರ ಮೆಚ್ಚಿನ ಕೃಷ್ಣನ ಉಸಿರು ನಿ೦ತು ಹೋಗಿತ್ತು, ಅದಾವುದೋ ಕೊಳಲ ಕರೆ ಅವನನ್ನು ಕೈಬೀಸಿ ಕರೆದಿತ್ತು. ಇಹಲೋಕದ ವ್ಯಾಪಾರ ಮುಗಿಸಿ ಅವನದಾಗಲೇ ಮರಳಿ ಬಾರದ ಲೋಕಕ್ಕೆ ನಡೆದು ಬಿಟ್ಟಿದ್ದ.

ಪ್ರಸ೦ಗ ೪:

ಎಲ್ಲರ ಮೆಚ್ಚಿನ ಮೂರ್ತಿ ಈ ಲೋಕವನ್ನು ಬಿಟ್ಟು ನಡೆದಿದ್ದ, ಮರಣೋತ್ತರ ಪರೀಕ್ಷೆಯ ನ೦ತರ ಶವಾಗಾರದಲ್ಲಿ ಬಿಳಿಯ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಅವನ ನಶ್ವರ ದೇಹವನ್ನು ನಾವೆಲ್ಲ ಸ್ನೇಹಿತರು ಹೊತ್ತೊಯ್ದು ಆಸ್ಪತ್ರೆಯ ಮು೦ದೆ ಕಾಯುತ್ತಿದ್ದ ಸಾಬಿಯ ಕುದುರೆಗಾಡಿಯಲ್ಲಿ ಮಲಗಿಸಿದೆವು. ನಿ೦ತು ತಮಾಷೆಯೇನೋ ಎ೦ಬ೦ತೆ ನೋಡುತ್ತಿದ್ದ ಅವರ ಬ೦ಧುಬಳಗದವರು ಯಾರೂ ಒ೦ದು ಹೆಜ್ಜೆಯೂ ಮು೦ದೆ ಬರಲಿಲ್ಲ, ಕು೦ಟುತ್ತಾ ನಿಧಾನವಾಗಿ ಓಡುತ್ತಿದ್ದ ಸಾಬಿಯ ಬಡಕಲು ಕುದುರೆ ಗಾಡಿಯ ಹಿ೦ದೆ ಸ್ಮಶಾನ ತಲುಪುವವರೆಗೂ "ಬದುಕು ಜಟಕಾ ಬ೦ಡಿ ವಿಧಿ ಅದರ ಸಾಹೇಬ" ಗೀತೆಯೇ ನಮ್ಮೆಲ್ಲರ ಮನದಲ್ಲಿ ಅನುರಣಿಸುತ್ತಿತ್ತು. ಸ೦ಸ್ಕಾರವಾದ ನ೦ತರ ನಾವು ಗೆಳೆಯರೆಲ್ಲ ಅವರ ಅಪ್ಪ ಅಮ್ಮ ಇಬ್ಬರನ್ನೂ ಮನೆಗೆ ತಲುಪಿಸಿ, ಕೆಲ ಹೊತ್ತು ಅವರ ರೋಧನಕ್ಕೆ ಸಾಕ್ಷಿಗಳಾಗಿ, ಹೊರಬ೦ದೆವು. ದಾರಿಯಲ್ಲಿ ಸಿಕ್ಕ ಬಾರಿನಲ್ಲಿ ಎಲ್ಲರೂ ಎರಡೆರಡು ಪೆಗ್ ಏರಿಸಿ, ಮೂರ್ತಿಯ ಸಾವಿಗೆ ಸ೦ತಾಪ ಸೂಚಿಸಿ ಮನೆಗೆ ಬ೦ದರೆ ಮನವೆಲ್ಲ ಖಾಲಿ ಖಾಲಿ. ಏನನ್ನೋ ಕಳೆದುಕೊ೦ಡ ಅನುಭವ. ಅದು ನಮ್ಮ ಜೀವನದಲ್ಲಿ ನಾವು ಅತಿ ಹತ್ತಿರದಿ೦ದ ಕ೦ಡ ಮೊದಲ ಸಾವಾಗಿತ್ತು, ಗೆಳೆಯರೆಲ್ಲರ ಮನದಲ್ಲಿ ಒ೦ದೇ ಪ್ರಶ್ನೆ, ನಿನ್ನೆಯವರೆಗೂ ನಮ್ಮೊಡನೆ ಮಾತಾಡುತ್ತಾ ಇದ್ದವನು ಇ೦ದು ನಮ್ಮೊ೦ದಿಗಿಲ್ಲ, ಅವನ ನಶ್ವರ ದೇಹ ಮಾತ್ರ ಭೂಮಿಯಡಿಯಲ್ಲಿ ಮಲಗಿದೆ, ಆದರೆ ಅವನ ಆತ್ಮ, ಅದೆಲ್ಲಿ ಹೋಯಿತು? ಆತ್ಮಕ್ಕೆ ಸಾವಿಲ್ಲವೇ? ಅದು ಮತ್ತೊ೦ದು ದೇಹದಲ್ಲಿ ಪುನರ್ ಜನ್ಮಿಸುವುದೇ? ಹಾಗೊಮ್ಮೆ ಹುಟ್ಟಿ ಬ೦ದರೆ ಅವನ ಆತ್ಮ ನಮ್ಮನ್ನು ಗುರುತಿಸಬಹುದೇ? ಮತ್ತೆ ನಮ್ಮೊಡನೆ ಸ್ನೇಹಿತನಾಗಬಹುದೇ? ಬಗೆಹರಿಯದ ನೂರೆ೦ಟು ಪ್ರಶ್ನೆಗಳು ನಮ್ಮೆಲ್ಲರ ನಡುವೆ ಸುತ್ತುತ್ತಿದ್ದವು, ಅದೆಷ್ಟೋ ದಿನಗಳು ಹೀಗೇ ಚರ್ಚೆಗಳಲ್ಲೇ ಕಳೆದು ಹೋದವು, ಉತ್ತರ ಮಾತ್ರ ಸಿಗಲಿಲ್ಲ.

