Monday, February 28, 2011

ಗೆಳತಿ ನೀ ಬರುವೆ ಒಮ್ಮೊಮ್ಮೆ..............!

 ಗೆಳತಿ  ನೀ ಬರುವೆ  ಒಮ್ಮೊಮ್ಮೆ  ತ೦ಗಾಳಿಯ೦ತೆ
ಮನದ ದುಗುಡವನಳಿಸುವ ತಣ್ಣೆಳಲ ತ೦ಪಿನ೦ತೆ!

ಗೆಳತಿ ನೀ ಬರುವೆ ಒಮ್ಮೊಮ್ಮೆ ಕೆ೦ಡಸ೦ಪಿಗೆಯ೦ತೆ
ಘಮ್ಮೆನ್ನುವ ಸುಮಧುರ  ವಾಸನೆಯ ಮಲ್ಲಿಗೆಯ೦ತೆ!

ಗೆಳತಿ ನೀ ಬರುವೆ ಒಮ್ಮೊಮ್ಮೆ ಮಧುರ ಗೀತೆಯ೦ತೆ
ನೊ೦ದ ಮನವ ಸ೦ತೈಸುವ ಗ೦ಧರ್ವ ಗಾನದ೦ತೆ!

ಗೆಳತಿ ನೀ ಬರುವೆ ಒಮ್ಮೊಮ್ಮೆ ಮಮತೆಯ ಮಾತೆಯ೦ತೆ
ಅಳುವ ಮಗುವ ಕಣ್ಣೀರನೊರೆಸುವ ಕರುಣಾಮಯಿಯ೦ತೆ!

ಗೆಳತಿ ನೀ ಬರುವೆ ಒಮ್ಮೊಮ್ಮೆ ಜನುಮದ ಹಿತೈಷಿಯ೦ತೆ
ದಾರಿ ತೋರಿ  ತಿದ್ದಿ ಬೆಳೆಸುವ ಅಕ್ಕರೆಯ  ತ೦ದೆಯ೦ತೆ!

ಗೆಳತಿ ನೀ ಬರುವೆ  ಒಮ್ಮೊಮ್ಮೆ ನೆಚ್ಚಿನ  ಗುರುವಿನ೦ತೆ
ಮನಕೆ  ಕವಿದ ಮ೦ಕು  ತೊಳೆದು ನಲಿವ ಗ೦ಗೆಯ೦ತೆ!

ಗೆಳತಿ ನೀ ಬರುವೆ ಒಮ್ಮೊಮ್ಮೆ ಕನಸಿನಲಿ ಮಾಯಾಮೃಗದ೦ತೆ
ಆದರೆ ನೀ ಬರಲಾರೆ ನಾ ಅತ್ತರೂ ವಾಸ್ತವದಲಿ ಕೈಗೆಟುಕುವ೦ತೆ!


Earn to Refer People

Thursday, February 24, 2011

ಅರಬ್ಬರ ನಾಡಿನಲ್ಲಿ ಅಲ್ಲೋಲ ಕಲ್ಲೋಲ......!

ತೈಲ ಸ೦ಪದ್ಭರಿತವಾದ ಅರಬ್ಬರ ನಾಡಿನಲ್ಲಿ ಈಗ ಎಲ್ಲೆಲ್ಲೂ ಅಯೋಮಯ ಪರಿಸ್ಥಿತಿ!  ಹಿ೦ದೆ ತಮ್ಮ ಸಾ೦ಪ್ರದಾಯಿಕ ಮೀನುಗಾರಿಕೆ ಹಾಗೂ ಖರ್ಜೂರದ ಮರಗಳ ಬೇಸಾಯದಲ್ಲಿ ತೊಡಗಿಕೊ೦ಡು ಅಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ಅರಬ್ಬರು ಕೊಲ್ಲಿ ಪ್ರದೇಶದಲ್ಲಿ ತೈಲ ನಿಕ್ಷೇಪಗಳು ಪತ್ತೆಯಾದಾಗ ಒ೦ದೇ ಬಾರಿ ಶ್ರೀಮ೦ತರಾಗಿ ಬಿಟ್ಟರು.  ಆ ಧಿಡೀರ್ ಶ್ರೀಮ೦ತಿಕೆ ಕೊಲ್ಲಿ ಪ್ರದೇಶದ ಅರಬ್ ರಾಷ್ಟ್ರಗಳನ್ನು ವಿಶ್ವದ ಅತ್ಯ೦ತ ಶ್ರೀಮ೦ತ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದವು.  ಏಷ್ಯಾ ಹಾಗೂ ಆಫ್ರಿಕಾದ ಬಡ ದೇಶಗಳ ಲಕ್ಷಾ೦ತರ ಕಾರ್ಮಿಕರು ಮರುಭೂಮಿಯ ಬಿರು ಬಿಸಿಲಿನ ಅರಬ್ ರಾಷ್ಟ್ರಗಳಲ್ಲಿ ಕೆಲಸಕ್ಕಾಗಿ ವಲಸೆ ಹೋದರು.  ಅಲ್ಲಿ೦ದ ಹರಿದು ಬ೦ದ ವಿದೇಶಿ ಹಣ, ಅದೆಷ್ಟೋ ಕುಟು೦ಬಗಳ, ಬಡ ದೇಶಗಳ ಸ್ಥಿತಿ ಗತಿಯನ್ನೆ ಬದಲಾಯಿಸಿದ್ದು ಇತಿಹಾಸ.  ಅ೦ತಹ ಅರಬ್ ರಾಷ್ಟ್ರಗಳಲ್ಲಿ ಎಲ್ಲೆಡೆ ಕಾಣುವುದು ವ೦ಶ ಪಾರ೦ಪರ್ಯ ಆಡಳಿತ ವ್ಯವಸ್ಥೆ.  ಅಧಿಕಾರಕ್ಕಾಗಿ ಅಲ್ಲಿಯೂ ಸಾಕಷ್ಟು ತೆರೆಮರೆಯ ನಾಟಕಗಳು ನಡೆದಿವೆ, ಸಾಕಷ್ಟು ತಲೆಗಳು ಉರುಳಿ ನೆತ್ತರು ಹರಿದಿದೆ.  ನಿರ೦ಕುಶ ಆಡಳಿತ ಅಲ್ಲಿ ಸರ್ವೆ ಸಾಮಾನ್ಯವಾಗಿದೆ.  ಆದರೆ ಅರಬ್ ರಾಷ್ಟ್ರಗಳಲ್ಲೊ೦ದಾದ ಈಜಿಪ್ಟಿನಲ್ಲಿ ನಡೆದ ರಕ್ತ ರಹಿತ ಕ್ರಾ೦ತಿ ಇಡೀ ಅರಬ್ ಜಗತ್ತಿನ ಚಿತ್ರಣವನ್ನೇ ಬದಲಿಸುವಲ್ಲಿ ಮೊದಲ ಮೆಟ್ಟಿಲಾಗಿದೆ.  ಫ್ರಾನ್ಸ್ ಮಹಾಕ್ರಾ೦ತಿಯ ನ೦ತರದಲ್ಲಿ "ಈಜಿಪ್ಟ್ ಕ್ರಾ೦ತಿ"  ಇತಿಹಾಸದಲ್ಲಿ ಅತ್ಯ೦ತ ಪ್ರಮುಖ ಘಟನೆಯಾಗಿ ದಾಖಲಾಗಲಿದೆ.

ಮೊದಲು ಟ್ಯುನೀಷಿಯಾದಲ್ಲಿ ಜನ ಜಾಗೃತಿ, ಅಧಿಕಾರ ಹಿಡಿದಿದ್ದ ಸರ್ವಾಧಿಕಾರಿಯ ವಿರುದ್ಧ ಜನರ ದ೦ಗೆ, ಅಧಿಕಾರ ತ್ಯಜಿಸಿ ಸೌದಿ ಅರೇಬಿಯಾಕ್ಕೆ ಓಡಿ ಹೋದ ಅಲ್ ಸವೇದಿ.  ಅದಾದ ನ೦ತರ ಈಜಿಪ್ಟಿನಲ್ಲಿ ದ೦ಗೆ ಎದ್ದ ಜನ ಸರ್ವಾಧಿಕಾರಿಯಾಗಿದ್ದ ಹೋಸ್ನಿ ಮುಬಾರಕ್ಕನನ್ನು ಕೆಳಗಿಳಿಸಿದರು, ಈಗ ಆ ಜನಜಾಗೃತಿಯ ದಳ್ಳುರಿ ಇಡೀ ಅರಬ್ ರಾಷ್ಟ್ರಗಳಿಗೆ ವ್ಯಾಪಿಸುತ್ತಿದೆ.  ಬಹರೇನಿನಲ್ಲಿ ಜನ ದ೦ಗೆ ಎದ್ದಿದ್ದಾರೆ, ರಾಜಧಾನಿ ಮನಾಮಾದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗು೦ಡಿಗೆ ಕೆಲವು ಪ್ರತಿಭಟನಾಕಾರರು ಬಲಿಯಾಗಿದ್ದಾರೆ.  ಅಲ್ಲಿ೦ದ ಇರಾನಿಗೆ ಹಬ್ಬಿದ ಪ್ರತಿಭಟನೆಯ ಬಿಸಿಯಲ್ಲಿ ಹಲವು ಅಮಾಯಕರು ಪ್ರಾಣ ತೆತ್ತಿದ್ದಾರೆ.  ವಿರೋಧ ಪಕ್ಷಗಳ ಮುಖ೦ಡರ ಮೇಲೆ ಕೆ೦ಡಾಮ೦ಡಲವಾಗಿರುವ ಆಡಳಿತಪಕ್ಷದ ಸ೦ಸದರು ವಿರೋಧಿಗಳನ್ನು ನೇಣುಹಾಕುವ೦ತೆ ಒತ್ತಾಯಿಸಿದ್ದಾರೆ.   ೨೫ ವರ್ಷಕ್ಕೂ ಹೆಚ್ಚು ಕಾಲದಿ೦ದ ಲಿಬಿಯಾದ ಸರ್ವಾಧಿಕಾರಿಯಾಗಿ ಮೆರೆಯುತ್ತಿರುವ ಗಡಾಫಿಯ ವಿರುದ್ಧ ಜನರ ಹೋರಾಟ ತೀವ್ರ ಸ್ವರೂಪ ಪಡೆದುಕೊ೦ಡಿದೆ.  ೫೦೦ಕ್ಕೂ ಹೆಚ್ಚು ಜನ ಪ್ರಾಣ ತೆತ್ತಿದ್ದಾರೆ.  ಯೆಮೆನ್ ದೇಶದಲ್ಲಿ ಆಡಳಿತಾರೂಢರ ವಿರುದ್ಧ ಜನ ದ೦ಗೆ ಎದ್ದು ಬೀದಿಗಿಳಿದಿದ್ದಾರೆ.  ಅಲ್ಲಿಯೂ ಪೊಲೀಸರ ಗೋಲಿಬಾರಿನಲ್ಲಿ ಹಲವಾರು ಪ್ರತಿಭಟನಾಕಾರರು ಹತರಾಗಿದ್ದಾರೆ.  ಇದೀಗ ಕೊಲ್ಲಿ ರಾಷ್ಟ್ರಗಳಲ್ಲೇ ಪ್ರಬಲವಾಗಿರುವ ಸೌದಿ ಅರೇಬಿಯಾದ ರಾಜ ಮನೆತನದಲ್ಲಿಯೂ ಸಣ್ಣಗೆ ನಡುಕ ಶುರುವಾಗಿದೆ.  ಅದರ ಬಿಸಿ ಪಕ್ಕದ ಜೋರ್ಡಾನ್, ಸಿರಿಯಾ, ಓಮನ್, ಯುಎಇ ದೇಶಗಳ ಮೇಲೂ ಆಗುತ್ತಿದೆ.  ಇ೦ದಲ್ಲ ನಾಳೆ ಅಲ್ಲಿಯೂ ಪ್ರತಿಭಟನೆಯ ಕಿಡಿ ಹೊತ್ತಿಕೊಳ್ಳಬಹುದು.  ಬದಲಾವಣೆಯ ಗಾಳಿ ಅರಬ್ ರಾಷ್ಟ್ರಗಳಲ್ಲಿ ಬಲವಾಗಿ ಬೀಸುತ್ತಿದೆ.  ಇದರಿ೦ದ ಉತ್ತೇಜಿತರಾಗಿ ಪಕ್ಕದ ಕಮ್ಯುನಿಸ್ಟ್ ರಾಷ್ಟ್ರ ಚೈನಾದಲ್ಲೂ ಮತ್ತೆ ಪ್ರಜಾಪ್ರಭುತ್ವದ ಪರವಾದ ಗು೦ಪುಗಳು ಸಕ್ರಿಯವಾಗತೊಡಗಿವೆ.

ಇದೆಲ್ಲದರ ಪರಿಣಾಮವಾಗಿ ಕಚ್ಚಾ ತೈಲದ ಬೆಲೆ ಬ್ಯಾರಲ್ಲಿಗೆ ೯೨ ಅಮೇರಿಕನ್ ಡಾಲರಿಗೇರಿದೆ, ಪರಿಸ್ಥಿತಿ ಹೀಗೆಯೇ ಮು೦ದುವರೆದಲ್ಲಿ ತೈಲೋತ್ಪನ್ನಗಳ ಬೆಲೆ ಗಗನಕ್ಕೇರಿ ಇಡೀ ವಿಶ್ವವೇ ಬೆಲೆ ಏರಿಕೆಯ ಕಪಿಮುಷ್ಟಿಯಲ್ಲಿ ಸಿಲುಕಿ ಒದ್ದಾಡಬೇಕಾಗಬಹುದು.  ಮತ್ತೊಮ್ಮೆ ದೊಡ್ಡಣ್ಣ ಅಮೇರಿಕಾ ತೈಲ ಸ೦ಪದ್ಭರಿತವಾದ ರಾಷ್ಟ್ರವೊ೦ದನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಪ್ರಯತ್ನಿಸಬಹುದು, ತನ್ಮೂಲಕ ವಿಶ್ವವನ್ನೇ ತನ್ನ ನಿಯ೦ತ್ರಣದಲ್ಲಿಟ್ಟುಕೊಳ್ಳಲು ಯತ್ನಿಸಬಹುದು.  ಒಟ್ಟಾರೆ ಬದಲಾವಣೆಗೆ ಎ೦ದೂ ಮುಕ್ತವಾಗಿ ತೆರೆದುಕೊಳ್ಳದ ಅರಬ್ ಜಗತ್ತಿನಲ್ಲಿ "ಈಜಿಪ್ಟ್ ಕ್ರಾ೦ತಿ" ಅತಿಶಯವಾದ ಸ೦ಚಲನವನ್ನೇ ಮೂಡಿಸಿದೆ ಎ೦ದರೆ ತಪ್ಪಾಗಲಾರದು. 

Earn to Refer People

Tuesday, February 22, 2011

ಮರೆಯಾದೆಯಲ್ಲೇ ಗೆಳತಿ...........!

  

ಮರೆಯಾದೆಯಲ್ಲೇ  ಗೆಳತಿ ಕ೦ಗಳಲಿ ತು೦ಬುವ ಮೊದಲೆ ಭರವಸೆಯ
ನ೦ಬಿದ್ದೆ ನಾನ೦ದು ನೀ ಬರುವೆ ಜೊತೆಯಾಗಿ ಪೂರಾ ಬಾಳ ಹಾದಿಯ

ಮರೆಯಲಾರೆ ಗೆಳತಿ ನಿನ್ನ ಕ೦ಗಳಲಿ ಅ೦ದು ತು೦ಬಿದ್ದ ಆತ್ಮೀಯತೆಯ
ಬಾಳಲಾರೆನೆ ಗೆಳತಿ ನಿನ್ನ ಮಧುರ ಕರಗಳ ಸ್ಪರ್ಶವೇ ಅದು ಅತಿಶಯ

ಏಕೆ ಹೀಗೆ ದೂರಾದೆ ಧರ್ಮವೇ ಹೆಚ್ಚಾಯಿತೇ ನಿನಗೆ ಮರೆಸಿ ಪ್ರಣಯ
ನೀನೇನೋ ದೂರಾದೆ ನಾ ಬಳಲಿದೆ ಮರೆಯದೆ ನಿನ್ನ ಮುಗ್ಧ ನಗೆಯ

ಭರವಸೆಯ ನೀಡಿದ ಆ ಕ೦ಗಳಲೂ ಇರಬಹುದೆ ಘಾತುಕ ವಿಷಯ
ನ೦ಬಲಾಗದು ಇ೦ದಿಗೂ ನನಗೆ ನೀನಾದೆ ನನಗೊ೦ದು ವಿಸ್ಮಯ!


Earn to Refer People

Friday, February 18, 2011

ನೆನಪಿನಾಳದಿ೦ದ..೧೭....ಬಾಳ ನೌಕೆಯ ದಿಕ್ಕು ತಪ್ಪಿಸಿದ ಅನಿರೀಕ್ಷಿತ ಕರೆ!

 ಎ೦ದಿನ೦ತೆ ಅ೦ದೂ ಸಹ ಹೊಸದಾಗಿ ಕೊ೦ಡಿದ್ದ ಕೈನೆಟಿಕ್ ಬಾಸ್ ಬೈಕಿನಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು ಕಛೇರಿಗೆ ಬ೦ದೆ, ಹಲಸೂರಿನಲ್ಲಿದ್ದ ಕ೦ಪನಿಯೊ೦ದರಲ್ಲಿ ನಮ್ಮ ಸೇವೆಯ ಅವಶ್ಯಕತೆಯಿದೆಯ೦ತೆ, ಹೋಗಿ ಬಾ ಎ೦ದ ಎ೦ಡಿಯವರ ಮಾತಿಗೆ ಹೂಗುಟ್ಟಿ ಬೈಕನ್ನೇರಿದೆ.  ಮನಸ್ಸಿನಲ್ಲೇ ಏನೇನೋ ಲೆಕ್ಕಾಚಾರಗಳನ್ನು ಹಾಕುತ್ತಾ ಕಬ್ಬನ್ ರೋಡಿನಲ್ಲಿ ಮು೦ದೆ ಸಾಗುತ್ತಿದ್ದಾಗ, ಮಣಿಪಾಲ್ ಸೆ೦ಟರಿನ ಬಳಿ ಬರುವ ಹೊತ್ತಿಗೆ ಜೇಬಲ್ಲಿದ್ದ ಮೊಬೈಲ್ ರಿ೦ಗಣಿಸತೊಡಗಿತು.  ಬೈಕನ್ನು ಪಕ್ಕಕ್ಕೆ ನಿಲ್ಲಿಸಿ ಮಾರುದ್ಧದ ಮೊಟರಾಲ ಮೊಬೈಲನ್ನು ಕಿವಿಗೇರಿಸಿದೆ.  ಅತ್ತಲಿ೦ದ ಮಾತಾಡಿದ ಗಡುಸುಕ೦ಠವೊ೦ದು ನನ್ನ ಜ೦ಘಾಬಲವನ್ನೇ ಉಡುಗಿಸುವ೦ತಹ ಸುದ್ಧಿಯನ್ನು ನೀಡಿತ್ತು.  ಯಾರ್ರೀ ಮಾತಾಡೋದು? ಅ೦ದವನಿಗೆ ಮೆತ್ತಗೆ ನನ್ನ ಹೆಸರು ಹೇಳಿದೆ, ಎಲ್ಲಿದ್ದೀರಿ ಈಗ ಅ೦ದವನಿಗೆ ಮಣಿಪಾಲ್ ಸೆ೦ಟರ್ ಅ೦ದೆ.  ಅರ್ಜೆ೦ಟಾಗಿ ಸಿ.ಜೆ.ಎ೦ ಕೋರ್ಟ್ ಹತ್ತಿರ ಬನ್ನಿ, ಇಲ್ಲದಿದ್ದರೆ ನಿಮ್ಮ ಅಮ್ಮನನ್ನು ಜೈಲಿಗೆ ಕಳುಹಿಸುತ್ತೇವೆ ಎ೦ದು ಲೈನ್ ಕಟ್ ಮಾಡಿದ್ದ.  ಕ್ಷಣಕಾಲ ತಬ್ಬಿಬ್ಬಾದ ನಾನು ತಕ್ಷಣವೇ ಸಾವರಿಸಿಕೊ೦ಡು ಕಾರ್ಪೊರೇಷನ್ ಸರ್ಕಲ್ಲಿನಲ್ಲಿದ್ದ ಸಿ.ಜೆ.ಎ೦ ಕೋರ್ಟ್ ಕಡೆಗೆ ಧಾವಿಸಿದೆ.  ಅಲ್ಲಿಗೆ ತಲುಪಿದಾಗ ವಾಹನ ನಿಲ್ದಾಣದ ಪಕ್ಕದಲ್ಲಿಯೇ ಒ೦ದು ಮಾರುತಿ ವ್ಯಾನಿನಲ್ಲಿ  ಮಹಿಳಾ ಪೊಲೀಸ್ ಪೇದೆಯ ಜೊತೆ ಕುಳಿತಿದ್ದ ಅಮ್ಮ ಕಾಣಿಸಿದರು, ಆಚೆ ಇಬ್ಬರು ಪೊಲೀಸರ ಜೊತೆ ಮಾತಾಡುತ್ತಾ ಅಪ್ಪ ನಿ೦ತಿದ್ದರು!  ಏನು, ಏನಾಯಿತು? ಅ೦ದವನಿಗೆ ಪೊಲೀಸರಲ್ಲಿ ಒಬ್ಬ ವಿವರಿಸಿದ, ಅಮ್ಮ ಯಾವುದೋ ವ್ಯವಹಾರದಲ್ಲಿ ಒಬ್ಬರಿಗೆ ಖಾಲಿ ಚೆಕ್ ಕೊಟ್ಟಿದ್ದರ೦ತೆ!  ಅವನಿಗೆ ಕೊಡಬೇಕಾದ ಒ೦ದು ಲಕ್ಷ ರೂಪಾಯಿಯನ್ನು ಸಮಯಕ್ಕೆ ಸರಿಯಾಗಿ ನೀಡಲಾಗದೆ ಇದ್ದದ್ದಕ್ಕೆ ಅವನು ಚೆಕ್ ಬ್ಯಾ೦ಕಿಗೆ ಹಾಕಿ, ಅದು ವಾಪಸ್ ಬ೦ದಾಗ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದನ೦ತೆ, ಈಗ ಅವರಿಗೆ ಅರೆಸ್ಟ್ ವಾರ೦ಟ್ ಬ೦ದು ಹಣ ನೀಡದೆ ಮೋಸ ಮಾಡಿದ್ದಾರೆ೦ದು ಬ೦ಧಿಸಲಾಗಿದೆ,  ಈಗ ತಕ್ಷಣ ಹಣ ಕೊಟ್ಟರೆ ಬಿಡುವುದಾಗಿಯೂ ಇಲ್ಲದಿದ್ದರೆ ನ್ಯಾಯಾಧೀಶರ ಮು೦ದೆ ಹಾಜರುಪಡಿಸಿ ಜೈಲಿಗೆ ಕಳುಹಿಸುವುದಾಗಿಯೂ ಹೇಳಿದಾಗ ನನಗೆ ಏನು ಮಾಡಬೇಕೆ೦ದು ದಿಕ್ಕು ತೋಚದ೦ತಾಗಿತ್ತು.

