Tuesday, October 20, 2015

ಮಾಟ ಮಂತ್ರ ಮಾಯೆ,,ಭಯದ ಭೀಭತ್ಸ ಛಾಯೆ - ಭಾಗ ೨: ಮಿಡಿ ನಾಗರ ಕಡಿದಾಗ,,,,,,





ಅದೊಂದು ಅಮಾವಾಸ್ಯೆಯ ಸಂಜೆ, ದಿನಕರನಾಗಲೆ ತನ್ನ ದಿನದ ವ್ಯವಹಾರ ಮುಗಿಸಿ ಕೆಂಪಗಾಗಿ ಮನೆಯೆಡೆಗೆ ಓಡುತ್ತಿದ್ದ!  ಶಾಲೆಯ ಕೆಲಸ ಮುಗಿಸಿ ಬಸ್ಸಿಗಾಗಿ ಕಾಯುತ್ತಿದ್ದ ನಮ್ಮಲ್ಲಿಗೆ ಹುಡುಗನೊಬ್ಬ ಏದುಸಿರು ಬಿಡುತ್ತಾ ಓಡೋಡಿ ಬಂದು ಗೌಡ್ರ ಮನೆಗೆ ಬರಬೇಕಂತೆ ಅಂದಾಗ ವಿಧಿಯಿಲ್ಲದೆ ಎದ್ದು ಅವನೊಡನೆ ಹೆಜ್ಜೆ ಹಾಕಿದ್ದೆ. ಗೌಡರ ಮನೆ ತಲುಪಿದಾಗ ಅಲ್ಲಿ ಕಂಡ ದೃಶ್ಯ ಭಯಾನಕವಾಗಿತ್ತು!   ಭಯವೆಂದರೇನೆಂದೇ ಅರಿಯದ ನನ್ನ ಬೆನ್ನ ಹುರಿಯಲ್ಲಿಯೂ ಸಣ್ಣದೊಂದು ಛಳುಕು ಹೊಡೆದಂತಾಗಿತ್ತು.  ನಾನು ಅಲ್ಲಿಗೆ ಹೋಗುವಷ್ಟರಲ್ಲಿ  ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಹನುಮಂತೇಗೌಡರು ಸಹ ಬಂದಿದ್ದರು.  ಅವರ ಸಂಬಂಧಿಕ, ಶಿರಾದ ಬಳಿ ಯಾವುದೋ ಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ರಂಗಪ್ಪ ಗೌಡ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದ.  ಮನೆಯ ಹಾಲಿನಲ್ಲಿದ್ದ ಸಾಮಾನುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ತನ್ನ ಶರೀರದಲ್ಲಿ ಆಗುತ್ತಿದ್ದ ಅಪಾರ ನೋವಿನಿಂದ, ಉರಿಯಿಂದ ತಡೆದುಕೊಳ್ಳಲಾಗದೆ ಉರಿ, ಉರಿ ಎಂದು ಚೀರಾಡುತ್ತಿದ್ದ.  ಅವನ ಕಾಲಿನ ಹೆಬ್ಬೆರಳಿನಿಂದ ಶುರುವಾದ ಉರಿ ಕ್ರಮೇಣ ಇಡೀ ಶರೀರವನ್ನೆಲ್ಲಾ ವ್ಯಾಪಿಸಿ ತಡೆಯಲಾಗದ ಯಾತನೆಯಿಂದ ಆತ  ನರಳುತ್ತಿದ್ದ.

ಬಗ್ಗೆ ಹನುಮಂತೇಗೌಡರು ನನಗೆ ಕೆಲವು ಬಾರಿ ಹೇಳಿದ್ದರೂ ನಾನು ನಂಬಿರಲಿಲ್ಲ!   ಅಮಾವಾಸ್ಯೆಯ ದಿನ ಅವನಿಗೆ ರೀತಿ ಉರಿ ಶುರುವಾಗುತ್ತದೆ, ಅವನ ಕಾಲಿನ ಹೆಬ್ಬೆರಳಿನಿಂದ ಶುರುವಾಗುವ ಉರಿ ಇಡೀ ದೇಹಕ್ಕೆಲ್ಲಾ ವ್ಯಾಪಿಸಿ, ಇಡೀ ರಾತ್ರಿ ಅವನು ನೋವಿನಿಂದ ಒದ್ದಾಡುತ್ತಾನೆ, ಆಸ್ತಿಯ ವಿಚಾರಕ್ಕಾಗಿ ಅಪ್ಪ ಮಕ್ಕಳ ನಡುವೆಯೇ ಜಗಳವಾಗಿ ಕೊನೆಗೆ ಮಾಟ ಮಂತ್ರ ಮಾಡಿಸಿ ಒಬ್ಬರಿಗೊಬ್ಬರು ತೊಂದರೆ ಕೊಟ್ಟುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾಗ ವೈಜ್ಞಾನಿಕ ಯುಗದಲ್ಲಿ ಅದು ಹೇಗೆ ಸಾಧ್ಯ? ಮಾಟ ಮಂತ್ರ ಏನೂ ಇಲ್ಲ ಎಂದು ವಾದಿಸಿದ್ದೆ.   ಯಾವುದು ಸಾಧ್ಯವಿಲ್ಲ ಎಂದು ನಾನು ನಂಬಿದ್ದೆನೋ ಅದು ಸಾಧ್ಯವೆಂಬುದನ್ನು ನಾನು ಈಗ ಕಣ್ಣಾರೆ ಕಾಣುತ್ತಿದ್ದೆ.  ಅವನ ನರಳಾಟ ಇಡೀ ರಾತ್ರಿ ಮುಂದುವರೆಯುವುದು ನಿಶ್ಚಿತವಾಗಿತ್ತು.  ಅಲ್ಲಿದ್ದು ನಾನು ಮಾಡುವುದು ಏನೂ ಇರಲಿಲ್ಲವಾಗಿ ರಾತ್ರಿ ಒಂಭತ್ತು ಘಂಟೆಯ ಪ್ರಕಾಶ ಬಸ್ಸಿಗೆ ಮನೆಗೆ ಹಿಂದಿರುಗಿದ್ದೆ.  ಆದರೆ ರಾತ್ರಿಯಿಡೀ ನನ್ನ ತಲೆಯ ತುಂಬಾ ವಾಮಾಚಾರದ ಪರಿಣಾಮಗಳ ವಿಚಾರವೇ ಸುಳಿದಾಡುತ್ತಾ ಕಣ್ಣಿಗೆ ನಿದ್ದೆ ಹತ್ತಿರಲಿಲ್ಲ.



ನಾನು ಬಹಳ ವರ್ಷಗಳ ಹಿಂದೆ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಉಪಾಧ್ಯಾಯನಾಗಿ ಕೆಲಸ ಮಾಡಿದ್ದೆ.  ಅಲ್ಲಿ ನಡೆದ ಮಾಟ ಮಂತ್ರದ   ಘಟನೆ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.  ಅದೊಂದು ಗೌಡರ ಮನೆ, ಸಾಕಷ್ಟು ಅಡಿಕೆ, ತೆಂಗಿನ ತೋಟ, ಹೊಲ, ಮನೆಗಳೆಲ್ಲ ಇದ್ದು ಚೆನ್ನಾಗಿ ಬಾಳಿ ಬದುಕಿದ ಮನೆತನ.  ಆಸ್ತಿಯ ವಿಚಾರವಾಗಿ ಅಪ್ಪ ಮಕ್ಕಳ ನಡುವೆ ಭುಗಿಲೆದ್ದ ಅಸಮಾಧಾನ ಕೊನೆಗೆ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡಿತ್ತು.   ಟಿಸಿಎಚ್ ಪಾಸ್ ಮಾಡಿಕೊಂಡು ಸರ್ಕಾರಿ ಶಾಲೆಯಲ್ಲಿ ಉಪಾಧ್ಯಾಯನಾಗಿದ್ದ ಗೌಡರ ಮಗನಿಗೆ  ಸ್ವತ: ತಂದೆಯೇ ಮಾಟ ಮಾಡಿಸಿದ್ದನಂತೆ,  ಅದನ್ನು ತೆಗೆಸಲು ಹೋದ ಮಗ ಅಪ್ಪನ ಮೇಲೆ ಪ್ರತಿ ವಾಮಾಚಾರ ಮಾಡಿಸಿದ್ದನಂತೆ!   ವಾಮಾಚಾರದ ಯುದ್ಧದಲ್ಲಿ ಮೊದಲು ಮಗ ಸತ್ತು ನಂತರ ಅಪ್ಪನೂ ಹೆಣವಾದ ದುರಂತ ಕಥೆ ಇಲ್ಲಿದೆ.

