Sunday, May 19, 2013

ಮತ್ತೆ ಸೆಳೆದ ಅರಬ್ಬರ ನಾಡು.


ಸುಮಾರು ಎರಡೂವರೆ ವರುಷಗಳ ಹಿಂದೆ ನಾನು ದುಬೈನಿಂದ ಬೆಂಗಳೂರಿಗೆ ಹಿಂದಿರುಗಿದ್ದೆ, ಅಂದು ಮನೆಯ ಪರಿಸ್ಥಿತಿಗಳು ನನ್ನನ್ನು ನಿಂತ ಹೆಜ್ಜೆಯಲ್ಲಿ ಸಿಕ್ಕಿದ ವಿಮಾನವನ್ನೇರಿ ಬೆಂಗಳೂರಿಗೆ ಹಿಂದಿರುಗುವಂತೆ ಮಾಡಿದ್ದವು.   ನಾವೆಷ್ಟೇ ಮೇಲೇರಿದರೂ ಪರಿಸ್ಥಿತಿಯ ಕೈಗೊಂಬೆಗಳೇ ಎನ್ನುವುದನ್ನು ಜೀವನದಲ್ಲಿ ಮತ್ತೊಮ್ಮೆ ನೋಡಿ, ತಿಳಿಯುವ ಅವಕಾಶ ಅದಾಗಿತ್ತು.   ದುಬೈನ ಜೀವನಶೈಲಿಗೂ, ನಮ್ಮದೇ ಬೆಂಗಳೂರಿನ ಜೀವನಶೈಲಿಗೂ ಅಜಗಜಾಂತರ ವ್ಯತ್ಯಾಸ!  ಹೊಂದಿಕೊಳ್ಳಲು ಬಹಳ ತ್ರಾಸವಾಯಿತು, ಎಲ್ಲಿ ಹೋದರೂ ಬರಿಯ ಪ್ರಶ್ನೆಗಳೇ ಎದುರಾಗುತ್ತಿದ್ದವು, ದುಬೈನಲ್ಲಿ ಒಳ್ಳೆಯ ಕೆಲಸದಲ್ಲಿದ್ದವರು ಅದೇಕೆ ಬಿಟ್ಟು ಬಂದಿರಿ?  ಅಂಥಾದೇನಿದೆ ಬೆಂಗಳೂರಿನಲ್ಲಿ ?  ಸ್ನೇಹಿತರ, ಸಂಬಂಧಿಕರ ಇಲ್ಲಸಲ್ಲದ ಪ್ರಶ್ನೆಗಳು ಹಲವು ಬಾರಿ ನನ್ನನ್ನು ಯಾಕಾದರೂ ಬೆಂಗಳೂರಿಗೆ ಬಂದೆನೋ ಎಂದು ಯೋಚಿಸುವಂತೆ ಮಾಡುತ್ತಿದ್ದವು.  

 ನನ್ನದೇ ಒಂದು ಸ್ವಂತ ಕಂಪನಿ ಮಾಡೋಣವೆಂದು ಹೊರಟರೆ ಅದಕ್ಕೂ ನೂರೆಂಟು ಅಡ್ಡಿ, ಆತಂಕಗಳು, ಯಾವುದಾದರೂ ಒಳ್ಳೆಯ ಸಂಸ್ಥೆಯಲ್ಲಿ ಉದ್ಯೋಗವನ್ನಾದರೂ ಮಾಡೋಣವೆಂದರೆ ಅದಕ್ಕೂ ನೂರೆಂಟು ತಲೆನೋವುಗಳು!   ನಾನು ಕೆಲಸಕ್ಕೆಂದು ಹೋದ ಸಂಸ್ಥೆಗಳಲ್ಲೆಲ್ಲಾ ಅಲ್ಲಿದ್ದ ಹಿರಿಯ ಉದ್ಯೋಗಿಗಳು ನನ್ನನ್ನು ಸಂಶಯದಿಂದಲೇ ನೋಡುತ್ತಿದ್ದರು.  ವಿದೇಶದಲ್ಲಿದ್ದು ಹಿಂದಿರುಗಿರುವ  ಇವನನ್ನುಒಂದು ವೇಳೆ ಕೆಲಸಕ್ಕೆ ತೆಗೆದುಕೊಂಡಿದ್ದೇ ಆದಲ್ಲಿ ಮುಂದೊಂದು ದಿನ ಇವನು ನನ್ನ ಬುಡಕ್ಕೇ ನೀರು ಬಿಡುವನೇನೋ ಎನ್ನುವ ಅನುಮಾನದ ಸುಳಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.   ಹೀಗಾಗಿ ಸರಿಯಾದ ಉದ್ಯೋಗವೂ ಇಲ್ಲದೆ ಸ್ವಂತ ಸಂಸ್ಥೆಯನ್ನೂ  ಮಾಡಲಾಗದೆ ನನ್ನ ದುಒಂದು ರೀತಿಯ ತ್ರಿಶಂಕು ಸ್ಥಿತಿಯಾಗಿ ಹೋಯಿತು. 

ಈ ಅತಂತ್ರ ಸ್ಥಿತಿಯಲ್ಲಿ ಒದ್ದಾಡುತ್ತಿರುವಾಗ, ನನ್ನ ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲಿ,  ನನಗೆ ಜೊತೆಯಾಗಿ ನಿಲ್ಲಬೇಕಾಗಿದ್ದ ಮಡದಿ ಮಕ್ಕಳೂ ಸಹಾ ನನ್ನನ್ನು ಉಪೇಕ್ಷಿಸತೊಡಗಿದ್ದಾರೆ ಎಂದು ನನಗೆ ಅನ್ನಿಸತೊಡಗಿತು.  ನಾನು ದುಬೈನಲ್ಲಿದ್ದಾಗ ಪ್ರತಿ ತಿಂಗಳೂ ಮೊದಲನೆಯ ವಾರದಲ್ಲಿ ಸಾಕಷ್ಟು ಹಣ ಕಳುಹಿಸುತ್ತಿದ್ದೆ, ಮನೆಯ ಖರ್ಚಿಗೆ ಮಡದಿಗೆ, ಮಕ್ಕಳ ಖರ್ಚಿಗೆ ಯಾವುದೇ  ಯೋಚನೆಯಿರಲಿಲ್ಲ.  ಆದರೆ ಈಗ ನಾನು ಬೆಂಗಳೂರಿನಲ್ಲೇ ಇದ್ದುದರಿಂದಾಗಿ ಎಲ್ಲದಕ್ಕೂ ನನ್ನನ್ನೇ ಕಾಸು ಕೇಳಬೇಕಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಅವರಿಗೂ ಕಷ್ಟವಾಗಿತ್ತೆಂದು ಕಾಣುತ್ತದೆ, ಎಲ್ಲದಕ್ಕಿಂತ ಹೆಚ್ಚಾಗಿ ಕಳೆದು ಹೋದ "ಎನ್ನಾರೈ"ನ ಮಡದಿ-ಮಕ್ಕಳು ಎಂಬ ಸ್ಟೇಟಸ್ ಬಗ್ಗೆಯೇ ಅವರು ಹೆಚ್ಚಾಗಿ ತಲೆ ಕೆಡಿಸಿಕೊಂಡಂತಿತ್ತು. 
  
ಈ ಮಧ್ಯೆ ಸ್ನೇಹಿತನೊಬ್ಬನ ಮಾತು ಕೇಳಿ ಗೋವಾದ ಕ್ಯಾಸಿನೋಗಳಲ್ಲಿ ಹಣ ಮಾಡಲು ಹೊರಟೆ!  ಮೊದಮೊದಲು ಕೈ ಹಿಡಿದ ಕ್ಯಾಸಿನೋ ಲಕ್ಷ್ಮಿ ಕ್ರಮೇಣ ಕೈ ಕಚ್ಚತೊಡಗಿ ನಷ್ಟಕ್ಕೆ ದೂಡಿದಾಗ ದಿಕ್ಕು ತಪ್ಪಿದಂತಾಗಿತ್ತು ನನ್ನ ಸ್ಥಿತಿ.  ಹಣ ಮಾಡಲೆಂದು ಗೋವಾದ ಕ್ಯಾಸಿನೋಗಳಿಗೆ ಕಾಲಿಟ್ಟವನು ಇದ್ದ ಹಣವನ್ನೂ ಕಳೆದುಕೊಂಡು ಕೊನೆಗೆ ಸಾಲಗಾರನಾಗಬೇಕಾಯಿತು!   ಅತ್ತ ಮನೆಯ ಹೊರಗೆ ಸ್ನೇಹಿತರ, ಹಿತೈಷಿಗಳ, ಬಂಧುಗಳ ಬೆಂಬಲವಿಲ್ಲದೆ,  ಇತ್ತ ಮನೆಯೊಳಗೆ ಮಡದಿ ಮಕ್ಕಳ ಸಹಕಾರವೂ ಇಲ್ಲದೆ ಮನಸ್ಸು ಹೈರಾಣಾಗಿ ಹೋಯ್ತು.  ದುಬೈನಿಂದ ತಂದಿದ್ದ ಹಣವೆಲ್ಲ ಕರಗಿ ಸಾಲದ ಮೀಟರ್ ಏರುತ್ತಿತ್ತು.  ಸರಿಯಾದ ಆದಾಯವಿಲ್ಲದೆ, ಉದ್ಯೋಗವಿಲ್ಲದೆ ಬದುಕುವುದಾದರೂ ಹೇಗೆ ಎಂದೆಲ್ಲಾ ತುಂಬಾ ಯೋಚಿಸುತ್ತಿದ್ದೆ.  ಅತೀವ  ಕ್ಷೋಭೆಗೊಂಡಿದ್ದ ನನ್ನ ಮನಸ್ಸಿಗೆ ನೆಮ್ಮದಿ ನೀಡುತ್ತಿದ್ದುದು ಮಾತ್ರ ಮಲ್ಯನ ಆರ್ಸಿಯ ಪೆಗ್ಗುಗಳು  ಮತ್ತು ಪ್ಯಾಕುಗಟ್ಟಲೆ ಸೇದಿ ಬಿಸಾಕಿದ ವಿಲ್ಸ್ ಕ್ಲಾಸಿಕ್ ಮೈಲ್ಡ್ಸ್ ಸಿಗರೇಟುಗಳು.  ಮತ್ತೆ ದುಬೈಗೆ ಹೋಗಿ ಬಿಡೋಣವೆಂದು ಸಿಕ್ಕ ಸಿಕ್ಕ ಕೆಲಸಗಳಿಗೆಲ್ಲ ಅರ್ಜಿ ಕಳಿಸತೊಡಗಿದೆ,  ಆದರೆ ಯಾವುದೂ ಕೈಗೆಟುಕಲಿಲ್ಲ!

 ಕೊನೆಗೊಮ್ಮೆ ತಲೆ ಕೆಟ್ಟು , ಬ್ಯಾಗು ಹೆಗಲಿಗೇರಿಸಿ ಹೊರಟೆ.  ಸೀದಾ ಹೊಳೆನರಸಿಪುರಕ್ಕೆ ಹೋಗಿ ಚಿಕ್ಕಮ್ಮನೊಡನೆ ಮಾತನಾಡುತ್ತಾ ಕುಳಿತವನಿಗೆ ಅಲ್ಲಿಯ ವಾತಾವರಣವೂ ನೆಮ್ಮದಿ ನೀಡಲಿಲ್ಲ.   ಕೈಗೆ ಸಿಗದ ನೆಮ್ಮದಿಯನ್ನರಸುತ್ತಾ ಬಸ್ ಹತ್ತಿದವನು ಬಂದಿಳಿದಿದ್ದು ಹೊರನಾಡಿನಲ್ಲಿ, ಗೆಳೆಯ ರಾಘವೇಂದ್ರ ನಾವುಡರಿಗೆ ಮೊದಲೇ ತಿಳಿಸಿದ್ದರಿಂದ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿತ್ತು.  