Saturday, May 22, 2010

ಅರಬ್ಬರ ನಾಡಿನಲ್ಲಿ....೪.... ಅನಿರೀಕ್ಷಿತ ಮುಖಾಮುಖಿ.

(ಮೊನ್ನೆ ದುಬೈನಿಂದ ಬೆಂಗಳೂರಿಗೆ ಬಂದವನು ಈ ಅನುಭವವನ್ನು ಬರೆಯಲು ಇಂದು ಬೆಳಿಗ್ಗೆ ಕುಳಿತೆ. ಕೆಳಗಿನಿಂದ ಮಗಳು ಟಿವಿಯಲ್ಲಿ ನ್ಯೂಸ್ ನೋಡಿ ಕೂಗಿಕೊಂಡಳು, "ಡ್ಯಾಡಿ, ದುಬೈನಿಂದ ಬರುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆಯಂತೆ". ತಕ್ಷಣ ಕೆಳಗೋಡಿದವನು ದುಬೈನಿಂದ ಮಂಗಳೂರಿಗೆ ಬಂದಿಳಿದ ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನ ದುರಂತಕ್ಕೀಡಾಗಿ ಸುಮಾರು ೧೬೦ ಜನ ಸಾವಿಗೀಡಾದ ಸುದ್ಧಿ ಕೇಳಿ ಗರಬಡಿದವನಂತೆ ನಿಂತೆ. ತಮ್ಮ ಪ್ರೀತಿ ಪಾತ್ರರನ್ನು ನೋಡಲು ಆ ಮರುಭೂಮಿಯ ನಾಡಿನಿಂದ ಬಹುದಿನಗಳ ನಂತರ ಹೊರಟು ಬಂದು ದುರಂತ ಸಾವಿಗೀಡಾದ ಆ ನತದೃಷ್ಟರಿಗೆ ಈ ನನ್ನ ಲೇಖನವನ್ನು ಅರ್ಪಿಸುತ್ತಿದ್ದೇನೆ. ಅವರ ಆತ್ಮಗಳಿಗೆ ಶಾಂತಿ ಸಿಗಲಿ, ಅವರ ಸಂಬಂಧಿಕರಿಗೆ ಭಗವಂತ ಆ ಅತೀವ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ.)

ಕೆಲವು ತುರ್ತು ಕಾರಣಗಳಿಂದ ಆತುರಾತುರವಾಗಿ ಬೆಂಗಳೂರಿಗೆ ಹೊರಟೆ. ಸಂಜೆ ಐದೂವರೆಗೆ ಮನೆಗೆ ಬಂದ ನಂತರ ಎಲ್ಲ ಏರಲೈನ್ಸ್ ಗಳ ಅಂತರ್ಜಾಲ ತಾಣಗಳನ್ನು ಸುತ್ತಾಡಿ ಶೋಧಿಸಿದರೆ ಮಲ್ಯರ ಕಿಂಗ್ ಫಿಷರ್ನಲ್ಲಿ ಒಂದೇ ಒಂದು ಸೀಟಿತ್ತು, ಅದೂ ಕೊನೆಯ ೩೫ನೆ ನಂಬರಿನ ಸೀಟು, (ಟಾಯ್ಲೆಟ್ ಪಕ್ಕದ್ದು!) ಬಿಟ್ಟರೆ ಬೇರೆ ಯಾವ ದಾರಿಯೂ ಇರಲಿಲ್ಲ, ವಿಧಿಯಿಲ್ಲದೆ ಸಾಲದ ಕಾರ್ಡನ್ನು ಝಳಪಿಸಿ ಬುಕ್ ಮಾಡಿ, ತರಾತುರಿಯಲ್ಲಿ ಒಂದಷ್ಟು ಬಟ್ಟೆಗಳನ್ನು ನನ್ನ ಸೂಟ್ಕೇಸಿನಲ್ಲಿ ತುಂಬಿಕೊಂಡು ಸಿದ್ಧನಾದೆ. ಮೊದಲೇ ತಿಳಿಸಿದ್ದಂತೆ ನನ್ನ ಶಿಷ್ಯ ಅಶೋಕ ಸಮಯಕ್ಕೆ ಸರಿಯಾಗಿ ಬಂದು ಪಿಕಪ್ ಮಾಡಿದ. ಟರ್ಮಿನಲ್-೧ರಲ್ಲಿ ಎಲ್ಲ ದಾಖಲಾತಿಗಳ ಪರೀಕ್ಷಾ ವಿಧಿವಿಧಾನಗಳನ್ನು ಬಹು ಪ್ರಯಾಸದಿಂದ ಮುಗಿಸಿ, ಅಷ್ಟುದ್ಧವಿದ್ದ ಲಾಂಜಿನಲ್ಲಿ ನಡೆಯುತ್ತಾ, ಡ್ಯೂಟ್ಯಿಫ್ರೀ ಶಾಪಿಗೆ ಬರುವ ಹೊತ್ತಿಗೆ ಸಣ್ಣಗೆ ಕಾಲುಗಳು ನೋಯತೊಡಗಿದವು. ನನ್ನ ನೆಚ್ಚಿನ ಬ್ಲಾಕ್ ಲೇಬಲ್ ೨ಲೀಟರ್, ಮಾರ್ಲ್ ಬೋರೋ ಒಂದು ಡಬಲ್ ಪ್ಯಾಕ್, ಒಂದಷ್ಟು ಚಾಕಲೇಟ್ಗಳನ್ನು ಖರೀದಿಸಿ ಮತ್ತಷ್ಟು ಹಗುರಾದ ಜೇಬಿನೊಡನೆ ೧೩೩ನೆ ಗೇಟಿನ ಕಡೆಗೆ ನಡೆದೆ. ಇನ್ನೂ ಸಾಕಷ್ಟು ಸಮಯವಿದ್ದುದರಿಂದ ನನ್ನ ಲ್ಯಾಪ್ಟಾಪ್ ತೆಗೆದು, ಹೆಡ್ ಫೋನ್ ಸಿಗಿಸಿಕೊಂಡು, ಯೂಟ್ಯೂಬಿನಲ್ಲಿ ಸಿ.ಅಶ್ವಥರ ಧ್ವನಿಯಲ್ಲಿದ್ದ "ಕನ್ನಡವೇ ಸತ್ಯ" ಕಾರ್ಯಕ್ರಮದ ಸುಮಧುರ ಗೀತೆಗಳನ್ನು ಆಸ್ವಾದಿಸುತ್ತಾ ಕುಳಿತೆ.

ಅದಾಗಲೇ ಸಾಕಷ್ಟು ಜನ ಬೆಂಗಳೂರಿಗೆ ಹೋಗುವವರು ಬಂದು ಸೇರಿದ್ದರು, ಕೆಲವರ ಮುಖದಲ್ಲಿ ಅದೇನೋ ಆತಂಕ, ದುಗುಡ, ಇನ್ನು ಕೆಲವರ ಮೊಗದ ತುಂಬಾ ಬಹು ದಿನಗಳ ನಂತರ ಊರಿಗೆ ಹೋಗುತ್ತಿರುವ ಖುಷಿಯೋ ಖುಷಿ, ಮತ್ತೆ ಕೆಲವರು ಡ್ಯೂಟಿ ಫ್ರೀನಲ್ಲಿ ತಾವು ಕೊಂಡ ವಸ್ತುಗಳನ್ನೆಲ್ಲ ಮತ್ತೊಮ್ಮೆ ಪರೀಕ್ಷಿಸಿಕೊಳ್ಳುತ್ತಿದ್ದರು, ಅಮ್ಮನಿಗೆ, ಅಪ್ಪನಿಗೆ, ಅಕ್ಕನಿಗೆ, ತಂಗಿಗೆ, ಅಣ್ಣನ ಮಕ್ಕಳಿಗೆ ಕೊಂಡ ಉಡುಗೊರೆಗಳನ್ನೆಲ್ಲ ಪರೀಕ್ಷಿಸುತ್ತ ಮತ್ತೆ ಯಾರಿಗಾದರೂ ಏನಾದರೂ ಕೊಳ್ಳಬೇಕಿದೆಯೇ ಎಂದು ಮತ್ತೊಮ್ಮೆ ಮಗದೊಮ್ಮೆ ಖಾತ್ರಿ ಪಡಿಸಿಕೊಳ್ಳುತ್ತಿದ್ದರು. ಕೆಲವು ಯುವಕರು ತಾವು ಧರಿಸಿದ ಹೊಸ ಬಟ್ಟೆ, ಸೊಂಟಕ್ಕೆ ಸಿಕ್ಕಿಸಿದ ಹೊಸ ಮೊಬೈಲ್ ಎಲ್ಲರಿಗೂ ಕಾಣಲೆಂದು ಸುಮ್ಮನೆ ಅತ್ತಿಂದಿತ್ತ ಗಸ್ತು ಹೊಡೆಯುತ್ತಿದ್ದರು. ಕೆಲವು ವಯ್ಯಾರಗಿತ್ತಿ ಯುವತಿಯರು ತಾವು ಕೊಂಡ ಹೊಸ ಚೈನು, ನೆಕ್ಲೇಸುಗಳನ್ನು ಎಲ್ಲರಿಗೂ ಕಾಣುವಂತೆ ತೋರಿಸಿಕೊಳ್ಳಲು ಬಹಳ ಶ್ರಮ ಪಡುತ್ತಿದ್ದರು. ಹೊಸದಾಗಿ ಮದುವೆಯಾಗಿ ಗಂಡನೊಡನೆ ಪರದೇಶಕ್ಕೆ ಹಾರಿ ಬಂದು, ಸಾರ್ಥಕ ಸಂಸಾರ ನಡೆಸಿ ಒಂದು ಮಗುವಿನ ತಾಯಾಗಿ, ಹಸುಗೂಸಿನೊಡನೆ ಪ್ರಯಾಣ ಬೆಳೆಸಿದ್ದ ಒಂದಿಬ್ಬರು ಪ್ರಮದೆಯರ ಮುಖದಲ್ಲಿನ ಸಂತೃಪ್ತ ಭಾವ ನನ್ನ ಕಣ್ತುಂಬುತ್ತಿತ್ತು. ಹಸುಗಂದನನ್ನು ಮುದ್ದಿಸುತ್ತ ಲಲ್ಲೆಗರೆಯುತ್ತಿದ್ದ ಅವರನ್ನು ನೋಡುವುದೇ ಅಲ್ಲಿದ್ದ ಇತರ ಪ್ರಯಾಣಿಕರಿಗೆಲ್ಲ ಒಂದು ಆನಂದದ ವಿಚಾರವಾಗಿತ್ತು. ಒಂದಿಬ್ಬರಂತೂ ವಿಮಾನ ಇಳಿಯುವಾಗ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಯಾರೆಲ್ಲ ಬರಬಹುದು, ಅವರ ಮುಂದೆ ಹೇಗೆಲ್ಲ ಫೋಸು ಕೊಡಬೇಕೆಂಬುದರ ಬಗ್ಗೆ ದೊಡ್ಡ ಚರ್ಚೆಯನ್ನೇ ನಡೆಸಿದ್ದರು! ಹೀಗೆ ವಿಮಾನ ನಿಲ್ದಾಣದ ಸುಂದರ ದೃಶ್ಯಗಳನ್ನು ಆಸ್ವಾದಿಸುತ್ತಾ ಸಿ.ಅಶ್ವಥರ ಗಾನಾಮೃತದಲ್ಲಿ ಮೈ ಮರೆತಿದ್ದ ನನ್ನ ದೃಷ್ಟಿಯನ್ನು ಸೆಳೆದಿದ್ದು ಆತುರಾತುರವಾಗಿ ಬಂದ ಮೂವರು ಪ್ರಯಾಣಿಕರು. ಕುಳಿತುಕೊಳ್ಳಲು ಅಲ್ಲಿ ಇಲ್ಲಿ ಜಾಗ ಹುಡುಕಿ ಕೊನೆಗೆ ನನ್ನ ಪಕ್ಕದಲ್ಲಿ ಖಾಲಿ ಇದ್ದುದ್ದನ್ನು ಕಂಡು ಖುಷಿಯಿಂದ ಇತ್ತ ಬಂದರು. ಮೂವರ ಹೆಗಲಲ್ಲಿಯೂ ನೇತಾಡುತ್ತಿದ್ದ ಲ್ಯಾಪ್ ಟಾಪ್ ಬ್ಯಾಗುಗಳಿಂದಲೇ ಅವರು ಪಕ್ಕಾ "ಸಾಫ್ಟ್ ವೇರ್ ತಂತ್ರಜ್ಞರು" ಎಂದು ಹೇಳಬಹುದಿತ್ತು. ಇಬ್ಬರು ಚಿಗುರುಮೀಸೆಯ ಯುವಕರು, ಮತ್ತೊಬ್ಬ ಮಧ್ಯವಯಸ್ಕ, ಬಹುಶಃ ಅವರ ಪ್ರಾಜೆಕ್ಟ್ ಮೇನೇಜರ್ ಇರಬಹುದು ಅಂದುಕೊಂಡೆ. ನನ್ನ ಪಕ್ಕ ಆ ಯುವಕರು ಆಸೀನರಾದ ನಂತರ ಕುಳಿತುಕೊಳ್ಳಲು ಬಂದ ಮಧ್ಯ ವಯಸ್ಕ ಒಮ್ಮೆ ನನ್ನತ್ತ ನೋಡಿದ, ನಾನೂ ಅವನನ್ನು ನೋಡಿದೆ, ಹಾವು ತುಳಿದವನಂತೆ ಒಮ್ಮೆಗೇ ಬೆಚ್ಚಿ ಬಿದ್ದ ಅವನು ಗಕ್ಕನೆ ಮುಖ ಅತ್ತ ತಿರುಗಿಸಿಕೊಂಡು ಬಿಟ್ಟ! ಅರೆ, ಇವನಿಗೇನಾಯ್ತು ಅಂದುಕೊಳ್ಳುವಷ್ಟರಲ್ಲಿ ಆ ಯುವಕರಿಗೆ ಪಿಸುಮಾತಿನಲ್ಲಿ ಅದೇನೋ ಹೇಳಿ ದುರ್ದಾನ ತೆಗೆದುಕೊಂಡ ದೂರ್ವಾಸನಂತೆ ಬರಬರನೆ ಅಲ್ಲಿಂದ ದೂರ ನಡೆದುಬಿಟ್ಟ!

ಅವನ ಅಸಾಮಾನ್ಯ ವರ್ತನೆಯನ್ನು ಕಂಡ ನನಗೆ ಅದೇನೋ ಅನುಮಾನ ಬಂದು ಅವನ ಚಲನವಲನಗಳನ್ನೇ ಗಮನಿಸಲಾರಂಭಿಸಿದೆ. ಸ್ವಲ್ಪ ದೂರದಲ್ಲಿ, ನಮ್ಮಿಂದ ಮೂರನೆಯ ಸಾಲಿನಲ್ಲಿ ಖಾಲಿಯಿದ್ದ ಜಾಗದಲ್ಲಿ ಕುಳಿತ ಅವನು ಗಹನವಾಗಿ ಅದೇನನ್ನೋ ಯೋಚಿಸಲಾರಂಭಿಸಿದ. ಅವನ ಎರಡೂ ಕೈಗಳ ಬೆರಳುಗಳು ಬಿಡುವಿಲ್ಲದಂತೆ ಒಂದಕ್ಕೊಂದು ಮಸೆಯುತ್ತಿದ್ದವು. ಅವನ ಮನಸ್ಸಿನಲ್ಲಿ ಅದೇನೋ ಭಯಂಕರ ತಾಕಲಾಟ ಆರಂಭವಾದ ಕುರುಹು ಅದಾಗಿತ್ತು. ಚೆನ್ನಾಗಿಯೇ ವಿಮಾನ ನಿಲ್ದಾಣದೊಳಕ್ಕೆ ತಮ್ಮೊಡನೆ ಬಂದ ಪ್ರಾಜೆಕ್ಟ್ ಮೇನೇಜರ್ ಹೀಗೆ ದೂರ ಹೋಗಿ ಕುಳಿತು ಒದ್ದಾಡುತ್ತಿದ್ದುದನ್ನು ಕಂಡ ನನ್ನ ಪಕ್ಕದಲ್ಲಿ ಕುಳಿತಿದ್ದ ಯುವಕರು ಅವರವರಲ್ಲೇ ಪಿಸುಮಾತಿನಲ್ಲಿ ಮಾತಾಡಿಕೊಳ್ಳುತ್ತಾ ತಮ್ಮೊಳಗೆ ನಗುತ್ತಿದ್ದರು. ನನಗೋ ಕೆಟ್ಟ ಕುತೂಹಲ! ಯಾಕೆ ಆ ಮಧ್ಯವಯಸ್ಕ ಹಾಗೆ ಹೋಗಿ ದೂರ ಕುಳಿತ? ನಾನು ಅವನನ್ನು ಗಮನಿಸುತ್ತಿದ್ದೇನೆಂದು ಅವನಿಗೆ ಅರ್ಥವಾಯಿತೋ ಏನೋ, ಅಲ್ಲಿಂದಲೂ ಎದ್ದವನ್ನು ನನ್ನತ್ತ ಒಮ್ಮೆ ಕೆಕ್ಕರಿಸಿ ನೋಡಿ ಮತ್ತಷ್ಟು ದೂರ ಹೋಗಿ ನನಗೆ ಕಾಣದಂತೆ ಕುಳಿತ. ಅರೆ ಇವನ, ಇವನ್ಯಾವನಪ್ಪಾ ಇವನು ದೂರ್ವಾಸ, ನನಗೂ ಅವನಿಗೂ ಏನು ಸಂಬಂಧ, ಇವನೇಕೆ ಹಾಗೆ ನನ್ನನ್ನು ಕೆಕ್ಕರಿಸಿ ನೋಡಿ ಸಿಟ್ಟಿನಿಂದ ಎದ್ದು ಹೋದ? ಹಲವಾರು ಪ್ರಶ್ನೆಗಳು ತಲೆಯಲ್ಲಿ ಸುತ್ತಲಾರಂಭಿಸಿದವು. ವಿಮಾನದೊಳಕ್ಕೆ ಪ್ರವೇಶಿಸುವ ವೇಳೆಯಾಯಿತು, ಹೇಗಿದ್ದರೂ ನನ್ನದು ಕೊನೆಯ ಟಾಯ್ಲೆಟ್ ಪಕ್ಕದ ಸೀಟೆಂದು ಗೊತ್ತಿತ್ತಲ್ಲ, ನನಗೇನೂ ಆತುರವಿರಲಿಲ್ಲ, ಎಲ್ಲರೂ ಆತುರಾತುರವಾಗಿ ವಿಮಾನದೊಳಕ್ಕೆ ಹೊರಟರು. ನಾನು ಕೊನೆಯಲ್ಲಿ ಹೋಗೋಣವೆಂದು ಕುಳಿತೇ ಇದ್ದೆ. ನನ್ನ ಪಕ್ಕದಲ್ಲಿದ್ದ ಯುವಕರು ಅದಾವಾಗಲೋ ವಿಮಾನ ಹತ್ತಿದ್ದರು. ಇದ್ದಕ್ಕಿದ್ದಂತೆ ಅತ್ತಲಿಂದ ಬಂದ ಆ ದೂರ್ವಾಸ ಮತ್ತೊಮ್ಮೆ ನನ್ನತ್ತ ಕೆಕ್ಕರಿಸಿ ನೋಡುತ್ತಾ ವಿಮಾನದೊಳಕ್ಕೆ ಹೋದ. ಒಮ್ಮೆ ಗಂಭೀರವಾಗಿ ನೆಟ್ಟ ನೋಟದಿಂದ ಅವನತ್ತಲೇ ನೋಡಿದೆ, ಅಗ ಕಾಣಿಸಿತು, ಅವನ ಕುತ್ತಿಗೆಯ ಮೇಲಿದ್ದ ದೊಡ್ಡ ಕಪ್ಪು ಗುರುತು! ಇವನನ್ನು ಈ ಹಿಂದೆ ಎಲ್ಲಿ ನೋಡಿದ್ದೆ, ಉಹೂ, ನೆನಪಿಗೆ ಬರಲೊಲ್ಲದು, ದುಬೈನ ಯಾವುದಾದರೂ ಮಾಲುಗಳಲ್ಲಿ, ಬಾರುಗಳಲ್ಲಿ, ಹೋಟೆಲುಗಳಲ್ಲಿ ಅಥವಾ ಟ್ರಾಫಿಕ್ ಜಾಮಿನಲ್ಲಿ ಎಲ್ಲಾದರೂ ನಾನು ಇವನೊಡನೆ ಜಗಳವಾಡಿದ್ದೆನೇ, ಇಲ್ಲ. ಮತ್ತೆ ಇವನ್ಯಾರು, ಎಲ್ಲಿ ನೋಡಿದ್ದೆ? ವಿಠಲಾಚಾರ್ಯರ ಹಳೆಯ ಚಿತ್ರದ "ಯಾರು ಯಾರು ನೀ ಯಾರು? ಎಲ್ಲಿಂದ ಬಂದೆ ಮುಖ ತೋರು" ಎಂಬ ಗೀತೆಯನ್ನು ನನಗೇ ತಿಳಿಯದಂತೆ ಗುನುಗಲಾರಂಭಿಸಿದ್ದೆ!!

ಕೊನೆಗೆ ಸಾವಕಾಶವಾಗಿ ಬಂದು ನನ್ನ ಸೀಟಿನಲ್ಲಿ ಕುಳಿತೆ, ಕುಲುಕಾಡುತ್ತಾ ಹೊರಟ ವಿಮಾನ ಭರ್ರನೆ ಮೇಲೇರಿ ವೇಗ ಪಡೆದುಕೊಂಡಂತೆ ಗಗನಸಖಿಯರು ತಮ್ಮ ತಳ್ಳುಗಾಡಿಗಳೊಡನೆ ಬಂದು ಎಲ್ಲರಿಗೂ ಪಾನೀಯ, ಆಹಾರಗಳನ್ನು ಸರಬರಾಜು ಮಾಡತೊಡಗಿದರು. ಮೂರು ಸೀಟಿನ ಕೊನೆಯ ಬದಿಯಲ್ಲಿ ಕುಳಿತಿದ್ದ ನನಗೆ ಅವರು ಹೋಗುವಾಗ ಬರುವಾಗಲೆಲ್ಲ ಭುಜಕ್ಕೋ ಕೈಯಿಗೋ ಅವರ ಕೈ ಕಾಲುಗಳು ತಗುಲಿದಾಗ ಒಂದು ಸಿಹಿಯಾದ ನಗುವನ್ನು ನನ್ನತ್ತ ಎಸೆದು "ಸ್ಸಾರಿ" ಎಂದು ಮುನ್ನಡೆಯುತ್ತಿದ್ದರು. ಇಂಥ ಸುಂದರ ನಗುವಿನ ಒಡತಿಯರನ್ನು ಆಯ್ಕೆ ಮಾಡಿದ ಆ ಮಲ್ಯನ ಕಿಂಗ್ ಫಿಷರ್ ನ ಮಾನವ ಸಂಪನ್ಮೂಲದವರನ್ನು ಮನದಲ್ಲೇ ಹೊಗಳುತ್ತಿದ್ದೆ. ಆ ನಂತರ ಶುರುವಾಯಿತು ನೋಡಿ, ಸ್ವಲ್ಪ ಸ್ವಲ್ಪವಾಗಿ ಪಾನೀಯಗಳನ್ನು ಗುಟುಕರಿಸಿದ ಮಂದಿ ಒಬ್ಬೊಬ್ಬರಾಗಿ ಟಾಯ್ಲೆಟ್ಟಿನ ಕಡೆಗೆ ಬರತೊಡಗಿದರು, ಸುಮಾರು ಹದಿನೈದು ಜನ ಸಾಲಿನಲ್ಲಿ ಹೊಟ್ಟೆ ಹಿಡಿದು ನಿಂತದ್ದು ಕಂಡಾಗ ಇವರೇನು ವಿಮಾನದಲ್ಲಿ ಪ್ರಯಾಣಿಸಲು ಬಂದಿದ್ದಾರೋ ಅಥವಾ ಆ ವಿಮಾನದ ಟಾಯ್ಲೆಟ್ಟಿನ ಮಜಾ ಅನುಭವಿಸಲು ಬಂದಿದ್ದಾರೋ ಎಂಬ ಅನುಮಾನ ಮನದಲ್ಲಿ ಸುಳಿದು ಮೀಸೆಯಡಿಯಲ್ಲೇ ನಗುತ್ತಿದ್ದೆ. ಎರಡು ಪೆಗ್ ಏರಿಸಿದವನಿಗೆ ಸ್ವಲ್ಪ ಹಾಗೆಯೇ ಜೋಂಪು ಹತ್ತಿ ಕಣ್ಮುಚ್ಚಿದರೆ ಬಂದು ಹೋಗುವವರೆಲ್ಲ ಬೇಕಾಬಿಟ್ಟಿ ನನ್ನ ಭುಜಕ್ಕೆ ತಮ್ಮ ಕೈಗಳನ್ನು ತಗುಲಿಸಿ, ಸೀಟಿಗೊರಗಿದಾಗ ಅವರ ದೇಹದ ಭಾರವನ್ನೆಲ್ಲ ಬಿಟ್ಟು, ನನ್ನ ನಿದ್ದೆಯೆಲ್ಲ ಹಾರಿ ಹೋಗಿ, ನನ್ನ ಭುಜವೊಂದು ಸಾರ್ವಜನಿಕ ಆಸ್ತಿಯಾಗಿ ಹೋಯಿತು! ಈ ಪೀಕಲಾಟದಿಂದ ಸಾಕಾಗಿ ಜೀವನದಲ್ಲಿ ಮತ್ತಿನ್ನೆಂದೂ ಈ ಟಾಯ್ಲೆಟ್ ಪಕ್ಕದ ೩೫ನೆ ನಂಬರಿನ ಸೀಟಿನಲ್ಲಿ ಕುಳಿತು ಪ್ರಯಾಣಿಸಬಾರದೆಂದು ಭೀಷ್ಮ ಪ್ರತಿಜ್ಞೆ ಮಾಡಿ ಬಿಟ್ಟೆ!

ಕೊನೆಗೂ ಈ ಪ್ರಯಾಸದ ಪ್ರಯಾಣ ಮುಗಿದು ನನ್ನ ನಿದ್ರಾಭಂಗ ಮಾಡಿದವರನ್ನೆಲ್ಲ ಮನಸ್ಸಿನಲ್ಲೆ ಶಪಿಸುತ್ತ ಎದ್ದು ನಿಧಾನವಾಗಿ ಹೊರ ನಡೆದೆ. ವಿಮಾನದಿಂದ ಕೆಳಗಿಳಿದವನನ್ನು ನಮ್ಮ ಉದ್ಯಾನ ನಗರಿಯ ತಂಪುಗಾಳಿ ಮುಖ ಸವರಿ ಸ್ವಾಗತ ಕೋರಿದಾಗ ಮನ ಉಲ್ಲಸಿತವಾಯಿತು, ಪ್ರಯಾಣದ ಆಯಾಸವೆಲ್ಲಾ ಕ್ಷಣದಲ್ಲಿ ಮಂಗ ಮಾಯ! ವಲಸೆ ವಿಭಾಗದ ಉರಿಮೂತಿಯ ಅಧಿಕಾರಿ ಸ್ವಲ್ಪ ಹರಿದಿದ್ದ ನನ್ನ ಪಾಸ್ಪೋರ್ಟ್ ನ ಮೊದಲ ಪುಟವನ್ನು ತೋರಿಸಿ "ನೀವು ಹೊಸ ಪಾಸ್ ಪೋರ್ಟ್ ತೆಗೆದುಕೊಂಡಲ್ಲಿ ಮಾತ್ರ ಮುಂದಿನ ಸಲ ಪ್ರಯಾಣಿಸಬಹುದು, ಹುಶಾರಾಗಿರಿ" ಎಂದದ್ದನ್ನು ಕೇಳಿ ಹರಕೆಯ ಕುರಿಯಂತೆ ಗೋಣು ಅಲ್ಲಾಡಿಸಿ ಹೊರ ಬಂದು ನಿಟ್ಟುಸಿರು ಬಿಟ್ಟೆ. ಬ್ಯಾಗೇಜ್ ಕೌಂಟರಿಗೆ ಬಂದು ನನ್ನ ಸೂಟ್ಕೇಸಿಗಾಗಿ ಕಾಯುತ್ತಿದ್ದೆ, ಪಕ್ಕದಲ್ಲಿ ನೋಡಿದರೆ ಅದೇ ಉರಿ ಮೂತಿಯ ಸಿಂಗಳೀಕ! ನನ್ನನ್ನು ಕಂಡವನೆ ಥಟ್ಟನೆ ಹೋಗಿ ದೂರ ನಿಂತ. ಅರೆ, ಮತ್ತೆ ಅವನನ್ನೇ ಗಮನವಿಟ್ಟು ನೋಡಿದೆ, ಅವನಾರೆಂದು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದೆ, ಸ್ವಲ್ಪ ಸ್ವಲ್ಪವೇ ಅವನ ಮುಖ ನನ್ನ ಸ್ಮೃತಿಪಟಲದ ಮೇಲೆ ಮೂಡಲಾರಂಭಿಸಿತು, ಎಲಾ ನನ್ನ ನೆನಪಿನ ಶಕ್ತಿಯೇ, ಫಟ್ಟೆಂದು ನೆನಪಿಗೆ ಬಂದೇ ಬಿಟ್ಟಿತು, ಅವನು ಉತ್ತರ ಪ್ರದೇಶದ ಎಂ.ಕೆ.ತಿವಾರಿ,(ಹೆಸರು ಬದಲಾಯಿಸಲಾಗಿದೆ).

ಸುಮಾರು ಹತ್ತು ವರ್ಷಗಳ ಹಿಂದೆ, ನಾನು ಉದ್ಯಾನ ನಗರಿಯ ಹಳೆ ವಿಮಾನ ನಿಲ್ದಾಣದ ರಸ್ತೆಯಲ್ಲಿನ ಬಹು ರಾಷ್ಟ್ರೀಯ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿದ್ದಾಗ ಪ್ರತಿ ದಿನ ಅಲ್ಲೊಂದು ಇಲ್ಲೊಂದು ಕಂಪ್ಯೂಟರ್ ಭಾಗಗಳು, ಲ್ಯಾಪ್ ಟಾಪ್ ಗಳು ಕಾಣೆಯಾದ ಬಗ್ಗೆ ದೂರುಗಳು ಬರುತ್ತಿದ್ದವು. ಏಳಂತಸ್ತಿನ ಆ ಕಟ್ಟಡದ ಪ್ರತಿಯೊಂದು ಮಹಡಿಯಲ್ಲೂ ಒಬ್ಬೊಬ್ಬ ಭದ್ರತಾ ರಕ್ಷಕ ೨೪ ಘಂಟೆಯೂ ಇರುತ್ತಿದ್ದರು, ಎಲ್ಲೆಡೆ ಸಿಸಿಟಿವಿ ಕ್ಯಾಮರಾಗಳು, ಆಕ್ಸೆಸ್ ಕಂಟ್ರೋಲ್ ಬಾಗಿಲುಗಳು, ದೊಡ್ಡದಾದ ಕಂಟ್ರೋಲ್ ರೂಮ್, ಎಲ್ಲ ಚಲನವಲನಗಳನ್ನೂ ಗಮನಿಸಬಹುದಾದ ಅತ್ಯಂತ ಸುಧಾರಿತ ವ್ಯವಸ್ಥೆ ಇವೆಲ್ಲ ಇದ್ದೂ ಕೂಡಾ ಪ್ರತಿ ದಿನ ಕಳ್ಳತನಗಳು ನಡೆಯುತ್ತಲೇ ಇದ್ದವು. ನಮಗೆ ಸಂಸ್ಥೆಯ ಮುಖ್ಯಸ್ಥರಿಂದ ಪ್ರತಿದಿನ ಮಂಗಳಾರತಿ, ಸಹಸ್ರನಾಮಾರ್ಚನೆಗಳು ಆಗುತ್ತಲೇ ಇದ್ದವು. ಕೊನೆಗೆ ಪಣ ತೊಟ್ಟು ಹೇಗಾದರೂ ಆ ಚಾಣಾಕ್ಷ ಕಳ್ಳರನ್ನು ಹಿಡಿಯಲೇ ಬೇಕೆಂದು ತಂತ್ರ ರೂಪಿಸಿ ಖೆಡ್ಡಾ ತೋಡಿದಾಗ ಹಳ್ಳಕ್ಕೆ ಬಿದ್ದ ಕಳ್ಳ ಆನೆ, ಈ ತಿವಾರಿ. ಅದೇ ಸಂಸ್ಥೆಯಲ್ಲಿ ನೆಟ್ವರ್ಕ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಅವನು, ತನ್ನ ದುರ್ನಡತೆಯಿಂದಾಗಿ ಕೆಲಸ ಕಳೆದುಕೊಂಡಿದ್ದ, ಆದರೆ ಅವನ ಬಗ್ಗೆ ಭದ್ರತಾ ವಿಭಾಗಕ್ಕೆ ಯಾವುದೇ ಮಾಹಿತಿಯಿರಲಿಲ್ಲ. ತನ್ನ ಆಕ್ಸೆಸ್ ಕಾರ್ಡ್ ಹಿಂದಿರುಗಿಸದೆ ಪ್ರತಿದಿನ ಎಲ್ಲ ಕೆಲಸಗಾರರೂ ಹೋದ ನಂತರ ನಮ್ಮ ಭದ್ರತಾ ರಕ್ಷಕರೊಂದಿಗೆ ನಗು ನಗುತ್ತಾ ಮಾತನಾಡಿ ಒಳ ಹೋಗುತ್ತಿದ್ದ ಇವನು ಒಂದು ಕಡೆಯಿಂದ ನೂರಾರು ಮೆಮೋರಿ, ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್ಗಳನ್ನು ಅಲ್ಲಿಂದ ಲಪಟಾಯಿಸಿದ್ದ. ಇದರ ಅರಿವಿಲ್ಲದ ರಕ್ಷಕರು ಹೋಗುವಾಗ ಬರುವಾಗಲೆಲ್ಲ ಅವನಿಗೆ ಸೆಲ್ಯೂಟು ಹೊಡೆಯುತ್ತಿದ್ದರು. ಅವನು ನಿರಾತಂಕವಾಗಿ ತನ್ನ ದುರುಳ ಕಾರ್ಯವನ್ನು ಮುಂದುವರೆಸಿದ್ದ. ಒಂದು ದಿನ ರಾತ್ರಿ ೧ ಘಂಟೆಯಲ್ಲಿ ಧಿಡೀರ್ ಭೇಟಿಯಿತ್ತ ನನ್ನ ಕೈಗೆ ಮಾಲು ಸಮೇತ ಸಿಕ್ಕಿ ಬಿದ್ದಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದ ಅವನಿಗೆ ಸರಿಯಾಗಿ ನಾಲ್ಕು ಗೂಸಾ ಕೊಟ್ಟು, ವಿಮಾನಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪೊಲೀಸರ ವಶಕ್ಕೊಪ್ಪಿಸಿದ್ದೆ. ಅವರ ರಾಜಾತಿಥ್ಯದ ನಂತರ ತಿವಾರಿ ತನ್ನ ಕಳುವುಗಳನ್ನೆಲ್ಲ ಒಪ್ಪಿಕೊಂಡಿದ್ದ, ಸುಮಾರು ೫೦ ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಅವನ ಮನೆ ಜಫ್ತಿ ಮಾಡಿ ವಶಪಡಿಸಿಕೊಳ್ಳಲಾಗಿತ್ತು. ಅವನಿಗೆ ಸಹಕರಿಸಿದ ಆರೋಪದ ಮೇಲೆ ಇನ್ನಿಬ್ಬರು ಬಿಹಾರಿ ಬಾಬುಗಳೂ ಬಂಧನಕ್ಕೊಳಗಾಗಿದ್ದರು. ಅವರ ಅಪರಾಧಗಳು ಸಾಬೀತಾಗಿ ನ್ಯಾಯಾಲಯದಲ್ಲಿ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯೂ ಆಗಿತ್ತು. ಪೊಲೀಸ್ ಅಧಿಕಾರಿಯೊಬ್ಬರು ಸಿಟ್ಟಿನ ಭರದಲ್ಲಿ ಅವನಿಗೆ ತಮ್ಮ ಲಾಠಿಯಿಂದ ಹೊಡೆದಾಗ ಅವನ ಕುತ್ತಿಗೆಯ ಮೇಲೆ ಬಲವಾದ ಗಾಯವಾಗಿ ದಪ್ಪ ಕಪ್ಪನೆಯ ಮಚ್ಚೆ ಮೂಡಿತ್ತು. ಅದೇ ಗುರುತು ಅವನು ಯಾರೆಂದು ನನಗೆ ಮನವರಿಕೆ ಮಾಡಿಕೊಟ್ಟಿತ್ತು.

ನನ್ನ ಸೂಟ್ಕೇಸ್ ಎತ್ತಿಕೊಂಡು ಅಚೆ ಬರುವಷ್ಟರಲ್ಲಿ ಆಸಾಮಿ ಎಸ್ಕೇಪ್! ಅಂದು ನನ್ನ ಕೈಗೆ ಕಳ್ಳತನ ಮಾಡಿ ಸಿಕ್ಕಿ ಬಿದ್ದು ಜೈಲಿಗೆ ಹೋಗಿದ್ದವನೊಬ್ಬ ಹೀಗೆ ಅಚಾನಕ್ಕಾಗಿ ದುಬೈ ವಿಮಾನನಿಲ್ದಾಣದಲ್ಲಿ ಭೇಟಿಯಾಗುತ್ತಾನೆಂದು ನಾನು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. " ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ" ಹಾಡನ್ನು ಗುನುಗಿಕೊಳ್ಳುತ್ತಾ ಮೇರು ಟ್ಯಾಕ್ಸಿ ಹತ್ತಿ ’ನಂದಿನಿ ಲೇಔಟಿಗೆ ನಡಿ ಗುರುವೆ’ ಎಂದು ಹೇಳಿ ಹಿಂದಿನ ಸೀಟಿಗೊರಗಿ ಕಣ್ಮುಚ್ಚಿದೆ.

Saturday, May 15, 2010

ಅರಬ್ಬರ ನಾಡಿನಲ್ಲಿ...೩ - ಹಾರಿ ಹೋದ ಪ್ರಾಣ ಪಕ್ಷಿ.

ಅಬುಧಾಬಿಯಲ್ಲಿ ಕೆಲಸ ಆರಂಭಿಸಿದ ನಂತರ ಅಲ್ಲಿನ ವಾತಾವರಣವನ್ನು ಅರ್ಥೈಸಿಕೊಂಡು ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಥಟ್ಟಂತ ನನ್ನ ಗಮನಕ್ಕೆ ಬಂದ ಮುಖ್ಯ ಅಂಶವೆಂದರೆ ಕಛೇರಿಯಲ್ಲಿದ್ದ ಎರಡು "ಮಾಫಿಯಾ"ಗಳು. ನಮ್ಮ ಭಾರತೀಯರು, ಅದರಲ್ಲಿ ಬಹುತೇಕರು ಮಲಯಾಳಿಗಳು, ಅವರದ್ದೇ ಒಂದು ಗುಂಪು ಕಟ್ಟಿಕೊಂಡು ಇಲ್ಲದ ರಾಜಕೀಯ ಮಾಡಿಕೊಂಡು ತಂತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ನಿರಂತರ ಯತ್ನದಲ್ಲಿದ್ದರು. ಇನ್ನೊಂದು, ಇದಕ್ಕೆ ವಿರುದ್ಧವಾದ ಈಜಿಪ್ಟಿನವರ ಗುಂಪು, ಈಜಿಪ್ಟಿನವರನ್ನು ಇಲ್ಲಿ "ಮಿಶ್ರಿ"ಗಳು ಎಂದು ಕರೆಯುತ್ತಾರೆ. ಭ್ರಷ್ಟಾಚಾರದಲ್ಲಿ ಭಾರತೀಯರನ್ನು ಮೀರಿಸುವ ಇವರು ತಮ್ಮದೇ ಒಂದು ಗುಂಪನ್ನು ಕಟ್ಟಿಕೊಂಡು, ಸಂಸ್ಥೆಯ ಮಾಲೀಕರೊಂದಿಗೆ, ಅವರ ಕುಟುಂಬದವರೊಂದಿಗೆ ಅರಬ್ಬಿಯಲ್ಲಿ ಮಾತಾಡುತ್ತಾ, ಯಾವ ಘನಂದಾರಿ ಕೆಲಸವನ್ನೂ ಮಾಡದಿದ್ದರೂ, ಎಲ್ಲವನ್ನೂ ತಾವೇ ಮಾಡಿದ್ದಾಗಿ ಹೇಳಿಕೊಂಡು ಮೆರೆದಾಡುತ್ತಿದ್ದರು. ನಮ್ಮ ’ಯೆಮೆನಿ’ ಮುಖ್ಯ ವ್ಯವಸ್ಥಾಪಕ ಇವರ ನಡುವೆ ಸೂತ್ರದ ಗೊಂಬೆಯಂತೆ ಆಡುತ್ತಿದ್ದ. ಈ ಎರಡೂ ಗುಂಪಿಗೆ ಸೇರದ ನಾನು ಒಂದೆಡೆ "ಮಲೆಯಾಳಿ ಮಾಫಿಯಾ", ಮತ್ತೊಂದೆಡೆ "ಮಿಶ್ರಿ ಮಾಫಿಯಾ" ಗಳ ನಡುವೆ ಅಡ್ಡದಾರಿಯಲ್ಲಿ ನಿಂತಿದ್ದೆ. ಸದಾ ತಾವೇ ಮೇಲೆಂದು ತೋರಿಸಲು ಹೆಣಗಾಡುತ್ತಾ, ಮಾಡಬೇಕಿದ್ದ ಗುರುತರ ಕಾರ್ಯಗಳನ್ನು ನಿರ್ಲಕ್ಷಿಸಿದ್ದ ಎರಡೂ "ಮಾಫಿಯಾ"ಗಳನ್ನು ನಿಯಂತ್ರಿಸಿ, ಸಂಸ್ಥೆಯ ದೈನಂದಿನ ಚಟುವಟಿಕೆಗಳನ್ನು ತಹಬಂದಿಗೆ ತರುವ ಗುರುತರ ಜವಾಬ್ಧಾರಿಯನ್ನು ನನ್ನ ಪಾಲಿಗೆ ವಹಿಸಲಾಗಿತ್ತು. ಈ ತಾಕಲಾಟಗಳ ನಡುವೆ ಹಾರಿಹೋದ ಒಬ್ಬ ಬಡಪಾಯಿಯ ಪ್ರಾಣಪಕ್ಷಿಯ ಕಥೆ ನನ್ನನ್ನು ತುಂಬಾ ವಿಚಲಿತನನ್ನಾಗಿಸಿತ್ತು.

ಒಮ್ಮೆ ಹೀಗೆಯೇ ಕಛೇರಿಯ ದೈನಂದಿನ ಕೆಲಸಗಳಲ್ಲಿ ನಿರತನಾಗಿದ್ದಾಗ ಒಬ್ಬ ಪಾಕಿಸ್ತಾನಿ ಹುಡುಗ ದುಬೈನಿಂದ ಮತ್ತೊಬ್ಬ ನೇಪಾಳಿ ಹುಡುಗನನ್ನು ಕರೆತಂದು ನನ್ನನ್ನು ನೋಡಬೇಕೆಂದು ಕಾಯುತ್ತಿದ್ದ. ಅವನನ್ನು ಭೇಟಿಯಾಗಿ ಏನೆಂದು ವಿಚಾರಿಸಲಾಗಿ, ಆ ನೇಪಾಳಿ ಹುಡುಗ ಮಾನಸಿಕವಾಗಿ ಅಸ್ವಸ್ಥನಾಗಿದ್ದು ದುಬೈನಲ್ಲಿ ಕೆಲಸ ಮಾಡುತ್ತಿದ್ದ ಇತರ ರಕ್ಷಕರಿಗೂ ತುಂಬಾ ತೊಂದರೆ ಕೊಡುತ್ತಿದ್ದಾನೆಂದು ತಿಳಿಸಿದ. ಹಲವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ, ಸುಮ್ಮನೆ ಮಲಗಿದ್ದವರಿಗೆ ಇದ್ದಕ್ಕಿದ್ದಂತೆ ರಾತ್ರಿಯಲ್ಲಿ ಎದ್ದು ಕಪಾಳ ಮೋಕ್ಷ ಮಾಡಿದ್ದ! ಅವನನ್ನು ಅಬುಧಾಬಿಯಲ್ಲಿ ಇಟ್ಟುಕೊಂಡು ಸೂಕ್ತ ಚಿಕಿತ್ಸೆ ಕೊಡಿಸಿ ಸರಿಪಡಿಸಬೇಕೆಂದು ಕೋರಿದ. ಸರಿ ಎಂದು ಹೇಳಿ ಆ ನೇಪಾಳಿ ಹುಡುಗನನ್ನು ಕರೆ ತರಲು ತಿಳಿಸಿದೆ, ನನ್ನೆದುರು ಬಂದ ಆ ನೇಪಾಳಿ ಹುಡುಗ, ದೀಪಕ್ ಶ್ರೇಷ್ಠನನ್ನು ’ಏನು ನಿನ್ನ ಸಮಸ್ಯೆ, ಯಾಕೆ ಹೀಗೆ ಬೇರೆಯವರಿಗೆ ತೊಂದರೆ ಕೊಡುತ್ತಿದ್ದೀಯ” ಎಂದು ಕೇಳಿದರೆ ಅವನು ಅಸ್ಪಷ್ಟವಾಗಿ ಅದೇನನ್ನೋ ಒದರಿದ. ನೇರ ದೃಷ್ಟಿ ಮಿಲಾಯಿಸಿ ಮಾತಾಡುತ್ತಿರಲಿಲ್ಲ, ತಲೆ ಬಗ್ಗಿಸಿ ನೆಲವನ್ನು ನೋಡುತ್ತಾ ನಾನೇನೋ ಕೇಳಿದರೆ ಅವನು ಮತ್ತಿನ್ನೇನನ್ನೋ ಹೇಳುತ್ತಿದ್ದ! ಕೊನೆಗೆ ತಲೆ ಮೇಲೆತ್ತಿ ನನ್ನ ಮುಖ ನೋಡುತ್ತಾ ಮಾತಾಡಲು ಹೇಳಿದೆ, ಅವನ ಕಣ್ಣುಗಳಲ್ಲಿ ಕಂಡ ಭೀಭತ್ಸ ಕ್ರೌರ್ಯ ನನ್ನನ್ನು ಅರೆಕ್ಷಣ ಅಯೋಮಯನನ್ನಾಗಿಸಿತು. ನನ್ನ ಅನುಭವದ ಪ್ರಕಾರ ಅವನು ಅತಿಯಾದ ಖಿನ್ನತೆಯಿಂದ ನರಳುತ್ತಿರುವುದು ವೇದ್ಯವಾಯಿತು. ಈ ಖಿನ್ನತೆಯಿಂದಾಗಿ ಅವನು ತನ್ನ ಸಮತೋಲನ ಕಳೆದುಕೊಂಡು ಬೇರೆಯವರ ಮೇಲೆ ಆಕ್ರಮಣ ಮಾಡುವ ಅಥವಾ ತನ್ನ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿದ್ದವು. ತಕ್ಷಣ ಒಬ್ಬ ಮೇಲ್ವಿಚಾರಕನನ್ನು ಕರೆದು ಶೇಖ್ ಖಲೀಫಾ ಆಸ್ಪತ್ರೆಗೆ ಮನೋ ವೈದ್ಯರಲ್ಲಿಗೆ ಕಳುಹಿಸಿ ಕೊಟ್ಟೆ. ಅವನಿಗೆ ಸುಮಾರು ಒಂದು ವಾರದ ಚಿಕಿತ್ಸೆ ಅಗತ್ಯವಿದೆಯೆಂದು ತಿಳಿಸಿದ ಮನೋವೈದ್ಯರು ಪ್ರತಿದಿನ ಅವನನ್ನು ಆಸ್ಪತ್ರೆಗೆ ಕರೆತರಲು ಸೂಚಿಸಿ, ಕೆಲವು ಔಷಧಿಗಳನ್ನು ನೀಡಿ ಕಳುಹಿಸಿದ್ದರು.

ಹಿಮಾಲಯದ ತಪ್ಪಲಿನ ಸುಂದರ ದೇಶ ನೇಪಾಳದಿಂದ ಕೆಲಸಕ್ಕಾಗಿ ಗಲ್ಫ್ ರಾಷ್ಟ್ರಗಳಿಗೆ ಬರುವ ಯುವಕರು ಬಹು ಬೇಗ ತಮ್ಮ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಎತ್ತ ನೋಡಿದರೂ ಕಣ್ಣು ತುಂಬುವ ಹಸಿರು, ಜುಳುಜುಳನೆ ಹರಿಯುವ ಅಸಂಖ್ಯಾತ ನದಿ ತೊರೆಗಳು, ಆಹ್ಲಾದಕರ ವಾತಾವರಣದಲ್ಲಿ ಹುಟ್ಟಿ ಬೆಳೆದ ಇವರು, ಇಲ್ಲಿನ ಸುಡುಬಿಸಿಲು, ಮರಳುಗಾಡಿನ ಬಿಸಿಗಾಳಿ, ಕಣ್ಣು ಹರಿದಷ್ಟು ದೂರಕ್ಕೂ ಕಾಣುವ ಬರೀ ಮರಳು, ಸಂಸ್ಥೆಯ ಕಡೆಯಿಂದ ಸಿಗುವ ಅತ್ಯಂತ ಕಡಿಮೆ ಸವಲತ್ತುಗಳು, ಸಮಸ್ಯೆಗಳಿದ್ದಾಗ ಸಿಗದ ಸಾಂತ್ವನ ಮತ್ತು ಉಪೇಕ್ಷೆ, ಇವರನ್ನು ಧೃತಿಗೆಡಿಸುತ್ತವೆ. ಕೆಲಸಕ್ಕೆಂದು ಬರುವಾಗ ಇದ್ದ ಹುರುಪು, ಇಲ್ಲಿನ ಬಿಸಿ ವಾತಾವರಣ ನೋಡುತ್ತಿದ್ದಂತೆ ಇಳಿದು ಹೋಗುತ್ತದೆ. ಕೆಲವರು ಹೇಗೋ ಹೊಂದಿಕೊಂಡು ಹೋಗುತ್ತಾರೆ, ಮತ್ತೆ ಕೆಲವರು ಮನೋರೋಗಗಳಿಗೆ ತುತ್ತಾಗುತ್ತಾರೆ. ಲಕ್ಷ ಲಕ್ಷ ದುಡಿಯುವ ಕನಸಿನೊಂದಿಗೆ ಬಂದವರು ಹೆಣವಾಗಿ ಹಿಂತಿರುಗುತ್ತಾರೆ. ತಮ್ಮ ಅವಲಂಬಿತರ ಕನಸುಗಳನ್ನೂ ಛಿದ್ರಗೊಳಿಸುತ್ತಾರೆ.

ಅವರು ಆಸ್ಪತ್ರೆಯಿಂದ ಹಿಂತಿರುಗಿ ಬಂದ ನಂತರ ಸಂಸ್ಥೆಯ ಮುಖ್ಯಸ್ಥೆಯಾಗಿದ್ದ ಮಾಲೀಕರ ಪುತ್ರಿಯ ಬಳಿಗೆ ಕರೆದೊಯ್ದು ಅವನ ಖಿನ್ನತೆಯ ಲಕ್ಷಣಗಳನ್ನು, ಅದರಿಂದ ಆಗಬಹುದಾದ ತೊಂದರೆಗಳನ್ನು ವಿವರಿಸಿ, ಆದಷ್ಟು ಬೇಗ ಅವನನ್ನು ಕೆಲಸದಿಂದ ವಜಾ ಮಾಡಿ ನೇಪಾಳಕ್ಕೆ ವಾಪಸ್ ಕಳುಹಿಸಬೇಕೆಂದು ಶಿಫಾರಸು ಮಾಡಿದೆ. ಅದಕ್ಕೆ ಒಪ್ಪಿದ ಆಕೆ ಮಾನವ ಸಂಪನ್ಮೂಲ ವಿಭಾಗದ ರಫೀಕನಿಗೆ ತಕ್ಷಣ ಅವನ ವಜಾ ಕಾರ್ಯ ಶುರು ಮಾಡಲು ಆದೇಶಿಸಿದಳು. ಆದರೆ ಈ "ಮಿಶ್ರಿ" ರಫೀಕ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ನನ್ನೊಡನೆ ವಾದಕ್ಕಿಳಿದು ಭಾರತೀಯರೆಂದರೆ ಒಂದು ರೀತಿಯ ’ಅಲರ್ಜಿ’ಯನ್ನು ಬೆಳೆಸಿಕೊಂಡಿದ್ದ. ಹೀಗಾಗಿ ನನ್ನ ಶಿಫಾರಸನ್ನು, ಸಂಸ್ಥೆಯ ಮುಖ್ಯಸ್ಥೆಯ ಆದೇಶವನ್ನು ಉಪೇಕ್ಷಿಸಿದ. ಎರಡು ದಿನಗಳಲ್ಲಿ ಮಾಡಬಹುದಾಗಿದ್ದ ಕೆಲಸಕ್ಕೆ ಸಾಕಷ್ಟು ನಿಧಾನ ಮಾಡಿದ.

ಇದಾದ ಮೂರನೆಯ ದಿನ, ಬೆಳಿಗ್ಗೆ ಸುಮಾರು ೫ ಘಂಟೆಗೇ ನನ್ನ ಮೊಬೈಲ್ ಫೋನ್ ಮೊಳಗತೊಡಗಿತ್ತು, ಅತ್ತಲಿಂದ ವಸತಿಗೃಹದ ಮುಖ್ಯಸ್ಥ ಮಾತನಾಡುತ್ತಿದ್ದ, "ಸರ್, ಆ ದೀಪಕ್ ಶೇಷ್ಠ ವಸತಿಗೃಹದಲ್ಲಿ ಕಾಣುತ್ತಿಲ್ಲ, ನಾವು ಹುಡುಕಿ ನೋಡಿದಾಗ ಹತ್ತಿರದಲ್ಲೆ ಇರುವ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ" ಎಂದು ಹೇಳಿದ ಸುದ್ಧಿ ನನ್ನ ಮಂಜಾವಿನ ಸವಿ ನಿದ್ದೆಯನ್ನು ಹಾರಿಸಿತ್ತು. ಐದೇ ನಿಮಿಷಗಳಲ್ಲಿ ಅಲ್ಲಿಗೆ ತಲುಪಿದ್ದ ಪೊಲೀಸರು ಅವನ ಕಳೇಬರವನ್ನು ಮರದಿಂದ ಇಳಿಸಿ, ಖಲೀಫಾ ಆಸ್ಪತ್ರೆಗೆ ಸಾಗಿಸಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಅಲ್ಲಿನ ಶವಾಗಾರದಲ್ಲಿರಿಸಿದ್ದ ಅವನ ಶರೀರವನ್ನು ನೋಡಿ ಕರುಳು ಹಿಂಡಿದಂತಾಯಿತು. ಸುಮಾರು ೨೬ ದಿನಗಳು ಅವನ ಶರೀರ ಅದೇ ಶವಾಗಾರದ ಶೈತ್ಯಾಗಾರದಲ್ಲಿತ್ತು, ಆ ದಿನಗಳಲ್ಲಿ ಮತ್ತೆ ಈ "ಮಿಶ್ರಿ ಮಾಫಿಯಾ"ದ ಜೊತೆಗೆ ನನ್ನ ಜಟಾಪಟಿ ಹೆಚ್ಚಾಯಿತು. ಇಲ್ಲಿನ ಸರ್ಕಾರದ ಕಾನೂನಿನ ಪ್ರಕಾರ ಎಲ್ಲ ರೀತಿರಿವಾಜುಗಳನ್ನು ಪೂರೈಸಿ ಅವನ ಮೃತಶರೀರ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದು ೨೭ನೆಯ ದಿನ. ಪ್ರತಿಯೊಂದು ಹಂತದಲ್ಲಿಯೂ ನಿಧಾನಗತಿಯಲ್ಲಿಯೇ ಕಾರ್ಯ ನಿರ್ವಹಿಸಿದ ಮಾನವ ಸಂಪನ್ಮೂಲ ವಿಭಾಗದ "ಮಿಶ್ರಿ" ರಫೀಕ ಎಲ್ಲರಿಂದ ಟೀಕೆಗೆ ಗುರಿಯಾಗಿದ್ದ. ಸಂಸ್ಥೆಗೆ ಅತಿಯಾದ ನಷ್ಟಕ್ಕೆ ಕಾರಣನಾಗಿದ್ದ. ಆದರೂ ಅವನು ಮಾಲೀಕರಿಂದ ಕ್ಷಮಿಸಲ್ಪಟ್ಟಿದ್ದ, ಏಕೆಂದರೆ ಅವನು ಅರಬ್ಬಿ ಮಾತಾಡುತ್ತಾನಲ್ಲ!

ಎರಡು ದಿನಗಳಲ್ಲಿ ವಜಾ ಮಾಡಿ ಅವನನ್ನು ನೇಪಾಳಕ್ಕೆ ಕಳುಹಿಸಿದ್ದರೆ ಸಂಸ್ಥೆಗೆ ಆಗುತ್ತಿದ್ದ ಖರ್ಚು ಸುಮಾರು ೨ ಸಾವಿರ ದಿರ್ಹಾಂಗಳು. ಆದರೆ ಅದನ್ನು ಕಾರ್ಯಗತಗೊಳಿಸದೆ ಉಪೇಕ್ಷಿಸಿದ್ದುದರಿಂದ ಸಂಸ್ಥೆಗೆ ಆದ ನಷ್ಟ ೧೦ ಸಾವಿರ ದಿರ್ಹಾಂಗಳು! ಜೊತೆಗೆ ಆ ಅಮಾಯಕನ ಬೆಲೆ ಕಟ್ಟಲಾಗದ ಜೀವವೂ ನಷ್ಟವಾಗಿತ್ತು. ಸಕಾಲದಲ್ಲಿ ಎಲ್ಲ ಕಾರ್ಯವನ್ನು ಮುಗಿಸಿ ಅವನನ್ನು ವಾಪಸ್ಸು ಕಳುಹಿಸಿದ್ದಿದ್ದರೆ ಸೂಕ್ತ ಚಿಕಿತ್ಸೆ ಮತ್ತು ತನ್ನ ಪ್ರೀತಿಪಾತ್ರರ ಜೊತೆಗಿನ ಒಡನಾಟ ಅವನನ್ನು ಉಳಿಸಬಹುದಿತ್ತೇನೋ! ಈ ಮಾಫಿಯಾಗಳ ಮೇಲು ಕೀಳಿನಾಟದಲ್ಲಿ ಒಬ್ಬ ಬಡ ಹುಡುಗನ ಪ್ರಾಣ ಪಕ್ಷಿ ಹಾರಿಹೋಗಿತ್ತು.

Monday, May 10, 2010

ಅರಬ್ಬರ ನಾಡಿನಲ್ಲಿ - ೨, "ಇಂಗು ತಿಂದ ಮಂಗ".

ನಾನು ಕೆಲಸಕ್ಕೆಂದು ಬಂದ ಹೊಸತರಲ್ಲಿ ಅರಬ್ಬಿ ಭಾಷೆಯ ಅರಿವಿಲ್ಲದೆ ಭಾರೀ ಪೇಚಾಟದ ಪ್ರಸಂಗಗಳು ನಡೆದವು. ಆದರೆ ನನ್ನ ತುಂಟ ಮನಸ್ಸಿನೊಂದಿಗೆ ಆ ಪ್ರಸಂಗಗಳನ್ನು ಬಹಳ ಚೆನ್ನಾಗಿಯೇ ಆಸ್ವಾದಿಸಿದ್ದೆ. ಅದರಲ್ಲೊಂದು ಇಂತಿದೆ, ದುಬೈನಲ್ಲಿ ಭಾರತೀಯರು ಹೆಚ್ಚಾಗಿರುವಂತೆ ರಾಜಧಾನಿಯಾದ ಅಬುಧಾಬಿ ನಗರದಲ್ಲಿ ಈಜಿಪ್ಟಿನವರು ಹೆಚ್ಚಾಗಿದ್ದಾರೆ. ಅಬುಧಾಬಿಯ ಅರಸರಿಗೆ ಅರಬ್ಬಿ ಮಾತಾಡುವವರೆಂದರೆ ತುಂಬಾ ಅಚ್ಚುಮೆಚ್ಚು, ಹಾಗಾಗಿ ಅಲ್ಲಿ ಭಾರತೀಯರು ಎರಡು ಅಥವಾ ಮೂರನೆಯ ಸ್ಥಾನಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ನನ್ನನ್ನು ದುಬೈಗೆ ಶಾಖಾ ವ್ಯವಸ್ಥಾಪಕನನ್ನಾಗಿ ಆಯ್ಕೆ ಮಾಡಿದ್ದರೂ ಸಹಾ ಸುಮಾರು ಒಂದೂವರೆ ವರ್ಷ ಅಬುಧಾಬಿಯಲ್ಲೇ ಉಳಿಸಿಕೊಂಡಿದ್ದರು, ಅಲ್ಲಿ ಒಬ್ಬ ಯೆಮೆನಿ ಅರಬ್ ಮುಖ್ಯ ವ್ಯವಸ್ಥಾಪಕನಾಗಿದ್ದ, ಅವನಿಗೆ ನಮ್ಮ ಭದ್ರತಾ ವಿಭಾಗದ ವ್ಯವಹಾರಗಳ ಬಗ್ಗೆ ಅಷ್ಟೊಂದು ಅನುಭವವಿರಲಿಲ್ಲ. ಅವನು ಆಂಗ್ಲ ಭಾಷೆಯಲ್ಲಿ ಮಾತಾಡಿದರೆ ಅರಬ್ಬಿಯಲ್ಲಿ ಮಾತನಾಡಿದಂತೆ ಭಾಸವಾಗುತ್ತಿತ್ತು. ಏಷ್ಯಾ ಮೂಲದ ಇತರ ಸಂಸ್ಥೆಗಳ ವ್ಯವಸ್ಥಾಪಕರೊಡನೆ ಮಾತಾಡಲು ಬಹಳ ಪ್ರಯಾಸ ಪಡುತ್ತಿದ್ದ. ಆದರೆ ಅರಬ್ಬಿಯಲ್ಲಿ ಸಂಸ್ಥೆಯ ಮಾಲಿಕರೊಡನೆ ಮಾತಾಡುತ್ತಾ ಹೇಗೋ ಸಂಭಾಳಿಸಿಕೊಂಡು ಹೋಗುತ್ತಿದ್ದ. ನಾನು ಈ ಸಂಸ್ಥೆಗೆ ಬಂದಾಗ ಅವನಿಗೆ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಷ್ಟು ಸಂತೋಷವಾಗಿ ನನ್ನನ್ನು ದುಬೈಗೆ ಕಳುಹಿಸುವುದಕ್ಕಿಂತ ಅಬುಧಾಬಿಯಲ್ಲಿ ಅವನಿಗೆ ಸಹಾಯಕನಾಗಿ ಇಟ್ಟುಕೊಳ್ಳಬೇಕೆಂದು ಸಂಸ್ಥೆಯ ಮಾಲೀಕರಿಗೆ ದುಂಬಾಲು ಬಿದ್ದ. ಕೊನೆಗೆ ಮಾಲೀಕರ ಮಾತಿಗೆ ಮನ್ನಣೆ ನೀಡಿ, ಬೆಂಗಳೂರಿನಲ್ಲಿ ದೊಡ್ಡ ಸಂಸ್ಥೆಯಲ್ಲಿ ಸುಮಾರು ೫೦ ಜನರ ತಂಡಕ್ಕೆ ಮುಖ್ಯ ವ್ಯವಸ್ಥಾಪಕನಾಗಿ ಕೆಲಸ ಮಾಡಿದ್ದರೂ ಸಹಾ, ಅವನಿಗೆ ಸಹಾಯಕನಾಗಿರಲು ಒಪ್ಪಿದೆ. ಯಾವ ಕೆಲಸ ಮಾಡಿದರೇನು, ಹಣ ಮುಖ್ಯವಲ್ಲವೇ ?

ನಂತರ ಶುರುವಾಯಿತು ನೋಡಿ, ಅವನೊಡನೆ ನನ್ನ ಪೇಚಾಟಗಳ ಸರಮಾಲೆ, ಅವನು ತನಗೆ ತೋಚಿದಂತೆ ಅದೇನನ್ನೋ ಅರಬ್ಬಿಯಲ್ಲಿ ಹೇಳಿ ಅದನ್ನು ತಕ್ಷಣ ಮಾಡಿ ಮುಗಿಸಬೇಕೆನ್ನುತ್ತಿದ್ದ, ನಾನು ಮತ್ತೆ ಅದಕ್ಕೆ ಆಂಗ್ಲಭಾಷೆಯಲ್ಲಿ ಸ್ಪಷ್ಟೀಕರಣ ಕೇಳಿದರೆ ಮತ್ತೇನೋ ಹೇಳಿ ಬಿಡುತ್ತಿದ್ದ! ನಾನು ಹೇಳಿದ್ದನ್ನು ಕೇಳಿ ಅರ್ಥ ಮಾಡಿಕೊಳ್ಳುವುದಕ್ಕಿಂತ ಮುಂಚೆಯೇ ಮಾತನ್ನು ಅರ್ಧದಲ್ಲಿಯೇ ತುಂಡರಿಸಿ "ಖಲಾಸ್, ಓಕೆ, ಓಕೆ" ಅಂದು ಬಿಡುತ್ತಿದ್ದ. "ಆಯಿತು, ಮುಗಿಯಿತು" ಅನ್ನುವುದರ ಸಮಾನಾರ್ಥಕ ಅರಬ್ಬಿ ಪದ ಈ "ಖಲಾಸ್". ಮತ್ತೇನಾದರೂ ಹೇಳಿದರೆ "ಖಲ್ಲಿವಲ್ಲಿ, ಐ ಡೋಂಟ್ ಕೇರ್" ಅನ್ನುತ್ತಿದ್ದ. ಅವನು ಹಾಗೆ "ಖಲ್ಲಿವಲ್ಲಿ" ಅಂದಾಗೆಲ್ಲ ನಾನು ಗೋಡೆಯ ಮೇಲೆ ನೋಡುತ್ತಿದ್ದೆ, ಆದರೆ ಅಲ್ಲಿ ಯಾವ "ಹಲ್ಲಿ"ಯೂ ಇರುತ್ತಿರಲಿಲ್ಲ! "ಪರವಾಗಿಲ್ಲ ಅಥವಾ ಏನೂ ಆಗೋದಿಲ್ಲ" ಅನ್ನುವುದರ ಸಮಾನಾರ್ಥಕವಾಗಿ ಅರಬ್ಬಿಯಲ್ಲಿ ಈ ಪದ ಬಳಸುತ್ತಾರೆ. ಮತ್ತೆ ಯಾವುದೇ ಮಾತನ್ನು ಮುಗಿಸಬೇಕಾದರೂ ತಪ್ಪದೆ "ಮಾಫಿ ಮುಷ್ಕಿಲ್" ಅನ್ನುತ್ತಿದ್ದ. ಅರ್ಧ ಘಂಟೆ ಅವನೊಡನೆ ಮಾತಾಡಿದರೆ ಕನಿಷ್ಠ ೨೦ ಸಲವಾದರೂ ಈ "ಖಲಾಸ್-ಖಲ್ಲಿವಲ್ಲಿ-ಮಾಫಿ ಮುಷ್ಕಿಲ್" ಅನ್ನುವ ಪದಗಳನ್ನು ಉಪಯೋಗಿಸುತ್ತಿದ್ದ!! ಮೊದ ಮೊದಲು ಈ ಪದಗಳ ಅರ್ಥ ತಿಳಿಯದೆ ಸಾಕಷ್ಟು ಸಲ ನಾನು ಬೇಸ್ತು ಬಿದ್ದದ್ದುಂಟು. ಕೊನೆಗೆ ಆಂಗ್ಲ-ಅರಬ್ಬಿ ಅನುವಾದದ ಪುಸ್ತಕವನ್ನು ಕೊಂಡು ಅಭ್ಯಾಸ ಮಾಡಲಾರಂಭಿಸಿದೆ. ನಮ್ಮ ಭದ್ರತಾ ರಕ್ಷಕರು ಕೆಲಸ ಮಾಡುತ್ತಿದ್ದ ಇತರ ಸಂಸ್ಥಗಳಿಂದ ಬರುತ್ತಿದ್ದ ಅಸಂಖ್ಯಾತ ಮಿಂಚಂಚೆಗಳಿಗೆ ಅವನು ಉತ್ತರಿಸುವ ಗೋಜಿಗೇ ಹೋಗುತ್ತಿರಲಿಲ್ಲ! ಏಕೆಂದರೆ ಅವನಿಗೆ ಆಂಗ್ಲಭಾಷೆಯಲ್ಲಿ ಉತ್ತರಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಅವನಿಗೆ ಬರುತ್ತಿದ್ದ ಮಿಂಚಂಚೆಗಳಿಗೆಲ್ಲ ಉತ್ತರಿಸುವ ಜವಾಬ್ಧಾರಿ ನನಗೆ ವಹಿಸಿದ. ಎಲ್ಲೆಲ್ಲಿ ಅರಬ್ಬಿ ಭಾಷೆ ಬರದ ಜನರೊಡನೆ ವ್ಯವಹರಿಸಬೇಕೋ ಅಲ್ಲಿಗೆಲ್ಲ ನನ್ನನ್ನು ಕಳುಹಿಸತೊಡಗಿದ. ಹೀಗಾಗಿ ಅಬುಧಾಬಿಯಲ್ಲಿನ ಬಹುತೇಕ ಸಂಸ್ಥಗಳ ಮುಖ್ಯಸ್ಥರ ಜೊತೆ ನನ್ನ ಪರಿಚಯ ಶುರುವಾಯಿತು.

ಅಬುಧಾಬಿಯ ಸುಪ್ರಸಿದ್ಧ ಮರೀನಾ ಮಾಲಿನ ಭದ್ರತೆಯ ಗುತ್ತಿಗೆ ನಮ್ಮ ಸಂಸ್ಥೆಗೆ ಸಿಕ್ಕಿತ್ತು. ಅಲ್ಲಿ ನಮ್ಮ ಸಂಸ್ಥೆಯ ವತಿಯಿಂದ ೧೨೦ ಜನ ಭದ್ರತಾ ರಕ್ಷಕರನ್ನು ನಿಯೋಜಿಸಿದ್ದೆವು. ಅವರಿಗೆ ಆಕಸ್ಮಾತ್ ಬೆಂಕಿ ಬಿದ್ದಲ್ಲಿ ಅದನ್ನು ಹೇಗೆ ನಂದಿಸಬೇಕು, ಮಾಲಿಗೆ ಬರುವ ಗ್ರಾಹಕರ ರಕ್ಷಣೆಗೆ ಯಾವ್ಯಾವ ರಿತಿಯಲ್ಲಿ ಮುಂಜಾಗರೂಕತೆ ವಹಿಸಬೇಕು, ಯಾವುದೇ ರೀತಿಯ ತುರ್ತು ಪರಿಸ್ಥಿತಿಗಳಲ್ಲಿ ಒಬ್ಬ ಭದ್ರತಾ ರಕ್ಷಕ, ವಿಚಲಿತನಾಗದೆ ಸಮಚಿತ್ತದಿಂದ ಹೇಗೆ ಕಾರ್ಯ ನಿರ್ವಹಿಸಬೇಕು ಅನ್ನುವುದರ ಬಗ್ಗೆ ಒಂದು ತರಬೇತಿ ಕಾರ್ಯಕ್ರಮ ಏರ್ಪಡಿಸಿದ್ದೆವು. ಸುಮಾರು ಎರಡು ದಶಕಗಳಿಂದ ಇದೇ ವೃತ್ತಿಯಲ್ಲಿದ್ದು ಸಾವಿರಾರು ಜನ ಭದ್ರತಾ ರಕ್ಷಕರಿಗೆ ತರಬೇತಿ ನೀಡಿ, ಅದೆಷ್ಟೋ ತುರ್ತು ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ನನಗೆ ಇದೇನೂ ಹೊಸದಾಗಿರಲಿಲ್ಲ. ನನ್ನ ಲ್ಯಾಪ್ಟಾಪಿನಲ್ಲಿ ಸುರಕ್ಷಿತವಾಗಿದ್ದ ತರಬೇತಿಯ ವಿಧಾನಗಳನ್ನು ಮತ್ತೊಮ್ಮೆ ಅವಲೋಕಿಸಿ ನಾನು ಸಂಪೂರ್ಣ ಸಿದ್ಧನಾಗಿದ್ದೆ. ಮರೀನಾ ಮಾಲಿನ ಮುಖ್ಯ ಪದಾಧಿಕಾರಿಗಳೊಂದಿಗೆ ಅಬುಧಾಬಿಯ ಪೊಲೀಸ್ ಇಲಾಖೆಯ ಮೇಜರ್ ಅಬ್ದುಲ್ಲಾ ಬೇರೆ ಬರುವುದಾಗಿ ಹೇಳಿದ್ದರು. ಆದರೆ ನಮ್ಮ ಯೆಮೆನಿ ಪುಣ್ಯಾತ್ಮ, ಇದೇ ಮೊದಲ ಬಾರಿ ಅಂತಹ ತರಬೇತಿಗೆಂದು ಬಂದಿದ್ದ, ಜೊತೆಗೆ ಅವನೇ ಮುಖ್ಯಸ್ಥನೂ ಆಗಿದ್ದುದರಿಂದ ಸಣ್ಣಗೆ ಬೆವರಲಾರಂಭಿಸಿದ. ಅನುಭವದ ಕೊರತೆ ಅವನನ್ನು ಕಾಡುತ್ತಿತ್ತು. ನಾನೆಷ್ಟೇ ಧೈರ್ಯ ಹೇಳಿದರೂ "ಮಾಫಿ ಮುಷ್ಕಿಲ್" ಅನ್ನುತ್ತಲೇ ನಡುಗುತ್ತಿದ್ದ. ಕೊನೆಗೆ ತರಬೇತಿ ಪ್ರಾರಂಭವಾಗಿ ನನ್ನ ಪ್ರವಚನ ಭಾಗವನ್ನು ಅತ್ಯುತ್ತಮ ಸ್ಲೈಡ್ ಶೋ ಜೊತೆಗೆ. ಏಷ್ಯನ್ನರೇ ಅಧಿಕವಾಗಿದ್ದ ಭದ್ರತಾ ತಂಡಕ್ಕೆ ಹಿಂದಿ, ಆಂಗ್ಲ, ತಮಿಳು, ಮಲೆಯಾಳಂ, ಕನ್ನಡ, ಹೀಗೆ ಅವರವರದೇ ಭಾಷೆಯಲ್ಲಿ ಮನ ಮುಟ್ಟುವಂತೆ ವಿವರಿಸಿ ಯಶಸ್ವಿಯಾಗಿ ಮುಗಿಸಿದೆ. ಎಲ್ಲರಿಗೂ ಬಹು ಉಪಯೋಗಿಯಾದ ಮಾಹಿತಿಪೂರ್ಣ ತರಬೇತಿ ಕಾರ್ಯಕ್ರಮಕ್ಕಾಗಿ ಎಲ್ಲರಿಂದ ಅಭಿನಂದನೆಗಳ ಸುರಿಮಳೆ. ಆದರೆ ನಮ್ಮ ಯೆಮೆನಿಯ ಮುಖದಲ್ಲಿ ಅದೇನೋ ಕಂಡೂ ಕಾಣದ ಗಾಭರಿ ಮನೆ ಮಾಡಿತ್ತು.

ಕೊನೆಗೆ ಪ್ರಾಯೋಗಿಕವಾಗಿ ಬೆಂಕಿ ಆರಿಸುವ ಸಾಧನಗಳನ್ನು ಉಪಯೋಗಿಸಲು ಎಲ್ಲ ಭದ್ರತಾ ರಕ್ಷಕರನ್ನು ಮಾಲಿನ ಕೆಳ ಮಹಡಿಗೆ ಕರೆತಂದು ಸಣ್ಣ ಪ್ರಮಾಣದ ಬೆಂಕಿಯನ್ನು ಹತ್ತಿಸಿ, ಒಂದೊಂದು ತಂಡದಿಂದ ಒಬ್ಬೊಬ್ಬರನ್ನು ಮುಂದೆ ಕರೆದು ಉಪಯೋಗಿಸುವ ರೀತಿಯನ್ನು ತೋರಿಸಿ, ಅವರಿಗೆ ಪ್ರಾಯೋಗಿಕ ತರಬೇತಿ ನೀಡುತ್ತಿದ್ದೆವು. ಈ ಕಾರ್ಯಕ್ರಮವೆಲ್ಲಾ ಸಂಸ್ಥೆಯ ಮುಖ್ಯಸ್ಥರಿಗೆ ತೋರಿಸುವ ಸಲುವಾಗಿ ವಿಡಿಯೋ ರೆಕಾರ್ಡಿಂಗ್ ಆಗುತ್ತಿತ್ತು. ಈ ಮಧ್ಯೆ ಒಬ್ಬ ಮಲೆಯಾಳಿ ಭದ್ರತಾ ರಕ್ಷಕ ನಮ್ಮ ಯೆಮೆನಿಯನ್ನು ಹೋಗಿ ಆಂಗ್ಲಭಾಷೆಯಲ್ಲಿ ಅದೇನೋ ಕೇಳಿದ್ದಾನೆ, ಏನು ಕೇಳಿದನೆಂದು ಅರ್ಥವಾಗದಿದ್ದರೂ ಅವನು "ಮಾಫಿ ಮುಷ್ಕಿಲ್, ಗೋ ಅಹೆಡ್" ಅಂದಿದ್ದಾನೆ. ಅವನು ಸೀದಾ ಹೋದವನೆ ಅಲ್ಲೊಂದು ಮೂಲೆಯಲ್ಲಿ ಕೆಂಪು ಡಬ್ಬದಲ್ಲಿ ಸುತ್ತಿಟ್ಟಿದ್ದ ಫೈರ್ ಹೈಡ್ರಾಂಟ್ ಹೋಸ್ ಪೈಪನ್ನು ಎಳೆದು ತಂದು ಅದರ ಮೂತಿಗೆ ನಾಝಲ್ ಸಿಕ್ಕಿಸಿ, ಯಾರಿಗೂ ಕೇಳದೆ ದೊಡ್ಡ ಹೀರೋವಿನಂತೆ ಫೋಸ್ ಕೊಡುತ್ತಾ ಅದರ ಲಿವರ್ ತಿರುವಿದ್ದಾನೆ. ಅದನ್ನು ಹೇಗೆ ಉಪಯೋಗಿಸಬೇಕೆನ್ನುವುದರ ಬಗ್ಗೆ ನಾವಿನ್ನೂ ತರಬೇತಿ ಕೊಟ್ಟೇ ಇರಲಿಲ್ಲ! ಅತ್ಯಧಿಕ ಒತ್ತಡದೊಂದಿಗೆ ಒಮ್ಮೆಗೇ ನುಗ್ಗಿ ಬಂದ ನೀರು ಆ ಹೋಸ್ ಪೈಪನ್ನು ಅಕ್ಷರಶಃ ರಾಕೆಟ್ಟಿನಂತೆ ಹಾರಿಸಿತ್ತು! ಪೈಪ್ ಹಿಡಿದಿದ್ದ ಮಲೆಯಾಳಿಯ ಮುಖದ ಗಲ್ಲದ ಭಾಗ ಚಿಂದಿಯಾಗಿತ್ತು, ಸೀದಾ ನುಗ್ಗಿ ಬಂದ ಪೈಪ್, ನಮ್ಮ ಯೆಮೆನಿಯ ಬೆನ್ನಿಗೆ ಬಲವಾಗಿ ಗುದ್ದಿತ್ತು!! ಆಕಸ್ಮಾತ್, ಅದೇನಾದರೂ ಅವನ ದೇಹದ ಮುಂಭಾಗಕ್ಕೆ ಬಡಿದಿದ್ದರೆ ಅವನ ಕಥೆ ಹರೋ ಹರ ಆಗಿಬಿಡುತ್ತಿತ್ತು. ಕೊನೆಗೆ ಪ್ರಥಮ ಚಿಕಿತ್ಸೆ ನೀಡಿ, ಆ ಮಲಯಾಳಿಗೆ ಏಕೆ ಹಾಗೆ ಮಾಡಿದ್ದು ಎಂದು ಕೇಳಿದರೆ ಅವನು ನಮ್ಮ ಯೆಮೆನಿಯನ್ನು ತೋರಿಸಿ ಅವರು ಓಕೆ ಅಂದರು, ಅದಕ್ಕೇ ಮಾಡಿದೆ ಎಂದಾಗ ನಮ್ಮ ಯೆಮೆನಿ ಮುಖ್ಯಸ್ಥ "ಇಂಗು ತಿಂದ ಮಂಗ"ನಂತೆ ಮುಖ ಮಾಡಿ ನಿಂತಿದ್ದ. ಈ ಅವಘಡದ ಹೊರತಾಗಿಯೂ ನಮ್ಮ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿತ್ತು. ಇಂಥ ಅದೆಷ್ಟೋ ಪ್ರಸಂಗಗಳು ನಡೆದಿವೆ, ಮುಂದಿನ ಭಾಗಗಳಲ್ಲಿ ಬರೆಯುತ್ತೇನೆ.

Saturday, May 8, 2010

ಅಮ್ಮಾ ಎಂಬ ಆ ನುಡಿಯು ಎನಿತು ಮಧುರವಮ್ಮಾ

ಜಗದ ಎಲ್ಲ ಮಾತೆಯರಿಗೂ ವಂದಿಸುತ್ತಾ "ವಿಶ್ವ ಅಮ್ಮಂದಿರ ದಿನ" ಕ್ಕಾಗಿ ಈ ಲೇಖನ.

"ಅಮ್ಮಾ ಎಂಬ ಆ ನುಡಿಯು ಎನಿತು ಮಧುರವಮ್ಮಾ" ಎಂಬ ಮಧುರ ಗೀತೆಯ ನೆನೆಯುತ್ತ ಮುಂದುವರಿಸುವೆ. ಎಲ್ಲೆಡೆ ಇರಲಾಗದ ದೇವರು ತನ್ನ ಇರುವಿಕೆಯನ್ನು ಎಲ್ಲರಿಗೂ ಸಾರಲೆಂದೇ ಅಮ್ಮನನ್ನು ಸೃಷ್ಟಿಸಿದನಂತೆ. ಹೆಣ್ಣು, ಗಂಡಿನ ಜೊತೆಯಾಗಿ ಸೃಷ್ಟಿ ಚಕ್ರವ ಮುಂದುವರೆಸುತ್ತಾ, ನವ ತಾರುಣ್ಯದ ತರುಣಿ, ಗರ್ಭವತಿಯಾಗಿ ನವಮಾಸ ತನ್ನ ಗರ್ಭದಲ್ಲಿ ಹೊಸದೊಂದು ಜೀವವನ್ನು ಹೊತ್ತು ಅದರ ಮುಲುಕಾಟಗಳಿಗೆ ಸ್ಪಂದಿಸಿ ಅಪಾರ ನೋವಿನೊಡನೆ ಜಗಕಿಳಿದು ಬಂದ ಕಂದನನ್ನು ತನ್ನ ಮೊಲೆ ಹಾಲುಣಿಸಿ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ, ತಿದ್ದಿ ತೀಡಿ ಬೆಳೆಸುವಳು ಅಮ್ಮ. ಆ ಮುದ್ದು ಕಂದನ ತೊದಲ್ನುಡಿಯಲ್ಲಿ ತನ್ನೆಲ್ಲ ನೋವನ್ನು ಮರೆಯುವವಳು, ತೆವಳುವ ಕಂದ ತಪ್ಪು ಹೆಜ್ಜೆಯಿಡುತ್ತಾ, ಜೋಲಿ ಹೊಡೆಯುತ್ತಾ, ನಡೆವುದ ಕಲಿತಾಗ ಜಗವ ಗೆದ್ದಂತೆ ಸಂಭ್ರಮಿಸುವವಳು ಅಮ್ಮ. ಮಕ್ಕಳ ಏಳ್ಗೆಯನ್ನು ನೋಡಿ, ಅವರ ನಲಿವಿನಲ್ಲಿ ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವವಳು ಅಮ್ಮ.

ನನ್ನ ಅಮ್ಮ ಮೈಸೂರಿನ ಸಾಮಾನ್ಯ ಕುಟುಂಬದವರು, ಸುಸಂಸ್ಕೃತ ಭಾಷೆ, ಹಿತ ಮಿತವಾದ ಮಾತು, ಪೂಜೆ ಪುನಸ್ಕಾರಗಳಲ್ಲಿ ಎಂದೂ ಮುಂದೆ. ತಾವು ಪೂಜೆ ಮಾಡುವುದರ ಜೊತೆಗೆ ನಾವು ನಾಲ್ಕು ಮಕ್ಕಳೂ ಅವರ ಜೊತೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದರು. ಕೇವಲ ಮೂರನೆಯ ತರಗತಿ ಓದಿದ್ದ ಅಪ್ಪ, ತಮ್ಮ ಅಡುಗೆ ಕೆಲಸದ ಜೊತೆಗೆ ಅಮ್ಮನನ್ನು ಓದಿಸಿ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ದಾದಿಯ ತರಬೇತಿಗೆ ಸೇರಿಸಿದರಂತೆ, ಕೇವಲ ಒಂದೂವರೆ ವರ್ಷದವನಾಗಿದ್ದ ನಾನು ಅನಿವಾರ್ಯವಾಗಿ ಅಮ್ಮನಿಂದ ಅಗಲಬೇಕಾಯಿತು. ತರಬೇತಿ ಮುಗಿಯುವವರೆಗೂ ವಾರಕ್ಕೊಮ್ಮೆ ಅಪ್ಪ ನನ್ನನ್ನು ಕರೆದೊಯ್ದು ಅಮ್ಮನ ಭೇಟಿ ಮಾಡಿಸುತ್ತಿದ್ದರಂತೆ. ತರಬೇತಿ ಮುಗಿದು ಅಮ್ಮನಿಗೆ ಕೆಲಸ ಸಿಕ್ಕಿದಾಗ ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ಒಂದನೆ ತರಗತಿಯಲ್ಲಿ ಓದುತ್ತಿದ್ದ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ಲಿಗೆ ಬಂದಿದ್ದರು. ಅಲ್ಲಿ ದಾದಿಯ ಕೆಲಸದಲ್ಲಿದ್ದಾಗಲೇ ನನ್ನ ತಮ್ಮ ಜನಿಸಿದ. ತಮ್ಮ ಕೆಲಸದ ನಂತರ ಅಮ್ಮ ನಮಗಾಗಿ ಸಾಕಷ್ಟು ಸಮಯ ವ್ಯಯಿಸುತ್ತಿದ್ದರು. ನಾಲ್ಕು ವರ್ಷ ಮಂಡಿಕಲ್ಲಿನ ವಾಸದ ನಂತರ ಅಮ್ಮನಿಗೆ ತುಮಕೂರು ಜಿಲ್ಲೆಯ ಕೊರಟಗೆರೆಗೆ ವರ್ಗಾವಣೆಯಾದಾಗ ನಮ್ಮ ಪಯಣ ಅಲ್ಲಿಗೆ. ಅಪ್ಪನ ಹೋಟೆಲ್ಲಿನ ಆದಾಯ ಅವರ ಖರ್ಚಿಗೆ ಸರಿ ಹೋಗುತ್ತಿತ್ತು, ನಮ್ಮೆಲ್ಲರ ವಿದ್ಯಾಭ್ಯಾಸ ಮತ್ತು ಮನೆಯ ಜವಾಬ್ಧಾರಿ ಅಮ್ಮನ ಸಂಬಳದ ಮೇಲೆ ಅವಲಂಬಿತವಾಗಿತ್ತು. ಅಮ್ಮನಿಗೆ ಸಂಬಳ ಬಂದ ದಿನ ಮನೆಯಲ್ಲಿ ಎಲ್ಲರಿಗೂ ಖುಷಿಯೋ ಖುಷಿ. ನಾನು ನನ್ನ ಅಕ್ಕ ಇಬ್ಬರೂ ಅಮ್ಮನ ಜೊತೆ ರೇಷನ್ ಅಂಗಡಿಗೆ ಹೋಗಿ ಮಾರುದ್ಧದ ಚೀಟಿಯಲ್ಲಿ ಅಮ್ಮ ಬರೆದಿದ್ದ ಎಲ್ಲ ಸಾಮಾನುಗಳನ್ನೂ ಕಟ್ಟಿಸಿ ಮನೆಗೆ ತರುತ್ತಿದ್ದೆವು. ಆಗೆಲ್ಲಾ ನಮಗೆ ಬೇಕಾದ ಬಿಸ್ಕಟ್, ಚಾಕಲೇಟ್ಗಳನ್ನು ನಾವಿಬ್ಬರೂ ಸಾಕಷ್ಟು ಖರೀದಿಸಬಹುದಾಗಿತ್ತು. ಆ ಖುಷಿಯ ದಿನಗಳನ್ನು ನೆನೆದರೆ ಈಗಲೂ ಮನಸ್ಸು ಪುಳಕಿತಗೊಳ್ಳುತ್ತದೆ.

ಮತ್ತೆ ಅಮ್ಮನಿಗೆ ಕೊರಟಗೆರೆಯಿಂದ ತಿಪಟೂರಿಗೆ ವರ್ಗಾವಣೆಯಾದಾಗ ನಮ್ಮ ಕುಟುಂಬದ ಪ್ರಯಾಣ, ಹೊಸ ಜಾಗ, ಹೊಸ ಮನೆ, ಹೊಸ ವಾತಾವರಣ. ಅಲ್ಲಿಯೇ ಸುಮಾರು ೧೫ ವರ್ಷ ಸೇವೆ ಸಲ್ಲಿಸಿದ ಅಮ್ಮ, ನಾವು ವಾಸವಿದ್ದ ಇಡೀ ಗಾಂಧಿನಗರ ಮತ್ತದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ "ನರ್ಸಮ್ಮ"ನಾಗಿ ಜನಪ್ರಿಯವಾಗಿದ್ದರು. ಅದೆಷ್ಟು ನೂರು ಹೆರಿಗೆಗಳನ್ನು ಮಾಡಿಸಿದರೋ, ಅದೆಷ್ಟು ಸಾವಿರ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದರೋ ಲೆಕ್ಕವೇ ಇಲ್ಲ. ಸರಿ ರಾತ್ರಿಯಲ್ಲಿಯೂ ಜನರು ಬಂದು ನಮ್ಮ ಮನೆಯ ಬಾಗಿಲು ತಟ್ಟುತ್ತಿದ್ದರು, ಅವರ ಮನೆಯ ಹೆಣ್ಣು ಮಕ್ಕಳ ಹೆರಿಗೆಗಾಗಿ ಸಹಾಯ ಯಾಚಿಸುತ್ತಿದ್ದರು. ಎಂದೂ ಅಮ್ಮ ಯಾರ ಮೇಲೂ ಕೋಪಿಸಿಕೊಳ್ಳುತ್ತಿರಲಿಲ್ಲ, ಯಾರಿಂದಲೂ ಅಮ್ಮ ಹಣ ಕೇಳುತ್ತಿರಲಿಲ್ಲ. ಅಮ್ಮನ ಜೊತೆ ಅಪ್ಪ ಅಥವಾ ನಾನು ಬೆಂಗಾವಲಾಗಿ ಹೋಗುತ್ತಿದ್ದೆವು. ಸುಸೂತ್ರವಾಗಿ ಹೆರಿಗೆ ಮಾಡಿಸಿದ ಅಮ್ಮ ನಗು ಮುಖದಿಂದ ಆ "ನವಮಾತೆ" ಯನ್ನು ಹರಸುತ್ತಿದ್ದರು. ಮನೆಗೆ ಬಂದ ನಂತರ ಸರಿ ರಾತ್ರಿಯಲ್ಲಿಯೂ ತಪ್ಪದೆ ಸ್ನಾನ ಮಾಡಿಯೇ ಮಲಗುತ್ತಿದ್ದರು. ಒಮ್ಮೆ ತಿಪಟೂರಿನ ಪಕ್ಕದ ಗೊರಗೊಂಡನಹಳ್ಳಿಯಲ್ಲಿ ಒಂದು ಹೆರಿಗೆಯ ಸಮಯದಲ್ಲಿ ಮಗು ಅಡ್ಡವಾಗಿ ನಿಂತು ಹೆರಿಗೆಗೆ ತೊಂದರೆಯಾದಾಗ ಎತ್ತಿನ ಗಾಡಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ತಂದು ಶಸ್ತ್ರಚಿಕಿತ್ಸೆ ಮಾಡಿಸುವಷ್ಟರಲ್ಲಿ ತಾಯಿಯ ಪ್ರಾಣ ಹಾರಿ ಹೋಗಿತ್ತು, ಆದರೆ ಮಗು ಬದುಕಿ ಉಳಿದಿತ್ತು. ಆಗ ಅಮ್ಮ ತಮ್ಮ ಮಗಳೇ ಸತ್ತಂತೆ ಕಂಬನಿ ಸುರಿಸಿ ಗೋಳಾಡಿದ್ದರು. ಪದ್ಮಶ್ರೀ ಡಾ.ಎಂ.ಸಿ.ಮೋದಿಯವರ ನೇತೃತ್ವದಲ್ಲಿ "ಅಂಧತ್ವ ನಿವಾರಣಾ ಶಿಬಿರಗಳು" ನಡೆದಾಗ ತಮಗೆ ಗೊತ್ತಿದ್ದ ಎಲ್ಲಾ ವಯಸ್ಕರನ್ನೂ ಅಲ್ಲಿಗೆ ಬರುವಂತೆ ಮಾಡಿ ನೂರಾರು ಜನರಿಗೆ ದೃಷ್ಟಿ ಸಿಗುವಂತೆ ಶ್ರಮಿಸಿದ್ದರು. ಹೀಗೆ ಅತ್ಯಂತ ಕರುಣಾಮಯಿಯಾಗಿದ್ದರು ಅಮ್ಮ.

ಸಿಡುಕು ಬುದ್ಧಿಯ ಅಪ್ಪ ನನ್ನನ್ನು ನನ್ನ ತುಂಟಾಟಗಳಿಗಾಗಿ ಹಿಡಿದು ತದುಕಿದಾಗಲೆಲ್ಲಾ ನನ್ನನ್ನು ಸಮಾಧಾನಿಸಿ, ರಾಯರ ಮಠಕ್ಕೋ ಇಲ್ಲ ಮಾರಮ್ಮನ ದೇವಸ್ಥಾನಕ್ಕೋ ಕರೆದುಕೊಂಡುಹೋಗುತ್ತಿದ್ದರು. ತಿಪಟೂರಿನ ಕೋಟೆ ಪ್ರದೇಶದಲ್ಲಿದ್ದ ಗುರುರಾಯರ ಮಠದಲ್ಲಿ ಪ್ರತಿ ಗುರುವಾರ ಅಮ್ಮ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಸುಶ್ರಾವ್ಯವಾಗಿ ರಾಯರ ಭಕ್ತಿಗೀತೆಗಳನ್ನು ಹಾಡುತ್ತಿದ್ದರು, ನನ್ನಿಂದಲೂ ಹಾಡಿಸುತ್ತಿದ್ದರು. ಸುಮಾರು ೪ ವರ್ಷಗಳ ಕಾಲ ಇದು ಅನೂಚಾನವಾಗಿ ನಡೆದು ಬಂತು. ನನ್ನ ತುಂಟಾಟಗಳು ಹೆಚ್ಚಾದಾಗ ಗಾಂಧಿನಗರದಲ್ಲಿದ್ದ ಮಾರಮ್ಮನ ಗುಡಿಯಲ್ಲಿ ಶುಕ್ರವಾರ ಪೂಜೆ ಮಾಡಿಸಿ, ಮಂತ್ರ ಹಾಕಿಸಿ ಒಂದು ತಾಯಿತವನ್ನೂ ಕಟ್ಟಿಸುತ್ತಿದ್ದರು! ಆದರೆ ಅದು ಮೂರುದಿನವೂ ನನ್ನ ಮೈ ಮೇಲೆ ಇರುತ್ತಿರಲಿಲ್ಲ!! ನಾನು ಪದವಿ ತರಗತಿಗೆ ಸೇರಿದಾಗ ಎನ್.ಸಿ.ಸಿ. ತರಬೇತಿ ಶಿಬಿರಗಳಿಗೆ, ಯೂತ್ ಹಾಸ್ಟೆಲ್ ವತಿಯಿಂದ ನಾನು ಭಾಗವಹಿಸಿದ ಸೈಕಲ್ ಪ್ರವಾಸಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ನಾನು ತಂಡದ ನಾಯಕನಾಗಿ ನಿಯುಕ್ತನಾಗಿ ಯಶಸ್ವಿಯಾಗಿ "ದೆಹಲಿ ಸೈಕಲ್ ಪ್ರವಾಸ" ಮುಗಿಸಿ ಬಂದಾಗ, ಅಂದಿನ ಶಾಸಕರಾಗಿದ್ದ ಟಿ.ಎಂ. ಮಂಜುನಾಥ ಮತ್ತು ಸಚಿವರಾಗಿದ್ದ ಲಕ್ಷ್ಮೀನರಸಿಂಹಯ್ಯನವರು ನಮ್ಮನ್ನು ಸನ್ಮಾನಿಸಿದ ಸಮಾರಂಭದಲ್ಲಿ ಮೊದಲ ಸಾಲಿನಲ್ಲಿ ಕುಳಿತು ಭಾವುಕರಾಗಿ ಆನಂದಬಾಷ್ಪಗರೆಯುತ್ತಾ ಅಪ್ಪ ಬರದಿದ್ದ ಕೊರತೆಯನ್ನು ತುಂಬಿದ್ದರು. ನಾ ಕಾಣದ ಅಪ್ಪನ ಪ್ರೀತಿಯ ಕೊರತೆಯನ್ನು ತುಂಬಿಸಲು ಅಮ್ಮ ಅಹರ್ನಿಶಿ ಯತ್ನಿಸುತ್ತಿದ್ದರು.

ಅಮ್ಮ, ಅಪ್ಪನನ್ನು ತುಂಬಾ ಪ್ರೀತಿಸುತ್ತಿದ್ದರು, ತಮ್ಮ ಮೈಸೂರು ಸಂಸ್ಕೃತಿಯ "ಏನೂಂದ್ರೇ" ಅನ್ನದೆ ಎಂದೂ ಮಾತು ಆರಂಭಿಸುತ್ತಿರಲಿಲ್ಲ, ತಮ್ಮ ಲಾಟರಿ ಚಟದಿಂದ ಅಪ್ಪ ಸಾಕಷ್ಟು ನಷ್ಟ ಮಾಡಿದರೂ ಸಹ ಅಪ್ಪನನ್ನು ಎಂದೂ ಬಿಟ್ಟು ಕೊಡುತ್ತಿರಲಿಲ್ಲ. ಅಪ್ಪನ ಕೈಲಿ ಒದೆ ತಿಂದು ಸಾಕಾಗಿ ನಾನು ಸೆಡ್ಡು ಹೊಡೆದು ತಿರುಗಿ ಬಿದ್ದಾಗ ನನ್ನನ್ನು ಆದಷ್ಟು ಸಮಾಧಾನಿಸಲು ಯತ್ನಿಸುತ್ತಿದ್ದರು. "ತಂದೆ-ಮಗ" ಇಬ್ಬರಲ್ಲಿ ಯಾರ ಪರವಾಗಿ ನಿಲ್ಲಬೇಕೆನ್ನುವ ಸಂದಿಗ್ಧದಲ್ಲಿ ಸಾಕಷ್ಟು ಹೊಯ್ದಾಡುತ್ತಿದ್ದರು. ಅಮ್ಮ ಎಷ್ಟೇ ಪ್ರಯತ್ನಿಸಿದರೂ ಅಪ್ಪನ ಸಿಡುಕುತನ, ಮುಂಗೋಪಗಳಿಂದ ನಮ್ಮಿಬ್ಬರ ನಡುವೆ ಅಗಾಧವಾಗಿ ಮೂಡಿದ್ದ ಕಂದಕವನ್ನು ಮುಚ್ಚುವಲ್ಲಿ ಸೋತಿದ್ದರು. ಪದವೀಧರನಾಗಿ ನಾನು ಬೆಂಗಳೂರಿಗೆ ಬಂದು ಕೆಲಸಕ್ಕೆ ನಿಂತ ನಂತರ ನನ್ನ ತಮ್ಮನನ್ನೂ ಬೆಂಗಳೂರಿಗೆ ಎಳೆ ತಂದು ಕೆಲಸಕ್ಕೆ ಸೇರಿಸಿದೆ. ಆಗ ಅಮ್ಮ ಬೆಂಗಳೂರಿಗೇ ವರ್ಗಾವಣೆ ಮಾಡಿಸಿಕೊಂಡು ಬಂದರು, ನಾನಿರುವಲ್ಲಿಯೇ ದೊಡ್ಡ ಮನೆ ಮಾಡಿ ಎಲ್ಲರೂ ಒಟ್ಟಿಗೆ ಇರೋಣವೆಂದ ನನ್ನ ಮಾತಿಗೆ ಅಪ್ಪ ಸುತರಾಂ ಒಪ್ಪದಿದ್ದಾಗ ವಿಧಿಯಿಲ್ಲದೆ ವೈಟ್ ಫೀಲ್ಡಿನಲ್ಲಿ ಮನೆ ಮಾಡಿದ್ದರು. ಅದುವರೆಗೂ ನನ್ನ ಜೊತೆಯಿದ್ದ ತಮ್ಮನನ್ನು ಅಮ್ಮನ ಜೊತೆಗೆ ಕಳುಹಿಸಿದ್ದೆ. ನನ್ನ ಕೆಲಸದಲ್ಲಿನ ಸಂಬಳ ಸಾಕಾಗದೆ ನಾನು ಹಲಸೂರಿನ ಸೋಮೇಶ್ವರ ದೇವಾಲಯದ ಮುಂದಿದ್ದ "ಬೆರಳಚ್ಚು ಕೇಂದ್ರ"ದಲ್ಲಿ ಬಿಡುವಿನ ವೇಳೆಯಲ್ಲಿ ಸಾವಿರಾರು ಬಾಡಿಗೆ, ಮಾರಾಟದ ಕರಾರು ಪತ್ರಗಳನ್ನು ಬೆರಳಚ್ಚಿಸುತ್ತಿದ್ದೆ. ಮನೆಯಲ್ಲಿ ಅಪ್ಪ ಜಗಳವಾಡೆದಾಗೆಲ್ಲ ಅಮ್ಮ ಸೀದಾ ಅಲ್ಲಿಗೆ ಬಂದು ಬಿಡುತ್ತಿದ್ದರು, ಆಗೆಲ್ಲಾ ನಾನು ಹೋಗಿ ಅಪ್ಪನಿಗೆ ಬುದ್ಧಿ ಹೇಳಿ ಬರಬೇಕಿತ್ತು. ಆದರೆ ಅಪ್ಪ ಎಂದೂ ನನ್ನ ಮನೆಗೆ ಬರುತ್ತಿರಲಿಲ್ಲ. ಹೀಗಿದ್ದ ಅಮ್ಮ ಕೊನೆಗೊಂದು ದಿನ ನಿವೃತ್ತರಾದರು, ತಮಗೆ ಸಾಕಷ್ಟು ಹಣ ಬಂದಾಗ ಒಂದು ಸೈಟು ಖರೀದಿಸಿ ಸ್ವಂತ ಮನೆ ಕಟ್ಟಬೇಕೆನ್ನುವ ಆಸೆಯಿತ್ತು ಅಮ್ಮನಿಗೆ, ನಾನಿದ್ದ ಲಗ್ಗೆರೆಯಲ್ಲಿ ಒಂದು ದೊಡ್ಡ ಸೈಟು ಕೇವಲ ೨ ಲಕ್ಷಕ್ಕೆ ಮಾರಾಟಕ್ಕಿತ್ತು, ಅಮ್ಮನಿಗೆ ಮನಸ್ಸಿತ್ತು, ಆದರೆ ಅಪ್ಪ ಅಲ್ಲಿಗೆ ಬರಲು ಮತ್ತೆ ಒಪ್ಪಲಿಲ್ಲ, ಸೈಟು ತೆಗೆದರೆ ವೈಟ್ ಫೀಲ್ಡಿನಲ್ಲೇ ತೆಗೆಯಬೇಕೆಂದು ಹಠ ಹಿಡಿದರಂತೆ. ಮತ್ತೊಮ್ಮೆ ಮಗನೋ ಗಂಡನೋ ಎಂಬ ಸಂದಿಗ್ಧದಲ್ಲಿ ಸಿಕ್ಕಿ ನರಳಿದರು ಅಮ್ಮ. ಕೊನೆಗೆ ’ನಾನು ದೂರವೇ ಇರುತ್ತೇನೆ, ನೀವೆಲ್ಲ ಚೆನ್ನಾಗಿರಿ, ಅಲ್ಲೇ ಸೈಟು ತೆಗೆದು ಮನೆ ಕಟ್ಟಿಸಿ, ನನಗೇನೂ ಬೇಜಾರಿಲ್ಲ’ ಎಂದು ಸಮಾಧಾನ ಮಾಡಿ ಕಳುಹಿಸಿದೆ. ಕೊನೆಗೂ ಅಲ್ಲಿ ಸೈಟು ಖರೀದಿಸಿ ಮನೆ ಕಟ್ಟಿಸಿದರು. ತಮ್ಮ ಸ್ವಂತ ಮನೆಯಲ್ಲಿ ಪ್ರಶಾಂತವಾದ ನಿವೃತ್ತ ಜೀವನದ ಕನಸು ಕಂಡಿದ್ದರು ಅಮ್ಮ, ಆದರೆ ವಿಧಿ ಬಿಡಬೇಕಲ್ಲ!

ಮನೆ ಕಟ್ಟಿ ಗೃಹ ಪ್ರವೇಶವಾಗುವ ಹೊತ್ತಿಗೆ ಸರಿಯಾಗಿ ನನ್ನ ತಮ್ಮನಿಗೆ ದುಬೈನಲ್ಲಿ ಕೆಲಸಕ್ಕೆ ಆದೇಶ ಬಂತು, ಅವನು ಹೊರಟು ನಿಂತ, ನಂತರ ಕೆಲದಿನಗಳಲ್ಲೇ ಹೆಂಡತಿ ಮಗನನ್ನೂ ಅಲ್ಲಿಗೇ ಕರೆಸಿಕೊಂಡ. ತಮ್ಮನ ಸಂಸಾರದ ಜೊತೆ ಹೊಂದಿಕೊಂಡು ನೆಮ್ಮದಿಯಿಂದಿದ್ದ ಅಮ್ಮ ಈಗ ಒಂಟಿಯಾಗಿದ್ದರು. ಅಪ್ಪ ಯಥಾ ಪ್ರಕಾರ ತಮ್ಮ ದುಡುಕು ಬುದ್ಧಿ, ಸಿಡುಕುತನವನ್ನು ಮುಂದುವರೆಸಿ ಅಮ್ಮನ ನೆಮ್ಮದಿ ಕೆಡಿಸುತ್ತಿದ್ದರು. ತುಂಬಾ ಬೇಜಾರಾದಾಗ ಸೀದಾ ನಮ್ಮ ಮನೆಗೆ ಬಂದು ವಾರಗಟ್ಟಲೆ ಉಳಿದುಬಿಡುತ್ತಿದ್ದರು. ನನ್ನ ಹೆಂಡತಿಯ ಕೈಯಲ್ಲಿನ ರಾಗಿ ಮುದ್ದೆ, ಮಾಂಸದ ಸಾರು ಅಮ್ಮನಿಗೆ ತುಂಬಾ ಪ್ರಿಯವಾಗಿತ್ತು. ೩೦ ವರ್ಷ ದುಡಿದು ನಿವೃತ್ತರಾಗಿದ್ದ ಅಮ್ಮನಿಗೆ ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆಗಳು ಬಿಡದ ನೆಂಟರಂತೆ ಅಂಟಿಕೊಂಡಿದ್ದವು. ಪ್ರತಿದಿನದ ಮಾತ್ರೆ ಔಷಧಿಗಳ ಬಗ್ಗೆ ತಾತ್ಸಾರ ತೋರಿದ್ದರಿಂದ ಅಮ್ಮನ ಆರೋಗ್ಯ ಕೈಕೊಟ್ಟು, ಅವರ ಮೂತ್ರಪಿಂಡಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಪರಿಚಿತರಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ಡಾ.ಕೃಷ್ಣಮೂರ್ತಿಯವರಲ್ಲಿ ತೋರಿಸಿದಾಗ ಅಮ್ಮನ ಎರಡೂ ಮೂತ್ರಪಿಂಡಗಳು ಹಾಳಾಗಿರುವುದು ಸ್ಪಷ್ಟವಾಯಿತು, ನನ್ನದೂ ಅಮ್ಮನದೂ ಒಂದೇ ರಕ್ತದ ಗುಂಪಾಗಿದ್ದುದರಿಂದ ನಾನು ನನ್ನ ಒಂದು ಮೂತ್ರಪಿಂಡವನ್ನು ಅಮ್ಮನಿಗೆ ಕೊಡಲು ಸಿದ್ಧನಾದೆ. ಆದರೆ "ಸಕ್ಕರೆ ಖಾಯಿಲೆ ಅಧಿಕ ಮಟ್ಟದಲ್ಲಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿ ಮೂತ್ರಪಿಂಡ ಕಸಿ ಮಾಡುವುದು ಪ್ರಯೋಜನವಿಲ್ಲ, ಇದ್ದರೆ ಇನ್ನಾರು ತಿಂಗಳು ಇದ್ದಾರು, ಇರುವವರೆಗೂ ಚೆನ್ನಾಗಿ ನೋಡಿಕೊಳ್ಳಿ" ಎಂದು ನಿರ್ಭಾವುಕರಾಗಿ ಎದ್ದು ಹೋಗಿದ್ದರು. ಅಂದಿನಿಂದ ವಿಕ್ಟೋರಿಯಾ ಆಸ್ಪತ್ರೆ ಅಮ್ಮನ ಮನೆಯಾಯಿತು, ನಾನು ನನ್ನ ಕೆಲಸದ ಜೊತೆಗೆ ಪ್ರತಿದಿನ ಆಸ್ಪತ್ರೆಗೆ ಹೋಗುವುದು, ಅಲ್ಲಿನ ಆಯಾ, ದಾದಿಯರಿಗೆಲ್ಲ ಸಾಕಷ್ಟು ಕಾಣಿಕೆ ಕೊಡುತ್ತಾ ಅಮ್ಮನಿಗೆ ಏನೂ ತೊಂದರೆಯಾಗದಂತೆ ನೊಡಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದೆ. ಮನೆಯಿಂದ ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆಯಾಗದ ಕಾರಣ ಕಲಾಸಿ ಪಾಳ್ಯದ ನಾಯ್ಡು ಹೋಟೆಲಿನ ರಾಗಿಮುದ್ದೆ, ಮಟನ್ ಕೈಮಾ ಅಮ್ಮನಿಗೆ ಪ್ರತಿ ದಿನದ ಊಟವಾಯ್ತು. ಹಣ ನೀರಿನಂತೆ ಖರ್ಚಾಗುತ್ತಿತ್ತು, ಸಿಕ್ಕ ಸಿಕ್ಕಲ್ಲಿ ಸಾಲ ಮಾಡಿ ಹೇಗಾದರೂ ಅಮ್ಮನನ್ನು ಉಳಿಸಿಕೊಳ್ಳಬೇಕೆಂದು ಹೆಣಗಾಡುತ್ತಿದ್ದೆ. ದುಬೈಗೆ ಹೋದ ತಮ್ಮ ಒಮ್ಮೆ ಹೆಂಡತಿ ಮಗನೊಡನೆ ಬಂದು ಅಮ್ಮನನ್ನು ನೋಡಿಕೊಂಡು ಹೋದವನು ಹತ್ತು ಸಾವಿರ ಕೈಯಲ್ಲಿಟ್ಟು ದುಬೈಗೆ ಹೋದ ನಂತರ ಮತ್ತಷ್ಟು ಕಳಿಸುತ್ತೇನೆಂದು ಹೇಳಿ ಹೋಗಿದ್ದ, ಆದರೆ ಮತ್ತೆ ಇತ್ತ ತಲೆ ಹಾಕಿರಲಿಲ್ಲ!

ಸುಮಾರು ಎಂಟು ತಿಂಗಳು ನರಳಿದ ಅಮ್ಮ ಕೊನೆಗೊಂದು ದಿನ ಆಸ್ಪತ್ರೆಯಲ್ಲಿ ಸಿಡುಕುತ್ತಲೇ ಇದ್ದ ಅಪ್ಪನನ್ನು ಬಳಿ ಕರೆದು ತನ್ನನ್ನು ಎತ್ತಿ ತನ್ನ ಭುಜಕ್ಕಾನಿಸಿಕೊಂಡು ಕೂರಿಸಿಕೊಳ್ಳಲು ಹೇಳಿ, ಅವರ ಭುಜದ ಮೇಲೆಯೇ ಕೊನೆಯುಸಿರೆಳೆದಿದ್ದರು. ನನ್ನ ದೈನಂದಿನ ಕೆಲಸಗಳನ್ನು ಮುಗಿಸಿ ದಣಿದು ಮನೆಗೆ ಬಂದು ಹೆಂಡತಿ ಪ್ರೀತಿಯಿಂದ ಬಡಿಸಿದ ರಾಗಿಮುದ್ದೆಯ ತುತ್ತನ್ನು ಮುರಿದು ಸೊಪ್ಪಿನ ಸಾರಿನಲ್ಲಿ ಅದ್ದಿ ಬಾಯಿಗಿಡುವ ಹೊತ್ತಿಗೆ ದೊಡ್ಡ ಮೋಟರಾಲ ಮೊಬೈಲ್ ರಿಂಗಣಿಸಿತ್ತು. ಅತ್ತಲಿಂದ ಅಪ್ಪನ ಕ್ಷೀಣ ಧ್ವನಿ, " ಮಂಜು, ನಿಮ್ಮಮ್ಮ ಹೋಗ್ಬಿಟ್ಳು ಕಣೋ, ಬೇಗ ಬಾರೋ" ಅಂದಿದ್ದಷ್ಟೆ, ದುಃಖದ ಕಟ್ಟೆಯೊಡೆದಿತ್ತು, ಖಾಲಿಯಾಗಿದ್ದ ಜೇಬನ್ನೊಮ್ಮೆ ಮುಟ್ಟಿ ನೋಡಿಕೊಂಡು, ಮೇಲಿನ ಮನೆಯ ಸುರೇಶನಲ್ಲಿ ಸ್ವಲ್ಪ ಹಣ ಪಡೆದು ಹೆಂಡತಿ ಮಕ್ಕಳೊಡನೆ ಆಸ್ಪತ್ರೆಗೆ ದೌಡಾಯಿಸಿದೆ. ನಮಗಾಗಿ ಏನೆಲ್ಲ ಕಷ್ಟಪಟ್ಟಿದ್ದ ನನ್ನಮ್ಮ ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದರು, ಜೀವನವೆಲ್ಲ ಅಪ್ಪನ ಸಿಡುಕುತನವನ್ನು ಸಹಿಸಿ ಅವರನ್ನು ಅಪಾರವಾಗಿ ಪ್ರೀತಿಸಿ, ಕೊನೆಗೆ ಅವರ ಭುಜದ ಮೇಲೆಯೇ ಕಣ್ಮುಚ್ಚಿದ್ದರು. ಅಮ್ಮನ ಕಳೇಬರವನ್ನು ವೈಟ್ ಫೀಲ್ಡಿನ ಮನೆಗೆ ತಂದು ತಮ್ಮ ಹಾಗೂ ಎಲ್ಲ ಸಂಬಂಧಿಕರಿಗೂ ಫೋನ್ ಮಾಡಿ ವಿಷಯ ತಿಳಿಸಿದೆ, ನಾನು ಬರಲಾಗುವುದಿಲ್ಲ, ಎಲ್ಲ ಕಾರ್ಯ ನೀನೇ ಮಾಡು ಅಂದ ತಮ್ಮನ ಮಾತು ಕೇಳಿ ಮನಕ್ಕೆ ನೋವಾದರೂ ಅಲ್ಲಿ ಅವನ ಪರಿಸ್ಥಿತಿ ಏನಿದೆಯೋ ಎಂದನ್ನಿಸಿ ಅಮ್ಮನ ಅಂತ್ಯಕ್ರಿಯೆಗಳನ್ನು ಮುಗಿಸಿದೆ. ಅಂತ್ಯಕ್ರಿಯೆಗಳು ಮುಗಿದ ನಂತರ ಅಪ್ಪ, ಅಮ್ಮನ ಒಡವೆಗಳ ವಿಚಾರವಾಗಿ ನನ್ನ ಪತ್ನಿಯೊಡನೆ ಜಗಳವಾಡಿ ಯಾವುದೇ ಕಾರಣಕ್ಕೂ ಯಾರೂ ಅಮ್ಮನ ಒಡವೆಗಳನ್ನು ಮುಟ್ಟಬಾರದೆಂದು ತಾಕೀತು ಮಾಡಿದ್ದರಂತೆ. ಅಪ್ಪನಿಗೊಮ್ಮೆ ಕೈ ಮುಗಿದು ನಮಗೆ ಯಾವ ಒಡವೆಗಳೂ ಬೇಕಿಲ್ಲವೆಂದು ಸ್ಪಷ್ಟೀಕರಿಸಿ ಖಾಲಿಯಾದ ಮನದೊಂದಿಗೆ ಲಗ್ಗೆರೆಗೆ ಮರಳಿ ಬಂದಿದ್ದೆ.

ಅದೆಷ್ಟೋ ಸಲ ಅಮ್ಮನ ಮಡಿಲಲ್ಲಿ ತಲೆಯಿಟ್ಟು ನನ್ನ ಕಷ್ಟ ಸುಖಗಳನ್ನು ಹೇಳಿಕೊಂಡಿದ್ದೆ, ತಲೆ ನೇವರಿಸಿ ಅಮ್ಮ ಸಮಾಧಾನ ಮಾಡುತ್ತಿದ್ದರು. ಇಂದು, ಕಷ್ಟದ ದಿನಗಳು ಮುಗಿದು, ದುಬೈನಲ್ಲಿ ಕೆಲಸ ಮಾಡುತ್ತಿದ್ದೇನೆ, ಅಮ್ಮನೊಡನೆ ಹೇಳಿಕೊಳ್ಳಲು ನೂರಾರು ಮಾತುಗಳಿವೆ, ಆದರೆ ಕೇಳಲು ಆ "ಅಮ್ಮ" ಇಲ್ಲ. ವಿಶ್ವ ಅಮ್ಮಂದಿರ ದಿನದಂದು ಅಗಲಿದ ನನ್ನ ಅಮ್ಮನಿಗೆ ಇದು ನನ್ನ ಅಶೃ ತರ್ಪಣ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

"ದೇವರಿಗೊಂದು ಕಾಗದ ಬರೆದು ಭೂಮಿಗೆ ಕರೀಬೇಕು, ದೇವರು ಓದೋ ಭಾಷೆಯ ಕಲಿಸೋ ತಾಯಿಯ ಪಡೀಬೇಕು"

Sunday, May 2, 2010

ಅರಬ್ಬರ ನಾಡಿನಲ್ಲಿ............೧

ಅರಬ್ಬರ ನಾಡಿನಲ್ಲಿ ಸಾಕಷ್ಟು ಮೋಜಿನ ಪ್ರಸಂಗಗಳು ನಡೆಯುತ್ತವೆ. ನಮ್ಮ ಅನುಭವದಿಂದ ನಾವು ಇದು ತಪ್ಪು ಎಂದು ಹೇಳಿದರೆ ಕೇಳದೆ ಅವರದೇ ಆದ ದಾರಿಯಲ್ಲಿ ಹೋಗಿ ಬೇಸ್ತು ಬಿದ್ದು ಕೊನೆಗೆ ನಮ್ಮಂತೆ ಬರುತ್ತಾರೆ. ಆದರೆ ಅದೇನೋ ಒಂದು ರೀತಿಯ ಬಿಗುಮಾನ ಇದ್ದೇ ಇರುತ್ತದೆ. ಈ ಅನುಭವಗಳನ್ನು "ಅರಬ್ಬರ ನಾಡಿನಲ್ಲಿ" ಮಾಲಿಕೆಯಲ್ಲಿ ಹಂಚಿಕೊಳ್ಳಲಿದ್ದೇನೆ.

ಕನಸಿನ ಮನೆ ಕೊಳ್ಳುವ ಆತುರದಲ್ಲಿ ಕೇವಲ ೧೫ ದಿನ ರಜಾ ಗುಜರಾಯಿಸಿ ಬೆಂಗಳೂರಿಗೆ ಓಡಿದ್ದೆ. ಆದರೆ ಅಲ್ಲಿ ಬ್ಯಾಂಕಿನವರು ನನಗೆ ಮಾಡಿದ ಕಿರಿಕಿರಿಯಿಂದ ಸುಮಾರು ಒಂದು ತಿಂಗಳು ನನ್ನ ರಜಾ ಮುಂದುವರೆಸಬೇಕಾಯಿತು. ಕೊನೆಗೆ ಆ ಕನಸಿನ ಮನೆ ಕೊಳ್ಳಲು "ಗೃಹಸಾಲ" ಸಿಗದೆ "ಗೃಹಭಂಗ"ವಾಗಿ ನಿರಾಸೆಯಿಂದ ದುಬೈಗೆ ಹಿಂತಿರುಗಿ ಬಂದೆ. ಶನಿವಾರ ರಾತ್ರಿಯೆಲ್ಲಾ ನಿದ್ದೆಗೆಟ್ಟು ಬಂದರೆ ಮರುದಿನವೇ ದುಬೈನಿಂದ ಅಬುಧಾಬಿಗೆ ಹೋಗಬೇಕು, ಕೇಂದ್ರ ಕಛೇರಿಯಲ್ಲಿ ಎಂಡಿಯವರಿಂದ ಮಾನವ ಸಂಪನ್ಮೂಲದವರೆಗೆ ಎಲ್ಲರಿಗೂ ಸಾಕಷ್ಟು ಸಮಜಾಯಿಷಿ ಕೊಡಬೇಕಿತ್ತು. ಹಾಗಾಗಿ ಮಲ್ಯರ ಕಿಂಗ್ಫಿಷರ್ನಲ್ಲಿ ಶನಿವಾರ ರಾತ್ರಿಯೇ ಬಂದು ದುಬೈನಲ್ಲಿಳಿದೆ. ಒಂದೂವರೆ ತಿಂಗಳು ಕಛೇರಿಯ ಕಟ್ಟಡದ ಬೇಸ್ಮೆಂಟಿನಲ್ಲಿ ಧೂಳು ಹಿಡಿದು ನಿಂತಿದ್ದ ನನ್ನ "ಟೊಯೋಟಾ ಕ್ಯಾಮ್ರಿ"ಯನ್ನು ನನ್ನ ಶಿಷ್ಯ ಅಶೋಕನ್ ಸರ್ವೀಸ್ ಮಾಡಿಸಿ ನಿಲ್ಲಿಸಿದ್ದ. ಒಂದು ಘಂಟೆ ದುಬೈನ ಕಛೇರಿಯಲ್ಲಿ ಕಳೆದು ಅಬುಧಾಬಿಗೆ ಹೋಗಲು ಕಾರು ಹತ್ತಿದೆ, ೧೨೦ರಲ್ಲಿ ಓಡಿದ ನನ್ನ ಕ್ಯಾಮ್ರಿ ಆಗಾಗ ಬೆಂಗಳೂರಿನ ರಸ್ತೆಗಳಲ್ಲಿ ನಾನು ಅಯ್ ೧೦ ಓಡಿಸಿದಂತೆ ಬಲಕ್ಕೆ ಎಡಕ್ಕೆ ಹೋಗುತ್ತಲೇ ೧೭೦ ಕಿ.ಮೀ.ದೂರವನ್ನು ಒಂದೂವರೆ ಘಂಟೆಯಲ್ಲಿ ಕ್ರಮಿಸಿದ್ದೆ. ಕೇಂದ್ರ ಕಛೇರಿಯಲ್ಲಿ ಆತ್ಮೀಯ ಸ್ವಾಗತವೇ ಕಾದಿತ್ತು. ಮಲ್ಲೇಶ್ವರಂನ ಆಡ್ಯಾರ್ ಕೃಷ್ಣ ಭವನದ ತುಪ್ಪ ಸುರಿಯುವ "ಮೈಸೂರ್ ಪಾಕು" ಎಲ್ಲರ ನಾಲಿಗೆಗೂ ಚೆನ್ನಾಗಿಯೇ ರುಚಿ ಹತ್ತಿಸಿ ಒಂದು ತಿಂಗಳು ಅಧಿಕ ರಜೆ ಪಡೆದ "ಪಾಪ"ವನ್ನು ತೊಡೆದು ಹಾಕಿತ್ತು. ನೆಮ್ಮದಿಯಿಂದ ಮತ್ತೆ ದುಬೈಗೆ ಹಿಂತಿರುಗಿ ಬಂದು ಎರಡು ಪೆಗ್ ಬ್ಲಾಕ್ ಲೇಬಲ್ ಏರಿಸಿ ಮಲಗಿಬಿಟ್ಟೆ.

ಮರುದಿನ ಸೋಮವಾರ, ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿ ಧರ್ಮಸ್ಥಳದವನನ್ನೊಮ್ಮೆ ನೆನೆದು ಮನೆಯಿಂದ ಹೊರಟವನು ದುಬೈ, ಶಾರ್ಜಾ, ಅಜ್ಮಾನ್ ನಗರಗಳನ್ನು ಒಂದು ಪ್ರದಕ್ಷಿಣೆ ಹೊಡೆದು ನಮ್ಮ ಭದ್ರತಾ ರಕ್ಷಕರನ್ನು ನಿಯೋಜಿಸಿದ್ದ ಪ್ರತಿಯೊಂದು ಪ್ರದೇಶಕ್ಕೂ ಭೇಟಿ ಕೊಟ್ಟು ಕುಶಲೋಪರಿ ವಿಚಾರಿಸಿ, ಶಾರ್ಜಾದಲ್ಲಿನ ಪೊಲೀಸ್ ಕಛೇರಿಯಲ್ಲಿ ಒಂದು ಸಲಾಂ ಅಲೇಕುಮ್ ಹೊಡೆದು ಎಲ್ಲೂ ಏನೂ ಹೆಚ್ಚು ಕಡಿಮೆಯಾಗಿಲ್ಲ, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆಯೆಂದು ಖಾತ್ರಿಪಡಿಸಿಕೊಂಡು ನನ್ನ ಕಾರನ್ನು ದುಬೈನತ್ತ ತಿರುಗಿಸಿದೆ. ಆಗ ಬಂತು ಎಂಡಿಯವರ ಫೋನ್, "ಹಾಯ್ ಮಂಜು ಐ ಹ್ಯಾವ್ ಎ ಪ್ರಾಬ್ಲಮ್, ಯು ಹ್ಯಾವ್ ಟು ಸಾಲ್ವ್ ಇಟ್" ಎಂದು ತನ್ನ ಬ್ರಿಟಿಷ್ ಇಂಗ್ಲೀಷಿನಲ್ಲಿ ಹೇಳಿದಾಗ" ಯೆಸ್, ಟೆಲ್ ಮಿ ಪ್ಲೀಸ್, ಐಯಾಮ್ ವಿತ್ ಯು" ಅಂದೆ. ಆಗ ಅವರು ಹೇಳಿದರು, ಅಲೇಯ್ನ್ ಶಾಖೆಯಲ್ಲಿನ ಮೇನೇಜರ್ ಈಜಿಪ್ಟಿಗೆ ಹೋದ, ನೀನು ಅಲ್ಲಿನ ಜವಾಬ್ಧಾರಿಯನ್ನೂ ನಿರ್ವಹಿಸಬೇಕು ಎಂದವರಿಗೆ ಸರಿಯೆಂದೆ. ಮರುದಿನ ಮಂಗಳವಾರ ದುಬೈನಿಂದ ಅಲೇಯ್ನಿಗೆ ನನ್ನ ಪ್ರಯಾಣ, ಸುಮಾರು ೧೫೦ ಕಿ.ಮೀ.ದೂರ, ಅಲ್ಲಿ ಹೋಗಿ ನೋಡಿದರೆ ಅಲ್ಲಿದ್ದ ಮೇನೇಜರ್ ಆ ಶಾಖೆಯನ್ನು ಕುಲ ಕರ್ಮವೆಲ್ಲ ಹೊಲಸೆಬ್ಬಿಸಿ ಇಟ್ಟಿದ್ದ. ಪುಣ್ಯಾತ್ಮ, ಸರಿಯಾಗಿ ಕುಡಿದು ಕಾರ್ ಓಡಿಸಿ ಅಪಘಾತ ಮಾಡಿ ಪೊಲೀಸರ ಅತಿಥಿಯಾಗಿದ್ದ. ಈ ದೇಶದ ಕಾನೂನು ತುಂಬಾ ಕಠಿಣ. ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿದರೆ ಆರು ತಿಂಗಳವರೆಗೆ ಜೈಲು ವಾಸ ಮತ್ತು ಇಲ್ಲಿಂದ ಶಾಶ್ವತ ಎತ್ತಂಗಡಿ,. ಮತ್ತೆ ಜನ್ಮದಲ್ಲಿ ಈ ಕಡೆ ತಲೆ ಹಾಕುವಂತೆಯೇ ಇಲ್ಲ. ಎಲ್ಲವನ್ನೂ ಸರಿ ಮಾಡುತ್ತಾ ಪ್ರತಿ ದಿನ ೩೦೦ ಕಿ.ಮೀ. ಹೋಗಿ ಬಂದು ಮಾಡುವುದರಲ್ಲಿ ನನ್ನ ಬೆನ್ನ ಮೂಳೆಗಳೆಲ್ಲ ನೆಟ್ಟಗಾದವು. ಈಗಾಗಲೆ ನಾನು ದುಬೈ, ಶಾರ್ಜಾ, ಅಜ್ಮಾನ್, ರಸಲ್ ಖಾಯ್ಮಾ, ಫ್ಯುಜೇರಾ ನಗರಗಳ ಜವಾಬ್ಧಾರಿ ಹೊತ್ತು ಸಾಕಷ್ಟು ಓಡಾಡುತ್ತಿದ್ದೆ. ಅದರ ಜೊತೆಗೆ ಈಗ ಇನ್ನೊಂದು ನಗರದ ಹೊಸ ಜವಾಬ್ಧಾರಿಯೂ ಸೇರಿಕೊಂಡಿತ್ತು. ಕೇವಲ ೫ ದಿನಗಳಲ್ಲಿ ನನ್ನ ಕಾರು ೨ ಸಾವಿರ ಕಿ.ಮೀ. ಓಡಿತ್ತು. ಅಲೇಯ್ನ್ ನಗರದಲ್ಲಿನ ಅರಬ್ಬರ ಜೊತೆ ತುಸು ಹಿಂದಿ, ತುಸು ಇಂಗ್ಲೀಷ್, ತುಸು ಅರಬ್ಬಿಯಲ್ಲಿ ಮಾತಾಡುತ್ತಾ ನನ್ನ ಕೆಲಸವನ್ನು ಸುಗಮಗೊಳಿಸಿಕೊಂಡು ಎಲ್ಲವನ್ನೂ ಸರಿ ಮಾಡುತ್ತಾ ಬಂದೆ. ಸುಮಾರು ೭೦೦ ಜನ ಭದ್ರತಾ ರಕ್ಷಕರು ಈ ಸಣ್ಣ ನಗರದಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಕೆಲಸ ಮಾಡುತ್ತಾರೆ.

ನಮ್ಮ ಸಂಸ್ಥೆಯ ಮಾಲೀಕರು, ಇಲ್ಲಿನ ಅರಬ್ಬರು, ಅವರಿಗೆ ಅಲೇಯ್ನ್ ನಗರದ ನಮ್ಮ ಶಾಖೆಯಲ್ಲಿ ಒಬ್ಬ ಅರಬ್ಬಿ, ಅದರಲ್ಲೂ ಮುಸ್ಲಿಮನೇ ಮೇನೇಜರ್ ಆಗಿರಬೇಕೆಂದು ತುಂಬಾ ಖಯಾಲಿಯಿತ್ತು. ಅದಕ್ಕಾಗಿ ಅವರು ಅಲ್ಲಿ ಇಲ್ಲಿ ಪ್ರಯತ್ನಿಸಿ ಕೊನೆಗೆ ಎರಡು ವರ್ಷಗಳ ಹಿಂದೆ ನಮ್ಮ ಕಂಪನಿ ಬಿಟ್ಟು ಹೋಗಿದ್ದ ಯೆಮೆನಿ ಅರಬ್ಬಿಯೊಬ್ಬನನ್ನು ಹಿಡಿದು ತಂದು ಅಲ್ಲಿಗೆ ಮೇನೇಜರ್ ಎಂದು ನಿಯುಕ್ತಿಗೊಳಿಸಿದರು. ನಾನು ಮತ್ತೆ ದುಬೈಗೆ ವಾಪಸ್ಸಾದೆ. ಮೊನ್ನೆ ಬುಧವಾರ ಅಬುಧಾಬಿಯ ಕೇಂದ್ರ ಕಛೇರಿಯಲ್ಲಿ ಎಲ್ಲರೂ ಮೀಟಿಂಗಿಗಾಗಿ ಸೇರಿ ಅವನಿಗಾಗಿ ಎದುರು ನೋಡುತ್ತಿದ್ದೆವು. ಅಗೋ ಬಂದ, ಇಗೋ ಬಂದ ಎಂದು ಎಲ್ಲರೂ ಅವನ ದಾರಿ ಕಾಯುತ್ತಿದ್ದರು. ಆದರೆ ಅವನು ಬರಲಿಲ್ಲ. ಕೊನೆಗೆ ಸಂಜೆ ಆರು ಘಂಟೆಗೆ ಬಂದ ಸುದ್ಧಿ ಆಘಾತಕಾರಿಯಾಗಿತ್ತು. ನಮ್ಮಲ್ಲಿಗೆ ಬರುವ ಮುಂಚೆ ಅವನು ಇನ್ನೊಂದು ಕಂಪನಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದ್ದನಂತೆ, ಅಲ್ಲಿ ಅವನಿಗೆ ೧೬ ಸಾವಿರ ದಿರ್ಹಾಂ ಸಂಬಳ ಕೊಡುವುದಾಗಿ ಹೇಳಿದ್ದರಂತೆ, ಆದರೆ ನಮ್ಮ ಪೆದ್ದು ಮಾಲೀಕ ಅವನಿಗೆ ೨೦ ಸಾವಿರ ದಿರ್ಹಾಂ ಕೊಟ್ಟು ಕರೆ ತಂದಿದ್ದ. ಇದು ಗೊತ್ತಾಗಿ ಆ ಕಂಪನಿಯವರು ಅವನಿಗೆ ೨೫ ಸಾವಿರ ದಿರ್ಹಾಂ ಕೊಟ್ಟು ತಮ್ಮಲ್ಲಿಗೆ ಮತ್ತೆ ಸೆಳೆದುಕೊಂಡಿದ್ದರು. ಈ ದಿರ್ಹಾಂಗಳ ಆಟದಲ್ಲಿ ಅವನು ಗೆದ್ದಿದ್ದ, ನಮ್ಮ ಮಾಲೀಕರು ಸೋತಿದ್ದರು, ಜೊತೆಗೆ ಸಾಕಷ್ಟು ಅವಮಾನ ಹಾಗೂ ಅಭಿಮಾನ ಭಂಗವೂ ಆಯಿತೆನ್ನಿ. ಇಷ್ಟಾದರೂ ಆ ಜಾಗಕ್ಕೆ ಸಾಕಷ್ಟು ಯೋಗ್ಯ ಭಾರತೀಯ ಅಭ್ಯರ್ಥಿಗಳಿದ್ದರೂ ಸಹ ಅವರಿಗೆ ನೀಡದೆ ಮತ್ತೊಬ್ಬ ಅರಬ್ಬಿಯನ್ನು ಹುಡುಕುತ್ತಿದ್ದಾರೆ. ಇದು ಇಲ್ಲಿನ ಕ್ರೂರ ವ್ಯಂಗ್ಯ. ಮಾಡಿದ ತಪ್ಪಿನಿಂದ ಬುದ್ಧಿ ಕಲಿಯದೆ ಮತ್ತೆ ಮತ್ತೆ ಎಡವಿ ಹಳ್ಳಕ್ಕೆ ಬೀಳುವವರಿಗೆ ಏನನ್ನಬೇಕೋ ತಿಳಿಯುತ್ತಿಲ್ಲ. ಆದರೆ ನಾನು ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನನ್ನ ಪಾಡಿಗೆ ನಾನು ದುಬೈನಲ್ಲಿ ಕುಳಿತು ಇವರ ಎಡವಟ್ಟುಗಳನ್ನು ನೋಡಿ ನಗುತ್ತಿದ್ದೇನೆ.