Friday, July 17, 2015

ನೆನಪಿನಾಳದಿಂದ : ೨೬. ಹೊಸಬೆಳಕು,,,,,, ಮೂಡುತಿದೆ,,,,,

ನಿನ್ನೆ ಬೆಳಿಗ್ಗೆ ಎದ್ದವನು ಮಾಮೂಲಿನಂತೆ ಕಾಲು ಲೀಟರ್ ಹಾಲಿನ ಸ್ಟ್ರಾಂಗ್ ಕಾಫಿ ಮಾಡಿ, ಜೊತೆಗೆ ನಾಲ್ಕು ಬಿಸ್ಕತ್ ತಿನ್ನುತ್ತಾ ಟಿವಿಯಲ್ಲಿ ನ್ಯೂಸ್ ನೋಡುತ್ತಾ,,ಹಾಗೆಯೇ ನನ್ನ ಸ್ಮಾರ್ಟ್ ಫೋನಿನಲ್ಲಿ ಫೇಸ್ ಬುಕ್ ಮೇಲೆ ಕಣ್ಣಾಡಿಸುತ್ತಾ ಕುಳಿತಿದ್ದೆ.  ಕೆಲಸಕ್ಕೆ ಹೋಗಲು ಇನ್ನೂ ಸಮಯವಿತ್ತು, ನ್ಯೂಸ್ ಚಾನಲ್ಲಿನಲ್ಲಿ ಕೇಜ್ರಿವಾಲನ ಅರಿಭಯಂಕರ ಜಾಹೀರಾತು ಬರುತ್ತಿದ್ದಂತೆಯೇ ಉದಯ ಟಿವಿಗೆ ಬದಲಾಯಿಸಿದೆ.  ಅಲ್ಲಾಗಲೇ ಬೆಳಗಿನ ಕಾರ್ಯಕ್ರಮಗಳೆಲ್ಲಾ ಮುಗಿದು ಲೋಕದ ಸಮಸ್ತರಿಗೂ ಭವಿಷ್ಯವನ್ನು ಹೇಳಿ, ಇದ್ದಬದ್ದ ದೇವಸ್ಥಾನಗಳನ್ನೆಲ್ಲಾ ದರ್ಶನ ಮಾಡಿಸಿ ಯಾವುದೋ ಹಳೆಯ ಚಿತ್ರದ ಟೈಟಲ್ ಕಾರ್ಡ್ ತೋರಿಸುತ್ತಿದ್ದರು.  ಹಾಗೆಯೇ ನೋಡುತ್ತಿದ್ದಂತೆ ಆ ಚಲನಚಿತ್ರ ನಮ್ಮ ಕನ್ನಡದ ಕಣ್ಮಣಿ, ಅಣ್ಣಾವ್ರು,,ರಾಜ್ ಕುಮಾರ್, ಸರಿತಾ ಅಭಿನಯದ "ಹೊಸಬೆಳಕು" ಎಂದು ಗೊತ್ತಾಯ್ತು!  ಚಿತ್ರ ಚೆನ್ನಾಗಿದ್ದುದರಿಂದ ಫೇಸ್ ಬುಕ್ ಪಕ್ಕಕ್ಕಿಟ್ಟು, ಹಾಗೆಯೇ ಕಾಫಿ ಕುಡಿಯುತ್ತಾ ನೋಡುತ್ತಾ ಕುಳಿತೆ.  

ಚಿತ್ರದಲ್ಲಿ ರಾಜ್ ಕುಮಾರ್ ದೆಹಲಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ, ರಜಕ್ಕೆಂದು ಮೈಸೂರಿನಲ್ಲಿದ್ದ ಅಕ್ಕನ ಮನೆಗೆ ಬರುತ್ತಾರೆ.  ಅಲ್ಲಿ ಭಾವನ ಮೊದಲ ಹೆಂಡತಿಯ ಮಗಳು ವತ್ಸಲಾಳ ಪ್ರೇಮಪಾಶದಲ್ಲಿ ಸಿಲುಕುತ್ತಾರೆ.  ಅಕ್ಕನ ಮಗಳು ನಾಗವೇಣಿಯೂ ಅಣ್ಣಾವ್ರಿಗೆ ಲೈನು ಹೊಡೆಯುತ್ತಿರುತ್ತಾಳೆ.  ಆದರೆ ಅಣ್ಣಾವ್ರ ದ್ರಷ್ಟಿ ಮಾತ್ರ ವತ್ಸಲಾಳ ಮೇಲಿರುತ್ತದೆ.  ತಾಯಿಯಿಲ್ಲದ ವತ್ಸಲಾಳಿಗೆ ಅಣ್ಣಾವ್ರ ಅಕ್ಕ ಮಲತಾಯಿಯಾಗಿ ಸಾಕಷ್ಟು ಕಿರುಕುಳ ಕೊಡುತ್ತಿರುತ್ತಾಳೆ, ಅಸಹಾಯಕ ಭಾವ ಅಶ್ವಥ್ ಇದನ್ನೆಲ್ಲಾ ನೋಡಿಕೊಂಡು ಏನೂ ಮಾಡಲಾಗದೆ ಕೈಕೈ ಹಿಸುಕಿಕೊಳ್ಳುತ್ತಿರುತ್ತಾರೆ.   ಅಕ್ಕನ ಜೊತೆ ಸೇರಿ ವತ್ಸಲಾಳಿಗೆ ಇನ್ನಷ್ಟು ತೊಂದರೆ ಕೊಡುವಂತೆ ನಟಿಸುತ್ತಾ ಅಣ್ಣಾವ್ರು ಅವಳಿಗೆ ಕಾಲೇಜಿಗೆ ಸೇರಿ ಓದಲು ಸಹಾಯ ಮಾಡುತ್ತಾರೆ.  ಕೊನೆಗೆ ದೆಹಲಿಗೆ ಹಿಂದಿರುಗಿ ಬಂದರೆ ಅವರ ಮುಳ್ಳುಹಂದಿಯಂಥಾ ಬಾಸ್ ಮಗಳೂ ಸಹಾ ಅವರಿಗೆ ಲೈನು ಹೊಡೆಯಲು ಆರಂಭಿಸುತ್ತಾಳೆ.  ಒಬ್ಬಳೇ ಮಗಳು,, ಸಕಲ ಐಶ್ವರ್ಯವಂತೆ, ರೂಪವಂತೆ,,,ಆದರೆ ಅಣ್ಣಾವ್ರು ಅವಳನ್ನು ತಿರಸ್ಕರಿಸಿ ವತ್ಸಲಾಳಿಗಾಗಿ ಮೈಸೂರಿಗೆ ಹಿಂದಿರುಗಿ ಬರುತ್ತಾರೆ.  ಕೊನೆಗೆ ಹಲವು ನಾಟಕ ಮಾಡಿ ಅವಳನ್ನೇ ಮದುವೆಯೂ ಆಗುತ್ತಾರೆ. ಇದು ಚಿತ್ರದ ಕಥೆ,,,ಸುಂದರ ಸಾಂಸಾರಿಕ ಸನ್ನಿವೇಶಗಳೊಡನೆ ಅತ್ಯಂತ ಹಿತವಾದ ಹಾಡುಗಳೊಡನೆ ಚಿತ್ರ ನಮ್ಮ ಮನಸ್ಸನ್ನ್ಜು ಗೆಲ್ಲುತ್ತದೆ. 

ಅಸಲಿ ವಿಚಾರವೇನೆಂದರೆ ಈ ಚಿತ್ರ ಬಿಡುಗಡೆಯಾದಾಗ ನಾನು ತಿಪಟೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದೆ.  ಗಾಂಧಿನಗರದಲ್ಲಿದ್ದ ಲಕ್ಷ್ಮಿ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಒಮ್ಮೆ ನೋಡಿದ ನನಗೆ ಈ ಚಿತ್ರ ತುಂಬಾ ಹಿಡಿಸಿ ಹಲವಾರು ಬಾರಿ ನೋಡಿದ್ದೆ.  ಆಗಿನ್ನೂ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವ ಯೋಗ್ಯತೆ ನನಗೆ ಸಿಕ್ಕಿತ್ತು, ಅಂದರೆ ೧೮ ವರ್ಷ ವಯಸ್ಸು ತುಂಬಿತ್ತು, ವೃತ್ತಪತ್ರಿಕೆಗಳಲ್ಲಿ ಜಾಹೀರಾತು ಬರುತ್ತಿದ್ದ ಸಿಕ್ಕ ಸಿಕ್ಕ ಕೆಲಸಗಳಿಗೆಲ್ಲಾ ಅರ್ಜಿ ಹಾಕುತ್ತಾ, ಪರೀಕ್ಷೆಗಳನ್ನು ಬರೆಯುತ್ತಾ ಸರ್ಕಾರಿ ಕೆಲಸದ ಕನಸು ಕಾಣುತ್ತಲೇ ಪದವಿ ಓದುತ್ತಿದ್ದೆ!  ಅದೇ ಸಮಯದಲ್ಲಿ ಆಕಾಶವಾಣಿಯಲ್ಲಿ ವಾರ್ತಾ ವಾಚಕರು ಹಾಗೂ ಉದ್ಘೋಷಕರು ಬೇಕಾಗಿದ್ದಾರೆಂದು ಜಾಹೀರಾತು ಬಂದಿತ್ತು.  ಅದಕ್ಕೂ ಅರ್ಜಿ ಗುಜರಾಯಿಸಿ ಸಂದರ್ಶನದ ಕರೆಯನ್ನು ಎದುರು ನೋಡುತ್ತಿದ್ದೆ.  ಅದೇ ಸಮಯದಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.  ಚಿತ್ರದಲ್ಲಿ ಅಣ್ಣಾವ್ರು ಒಬ್ಬ ಗಾಯಕರಾಗಿ ದೆಹಲಿ ದೂರದರ್ಶನದಲ್ಲಿ ಒಂದು ಹಾಡು ಹಾಡುತ್ತಾರೆ,  "ಹೊಸ ಬೆಳಕು ಮೂಡುತಿದೆ,," ಅದು ದೇಶಾದ್ಯಂತ ಪ್ರಸಾರವಾಗಿ ಆ ಹಾಡಿನಿಂದಲೇ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮುಂಗೋಪಿ ಮಾಲೀಕನ ಮಗಳೇ ಅಣ್ಣಾವ್ರನ್ನು ಪ್ರೀತಿಸತೊಡಗುತ್ತಾಳೆ.  ಆ ಸನ್ನಿವೇಶ ನನ್ನ ಹರೆಯದ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನುಂಟು ಮಾಡಿತ್ತು.  ಕುಳಿತಲ್ಲಿ, ನಿಂತಲ್ಲಿ ನಾನು ಅದೇ ಹಾಡು ಹಾಡುತ್ತಾ, ನನಗೂ ಆಕಾಶವಾಣಿಯಲ್ಲಿ ಕೆಲಸ ಸಿಕ್ಕಿ ನಾನೂ ಸಹಾ ದೆಹಲಿಗೆ ಹೋಗಿ ಕೆಲಸ ಮಾಡುತ್ತಾ, ಥೇಟ್ ಅಣ್ಣಾವ್ರ ರೀತಿಯಲ್ಲೇ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಮಂಜು ಮುಸುಕಿದ ಮುಂಜಾವಿನಲ್ಲಿ ಜಾಗಿಂಗ್ ಮಾಡುತ್ತಿರುವಂತೆ ಕನಸು ಕಾಣುತ್ತಿದ್ದೆ!  ಒಂದಿಲ್ಲೊಂದು ಒಳ್ಳೆಯ ಸರ್ಕಾರಿ ಕೆಲಸ ಸಿಕ್ಕಿ ನಾನೂ ಒಬ್ಬ ಉತ್ತಮ ಅಧಿಕಾರಿಯಾಗಿ ಗೌರವಯುತವಾಗಿ ಬದುಕು ಕಟ್ಟಿಕೊಳ್ಳುವೆನೆಂಬ ಭರವಸೆ ನನಗಿತ್ತು.  ಅದಕ್ಕೆ ತಕ್ಕಂತೆ ನನಗೆ ಮಲಗಿದಾಗೆಲ್ಲಾ ಕನಸುಗಳಲ್ಲಿ ಸದಾ ಅಣ್ಣಾವ್ರ ಹೊಸಬೆಳಕು ಚಿತ್ರದ ಸನ್ನಿವೇಶಗಳು ಕಾಡುತ್ತಿದ್ದವು. 

ಆಗಿನ ನನ್ನ ಆತ್ಮವಿಶ್ವಾಸವಂತೂ ಆಗಸದಷ್ಟು ಅಗಾಧವಾಗಿತ್ತು, ನಾನು ಭಾಗವಹಿಸದ ಸ್ಪರ್ಧೆಗಳೇ ಇರಲಿಲ್ಲ!  ಎಲ್ಲಿಯೇ ಚರ್ಚಾಸ್ಪರ್ಧೆ, ಪ್ರಬಂಧ, ಕವನ ರಚನಾ ಸ್ಪರ್ಧೆಗಳು ನಡೆದರೂ ನಾನು ಅಲ್ಲಿ ಹಾಜರಿರುತ್ತಿದ್ದೆ!  ಸುತ್ತ ಮುತ್ತಲಿನ ಯಾವುದೇ ಊರಿನಲ್ಲಿ ಸೈಕಲ್ ರೇಸುಗಳು ಏರ್ಪಡಿಸಿದ್ದರೆ ಅಲ್ಲಿಯೂ ನಾನು ಹಾಜರಾಗಿ ಗೆದ್ದು ಬರುತ್ತಿದ್ದೆ,,,ನನ್ನದೇ ಒಂದು ಗುಂಪು ಕಟ್ಟಿ ಇಡೀ ಕರ್ನಾಟಕವನ್ನೇ ಸೈಕಲ್ಲಿನಲ್ಲಿ ಸುತ್ತಿದ್ದಲ್ಲದೆ ದೂರದ ದೆಹಲಿ ಹಾಗೂ ಭೂಪಾಲಿಗೂ ಸೈಕಲ್ಲಿನಲ್ಲೇ ಹೋಗಿ ಬಂದಿದ್ದೆ.  ಎನ್. ಸಿ. ಸಿ. ಯಲ್ಲಿದ್ದ ನಾನು ಸೀನಿಯರ್ ಅಂಡರ್ ಆಫೀಸರ್ ಆಗಿ "ಸಿ" ಸರ್ಟಿಫಿಕೆಟ್ ಪಡೆದಿದ್ದುದಲ್ಲದೆ ಅಲ್ಲಿ ನಡೆಯುತ್ತಿದ್ದ ಮಾರ್ಚ್ ಫಾಸ್ಟ್, ಫೈರಿಂಗ್ ಹಾಗೂ ಬೈನಟ್ ಫೈಟಿಂಗ್ ಸ್ಪರ್ಧೆಗಳಲ್ಲಿ ಎಲ್ಲರಿಗಿಂತ ಮೊದಲಿಗನಾಗಿ ಗೆದ್ದು "ಬೆಸ್ಟ್ ಅಂಡರ್ ಆಫೀಸರ್" ಅನ್ನುವ ಗೌರವಕ್ಕೆ ಪಾತ್ರನಾಗಿದ್ದೆ. ಅಗಾಧ ಆತ್ಮವಿಶ್ವಾಸದ ಪ್ರತಿರೂಪದಂತಿದ್ದ ನನ್ನ ಕನಸಿನ ಹಕ್ಕಿಗಳಿಗೆ ರೆಕ್ಕೆ ಬಂದಂತೆ ಪದವಿಯಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣನಾಗಿದ್ದೆ.  ಆದರೆ ಕಾಲೇಜು ಜೀವನ ಮುಗಿಸಿ ಆಚೆಗೆ ಬಂದಾಗಲೇ ನನಗೆ ವಾಸ್ತವದ ಅರಿವಾಗಿದ್ದು! 

ಪ್ರಥಮ ದರ್ಜೆಯಲ್ಲಿ ಪದವಿ ಪತ್ರ ಕೈಯಲ್ಲಿ ಹಿಡಿದು ಬೆಂಗಳೂರಿಗೆ ಬಂದು ಖಾಸಗಿ ರಂಗದಲ್ಲಿ ಕೆಲಸ ಮಾಡುತ್ತಲೇ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದ ನನಗೆ ಸುಮಾರು ೫೭ ಪರೀಕ್ಷೆಗಳನ್ನು ಬರೆದರೂ ಸರ್ಕಾರಿ ಕೆಲಸದ ಅವಕಾಶ ಸಿಗಲೇ ಇಲ್ಲ!  ಓದಿದ ತರಗತಿಗಳಲ್ಲಿ ಯಾವಾಗಲೂ ಪ್ರಥಮದರ್ಜೆಯಲ್ಲೇ ಇರುತ್ತಿದ್ದ ನನಗೆ ಅತ್ಯಂತ ಸುಲಭ ಅನ್ನಿಸಿದ್ದ ವೃತ್ತಿ ಸಂಬಂಧಿತ ಪರೀಕ್ಷೆಗಳನ್ನು ಪಾಸು ಮಾಡಲು ಆಗಿರಲಿಲ್ಲ.  ಆದರೆ ನನ್ನ ಜೊತೆಯಲ್ಲಿಯೇ ಓದಿದ ಕೆಲವರು ತಮ್ಮ ಜಾತಿಗೆ ಸಿಗುತ್ತಿದ್ದ ಮೀಸಲಾತಿಯಿಂದಾಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ಈಗ ಉನ್ನತ ಸ್ಥಾನಗಳಲ್ಲಿ ಕುಳಿತಿದ್ದಾರೆ.  ಓದಿದ ವಿದ್ಯೆಗಿಂತ ಹುಟ್ಟಿದ ಜಾತಿಯೇ ಅವರ ಸ್ಥಾನಮಾನಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.  ಅದೇ ನಾನು ಹುಟ್ಟಿದ ಜಾತಿ ನನಗೊಂದು ಸರ್ಕಾರಿ ಕೆಲಸ ಕೊಡಿಸುವಲ್ಲಿ ವಿಫಲವಾಗಿತ್ತು.  ಹಾಗೋ ಹೀಗೋ ಏಳು ಬೀಳಿನಲ್ಲೇ ಸಾಗಿದ ಜೀವನದ ಯಾನದಲ್ಲಿ ಕೊನೆಗೆ ದೇಶ ಬಿಟ್ಟು ಆಚೆಗೆ ಬಂದು ನನ್ನವರು ಅನ್ನಿಸಿಕೊಂಡ ಎಲ್ಲರಿಂದ ದೂರಾಗಿ ಬದುಕಬೇಕಾದ ಪರಿಸ್ಥಿತಿ ಸೃಷ್ಟಿಸಿದ್ದು ಯಾರು?  ಹೊಸಬೆಳಕು ಮೂಡುತಿದೆ ಅನ್ನುವ ಹಾಡು ಈಗಲೂ ನನ್ನ ನಾಲಿಗೆಯ ತುದಿಯಲ್ಲಿಯೇ ಇದೆ,,,ಆದರೆ ಅಂದು ಆ ಹಾಡಿನೊಂದಿಗೆ ಆರಂಭವಾದ ಕನಸು ಮಾತ್ರ ನನಸಾಗಲೇ ಇಲ್ಲ!   

ಒಂದು ಚಲನಚಿತ್ರ ನೋಡಿದಾಗ ಈ ಹುಚ್ಚು ಮನಸ್ಸು ಸುಮಾರು ೩೦ ವರ್ಷ ಹಿಂದಕ್ಕೋಡಿ ಹಳೆಯದನ್ನೆಲ್ಲ ನೆನಪಿಸಿ, ಒಮ್ಮೊಮ್ಮೆ ಕೊಂಚ ದುಃಖವನ್ನೂ ಅಪಾರವಾದ ಸಂತೋಷವನ್ನು ತಂದರೆ, ಕೆಲವೊಮ್ಮೆ ಕೇವಲ ದುಃಖವನ್ನೇ ತುಂಬಿ ಇರುವ ಸಂತೋಷವನ್ನೂ ಹಾಳು ಮಾಡುತ್ತದೆ.  ಮನಸ್ಸಿನ ಈ ಆಟಕ್ಕೆ ಅಂಕುಶವೆಲ್ಲಿ???  

No comments: