Saturday, September 26, 2015

ಭದ್ರತೆಯ ಲೋಕದಲ್ಲಿ – ೧೦ "ಆಪರೇಷನ್ ಶ್ರೀಗಂಧ"-

ಮುಖ್ಯದ್ವಾರದ ಭದ್ರತಾ ಉಸ್ತುವಾರಿ ಭ್ರಷ್ಟ ನಿವೃತ್ತ ಸೈನಿಕನ ಕೈ ತಪ್ಪಿ ನಮ್ಮ ಹತೋಟಿಗೆ ಬಂದಿದ್ದು ಅವನಿಗಷ್ಟೇ ಅಲ್ಲದೆ ಅವನಿಗೆ ಸಹಕರಿಸುತ್ತಿದ್ದ ಇತರ ಕೆಲವು ಉದ್ಯೋಗಿಗಳಿಗೂ, ಕಾರ್ಖಾನೆಗೆ ಇತರ ಸೌಲಭ್ಯಗಳನ್ನೊದಗಿಸುತ್ತಿದ್ದ ಕೆಲವು  ಗುತ್ತಿಗೆದಾರರಿಗೂ  ಸಹಾ ಇರಿಸುಮುರುಸಾಗಿತ್ತುಬಾಯಿಬಿಟ್ಟು ಹೇಳಲಾಗದೆ, ಅನುಭವಿಸಲೂ ಆಗದೆ ತಾವು ಅದೆಷ್ಟೋ ದಿನಗಳಿಂದ ಹೊಡೆಯುತ್ತಿದ್ದ ಲೂಟಿ ತಮ್ಮ ಕೈತಪ್ಪಿ ಹೋಗುವುದನ್ನು ಅವರು ಅಸಹಾಯಕರಾಗಿ ನೋಡುತ್ತಿದ್ದರು. ಯಾವುದಾದರೂ ಒಂದು ಕಾರಣ ಹುಡುಕಿ ನಮ್ಮನ್ನು ಮಟ್ಟ ಹಾಕಬೇಕೆಂದು ಕಾಯುತ್ತಿದ್ದ ಅವರಿಗೆ ಅಂತಹ ಯಾವುದೇ ಅವಕಾಶ ಸಿಗದಂತೆ ಬಹಳ ಜಾಗರೂಕರಾಗಿ ನಮ್ಮ ತಂಡ ಕಾರ್ಯ ನಿರ್ವಹಿಸುತ್ತಿತ್ತುಹೀಗಿರುವಾಗ ನಡೆದ ಮತ್ತೊಂದು ಘಟನೆ ನಮ್ಮ ತಂಡದ ಮನೋಸ್ಥೈರ್ಯವನ್ನು ಇಮ್ಮಡಿಗೊಳಿಸಿತ್ತು.

ಸುಮಾರು ಐದುನೂರು ಎಕರೆಗಿಂತ ಹೆಚ್ಚಾಗಿದ್ದ ಕಾರ್ಖಾನೆಯ  ಜಮೀನಿನಲ್ಲಿ ಸಾಕಷ್ಟು ಮರಗಿಡಗಳು ಬೆಳೆದು ನಿಂತಿದ್ದು ಒಂದು ಪುಟ್ಟ ಕಾಡಿನಂತಿದ್ದ ಭಾಗದಲ್ಲಿ  ಆಳೆತ್ತರದ ಹುತ್ತಗಳೂ ಸಾಕಷ್ಟಿದ್ದುದಲ್ಲದೆ ಮಾರುದ್ಧದ ವಿವಿಧ ಜಾತಿಯ ಹಾವುಗಳು ಹಗಲು ಹೊತ್ತಿನಲ್ಲಿಯೇ ರಾಜಾರೋಷವಾಗಿ ಹರಿದಾಡುತ್ತಿದ್ದವು. ಅಲ್ಲದೆ  ಸಾಕಷ್ಟು   ಶ್ರೀಗಂಧದ ಮರಗಳು ತಂತಾವೇ ಬೆಳೆದು ನಿಂತಿದ್ದವುಆಗಾಗ ಅರಣ್ಯ ಇಲಾಖೆಯವರು ಬಂದು ಬಲಿತ ಗಂಧದ ಮರಗಳಿಗೆ ಸಂಖ್ಯೆ ನಮೂದು ಮಾಡಿ, ಮುಖ್ಯ ಭದ್ರತಾ ಅಧಿಕಾರಿಯ ಆತಿಥ್ಯ ಸ್ವೀಕರಿಸಿ ಹೋಗುತ್ತಿದ್ದರುಕೇವಲ ಕುರುಚಲು ಗಿಡಗಳಿಂದ ಸುತ್ತುವರಿದಿದ್ದ ಜಾಗಕ್ಕೆ ಸರಿಯಾದ ಬೇಲಿಯ ವ್ಯವಸ್ಥೆಯೂ ಇರಲಿಲ್ಲ, ಹೀಗಾಗಿ ಸುತ್ತಲಿನ ಹಳ್ಳಿಗಳಿಂದ ದನಕರುಗಳನ್ನು ಮೇಯಿಸಲು ಬರುತ್ತಿದ್ದ ಹಳ್ಳಿಗರಿಗೆ ಬೆಳೆದು ನಿಂತ ಶ್ರೀಗಂಧದ ಮರಗಳು ಸುಲಭವಾಗಿ ಕಣ್ಣಿಗೆ ಬೀಳುತ್ತಿದ್ದವುಇವರಿಂದ ವಿಚಾರ ತಿಳಿದ ಪರಿಣತ ಕಳ್ಳರು ರಾತ್ರಿಯ ಹೊತ್ತಿನಲ್ಲಿ ಜಾಗಕ್ಕೆ ಬಂದು ಬೆಳೆದು ನಿಂತ ಗಂಧದ ಮರದ ಬಲಿತ ಭಾಗಗಳನ್ನು ಬ್ಯಾಟರಿ ಚಾಲಿತ ಗರಗಸದಿಂದ ಕ್ಷಣಮಾತ್ರದಲ್ಲಿ ಕತ್ತರಿಸಿ, ತಮಗೆ ಬೇಕಿಲ್ಲದ ಉಳಿದ ಭಾಗವನ್ನು ಅಲ್ಲಿಯೇ ಬಿಸಾಕಿ   ಕಳ್ಳತನ ಮಾಡಿಕೊಂಡು ಹೋಗುತ್ತಿದ್ದರು.   

ಮುಖ್ಯದ್ವಾರದಲ್ಲಿನ ಚಟುವಟಿಕೆಗಳು ನಮ್ಮ ನಿಯಂತ್ರಣಕ್ಕೆ ಬಂದ ನಂತರ ನಿಧಾನವಾಗಿ ನನ್ನ ಓಡಾಟ ಕಾರ್ಖಾನೆಯ ಒಳಭಾಗ ಹಾಗೂ ಸುತ್ತಲಿನ ಕಾಡುಪ್ರದೇಶಕ್ಕೆ ವಿಸ್ತರಿಸುತ್ತಾ ಹೋದಂತೆ ಆಗಾಗ್ಗೆ ಬೆಳೆದು ನಿಂತ ಗಂಧದಮರಗಳು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದ್ದುದು ನನ್ನ ಗಮನಕ್ಕೆ ಬಂದಿತ್ತುಅಲ್ಲದೆ ಕಾರ್ಖಾನೆಯ ಉದ್ಯಾನವನದ ನಿರ್ವಹಣೆಗೆಂದೇ ನಿಯೋಜಿಸಲ್ಪಟ್ಟಿದ್ದ ಕೆಲಸಗಾರರು ಆಗಾಗ ಕಾರ್ಖಾನೆಯ ಸುತ್ತಮುತ್ತಲಿದ್ದ ಗಂಧದ ಮರಗಳನ್ನು ಕತ್ತರಿಸಿ, ಒಣಗಿಸಿ, ಸಣ್ಣ ಉಗ್ರಾಣದಂಥ ಕೊಠಡಿಯೊಂದರಲ್ಲಿ ಪೇರಿಸಿಟ್ಟಿರುವುದು ಸಹಾ ನಮ್ಮ ಭದ್ರತಾ ರಕ್ಷಕರಿಗೆ ಗೊತ್ತಾಗಿತ್ತುಇಲ್ಲಿಯೂ ಸಹಾ ಮುಖ್ಯ ಭದ್ರತಾ ಅಧಿಕಾರಿ ಮತ್ತವನ ಚೇಲಾಗಳ ಆಟ ನಡೆಯುತ್ತಿದೆಯೆಂದೂ, ಸಾಕಷ್ಟು ಶ್ರೀಗಂಧದ ಮರದ ತುಂಡುಗಳನ್ನು ಸಂಸ್ಥೆಯ ವಾಹನಗಳಲ್ಲಿಯೇ ಆಡಳಿತ ಮಂಡಳಿಯವರ ಗಮನಕ್ಕೆ ಬರದಂತೆ ಸಾಗಿಸಲಾಗಿದೆಯೆಂದೂ  ಉದ್ಯಾನವನದ ಕಾರ್ಮಿಕರಿಂದ ತಿಳಿದು ಬಂದಿತ್ತು.   ಸಾಮಾನ್ಯವಾಗಿ ಶ್ರೀಗಂಧದ ಮರಗಳನ್ನು ಕಡಿಯಲು ಕಳ್ಳರು, ಕಾರ್ಖಾನೆಗೆ ರಜಾದಿನವಾದ ಭಾನುವಾರದ ರಾತ್ರಿಯೇ ಬರುತ್ತಾರೆನ್ನುವ ಮಹತ್ವದ ಮಾಹಿತಿಯೂ ನಮಗೆ ಸಿಕ್ಕಿತ್ತುಇದಕ್ಕನುಗುಣವಾಗಿ ರಹಸ್ಯ ಯೋಜನೆಯೊಂದನ್ನು ರೂಪಿಸಿ, ಅದಕ್ಕೆ "ಆಪರೇಷನ್ ಶ್ರೀಗಂಧ" ಎಂದು ಹೆಸರಿಟ್ಟು, ಬರುವ ಭಾನುವಾರದಂದು ಶ್ರೀಗಂಧದ ಕಳ್ಳರಿಗೊಂದು ಗತಿ ಕಾಣಿಸಬೇಕೆಂದು ತೀರ್ಮಾನಿಸಿದ್ದೆವು.