 ತನ್ನ ಅಪ್ಪ ಆಸ್ತಿಯಲ್ಲಿ ತನಗೆ ಸಮಪಾಲು ಕೊಡಲಿಲ್ಲ, ಅಣ್ಣನಿಗೆ ಹೆಚ್ಚಿಗೆ ಕೊಟ್ಟು ತನಗೆ ಕಡಿಮೆ ಕೊಟ್ಟಿದ್ದಾನೆ ಎನ್ನುವುದು ರಂಗಪ್ಪಗೌಡನ ಕೊರಗಾಗಿತ್ತು.  ಇದನ್ನು ತನ್ನ ತಾಯಿ ಹಾಗೂ ದೊಡ್ಡಪ್ಪಂದಿರ ಮುಂದೆಯೂ ಸಾಕಷ್ಟು ಸಲ ತೋಡಿಕೊಂಡಿದ್ದಾನೆ.  ವಿದ್ಯಾವಂತನಲ್ಲದ ಅಣ್ಣ ಊರಿನಲ್ಲಿಯೇ ರೈತನಾಗಿ ಬದುಕಬೇಕಾಗಿದೆ, ನಿನಗಾದರೆ ಸರ್ಕಾರಿ ನೌಕರಿಯಿದೆ, ಸುಮ್ಮನೆ ರಗಳೆ ಮಾಡದೆ ಹೊಂದಿಕೊಂಡು ಹೋಗು ಎಂದು ದೊಡ್ಡಪ್ಪಂದಿರು ಬುದ್ಧಿವಾದ ಹೇಳಿದರೂ ಕೇಳದೆ ತನಗೆ ಆಸ್ತಿ ಹಂಚ್ವಿಕೆಯಲ್ಲಿ ಮೋಸ ಮಾಡಿದ ಅಪ್ಪ ಹಾಗೂ ಅಣ್ಣನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆಂದು ಕೋರ್ಟ್ ಮೆಟ್ಟಿಲೇರಿದ್ದ.  ಕೋರ್ಟಿನಲ್ಲಿ ಕೇಸು ವಿಚಾರಣೆ ನಡೆಯುತ್ತಿರುವಾಗಲೆ ಶಿರಾ ನಗರದ ಜಾಜಿಕಟ್ಟೆಯ ಬಳಿಯಿದ್ದ ಕೊಳ್ಳೇಗಾಲದ ಮಾಂತ್ರಿಕನೊಬ್ಬನ ಬಳಿ ಹೋಗಿ ಅಣ್ಣ ಹಾಗೂ ಅಪ್ಪನ ಮೇಲೆ ವಾಮಾಚಾರ ಪ್ರಯೋಗ ಮಾಡಿಸಿ, ಪೂಜಿಸಿದ ನಿಂಬೆಹಣ್ಣು, ಕೋಳಿಮೊಟ್ಟೆ ಇತ್ಯಾದಿಗಳನ್ನು ತಂದು ಅವರ ಮನೆ ಬಾಗಿಲಿನ ಮುಂದೆ ರಾತ್ರೋರಾತ್ರಿ ಹಾಕಿ ಹೆದರಿಸುತ್ತಿದ್ದ.   ಬಹಳ ದಿನ ತಾಳ್ಮೆಯಿಂದಲೇ ಇದ್ದು ಕೊನೆಗೆ ಇವನ ಉಪಟಳದಿಂದ ರೋಸಿ ಹೋದ ಅವನ ಅಪ್ಪ ಹಾಗೂ ಅಣ್ಣ ಇವನಿಗೆ ಹೇಗಾದರೂ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿ ಅವನ ವಿರುದ್ಧವಾಗಿ ತೊಡೆ ತಟ್ಟಿ ಅಖಾಡಕ್ಕಿಳಿದಾಗಲೇ ನಡೆದಿದ್ದು ವಿಶಿಷ್ಟ ವಾಮಾಚಾರ!

ಸರ್ಕಾರಿ ಶಾಲೆಯ ಕೆಲಸಕ್ಕೆ ಹೋಗಲು ಪ್ರತಿ ದಿನವೂ ಶಿರಾಗೆ ಹೋಗುತ್ತಿದ್ದ ರಂಗಪ್ಪನಿಗೆ ಶಿರಾ ನಗರದಲ್ಲಿ ಸಾಕಷ್ಟು ಪರಿಚಿತರಿದ್ದರು,  ಆದರೆ ಅವನಿಗಿಂತ ಮುಂಚಿನಿಂದಲೂ ಅವನ ಅಪ್ಪ ದೊಡ್ಡ ಗೌಡ ಶಿರಾ ನಗರದಲ್ಲಿ ವ್ಯವಹಾರ ನಡೆಸುತ್ತಿದ್ದುದರಿಂದ ಅವನಿಗೂ ಎಲ್ಲರೂ ಪರಿಚಿತರೇ!  ಅವನಿಗೆ ತಿಳಿದಿದ್ದ ಮಾಂತ್ರಿಕರಲ್ಲಿ ರೀತಿ ವಾಮಾಚಾರದ ನಿಂಬೆಹಣ್ಣು, ಕೋಳಿಮೊಟ್ಟೆ ಮುಂತಾದವುಗಳನ್ನು ತಂದು ಮನೆಯ ಮುಂದೆ ಹಾಕುತ್ತಿರುವುದರ ಬಗ್ಗೆ ಹೇಳಿಕೊಂಡಾಗ ಒಬ್ಬ ಕೊಳ್ಳೇಗಾಲದ ಮಾಂತ್ರಿಕ ಅವನಿಗೆ ಸರಿಯಾಗಿ ಬುದ್ಧಿ ಕಲಿಸುವುದಾಗಿ ಹೇಳಿ ಒಂದು ಅಮಾವಾಸ್ಯೆಯ ದಿನ ವಾಮಾಚಾರ ಪ್ರಯೋಗ ಮಾಡುತ್ತಾನೆ.  ಅದರಂತೆ ವಾಮಾಚಾರಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನೂ ಸಿದ್ಧಪಡಿಸಿ, ಜೊತೆಗೆ ಒಂದು ನಾಗರಹಾವಿನ ಮರಿಯನ್ನು ತರಿಸುತ್ತಾನೆ.  ಅಮಾವಾಸ್ಯೆಯ ರಾತ್ರಿಯಲ್ಲಿ ಶಿರಾದ ರುದ್ರಭೂಮಿಯಲ್ಲಿ ಕುಳಿತು ವಾಮಾಚಾರವನ್ನು ನಡೆಸಿ ಜೀವಂತವಿದ್ದ ನಾಗರಹಾವಿನ ಮರಿಯನ್ನು ವಾಮಾಚಾರದ ಎಲ್ಲ ವಸ್ತುಗಳೊಡನೆ ಒಂದು ಕುಡಿಕೆಯೊಳಗೆ ಹಾಕಿ ಬಾಯನ್ನು ಭದ್ರವಾಗಿ ಮುಚ್ಚಿ, ಅದನ್ನು ತೆಗೆದುಕೊಂಡು ಹೋಗಿ ರಂಗಪ್ಪಗೌಡನ ಮನೆಯ ಗೋಡೆಯಲ್ಲಿ ಅವಿತಿಡಲು ಹೇಳುತ್ತಾನೆ. ಅದರಂತೆಯೇ ದೊಡ್ಡಗೌಡ ತನ್ನಮನೆಯ ಗೋಡೆಯೊಂದಲೇ ರಂಧ್ರ ಕೊರೆದು ಮಗನಿಗೆ ಭಾಗ ಕೊಟ್ಟಿದ್ದ ಅದೇ ಮನೆಯ ಗೋಡೆಯಲ್ಲಿ ಕುಡಿಕೆಯನ್ನಿಟ್ಟು ಮಣ್ಣು ಮುಚ್ಚಿಬಿಡುತ್ತಾನೆ.

