Tuesday, December 31, 2013

ಬಾ ಗೆಳೆಯ 2014 ..................................!







ಬಾ ಗೆಳೆಯ ನಿನಗಾಗಿ ಬಾಗಿಲಲೇ ಕಾದಿರುವೆ 
ನೀ ತರಲಿರುವ ಸಿಹಿಗಾಗಿ ಕಾತುರದಿ ನಿಂತಿರುವೆ! 

ನಿನ್ನಣ್ಣ ತೆರಳುತಿರುವ ಖಾಲಿ ಕೈ ಮನದೊಡನೆ   
ಸಿಹಿಗಿಂತ ಕಹಿ ಹೆಚ್ಚು  ತಿನ್ನಿಸಿದ ಖೇದದೊಡನೆ!

ಬಾ ಗೆಳೆಯ ನಿನಗಾಗಿ ಬಾಗಿಲಲೇ ಕಾದಿರುವೆ 
ನೀ ಹೆಚ್ಚು ಆಪ್ತನಾಗುವೆಯೆಂಬಾಸೆಯೊಡನೆ...!

ನೀನಾಗುವೆಯ ಹೊಸ ಭರವಸೆಯ ಆಶಾಕಿರಣ 
ಬರೆಯುವೆಯ ಹೊಸ ಪಲ್ಲವಿಯ ಚೈತನ್ಯ ಚರಣ! 

ನೋಡಲ್ಲಿ ಈ ಜಗದಿ ಎಷ್ಟೊಂದು ನಿರಾಸೆಯ ಕಂಗಳು 
ಸುಟ್ಟು ಕರಕಲಾಗಿರುವ ನೂರೆಂಟು ಕನಸುಗಳು....!

ನೀನೊರೆಸುವೆಯ ನೊಂದವರ ಅಶ್ರುಧಾರೆಯ,
ನಿರೀಕ್ಷೆಗಳಿವೆ ಸಾವಿರಾರು ನೆರವೇರಿಸುವೆಯಾ ?

ನಿನ ಮೇಲಿದೆ ಬಹು ದೊಡ್ಡ ಜವಾಬುದಾರಿ ಗೆಳೆಯ 
ಮರೆಯದಿರು ನೀ ಸಾಧಿಸಬೇಕಾದ ಗರಿಮೆಯ.....!  

ಬಾ ಗೆಳೆಯ ನಿನಗಾಗಿ ಬಾಗಿಲಲೇ ಕಾದಿರುವೆ 
ನೀ ತರಲಿರುವ ಸಿಹಿಗಾಗಿ ಕಾತುರದಿ ನಿಂತಿರುವೆ! 

(ಎಲ್ಲ ಸ್ನೇಹಿತರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು.
ಬರಲಿರುವ ಹೊಸ ವರ್ಷ ಹೊಸ ಸಂಭ್ರಮದ ಸವಿಯ ಹೊತ್ತು ತರಲಿ.) 





Thursday, December 26, 2013

ಹೊರಟೆಯಾ ಗೆಳೆಯ,,,2013,,,,???





ಹೊರಟೆಯಾ ಗೆಳೆಯ,,,ನೀ ಹೋಗುತಿರುವೆಯಾ,
ನಿನ್ನ ನಿಲುದಾಣ ಬಂದಿತೇ,,,ಹೊರಟೇ ಬಿಟ್ಟೆಯಾ?

ಎಲ್ಲರಂತೆ ನೀನೂ ಅಂದು ಹೊಸತನದಿ ಬಂದಿಳಿದಿದ್ದೆ  
ಭರಪೂರ ಭರವಸೆಗಳ ಮೂಟೆಯನೇ  ಹೊತ್ತುತಂದಿದ್ದೆ  
ದಿನಗಳೆದಂತೆ ಎಲ್ಲವೂ ಪೊಳ್ಳಾಗಿ ಸುಳ್ಳಿನರಸನಾದೆ
ಸಿಹಿಯೆಂದು ನಂಬಿಸಿ ಸ್ವಲ್ಪ ಹೆಚ್ಚೇ ಖಾರವ ತಿನಿಸಿದ್ದೆ!  

ಹೊರಟೆಯಾ ಗೆಳೆಯ,,,ನೀ ಹೋಗುತಿರುವೆಯಾ,
ನಿನ್ನ ನಿಲುದಾಣ ಬಂದಿತೇ,,,ಹೊರಟೇ ಬಿಟ್ಟೆಯಾ?

ಹಿಂದೆ ಬಂದವರೆಲ್ಲ ಮಾಡಿದ್ದನ್ನೇ ನೀನೂ ಮಾಡಿದೆ
ಆದರೆ ನೀ ಮಾಡಿದ್ದು ಅಳಿಸಲಾಗದ ಗಾಯ ಈ ಮನದೆ,
ನಾ ಸೋತೆನೆಂದು ನೀ ನಂಬಿದೆ, ನಾನಂತೆ ನಟಿಸಿದೆ,
ನೀ ಕಲಿಸಿದ ಕಠಿಣ ಪಾಠ ನನಗಿಂದು ಗುರುವಾಗಿದೆ!

 ಹೊರಟೆಯಾ ಗೆಳೆಯ,,,ನೀ ಹೋಗುತಿರುವೆಯಾ,
ನಿನ್ನ ನಿಲುದಾಣ ಬಂದಿತೇ,,,ಹೊರಟೇ ಬಿಟ್ಟೆಯಾ?

ಹೋಗಿ ಬಾ ಗೆಳೆಯ ನಿನಗಿದೋ ನನ್ನ ಅಂತಿಮ ವಿದಾಯ
ನಾ ಹೋಗಬೇಕಿದೆ ಬರಲಿರುವ ಹೊಸಬನ ಸ್ವಾಗತಿಸಲು,
ಅವನ ಬಗಲಲ್ಲಿರುವ ಚೀಲದ ತುಂಬಾ ಹೊಸ ಕನಸುಗಳು,
ಅವನ ಮಂದಸ್ಮಿತ ವದನದಲಿ ಪ್ರೀತಿಯ ಕಿರಣಗಳು......!

 ಹೊರಟೆಯಾ ಗೆಳೆಯ,,,ನೀ ಹೋಗುತಿರುವೆಯಾ,
ನಿನ್ನ ನಿಲುದಾಣ ಬಂದಿತೇ,,,ಹೊರಟೇ ಬಿಟ್ಟೆಯಾ?



















Earn to Refer People

Thursday, September 5, 2013

ಗುರು ದೇವೋಭವ ....... !

ನಾವು ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ಒಬ್ರು ಕನ್ನಡ ಮೇಷ್ಟ್ರು ಇದ್ರು.  ಅವರ ಹೆಸರು ಪಿ. ಹುಚ್ಚುಸ್ವಾಮಿ ಅಂತ, ಪಿ. ಎಚ್.ಎಸ್.  ಅನ್ನೋದು ಶಾರ್ಟ್ ನೇಮ್.  ಅವರಿಗೋ ಸಾಲಾಗಿ ಒಂಭತ್ತು ಜನ ಹೆಣ್ಣು ಮಕ್ಕಳು!  ವಂಶೋದ್ಧಾರಕನನ್ನು ಪಡೆಯಲೇ ಬೇಕೆಂಬ ಹಠದಲ್ಲಿ ಸಾಲಾಗಿ ವಂಶೋದ್ಧಾರಕಿಯರನ್ನೇ ಪಡೆದಿದ್ದರು, ಸಂಸಾರ ತಾಪತ್ರಯಗಳು ಸಾಕಷ್ಟಿದ್ದವು ಅನ್ಸುತ್ತೆ!  ಪಾಪ, ಶಾಲೆಗೆ  ಬಂದರೆ ಸಾಕು, ಅವರ ಹೆಂಡತಿ ಹಾಗೂ ನವರತ್ನಗಳಂಥ ಹೆಣ್ಣುಮಕ್ಕಳ ಮೇಲಿನ ಸಿಟ್ಟನ್ನೆಲ್ಲಾ  ನಮ್ಮ ಮೇಲೆ ಕಕ್ಕಿ ಬಿಡುತ್ತಿದ್ದರು.  ಕ್ಲಾಸ್ ಲೀಡರ್ ಆಗಿದ್ದ ನನಗಂತೂ ವಾಚಾಮಗೋಚರ ಬೈಗುಳ ತಪ್ಪಿದ್ದಲ್ಲ, 

ಅವರು ಬರುವಷ್ಟರಲ್ಲಿ ಅವರ ಹೋಮ್ ವರ್ಕ್ ಪುಸ್ತಕಗಳನ್ನು ಅವರ ಟೇಬಲ್ಲಿನ ಮೇಲೆ ಜೋಡಿಸಿಟ್ಟಿರಬೇಕಿತ್ತು, ಹೋಮ್ ವರ್ಕ್ ಮಾಡದಿರುವವರ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆದು, ಅವರನ್ನೆಲ್ಲಾ ಬೇರೆಯಾಗಿ ನಿಲ್ಲಿಸಬೇಕಿತ್ತು!  ಜೊತೆಗೆ ಉದ್ಧದ ಕೋಲೊಂದನ್ನೂ ಸಿದ್ಧವಾಗಿಡಬೇಕಿತ್ತು!   ಕ್ಲಾಸಿಗೆ ಬಂದವರು ಹೋಮ್ ವರ್ಕ್ ಮಾಡದವರ ಉದ್ಧದ ಪಟ್ಟಿ ನೋಡುತ್ತಲೇ ವ್ಯಗ್ರರಾಗಿ ಉಗ್ರರೂಪ ತಾಳಿ ಬಿಡುತ್ತಿದ್ದರು.  ಲೇ ಮಂಜಾ, ಬೋ..ಮಗನೆ, ಯಾಕೋ ಇಷ್ಟೊಂದು ಜನ ಹೋಮ್ ವರ್ಕ್ ಮಾಡಿಲ್ಲ ಅಂತ ಮೊದಲ ಏಟು ನನಗೆ ಬೀಳುತ್ತಿತ್ತು, ನಂತರದ್ದೆಲ್ಲಾ ೭ ೦  ಎಮ್ಮೆಮ್ ಸಿನಿಮಾಸ್ಕೋಪ್ ಸಿನಿಮಾನೇ!   ಕೆಲವರಿಗೆ ಜುಟ್ಟು ಹಿಡಿದು ಬಗ್ಗಿಸಿ ಬೆನ್ನ ಮೇಲೆ ಗುದ್ದುತ್ತಿದ್ದರು, ಇನ್ನು ಕೆಲವರಿಗೆ ಗೋಡೆಗೆ ತಲೆ ಗುದ್ದಿಸುತ್ತಿದ್ದರು, ಹಲವರನ್ನು ನೆಲದ ಮೇಲೆ ಕೆಡವಿ, ಕಾಲಿನಿಂದ ಒದೆಯುತ್ತಿದ್ದರು, ಕೋಲು ಕೈಗೆ ಸಿಕ್ಕಿದರೆ ಬೆನ್ನ ಮೇಲೆ, ತೊಡೆಗಳ ಮೇಲೆ ಬಾಸುಂಡೆ ಬರುವಂತೆ ಬಾರಿಸುತ್ತಿದ್ದರು.  ಮಧ್ಯೆ ಯಾರಾದರೂ ಕಮಕ್ ಕಿಮಕ್ ಅಂದರೆ ಮುಗಿದೇ ಹೋಯಿತು, ಅಲ್ಲಿ ಅವರ ಮಾರಣಹೋಮ!  ನಮಗೆಲ್ಲಾ ಅವರು ಒಂದು ರೀತಿಯ ಭಯೋತ್ಪಾದಕರಂತೆ ಕಾಣುತ್ತಿದ್ದರು.  ತಮಗೆ ಗಂಡು ಮಕ್ಕಳಾಗದ ಕೋಪವನ್ನು ಹೀಗೆ ತೀರಿಸಿಕೊಳ್ಳಲೆಂದೇ ಅವರು ಶಾಲೆಗೆ  ಬರುತ್ತಿದರೇನೋ ಎನ್ನುವ ಅನುಮಾನ ನಮಗೆಲ್ಲ ಕಾಡುತ್ತಿತ್ತು !

ಅಮ್ಮನ ಜೊತೆಯಲ್ಲಿ ಪ್ರತಿ ಗುರುವಾರ ಸಂಜೆ ನಾನು ಕೋಟೆಯಲ್ಲಿದ್ದ ರಾಘವೇಂದ್ರಸ್ವಾಮಿಗಳ ಮಠಕ್ಕೆ ಹೋಗುತ್ತಿದ್ದೆ.   ಅಲ್ಲಿಯೇ ಅವರ ಮನೆ, ಅಪ್ಪಿ ತಪ್ಪಿ ಅವರೇನಾದರೂ ಎದುರಿಗೆ ಬಂದರೆ ಅವರಿಗೆ ಕಾಣದಂತಿರಲು ಪ್ರಯತ್ನ ಪಡುತ್ತಿದ್ದೆ.  ಆದರೂ ಒಮ್ಮೆ ಅವರ ಹದ್ದಿನಕಣ್ಣಿಗೆ ಸಿಕ್ಕಿಯೇ ಬಿಟ್ಟೆ!  ಆರ್ಭಟಿಸಿದ್ರು ನೋಡಿ, ಲೇ ಮಂಜಾ, ಹಲ್ಕಾ ನನ್ಮಗನೇ, ಮನೇಲಿ ಕೂತು ಹೋಮ್ ವರ್ಕ್ ಮಾಡೋದು ಬಿಟ್ಟು ಪೋಲಿ ತಿರುಗೊಕ್ಕೆ ಬಂದಿದೀಯಾ ಅಂತ ಜುಟ್ಟಿಗೆ ಕೈ ಹಾಕಲು ಮುಂದಾಗಿದ್ದರು. ಇಲ್ಲ  ಸಾರ್, ಅಮ್ಮನ ಜೊತೆ ಮಠಕ್ಕೆ ಬಂದಿದ್ದೆ ಅಂದ್ರೆ ನಿನ್ನ ಮೂತಿಗೆ ಮಠ ಬೇರೆ ಕೇಡು, ಹೋಗೋ ಮನೆಗೆ ಅಂತ ಬೈದಿದ್ರು! 

ತಿಪಟೂರಿನ ಪುರಸಭಾ ಚೌಕದಲ್ಲಿರುವ ಪೈ ಹೋಟೆಲ್ ತುಂಬಾ ಪ್ರಸಿದ್ಧ.  ಅವರಿಂದ ಒದೆ ತಿಂದ ಹುಡುಗರೆಲ್ಲ ಸೇರಿ ಅವರ ಶಾರ್ಟ್ ನೇಮ್ ಪಿ. .ಎಸ್. ಅನ್ನುವುದನ್ನು "ಪೈ ಹೋಟೆಲ್ ಸಪ್ಲೈಯರ್" ಎಂದು ಬದಲಾಯಿಸಿ ಇಡೀ ತಿಪಟೂರಿನಲ್ಲಿ ಅವರು ಎಲ್ಲೇ ಕಂಡರೂ ಸರಿ ," ಓಯ್  ಪೈ ಹೋಟ್ಲು ಸಪ್ಲೈಯರ್ರೂ" ಅಂತ ಜೋರಾಗಿ ಕೂಗಿ ಮರೆಯಾಗಿ ಬಿಡುತ್ತಿದ್ದರು.  ಕೆಲ  ದಿನಗಳು ಇದು ಅವರಿಗೆ ಅರ್ಥವಾಗಿರಲಿಲ್ಲ, ಆದರೆ ಕ್ರಮೇಣ ಅರ್ಥವಾಗತೊಡಗಿದಂತೆ ಕ್ಲಾಸಿನಲ್ಲಿ ಬೀಳುವ ಒದೆಗಳು ಇನ್ನೂ ಹೆಚ್ಚಾದವು.   ಈ ಹುಚ್ಚು ಯಾವ ಮಟ್ಟಕ್ಕೆ ಹೋಯಿತೆಂದರೆ ಶಾಲೆಯ ಬೆಲ್ ಹೊಡೆದ ನಂತರ ಎಲ್ಲರೂ ಪ್ರಾರ್ಥನೆಗೆಂದು ಸಾಲಾಗಿ ನಿಲ್ಲುತ್ತಿರುವಾಗ ಇವರು ಗೇಟಿನ ಬಳಿ ಹೋಗಿ ನಿಲ್ಲುತ್ತಿದ್ದರು, ಲೇಟಾಗಿ ಬಂದ "ಬಾಲಕ"ರನ್ನೆಲ್ಲ  ಗೋಡೆಯ ಪಕ್ಕಕ್ಕೆ ಕರೆದುಕೊಂಡು ಹೋಗಿ ಅಲ್ಲೇ ಬಾರಿಸಲು ಶುರು ಹಚ್ಚಿಕೊಂಡು ತಮ್ಮ ಸೇಡನ್ನು ತೀರಿಸಿಕೊಳ್ಳುತ್ತಿದ್ದರು .   ಕೊನೆಗೆ "ಬಾಲಕ"ನೊಬ್ಬ ಇವರ ಹೊಡೆತಗಳನ್ನು ತಡೆದುಕೊಳ್ಳಲಾಗದೆ ಚಡ್ಡಿಯಲ್ಲೇ ಮಲ-ಮೂತ್ರಗಳನ್ನೆಲ್ಲ ಮಾಡಿಕೊಂಡಾಗ , ಎಲ್ಲ ಪೋಷಕರು ಸೇರಿ ಇವರ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕೆಂದು ಪಟ್ಟು ಹಿಡಿದಾಗಲೇ ಯಾವರ ಆರ್ಭಟ ಕಡಿಮೆಯಾಗಿದ್ದು.  

ಹಲವರು ಅತ್ಯುತ್ತಮ ಗುರುಗಳ ಶಿಷ್ಯನಾಗುವ ಯೋಗ ನನಗೆ ಸಿಕ್ಕಿದೆ, ಅದೇಕೋ ಈ ಶಿಕ್ಷಕರ ದಿನಾಚರಣೆಯಂದು ಅವರೆಲ್ಲರನ್ನೂ ಬಿಟ್ಟು ಇವರೇ ಹೆಚ್ಚಾಗಿ ನೆನಪಾದರು.   

Monday, August 12, 2013

ಬಾರಯ್ಯ,,ಬಾರಯ್ಯ ಮಳೆರಾಯ.....!



ನಮ್ಮ ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಓ ಮಳೆರಾಯ,,,
ಈ ಕಾಂಕ್ರೀಟು ಕಾಡಿಗೂ ಬಂದು ಒಂದಿಷ್ಟು ತಂಪನೆರೆಯಲಾರೆಯಾ?

ಮರಳುಗಾಡಿನ ಸುಡುಬೆಂಕಿಯ ಗಾಳಿಯ ಹೊಡೆತಕೆ ನಲುಗಿರುವ 
ನಿನ್ನ ಪ್ರಿಯತಮೆ ಇಳೆಯನೊಂದಿಷ್ಟು ರಮಿಸಿ ತಣಿಸಲಾರೆಯಾ ?

ಹವಾನಿಯಂತ್ರಣದಿಂದ ಹೊರಬಂದರೆ ಸುಡುವೆಮ್ಮ  ಮೈಯನು
ನಿನ್ನ ತಣ್ಣನೆಯ ಸ್ಪರ್ಶದಿಂದೊಮ್ಮೆ ಪುಳಕಿತಗೊಳಿಸಲಾರೆಯಾ?

ಇಲ್ಲಿಯೂ ಒಮ್ಮೆ ಕುಂಭದ್ರೋಣದಿ ನೀ ಆರ್ಭಟಿಸುವ ಆ ಘಳಿಗೆಯ 
ಪುನರಾವರ್ತಿಸಿ ಮನೆ ಬಿಟ್ಟು ಬಂದವರ ಮನಕೆ ಹರ್ಷ ನೀಡೆಯಾ?

ಬಂಧು ಬಾಂಧವರ, ಹಿರಿ ಕಿರಿಯರ ಗೆಳೆಯ ಗೆಳತಿಯರ ಎಲ್ಲರ 
ಒಡನಾಟದಿಂದ ದೂರವಿರುವ ಅತೃಪ್ತ ಮನಗಳ ನೀ ಕಾಣೆಯಾ?
 
ಬಾರಯ್ಯ,,ಬಾರಯ್ಯ ಮಳೆರಾಯ ಬಿಡದೆ ಬಾರಯ್ಯ ಮಳೆರಾಯ 
ತಾರಯ್ಯ,, ನೀ ತಾರಯ್ಯ ಬೆಂದ ಮನಗಳಿಗೆ ತುಸು ನೆಮ್ಮದಿಯ ...!     


  ಚಿತ್ರ: ಅಂತರ್ಜಾಲದಿಂದ. 

Friday, July 26, 2013

ನೆನಪಿನಾಳದಿಂದ ೨೨ - ಸುಟ್ಟ ಏಡಿ ತಿಂದು ಜಾತಿ ಕೆಟ್ಟ ಪ್ರಸಂಗ

ಸುಂದರ ಸೂರ್ಯೋದಯ, ಬೆಟ್ಟದಂಚಿನಿಂದ ಇಣುಕುತ್ತಿದ್ದ ರವಿ, ಭೂರಮೆಯ ಅಂಗಾಂಗಗಳಿಗೆಲ್ಲ ಬಂಗಾರದ ಬಣ್ಣವ ತುಂಬುತ್ತಾ ಉದಯಿಸಿ ಬರುತ್ತಿದ್ದ.  ಗಾವುದ ದೂರದ ಗದ್ದೆ ಬಯಲುಗಳೆಲ್ಲ ಹಸಿರ ತೊನೆಯ ತೊಯ್ದಾಡಿಸುತ್ತ ಆ ಬಂಗಾರದ ಬಣ್ಣದ ಸವಿಯನ್ನು ಅನುಭವಿಸುತ್ತಿದ್ದವು, ಗೆಳೆಯ ಶಿವರಾಮ ಬೆಳಿಗ್ಗೆಯೇ ಮನೆಯ ಬಳಿ ಬಂದು ಮೆಲ್ಲನೆ ಉಸುರಿದ್ದ, ಈ ದಿನ ಶಾಲೆಗೇ ಚಕ್ಕರ್ ಹೊಡೆಯೋಣ, ರಾಮಣ್ಣ ಮೇಷ್ಟ್ರು ಪಾಠ ಮಾಡುವಾಗ ಮಧ್ಯೆ ಮಲಗಿಬಿಡುತ್ತಾರೆ ಆ ಸಮಯದಲ್ಲಿ ನಾವು ಮೂತ್ರ ವಿಸರ್ಜನೆಯ ನೆಪದಲ್ಲಿ ಹೊರ ಬಂದು ಕೆರೆಗೆ ಹೋಗೋಣ, ಮಳೆಬಂದು ಕೆರೆಯ ತುಂಬ ನೀರು ತುಂಬಿ ನಿಂತಿದೆ, ಎಲ್ಲ ಕಾಲುವೆಗಳಲ್ಲೂ ನೀರು ಹರಿಯುತ್ತಿದೆ, ಸಾಕಷ್ಟು ಏಡಿಗಳನ್ನು ಹಿಡಿಯಬಹುದು, ಕಾರ ಹಚ್ಚಿ ಕೆಂಡದಲ್ಲಿ ಸುಟ್ಟು ತಿನ್ನಬಹುದು, ಸಿದ್ಧವಾಗಿರು ಎಂದಿದ್ದ.  

 ಶಾಲೆಯ ಘಂಟೆ ಢಣ ಢಣ ಬಾರಿಸುತ್ತಿದ್ದಂತೆ ಸಾಲಿನಲ್ಲಿ ನಿಂತೆವು ಭೀಮಣ್ಣ ಮಾಸ್ತರ ಮಗ ಶ್ರೀನಾಥ ಮತ್ತವನ ಸಂಗಡಿಗರು ಹೇಳಿ ಕೊಟ್ಟಂತೆ ರಾಗವಾಗಿ "ಸ್ವಾಮಿದೇವನೆ ಲೋಕಪಾಲನೆ, ತೇನಮೋಸ್ತು ನಮೋಸ್ತುತೇ " ನಾವೂ ಹಾಡಿ ಮುಗಿಸಿ ನಮ್ಮ ತರಗತಿಗೆ ಹೋಗಿ ಕುಳಿತೆವು.   ಅಂದುಕೊಂಡಂತೆಯೇ ರಾಮಣ್ಣ ಮಾಸ್ತರು ಬಂದರು, ಒಂದರ್ಧ ಘಂಟೆ ಕನ್ನಡ ಪಾಠ ಮಾಡಿ, ಕೆಲವು ಪದ್ಯಗಳನ್ನು ಹೇಳಿ  ಕೊಟ್ಟು, ನಮಗೆ ತಾತ್ಪರ್ಯ ಬರೆಯಿರಿ ಎಂದು ಹೇಳಿ ನಿದ್ದೆಗೆ ಜಾರಿದರು.  ಇದನ್ನೇ ಕಾಯುತ್ತಿದ್ದ ಶಿವರಾಮ ಮೆಲ್ಲನೆ ಮೇಲೆದ್ದ, ಸಾರ್, ಒಂದ ಮಾಡಿ ಬತ್ತೀವಿ ಎಂದ, ನಿದ್ದೆಯಲ್ಲಿದ್ದ ರಾಮಣ್ಣ ಮಾಸ್ತರು ಹೋಗಿ, ಬೇಗ ಬನ್ನಿ ಎಂದರು.   ನನಗೆ ಕಣ್ಸನ್ನೆ ಮಾಡಿದ ಶಿವರಾಮನ ಜೊತೆಗೆ, ಗೋಪಾಲ, ಶಿವ, ಆವುನಿ, ಆಂಜನಿ, ರಾಮ, ವೇಣು  ಮತ್ತಿತರರು  ಜೊತೆಯಾದರು. ತರಗತಿಯಿಂದ ಆಚೆ ಬಂದು ಶಾಲೆಯ ಪಕ್ಕದಲ್ಲೇ ಹರಿಯುತ್ತಿದ್ದ ಕಾಲುವೆಯ ಬಳಿಯಲ್ಲಿ ನಾನು ಚಡ್ಡಿ ಮೇಲೆತ್ತಿ ಒಂದ ಮಾಡಲು ನಿಂತರೆ, ಶಿವರಾಮ ಹಿಂದಿನಿಂದ ಜಾಡಿಸಿ ಒದ್ದಿದ್ದ,  ಪೃಷ್ಠದ ಮೇಲೆ ಬಿದ್ದ ಆ ಒದೆತಕ್ಕೆ ನಾನು ಅಂಗಾತ ಕಾಲುವೆಯ ನೀರಿನಲ್ಲಿ ಬಿದ್ದಿದ್ದೆ, ನನ್ನನ್ನು ಎತ್ತುವವನಂತೆ ನಟಿಸುತ್ತಾ ಬಂದ ಅವನು ಕಾಲುವೆಯ ಬದುಗಳಲ್ಲಿದ್ದ ಸಣ್ಣ ಸಣ್ಣ ಬಿಲಗಳಲ್ಲಿ ಕೈ ಹಾಕಿ ಒಮ್ಮೆಗೇ ನಾಲ್ಕಾರು ಏಡಿಗಳನ್ನು ಹಿಡಿದಿದ್ದ,    ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಾ, ಅವನ ಕೈ ಕಚ್ಚಲು ಯತ್ನಿಸುತ್ತಿದ್ದ ಏಡಿಗಳಲ್ಲಿ   ಒಂದೆರಡನ್ನು ನನ್ನ ಮೇಲೆಸೆದು ಹಿಡ್ಕಳಲೇ ಮಂಜಾ ಎಂದು ಕೂಗಿ ನಗುತ್ತಿದ್ದ, ನನ್ನ ಮೇಲೆ ಬಿದ್ದ ಏಡಿಗಳಲ್ಲಿ ಒಂದು ನನ್ನ ಬಲಭಾಗದ ತೋಳನ್ನು ಗಟ್ಟಿಯಾಗಿ ಕಚ್ಚಿ ಹಿಡಿದಾಗ ಅಸಾಧ್ಯ ನೋವಾಗಿ, ಅದನ್ನು ಕಿತ್ತೆಳೆದಾಗ, ಆ ಕೊಂಡಿ ಅಲ್ಲೇ ಉಳಿದು, ಅದರ ಇಡೀ ದೇಹ ನನ್ನ ಎಡಗೈನಲ್ಲಿತ್ತು.   ಅದೇ ಸಮಯಕ್ಕೆ ನಮ್ಮ ಗುಂಪಿನ ಇನ್ನುಳಿದವರೆಲ್ಲ ಸದಸ್ಯರು ಹತ್ತಾರು ಏಡಿಗಳನ್ನು ಹಿಡಿದಿದ್ದರು. 

 ಅಲ್ಲಿಂದ ನಮ್ಮ ಪಯಣ ಸಾಗಿದ್ದು ಊರಾಚೆಗಿದ್ದ ಹೊಲೇರ ಹಟ್ಟಿಗೆ!   ಕಪ್ಪಗಿದ್ದ ಶಿವರಾಮ ಜಾತಿಯಲ್ಲಿ ಹೊಲೆಯನಾದರೂ ಪ್ರಾಥಮಿಕ ಶಾಲೆಯ ನಮ್ಮ ಪುಂಡ ಸಾಹಸಿಗಳ ಗುಂಪಿಗೆ ನಾಯಕನಾಗಿದ್ದ.    ಅವರ ಮನೆ ಎಂಬ ಗುಡಿಸಲಿಗೆ ಕರೆದೊಯ್ದ ಶಿವರಾಮ ಅಡಿಗೆ ಮನೆಯ ಒಲೆಗೆ ಕೆಲವು ಸೌದೆ ತುಂಡುಗಳನ್ನಿಟ್ಟು ಬೆಂಕಿ ಹಾಕಿ, ನಾವು ಹಿಡಿದಿದ್ದ ಏಡಿಗಳನ್ನೆಲ್ಲ ಸ್ವಲ್ಪ ಉಪ್ಪು ಕಾರ ಸವರಿ ಸುಡತೊಡಗಿದ.  ಹಸಿ ಹಸಿ ಏಡಿಗಳು ಬೆಂಕಿಯಲ್ಲಿ ಸುಡುತ್ತಿದ್ದರೆ ಒಂದು ರೀತಿಯ ಹಿತವಾದ ಕಮಟು ವಾಸನೆ ಇಡೀ ಗುಡಿಸಲನ್ನು ಆವರಿಸಿಕೊಂಡಿತ್ತು. ಅವರ ಅವ್ವ ಮತ್ತು ಅಜ್ಜಿ ಮಾಡಿದ್ದನ್ನು ನೋಡಿ ಕಲಿತಿದ್ದ ಶಿವರಾಮನಿಗೆ ಆ ಅಡಿಗೆಯನ್ನ್ನು ಮಾಡಿ ನಮಗೆಲ್ಲ ತಿನ್ನಿಸಬೇಕೆಂಬ ಮಹದಾಸೆ ಬಹಳ ದಿನಗಳಿಂದಲೂ ಕಾಡುತ್ತಿತ್ತಂತೆ! ಅಂದು ಅವನ ಮನದಾಸೆ ಈಡೇರಿದ್ದ ಖುಷಿಯಲ್ಲಿ ಎಲ್ಲರಿಗಿಂತ ಹೆಚ್ಚಾಗಿ ನನಗೇ ತಿನ್ನಿಸಿದ್ದ.  ಮೈಸೂರಿನಲ್ಲಿ ಖಾಲಿ ದೋಸೆ, ಇಡ್ಲಿ-ವಡೆ, ಚಿತಾನ್ನ ತಿಂದು ಬೆಳೆದಿದ್ದ ನನಗಂತೂ ಈ ಉಪ್ಪು ಕಾರ ಹಚ್ಚಿ ಸುಟ್ಟ ಏಡಿಯ ರುಚಿ ನಿಜಕ್ಕೂ ಬೇರೆಯಾಗಿಯೇ ಕಂಡಿತ್ತು,  ಆ ಸಮಯಕ್ಕೆ ಶಿವರಾಮ ನನಗೆ ಆರಾಧ್ಯ ದೈವವಾಗಿಬಿಟ್ಟಿದ್ದ.  

ಊರಾಚಿನ ಹೊಲೇರ ಹಟ್ಟಿಯ ಅವರ ಗುಡಿಸಲಿನಿಂದ ಹೊರಟ ನಮಗೆ ಅವನು ಪದೇ ಪದೇ ಎಚ್ಚರಿಸಿದ್ದ, ಲೋ ಯಾರಿಗೂ ಹೇಳ್ಬೇಡ್ರೋ ನನಮಕ್ಳಾ, ಊರಲ್ಲಿ ಗೊತ್ತಾದರೆ ದೊಡ್ಡ ರಾಮಾಯಣ ಆಗೋಗುತ್ತೆ, ಹುಷಾರು ಕಣ್ರಲಾ ಅಂದಿದ್ದ.  ಸೀದಾ ತರಗತಿಯೊಳಗೆ ಬಂದರೆ ರಾಮಣ್ಣ ಮಾಸ್ತರು ಇನ್ನೂ ನಿದ್ರೆಯ ಮಂಪರಿನಲ್ಲೇ ಇದ್ದರು,   ಶ್ರೀನಾಥ ಮತ್ತವನ ಗೆಳೆಯರು ನಮ್ಮ ಮೇಲೊಂದು ಕಣ್ಣಿಟ್ಟಿದ್ದರು,  ನಾವು ಒಂದ ಮಾಡಲೆಂದು ಹೋಗಿದ್ದು, ಬಹಳ ಸಮಯದ ನಂತರ ಹಿಂದಿರುಗಿದ್ದು,  ನಮ್ಮ ಬಾಯಿಯಿಂದ ಬರುತ್ತಿದ್ದ ಸುಟ್ಟ ಏಡಿಯ ವಾಸನೆ,  ಎಲ್ಲವನ್ನೂ ರಾಮಣ್ಣ ಮಾಸ್ತರರ ಕಿವಿಯಲ್ಲಿ ಉರುಬಿದ್ದ ಶ್ರೀನಾಥ, ನಾವೆಲ್ಲರೂ ಕಿವಿ ಹಿಡಿದುಕೊಂಡು ಒಂದು ಘಂಟೆಯ ಹೊತ್ತು "ಕೋಣ" ಬಗ್ಗಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ.  ಅಂದಿನಿಂದ ಶಿವರಾಮ ಮತ್ತು ಶ್ರೀನಾಥ ಇಬ್ಬರದ್ದೂ ಒಂದೊಂದು ಗುಂಪಾಯಿತು, ಚೆನ್ನಾಗಿ ಓದುತ್ತಾ ಚುರುಕಾಗಿದ್ದ ಭ್ರಾಂಬ್ರು  ಹುಡುಗ್ರು ಶ್ರೀನಾಥನ ಹಿಂದಿದ್ದರೆ ಉಳಿದೆಲ್ಲ ಜಾತಿಗಳ ಹುಡುಗರು ಶಿವರಾಮನ ಹಿಂದೆ ಸೇರಿದ್ದರು. 

ಸಂಜೆ ಮನೆಗೆ ಬಂದಾಗ ಅಕ್ಕನ ಜೊತೆ ನಮ್ಮ ಸಾಹಸಗಾಥೆಯನ್ನು ಹಂಚಿಕೊಳ್ಳುತ್ತಾ ಒಂದು ಘಂಟೆ ಕೋಣ ಬಗ್ಗಿದ್ದರಿಂದ ಹಿಡುಕೊಂಡಿದ್ದ ಕೈಕಾಲುಗಳನ್ನು ನೀವಿ ಸರಿ ಮಾಡುವಂತೆ ಕೇಳಿದ್ದೆ.  ಅಮೃತಾಂಜನ ನೀವಿ ಅಕ್ಕ ನನ್ನ ಕೈ ಕಾಲುಗಳನ್ನು ತೀಡುತ್ತಿದ್ದಾಗ ಆಸ್ಪತ್ರೆಯಿಂದ ಮನೆಗೆ ಬಂದ ಅಮ್ಮ ಏನಾಯಿತು ಎಂದರು, ಅಕ್ಕ ನನ್ನ ಅಂದಿನ ಕಥೆಯನ್ನೆಲ್ಲ ಒದರಿದ್ದಳು, ಅಯ್ಯೋ ರಾಮಾ, ನಿನಗೇನು ಬಂತೋ ಕೇಡುಗಾಲ, ಹೊಲೇರ ಮನೆಗೋಗಿ ತಿಂದು ಬಂದಿದೀಯಲ್ಲೋ, ನಿಮ್ಮಪ್ಪನಿಗೆ ಗೊತ್ತಾದರೆ   ಮೂಳೆ ಮುರೀತಾರೆ ನಿನಗೆ, ಎಂದು  ಶಪಿಸುತ್ತಾ ಮೊದಲು ಸ್ನಾನ ಮಾಡು ಹೋಗು ಎಂದು ಬಚ್ಚಲು ಮನೆಗಟ್ಟಿದ್ದರು. ಇದ್ಯಾಕೆ ಏನು ಎಂದು ಒಂದೂ ಅರಿವಾಗದ ನಾನು, ಬಚ್ಚಲು ಮನಗೆ ಹೋಗಿ ಸ್ನಾನಕ್ಕೆ ಸಿದ್ಧನಾಗುವಾಗ ಬಂದ ಅಜ್ಜಿ, "ಅಯ್ಯೋ ಮುಂಡೆಗಂಡ ನಿನಗೇನು ಬುದ್ಧಿ ಇಲ್ವೇನೋ, ನಾವು ಮೈಸೂರಿನವರು ಕಣೋ ಕಂದ ಹಂಗೆಲ್ಲಾ ಹೊಲೇರ ಮನೆಗೋಗಿ ತಿನ್ನಬಾರದು ಕಣೋ, ನಮ್ಮ ದೇವ್ರು ಮೆಚ್ಚೋದಿಲ್ಲಾ" ಅಂತ ಬುದ್ಧಿ ಹೇಳಿ, ಸ್ನಾನ ಮಾಡಿಸುತ್ತಾ ಸೀಗೆಪುಡಿ ಹಾಕಿ ನನ್ನ ಮೈನೆಲ್ಲಾ ಎಮ್ಮೆ ತಿಕ್ಕುವಂತೆ ತಿಕ್ಕಿದ್ದರು,  ನಾಲಿಗೆ ಆ ಮಾಡು ಅಂತ ಹೇಳಿ, ಅವರೇ   ತಮ್ಮ  ಕೈಯಾರೆ ನನ್ನ ನಾಲಿಗೆ ತಿಕ್ಕಿ, ಅಳಿದುಳಿದಿದ್ದ ಏಡಿಗಳ ಬಾಡಿಗಳನ್ನು ವಾಂತಿ ಮಾಡಿಸಿದ್ದರು.   ಸಂಜೆ ಜಮೀನ್ದಾರ ಶಿವಪ್ಪನವರ ಮನೆಗೆ ಹೋಗಿ ಹಸುವಿನ ಗಂಜಲ ತಂದು ಮನೆಗೆಲ್ಲ ಎಸೆದು ವಿಶೇಷ ಪೂಜೆ  ಮಾಡಿದ್ದರು ನಮ್ಮಜ್ಜಿ.   ಸಧ್ಯಕ್ಕೆ ರಾತ್ರಿ ಹೋಟೆಲು ಮುಚ್ಚಿ ಮನೆಗೆ ಬಂದ ಅಪ್ಪನಿಗೆ ಈ ವಿಚಾರ ಯಾರೂ ಹೇಳಲಿಲ್ಲ. 

ಮರುದಿನ ಶಾಲೆಗೆ  ಹೋಗುವಾಗ ಎಂದಿನಂತೆ ಅಪ್ಪನ ಹೋಟೆಲ್ಲಿಗೆ ಬಂದು ನಾನು ಮತ್ತು ಅಕ್ಕ ಇಬ್ಬರೂ ಇಡ್ಲಿ ತಿನ್ನುತ್ತಿರುವಾಗ ಶಿವರಾಮನ ಅಪ್ಪ ಹೋಟೆಲ್ಲಿಗೆ ಬಂದು ಇಡ್ಲಿ ಕೊಡಿ ಭಟ್ರೇ ಎಂದಾಗ, ಅಪ್ಪ ಅವನಿಗೆ ಸೂರಿನಲ್ಲಿ ಸಿಗಿಸಿದ್ದ ಅಲ್ಯುಮಿನಿಯಂ ತಟ್ಟೆ ಮತ್ತು ಲೋಟ ತೋರಿಸಿದ್ದರು,  ಮರು ಮಾತಾಡದೆ ಆ ತಟ್ಟೆ ಲೋಟ ತೆಗೆದುಕೊಂಡು ಹೊರಗಡೆ ಹೋಗಿ ಅಲ್ಲಿಟ್ಟಿದ್ದ ನೀರಿನಲ್ಲಿ ತೊಳೆದುಕೊಂಡು ಬಂದು ಆಚೆಯೇ ಕುಳಿತು ಅಪ್ಪ  ಇಡ್ಲಿಗಾಗಿ ಕಾಯುತ್ತಿದ್ದ, ನಾನು ತಿಂಡಿ ತಿಂದು ಮುಗಿಸಿ ನನ್ನ ತಟ್ಟೆ ಲೋಟ ತೊಳೆದಿಟ್ಟು ಶಾಲೆಗೇ ಹೋಗಲು ನನ್ನ ಬ್ಯಾಗನ್ನೆತ್ತಿಕೊಂಡೆ, ಆಗ ಅಪ್ಪ ಒಂದು ಗ್ಲಾಸ್ ಟೀ ನನ್ನ ಕೈಗೆ ಕೊಟ್ಟು, ಶಿವರಾಮನ ಅಪ್ಪನಿಗೆ ಕೊಡಲು ಹೇಳಿದರು.  ನಾನು ಅದೇ ಗ್ಲಾಸಿನಲ್ಲಿ ಶಿವರಾಮನ ಅಪ್ಪನಿಗೆ ಟೀ ಕೊಟ್ಟರೆ ಆತ ಅದನ್ನು ತನ್ನ ಬಳಿಯಿದ್ದ ಡೊಂಕಾದ ಲೋಟಕ್ಕೆ ಬಗ್ಗಿಸಿಕೊಂಡು ಖಾಲಿ ಗ್ಲಾಸನ್ನು ನನ್ನ ಕೈಗಿತ್ತ.  ಆ ಗ್ಲಾಸನ್ನು ನಾನು ಅಪ್ಪನಿಗೆ ಕೊಡಲು ಹೋದರೆ ಛಟೀರೆಂದು ಅಪ್ಪ ನನ್ನ ಕಪಾಳಕ್ಕೆ ಬಿಗಿದಿದ್ದರು.  ತಲೆ ಬುಡ ಅರ್ಥವಾಗದ ನಾನು ಕೆಳಗೆ ಬಿದ್ದಿದ್ದೆ, ಓಡಿ ಬಂದು ಅಕ್ಕ ನನ್ನನ್ನು ಮೇಲೆತ್ತಿದ್ದಳು. "ಅವರಿಗೆ ನಾವು ಕುಡಿಯುವ  ಲೋಟವನ್ನು ಮುಟ್ಟಿಸಬಾರದು ಕಣೋ, ನಿನಗೆ ಅಷ್ಟೂ ಗೊತ್ತಾಗೋದಿಲ್ವಾ"  ಅಂತ ಮೂತಿ ತಿವಿದ ಅಕ್ಕ, ಅಲ್ಲಿಂದ ನನ್ನು ಓಡಿಸಿಕೊಂಡು ಶಾಲೆಗೆ  ಕರೆ ತಂದಿದ್ದಳು. ಅಪ್ಪನ  ಕೈಯ್ಯಿಂದ  ಇನ್ನೂ ಬೀಳಬಹುದಿದ್ದ ಏಟುಗಳಿಂದ ನನ್ನನ್ನು ಆ ಕ್ಷಣಕ್ಕೆ ಬಚಾವು ಮಾಡಿದ್ದಳು.  

ಅದು ಹೇಗೋ  ಶಿವರಾಮನ ಗುಡಿಸಲಿನಲ್ಲಿ ಏಡಿಗಳನ್ನು ಸುಟ್ಟು ತಿಂದ ಕಥೆ ಊರಿನಲ್ಲಿ ಎಲ್ಲರಿಗೂ ಗೊತ್ತಾಗಿ ದೊಡ್ಡ ರಾಮಾಯಣವೇ ಆಗಿ ಹೋಯಿತು, ಪಂಚಾಯಿತಿ ಸೇರಿಸಿದ ಊರಿನ ಹಿರಿಯರು ಶಿವರಾಮ ಮಾಡಿದ ತಪ್ಪಿಗೆ ಅವನಪ್ಪ ಅಮ್ಮನಿಗೆ ಒಂದು ತಿಂಗಳ ಕಾಲ ಊರಿನಲ್ಲಿ ಯಾರೂ ಕೂಲಿ ಕೆಲಸ ಕೊಡಬಾರದೆಂದು ತಾಕೀತು ಮಾಡಿದ್ದರು, ಸರ್ಕಾರಿ ಕೆಲಸದ ನಿಮಿತ್ತ ಆ ಊರಿಗೆ ಹೊಸದಾಗಿ ಬಂದಿದ್ದ ನನ್ನಮ್ಮ ಅಪ್ಪನನ್ನು ಕರೆಸಿ ಮತ್ತೊಮ್ಮೆ ನಿಮ್ಮ ಮಕ್ಕಳು ಹೊಲೇರ ಹಟ್ಟಿಯಲ್ಲಿ ಹೋಗಿ ಅಮೇಧ್ಯ ತಿನ್ನದಂತೆ ನೋಡಿಕೊಳ್ಳಿ ಇಲ್ಲದಿದ್ದರೆ ನಿಮ್ಮ ಮೇಲೂ ನಮ್ಮೂರಿನ ಪಂಚಾಯಿತಿಯ ರೀತಿ ಕ್ರಮ ತೊಗೋಬೇಕಾಗುತ್ತೆ ಅಂತ ಎಚ್ಚರಿಕೆ  ಕೊಟ್ಟಿದ್ದರು.  ನನ್ನ ಏಡಿ ತಿಂದ ಪ್ರಸಂಗದ ಅರಿವೇ ಇಲ್ಲದ ಅಪ್ಪ, ಪಂಚಾಯಿತಿಯಲ್ಲಿ  ಊರಿನವರ ಮೇಲೆ ಏರಿ ಹೋಗಿ ಅವಮಾನವನ್ನನುಭವಿಸಿ ಮುಜುಗರಕ್ಕೀಡಾಗಿದ್ದರು.  ಇದೇನೂ ಗೊತ್ತಿಲ್ಲದ ನಾನು ಮತ್ತು ಅಕ್ಕ ಎಂದಿನಂತೆ ಶಾಲೆ ಮುಗಿಸಿ ಸಂಜೆ ಮನೆಗೆ ಬಂದೆವು, ಸ್ವಲ್ಪ ಸ್ವಲ್ಪ ಕಥೆ ಗೊತ್ತಾಗಿದ್ದ ಅಜ್ಜಿ, ಬೇಗ ಊಟ ಮಾಡಿ ನೀವಿಬ್ರೂ ಮಲಕ್ಕೊಳ್ರೋ, ನಿಮ್ಮಪ್ಪ ಬರೋವರೆಗೂ ಎದ್ದಿರಬೇಡಿ ಅಂತ ಎಚ್ಚರಿಸಿ, ಬೇಗ ಊಟ ಮಾಡಿ ಮಲಗಿಸಿದ್ದರು.  

ಆದರೆ ನನ್ನ ಗ್ರಹಚಾರ ಕೆಟ್ಟಿತ್ತು, ಹೋಟೆಲು  ಮುಚ್ಚಿ ಮನೆಗೆ ಬರುವಾಗಲೇ ದಾರಿಯಲ್ಲಿದ್ದ ಹುಣಿಸೇಮರದಿಂದ ಸರಿಯಾದ ಕೋಲೊಂದನ್ನು ಸಿದ್ಧ ಮಾಡಿಕೊಂಡು ಬಂದಿದ್ದ ಅಪ್ಪ,  ನನ್ನ ಹೊದಿಕೆ ಕಿತ್ತೆಸೆದು ಏಳೋ ಮ್ಯಾಲೆ, ಬೋ...... ಮಗನೆ, ಹೋಗಿ ಕಚಡಾ ತಿನ್ನಕ್ಕೆ ನಿನಗೆ ಅವರ ಮನೇನೆ ಸಿಕ್ಕಿತ್ತಾ, ನಮ್ಮ ಜಾತಿ ಕೆಡಿಸಿ ನನಗೆ ಊರವರ ಮುಂದೆ ಅವಮಾನ ಮಾಡ್ತೀಯಾ ಅಂತ ಕಿರುಚಾಡಿ ಒಂದನೆ ತರಗತಿಯಲ್ಲಿ  ಓದುತ್ತಿದ್ದ ನನ್ನ  ಎಳೆಯದಾ ದ ಹಸಿ ಮೈ ಹಸಿರುಗಟ್ಟುವಂತೆ ಬಾರಿಸಿ ತನ್ನ ಕೋಪವನ್ನೆಲ್ಲ ತೀರಿಸಿಕೊಂಡಿದ್ದರು.  ಅಳುತ್ತಾ 'ಬೇಡಪ್ಪಾ ಅವನನ್ನು ಹೊಡಿಬೇಡ' ಎಂದು ಅಡ್ಡ ಬಂದ ಅಕ್ಕನಿಗೂ ಸಾಕಷ್ಟು ಏಟುಗಳು ಬಿದ್ದಿದ್ದವು.  ಅಂದು ರಾತ್ರಿಯೆಲ್ಲ ಅಳುತ್ತಾ ನೋವಿನಿಂದ ನರಳುತ್ತಿದ್ದ ನನ್ನನ್ನು ನಾಯಿಮರಿಯಂತೆ ತನ್ನ ಎದೆಗವುಚಿಕೊಂಡೆ ಮಲಗಿದ್ದಳು ನನ್ನಕ್ಕ.  ನನಗೂ ಅಕ್ಕನಿಗೂ ಅಂದು ಅಪ್ಪ ವಿಠಲಾಚಾರಿಯ ಸಿನಿಮಾದಲ್ಲಿ ಬರುವ ಭಯಂಕರ ರಾಕ್ಷಸನಂತೆ ಕಂಡಿದ್ದರು.  ಅಪ್ಪನ ರೌದ್ರಾವತಾರ ಕಂಡು ಬೆದರಿದ್ದ ಅಮ್ಮ, ಅಜ್ಜಿಯರು ನಮ್ಮಿಬ್ಬರ ಹತ್ತಿರಕ್ಕೆ ಬರುವ  ಸಾಹಸವನ್ನೇ ಮಾಡಿರಲಿಲ್ಲ.  ಮೂರು ದಿನ ಭಯಂಕರ ಜ್ವರದಿಂದ ನರಳಿದ್ದ ನಾನು ಶಾಲೆಗೇ ಹೋಗಿರಲಿಲ್ಲ, ನನಗೆ ಚಿಕಿತ್ಸೆ ನೀಡಿದ ಅಂಕಣ್ಣ ಡಾಕ್ಟರು ಇನ್ನೊಮ್ಮೆ ಮಕ್ಕಳಿಗೆ ಈ ರೀತಿ ಹೊಡೆಯಬಾರದು ಅಂತ ನಿನ್ನ ಗಂಡನಿಗೆ ಹೇಳಮ್ಮಾ ಅಂತ ಅಮ್ಮನಿಗೆ  ಉಪದೇಶ ಮಾಡಿದ್ದರು.  ಕೋಪ ಬಂದರೆ ಅವರು ಯಾರ ಮಾತನ್ನೂ ಕೇಳುವುದಿಲ್ಲ ಸಾರ್, ರಾಕ್ಷಸನ ಥರ ಆಗಿಬಿಡುತ್ತಾರೆ ಎಂದಿದ್ದರು ಅಸಹಾಯಕರಾದ ಅಮ್ಮ.   

ಸಿನಿಮಾಸ್ಕೋಪ್ ಸಿನಿಮಾದಂತೆ ಇಂದು ಬೆಳಿಗ್ಗೆ ಈ ಪ್ರಸಂಗ ನನ್ನ ಮನಸ್ಸಿನಲ್ಲಿ ಹಾದು  ಹೋದಾಗ ಗಾಢನಿದ್ದೆಯಿಂದೆದ್ದು ಕಣ್ಣು ಬಿಟ್ಟೆ, ಬಾಲ್ಕನಿಯ ಕಿಟಕಿ ತೆರೆದು ಹೊರಗೆ ಮುಖವಿಟ್ಟರೆ ಬೀಸುತ್ತಿತ್ತು ಮರಳುಗಾಡಿನ ಸುಡುಗಾಳಿ.  ಬಾಲ್ಕನಿ ಮುಚ್ಚಿ ಬಂದವನು ಬರೆಯಲು ಕುಳಿತೆ.  ನೆನಪಿನಾಳದಿಂದ ಹೊರಬಂದ ಈ ಪ್ರಸಂಗ ಮರೆಯಾದ ನನ್ನ ಅಕ್ಕನನ್ನು ಬಹುವಾಗಿ ನೆನಪಿಸಿ ಕಾಡತೊಡಗಿದೆ ಇಂದು. 

Sunday, June 30, 2013

ನನಗೆ ಗೊತ್ತೋ ಮಹಾದೇವ.......!

ನನಗೆ ಗೊತ್ತೋ ಮಹಾದೇವ ನೀ ಕೋಪಗಾರನೆಂದು 
ನೀ ಮೂರನೆ ಕಣ್ಣ ತೆರೆದರೆ ಲೋಕವ ಸುಡುವೆಯೆಂದು 
ನನಗೆ ಗೊತ್ತೋ ಮಹಾದೇವ ನೀ ಕೋಪಗಾರನೆಂದು 

ಬ್ರಹ್ಮ ಸೃಷ್ಟಿಸುವ ವಿಷ್ಣು ಹಗಲಿರುಳೆನ್ನದೆ ಕಾಯುವವ 
ನನಗೆ ಗೊತ್ತೋ ಮಹಾದೇವ ನೀ ಲಯಕಾರಕನೆಂದು 
ಪ್ರಶ್ನೆಯಿದು  ಮನದಲಿಂದು ನೀ ಕುರುಡನೇಕಾದೆಯೆಂದು ? 

ನಿನಗೆ ಕಾಣಲಿಲ್ಲವೇ ಭಯೋತ್ಪಾದಕರು ಭ್ರಷ್ಟ ರಾಜಕಾರಣಿಗಳು 
ಅಬಲೆಯರ ಮಾನಭಂಗವ   ಮಾಡುವ ನೀಚ ಕಾಮುಕರು....!
ನಿನ್ನ ಪ್ರಳಯತಾಂಡವಕೆ ಮೋಕ್ಷವನರಸಿ ಬಂದವರೆ ಕಂಡರೆ?

ಕೊಂದೆಯಲ್ಲೋ ಮಹಾದೇವ ನಿನ್ನನರಸಿ ನಿನ್ನ ಕಾಣಲು ಬಂದವರ 
ನಿನಗೆಲ್ಲಿದೆಯೋ ಮತಿ ಮಹಾದೇವ ನನಗೇ ಇಷ್ಟಿಹುದು ದುಃಖವು 
ಅವರ ರಕ್ತಬಂದುಗಳ ನೆನೆಯೋ ನೀ ಆ ಆಕ್ರಂದನವ ಆ ನೋವ 

ನೀ ನಿಷ್ಕರುಣಿಯಾದೆಯೆಂದು  ಜಿಗುಪ್ಸೆಗೊಂಡಿದೆಯೀ ಮನವಿಂದು
ನನಗೆ ಗೊತ್ತೋ ಮಹಾದೇವ ನೀ ಬಲು ಕೋಪಗಾರನೆಂದು ..... !
ತೋರಲೇಕೆಯೋ ಈ ಕೋಪವ ನೀ ಭ್ರಷ್ಟ ಕಾಮುಕರ  ಮೇಲಿಂದು?????

Friday, June 21, 2013

ಅದೆಂಥಾ ಭಯಂಕರ ಘಳಿಗೆಯೇ ಗೆಳತಿ,.......!!

ಎಂದೆಂದೂ ನನ್ನವರೆಂದು ಭಾವಿಸಿದ್ದವರೆಲ್ಲ ನನ್ನವರಲ್ಲ ಎಂದು ಅರಿವಾದಾಗ 
ನಂಬಿಕೆಯ ಬುಡವನ್ನೇ ಅಲ್ಲಾಡಿಸಿದ ಅದೆಂಥಾ ಭಯಂಕರ ಘಳಿಗೆಯೇ ಗೆಳತಿ, 

ಕ್ಷಣ ಮಾತ್ರದಲಿ ಹೃದಯ ಬಡಿತವೇ ನಿಂತು ಹೋದಂತಾಗಿ ಕಣ್ಣು ಕತ್ತಲಾಗಿ 
ಮುಂದಿನ ದಾರಿ ಕಾಣದಾಗಿ ಪ್ರಕ್ಷುಬ್ಧ ಕಡಲಿನಲಿ ಸಿಕ್ಕ ಒಂಟಿ ದೋಣಿಯಂತಾಗಿ 

ದಶಕಗಳ ಸಂಬಂಧಗಳು ಕ್ಷಣಮಾತ್ರದಲಿ ನಶಿಸಿ ಹೋಗಿ ಗುರುತೇ ಉಳಿಯದಾಗಿ 
ಯಾರಿಗೂ ನಾ ಏನೂ ಅಲ್ಲವೆನ್ನುವ ಮಟ್ಟಿಗೆ ಅಪರಿಚಿತನಾಗಿ ಬಾಳುವ ಘಳಿಗೆ 

ಅದೆಷ್ಟು ಕಷ್ಟವೇ ಗೆಳತಿ ಹೊಂದಿಕೊಳಲು ಪಲ್ಲಟವಾದ ಇಂದಿನ ಈ ಪರಿಸ್ಥಿತಿಗೆ
ಭ್ರಮೆಗಳೆಲ್ಲ ಮುಖವಾಡ ಕಳಚಿ ತಮ್ಮ ವಾಸ್ತವ ರೂಪವ ತೋರುವ ಈ ಘಳಿಗೆ 

ಏನೆನ್ನಲಿ ಗೆಳತಿ ಇದನು ಅಮೃತ ಘಳಿಗೆಯೆನಲೆ ವಿಷಪ್ರಾಶನ ಕ್ಷಣವೆನಲೆ 
ಹಾಲು  ಹಾಲಾಹಲವಾದಾಗ  ಸುಕೋಮಲ ಮನದಿ ಕೋಲಾಹಲವೆದ್ದಾಗ...!

Tuesday, June 18, 2013

ಮಧುಮೇಹಿಯಂತೆ ನಾನಿಂದು...... !

ಅಧಿಕೃತವಾಗಿಂದು  ಧೃಡವಾಗಿದೆ ನಾನೊಬ್ಬ ಮಧುಮೇಹಿಯೆಂದು 
ಸವಿಮಾತಿನ ಸಕ್ಕರೆಯ ಎಲ್ಲರಿಗೂ ಹಂಚಿರುವೆ ಆದರೂ ಹೆಚ್ಚೆಂದು 

ನುಡಿದರು  ವೈದ್ಯರು ತಪ್ಪಿಯೂ ಆಲೂ ಅನ್ನ  ತಿನ್ನದಿರೆಂದು ....!
ಅನ್ನಪೂರ್ಣೆಯ ಕ್ಷಮೆ ಕೋರಿ ಅನ್ನ  ತಿನ್ನುವುದ ನಿಲಿಸುವೆ ಇಂದು!!! 

ಗೋಧಿ ಚಪಾತಿ ರಾಗಿಯ ರೊಟ್ಟಿಗಳೇ ಗತಿ ಉದರಕೆ ಮುಂದು ..... 
ರಾಗಿ ಮುದ್ದೆ ಮಾಡಿ ತಿನಿಸಲು ಸಾಗರ ದಾಟಿ ನೀ ಬರುವೆ ಎಂದು.... ?

 ಅಮ್ಮನ ಪ್ರಾಣಪಕ್ಷಿಯ ಅರಿವಿಲ್ಲದೆ ಎಗರಿಸಿದ್ದೆ ನೀ ಅಂದು ... !
ಬಂದಿರುವೆಯಾ ಮರಳಿ ಈಗ ನನ್ನನ್ನೂ ಕಾಡಲೇಬೇಕೆಂದು. ?

ಆದರೂ ತಿಳಿದುಕೋ ಬಂಡೆಯಂಥ ಗಟ್ಟಿ ಹೃದಯವಿದು ನನ್ನದು ..!
ಸುಲಭವಾಗಿ ಜಯಿಸಲಾರೆ, ಕೊಂಡೊಯ್ಯಲಾರೆ ನನ್ನ ನೀನೆಂದೂ.. !!

Saturday, June 8, 2013

ಕುಣಿಯುತಿದೆ ಹಕ್ಕಿ,,,,!

ಮಳೆ ಮುಗಿಲ ಕಂಡು ಹರುಷದಿ ಕುಣಿಯುತಿದೆ ಹಕ್ಕಿ, 
ಹಾರಾಡಿ ಏರಿಳಿದು ಬಾನಗಲ ಜಗ ಸುತ್ತುವಾಸೆಯಲಿ..!

ಬಿಚ್ಚಿದೆ ತನ್ನ ಹಿರಿದಾದ ರೆಕ್ಕೆ, ಚಿಮ್ಮಲು ಆಗಸದೆತ್ತರಕೆ 
ಅಳಿವುದೇನ್, ಉಳಿವುದೇನ್, ನಡೆ ನೀನ್ ಅನಂತದಾಚೆ,

ಸಿದ್ಧವಿದೆ ಹಕ್ಕಿ ಹಾರಲೆತ್ತರಕೆ, ಚಿಮ್ಮುವುದೊಂದೆ ಬಾಕಿ,
ಬೇಡನೆಸೆದ ಬಲೆಗೆ ಸಿಲುಕಿದೆ ಕಾಲು, ಹಾರಲಾಗದು ಹಕ್ಕಿ !

ತಡಬಡಿಸಿದೆ, ಒದ್ದಾಡಿದೆ, ಕೂಗಿದೆ, ಚೀರಿದೆ ಬಿಕ್ಕಿ ಬಿಕ್ಕಿ,,!
ಬೇಡನೋ, ಸಿದ್ಧನಿರುವ ಕರುಣೆಯಿಲ್ಲದೆ ಕೊಲಲು ಕುಕ್ಕಿ ಕುಕ್ಕಿ !! 

ಮಳೆ ಮುಗಿಲ ಕಂಡು ಹರುಷದಿ ಕುಣಿಯುತ್ತಿತ್ತು ಹಕ್ಕಿ ,,,,,
ವಿಧಿರಾಯನ ಅಟ್ಟಹಾಸದೆ ನಲುಗಿ ಸೋತಿತ್ತು ಬಿಕ್ಕಿ....! 

Sunday, June 2, 2013

ಸೋತಿದೆ ಮಲ್ಹಾರ ರಾಗ...!

ಸುರಿಯುತಿದೆ ಮುಂಗಾರು ಮಳೆ ಮನೆಯ ಹೊರಗೆ 
ಹರಿಯುತಿದೆ ನೆನಪುಗಳ ಹೊಳೆ ಮನದ ಒಳಗೆ ...!

ಅಂದು ನೀ ಜೊತೆಯಿರಲು ಬದುಕು ಬಲು ಸುಂದರ 
ಇಂದು ನೀ ನೆನಪಾಗಿರಲು ಈ ಬದುಕು ದುಸ್ತರ ....!

ಅಬ್ಬರಿಸುತಿಹ ಮಳೆರಾಯ ಸಿಡಿಲು ಗುಡುಗು ಮಿಂಚಿನೊಡನೆ 
ನಗುತಿಹಳು ಇಳೆ ಒಡಲ ದಾಹ  ತಣಿಸಿದ ಇನಿಯನೊಡನೆ...! 

ಜೊತೆಯಾಗಿ ನೀ ಹಿಡಿದ ಕೊಡೆಯ ನೆನಪಾಯಿತು ನನಗಿಂದು 
ಭೋರ್ಗರೆವ ಮಳೆಯಬ್ಬರದಿ ಮರೆಯಾಯಿತು ಕಂಬನಿಯ ಬಿಂದು.. !

ಭುವಿಯ ಕಸ ತೊಳೆದು ಹೊಸ ಹಸಿರ ತರುವ ಮಳೆರಾಯನೀಗ 
ಮನದಿ ಕವಿದ ಕತ್ತಲ ತೊಳೆಯಲಾಗದೇ ಸೋತಿದೆ ಮಲ್ಹಾರ ರಾಗ...!

Sunday, May 19, 2013

ಮತ್ತೆ ಸೆಳೆದ ಅರಬ್ಬರ ನಾಡು.


ಸುಮಾರು ಎರಡೂವರೆ ವರುಷಗಳ ಹಿಂದೆ ನಾನು ದುಬೈನಿಂದ ಬೆಂಗಳೂರಿಗೆ ಹಿಂದಿರುಗಿದ್ದೆ, ಅಂದು ಮನೆಯ ಪರಿಸ್ಥಿತಿಗಳು ನನ್ನನ್ನು ನಿಂತ ಹೆಜ್ಜೆಯಲ್ಲಿ ಸಿಕ್ಕಿದ ವಿಮಾನವನ್ನೇರಿ ಬೆಂಗಳೂರಿಗೆ ಹಿಂದಿರುಗುವಂತೆ ಮಾಡಿದ್ದವು.   ನಾವೆಷ್ಟೇ ಮೇಲೇರಿದರೂ ಪರಿಸ್ಥಿತಿಯ ಕೈಗೊಂಬೆಗಳೇ ಎನ್ನುವುದನ್ನು ಜೀವನದಲ್ಲಿ ಮತ್ತೊಮ್ಮೆ ನೋಡಿ, ತಿಳಿಯುವ ಅವಕಾಶ ಅದಾಗಿತ್ತು.   ದುಬೈನ ಜೀವನಶೈಲಿಗೂ, ನಮ್ಮದೇ ಬೆಂಗಳೂರಿನ ಜೀವನಶೈಲಿಗೂ ಅಜಗಜಾಂತರ ವ್ಯತ್ಯಾಸ!  ಹೊಂದಿಕೊಳ್ಳಲು ಬಹಳ ತ್ರಾಸವಾಯಿತು, ಎಲ್ಲಿ ಹೋದರೂ ಬರಿಯ ಪ್ರಶ್ನೆಗಳೇ ಎದುರಾಗುತ್ತಿದ್ದವು, ದುಬೈನಲ್ಲಿ ಒಳ್ಳೆಯ ಕೆಲಸದಲ್ಲಿದ್ದವರು ಅದೇಕೆ ಬಿಟ್ಟು ಬಂದಿರಿ?  ಅಂಥಾದೇನಿದೆ ಬೆಂಗಳೂರಿನಲ್ಲಿ ?  ಸ್ನೇಹಿತರ, ಸಂಬಂಧಿಕರ ಇಲ್ಲಸಲ್ಲದ ಪ್ರಶ್ನೆಗಳು ಹಲವು ಬಾರಿ ನನ್ನನ್ನು ಯಾಕಾದರೂ ಬೆಂಗಳೂರಿಗೆ ಬಂದೆನೋ ಎಂದು ಯೋಚಿಸುವಂತೆ ಮಾಡುತ್ತಿದ್ದವು.  

 ನನ್ನದೇ ಒಂದು ಸ್ವಂತ ಕಂಪನಿ ಮಾಡೋಣವೆಂದು ಹೊರಟರೆ ಅದಕ್ಕೂ ನೂರೆಂಟು ಅಡ್ಡಿ, ಆತಂಕಗಳು, ಯಾವುದಾದರೂ ಒಳ್ಳೆಯ ಸಂಸ್ಥೆಯಲ್ಲಿ ಉದ್ಯೋಗವನ್ನಾದರೂ ಮಾಡೋಣವೆಂದರೆ ಅದಕ್ಕೂ ನೂರೆಂಟು ತಲೆನೋವುಗಳು!   ನಾನು ಕೆಲಸಕ್ಕೆಂದು ಹೋದ ಸಂಸ್ಥೆಗಳಲ್ಲೆಲ್ಲಾ ಅಲ್ಲಿದ್ದ ಹಿರಿಯ ಉದ್ಯೋಗಿಗಳು ನನ್ನನ್ನು ಸಂಶಯದಿಂದಲೇ ನೋಡುತ್ತಿದ್ದರು.  ವಿದೇಶದಲ್ಲಿದ್ದು ಹಿಂದಿರುಗಿರುವ  ಇವನನ್ನುಒಂದು ವೇಳೆ ಕೆಲಸಕ್ಕೆ ತೆಗೆದುಕೊಂಡಿದ್ದೇ ಆದಲ್ಲಿ ಮುಂದೊಂದು ದಿನ ಇವನು ನನ್ನ ಬುಡಕ್ಕೇ ನೀರು ಬಿಡುವನೇನೋ ಎನ್ನುವ ಅನುಮಾನದ ಸುಳಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.   ಹೀಗಾಗಿ ಸರಿಯಾದ ಉದ್ಯೋಗವೂ ಇಲ್ಲದೆ ಸ್ವಂತ ಸಂಸ್ಥೆಯನ್ನೂ  ಮಾಡಲಾಗದೆ ನನ್ನ ದುಒಂದು ರೀತಿಯ ತ್ರಿಶಂಕು ಸ್ಥಿತಿಯಾಗಿ ಹೋಯಿತು. 

ಈ ಅತಂತ್ರ ಸ್ಥಿತಿಯಲ್ಲಿ ಒದ್ದಾಡುತ್ತಿರುವಾಗ, ನನ್ನ ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲಿ,  ನನಗೆ ಜೊತೆಯಾಗಿ ನಿಲ್ಲಬೇಕಾಗಿದ್ದ ಮಡದಿ ಮಕ್ಕಳೂ ಸಹಾ ನನ್ನನ್ನು ಉಪೇಕ್ಷಿಸತೊಡಗಿದ್ದಾರೆ ಎಂದು ನನಗೆ ಅನ್ನಿಸತೊಡಗಿತು.  ನಾನು ದುಬೈನಲ್ಲಿದ್ದಾಗ ಪ್ರತಿ ತಿಂಗಳೂ ಮೊದಲನೆಯ ವಾರದಲ್ಲಿ ಸಾಕಷ್ಟು ಹಣ ಕಳುಹಿಸುತ್ತಿದ್ದೆ, ಮನೆಯ ಖರ್ಚಿಗೆ ಮಡದಿಗೆ, ಮಕ್ಕಳ ಖರ್ಚಿಗೆ ಯಾವುದೇ  ಯೋಚನೆಯಿರಲಿಲ್ಲ.  ಆದರೆ ಈಗ ನಾನು ಬೆಂಗಳೂರಿನಲ್ಲೇ ಇದ್ದುದರಿಂದಾಗಿ ಎಲ್ಲದಕ್ಕೂ ನನ್ನನ್ನೇ ಕಾಸು ಕೇಳಬೇಕಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಅವರಿಗೂ ಕಷ್ಟವಾಗಿತ್ತೆಂದು ಕಾಣುತ್ತದೆ, ಎಲ್ಲದಕ್ಕಿಂತ ಹೆಚ್ಚಾಗಿ ಕಳೆದು ಹೋದ "ಎನ್ನಾರೈ"ನ ಮಡದಿ-ಮಕ್ಕಳು ಎಂಬ ಸ್ಟೇಟಸ್ ಬಗ್ಗೆಯೇ ಅವರು ಹೆಚ್ಚಾಗಿ ತಲೆ ಕೆಡಿಸಿಕೊಂಡಂತಿತ್ತು. 
  
ಈ ಮಧ್ಯೆ ಸ್ನೇಹಿತನೊಬ್ಬನ ಮಾತು ಕೇಳಿ ಗೋವಾದ ಕ್ಯಾಸಿನೋಗಳಲ್ಲಿ ಹಣ ಮಾಡಲು ಹೊರಟೆ!  ಮೊದಮೊದಲು ಕೈ ಹಿಡಿದ ಕ್ಯಾಸಿನೋ ಲಕ್ಷ್ಮಿ ಕ್ರಮೇಣ ಕೈ ಕಚ್ಚತೊಡಗಿ ನಷ್ಟಕ್ಕೆ ದೂಡಿದಾಗ ದಿಕ್ಕು ತಪ್ಪಿದಂತಾಗಿತ್ತು ನನ್ನ ಸ್ಥಿತಿ.  ಹಣ ಮಾಡಲೆಂದು ಗೋವಾದ ಕ್ಯಾಸಿನೋಗಳಿಗೆ ಕಾಲಿಟ್ಟವನು ಇದ್ದ ಹಣವನ್ನೂ ಕಳೆದುಕೊಂಡು ಕೊನೆಗೆ ಸಾಲಗಾರನಾಗಬೇಕಾಯಿತು!   ಅತ್ತ ಮನೆಯ ಹೊರಗೆ ಸ್ನೇಹಿತರ, ಹಿತೈಷಿಗಳ, ಬಂಧುಗಳ ಬೆಂಬಲವಿಲ್ಲದೆ,  ಇತ್ತ ಮನೆಯೊಳಗೆ ಮಡದಿ ಮಕ್ಕಳ ಸಹಕಾರವೂ ಇಲ್ಲದೆ ಮನಸ್ಸು ಹೈರಾಣಾಗಿ ಹೋಯ್ತು.  ದುಬೈನಿಂದ ತಂದಿದ್ದ ಹಣವೆಲ್ಲ ಕರಗಿ ಸಾಲದ ಮೀಟರ್ ಏರುತ್ತಿತ್ತು.  ಸರಿಯಾದ ಆದಾಯವಿಲ್ಲದೆ, ಉದ್ಯೋಗವಿಲ್ಲದೆ ಬದುಕುವುದಾದರೂ ಹೇಗೆ ಎಂದೆಲ್ಲಾ ತುಂಬಾ ಯೋಚಿಸುತ್ತಿದ್ದೆ.  ಅತೀವ  ಕ್ಷೋಭೆಗೊಂಡಿದ್ದ ನನ್ನ ಮನಸ್ಸಿಗೆ ನೆಮ್ಮದಿ ನೀಡುತ್ತಿದ್ದುದು ಮಾತ್ರ ಮಲ್ಯನ ಆರ್ಸಿಯ ಪೆಗ್ಗುಗಳು  ಮತ್ತು ಪ್ಯಾಕುಗಟ್ಟಲೆ ಸೇದಿ ಬಿಸಾಕಿದ ವಿಲ್ಸ್ ಕ್ಲಾಸಿಕ್ ಮೈಲ್ಡ್ಸ್ ಸಿಗರೇಟುಗಳು.  ಮತ್ತೆ ದುಬೈಗೆ ಹೋಗಿ ಬಿಡೋಣವೆಂದು ಸಿಕ್ಕ ಸಿಕ್ಕ ಕೆಲಸಗಳಿಗೆಲ್ಲ ಅರ್ಜಿ ಕಳಿಸತೊಡಗಿದೆ,  ಆದರೆ ಯಾವುದೂ ಕೈಗೆಟುಕಲಿಲ್ಲ!

 ಕೊನೆಗೊಮ್ಮೆ ತಲೆ ಕೆಟ್ಟು , ಬ್ಯಾಗು ಹೆಗಲಿಗೇರಿಸಿ ಹೊರಟೆ.  ಸೀದಾ ಹೊಳೆನರಸಿಪುರಕ್ಕೆ ಹೋಗಿ ಚಿಕ್ಕಮ್ಮನೊಡನೆ ಮಾತನಾಡುತ್ತಾ ಕುಳಿತವನಿಗೆ ಅಲ್ಲಿಯ ವಾತಾವರಣವೂ ನೆಮ್ಮದಿ ನೀಡಲಿಲ್ಲ.   ಕೈಗೆ ಸಿಗದ ನೆಮ್ಮದಿಯನ್ನರಸುತ್ತಾ ಬಸ್ ಹತ್ತಿದವನು ಬಂದಿಳಿದಿದ್ದು ಹೊರನಾಡಿನಲ್ಲಿ, ಗೆಳೆಯ ರಾಘವೇಂದ್ರ ನಾವುಡರಿಗೆ ಮೊದಲೇ ತಿಳಿಸಿದ್ದರಿಂದ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿತ್ತು.  ಅವರೊಡನೆ ಕುಳಿತು ಮನ ಬಿಚ್ಚಿ ಮಾತಾಡಿದೆ, ಮನದ ತುಂಬ ಮಡುಗಟ್ಟಿದ್ದ ದುಗುಡ, ದುಮ್ಮಾನಗಳನ್ನೆಲ್ಲ ಕಕ್ಕಿಕೊಂಡಾಗ ಒಂದು ರೀತಿಯ ಆನಂದದ ಭಾವ ಹೊರ ಹೊಮ್ಮಿತ್ತು.  ಎಲ್ಲವನ್ನೂ ಕೇಳಿದ ನಂತರ ನಗುಮೊಗದ ನಾವುಡರು ಹೇಳಿದ್ದು ಒಂದೇ ಮಾತು!  "ಮೂರು ದಿನ ನೆಮ್ಮದಿಯಾಗಿ ಇಲ್ಲಿರಿ ಮಾರಾಯ್ರೇ , ಅಮ್ಮನವರ ಸೇವೆ ಮಾಡಿ, ಎಲ್ಲವನ್ನೂ ಮರೆಯಿರಿ, ಎಲ್ಲ ಸರಿಯಾಗ್ತದೆ".  ಅವರಂದಂತೆ ಅಲ್ಲೇ ಉಳಿದು ದೇವಿ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಮನಃಪೂರ್ವಕ ಸೇವೆ ಸಲ್ಲಿಸಿದೆ, ಆ ಸನ್ನಿಧಿಯ ಮಹಾತ್ಮೆಯೋ, ದೇವಿಯ ಅನುಗ್ರಹವೋ ನಾ ಕಾಣೆ, ಒಂದು ರೀತಿಯ ನಿರಾಳಭಾವ ಮನಸ್ಸನ್ನಾವರಿಸಿ ಜಗವನ್ನೇ ಮರೆಯುವಂತೆ ಮಾಡಿತ್ತು.  ಮಡಿಲಲ್ಲಿ ಕಂದನನ್ನು ಮಲಗಿಸಿಕೊಂಡು ಜೋಗುಳ ಹಾಡಿ ಮಲಗಿಸುವ ಮಹಾಮಾತೆಯಂತೆ ಕಂಡಿದ್ದಳು ದೇವಿ ಅನ್ನಪೂರ್ಣೆ ನನ್ನ ಕಣ್ಣಿಗಂದು!  

ಅಲ್ಲಿಂದ ಹೊರಟವನು ಕಟೀಲು ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕೆಯರ ದರ್ಶನ ಮಾಡಿ, ಒಳ್ಳೆಯದಾಗುವಂತೆ ಹರಸಿರೆಂದು ಮನಃಪೂರ್ವಕ ಪ್ರಾರ್ಥನೆ ಸಲ್ಲಿಸಿ ಹೊರಟೆ.  ನಾಲ್ಕಾರು ದಿನದ ಅಲೆದಾಟದ ನಂತರ ಮತ್ತೆ ಬೆಂಗಳೂರಿಗೆ ಹಿಂದಿರುಗಲು ಶಿವಮೊಗ್ಗಕ್ಕೆ ಬರುವಲ್ಲಿ  ಜೇಬಿನಲ್ಲಿದ್ದ ಹಣ ಖಾಲಿಯಾಗಿ ನನ್ನನ್ನು ಅಣಕಿಸುತ್ತಿತ್ತು  ಆಗ ನೆನಪಾಗಿದ್ದು ಮತ್ತೊಬ್ಬ ಗೆಳೆಯ ಸತ್ಯಚರಣ!   ಫೋನ್ ಮಾಡಿದೊಡನೆ ಖುಷಿಯಿಂದ ಮಾತನಾಡಿ ಹತ್ತೇ ನಿಮಿಷದಲ್ಲಿ ರೈಲುನಿಲ್ದಾಣದ ಬಳಿಗೆ ಬಂದವರನ್ನು ಕಂಡು ನನಗೂ ಅಷ್ಟೇ ಖುಷಿಯಾಗಿತ್ತು.   ಅವರೊಡನೆ  ಅವರ ನಿತ್ಯಕಾಯಕದ "ಸತ್ಯ ಸಾಯಿ ಮಂದಿರ"ಕ್ಕೆ ಬಂದೆ. ಅಲ್ಲಿ ಅವರು ನಡೆಸುತ್ತಿದ್ದ ಸಮಾಜಮುಖಿ ಕಾರ್ಯಗಳ ಬಗ್ಗೆ ಕಿರು ಪರಿಚಯವಾಯಿತು, ಅಲ್ಲಿ ನಡೆಯುತ್ತಿದ್ದ ನಿತ್ಯ ದಾಸೋಹವಂತೂ ಅನುಕರಣೀಯ.  ಸತ್ಯಸಾಯಿಬಾಬಾರ ಪದತಲಕ್ಕೆ ನಮಿಸಿ ನನ್ನನ್ನು ಈ ಕಾರ್ಪಣ್ಯಗಳಿಂದ ಆದಷ್ಟು ಬೇಗನೆ ಮುಕ್ತಿಗೊಳಿಸಿರೆಂದು ಪ್ರಾರ್ಥಿಸಿ ಅಲ್ಲಿಂದ ಹೊರಟೆ.  ರೈಲು ಚಾರ್ಜಿಗೆಂದು ಸತ್ಯಚರಣರಿಂದ ಸ್ವಲ್ಪ ಹಣ ಪಡೆದು, ರಾತ್ರಿಯ ರೈಲಿನಲ್ಲಿ ಬೆಂಗಳೂರಿಗೆ ಬಂದೆ. 

ಬೆಂಗಳೂರಿಗೆ ಹಿಂದಿರುಗಿದ ಮೂರೇ ದಿನದಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಿಂದ ಬಂತು ಫೋನ್ ಕರೆ!  ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ಬಂದು ನಮ್ಮ ಎಂಡಿಯವರನ್ನು ಭೇಟಿ ಮಾಡಿ ಎಂದು.  ಈ ಹಿಂದೆ ಎರಡು ವರ್ಷ ನಾನು ಕೆಲಸ ಮಾಡಿದ್ದ ಆ ಸಂಸ್ಥೆಗೆ  ಕೆಲಸಕ್ಕೆಂದು ಅರ್ಜಿ ಹಾಕಿ ಸುಮಾರು ಮೂರ್ನಾಲ್ಕು ತಿಂಗಳುಗಳಾಗಿದ್ದವು!   ಮರುದಿನ ಹೋಗಿ ಎಂಡಿಯವರನ್ನು ಭೇಟಿಯಾದೆ, ಉಭಯಕುಶಲೋಪರಿಯಾದ ಬಳಿಕ ನನ್ನ ದುಬೈ ಕೆಲಸದ ಬಗ್ಗೆ ಎಲ್ಲವನ್ನೂ ಕೇಳಿ ತಿಳಿದುಕೊಂಡ ಅವರು  ಮರುದಿನವೇ ಬಂದು ಕೆಲಸ  ಪ್ರಾರಂಭಿಸಿ ಎಂದಾಗ ನನಗೆ ನಂಬಲು ಸ್ವಲ್ಪ ಕಷ್ಟವೇ ಆಯಿತು.  ಮನೆಗೆ ಬಂದು ಮಡದಿಗೆ ವಿಷಯ ತಿಳಿಸಿದೆ,   "ಈ ಕೆಲಸದಿಂದ ನೀವು ಉದ್ಧಾರವಾಗುವುದಿಲ್ಲ ಯಾವುದಾದರೂ ಕೆಲಸ ನೋಡಿಕೊಂಡು ಮೊದಲು ದುಬೈಗೆ ಹೋಗುವುದನ್ನು ನೋಡಿ" ಎಂದವಳು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ಕಂಡಿದ್ದಳು. 

ಫೋನ್ ಮಾಡಿ ರಾಘವೇಂದ್ರ ನಾವುಡರಿಗೆ, ಸತ್ಯಚರಣರಿಗೆ ವಿಷಯ ತಿಳಿಸಿದೆ, 'ಮೊದಲು ಕೆಲಸಕ್ಕೆ ಸೇರಿಕೊಳ್ಳಿ, ಎಲ್ಲವೂ ಒಳ್ಳೆಯದಾಗುತ್ತದೆ' ಅಂದರು.  ಸಿಕ್ಕ ಕೆಲಸವನ್ನು ಬಿಡುವುದು ಬೇಡವೆಂದು ಸೇರಿಕೊಂಡೆ, ಹಲವಾರು ಸಮಸ್ಯೆಗಳ ನಡುವೆಯೂ ನನ್ನ ಕೆಲಸ ಸುಗಮವಾಗಿ ಸಾಗುತ್ತಿತ್ತು.   ಒಂದು ಹದಿನೈದು ದಿನಗಳಾಗುವಷ್ಟರಲ್ಲಿ ದುಬೈನಿಂದ ಬಂತು ಒಂದು ಫೋನ್ ಕಾಲ್!  ಅದು ಭಾರತೀಯ ಸೈನ್ಯದ ನಿವೃತ್ತ ಮೇಜರ್ ಜನರಲ್ ನಂಬಿಯಾರ್ ಅವರ ಫೋನ್ ಕಾಲ್ ಆಗಿತ್ತು!  ಏಳೆಂಟು ತಿಂಗಳ ಹಿಂದೆ ಅವರೊಡನೆ ಮಾತನಾಡಿ, ಅವರ ಕರೆಯ ಮೇರೆಗೆ ಕೇರಳದ  ಕಣ್ಣೂರಿಗೆ ಹೋಗಿ ಅವರನ್ನು ಭೇಟಿಯಾಗಿ ಬಂದಿದ್ದೆ.   ತಾವು ಸಧ್ಯದಲ್ಲಿಯೇ ಒಂದು ಸಂಸ್ಥೆಯನ್ನು ಆರಂಭಿಸಲಿದ್ದು, ಅಲ್ಲಿನ ಉಸ್ತುವಾರಿ ನೋಡಿಕೊಳ್ಳಲು ದುಬೈಗೆ ಬರಬೇಕೆಂದು ಆಮಂತ್ರಣ ನೀಡಿದ್ದರು.  ಅವರ ಕೆಲಸಕ್ಕೆ ನನ್ನ ಒಪ್ಪಿಗೆ ಸೂಚಿಸಿ ಬಂದಿದ್ದೆ, ಆ ನಂತರ ಅವರಿಂದ ಮತ್ತೆ ಯಾವುದೇ ಸಂದೇಶ ಬಂದಿರಲಿಲ್ಲ!  ನಾನೂ ಸಹಾ ದುಬೈನ ಕೆಲಸದ ಆಸೆಯನ್ನು ಮರೆತು ಬಿಟ್ಟಿದ್ದೆ.  ಆದರೆ,,,,,,, ಮತ್ತೆ ಬಂದ ಫೋನ್ ಕರೆ ನನ್ನನ್ನು ದುಬೈಗೆ ಹೋಗುವಂತೆ ಪ್ರೇರೇಪಿಸಿತ್ತು.  ಒಂದು ವಾರದಲ್ಲಿ ವೀಸಾ ಕಳುಹಿಸುತ್ತೇನೆ, ದುಬೈಗೆ ಬಂದುಬಿಡು ಎಂದವರಿಗೆ ನನ್ನ ಒಪ್ಪಿಗೆ ಸೂಚಿಸಿ, ನನ್ನ ಪಕ್ಕದಲ್ಲಿ ನಿಂತಿದ್ದ ನನ್ನ ಮಡದಿಯ ಮುಖ ನೋಡಿದೆ.   "ಮೊದಲು ದುಬೈಗೆ ಹೋಗಿ, ಇಲ್ಲಿದ್ದರೆ ಆಗುವುದಿಲ್ಲ, ಹಿಂದೆ ಮುಂದೆ ಯೋಚಿಸಬೇಡಿ" ಎಂದಳು.  

ಮತ್ತೊಮ್ಮೆ ರಾಘವೇಂದ್ರ ನಾವುಡರಿಗೆ ಫೋನ್ ಮಾಡಿದೆ, ಅವರು "ಓಯ್ ಮಾರಾಯ್ರೇ, ನೀವು ದುಬೈಗೆ ಹೋಗಿ, ಎಲ್ಲ ಒಳ್ಳೇದಾಗ್ತ ದೆ, ದೇವಿ ಅನ್ನಪೂರ್ಣೇಶ್ವರಿ ಕಾಪಾಡುತ್ತಾಳೆ"   ಅಂದರು.  ಬೆಂಗಳೂರಿನ ಸಂಸ್ಥೆಯಲ್ಲಿನ ಕೆಲಸದಲ್ಲಿ ಒಂದು ತಿಂಗಳು ಮುಗಿಸಿ, ಸಂಬಳ ಕೈಗೆ ಬರುವಷ್ಟರಲ್ಲಿ ದುಬೈನಿಂದ ವೀಸಾ ಬಂದೇ ಬಿಟ್ಟಿತು.  ಅಲ್ಲಿನ ಎಂಡಿಯವರಿಗೆ ಫೋನಿನಲ್ಲೇ ವಿಷಯ ತಿಳಿಸಿ "ಹೀಗೆ ತುರ್ತಾಗಿ ಕೆಲಸ ಬಿಡುತ್ತಿರುವುದಕ್ಕೆ ಕ್ಷಮೆಯಿರಲಿ" ಎಂದೆ.  ಮರುದಿನದ ಏರ ಇಂಡಿಯಾ ವಿಮಾನ ಹತ್ತಿಯೇಬಿಟ್ಟೆ.   ದುಬೈನಲ್ಲಿ ನಡುರಾತ್ರಿಯಲ್ಲಿ ಬಂದಿಳಿದವನಿಗೆ ನಂಬಿಯಾರ್ ಸಾಹೇಬರ ಮಗ ಆತ್ಮೀಯವಾಗಿ ಸ್ವಾಗತಿಸಿ, ತನ್ನ ಕಾರಿನಲ್ಲಿ  ಕಂಪನಿಯ ಅತಿಥಿಗೃಹಕ್ಕೆ ಕರೆದೊಯ್ದಿದ್ದ.  ಮರುದಿನ ಬೆಳಿಗ್ಗೆ ಎದ್ದು ಸಿದ್ಧನಾಗಿ ದುಬೈನ ಸುಂದರ ಮೆಟ್ರೋ ರೈಲಿನಲ್ಲಿ ಸೀದಾ ಆಫೀಸಿಗೆ ಬಂದೆ.  ನಗೆಮೊಗದಿಂದ ಸ್ವಾಗತಿಸಿದ ನಂಬಿಯಾರ್ ಅವರಿಂದ ನನ್ನ ಕೆಲಸದ ಬಗ್ಗೆ ಎಲ್ಲ ವಿವರಣೆಗಳನ್ನು ಪಡೆದು ಮೊದಲ ದಿನದ ಕೆಲಸ ಆರಂಭಿಸಿದೆ. 

ಸುಮಾರು 32 ತಿಂಗಳುಗಳ ಕಾಲ ಅನುಭವಿಸಿದ ಮಾನಸಿಕ ಯಾತನೆ ಕೊನೆಗೊಂಡಿದೆ.   "ಅವಕಾಶ ವಂಚಿತರ ಸ್ವರ್ಗ" ದುಬೈ ಮತ್ತೊಮ್ಮೆ ನನ್ನನ್ನು ಕೂಗಿ ಕರೆದು ತನ್ನ ಬಾಹುಗಳಲ್ಲಿ ಬಿಗಿದಪ್ಪಿದೆ.   ಈಗ ಮನಸ್ಸು ಉಲ್ಲಸಿತವಾಗಿದೆ, ಗಾಢ ನಿದ್ದೆಯಲ್ಲಿದ್ದ ನನ್ನೊಳಗಿನ ಬರಹಗಾರ ಈಗ ಎಚ್ಚೆತ್ತಿದ್ದಾನೆ, ನನ್ನ ಮನದ ಭಾವನೆಗಳಿಗೆ, ನೋವುಗಳಿಗೆ, ನಿರಾಶೆಯ ನಿಟ್ಟುಸಿರುಗಳಿಗೆ, ಭರವಸೆಯ ನಿರೀಕ್ಷೆಗಳಿಗೆ, ನಾಳೆಯ ಕನಸುಗಳಿಗೆ ಅಕ್ಷರ ರೂಪ ಕೊಡಲಿದ್ದಾನೆ.   


Earn to Refer People