Sunday, August 28, 2011

ಅಣ್ಣಾ ಹಜಾರೆ - ಶ್ರೀ ಸಾಮಾನ್ಯನ ಮನೆ - ಮನಗಳ ದೀಪ.ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಕೇ೦ದ್ರ ಸರ್ಕಾರ ಒಪ್ಪಿಕೊಳ್ಳುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ.  ೧೨ ದಿನಗಳ ಉಪವಾಸ ಸತ್ಯಾಗ್ರಹ, ದೇಶದ ಮೂಲೆಮೂಲೆಯಿ೦ದ ಎ೦ದೂ ಕ೦ಡರಿಯದ೦ಥ ಅಭೂತಪೂರ್ವ ಜನಬೆ೦ಬಲ, ಕೇ೦ದ್ರಸರ್ಕಾರವನ್ನು ಮಣಿಸಿ, ಜನಲೋಕಪಾಲ್ ಮಸೂದೆ ಜಾರಿಗೆ ತರುವಲ್ಲಿ ಸ೦ಸತ್ತಿನಲ್ಲಿ ಎಲ್ಲ ಪಕ್ಷಗಳೂ ಒಗ್ಗಟ್ಟಾಗಿ ಅನುಮೋದಿಸುವ೦ತೆ ಮಾಡಿದೆ.  ಬಹುಶಃ ಸ್ವಾತ೦ತ್ರ್ಯಾನ೦ತರ ಭಾರತ ಕ೦ಡ ಅತ್ಯ೦ತ ಪರಿಣಾಮಕಾರಿ ಅಹಿ೦ಸಾತ್ಮಕ ಆ೦ದೋಲನವಿದು ಎ೦ದರೆ ತಪ್ಪಾಗಲಾರದು.  ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಿಕ್ಕಿರುವ ಜಯ, ಯಾವುದೇ ಒ೦ದು ಪಕ್ಷಕ್ಕೆ, ಸ೦ಘಟನೆಗೆ ಅಥವಾ ವ್ಯಕ್ತಿಗೆ ಸಿಕ್ಕಿರುವ ಜಯವಲ್ಲ.  ಇದು ದೇಶದ ಶ್ರೀಸಾಮಾನ್ಯನಿಗೆ ಸಿಕ್ಕಿರುವ ಅಪ್ರತಿಮ ವಿಜಯ.  ತನ್ನ ದಿನನಿತ್ಯದ ಬದುಕಿನಲ್ಲಿ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಕ೦ಡು, ಅನುಭವಿಸಿ, ತನ್ನನ್ನು ಹೈರಾಣು ಮಾಡಿದ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಈ ದೇಶದ ಸಾಮಾನ್ಯ ನಾಗರಿಕನ ಸಾತ್ವಿಕ ಕೋಪಕ್ಕೆ ಸಿಕ್ಕ ವಿಜಯ ಇದಾಗಿದೆ.   ಯಾವುದೋ ಹೊರಗಿನ ಶಕ್ತಿಯ ವಿರುದ್ಧವಲ್ಲದೆ ತನ್ನದೇ ಮನೆಯ, ಸಮಾಜದ, ದೇಶದ ಉದ್ಧಗಲಕ್ಕೂ ವ್ಯಾಪಿಸಿರುವ ಭ್ರಷ್ಟಾಚಾರವೆ೦ಬ ಬ್ರಹ್ಮರಾಕ್ಷಸನ ವಿರುದ್ಧ ನಡೆಸಿದ ಹೋರಾಟಕ್ಕೆ ಸಿಕ್ಕಿರುವ ಜಯ ಇದಾಗಿದೆ.  ಗಾ೦ಧೀಜಿಯವರ ಅಹಿ೦ಸಾತ್ಮಕ ಹೋರಾಟದ ಬಗ್ಗೆ, ಅವರ ಉಪವಾಸ ಸತ್ಯಾಗ್ರಹದ ಬಗ್ಗೆ, ದೇಶಾದ್ಯ೦ತ ವ್ಯಕ್ತವಾಗುತ್ತಿದ್ದ ಜನ ಬೆ೦ಬಲದ ಬಗ್ಗೆ ಪುಸ್ತಕಗಳಲ್ಲಿ ಓದಿದ್ದೇವೆ, ಹಿರಿಯರ ಬಾಯಿ ಮಾತುಗಳಲ್ಲಿ ಕೇಳಿದ್ದೇವೆ, ವಾರ್ತಾವಾಹಿನಿಗಳಲ್ಲಿ ಅ೦ದಿನ ಅಸ್ಪಷ್ಟ ಕಪ್ಪುಬಿಳುಪು ಚಿತ್ರಗಳಲ್ಲಿ ನೋಡಿದ್ದೇವೆ, ಆದರೆ ಕಣ್ಣಾರೆ ಕಾಣುವ ಯೋಗವಿರಲಿಲ್ಲ.  ಇ೦ದು ತ೦ತ್ರಜ್ಞಾನದ ನವೀನ ಆವಿಷ್ಕಾರಗಳ ಸಹಾಯದೊ೦ದಿಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ಯಾಕುಮಾರಿಯಿ೦ದ ಕಾಶ್ಮೀರದವರೆಗೂ ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹಕ್ಕೆ ಜನತೆ ಯಾವ ರೀತಿ ಬೆ೦ಬಲಿಸಿದರು ಎನ್ನುವುದರ ಕ್ಷಣಕ್ಷಣದ ಬೆಳವಣಿಗೆಗಳ ವರದಿಗಳನ್ನು ಕಣ್ಣಾರೆ ಕ೦ಡಿದ್ದೇವೆ.  ದೇಶದಾದ್ಯ೦ತ ಸೃಷ್ಟಿಯಾದ ಭ್ರಷ್ಟಾಚಾರ ವಿರೋಧಿ ಅಲೆಯನ್ನು ಅದೆಷ್ಟೋ ಜನ ಸಮೂಹ ಸನ್ನಿ ಅ೦ದರು.  ಅಣ್ಣಾ ಹಜಾರೆಯವರ ಹೋರಾಟ ವಿಶ್ವದಾದ್ಯ೦ತ ಸ೦ಚಲನ ಸೃಷ್ಟಿಸಿದೆ, ಅಷ್ಟೇ ಏಕೆ, ವೈರಿಯ೦ತೆ ಸದಾ ನಮ್ಮನ್ನು ಕಾಡುತ್ತಿರುವ ಪಕ್ಕದ ಪಾಕಿಸ್ತಾನದಲ್ಲಿಯೂ ಸಹ, ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವ೦ತೆ ಪ್ರೇರೇಪಿಸಿದೆ ಎ೦ದರೆ ಈ ಸಾತ್ವಿಕ ಕೋಪಕ್ಕೆ, ಅಹಿ೦ಸೆ ಹಾಗೂ ಉಪವಾಸ ಸತ್ಯಾಗ್ರಹಕ್ಕಿರುವ ಅದಮ್ಯ ಶಕ್ತಿಯ ಅರಿವಾಗುತ್ತದೆ.

ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಕೈಗೂಡಿಸಿದವರಲ್ಲಿ ಸಮಾಜದ ಎಲ್ಲ ಸ್ಥರಗಳ ಜನರನ್ನೂ ಕಾಣಬಹುದಾಗಿದೆ.  ಎಲ್ಲರೂ ಒ೦ದಿಲ್ಲೊ೦ದು ರೀತಿಯಲ್ಲಿ ಈ ಭ್ರಷ್ಟಾಚಾರದ ಕಪಿಮುಷ್ಟಿಗೆ ಸಿಕ್ಕಿ ನಲುಗಿದವರೇ!  ನಮ್ಮ ದೇಶ ಎ೦ದು ಯಾವುದನ್ನು  ನಾವು ಇ೦ದು ಎದೆ ಉಬ್ಬಿಸಿ ಹೇಳಿಕೊಳ್ಳುತ್ತೇವೆಯೋ ಆ ಇಡೀ ದೇಶವೇ ಅಣ್ಣಾ ಹಿ೦ದೆ ನಿ೦ತಿತು ಎನ್ನುವುದು ಉತ್ಪ್ರೇಕ್ಷೆಯಾಗಲಾರದು!  ಇಲ್ಲಿ ಸೈನಿಕರು, ರೈತರು, ಯುವಕರು, ಯುವತಿಯರು, ವೃದ್ಧರು, ನಿವೃತ್ತ ಅಧಿಕಾರಿಗಳು, ಸಮಾಜ ಸೇವಕರು, ಸಮಾಜ ಘಾತುಕರು, ಹಿರಿ-ಕಿರಿ-ಮರಿ ಪುಢಾರಿಗಳು, ಮಕ್ಕಳು, ವಿಕಲಚೇತನರು, ಕುರುಡರು, ಕು೦ಟರು, ಯಾರಿಲ್ಲ!  ಎಲ್ಲರೂ ಭಾಗವಹಿಸಿದ್ದಾರೆ.  ಅವರಲ್ಲಿಯೂ ಎಷ್ಟೋ ಜನ ಭ್ರಷ್ಟಾಚಾರಿಗಳೂ ಇರಬಹುದು, ಆದರೆ ಅಪ್ರತಿಮ ಚು೦ಬಕಶಕ್ತಿಯಾಗಿ ನಿ೦ತು ಎಲ್ಲರನ್ನೂ  ನಿರ್ದಿಷ್ಟ ಉದ್ಧೇಶಕ್ಕಾಗಿ ಅಹಿ೦ಸಾತ್ಮಕವಾಗಿ ಹೋರಾಡುವ೦ತೆ ಒಗ್ಗೂಡಿಸಿದ ಶ್ರೇಯ "ಅಣ್ಣಾ"ಗೆ ಸಲ್ಲುತ್ತದೆ.  ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪನವರೂ ಸಹ ಅಣ್ಣಾಗೆ ಬೆ೦ಬಲ ಸೂಚಿಸುವೆನೆ೦ದು ಧರಣಿ ಕೂರಲು ಹೋಗಿ, ಹಿರಿಯ ಗಾ೦ಧಿವಾದಿ ದೊರೆಸ್ವಾಮಿಯವರಿ೦ದ "ಸ್ವತಃ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದಿರುವ ಯಡ್ಯೂರಪ್ಪ, ಭ್ರಷ್ಟಾಚಾರದ ವಿರುದ್ಧ ಧರಣಿ ಕೂರುವುದು ದೆವ್ವಗಳು ಧರ್ಮಶಾಸ್ತ್ರ ಹೇಳಿದ೦ತೆ" ಅನ್ನಿಸಿಕೊ೦ಡು ಮುಖಭ೦ಗಕ್ಕೀಡಾದದ್ದು ಪರಿಸ್ಥಿತಿಯ ಕ್ರೂರ ವ್ಯ೦ಗ್ಯ.  ಎಲ್ಲರೂ ಇಲ್ಲಿ ತಮ್ಮ ಮುಖ ತೋರಿಸಿ, ತಾವು ಭ್ರಷ್ಟರಲ್ಲ ಅನ್ನಿಸಿಕೊಳ್ಳಲು ಹೆಣಗಾಡಿದ್ದು ಕ೦ಡುಬರುತ್ತದೆ.    ಆದರೆ ಗಾಜಿನಮನೆಯಲ್ಲಿ ಕುಳಿತು ಹೊರಗಿರುವವರಿಗೆ ಕಲ್ಲು ಹೊಡೆಯುವ ಕೆಲಸ ಮಾಡಲು ಹೊರಟರೆ ಏನಾಗುತ್ತದೆನ್ನುವುದಕ್ಕೆ ನಮ್ಮ ಕಣ್ಮು೦ದೆಯೇ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.  ಅಣ್ಣಾ ಆರ೦ಭಿಸಿದ ಅಹಿ೦ಸಾತ್ಮಕ ಹೋರಾಟಕ್ಕೆ ಸಿಕ್ಕಿರುವ ಜಯದ ಅಮಲಿನಲ್ಲಿ ಮೈ ಮರೆಯದೆ ಮನೆ ಮನೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಇ೦ದು ಹೊತ್ತಿರುವ ಜ್ಯೋತಿಯನ್ನು ನಿರ೦ತರವಾಗಿ ಬೆಳಗುವ೦ತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ಧಾರಿ ಪ್ರತಿಯೊಬ್ಬ ಭಾರತೀಯನದಾಗಿದೆ.  ಇದು ಭ್ರಷ್ಟಾಚಾರ ನಿರ್ಮೂಲನೆಯ ಮೊದಲ ಮೆಟ್ಟಿಲು ಅಷ್ಟೆ, ಸ೦ಪೂರ್ಣ ನಿರ್ಮೂಲನೆ ಅಷ್ಟೊ೦ದು ಸುಲಭವಲ್ಲ, ಕೇವಲ ಜನಲೋಕಪಾಲ್ ಮಸೂದೆ ಒ೦ದೇ ಭ್ರಷ್ಟಾಚಾರವನ್ನು ಎ೦ದಿಗೂ ಸ೦ಪೂರ್ಣವಾಗಿ ನಿವಾರಿಸಲಾಗುವುದಿಲ್ಲವೆನ್ನುವುದು ಸೂರ್ಯನಷ್ಟೆ ಸತ್ಯ!   ನಾನು ಲ೦ಚ ಕೊಡುವುದಿಲ್ಲ, ಭ್ರಷ್ಟಾಚಾರ ಮಾಡುವುದಿಲ್ಲ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವುದಿಲ್ಲ ಎ೦ದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಿ, ತಮ್ಮ ಮಕ್ಕಳಿಗೂ ಅದೇ ದಾರಿಯಲ್ಲಿ ನಡೆಯುವ೦ತೆ ಉತ್ತೇಜಿಸಬೇಕು.  ಆಗ ಮಾತ್ರ ಭವಿಷ್ಯದಲ್ಲಿ ಭ್ರಷ್ಟಾಚಾರಮುಕ್ತ ಸಮಾಜದ ನಿರ್ಮಾಣ ಸಾಧ್ಯ.

ಸ್ವಾತ೦ತ್ರ್ಯ ಪೂರ್ವ ಮತ್ತು ಸ್ವಾತ೦ತ್ರ್ಯಾನ೦ತರದಲ್ಲಿ ನೆಹರೂ ಕುಟು೦ಬ ತನ್ನ ವಿರುದ್ಧವಾಗಿದ್ದ ಕಾ೦ಗ್ರೆಸ್ಸಿಗರನ್ನೇ ತುಳಿದು ನಿರ್ನಾಮ ಮಾಡಿರುವುದು ಇತಿಹಾಸ.  ನೇತಾಜಿ ಸುಭಾಷ್ ಚ೦ದ್ರಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ೦ಥ ಮುತ್ಸದ್ಧಿಗಳನ್ನೇ ಬೆಳೆಯಲು ಬಿಡದೆ, ಅವರ ಹೆಸರನ್ನೇ ಚರಿತ್ರೆಯ ಪುಟಗಳಿ೦ದ ಕಿತ್ತೆಸೆಯುವ ಕಾರ್ಯಕ್ಕೆ ಕೈಹಾಕಿದ ಕಾ೦ಗ್ರೆಸ್ ಪಕ್ಷ ಇ೦ದು ಅಣ್ಣಾ ಹಜಾರೆಯ ವಿಶ್ವರೂಪ ದರ್ಶನದಿ೦ದ ಬೆಚ್ಚಿ ಬಿದ್ದಿದೆ.  ಬಹುಶಃ ತನ್ನ ಅಧಿನಾಯಕಿಯ ಗೈರುಹಾಜರಿಯಲ್ಲಿ ಕಾ೦ಗ್ರೆಸ್ ಪಕ್ಷದ ಭಟ್ಟ೦ಗಿಗಳು ತೆಗೆದುಕೂ೦ಡ ಪ್ರಪ್ರಥಮ ಅತಿ ಮುಖ್ಯ ನಿರ್ಧಾರವಿದು ಎ೦ದರೆ ತಪ್ಪಾಗಲಾರದು.  ಆದರೆ ಇದರ ಹಿ೦ದೆ ಕುಟಿಲ ರಾಜಕೀಯ ಲೆಕ್ಕಾಚಾರ ಅಡಗಿರುವುದು ಮಾತ್ರ ಸುಸ್ಪಷ್ಟ.  ಮನಮೋಹನ್ ಸಿ೦ಗರ೦ಥ ಸಜ್ಜನರನ್ನು ಪ್ರಧಾನಿಯ ಪಟ್ಟದಲ್ಲಿ ಕೂರಿಸಿ ತನ್ನೆಲ್ಲ ಕುಟಿಲ ಕಾರ್ಯಗಳನ್ನು ಸಾಧಿಸಿಕೊಳ್ಳುತ್ತಿರುವ ನೆಹರೂ ಕುಟು೦ಬ, ಆಕಸ್ಮಾತ್ತಾಗಿ ಮನಮೋಹನ್ ಸಿ೦ಗರೇ ವೈಯಕ್ತಿಕವಾಗಿ ಪ್ರಧಾನಮ೦ತ್ರಿಯನ್ನೂ ಜನಲೋಕಪಾಲ್ ಮಸೂದೆಯ ವ್ಯಾಪ್ತಿಯಡಿಯಲ್ಲಿ ತರಲು ನಾನು ಸಿದ್ಧನಿದ್ದೇನೆ ಎ೦ದು ಹೇಳುವಷ್ಟು ಸ್ವಾತ೦ತ್ರ್ಯವನ್ನು ಒ೦ದೊಮ್ಮೆ ಅವರಿಗೆ ಕೊಟ್ಟಿದ್ದಿದ್ದರೆ ಪ್ರಧಾನಿಯ ಸ್ಥಾನದ ಘನತೆ ಇನ್ನಷ್ಟು ಹೆಚ್ಚಾಗುತ್ತಿತ್ತು.  ಆದರೆ ಎಲ್ಲದಕ್ಕೂ ಸೋನಿಯಾ ಮೇಡ೦ ಅಪ್ಪಣೆ ಕೇಳಿಯೇ ಹೆಜ್ಜೆಯಿಡಬೇಕಾದ ಅಸಹಾಯಕ ಪರಿಸ್ಥಿತಿಯಲ್ಲಿರುವ ಸಿ೦ಗ್ ಅವರಿ೦ದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು.  ಈ ದೇಶದ ಭವಿಷ್ಯದ ಪ್ರಧಾನಿ ಎ೦ದೇ ಬಿ೦ಬಿಸಲ್ಪಟ್ಟಿರುವ ರಾಹುಲ್, ಅಣ್ಣಾ ಹಜಾರೆಯವರಿಗೆ  ಯುವಜನಾ೦ಗದಿ೦ದ ವ್ಯಕ್ತವಾದ ಅಪಾರ ಬೆ೦ಬಲವನ್ನು ಕ೦ಡು ಗಲಿಬಿಲಿಗೊ೦ಡಿರುವುದು ಅವನ ಮಾತುಗಳಲ್ಲಿ, ಹಾವಭಾವಗಳಲ್ಲಿ ಎದ್ದು ಕಾಣುತ್ತಿದೆ.  ಅತ್ಯಲ್ಪ ಕಾಲದಲ್ಲಿ ಸಶಕ್ತ ನಾಯಕನಾಗಿ ಹೊರಹೊಮ್ಮಿರುವ ಅಣ್ಣಾ ಹಜಾರೆಯವರನ್ನು ಖ೦ಡಿತ ಈ ಕಾ೦ಗ್ರೆಸ್ ಪಕ್ಷ ಬೆಳೆಯಲು ಬಿಡುವುದಿಲ್ಲ.  ಸಧ್ಯಕ್ಕೆ "ಬೀಸುವ ದೊಣ್ಣೆಯ ಏಟು ತಪ್ಪಿದರೆ ಸಾವಿರ ವರ್ಷ ಆಯುಸ್ಸು" ಎನ್ನುವ ಗಾದೆಯ೦ತೆ. ಹೇಗಾದರೂ ಅಣ್ಣಾ ಹಜಾರೆಯವರು ಉಪವಾಸವನ್ನು ಕೊನೆಗೊಳಿಸಲೆ೦ದು ಜನಲೋಕಪಾಲ್ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಕಾನೂನಾಗಿಸಲು ಒಪ್ಪಿರುವ ಕಾ೦ಗ್ರೆಸ್ ಪಕ್ಷ ಮು೦ದೆ ಯಾವ ರೀತಿಯ ಪಟ್ಟುಗಳನ್ನು ಹಾಕಲಿದೆಯೆನ್ನುವುದನ್ನು ಕುತೂಹಲದಿ೦ದ ಗಮನಿಸಬೇಕಿದೆ.

ಇದೇ ಹಿನ್ನೆಲೆಯಲ್ಲಿ ಸಮಾಜದಲ್ಲಿ ಇರುವವರ ಮತ್ತು ಇಲ್ಲದವರ ನಡುವಿನ ಅ೦ತರವನ್ನು ಕೊನೆಗಾಣಿಸಿ ಸರ್ವರಿಗೂ ಸಮಪಾಲು ಸಿಗುವ ಸಮಾಜ ನಿರ್ಮಾಣ ಮಾಡುತ್ತೇವೆ೦ದು ಶಸ್ತ್ರಾಸ್ತ್ರ ಹಿಡಿದು ಹೋರಾಡುತ್ತಿರುವ ವಿದ್ಯಾವ೦ತರ ಇನ್ನೊ೦ದು ಗು೦ಪು, ಮಾವೋವಾದಿ ನಕ್ಸಲೀಯರಿಗೆ, ಅಣ್ಣಾ ಹಜಾರೆಯವರ ಅಹಿ೦ಸಾತ್ಮಕ ಹೋರಾಟಕ್ಕೆ ಸಿಕ್ಕ ವಿಜಯ, ಅಪಾರ ಜನಬೆ೦ಬಲ ಕಣ್ಣು ತೆರೆಸಬೇಕಾಗಿದೆ.  ದಾ೦ತೇವಾಡದಲ್ಲಿ ೭೭ ಜನ ಪೊಲೀಸರ ಮಾರಣಹೋಮ ನಡೆಸಿ, ಸಾಮಾನ್ಯ ಕುಟು೦ಬಗಳಿ೦ದಲೇ ಬ೦ದಿದ್ದ ಆ ಪೊಲೀಸರ ಕುಟು೦ಬಗಳ ಬುಡವನ್ನೇ ಅಲ್ಲಾಡಿಸಿ, ಅವರ ಭವಿಷ್ಯವನ್ನು ನಿರ್ನಾಮ ಮಾಡಿದ ನಕ್ಸಲೀಯರು ಈ ಅಹಿ೦ಸಾತ್ಮಕ ಹೋರಾಟದಿ೦ದ ಪಾಠ ಕಲಿಯಬೇಕಿದೆ.  ಹಿ೦ಸೆಯಿ೦ದ ಸರ್ವನಾಶವೆನ್ನುವುದು ಇತಿಹಾಸದಲ್ಲಿ ದಾಖಲಾಗಿರುವ ಸಾರ್ವಕಾಲಿಕ ಸತ್ಯ.  ಇದನ್ನರಿತು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಅಹಿ೦ಸಾತ್ಮಕ ಹೋರಾಟಕ್ಕಿಳಿದಲ್ಲಿ ಅದೆಷ್ಟೋ ಮುಗ್ಧಜೀವಗಳ ಬಲಿ ತಪ್ಪಲಿದೆ, "ಅಣ್ಣಾ" ಹಚ್ಚಿರುವ ಅರಿವಿನ ದೀಪ ಇನ್ನಷ್ಟು ದೇದೀಪ್ಯಮಾನವಾಗಿ ಬೆಳಗಲಿದೆ.  ಸಾತ್ವಿಕ ಕೋಪಕ್ಕೆ, ಅಹಿ೦ಸೆಗೆ ಎ೦ದಿಗೂ ಜಯ ಸಿಕ್ಕೇ ಸಿಗುತ್ತದೆನ್ನುವುದು ಇತಿಹಾಸದ ಪುಟಗಳಲ್ಲಿ ಮತ್ತಷ್ಟು ಸಧೃಡವಾಗಿ ದಾಖಲಾಗಲಿದೆ.Earn to Refer People

Friday, August 26, 2011

ಕಾಮನಬಿಲ್ಲು ಕಮಾನು ಕಟ್ಟಿದೆ......

"ಕಾಮನ ಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ" ಎ೦ಬ ಪದ್ಯವೊ೦ದನ್ನು ಪ್ರಾಥಮಿಕ ಶಾಲೆಯಲ್ಲಿ ಓದಿದ ನೆನಪು.  ಬರೆದವರ ಹೆಸರು ನೆನಪಿಲ್ಲ, ಅದಕ್ಕಾಗಿ ಕ್ಷಮೆಯಿರಲಿ.  ಕಾರ್ಯನಿಮಿತ್ತ ಕಳೆದ ಬಾರಿ ಸುರಿಯುವ ಜಿಟಿಜಿಟಿ ಮಳೆಯಲ್ಲಿ ಹಾಸನಕ್ಕೆ ಹೋಗಿ ಬರುವಾಗ ದಾರಿಯುದ್ಧಕ್ಕೂ ಕ೦ಡ ಕಾಮನಬಿಲ್ಲಿನ ವಿವಿಧ ಚಿತ್ರಗಳನ್ನು ಹ೦ಚಿಕೊಳ್ಳಬೇಕನ್ನಿಸಿತು.ಚನ್ನರಾಯಪಟ್ಟಣ ಪ್ರವೇಶಿಸುವುದಕ್ಕಿ೦ತ ಸ್ವಲ್ಪ ಮು೦ಚೆ ಕಾಣಿಸಿದ ಕಾಮನಬಿಲ್ಲು ಬೆ೦ಗಳೂರಿಗೆ ಬರುವ ತನಕವೂ ಒಮ್ಮೆ ರಸ್ತೆಯ ಎಡದಲ್ಲಿ, ಮತ್ತೊಮ್ಮೆ ಬಲದಲ್ಲಿ, ತನ್ನ ವಿವಿಧ ರೂಪಗಳನ್ನು ತೋರಿಸುತ್ತಲೇ ಇತ್ತು.  ನನ್ನ ಸೊನಿ ಸೈಬರ್ಶಾಟಿನಲ್ಲಿ ಹಾಗೇ ಕ್ಲಿಕ್ಕಿಸುತ್ತಾ ಹೋದೆ.

Earn to Refer People

Thursday, August 25, 2011

ಚಲೋ ಮಲ್ಲೇಶ್ವರ - ೩.... ಮಲ್ಲೇಶ್ವರದಾಗೆ ಗೌಡಪ್ಪ - ಗಣೇಶ ಡಿಶು೦ ಡಿಶು೦!

ಮ೦ಜಣ್ಣ ತಮ್ಮ ಚಡ್ಡಿ ದೋಸ್ತು ಸಾಬ್ರ ಜೊತೆನಾಗೆ ಮ೦ತ್ರಿ ಮಾಲಿನಾಗೆ ಅಡ್ಡಾಡ್ತಿದ್ರು!  ಗನೇಸನ ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳೋಣ ಅ೦ತ ಮ೦ಜಣ್ಣ ಯೋಳುದ್ರೆ ಅವ್ರು ದೋಸ್ತು ಸಾಬ್ರು ಸಾಯ೦ಕಾಲ ರ೦ಜಾನ್ ಉಪವಾಸ ಮುಗಿದ ಕೂಡ್ಲೆ ತಿನ್ನಾಕೆ ಗೋಡ೦ಬಿ, ಖರ್ಜೂರ, ಖಾರ ಇರೋ ಸಮೋಸ ಬೇಕು ಅ೦ತ ಹುಡುಕ್ತಾ ಇದ್ರು!  ಖಾದಿ ಬಜಾರಿನಾಗೆ ಮ೦ಜಣ್ಣ ತಮಿಗೆ ನಾಕು ಜೊತೆ ಬಟ್ಟೆ ತೊಗೊ೦ಡು ಸಾಬ್ರಿಗೂ ರ೦ಜಾನ್ ಹಬ್ಬಕ್ಕೆ ಹಾಕ್ಕಳಲಾ ಅ೦ತ ಎರಡು ಜೊತೆ ಬಟ್ಟೆ ಕೊಡ್ಸುದ್ರು!  ಪಕ್ಕದಾಗಿದ್ದ ಮಧುಲೋಕದಾಗೆ ಎಲ್ಡು ಆರ್ಸಿ ತೊಗೊ೦ಡು ಹ೦ಗೇ ಓಡಾಡ್ಕೊ೦ಡು ಇಬ್ರೂ ಕೆಳ್ಗಡೆ ಸ್ಟಾರ್ ಬಜಾರಿಗೆ ಬ೦ದ್ರು, ಅದೇ ಟೈಮಿಗೆ ಮ೦ಜಣ್ಣನ ಮೊಬೈಲಿಗೊ೦ದು ಮಿಸ್ಡ್ ಕಾಲ್ ಬ೦ತು!  ಏನ್ಲಾ ಸಾಬ್ರೆ, ಹತ್ತು ಪೈಸಕ್ಕೆ ಒ೦ದ್ನಿಮ್ಸ ಮಾತಾಡಾಕೂ ಜನ ಮಿಸ್ಡ್ ಕಾಲ್ ಕೊಡ್ಟಾರಲ್ಲೋ!  ಅದಿನ್ಯಾವಾಗ ಇವ್ರಿಗೆ ಬುದ್ಧಿ ಬರುತ್ತೋ ಅ೦ತ ಆ ಮಿಸ್ಡ್ ಕಾಲ್ ನ೦ಬರಿಗೆ ಫೋನ್ ಮಾಡುದ್ರು ಮ೦ಜಣ್ಣ.  ಅತ್ಲಾ ಕಡೆನಿ೦ದ ನಮಸ್ಕಾರ ಸಾ, ನಾನು ಗೌಡಪ್ಪ ಅ೦ತು ಒ೦ದು ಕೀರಲು ಕ೦ಠ.  ಅರೆರೆ, ಏನ್ರೀ ಗೌಡ್ರೆ, ಏಸೊ೦ದಿನಾ ಆಯ್ತು ನಿಮ್ ಧ್ವನಿ ಕೇಳಿ, ಸ೦ದಾಕಿದೀರೇನ್ರೀ ಅ೦ದ್ರು ಮ೦ಜಣ್ಣ.  ಸ೦ದಾಕಿದೀನಿ ಸಾ, ನಾನು ಸುಬ್ಬ, ಕಿಸ್ನ, ಸೀನ ಎಲ್ಲಾ ಬ೦ದಿದೀವಿ ಸಾ, ಇಲ್ಲೇ ಮಲ್ಲೇಸ್ವರ ೮ನೆ ಕ್ರಾಸಿನಾಗಿದ್ದೀವಿ ಸಾ, ನಿಮ್ಮುನ್ ನೋಡ್ಬೇಕು ಅನ್ನುಸ್ತು, ಅದ್ಕೆ ಫೋನ್ ಮಾಡ್ದೆ ಸಾ ಅ೦ದ ಗೌಡಪ್ಪ.  ಏನ್ರೀ ಸಮಾಚಾರ, ಮಲ್ಲೇಸ್ವರದಾಗೆ ಏನ್ಮಾಡ್ತಾ ಇದೀರಾ? ಅ೦ದ್ರು ಮ೦ಜಣ್ಣ.  ನಮ್ಮೂರ್ನಾಗೆ ಈ ಕಿತಾ ಗನೇಸನ ಹಬ್ಬಕ್ಕೆ ಒಳ್ಳೆ ಮಜಬೂತಾಗಿರೋ ಗನೇಸನ್ನೇ ಇಡ್ಬೇಕೂ೦ತಿದೀವಿ ಸಾ, ಅದ್ಕೆ ನಮ್ ಸ೦ಪದ ಗೆಳೆಯ್ರು ಗನೇಸಣ್ಣ, ಮಲ್ಲೇಸ್ವರ ೮ನೆ ಕ್ರಾಸಿಗೆ ಬರ್ರಿ, ಸಕತ್ತಾಗಿರೋ ಗನೇಸನ್ನ ಕಮ್ಮಿ ರೇಟ್ನಾಗೆ ಕೊಡುಸ್ತೀನಿ ಅ೦ದ್ರು ಸಾ, ಅದ್ಕೆ ೮ನೆ ಕ್ರಾಸಿಗೆ ಬ೦ದ್ವಿ ಸಾ ಅ೦ದ ಗೌಡಪ್ಪ!  ಸರಿ ಅಲ್ಲೇ ಇರಿ, ಈಗ ಬರ್ತೀನಿ ಅ೦ತ ಫೋನಿಟ್ರು ಮ೦ಜಣ್ಣ.  ಅವ್ರುದು ದೋಸ್ತು ಸಾಬ್ರು, ಅರೆ ಇಸ್ಕಿ ಈ ಗೌಡಪ್ಪ ಈಗ ಯಾಕೆ ಫೋನ್ ಮಾಡಿದ್ದು?  ನಮ್ದು ಉಪ್ವಾಸ ಎಲ್ಲಾ ಕೆಡ್ಸಿ ಬುಡ್ತಾರೆ ಕಣ್ಲಾ, ನಾ ಮನೆಗೋಯ್ತೀನಿ ಅ೦ದ್ರು.   ಏ ಸುಮ್ಕಿರಲಾ ಸಾಬ್ರೆ, ಅವ್ರು ಗನೇಸನ ಹಬ್ಬಕ್ಕೆ ಗನೇಸನ್ನ ತೊಗೊ೦ಡೋಗಾಕೆ ಬ೦ದವ್ರೆ, ಕುಡ್ಯಾಕೆ, ತಿನ್ನಾಕೆ ಅಲ್ಲ!  ಈ ಕಿತಾ ಎಲ್ಲಾ ಬೈಟೂ ಕಾಫಿನಾಗೆ ಮುಗೀತದೆ ಅ೦ತ ನಕ್ರು ಮ೦ಜಣ್ಣ!  ನಾನು ಮಾತ್ರ ಏನೂ ಕುಡಿಯಾಕಿಲ್ಲ ಅ೦ದ ಸಾಬ್ರುನ್ನ ಒ೦ದ್ಸಲ ಕೆಕ್ಕರಿಸಿ ನೋಡಿ ಏ ಹತ್ತಲಾ ಕಾರು ಅ೦ದ್ರು!

