Sunday, August 2, 2015

ಗೆಳೆಯರ ದಿನದ ಅಗಣಿತ ಲಹರಿಗಳಲಿ,,,,,,,,,,,,,,,,,




ಆಗ ನಾವು ತಿಪಟೂರಿನ  ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದೆವು, ಸರ್ಕಾರಿ ನೌಕರಿಯಲ್ಲಿದ್ದವರ ಎಲ್ಲ ಮಕ್ಕಳ ಹಾಗೆ ನಾನೂ ಕೂಡ ಅಲೆಮಾರಿಯಂತೆ ಎಲ್ಲಿಂದಲೋ ಬಂದು ಅಲ್ಲಿ ೮ನೆಯ ತರಗತಿಗೆ ಸೇರಿದ್ದೆ.   ನನಗೆ ಯಾವ ಹುಡುಗರೂ ಪರಿಚಯವಿರಲಿಲ್ಲ, ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು, ಆದರೂ ಆಟವಾಡುವ ವಯಸ್ಸಲ್ಲವೇ?  ಆಟವಾಡುತ್ತಾಡುತ್ತಾ ಮಾತುಗಳನ್ನಾಡುತ್ತಾಡುತ್ತಾ ಒಬ್ಬರಿಗೊಬ್ಬರು ಹತ್ತಿರವಾಗಿದ್ದೆವು, ಸುಮಾರು ೪೫ ಜನರಿದ್ದ ನಮ್ಮ ತರಗತಿಯಲ್ಲಿ ಎಲ್ಲರಿಗಿಂತ ನನಗೆ ಹೆಚ್ಚು ಆತ್ಮೀಯನಾದವನು ಇನಾಯತ್, ಮುಸ್ಲಿಮನಾದರೂ ನನ್ನ ಒಡ ಹುಟ್ಟಿದವನಿಗಿಂತ ಹೆಚ್ಚಾಗಿ ನನ್ನ ಆತ್ಮಸಖನಾದವನು.  ತಾಯಿಯಿಲ್ಲದ ಅವನಿಗೆ ತಂದೆಯ ಪ್ರೀತಿಯೂ ಇರಲಿಲ್ಲ, ಚಿಕ್ಕಮ್ಮ ಮತ್ತವಳ ಮಕ್ಕಳು ಮನೆಯಲ್ಲಿ ಜೋರು ಮಾಡುತ್ತಿದ್ದರೆ ಇವನು ಮೂಕನಾಗಿರುತ್ತಿದ್ದ.  ಅಂತರ್ಮುಖಿಯಾಗಿದ್ದ ಅವನು ಮಾತನಾಡುತ್ತಿದ್ದುದು ಕಡಿಮೆಯೇ, ಆದರೆ ನನ್ನ ಸಾಂಗತ್ಯದಲ್ಲಿ ಒಗ್ಗಿಕೊಂಡ ನಂತರ ಮನಬಿಚ್ಚಿ ಮಾತನಾಡುತ್ತಿದ್ದ.  ಮಧ್ಯಾಹ್ನದ ಊಟದ ಬಿಡುವಿನಲ್ಲಿ ಇಬ್ಬರೂ ಜೊತೆಯಲ್ಲಿಯೇ ಊಟ ಮಾಡುತ್ತಿದ್ದೆವು, ಕಬಡ್ಡಿ ತಂಡದಲ್ಲಿ ನಾವಿಬ್ಬರೂ ಇದ್ದರೆ ಎದುರಾಳಿ ತಂಡದವರು ಗೆಲ್ಲಲು ಅಸಾಧ್ಯವಾಗಿತ್ತು.  ಹೀಗೆಯೇ ಬೆಳೆದು ಗಟ್ಟಿಯಾದ ನಮ್ಮ ಸ್ನೇಹ ಹೆಮ್ಮರವಾಗಿತ್ತು, ಮೀಸೆ ಮೂಡುತ್ತಿದ್ದ ಆ ದಿನಗಳಲ್ಲಿಯೇ ಶಾಲೆಗೆ ಚಕ್ಕರ್ ಹೊಡೆದು ಸಿನಿಮಾ ನೋಡುತ್ತಿದ್ದೆವು, ನಮ್ಮ ಸೈಕಲ್ಲುಗಳನ್ನೇರಿ ಸಿಕ್ಕ ಸಿಕ್ಕಲ್ಲಿ ಸುತ್ತು ಹೊಡೆಯುತ್ತಿದ್ದೆವು.   

ಪ್ರೌಢಶಾಲೆಯನ್ನು ದಾಟಿ ಕಾಲೇಜಿಗೆ ಬಂದ ನಂತರವಂತೂ ನಾವು ಆಡದ ಆಟವೇ ಇರಲಿಲ್ಲ!  ಜೊತೆಯ ಹುಡುಗಿಯರನ್ನು ರೇಗಿಸುವುದು, ಕಥೆ ಕವನ ಪ್ರಬಂಧ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು, ಎನ್.ಸಿ.ಸಿ. ತರಬೇತಿಯಲ್ಲಿ ಭಾಗವಹಿಸಿ ಎಲ್ಲ ತರಬೇತಿ ಶಿಬಿರಗಳನ್ನು ಯಶಸ್ವಿಯಾಗಿ ಮುಗಿಸಿ "ಸಿ" ಸರ್ಟಿಫಿಕೇಟ್ ಪಡೆದಿದ್ದೆವು. ಸೈಕಲ್ ಯಾತ್ರೆಗಳಲ್ಲಿ ಭಾಗವಹಿಸಿ ಕರ್ನಾಟಕವನ್ನೆಲ್ಲಾ ಸುತ್ತಿದ್ದಲ್ಲದೆ ಭೂಪಾಲ್ ಹಾಗೂ ದೆಹಲಿಗೂ ತೆರಳಿ ನಮ್ಮ ಕನ್ನಡ ಬಾವುಟ ಹಾರಿಸಿದ್ದೆವು. ಪದವಿ ಮುಗಿದ ನಂತರ ಶುರುವಾದ ಬಾಳಿನ ಹೋರಾಟದಲ್ಲಿ ನಾನು ಬೆಂಗಳೂರಿನಲ್ಲಿ ನೆಲೆ ನಿಂತರೆ ಅವನು ಮುಂಬೈಗೆ ಹೋಗಿದ್ದ!  ಹಲವು ವರ್ಷಗಳ ನಂತರ ಅವನು ಮುಂಬೈನಿಂದ ಹಿಂದಿರುಗಿ ಬೆಂಗಳೂರಿನಲ್ಲಿ ನೆಲೆ ನಿಂತ, ನಾನು ಬೆಂಗಳೂರು ಬಿಟ್ಟು ದುಬೈಗೆ ಬಂದು ನೆಲೆಯಾದೆ!  ಆದರೆ ಈಗಲೂ ೩೫ ವರ್ಷಗಳ ಹಿಂದಿನ ನಮ್ಮ ಭಾಷೆ, ಏನ್ಲಾ ಮಂಜಾ ಅಂತ ಅವನು ಕರೆದರೆ ಏನ್ಲಾ ಸಾಬ್ರೇ ಅಂತ ನಾನು ಉತ್ತರಿಸುವುದು ಈಗಲೂ ರೂಢಿಯಲ್ಲಿದೆ!  ಹಲವು ನೋವು, ನಲಿವು, ಸೋಲು ಗೆಲುವುಗಳಲ್ಲಿ ಜೊತೆಜೊತೆಯಾಗಿ ಕಳೆದ ೩೫ ವರ್ಷಗಳಿಂದ ಜೀವಂತವಾಗಿರುವ ಈ ಸ್ನೇಹಕ್ಕೆ ಬೆಲೆ ಕಟ್ಟಲಾಗುವುದೇನು?  ಇದುವರೆಗೂ ನಮ್ಮ ನಡುವೆ ಹಿಂದೂ ಮುಸ್ಲಿಂ ಎನ್ನುವ ಧರ್ಮಗಳಿಗೆ ಮಾಡಲು ಏನೂ ಕೆಲಸ ಸಿಕ್ಕಿಲ್ಲ, ನಮ್ಮ ಸ್ನೇಹವನ್ನು ಘಾಸಿಗೊಳಿಸಲು ಆಗಿಲ್ಲ!!  ಸ್ನೇಹಿತರ ದಿನದಂದು ಹಾಗೇ ಸುಮ್ಮನೆ ಇದೆಲ್ಲಾ ನೆನಪಾಯಿತು.  :-) :-)  

ಇವನಲ್ಲದೆ ಬಾಳಯಾನದ ವಿವಿಧ ಹಂತಗಳಲ್ಲಿ ಜೊತೆಯಾದವರು ಅದೆಷ್ಟೋ ಜನ ಗೆಳೆಯರು.  ಕೆಲವರು ಮಿಂಚಿನಂತೆ ಮಿಂಚಿ ಮರೆಯಾಗಿ ಹೋದರು, ಮತ್ತೆ ಕೆಲವರು ಮರೆಯಲಾಗದ ನೆನಪನ್ನು ಮನದಲ್ಲಿ ಉಳಿಸಿ ಕಾಲನ ಕರೆಗೆ ಓಗೊಟ್ಟು ಕಣ್ಮರೆಯಾದರು. ಅಂದಿಗಿಂತ ಇಂದು ವಿಜ್ಞಾನ ಸಾಕಷ್ಟು ಮುಂದುವರೆದಿದಿ, ವಿಶ್ವ ಚಿಕ್ಕದಾಗಿದೆ, ಕಾರ್ಯನಿಮಿತ್ತ ವಿಶ್ವದೆಲ್ಲೆಡೆ ಹರಡಿ ಹೋಗಿರುವ ಕನ್ನಡಿಗರೆಲ್ಲರೂ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ಗೆಳೆಯರಾಗಿದ್ದಾರೆ.  ಇಂದು ಗೆಳೆತನದ ಅರ್ಥ ಮತ್ತಷ್ಟು "ಸುವಿಶಾಲ"ವಾಗಿದೆ.  ನಮ್ಮೆಲ್ಲ ನೋವು ನಮ್ಮಲ್ಲಿಯೇ ಮರೆಯಾಗಲಿ, ಗೆಳೆತನದ ಸುಮವೆಂದೂ ಮಧುರವಾಗಿ ನಗುತಿರಲಿ.  :-) :-)  

No comments: