Saturday, December 20, 2014

ನೆನಪಿನಾಳದಿಂದ ೨೪: ಚಟ್ನಿ ಭೂತ!


ಮೈಸೂರಿನಲ್ಲಿ ಹುಟ್ಟಿ ಎಲ್ಲೋ ಬೆಳೆದು, ಇನ್ನೆಲ್ಲೋ ಓದಿ, ಮತ್ತೆಲ್ಲೋ ಬದುಕುತ್ತಿರುವ ನನ್ನ ಅಲೆಮಾರಿ ಬದುಕಿನಲ್ಲಿಯೂ ಕೆಲವು ಸ್ವಾರಸ್ಯಕರ ಘಟನೆಗಳು ಮನದಲ್ಲಿ ಅಚ್ಚ್ಚಳಿಯದೆ ನಿಂತಿವೆ.  ಒಮ್ಮೊಮ್ಮೆ ಧುತ್ತೆಂದು ಅವು ನೆನಪಾಗಿ ನಗಿಸುತ್ತವೆ, ನನ್ನಷ್ಟಕ್ಕೆ ನಾನೇ ಆ ಸ್ವಾರಸ್ಯಕರ ಘಟನೆಯನ್ನು ನೆನೆದು ನಗುತ್ತಿದ್ದರೆ ಪಕ್ಕದಲ್ಲಿರುವವರು ನನಗೇನಾದರೂ ಹುಚ್ಚು ಹಿಡಿಯಿತೇ ಅಥವಾ ಯಾವುದಾದರೂ ಮೋಹಿನಿ ಕಾಟ ಇರಬಹುದೇ ಎಂದು ಅಚ್ಚರಿಯಿಂದ ನನ್ನ ಮುಖವನ್ನೇ ನೋಡುವಂಥ ಸನ್ನಿವೇಶಗಳು ಸಾಕಷ್ಟು ಬಾರಿ ಸೃಷ್ಟಿಯಾಗಿವೆ.  ಈ ದಿನವೂ ಹಾಗೇ ಆಯಿತು.  ಬಿಸಿ ಬಿಸಿ ದೋಸೆ ಪುದೀನಾ ಚಟ್ನಿ ಮಾಡಿ ಆ ಸ್ವರ್ಗಸುಖವನ್ನು ಅನುಭವಿಸುತ್ತಿದ್ದರೆ ಇದ್ದಕ್ಕಿದ್ದಂತೆ ವರ್ಷಗಳ ಹಿಂದೆ ಮೈಸೂರಿನ ದಸರಾ ವಸ್ತು ಪ್ರದರ್ಶನದಲ್ಲಿ ನಡೆದ ಚಟ್ನಿ ಪ್ರಸಂಗ ನೆನಪಾಗಿ ಇದ್ದಕ್ಕಿದ್ದಂತೆ ನಗಲಾರಂಭಿಸಿದೆ!  ಬೆಳಗಿನ ಉಪಾಹಾರಕ್ಕೆ ನನಗೆ ಕಂಪನಿ ಕೊಡಲು ಬಂದಿದ್ದ ನನ್ನ ಪಕ್ಕದ ಫ್ಲಾಟಿನ ಗೆಳೆಯ ಗಾಭರಿಯಾಗಿ, ಏನಾಯ್ತು,ಯಾಕೆ? ಅಂತೆಲ್ಲಾ ಪ್ರಶ್ನೆಗಳನ್ನು ಕೇಳಲಾರಂಭಿಸಿದ!  ನನ್ನ ನಗುವಿಗೆ ಕಾರಣವಾದ ಆ ಹಳೆಯ ಘಟನೆಯನ್ನು ಅವನಿಗೆ ವಿವರಿಸಿದಾಗ ಅವನೂ ಬಿದ್ದು ಬಿದ್ದು ನಗತೊಡಗಿದ!  J

ಕೆಲವು ವರ್ಷಗಳ ಹಿಂದೆ ನನ್ನಕ್ಕನ ಮಗಳು ಮೈಸೂರಿನ ವಿವೇಕಾನಂದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಳು, ಒಬ್ಬ ತಮ್ಮನೂ ಅಲ್ಲೇ ಇದ್ದ, ಅವರನ್ನೂ ನೋಡಿಕೊಂಡು, ನನ್ನ ಹುಟ್ಟೂರಿನ ದಸರಾ ವೈಭವವನ್ನು ನೋಡಿದಂತಾಗುತ್ತದೆಂದು ಸಕುಟುಂಬ ಸಮೇತ ಮೈಸೂರಿಗೆ ಹೋಗಿದ್ದೆವು.  ದಸರಾ ಉತ್ಸವವನ್ನೆಲ್ಲಾ ನೋಡಿದ ನಂತರ ಒಂದು ದಿನ ದಸರಾ ವಸ್ತು ಪ್ರದರ್ಶನವನ್ನು ನೋಡಲು ಹೊರಟೆವು, ಎಲ್ಲಾ ಕಡೆ ಸುತ್ತು ಹೊಡೆದು ಸಾಕಾಗಿ ಕೊನೆಗೆ ಹೊಟ್ಟೆಗೇನಾದರೂ ಹಾಕಿಕೊಳ್ಳೋಣವೆಂದು ಹುಡುಕುತ್ತಿರುವಾಗ " ಮಲ್ಲಿಗೆ ಇಡ್ಲಿ"ಯ ಹೋಟೆಲ್ ಕಣ್ಣಿಗೆ ಬಿತ್ತು!  ಖಾಲಿಯಾಗಿದ್ದ ಹೊಟ್ಟೆ ತುಂಬಿಸುವುದರ ಜೊತೆಗೆ ಆ ಚಟ್ನಿಯ ರುಚಿಯನ್ನು ನೆನೆದು ನನ್ನ ಬಾಯಲ್ಲಿ ನೀರು ಸುರಿಯಲಾರಂಬಿಸಿತು!  ನನ್ನ ಕಿರಿಯ ತಮ್ಮ ಗೋಪಿ ಆಗಲೇ ನನ್ನನ್ನು  ಛೇಡಿಸಲಾರಂಭಿಸಿದ್ದ,,,"ಅಣ್ಣಾ,,,,ಆ ಹೋಟೆಲ್ಲಿನವನು ಇವತ್ತು ಸತ್ತ"!!:-)  ಇದಕ್ಕೆ ಹಿನ್ನೆಲೆಯೇನೆಂದು ಹೇಳಿ ಬಿಡುತ್ತೇನೆ ಕೇಳಿ, ನಮ್ಮ ಮನೆಯಲ್ಲಿ ಇಡ್ಲಿ, ದೋಸೆ,ಅಕ್ಕಿ ರೊಟ್ಟಿ ಮಾಡಿದರೆ ನನಗೆ ಹೊಟ್ಟೆಯಲ್ಲಿ ವಿಶೇಷವಾಗಿ "ಎಕ್ಸ್ಟ್ರಾ ಪ್ಲೇಸ್" ಕ್ರಿಯೇಟ್ ಆಗಿಬಿಡುತ್ತಿತ್ತು!  ಒಂದು ಡಜನ್ ಇಡ್ಲಿ, ದೋಸೆ, ರೊಟ್ಟಿಯಾದರೆ ಅರ್ಧ ಡಜನ್ ಅನಾಯಾಸವಾಗಿ ಒಳ ಸೇರುತ್ತಿದ್ದವು!  ಅದು ಹೇಗಾದರೂ ಇರಲಿ, ಮನೆಯಲ್ಲಿ ಉಳಿದವರ್ಯಾರಿಗೂ ಚಟ್ನಿ ಮಾತ್ರ ಉಳಿಯುತ್ತಿರಲಿಲ್ಲ!   ಮಾಡಿದ ಚಟ್ನಿಯೆಲ್ಲಾ ನನಗೊಬ್ಬನಿಗೇ ಸರಿ ಹೋಗಿ ಬಿಡುತ್ತಿತ್ತು!! ಉಳಿದವರು ಬರೀ ದೋಸೆ, ಇಡ್ಲಿ ತಿನ್ನಬೇಕಾಗುತ್ತಿತ್ತು ಅಥವಾ ಸಕ್ಕರೆಯೊಂದಿಗೋ ಉಪ್ಪಿನಕಾಯಿಯೊಂದಿಗೋ ಇಲ್ಲಾ ರಾತ್ರಿಯ ಸಾರು ಉಳಿದಿದ್ದರೆ ಅದರೊಂದಿಗೋ ತಿನ್ನಬೇಕಾಗುತ್ತಿತ್ತು!  ಹೀಗಾಗಿ ಎಲ್ಲರೂ ನನಗೆ "ಚಟ್ನಿಭೂತ" ಎನ್ನುವ ಅನ್ವರ್ಥಕ ನಾಮವನ್ನಿಟ್ಟಿದ್ದರು.:-)  ಬೆಳಗಿನ ತಿಂಡಿಗೆ ಮನೆಯಲ್ಲಿ  ಎಲ್ಲರೂ  ನನಗಿಂತ ಮುಂಚೆ ತಿಂಡಿ ತಿನ್ನಲು ಪೈಪೋಟಿಯಲ್ಲಿರುತ್ತಿದ್ದರು, ತಡವಾದವರಿಗೆ ಅಪ್ಪಿ ತಪ್ಪಿಯೂ ಚಟ್ನಿ ಸಿಗುತ್ತಿರಲಿಲ್ಲ!  ಯಾವುದೇ ಹೋಟೆಲ್ಲಿಗೆ ಹೋದರೂ ಸರಿ, ಎಲ್ಲರೂ ತಿಂದು ಮುಗಿಸಿದರೂ ನಾನು ಮಾತ್ರ ಕನಿಷ್ಠ ಆರು ಬಾರಿ ಚಟ್ನಿ ತರಿಸಿಕೊಳ್ಳುತ್ತಿದ್ದೆ!  ತಿಪಟೂರಿನಲ್ಲಿ, ಹೊಳೆನರಸೀಪುರದಲ್ಲಿ, ಮೈಸೂರಿನಲ್ಲಿ, ಬೆಂಗಳೂರಿನಲ್ಲಿ ನಾನು ದೋಸೆ ಅಥವಾ ಇಡ್ಲಿ ತಿನ್ನಲು ಹೋಗುತ್ತಿದ್ದ ಕೆಲವು ಹೋಟೆಲ್ಲುಗಳಲ್ಲಿ ನನ್ನ ಜೊತೆ ಜಗಳವಾಡದೆ ಇದ್ದ ಮಾಣಿಗಳೇ ಇರಲಿಲ್ಲ ಅಲ್ಲದೆ ನನ್ನನ್ನು ಕಂಡೊಡನೆ ಮಾಣಿಗಳು ನನಗೆ ಸಪ್ಲೈ ಮಾಡುವುದನ್ನು ತಪ್ಪಿಸಿಕೊಳ್ಳಲು ಏನಾದರೂ ಸಬೂಬು ಹೇಳಿ ಮಾಯವಾಗಿ ಬಿಡುತ್ತಿದ್ದರು!  ಇಂಥಾ ಕುಖ್ಯಾತಿಯಿದ್ದ ನನ್ನ ಕಣ್ಣಿಗೆ ಮೈಸೂರಿನ ದಸರಾ ವಸ್ತು ಪ್ರದರ್ಶನದ ಮೈದಾನದಲ್ಲಿ ಮಲ್ಲಿಗೆ ಇಡ್ಲಿಯ ಅಂಗಡಿಯ ಒಡೆಯ ಪರಮಶತ್ರುವಾದ ದಿನವದು!  J

ಏನಪ್ಪಾ,, ಏನು ನಿಮ್ಮ ಹೋಟೆಲ್ಲಿನ ಸ್ಪೆಷಲ್ ಅಂದ ನನ್ನನ್ನೊಮ್ಮೆ ಆತ್ಮೀಯತೆಯಿಂದ ನೋಡಿದ ತಳ್ಳುಗಾಡಿಯ ಒಡೆಯ ನನ್ನ ಜೊತೆಗಿದ್ದ ಹನ್ನೆರಡು ಮಂದಿಯನ್ನು ನೊಡಿ ಖುಷಿಯಾಗಿ ಒಳ್ಳೆಯ ವ್ಯಾಪಾರವಾಗುವ ಖುಷಿಯಲ್ಲಿ "ಮಲ್ಲಿಗೆ ಇಡ್ಲಿ, ದೋಸೆ, ಮೆಣಸಿನಕಾಯಿ ಬಜ್ಜಿ" ಅಂತೆಲ್ಲಾ ಪಟ್ಟಿ ಹೇಳತೊಡಗಿದ!  ಅದೆಲ್ಲಾ ಇರಲಿ, ನಿಮ್ಮ ಚಟ್ನಿ ಯಾವ ಥರದ್ದು ತೋರಿಸಿ ಅಂದವನಿಗೆ ದೊಡ್ಡ ಸ್ಟೀಲ್ ಬಕೆಟ್ಟಿನಲ್ಲಿದ್ದ "ಪುದೀನಾ ಚಟ್ನಿ"ಯನ್ನು ತೋರಿಸಿ "ನಂದು ಪೆಸಲ್ ಚಟ್ನಿ ಸಾ, ನೀವು ಒಂದ್ಸಲ ತಿಂದ್ರೆ ಮತ್ತೆ ಹುಡುಕ್ಕೊಂಡು ನಮ್ ಹೊಟ್ಲುಗೇ ಬರ್ತೀರಾ" ಅಂದ! ಸರಿ, ನಮ್ಮ ಗುಂಪಿನ ಕಡೆಗೆ ತಿರುಗಿ ಏನು ಬೇಕು ಅಂದೆ, ಎಲ್ರೂ ಮಲ್ಲಿಗೆ ಇಡ್ಲಿ, ಮೆಣಸಿನ ಕಾಯಿ ಬಜ್ಜಿ ಅಂದ್ರು!  ೧೩ ಪ್ಲೇಟ್ ಆರ್ಡರ್ ಮಾಡಿ ಮುಂದಿದ್ದ ಹುಲ್ಲು ಹಾಸಿನ ಮೇಲೆ ಕುಳಿತೆವು. ಮಾಣಿ ಖುಷಿಯಾಗಿ ತಟ್ಟೆಗಳನ್ನು ಹಿಡಿದು ತಂದ, ನನ್ನ ತಮ್ಮ ಗೋಪಿ ಮೊದಲು ಅಲ್ಲಿ ದೊಡ್ಡವರಿಗೆ ಕೊಡಪ್ಪಾ ಅಂದ!  ಮೊದಲನೆಯ ತಟ್ಟೆ ನನ್ನ ಕೈಗೆ ಬಂದಿತ್ತು, ಪುದೀನಾ ಚಟ್ನಿಯ ಘಮಲು ಆಗಲೇ ನನ್ನ ಜಿಹ್ವೆಯನ್ನು ಕೆರಳಿಸಿ ಸಿಕ್ಕಾಪಟ್ಟೆ ಚಟ್ನಿ ಸ್ವಾಹಾ ಮಾಡುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದೇ ಬಿಟ್ಟಿತ್ತು!  ಅವನು ಇನ್ನೂ ಎರಡು ತಟ್ಟೆಗಳನ್ನು ಕೊಟ್ಟಿರಲಿಲ್ಲ, ನಾನು ಮಾಣಿಯನ್ನು ಕೂಗಿದೆ, ಸ್ವಲ್ಪ ಚಟ್ನಿ ತೊಗೊಂಡ್ ಬಾರಪ್ಪಾ,  ಅವನು ಬಹಳ ಗೌರವದಿಂದ ಬಂದೆ ಸಾ ಅಂದು ಚಟ್ನಿ ತಂದು ಎರಡು ಚಮಚ ಹಾಕಿದ,,,ಇನ್ನೂ ಸ್ವಲ್ಪ ಹಾಕು ಅಂದೆ,  ಹಾಕಿದ!  ಅವನು ಮತ್ತೆ ಮೂವರಿಗೆ ತಟ್ಟೆ ಕೊಡುವಷ್ಟರಲ್ಲಿ ಮತ್ತೆ ನನ್ನ ಕೂಗು,, ಚಟ್ನಿ ತಾರಪ್ಪಾ,,,ತಂದು ಮತ್ತೆರಡು ಚಮಚ ಹಾಕಿ ಹೋದ,  ರುಚಿಯಾಗಿದ್ದ ಚಟ್ನಿಯನ್ನು ನಾನು ಬಹಳ ಕಡಿಮೆ ಇಡ್ಲಿಯ ಜೊತೆಗೆ ಚಪ್ಪರಿಸತೊಡಗಿದೆ! ಅವನು ಮತ್ತಿಬ್ಬರಿಗೆ ತಟ್ಟೆ ಕೊಡುವುದರಲ್ಲಿ ನಾನು ಮತ್ತೆ ಕೂಗಿದೆ, ಚಟ್ನಿ ತಾರಪ್ಪಾ,,,ಈ ಬಾರಿ ಆ ಹುಡುಗನಿಗೆ ಯಾಕೋ ನನ್ನ ಮೇಲೆ ಅನುಮಾನ ಬಂದಂತಿತ್ತು, ನಾನೇನು ಚಟ್ನಿ ತಿನ್ನುತ್ತಿದ್ದೆನೋ ಅಥವಾ ಕೆಳಗೆ ಚಲ್ಲಿ ಮತ್ತೆ ಮತ್ತೆ ಸುಮ್ಮನೆ ಕರೆಯುತ್ತಿದ್ದೀನೋ ಎಂದು!  ಬಂದು ಎರಡು ಚಮಚ ಚಟ್ನಿ ಹಾಕಿದವನು ಸೂಕ್ಷ್ಮವಾಗಿ ನನ್ನ ಸುತ್ತಲಿನ ಜಾಗವನ್ನು ಪರೀಕ್ಷಿಸಿದ, ಆದರೆ ಅಲ್ಲಿ ಒಂಚೂರೂ ಚಟ್ನಿ ಚೆಲ್ಲಿರಲಿಲ್ಲ!

ಇಷ್ಟೊತ್ತಿಗಾಗಲೇ ನನ್ನ ಕುಟುಂಬದವರೆಲ್ಲಾ ತಮ್ಮತಮ್ಮಲ್ಲೇ  ಮಾತಾಡುತ್ತಾ ಮುಸಿ ಮುಸಿ ನಗಲಾರಂಭಿಸಿದ್ದರು! ಮಾಣಿಗೋ ಬೇರೇಯವರಿಗೆ ಇಡ್ಲಿ ಮಾರುವ ಆತುರ,,ಆದರೆ ಅವನಿಗೆ  ನಮ್ಮ ಗುಂಪಿಗೆ ಚಟ್ನಿ ಸಪ್ಲೈ ಮಾಡುವುದರಲ್ಲಿಯೇ ತುಂಬಾ ಸಮಯ ಹೋಗುತ್ತಿತ್ತು! ಕೊನೆಯದಾಗಿ ಇಡ್ಲಿಯ ತಟ್ಟೆ ಸಿಕ್ಕಿದ್ದು ನನ್ನ ಮಗನಿಗೆ, ಅವನು ಜಾಸ್ತಿ ಚಟ್ನಿ ತಿನ್ನುತ್ತಿರಲಿಲ್ಲವಾಗಿ ಅವನಿಗೆ ಕೊನೆಯಲ್ಲಿ ಕೊಡುವಂತೆ ಹೇಳಿ ಉಳಿದವರೆಲ್ಲಾ ತಮಾಷೆ ನೋಡುತ್ತಾ ತಾವೂ ಸಹ ತಮ್ಮ ಕೈಲಿ,,ಅಲ್ಲಲ್ಲ,,,ಬಾಯಲ್ಲಾದಷ್ಟು ಹೆಚ್ಚು ಚಟ್ನಿ ತಿನ್ನಲು ಪ್ರಯತ್ನಿಸುತ್ತಿದ್ದರು!  ಎಲ್ಲರೂ ಒಂದು ಮಲ್ಲಿಗೆ ಇಡ್ಲಿ, ಜೊತೆಗೆ ಒಂದು ಮೆಣಸಿನಕಾಯಿ ಬೋಂಡಾ ತಿನ್ನುವಷ್ಟರಲ್ಲಿ ಸುಸ್ತಾಗಿದ್ದರು, ಪ್ರತಿಯೊಬ್ಬರೂ ೨-೩ ಬಾರಿ ಚಟ್ನಿ ಹಾಕಿಸಿಕೊಂಡಿದ್ದರು,,ಆದರೆ,,,,,,ನಾನು ಮಾತ್ರ ಮಗುಮ್ಮಾಗಿ ಅರ್ಧ ಡಜನ್ ಇಡ್ಲಿ ಜೊತೆಗೆ ಮೂರು ಮೆಣಸಿನಕಾಯಿ ಬಜ್ಜಿ ತಿಂದಿದ್ದೆ,,,,ಜೊತೆಗೆ ಏನಿಲ್ಲವೆಂದರೂ ೧೫ಕ್ಕಿಂತ ಹೆಚ್ಚು ಬಾರಿ ಚಟ್ನಿ,,,,ಚಟ್ನಿ ಎಂದು ಕೂಗಿ ಕರೆದು ಚಟ್ನಿ ಹಾಕಿಸಿಕೊಂಡಿದ್ದೆ!  ಸುಸ್ತಾದ ಮಾಣಿ ಕೊನೆಗೆ ಚಟ್ನಿಯ ಸ್ಟೀಲ್ ಬಕೆಟ್ಟನ್ನೇ ತಂದು ನನ್ನ ಪಕ್ಕದಲ್ಲಿಟ್ಟು ಬಿಟ್ಟಿದ್ದ!  ನಾನಂತೂ ನನಗೆ ಸಮಾಧಾನವಾಗುವಷ್ಟು,,,,ನನ್ನ ಜಿಹ್ವಾಚಾಪಲ್ಯ ತಣಿಯುವಷ್ಟು ಚಟ್ನಿಯನ್ನು ಗಡದ್ದಾಗಿ ಬಾರಿಸಿದ್ದೆ!  ಆ ಚಟ್ನಿಯ ಖಾರದ ಮಹಿಮೆಯೋ,,,,ಅಥವಾ ಸರಿಯಾಗಿ ಬಾರಿಸಿದ್ದ ಇಡ್ಲಿಗಳ ಮಹಿಮೆಯೋ ಅಥವಾ ಸುತ್ತಾಡಿ ಬಂದಿದ್ದ ಆಯಾಸವೋ,,,,,,,,ಅನಾಯಾಸವಾಗಿ ಅಲ್ಲೇ ನಿದ್ರೆಗೆ ಜಾರಿದ್ದೆ!  ಒಂದರ್ಧ ಘಂಟೆ ಒಳ್ಳೆಯ ನಿದ್ದೆಯ ನಂತರ ಎದ್ದು ನೋಡಿದರೆ ನಮ್ಮ ಕುಟುಂಬದವರೆಲ್ಲಾ ಅವರವರ ಮಾತುಕತೆಯಲ್ಲಿ ಮುಳುಗಿ ಹೋಗಿದ್ದರು!  ಎಷ್ಟಾಯ್ತಪ್ಪಾ ಬಿಲ್ಲು ಅಂದರೆ ನನ್ನನ್ನೊಮ್ಮೆ ಕೆಕ್ಕರಿಸಿ ನೋಡಿದ ಹೋಟೆಲ್ ಒಡೆಯ ಗದರುವ ಧ್ವನಿಯಲ್ಲಿ ಇನ್ನೂರೈವತ್ತು ಅಂದ!  ಹಣ ಕೊಡಲು ಹೋದಾಗ ನನಗೊಮ್ಮೆ ಕೈ ಮುಗಿದು “ಇನ್ನೊಂದ್ಸಲ ನಮ್ ಹೋಟ್ಲಿಗೆ ಮಾತ್ರ ಬರಬೇಡಿ ಸಾ,,ನಿಮ್ಮಂಥೋರು ನಾಕು ಜನ ಬಂದ್ರೆ ನಾನು ಬರ್ಬಾದಾಗೋದು ಗ್ಯಾರಂಟಿ” ಅಂದ!  ನನಗೆ ರಪ್ಪಂತ ಕೆನ್ನೆಗೆ ಹೊಡೆದಂತಾಗಿತ್ತು,, ಆದರೂ ಸಾವರಿಸಿಕೊಂಡು ಅವನನ್ನೊಮ್ಮೆ ದುರುಗುಟ್ಟಿ ನೋಡಿ ಅಲ್ಲಿಂದ ಹೊರಟೆ!  ನನ್ನ ಹಿಂದೆ ನನ್ನ ಕುಟುಂಬದವರೆಲ್ಲಾ ಮುಸುಮುಸನೆ ನಗುತ್ತಿದ್ದರು. J J J