ಅದರ ನಂತರದ ಅಮಾವಾಸ್ಯೆಯಿಂದ ರಂಗಪ್ಪಗೌಡನಿಗೆ ವಾಮಾಚಾರದ ಪ್ರಭಾವ ಆರಂಭವಾಗುತ್ತದೆ, ಕಾಲಿನ ಹೆಬ್ಬೆರಳಿಗೆ ನಾಗರಹಾವು ಕಚ್ಚಿದರೆ ವಿಷದ ಪ್ರಭಾವದಿಂದ ಹೇಗೆ ಉರಿ ಶುರುವಾಗುತ್ತದೆಯೋ ಅದೇ ರೀತಿ ಅವನ ಕಾಲಿನ ಹೆಬ್ಬೆರಳಿನಿಂದ ಉರಿ ಶುರುವಾಗುತ್ತಿತ್ತು, ಕ್ರಮೇಣ ಹಾವಿನ ವಿಷ ಇಡಿ ದೇಹವನ್ನೆಲ್ಲಾ ವ್ಯಾಪಿಸಿಕೊಂಡಂತೆ  ಉರಿ  ದೇಹದ ಎಲ್ಲಾ ಭಾಗಗಳಿಗೂ ಪ್ರಸರಿಸಿ ಒದ್ದಾಡುವಂತೆ ಮಾಡುತ್ತಿತ್ತು.  ಸತತವಾಗಿ ಆರು ತಿಂಗಳು ಹೀಗೆ ಒದ್ದಾಡಿ ಆರನೆಯ ತಿಂಗಳಿನ ಅಮಾವಾಸ್ಯೆಯ ರಾತ್ರಿಯಂದು ಅವನು ಸಾಯುವ ಹಾಗೆ  ವಾಮಾಚಾರ ಮಾಡಲಾಗಿತ್ತು.   ಮಗನ ಪರವಾಗಿದ್ದ ಮಂತ್ರವಾದಿಯೊಬ್ಬ ರೀತಿ ನಾಗರಹಾವಿನ ಮರಿಯೊಡನೆ ವಾಮಾಚಾರವಾಗಿರುವುದನ್ನು ಪತ್ತೆ ಹಚ್ಚಿ, ಮನೆಯೊಳಗೆ ಅವಿತಿಟ್ಟಿದ್ದ ಕುಡಿಕೆಯನ್ನು ತೆಗೆದು ನಾಶ ಮಾಡುತ್ತಾನೆ. ಅದರಿಂದ ಮುಕ್ತಿ ಸಿಗಬೇಕಾದರೆ ಆಂಜನೇಯನ ದೇವಾಲಯದಲ್ಲಿಯೇ ಇವನನ್ನು ಇರಿಸಬೇಕು, ಮನೆಯಲ್ಲಿದ್ದರೆ ಮೃತ್ಯು ಕಟ್ಟಿಟ್ಟಬುತ್ತಿ ಎಂದು ಹೇಳುತ್ತಾನೆ.  ಅದರಂತೆ ಅವನನ್ನು ಊರಾಚೆಯ ಕೆರೆಯ ಪಕ್ಕದಲ್ಲಿದ್ದ ಆಂಜನೇಯನ ಗುಡಿಗೆ ಸಾಗಿಸಿ ಅವನ ಸೇವೆಗಾಗಿ ಇಬ್ಬರನ್ನು ನೇಮಿಸಲಾಗುತ್ತದೆ.  

ಹಗಲು ರಾತ್ರಿ ಅವನ ಸೇವೆ ಮಾಡುತ್ತಾ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಇಬ್ಬರು ಸಂಬಂಧಿಕರಿಗೆ ಕೊನೆಯ ಅಮಾವಾಸ್ಯೆಯ ರಾತ್ರಿಯಲ್ಲಿ ತಡೆಯಲಾಗದಂಥ ನಿದ್ದೆ ಬಂದು ಮಲಗಿ ಬಿಡುತ್ತಾರೆ.  ಕೆಲ ಸಮಯದ ನಂತರ ಎಚ್ಚೆತ್ತ ಅವರಿಗೆ ರಂಗಪ್ಪಗೌಡ ಕಾಣಿಸುವುದಿಲ್ಲ!  ಸುತ್ತಮುತ್ತ ಎಲ್ಲೆಡೆ ಹುಡುಕಿದರೂ ಅವನ ಸುಳಿವೇ ಇರುವುದಿಲ್ಲ, ಕೊನೆಗೆ ಅವನ ನಿಗೂಢ ಕಣ್ಮರೆಯ ಬಗ್ಗೆ  ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗುತ್ತದೆ.  ಪೊಲೀಸರು ಸಹಾ ರಂಗಪ್ಪಗೌಡನ ಬಗ್ಗೆ ಹುಡುಕಾಟದಲ್ಲಿ ತೊಡಗಿಕೊಳ್ಳುತ್ತಾರೆ.  ಆದರೆ ಯಾವುದೇ ಫಲ ದೊರೆಯುವುದಿಲ್ಲ,  ಮೂರು ದಿನಗಳ ನಂತರ ದೇವಾಲಯದಿಂದ ಅನತಿ ದೂರದಲ್ಲಿದ್ದ ಕೆರೆಯಲ್ಲಿ ರಂಗಪ್ಪಗೌಡನ ಶವ ತೇಲಿ ಬರುತ್ತದೆ! ಅವನ ಮೇಲೆ ನಡೆದ ವಾಮಾಚಾರದ ಪ್ರಭಾವಕ್ಕೆ ತಕ್ಕಂತೆ ಅವನ ಸಾವು ಆರನೆಯ ತಿಂಗಳಿನ ಅಮಾವಾಸ್ಯೆಯಂದೇ ಆಗಿರುತ್ತದೆ.

ಪೊಲೀಸರ ಮಹಜರು ಎಲ್ಲಾ ಮುಗಿದು ಅವನ ಅಂತ್ಯಸಂಸ್ಕಾರದ ನಂತರ ಅವನ ದೊಡ್ಡಪ್ಪನ ಮಗನೊಬ್ಬ ಅವನ ಸಾವಿಗೆ ಕಾರನನಾದವರ ಮೇಲೆ ಸೇಡು ತೀರಿಸಿಕೊಳ್ಳಲೇಬೇಕೆಂದು ಹಗೆ ತೊಟ್ಟು ಮಗನ ಪರವಾಗಿದ್ದ ಮಂತ್ರವಾದಿಯ ಬಳಿಗೆ ಹೋಗುತ್ತಾನೆ. ಆದರೆ ಮಂತ್ರವಾದಿ ಮತ್ತೇನೋ ಮಾಡುವಷ್ಟರಲ್ಲಿಯೇ, ಕೇವಲ ಒಂದೇ ತಿಂಗಳಿನಲ್ಲಿ, ಶಿರಾ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದೊಡ್ಡಗೌಡ ಸತ್ತು ಹೋಗುತ್ತಾನೆ, ಅಲ್ಲಿಂದ ಒಂದು ತಿಂಗಳಿನೊಳಗೆ ನಾಗರಹಾವಿನ ಮಾಟ ಮಾಡಿದ್ದ ಕೊಳ್ಳೇಗಾಲದ ಮಾಂತ್ರಿಕನೂ ರಕ್ತ ಕಾರುತ್ತಾ ಸತ್ತು ಹೋಗುತ್ತಾನೆ.  ದೊಡ್ಡಗೌಡ ಮತ್ತು ಮಾಂತ್ರಿಕನ ಸಾವು ಮಾತ್ರ ನಿಗೂಢವಾಗಿಯೇ ಉಳಿದು ಹೋಗುತ್ತದೆ.  ಪೊಲೀಸರು ಅಸಹಜ ಸಾವಿನ ಪ್ರಕರಣ ಎಂದು ಷರಾ ಬರೆದು ಕೈ ತೊಳೆದುಕೊಳ್ಳುತ್ತಾರೆ.

ಘಟನೆಯ ಸಂಪೂರ್ಣ ವಿವರವನ್ನು ಮುಖ್ಯೋಪಾಧ್ಯಾಯರಾದ ಹನುಮಂತೇಗೌಡರಿಂದ ಕೇಳಿದ ನಂತರ ನಾನು ಮಾತಿಲ್ಲದ ಮೂಕನಂತಾಗಿದ್ದೆ. ಕ್ಷುಲ್ಲಕ ವಿಚಾರಕ್ಕೆ ಅಪ್ಪ ಮಕ್ಕಳ ನಡುವಿನ ಮನಸ್ತಾಪ ಇಡೀ ಕುಟುಂಬದ ಶಾಂತಿ ನೆಮ್ಮದಿಯನ್ನು ನಾಶ ಮಾಡಿದ್ದಲ್ಲದೆ ಇಬ್ಬರ ಸಾವಿಗೂ ಕಾರಣವಾಗಿತ್ತು.

 (ಸಾಂದರ್ಭಿಕ ಚಿತ್ರಗಳು: ಅಂತರ್ಜಾಲದಿಂದ)

Sunday, October 18, 2015

ತಿಮ್ಮಿ ನೀನು ನನ್ನಾ ಕಾಯ್ಸಿ ,,,,,,,,,,,,,,,,

ತಿಮ್ಮಿ ನೀನು ನನ್ನಾ ಕಾಯ್ಸಿ
ಪ್ರೀತಿಯಿಂದಾ ನನ್ನಾ ಸಾಯ್ಸಿ
ನೀ ನಗ್ತಾ ಇದ್ರೆ ಮುಸಿ ಮುಸಿ
ತಣ್ಗಾಯ್ತದೆ ಜೀವಕ್ಕೊಸಿ ಒಸಿ!
ನೀ ಮಾತಾಡಿದ್ರೆ ಒಳ್ಳೇ ರಾಗ
ನೀ ಮುನಿಸ್ಕೊಂಡ್ರೆ ನೂರೆಂಟ್ರೋಗ
ನೀ ನಡೀತಿದ್ರೆ ಲೋಕದ್ ವೈಭೋಗ
ನೀ ಜೊತ್ಯಾಗಿದ್ರೆ ಸಾವ್ರ ಯೋಗ!
ನೀ ಕಣ್ಮುಂದಿದ್ರೆ ನಾನೇ ಯೋಧ
ನೀನಿಲ್ಲಾ ಅಂದ್ರೆ ನನ್ನಲ್ ಕ್ರೋಧ
ನಿನ್ನಾ ಸುತ್ತಾ ನೋಡು ನನ್ನೀ ಬಾಳು
ನೀನಿಲ್ಲಾ ಅಂದ್ರೆ ಲೋಕ ಯಾಕೇಳು!
************************
************************
 ಬ್ಯಾಡಾ ತಿಮ್ಮಿ ಬ್ಯಾಡಾ ತಿಮ್ಮಿ
ಕಣ್ಣೊಡೀಬ್ಯಾಡಾ ನನ್ನ ತಿಮ್ಮಿ
ನಿನ್ನ ಕಣ್ಣಾಗ್ ಸಾವ್ರ ವೋಲ್ಟು
ನನ್ ಜೀವ ತಿನ್ನೋ ಕರೆಂಟೂ
***********************
***********************

Saturday, October 10, 2015

ಅರಬ್ಬರ ನಾಡಿನಲ್ಲಿ - ೧೮: ಆಪರೇಷನ್ ನೈಜೀರಿಯಾ!



ಅದಾಗಲೇ ಮಧ್ಯರಾತ್ರಿ ಹನ್ನೆರಡಾಗಿತ್ತು, ನಿದ್ದೆ ತುಂಬಿ ತೂಕಡಿಸುತ್ತಿದ್ದ ಕಣ್ಣುಗಳಲ್ಲೇ ಖಾಲಿ ಬಿದ್ದಿದ್ದ ಹೆಬ್ಬಾವಿನಂಥ ರಸ್ತೆಯಲ್ಲಿ ಕಾರು ಓಡಿಸುತ್ತಾ ದುಬೈನಿಂದ ಶಾರ್ಜಾಗೆ ಬರುತ್ತಿದ್ದೆ ನಿದ್ದೆಯ ಮಂಪರಿನಲ್ಲಿಯೂ ಅವಳಾಡಿದ ಮಾತುಗಳೇ ಕಿವಿಯಲ್ಲಿ ರಿಂಗಣಿಸುತ್ತಿದ್ದವು, ಅವಳ ಧ್ವನಿಯಲ್ಲಿದ್ದ ಅಸಹಾಯಕತೆ, ಕಣ್ಣುಗಳಲ್ಲಿ ಮಡುಗಟ್ಟಿದ್ದ ಆಕ್ರೋಶ ಕಣ್ಮುಂದೆ ಸುಳಿಯುತ್ತಿತ್ತು!   ಆಗೊಂದು, ಈಗೊಂದು ಭರ್ರೆಂದು ಎಡ ಬಲಗಳಿಂದ ಸಾಗಿ ಹೋಗುತ್ತಿದ್ದ ಅರಬ್ಬಿಗಳ ದೊಡ್ಡ ಕಾರುಗಳ ಆರ್ಭಟದ ನಡುವೆಯೇ ತೂಕಡಿಸುತ್ತಾ ನನ್ನ ಕಾರು ಕೊನೆಗೂ ಮನೆ ತಲುಪಿಸಿತ್ತುದಣಿದಿದ್ದ ದೇಹಕ್ಕೆ ವಿಶ್ರಾಂತಿಯ ಅಗತ್ಯವಿತ್ತು, ಬಟ್ಟೆ ಬದಲಿಸಿ ಮಲಗಿದವನಿಗೆ ಮತ್ತೆ ಮತ್ತೆ ಅವಳಾಡಿದ ಮಾತುಗಳೇ ಮನದಲ್ಲಿ ಮಾರ್ದನಿಸಿ ನಿದ್ದೆ ಬರದೆ ಹೊರಳಾಡುವಂತಾಗಿತ್ತು.

ನೀವು ಯಾಕೆ ನಮ್ಮನ್ನು ಹೀಗೆ ನೋಡುತ್ತೀರಿನಮ್ಮದು ನಿನ್ನದು ಚರ್ಮದ ಬಣ್ಣ ಒಂದೇ ಅಲ್ಲವೇ? ನಾವೂ ಮನುಷ್ಯರೇ ಅಲ್ಲವೇ? ನಮಗೆ ಮಾತ್ರ ಹೀಗೆ ಅನ್ಯಾಯ ಮಾಡಬಹುದೇ? ನಮ್ಮ ಬಳಿ ಈಗ ಊಟಕ್ಕೂ ಹಣವಿಲ್ಲ, ಇಲ್ಲಿಂದ ಬೇರೆ ಕಡೆಗೆ ಹೋಗಲು ಟ್ಯಾಕ್ಸಿಗೂ ದುಡ್ಡಿಲ್ಲ, ನಾವು ರೂಮಿನ ಬಾಡಿಗೆಗೆ ಕೊಟ್ಟ ಹಣ ಹಿಂದಿರುಗಿಸಿ ಎಂದು ಆಕೆ ದೈನ್ಯದಿಂದ ಬೇಡುತ್ತಿದ್ದರೆ ಕಲ್ಲಿನಂತೆ ನಿಂತಿದ್ದ ನನ್ನ ಮನಸ್ಸಿಗೆ ಕ್ಷಣದಲ್ಲಿ ಏನೂ ಅನ್ನಿಸಿರಲಿಲ್ಲ! ಕಂಪನಿಯ ಪಾಲಿಸಿಯಂತೆ ನಿಮಗೆ ಹಣ ಹಿಂದಿರುಗಿಸಲು ಆಗುವುದಿಲ್ಲ, ನಾಳೆ ಮಧ್ಯಾಹ್ನದವರೆಗೂ ನೀವು ರೂಮಿನಲ್ಲಿ ಉಳಿದುಕೊಳ್ಳಬಹುದು, ಆದರೆ ಯಾವುದೇ ಕಾರಣಕ್ಕೂ ನಿಮ್ಮ ರೂಮಿಗೆ ಹೊರಗಡೆಯಿಂದ ಯಾವುದೇ ಅತಿಥಿಗಳು ಬರುವುದಕ್ಕೆ ಮಾತ್ರ ಅವಕಾಶವಿರುವುದಿಲ್ಲ ಎಂದ ನನ್ನ ಖಡಕ್ ಮಾತಿನಿಂದಾಗಿ ಒಮ್ಮೆ ಕಡುಗೋಪದಿಂದ ಆಕ್ರೋಶಭರಿತರಾಗಿ ನೋಡಿದ ಮೂರು ಹೆಣ್ಣುಮಕ್ಕಳು  ರೂಮ್ ಖಾಲಿ ಮಾಡಿ ಹೊರಟು ಹೋಗಿದ್ದರು! ಅವರು ದುಬೈನಲ್ಲಿ ಕೆಲಸಕ್ಕಾಗಿ ಬಂದು ಪರದಾಡಿ ಕೆಲಸ ಸಿಗದೆ ಇದ್ದಾಗ ಅನಿವಾರ್ಯವಾಗಿ ವೇಶ್ಯಾವಾಟಿಕೆಗೆ ಇಳಿದಿದ್ದ ನೈಜೀರಿಯನ್ ಹೆಣ್ಣುಮಕ್ಕಳುದೂರದ ಆಫ್ರಿಕಾ ಖಂಡದ ಒಂದು ಪುಟ್ಟ ರಾಷ್ಟ್ರ ನೈಜೀರಿಯಾ, ಪ್ರಾಕೃತಿಕ ಸಂಪನ್ಮೂಲಗಳಿಂದ ತುಂಬಿದ್ದರೂ, ಸಾಕಷ್ಟು ತೈಲ ಮೂಲಗಳನ್ನು ಹೊಂದಿದ್ದರೂ, ಅಲ್ಲಿನ ಅರಾಜಕತೆ ಹಾಗೂ ಬೋಕೋಹರಾಮ್ ಉಗ್ರರ ಹಾವಳಿಯಿಂದಾಗಿ ಸಾಮಾನ್ಯ ಜನರ ದೈನಂದಿನ ಬದುಕು ಎಕ್ಕುಟ್ಟಿ ಹೋಗಿದೆಹೇಗೋ ಅಲ್ಲಿಂದ ಹೊರಬಿದ್ದು ಗಲ್ಫ್ ರಾಷ್ಟ್ರಗಳತ್ತ ಬರುವ ಅಲ್ಲಿನ ಯುವಕರು ಕೈಗೆ ಸಿಕ್ಕ ಯಾವುದೇ ಕೆಲಸ ಮಾಡಲು ಸಿದ್ಧರಾಗಿರುತ್ತಾರೆ, ಕೆಲಸ ಸಿಗದಿದ್ದಲ್ಲಿ ಯಾವುದೇ ಅಪರಾಧವನ್ನಾದರೂ ಮಾಡಿ ಹಣ ಸಂಪಾದನೆಗೆ ಮುಂದಾಗುತ್ತಾರೆಆದರೆ ಆಫ್ರಿಕನ್  ಹೆಣ್ಣುಮಕ್ಕಳು ಬಂದ ಹೊಸದರಲ್ಲಿ ಅಲ್ಲಿಲ್ಲಿ ಅಲೆದಾಡಿ ಕೆಲಸಕ್ಕಾಗಿ ಪ್ರಯತ್ನಿಸಿ, ಸಿಗದೇ ಇದ್ದಾಗ ಸೀದಾ ವೇಶ್ಯಾವಾಟಿಕೆಗೆ ಇಳಿದು ಬಿಡುತ್ತಾರೆ!  

ದುಬೈನ ವಿಮಾನ ನಿಲ್ದಾಣಕ್ಕೆ ಹತ್ತಿರವೇ ಇರುವ ನಮ್ಮ ಸಂಸ್ಥೆಯ ಹೋಟೆಲ್ಲುಗಳು ಪ್ರತಿಷ್ಠಿತ ಸಂಸ್ಥೆಯೊಂದರ ಅಂಗವಾಗಿದ್ದು ಮಧ್ಯ ಮಾರಾಟ ಹಾಗೂ ವೇಶ್ಯಾವಾಟಿಕೆಯನ್ನು ನಿಷೇಧಿಸಿದ್ದಾರೆ. ನೈಜೀರಿಯನ್ ಹೆಣ್ಣುಮಕ್ಕಳು ಹೋಟೆಲ್ಲಿಗೆ ಬಂದು ರೂಮ್ ಕೇಳಿದರೆ ಅವರನ್ನು ನೋಡುತ್ತಿದ್ದಂತೆಯೇ ಸ್ವಾಗತಕಾರಿಣಿ ನಿರಾಕರಿಸುತ್ತಾಳೆಆದರೆ ತಂತ್ರಜ್ಞಾನ ಮುಂದುವರಿದಿರುವ ದಿನಗಳಲ್ಲಿ ಅವರೂ ಸಹಾ ತಮ್ಮ ವ್ಯವಹಾರಕ್ಕೆ ಅತ್ಯಂತ ಮುಂದುವರಿದ ತಂತ್ರಜ್ಞಾನವನ್ನೇ ಬಳಸುತ್ತಿದ್ದಾರೆಇವರಿಗೆಲ್ಲಾ ಒಬ್ಬ ಮುಖಂಡನಿರುತ್ತಾನೆ, ಅವನು ತನ್ನ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಆನ್ ಲೈನಿನಲ್ಲಿ ಅವನ ಹೆಸರಿನಲ್ಲಿ ರೂಮ್ ಮುಂಗಡವಾಗಿ ಕಾದಿರಿಸುತ್ತಾನೆಕ್ರೆಡಿಟ್ ಕಾರ್ಡ್ ಮೂಲಕ ಆನ್ ಲೈನಿನಲ್ಲಿ ಬುಕ್ ಮಾಡಿದಾಗ ಸ್ವಾಗತಕಾರಿಣಿ ರೂಮ್ ಬುಕ್ಕಿಂಗನ್ನು ರದ್ದುಪಡಿಸಲು ಅವಕಾಶವಿಲ್ಲಇದನ್ನು ಅರಿತಿರುವ ಇವರು ಇಬ್ಬರಿಗಾಗಿ ಕಾದಿರಿಸಿದ ರೂಮಿಗೆ ತಾನೇ ಒಬ್ಬ ಹುಡುಗಿಯೊಡನೆ ಬಂದು ಅವಳನ್ನು ತನ್ನ ಹೆಂಡತಿ ಎಂದು ಪರಿಚಯಿಸಿ ಬೀಗದ ಕೈ ತೆಗೆದುಕೊಂಡು ರೂಮಿಗೆ ಹೋದ ನಂತರ ಹುಡುಗಿಯನ್ನು ರೂಮಿನಲ್ಲಿ ಬಿಟ್ಟು ಹೊರಗಡೆ ಹೋಗುತ್ತಾನೆಕೆಲ ಹೊತ್ತಿನ ನಂತರ ಇನ್ನೊಬ್ಬ ಹುಡುಗಿಯೊಡನೆ ಬಂದು ಹೋಟೆಲ್ಲಿನ ಹೊರಭಾಗದಲ್ಲಿ ಅವಳನ್ನು ಇಳಿಸಿ, ಅತ್ತಿತ್ತ ನೋಡದೆ ಲಿಫ್ಟ್ ಮೂಲಕ ಸೀದಾ ರೂಮಿಗೆ ಹೋಗಲು ತಿಳಿಸಿ ಹೊರಟು ಹೋಗುತ್ತಾನೆ. ನಂತರ ಶುರುವಾಗುತ್ತದೆ ಇವರ ಭರ್ಜರಿ ವಹಿವಾಟು!

ಫೇಸ್ಬುಕ್ ಪೇಜುಗಳಲ್ಲಿ, ವಾಟ್ಸಪ್ ಗ್ರೂಪುಗಳಲ್ಲಿ ಸುಂದರ ಹುಡುಗಿಯರ ಚಿತ್ರಗಳನ್ನು ತೋರಿಸಿ, ಮಸಾಜ್ ಹಾಗೂ ಲೈಂಗಿಕ ಸುಖದ ಆಮಿಷ ಒಡ್ಡಿ ಗಿರಾಕಿಗಳನ್ನು ಬಲೆಗೆ ಬೀಳಿಸಿಕೊಳ್ಳುತ್ತಾರೆತಮ್ಮ ಮೊಬೈಲ್ ನಂಬರ್ ಕೊಟ್ಟು ನಮ್ಮ ಹೋಟೆಲ್ಲಿನ ಹೆಸರನ್ನು ಹಾಕಿ, ಗಿರಾಕಿಗಳು ಕರೆ ಮಾಡಿದಾಗ, ಸ್ವಾಗತಕಾರನ ಬಳಿಗೆ ಹೋಗದೆ ಲಿಫ್ಟ್ ಮೂಲಕ ಸೀದಾ ಇಷ್ಟನೆಯ ಮಹಡಿಯಲ್ಲಿರುವ ಇಂಥಾ ನಂಬರಿನ ರೂಮಿಗೆ ಬನ್ನಿ ಎಂದು ಹೇಳುತ್ತಾರೆಮೊದಮೊದಲು ಅವರು ಗಂಡ ಹೆಂಡತಿಯೇ ಇರಬೇಕು ಎಂದುಕೊಂಡಿದ್ದ ಹೋಟೆಲ್ ಸಿಬ್ಬಂದಿಗೆ ಯಾವಾಗ ಹೆಚ್ಚು ಜನರು ಒಂದು ರೂಮಿಗೆ ಬಂದು ಹೋಗುತ್ತಿರುವುದು ಕಂಡು ಬಂದಿತೋ ಆಗ ನಮ್ಮ ಭದ್ರತಾ ಇಲಾಖೆಗೆ ದೂರುಗಳು ಬರಲಾರಂಭಿಸಿದವುಹೋಟೆಲ್ಲಿನ ಎಲ್ಲೆಡೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೆಲವು ರೂಮುಗಳಿಗೆ ಹೊರಗಡೆಯಿಂದ ಕೆಲವು ವ್ಯಕ್ತಿಗಳು ಬಂದು ಹೋಗುತ್ತಿರುವುದು ಕಂಡು ಬಂದಿತ್ತುಅಂದಿನಿಂದ ನಾನು ನಮ್ಮ ಭದ್ರತಾ ಸಹಾಯಕರಿಗೆ ಹೆಚ್ಚು ಮುತುವರ್ಜಿಯಿಂದ ಎಲ್ಲವನ್ನೂ ಪರಿಶೀಲಿಸುವಂತೆ ತಾಕೀತು ಮಾಡಿ  ನಾನೂ ಸಹಾ ತಡ ರಾತ್ರಿ ಗಸ್ತು ಆರಂಭಿಸಿದ್ದೆತತ್ಪರಿಣಾಮವಾಗಿ ಕಂಡುಬಂದ ವಿಷಯಗಳು ತುಂಬಾ ಕುತೂಹಲಕರವಾಗಿದ್ದವು.

ಹಾಗೆ ರೂಮಿಗೆ ಬಂದು ಹೋಗುತ್ತಿದ್ದವರಲ್ಲಿ ಕೆಲವು ಭಾರತೀಯರು, ಪಾಕಿಸ್ತಾನೀಯರು, ಅರಬ್ಬರು ಸಹಾ ಇದ್ದರುಅವರಲ್ಲಿ ಕೆಲವರು ಸುಂದರ ಹುಡುಗಿಯರ ಚಿತ್ರಗಳನ್ನು ನೋಡಿ ಆಸೆಯಿಂದ ಬಂದು, ಅಲ್ಲಿ ನೈಜೀರಿಯನ್ ಕಪ್ಪು ಹುಡುಗಿಯರನ್ನು ನೋಡಿ ನಿರಾಸೆಯಿಂದ ವಾಪಸ್ ಹೋಗುತ್ತಿದ್ದರುಹಾಗೊಮ್ಮೆ ವಾಪಸ್ಸಾಗುತ್ತಿದ್ದವನೊಬ್ಬನನ್ನು ಹಿಡಿದು ಪ್ರಶ್ನಿಸಿದಾಗ ಅವನು ತನ್ನ ಮೊಬೈಲಿನಲ್ಲಿದ್ದ ವಾಟ್ಸಪ್ ಸಂದೇಶವನ್ನು ತೋರಿಸಿದ್ದ ಸಂದೇಶದಲ್ಲಿ ಸುಂದರವಾಗಿದ್ದ ಬ್ರೆಜಿಲ್ ಹುಡುಗಿಯರ ಫೋಟೋ ಹಾಕಿ "ಬ್ರೆಜಿಲಿಯನ್ ಮಸಾಜ್ ಜೊತೆಗೆ ಲೈಂಗಿಕ ಸೇವೆ, ಬಹಳ ಕಡಿಮೆ ಬೆಲೆಯಲ್ಲಿ" ಎಂದು ಅತ್ಯಾಕರ್ಷಕವಾಗಿ ಜಾಹೀರಾತೊಂದನ್ನು ಕಳುಹಿಸಿದ್ದರುಅದನ್ನು ನೋಡಿ ಆಸೆಯಿಂದ ಬಾಯಿ ತುಂಬಾ ನೀರು ತುಂಬಿಕೊಂಡು ಬಂದಿದ್ದ ವ್ಯಕ್ತಿ ಅಲ್ಲಿದ್ದ ಕಪ್ಪು, ಕುರೂಪಿ ನೈಜಿರಿಯನ್ ಹುಡುಗಿಯರನ್ನು ನೋಡಿ ಸಿಟ್ಟಿಗೆದ್ದು, ನಿರಾಸೆಯಿಂದ ಅವರಿಗೆ ಬೈದು ಹಿಂದಿರುಗಿ ಬಂದಿದ್ದ ಬಗ್ಗೆ ಸ್ವಾಗತಕಾರನ ಬಳಿ ದೂರನ್ನೂ ಕೊಟ್ಟಿದ್ದ. ಒಮ್ಮೆ ಬೆಳಗಿನ ಮೂರು ಘಂಟೆಯ ಸಮಯದಲ್ಲಿ ಬಂದ ಒಬ್ಬ ಗಿರಾಕಿ ಕಪ್ಪು ಹುಡುಗಿಯರನ್ನು ಕಂಡು ವಾಪಸ್ ಹೋಗಲು ಯತ್ನಿಸುತ್ತಿದ್ದಾಗ ಒಬ್ಬಳು ಧಡೂತಿ ಹುಡುಗಿ ಅವನನ್ನು ಅನಾಮತ್ತಾಗಿ ರೂಮಿನೊಳಕ್ಕೆ ಎಳೆದುಕೊಂಡು ಹೋಗಿ ಅವನಲ್ಲಿದ್ದ ಹಣವನ್ನೆಲ್ಲಾ ಕಿತ್ತುಕೊಂಡು ಕಳುಹಿಸಿದ್ದಳುಅವಳ ಕೈಯ್ಯಿಂದ ತಪ್ಪಿಸಿಕೊಂಡು ಬಂದ ಬಡಪಾಯಿ ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಿದ್ದ ದೃಶ್ಯಾವಳಿ ನಮ್ಮ ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿತ್ತುಆದರೆ ಮರುದಿನ ನಾನು ಕರ್ತವ್ಯಕ್ಕೆ ಬರುವ ಹೊತ್ತಿಗೆ ಹುಡುಗಿಯರು ರೂಮ್ ಖಾಲಿ ಮಾಡಿ ಹೊರಟು ಹೋಗಿದ್ದರು

ಈಗ ನಮ್ಮ ಭದ್ರತಾ ತಂಡ ಚುರುಕಾಗಿ ಕೆಲಸ ಮಾಡಬೇಕಿತ್ತುಪ್ರತಿಷ್ಠಿತ ಹೋಟೆಲ್ ಎಂದು ಪ್ರಖ್ಯಾತವಾಗಿದ್ದದ್ದು ನೈಜೀರಿಯನ್ ಹುಡುಗಿಯರ ಅಡ್ಡೆಯಾಗಿ ಬದಲಾಗುವುದನ್ನು ತಪ್ಪಿಸಬೇಕಿತ್ತು, ತನ್ಮೂಲಕ ಹೋಟೆಲ್ಲಿನ ಗೌರವವನ್ನು ಕಾಪಾಡಬೇಕಿತ್ತು. ಹಾಗೆ ಶುರುವಾದದ್ದು "ಆಪರೇಷನ್ ನೈಜೀರಿಯಾ", ನಮ್ಮ ಹೋಟೆಲ್ಲಿನ ಹಿರಿಯ ವ್ಯವಸ್ಥಾಪಕರು ಮತ್ತಿತರ ಅಧಿಕಾರಿಗಳು, ಜೊತೆಗೆ ದುಬೈ ಪೊಲೀಸ್ ಅಧಿಕಾರಿಗಳು, ಸಿಐಡಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಒಂದು ಯೋಜನೆಯನ್ನು ಸಿದ್ಧಪಡಿಸಿದೆವುಅದರಂತೆ ಆನ್ ಲೈನಿನಲ್ಲಿ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ನೈಜೀರಿಯನ್ನರು ರೂಮ್ ಬುಕ್ ಮಾಡಿದರೆ ಅವರಿಗೆ ರೂಮ್ ಕೊಡುವುದು, ಆದರೆ ಅವರ ರೂಮಿಗೆ ಒಬ್ಬನೇ ಒಬ್ಬ ಗಿರಾಕಿಯೂ ಹೋಗದಂತೆ ತಡೆಯುವುದು, ತನ್ಮೂಲಕ ಅವರ ವ್ಯಾಪಾರ ನಡೆಯದಂತೆ ತಡೆಯುವುದು, ಆದರೆ ನಮ್ಮ ಹೋಟೆಲ್ಲಿನ ವ್ಯಾಪಾರಕ್ಕೆ ಯಾವುದೇ ಭಂಗವಾಗಬಾರದು, ಜೊತೆಗೆ ಇತರ ಅತಿಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು.   ಯಾವಾಗ ಅವರಿಗೆ ವ್ಯಾಪಾರ ಆಗುವುದಿಲ್ಲವೋ ಆಗ ಅವರಾಗಿಯೇ ನಮ್ಮ ಹೋಟೆಲ್ಲಿಗೆ ಬರುವುದನ್ನು ನಿಲ್ಲಿಸಿಬಿಡುತ್ತಾರೆ ಎನ್ನುವುದು ನನ್ನ ತರ್ಕವಾಗಿತ್ತು. ಇದಕ್ಕಾಗಿ ನಾಲ್ಕಾರು ಹೊಸ ಕ್ಯಾಮರಾಗಳನ್ನು ಅಳವಡಿಸಿ ಅವರ ಎಲ್ಲ ಚಲನವಲನಗಳನ್ನು ಕೂಲಂಕುಷವಾಗಿ ನೋಡಲು ಸಾಧ್ಯವಾಗುವಂತೆ  ವ್ಯವಸ್ಥೆ ಮಾಡಿದ್ದೆವುಈಗ ಸುಮಾರು ನಾಲ್ಕೈದು ವಾರಗಳಿಂದಲೂ ನೈಜೀರಿಯನ್ ಹುಡುಗಿಯರು ನಮ್ಮ ಹೋಟೆಲ್ಲಿನಲ್ಲಿ ರೂಮ್ ಬುಕ್ ಮಾಡಿ ಬರುವುದು, ಆದರೆ ಅವರ ಗಿರಾಕಿಗಳನ್ನು ನಮ್ಮ ಭದ್ರತಾ ರಕ್ಷಕರು ತಡೆದು ವಾಪಸ್ ಕಳುಹಿಸುವುದು ನಡೆದೇ ಇತ್ತು. ಕೊನೆಗೆ ಅವರು ನಿರಾಶರಾಗಿ ಯಾವುದೇ ವ್ಯವಹಾರ ನಡೆಯದೆ ರೂಮ್ ಖಾಲಿ ಮಾಡಿ ಹೋಗುತ್ತಿದ್ದರುಆದರೆ ಅವರೊಡನೆ ಮುಖಾಮುಖಿ ಮಾತನಾಡುವ ಸಂದರ್ಭ ನನಗೆ ಸಿಕ್ಕಿರಲಿಲ್ಲ

ಆದರೆ ನಿನ್ನೆ ಮಧ್ಯಾಹ್ನ ಎರಡು ಘಂಟೆಯ ಹೊತ್ತಿಗೆ ಆನ್ಲೈನಿನಲ್ಲಿ ರೂಮ್ ಬುಕ್ ಮಾಡಿ ಹೋಟೆಲ್ಲಿಗೆ ಬಂದ ಮೂವರು ನೈಜೀರಿಯನ್ ಹುಡುಗಿಯರು ತಕ್ಷಣವೇ ವ್ಯವಹಾರ ಶುರು ಹಚ್ಚಿಕೊಂಡಿದ್ದರುಸಾಮಾನ್ಯವಾಗಿ ಅವರು ಬರುತ್ತಿದ್ದುದು ಸಂಜೆಯ ಹೊತ್ತಿನಲ್ಲಿ ಮತ್ತು ಗಿರಾಕಿಗಳು ಬರಲಾರಂಭಿಸುತ್ತಿದ್ದುದು ರಾತ್ರಿಯ ಹೊತ್ತಿನಲ್ಲಿಆದರೆ ನಿನ್ನೆಯ ದಿನ ಮಟಮಟ ಮಧ್ಯಾಹ್ನಕ್ಕೇ ಗಿರಾಕಿಗಳು ಬರಲು ಶುರು ಹಚ್ಚಿಕೊಂಡಿದ್ದರುಶುಕ್ರವಾರದಂದು ಸಾಮಾನ್ಯವಾಗಿ ನಮ್ಮ ಎರಡೂ ಹೋಟೆಲ್ಲುಗಳನ್ನು ನಾನು ಸುತ್ತು ಹೊಡೆಯುತ್ತಿರುತ್ತೇನೆ, ಒಂದು ಹೋಟೆಲ್ ನೋಡಿಕೊಂಡು ಎರಡನೆಯ ಹೋಟೆಲ್ಲಿಗೆ ಬರುವ ಹೊತ್ತಿಗೆ  ಅಲ್ಲಿ ನೈಜೀರಿಯನ್ ಹುಡುಗಿಯರ ವ್ಯವಹಾರ ಶುರುವಾಗಿಬಿಟ್ಟಿತ್ತುನಮ್ಮ ಭದ್ರತಾ ರಕ್ಷಕರ ವರದಿಯನ್ನು ನೋಡಿದ ನಂತರ ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದ್ದ ಅವರ ಓಡಾಟದ ದೃಶ್ಯಾವಳಿಗಳನ್ನೆಲ್ಲ ವೀಕ್ಷಿಸಿದ ನನಗೆ ಸಿಟ್ಟು ನೆತ್ತಿಗೇರಿತ್ತುಅವರು ರೂಮ್ ತೆಗೆದುಕೊಂಡಿದ್ದ ಎರಡನೆಯ ಮಹಡಿಯಲ್ಲಿಯೇ ಒಬ್ಬ ಭದ್ರತಾ ರಕ್ಷಕನನ್ನು ನಿಲ್ಲಿಸಿ, ಮತ್ತೊಬ್ಬನನ್ನು ಮುಖ್ಯದ್ವಾರದಲ್ಲಿ ನಿಲ್ಲಿಸಿ, ಸಿಸಿಟಿವಿ ರೂಮಿನಲ್ಲಿದ್ದವನನ್ನು  ಎಲ್ಲವನ್ನೂ ಪರಿಶೀಲಿಸುತ್ತಾ ಮತ್ತೆ ಯಾರಾದರೂ ಬಂದಲ್ಲಿ ನನಗೆ ತಕ್ಷಣ ತಿಳಿಸುವಂತೆ ಆದೇಶಿಸಿ ಸಿಐಡಿ ಅಧಿಕಾರಿ ಅಬ್ದುಲ್ಲಾನಿಗೆ ಫೋನಾಯಿಸಿದ್ದೆ.  "ಆಪರೇಶನ್ ನೈಜೀರಿಯಾ" ಅಂದ ನನ್ನ ಧ್ವನಿ ಕೇಳಿದ ಅಬ್ದುಲ್ಲಾ ಜೋರಾಗಿ ನಗುತ್ತಾ "ಆಪರೇಷನ್ ಕರ್ದೋ ಮಂಜು ಭಾಯ್" ಅಂದಿದ್ದ

ಹಾಗೆ ಅಖಾಡಕ್ಕಿಳಿದ ನಮಗೆ ಸಿಕ್ಕಿದ್ದು ಸುಮಾರು ಎಂಟು ಜನ ಗಿರಾಕಿಗಳುಅವರನ್ನು ಹುಡುಗಿಯರಿದ್ದ ರೂಮಿಗೆ ಹೋಗದಂತೆ ತಡೆದು ವಾಪಸ್ ಕಳುಹಿಸಿದ್ದ ಭದ್ರತಾ ರಕ್ಷಕರು ಒಬ್ಬ ಪಾಕಿಸ್ತಾನಿ ಯುವಕ ಸ್ವಲ್ಪ ತಗಾದೆ ಮಾಡುತ್ತಿರುವ ಬಗ್ಗೆ ಮಾಹಿತಿ ಕೊಟ್ಟಿದ್ದರು. ಸ್ವಾಗತಕಾರನ ಬಳಿಯಲ್ಲಿ ನಿಂತಿದ್ದ ಅವನನ್ನು ಸರಿಯಾಗಿ ದಬಾಯಿಸಿ ಸುಮ್ಮನೆ ಆಚೆಗೆ ಹೋದರೆ ಸರಿ, ಇಲ್ಲದಿದ್ದರೆ ಈಗಲೇ ಒಳಗೆ ಹಾಕಿಸುತ್ತೇನೆ ಅಂದ ತಕ್ಷಣ ಅವನು ಜಾಗ ಖಾಲಿ ಮಾಡಿದ್ದ! ಆದರೆ ಹೋಗುವ ಮುನ್ನ ಅಷ್ಟೂ ಜನರು ಹುಡುಗಿಯರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದರುತಮ್ಮ ರೂಮಿನಿಂದ ಹೊರಬಂದ ಹುಡುಗಿಯರು ತಮ್ಮ ರೂಮಿನ ಅನತಿ ದೂರದಲ್ಲಿ ನಿಂತಿದ್ದ ಆಜಾನುಬಾಹು ಭದ್ರತಾ ರಕ್ಷಕ, ಎಲ್ಲೆಡೆ ಇದ್ದ ಕ್ಯಾಮರಾಗಳು, ಕೆಳಗಿನ ಮಹಡಿಯಲ್ಲಿದ್ದ ಇನ್ನಿತರ ಭದ್ರತಾ ರಕ್ಷಕರನ್ನು ನೋಡಿ ತಕ್ಷಣ ರೂಮ್ ಖಾಲಿ ಮಾಡಿ ಕೆಳಗೆ ಬಂದಿದ್ದರುಸ್ವಾಗತಕಾರನ ಬಳಿಯೇ ಇದ್ದ ನನ್ನನ್ನು ನೋಡಿ ಆಕ್ರೋಶದಿಂದ ಅವರಾಡಿದ ಮಾತುಗಳು ಮಾತ್ರ ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆಅದೆಷ್ಟೋ ದಿನಗಳಿಂದ ಹೊಟ್ಟೆಗೆ ತಿನ್ನದವರಂತೆ ಕೃಶರಾಗಿದ್ದ ಅವರ ಮುಖದಲ್ಲಿ ಅಸಹಾಯಕತೆ ಎದ್ದು ಕಾಣುತ್ತಿತ್ತು. ಅವರ ದಯನೀಯ ಪರಿಸ್ಥಿತ್ಯನ್ನು ಕಂಡು ಮನಸ್ಸು ಮರುಗಿದರೂ ನಾನು ನನ್ನ ಕರ್ತವ್ಯ ಮಾಡಲೇಬೇಕಿತ್ತು.  "ಆಪರೇಷನ್ ನೈಜೀರಿಯಾ" ಯಶಸ್ವಿಯಾಗಿತ್ತು, ಆದರೆ ಮನದ ಮೂಲೆಯಲ್ಲೆಲ್ಲೋ ಮಾನವೀಯತೆ ಸತ್ತ ಸದ್ದು ಕೇಳಿಸುತ್ತಿತ್ತು!