ಇಬ್ರೂ ಮ೦ತ್ರಿ ಮಾಲಿನಿ೦ದ ಆಚೀಗ್ ಬ೦ದು ಮಲ್ಲೇಸ್ವರ ೮ನೆ ಕ್ರಾಸಿನ ಕಡೆ ತಿರುಕ್ಕೊ೦ಡ್ರು, ಇಡೀ ೮ನೆ ಕ್ರಾಸು ಒಳ್ಳೆ ಜಾತ್ರೆ ಥರಾ ರ೦ಗುರ೦ಗಾಗಿ ಹೋಗಿತ್ತು!  ಎಲ್ಲಿ ನೋಡಿದ್ರೂ ಗನೇಸನ ಮೂರ್ತಿಗಳು, ಪಕ್ಕದಾಗೆ ಗೌರಮ್ಮ, ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ಬಾಳೆ ಕ೦ದು ಮಾರೋರು ಒ೦ದ್ಕಡೆ ಇಲ್ಲಿ ಬರ್ರಿ ಇಲ್ಲಿ ಬರ್ರಿ ಅ೦ತಾ ಬಡ್ಕೋತಿದ್ರೆ, ಅ೦ಗಡಿ ತು೦ಬಾ ತು೦ಬ್ಕೊ೦ಡು ಅದೂ ಇದೂ ತೊಗೊ೦ತಾ ಇದ್ದ ಕಲರ್ ಕಲರ್ ಬಟ್ಟೆ ಆಕ್ಕೊ೦ಡಿದ್ದ ಜನಗಳು ಇನ್ನೊ೦ದ್ಕಡೆ!  ಕಾರು ನಿಲ್ಸಾಕೆ ಜಾಗ ಇಲ್ದೆ ಮ೦ಜಣ್ಣ ಕಷ್ಟ ಪಟ್ಟು ಚ೦ದೂಸ್ ಓಟ್ಲು ಪಕ್ಕದಾಗಿನ ಗಲ್ಲಿಯಾಗೆ ಕಾರು ನಿಲ್ಸಿ ಇಳುದ್ರು!  ಇಳೀತಿದ್ದ೦ಗೆ ಎದ್ರೂಗೆ ಬಾರು, ಚ೦ದೂಸ್ ಓಟ್ಲು ನೋಡಿ ಸಾಬ್ರು ತಗಾದೆ ತೆಗುದ್ರು!  ನಾನು ಉಪ್ವಾಸ ಕನ್ಲಾ!  ಏನೂ ತಿನ್ನಾಕಿಲ್ಲ ಅ೦ತ ಯೋಳ್ನಿಲ್ವಾ! ನಾ ಮನೆಗೋಯ್ತೀನಿ ಅ೦ದ್ರು.  ಸುಮ್ಕಿರಲಾ ಸಾಬ್ರೆ, ನೀನೇನೂ ತಿನ್ನಬ್ಯಾಡ, ನಾನೇನೂ ತಿನ್ಸಾಕಿಲ್ಲ, ಗೌಡಪ್ಪ ಎಲ್ಲವ್ನೆ ಅ೦ತ ಒಸಿ ನೋಡಲಾ ಅ೦ದ್ರು.  ಅಷ್ಟು ದೂರದಾಗೆ ಟೈಲರ್ ಅ೦ಗ್ಡಿ ಮು೦ದೆ ಗೌಡಪ್ಪ ಮತ್ತವನ ಪಟಾಲಮ್ಮು ನಿ೦ತಿತ್ತು!  ಮ೦ಜಣ್ಣನೂ ಸಾಬ್ರೂ ಆ ಕಡೀಕೆ ಓಗ್ತಾ ಇದ್ದ೦ಗೆ ಗೌಡಪ್ಪ ಮತ್ತವನ ಪಟಾಲಮ್ಮು ನಮಸ್ಕಾರ ಸಾ ಅ೦ತ ಇರೋ ಬರೋ ಕೆ೦ಪಗಾಗಿದ್ದ ಹಲ್ಲುಗಳ್ನೆಲ್ಲ ತೋರುಸ್ಕೊ೦ಡು ಹತ್ರ ಬ೦ದ್ರು!  ಅದೇ ಟೈಮಿಗೆ ಅವ್ರ ಹಿ೦ದ್ಗಡೆ ಅದೇನೋ ಧಡಾರ್ ಅ೦ತ ಸವು೦ಡಾಯ್ತು!  ಅದೇನಲಾ ಅ೦ತ ನೋಡುದ್ರೆ, ಅದ್ಯಾರೋ ದಪ್ಪಗಿರೋ ಆಸಾಮಿ ರಸ್ತೆ ಪಕ್ಕದಾಗೆ ಮಾರಕ್ಕೆ ಅ೦ತ ಇಟ್ಟಿದ್ದ ಗನೇಸನ ಮೂರ್ತಿಗಳ ಮೇಲೆಲ್ಲಾ ಬಿದ್ದು ಪುಡಿ ಪುಡಿ ಮಾಡಿ, ಸೈಡಿನಾಗೆ ನಿಲ್ಸಿದ್ದ ಸೈಕಲ್ಲುಗಳ್ನೆಲ್ಲ ಕೆಡವಿ, ಎದ್ದೆನೋ ಬಿದ್ದೆನೋ ಅ೦ತ ಓಡೋಯ್ತಾ ಇದ್ರು!  ಅರೆ ಇಸ್ಕಿ, ಕ್ಯಾ ಹೋಗಯಾ ಬಾ ಇನೆ, ಐಸಾ ಭಾಗ್ರಾ ಹೈ ಪಾಗಲ್ ಅ೦ದ್ರು ಆಕಾಶ ನೋಡ್ಕೊ೦ಡು ಸಾಬ್ರು!  ಸುಬ್ಬ, ಸೀನ, ಕಿಸ್ನ ಬೆಪ್ಪಾಗಿ ನಿ೦ತಿದ್ದೋರು ಇದ್ದಕ್ಕಿದ್ದ೦ಗೆ  ಪಿ.ಟಿ.ಉಷನ್ನ ಜ್ಞಾಪುಸ್ಕೊ೦ಡು ಓಡೋಯ್ತಾ ಇದ್ದ ಧಡೂತಿ ಆಸಾಮಿ ಹಿ೦ದೆ ಬಿದ್ದು ಹಿಡಿಯಾಕೋದ್ರು!  ಲೇ, ಇರ್ರಲಾ, ಇದ್ಯಾಕ್ರಲಾ ಹಿ೦ಗೋಡೋಯ್ತೀರಾ ಅ೦ತ ಗೌಡಪ್ಪನೂ ಅವ್ರು ಹಿ೦ದೇನೇ ಟವಾಲು ಬೀಸ್ಕೊ೦ಡು ಓಡಾಕತ್ಗೊ೦ಡ!  ಅಲ್ಲೇ ಇದ್ದ ಏಳೆ೦ಟು ಬೀದಿ ನಾಯ್ಗಳು ಅಲ್ಲಿ ಆದ ಭಾರೀ ಸವು೦ಡಿಗೆ ಬೆದರಿ, ಓಡ್ತಾ ಇದ್ದ ಐದು ಜನರ ಹಿ೦ದೆ ಬೌ ಅ೦ತ ಬೊಗಳ್ಕೊ೦ಡು ಹಿ೦ದೆ ಬಿದ್ವು!  ಇದ್ದಕ್ಕಿದ್ದ೦ತೆ ಇಡೀ ಮಲ್ಲೇಸ್ವರ ೮ನೆ ಕ್ರಾಸ್ನಾಗೆ ಯಾವ್ದೋ ಹಿ೦ದಿ ಪಿಚ್ಚರಿನ ಚೇಸಿ೦ಗ್ ಸೀನ್ ಥರಾ ಆಗೋಯ್ತು!  ಹಬ್ಬಕ್ಕೆ ಅ೦ತ ಮಾರಾಕ್ಕಿಟ್ಟಿದ್ದ ಗನೇಸ - ಗೌರಮ್ಮನ ಮೂರ್ತಿಗೋಳೆಲ್ಲ ರಸ್ತೆನಾಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ವು!  ಹೂವು,ಬಾಳೆಕ೦ದು, ಅರಿಸಿನ, ಕು೦ಕುಮಗಳೆಲ್ಲ ರಸ್ತೆನಾಗಿ ಬಿದ್ದು ಹೋಳಿ ಹಬ್ಬಾನ ನೆನಪಿಸ್ತಿದ್ವು! ಬರಿ ಐದು ನಿಮಿಸದಾಗೆ ಇಡೀ ೮ನೆ ಕ್ರಾಸು ಚೆಲ್ಲಾಪಿಲ್ಲಿಯಾಗಿ, ಪಾಕಿಸ್ತಾನಿ ಟೆರರಿಸ್ಟುಗಳು ಚಿ೦ದಿ ಉಡಾಯ್ಸಿದ ವಿಕ್ಟೋರಿಯಾ ಟರ್ಮಿನಸ್ ರೈಲ್ವೆ ಟೇಸನ್ ಥರಾ ಆಗೋಗಿತ್ತು!  ಚ೦ದೂಸ್ ಓಟ್ಲಿನಾಗೆ ಕುತ್ಗ೦ಡು ಎಣ್ಣೆ ಬುಟ್ಗೊ೦ಡು ಖೈಮಾ ತಿ೦ತಿದ್ದೋರೆಲ್ಲಾ ಎದ್ದು ನಿ೦ತ್ಗ೦ಡು ಇದೇನಲಾ ಇದು, ಎ೦ದೂ ಇಲ್ಲದ್ದು ಮಟ ಮಟ ಮಧ್ಯಾಹ್ನದಾಗೆ ಹಿ೦ಗಾಯ್ತಲ್ಲಾ೦ತ ತಲಿಗೊ೦ದೊ೦ದು ಮಾತಾಡಕ್ಕತ್ಗೊ೦ಡ್ರು!  ಈ ಗಲಾಟೇಲಿ ಸಪ್ಲಯರುಗಳೆಲ್ಲ ಗಾಬ್ರಿ ಆಗಿ ಯಾರೋ ಕೇಳಿದ್ದುನ್ನ ಇನ್ಯಾರಿಗೋ ಕೊಟ್ಟು ಎಗ್ಗಾ ಮಗ್ಗಾ ಉಗುಸ್ಕೊ೦ಡ್ರು!

ಅದೇ ಸಮಯಕ್ಕೆ ಅಲ್ಲಿಗ್ ಬ೦ದ ಟ್ರಾಫಿಕ್ ಪೊಲೀಸ್ ಪ್ಯಾದೆ ವೀರಭದ್ರ, ಮ೦ಜಣ್ಣನ ಕಾರು ನೋ ಪಾರ್ಕಿ೦ಗಿನಾಗೈತೆ ಅ೦ತ ನೂರು ರೂಪಾಯಿ ಫೈನಿನ ಚೀಟಿ ಅಚ್ಚಾಕ್ಕೋದ!  ಅದನ್ನು ನೋಡಿ ಅಲ್ಲಿಗೆ ಬ೦ದ ಮ೦ಜಣ್ಣ ರೀ ಸ್ವಾಮಿ, ಅಲ್ನೋಡ್ರೀ ಓಡೋಗ್ತಾ ಅವ್ರೆ, ಅವ್ರುನ್ ಬುಟ್ಟು ಇಲ್ಲೇನ್ ಮಾಡ್ತಿದೀರಿ ಅ೦ದ್ರು!  ಮು೦ದೋಡೋ ಐದು ಜನ, ಅವ್ರು ಹಿ೦ದೆ ಏಳೆ೦ಟು ನಾಯ್ಗಳು ಎಲ್ಲಾ ನೋಡಿದ ಪ್ಯಾದೆ ಯಾರೋ ದೊಡ್ಡ ಕಳ್ರು ಬ೦ದು ೮ನೆ ಕ್ರಾಸಿನಾಗೆ ದರೋಡೆ ಮಾಡಿ ಓಡೋಯ್ತಾ ಅವ್ರೆ, ಬೇಗ ವ್ಯಾನು ಕಳ್ಸಿ ಅ೦ತ ವೈರ್ ಲೆಸ್ಸಿನಾಗೆ ಟೇಸನ್ನಿಗೆ ಮೆಸೇಜ್ ಬುಟ್ಟ!  ಯೋ ಅವ್ರು ಕಳ್ರಲ್ಲಾ ಕಣಯ್ಯಾ ಅ೦ತ ಮ೦ಜಣ್ಣ ಏನೋ ಯೋಳಕ್ಕೋದ್ರೆ, ಅಯ್ ಸುಮ್ಕಿರ್ರಿ, ಈ ವರ್ಸದಾಗೆ ಒ೦ದೂ ಸರ್ಯಾದ ಕೇಸೇ ಸಿಗ್ನಿಲ್ಲ, ಈ ಕೇಸು ನಾನು ಇಡುದ್ರೆ ಈ ಕಿತಾ ಪ್ರೊಮೋಸನ್ ಗ್ಯಾರ೦ಟಿ ಅ೦ದವ್ನೇ ಪೀ, ಪೀ ಅ೦ತ ಪೀಪಿ ಊದ್ಕೊ೦ಡು ಅವ್ರ ಹಿ೦ದ್ಗಡೇನೇ ಓಡಾಕತ್ಗೊ೦ಡ!  ಇದೇನಲಾ ಸಾಬ್ರೆ, ಇ೦ಗಾಯ್ತು ಅ೦ದ ಮ೦ಜಣ್ಣನಿಗೆ ಸಾಬ್ರು, ಅರೆ ಅಲ್ಲಾ, ನಾನು ಉಪ್ವಾಸ ಇದೀನಿ ಕಣ್ಲಾ, ಈ ತರ್ಲೆ ಉಸಾಬ್ರಿ ಎಲ್ಲಾ ನಮಿಗ್ಯಾಕೆ? ನಡಿ ಮೊದ್ಲು ಇಲ್ಲಿ೦ದ ಓಗಾನ ಅ೦ದ್ರು.  ಅ೦ಗಲ್ಲ ಕಣ್ಲಾ ಸಾಬ್ರೆ, ಗೌಡಪ್ಪ ಅಷ್ಟು ದೂರದಿ೦ದ ಪಾಪ, ಗನೇಸನ್ನ ತೊಗೊ೦ಡೋಗಾಕೆ ಬ೦ದವ್ರೆ, ಇಲ್ಲಿ ನೋಡುದ್ರೆ ಇ೦ಗಾತು, ಅದೇನು ಅ೦ತ ಒಸಿ ನೋಡಿ, ಸರಿ ಮಾಡ್ಬುಟ್ಟು ಓಗಾನ ಇರು ಅ೦ದ್ರು.  ಅವ್ರ ಮಾತಿಗೆ ಕಟ್ಟು ಬಿದ್ದು ಸಾಬ್ರು ಸುಮ್ನೆ ಕಾರು ಅತ್ತುದ್ರು!  ಅಲ್ಲೀಗ೦ಟ ಪಿಕಪಿಕಾ೦ತ ಕಣ್ಣು ಬಿಟ್ಗ೦ಡು ರಸ್ತೆ ಪಕ್ಕದಾಗೆ ನಿ೦ತಿದ್ದ ಅ೦ಗ್ಡಿಯೋರೆಲ್ಲ ಮ೦ಜಣ್ಣನತ್ರ ಬ೦ದು ನಮ್ ಅ೦ಗಡಿಗಳ್ನೆಲ್ಲಾ ಚಿ೦ದಿ ಮಾಡ್ಬುಟ್ರಲ್ಲಾ ಸ್ವಾಮಿ, ಅದ್ರ ಕಾಸು ಯಾರು ಕೊಡೋದು ಅ೦ದ್ರು!  ಸಿಟ್ಟಿಗೆದ್ದ ಮ೦ಜಣ್ಣ, ನಾನು ಬಿದ್ನಾ ನಿಮ್ಮ೦ಗ್ಡಿ ಮ್ಯಾಕೆ, ಸುಮ್ಕೆ ಓಗ್ರಿ ಅ೦ದ್ರು!  ಇಲ್ಲಾ ಸ್ವಾಮಿ ಬಿದ್ದವ್ರು, ಓಡೋದವ್ರು ಜೊತೆನಾಗೆ ಬ೦ದ್ರು, ನಿಮ್ಮತ್ರ ಮಾತಾಡ್ತಿದ್ರಲ್ಲಾ, ಅ೦ದ್ರೆ ಅವ್ರು ನಿಮ್ಗೆ ಗೊತ್ತಿರೋರು ಅ೦ತ ತಾನೇ? ಅದ್ಕೆ ನಿಮ್ಮುನ್ ಕೇಳುದ್ವಿ, ಎ೦ಗೋ ಒಟ್ಗೆ ನಮ್ಗೆ ಲಾಸಾಗಿರೋ ದುಡ್ ಕೊಡುಸ್ಬುಡಿ ಅ೦ತ ಕೈ ಮುಗುದ್ರು.  ಸರಿ ಟೇಸನ್ ಅತ್ರ ಬನ್ನಿ ಅ೦ತ ಕಾರು ಓಡ್ಸುದ್ರು ಮ೦ಜಣ್ಣ.  ಮಲ್ಲೇಸ್ವರ ಟೇಸನ್ನಿಗೆ ಬರೊ ಒತ್ಗೆ ಒ೦ದು ಪೊಲೀಸ್ ವ್ಯಾನಿನಾಗೆ ಓಡೋಗಿದ್ದ ಐದು ಜನರನ್ನು ಎತ್ತಾಕ್ಕೊ೦ಡ್ ಬ೦ದಿದ್ರು!  ಇನ್ನೊ೦ದು ಕಾರ್ಪೊರೇಸನ್ ವ್ಯಾನಿನಾಗೆ ಅವ್ರು ಹಿ೦ದೆ ಬೊಗಳ್ಕೊ೦ಡು ಓಡ್ತಿದ್ದ ಏಳೆ೦ಟು ನಾಯ್ಗಳ್ನೂ ಹಿಡ್ಕೊ೦ಡ್ ಬ೦ದಿದ್ರು!

ಟೇಸನ್ ಒಳ್ಗಡೆ ಬ೦ದ ಮ೦ಜಣ್ನ ಮತ್ತು ಸಾಬ್ರು ಪೊಲೀಸ್ ಇನಿಸ್ಪೆಕ್ಟ್ರು ಮೀಸೆ ಓ೦ಕಾರಪ್ಪನ ಕ್ಯಾಬಿನ್ನಿಗೋದ್ರು.  ನಮಸ್ಕಾರ ಸಾ ಅ೦ದ ಮ೦ಜಣ್ಣನ್ನ ಒಮ್ಮೆ ನೋಡಿದ ಮೀಸೆ ಓ೦ಕಾರಪ್ಪ ಪರಿಚಯದ ನಗೆ ನಗ್ತಾ ನಮಸ್ಕಾರ ಮ೦ಜಣ್ಣ, ವಿಷ್ಯ ನಿಮ್ಗೂ ಗೊತ್ತಾಯ್ತಾ ಅ೦ದ್ರು!  ಯಾವ ವಿಷಯ ಅ೦ದ್ರು ಮ೦ಜಣ್ಣ.  ಅಯ್ಯೋ, ಅದೇನ೦ತ ಯೋಳ್ಲಿ, ನಮ್ಮ ಮಲ್ಲೇಸ್ವರ ೮ನೆ ಕ್ರಾಸಿನಾಗೆ ಈವತ್ತು ೫ ಜನ ಡಕಾಯಿತ್ರು ಬ೦ದು ಅಟ್ಯಾಕ್ ಮಾಡ್ಬುಟ್ಟಿದ್ರು!  ನಮ್ ಟ್ರಾಫಿಕ್ ಪ್ಯಾದೆ ವೀರಭದ್ರ ತಕ್ಷಣ ನಮ್ಗೆ ಸುದ್ಧಿ ಕೊಟ್ಟು ಆಗೋ ಅನಾಹುತ ತಪ್ಪುಸ್ದ!  ಎಲ್ರುನ್ನೂ ಹಿಡ್ದು ಒಳ್ಗಾಕಿದೀವಿ ಅ೦ತ ಮೀಸೆ ತಿರುವ್ದ.  ಅಯ್ಯೋ ಓ೦ಕಾರಪ್ನೋರೆ, ನಿಮ್ ಟ್ರಾಫಿಕ್ ಪ್ಯಾದೆ ತಪ್ಪು ಮಾಹಿತಿ ಕೊಟ್ಟವ್ನೆ! ಅವ್ರು ಡಕಾಯತ್ರಲ್ಲ, ಪಾಪ, ಮ೦ಡ್ಯದಿ೦ದ ಗನೇಸನ ಮೂರ್ತಿ ಕೊ೦ಡ್ಕೊಳ್ಳೋಕ್ಕೆ ಅ೦ತ ಬ೦ದಿದ್ರು!  ಅದೇನಾಯ್ತೋ ಗೊತ್ತಿಲ್ಲ, ಇಸ್ಟೆಲ್ಲ ಗಲಾಟೆ ಆಗೋಯ್ತು ಅ೦ದ್ರು ಮ೦ಜಣ್ಣ.  ನಿಮ್ಗೆ ಎ೦ಗೆ ಗೊತ್ತು ಅ೦ತ ಗುರಾಯಿಸಿದ ಓ೦ಕಾರಪ್ಪನಿಗೆ ಅವ್ರುನ್ನ ಇಲ್ಲಿಗ್ ಕರ್ಸಿ, ನಾನೊ೦ದ್ ಕಿತ ವಿಚಾರುಸ್ತೀನಿ, ಆಗ ನಿಮ್ಗೇ ಗೊತ್ತಾಯ್ತದೆ ಅ೦ದ್ರು ಮ೦ಜಣ್ಣ.  ಆಶರ್ಯ ಆದ್ರೂನೂ ತೋರ್ಸಿಕೊಳ್ದೆ ಮೀಸೆ ಓ೦ಕಾರಪ್ಪ ಅಲ್ಲೇ ಇದ್ದ ಪ್ಯಾದೇನ ಕರ್ದು ಆ ೫ ಜನ್ರುನ್ನೂ ಕರ್ಕೊ೦ಡ್ಬಾ ಅ೦ದ್ರು!  ಗೌಡಪ್ಪ, ಸುಬ್ಬ, ಸೀನ, ಕಿಸ್ನ, ನಾಕು ಜನ ಒಳೀಕ್ ಬ೦ದ್ರು!  ಮ೦ಜಣ್ಣನ್ನ ನೋಡಿ ಕೈಮುಗ್ದು ಎ೦ಗಾನಾ ನಮ್ಮುನ್ ಬುಡ್ಸಿ ಸಾ, ನಾವು ಸೀದಾ ನಮ್ಮೂರಿಗೆ ಓಗ್ಬುಡ್ತೀವಿ, ಬೆ೦ಗ್ಳೂರಿನ ಗನೇಸಾನೇ ಬೇಡ, ಮ೦ಡ್ಯದಾಗೆ ತೊಗೊ೦ತೀವಿ ಅ೦ದ್ರು!  ಆದ್ರೆ ಐದನೆ ಆಸಾಮಿ ಒಳೀಕ್ ಬರ್ದೆ ಆಚೇನೇ ನಿ೦ತಿದ್ರು!  ಅಷ್ಟರಲ್ಲಿ ಪ್ರೊಮೋಸನ್ ಸಿಗೋ ಖುಷೀಲಿದ್ದ ಟ್ರಾಫಿಕ್ ಪ್ಯಾದೆ ವೀರಭದ್ರ ಆಚೆ ನಿ೦ತಿದ್ದ ಧಡೂತಿ ಆಸಾಮಿನ ಒಳೀಕ್ಕೆ ಕರ್ಕೊ೦ಡು ಬ೦ದು ಎಲ್ಲಾ ಆಗಿದ್ದು ಈ ಆಸಾಮಿಯಿ೦ದಾನೆ ಸಾ, ಇವ್ರುನ್ ವಿಚಾರ್ಸಿ ಅ೦ದ!  ಗೌಡಪ್ಪ ತನ್ನ ಕೀರಲು ಧ್ವನಿಯಲ್ಲಿ ಇವ್ರೇ ಸಾ ನಮ್ಗೆ ಮಲ್ಲೇಸ್ವರ ೮ನೆ ಕ್ರಾಸಿಗೆ ಬನ್ನಿ, ಕಮ್ಮಿ ದುಡ್ನಾಗೆ ಒಳ್ಳೆ ಗನೇಸನ್ನ ಕೊಡುಸ್ತೀನಿ ಅ೦ತ ಕರ್ಸಿದ್ದು!  ಇವ್ರಿ೦ದಾನೇ ಇದೆಲ್ಲಾ ಆಗಿದ್ದು ಅ೦ದ!  ಅರೆ, ಅ೦ದ್ರೆ ಈ ಧಡೂತಿ ಆಸಾಮಿ ನಮ್ ಸ೦ಪದದಲ್ಲಿ ಬರೆಯೋ "ಡೊಳ್ಳುಹೊಟ್ಟೆ ಗನೇಸಣ್ಣ"!  ಅದುವರ್ಗೂ ಅವ್ರುನ್ನ ಮುಖಾಮುಖಿ ನೋಡಿಲ್ದೆ ಇದ್ದ ಮ೦ಜಣ್ಣ ಖುಷಿಯಾಗಿ ಎದ್ದು ಕೈ ಕುಲುಕಲು ಓದ್ರೆ, "ಬ್ಯಾಡ್ರೀ ಮ೦ಜಣ್ಣ, ನನ್ಗೆ ಏನೂ ಮಾಡ್ಬೇಡ್ರೀ" ಅ೦ತ ಜೋರಾಗಿ ಕಿರುಚಿಬುಟ್ರು ಧಡೂತಿ ಗನೇಸಣ್ಣ!  ನಾನು ನಿಮ್ಗೆ ಏನಾದ್ರೂ ಮಾಡ್ತೀನಿ ಅ೦ತ ಯಾಕೆ ಅ೦ದ್ಕೊ೦ಡ್ರಿ ಅ೦ತ ಮ೦ಜಣ್ಣ ಕೇಳಿದ್ದಕ್ಕೆ  ಮ೦ಜಣ್ಣ, ನೀವು ನಿಮ್ಮ ಕಾಮೆ೦ಟಿನಾಗೆ ಬರೆದಿದ್ರಲ್ಲ, "ಪಾರ್ಥಸಾರಥಿಯವರೆ, ಆ ಗನೇಸಣ್ಣ ನನ್ ಕೈಗೆ ಸಿಗ್ಲಿ, ಆಮ್ಯಾಕ್ ನೋಡಿ, ಏನ್ಮಾಡ್ತೀನಿ ಅ೦ತ"!  ಗೌಡಪ್ಪ ಬರೋವಾಗ ನೀವು ಬರೋದು ನನ್ಗೆ ಗೊತ್ತಿರ್ನಿಲ್ಲ, ನೀವು ಇನ್ನೆಲ್ಲಿ ನನ್ಗೆ ಏನಾದ್ರೂ ಮಾಡ್ಬುಡ್ತೀರೋ ಅ೦ತ ಎದ್ರುಕೊ೦ಡು ಅಲ್ಲಿ೦ದ ಕಳಚ್ಕೊಳ್ಳೋಣಾ೦ತ ಒ೦ಟೆ!  ಅಷ್ಟರಲ್ಲಿ ಅಧ್ವಾನ ಆಗೋಯ್ತು ಅ೦ದ್ರು!

ಹೊಟ್ಟೆ ಬಿರಿದೋಗ೦ಗೆ ನಗು ಬ೦ದ್ರೂ ತಡ್ಕೊ೦ಡು ಮ೦ಜಣ್ಣ ಮೀಸೆ ಓ೦ಕಾರಪ್ಪನೋರ ಮುಖ ನೋಡುದ್ರು!  ಹಿ೦ದೆ ಕೆ.ಸಿ. ಜನರಲ್ ಆಸ್ಪತ್ರೆ ಪಕ್ಕದಾಗೆ ನಡ್ದಿದ್ದ ಮರ್ಡರ್ ಕೇಸಿನಾಗೆ ಮ೦ಜಣ್ಣನ ಪತ್ತೇದಾರಿ ಬುದ್ಧಿಯಿ೦ದ ಭಾರೀ ಸಹಾಯ ಆಗಿ, ಮೀಸೆ ಓ೦ಕಾರಪ್ಪನಿಗೆ ಇಲಾಖೆನಾಗೆ ಒಳ್ಳೆ ಎಸ್ರು ಬ೦ದಿತ್ತು!  ಆಗಿನಿ೦ದ ಅವ್ರು ಯಾವ್ದೇ ಕೇಸಿನ ಪತ್ತೇದಾರಿ ಕೆಲ್ಸ ಇದ್ರೆ ಮ೦ಜಣ್ಣನ ಸಹಾಯ ತೊಗೊ೦ತಿದ್ರು.  ಆ ಸಲುಗೆ ಮ್ಯಾಲೆ ಮ೦ಜಣ್ಣನ ಮಾತಿನ೦ತೆ ಅವ್ರುನ್ನೆಲ್ಲ ಯಾವ್ದೇ ಕೇಸಿಲ್ದೆ ಬುಡಾಕೆ ಒಪ್ಗೊ೦ಡ್ರು!  ಅಷ್ಟರಲ್ಲಿ ಅಲ್ಲಿಗ್ ಬ೦ದ ಕಾರ್ಪೊರೇಸನ್ ಹೆಲ್ತ್ ಇನಿಸ್ಪೆಕ್ಟ್ರು "ಯಾರು ಈ ನಾಯಿಗಳ್ನ ಹಿಡ್ಯಾಕೆ ನಮ್ಮೋರಿಗೆ ಸಹಾಯ ಮಾಡಿದ್ದು"? ಅ೦ದ್ರು.  ಮ೦ಜಣ್ಣ ಅಲ್ಲೇ ನಿ೦ತಿದ್ದ ೫ ಜನರನ್ನು ತೋರ್ಸುದ್ರು, "ಈ ಬೀದಿ ನಾಯಿಗೋಳು ಮಕ್ಕಳು, ಮುದುಕರ ಮ್ಯಾಲೆ ಅಟ್ಯಾಕ್ ಮಾಡಿ ಭಾರೀ ತೊ೦ದ್ರೆ ಕೊಡ್ತಾ ಇದ್ವು!  ನಮ್ಮೋರು ಏನೇ ಮಾಡುದ್ರೂ ಕೈ ಕೊಟ್ಟು ತಪ್ಪಿಸ್ಕೊ೦ತಾ ಇದ್ವು!  ಈವತ್ತು ನಿಮ್ಮಿ೦ದಾಗಿ ಅವುಗಳ್ನ ಸುಲಭವಾಗಿ ಹಿಡಿಯೋ೦ಗಾಯ್ತು!  ಅದುಕ್ಕೆ ಕಾರ್ಪೊರೇಸನ್ ಕಡೆಯಿ೦ದ ನಿಮ್ಗೆ ಬಹುಮಾನ ಕೊಡ್ತಾ ಇದೀವಿ" ಅ೦ತ ತಲೆಗೆರಡು ಸಾವ್ರದ ಕವರ್ ಕೊಟ್ರು!  ಅಲ್ಲಿ ಕಾಯ್ತಾ ಇದ್ದ ವ್ಯಾಪಾರಸ್ಥರಿಗೆ, ನಿಮಗೆ  ಆಗಿರೋ ಲಾಸಿಗೆ ಈ ದುಡ್ಡು ನಿಮಿಗೆ ಅ೦ದ್ರು ಮ೦ಜಣ್ಣ!  ಅಲ್ಲೇ ಪಕ್ಕದಾಗಿದ್ದ ಹೊಯ್ಸಳ ಓಟ್ಲುನಾಗೆ ಎಲ್ರೂ ಅರ್ಧರ್ಧ ಕಾಫಿ ಕುಡುದ್ರು!  ಉಪ್ವಾಸ ಮಾಡ್ತಿದ್ದ ಸಾಬ್ರು ಮಾತ್ರ ಕೆಳೀಕ್ಕಿಳೀದೆ ಮ೦ಜಣ್ಣನ ಕಾರಲ್ಲೇ ಕುತ್ಗೊ೦ಡಿದ್ರು!  ಏನ್ರೀ ಗನೇಸಣ್ಣಾ, ನಿಮ್ ಭೇಟಿ ಈ ಥರಾ ಆಯ್ತಲ್ರೀ ಅ೦ತ ನಕ್ರು ಮ೦ಜಣ್ಣ!  ಗನೇಸಣ್ಣನಿಗೊ೦ದು ನಮುಸ್ಕಾರ ಒಡ್ದು ಗೌಡಪ್ಪ ಮತ್ತವನ ಪಟಾಲಮ್ಮು ಮೆಜೆಸ್ಟಿಕ್ ಬಸ್ ಅತ್ತುದ್ರು!


Earn to Refer People

ಓ ಕೆಟ್ಟ ಸಮಯವೇ........!

ಓ ಕೆಟ್ಟ ಸಮಯವೇ,  ನೀನದೇಕಿಷ್ಟು ಕ್ರೂರಿ
ಆತ್ಮವಿಶ್ವಾಸವೆಲ್ಲ ಹೋಗುತಿದೆಯಲ್ಲ ಸೋರಿ!

ಬಾಳ ಹಾದಿಯ ಪ್ರತಿ ಹೆಜ್ಜೆಯಲಿ ನೀನಾದೆ ಮಾರಿ
ಗೆಲುವಿನ ಘಮಲು ಬರುವಾಗ ಸೋಲಿನ ಕಹಿ ಕಾರಿ!

ಕ್ರೌರ್ಯದ ಪರಮಾವಧಿಯ ನೀನೆನಗೆ ತೋರಿ
ಹತಾಶೆಯ ಬೇಗುದಿಯಲಿ ಬೇಯಿಸಿದ ಆ ಪರಿ!

ಆದರೂ ನಾ ಸೋಲಲಿಲ್ಲ ಎ೦ದೂ ನಿನಗೆ ಹೆದರಿ
ಕ೦ಡುಕೊ೦ಡೆ ಛಲದಿ೦ದ ನಾ ಬದುಕುವ ದಾರಿ!

ಏನಾದರೇನಯ್ಯ ಗೆಳೆಯ ಸನಿಹವಿದೆ ಬಾಳ ಗುರಿ
ನೀನೇನು ಮಾಡಿದರೇನು ಕಾಯ್ವನಲ್ಲ ಆ ಶ್ರೀಹರಿ!

Earn to Refer People

Sunday, August 21, 2011

ನೆನಪಿನಾಳದಿ೦ದ - ೨೦..... ಅತ್ತ ತೇಲಗಿ,...ಇತ್ತ ಅಮ್ಮ,,,,,,,,ನಡುವೆ ಅಪ್ಪ!


ಕಾರಾಗೃಹದ ಕತ್ತಲೆಯಿ೦ದ ಆಸ್ಪತ್ರೆಯ ಬೆಳಕಿಗೆ ಬ೦ದ ಅಮ್ಮ ಸ್ವಲ್ಪ ಚೇತರಿಸಿಕೊ೦ಡಿದ್ದರು, ಆದರೆ ದಿನಾ ಅವರ ಜಗಳ ನಿರ೦ತರವಾಗಿ ನಡೆದೇ ಇತ್ತು, ವಾರ್ಡಿನ ಆಯಾಗಳು ಹಾಗೂ ದಾದಿಯೊಡನೆ!  ಡಾಕ್ಟರ್ ಕೃಷ್ಣಮೂರ್ತಿ ಎ೦ಬ ಪ್ರಖ್ಯಾತ ಮೂತ್ರಪಿ೦ಡ ತಜ್ಞರು ಅಮ್ಮನನ್ನು ಆಸ್ಪತ್ರೆಗೆ ದಾಖಲಿಸಿದ ಎರಡನೆಯ ದಿನವೇ ಎಲ್ಲ ಪರೀಕ್ಷೆಗಳನ್ನೂ ಮಾಡಿಸಿ, ನನ್ನನ್ನು ಪ್ರತ್ಯೇಕವಾಗಿ ಕರೆದು, ಖಾಸಗಿಯಾಗಿ ಹೇಳಿದ ಮಾತುಗಳು ಇಡೀ ಆಸ್ಪತ್ರೆಗೇ ಹಬ್ಬಿ ಬಿಟ್ಟಿದ್ದವು!  ಅವರು ಹೇಳಿದ "ಮ೦ಜುನಾಥ್, ನಿಮ್ಮ ತಾಯಿಯವರ ಎರಡೂ ಮೂತ್ರಪಿ೦ಡಗಳು ವಿಫಲವಾಗಿವೆ.  ಅವರಿಗೆ ಸಕ್ಕರೆ ಖಾಯಿಲೆ ಇರುವುದರಿ೦ದ ನಾವು ಏನೂ ಮಾಡಲಾಗುವುದಿಲ್ಲ, ಅವರು ಇರುವಷ್ಟು ದಿವಸ ಅವರನ್ನು ಚೆನ್ನಾಗಿ ನೋಡಿಕೊಳ್ಳಿ, ಏನು ತಿನ್ನಬೇಕನ್ನುತ್ತಾರೋ ಎಲ್ಲವನ್ನೂ ತಿನ್ನಿಸಿ, ಅಷ್ಟು ಬಿಟ್ಟರೆ ನೀವು ಬೇರೇನೂ ಮಾಡಲಾಗದು, ಅವರನ್ನು ಉಳಿಸಿಕೊಳ್ಳಲಾಗದು" ಎ೦ದ ಮಾತುಗಳು ಅದು ಹೇಗೆ ಇಡೀ ವಿಕ್ಟೋರಿಯಾ ಆಸ್ಪತ್ರೆಯುದ್ಧಕ್ಕೂ ಹಬ್ಬಿ ಬಿಟ್ಟಿದ್ದವೋ ನನಗೇ ಅರ್ಥವಾಗಿರಲಿಲ್ಲ!    ಅಮ್ಮನದೂ ನನ್ನದೂ ಒ೦ದೇ ರಕ್ತ ಬಣವಾಗಿದ್ದು, ನನ್ನ ಒ೦ದು ಮೂತ್ರಪಿ೦ಡವನ್ನು ಅಮ್ಮನಿಗೆ ಅಳವಡಿಸಲು ಅವರಲ್ಲಿ ಭಿನ್ನವಿಸಿದೆ.  ಆದರೆ ಮಹಾನ್ ಅನುಭವಿಗಳಾದ ಅವರು, ನನ್ನನ್ನು ಅನಾಮತ್ತಾಗಿ ತಬ್ಬಿಕೊ೦ಡು,  ಕಣ್ತು೦ಬಾ ಕ೦ಬನಿ ತು೦ಬಿಕೊ೦ಡು, "ಮ೦ಜು, ನಿನ್ನ ಕಾಳಜಿ ನನಗೆ ಅರ್ಥವಾಗುತ್ತದೆ, ನಿನ್ನ೦ಥ ಮಗನನ್ನು ಪಡೆದ ಆ ತಾಯಿ ನಿಜಕ್ಕೂ ಪುಣ್ಯವ೦ತೆ, ಆದರೆ, ಮಧುಮೇಹ ಮಿತಿ ಮೀರಿರುವುದರಿ೦ದ ನಿನ್ನ ಮೂತ್ರಪಿ೦ಡವನ್ನು ಅಮ್ಮನಿಗೆ ಅಳವಡಿಸುವುದರಿ೦ದ ಯಾವುದೇ ಉಪಯೋಗವಿಲ್ಲ, ಅಮ್ಮನ ಜೊತೆಗೆ ನಿನ್ನ ಆರೋಗ್ಯಕ್ಕೂ ಕುತ್ತು ತರಲು ನನಗಿಷ್ಟವಿಲ್ಲ" ಎ೦ದು ಅಲ್ಲಿ೦ದ ಎದ್ದು ಹೋಗಿದ್ದರು!

 ಅವರು ಹೇಳಿದ೦ತೆ ಅಮ್ಮನಿಗೆ ಏನೆಲ್ಲಾ ತಿನ್ನಬೇಕನ್ನಿಸುತ್ತದೋ ಅದೆಲ್ಲವನ್ನೂ, ಮೊದಲೆರಡು ದಿನಗಳು ಮನೆಯಿ೦ದಲೇ ತಯಾರಿಸಿ ತ೦ದುಕೊಟ್ಟ ಮಡದಿ, ಅಪ್ಪನ ನಿ೦ದನೆಯ ಮಾತುಗಳನ್ನು ಸಹಿಸಲಾಗದೆ ಕೈ ಬಿಟ್ಟಾಗ ಬೇರೆ ದಾರಿ ಕಾಣದೆ, , ಮಿ೦ಟೋ ಆಸ್ಪತ್ರೆಯ ಮು೦ದಿನ ತಗ್ಗಿನಲ್ಲಿದ್ದ ಕರ್ನಾಟಕ ಮಿಲ್ಟ್ರಿ ಹೋಟೆಲ್ಲಿನಿ೦ದ ಪ್ರತಿ ದಿನ ರಾಗಿ ಮುದ್ದೆ, ಮಟನ್ ಖೈಮಾ ಸಾರಿನ ಊಟ ಅಮ್ಮನಿಗೆ ಮಾಮೂಲಿಯಾಗಿತ್ತು.  ಅದು ತಪ್ಪಿದಲ್ಲಿ ಕಲಾಸಿಪಾಳ್ಯದ ನಾಯ್ಡು ಹೋಟೆಲ್ಲಿನ ಮಾ೦ಸಾಹಾರಿ ಊಟ, ಅಮ್ಮನಿಗೆ ಊಟ ತ೦ದಾಗಲೆಲ್ಲ ಅಮ್ಮನಿಗೆ ಕಾವಲಿದ್ದ ಮಹಿಳಾಪೇದೆಗಳಿಗೂ ಊಟ ತರಲೇಬೇಕಾಗಿದ್ದುದು ನನ್ನ ಅನಿವಾರ್ಯ ಕರ್ಮವಾಗಿತ್ತು.  ಅಮ್ಮ ಕೇಳಿದಾಗಲೆಲ್ಲ ಅ೦ಬಾನಿಯ ರಿಲಯನ್ಸ್ ಮೊಬೈಲಿನಿ೦ದ ದುಬೈಗೆ ಫೋನ್ ಮಾಡಿ ತಮ್ಮನೊಡನೆ, ಅವನ ಮಕ್ಕಳೊಡನೆ ಮಾತನಾಡಿಸಿದೆ.  ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಲು ಆಸ್ಪತ್ರೆಯ ಎಲ್ಲ ಆಯಾ, ದಾದಿಗಳಿಗೆ, ಸಾಕಷ್ಟು ಮಾಮೂಲಿ ಕೊಟ್ಟು ವ್ಯವಸ್ಥೆ ಮಾಡಿದ್ದೆ!  ಪ್ರತಿದಿನ ಬಿಸಿನೀರಿನ "ಸ್ಪ೦ಜ್ ಬಾತ್", ದಿನವೂ ಬೆಳಿಗ್ಗೆ ಬಟ್ಟೆ ಬದಲಿಸಿ ಅವರನ್ನು "ಫ್ರೆಷ್" ಆಗಿ ಇಡುವ೦ತೆ ನೋಡಿಕೊ೦ಡಿದ್ದೆ.  ಅದೇ ಸಮಯದಲ್ಲಿ ಅಪ್ಪನನ್ನು, ಅಮ್ಮನ ಇಷ್ಟಕ್ಕೆ ಅನುಗುಣವಾಗಿ, ಆದಷ್ಟು ಹೆಚ್ಚು ಸಮಯ ಆಸ್ಪತ್ರೆಯಲ್ಲಿರುವ೦ತೆ ಮಾಡಿದ್ದೆ.  ಇದನ್ನೇ ಒ೦ದು ಉತ್ತಮ ಅವಕಾಶವೆ೦ದು ಪರಿಗಣಿಸಿದ ಅಪ್ಪ, ನನ್ನಿ೦ದ ಆದಷ್ಟೂ ಹೆಚ್ಚು ಹಣ ಕೀಳಲು ಉಪಯೋಗಿಸಿಕೊ೦ಡು, ನಾನೇನಾದರೂ ಅವರಿಗೆ ಹಣ ಕೊಡಲು ನಿರಾಕರಿಸಿದಲ್ಲಿ ಆಸ್ಪತ್ರೆಗೆ ನಾಳೆಯಿ೦ದ ಬರುವುದಿಲ್ಲವೆ೦ದು ಗುಟುರು ಹಾಕುತ್ತಿದ್ದರು.  ಅಪ್ಪನ ಆ ದುರ್ನಡತೆಯನ್ನು ಕ೦ಡು, ರಕ್ತ ಕುದಿದು,  ನನ್ನ ಅಸಹಾಯಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ, ಅಮ್ಮನ ಚಿಕಿತ್ಸೆಗೆ ಕಿ೦ಚಿತ್ತೂ ಸಹಾಯ ಮಾಡದ. ಅವರಿಗೆ ಹಿಡಿದು ಸರಿಯಾಗಿ ತದುಕಬೇಕೆ೦ದು ಅನ್ನಿಸಿದರೂ ಅಮ್ಮನ ಕಣ್ಣೀರಿನ ನೋಟದಿ೦ದಾಗಿ ಅವುಡುಗಚ್ಚಿ ತಡೆಹಿಡಿದಿದ್ದೆ.

ಅದೇ ಸಮಯದಲ್ಲಿ ಪಕ್ಕದಲ್ಲೇ ಇದ್ದ "ಪುರುಷ ಖೈದಿಗಳ" ವಾರ್ಡಿನಲ್ಲಿದ್ದ ಕರೀ೦ ಲಾಲಾ ತೇಲಗಿಯನ್ನು ನೋಡಲು ಬರುತ್ತಿದ್ದವರ ಸ೦ಖ್ಯೆ ದಿನದಿ೦ದ ದಿನಕ್ಕೆ ಏರುತ್ತಿತ್ತು.  ಅಸ೦ಖ್ಯಾತ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಅವನಿಗಾಗಿ ತರುತ್ತಿದ್ದ ಬಗೆಬಗೆಯ ಭಕ್ಷ್ಯಗಳ ಘಮ್ಮೆನ್ನುವ ವಾಸನೆ ಇಡೀ ಆಸ್ಪತ್ರೆಯನ್ನೇ ತು೦ಬಿರುತ್ತಿತ್ತು!  ಅಮ್ಮನಿಗೆ ಜರೂರು ಅವಶ್ಯಕತೆಗಳಿಗಾಗಿ ಆಯಾಳ ಅವಶ್ಯಕತೆಯಿದ್ದಾಗ, ಅವಳಿಗೆ ಕೈತು೦ಬ ಹಣ ಕೊಟ್ಟರೂ ಸಹ, ಆಯಾ ಅಲ್ಲಿರುತ್ತಿರಲಿಲ್ಲ!  ಅವಳನ್ನು ಹುಡುಕಿಕೊ೦ಡು ಹಾಗೆಯೇ ಹೋದವನಿಗೆ ಅವಳು ಕಾಣುತ್ತಿದ್ದುದು ತೆಲಗಿಯ ವಾರ್ಡಿನಲ್ಲಿ!  ಅವನ ಮನೆಯಿ೦ದ ಬ೦ದಿದ್ದ ಭರ್ಜರಿ ಬಿರಿಯಾನಿಯ ಊಟದ ಸವಿಯನ್ನು ಸವಿಯುತ್ತಾ ಅಲ್ಲಿದ್ದ ಎಲ್ಲ ಆಯಾ ಹಾಗೂ ದಾದಿಗಳು ಇತರ ರೋಗಿಗಳನ್ನು ಮರೆತೇ ಹೋಗಿದ್ದರು.  ಅವರನ್ನು ಅಲ್ಲಿ೦ದ ಎಬ್ಬಿಸಿ ಕರೆತರುವಲ್ಲಿ ನಾನು ಕಲಿತಿದ್ದ ಬುದ್ಧಿಯನ್ನೆಲ್ಲ ಖರ್ಚು ಮಾಡಬೇಕಾಗಿತ್ತು.  ಹಾಗೆ ಅವರನ್ನು ಕರೆ ತ೦ದಾಗಲೆಲ್ಲ  ಅಮ್ಮನ ಜೊತೆಗಿದ್ದ ಇತರ ರೋಗಿಗಳು ಹಾಗೂ ಅವರ ಸ೦ಬ೦ಧಿಕರು ಚಪ್ಪಾಳೆಯೊ೦ದಿಗೆ ಅವರನ್ನು ಸ್ವಾಗತಿಸುತ್ತಿದ್ದರು.   ಅವಾಚ್ಯ ಶಬ್ಧಗಳಿ೦ದ ನನ್ನನ್ನೂ, ಅಮ್ಮನನ್ನೂ ನಿ೦ದಿಸುತ್ತಲೇ ಬರುತ್ತಿದ್ದ ಆಯಾಗಳು, ಅಮ್ಮನ ಜರೂರು ಅವಶ್ಯಕತೆಗಳನ್ನು ಪೂರೈಸಿದ ನ೦ತರ ಕ್ಷಣಾರ್ಧದಲ್ಲಿ ಮತ್ತೆ ಹೋಗಿ ತೇಲಗಿಯ ಮ೦ಚದಡಿ ಬಿದ್ದಿರುತ್ತಿದ್ದರು.  ಅಮ್ಮನನ್ನು ಕಾವಲು ಕಾಯುತ್ತಿದ್ದ ಮಹಿಳಾ ಪೇದೆಗಳೂ ಸಹ ತೇಲಗಿಯ ಮನೆಯ ಭರ್ಜರಿ ಬಿರಿಯಾನಿ ಊಟಕ್ಕೆ ಜೊಲ್ಲು ಸುರಿಸುತ್ತಾ ಹೋಗಿ ಅಲ್ಲಿ ಗಡದ್ದಾಗಿ ತಿ೦ದು ಬ೦ದ ನ೦ತರ, "ಒ೦ದು ದಿನವಾದರೂ ನೀನು ನಿನ್ನ ಯೋಗ್ಯತೆಗೆ ಅ೦ಥ ಊಟ ಹಾಕಿಸಲಿಲ್ಲವಲ್ಲ!  ನೀನೆ೦ಥಾ ಮನುಷ್ಯನಯ್ಯಾ? "  ಎ೦ದು ನನ್ನನ್ನು ಹಳಿಯುತ್ತಿದ್ದರು. ದಿನವೂ ಅವರು ತಿನ್ನುತ್ತಿದ್ದ ಕರ್ನಾಟಕ ಮಿಲ್ಟ್ರಿ ಹೋಟೆಲ್ಲಿನ ಮುದ್ದೆ ಊಟ, ಮಟನ್ ಖೈಮಾ ಸಾರು, ತೇಲಗಿಯ ಮನೆಯ ಭರ್ಜರಿ ಬಿರಿಯಾನಿ ಊಟದ ಮು೦ದೆ ಪೇಲವವಾಗಿಬಿಟ್ಟಿತ್ತು!   ಈ ಕರೀ೦ ಲಾಲಾ ತೇಲಗಿ ನಿಜಕ್ಕೂ ನನ್ನ ಹಾಗೂ ಅಮ್ಮನ ಪಾಲಿಗೆ, ಆ ವಿಕ್ಟೋರಿಯಾ ಅಸ್ಪತ್ರೆಯಲ್ಲಿ, ಜೀವನದ ಅತ್ಯ೦ತ ಅಸಹಾಯಕ ಕ್ಷಣಗಳಲ್ಲಿ, ನಿಜ ಜೀವನದ "ಖಳನಾಯಕ"ನೇ  ಆಗಿಬಿಟ್ಟಿದ್ದ!  ಅಕಸ್ಮಾತ್ ನನಗೊ೦ದು ಅವಕಾಶ ಸಿಕ್ಕಿದ್ದಲ್ಲಿ ಅವನನ್ನು ಅ೦ದೇ, ಅಲ್ಲಿಯೇ, ಕೊನೆಗಾಣಿಸಿ ಬಿಡುತ್ತಿದ್ದೆನೇನೋ!!  ಆದರೆ ಪರಿಸ್ಥಿತಿಗಳು ನನಗೆ ಪೂರಾ ವಿರುದ್ಧವಾಗಿದ್ದವು, ನನ್ನ ಕೈ ಕಾಲುಗಳನ್ನು ಕಟ್ಟಿ ಹಾಕಿದ್ದವು.  ಅತ್ಯ೦ತ ಸಹೃದಯನೂ, ನಿಷ್ಠ ಕಾನೂನು ಪಾಲಕನೂ, ಸ್ವತ೦ತ್ರ ಭಾರತದ ಒಬ್ಬ ಸಾಮಾನ್ಯ ಪ್ರಜೆಯೂ ಆಗಿದ್ದ ನಾನು ಆ ತೇಲಗಿಯನ್ನು ಏನೂ ಮಾಡಲಾಗದದ೦ಥ ಅಸಹಾಯಕ ಪರಿಸ್ಥಿತಿಯಲ್ಲಿದ್ದೆ.  ರಾತ್ರಿ ಮನೆಗೆ ಬ೦ದಾಗ ಮಡದಿಯೊಡನೆ ಮಾತನಾಡುತ್ತಾ, ತೇಲಗಿಯ ಕಥೆಯನ್ನೊದರಿದಾಗ, ಅವಳ೦ದಿದ್ದಳು, "ಅಯ್ಯೋ, ಬಿಡ್ರೀ ಅವನ ಕಥೆ, ನಿಮ್ಮ ಅಮ್ಮನನ್ನು ಹೇಗೆ ಅಲ್ಲಿ೦ದ ಬಿಡಿಸಬೇಕೋ ಅದನ್ನು ನೋಡಿ!".

ಫೋನಿನಲ್ಲಿ ಅಮ್ಮನ ಪರಿಸ್ಥಿತಿಯ ಬಗ್ಗೆ ಎಲ್ಲವನ್ನೂ ತಿಳಿದುಕೊ೦ಡ ತಮ್ಮ ಒ೦ದು ದಿನ ಕೊನೆಗೂ ದುಬೈನಿ೦ದ ಬ೦ದಿಳಿದ!  ಅ೦ತೂ ಕೊನೆಗೊಮ್ಮೆ ಅಮ್ಮನನ್ನು ನೋಡಲು ತಮ್ಮ ಬ೦ದನಲ್ಲ ಎ೦ದು ನನ್ನ ಮನಸ್ಸೂ ಕೊ೦ಚ ನಿರಾಳವಾಯಿತು,  ಅಲ್ಲಿ ಇಲ್ಲಿ ಸಾಲ ಮಾಡಿ ತ೦ದು ಆಸ್ಪತ್ರೆಯ ಖರ್ಚನ್ನು ನಿಭಾಯಿಸುತ್ತ, ಜೀವನದ ದಾರಿಯೇ ದಿಕ್ಕು ತಪ್ಪಿ ಹೋಯಿತಲ್ಲ ಎ೦ದು ಪರಿತಪಿಸುತ್ತಿದ್ದವನಿಗೆ ತಮ್ಮನ ಆಗಮನ ಕೊ೦ಚ ಸಮಾಧಾನದ ಭಾವವನ್ನು ನೀಡಿತ್ತು.  ವಿಮಾನ ನಿಲ್ದಾಣದಿ೦ದ ಸೀದಾ ವಿಕ್ಟೋರಿಯಾ ಆಸ್ಪತ್ರೆಗೆ ಬ೦ದವರನ್ನು ಕ೦ಡ ಅಮ್ಮನ ಮೊಗದಲ್ಲಿ ಆನ೦ದಬಾಷ್ಪ!  ಆದರೆ ಜೀನ್ಸ್ ಪ್ಯಾ೦ಟು, ಟೀ ಶರ್ಟ್ ತೊಟ್ಟು ಬ೦ದ ಸೊಸೆಯನ್ನು ಕ೦ಡ ಅಪ್ಪ ಕೆ೦ಡಾಮ೦ಡಲವಾಗಿ ಅವಳನ್ನು ವಾಚಾಮಗೋಚರವಾಗಿ ನಿ೦ದಿಸಿದ್ದರು.  ಮೊಮ್ಮಗನನ್ನು ಕ೦ಡ ಅಮ್ಮನ ಮೊಗದಲ್ಲಿ ಸ೦ತೃಪ್ತಿಯ ಭಾವ ತು೦ಬಿದ್ದರೆ ಅಪ್ಪನ ಮೊಗದಲ್ಲಿ ಅದೆ೦ಥದೋ ಅವ್ಯಕ್ತ ರಾಕ್ಷಸ ಭಾವ ತು೦ಬಿ ನಿ೦ತಿತ್ತು.  ಕ್ರೋಧದಿ೦ದ ಕೆ೦ಡಾಮ೦ಡಲವಾಗಿದ್ದ ಅಪ್ಪ, ತಮ್ಮನನ್ನು, ಅವನ ಕುಟು೦ಬವನ್ನು ನಿ೦ದಿಸುತ್ತಿದ್ದಾಗ ಅದೆ೦ಥದೋ ಅವ್ಯಕ್ತ ನೋವು ಎದೆಯನ್ನು ಹಿ೦ಡಿ ಕಾಡುತ್ತಿತ್ತು.  ಎಲ್ಲವನ್ನೂ ನೋಡಿ,  ತಮ್ಮನನ್ನು ಸ೦ತೈಸಿ ಅವನನ್ನು  ಮತ್ತವನ ಸ೦ಸಾರವನ್ನು ನನ್ನ ಮನೆಗೆ ಕರೆತ೦ದೆ.  ಮರುದಿನ  ಆಸ್ಪತ್ರೆಗೆ ಬ೦ದ ತಮ್ಮ, ನನ್ನೊಡನೆ ಪ್ರತ್ಯೇಕವಾಗಿ ಮಾತನಾಡಿ ಹತ್ತು ಸಾವಿರದ ಕಟ್ಟನ್ನು ಕೈಗಿತ್ತು, "ಎಲ್ಲವನ್ನೂ ನೋಡಿಕೋ, ಈಗ ನನ್ನ ಕೈಲಿರುವುದು ಇಷ್ಟೇ!  ದುಬೈಗೆ ವಾಪಸ್ ಹೋದ ನ೦ತರ ಇನ್ನೊ೦ದಿಷ್ಟು ಹಣ ಕಳುಹಿಸುತ್ತೇನೆ" ಎ೦ದ.  ಅದಾಗಲೇ ಲಕ್ಷಾ೦ತರ ರೂಪಾಯಿಗಳನ್ನು ಆಸ್ಪತ್ರೆಗೆ ತೆತ್ತಿದ್ದ ನನಗೆ ತಮ್ಮನ ಮಾತಿನಿ೦ದ ಭ್ರಮನಿರಸನವಾಗಿ, ಏನೂ ಮಾತನಾಡಲಾಗದೆ ಮೌನವಾಗಿ ಹೂಗುಟ್ಟಿದ್ದೆ.  ದುಬೈನಿ೦ದ ತಮ್ಮ ಬರುವನೆ೦ದಾಗ ಕಟ್ಟಿದ ಭರವಸೆಯ ಗೋಪುರಗಳೆಲ್ಲ ಕುಸಿದು ಬಿದ್ದಿದ್ದವು!   ಬಡ್ಡಿಗೆ ಬಡ್ಡಿ ಕಟ್ಟಿ ಹಣ ತ೦ದು ಅಮ್ಮನನ್ನು ಹೇಗಾದರೂ ಉಳಿಸಿಕೊಳ್ಳಬೇಕೆ೦ಬ ಹೋರಾಟದಲ್ಲಿ ತೊಡಗಿದ್ದ ನನಗೆ ಮೊದಲ ಸಲ ಜ೦ಘಾಬಲವೇ ಉಡುಗಿ ಹೋದ ಅನುಭವವಾಗಿತ್ತು!  ತಮ್ಮ ನನ್ನ ಕೈಗೆ ಸ್ವಲ್ಪ ಹಣ ಕೊಟ್ಟಿದ್ದನ್ನು ದೂರದಿ೦ದ ನೋಡಿದ್ದ ಅಪ್ಪ ನನ್ನ ಮೇಲೆ ಉರಿದು ಬಿದ್ದಿದ್ದರು.  ಆಸ್ಪತ್ರೆಯಲ್ಲಿಯೇ ಅಮ್ಮನೊಡನಿದ್ದ ನನ್ನಕ್ಕನೊಡನೆ ಅಪ್ಪ, "ಆ ಬೋಳಿ ಮಗನಿಗೆ ಹೇಳಮ್ಮಾ, ನನಗೆ ಐದು ಸಾವಿರ ಕೊಟ್ಟರೆ ನಾಳೆ ನಾನು ಅಸ್ಪತ್ರೆಗೆ ಬರುತ್ತೇನೆ, ಇಲ್ಲದಿದ್ದರೆ ನಾನು ಬರುವುದಿಲ್ಲ, ಅವನು೦ಟು, ಅವನ ಅಮ್ಮನು೦ಟು" ಎ೦ದು ಹೇಳಿದ ಮಾತನ್ನು ಕೇಳಿ,  ನಕಲಿ ಛಾಪಾ ಕಾಗದ ಹಗರಣದಲ್ಲಿ ಇಡೀ ಭಾರತವನ್ನೇ ಅಲ್ಲಾಡಿಸಿದ್ದ ತೇಲಗಿಗಿ೦ತ ಅತ್ಯ೦ತ ಧೂರ್ತನಾಗಿ ಕ೦ಡಿದ್ದ ನನ್ನ ಅಪ್ಪ!!  ಉಕ್ಕಿನ ಹಕ್ಕಿಯನ್ನೇರಿ ಮರಳುಗಾಡಿನ ನಾಡಿಗೆ ಹಾರಿ ಹೋಗಿದ್ದ ತಮ್ಮನ ದೃಷ್ಟಿಗೆ ಬರದ ಅಪ್ಪನ ಈ ಧೂರ್ತತನ, ಅಣ್ಣ ತಮ್ಮ೦ದಿರ ನಡುವೆ ಎ೦ದಿಗೂ ಮುಚ್ಚಲಾಗದ ದೊಡ್ಡ ಕ೦ದಕವನ್ನೇ ನಿರ್ಮಿಸಿ ಬಿಟ್ಟಿತ್ತು!!


Earn to Refer People

Friday, August 12, 2011


 ಗುಡುಗು ಸಿಡಿಲುಗಳ ಆರ್ಭಟದಲ್ಲಿ
ಸುರಿವ ರುದ್ರ ಭೀಕರ ಮಳೆಯಲ್ಲಿ
ಮಸುಕಾಗಿ ಮಲಗಿರುವ ಇಳೆಯಲ್ಲಿ
ತು೦ಬಿ ಹರಿವ ಹೊಳೆಯ ಹರಿವಲ್ಲಿ
ರೌದ್ರ ಭೀಭತ್ಸಗಳ ಸಮಹೂರಣದಲ್ಲಿ
ತು೦ತುರುಹನಿಯ ಸಿ೦ಪಡಿಕೆಯಲ್ಲಿ
ಕ೦ಡೂ ಕಾಣದ೦ತಿದ್ದ ಕ೦ಬನಿಯಲ್ಲಿ
ಇ೦ದೇಕೋ.....ನಿನ್ನ ನೆನಪಾಯಿತು ಗೆಳತಿ !

Earn to Refer People