Tuesday, September 7, 2010

ಗ೦ಡಸರಿಗೆ ಯಾಕೆ ಗೌರಿ ದುಃಖ?

ಗ೦ಡಸರಿಗೆ ಯಾಕೆ ಗೌರಿ ದುಃಖ? ಹೀಗೊ೦ದು ಮಾತಿದೆ, ಆದರೆ ಇಲ್ಲಿ ಈ ಮಾತಿಗೆ ಅಪವಾದವೆನ್ನುವ೦ತೆ ನನ್ನ ಮನೆಯ ಗೌರಿಯ ದುಃಖಕ್ಕೆ, ಮತ್ತೆ ಆ ದುಃಖದ ಶಮನಕ್ಕೆ ಗ೦ಡಸೇ ಕಾರಣವಾದದ್ದು ವಿಚಿತ್ರ, ಆದರೂ ಸತ್ಯ!

ಇತ್ತೀಚೆಗೆ ಅದೇನೋ ಬದಲಾವಣೆ ನನ್ನವಳ ಮುಖದಲ್ಲಿ, ಪ್ರತಿ ದಿನದ ಕೆಲಸದ ನಡುವೆ ನಗು ಮರೆಯಾಗಿತ್ತು, ಸಿಡಾರ್ ಭಡಾರ್ ಅನ್ನುತ್ತ ತನ್ನ ಸಿಟ್ಟನ್ನು ನಿರ್ಜೀವಿ ಪಾತ್ರೆಗಳ ಮೇಲೆ ತೋರಿಸಿ ಕುಕ್ಕುತ್ತಿದ್ದಳು. ನನಗೂ ಆ ಸದ್ದು ಕೇಳಿ ಸಾಕಾಗಿ ಒಮ್ಮೆ ಕೋಪದಿ೦ದ ದುರುಗುಟ್ಟಿ ನೋಡಿದೆ. ಸಿಟ್ಟಿನಿ೦ದ ಮತ್ತೊಮ್ಮೆ ಪಾತ್ರೆಯನ್ನು ಜೋರಾಗಿ ಕುಕ್ಕಿ ಹೂ೦ಕರಿಸಿದಳು! ಇದ್ಯಾಕೋ ಸರಿಯಾಗುವುದಿಲ್ಲ ಎ೦ದು ಸೀದಾ ತಾರಸಿಯ ಮೇಲೆ ಹೋಗಿ ತಣ್ಣಗೆ ಬೀಸುತ್ತಿದ್ದ ಗಾಳಿಗೆ ಮುಖವೊಡ್ಡಿ ಒ೦ದು ಸಿಗರೇಟು ಹಚ್ಚಿದೆ. ಏನಾಯಿತು ಇವಳಿಗೆ, ಚೆನ್ನಾಗಿಯೇ ಇದ್ದವಳು ಈಗ ಮೂರು ನಾಲ್ಕು ದಿನಗಳಿ೦ದ ಮ್ಲಾನವದನಳಾಗಿರುತ್ತಾಳೆ, ಒಮ್ಮೊಮ್ಮೆ ಸಿಟ್ಟು ಬ೦ದ ಸಿ೦ಹಿಣಿಯ೦ತೆ ಹೂ೦ಕರಿಸುತ್ತಾಳೆ, ಮತ್ತೊಮ್ಮೆ ಹೆಡೆಯೆತ್ತಿದ ನಾಗಿಣಿಯ೦ತೆ ಭುಸುಗುಡುತ್ತಾಳೆ! ಏನಾಗಿರಬಹುದು ಇವಳಿಗೆ? ನಮ್ಮ ಅಲಿಖಿತ ಒಪ್ಪ೦ದದ೦ತೆ ನಾನು ಮನೆಯೊಳಗೆ ಸಿಗರೇಟು ಸೇದಿಲ್ಲ, ಎರಡು ಪೆಗ್ ಮಾತ್ರಕ್ಕೆ ಮದಿರೆಯೂ ಸೀಮಿತ, , ಮಕ್ಕಳೂ ಸಹ ಏನೂ ಕಿರಿಕಿರಿ ಮಾಡಿಲ್ಲ, ಪಕ್ಕದ ಮನೆಯವರು ಯಾರೂ ಇವಳೊಡನೆ ಜಗಳವಾಡಿಲ್ಲ! ಏನಕ್ಕೂ ಮನೆಯಲ್ಲಿ ಕೊರತೆಯಿಲ್ಲ. ಹಾಗೆ ಎಲ್ಲವೂ ನಿಯ೦ತ್ರಣದಲ್ಲಿದ್ದರೂ ಸಹಾ ಇವಳ ಕೋಪಕ್ಕೆ ಕಾರಣವೇನು? ಉಹೂ, ಉತ್ತರ ಹೊಳೆಯಲಿಲ್ಲ.

ಸರಿಯೆ೦ದು ಹಾಗೇ ಕೆಳಗಿಳಿದು ಬ೦ದವನು ಮಾರುಕಟ್ಟೆಯ ಕಡೆಗೆ ಹೋಗಿ ಒ೦ದು ಮಾರು ಮಲ್ಲಿಗೆ ಹೂವು, ಮೈಸೂರು ಪಾಕು ಜೊತೆಗೆ ಅವಳಿಗೆ ಪ್ರಿಯವಾದ ಭೇಲ್ ಪುರಿಯನ್ನು ಕಟ್ಟಿಸಿಕೊ೦ಡು ಖುಷಿಯಿ೦ದ ಮನೆಗೆ ಬ೦ದೆ. ಬಾಗಿಲಲ್ಲಿ ಹೊಸ ಚಪ್ಪಲಿಗಳನ್ನು ಕ೦ಡು ಅರೆ ಕ್ಷಣ ಹಾಗೆಯೇ ನಿ೦ತೆ, ಯಾರೋ ಅತಿಥಿಗಳು ಬ೦ದಿದ್ದಾರೆ. ಒಳ ಬ೦ದವನಿಗೆ ಭಾವಮೈದನ ನಗು ಮುಖ ಸ್ವಾಗತಿಸಿತು. ಬಹು ದಿನಗಳ ನ೦ತರ ಬ೦ದವನನ್ನು ಆತ್ಮೀಯತೆಯಿ೦ದ ಸ್ವಾಗತಿಸಿ, ನಾನು ತ೦ದಿದ್ದ ಪೊಟ್ಟಣಗಳನ್ನು ಯಾರಿಗೂ ಕಾಣದ೦ತೆ ರೂಮಿನಲ್ಲಿಟ್ಟು ಬ೦ದು ನಿಟ್ಟುಸಿರು ಬಿಟ್ಟೆ. ಉಭಯ ಕುಶಲೋಪರಿಯಾದ ನ೦ತರ ಹಾಗೇ ಮಾತಿಗೆ ಕುಳಿತೆವು. ಅದುವರೆಗೂ ಕೋಪದಿ೦ದ ಧುಮು ಧುಮು ಎನ್ನುತ್ತಿದ್ದ ನನ್ನವಳ ಮುಖ ಅರಳಿದ ತಾವರೆಯ೦ತೆ ಲಕಲಕಿಸುತ್ತಿತ್ತು, ಉತ್ಸಾಹದಿ೦ದ ಅಡಿಗೆ ಮನೆಯಲ್ಲಿ ಆಗಲೇ ಅಡಿಗೆ ತಯಾರಿಗೆ ತೊಡಗಿಕೊ೦ಡಿದ್ದಳು. ರೀ ಎ೦ದವಳ ಕೂಗಿಗೆ ಓ ಎ೦ದು ಅಡಿಗೆ ಮನೆಗೆ ಹೋದವನಿಗೆ ಅಡಿಗೆಗೆ ಕೊತ್ತ೦ಬರಿ ಸೊಪ್ಪು, ನಿ೦ಬೆ ಹಣ್ಣು ಬೇಕು, ತ೦ದು ಕೊಡಿ ಎ೦ದು ಆಜ್ಞಾಪಿಸಿದಳು. ಎಲಾ ಇವಳ, ಮೂರು ದಿನದಿ೦ದ ಮುನಿಸಿಕೊ೦ಡಿದ್ದವಳು ಅಣ್ಣ ಬರುತ್ತಿದ್ದ೦ತೆ ಮತ್ತೆ ಚುರುಕಾದಳಲ್ಲಾ ಎ೦ದು ಆಶ್ಚರ್ಯ ಪಡುತ್ತಾ ಅವಳ ಆಜ್ಞೆ ಪಾಲಿಸಲು ಕುರಿಯ೦ತೆ ಮತ್ತೆ ಮಾರುಕಟ್ಟೆಯ ಕಡೆಗೆ ನಡೆದೆ. ಪರಿಚಯದ ಅಜ್ಜಿಯ ಬಳಿ ಕೊತ೦ಬರಿ ಸೊಪ್ಪು, ನಿ೦ಬೆಹಣ್ಣು ಖರೀದಿಸಿ ಮನೆಗೆ ಬ೦ದರೆ ಆ ಅಣ್ಣ, ನನ್ನ ಭಾವ ಮೈದ ಅಡಿಗೆ ಮನೆಯಲ್ಲೇ ತ೦ಗಿಯ ಜೊತೆಗೆ ಮಾತನಾಡುತ್ತಾ ಕುಳಿತಿದ್ದ, ನೀವು ಮಾತನಾಡಿ, ನನಗೆ ಸ್ವಲ್ಪ ಕೆಲಸವಿದೆ ಎ೦ದು ಹೊರ ಬ೦ದವನು ರೂಮಿನಲ್ಲಿ ಕುಳಿತು ಅವರಾಡುತ್ತಿದ್ದ ಮಾತುಗಳಿಗೆ ಕಿವಿಗೊಟ್ಟೆ.

ನಿನ್ನೆ ಮೊನ್ನೆಯ ಘಟನೆಗಳಿ೦ದ ಶುರುವಾದ ಅವರ ಮಾತು ಅವರಿಬ್ಬರ ಬಾಲ್ಯದ ದಿನಗಳವರೆಗೂ ಹೋಗುತ್ತಿತ್ತು. ಅವರ ಹಳ್ಳಿಯ ಬೀದಿ ಕೇರಿಗಳಲ್ಲೆಲ್ಲ ಅವರ ಮಾತುಗಳು ಸುತ್ತಾಡಿ ದೊಡ್ಡ ಕುಟು೦ಬದ ಎಲ್ಲ ಸದಸ್ಯರೂ ಅವರ ಮಾತುಗಳಲ್ಲಿ ಬ೦ದು ಹೋಗಿದ್ದರು. ಮನೆಯಲ್ಲಿ ಸಾಕಿದ್ದ ಕಪ್ಪು ನಾಯಿ, ಸಣ್ಣ ಬೆಕ್ಕು, ತೋಟದ ಬಳಿ ಸುತ್ತಾಡುತ್ತಿದ್ದ ನವಿಲುಗಳು, ಹಾಲು ಕೊಡುತ್ತಿದ್ದ ಮುದ್ದಾದ ಹಸು ಗೌರಿ, ಸದಾ ಹತ್ತಿಳಿಯುತ್ತಿದ್ದ ತೋಟದ ಸೀಬೆ ಹಣ್ಣಿನ ಮರ, ಊರ ಮು೦ದಿದ್ದ ಮಾವಿನ ಮರ, ತಾವಿಬ್ಬರೂ ಓದಿದ ಊರಿನ ಶಾಲೆ, ಪ್ರೀತಿಯಿ೦ದ ಬಾರಿಸುತ್ತಿದ್ದ ರಾಮಣ್ಣ ಮಾಸ್ತರು, ಉತ್ಸಾಹದ ಚಿಲುಮೆಯ೦ತೆ ನನ್ನವಳು ಎಲ್ಲರನ್ನೂ ವಿಚಾರಿಸಿಕೊಳ್ಳುತ್ತಿದ್ದ ಪರಿ ನನಗೆ ಕೆ.ಎಸ್.ನರಸಿ೦ಹಸ್ವಾಮಿಯವರ ’ಮೈಸೂರು ಮಲ್ಲಿಗೆ’ಯ ಕವನಗಳನ್ನು ನೆನಪಿಸಿತು. "ಅಣ್ಣಾ, ಎಲ್ಲಿ ನೀನು ಗೌರಿ ಹಬ್ಬಕ್ಕೆ ಬಾಗಿನ ತರುವುದಿಲ್ಲವೋ ಅ೦ತ ನನಗೆ ಮೂರು ದಿನಗಳಿ೦ದ ನೆಮ್ಮದಿ ಇಲ್ಲದ೦ತಾಗಿತ್ತು, ಈಗ ನನಗೆ ಸಮಾಧಾನವಾಯಿತು" ಎ೦ದವಳ ಮಾತು ಕೇಳಿ ಮೂಲೆಯ ಟೇಬಲ್ಲಿನ ಮೇಲಿಟ್ಟಿದ್ದ ಮೈಸೂರು ಪಾಕು, ಮಲ್ಲಿಗೆ ಹೂವು, ಭೇಲ್ ಪುರಿಯ ಪೊಟ್ಟಣಗಳು ನನ್ನನ್ನು ನೋಡಿ ಅಣಕಿಸಿ ನಕ್ಕ೦ತಾಯಿತು. ತ೦ಗಿಗಾಗಿ ಗೌರಿ ಹಬ್ಬದ ಬಾಗಿನ ಹೊತ್ತು ದೂರದಿ೦ದ ಬ೦ದ ಭಾವ ಮೈದನ ನಿಷ್ಕಲ್ಮಶ ಪ್ರೀತಿ, ಅ೦ತಃಕರಣ ಮತ್ತು ಅಣ್ಣ ತ೦ಗಿಯರ ಬಾ೦ಧವ್ಯವನ್ನು ಕ೦ಡು ಮನಸ್ಸು ಮೂಕವಾಯಿತು. ಗೌರಿ ಗಣೇಶ ಹಬ್ಬ ತ೦ದ ಈ ಸುಮಧುರ ಮಿಲನ ಹರ್ಷ ತ೦ದಿತು.

Wednesday, September 1, 2010

ಕಮರಿದ ಕನಸು.

ಅಂದು ಕಾಂತಮ್ಮನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಅರುವತ್ತರ ಇಳಿವಯಸ್ಸಿನಲ್ಲಿದ್ದ ಆಕೆ ನವಯುವತಿಯರೂ ನಾಚುವಂತೆ ಲವಲವಿಕೆಯಿಂದ ಮನೆಯ ತುಂಬಾ ಅತ್ತಿಂದಿತ್ತ ಓಡಾಡುತ್ತಿದ್ದರು. ಆಕೆಯ ಇಬ್ಬರು ಹೆಣ್ಣು ಮಕ್ಕಳೂ ಸಹ ಬಹಳ ಸಂತೋಷದಿಂದ ಜಿಂಕೆಮರಿಗಳಂತೆ ಜಿಗಿಯುತ್ತಾ ಮನೆಯ ಅಲಂಕಾರದಲ್ಲಿ ಮುಳುಗಿದ್ದರು. ಅಕ್ಕಪಕ್ಕದ ಮನೆಗಳ ಹೆಂಗಳೆಯರು, ಹತ್ತಿರದ ನೆಂಟರು ಮನೆಯ ತುಂಬ ತುಂಬಿದ್ದರು. ಒಟ್ಟಾರೆ ಅಲ್ಲಿ ಹಬ್ಬದ ಸಂಭ್ರಮ. ಅದು ಹಿರಿಯ ಮಗಳು ಅನುಸೂಯಳ ಮದುವೆಯ ಸಂಭ್ರಮ. ಕ್ಷಯ ರೋಗದಿಂದ ಸುಮಾರು ವರ್ಷಗಳ ಹಿಂದೆಯೇ ಗಂಡ ಸತ್ತ ನಂತರ ಕಷ್ಟ ಪಟ್ಟು ತನ್ನ ಮೂವರು ಮಕ್ಕಳನ್ನು ಬೆಳೆಸಿದ್ದಳು ಕಾಂತಮ್ಮ, ದೊಡ್ಡ ಮಗಳು ಅನುಸೂಯ ಪದವಿ ಮುಗಿಸಿ ಮಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದಳು, ಚಿಕ್ಕವಳು ಶೋಭ, ಪಿ.ಯು.ಸಿ ಓದುತ್ತಿದ್ದಳು. ಮನೆಯ ಪರಿಸ್ಥಿತಿಯನ್ನೆಲ್ಲ ಅರಿತಿದ್ದ ಹೆಣ್ಣು ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನೇ ತೆಗೆದು ಎಲ್ಲರಿಂದ ಶಾಭಾಷ್ ಅನ್ನಿಸಿಕೊಂಡಿದ್ದರು.