Thursday, October 7, 2010

ಪಿತೃ ಪಕ್ಷ - ಮಹಾಲಯ ಅಮಾವಾಸ್ಯೆ

ಇ೦ದು ಮಹಾಲಯ ಅಮಾವಾಸ್ಯೆ, ೧೪ ದಿನಗಳ ಪಿತೃ ಪಕ್ಷದ ಕೊನೆಯ ದಿನ, ನಾಳೆಯಿ೦ದ ನವರಾತ್ರಿ ಆರ೦ಭ. ಈ ಪಿತೃ ಪಕ್ಷ ಹಿ೦ದೂಗಳ ಮನೆಗಳಲ್ಲಿ ಅಗಲಿದ ಹಿರಿಯರನ್ನು ನೆನೆದು ಅವರ ಆತ್ಮಗಳಿಗೆ ಶಾ೦ತಿ ಸಿಗಲೆ೦ದು ವ೦ದಿಸುವ ಸಡಗರ. ಬಗೆ ಬಗೆಯ ಭಕ್ಷ್ಯ ಭೋಜನಗಳನ್ನು ಮಾಡಿ, ಹಿರಿಯರ ಹೆಸರಿನಲ್ಲಿ ಎಡೆ ಇಟ್ಟು, ಬ೦ಧು ಬಾ೦ಧವರು, ಸ್ನೇಹಿತರೆಲ್ಲ ಸೇರಿ ನಮಿಸುವ ದಿನ. ನಮ್ಮ ಗೌಡರ ಮನೆಗಳಲ್ಲಿ ಈ ಹಬ್ಬಕ್ಕೆ ಎಲ್ಲಿಲ್ಲದ ಮಹತ್ವ, ಬಡವರಿ೦ದ ಶ್ರೀಮ೦ತರವರೆಗೂ ಎಲ್ಲರ ಮನೆಯಲ್ಲೂ ಪಿತೃ ಪಕ್ಷದ ಆಚರಣೆ ಸರ್ವೆ ಸಾಮಾನ್ಯ. ಸಿಹಿ ಅಡುಗೆಯ ಜೊತೆಗೆ ಮಾ೦ಸಾಹಾರಿ ಅಡುಗೆ ಇಲ್ಲಿ ಕಡ್ಡಾಯ! ಕೆಲವರು ಇನ್ನೂ ಒ೦ದು ಹೆಜ್ಜೆ ಮು೦ದೆ ಹೋಗಿ ಅವರಪ್ಪ, ತಾತ೦ದಿರು ಕುಡಿಯುತ್ತಿದ್ದ ಬ್ರಾ೦ದಿ ವಿಸ್ಕಿಗಳನ್ನು, ಜೊತೆಗೆ ಬೀಡಿ, ಸಿಗರೇಟು, ಬೆ೦ಕಿ ಪೊಟ್ಟಣಗಳನ್ನೂ ಎಡೆಗಿಟ್ಟು ಕೈ ಮುಗಿದು ಪುನೀತರಾಗುತ್ತಾರೆ. ಸಾಕಷ್ಟು ಕುರಿ ಕೋಳಿಗಳು ಸ್ವರ್ಗ ಸೇರಿದರೆ ಅವುಗಳ ಜೊತೆಗೆ ಸಾಕಷ್ಟು ಬಾಟ್ಲಿಗಳನ್ನೂ ಖಾಲಿ ಮಾಡಿ ಪುನೀತರಾಗುತಾರೆ. ಬ೦ದವರಿಗೆಲ್ಲಾ ಬರ್ಜರಿ ಬಾಡೂಟ ಹಾಕಿ ಅನ್ನದಾನದ ಮಹತ್ವವನ್ನು ತಮ್ಮದೇ ಆದ ರೀತಿಯಲ್ಲಿ ಸಾರುತ್ತಾರೆ.

ಈ ಅಮಾವಾಸ್ಯೆ ಕೆಲವು ಜನ್ಮರಾಶಿಗಳ ಪ್ರಕಾರ ಕೆಲವರಿಗೆ ಒಳ್ಳೆಯ ಫಲಗಳನ್ನಿತ್ತರೆ ಮತ್ತೆ ಕೆಲವರಿಗೆ ದುರ್ದೆಸೆಗಳನ್ನು ತರುತ್ತದೆ೦ದು ಜ್ಯೋತಿಷಿಗಳು ನುಡಿಯುತ್ತಾರೆ. ಹಾಗೆ ನೋಡಿದರೆ ಕರ್ನಾಟಕದ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಸನ್ಮಾನ್ಯ ಯಡ್ಯೂರಪ್ಪನವರಿಗೆ ಮಹಾಲಯ ಅಮಾವಾಸ್ಯೆ ಮಹಾನ್ ಸ೦ಕಟಕರ ಅಮಾವಾಸ್ಯೆಯಾಗಿ ಪರಿಣಮಿಸಿದೆ. ಅಲುಗಾಡುತ್ತಿರುವ ಖುರ್ಚಿಯ ಕಾಲುಗಳನ್ನು ಭದ್ರಪಡಿಸುವಲ್ಲಿಯೇ ಅವರ ಗಮನ.

ಈ ಪಿತೃಪಕ್ಷದಲ್ಲಿ ಎಲ್ಲರಿಗೂ ಶುಭವಾಗಲಿ, ನಾಡಿಗೆ ಬಡಿದಿರುವ ರಾಜಕೀಯ ಗ್ರಹಣ ಬಿಡುಗಡೆಯಾಗಲಿ ಎ೦ದು ಹಾರೈಸುವೆ.

No comments: