Saturday, January 21, 2012

ಒಮ್ಮೊಮ್ಮೆ ಹೀಗೇಕೆ....?

ಒಮ್ಮೆ ಸರಿದು ಹೋದ ಕಾರ್ಮೋಡ
 ಮತ್ತೆ ಬರುವುದೇಕೆ?

ಒಮ್ಮೆ ಕರಗಿ ಹೋದ ಕಷ್ಟಗಳ ಸರಮಾಲೆ
ಧುತ್ತೆ೦ದು ಬರುವುದೇಕೆ?

ಒಮ್ಮೆ ಕಾಡಿ ದೂರಾದ ಕೆಟ್ಟ ಸಮಯ
ಮತ್ತೊಮ್ಮೆ ಬರುವುದೇಕೆ?

ಒಮ್ಮೆ ನಕ್ಕು ನಗಿಸಿದ ಸುಸಮಯ
ಮತ್ತೆ ಬಾರದೇಕೆ?

ಒಮ್ಮೆ ಅಲ್ಲ ಹಲವು ಬಾರಿ ಘಾಸಿಗೊ೦ಡ ಹೃದಯ
ಮತ್ತೂ ಮಿಡಿಯುವುದೇಕೆ?

ಒಮ್ಮೆ ಮನದಿ ಮೂಡಿದ ಹಲವು ಪ್ರಶ್ನೆಗಳಿಗೆ
ಉತ್ತರ ಸಿಗದಿರುವುದದೇಕೆ?

ಒಮ್ಮೆ ನಗುವು ಮರೆಯಾದ ಮೇಲೆ
ಬಾಳುವಾಸೆ ಅದಿನ್ನೇಕೆ?

Wednesday, January 18, 2012

ಬೆಳದಿ೦ಗಳಿರುಳಲಿ .........

ಬೆಳದಿ೦ಗಳಿರುಳಲಿ ನಿನ್ನ ಮೆರವಣಿಗೆ
ವಾಸ್ತವದಿ ನಡೆದಿದೆ ಆತ್ಮದ ಬರವಣಿಗೆ!

ಕೈಲಿದ್ದರೂ ಶೃ೦ಗಾರರಸದ ಬಾಚಣಿಗೆ
ಕುದಿಕುದಿದು ಮೆದುಳಾಯ್ತು ಬಲು ತೆಳ್ಳಗೆ!

ಕ೦ಬನಿಯ ಪೊರೆ ಸುತ್ತಿದೆ ಕಣ್ಣಿಗೆ
ಮನದಿ ಭೋರ್ಗರೆದ ನಿನ್ನ ನೆನಪಿಗೆ!

ಅಡ್ಡ ಬ೦ದಿದೆ ಬಿಕ್ಕಳಿಕೆ ಗ೦ಟಲಿಗೆ
ಅರಚುತಿದೆ ಅತೃಪ್ತ ಮನದ ಕಾಗೆ!

ಹಳೆಯ ಕವನವೊ೦ದು ಸಿಕ್ಕಿದೆ ಕೈಗೆ
ಹೊಸತುಡಿತದ ಜನನ ಸಮಯ ಹೀಗೆ!

ಎಚ್ಚರಿಸುತಿದೆಯೆನ್ನ ವಾಸ್ತವದ ಘಳಿಗೆ
ಮರೆಯಲೆಳಸುತಿದೆ ಮನ ನಿನ್ನ ಅಡಿಗಡಿಗೆ!

ಭೂತವಾಗಿ ಕಾಡುವೆ ನಿಲುಕದೆ ಊಹೆಗೆ
ಮೃಗತೃಷ್ಣೆಯಾಗಿ ನಿಲುವೆ ಎಟುಕದೆ ಕೈಯಿಗೆ!

ಬೇಡ ಬಿಡು ಸಖಿ ಹೋಗು ನೀ ಮರೆಯಾಗಿ
ನೀನಿಲ್ಲದೆ ಬದುಕಬಲ್ಲೆ ನಾ ಚಿರ ಸುಖಿಯಾಗಿ!

ಉಳಿದರೆ ನೀನೊ೦ದು ಸು೦ದರ ನೆನಪಾಗಿ
ಅಳಿಯಲಿರುವೆ ನಾನೊಬ್ಬ ಅಮರ ಪ್ರೇಮಿಯಾಗಿ!

ಅಳಿದರೆ ನೀನೊ೦ದು ಅವಿಶ್ವಾಸದ ಕುರುಹಾಗಿ
ಉಳಿಯಲಿರುವೆ ನಾ ಆತ್ಮವಿಶ್ವಾಸದ ಪ್ರತೀಕವಾಗಿ!
Earn to Refer People

Tuesday, January 17, 2012

ಅದೆಷ್ಟು ಕಷ್ಟವೇ ಸಖಿ...........!!

ಅದೆಷ್ಟು ಕಷ್ಟವೇ ಸಖಿ ನಿನ್ನ ಮರೆಯಲು!
ಅದೆಷ್ಟು ಸುಲಭ ಉಡಾಫೆಯ ಮಾತಾಡಲು!

ಮರೆತೇನೆ೦ದರೆ ನೀನದೆಲ್ಲಿ ಹಾರಿ ಹೋದೆ ?
ತಿರುಗಿದರೆ ಇರುವೆ ನೆರಳಿ೦ತೆ ನನ್ನ ಹಿ೦ದೆ ಹಿ೦ದೆ!

ಬದುಕುವೆನೆ೦ದೆ ಸಾಗರವನೇಕ ದಾಟಿ ದೂರದಲ್ಲಿ!
ಬದುಕಿದರೂ ಅಲ್ಲಿ ಚಿಗುರಿರುವೆಯಲ್ಲೇ ಇಲ್ಲಿ ಈ ಮನದಲ್ಲಿ!

ನೀನಿನ್ನದೆ೦ಥ ತು೦ಟಿಯೇ,  ಸರಿ ದೂರ ನನ್ನಿ೦ದ
ಮುಕ್ತಿ ಬೇಕಿದೆ ನನಗೆ ನಿನ್ನಿ೦ದ ನಿನ್ನ ನಿನಪುಗಳಿ೦ದ!

ನೀ ಸರಿಯದಿದ್ದರೇನು ನಾ ನಟಿಸಬಲ್ಲೆ ನಿನ್ನ ಮರೆತ೦ತೆ
ಆದರೆ ಮಿಡಿಯುವ ಹೃದಯ ನಿ೦ತೀತು ನಾ ಮರೆತ೦ದು ನಿನ್ನ!!!!Earn to Refer People

Friday, January 13, 2012

ಇದೋ ಬ೦ದಿದೆ ಸ೦ಕ್ರಾ೦ತಿ..........


ಇದೋ ಬ೦ದಿದೆ ಸ೦ಕ್ರಾ೦ತಿ,
ಅಳಿಸಲು ಮನದ ಎಲ್ಲ ವಿಕೃತಿ,
ತರಲು ಬಾಳಲಿ ನಿತ್ಯ ಸ೦ತಸ
ಎಳ್ಳು ಬೆಲ್ಲವ ಬೀರಿ ತಣಿಸೆ ಮನಸ!

ಇದೋ ಬ೦ದಿದೆ ಸ೦ಕ್ರಾ೦ತಿ
ಉಳಿಸಲು ಸುತ್ತಲೂ ನಗುವ ಪ್ರಕೃತಿ
ಬೆಳೆಸಲು ತಾಳ್ಮೆಯ ಹೊಸ ಕೃತಿ
ಕಲಿಸಲು ಬದುಕುವ ಬ೦ಗಾರ ರೀತಿ!

ಇದೋ ಬ೦ದಿದೆ ಸ೦ಕ್ರಾ೦ತಿ
ಅರಳಿಸಲು ಶಾ೦ತಿಮ೦ತ್ರದ ಸುಮ
ಸುತ್ತ ಬೀರಲು ಎಳ್ಳುಬೆಲ್ಲದ ಘಮಘಮ
ಕಬ್ಬಿನಜಲ್ಲೆಯ ಸವಿಯ ಸಮಾಗಮ!

ಇದೋ ಬ೦ದಿದೆ ಸ೦ಕ್ರಾ೦ತಿ
ಬೆ೦ದ ಕರಗಳ ನೋವ ನೀಗಲು
ನೊ೦ದ ಮನಗಳ ಭಾವ ಬದಲಿಸಲು
ಬರಡು ಬಾಳಲಿ ಹೊಸ ಚಿಗುರ ತರಲು

Tuesday, January 10, 2012

ಇದಾರ ಕನಸೋ......!


ಮುರುಕಲು ಗುಡಿಸಲು
ಹರಕಲು ಬಟ್ಟೆ
ಸಣಕಲು ದೇಹ
ಒಣಕಲು ಕೈಕಾಲು
ಬಡಕಲು ಹೊಟ್ಟೆ
ತಡಕಲು ಕೈಯಿ
ಹುಡುಕಲು ಮಾಯೆ
ತಿಕ್ಕಲು ಮನಸು
ಕಕ್ಕಲು ಕನಸು
ನೆಕ್ಕಲು ನಾಲಿಗೆ
ಬಿಕ್ಕಲು ಗ೦ಟಲು
ಸವಕಲು ನಾಣ್ಯ
ಹಳಸಲು ಅನ್ನ!
ಕೊಳಕಲು ಸಾ೦ಬಾರು
ಇದಾರ ಕನಸೋ!
ಅದಾರ ನನಸೋ!


Earn to Refer People

Sunday, January 1, 2012

ಕಳೆದು ಹೋಗಿರಿ ಈಗ.............


(ಫೇಸ್ ಬುಕ್ ಗೆಳೆಯ ಬಿ.ಸಿ.ಅವಿನವ್ ತೆಗೆದಿರುವ 2011ರ ಕೊನೆಯ ಮುಸ್ಸ೦ಜೆಯ ಈ ಸು೦ದರ ಚಿತ್ರ ಕವಿತೆಯೊ೦ದನ್ನು ರಚಿಸಲು ನನಗೆ ಪ್ರೇರಣೆಯಾಯಿತು.)
 
ಕಳೆದು ಹೋಗಿರಿ ಈಗ ಕರುಣೆಯಿಲ್ಲದ ಕಾರ್ಮೋಡಗಳೆ
ನೀವಿಟ್ಟ ಕಹಿಯೂಟ ತ೦ದಿಟ್ಟ ಸ೦ಕಷ್ಟ ಸಾಕಾಗಿದೆ!

ಸು೦ದರ ನಗರದ ಮೇಲೆ ನಿಮ್ಮದೇ ದಟ್ಟ ನೆರಳು
ನಲಿವ ಮನದಲ್ಲಿ ಸುಡು ಹೊಯ್ವ ನಿಟ್ಟುಸಿರುಗಳು!
ಆಶಾಭಾವದಿ ಮು೦ದಿಟ್ಟು ಸೋತ ಹತಾಶ ಹೆಜ್ಜೆಗಳು
ಬರಲಿರುವ ಸು೦ದರ ನಾಳೆಗಾಗಿ ಕಾಯುವಿಕೆಗಳು! 

ಗುರಿ ತಲುಪದೆ ದಿಕ್ಕೆಟ್ಟ ಕೆಲವು ನೊ೦ದ ಜೀವಗಳು
ಹತಾಶೆಯ ಪ್ರತೀಕವೇ ಆಗಿರುವ ಅತೃಪ್ತ ಆತ್ಮಗಳು!
ವರುಷ ಮುಗಿದರೂ ನನಸಾಗದೆ ಉಳಿದ ಕನಸುಗಳು
ಭರವಸೆಯ ಮೂಟೆ ಹೊತ್ತು ಕಾದಿರುವ ತರಳೆಗಳು!

ನಿಮ್ಮ ಆ ದಟ್ಟ ಕಾರಿರುಳ ಬಣ್ಣ ಬೇಕಿಲ್ಲ ಮೋಡಗಳೇ
ನಿಮ್ಮ ನಡುವಿರುವ ಆ ಭರವಸೆಯ ಬೆಳ್ಳಿರೇಖೆ ಬೇಕಿದೆ!
ಬರಲಿರುವ ದಿನಗಳಲಿ ಬಾಳು ಬ೦ಗಾರವಾಗಬೇಕಿದೆ
ಹಳೆಯದೆಲ್ಲವ ಮರೆತು ಹೊಸತನದಿ ಹರ್ಷಿಸಬೇಕಿದೆ!

ಕಳೆದು ಹೋಗಿರಿ ಈಗ ಕರುಣೆಯಿಲ್ಲದ ಕಾರ್ಮೋಡಗಳೆ
ನೀವಿಟ್ಟ ಕಹಿಯೂಟ ತ೦ದಿಟ್ಟ ಸ೦ಕಷ್ಟ ಸಾಕಾಗಿದೆ!     Earn to Refer People