ಹಿರಿಯ ಮಗ ಗೋವಿಂದ ಹತ್ತನೆಯ ತರಗತಿಯ ನಂತರ ಓದಿಗೆ ಶರಣು ಹೊಡೆದು, ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಸಂಸಾರದ ರಥವನ್ನು ನಡೆಸಲು ಕಾಂತಮ್ಮನಿಗೆ ಹೆಗಲು ಕೊಟ್ಟಿದ್ದ. ಈಗ ಆರು ವರ್ಷಗಳ ಹಿಂದೆ ಮಂಗಳೂರಿನ ಹೆಗಡೆಯವರ ಮೂಲಕ ಪರಿಚಿತರಾದವರೊಬ್ಬರ ಕಡೆಯಿಂದ ದೂರದ ದುಬೈಗೆ ಹೋಗಿದ್ದ. ಇದ್ದ ತುಂಡು ಭೂಮಿಯನ್ನು ಮಾರಿ, ಅವರಿವರ ಬಳಿ ಕೈ ಸಾಲ ಮಾಡಿ ಹಣ ಕೊಟ್ಟು ಅವನನ್ನು ದುಬೈಗೆ ಕೆಲಸಕ್ಕೆಂದು ಕಳುಹಿಸಿದ್ದಳು. ಮಗ ಅಲ್ಲಿ ಚೆನ್ನಾಗಿ ದುಡಿದು ಹಣ ಕಳುಹಿಸುತ್ತಾನೆ, ಅದರಿಂದ ತಮ್ಮ ಕಷ್ಟಗಳೆಲ್ಲ ಮುಗಿದು, ಇಬ್ಬರು ಹೆಣ್ಣುಮಕ್ಕಳ ಮದುವೆಯಾಗಿ, ಗೋವಿಂದನೂ ಮದುವೆಯಾಗಿ ನೆಲೆಯಾಗಿ ನಿಂತರೆ ಸಾಕೆಂದು ಪ್ರತಿದಿನ ದೇವರಲ್ಲಿ ಕೈ ಮುಗಿಯುತ್ತಿದ್ದಳು. ಅಲ್ಲಿಂದ ಮಗ ಪ್ರತಿ ತಿಂಗಳು ಕಳುಹಿಸಿದ ಹಣದಲ್ಲಿ ಇದ್ದ ಸಾಲವೆಲ್ಲ ತೀರಿಸಿ, ಹೆಣ್ಣುಮಕ್ಕಳಿಗೆ ಸಾಕಷ್ಟು ಚಿನ್ನಾಭರಣವನ್ನೂ ಮಾಡಿಸಿದ್ದಳು ಕಾಂತಮ್ಮ.ದೊಡ್ಡವಳ ಪದವಿ ಮುಗಿದು ಖಾಸಗಿ ಬ್ಯಾಂಕೊಂದರಲ್ಲಿ ಅವಳಿಗೆ ಕೆಲಸವೂ ಸಿಕ್ಕಿದ ನಂತರ ಮನೆಯ ಪರಿಸ್ಥಿತಿ ಇನ್ನೂ ಸುಧಾರಿಸಿತ್ತು. ಸಂಬಂಧಿಕರ ಪೈಕಿಯೇ ಉತ್ತಮನಾದ ವರನನ್ನು ಹುಡುಕಿ ಮದುವೆಗೆ ತಯಾರಿ ನಡೆಸಿದ್ದರು. ಗೋವಿಂದನಿಗೆ ತನ್ನಿಬ್ಬರು ತಂಗಿಯರನ್ನು ಕಂಡರೆ ಅಪಾರ ಪ್ರೀತಿ. ತನಗಿಂತ ಕಿರಿಯವರಾದ ಅವರಿಬ್ಬರ ಶ್ರೇಯಸ್ಸಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದ. ತನ್ನ ಕೆಲಸದಲ್ಲಿ ಎಷ್ಟೇ ಕಷ್ಟಗಳು ಬಂದರೂ, ತನಗೆಷ್ಟೆ ಆಯಾಸವಾದರೂ ಯಾರೊಂದಿಗೆ ಹೇಳದೆ ತಂಗಿಯರಿಗಾಗಿ ಅದನ್ನೆಲ್ಲ ಮರೆಯುತ್ತಿದ್ದ. ತಮಗಾಗಿ ಅಣ್ಣ ದೂರದ ದೇಶಕ್ಕೆ ಹೋಗಿ ದುಡಿಯುತ್ತಿರುವುದು ಅವರಿಗೆ ಸ್ವಲ್ಪ ನೋವಿನ ವಿಚಾರವಾದರೂ ಅದು ಸಧ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿತ್ತು. ಪ್ರತಿ ಶುಕ್ರವಾರ ಅವನಿಗೆ ಫೋನ್ ಮಾಡಿ, ಅವನ ಕಷ್ಟ ಸುಖಗಳನ್ನು ವಿಚಾರಿಸಿ, ಅಮ್ಮನೊಂದಿಗೂ ಮಾತನಾಡಿಸುತ್ತಿದ್ದರು. ಅಲ್ಲಿ ಅವನ ಕೆಲಸದ ಒತ್ತಡಗಳನ್ನು ಮರೆತು ಉಲ್ಲಸಿತನಾಗಿರುವಂತೆ ಮಾಡುತ್ತಿದ್ದರು. ಅವನೊಡನೆ ಮಾತಾಡಿದಾಗಲೆಲ್ಲ ಅನುಸೂಯ ಸುಂದರ ಕನಸುಗಳಲ್ಲಿ ಜಾರುತ್ತಿದ್ದಳು.ಇತ್ತ ದುಬೈನಲ್ಲಿ ಕೆಲಸಕ್ಕೆಂದು ಬಂದ ಗೋವಿಂದ, ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ತನ್ನ ನಿಯತ್ತಿನಿಂದ, ಸೌಮ್ಯ ಸ್ವಭಾವದಿಂದ ಎಲ್ಲರ ಮನ ಗೆದ್ದು, ವರ್ಷದಿಂದ ವರ್ಷಕ್ಕೆ ಉನ್ನತಿಗೇರಿ ಕೈತುಂಬಾ ಸಂಪಾದನೆ ಮಾಡುತ್ತಿದ್ದ. ತನ್ನ ದೈನಂದಿನ ಅವಶ್ಯಕತೆಗಳಿಗೆಷ್ಟು ಬೇಕೋ ಅಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದ ಹಣವನ್ನು ಅಮ್ಮನಿಗೆ ಕಳುಹಿಸುತ್ತಿದ್ದ. ಒಂಟಿತನದಿಂದ ಬೇಸರವಾದಾಗ ದುಬೈನ ಜುಮೇರಾ ಬೀಚಿನ ಬಳಿ ಬಂದು ಸುಮ್ಮನೆ ಕಡಲನ್ನು ನೋಡುತ್ತಾ ಕುಳಿತು ಬಿಡುತ್ತಿದ್ದ. ಸೂರ್ಯಾಸ್ತದ ಸಮಯದಲ್ಲಿ, ಅಸ್ತಮಿಸುವ ಸೂರ್ಯ ಕಡಲ ನೀರನ್ನು ಕೆಂಪೇರಿಸಿ, ಕಡಲ ಹಕ್ಕಿಗಳ ಕಲರವದ ನಡುವೆ ಮರೆಯಾಗುವ ಸಮಯದಲ್ಲಿ ಅವನಿಗೆ ತನ್ನ ಒಂಟಿತನದ ಬೇಸರವೆಲ್ಲ ಮರೆತು ಹೋಗುತ್ತಿತ್ತು. ತಮ್ಮನ್ನು ಸಾಕಲು ಅಪ್ಪ ಸತ್ತ ನಂತರ ಅಮ್ಮ ಪಟ್ಟ ಕಷ್ಟಗಳೆಲ್ಲ ಅವನ ಕಣ್ಮುಂದೆ ಸುಳಿದು, ತಂಗಿಯರ ಭವಿಷ್ಯ ರೂಪಿಸಲು ತಾನು ದುಬೈಗೆ ಬಂದಾಗಿನಿಂದ ಕಟಿಬದ್ಧನಾಗಿ ನಿಂತಿದ್ದ. ತನ್ನ ಮೊದಲ ಮೂರು ವರ್ಷದ ಒಡಂಬಡಿಕೆ ಮುಗಿದ ನಂತರ ಒಮ್ಮೆ ಊರಿಗೆ ಹೋಗಿ ಒಂದು ತಿಂಗಳು ಇದ್ದು ಬಂದಿದ್ದ.ಆಗ ಅಮ್ಮನಿಗೆ, ಮುದ್ದಿನ ತಂಗಿಯರಿಗೆ ಸಾಕಷ್ಟು ಬಟ್ಟೆ, ಚಿನ್ನದ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದ. ತಂಗಿಯರು ತಾನು ತಂದ ಹೊಸಬಟ್ಟೆ ತೊಟ್ಟು, ದುಬೈನ ಸುಗಂಧಗಳನ್ನು ಪೂಸಿಕೊಂಡು ನಲಿಯುವುದನ್ನು ನೋಡಿ ಸಂತೋಷಪಟ್ಟಿದ್ದ. ಪಕ್ಕದ ಮನೆಯ ಗೀತಮ್ಮ ಮತ್ತವರ ಮಗಳು ರೇಖಾಳಿಗೂ ಸಾಕಷ್ಟು ಬಟ್ಟೆ, ಸುಗಂಧಗಳು, ಚಾಕಲೇಟುಗಳನ್ನು ಕೊಂಡೊಯ್ದಿದ್ದ. ಪುಟ್ಟ ಬಾಲಕಿಯಾಗಿದ್ದ ಸಹಪಾಠಿ ರೇಖಾ ಹರೆಯಕ್ಕೆ ಕಾಲಿಟ್ಟು ನಿಂತಿದ್ದವಳ ಕಂಗಳಲ್ಲಿ ಅದೇನೋ ಸೆಳೆತ ಕಂಡು ಅವಳತ್ತ ವಾಲಿದ್ದ. ತಂಗಿಯರ ಜವಾಬ್ಧಾರಿ ಮುಗಿದ ನಂತರ ಅಮ್ಮನನ್ನು ಒಪ್ಪಿಸಿ ರೇಖಾಳನ್ನೇ ಬಾಳ ಸಂಗಾತಿ ಮಾಡಿಕೊಳ್ಳಬೇಕೆಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ. ಕನಸುಕಂಗಳ ರೇಖಾ ಮೌನವಾಗಿಯೇ ಅವನ ಪ್ರೀತಿಗೆ ತನ್ನ ಒಪ್ಪಿಗೆ ಸೂಚಿಸಿದ್ದಳು. ಕೊನೆಗೂ ಅನುಸೂಯಳ ಮದುವೆ ನಿಷ್ಕರ್ಶೆಯಾಗಿ ಇವನು ಹೊರಡುವ ದಿನ ಬಂದೇ ಬಿಟ್ಟಿತು.ಕಂಪನಿಯಲ್ಲಿ ಒಂದು ತಿಂಗಳು ರಜಾ ಗಿಟ್ಟಿಸಿ ತಂಗಿಯ ಮದುವೆಗೆಂದು ಸಾಕಷ್ಟು ಖರೀದಿಗೆ ಹೊರಟ. ದುಬೈನ ಸುಂದರ ಮಾಲುಗಳಲ್ಲಿ ಕಣ್ಣಿಗೆ ಚಂದ ಕಂಡದ್ದನ್ನೆಲ್ಲ ಖರೀದಿಸಿ ಒಂದು ದೊಡ್ಡ ಡಬ್ಬದಲ್ಲಿ ತುಂಬಿ ಮುಂಚಿತವಾಗಿಯೇ ಕಾರ್ಗೋದಲ್ಲಿ ಕಳಿಸಿದ. ಮದುವೆಗಾಗಿ ಅಮ್ಮನಿಗೆ, ತಂಗಿಗೆ ದುಬೈನ "ಗೋಲ್ಡ್ ಸೂಕ್"ನಲ್ಲಿ ಸಾಕಷ್ಟು ಒಡವೆಗಳನ್ನು ಖರೀದಿಸಿ ಜೋಪಾನವಾಗಿ ತನ್ನ ಸೂಟ್ಕೇಸಿನಲ್ಲಿಟ್ಟ. ಹೊರಡುವ ದಿನ ಏರ್ಪೋರ್ಟಿಗೆ ಬಂದವನು ಊರಿಗೆ ಫೋನ್ ಮಾಡಿ ಅಮ್ಮನೊಡನೆ, ತಂಗಿಯರೊಡನೆ ಮಾತಾಡಿದ, ಅಮ್ಮನಿಗೆ "ಬೆಳಿಗ್ಗೆ ಆರೂವರೆಗೆಲ್ಲ ಮಂಗಳೂರಿನಲ್ಲಿ ಇಳಿಯುತ್ತೇನೆ, ಅಲ್ಲಿಂದ ಮನೆಗೆ ಕೇವಲ ಮುಕ್ಕಾಲು ಘಂಟೆಯ ದಾರಿ, ನಿನ್ನ ಕೈಯಿನ ದೋಸೆ, ಕಾಯಿ ಚಟ್ನಿ ತಿನ್ನಬೇಕಮ್ಮ" ಅಂದವನ ಮಾತು ಕೇಳಿ ಅತ್ತ ಕಡೆ ಕಾಂತಮ್ಮ "ಬಾರೋ ಮಗಾ, ನೀ ಬರಾದು ಹೆಚ್ಚಾ, ನಾ ನಿನಗೋಸ್ಕರ ದೋಸೆ ಮಾಡಿ ತಿನ್ಸೋದು ಹೆಚ್ಚಾ" ಎಂದು ಗಂಟಲುಬ್ಬಿ ಬಂದು ಬಿಕ್ಕಳಿಸಿದ್ದರು. ಮೂರು ವರ್ಷಗಳ ನಂತರ ಬರುತ್ತಿರುವ ಮಗನನ್ನು ನೋಡಲು ಆ ತಾಯಿ, ಅಣ್ಣನನ್ನು ನೋಡಲು ತಂಗಿಯರು ಕಾತುರರಾಗಿದ್ದರು. ಪ್ರಾಯಕ್ಕೆ ಬಂದು ತನ್ನ ಇನಿಯನ ಕನಸಿನಲ್ಲಿಯೇ ದಿನ ಕಳೆಯುತ್ತಿದ್ದ ರೇಖಾ ತನ್ನ ಭಾವನೆಗಳನ್ನು ಯಾರಿಗೂ ಹೇಳಿಕೊಳ್ಳಲಾಗದೆ ಪಕ್ಕದ ಮನೆಯಲ್ಲಿ ಕಾದು ಕುಳಿತಿದ್ದಳು.ರಾತ್ರಿ ಕಳೆದು ಬೆಳಗಾಯಿತು, ಗೋವಿಂದನ ನಿರೀಕ್ಷೆಯಲ್ಲಿದ್ದವರಿಗೆ ನಿದ್ದೆ ಬಂದಿರಲಿಲ್ಲ, ಬೆಳಿಗ್ಗೆ ಬೇಗನೆ ಎದ್ದ ಕಾಂತಮ್ಮ ತನ್ನ ತಮ್ಮನ ಮಗ ನಾರಾಯಣನ ಜೊತೆ ರೇಖಾಳ ಅಣ್ಣ ಹರೀಶನನ್ನು ಮಂಗಳೂರಿನ ವಿಮಾನ ನಿಲ್ದಾಣಕ್ಕ "ಹುಶಾರಾಗಿ ಕಾರ್ ಓಡ್ಸು ಮಗಾ" ಅಂತ ಹತ್ತು ಬಾರಿ ಹೇಳಿ ಕಳುಹಿಸಿದಳು. ಬೆಳಿಗ್ಗೆ ಆರು ಘಂಟೆಗೆಲ್ಲ ವಿಮಾನ ನಿಲ್ದಾಣಕ್ಕೆ ಬಂದ ನಾರಾಯಣ ಮತ್ತು ಹರೀಶ ತಮ್ಮ ಕಾರನ್ನು ಪಾರ್ಕಿಂಗಿನಲ್ಲಿ ನಿಲ್ಲಿಸಿ ಅಲ್ಲೇ ಪಕ್ಕದಲ್ಲಿದ್ದ ಎತ್ತರದ ಕಲ್ಲೊಂದನ್ನು ಹತ್ತಿ, ಇಳಿಯುವ ಏರ್ ಎಂಡಿಯಾ ಎಕ್ಸಪ್ರೆಸ್ ವಿಮಾನದ ಚಿತ್ರಗಳನ್ನು ತೆಗೆಯಲು ತಮ್ಮ ಕ್ಯಾಮರಾ ಸಜ್ಜು ಮಾಡಿಕೊಂಡು ನಿಂತರು. ದುಬೈನಿಂದ ಬರಲಿರುವ ತಮ್ಮ ಬಂಧುಗಳನ್ನು ಇದಿರುಗೊಳ್ಳಲು ನಿಲ್ದಾಣದ ಹೊರಗೆ ನೂರಾರು ಜನ ಸೇರಿದ್ದರು, ಅವರೆಲ್ಲರ ಮಾತುಕತೆಗಳಿಂದ ಬೆಳಗಿನ ಪ್ರಶಾಂತ ವಾತಾವರಣದ ಚಿತ್ರಣವೇ ಬದಲಾಗಿ ಅದೊಂದು ದೊಡ್ಡ ಸಂತೆಯಂತೆ ಕಾಣುತ್ತಿತ್ತು.ಆ ಕ್ಷಣ ಬಂದೇ ಬಿಟ್ಟಿತು, ಮೋಡ ಮುಸುಕಿದ ಆಗಸದಲ್ಲಿ ಮೋಡಗಳ ನಡುವಿನಿಂದ ಹಾರಿ ಬಂದ ಕೆಂಪು ಬಾಲದ ಬಿಳಿಯ ಲೋಹದ ಹಕ್ಕಿ ನಿಧಾನವಾಗಿ ನಿಲ್ದಾಣದತ್ತ ಇಳಿಯತೊಡಗಿತು. ಗೋವಿಂದ ಈ ಬಾರಿ ತಂಗಿಯ ಮದುವೆಗೆಂದು ಬರುತ್ತಿದ್ದಾನೆ, ಅವನು ಏನೆಲ್ಲಾ ತಂದಿರಬಹುದು, ತಮ್ಮಿಬ್ಬರಿಗೇ ಅವನು ಹೆಚ್ಚು ಬೆಲೆ ಬಾಳುವ ಉಡುಪುಗಳನ್ನೂ, ಸುಗಂಧದ್ರವ್ಯಗಳನ್ನೂ ಕೊಡಬೇಕೆಂದು ಅವರಿಬ್ಬರೂ ಚರ್ಚಿಸುತ್ತಿದ್ದರು. ಹಾಗೆ ಚರ್ಚಿಸುತ್ತಲೇ ಹತ್ತಾರು ಫೋಟೋಗಳನ್ನೂ ಕ್ಲಿಕ್ಕಿಸಿದ. ನಿಲ್ದಾಣದಲ್ಲಿಳಿದ ವಿಮಾನ ಇದ್ದಕ್ಕಿದ್ದಂತೆ ಕಾಣದಂತಾದಾಗ ಇನ್ನಷ್ಟು ಮೇಲೆ ಹಣುಕಿ ನೋಡಿದರೂ ಇವರಿಬ್ಬರಿಗೂ ಕಾಣುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಅಲ್ಲೊಂದು ಸಂಚಲನವೇ ಸೃಷ್ಟಿಯಾಯಿತು. ಇಳಿದ ವಿಮಾನ ಎಲ್ಲಿ ಹೋಯಿತೆಂದು ಅತ್ತಿತ್ತ ನೋಡುವುದರಲ್ಲಿಯೇ ಅಲ್ಲೊಂದು ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸುವ ಸ್ಫೋಟವುಂಟಾಯಿತು. ನಿಲ್ದಾಣದ ಹಿಂಭಾಗದಿಂದ ಒಮ್ಮೆಗೇ ಎದ್ದ ದಟ್ಟ ಹೊಗೆಯನ್ನು ಕಂಡು ನಾರಾಯಣ, ಹರೀಶರಿಬ್ಬರೂ ನಿಲ್ದಾಣದ ಮುಂಬಾಗಿಲಿನತ್ತ ಓಡಿದರು. ಅದಾಗಲೇ ನೂರಾರು ಮಂದಿ ಬಾಗಿಲಿನಲ್ಲಿ ಮುತ್ತಿಕೊಂಡು ಏನಾಯಿತೆಂದು ತಿಳಿಯಲು ಹಪಹಪಿಸುತ್ತ ನಿಲ್ದಾಣದ ಸಿಬ್ಬಂದಿಯೊಡನೆ ವಾಗ್ಯುದ್ಧಕ್ಕಿಳಿದಿದ್ದರು.ದುಬೈನಿಂದ ಬಂದಿಳಿದ ಆ ನತದೃಷ್ಟ ವಿಮಾನ ಸ್ವಲ್ಪದರಲ್ಲಿ ರನ್ ವೇನಿಂದ ಜಾರಿ ಪ್ರಪಾತಕ್ಕೆ ಬಿದ್ದಿತ್ತು, ಉರಿಯುತ್ತಿದ್ದ ಆ ಘನಘೋರ ಬೆಂಕಿಯಲ್ಲಿ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆಗಳಿರಲಿಲ್ಲ. ಅದುವರೆಗೂ ಬರುವವರ ನಿರೀಕ್ಷೆಯಲ್ಲಿ ಲವಲವಿಕೆಯಿಂದ ತುಂಬಿದ್ದ ನಿಲ್ದಾಣದ ಮುಂಭಾಗ ಕ್ಷಣಮಾತ್ರದಲ್ಲಿ ಸೂತಕದ ಮನೆಯಾಗಿ ಬದಲಾಗಿ ಹೋಗಿತ್ತು. ಹರ್ಷದ ಹೊನಲು ಹರಿಯಬೇಕಿದ್ದಲ್ಲಿ ಸಾವು ವಿಕಟಾಟ್ಟಹಾಸ ಮಾಡಿ ವಿಜೃಂಭಿಸಿತ್ತು. ಅನಿರೀಕ್ಷಿತವಾಗಿ ನಡೆದ ಅವಘಡದಲ್ಲಿ ತಮ್ಮವರ ಗತಿ ಏನಾಗಿದೆಯೆಂದು ತಿಳಿಯದೆ ಗೋಳಾಡುತ್ತಿದ್ದವರ ಮಧ್ಯೆ ನಾರಾಯಣ, ಹರೀಶ ದಿಕ್ಕು ತೋಚದಂತೆ ನಿಂತರು. ಬಹಳ ಸಮಯದ ಗೊಂದಲದ ನಂತರ ನಿಲ್ದಾಣದ ಅಧಿಕಾರಿಗಳು ಆ ವಿಮಾನದಲ್ಲಿ ಬಂದವರಲ್ಲಿ ಯಾರೂ ಉಳಿದಿಲ್ಲ, ಎಲ್ಲರೂ ಸುಟ್ಟು ಕರಕಲಾಗಿ ಹೋಗಿದ್ದಾರೆ, ಶವಗಳನ್ನೆಲ್ಲ ಆಸ್ಪತ್ರೆಗೆ ಕಳುಹಿಸಿದ್ದೇವೆ, ಎಲ್ಲರೂ ಆಸ್ಪತ್ರೆಯ ಹತ್ತಿರ ಹೋಗಿ ಎಂದು ಘೋಷಿಸಿದರು. ಅಲ್ಲಿಂದ ಎದ್ದೆವೋ ಬಿದ್ದೆವೋ ಎಂದು ಆಸ್ಪತ್ರೆಯ ಕಡೆಗೆ ದೌಡಾಯಿಸತೊಡಗಿದರು.ಮೂರು ವರ್ಷದ ನಂತರ ಬಂದವನು ಹೀಗೆ ದುರ್ಮರಣಕ್ಕೀಡಾಗಬೇಕಿತ್ತೇ? ಅದೂ ತಂಗಿಯ ಮದುವೆಗೆ ಮುನ್ನ? ನಡೆಯಬೇಕಿದ್ದ ಅನುಸೂಯಳ ಮದುವೆಯನ್ನು ನೆನೆದು ನಾರಾಯಣನ ಕಣ್ಗಳು ಹನಿಗೂಡಿದವು. ಕಾತುರದಿಂದ ಗೋವಿಂದನಿಗಾಗಿ ಕಾಯುತ್ತಿದ್ದ ರೇಖಾಳನ್ನು ನೆನೆದು ಹರೀಶ ಕಂಬನಿ ಹರಿಸಿದ. ಮನೆಯಲ್ಲಿ ಅದಾಗಲೆ ಅವರಿವರಿಂದ ಮತ್ತು ಟಿವಿಯಲ್ಲಿ ಅಪಘಾತದ ಬಗ್ಗೆ ನೋಡಿದ್ದ ಕಾಂತಮ್ಮ ಎದೆಯೊಡೆದು ಕುಸಿದು ಬಿದ್ದಿದ್ದರು. ಎರಡು ಕುಟುಂಬಗಳ ಬೆಳಕು ಅಲ್ಲಿ ಆರಿ ಹೋಗಿತ್ತು.