ಅವರೊಡನೆ ಕುಳಿತು ಮನ ಬಿಚ್ಚಿ ಮಾತಾಡಿದೆ, ಮನದ ತುಂಬ ಮಡುಗಟ್ಟಿದ್ದ ದುಗುಡ, ದುಮ್ಮಾನಗಳನ್ನೆಲ್ಲ ಕಕ್ಕಿಕೊಂಡಾಗ ಒಂದು ರೀತಿಯ ಆನಂದದ ಭಾವ ಹೊರ ಹೊಮ್ಮಿತ್ತು.  ಎಲ್ಲವನ್ನೂ ಕೇಳಿದ ನಂತರ ನಗುಮೊಗದ ನಾವುಡರು ಹೇಳಿದ್ದು ಒಂದೇ ಮಾತು!  "ಮೂರು ದಿನ ನೆಮ್ಮದಿಯಾಗಿ ಇಲ್ಲಿರಿ ಮಾರಾಯ್ರೇ , ಅಮ್ಮನವರ ಸೇವೆ ಮಾಡಿ, ಎಲ್ಲವನ್ನೂ ಮರೆಯಿರಿ, ಎಲ್ಲ ಸರಿಯಾಗ್ತದೆ".  ಅವರಂದಂತೆ ಅಲ್ಲೇ ಉಳಿದು ದೇವಿ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಮನಃಪೂರ್ವಕ ಸೇವೆ ಸಲ್ಲಿಸಿದೆ, ಆ ಸನ್ನಿಧಿಯ ಮಹಾತ್ಮೆಯೋ, ದೇವಿಯ ಅನುಗ್ರಹವೋ ನಾ ಕಾಣೆ, ಒಂದು ರೀತಿಯ ನಿರಾಳಭಾವ ಮನಸ್ಸನ್ನಾವರಿಸಿ ಜಗವನ್ನೇ ಮರೆಯುವಂತೆ ಮಾಡಿತ್ತು.  ಮಡಿಲಲ್ಲಿ ಕಂದನನ್ನು ಮಲಗಿಸಿಕೊಂಡು ಜೋಗುಳ ಹಾಡಿ ಮಲಗಿಸುವ ಮಹಾಮಾತೆಯಂತೆ ಕಂಡಿದ್ದಳು ದೇವಿ ಅನ್ನಪೂರ್ಣೆ ನನ್ನ ಕಣ್ಣಿಗಂದು!  

ಅಲ್ಲಿಂದ ಹೊರಟವನು ಕಟೀಲು ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕೆಯರ ದರ್ಶನ ಮಾಡಿ, ಒಳ್ಳೆಯದಾಗುವಂತೆ ಹರಸಿರೆಂದು ಮನಃಪೂರ್ವಕ ಪ್ರಾರ್ಥನೆ ಸಲ್ಲಿಸಿ ಹೊರಟೆ.  ನಾಲ್ಕಾರು ದಿನದ ಅಲೆದಾಟದ ನಂತರ ಮತ್ತೆ ಬೆಂಗಳೂರಿಗೆ ಹಿಂದಿರುಗಲು ಶಿವಮೊಗ್ಗಕ್ಕೆ ಬರುವಲ್ಲಿ  ಜೇಬಿನಲ್ಲಿದ್ದ ಹಣ ಖಾಲಿಯಾಗಿ ನನ್ನನ್ನು ಅಣಕಿಸುತ್ತಿತ್ತು  ಆಗ ನೆನಪಾಗಿದ್ದು ಮತ್ತೊಬ್ಬ ಗೆಳೆಯ ಸತ್ಯಚರಣ!   ಫೋನ್ ಮಾಡಿದೊಡನೆ ಖುಷಿಯಿಂದ ಮಾತನಾಡಿ ಹತ್ತೇ ನಿಮಿಷದಲ್ಲಿ ರೈಲುನಿಲ್ದಾಣದ ಬಳಿಗೆ ಬಂದವರನ್ನು ಕಂಡು ನನಗೂ ಅಷ್ಟೇ ಖುಷಿಯಾಗಿತ್ತು.   ಅವರೊಡನೆ  ಅವರ ನಿತ್ಯಕಾಯಕದ "ಸತ್ಯ ಸಾಯಿ ಮಂದಿರ"ಕ್ಕೆ ಬಂದೆ. ಅಲ್ಲಿ ಅವರು ನಡೆಸುತ್ತಿದ್ದ ಸಮಾಜಮುಖಿ ಕಾರ್ಯಗಳ ಬಗ್ಗೆ ಕಿರು ಪರಿಚಯವಾಯಿತು, ಅಲ್ಲಿ ನಡೆಯುತ್ತಿದ್ದ ನಿತ್ಯ ದಾಸೋಹವಂತೂ ಅನುಕರಣೀಯ.  ಸತ್ಯಸಾಯಿಬಾಬಾರ ಪದತಲಕ್ಕೆ ನಮಿಸಿ ನನ್ನನ್ನು ಈ ಕಾರ್ಪಣ್ಯಗಳಿಂದ ಆದಷ್ಟು ಬೇಗನೆ ಮುಕ್ತಿಗೊಳಿಸಿರೆಂದು ಪ್ರಾರ್ಥಿಸಿ ಅಲ್ಲಿಂದ ಹೊರಟೆ.  ರೈಲು ಚಾರ್ಜಿಗೆಂದು ಸತ್ಯಚರಣರಿಂದ ಸ್ವಲ್ಪ ಹಣ ಪಡೆದು, ರಾತ್ರಿಯ ರೈಲಿನಲ್ಲಿ ಬೆಂಗಳೂರಿಗೆ ಬಂದೆ. 

ಬೆಂಗಳೂರಿಗೆ ಹಿಂದಿರುಗಿದ ಮೂರೇ ದಿನದಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಿಂದ ಬಂತು ಫೋನ್ ಕರೆ!  ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ಬಂದು ನಮ್ಮ ಎಂಡಿಯವರನ್ನು ಭೇಟಿ ಮಾಡಿ ಎಂದು.  ಈ ಹಿಂದೆ ಎರಡು ವರ್ಷ ನಾನು ಕೆಲಸ ಮಾಡಿದ್ದ ಆ ಸಂಸ್ಥೆಗೆ  ಕೆಲಸಕ್ಕೆಂದು ಅರ್ಜಿ ಹಾಕಿ ಸುಮಾರು ಮೂರ್ನಾಲ್ಕು ತಿಂಗಳುಗಳಾಗಿದ್ದವು!   ಮರುದಿನ ಹೋಗಿ ಎಂಡಿಯವರನ್ನು ಭೇಟಿಯಾದೆ, ಉಭಯಕುಶಲೋಪರಿಯಾದ ಬಳಿಕ ನನ್ನ ದುಬೈ ಕೆಲಸದ ಬಗ್ಗೆ ಎಲ್ಲವನ್ನೂ ಕೇಳಿ ತಿಳಿದುಕೊಂಡ ಅವರು  ಮರುದಿನವೇ ಬಂದು ಕೆಲಸ  ಪ್ರಾರಂಭಿಸಿ ಎಂದಾಗ ನನಗೆ ನಂಬಲು ಸ್ವಲ್ಪ ಕಷ್ಟವೇ ಆಯಿತು.  ಮನೆಗೆ ಬಂದು ಮಡದಿಗೆ ವಿಷಯ ತಿಳಿಸಿದೆ,   "ಈ ಕೆಲಸದಿಂದ ನೀವು ಉದ್ಧಾರವಾಗುವುದಿಲ್ಲ ಯಾವುದಾದರೂ ಕೆಲಸ ನೋಡಿಕೊಂಡು ಮೊದಲು ದುಬೈಗೆ ಹೋಗುವುದನ್ನು ನೋಡಿ" ಎಂದವಳು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ಕಂಡಿದ್ದಳು. 

ಫೋನ್ ಮಾಡಿ ರಾಘವೇಂದ್ರ ನಾವುಡರಿಗೆ, ಸತ್ಯಚರಣರಿಗೆ ವಿಷಯ ತಿಳಿಸಿದೆ, 'ಮೊದಲು ಕೆಲಸಕ್ಕೆ ಸೇರಿಕೊಳ್ಳಿ, ಎಲ್ಲವೂ ಒಳ್ಳೆಯದಾಗುತ್ತದೆ' ಅಂದರು.  ಸಿಕ್ಕ ಕೆಲಸವನ್ನು ಬಿಡುವುದು ಬೇಡವೆಂದು ಸೇರಿಕೊಂಡೆ, ಹಲವಾರು ಸಮಸ್ಯೆಗಳ ನಡುವೆಯೂ ನನ್ನ ಕೆಲಸ ಸುಗಮವಾಗಿ ಸಾಗುತ್ತಿತ್ತು.   ಒಂದು ಹದಿನೈದು ದಿನಗಳಾಗುವಷ್ಟರಲ್ಲಿ ದುಬೈನಿಂದ ಬಂತು ಒಂದು ಫೋನ್ ಕಾಲ್!  ಅದು ಭಾರತೀಯ ಸೈನ್ಯದ ನಿವೃತ್ತ ಮೇಜರ್ ಜನರಲ್ ನಂಬಿಯಾರ್ ಅವರ ಫೋನ್ ಕಾಲ್ ಆಗಿತ್ತು!  ಏಳೆಂಟು ತಿಂಗಳ ಹಿಂದೆ ಅವರೊಡನೆ ಮಾತನಾಡಿ, ಅವರ ಕರೆಯ ಮೇರೆಗೆ ಕೇರಳದ  ಕಣ್ಣೂರಿಗೆ ಹೋಗಿ ಅವರನ್ನು ಭೇಟಿಯಾಗಿ ಬಂದಿದ್ದೆ.   ತಾವು ಸಧ್ಯದಲ್ಲಿಯೇ ಒಂದು ಸಂಸ್ಥೆಯನ್ನು ಆರಂಭಿಸಲಿದ್ದು, ಅಲ್ಲಿನ ಉಸ್ತುವಾರಿ ನೋಡಿಕೊಳ್ಳಲು ದುಬೈಗೆ ಬರಬೇಕೆಂದು ಆಮಂತ್ರಣ ನೀಡಿದ್ದರು.  ಅವರ ಕೆಲಸಕ್ಕೆ ನನ್ನ ಒಪ್ಪಿಗೆ ಸೂಚಿಸಿ ಬಂದಿದ್ದೆ, ಆ ನಂತರ ಅವರಿಂದ ಮತ್ತೆ ಯಾವುದೇ ಸಂದೇಶ ಬಂದಿರಲಿಲ್ಲ!  ನಾನೂ ಸಹಾ ದುಬೈನ ಕೆಲಸದ ಆಸೆಯನ್ನು ಮರೆತು ಬಿಟ್ಟಿದ್ದೆ.  ಆದರೆ,,,,,,, ಮತ್ತೆ ಬಂದ ಫೋನ್ ಕರೆ ನನ್ನನ್ನು ದುಬೈಗೆ ಹೋಗುವಂತೆ ಪ್ರೇರೇಪಿಸಿತ್ತು.  ಒಂದು ವಾರದಲ್ಲಿ ವೀಸಾ ಕಳುಹಿಸುತ್ತೇನೆ, ದುಬೈಗೆ ಬಂದುಬಿಡು ಎಂದವರಿಗೆ ನನ್ನ ಒಪ್ಪಿಗೆ ಸೂಚಿಸಿ, ನನ್ನ ಪಕ್ಕದಲ್ಲಿ ನಿಂತಿದ್ದ ನನ್ನ ಮಡದಿಯ ಮುಖ ನೋಡಿದೆ.   "ಮೊದಲು ದುಬೈಗೆ ಹೋಗಿ, ಇಲ್ಲಿದ್ದರೆ ಆಗುವುದಿಲ್ಲ, ಹಿಂದೆ ಮುಂದೆ ಯೋಚಿಸಬೇಡಿ" ಎಂದಳು.  

ಮತ್ತೊಮ್ಮೆ ರಾಘವೇಂದ್ರ ನಾವುಡರಿಗೆ ಫೋನ್ ಮಾಡಿದೆ, ಅವರು "ಓಯ್ ಮಾರಾಯ್ರೇ, ನೀವು ದುಬೈಗೆ ಹೋಗಿ, ಎಲ್ಲ ಒಳ್ಳೇದಾಗ್ತ ದೆ, ದೇವಿ ಅನ್ನಪೂರ್ಣೇಶ್ವರಿ ಕಾಪಾಡುತ್ತಾಳೆ"   ಅಂದರು.  ಬೆಂಗಳೂರಿನ ಸಂಸ್ಥೆಯಲ್ಲಿನ ಕೆಲಸದಲ್ಲಿ ಒಂದು ತಿಂಗಳು ಮುಗಿಸಿ, ಸಂಬಳ ಕೈಗೆ ಬರುವಷ್ಟರಲ್ಲಿ ದುಬೈನಿಂದ ವೀಸಾ ಬಂದೇ ಬಿಟ್ಟಿತು.  ಅಲ್ಲಿನ ಎಂಡಿಯವರಿಗೆ ಫೋನಿನಲ್ಲೇ ವಿಷಯ ತಿಳಿಸಿ "ಹೀಗೆ ತುರ್ತಾಗಿ ಕೆಲಸ ಬಿಡುತ್ತಿರುವುದಕ್ಕೆ ಕ್ಷಮೆಯಿರಲಿ" ಎಂದೆ.  ಮರುದಿನದ ಏರ ಇಂಡಿಯಾ ವಿಮಾನ ಹತ್ತಿಯೇಬಿಟ್ಟೆ.   ದುಬೈನಲ್ಲಿ ನಡುರಾತ್ರಿಯಲ್ಲಿ ಬಂದಿಳಿದವನಿಗೆ ನಂಬಿಯಾರ್ ಸಾಹೇಬರ ಮಗ ಆತ್ಮೀಯವಾಗಿ ಸ್ವಾಗತಿಸಿ, ತನ್ನ ಕಾರಿನಲ್ಲಿ  ಕಂಪನಿಯ ಅತಿಥಿಗೃಹಕ್ಕೆ ಕರೆದೊಯ್ದಿದ್ದ.  ಮರುದಿನ ಬೆಳಿಗ್ಗೆ ಎದ್ದು ಸಿದ್ಧನಾಗಿ ದುಬೈನ ಸುಂದರ ಮೆಟ್ರೋ ರೈಲಿನಲ್ಲಿ ಸೀದಾ ಆಫೀಸಿಗೆ ಬಂದೆ.  ನಗೆಮೊಗದಿಂದ ಸ್ವಾಗತಿಸಿದ ನಂಬಿಯಾರ್ ಅವರಿಂದ ನನ್ನ ಕೆಲಸದ ಬಗ್ಗೆ ಎಲ್ಲ ವಿವರಣೆಗಳನ್ನು ಪಡೆದು ಮೊದಲ ದಿನದ ಕೆಲಸ ಆರಂಭಿಸಿದೆ. 

ಸುಮಾರು 32 ತಿಂಗಳುಗಳ ಕಾಲ ಅನುಭವಿಸಿದ ಮಾನಸಿಕ ಯಾತನೆ ಕೊನೆಗೊಂಡಿದೆ.   "ಅವಕಾಶ ವಂಚಿತರ ಸ್ವರ್ಗ" ದುಬೈ ಮತ್ತೊಮ್ಮೆ ನನ್ನನ್ನು ಕೂಗಿ ಕರೆದು ತನ್ನ ಬಾಹುಗಳಲ್ಲಿ ಬಿಗಿದಪ್ಪಿದೆ.   ಈಗ ಮನಸ್ಸು ಉಲ್ಲಸಿತವಾಗಿದೆ, ಗಾಢ ನಿದ್ದೆಯಲ್ಲಿದ್ದ ನನ್ನೊಳಗಿನ ಬರಹಗಾರ ಈಗ ಎಚ್ಚೆತ್ತಿದ್ದಾನೆ, ನನ್ನ ಮನದ ಭಾವನೆಗಳಿಗೆ, ನೋವುಗಳಿಗೆ, ನಿರಾಶೆಯ ನಿಟ್ಟುಸಿರುಗಳಿಗೆ, ಭರವಸೆಯ ನಿರೀಕ್ಷೆಗಳಿಗೆ, ನಾಳೆಯ ಕನಸುಗಳಿಗೆ ಅಕ್ಷರ ರೂಪ ಕೊಡಲಿದ್ದಾನೆ.   


Earn to Refer People