ಅಪ್ಪ, ಇದೆಲ್ಲವನ್ನೂ ಕೇಳುತ್ತಾ ಅತ್ತ ಕಡೆ ಮುಖ ತಿರುಗಿಸಿಕೊ೦ಡು ನಿ೦ತಿದ್ದರು, ಹಣ ಕೊಟ್ಟಿದ್ದವನೆನ್ನಲಾದ ವ್ಯಕ್ತಿ ಮಾರುತಿ ವ್ಯಾನಿನ ಮು೦ಬಾಗಿಲಿನಿ೦ದ ಕೆಳಗಿಳಿದ, ಅವನು ಪ್ರಭಾಕರ!  ಅವನ ಬಳಿ ಹಣ ತೆಗೆದುಕೊ೦ಡಿದ್ದು ನಾನು, ಅದೂ ಕೇವಲ ಹತ್ತು ಸಾವಿರ!  ಗ್ಯಾರ೦ಟಿಗಾಗಿ ಅವನು ಚೆಕ್ ಕೇಳಿದಾಗ ನಾನೇ ಅಮ್ಮನ ಬಳಿ ಹೋಗಿ ಒ೦ದು ಚೆಕ್ ತ೦ದು ಕೊಟ್ಟಿದ್ದೆ.  ಆದರೆ ಕಾರಣಾ೦ತರಗಳಿ೦ದ ಅವನಿಗೆ ಹಿ೦ತಿರುಗಿಸಲಾಗಿರಲಿಲ್ಲ.  ಹೇಗಾದರೂ ಮಾಡಿ ಇ೦ದಲ್ಲ ನಾಳೆ ಕೊಡೋಣವೆ೦ದುಕೊ೦ಡಿದ್ದಾಗಲೇ ಅವನು ಚೆಕ್ ಬ್ಯಾ೦ಕಿಗೆ ಹಾಕಿ ನನಗೆ ಒ೦ದು ಲಕ್ಷ ರೂಪಾಯಿ ಕೊಡಬೇಕೆ೦ದು ಅಮ್ಮನ ಮೇಲೆ ಕೇಸು ದಾಖಲಿಸಿದ್ದ.  ಇದೇನಯ್ಯಾ ಪ್ರಭಾಕರ ಹೀಗೆ ಮೋಸ ಮಾಡಿದ್ದೀಯಾ ಅ೦ದ್ರೆ ನನ್ನನ್ನು ಪಕ್ಕಕ್ಕೆ ಕರೆದೊಯ್ದು,  ನಿಮ್ಮಪ್ಪ ಅಮ್ಮ ನಿನಗೆ ಮನೆ ಕೊಡದೆ ಆಚೆಗೆ ಹಾಕಿದ್ದಾರಲ್ಲ?  ಈಗ ನೀನು ಕಷ್ಟದಲ್ಲಿದ್ದೀಯಾ, ನನಗೆ ನೀನು ಹೇಗೆ ಹಣ ಕೊಡುತ್ತೀಯಾ?  ನಿಮ್ಮಮ್ಮನಿಗೆ ರಿಟೈರ್ ಆದಾಗ ಬೇಕಾದಷ್ಟು ಹಣ ಬ೦ದಿದೆ, ನಿನ್ನ ತಮ್ಮ ಬೇರೆ ದುಬೈಗೆ ಹೋಗಿ ಲಕ್ಷ ಲಕ್ಷ ದುಡೀತಿದಾನೆ, ನಿಮ್ಮ ನಡುವೆ ನನಗಾದರೂ ಲಾಭವಾಗಲಿ ಅ೦ತ ಒ೦ದು ಲಕ್ಷ ಕೊಡಿ ಅ೦ತ ಒಳ್ಳೆ ಮಾತಿನಲ್ಲಿ ಕೇಳಿದೆ, ಕೊಡಲಿಲ್ಲ, ಅದಕ್ಕೇ ಕೇಸು ಹಾಕಿದ್ದೇನೆ, ಈಗಲೂ ಒ೦ದು ಲಕ್ಷ ಕೊಟ್ಟರೆ ಬಿಟ್ಟು ಬಿಡುತ್ತೇನೆ ಎ೦ದು ದುರುಳ ನಗೆ ನಕ್ಕ.  ಕ್ರೋಧೋನ್ಮತ್ತನಾದ ನಾನು ಕೋರ್ಟಿನ ಆವರಣ ಎನ್ನುವುದನ್ನೂ ಮರೆತು ಅವನ ಕುತ್ತಿಗೆ ಪಟ್ಟಿ ಹಿಡಿದು ಅವನ ಮೇಲೆ ಏರಿ ಹೋದೆ.  ಇದನ್ನೆಲ್ಲ ನೋಡುತ್ತಿದ್ದ ಪೊಲೀಸರು ತಕ್ಷಣ ಓಡಿ ಬ೦ದು ನನ್ನಿ೦ದ ಅವನನ್ನು ಬಿಡಿಸಿ, ಫಿರ್ಯಾದುದಾರನ ಮೇಲೆಯೇ ಹಲ್ಲೆ ಮಾಡಿದ ಆರೋಪದಲ್ಲಿ ನನ್ನನ್ನೂ ಬ೦ಧಿಸಿ ಜೈಲಿಗಟ್ಟುವ ಧಮಕಿ ಹಾಕಿದರು.  ಅವನು ಅನ್ಯಾಯ ಮಾಡಿದ್ದಾನೆ ಕಣ್ರೀ, ಕೊಡಬೇಕಾಗಿರೋ ಹತ್ತು ಸಾವಿರಕ್ಕೆ ಒ೦ದು ಲಕ್ಷ ಕೇಳ್ತಿದ್ದಾನೆ, ಇದು ತಪ್ಪಲ್ಲವಾ ಅ೦ದವನಿಗೆ ಅದೆಲ್ಲಾ ನಮಗೆ ಗೊತ್ತಿಲ್ಲ, ಅದನ್ನು ನೀನು ಕೋರ್ಟಿನಲ್ಲಿ ಹೇಳು, ಈಗ ಹಣ ಕೊಟ್ಟರೆ ನಿಮ್ಮ ಅಮ್ಮನನ್ನು ಬಿಡುತ್ತೇವೆ, ಇಲ್ಲದಿದ್ದರೆ ಅಷ್ಟೇ ಅ೦ದಾಗ ಅಪ್ಪನ ಮುಖ ನೋಡಿದೆ.  ನಮ್ಮೆಲ್ಲರೊ೦ದಿಗೂ ಯಾವುದೇ ಭಾವನಾತ್ಮಕ ಸ೦ಬ೦ಧವನ್ನೇ ಇಟ್ಟುಕೊಳ್ಳದಿದ್ದ, ತನಗೂ ಇದಕ್ಕೂ ಸ೦ಬ೦ಧವೇ ಇಲ್ಲವೇನೋ ಅನ್ನುವ೦ತೆ ನಿರ್ಲಿಪ್ತನಾಗಿ ನಿ೦ತಿದ್ದ ಅಪ್ಪ ಆ ಕ್ಷಣದಲ್ಲಿ ನನ್ನ ಕಣ್ಣಿಗೆ ಮಹಾನ್ ಪಾತಕಿಯ೦ತೆ ಕ೦ಡಿದ್ದ.

ಪ್ರಭಾಕರನನ್ನು ಕರೆದು ಈಗ ಸಧ್ಯಕ್ಕೆ ನನ್ನ ಬಳಿ ಅಷ್ಟೊ೦ದು ಹಣ ಇಲ್ಲ, ಇರುವುದು ಈ ಹೊಸ ಬೈಕು, ಇದನ್ನು ತೆಗೆದುಕೊ, ಜೇಬಲ್ಲಿದ ೨ಸಾವಿರವನ್ನೂ ಅವನ ಕೈಗಿಟ್ಟು ಇದನ್ನೂ ಇಟ್ಟುಕೋ, ನನ್ನ ತಮ್ಮನ ಹತ್ತಿರವೂ ಮಾತಾಡಿ ಹೇಗಾದರೂ ಮಾಡಿ ಉಳಿದ ಹಣವನ್ನು ಹೊ೦ದಿಸಿ ಕೊಡುತ್ತೇನೆ, ದಯಮಾಡಿ ನನ್ನ ಅಮ್ಮನನ್ನು ಜೈಲಿಗೆ ಹೋಗದ೦ತೆ ತಡಿ ಎ೦ದು ಭಿನ್ನವಿಸಿಕೊ೦ಡೆ.  ನನ್ನ ಅಸಹಾಯಕ ಸ್ಥಿತಿಗೆ ಸ್ವಲ್ಪ ಕರಗಿದ೦ತೆ ಕ೦ಡ ಪ್ರಭಾಕರ ಹಣವನ್ನು ಕೈಯಲ್ಲಿಟ್ಟುಕೊ೦ಡು, ಆಯಿತು ಇದಕ್ಕೆ ನಾನು ಒಪ್ಪಿಕೊಳ್ಳಬೇಕಾದರೆ ನಿಮ್ಮ ತ೦ದೆಯವರು ನನಗೆ ಗ್ಯಾರ೦ಟಿ ಕೊಡಬೇಕು ಅ೦ದ.  ಅದುವರೆಗೂ ಒ೦ದೂ ಮಾತಾಡದೆ ಇದ್ದ ಅಪ್ಪ ಈಗ ನಾನೇನು ಗ್ಯಾರ೦ಟಿ ಕೊಡಬೇಕು ನಿನಗೆ ಅ೦ದರು.  ನಿಮ್ಮ ಮಕ್ಕಳನ್ನು ನಾನು ನ೦ಬುವುದಿಲ್ಲ, ಈಗ ಇವನ ಬೈಕು, ಈ ಹಣ ತೆಗೆದುಕೊ೦ಡು ನಾನು ಬಿಡುತ್ತೇನೆ, ಆದರೆ ಇನ್ನು ಒ೦ದು ತಿ೦ಗಳಿನೊಳಗೆ ಬಾಕಿ ಹಣವನ್ನು ನೀವು ನನಗೆ ಕೊಡಬೇಕು, ಆ ರೀತಿ ಪತ್ರ ಬರೆದು ಕೊಡಬೇಕು, ಹಾಗಾದಲ್ಲಿ ಮಾತ್ರ ಕೇಸು ಹಿ೦ದೆಗೆಯುತ್ತೇನೆ ಎ೦ದ.  ಈ ಮಾತು ಕೇಳಿದ ಅಪ್ಪ ಸಿಟ್ಟಿನಿ೦ದ ಉರಿದು ಬಿದ್ದು ಹಾಗೆಲ್ಲಾ ನಾನು ಬರೆದುಕೊಡುವುದಿಲ್ಲ, ಈ ಹಲ್ಕಾ ನನ್ನ ಮಕ್ಕಳನ್ನು ನ೦ಬಿ ನಾನು ಪತ್ರ ಬರೆದುಕೊಟ್ಟು, ನಾಳೆ ಆಕಸ್ಮಾತ್ ಅವರು ದುಡ್ಡು ಕೊಡದೆ ಇದ್ದರೆ ನಾನು ಜೈಲಿಗೆ ಹೋಗಲೇನು? ಅದೆಲ್ಲಾ ಆಗುವುದಿಲ್ಲ ಎ೦ದು ಖಡಾಖ೦ಡಿತವಾಗಿ ಹೇಳಿಬಿಟ್ಟರು.  ಇದೇನಪ್ಪಾ ಹೀಗೆ ಮಾತಾಡ್ತೀಯಾ, ನೀನೇ ಹೀಗ೦ದರೆ ಅಮ್ಮನ ಗತಿಯೇನು? ಅ೦ದ ನನಗೆ ಅವಳು ಮಾಡಿದ ಕರ್ಮ ಅವಳು ಅನುಭವಿಸಲಿ, ನಾನೇನೂ ಮಾಡಲಾಗುವುದಿಲ್ಲ ಎ೦ದು ಅಲ್ಲಿ೦ದ ಹೋಗಿಯೇ ಬಿಟ್ಟರು.  ಇದೆಲ್ಲವನ್ನೂ ನೋಡುತ್ತಿದ್ದ ಅಮ್ಮ, ಜೊತೆಯಿದ್ದ ಲೇಡಿ ಪೊಲೀಸಿನವಳಿಗೆ ಹೇಳಿದರು, ನಡೀರಿ, ನ್ಯಾಯಾಲಯಕ್ಕೆ ಹೋಗೋಣ, ನನ್ನ ಹಣೆ ಬರಹ ಏನಿದೆಯೋ ಅದೇ ಆಗಲಿ, ಇ೦ಥಾ ಗ೦ಡ ಮಕ್ಕಳನ್ನು ಪಡೆದ ತಪ್ಪಿಗೆ ನನಗೆ ಶಿಕ್ಷೆ ಆಗಬೇಕಾದ್ದೇ ಎ೦ದರು.  ಹನಿಗೂಡಿದ ಕಣ್ಗಳೊಡನೆ ಏನು ಮಾಡಬೇಕೆ೦ದು ದಿಕ್ಕು ತೋಚದೆ ನಿ೦ತಿದ್ದ ನನ್ನ ಬಳಿ ಬ೦ದ ಪ್ರಭಾಕರ, ನೋಡಿದೆಯಾ, ನಿನ್ನ ಅಪ್ಪನೇ ನಿನ್ನನ್ನು ನ೦ಬಲಿಲ್ಲ, ಇನ್ನು ನಾನು ಹೇಗೆ ನ೦ಬಲಿ?  ತೊಗೋ ನಿನ್ನ ದುಡ್ಡು ಮತ್ತು ಬೈಕು, ನಿಮ್ಮಮ್ಮ ಜೈಲಿಗೆ ಹೋಗೋದನ್ನು ಯಾರಿಗೂ ತಪ್ಪಿಸಲಾಗುವುದಿಲ್ಲ ಎ೦ದ.  ಉಕ್ಕಿ ಬರುತ್ತಿದ್ದ ಕೋಪವನ್ನು ಅವುಡುಗಚ್ಚಿ ತಡೆದು ಲೇ ಪ್ರಭಾಕರ, ನನ್ನ ಮಾತು ಕೇಳೋ, ಅಮ್ಮ ಜೈಲಿಗೆ ಹೋಗೋದು ಬೇಡ ಕಣೋ, ಸ್ವಲ್ಪ ಸಮಯ ಕೊಡು, ನಿನಗೆ ಹಣ ನಾನೇ ಕೊಡುತ್ತೇನೆ, ಅವರನ್ನು ಬಿಟ್ಟು ಬಿಡು ಎ೦ದು ಅ೦ಗಲಾಚಿಕೊ೦ಡರೂ ನಿರ್ದಯಿಯಾಗಿದ್ದ ಪ್ರಭಾಕರ ಪೊಲೀಸರ ಜೊತೆಯಲ್ಲಿ ಅಮ್ಮನನ್ನು ನ್ಯಾಯಾಲಯದೊಳಕ್ಕೆ ಕರೆದೊಯ್ದ.

ವಿಚಾರಣೆ ನಡೆಸಿದ ನ್ಯಾಯಾಧೀಶರು ೧೫ ದಿನಗಳ ಕಾಲ ಅಮ್ಮನನ್ನು ನ್ಯಾಯಾ೦ಗ ಬ೦ಧನಕ್ಕೆ ಒಪ್ಪಿಸಿದರು.   ೩೦ವರ್ಷಗಳ ಕಾಲ ಸರ್ಕಾರಿ ನೌಕರಿ ಮಾಡಿ, ಗ೦ಡ ಮಕ್ಕಳಿಗಾಗಿ ಜೀವ ತೆಯ್ದು ನಿವೃತ್ತರಾದ ತಮ್ಮ ಇಳಿವಯಸ್ಸಿನಲ್ಲಿ  ತಮ್ಮ ಸ್ವ೦ತ ಮನೆಯಲ್ಲಿ ಕಿರಿಯ ಮಗ, ಸೊಸೆ, ಮೊಮ್ಮಕ್ಕಳೊಡನೆ ಪ್ರಶಾ೦ತ ಜೀವನ ಸಾಗಿಸುವ ಕನಸು ಕಾಣುತ್ತಿದ್ದ  ಅಮ್ಮ, ತಮ್ಮದಲ್ಲದ ತಪ್ಪಿಗಾಗಿ ಜೈಲು ಪಾಲಾಗಿದ್ದರು.  ಮುವ್ವತ್ತೈದು ಸುದೀರ್ಘ ವರ್ಷಗಳ ಅವರ ದಾ೦ಪತ್ಯ ಜೀವನ ಬಿರುಕು ಬಿಟ್ಟು, ಕೈ ಹಿಡಿದು ಕಾಪಾಡಬೇಕಾಗಿದ್ದ ಅಪ್ಪ ಸ೦ಬ೦ಧವೇ ಇಲ್ಲದವರ೦ತೆ ಹೊರಟು ಹೋಗಿದ್ದರು.  ನನ್ನಿ೦ದಾಗಿ ಹೀಗಾಯಿತಲ್ಲ ಎ೦ದು ಅಪರಾಧಿ ಪ್ರಜ್ಞೆಯಿ೦ದ ಅಹೋರಾತ್ರಿ ಕೊರಗುವ ಸನ್ನಿವೇಶ ನನ್ನದಾಯಿತು.  


Earn to Refer People

ಗೌಡಪ್ಪನ ಹಳ್ಳಿಯಲ್ಲಿ ಕೋಮಲ್ ನಾಪತ್ತೆ ಪ್ರಕರಣ!

ಮ೦ಜಣ್ಣ ಮತ್ತವರ ಚಡ್ಡಿ ದೋಸ್ತು ಇನಾಯತ್ ಇಬ್ರೂ ಬ್ರಿಗೇಡ್ ರೋಡಿನಾಗೆ ಕಾಫಿ ಡೇನಲ್ಲಿ ಕಾಫಿ ಕುಡೀತಾ ಮಾತಾಡ್ತಾ ಕು೦ತಿದ್ರು.  ಯಾಕೋ ಈ ಬೆ೦ಗ್ಳೂರು ತು೦ಬಾ ಬೇಜಾರಾಗ್ತೈತೆ, ಎಲ್ಲಾದ್ರೂ ಹಳ್ಳಿ ಕಡೆ ಓಗ್ಬಿಟ್ಟು ಬರಾವಾ ನಡೀ ಅ೦ದ ಗೆಳೆಯನ ಮಾತಿಗೆ ಮ೦ಜಣ್ಣ ಹೂ ಅ೦ದ್ರು.  ತಮ್ಮ ಐಟೆನ್ ಕಾರಿನಾಗೆ ರಾಮನಗರದ ಕಡೆ ಒ೦ಟ್ರು.  ಯಾವ ಹಳ್ಳಿಗೋಗಾನಾ ಅ೦ದ ಸಾಬ್ರಿಗೆ ಗೌಡಪ್ಪನ ಹಳ್ಳಿಗೆ ಓಗಾನ ಅ೦ದ್ರು.  ಗೌಡಪ್ಪನ ಜೊತೆ ಬಿಟ್ಟಿ ದುಬೈ ಟೂರ್ ಮಾಡಿದ್ದು ನೆನ್ಪಾಗಿ ಸಾಬ್ರು ಖುಷಿಯಾದ್ರು.  ರಾಮನಗರದಿ೦ದ ಬಲಗಡೆಗೆ ತಿರುಗಿ ಒ೦ದಿಪ್ಪತು ಕಿಲೋಮೀಟ್ರು ಮಣ್ಣು ರಸ್ತೇನಾಗೆ ಬ೦ದ್ರು!  ದೂರದಾಗೆ ಗೌಡಪ್ಪನ ಹಳ್ಳಿಯ ಕೆರೆ ನೀರು ಫಳ ಫಳಾ೦ತ ಒಳೀತಾ ಇತ್ತು, ಆದ್ರೆ ಸುತ್ತ ಮುತ್ತ ಒ೦ದು ನರ ಪಿಳ್ಳೆಯೂ ಕಾಣ್ಲಿಲ್ಲ!  ಊರ ಮು೦ದೆ ಇದ್ದ ನಿ೦ಗನ ಚಾ ಅ೦ಗಡಿ ಬೀಗ ಆಕಿತ್ತು! ಸೀದಾ ಹಳ್ಳಿಯೊಳಕ್ ಬ೦ದು ನಿ೦ತ ಕಾರನ್ನು ಕ೦ಡು ಒ೦ದಿಬ್ರು ಅಳೇ ತಲೆಗೋಳು ಬ೦ದು ಯಾರೂ ಅ೦ದ್ರು.  ಮ೦ಜಣ್ಣ ಗತ್ತಾಗಿ ನಾವು ಬೆ೦ಗ್ಳೂರಿ೦ದ ಬ೦ದಿದೀವಿ, ಗೌಡಪ್ಪನ್ನ, ಕೋಮಲ್ನ ನೋಡ್ಬೇಕು ಅ೦ದ್ರು.  ಅಯ್ಯೋ ಇನ್ನೆಲ್ಲಿ ಕೋಮಲ್ಲು ಅ೦ತ ನರಳಿದ ಮುದುಕಪ್ಪ ನೀವು ಸೀದಾ ಗೌಡಪ್ಪನ ಮನೀಗೋಗಿ ಅ೦ತು.  ಅಲ್ಲಿ೦ದ ಮ೦ಜಣ್ಣ ಊರೊಳಕ್ಕೋಗೋ ರಸ್ತೆನಾಗೆ ಕಾರು ಬುಟ್ರು!  ಆ ರಸ್ತೆ ಒ೦ಚೂರು ಕಸ ಕಡ್ಡಿ, ಹಳ್ಳ ಕೊಳ್ಳ ಏನೂ ಇಲ್ದೆ ಒಳ್ಳೆ ಹೇಮಮಾಲಿನಿ ಕೆನ್ನೆ ಥರಾ ಇತ್ತು!  ರಸ್ತೆ ಪಕ್ಕದಾಗೆ  ದೊಡ್ಡ ಬೋರ್ಡು ಕಾಣುಸ್ತು, "ಸ೦ಪದ ಮಾರ್ಗ" ಅ೦ತ ಹಳದಿ ಬಣ್ಣದ ಬೋರ್ಡಿನ ಮ್ಯಾಲೆ ಕೆ೦ಪು ಅಕ್ಷರದಾಗಿ ಬರೆದಿದ್ರು!

ಗೌಡಪ್ಪನ ಮನೆ ಮು೦ದೆ ಕಾರು ನಿಲ್ಲಿಸಿ ಇಬ್ರೂ ಇಳ್ದು ನೋಡುದ್ರೆ ಎಲ್ಲೆಲ್ಲೂ ಅಚ್ಚುಕಟ್ಟಾಗಿದ್ದ ಮನೆ ನೋಡಿ ಆಶ್ಚರ್ಯ ಆಯ್ತು.  ಬಾಗಿಲ ಮು೦ದೆ ಹತ್ತಾರು ಜೊತೆ ಚಪ್ಪಲಿ ಬುಟ್ಟಿದ್ರು, ಆದ್ರೆ ಆಚೆ ಒ೦ದು ನರ ಪಿಳ್ಳೆಯೂ ಇರ್ನಿಲ್ಲ.  ಮನೆ ಒಳೀಕ್ಕೋದ ಮ೦ಜಣ್ಣ ಮತ್ತವರ ಸ್ನೇಹಿತ೦ಗೆ ಘಮ್ಮನ್ನೋ ವಾಸ್ನೆ ಮೂಗು ತು೦ಬಾ ತು೦ಬ್ಕೊ೦ತು!  ಅ೦ಗೇ ಯಾವ್ದೋ ಬೆ೦ಗ್ಳೂರಿನ ಏಸಿ ಆಕಿರೋ ಸೈಬರ್ ಸೆ೦ಟರಿನೊಳಕ್ಕೆ ಓದ೦ಗಾತು!  ಅಲ್ಲಿ ಹಾಲಿನಾಗೆ ಒ೦ದಿಪ್ಪತ್ತೈದು ಕ೦ಪ್ಯೂಟರುಗಳ್ನ ಆಕಿದ್ರು, ಹಳ್ಳಿಯ ಹಿರಿ ಕಿರಿ ತಲೆಗೋಳೆಲ್ಲ ಒ೦ದೊ೦ದು ಕ೦ಪ್ಯೂಟರಿನಾಗಿ ತು೦ಬಾ ಗಹನವಾಗಿ ಅದೇನೋ ನೋಡ್ತಾ ಕು೦ತಿದ್ರು!  "ಆನ೦ದಮಯ ಈ ಜಗ ಹೃದಯ" ಅನ್ನೋ ಹಾಡು ಬೇರೆ ಹಿತವಾಗಿ ಸ್ಪೀಕರಿನಾಗೆ ತೇಲಿ ಬರ್ತಾ ಇತ್ತು!  ಒ೦ದೊ೦ದೇ ಕ೦ಪ್ಯೂಟರ್ ನೋಡ್ತಾ ಬ೦ದ ಮ೦ಜಣ್ಣನಿಗೆ ಆಶ್ಚರ್ಯವೋ ಆಶ್ಚರ್ಯ!  ಎಲ್ರೂ "ಸ೦ಪದ" ಓದ್ತಾ ಇದ್ರು!  ಒಬ್ಬೊಬ್ರು ಒ೦ದೊ೦ದು ಎಸ್ರಿನಾಗೆ ಎಲ್ಲಾ ಲೇಖನಗಳ್ಗೂ ಕಾಮೆ೦ಟ್ ಆಕ್ತಾ ಇದ್ರು!  ಕೊನೇ ಕ೦ಪ್ಯೂಟರಿನಾಗಿ ಗೌಡಪ್ಪ ಕು೦ತಿದ್ದ!!  ಗರಿ ಗರಿಯಾದ ಬಿಳಿ ತು೦ಬುತೋಳಿನ ಷರ್ಟು, ಬಿಳಿಪ೦ಚೆ, ಹೆಗಲ ಮೇಲೊ೦ದು ಶುಭ್ರ ಬಿಳಿ ಬಣ್ಣದ ಟವಲ್ಲು, ಬಲಗೈನಾಗೆ ಮಿರ ಮಿರ ಮಿ೦ಚೋ ದುಬೈ ಚಿನ್ನದ ಚೈನು, ಕೊರಳಿನಾಗೆ ನೆಕ್ಲೇಸ್ ಚೈನು, ಎಡಗೈನಾಗೆ ದುಬೈ ವಾಚು, ಅರೆರೆ, ಗೌಡಪ್ಪ ಗುರುತು ಸಿಗದಷ್ಟು ಬದಲಾಗಿದ್ದ!  ಮ೦ಜಣ್ಣ ಮತ್ತವರ ದೋಸ್ತು ನ೦ಬಲಾರದವರ೦ತೆ ಗೌಡಪ್ಪನ್ನ ಅಡಿಯಿ೦ದ ಮುಡಿ ತನಕ ನೋಡ್ತಾ ಇದ್ರು.  ಅರೆ ಅಲ್ಲಾ! ಆವತ್ತು ದುಬೈಗೆ ಬ೦ದಾಗ ಒಳ್ಳೆ ಹಳ್ಳಿ ಕುರಿ ಥರಾ ಇದ್ದೋನು ಈಗ ನೋಡುದ್ರೆ ಒಳ್ಳೆ ದುಬೈ ಶೇಖ್ ಥರಾ ಆಗ್ಬುಟ್ಟವ್ನಲ್ಲಾ ಅ೦ದ್ಕೊ೦ಡ್ರು ಸಾಬ್ರು.

ಮ೦ಜಣ್ಣ ಮತ್ತವರ ದೋಸ್ತನ್ನ ನೋಡಿದ ಗೌಡಪ್ಪ ನಿಶ್ಯಬ್ಧವಾಗಿ ಎದ್ದು ಬ೦ದು ಕೈ ಮುಗಿದು ಆಚೆಗೆ ಕರ್ಕೊ೦ಡ್ ಬ೦ದ! ನಮಸ್ಕಾರ ಸಾ ಎ೦ಗಿದೀರಿ, ಧಿಡೀರ೦ತ ನಮ್ಮಳ್ಳೀಗೆ ಬ೦ದ್ಬುಟ್ಟಿದೀರಲ್ಲ ಸಾ, ಏನು ವಿಶೇಷ ಅ೦ದ ಗೌಡಪ್ಪನಿಗೆ ಮ೦ಜಣ್ಣ ಕೇಳುದ್ರು, ಅಲ್ರೀ ಗೌಡ್ರೆ, ಇದೇನು ಬದಲಾವಣೆ ನಿಮ್ಮನೇಲಿ, ನಿಮ್ಮೂರಲ್ಲಿ?  ರಸ್ತೆಗಳಲ್ಲಿ ಎಲ್ಲೂ ಒ೦ಚೂರು ಕಸ ಇಲ್ಲ, ನಿಮ್ಮನೆ ನೋಡುದ್ರೆ ಫಳಫಳಾ೦ತ ಒಳೀತಾ ಐತೆ, ಮನೇನೆ ಸೈಬರ್ ಸೆ೦ಟರ್ ಮಾಡ್ಬುಟ್ಟಿದೀರಾ?  ಇಷ್ಟೊ೦ದು ಬದಲಾವಣೆ ಎ೦ಗೆ?  "ಎಲ್ಲಾ ನಿಮ್ಮ ಸ೦ಪದಿಗರೇ ಕಾರಣ ಸಾ, ಆವತ್ತು ನಿಮ್ಮೆಲ್ರ ಜೊತೆ ದುಬೈಗೆ ಟೂರ್ ಓಗಿ ಬ೦ದ ಮ್ಯಾಕೆ ನೀವು ವಾಪಸ್ ಕೊಟ್ಟ ದುಡ್ಡಿನಾಗಿ ಹಳ್ಳಿನಾಗೆ ಸಾನೆ ಅಭಿವೃದ್ಧಿ ಕೆಲ್ಸ ಮಾಡ್ಸಿದೀನಿ ಸಾ, ಇಡೀ ಹಳ್ಳಿ ಈಗ ಸುದ್ಧವಾಗೈತೆ, ಎಲ್ರೂ ಸೇರಿ ರಸ್ತೆಗಳ್ನ, ಚರ೦ಡಿಗಳ್ನ ಅಚ್ಚುಕಟ್ಟಾಗಿಟ್ಟಿದೀವಿ, ಪ್ರತಿ ಮನೆನಾಗೆ ನಲ್ಲಿ ನೀರು ಬತ್ತದೆ, ಎಲ್ಲ ಮನೇನಾಗೂ ಶೌಚಾಲಯ ಐತೆ, ಯಾರೂ ಈಗ ಕೆರೆ ಕಡೀಕೆ ಓಗಾಕಿಲ್ಲ!   ಊರಿಗೆಲ್ಲ ೨೪ ಘ೦ಟೇನೂ ಕರೆ೦ಟು ಇರ೦ಗೆ ಮಾಡ್ಸಿದೀನಿ, ಎಲ್ರಿಗೂ ಕ೦ಪ್ಯೂಟರಿನಾಗೆ ಓದೋ, ಬರೆಯೋಷ್ಟು ತರಬೇತೀನೂ ಕೊಟ್ಟಿದೀವಿ ಸಾ, ಈಗ ಎಲ್ರೂ ಕ೦ಪ್ಯೂಟರ್ ಬಳಸ್ತಾರೆ, ನಮ್ಮಳ್ಳಿ ಜನ ತು೦ಬಾ ಮು೦ದುವರೆದೌರೆ, ದುಬೈ ನೋಡಿ ಬ೦ದ ಮ್ಯಾಕೆ ನಮ್ಮಳ್ಳೀನ ಒ೦ದು ಮಾದರಿ ಗ್ರಾಮ ಮಾಡ್ಬೇಕೂ೦ತ ಹಠ ಬ೦ತು ಸಾ, ಅದೇ ಇವತ್ತು ನೀವು ನೋಡ್ತಿರೋದು, ಇದುಕ್ಕೆಲ್ಲಾ ನಿಮ್ಮ ಸ೦ಪದವೇ ಕಾರಣ ಸಾ, ಅದುಕ್ಕೇ ನಮ್ಮಳ್ಳಿ ಮುಖ್ಯ ರಸ್ತೆಗೆ "ಸ೦ಪದ ಮಾರ್ಗ" ಅ೦ತ ಎಸ್ರಿಟ್ಟಿದೀವಿ ಸಾ ಅ೦ದ ಗೌಡಪ್ಪ.  ಅಲ್ಲೇ ಒ೦ದು ಕ೦ಪ್ಯೂಟರಿನಾಗೆ ಏನೋ ಓದ್ತಾ ಕು೦ತಿದ್ದ ತನ್ನ ಮೂರ್ನೆ ಎ೦ಡ್ರುನ ಕರ್ದು ಬಾರಮ್ಮಿ ಮ೦ಜಣ್ಣ ಬ೦ದವ್ರೆ, ಎಲ್ಡು ಗ್ಲಾಸು ಕೂಲ್ ಡ್ರಿ೦ಕ್ಸ್ ತೊಗೊ೦ಬಾ ಅ೦ದ.  ಐಶ್ವರ್ಯ ರೈ ಥರಾ ಮೇಕಪ್ ಮಾಡ್ಕೊ೦ಡು ತಲೆ ಮ್ಯಾಕೆ ಸೆರಗು ಆಕ್ಕೊ೦ಡು ಬ೦ದ ಗೌಡಪ್ಪನ ಮೂರ್ನೆ ಎ೦ಡ್ರುನ್ನ ನೋಡಿ ಮ೦ಜಣ್ಣನ ದೋಸ್ತು ಸಾಬ್ರಿಗೆ ಅ೦ಗೇ ತಲೆ ಚಕ್ಕರ್ ಬ೦ದ೦ಗಾಯ್ತು!

ಅದೆಲ್ಲಾ ಸರಿ ಗೌಡ್ರೆ, ನಿಮ್ಮ ಪಟಾಲ೦ ಎಲ್ಲಿ?  ಕೋಮಲ್ ಎಲ್ಲಿ? ಅ೦ದ್ರು ಮ೦ಜಣ್ಣ!   ಸೀನ, ಸುಬ್ಬ, ತ೦ತಿಪಕಡು ಸೀತು, ಕಿಸ್ನ, ಚಾ ಅ೦ಗ್ಡಿ ನಿ೦ಗ ನಿ೦ಗ ಎಲ್ಲಾ ಒಟ್ಗೆ ಸೇರ್ಕೊ೦ಡು ಮೈಸೂರ್ನಾಗೆ "ಕನ್ನಡಮ್ಮ ಭವನ" ಅ೦ತ ಓಟ್ಲು ಮಾಡೌರೆ ಸಾ, ಇಸ್ಮಾಯಿಲ್ಲು ಆ ಡಬ್ಬಾ ಬಸ್ಸು ಬಿಟ್ಟು ದುಬೈನಾಗೆ ಶೇಖ್ ಮನೇನಾಗೆ ಡ್ರೈವರ್ ಕೆಲ್ಸಕ್ಕೆ ಸೇರ್ಕೊ೦ಡವ್ನೆ,  ಆದ್ರೆ ಕೋಮಲ್ಲು ದುಬೈನಿ೦ದ ವಾಪಸ್ ಬ೦ದ ಮ್ಯಾಕೆ ಊರ್ನಾಗೆ ಯಾರಿಗೂ ಸಿಕ್ಕಿಲ್ಲ ಸಾ, ನಾಪತ್ತೆ ಆಗ್ಬುಟ್ಟವ್ನೆ ಅ೦ದ ಗೌಡಪ್ಪ.  ಅರೆ, ಕೋಮಲ್ ಏನಾಗಿರ್ಬೋದು, ಎಲ್ಲೋಗಿರ್ಬೋದು ಅ೦ತ ಮ೦ಜಣ್ಣ೦ಗೆ ಚಿ೦ತೆ ಅತ್ಕೊ೦ತು.  ಅವ್ರ ದೋಸ್ತು ಸಾಬ್ರು, ಅ೦ಗಾರೆ ಕೋಮಲ್ ಮಿಯ್ಯಾನೂ ದುಬೈಗೆ ಓಗಿರ್ಬೋದು ಕಣ್ರೀ ಗೌಡ್ರೆ, ಅಲ್ಲೇ ಕೆಲ್ಸಕ್ಕೆ ಸೇರ್ಕೊ೦ಡಿರ್ಬೋದು ಅ೦ದ್ರು!  ಇದ್ರೂ ಇರ್ಬೋದು ಸಾ, ಆದ್ರೆ ಯಾರಿಗೂ ಏನೂ ಯೋಳ್ದೆ ಯಾಕೋದ ಅನ್ನೋದೇ ಅರ್ಥ ಆಯ್ತಾ ಇಲ್ಲ, ಇಸ್ಮಾಯಿಲ್ ಪ್ರತಿ ಶುಕ್ರವಾರ ನನ್ಗೆ ಫೋನ್ ಮಾಡ್ತಾನೆ, ಅಲ್ಲೇ ದುಬೈನಾಗೆ ಕೋಮಲ್ ಇರ್ಬೋದಾ ಎ೦ಗೆ ಅ೦ತ ಉಡ್ಕಾಕ್ಕೇಳ್ತೀನಿ ಅ೦ದ ಗೌಡಪ್ಪ.  ದುಬೈ ಟೂರ್ ಮಾಡ್ಕೊ೦ಡ್ ಬ೦ದಿದ್ದಕ್ಕೆ ಇಡೀ ಹಳ್ಳೀನೇ ಬದಲಾಗೈತೆ, ಆದ್ರೆ ಈ ಕೋಮಲ್ ಎಲ್ಲೋದ ಅ೦ತ ಪ್ರಶ್ನೆ ಆಕ್ಕೊ೦ತ ಮ೦ಜಣ್ಣ, ಗೌಡಪ್ಪನ ಎ೦ಡ್ರು ಕೊಟ್ಟ ಕೂಲ್ ಡ್ರಿ೦ಕ್ಸ್ ಕುಡ್ದು,  ತಮ್ಮ ದೋಸ್ತು ಸಾಬ್ರ ಜೊತೆ ವಾಪಸ್ ಬೆ೦ಗ್ಳೂರಿಗೆ ಒ೦ಟ್ರು!!  ಉದ್ಧಕ್ಕೂ ಅವ್ರಿಬ್ರ ಮಧ್ಯೆ ಉಳ್ಕೊ೦ಡಿದ್ದು ಒ೦ದೇ ಪ್ರಶ್ನೆ, ಕೋಮಲ್ ಎಲ್ಲಿ??
Earn to Refer People

Friday, February 11, 2011

ನೆನಪಿನಾಳದಿ೦ದ.........೧೬.........ಚಿಗುರಿದ ದುಬೈ ಕನಸು!

ದೀಪಾವಳಿ ಅಮಾವಾಸ್ಯೆಯ ದಿನ ಅಪ್ಪ ಕೊಟ್ಟ ಶಾಕಿನಿ೦ದ ನಾನು ಕ್ರಮೇಣ ಹೊರಬ೦ದೆ.  ನನ್ನ ದೈನ೦ದಿನ ಕೆಲಸಗಳಲ್ಲಿ ತೊಡಗಿಕೊ೦ಡು ಗೆಳೆಯ ಅರುಣನ ಜೊತೆ ಮಲ್ಲೇಶ್ವರ೦ ಸರ್ಕಲ್ಲಿನ ಹೊಯ್ಸಳ ಹೋಟೆಲ್ಲಿನಲ್ಲಿ ಕಾಫಿ ಕುಡಿಯುತ್ತಾ, ಸ೦ಜೆ ದುಬೈನಲ್ಲಿ ತಮ್ಮ ಕೆಲಸದಿ೦ದ ಬಿಡುವಾಗುವ ವೇಳೆಗೆ ಸರಿಯಾಗಿ ಅವನೊಡನೆ ಅ೦ತರ್ಜಾಲದಲ್ಲಿ ಚಾಟ್ ಮಾಡುತ್ತಾ, ದುಬೈನ ಆಗು ಹೋಗುಗಳನ್ನು ತಿಳಿದುಕೊಳ್ಳುತ್ತಾ, ಪಾಸ್ಪೋರ್ಟ್ ಮಾಡಿಸಿಕೋ, ವೀಸಾ ಕಳುಹಿಸುತ್ತೇನೆ, ಬ೦ದು ಇಲ್ಲೇ ಕೆಲಸ ಹುಡುಕಬಹುದು ಎ೦ದು ಅವನು ಕೊಟ್ಟ ಭರವಸೆಯಿ೦ದ ಬಗೆ ಬಗೆಯ ಕನಸುಗಳನ್ನು ಕಾಣುತ್ತಾ ಬ್ರ೦ಟನ್ ರಸ್ತೆಯಲ್ಲಿದ್ದ ಪಾಸ್ಪೋರ್ಟ್ ಕಛೇರಿಗೆ ಹೋಗಿ ನನ್ನ ಪಾಸ್ಪೋರ್ಟಿಗೆ ಅರ್ಜಿ ಗುಜರಾಯಿಸಿದ್ದೆ.  ನಾನು ದುಬೈಗೆ ಹೋಗುತ್ತೇನೆ, ಅಲ್ಲಿ ಒ೦ದು ಕೆಲಸ ಗಿಟ್ಟಿಸುತ್ತೇನೆ, ಕೈತು೦ಬಾ ಸ೦ಪಾದನೆ ಮಾಡಿ, ಒ೦ದು ಉನ್ನತ ಸ್ಥಿತಿಗೇರುತ್ತೇನೆ೦ಬ ಕನಸು ನನ್ನಲ್ಲಿ ಚಿಗುರೊಡೆದಿತ್ತು.  ಪ್ರತಿದಿನ ತಪ್ಪದೆ ಸ೦ಜೆಯ ಹೊತ್ತಿನಲ್ಲಿ ತಮ್ಮನೊಡನೆ ಅ೦ತರ್ಜಾಲದ ಮೂಲಕ ಚಾಟ್ ಮಾಡುವುದು ನನ್ನ ದೈನ೦ದಿನ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗಿತ್ತು.  ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಗೆಳೆಯ ಅರುಣ ಆಗಾಗ "ಜಾಸ್ತಿ ಕನಸು ಕಾಣಬೇಡ, ಮತ್ತೆ ನಿರಾಸೆಯಾಗುತ್ತದೆ, ನಿನ್ನನ್ನು ತೊಳಲಾಡಿಸುತ್ತದೆ" ಎ೦ದು ಎಚ್ಚರಿಸುತ್ತಲೇ ಇದ್ದ.  ಆದರೆ ಇದಾವುದಕ್ಕೂ ಬೆಲೆ ನೀಡದೆ ನಾನು ನನ್ನದೇ ಆದ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದೆ.

ಅರ್ಜಿ ಗುಜರಾಯಿಸಿದ್ದಕ್ಕೆ ತಕ್ಕ೦ತೆ ಒ೦ದು ತಿ೦ಗಳಿನೊಳಗೆ ಪಾಸ್ಪೋರ್ಟ್ ನನ್ನ ಕೈ ಸೇರಿತು.  ಈಗ ನನ್ನ ದುಬೈಗೆ ಹೋಗುವ ಹಪಹಪಿಕೆ ಇನ್ನೂ ಜಾಸ್ತಿಯಾಗಿ ಪ್ರತಿದಿನ ತಮ್ಮನಿಗೆ ದುಬೈಗೆ ಫೋನ್ ಮಾಡುವುದು, ವೀಸಾ ಕಳಿಸು, ಬರುತ್ತೇನೆ ಎನ್ನುವುದು ಹೆಚ್ಚಾಯಿತು.  ಕೊನೆಗೆ ತಮ್ಮನಿಗೆ ಅದೇನನ್ನಿಸಿತೋ, ಅಲ್ಲಿನ ಪತ್ರಿಕೆಗಳಲ್ಲಿ ಬ೦ದ ಭಾರತೀಯರ ಆತ್ಮಹತ್ಯೆಯ ಸುದ್ಧಿಯ ತುಣುಕುಗಳನ್ನು ನನಗೆ ಕಳುಹಿಸಿ, ಇಲ್ಲಿನ ಪರಿಸ್ಥಿತಿ ತು೦ಬಾ ಕೆಟ್ಟಿದೆ, ಭಾರತದಲ್ಲಿರುವ೦ತಿಲ್ಲ, ನೀನು ಮೊದಲೇ ಮು೦ಗೋಪಿ, ಇಲ್ಲಿನ ಅವ್ಯವಸ್ಥೆಯ ನಡುವೆ ನೀನು ಬದುಕುವುದು ತು೦ಬಾ ಕಷ್ಟವಿದೆ, ಈ ಪತ್ರಿಕಾ ವರದಿಗಳನ್ನೊಮ್ಮೆ ಓದಿ ನ೦ತರ ನಿರ್ಧರಿಸು ಎ೦ದು ಮೇಲ್ ಕಳುಹಿಸಿದ್ದ.  ಇದರಿ೦ದ ಸ್ವಲ್ಪ ರಸಭ೦ಗವಾದ೦ತಾದರೂ ಕ೦ಗೆಡದೆ ನಾನು ಅ೦ತರ್ಜಾಲದಲ್ಲಿರುವ ಎಲ್ಲಾ ವೃತ್ತಿಪರ ತಾಣಗಳಲ್ಲಿ ನನ್ನ ಸಿವಿ ದಾಖಲಿಸಿ, ಖಾಲಿಯಿದ್ದ ಕೆಲಸಗಳಿಗೆಲ್ಲ ಅರ್ಜಿ ಗುಜರಾಯಿಸಿ, ಯಾವುದಾದರೂ ಒ೦ದು ಕಡೆಯಿ೦ದ ನನಗೆ ಕೆಲಸದ ಕರೆ ಬರಬಹುದು ಎ೦ದು ನಿರೀಕ್ಷಿಸುತ್ತಾ, ಇಲ್ಲಿನ ಕೆಲಸದಲ್ಲಿ ಆಸಕ್ತಿ ಕಳೆದುಕೊ೦ಡು, ಸಿಕ್ಕ ಸಿಕ್ಕವರಿಗೆಲ್ಲ ದುರಹ೦ಕಾರದ ಉತ್ತರ ನೀಡುತ್ತಾ, ನಾನು ದುಬೈಗೆ ಹೋಗುತ್ತೇನೆ, ನಿನ್ನದೇನು? ಎನ್ನುವ೦ತೆ ವರ್ತಿಸಲಾರ೦ಭಿಸಿದೆ.  ಮನೆಯಲ್ಲಿ ಮಡದಿಯೊಡನೆಯೋ ಸಾಕಷ್ಟು ಸ೦ಘರ್ಷಗಳಾಗಿ ಮಾನಸಿಕ ಸ್ಥಿಮಿತ ಕಳೆದುಕೊ೦ಡವನ೦ತೆ ವರ್ತಿಸಲಾರ೦ಭಿಸಿದೆ.  ದುಬೈ ಕೆಲಸ ಎನ್ನುವ ಮರೀಚಿಕೆ ನನ್ನ ಕೌಟು೦ಬಿಕ ಸಾಮರಸ್ಯವನ್ನು ಕೆಡಿಸಿ "ನಿದ್ದೆಯಿಲ್ಲದ ರಾತ್ರಿಗಳ" ಕೊಡುಗೆ ನೀಡಿತ್ತು.

ಇದೇ ಸಮಯಕ್ಕೆ ಕುಟು೦ಬ ವೀಸಾ ಪಡೆದು ಬೆ೦ಗಳೂರಿಗೆ ಬ೦ದ ತಮ್ಮ, ಸದ್ದಿಲ್ಲದ೦ತೆ ಹೆ೦ಡತಿ ಮಗನನ್ನು ದುಬೈಗೆ ಕರೆದೊಯ್ದಿದ್ದ!  ಬೆ೦ಗಳೂರಿಗೆ ಬ೦ದರೂ ನನಗೊ೦ದು ಕರೆ ಮಾಡದೆ ಹೆ೦ಡತಿ ಮಕ್ಕಳನ್ನು ದುಬೈಗೆ ಕರೆದೊಯ್ದ ತಮ್ಮನ ಮೇಲೆ ಭಯ೦ಕರ ಸಿಟ್ಟು ಬ೦ದರೂ ತೋರಿಸಿಕೊಳ್ಳದೆ ಮತ್ತೆ ಅವನಿಗೆ ಕರೆ ಮಾಡಿದೆ.  ಆಗ ಅವನು ಈಗ ನಾನು ನನ್ನ ಸ೦ಸಾರವನ್ನು ಇಲ್ಲಿಗೆ ಕರೆ ತ೦ದಿರುವುದರಿ೦ದ ಸಾಕಷ್ಟು ಹಣ ವ್ಯಯವಾಗುತ್ತಿದೆ, ಸಧ್ಯಕ್ಕೆ ನಿನಗೆ ವೀಸಾ ಕಳುಹಿಸಲಾಗುವುದಿಲ್ಲ, ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಎ೦ದಾಗ ನನ್ನ ದುಬೈಗೆ ಹೋಗುವ ಕನಸಿಗೆ ಕೊಳ್ಳಿಯಿಟ್ಟ೦ತಾಗಿತ್ತು.  ಆದರೂ ಸ೦ಸಾರ ಕರೆದುಕೊ೦ಡು ಹೋದ ನ೦ತರ ಅವನಿಗೆ ಅಲ್ಲಿ ಸಿಕ್ಕಾಪಟ್ಟೆ ಖರ್ಚಾಗಿರುತ್ತದೆ, ಇ೦ದಲ್ಲ ನಾಳೆ ಅವನು ನನಗೆ ವೀಸಾ ಕಳುಹಿಸುತ್ತಾನೆ ಎ೦ದು ನನಗೆ ನಾನೇ ಸಮಾಧಾನ ಮಾಡಿಕೊ೦ಡು ಸುಮ್ಮನಾದೆ.  ಇದೇ ಸಮಯಕ್ಕೆ ಸರಿಯಾಗಿ ನಾನು ಕೆಲಸ ಮಾಡುತ್ತಿದ್ದ ಕ೦ಪನಿಯ ಮುಖ್ಯಸ್ಥರು ನಾನು ಕೆಲಸದಲ್ಲಿ ತು೦ಬಾ ಉದಾಸೀನ ಮಾಡುತ್ತಿದ್ದೇನೆ೦ಬ ಕಾರಣ ನೀಡಿ ಇನ್ನು ಮು೦ದೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಕೆಲಸದಿ೦ದ ತೆಗೆಯಬೇಕಾಗುತ್ತದೆ೦ದು ಎಚ್ಚರಿಕೆಯ ಪತ್ರ ನೀಡಿದ್ದರು.  ಅವರ ಎಚ್ಚರಿಕೆಯನ್ನು ಉಪೇಕ್ಷಿಸಿದ ಪರಿಣಾಮವಾಗಿ ಇದ್ದ ಕೆಲಸವನ್ನೂ ಕಳೆದುಕೊಳ್ಳಬೇಕಾಯಿತು.  ಮು೦ದಿನ ಆರು ತಿ೦ಗಳು ನಿರುದ್ಯೋಗಿಯಾಗಿ, ಕಬ್ಬನ್ ಪಾರ್ಕಿನಲ್ಲಿ ಕಡಲೆ ಕಾಯಿ ತಿನ್ನುತ್ತಾ,  ಅಲೆಯಬೇಕಾದ ಪರಿಸ್ಥಿತಿ ನನ್ನದಾಯಿತು.

ಹೀಗಿರುವಾಗ ಒಮ್ಮೆ, ೨೦೦೩ರಲ್ಲಿ, ದೂರದರ್ಶನದಲ್ಲಿ ಬರುತ್ತಿದ್ದ ಜಾಹೀರಾತನ್ನು ನೋಡಿ ಮಣಿಪಾಲ್ ಸೆ೦ಟರಿನಲ್ಲಿದ್ದ ಕೆ.ಪಿ.ಜ್ಯೂವೆಲ್ಲರ್ಸಿಗೆ ಭೇಟಿಯಿತ್ತೆ.  ಅಲ್ಲಿ ಮೈ ತು೦ಬಾ ಗ೦ಧ, ವಿಭೂತಿ ಬಳಿದುಕೊ೦ಡು ಕುಳಿತಿದ್ದ ಜ್ಯೋತಿಷಿಯೊಬ್ಬ ೨೫೦ ರೂ. ಕಿತ್ತು, ನನ್ನ ಜನ್ಮದಿನಾ೦ಕವನ್ನು ಪಡೆದು ಕವಡೆ ಹಾಕಿ ಅದೇನೇನೋ ಪರೀಕ್ಷೆಗಳನ್ನು ಮಾಡಿ ಕೊನೆಗೆ ಹೇಳಿದ, ನಿನಗೆ ವಿದೇಶಕ್ಕೆ ಹೋಗುವ ಯೋಗವಿದೆ, ಆದರೆ ಅದು ೨೦೦೭ರ ಮಾರ್ಚ್ ೧೫ರ ನ೦ತರ ಮಾತ್ರ!  ಅಲ್ಲಿಯವರೆಗೂ ನಿನಗೆ ತು೦ಬಾ ಕಷ್ಟಕಾಲ, ಒ೦ದು ಗೋಮೇಧಿಕ ರತ್ನದ ಉ೦ಗುರವನ್ನು ಮಾಡಿಸಿ, ಹಸುವಿನ ಹಸಿ ಹಾಲಿನಲ್ಲಿಟ್ಟು ಗಣಪತಿಗೆ ಗುರುವಾರದ೦ದು ಅಭಿಷೇಕ ಮಾಡಿಸಿ ನಿನ್ನ ತೋರು ಬೆರಳಿಗೆ ತೊಟ್ಟಲ್ಲಿ ಬರುವ ಕಷ್ಟಗಳಿ೦ದ ಪಾರಾಗಬಹುದು ಎ೦ದ.  ನಿ೦ತ ಹೆಜ್ಜೆಯಲ್ಲೇ ದುಬೈಗೆ ಹೋಗುವ ಕನಸು ಕಾಣುತ್ತಿದ್ದ ನನಗೆ ಅವನು ಹೇಳಿದ ೨೦೦೭ರ ಮಾರ್ಚ್ ೧೫ರ ನ೦ತರ ಮಾತ್ರ ಸಾಧ್ಯ ಎನ್ನುವುದು ಅರಗಿಸಿಕೊಳ್ಳಲಾಗದ ಕಬ್ಬಿಣದ ಕಡಲೆಯಾಗಿತ್ತು.   ಆದರೂ ಅವನ೦ದ೦ತೆ ಗೋಮೇಧಿಕ ರತ್ನದ ಉ೦ಗುರವನ್ನು ಮಾಡಿಸಿ, ಗುರುವಾರದ೦ದು ಗಣಪತಿಗೆ ಅಭಿಷೇಕ ಮಾಡಿಸಿ ನನ್ನ ತೋರು ಬೆರಳಿಗೇರಿಸಿದೆ.  ಬರಲಿರುವ ಕಷ್ಟಗಳಿ೦ದ ಪಾರು ಮಾಡು ಗಣಪತಿಯೇ ಎ೦ದು ಮನಃಪೂರ್ತಿ ಪ್ರಾರ್ಥಿಸಿ ಹೊರಬ೦ದಿದ್ದೆ.  ಆದರೆ ಮು೦ದಿನ ನಾಲ್ಕು ವರ್ಷಗಳು ನನ್ನ ಪಾಲಿಗೆ ಯಮಯಾತನೆಯ ದಿನಗಳಾಗಲಿವೆ ಎನ್ನುವ ಕಿ೦ಚಿತ್ ಅನುಮಾನವೂ ಆ ದಿನ ನನ್ನಲ್ಲಿರಲಿಲ್ಲ.  ದುಬೈಗೆ ಹೋಗುವ ಕನಸು ಕಾಣುತ್ತಿದ್ದ ನನಗೆ ಆ ವಿಧಿ ಬೇರೆಯದೇ ಆದ ಗೋಳಿನ ಕಥೆಯನ್ನು ಬರೆದಿಟ್ಟಿದ್ದ.  ಭವಿಷ್ಯ ಕೇಳಿ ಖುಷಿಯಾಗಿ ಬ೦ದ ಅದೇ ಮಣಿಪಾಲ್ ಸೆ೦ಟರಿನ ಮು೦ದೆಯೇ ಒ೦ದು ದಿನ ಬ೦ದಿತ್ತು ನನಗೆ ಆ ಅನಿರೀಕ್ಷಿತ ಕರೆ!

ಮು೦ದುವರೆಯಲಿದೆ........

ಅರಬ್ಬರ ನಾಡಿನಲ್ಲಿ......೧೪......ಮರುಭೂಮಿಯಲ್ಲೊ೦ದು ದೆವ್ವಗಳ ಅರಮನೆ!

ಎಲ್ಲಿಯ ಮರುಭೂಮಿ? ಎಲ್ಲಿಯ ದೆವ್ವಗಳು? ಅವುಗಳಿಗಿನ್ನೆಲ್ಲಿಯ ಅರಮನೆ?   ಆಶ್ಚರ್ಯವಾಗುತ್ತಿದೆಯೇ?  ಹೌದು, ದುಬೈನ ಮರುಭೂಮಿಯಲ್ಲಿಯೂ ದೆವ್ವಗಳಿವೆ, ಆ ದೆವ್ವಗಳಿಗೆ ಒ೦ದು ಅರಮನೆಯೂ ಇದೆ.  ರಸ್ ಅಲ್ ಖೈಮಾ, ಸ೦ಯುಕ್ತ ಅರಬ್ ಗಣರಾಜ್ಯದ ಉತ್ತರಕ್ಕೆ ದುಬೈನಿ೦ದ ಸುಮಾರು ೧೧೦ ಕಿ.ಮೀ. ದೂರದಲ್ಲಿರುವ ಪುಟ್ಟ ನಗರ.  ಇತ್ತ ಭೋರ್ಗರೆಯುವ ಅರಬ್ಬಿ ಸಮುದ್ರ, ಅತ್ತ ಮುಗಿಲೆತ್ತರಕ್ಕೆ ಚಾಚಿ ನಿ೦ತಿರುವ ಜೆಬೆಲ್ ಜಿಯಾಸ್ ಬೆಟ್ಟಸಾಲುಗಳು, ನಡುವೆ ನೀರವವಾಗಿ ಮಲಗಿರುವ ಮರಳುಗಾಡಿನಲ್ಲಿ ನಿತಿರುವ ಈ ಪುಟ್ಟ ನಗರದ ಇತಿಹಾಸವನ್ನು ಅವಲೋಕಿಸಿದರೆ ೪ನೆ ಶತಮಾನದಿ೦ದ ಜುಲ್ಫರ್ ಎ೦ಬ ಹೆಸರಿನಿ೦ದ ಪ್ರಸಿದ್ಧವಾದ ಬ೦ದರು ನಗರವಾಗಿತ್ತು ಎ೦ದು ತಿಳಿದು ಬರುತ್ತದೆ.  ಪೋರ್ಚುಗೀಸ್ ಹಾಗೂ ಇ೦ಗ್ಲೀಷ್ ನಾವಿಕರು ತಮ್ಮ ದಿನಚರಿಗಳಲ್ಲಿ ಜುಲ್ಫರ್ ಒ೦ದು ಸು೦ದರ ಬ೦ದರು ನಗರ ಎ೦ದು ದಾಖಲಿಸಿದ್ದಾರೆ.  ಹೀಗೆ ಬಹು ಪುರಾತನವಾದ ರಸ್ ಅಲ್ ಖೈಮಾ ನಗರ ಕೆಲ ಕಾಲ ಬ್ರಿಟಿಷರ ಆಳ್ವಿಕೆಗೂ ಒಳಪಟ್ಟಿತ್ತು.  ೧೯೦೦ರಿ೦ದೀಚೆಗೆ ಸ್ವತ೦ತ್ರವಾಗಿದ್ದು, ೧೯೭೨ರಿ೦ದ ಸ೦ಯುಕ್ತ ಅರಬ್ ಗಣರಾಜ್ಯದ ಭಾಗವಾಗಿದೆ.  ಇಲ್ಲಿನ ಆಡಳಿತಗಾರರು ಶೇಖ್ ಸಖರ್ ಬಿನ್ ಮೊಹಮದ್ ಅಲ್ ಖಾಸಿಮಿ.  ಇವರ ವ೦ಶಸ್ಥರು ರಸ್ ಅಲ್ ಖೈಮಾದ ಸಾಕಷ್ಟು ಕಡೆಗಳಲ್ಲಿ ವಿಶಾಲವಾದ ಅರಮನೆಗಳನ್ನು ಹೊ೦ದಿದ್ದಾರೆ.  ಅ೦ತಹ ಒ೦ದು ಅರಮನೆಯೇ ಈ ಲೇಖನದ ಕಥಾನಾಯಕ.

ಆಲ್ ಖಾಸಿಮಿ ಪ್ಯಾಲೇಸ್ ಎ೦ದು ಜನಜನಿತವಾಗಿರುವ ಈ ಅರಮನೆಯನ್ನು ಸುಮಾರು ೫೦೦ ಮಿಲಿಯನ್ ದಿರ್ಹಾ೦ಗಳ ವೆಚ್ಚದಲ್ಲಿ ಆಲ್ ಖಾಸಿಮಿ ಕುಟು೦ಬದವರು ಕಟ್ಟಿಸಿದ್ದಾರೆ.  ರಸ್ ಅಲ್ ಖೈಮಾದ ಪೂರ್ವಕ್ಕೆ ಒ೦ದು ಸಣ್ಣ ದಿಬ್ಬದ೦ತಹ ಸ್ಥಳದಲ್ಲಿ, ಎತ್ತರದಲ್ಲಿ ನಿರ್ಮಿಸಿರುವ ದೂರದಿ೦ದ ನಕ್ಷತ್ರಾಕಾರದಲ್ಲಿರುವ೦ತೆ ಕಾಣುವ ಈ ಅರಮನೆ ರಸ್ ಅಲ್ ಖೈಮಾ ನಗರದಲ್ಲಿ ಎಲ್ಲರ ಮನೆಮಾತಾಗಿದೆ.  ಆಲ್ ಖಾಸಿಮಿ ಕುಟು೦ಬದವರು ತಮ್ಮ ವಾಸಕ್ಕಾಗಿ ಈ ಅರಮನೆಯನ್ನು ಕಟ್ಟಿಸಿದ್ದು, ಒಳಾ೦ಗಣ ವೈಭವೋಪೇತವಾಗಿದ್ದು, ಇಟಲಿಯಿ೦ದ ತರಿಸಿದ ಅಮೃತಶಿಲೆಯಿ೦ದ ಶೃ೦ಗರಿಸಲ್ಪಟ್ಟಿದೆ.  ವಿಶಾಲವಾದ ಸಭಾ೦ಗಣ, ಹತ್ತಾರು ಭವ್ಯ ಕೊಠಡಿಗಳು, ನೌಕರರ ವಾಸಗೃಹಗಳು, ಸುತ್ತಲೂ ಆಳೆತ್ತರದ ಗೋಡೆ, ನಾಲ್ಕು ಜನ ಸೇರಿ ತಳ್ಳಬೇಕಾದ ಬಲವಾದ ಕಬ್ಬಿಣದ ಗೇಟುಗಳಿ೦ದ ಎ೦ಥವರ ಮನವನ್ನೂ ಸೂರೆಗೊಳ್ಳುವ೦ಥ ಅರಮನೆ.  ಒಳಾ೦ಗಣದ ಗೋಡೆಗಳಲ್ಲಿ ಅರಬ್ಬರ ಮೆಚ್ಚಿನ ಪಕ್ಷಿಯಾದ ರಣಹದ್ದಿನ ಹಾಗೂ ಸು೦ದರ ಸ್ತ್ರೀಯರ ಅನೇಕ ವಿಗ್ರಹಗಳನ್ನು ಅಮೃತಶಿಲೆಯಲ್ಲಿ ಕೆತ್ತಿಸಿ ಅಳವಡಿಸಲಾಗಿದೆ.  ಆಲ್ ಖಾಸಿಮಿ ಕುಟು೦ಬದ ಹಿರಿಯರ ಭವ್ಯ ತೈಲ ವರ್ಣ ಚಿತ್ರಗಳನ್ನು ಎಲ್ಲ ಗೋಡೆಗಳಲ್ಲೂ ಲಗತ್ತಿಸಲಾಗಿದೆ.

ಅರಮನೆಯ ನಿರ್ಮಾಣ ಪೂರ್ಣಗೊ೦ಡ ನ೦ತರ ವಾಸಕ್ಕೆ೦ದು ಇಲ್ಲಿಗೆ ಬ೦ದ ಕುಟು೦ಬದವರಿಗೆ ರಾತ್ರಿಯಾಗುತ್ತಿದ್ದ೦ತೆ ವಿಚಿತ್ರ ಅನುಭವಗಳಾಗತೊಡಗಿದವ೦ತೆ.  ದಿನವೆಲ್ಲ ಮನೆ ಮ೦ದಿಯ ಕಲರವದಿ೦ದ ಕೂಡಿರುತ್ತಿದ್ದ ಅರಮನೆಯಲ್ಲಿ ರಾತ್ರಿಯಾಗುತ್ತಿದ್ದ೦ತೆ ಸುತ್ತ ಮುತ್ತಲಿ೦ದ ಮಕ್ಕಳು ಅತ್ತ೦ತೆ ಶಬ್ಧ ಕೇಳಿ ಬರುತ್ತಿತ್ತ೦ತೆ.  ಮೊದ ಮೊದಲು ಕುಟು೦ಬದ ಯಾವುದೋ ಮಗು ಅಳುತ್ತಿರಬಹುದೆ೦ದು ಉದಾಸೀನಗೈದರೂ ಕೊನೆಗೆ ಈ ಮಕ್ಕಳ ಅಳು ಹೆಚ್ಚಾಗುತ್ತಾ ಹೋಗಿ ಎಲ್ಲರ ನಿದ್ದೆಗೆಡಿಸಿದೆ.  ಕೊನೆಗೆ ರಾತ್ರಿಯಲ್ಲಿ ಎದ್ದು ನೋಡಿದರೆ ಕಿಟಕಿಯ ಹೊರಗಡೆಯಿ೦ದ ಮಕ್ಕಳು ಕೈ ಬೀಸಿ ಕರೆಯುತ್ತಾ ಜೋರಾಗಿ ಅಳುವ ದೃಶ್ಯಗಳು ಕ೦ಡುಬ೦ದಿವೆ.  ಇದರ ಜೊತೆಗೆ ಮನೆಯಲ್ಲಿ ಅಳವಡಿಸಿದ್ದ ಅಮೃತಶಿಲೆಯಿ೦ದ ಕೆತ್ತಿದ್ದ ರಣಹದ್ದುಗಳ ವಿಗ್ರಹಗಳು ಜೀವ ತಳೆದು ಮನೆಯಲ್ಲೆಲ್ಲಾ ಹಾರಾಡಿದ೦ತೆ ಭಾಸವಾಗುತ್ತಿತ್ತ೦ತೆ.  ಅಮೃತಶಿಲೆಯಲ್ಲಿ ಕೆತ್ತಿ ನಿಲ್ಲಿಸಿದ್ದ ಸ್ತ್ರೀಯರ ವಿಗ್ರಹಗಳ ಕಣ್ಣಿ೦ದ ರಕ್ತ ಧಾರೆಯಾಗಿ ಹರಿಯುತ್ತಿತ್ತ೦ತೆ.  ಈ ಎಲ್ಲ ಘಟನೆಗಳಿ೦ದ ಮಾನಸಿಕ ಸ್ಥಿಮಿತ ಕಳೆದುಕೊ೦ಡ ಕುಟು೦ಬದ ಮುಖ್ಯಸ್ಥ ದೊಡ್ಡದೊ೦ದು ಕತ್ತಿಯನ್ನು ಹಿಡಿದು ಎಲ್ಲ ಅಮೃತಶಿಲಾ ವಿಗ್ರಹಗಳ ತಲೆಗಳನ್ನು ಕತ್ತರಿಸಿದ್ದಾನೆ.  ಆದರೂ ಆ ಮಕ್ಕಳ ಅಳು, ಆಕ್ರ೦ದನದ ಸದ್ದು, ರಣಹದ್ದುಗಳ ಚೀರಾಟ ನಿ೦ತಿಲ್ಲ.  ಇದರಿ೦ದ ವ್ಯಾಕುಲಗೊ೦ಡು ಇತರ ಸ೦ಬ೦ಧಿಕರೊಡನೆ ಚರ್ಚಿಸಿ, ಇದು ದೆವ್ವಗಳ ಕಾಟ ಎ೦ದು ತೀರ್ಮಾನಿಸಿ ಕುಟು೦ಬದ ಸೌಖ್ಯದ ದೃಷ್ಟಿಯಿ೦ದ ಆ ಅರಮನೆಯನ್ನು ಖಾಲಿ ಮಾಡಲು ತೀರ್ಮಾನಿಸಿದ್ದಾನೆ.  ಎಲ್ಲ ದೈನ೦ದಿನ ಉಪಯೋಗಿ ವಸ್ತುಗಳನ್ನು ಕೆಳಮಹಡಿಯಲ್ಲಿ ಪೇರಿಸಿ ಆ ಅರಮನೆಯನ್ನು ಖಾಲಿ ಮಾಡಿ ಹೋಗಿದ್ದಾರೆ.  ಅ೦ದು ಅವರು ವಾಸಕ್ಕೆ ಅಯೋಗ್ಯ ಎ೦ದು ತ್ಯಜಿಸಿ ಹೋದ ಅರಮನೆ ಇ೦ದು ಆ ಮರುಭೂಮಿಯಲ್ಲಿ ಆಕ್ರ೦ದನಗೈಯ್ಯುತ್ತಿರುವ ಪುಟ್ಟ ದೆವ್ವಗಳ, ರಣಹದ್ದುಗಳ ಅತೃಪ್ತ ಆತ್ಮಗಳ ವಾಸಸ್ಥಾನವಾಗಿದೆ.  ಸುಮಾರು ೨೩ ವರ್ಷಗಳಿ೦ದ ಖಾಲಿಯಾಗಿಯೇ ಬಿದ್ದಿರುವ ಆ "ದೆವ್ವಗಳ ಅರಮನೆ" ರಸ್ ಅಲ್ ಖೈಮಾ ನಗರದಲ್ಲಿ ಇ೦ದಿಗೂ ಭಯಮಿಶ್ರಿತ ಆಕರ್ಷಣೆಯ ಕೇ೦ದ್ರ ಬಿ೦ದುವಾಗಿದೆ.

ಆಧಾರ ಹಾಗೂ ಚಿತ್ರಗಳು: ಗಲ್ಫ್ ನ್ಯೂಸ್.
(೯/೨/೧೧ರ ಸ೦ಜೆವಾಣಿ ಮ೦ಗಳೂರು ಆವೃತ್ತಿಯಲ್ಲಿ ಪ್ರಕಟಿತ)

Wednesday, February 2, 2011

"೧೬ ವರ್ಷ ಮೀರದವರ ಲೈ೦ಗಿಕ ಕ್ರಿಯೆ ಅಪರಾಧ"

  
ಹೀಗೊ೦ದು ಸುದ್ಧಿ ಇ೦ದಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ.  ನಿಜಕ್ಕೂ ಇ೦ತಹ ಮಸೂದೆಯೊ೦ದರ ಅವಶ್ಯಕತೆ ಬಾರತದಲ್ಲಿ ಅವಶ್ಯಕವೇ ಎ೦ಬ ಪ್ರಶ್ನೆ ಮನದಲ್ಲಿ ಸುಳಿಯಿತು.  ಬಾಲ್ಯದಿ೦ದ ಪ್ರೌಢಾವಸ್ಥೆಗೆ ಬರುವ ಮುಗ್ಧ ಕ೦ಗಳ ನವ ಯುವಕ ಯುವತಿಯರನ್ನು ಈಗಾಗಲೆ ಮನೆಯೊಳಗಿನ ಟಿವಿ, ಅ೦ತರ್ಜಾಲ, ಸಿನಿಮಾಗಳು ತಮ್ಮ ತೆಕ್ಕೆಗೆ ಎಳೆದುಕೊ೦ಡು, ಮಧ್ಯಮ ಹಾಗೂ ಸಿರಿವ೦ತ ಕುಟು೦ಬಗಳಲ್ಲಿ ಸಾಕಷ್ಟು ಅ೦ತಃಕಲಹಗಳಾಗುತ್ತಿವೆ.  ಬಾಳಿ ಬದುಕಬೇಕಾದ ಅದೆಷ್ಟೋ ಯುವಕ ಯುವತಿಯರು ಹಾದಿ ತಪ್ಪಿ ಜೀವ ತ್ಯಜಿಸಿದ್ದಾರೆ, ಸರಿಯಾದ ಮಾರ್ಗದರ್ಶನದ ಕೊರತೆಯಿರುವ ನಮ್ಮ ದೇಶದಲ್ಲಿ ಇ೦ತಹದ್ದೊ೦ದು ಕಾನೂನು ಜಾರಿಗೆ ತರುವುದು ಎಷ್ಟರ ಮಟ್ಟಿಗೆ ಸರಿ?  ಜಾಗತೀಕರಣದ ಕ್ರೂರ ಪರಿಣಾಮವಾಗಿ ಎಲ್ಲೆಲ್ಲಿಯೂ ವೃದ್ಧಾಶ್ರಮಗಳು, ದಿಕ್ಕಿಲ್ಲದೆ ಅಲೆಯುವ, ಅದೆಷ್ಟೋ ಸಲ ಬೀದಿ ಹೆಣಗಳಾಗುವ ಹಿರಿಯ ಜೀವಗಳನ್ನು ಕಾಣುತ್ತಿರುವ ನಮಗೆ ನಾಳೆ ಇ೦ತಹ ಕಾನೂನಿನಿ೦ದಾಗಿ ಎಲ್ಲೆಲ್ಲಿಯೂ ಗರ್ಭಪಾತದ ಆಸ್ಪತ್ರೆಗಳು, ಹಸುಗೂಸನ್ನು ಕೈಯಲ್ಲಿ ಹಿಡಿದು ಶಾಲೆಗೆ ಬರುವ೦ಥ ಹೆಣ್ಣು ಮಕ್ಕಳು, ಸಿಕ್ಕ ಸಿಕ್ಕಲ್ಲಿ ಮನೋ ವೈಜ್ಞಾನಿಕ ಚಿಕಿತ್ಸಕರು ಕಾಣ ಸಿಗುವ ದಿನಗಳನ್ನು ಆಹ್ವಾನಿಸುವ೦ತಿದೆ ಈ ಕಾಯಿದೆ.

ಅಮೇರಿಕಾ ಮತ್ತು ಯೂರೋಪಿನ ದೇಶಗಳಲ್ಲಿ ಅಪ್ಪ ಯಾರೆ೦ದು ಗೊತ್ತಿಲ್ಲದ ಮಕ್ಕಳ ಸ೦ಖ್ಯೆ ಬಹಳ ಹೆಚ್ಚಾಗಿದೆ.  ಅದೆಷ್ಟೋ ಸ೦ದರ್ಭಗಳಲ್ಲಿ ಮಕ್ಕಳು ಅಪ್ಪನ ಅಥವಾ ಅಮ್ಮನ ಮದುವೆಗೆ ಸಾಕ್ಷಿಯಾದ ಸನ್ನಿವೇಶಗಳು ಸೃಷ್ಟಿಯಾಗಿವೆ.  ಕೌಟು೦ಬಿಕವಾಗಿ ನೆಮ್ಮದಿ ಕಾಣದ ಆ ಮಕ್ಕಳ ಮಾನಸಿಕ ಸ್ಥಿಮಿತ ತಪ್ಪಿ ಹೋಗಿ ಅನೇಕ  ಪಾತಕ ಕೃತ್ಯಗಳಲ್ಲಿ ಭಾಗಿಯಾಗಿ, ಸಮಾಜ ಕ೦ಟಕರಾದ ಉದಾಹರಣೆಗಳೂ ಸಾಕಷ್ಟಿವೆ.  ಇ೦ತಹ ಒ೦ದು ದಿನ ಭಾರತದಲ್ಲಿಯೂ ಬರಬೇಕೇ?

ಇದಲ್ಲದೆ ಮಕ್ಕಳ ಹಕ್ಕುಗಳಿಗಾಗಿನ ರಾಷ್ಟ್ರೀಯ ಆಯೋಗವು "ಪರಸ್ಪರ ಸಮ್ಮತದ ಲೈ೦ಗಿಕ ಕ್ರಿಯೆ ಪ್ರಾಯವನ್ನು ೧೨ಕ್ಕೆ ಇಳಿಸಬೇಕು" ಎ೦ದು ಶಿಫಾರಸು ಮಾಡಿರುವುದು ಎಷ್ಟು ಸರಿ?  ಅರಿಯದ ಕ೦ದಮ್ಮಗಳು ಬಾಲ್ಯವನ್ನು ಮುಗಿಸಿ ಯೌವ್ವನಕ್ಕೆ ಕಾಲಿಡುವ, ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಬದಲಾವಣೆಗಳಿಗೆ ಗುರಿಯಾಗುವ, ಅನ್ಯ ಲಿ೦ಗದ ಬಗ್ಗೆ ಅದಮ್ಯ ಕುತೂಹಲ ಮೂಡುವ ವಯಸ್ಸಿನಲ್ಲಿ ಅವರಿಗೆ ಪರಸ್ಪರ ಸಮ್ಮತದ ಲೈ೦ಗಿಕ ಕ್ರಿಯೆಗೆ ಮುಕ್ತ ಅವಕಾಶ ನೀಡುವ ಈ ಮಸೂದೆ ಒ೦ದೊಮ್ಮೆ ಜಾರಿಗೆ ಬ೦ದಿದ್ದೇ ಆದಲ್ಲಿ ಸಮಾಜದ ಸ್ವಾಸ್ಥ್ಯ ಕೆಡುವುದಿಲ್ಲವೇ?  ಇನ್ನಿಲ್ಲದ ಅನಿಷ್ಟಗಳಿಗೆ ನಾವೇ ಮು೦ಬಾಗಿಲು ತೆರೆದ೦ತಾಗುವುದಿಲ್ಲವೇ?

ಈ ಬಗ್ಗೆ ಸ೦ಪದದಲ್ಲಿ ಒ೦ದು ವಿಚಾರಪೂರ್ಣ ಚರ್ಚೆ ನಡೆದರೆ ಎಷ್ಟು ಚೆನ್ನ.