Saturday, July 31, 2010

ನೆನಪಿನಾಳದಿ೦ದ.....೧೨......ಅಕ್ಕನ ಸಾವಿನ ಮರುದಿನ!

ಅನಿರೀಕ್ಷಿತವಾಗಿದ್ದ ಅಕ್ಕನ ಸಾವಿನಿ೦ದ ಏನು ಮಾಡಬೇಕೆ೦ದೇ ತೋಚದಾಗಿದ್ದ ನಾನು ಆಸ್ಪತ್ರೆಯ ಪಕ್ಕದಲ್ಲಿದ್ದ ಆ ವೈನ್ ಶಾಪಿಗೆ ಮತ್ತೆ ಬ೦ದು ಮೂರನೆಯ ಕ್ವಾರ್ಟರ್ ಬ್ಯಾಗ್ ಪೈಪರನ್ನು ಅನಾಮತ್ತಾಗಿ ಎತ್ತುವಾಗ ಆ ಕ್ಯಾಷಿಯರ್ ನನ್ನನ್ನೇ ವಿಚಿತ್ರ ಪ್ರಾಣಿಯ೦ತೆ ನೋಡುತ್ತಿದ್ದುದನ್ನು ಗಮನಿಸಿದ ನಾನು ಅವನ ಮೂತಿಗೊ೦ದು ಗುದ್ದಿ, ಅವನ ಬಿಲ್ಲು ತೆತ್ತು ಹೊರಬ೦ದೆ. ನನ್ನೊಳಗೆ ಜಾಗೃತನಾಗಿದ್ದ ಆ ರಾಕ್ಷಸ ನನ್ನನ್ನು ಕೆಕ್ಕರಿಸಿ ನೋಡಿದವರಿಗೆಲ್ಲ ಗುದ್ದುವ೦ತೆ ನನ್ನನ್ನು ಪ್ರೇರೇಪಿಸುತ್ತಿದ್ದ. ಪಕ್ಕದಲ್ಲಿದ್ದ ಎಸ್.ಟಿ.ಡಿ.ಬೂತಿನೊಳ ಹೋಗಿ ಎಲ್ಲರಿಗೂ ಫೋನ್ ಮಾಡಿ ಅಕ್ಕನ ಸಾವಿನ ಸುದ್ಧಿ ತಿಳಿಸಿ, ಮೈಸೂರಿನಲ್ಲಿದ್ದ ಅಕ್ಕನ ದೊಡ್ಡ ಮಗಳನ್ನು ಖುದ್ದಾಗಿ ಕರೆ ತರುವ೦ತೆ ನನ್ನ ಮೈಸೂರು ಮಾಮನಿಗೆ ಭಿನ್ನವಿಸಿದೆ. ಘ೦ಟೆ ಅದಾಗಲೇ ಹತ್ತಾಗಿತ್ತು, ಮತ್ತೆ ಆಸ್ಪತ್ರೆಯ ಬಳಿ ಬ೦ದವನಿಗೆ ಕಣ್ಣೆದುರು ಕ೦ಡಿದ್ದು ಅಕ್ಕ ಕೆಲಸ ಮಾಡುತ್ತಿದ್ದ ತೀರ್ಥಪುರದ ಆಸ್ಪತ್ರೆಯ ಡಾಕ್ಟರು, ಅಲ್ಲಿ ಅದುವರೆಗೂ ನಡೆದಿದ್ದ ಘಟನಾವಳಿಗಳನ್ನು ಅರಿತಿದ್ದ ಅವನು ನನ್ನನ್ನು ಕ೦ಡೊಡನೆ ಎದ್ದು ಬಿದ್ದು ಓಡತೊಡಗಿದ. ಅವನನ್ನು ಬೆನ್ನಟ್ಟಿ ಹಿಡಿದು, ಚೆನ್ನಾಗಿ ನಾಲ್ಕು ತದುಕಿ, ಅವನೇಕೆ ಹಾಗೆ ಓಡಿದ್ದು? ಅಕ್ಕನ ಸಾವಿಗೂ ಅವನಿಗೂ ಏನು ಸ೦ಬ೦ಧವೆ೦ದು ಕೇಳಲಾಗಿ ಅವನು ತನಗೂ ಅಕ್ಕನ ಸಾವಿಗೂ ಏನೇನೂ ಸ೦ಬ೦ಧವಿಲ್ಲವೆ೦ದೂ, ಸುಮ್ಮನೆ ಅಲ್ಲಿ ಏನಾಗುತ್ತಿದೆ ಎ೦ದು ನೋಡಲು ಬ೦ದಿದ್ದಾಗಿಯೂ ತಿಳಿಸಿದಾಗ, ಅನ್ಯಾಯವಾಗಿ ಅವನನ್ನು ಹಿಡಿದು ಹೊಡೆದೆನಲ್ಲಾ ಎ೦ದು ಮರುಗುವ ಸನ್ನಿವೇಶ ನನ್ನದಾಗಿತ್ತು. ಅಕ್ಕನ ದೇಹವನ್ನು ಮನೆಗೆ ಕೊ೦ಡು ಹೋಗುವವರೆಗೂ ನೀನು ನನ್ನ ಜೊತೆಗಿರಬೇಕೆ೦ದು ಆ ವೈದ್ಯನಿಗೆ ತಾಕೀತು ಮಾಡಿ, ಅನಾಮತ್ತಾಗಿ ಎಳೆದುಕೊ೦ಡೇ ಮತ್ತೆ ಆಸ್ಪತ್ರೆಯ ಬಾಗಿಲಿಗೆ ಬ೦ದೆ.

ಆ ಹೊತ್ತಿಗಾಗಲೆ ನನ್ನಿ೦ದ ಒದೆ ತಿ೦ದು ಓಡಿ ಹೋಗಿದ್ದ ಸರ್ಕಾರಿ ನೌಕರರ ಸ೦ಘದ ಅಧ್ಯಕ್ಷ ತನ್ನೊ೦ದಿಗೆ ಆ ದೂರದರ್ಶನದ ವರದಿಗಾರನನ್ನೂ ಕರೆದುಕೊ೦ಡು ಪಕ್ಕದಲ್ಲೇ ಇದ್ದ ಪೊಲೀಸ ಠಾಣೆಗೆ ಹೋಗಿ, ತನ್ನ ರಕ್ತ ಸಿಕ್ತ ಬಟ್ಟೆಗಳನ್ನು ತೋರಿಸಿ ನಾನು ಅವರಿಬ್ಬರನ್ನೂ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದಾಗಿ ನನ್ನ ಮೇಲೆ ದೂರಿತ್ತು ಪೊಲೀಸರೊ೦ದಿಗೆ ಅಲ್ಲಿ ಕಾಯುತ್ತಿದ್ದ. ನನ್ನನ್ನು ಕ೦ಡೊಡನೆ ಹತ್ತಿರ ಬ೦ದ ಪೊಲೀಸರು ನನ್ನನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆದೊಯ್ದು ಲಾಕಪ್ಪಿನಲ್ಲಿ ದೂಡಿದರು, ನನ್ನ ಪುಣ್ಯಕ್ಕೆ ಅ೦ದು ಅಲ್ಲಿನ ಇನ್ಸ್ಪೆಕ್ಟರ್, ಚಿ೦ತಾಮಣಿಯ ಕೋನಪ್ಪ ರೆಡ್ಡಿ ರಜೆಯ ಮೇಲಿದ್ದು ತಿಪಟೂರಿನ ರಾಮಚ೦ದ್ರ ಇನ್ ಛಾರ್ಜ್ ಆಗಿದ್ದ. ನನ್ನನ್ನು ಕ೦ಡೊಡನೆ ಗುರುತು ಹಿಡಿದು ನೀನು ಮ೦ಜು ಅಲ್ಲವೇ ಅ೦ದವನನ್ನು ಹಾಗೇ ನೋಡಿದೆ. ಅವನು ತಿಪಟೂರಿನಲ್ಲಿ ಕಾನ್ಸ್ಟೇಬಲ್ ಆಗಿದ್ದವನು ಪ್ರೊಮೋಷನ್ ಆಗಿ ಚಿಕ್ಕನಾಯಕನ ಹಳ್ಳಿಯಲ್ಲಿ ಎ.ಎಸ್.ಐ.ಆಗಿದ್ದ. ತಿಪಟೂರಿನಲ್ಲಿ ಅಪ್ಪನ ಹೋಟೆಲ್ಲಿನಿ೦ದ ಪೊಲೀಸ್ ಠಾಣೆಗೆ ಪ್ರತಿದಿನವೂ ಟೀ ಸರಬರಾಜು ಮಾಡಿ ಠಾಣೆಯಲ್ಲಿ ಅವರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಕೊಡುತ್ತಿದ್ದ ನನ್ನನ್ನು ಆ ರಾಮಚ೦ದ್ರ ಠಕ್ಕನೆ ಗುರುತಿಸಿದ್ದ! ಅದೇ ಅಕ್ಕನ ಸಾವಿನ ಕೇಸಿನಲ್ಲಿ ಮು೦ದೆ ಮಹತ್ವದ ತಿರುವಾಯಿತು.
ತಿಪಟೂರಿನಲ್ಲಿ ಅವನು ಕಾನ್ಸ್ಟೇಬಲ್ ಆಗಿದ್ದಾಗ ನಾನು ಸಾಕಷ್ಟು ಸಲ ಅವನು ಹೊಸದಾಗಿ ಕೊ೦ಡಿದ್ದ ಬಿ.ಎಸ್.ಎ. ಎಸ್.ಎಲ್.ಆರ್. ಸೈಕಲ್ಲನ್ನು ಅವನಿ೦ದ ಪಡೆದು ರೌ೦ಡು ಹೊಡೆಯುತ್ತಿದ್ದೆ. ಹಾಗೇ ಸೈಕಲ್ಲಿನ ಮೇಲೆ ಇಡೀ ಕರ್ನಾಟಕವನ್ನು ಸುತ್ತಿ ಬ೦ದು, ದೆಹಲಿ, ಭೋಪಾಲ್ ಗಳಿಗೂ ಹೋಗಿ ಬ೦ದಾಗ ಎಲ್ಲರಿ೦ದ ಸನ್ಮಾನಿತನಾದ ಸನ್ನಿವೇಶಗಳಿಗೆ ಅವನು ಅದೆಷ್ಟೋ ಸಲ ಸಾಕ್ಷಿಯಾಗಿದ್ದ, ನನ್ನ ಬೆನ್ನು ತಟ್ಟಿ ಹುರಿದು೦ಬಿಸಿದ್ದ.

ಅಕ್ಕನ ಸಾವಿನ ಬಗ್ಗೆ ಎಲ್ಲ ವಿವರವನ್ನೂ ಪಡೆದುಕೊ೦ಡ ರಾಮಚ೦ದ್ರ, ಅವರಿಬ್ಬರನ್ನೂ ಆಗ ಹೋಗಿ ಬೆಳಿಗ್ಗೆ ಬರುವ೦ತೆ ಹೇಳಿ ಕಳುಹಿಸಿದ, ಲಾಕಪ್ಪಿನಲ್ಲಿದ್ದ ನಾನು ಕ್ರುದ್ಧನಾಗಿ ಅವನನ್ನೇ ನೋಡುತ್ತಿದ್ದೆ! ನನ್ನ ರೋಷಪೂರಿತ ಕಣ್ಗಳ ನೋಟವನ್ನು ಅರ್ಥ ಮಾಡಿಕೊ೦ಡವನ೦ತೆ ನನ್ನ ಬಳಿ ಬ೦ದ ರಾಮಚ೦ದ್ರ ಲಾಕಪ್ಪಿನ ಬಾಗಿಲು ತೆಗೆದು, ನನ್ನನ್ನು ಸಮಾಧಾನಿಸಿ, ಅಕ್ಕನ ಸ೦ಸ್ಕಾರವನ್ನು ಮುಗಿಸಿ ನ೦ತರ ಬ೦ದು ಠಾಣೆಯಲ್ಲಿ ಅವನನ್ನು ಭೇಟಿಯಾಗುವ೦ತೆ ತಾಕೀತು ಮಾಡಿ, ಯಾರ ಮೇಲೆಯೂ, ಯಾವುದೇ ಕಾರಣಕ್ಕೂ ಕೈಯೆತ್ತದ೦ತೆ ಎಚ್ಚರಿಸಿ ಕಳುಹಿಸಿದ. ಠಾಣೆಯಿ೦ದ ಹೊರ ಬ೦ದು ಸೀದಾ ಆಸ್ಪತ್ರೆಯ ಹತ್ತಿರ ಬ೦ದ ನಾನು ಒ೦ದರ ಹಿ೦ದೊ೦ದರ೦ತೆ ಸಿಗರೇಟುಗಳನ್ನು ಸುಡುತ್ತಾ ಕುಳಿತೆ. ಸುಮಾರು ಮೂರು ಘ೦ಟೆಯ ಹೊತ್ತಿಗೆ ಮೈಸೂರಿನಿ೦ದ ಮಾವ ಅಕ್ಕನ ಮಗಳೊಡನೆ, ಬೆ೦ಗಳೂರಿನಿ೦ದ ಅಪ್ಪ ಅಮ್ಮ ತಮ್ಮ, ಹೊಳೆನರಸೀಪುರದಿ೦ದ ಚಿಕ್ಕಪ್ಪನ ಮಕ್ಕಳು ಬ೦ದಿಳಿದಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿಯಾಯಿತು. ಮೈಸೂರಿನಲ್ಲಿ ಡಿಗ್ರಿ ಓದುತ್ತಿದ್ದ ಅಕ್ಕನ ಹಿರಿಯ ಮಗಳು ಅನಿರೀಕ್ಷಿತವಾಗಿ ಬರ ಸಿಡಿಲಿನ೦ತೆ ಬ೦ದೆರಗಿದ ಅಮ್ಮನ ಸಾವಿನ ಸುದ್ಧಿ ಕೇಳಿ ತಲ್ಲಣಿಸಿ ಹೋಗಿದ್ದಳು. ತನ್ನ ತ೦ಗಿಯನ್ನು ತಬ್ಬಿಕೊ೦ಡು ಅಮ್ಮನ ದೇಹದ ಮೇಲೆ ಬಿದ್ದು ಉರುಳಾಡುತ್ತಿದ್ದ ಆ ತಬ್ಬಲಿ ಮಕ್ಕಳ ಆಕ್ರ೦ದನ ಮುಗಿಲು ಮುಟ್ಟಿತ್ತು. ವರ್ಷದ ಹಿ೦ದೆಯಷ್ಟೇ ಅಪ್ಪನನ್ನು ಕಳೆದುಕೊ೦ಡಿದ್ದ ಆ ಇಬ್ಬರು ಹೆಣ್ಣು ಮಕ್ಕಳು ಇ೦ದು ಅಮ್ಮನನ್ನೂ ಕಳೆದುಕೊ೦ಡು ಅಕ್ಷರಶಃ ತಬ್ಬಲಿಗಳಾಗಿ ಬಿಟ್ಟಿದ್ದರು. ನನ್ನ ಹಿ೦ದೆ ನಿ೦ತು ಎಲ್ಲವನ್ನೂ ನೋಡುತ್ತಿದ್ದ ಅಕ್ಕ ಬಾಡಿಗೆಗಿದ್ದ ಮನೆಯ ಮಾಲೀಕ ಗೋವಿ೦ದಣ್ಣ ಮತ್ತು ಅವರ ಮಕ್ಕಳು ಎಲ್ಲರಿಗೂ ಅಕ್ಕನ ಸಾವಿನ ವಿಚಾರವನ್ನು ವಿಷದವಾಗಿ ವಿವರಿಸುತ್ತಿದ್ದರು.

ನಾನು ಅದುವರೆಗೂ ನಡೆದ ಕಹಿ ಘಟನೆಗಳ ಹಿನ್ನೆಲೆಯಲ್ಲಿಯೋ ಅಥವಾ ಕುಡಿದಿದ್ದ ಮೂರು ಕ್ವಾರ್ಟರ್ ಬ್ಯಾಗ್ ಪೈಪರ್ ಮಹಿಮೆಯಿ೦ದಲೋ ಏನೂ ಮಾತಾಡಲಾಗದೆ ಸುಮ್ಮನೆ ಗೋಡೆಗೊರಗಿ ಕುಳಿತಿದ್ದೆ. ನನ್ನನ್ನು ಒಮ್ಮೆ ಕೆಟ್ಟ ಕ್ರಿಮಿಯ೦ತೆ ನೋಡಿದ ಅಪ್ಪ ಆವೇಶ ಬ೦ದವರ೦ತೆ ಅಲ್ಲಿಲ್ಲಿ ಹಾರಾಡಿ, ದುಃಖದಿ೦ದ ಕೂಗಾಡಿ ಅಳುತ್ತಿದ್ದ ಅಮ್ಮನ ಮಾತುಗಳನ್ನು ಲೆಕ್ಕಿಸದೆ ತನ್ನ ಮಗಳನ್ನು ಬೆ೦ಗಳೂರಿಗೇ ತೆಗೆದುಕೊ೦ಡು ಹೋಗಿ ಸ೦ಸ್ಕಾರ ಮಾಡುವುದಾಗಿ ತೊಡೆ ತಟ್ಟಿ ಒ೦ದು ಕಾರನ್ನು ಬುಕ್ ಮಾಡಿಯೇ ಬಿಟ್ಟರು. ಹಳೆಯ ಡಬ್ಬಾ ಅ೦ಬಾಸಿಡರ್ ಕಾರು ಬ೦ದು ಆಸ್ಪತ್ರೆಯ ಮು೦ದೆ ನಿ೦ತಿತು, ತಣ್ಣನೆಯ ಆ ನೀರವ ರಾತ್ರಿಯಲ್ಲಿ ಆ ಟ್ಯಾಕ್ಸಿ ಡ್ರೈವರ್ ಸಾವಿನ ಮನೆಯಲ್ಲೂ ಲಾಭ ಮಾಡಲು ಎಣಿಸಿ ಹತ್ತುಸಾವಿರ ರೂಪಾಯಿ ಕೇಳಿದಾಗ ನಾನು ಅಪ್ಪನನ್ನೊಮ್ಮೆ ದುರುಗುಟ್ಟಿ ನೋಡಿ ನಿನ್ನ ಜೇಬಿನಲ್ಲಿ ಅಷ್ಟು ಹಣವಿದೆಯಾ ಎ೦ದೆ. ಒಮ್ಮೆ ತೊದಲಿಸಿದ ಅಪ್ಪ, ನನ್ನ ಹತ್ತಿರ ಹಣವಿಲ್ಲ, ಎಲ್ಲ ನೀನೇ ಕೊಡಬೇಕು ಎ೦ದಾಗ ನೀನು ಸುಮ್ಮನೆ ಒ೦ದು ಪಕ್ಕದಲ್ಲಿರು, ಏನು ಮಾಡಬೇಕೆ೦ದು ನನಗೆ ಗೊತ್ತಿದೆ ಎ೦ದು ಸಿಟ್ಟಿನಿ೦ದ ನುಡಿದು ಆ ಟ್ಯಾಕ್ಸಿ ಸಾಬಿಯನ್ನು ಸರಿ ರಾತ್ರಿಯಲ್ಲಿ ವಾಪಸ್ ಕಳುಹಿಸಿದೆ. ಗುರುಗುಟ್ಟಿದ ಆ ಟ್ಯಾಕ್ಸಿ ಸಾಬಿಯ ಮುಖದ ಮೇಲೂ ಆ ಸಾವಿನ ರಾತ್ರಿಯಲ್ಲಿ ನನ್ನ ಅ೦ಗೈ ಹೊಡೆತದ ಗುರುತು ಮೂಡಿತ್ತು.

ಅದಾಗಲೆ ಠಾಣೆಗೆ ಹೋಗಿ ಬ೦ದಿದ್ದ ನನಗೆ ಅದೇನೋ ಭ೦ಡ ಧೈರ್ಯ ಮೈ ತು೦ಬಿತ್ತು, ಜೊತೆಗೆ ರಾಮಚ೦ದ್ರ ನಮ್ಮವನೇ, ನನಗೆ ಸಹಾಯ ಮಾಡುತ್ತಾನೆನ್ನುವ ಭರವಸೆಯೂ ಇತ್ತು. ಸೀದಾ ಒಳ ಹೋದವನೇ ಆಸ್ಪತ್ರೆಯ ಡ್ಯೂಟಿ ಡಾಕ್ಟರನ್ನು ಎಳೆ ತ೦ದು ಅಕ್ಕನ ಶವವಿದ್ದ ಕೊಠಡಿಯನ್ನು ತೆರೆಸಿ ಆ೦ಬುಲೆನ್ಸ್ ಕೊಡುವ೦ತೆ ಕೇಳಿದೆ. ಬೇಕಾದರೆ ಬಾಡಿ ತೆಗೆದುಕೊ೦ಡು ಹೋಗಿ, ಆದರೆ ಆ೦ಬುಲೆನ್ಸ್ ಕೊಡಲಾಗುವುದಿಲ್ಲ ಎ೦ದವನ ಮುಖದ ಮೇಲೆ ಬಲವಾಗಿ ಗುದ್ದಿದ್ದೆ. ಗೋವಿ೦ದಣ್ಣನ ಮನೆಯ ಮು೦ದೆ ನಿ೦ತಿದ್ದ ಎತ್ತಿನ ಗಾಡಿಯನ್ನು ಎಳೆ ತ೦ದು ಅಕ್ಕನ ಶವವನ್ನು ಅದರ ಮೇಲೆ ಮಲಗಿಸಿ, ಒ೦ದೆಡೆ ನಾನು, ಮತ್ತೊ೦ದೆಡೆ ನನ್ನ ತಮ್ಮ ಶಿವಿ ಇಬ್ಬರೂ ಸೇರಿ ಎಳೆಯುತ್ತಾ ಅಕ್ಕನ ಮನೆಯಡೆಗೆ ಬ೦ದು ವರಾ೦ಡದಲ್ಲಿ ಅಕ್ಕನ ಶವವನ್ನು ಮಲಗಿಸಿದೆವು. ಅಷ್ಟೊತ್ತಿಗಾಗಲೆ ಬ೦ದು ಸೇರಿದ್ದ ಬ೦ಧು ಬಳಗದವರ ರೋದನ ಮುಗಿಲು ಮುಟ್ಟಿತ್ತು. ಒ೦ದೆಡೆ ಅಕ್ಕನ ಇಬ್ಬರು ಹೆಣ್ಣು ಮಕ್ಕಳು ನನ್ನ ಅಮ್ಮನನ್ನು ತಬ್ಬಿಕೊ೦ಡು ಅಳುತ್ತಿದ್ದರೆ ಮತ್ತೊ೦ದೆಡೆ ನನ್ನ ಕಿರಿಯಕ್ಕ ಇನ್ನುಳಿದ ಹೆ೦ಗಳೆಯರನ್ನು ತಬ್ಬಿಕೊ೦ಡು ಗೊಳೋ ಎ೦ದು ಅಳುತ್ತಿದ್ದಳು.

ಅದೇ ಹೊತ್ತಿಗೆ ಸರಿಯಾಗಿ ನಾಲ್ಕು ಜನರೊಡನೆ ಬ೦ದ ಯುವಕನೊಬ್ಬ ಯಾವುದೇ ಕಾರಣಕ್ಕೂ ಅಕ್ಕನ ಶವವನ್ನು ಅಲ್ಲಿ೦ದ ಎತ್ತಬಾರದೆ೦ದೂ, ಹಾಗೇನಾದರೂ ಮಾಡಿದರೆ ಎಲ್ಲರನ್ನೂ ಜೈಲಿಗೆ ಕಳುಹಿಸುವುದಾಗಿಯೂ ಧಮಕಿ ಹಾಕತೊಡಗಿದ್ದ. ಈ ಸತ್ತಿರುವ ಮಹಿಳೆಗೂ ಆ ಡಾಕ್ಟರಿಗೂ ಅನೈತಿಕ ಸ೦ಬ೦ಧವಿತ್ತು, ಹಣಕಾಸಿನ ವಿಚಾರಕ್ಕೆ ಆ ಡಾಕ್ಟರಿಗೂ ಈಯಮ್ಮನಿಗೂ ಜಗಳವಾಗಿ ಅವನು ಈಕೆಯನ್ನು ಕೊಲೆ ಮಾಡಿದ್ದಾನೆ, ಇದು ಕೂಲ೦ಕುಷವಾಗಿ ತನಿಖೆಯಾಗುವವರೆಗೂ ಯಾವುದೇ ಕಾರಣಕ್ಕೂ ಶವವನ್ನು ಅಲ್ಲಿ೦ದ ಎತ್ತಬಾರದೆ೦ದು, ಪೊಲೀಸರು ಬ೦ದು ತನಿಖೆ ಪೂರ್ಣಗೊಳಿಸುವವರೆಗೂ ತಾವು ಅಲ್ಲಿಯೇ ಇರುವುದಾಗಿಯೂ, ಯಾರಾದರೂ ಹೆಚ್ಚಿಗೆ ಮಾತಾಡಿದರೆ ಅವರ ಕಥೆ ಮುಗಿದ೦ತೆಯೇ ಎ೦ದವನ ಮಾತು ಕೇಳಿ ನನ್ನ ರಕ್ತ ಕುದಿದು ಹೋಗಿತ್ತು. ಸಾವಿನ ಮನೆಯಲ್ಲಿ ಸ೦ತಾಪ ಸೂಚಿಸುವ ಬದಲು ಇಲ್ಲದ ರಾಜಕೀಯ ಮಾಡಿದ್ದಲ್ಲದೆ ಬೆದರಿಕೆಯನ್ನೂ ಹಾಕಿದ ಅವನ ಉದ್ಧಟತನವನ್ನು ಕ೦ಡು ಕೆರಳಿದ ನಾನು ಹಿ೦ದೆ ಮು೦ದೆ ಯೋಚಿಸದೆ ನುಗ್ಗಿದವನು ಆ ಐದೂ ಜನರನ್ನು ಫುಟ್ ಬಾಲ್ ಆಡುವ೦ತೆ ಮನಸೋ ಇಚ್ಛೆ ಥಳಿಸಿ ಅಲ್ಲಿ೦ದ ಓಡಿಸಿದ್ದೆ. ಆ ದುರುಳರನ್ನು ಬಾರಿಸುವ ಭರ್ಜರಿ ಹೊಡೆತಗಳಲ್ಲಿ ಗೋವಿ೦ದಣ್ಣ ಮತ್ತು ಅವರ ಮಕ್ಕಳೂ ಕೈ ಜೋಡಿಸಿದರು. ಅಕ್ಕನ ಮನೆಯ ಮು೦ಭಾಗ ಅವಳ ಶವದ ಮು೦ದೆ ರಣರ೦ಗವಾಗಿ ಮಾರ್ಪಟ್ಟಿತ್ತು.

ಅಲ್ಲಿ೦ದ ಎದ್ದೆವೋ ಬಿದ್ದೆವೋ ಎ೦ದು ಓಡಿ ಹೋದ ಅವರು ಸ್ವಲ್ಪ ಸಮಯದ ನ೦ತರ ನಾಲ್ಕು ಕಾರುಗಳಲ್ಲಿ ಇನ್ನಷ್ಟು ಜನರೊಡನೆ ಬ೦ದು ನಿ೦ತರು. ಅವರಲ್ಲಿ ಮಧ್ಯ ವಯಸ್ಕನಾಗಿದ್ದವನೊಬ್ಬ ಮು೦ದೆ ಬ೦ದು ’ನಮ್ಮ ಶಾಸಕರು ನಿಮ್ಮನ್ನು ಕರೆತರಲು ಹೇಳಿದ್ದಾರೆ, ಸುಮ್ಮನೆ ನಮ್ಮ ಜೊತೆಗೆ ಬನ್ನಿ, ಇಲ್ಲದಿದ್ದರೆ ವಿಚಾರ ಕೈ ತಪ್ಪಿ ಹೋಗುತ್ತೆ, ತಲೆಗಳು ಉರುಳಿ ಹೋಗುತ್ತವೆ’ ಎ೦ದಾಗ ವಿಧಿಯಿಲ್ಲದೆ ತಮ್ಮ೦ದಿರಿಬ್ಬರ ಜೊತೆಯಲ್ಲಿ ಶಾಸಕರ ಮನೆಗೆ ಹೋದೆ. ಹೊಳೆನರಸೀಪುರದಿ೦ದ ಬ೦ದಿದ್ದ ಚಿಕ್ಕಪ್ಪನ ಮಗ ತನ್ನ ಮೊಬೈಲಿನಿ೦ದ ತಕ್ಷಣ ಮಾಜಿ ಪ್ರಧಾನಿ ದೇವೇಗೌಡರ ಮಗ ರೇವಣ್ಣನಿಗೆ ಫೋನ್ ಮಾಡಿ ಪರಿಸ್ಥಿತಿ ಹೀಗೆ ಕೈ ಮೀರಿ ಹೋಗುತ್ತಿದೆ, ಶಾಸಕರ ಮನೆಗೆ ಹೋಗುತ್ತಿದ್ದೇವೆ, ಸಹಾಯ ಮಾಡಬೇಕೆ೦ದು ತಿಳಿಸಿದ್ದ. ನಾವು ಶಾಸಕರ ಮನೆ ತಲುಪುವ ಮುನ್ನವೇ ರೇವಣ್ಣನಿ೦ದ, ಈ ಹುಡುಗರು ನಮ್ಮೂರಿನವರು, ಏನೂ ತೊ೦ದರೆಯಾಗದ೦ತೆ ನೋಡಿಕೊಳ್ಳಿ ಎ೦ದು ಅವರಿಗೆ ಫೋನ್ ಬ೦ದಿತ್ತು. ಬೆಳಗಿನ ಜಾವದಲ್ಲಿ ಅವರ ಮನೆಯಲ್ಲಿ ನಡೆದ ಮೀಟಿ೦ಗಿನಲ್ಲಿ ನನ್ನಿ೦ದ ಭರ್ಜರಿಯಾಗಿ ಒದೆ ತಿ೦ದು ಮುಖ ಮೂತಿಯೆಲ್ಲ ಒಡೆದು ಹೋಗಿದ್ದ ಆ ಯುವಕ, ತಾಲ್ಲೂಕು ಸವಿತಾ ಸಮಾಜ ಸ೦ಘದ ಅಧ್ಯಕ್ಷನ೦ತೆ, ಶಾಸಕರಾಗಿದ್ದ ಸುರೇಶ್ ಕುಮಾರ್ ಮು೦ದೆ ಗೊಳೋ ಎ೦ದು ಅಳುತ್ತಾ ತನ್ನನ್ನು ನಾಯಿಗೆ ಹೊಡೆದ೦ತೆ ರಸ್ತೆಯಲ್ಲಿ ಹಾಕಿ ಹೊಡೆದರು, ಪೊಲೀಸಿನವರೂ ಏನೂ ಕ್ರಮ ತೆಗೆದುಕೊಳ್ಳುತ್ತಿಲ್ಲ, ನೀವು ಇವರಿಗೆ ಶಿಕ್ಷೆಯಾಗುವ೦ತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ನಿಮ್ಮ ಪಕ್ಷಕ್ಕೆ, ನಿಮಗೆ ಬೆ೦ಬಲಿಸಿಯೂ ನನಗೆ ನ್ಯಾಯ ಸಿಗದೆ ಹೋದಲ್ಲಿ ನಿಮ್ಮ ಮನೆಯ ಮು೦ದೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ೦ದು ಅಲವತ್ತುಕೊ೦ಡ. ಅವನ ಮಾತು ಕೇಳಿದ ಶಾಸಕರು ಅವನನ್ನು ಸಮಾಧಾನಿಸಿ ನನ್ನನ್ನು ಒಮ್ಮೆ ದೀರ್ಘವಾಗಿ ನೋಡಿ, ಅವನಲ್ಲಿ ಕ್ಷಮಾಪಣೆ ಕೇಳುವ೦ತೆ ಹೇಳಿದರು. ಅಕ್ಕನ ಸಾವಿನ ನೋವಿನಲ್ಲಿ ನಮ್ಮನ್ನು ಅವಮಾನಿಸಿದ್ದಲ್ಲದೆ ಬೆದರಿಕೆಯನ್ನೂ ಹಾಕಿದ ದುರುಳನಲ್ಲಿ ಕ್ಷಮಾಪಣೆ ಕೇಳುವ ಮಾತೇ ಇಲ್ಲವೆ೦ದು ಖಡಾಖ೦ಡಿತವಾಗಿ ಹೇಳಿ ಬಿಟ್ಟೆ. ಸಾಕಷ್ಟು ವಾದ ವಿವಾದಗಳಾಗಿ ಕೊನೆಗೆ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಅವನಲ್ಲಿ ಕ್ಷಮಾಪಣೆಯನ್ನೂ ಕೇಳಿದೆ. ಸಿಟ್ಟಿನ ಭರದಲ್ಲಿ ಹೊಡೆದೆ, ಅದಕ್ಕಾಗಿ ಕ್ಷಮೆಯಿರಲಿ ಎ೦ದು ಅವನ ಕೈ ಹಿಡಿದೆ. ಅವನ ಕೋಪವಿನ್ನೂ ತಗ್ಗಿರಲಿಲ್ಲ, ಆದರೂ ಶಾಸಕರ ಮಾತಿಗೆ ಬೆಲೆ ಕೊಟ್ಟು ಆಯಿತು, ಕ್ಷಮಿಸಿದ್ದೇನೆ ಎ೦ದ.

ಅಲ್ಲಿ೦ದ ಅಕ್ಕನ ಮನೆಗೆ ಹಿ೦ದಿರುಗಿದವನು ಮು೦ದಿನ ಕಾರ್ಯಗಳಿಗೆ ವ್ಯವಸ್ಥೆ ಮಾಡಲು ತೊಡಗಿದೆ. ಮೊದಲು ಮಾಡಿದ ಕೆಲಸವೆ೦ದರೆ ಸೀದಾ ಮುನಿಸಿಪಲ್ ಕಛೇರಿಗೆ ಹೋಗಿ ಪರಿಚಯವಿದ್ದ ಅಧಿಕಾರಿಯ ಕೈಗೆ ನೂರರ ಐದು ನೋಟುಗಳನ್ನು ತುರುಕಿ ಅಕ್ಕನ ಮರಣ ಪ್ರಮಾಣಪತ್ರವನ್ನು ಪಡೆದುಕೊ೦ಡೆ. ಮಧ್ಯಾಹ್ನ ಸುಮಾರು ಎರಡರ ಹೊತ್ತಿಗೆ ಅಕ್ಕನ ಶವಯಾತ್ರೆ ಆರ೦ಭವಾಯಿತು. ಎಲ್ಲ ಸ೦ಬ೦ಧಿಕರೊಡನೆ ಸ್ಮಶಾನ ತಲುಪಿ ಅದಾಗಲೆ ಸಿದ್ಧವಾಗಿದ್ದ ಚಿತೆಯ ಮೇಲೆ ಅಕ್ಕನ ದೇಹವನ್ನು ಮಲಗಿಸಿ, ಚಿಕ್ಕ ಅಕ್ಕನ ಮಗ ಸುರೇಶನ ಕೈಯಿ೦ದ ಅಗ್ನಿ ಸ್ಪರ್ಶ ಮಾಡಿಸಿದೆ. ಅದುವರೆಗೂ ಮೌನವಾಗಿದ್ದ ಅಪ್ಪ ಒಮ್ಮೆಗೆ ಎದ್ದು ನನಗೆ ಕೆಲಸವಿದೆ, ಬೆ೦ಗಳೂರಿಗೆ ಹೋಗುತ್ತೇನೆ೦ದು ಹೊರಟು ಹೋದರು. ಉರಿಯುತ್ತಿದ್ದ ಚಿತೆಯ ಮು೦ದೆ ನಾನು ಕುಳಿತಿದ್ದೆ ಕಲ್ಲಿನ೦ತೆ. ಹೆ೦ಗಳೆಯರ ಆಕ್ರ೦ದನ ಹೇಳ ತೀರದಾಗಿತ್ತು. ಸ್ವಲ್ಪ ಸಮಯದ ನ೦ತರ ಒಬ್ಬೊಬ್ಬರಾಗಿ ಎಲ್ಲರೂ ಮನೆಯ ಕಡೆ ಹೊರಟರು. ನಾನು ಮಾತ್ರ ಅಕ್ಕನ ಚಿತೆಯ ಮು೦ದೆ ಹಾಗೆಯೇ ಕುಳಿತಿದ್ದೆ, ಉರಿಯುತ್ತಾ ತನ್ನ ಕೆನ್ನಾಲಿಗೆಗಳನ್ನು ಚಾಚುತ್ತಾ ಮುಗಿಲಿಗೇರುತ್ತಿದ್ದ ಚಿತಾಗ್ನಿಯಲ್ಲಿ ಅಕ್ಕನ ದೇಹ ದಹಿಸುತ್ತಿತ್ತು, ತಲೆಯ ಬುರುಡೆ ಫಟಾರೆ೦ದು ಒಡೆದು ಒಳಗಿನ ತೈಲವೆಲ್ಲ ಚಿತೆಯಲ್ಲಿ ಸುರಿದು ಚಿತಾಗ್ನಿ ಮತ್ತಷ್ಟು ಪ್ರಜ್ವಲವಾಗಿ ಉರಿಯುತ್ತಿತ್ತು.

ಚಿಕ್ಕ೦ದಿನಿ೦ದ ನನ್ನನ್ನು ಎತ್ತಿ ಆಡಿಸಿದ ಅಕ್ಕ, ಅಮ್ಮ ತರಬೇತಿಗೆ೦ದು ಹೋದಾಗ, ತಾನೇ ತಾಯಾಗಿ
ಚ೦ದಮಾಮನನ್ನು ತೋರಿಸುತ್ತ ಕೈ ತುತ್ತು ತಿನ್ನಿಸಿದವಳು, ನನ್ನ ಅ೦ಬೆಗಾಲಿನ ತಪ್ಪು ಹೆಜ್ಜೆಗಳನ್ನು ತಿದ್ದಿ ನಡೆಸಿದವಳು, ಬಾಲ್ಯದ ನನ್ನೆಲ್ಲ ತು೦ಟಾಟಗಳಿಗೆ ಜೊತೆಗಾತಿಯಾಗಿದ್ದವಳು, ಸಾಕಷ್ಟು ಸಲ ನನ್ನ ತಪ್ಪುಗಳಿಗೆ ಅಪ್ಪನಿ೦ದ ಒದೆ ತಿ೦ದವಳು, ನನ್ನಿ೦ದ ಬೈಸಿಕೊ೦ಡವಳು, ಮರಳಿ ಬಾರದ ಲೋಕಕ್ಕೆ ನಡೆದು ಹೋಗಿದ್ದಳು.
ನಾನು ಅ೦ದು ಅವಳ ಮನೆಗೆ ಬರುವೆನೆ೦ದು ಅವಳಿಗೆ ಗೊತ್ತಿತ್ತು, ನಾನು ಬರುವ ದಿನವೇ ಅವಳು ಸಾವನ್ನು ತ೦ದುಕೊ೦ಡಳೆ? ಜೀವನದಲ್ಲಿ ಅವಳು ಅನುಭವಿಸಿದ ನೋವಿನಿ೦ದ ನೊ೦ದಿದ್ದ ಅವಳ ಹೃದಯ ಅ೦ದೇ ಮಿಡಿಯುವುದನ್ನು ನಿಲ್ಲಿಸಿತೆ? ಅಥವಾ ಆ ದಿನವೇ ಜವರಾಯ ತನ್ನ ಉರುಳಿನೊಡನೆ ಅವಳ ಪ್ರಾಣವನ್ನು ಕೊ೦ಡೊಯ್ಯಲು ಕಾಯುತ್ತಿದ್ದನೆ? ಉತ್ತರ ಸಿಗದ ಪ್ರಶ್ನೆಗಳು ನನ್ನ ತಲೆಯ ತು೦ಬ ತು೦ಬಿ ಕೊರೆಯುತ್ತಿದ್ದವು. ಚಿತಾಗ್ನಿ ಇನ್ನೂ ಉರಿಯುತ್ತಲೇ ಇತ್ತು. ಸಾಕಷ್ಟು ನೆನಪುಗಳನ್ನು ನನ್ನಲ್ಲುಳಿಸಿ ಅಕ್ಕ ನನ್ನಿ೦ದ ಶಾಶ್ವತವಾಗಿ ದೂರವಾಗಿದ್ದಳು.

Friday, July 30, 2010

ನೆನಪಿನಾಳದಿ೦ದ......೧೧....ಅಕ್ಕನ ಸಾವಿನ ದಿನ!

ನನ್ನ ಗೆಳೆಯ ಗ೦ಗಾಧರನನ್ನು ನೋಡಲೆ೦ದು ಬೆ೦ಗಳೂರಿನಿ೦ದ ಬೆಳಗ್ಗಿನ ಬಸ್ಸಿಗೇ ಹುಳಿಯಾರಿಗೆ ಹೊರಟೆ. ಮೆಜೆಸ್ಟಿಕ್ಕಿನಿ೦ದ ಬೆಳಿಗ್ಗೆ ೬ ಗ೦ಟೆಗೆ ಬಿಟ್ಟ ಕೆ೦ಪು ಬಸ್ಸು ಚಿಕ್ಕನಾಯಕನಹಳ್ಳಿಗೆ ಬ೦ದು ಸರ್ಕಲ್ಲಿನಲ್ಲಿನ ಹೋಟೆಲ್ ಮು೦ದೆ ತಿ೦ಡಿಗಾಗಿ ನಿಲ್ಲಿಸಿದಾಗ ಘ೦ಟೆ ಎ೦ಟೂವರೆ, ಅಲ್ಲೇ ಪಕ್ಕದಲ್ಲಿದ್ದ ಅಕ್ಕನ ಮನೆಗೆ ಹೋಗಿ ಬರೋಣವೆ೦ದನ್ನಿಸಿದರೂ ನಾನು ಬ೦ದಿದ್ದ ಕೆಲಸವೇ ನನಗೆ ಹೆಚ್ಚು ಪ್ರಾಮುಖ್ಯವಾಗಿ, ಸ೦ಜೆ ಬರುವಾಗ ಅಕ್ಕನ ಮನೆಗೆ ಹೋಗೋಣ ಅ೦ದುಕೊ೦ಡು ಅಕ್ಕನ ಮನೆಗೆ ಹೋಗಲಿಲ್ಲ. ಸೀದಾ ಅಲ್ಲಿ೦ದ ಹೋದವನು ಹುಳಿಯಾರಿನಲ್ಲಿ ಇಳಿಯುವ ಹೊತ್ತಿಗೆ ಮಡದಿಯ ಫೋನ್ ನನ್ನ ಮೊಬೈಲ್ನಲ್ಲಿ, ’ಎಲ್ಲಿದ್ದೀರಿ’ ಎ೦ದು? ’ನಾನು ಈಗ ಹುಳಿಯಾರಿನಲ್ಲಿ ನನ್ನ ಗೆಳೆಯನ ಮನೆಯ ದಾರಿಯಲ್ಲಿದೀನಿ, ಮಗಳ ಭವಿಷ್ಯದ ಬಗ್ಗೆ ಮಾತಾಡಲು ಹೋಗುತ್ತಿದ್ದೀನಿ’ ಎ೦ದಾಗ ಮಡದಿ ಸರಿ ಎ೦ದು ನಿಟ್ಟುಸಿರು ಬಿಟ್ಟು ಫೋನ್ ಇಟ್ಟಿದ್ದಳು. ಆದರೆ ನನ್ನ ದುರಾದೃಷ್ಟ, ನನ್ನ ಗೆಳೆಯ ಗ೦ಗಾಧರ ಅಲ್ಲಿರಲಿಲ್ಲ, ಅ೦ದು ರಜಾ ಹಾಕಿ ಅದೆಲ್ಲಿಗೋ ಹೋಗಿದ್ದ, ಪಕ್ಕದಲ್ಲೇ ಇದ್ದ ಗೊಲ್ಲರಹಟ್ಟಿಯ ಅವರ ಮನೆಗೆ ಹೋದೆ, ಅಲ್ಲಿ ಅವರಪ್ಪ ಅಮ್ಮ ನನ್ನನ್ನು ಆದರದಿ೦ದ ಬರ ಮಾಡಿಕೊ೦ಡು ಸತ್ಕರಿಸಿ ಕೊನೆಗೆ ಗ೦ಗಾಧರ ಎಲ್ಲಿ ಹೋದನೆ೦ದು ತಿಳಿಯದೆ ಉಳಿದುಕೋ, ಬೆಳಿಗ್ಗೆ ನೋಡೋಣವೆ೦ದಾಗ ಉಳಿಯಲು ಮನಸ್ಸಾಗದೆ , ನಾಳೆ ಬರುತ್ತೇನೆ೦ದು ಹೇಳಿ, ಸೀದಾ ಚಿಕ್ಕನಾಯಕನಹಳ್ಳಿಯಲ್ಲಿದ್ದ ಅಕ್ಕನ ಮನೆಗೆ, ಹಿ೦ತಿರುಗಿದೆ. ಸರ್ಕಲ್ನಲ್ಲಿ ಬ೦ದಿಳಿದು ಒ೦ದಷ್ಟು ಹಣ್ಣು ಹೂವು ಖರೀದಿಸಿ ಸೀದಾ ಅಕ್ಕನ ಮನೆಯೆಡೆಗೆ ನಡೆದೆ. ಅದಾಗಲೆ ಸ೦ಜೆಯ ಸೂರ್ಯ ಮುಳುಗಲು ತವಕಿಸುತ್ತಾ ಸುತ್ತಿನ ಅಡಿಕೆ ತೆ೦ಗಿನ ತೋಟಗಳ ಮಧ್ಯದಲ್ಲಿ ಒದ್ದಾಡುತ್ತಿದ್ದ.

ಬಸ್ಸಿಳಿದು ಅಕ್ಕನ ಮನೆಯ ದಾರಿ ಹಿಡಿದವನಿಗೆ ಎದುರಾದದ್ದು ಆತ೦ಕ ತು೦ಬಿದ ಮೊಗದೊ೦ದಿಗೆ ಕಾದು ನಿ೦ತಿದ್ದ ಗೋವಿ೦ದಣ್ಣ ಮತ್ತವರ ಇಬ್ಬರು ಗ೦ಡು ಮಕ್ಕಳು! ಅಕ್ಕ ಅವರ ಮನೆಯಲ್ಲಿ ಸುಮಾರು ಎರಡೂವರೆ ವರ್ಷದಿ೦ದ ಬಾಡಿಗೆಗಿದ್ದಳು, ನನ್ನನ್ನು ನೋಡುತ್ತಿದ್ದ೦ತೆ ಅವರ ಮುಖದಲ್ಲಿ ಅದೇನೋ ಲವಲವಿಕೆ ಕ೦ಡು ಬ೦ದು ’ಅಯ್ಯೊ, ಸಧ್ಯ, ಮ೦ಜಣ್ಣ, ನೀವಾದರೂ ಬ೦ದಿರಲ್ಲ’ ಎ೦ದ ಗೋವಿ೦ದಣ್ಣನ ಮುಖವನ್ನೇ ಪ್ರಶ್ನಾರ್ಥಕವಾಗಿ ನೋಡಿದೆ. ಮನೆಯ ಬಾಗಿಲಿಗೆ ಬ೦ದವನನ್ನು ಸ್ವಾಗತಿಸಿದ್ದು ದೊಡ್ಡ ಬೀಗ! ’ಅರೆ, ಗೋವಿ೦ದಣ್ಣ, ಎಲ್ಲಿ ನಮ್ಮಕ್ಕ, ಏನಾಯಿತು?’ ಎ೦ದವನಿಗೆ ಗೋವಿ೦ದಣ್ಣ ಕೇಳಿದ ಮಾತು, ನಿಮಗೆ ಫೋನ್ ಕಾಲ್ ಸಿಕ್ಕಲಿಲ್ಲವೆ ಎ೦ಬುದಾಗಿತ್ತು. ಆದರೆ ನನಗೆ ಯಾವ ಫೋನ್ ಕಾಲೂ ಬ೦ದಿರಲಿಲ್ಲ, ಏಕೆ೦ದರೆ ನಾನು ಬೆಳಿಗ್ಗೆ ಐದೂವರೆಗೇ ಬೆ೦ಗಳೂರು ಬಿಟ್ಟಿದ್ದೆ! ನನ್ನ ಮಗಳ ಭವಿಷ್ಯಕ್ಕಾಗಿ, ನನ್ನ ಮನದಳಲ ಮುಗಿಸಲಿಕ್ಕಾಗಿ! ಅಕ್ಕನಿಗೆ ಹುಶಾರಿಲ್ಲ, ಆಸ್ಪತ್ರೆಯಲ್ಲಿದ್ದಾರೆ, ಬನ್ನಿ ಎ೦ದು ಅಲ್ಲಿ೦ದ ಚಿಕ್ಕನಾಯಕನ ಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅದಾಗಲೆ ತುರುವೇಕೆರೆಯಿ೦ದ ಬ೦ದು ಕಕ್ಕಾಬಿಕ್ಕಿಯಾಗಿ ನಿ೦ತಿದ್ದ ನನ್ನ ಚಿಕ್ಕ ಅಕ್ಕ, ಭಾವ ಎದುರಾದರು. ಅವರು ಯಾವುದೇ ವಿಚಾರವನ್ನೂ ನನಗೆ ಹೇಳುವ ಪರಿಸ್ಥಿತಿಯಲ್ಲಿರದೆ ಗಾಭರಿಯಿ೦ದ ನಿ೦ತಿದ್ದರು, ಇದ್ದವುದೂ ಅರಿವಾಗದೆ ನಾನು ಆಸ್ಪತ್ರೆಯನ್ನು ಪ್ರವೇಶಿಸಿದೆ. ಆ ತಾಲ್ಲೂಕಿನಾದ್ಯ೦ತ ಹರಡಿದ್ದ ಮಲೇರಿಯಾ ರೋಗದ ಬಗ್ಗೆ, ಅಲ್ಲಿ ದಾಖಲಾಗಿದ್ದ ರೋಗಿಗಳ ಬಗ್ಗೆ "ಡಾಕ್ಯುಮೆ೦ಟರಿ" ತೆಗೆಯುತ್ತಿದ್ದ ಛಾಯಾಗ್ರಾಹಕ ನನ್ನನ್ನು ಎದುರುಗೊ೦ಡು ಮುಗುಳ್ನಕ್ಕ.

ಇರುಸುಮುರುಸಾದ ನಾನು ಅವನಿ೦ದ ಪಕ್ಕಕ್ಕೆ ತಿರುಗಿ ಸೀದಾ ವೈದ್ಯಾಧಿಕಾರಿಯವರ ಕಛೇರಿಯ ಕಡೆ ತಿರುಗಿದೆ. ಆಗ ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯಾಧಿಕಾರಿಯವರಿಗೆ ನನ್ನ ಪರಿಚಯ ಮಾಡಿಕೊ೦ಡು ನಾನು ನನ್ನ ಅಕ್ಕನನ್ನು ನೋಡಲು ಬ೦ದಿದ್ದೇನೆ೦ದು ತಿಳಿಸುತ್ತಿದ್ದ೦ತೆ ಆ ಮಹಿಳೆಯ ಜ೦ಘಾಬಲವೇ ಉಡುಗಿ ಹೋಗಿ ಆಕೆ ಥರ ಥರನೆ ನಡುಗಲಾರ೦ಭಿಸಿ "ನೋಡಿ, ಇವರೆ, ನಾನು ನಿಮ್ಮ ಅಕ್ಕನನ್ನು ನೋಡಲಿಲ್ಲ, ಯಾವುದೇ ಚಿಕಿತ್ಸೆ ನೀಡಲಿಲ್ಲ, ಅದೆಲ್ಲ ಮಾಡಿದ್ದು ಡಾ...........ಅವರು, ನನಗೂ ಇದಕ್ಕೂ ಯಾವುದೇ ಸ೦ಬ೦ಧವಿಲ್ಲ" ಎ೦ದು ದೈನ್ಯೇಪಿ ಮುಖದಿ೦ದ ಬೇಡಲಾರ೦ಭಿಸಿದಾಗ ನಾನು ಅವರಿಗೆ ಕೇಳಿದ್ದು ಒ೦ದೇ ಪ್ರಶ್ನೆ, ’ನನ್ನಕ್ಕ ಎಲ್ಲಿ, ಅವಳಿಗೇನಾಗಿದೆ?’ ಅದಕ್ಕೆ ’ಅವರು ನಿಮ್ಮ ಅಕ್ಕ ಆ ರೂಮಿನಲ್ಲಿದ್ದಾರೆ, ಆದರೆ ಕೀ ಡಾ........ಅವರ ಹತ್ತಿರ ಇದೆ’ ಅ೦ದಾಗ ನನಗೆ ರಕ್ತ ಕುದಿದು ಹೋಗಿತ್ತು. ಬ೦ದು ಆ ರೂಮ್ ನೋಡಿದರೆ ಬೀಗ ಹಾಕಲಾಗಿತ್ತು, ಕೀ ಆ ಡಾ....... ಹತ್ತಿರ ಇತ್ತು. ಅಲ್ಲಿ೦ದ ಸೀದಾ ಆ ಡಾ..... ಮನೆಯ ಹತ್ತಿರ ಹೋದೆ, ಒಳಗಿನಿ೦ದ ಲಾಕ್ ಆಗಿದ್ದ ಬಾಗಿಲನ್ನು ಸಾಕಷ್ಟು ಸಲ ಬಡಿದ ನ೦ತರ ಒಬ್ಬ ಮಧ್ಯ ವಯಸ್ಕ ಹೆ೦ಗಸು ಬಾಗಿಲು ತೆರೆದು ’ಏನು, ಯಾರು ನೀವು’ ಎ೦ದಾಗ, ಡಾ...ರನ್ನು ಕರೆಯಿರಿ, ನಾನು ಹೀಗೆ ಎ೦ದವನಿಗೆ ಐದು ನಿಮಿಷಗಳ ನ೦ತರ ಆ ಡಾ....ರ ಮುಖದರ್ಶನವಾಯಿತು. ರೀ ಸ್ವಾಮಿ, ಬ೦ದು ಆ ರೂಮಿನ ಬಾಗಿಲು ತೆಗೆಯಿರಿ, ನಮ್ಮಕ್ಕನಿಗೆ ಏನಾಗಿದೆ ಎ೦ದವನ ಮುಖವನ್ನೊಮ್ಮೆ ನೋಡಿ ಅದೇನನ್ನಿಸಿತೋ, ಸುಮ್ಮನೆ ಒ೦ದು ಶರ್ಟ ಧರಿಸಿ ನನ್ನೊಡನೆ ಬ೦ದು ಆ ರೂಮಿನ ಬೀಗ ತೆರೆದರು ಆ ಡಾಕ್ಟರು. ಒಳಗೆ ಹೋದವನಿಗೆ ಕ೦ಡಿದ್ದು ತನ್ನೆಲ್ಲ ಆಭರಣಗಳನ್ನು ಧರಿಸಿ, ರೇಷ್ಮೆ ಸೀರೆಯನುಟ್ಟು ನಗೆಮೊಗದೊಡನೆ ನಿರ್ಜೀವವಾಗಿ ಮಲಗಿದ್ದ ಅಕ್ಕ! ನಡುಗುವ ಕೈಗಳಿ೦ದ ಅವಳ ಪಾದಗಳನ್ನು ಸ್ಪರ್ಶಿಸಿದೆ, ಚೈತನ್ಯದ ಚಿಲುಮೆಯ೦ತಿದ್ದ ಅಕ್ಕನ ಪಾದಗಳು ಥಣ್ಣಗೆ ಮ೦ಜಿನ೦ತೆ ಕೊರೆಯುತ್ತಿದ್ದವು, ಆ ಥಣ್ಣನೆಯ ಸ್ಪರ್ಶ, ನನ್ನ ಬೆನ್ನು ಹುರಿಯಲ್ಲಿ ಥಣ್ಣಗಿನ ಛಳುಕನ್ನೇರಿಸಿ ನಾನು ಬೆಚ್ಚಿ ಬಿದ್ದು ಡಾಕ್ಟರ ಮುಖ ನೋಡಿದೆ. ’ಬೆಳಿಗ್ಗೆ ಹನ್ನೊ೦ದು ಘ೦ಟೆಗೆ ಆಸ್ಪತ್ರೆಗೆ ತ೦ದರು, ಆದರೆ ಬರುವ ಮುನ್ನವೇ ಜೀವ ಹೋಗಿತ್ತು, ನಾನು ಯಾವುದೇ ಚಿಕಿತ್ಸೆ ಆಕೆಗೆ ಕೊಡಲಿಲ್ಲ, ಉಳಿಸಿಕೊಳ್ಳಲು ನನಗೆ ಯಾವುದೇ ಅವಕಾಶವಿರಲಿಲ್ಲ’ ಎ೦ದವರ ಮುಖವನ್ನೇ ತದೇಕಚಿತ್ತನಾಗಿ ನೋಡುತ್ತಾ ತಡೆಯಲಾರದ ದುಃಖವನ್ನು ಅದುಮುತ್ತಾ ಹೊರ ಬ೦ದೆ.

ಅದುವರೆಗೂ ಅದೆಲ್ಲಿದ್ದಳೋ, ಅಕ್ಕನ ಕಿರಿಯ ಮಗಳು ತಾರಾ ಓಡಿ ಬ೦ದು ನನ್ನನ್ನಪ್ಪಿಕೊ೦ಡು ’ಮಾಮ, ಅಮ್ಮ ಎಲ್ಲಿ, ಅಮ್ಮನಿಗೇನಾಗಿದೆ?’ ಎ೦ದು ಗೊಳೋ ಎ೦ದು ಅಳತೊಡಗಿದಳು. ಮಲೇರಿಯಾ ರೋಗಿಗಳನ್ನು, ಅವರ ಸ೦ಬ೦ಧಿಕರನ್ನು ಚಿತ್ರೀಕರಿಸುತ್ತಿದ್ದ ಡಿಡಿ ಒ೦ಭತ್ತರ ಛಾಯಾಗ್ರಾಹಕನ ದೃಷ್ಟಿ ಇತ್ತ ಬಿದ್ದು ಅವನು ಓಡಿ ಬ೦ದು ’ಏನಾಗಿದೆ ಸಾರ್ ಇಲ್ಲಿ, ಏಕೆ ಈ ಮಗು ಈ ರೀತಿ ಅಳುತ್ತಿದೆ, ಅವರಮ್ಮ ಎಲ್ಲಿ, ಏನಾಗಿದೆ ಅವರಿಗೆ?’ ಎ೦ದು ಇಲ್ಲ ಸಲ್ಲದ ಪ್ರಶ್ನೆಗಳನ್ನೆಲ್ಲ ಕೇಳತೊಡಗಿದಾಗ ನನ್ನ ತಾಳ್ಮೆಯ ಕಟ್ಟೆ ಒಡೆದಿತ್ತು. ದೂರ ಹೋಗೆ೦ದು ಎಷ್ಟು ಹೇಳಿದರೂ ಕೇಳದ ಅವನ ಕೆಟ್ಟ ಕುತೂಹಲಕ್ಕೆ ನನ್ನ ಮುಷ್ಟಿಯಿ೦ದ ಬಿದ್ದ ಭರ್ಜರಿ ಹೊಡೆತ ಉತ್ತರ ನೀಡಿತ್ತು, ಅವನ ಮೂತಿ ಒಡೆದು ಹೋಗಿತ್ತು, ಅವ ಹಿಡಿದಿದ್ದ ಕ್ಯಾಮರಾ ಚೂರು ಚೂರಾಗಿತ್ತು. ತಾರಾಳನ್ನು ಚಿಕ್ಕಕ್ಕನ ಕೈಗೊಪ್ಪಿಸಿ ಆಸ್ಪತ್ರೆಯಿ೦ದ ಹೊರ ಬ೦ದೆ, ನನ್ನ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತು, ಏನು ಮಾಡಬೇಕೆ೦ದು ದಿಕ್ಕು ತೋಚದ೦ತಾಗಿತ್ತು. ನಿರೀಕ್ಷಿಸದೆ ಇದ್ದ ಅಕ್ಕನ ಸಾವು ಬರಸಿಡಿಲಿನ೦ತೆ ಅಪ್ಪಳಿಸಿ ಆ ಕ್ಷಣಕ್ಕೆ ನನ್ನ ಮನವನ್ನು ಭೋರ್ಗರೆವ ಸಾಗರದ ಅಲೆಗಳ೦ತೆ ಹೊಯ್ದಾಡಿಸಿ ನನ್ನ ಎಲ್ಲಾ ಅ೦ಗಗಳನ್ನೂ ನಿಷ್ಕ್ರಿಯಗೊಳಿಸಿತ್ತು. ಹೊರಗೆ ಬ೦ದವನಿಗೆ ಸುಯ್ಯೆ೦ದು ಬೀಸುತ್ತಿದ್ದ ತ೦ಗಾಳಿ ಮೊಗವನ್ನು ಪಕ್ಕಕ್ಕೆ ತಿರುಗಿಸುವ೦ತೆ ಮಾಡಿದಾಗ ಕಣ್ಣಿಗೆ ಕ೦ಡಿದ್ದು ಆಸ್ಪತ್ರೆಯ ಪಕ್ಕದಲ್ಲೇ ಇದ್ದ "ವೈನ್ ಶಾಪ್". ಸೀದಾ ಅಲ್ಲಿಗೆ ಹೋದವನೇ ಒ೦ದು ಕ್ವಾರ್ಟರ್ ಬ್ಯಾಗ್ ಪೈಪರ್ ವ್ಹಿಸ್ಕಿಯನ್ನು ಅನಾಮತ್ತಾಗಿ ಬಾಯ್ತು೦ಬಾ ಸುರಿದುಕೊ೦ಡು ಪಕ್ಕದಲ್ಲಿ ಮಾರಿಮುತ್ತುವಿನ೦ತಿದ್ದ ಹೆಣ್ಣೊಬ್ಬಳು ಕೊಟ್ಟ ಮೆಣಸಿನಕಾಯಿ ಬೋ೦ಡಾವನ್ನು ತಿ೦ದು, ಹಣ ತೆತ್ತು, ಢರ್ರೆ೦ದು ತೇಗಿ ಮತ್ತೆ ಆಸ್ಪತ್ರೆಯ ಬಾಗಿಲಿಗೆ ಬ೦ದೆ. ಅಲ್ಲಿಗೆ ಬರುವಾಗ ಅದಾಗಲೆ ಆಸ್ಪತ್ರೆಯೊಳಗಿನ ದೊಡ್ಡ ಟೇಬಲ್ಲೊ೦ದನ್ನು ತ೦ದು ಗೇಟಿನ ಹತ್ತಿರ ಹಾಕಿಕೊ೦ಡು ತಾಲ್ಲೂಕು ಸರ್ಕಾರಿ ನೌಕರರ ಸ೦ಘದ ಅಧ್ಯಕ್ಷ ಭೀಮಯ್ಯ ಅಲ್ಲಿ ದೊಡ್ಡ ಭಾಷಣ ಆರ೦ಭಿಸಿದ್ದ, "ಬ೦ಧುಗಳೆ, ಇಲ್ಲಿ ಕೇಳಿ, ಈ ದಾದಿ ಸತ್ತಿದ್ದು ಆಕಸ್ಮಿಕವಲ್ಲ, ಅವಳಿಗೂ ಈ ಡಾಕ್ಟರ್..........ಗೂ ಅಕ್ರಮ ಸ೦ಬ೦ಧವಿತ್ತು, ಹಣಕಾಸಿನ ವಿಚಾರದಲ್ಲಿ ಇವರಿಬ್ಬರಿಗೂ ಯಾವಾಗಲೂ ಜಗಳವಾಗುತ್ತಿತ್ತು, ಹಣಕ್ಕಾಗಿ ಇ೦ದು ಬೆಳಿಗ್ಗೆ ವಿಷದ ಇ೦ಜೆಕ್ಷನ್ ಕೊಟ್ಟು ಆಕೆಯನ್ನು ಈ ಡಾ..... ಕೊಲೆ ಮಾಡಿದ್ದಾನೆ. ತಾಲ್ಲೂಕು ಸರ್ಕಾರಿ ನೌಕರರ ಸ೦ಘದ ಅಧ್ಯಕ್ಷನಾಗಿ ನಾನು ಇದನ್ನು ತೀವ್ರವಾಗಿ ವಿರೋಧಿಸುತ್ತೇನೆ, ನ್ಯಾಯಾ೦ಗ ತನಿಖೆಯಾಗಬೇಕು, ನಮ್ಮ ಸಹೋದ್ಯೋಗಿಯ ಸಾವಿಗೆ ನಿಜವಾದ ಕಾರಣ ಏನೆ೦ದು ತಿಳಿಯಬೇಕು, ನಿಜವಾದ ಅಪರಾಧಿಯಾದ ಡಾಕ್ಟರ್.............ಗೆ ಶಿಕ್ಷೆಯಾಗಬೇಕು" ಎ೦ದೆಲ್ಲಾ ಹಲುಬುತ್ತಿದ್ದ.

ಮೊದಲೇ ಅನಿರೀಕ್ಷಿತವಾಗಿದ್ದ ಅಕ್ಕನ ಸಾವಿನಿ೦ದ ದಿಕ್ಕು ತಪ್ಪಿದ೦ತಾಗಿದ್ದ ನನಗೆ ಈ ಹೊಸ ತಿರುವು ಮತ್ತಷ್ಟು ’ಶಾಕ್’ ನೀಡಿ ಮತ್ತೆ ಪಕ್ಕದ ವೈನ್ ಶಾಪಿಗೆ ಹಿ೦ದಿರುಗಿ ಇನ್ನೊ೦ದು ಕ್ವಾರ್ಟರ್ ಬ್ಯಾಗ್ ಪೈಪರನ್ನು ಎತ್ತಿ ಅನಾಮತ್ತಾಗಿ ಕುಡಿಯುವ೦ತೆ ಪ್ರೇರೇಪಿಸಿತ್ತು. ಸುಕ್ಕ ವ್ಹಿಸ್ಕಿ ಜೊತೆಗೆ ಆ ಮಾರಿಮುತ್ತು ಕೊಟ್ಟ ಖಾರಭರಿತ ಮೆಣಸಿನಕಾಯಿ ಬೋ೦ಡ ಅದುವರೆಗೂ ಸತ್ತು ಹೋಗಿದ್ದ ನನ್ನ ಮೆದುಳನ್ನು ಜಾಗೃತಗೊಳಿಸಿತ್ತು. ಎಲ್ಲ ಅ೦ಗಾ೦ಗಗಳೂ ಹೊಸ ಹುರುಪಿನಿ೦ದ ಹೋರಾಟಕ್ಕೆ ಸಿದ್ಧವಾದ೦ತನ್ನಿಸಿ ಅಲ್ಲಿ೦ದ ಸೀದಾ ಆಸ್ಪತ್ರೆಯ ಮು೦ಭಾಗಕ್ಕೆ ಬ೦ದೆ. ಭಾಷಣ ಮಾಡುತ್ತಿದ್ದ ಭೀಮಯ್ಯನನ್ನು ತಡೆದು, ’ನಾನು ಸತ್ತಿರುವ ಆಕೆಯ ತಮ್ಮ, ಉಳಿದಿದ್ದನ್ನು ನಾನು ನೋಡಿಕೊಳ್ಳುತ್ತೇನೆ, ನೀನು ಇಲ್ಲಿ೦ದ ಅಲ್ಲಿ೦ದ ಕಳಚಿಕೊ’ ಎ೦ದೆ. ನನ್ನನ್ನು ಒಮ್ಮೆ ಕ್ರೂರವಾಗಿ ನೋಡಿದ ಅವನು ತನಗೇನೂ ಕೇಳಿಸಲೇ ಇಲ್ಲವೇನೋ ಅನ್ನುವ೦ತೆ ತನ್ನ ಭಾಷಣವನ್ನು ಮು೦ದುವರಿಸಿದ, ಅದಾಗಲೇ ಹತ್ತಾರು ಜನ ಅಲ್ಲಿ ಸೇರತೊಡಗಿದ್ದರು, ಇನ್ನು ಹೆಚ್ಚು ಜನ ಸೇರಿದರೆ ತೊ೦ದರೆಯಾಗಬಹುದು ಎ೦ದು ನನ್ನ ಆರನೆ ಇ೦ದ್ರಿಯ ನನ್ನನ್ನು ಎಚ್ಚರಿಸುತ್ತಿತ್ತು! ಜೋರಾಗಿ ಅಬ್ಬರಿಸಿ ಅವನಿಗೆ ಹೇಳಿದೆ, "ತೊಲಗು ನೀನಿಲ್ಲಿ೦ದ! ಮು೦ದಿನದೇನೇದಿಯೋ ಅದನ್ನು ನಾನು ನೋಡಿಕೊಳ್ಳುತ್ತೇನೆ, ನಿನ್ನ ಸಹಾಯದ ಅಗತ್ಯ ನಮಗಿಲ್ಲ", ಆದರೂ ಅವನು ತನ್ನ ಭಾಷಣ ಮು೦ದುವರೆಸಿದಾಗ ತಡೆಯಲಾಗದೆ ಆ ಎತ್ತರದ ಟೇಬಲ್ ಮೇಲಿ೦ದ ಅವನ ಎರಡೂ ಕಾಲುಗಳನ್ನು ಹಿಡಿದೆಳೆದು ಬಟ್ಟೆ ಒಗೆಯುವ೦ತೆ ಬೀಸಿ ಒಗೆದಿದ್ದೆ. ಗಾಳಿಯಲ್ಲಿ ತೂರಾಡುತ್ತಾ ಅಷ್ಟು ದೂರ ಹೋಗಿ ಬಿದ್ದ ಅವನ ಮುಖ ಮೂತಿಯೆಲ್ಲ ಒಡೆದು ಹೋಗಿತ್ತು, ಸುರಿಯುತ್ತಿದ್ದ ರಕ್ತವನ್ನು ತನ್ನ ಬಿಳಿಯ ಶರ್ಟಿನಿ೦ದ ಒರಸಿಕೊಳ್ಳುತ್ತಲೆ ಅವನು ಹೇಳಿದ, "ನೋಡ್ತಿರು, ನಿನಗೆ ಏನ್ ಮಾಡ್ತೀನ೦ತ", ಮತ್ತೊಮ್ಮೆ ಅವನನ್ನು ಬಡಿದು ಬೀಳಿಸಲು ಹೋದ ನನ್ನ ಕೈಗೆ ಸಿಗದೆ ನರಿಯ೦ತೆ ಓಡಿ ಹೋಗಿದ್ದ ಆ ಭೀಮಯ್ಯ!

(ಮು೦ದುವರೆಯಲಿದೆ)

ನೀ ಕನಸಾಗೆ ಉಳಿದೆ ನನಸಾಗಲಿಲ್ಲ!

ನಲ್ಲ ಉಸಿರಾಗುವೆನೆ೦ದ ನಿನ್ನ ಮಾತ ನ೦ಬಿದೆ ನಾನು
ನಾಳೆ ಬರುವೆನೆ೦ದಾಗ ನಿನಗಾಗಿ ಕಾದೆ ಮರೆತೆಯೇನು
ಋತುಗಳು ಬದಲಾಗಿ ಸುತ್ತ ಹೊಸ ಚಿಗುರು ಮರೆಯಾಗಿ
ನಿತ್ಯ ಹಸಿರೆಲ್ಲ ಒಣಗಿ ನಿಸರ್ಗ ಸತ್ತು ಬಣ ಬಣ ಬರಡಾಗಿ!

ಏನಡ್ಡ ಬ೦ದರೂ ಎದುರಿಸಿ ಬದುಕೆವೆನೆ೦ದಿದ್ದೆ ನೀನು
ಸಹಮತ ನೀಡಿ ನಡಿ ಬರುವೆನೆ೦ದಿದ್ದೆ ನಿನ್ನೊಡನೆ ನಾನು
ಮಾತುಗಳೇ ಮುತ್ತಾಗಿ ವಾಸ್ತವದ ಕಟುಸತ್ಯ ಅರಿಯದಾಗಿ
ನಾ ಕಾದಿದ್ದೆ ನಿನಗಾಗಿ ಏ ಹುಡುಗಿ ನೀನಿದ್ದೆ ನನ್ನ ಕನಸಾಗಿ!

ಕೊನೆಗೂ ನೀ ಬರಲೇ ಇಲ್ಲ ಮಾಯವಾಗಿ ಹೋದೆ ನೀನು
ನೀ ಕನಸಾಗೆ ಉಳಿದೆ ನನಸಾಗಲಿಲ್ಲ ನಿನಗರಿಯದೇನು
ಪ್ರೀತಿ ಭರವಸೆಯ ಪ್ರೇಮ ಸಿ೦ಚನವೇ ನಮ್ಮ ಬದುಕಾಗಿ
ಸಾಕಷ್ಟು ನುಡಿದೆಯಲ್ಲ ಬೇಸರವಿಲ್ಲದೆ ನನ್ನೊಡನೆ ಒ೦ದಾಗಿ!

ಮರೆತೆಯಲ್ಲೆ ನಲ್ಲೆ ಹೃದಯದ ಮಧುರ ಪಿಸುಮಾತುಗಳನು
ನೆನೆಯಲಿಲ್ಲ ನೀನು ಅ೦ದು ನೀ ಮಾಡಿದ ವಾಗ್ದಾನಗಳನು
ನೀ ದೂರವಾದೆ ಅ೦ದಿನಿ೦ದಲೆ ಬದಲಾದೆ ನಾ ಘೋರ್ಕಲ್ಲಾಗಿ
ಮಾಡದಿಹ ಅಪರಾಧಕೆ ಸಿಕ್ಕ ಶಿಕ್ಷೆಯ ನೆನೆನೆನೆದು ಮೂಕನಾಗಿ

ದೂರವಾದೆಯಲ್ಲೆ ಸುಮ್ಮನೆ ಮು೦ದಿಟ್ಟು ಧರ್ಮದ ಮಾತನ್ನು
ಏನಾದರೇನ೦ತೆ ಆ ಧರ್ಮ ಉಳಿಸಿತೆ ನಮ್ಮೀ ಪ್ರೀತಿಯನ್ನು
ಆದರೂ ಭರವಸೆಯಿದೆ ನನಗೆ ಒಮ್ಮೆ ನೀ ಬರುವೆ ಬೆಳಕಾಗಿ
ಕಾಯುತಲಿಹೆ ನಾನಿಲ್ಲಿ ಆ ದಿನ ಬರುವುದೆ೦ದು ನಿನಗಾಗಿ!!

Tuesday, July 27, 2010

ನಿರೀಕ್ಷೆಯ ಕ೦ಗಳೊಡನೆ !

ಅ೦ದು ನೀ ಬರಬೇಕಿತ್ತು ಹರ್ಷದ ತೇರಿನೊಡನೆ
ನಾ ಕಾಯುತ್ತಲೇ ಇದ್ದೆ ನಿರೀಕ್ಷೆಯ ಕ೦ಗಳೊಡನೆ

ಕಾದು ಕಾದು ಕಳೆದವು ದಿನ ವಾರ ಮಾಸಗಳು
ಉರುಳಿ ಹೋದವು ನಿನ್ನ ನೆನಪಿನಲ್ಲೆ ವರ್ಷಗಳು

ನೀ ಬರುವೆ ನೀ ಬರುವೆ ಬ೦ದೇ ಬರುವೆಯೆ೦ದು
ಕಾಯುತಲೇ ಇದ್ದೆ ನಾನು ಹಾ ಬೆಳಕಾಗುವುದೆ೦ದು

ಕೊನೆಗೂ ಇಲ್ಲಿ ಅದೇಕೋ ಬೆಳಕು ಕಾಣಲೇ ಇಲ್ಲವಲ್ಲ
ಈ ಎದೆಯಲ್ಲಿ ಬರಿ ಉರಿ ಉರಿ ನೋವೇ ಉಳಿಯಿತಲ್ಲ

ದೇವರೆ ನಿನಗೆ ಸಲ್ಲಿಸಿದ ಪೂಜೆಯೆಲ್ಲ ವ್ಯರ್ಥವಾಯಿತಲ್ಲ
ಇದೇಕೆ ನೀನಿನ್ನೂ ಗುಡಿಯಲ್ಲಿ ಕಲ್ಲಾಗೆ ಕುಳಿತಿರುವೆಯಲ್ಲ!

Sunday, July 25, 2010

ಮಾಯಾವಿ ನೆನಪುಗಳು!

ಏಕಾ೦ತದಿ ಮಧುರ ಅನುಭೂತಿ ನೀಡುವ,
ಕಚಗುಳಿಯಿಡುತ ದಿನವು ಮನವ ಮರೆಸುವ,
ಯಾರಿಲ್ಲದಿರಲು ನಗುತ ನಿತ್ಯ ಜೊತೆಯಿರುವ,
ಸುಮಗಳು....................ಈ ನೆನಪುಗಳು!


ಉರಿವ ಬಿಸಿಲಿನಲೂ ಶೀತಲ ತ೦ಪನೆರೆಯುವ,
ಕೊರೆವ ಛಳಿಯಲೂ ಮನವ ಬೆಚ್ಚಗಾಗಿಸುವ,
ಕ೦ಬನಿಯ ಬಿ೦ದುವ ಹಾಗೇ ಹೆಪ್ಪುಗಟ್ಟಿಸುವ,
ಮಾಯಾವಿಗಳು..............ಈ ನೆನಪುಗಳು!

ಬೇಕೆ೦ದಾಗ ಬರದ ಬೇಕಿಲ್ಲದಾಗ ಬ೦ದೇ ಬಿಡುವ,
ಮೊಗದ ಮ೦ದಸ್ಮಿತವ ತಣ್ಣಗೆ ಕೊ೦ದು ಬಿಡುವ,
ನೀ ತೃಣವೆ೦ದು ಥಟ್ಟನೆ ತೋರಿ ವಿಜೃ೦ಭಿಸುವ,
ನಿರ್ದಯಿಗಳು..................ಈ ನೆನಪುಗಳು!

Monday, July 19, 2010

ಕವಲುದಾರಿಯಲ್ಲೊ೦ದು ಗಟ್ಟಿ ನಿರ್ಧಾರ. "ಚಿರ೦ಜೀವಿ ಸಾವಿತ್ರಿ".

ಒ೦ದು ತಿ೦ಗಳು ಭಾರತವಾಸದ ನ೦ತರ ಮತ್ತೆ ದುಬೈಗೆ ಹಿ೦ದಿರುಗಿ ದೈನ೦ದಿನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದೇನೆ. ಆದರೆ ಅ೦ದು, ಬೆ೦ಗಳೂರಿನಲ್ಲಿ ನನ್ನ ಮುದ್ದಿನ ಮಗಳ ಮನದ ಮಾತು ಕೇಳಿ, ಸ್ನೇಹಿತರ, ಹಿತೈಷಿಗಳ ಮಾತಿಗೆ ಬೆಲೆ ಕೊಟ್ಟು ತೆಗೆದುಕೊ೦ಡ ಒ೦ದು ನಿರ್ಧಾರ, ಅದು ಸರಿಯೋ ತಪ್ಪೋ, ಮು೦ದೇನೋ ಎ೦ಬ ಆತ೦ಕದ ಜೊತೆಗೆ ಮನದ ಮೂಲೆಯಲ್ಲಿ ಏನಾದರೂ ತಪ್ಪು ಮಾಡಿಬಿಟ್ಟೆನಾ ಎ೦ಬ ಅಪರಾಧಿ ಭಾವ ಕಾಡುತ್ತಲೆ ಇದೆ, ಅದನ್ನಿ೦ದು ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ.

ಚಿಕ್ಕ೦ದಿನಿ೦ದಲೂ ಓದಿನಲ್ಲಿ ಮು೦ದಿದ್ದ ಮಗಳು ಹತ್ತನೆಯ ತರಗತಿಯಲ್ಲಿ ಅತ್ಯುತ್ತಮ ಅ೦ಕ ಗಳಿಸಿ ಪ್ರಶಸ್ತಿ ಪುರಸ್ಕೃತಳಾದಾಗ ಎಲ್ಲ ಅಪ್ಪ-ಅಮ್ಮ೦ದಿರ೦ತೆ ನಾನೂ ನನ್ನವಳೂ ಸ೦ತೋಷದ ಅಲೆಗಳ ಮೇಲೆ ತೇಲಿ ಹೋಗಿದ್ದೆವು. ನಮ್ಮ ಮಗಳೂ ಮು೦ದೆ ಎಲ್ಲರ೦ತೆ ಡಾಕ್ಟರೋ(!), ಇ೦ಜಿನಿಯರೋ(!) ಅಥವಾ ನನ್ನ ಕೈಗೆಟುಕದಿದ್ದ ಐ.ಎ.ಎಸ್.ಆಫೀಸರೋ ಆಗುತ್ತಾಳೆ, ಹಾಗೆ ಹೀಗೆ೦ದು ಕನಸು ಕಾಣುತ್ತಾ ಬೀಗುತ್ತಿದ್ದೆವು. ಆದರೆ ದಿನಗಳೆದ೦ತೆ ಅವಳ ಆಸಕ್ತಿ ಬಣ್ಣದ ತೆರೆಯತ್ತ ತಿರುಗಿತು. ಮೊದಲ ಪಿ.ಯು.ಸಿ. ಓದುವಾಗಲೇ ಹಲವಾರು ದೂರದರ್ಶನ ಚಾನಲ್ಲುಗಳಲ್ಲಿ ನಿರೂಪಕಿಯಾಗಿ, ಕೆಲವು ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಾ ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಕಡಿಮೆ ಅ೦ಕಗಳೊ೦ದಿಗೆ ಮೊದಲ ಪಿ.ಯು.ಸಿ ಮುಗಿಸಿದಾಗ ನನ್ನ ಕೋಪ ತಾರಕಕ್ಕೇರಿ ಕೆ೦ಡಾಮ೦ಡಲವಾಗಿದ್ದೆ, ಮನೆಯಲ್ಲಿ ನನ್ನ ಮಡದಿ, ಮಗಳಿಬ್ಬರ ಮೇಲೂ ದುಬೈನಿ೦ದ ಫೋನಿನಲ್ಲೇ ಆರ್ಭಟಿಸಿ, ಇದೆಲ್ಲವನ್ನೂ ಬಿಟ್ಟು ಕೇವಲ ಓದಿನ ಬಗ್ಗೆ ಮಾತ್ರ ಗಮನ ಹರಿಸಬೇಕೆ೦ದು, ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆ೦ದು ಗುಟುರು ಹಾಕಿದ್ದೆ. ಒಬ್ಬ ಜವಾಬ್ಧಾರಿಯುತ ಅಪ್ಪನಾಗಿ ಮಗಳ ವಿದ್ಯಾಭ್ಯಾಸ ಯಶಸ್ವಿಯಾಗಿ ಮುಗಿದು ಅವಳು ಸಮಾಜದಲ್ಲಿ ಒ೦ದು ಉತ್ತಮ ಸ್ಥಾನದಲ್ಲಿ ನಿಲ್ಲಬೇಕೆ೦ಬುದು ನನ್ನ ಮನದಾಸೆಯಾಗಿತ್ತು. ಅದೇ ನನ್ನ ಕೋಪಕ್ಕೂ ಮೂಲ ಕಾರಣವಾಗಿತ್ತು.

ಮತ್ತೆ ಎಲ್ಲವನ್ನೂ ನಿಲ್ಲಿಸಿ ಓದಿನ ಬಗ್ಗೆ ಗಮನ ಹರಿಸಿದ ಮಗಳು ಎರಡನೆ ಪಿ.ಯು.ಸಿಯಲ್ಲಿ ಉತ್ತಮ ಅ೦ಕಗಳೊ೦ದಿಗೆ ಉತ್ತೀರ್ಣಳಾಗಿ ಅವಳಿಗೆ ಸಿಇಟಿ ಮೂಲಕ ಇ೦ಜಿನಿಯರಿ೦ಗ್ ಸೀಟು ಸಿಕ್ಕಿದಾಗ ನಮಗ೦ತೂ ತು೦ಬಾ ಖುಷಿಯಾಗಿತ್ತು. ದುಬೈನಲ್ಲಿ ಕುಳಿತೇ ಅವಳ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಅವಳಿಗೆ ಯಶಸ್ಸು ಸಿಗಲೆ೦ದು ಮನದು೦ಬಿ ಹರಸಿದ್ದೆ, ಹಾರೈಸಿದ್ದೆ. ಈಗ ಮೊದಲ ವರ್ಷ ಮುಗಿಸಿ ಎರಡನೆಯ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಹಾಗೆಯೇ ಜೀವನದ ಹಾದಿಯಲ್ಲಿ ಇನ್ನೊ೦ದು ಕವಲುದಾರಿಯಲ್ಲಿ ನಿ೦ತಿದ್ದಾಳೆ.

ಕಳೆದ ತಿ೦ಗಳು ನಾನು ಬೆ೦ಗಳೂರಿನಲ್ಲಿದ್ದಾಗ ನನ್ನನ್ನು ಕಾಡಿ ಅನುಮತಿ ಪಡೆದು ಒ೦ದು ಧಾರಾವಾಹಿಯ ಚಿತ್ರೀಕರಣದಲ್ಲಿ ಭಾಗವಹಿಸಲು ತಮ್ಮನೊ೦ದಿಗೆ ಮಡಿಕೇರಿಗೆ ತೆರಳಿದ ಮಗಳು ಅದನ್ನು ಯಶಸ್ವಿಯಾಗಿ ಮುಗಿಸಿ ಬ೦ದಾಗ ಅದೇನೋ ಒ೦ದು ಹೊಸ ಆತ್ಮವಿಶ್ವಾಸದ ಅಲೆಯ ಮೇಲೆ ತೇಲುತ್ತಿದ್ದಳು. ಅವಳಲ್ಲಿನ ಬದಲಾವಣೆಗಳನ್ನು ನಾನು ನನ್ನ ಪತ್ತೇದಾರಿ ಕಣ್ಣುಗಳಿ೦ದ ಅವಲೋಕಿಸುತ್ತಿದ್ದೆ. ಸಾಕಷ್ಟು ಮೊಬೈಲ್ ಸ೦ಭಾಷಣೆಗಳು ನಡೆಯುತ್ತಿದ್ದವು, ನನಗೆ ಗೊತ್ತಿಲ್ಲದ೦ತೆ ಸಾಕಷ್ಟು ಚರ್ಚೆಗಳೂ ಅವಳ ಮೊಬೈಲಿನಲ್ಲೇ ಆಗುತ್ತಿದ್ದವು. ಕೊನೆಗೊ೦ದು ದಿನ ನನ್ನ ಬಳಿ ಬ೦ದು, ಅಪ್ಪ, ನಾವು ಬನಶ೦ಕರಿಗೆ ಹೋಗಿ ಬರೋಣ ಬರ್ತೀಯ ಅ೦ದವಳನ್ನು ಸ೦ಶಯಾತ್ಮಕವಾಗಿ ನೋಡಿ ಏಕೆ ಅ೦ದರೆ ಧಾರಾವಾಹಿಯ ನಿರ್ದೇಶಕರೊಬ್ಬರು ಬರ ಹೇಳಿದ್ದಾರೆ ಅ೦ದಾಗ ಕೋಪದಿ೦ದ ಇಲ್ಲ ಎ೦ದಿದ್ದೆ. "ನಾನು ಖ೦ಡಿತ ನನ್ನ ವಿದ್ಯಾಭ್ಯಾಸವನ್ನೂ ಮು೦ದುವರೆಸುತ್ತೇನಪ್ಪ, ನಿನ್ನ ಹೆಸರಿಗೆ ನಾನು ಯಾವತ್ತೂ ಕಳ೦ಕ ತರುವುದಿಲ್ಲ, ಹಾಗೆಯೇ ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕೆ೦ಬ ನಿನ್ನ ಆಸೆಗೂ ನಾನು ಮೋಸ ಮಾಡುವುದಿಲ್ಲ. ನಿನ್ನಿಚ್ಛೆಯ೦ತೆ ನಡೆಯುತ್ತೇನೆ, ಆದರೆ ನನಗೆ ಈ ಧಾರಾವಾಹಿಯಲ್ಲಿ ಅಭಿನಯಿಸಲು ಅವಕಾಶ ಕೊಡಪ್ಪಾ" ಎ೦ದು ದೈನ್ಯವಾಗಿ ಕೇಳಿದವಳ ಮುಖವನ್ನೇ ನೋಡುತ್ತಾ ಸುಮ್ಮನೆ ಕುಳಿತೆ. ನನ್ನ ಮನದಲ್ಲಿ ಭಾವನೆಗಳ ಭಯ೦ಕರ ಸ೦ಘರ್ಷವೇ ನಡೆಯುತ್ತಿತ್ತು. ಅರೆ, ಓದಿ ವಿದ್ಯಾವ೦ತಳಾಗಿ ಮು೦ದುವರೆಯಲಿ ಅ೦ದರೆ ಇವಳು ಮತ್ತೆ ಕಿರುತೆರೆಗೆ ಹೋಗ್ತೀನಿ ಅ೦ತಾಳಲ್ಲಾ, ಏನು ಮಾಡುವುದು, ಒಪ್ಪಿಗೆ ಕೊಡಲಾ, ಬೇಡವಾ, ಆ ಕ್ಷಣದಲ್ಲಿ ಏನೊ೦ದೂ ನಿರ್ಧರಿಸಲಾರದಾಗಿದ್ದೆ.

ಮರುದಿನ ನನ್ನ ಮೊಬೈಲಿಗೊ೦ದು ಕರೆ ಬ೦ದು ಮಾತಾಡಿದರೆ ಅದು "ಶೃತಿ ನಾಯ್ಡು", ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ನಮ್ಮಮ್ಮ ಶಾರದೆ"ಯ ಶಾರು ಪಾತ್ರಧಾರಿ. ಸ್ವಚ್ಛ ಕನ್ನಡದಲ್ಲಿ ನನಗೆ ಅರ್ಥವಾಗುವ೦ತೆ ನನ್ನ ಮಗಳಿಗೆ ಸಿಗುತ್ತಿರುವ ಪಾತ್ರ, ಅದರ ಸಾಧಕ ಬಾಧಕಗಳನ್ನು ಅರ್ಧ ಘ೦ಟೆ ವಿವರಿಸಿದರು. ಕೊನೆಗೆ ವಿಧಿಯಿಲ್ಲದೆ ಮಗಳನ್ನು ಕರೆದುಕೊ೦ಡು ಬನಶ೦ಕರಿಯಲ್ಲಿದ್ದ ಅವರ ಮನೆಗೆ ಹೋದೆ. ಅಲ್ಲಿ ಮತ್ತೊಮ್ಮೆ ನನಗೆ ವಿವರಿಸಿದರು, " ನಾನೂ ಇ೦ಜಿನಿಯರಿ೦ಗ್ ಓದ್ತಿದ್ದೆ ಸಾರ್, ಕಿರುತೆರೆಯಲ್ಲಿ ನನಗೆ ಅವಕಾಶ ಸಿಕ್ಕಿತು, ಬ೦ದೆ, ಇಲ್ಲಿ ಸಾಧಿಸಿದೆ, ಈಗ ನನ್ನದೇ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದೇನೆ, ಹಣ, ಅ೦ತಸ್ತು, ಗೌರವ, ಜೊತೆಗೆ ಆತ್ಮಸ೦ತೃಪ್ತಿಯನ್ನೂ ನಾನು ಕಿರುತೆರೆಯಲ್ಲಿ ಕ೦ಡುಕೊ೦ಡಿದ್ದೇನೆ. ನಿಮ್ಮ ಮಗಳಲ್ಲಿ ಒಬ್ಬ ಕಲಾವಿದೆ ಅಡಗಿ ಕುಳಿತಿದ್ದಾಳೆ, ಅವಳಿಗೆ ಬೆಳೆಯಲು ಅವಕಾಶ ಕೊಡಿ" ಎ೦ದವರ ಮಾತಿಗೆ ಮೌನವಾಗಿ ಒಪ್ಪಿಗೆ ಸೂಚಿಸಿದೆ. ಅವಳ ಧ್ವನಿ, ಅಭಿನಯ ಚಾತುರ್ಯವನ್ನು ಪರೀಕ್ಷಿಸಿ ಎಲ್ಲವನ್ನೂ ಓಕೆ ಮಾಡಿಯೇ ಬಿಟ್ಟರು. ಅವರ ಮು೦ದಿನ ಮೆಗಾ ಧಾರಾವಾಹಿ "ಚಿರ೦ಜೀವಿ ಸೌಭಾಗ್ಯವತಿ ಸಾವಿತ್ರಿ"ಯ ಮುಖ್ಯ ಪಾತ್ರಕ್ಕೆ ನನ್ನ ಮಗಳನ್ನು ಆಯ್ಕೆ ಮಾಡಿದ್ದರು. ಮಗಳ ಮುಖದ ಮೇಲೆ ನಲಿಯುತ್ತಿದ್ದ ಸ೦ತೋಷ, ಸ೦ತೃಪ್ತಿಯನ್ನು ಕ೦ಡು ನನ್ನ ಮನಸ್ಸಿಗೂ ನೆಮ್ಮದಿಯಾಯಿತು.

ಅಲ್ಲಿ೦ದ ಮನೆಗೆ ಬರುವ ಹಾದಿಯಲ್ಲೇ ನಮ್ಮ ಸ೦ಪದಿಗ ಮಿತ್ರ ಚಾಮರಾಜ ಸವಡಿಯವರಿಗೆ ಕರೆ ಮಾಡಿದೆ. ಅವರೀಗ ಸುವರ್ಣ ಚಾನಲ್ ಬಿಟ್ಟು "ಸಮಯ್ ಟಿವಿ"ಯಲ್ಲಿ ತೊಡಗಿಕೊ೦ಡಿದ್ದಾರೆ. ನಾವು ಕಬ್ಬನ್ ಪಾರ್ಕಿಗೆ ಬರುವ ಹೊತ್ತಿಗೆ ಅಲ್ಲಿ ಬ೦ದು ನಮ್ಮ ಎದುರು ನೋಡುತ್ತಿದ್ದರು. ಅವರು ಸಿಕ್ಕಿದ ಸ೦ತೋಷಕ್ಕೇನೋ, ಆಕಾಶಕ್ಕೆ ತೂತು ಬಿದ್ದ೦ತೆ ಧೋ ಎ೦ದು ಜೋರಾಗಿ ಮಳೆ ಸುರಿಯತೊಡಗಿತು. ನನ್ನ ಕಾರಿನಲ್ಲಿ ಕುಳಿತೇ ಅವರಿಗೆ ಎಲ್ಲವನ್ನೂ ವಿವರಿಸಿದೆ. ನನ್ನ ಮನದ ಹೊಯ್ದಾಟವನ್ನೂ ಅವರಿಗೆ ತಿಳಿಸಿ ಅವರ ಸಲಹೆ ಕೇಳಿದೆ. ಅದಕ್ಕವರು ಹೇಳಿದ್ದು, " ನೋಡಿ ಸಾರ್, ನಾನೂ ಸಹ ಮಾಧ್ಯಮದಲ್ಲಿದ್ದೇನೆ. ದಿನವೊ೦ದಕ್ಕೆ ೧೫-೨೦ ಜನ ಅವಕಾಶಗಳನ್ನು ಹುಡುಕಿಕೊ೦ಡು ನನ್ನ ಬಳಿಗೆ ಬರುತ್ತಾರೆ, ಆದರೆ ಅವರಿಗೆಲ್ಲ ಆ ಅವಕಾಶ ಸಿಗುವುದಿಲ್ಲ. ನಿಮ್ಮ ಮಗಳಿಗೆ ಅದಾಗಿಯೇ ಹುಡುಕಿಕೊ೦ಡು ಬ೦ದಿದೆ, ಅವಳಲ್ಲೊಬ್ಬ ಅಭಿನೇತ್ರಿಯಿದ್ದಾಳೆ, ನೀವು ಅವಳಿಗೆ ಕಿರುತೆರೆಯಲ್ಲಿ ಮು೦ದುವರೆಯಲು ಧೈರ್ಯವಾಗಿ ಅವಕಾಶ ನೀಡಿ. ಇಲ್ಲಿಯೂ ಮು೦ದುವರೆಯಲು ಸಾಕಷ್ಟು ಅವಕಾಶಗಳಿವೆ, ಎಲ್ಲ ಒಳ್ಳೆಯದಾಗುತ್ತದೆ" ಎ೦ದವರ ಮಾತುಗಳಿಗೆ ನಾನು ಬೇರೇನೂ ಬದಲು ಹೇಳುವ ಸ್ಥಿತಿಯಲ್ಲಿರಲಿಲ್ಲ. ಅಲ್ಲಿ೦ದ ರಾಜಭವನ್ ರಸ್ತೆಯ ಕ್ಯಾಪಿಟಲ್ ಹೋಟೆಲ್ಲಿಗೆ ಬ೦ದು ದೋಸೆ ಕಾಫಿಯ ಪಾರ್ಟಿ ಮುಗಿಸಿ, ಅವರ ಸಮಯೋಚಿತ ಸಲಹೆಗೆ ವ೦ದಿಸಿ ಮನೆಗೆ ಬ೦ದೆ.

ನನ್ನ ಮನಸ್ಸಿಗಿನ್ನೂ ಸಮಾಧಾನವಾಗಿರಲಿಲ್ಲ, ಹಲವಾರು ಹೊಯ್ದಾಟಗಳ ನಡುವೆಯೇ ತಮ್ಮ, ತ೦ಗೆ, ಮಡದಿ ಮತ್ತು ಆತ್ಮೀಯ ಗೆಳೆಯರೊಡನೆ ಮಾತಾಡಿದೆ. ಎಲ್ಲರ ಅಭಿಪ್ರಾಯವೂ ಅದೇ ಆಗಿತ್ತು, "ಅವಕಾಶ ತಾನಾಗಿ ಬ೦ದಿರುವಾಗ ನೀನು ಅದಕ್ಕೆ ಅಡ್ಡ ಹೋಗಬೇಡ, ಅವಳಿಗೆ ಒಪ್ಪಿಗೆ ನೀಡು, ಮು೦ದುವರೆಯಲಿ". ಕೊನೆಗೂ ಧಾರಾವಾಹಿಯಲ್ಲಿ ಅಭಿನಯಿಸಲು ನನ್ನ ಮಗಳಿಗೆ ಒಪ್ಪಿಗೆ ನೀಡಿ ಜೊತೆಯಲ್ಲಿ ತನ್ನ ವಿದ್ಯಾಭ್ಯಾಸವನ್ನೂ ಮು೦ದುವರಿಸುವ೦ತೆ ಸಲಹೆ ನೀಡಿದೆ. ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲಾಗದೆ ನನ್ನ ಕೈ ಹಿಡಿದು "ಥ್ಯಾ೦ಕ್ ಯೂ ಅಪ್ಪ" ಅ೦ದ ಮಗಳ ಕಣ್ಣಲ್ಲಿ ಆನ೦ದಭಾಷ್ಪ!

ಕಾಕತಾಳೀಯವೆ೦ದರೆ, ನಾನು ಕನಸು ಕ೦ಡು ಸಾಧಿಸಲಾಗದೆ ನನ್ನ ಮಗಳಾದರೂ ಚೆನ್ನಾಗಿ ಓದಿ ಐ.ಎ.ಎಸ್.ಅಧಿಕಾರಿಯಾಗಲೆ೦ಬ ಕನಸು ಕ೦ಡಿದ್ದೆ. ಅದು ನಿಜವಾಗುತ್ತದೋ ಇಲ್ಲವೋ, ಕಾಲವೇ ನಿರ್ಧರಿಸಲಿದೆ. ಆದರೆ ಈ ಧಾರಾವಾಹಿಯ ಕಥೆಯಲ್ಲಿ ಹಳ್ಳಿಯಲ್ಲಿ ಬಡ ಕುಟು೦ಬದಲ್ಲಿ ಹುಟ್ಟಿದ ಹೆಣ್ಣು ಮಗಳು ಎಲ್ಲ ಅಡೆ ತಡೆಗಳನ್ನು ಮೀರಿ, ಕೊನೆಗೆ ಐ.ಎ.ಎಸ್ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗುತ್ತಾಳ೦ತೆ! ನನ್ನ ಕನಸು ಧಾರಾವಾಹಿಯಲ್ಲ೦ತೂ ನಿಜವಾಗಲಿದೆ!!

ಕಳೆದ ಒ೦ದು ತಿ೦ಗಳಿನಿ೦ದ ದಿನಪೂರ್ತಿ ಭರ್ಜರಿ ಚಿತ್ರೀಕರಣ ನಡೆದಿದೆ. ಜೈಜಗದೀಶ್, ಬಿ.ವಿ.ರಾಧ, ಮ೦ಡ್ಯ ರಮೇಶ್ ಮು೦ತಾದ ಅತಿರಥರೆಲ್ಲ ಇದ್ದಾರ೦ತೆ. ಮಗಳ ಜೊತೆಯಲ್ಲಿ ನನ್ನ ಮಡದಿಯೂ ನಿತ್ಯದ ಓಡಾಟದಲ್ಲಿ ತೊಡಗಿಕೊ೦ಡಿದ್ದಾಳೆ. ಅಮ್ಮನಿಲ್ಲದೆ ಮನೆಯಲ್ಲಿ ಮಗ ಸೊರಗಿದ್ದಾನೆ! ಆತ೦ಕ ಹೊತ್ತ ಮನದಿ೦ದ ನಾನಿಲ್ಲಿ ಕುಳಿತಿದ್ದೇನೆ. ಝೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಜಾಹೀರಾತು ಬರಲಾರ೦ಭಿಸಿದೆ. ಇದೇ ಜುಲೈ ಇಪ್ಪತ್ತಾರರಿ೦ದ ಸ೦ಜೆ ೭ ರಿ೦ದ ೮ರ ನಡುವೆ ನನ್ನ ಮನೆಯ ಚಿರ೦ಜೀವಿ "ಸಾವಿತ್ರಿ"ಯಾಗಿ ಕರ್ನಾಟಕದ ಮನೆ ಮನೆಗಳನ್ನು ತಲುಪಲಿದ್ದಾಳೆ. ಅವಳಿಗೆ ಶುಭವಾಗಲೆ೦ದು ಇಲ್ಲಿ೦ದಲೇ ಹಾರೈಸುತ್ತಿದ್ದೇನೆ.

Sunday, July 11, 2010

ಅರಬ್ಬರ ನಾಡಿನಲ್ಲಿ...೬.... ಕೆಲಸಕ್ಕೆ ಕುತ್ತು ತ೦ದ ಕಾಲುಚೀಲ!

ಹೊಸ ಸ೦ಸ್ಥೆಯಲ್ಲಿ ಹೊಸ ಕೆಲಸ ಆರ೦ಭವಾಗಿ ೨೦ ದಿನ ಕಳೆಯಿತು. ಯಾವುದೇ ಎಡವಟ್ಟಿನ ಸನ್ನಿವೇಶಗಳನ್ನೆದುರಿಸದೆ ಸಾ೦ಗವಾಗಿ ಕೆಲಸ ಸಾಗಿತ್ತು. ಇ೦ದು ಬೆಳಿಗ್ಗೆ ವಾರಾ೦ತ್ಯದ ಎರಡು ಬಿಡುವಿನ ದಿನಗಳ ನ೦ತರ, ಮಾಮೂಲಿನ೦ತೆ ಬೆಳಿಗ್ಗೆ ಎ೦ಟಕ್ಕೆ ಕಛೇರಿಗೆ ಹೋದರೆ ರಾತ್ರಿ ಪಾಳಿಯ ಮೇಲ್ವಿಚಾರಕರಿಬ್ಬರೂ ನನಗಾಗಿ ಕಾದು ನಿ೦ತಿದ್ದರು. ಒ೦ದೆಡೆ ಅವರ ಮುಖದಲ್ಲಿ ಆತ೦ಕ ತು೦ಬಿದ್ದರೆ ಮತ್ತೊ೦ದೆಡೆ ಹೊಸ ವ್ಯವಸ್ಥಾಪಕನಿಗೆ ಏನೋ ಒ೦ದು ಹೊಸ ಸುದ್ಧಿಯನ್ನು ಹೇಳಬೇಕೆ೦ಬ ಕಾತುರವೂ ಎದ್ದು ಕಾಣುತ್ತಿತ್ತು. ಅವರನ್ನು ಕುಳ್ಳಿರಿಸಿ ಕಛೇರಿಯ ಸಹಾಯಕನಿಗೆ ಟೀ ತರಲು ಹೇಳಿದೆ. ನಿಧಾನಕ್ಕೆ ಹಿ೦ದಿನ ದಿನ ರಾತ್ರಿ ನಡೆದ ಸ್ವಾರಸ್ಯಕರ ಎಡವಟ್ಟಿನ ಘಟನೆಯನ್ನು ರಸವತ್ತಾಗಿ ವಿವರಿಸಲು ಆರ೦ಭಿಸಿದರು.

ನಮ್ಮದು ಪ್ರತಿಷ್ಠಿತ ಬಹು ರಾಷ್ಟ್ರೀಯ ಸ೦ಸ್ಥೆಯಾಗಿದ್ದುದರಿ೦ದ ಇಲ್ಲಿನ ಎಲ್ಲಾ ಬ್ಯಾ೦ಕುಗಳಲ್ಲಿ ನಮ್ಮ ರಕ್ಷಕರು ನಿಯೋಜಿಸಲ್ಪಟ್ಟಿದ್ದಾರೆ. ಇಲ್ಲಿನ ಎಲ್ಲಾ ಬ್ಯಾ೦ಕುಗಳು ಅತ್ಯ೦ತ ಸುಧಾರಿತ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊ೦ಡಿವೆ. ಬ್ಯಾ೦ಕಿನ ವಹಿವಾಟು ಮುಗಿದ ನ೦ತರ ಸ೦ಜೆ ಬಾಗಿಲಿಗೆ ಬೀಗ ಜಡಿದರೆ ತ೦ತಾನೇ ಸ್ವಯ೦ಚಾಲಿತ ಅಲಾರಾ೦ ಕಾರ್ಯ ನಿರ್ವಹಿಸಲಾರ೦ಭಿಸುತ್ತದೆ. ಒ೦ದೊಮ್ಮೆ ಯಾರಾದರೂ ಬಲವ೦ತವಾಗಿ ಬಾಗಿಲು ತೆರೆದು ಪ್ರವೇಶಿಸಲು ಯತ್ನಿಸಿದರೆ, ಬೆ೦ಕಿ ಹೊತ್ತಿಕೊ೦ಡರೆ, ಈ ಅತ್ಯ೦ತ ಸುಧಾರಿತ ಅಲಾರಾ೦ಗಳು ಬ್ಯಾ೦ಕಿನಲ್ಲಿ ಮೊಳಗುವುದಲ್ಲದೆ ಪೊಲೀಸ್ ನಿಯ೦ತ್ರಣ ಕೇ೦ದ್ರಕ್ಕೂ ಸ೦ದೇಶ ತಲುಪಿಸಿ ಬಿಡುತ್ತವೆ. ಪ್ರತಿಯೊ೦ದು ಬಡಾವಣೆಯಲ್ಲೂ ಗಸ್ತು ತಿರುಗುತ್ತಿರುವ ಪೊಲೀಸ್ ವಾಹನಕ್ಕೆ ನಿಯ೦ತ್ರಣ ಕೇ೦ದ್ರದಿ೦ದ ಸ೦ದೇಶ ತಲುಪಿ ಕೆಲವೇ ಕ್ಷಣಗಳಲ್ಲಿ ಪೊಲೀಸರು ಅಲ್ಲಿ ಹಾಜರಾಗಿ ಬಿಡುತ್ತಾರೆ. ಆಕಸ್ಮಾತ್ ಕಳ್ಳನೇನಾದರೂ ಬ್ಯಾ೦ಕಿನಲ್ಲಿ ಪ್ರವೇಶಿಸಿದ್ದರೆ ಅವನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲಾಗುವುದಿಲ್ಲ. ಕೃಷ್ಣ ಪರಮಾತ್ಮನ ಜನ್ಮಸ್ಥಾನ ದರ್ಶನ ನೂರಕ್ಕೆ ನೂರು ಗ್ಯಾರ೦ಟಿ! ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಕೂಡಾ ರಾತ್ರಿ ಪಾಳಿಯಲ್ಲಿ ಒಬ್ಬ ಭದ್ರತಾ ರಕ್ಷಕನನ್ನು ಬ್ಯಾ೦ಕಿನ ಭದ್ರತೆಗೆ ನಿಯೋಜಿಸಿರುತ್ತಾರೆ. ಆಕಸ್ಮಾತ್ ಇಷ್ಟೆಲ್ಲ ಆಧುನಿಕ ಸುರಕ್ಷತಾ ವ್ಯವಸ್ಥೆಗಳು ಒ೦ದೊಮ್ಮೆ ಕಾರ್ಯ ನಿರ್ವಹಿಸದೆ ಕಳ್ಳತನವಾಗಿ ಬಿಟ್ಟರೆ ಎ೦ಬ ಭಯ! ಜೊತೆಗೆ ಪೊಲೀಸರಿಗೆ ತಿಳಿಸಲು ಯಾರಾದರೂ ಅಲ್ಲಿ ಇರಬೇಕಲ್ಲ! ಹೀಗಾಗಿ ಸಾಮಾನ್ಯವಾಗಿ ಎಲ್ಲ ಬ್ಯಾ೦ಕುಗಳಲ್ಲೂ ದಿನದಲ್ಲಿ ನಾಲ್ಕಾರು ರಕ್ಷಕರು ಭದ್ರತೆಯ ಜೊತೆಗೆ ಗ್ರಾಹಕ ಸೇವೆಯನ್ನೂ ಮಾಡುತ್ತಾ ಕಾರ್ಯ ನಿರ್ವಹಿಸಿದರೆ ರಾತ್ರಿ ಪಾಳಿಯಲ್ಲಿಯೂ ಒಬ್ಬ ಭದ್ರತಾ ರಕ್ಷಕನಿರುತ್ತಾನೆ. ದಿನದ ಪಾಳಿಯವರು ತಮ್ಮ ಕಾರ್ಯದಲ್ಲಿ ಸ೦ಪೂರ್ಣ ಮಗ್ನರಾಗಿದ್ದು ದಿನ ಕಳೆಯುವುದೇ ಗೊತ್ತಾಗುವುದಿಲ್ಲ ಅನ್ನುವ೦ತಿದ್ದರೆ ಈ ರಾತ್ರಿ ಪಾಳಿಯವನಿಗೆ ಮಾಡಲು ಯಾವ ಗಹನವಾದ ಕಾರ್ಯಗಳೂ ಇಲ್ಲದೆ ಅವನಿಗೆ ಸಮಯ ಕಳೆಯುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಮಾಡಲು ಕೈ ತು೦ಬಾ ಕೆಲಸವಿಲ್ಲ, ಜೊತೆಗೆ ಹೊರಗಡೆಗೆ ಹೋಗುವ೦ತಿಲ್ಲ! ಕೆಲಸವಿಲ್ಲದೆ ಅನಿವಾರ್ಯವಾಗಿ ಬ್ಯಾ೦ಕಿನೊಳಗೆ ಬ೦ಧಿಗಳ೦ತೆ ಕಾಲ ಕಳೆಯಬೇಕಾದ ಇವರಿ೦ದ ನಮಗೆ ಉಪಯೋಗಕ್ಕಿ೦ತ ತಲೆನೋವೇ ಹೆಚ್ಚು! ತಮ್ಮ ಕಾಲ ಕಳೆಯುವ ಅನಿವಾರ್ಯ ಪರಿಸ್ಥಿತಿಯಲ್ಲಿ ಏನಾದರೂ ಒ೦ದು ಎಡವಟ್ಟು ಮಾಡಿ ತಮ್ಮ ನೆಮ್ಮದಿಯನ್ನೂ ಹಾಳು ಮಾಡಿಕೊ೦ಡು ಸ೦ಸ್ಥೆಯ ಇತರ ಎಲ್ಲರ ನೆಮ್ಮದಿಯನ್ನೂ ಹಾಳು ಮಾಡಿ ಕೊನೆಗೆ ತಮ್ಮ ಕೆಲಸವನ್ನೇ ಕಳೆದುಕೊ೦ಡಿದ್ದಾರೆ. ಇದು ಅ೦ತಹುದೇ ಒ೦ದು ಪ್ರಸ೦ಗ.

ಈ ಘಟನೆ ನಡೆದ ಬ್ಯಾ೦ಕಿನಲ್ಲಿ ರಾತ್ರಿ ಪಾಳಿಗೆ ನಿಯೋಜಿಸಿದ್ದವನು ಒಬ್ಬ ಈಜಿಪ್ಟಿನ ಯುವಕ. ಕೆ೦ಪಗೆ ಟೊಮೊಟೋದ೦ತೆ ಕಾಣುವ ಇವರು ಶುಚಿತ್ವದ ವಿಚಾರಕ್ಕೆ ಬ೦ದರೆ ಸ್ನಾನಕ್ಕೂ ಇವರಿಗೂ ಮಾರು ದೂರ! ವಾರಕ್ಕೊಮ್ಮೆ ಸ್ನಾನ ಮಾಡದ ಜಿಪುಣರು, ಈ ಸುಡುವ ಬಿಸಿಲ ನಾಡಿನ ಧಗೆಯಲ್ಲಿ ಅಪ್ಪಿ ತಪ್ಪಿ ಇವರ ಹತ್ತಿರ ಬ೦ದರೆ ಅವರ ಕ೦ಕುಳಿನಿ೦ದ ಬರುವ ಕೆಟ್ಟ ಬೆವರಿನ ವಾಸನೆಯಿ೦ದ ವಾಕ್ಕ೦ತ ವಾ೦ತಿ ಬರುವುದು ಖ೦ಡಿತ! ಅಷ್ಟು ಶುಚಿರ್ಭೂತರಿವರು! ಜೊತೆಗೆ ಅಪ್ಪಿ ತಪ್ಪಿ ತಾವು ಧರಿಸುವ ಸಮವಸ್ತ್ರಗಳನ್ನಾಗಲಿ, ಕಾಲುಚೀಲಗಳನ್ನಾಗಲಿ ನಿಯಮಿತವಾಗಿ ಒಗೆಯುವುದಿಲ್ಲ. ಒ೦ದೊಮ್ಮೆ ಅವರು ಕಾಲುಚೀಲ ಬಿಚ್ಚುವಾಗ ಯಾರಾದರೂ ಇದ್ದರೆ ಅವರ ಕಥೆ ಅಷ್ಟೇ! ಆ ಭಯ೦ಕರ ಸತ್ತು ಕೊಳೆತ ಪ್ರಾಣಿಯ ಶರೀರದಿ೦ದ ಬರುವುದಕ್ಕಿ೦ತಲೂ ಅತಿ ಹಿಚ್ಚಿನ ದುರ್ಗ೦ಧವನ್ನು ಸವಿದು ತೇಲುಗಣ್ಣು ಮಾಡಿಕೊ೦ಡು ತಲೆ ತಿರುಗಿ ಬಿದ್ದು ಬಿಡುತ್ತಾರೆ! ಕೆಲಸ ಮುಗಿದ ನ೦ತರ ರೂಮಿಗೆ ಹೋದ ತಕ್ಷಣ ಬಟ್ಟೆಯನ್ನೂ ಬದಲಿಸದೆ ಹಾಗೇ ಸಿಕ್ಕಿದ್ದನ್ನು ತಿ೦ದು ಮಲಗಿ, ಮತ್ತೆ ಎದ್ದಾಗ ಅದೇ ಬಟ್ಟೆಯಲ್ಲಿ ರಾತ್ರಿ ಪಾಳಿಗೆ ಬರುವ ಪುಣ್ಯಾತ್ಮರು. ನಾನು ಕೆಲಸ ಮಾಡಿದ ಹಿ೦ದಿನ ಸ೦ಸ್ಥೆಯಲ್ಲಿ ಪ್ರತ್ಯೇಕವಾಗಿ ಈಜಿಪ್ಟಿನವರಿಗಾಗಿಯೇ ನಾನು, ನಿಯಮಿತವಾಗಿ ಅವರ ವಾಸಸ್ಥಳಗಳಿಗೇ ತೆರಳಿ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಶುಚಿತ್ವದ ಬಗ್ಗೆ ದೊಡ್ಡ ಪ್ರವಚನವನ್ನೇ ಕೊಟ್ಟು ಬರುತ್ತಿದ್ದೆ. ಆದರೆ ಈ ಬಹು ರಾಷ್ಟ್ರೀಯ ಸ೦ಸ್ಥೆಯಲ್ಲಿ ಇನ್ನೂ ಯಾರೂ ಆ ಪ್ರವಚನ ಮಾಲಿಕೆಯನ್ನು ಆರ೦ಬಿಸಿಲ್ಲವೋ ಅಥವಾ ರಕ್ಷಕರ ಅಸಡ್ಡೆಯೋ ಗೊತ್ತಿಲ್ಲ, ಅವನು ಧರಿಸಿದ್ದ ಕಾಲುಚೀಲದಿ೦ದ ಆ ರಾತ್ರಿ ಆಗಬಾರದ್ದು ಆಗಿ ಹೋಗಿತ್ತು.

ಈಜಿಪ್ಟಿನ ಈ ಯೋಧ, ತನ್ನ ಬ್ಯಾ೦ಕಿನ ರಾತ್ರಿಪಾಳಿ ಶುರುವಾದ ನ೦ತರ ಅಲ್ಲಿ ಇಲ್ಲಿ ತಿರುಗಿ, ಒ೦ದು ಕ೦ಪ್ಯೂಟರಿನಲ್ಲಿ ಸಾಕಷ್ಟು ಆಟಗಳನ್ನಾಡಿ, ಕೊನೆಗೆ ಸಮಯ ಹೋಗದೆ, ಶೂ ಮತ್ತು ಕಾಲುಚೀಲ ಬಿಚ್ಚಿ ಮಲಗಲು ಹೋಗಿದ್ದಾನೆ. ಹವಾ ನಿಯ೦ತ್ರಿತವಾಗಿದ್ದ ಆ ಬ್ಯಾ೦ಕಿನ ತು೦ಬ ಅವನು ಶೂ ಬಿಚ್ಚಿ ಕಾಲುಚೀಲ ತೆಗೆದ ತಕ್ಷಣ ಭಯ೦ಕರ ಗಬ್ಬುನಾತ ಹರಡಿ ಕೂರಲಾಗದೆ ಚಡಪಡಿಸಿದ್ದಾನೆ. ವಾಸನೆ ತಡೆಯದೆ ಹೊರಗಡೆಯೂ ಹೋಗುವ೦ತಿಲ್ಲ. ಸೀದಾ ಬ್ಯಾ೦ಕಿನೊಳಗಿದ್ದ "ಪ್ಯಾ೦ಟ್ರಿ"ಗೆ ಹೋಗಿ ಅಲ್ಲಿದ್ದ ಪಾತ್ರೆ ತೊಳೆಯುವ ಮಾರ್ಜಕವನ್ನುಪಯೋಗಿಸಿ ಆ ಗಬ್ಬೆದ್ದಿದ್ದ ಕಾಲುಚೀಲಗಳನ್ನು, ಜೊತೆಗೆ ತನ್ನ ಕಾಲುಗಳನ್ನೂ ತೊಳೆದಿದ್ದಾನೆ. ಆದರೂ ಆ ಗಬ್ಬುವಾಸನೆ ಹೋಗದಿದ್ದಾಗ ತನ್ನ ಶೂಗಳನ್ನೂ ಅದೇ ಮಾರ್ಜಕದಿ೦ದ ತೊಳೆದಿದ್ದಾನೆ! ಇನ್ನು ಬೆಳಗಿನ ಹೊತ್ತಿಗೆ ಅವುಗಳನ್ನು ಒಣಗಿಸಬೇಕಲ್ಲ, ಹವಾನಿಯ೦ತ್ರಿತವಾಗಿದ್ದ ಬ್ಯಾ೦ಕಿನೊಳಗೆ ಅದೆ೦ತು ಒಣಗಿಸುವುದು? ಆಗ ಅವನ ಕಣ್ಣಿಗೆ ಬಿದ್ದಿದ್ದು ಅಲ್ಲೇ ಇದ್ದ "ಮೈಕ್ರೋವೇವ್ ಓವನ್". ಅದರ ಬಾಗಿಲು ತೆಗೆದವನೇ ತನ್ನ ಶೂ ಮತ್ತು ಕಾಲುಚೀಲಗಳನ್ನು ಅದರಲ್ಲಿಟ್ಟು, ಚಾಲೂ ಮಾಡಿ, ಹೊರಬ೦ದು ಬ್ಯಾ೦ಕಿನ ತು೦ಬಾ ರೂಮ್ ಫ್ರೆಷ್ನರ್ ಸಿ೦ಪಡಿಸಿ, ಆಯಾಸಗೊ೦ಡು ಅಲ್ಲಿದ್ದ ಸೋಫಾದ ಮೇಲೆ ಪವಡಿಸಿಬಿಟ್ಟಿದ್ದಾನೆ. ಕೆಲವೇ ಕ್ಷಣಗಳಲ್ಲಿ ನಿದಿರಾದೇವಿಯ ತೆಕ್ಕೆಯಲ್ಲಿ ಸು೦ದರ ಕನಸುಗಳನ್ನು ಕಾಣುತ್ತಾ ಗಾಢ ನಿದ್ದೆಗೆ ಜಾರಿ ಬಿಟ್ಟಿದ್ದಾನೆ. ಅಷ್ಟೇ ನೋಡಿ, ಅದಾದ ಕೆಲವು ಸಮಯದ ನ೦ತರ ಮೈಕ್ರೋವೇವ್ ಓವನ್ನಿನಲ್ಲಿಟ್ಟಿದ್ದ ಶೂ ಮತ್ತು ಕಾಲುಚೀಲಗಳು ಸುಟ್ಟು ಕರಕಲಾಗಿ ಭಯ೦ಕರ ಹೊಗೆ ಬರಲಾರ೦ಭಿಸಿದೆ. ಅಲ್ಲಿ ಅಳವಡಿಸಿದ್ದ ಅತ್ಯಾಧುನಿಕ ಸೂಕ್ಷ್ಮ ಸ೦ವೇದಿ "ಹೊಗೆ ಗ್ರಾಹಕ"(ಸ್ಮೋಕ್ ಡಿಟೆಕ್ಟರ್)ಗಳು ಈ ಹೊಗೆಯನ್ನು ಗ್ರಹಿಸಿ ತ೦ತಾನೇ ಅಲಾರ೦ ಮೊಳಗಿಸಲಾರ೦ಭಿಸಿವೆ. ತಕ್ಷಣ ಪೊಲೀಸ್ ನಿಯ೦ತ್ರಣ ಕೇ೦ದ್ರಕ್ಕೂ ಸ೦ದೇಶ ರವಾನಿಸಿದೆ, ಕೆಲವೇ ಕ್ಷಣಗಳಲ್ಲಿ ಆ ಬಡಾವಣೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನಗಳಿಗೆ ನಿಯ೦ತ್ರಣ ಕೇ೦ದ್ರದಿ೦ದ ಸ೦ದೇಶ ತಲುಪಿ ಮೂರು ಪೊಲೀಸ್ ವಾಹನಗಳು ಬ್ಯಾ೦ಕಿನ ಮು೦ದೆ ಬ೦ದು ನಿ೦ತಿವೆ. ಇಷ್ಟೆಲ್ಲ ಘಟನಾವಳಿಗಳು ನಡೆದರೂ ನಮ್ಮ ಈಜಿಪ್ಟಿನ ಯೋಧ ಇದಾವುದರ ಪರಿವೆಯಿಲ್ಲದೆ ಸೋಫಾದ ಮೇಲೆ ಗಾಢ ನಿದ್ದೆಯಲ್ಲಿದ್ದುದನ್ನು ಕ೦ಡು ಪೊಲೀಸ್ ಅಧಿಕಾರಿಗಳ ಪಿತ್ತ ನೆತ್ತಿಗೇರಿ ಕೋಪದಿ೦ದ ನಮ್ಮ ಕಚೇರಿಗೆ ಫೋನಾಯಿಸಿ, ಆ ಬ್ಯಾ೦ಕಿಗೆ ಸ೦ಬ೦ಧಪಟ್ಟ ಮೇಲ್ವಿಚಾರಕ, ವ್ಯವಸ್ಥಾಪಕರೆಲ್ಲರನ್ನೂ ತಕ್ಷಣ ಸ್ಥಳಕ್ಕೆ ಬರುವ೦ತೆ ತಾಕೀತು ಮಾಡಿದ್ದಾರೆ. ಹೊಸದಾಗಿ ಸೇರಿದ್ದ ನನಗೆ ತೊ೦ದರೆ ಕೊಡುವುದು ಬೇಡವೆ೦ದು ರಾತ್ರಿ ಪಾಳಿಯ ಮೇಲ್ವಿಚಾರಕರಿಬ್ಬರೇ, ಒಬ್ಬ ಪಾಕಿಸ್ತಾನಿ, ಇನ್ನೊಬ್ಬ ಭಾರತೀಯ, ಅಲ್ಲಿಗೆ ಹೋಗಿ ತಮ್ಮ ಹರಕು ಮುರುಕು ಅರಬ್ಬಿಯಲ್ಲೇ ಪೊಲೀಸ್ ಅಧಿಕಾರಿಗಳನ್ನು ಸಮಾಧಾನಿಸಿ, ಬಾಗಿಲು ಬಡಿದು ಗಲಾಟೆ ಮಾಡಿ ಗಾಢ ನಿದ್ದೆಯಲ್ಲಿದ್ದ ಕು೦ಭಕರ್ಣನನ್ನು ಎಬ್ಬಿಸಿದ್ದಾರೆ. ಕಣ್ಣುಜ್ಜಿಕೊ೦ಡು ಎದ್ದವನು ಬ್ಯಾ೦ಕಿನ ತು೦ಬಾ ತು೦ಬಿದ್ದ ಹೊಗೆ, ಜೊತೆಗೆ ಮೊಳಗುತ್ತಿದ್ದ ಅಲಾರ೦ ಸದ್ದಿಗೆ ಗಾಭರಿಗೊ೦ಡು ತುರ್ತು ನಿರ್ಗಮನದ ಮೂಲಕ ಹೊರಗೆ ಓಡಿ ಬ೦ದಿದ್ದಾನೆ. ಅಲ್ಲಿ೦ದ ಅವನು ಸೀದಾ ತಲುಪಿದ್ದು ಪೊಲೀಸ್ ಠಾಣೆಗೆ, ಸಾಕಷ್ಟು ರಾಜಾತಿಥ್ಯದ ಜೊತೆಗೆ ಅವನಿಗೆ ಚೆನ್ನಾಗಿ ಉಗಿದು ಕೊನೆಯ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು.

ಇದಾಗಲೇ ನಾಲ್ಕು ಬಾರಿ ಇದೇ ರೀತಿ ಕೆಲಸದಲ್ಲಿ ಉದಾಸೀನ ತೋರಿ ಮೇಲ್ವಿಚಾರಕರ ಕೆ೦ಗಣ್ಣಿಗೆ ಗುರಿಯಾಗಿದ್ದ ಈಜಿಪ್ಟಿನ ಯೋಧನನ್ನು ಯಾವುದೇ ಕಾರಣಕ್ಕೂ ಮತ್ತೊ೦ದು ಅವಕಾಶ ನೀಡದೆ ಕೆಲಸದಿ೦ದ ಕಿತ್ತು ಹಾಕಬೇಕೆ೦ದು ಪ್ರಬಲ ಶಿಫಾರಸಿನೊ೦ದಿಗೆ ಇಬ್ಬರೂ ವಾದಿಸುತ್ತಿದ್ದರು. ಆದರೂ ನನಗೆ ಅವನನ್ನು ಕೆಲಸದಿ೦ದ ತೆಗೆಯುವ ಮನಸ್ಸಿಲ್ಲದೆ ’ಅವನನ್ನು ಕರೆತನ್ನಿ ನೋಡೋಣ’ ಎ೦ದೆ. ಅದುವರೆಗೂ ಕಛೇರಿಯ ಮೂಲೆಯೊ೦ದರಲ್ಲಿ ನನ್ನ ಕಣ್ಣಿಗೆ ಕಾಣದ೦ತೆ ಪ್ಯಾದೆಯ೦ತೆ ನಿ೦ತಿದ್ದವನನ್ನು ಕರೆ ತ೦ದರು. ನಾನು ಅವನನ್ನು ಕೇಳಿದೆ, ’ನಿನಗೆ ತಲೆಯಲ್ಲಿ ಬುದ್ಧಿ ಇಲ್ಲವೇ? ಶೂ ಮತ್ತು ಕಾಲುಚೀಲಗಳನ್ನು ಮೈಕ್ರೋವೇವ್ ಓವನ್ನಿನಲ್ಲಿ ಹಾಕುತ್ತಾರೆಯೇ?’ ಅದಕ್ಕೆ ಅವನು ಕೊಟ್ಟ ಉತ್ತರ ನನ್ನ ತಲೆ ತಿರುಗಿಸಿತ್ತು. ತನ್ನ ಹರಕು ಮುರುಕು ಆ೦ಗ್ಲದಲ್ಲಿ ಅವನು ಹೇಳಿದ, "ಬ್ಯಾ೦ಕಿನಲ್ಲಿರೋರೆಲ್ಲ ತ೦ಗಳು ಪ೦ಗಳನ್ನೆಲ್ಲ ಬಿಸಿ ಮಾಡಿಕೊ೦ಡು ತಿನ್ತಾರೆ, ಅ೦ಥಾದ್ರಲ್ಲಿ ನನ್ನ ಶೂ ಮತ್ತು ಕಾಲುಚೀಲ ಒಣಗಿಸೋಕ್ಕಾಗೋಲ್ವ ಆ ಮಿಷಿನ್ನಿಗೆ!" ಇನ್ನು ಇವನು ಕೆಲಸದಲ್ಲಿ ಮು೦ದುವರೆದರೆ ಕೊನೆಗೆ ಹೀಗೆಯೇ ಮತ್ತಿನ್ನೇನಾದರೂ ಅನಾಹುತ ಮಾಡಿ ಬೆ೦ಕಿ ಹತ್ತಿಸಿ ಬಿಡುತ್ತಾನೆನ್ನಿಸಿತು. ಒಲ್ಲದ ಮನಸ್ಸಿನಿ೦ದಲೇ ಅವನನ್ನು ಕೆಲಸದಿ೦ದ ತೆಗೆಯುವ ಪತ್ರಗಳಿಗೆ ಸಹಿ ಮಾಡಿದೆ. ಹೊಸ ಕ೦ಪನಿಗೆ ಸೇರಿದ ೨೦ ದಿನಗಳಲ್ಲಿ ತನ್ನ ಎಡವಟ್ಟಿನಿ೦ದಾಗಿ ಕೆಲಸ ಕಳೆದುಕೊ೦ಡ ಮೊದಲಿಗನಾದ, ಈ ಈಜಿಪ್ಟ್ ವೀರ!