ನಾವು ಕಾತುರದಿಂದ ಕಾಯುತ್ತಿದ್ದ ದಿನ ಕೊನೆಗೂ ಬಂದೇ ಬಿಟ್ಟಿತುಮಾಮೂಲಿನಂತೆ ದಿನದ ಪಾಳಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಿದ್ದ ನನ್ನ ಕೆಲವು ಆಪ್ತ ಸಹಾಯಕರು ಮತ್ತು ನಾನು ಜೊತೆಯಲ್ಲಿ ಕುಳಿತು ವಾರದ ರಜಾದಿನದ ಬಾಡೂಟ ಮುಗಿಸಿ ರಾತ್ರಿ ಹತ್ತು ಘಂಟೆಗೆ ಕಾರ್ಖಾನೆಗೆ ಹಿಂದಿರುಗಿ ಬಂದಿದ್ದೆವುಸುಮಾರು ಹದಿನೈದು ಜನರ ನಮ್ಮ ತಂಡ ಕೈಯಲ್ಲಿ ಲಾಠಿ ಹಾಗೂ ಟಾರ್ಚುಗಳನ್ನು ಹಿಡಿದು ಶ್ರೀಗಂಧದ ಮರಗಳಿದ್ದ ಜಾಗದಲ್ಲಿ ಬಂದು ಅಡಗಿ ಕುಳಿತಿದ್ದೆವುನಾವು ನಿರೀಕ್ಷಿಸಿದ್ದಕ್ಕಿಂತಲೂ ಸ್ವಲ್ಪ ತಡವಾಗಿ ರಾತ್ರಿಯ ಹನ್ನೆರಡು ಘಂಟೆಯ ನಂತರ ನಾಲ್ಕು ಜನರ ಮರಗಳ್ಳರ ತಂಡ ಪ್ರದೇಶಕ್ಕೆ ಆಗಮಿಸಿತ್ತುರಾತ್ರಿಯ ಮಂದ ಬೆಳಕಿನಲ್ಲಿ ಅತ್ತಿತ್ತ ನೋಡುತ್ತಾ, ಯಾರೂ ಅವರನ್ನು ಗಮನಿಸುತ್ತಿಲ್ಲವೆಂದು ಖಾತ್ರಿಪಡಿಸಿಕೊಳ್ಳುತ್ತಾ ಕಳ್ಳಬೆಕ್ಕಿನಂತೆ ಹೆಜ್ಜೆಯಿಡುತ್ತಾ ಬಂದ ಕಳ್ಳರಲ್ಲಿ ಒಬ್ಬನ ಕೈಯ್ಯಲ್ಲಿ ಬ್ಯಾಟರಿಚಾಲಿತ ಗರಗಸವಿದ್ದರೆ ಇಬ್ಬರ ಕೈಯಲ್ಲಿ ಮಚ್ಚುಗಳೂ, ಒಬ್ಬನ ಕೈಯ್ಯಲ್ಲಿ ಹಗ್ಗವೂ ಇದ್ದದ್ದು ನಮಗೆ ಕಾಣುತ್ತಿತ್ತುಕೇವಲ ಲಾಠಿಗಳನ್ನು ಹಿಡಿದು ಅವರನ್ನು ಹಿಡಿಯಲು ಬಂದಿದ್ದ ನಮ್ಮ ತಂಡ ಸ್ವಲ್ಪ ಎಡವಟ್ಟು ಮಾಡಿದ್ದರೂ ಪ್ರಾಣಕ್ಕೆ ಎರವಾಗುವ ಸಂಭವವಿತ್ತುಬಲಿತಿದ್ದ ಶ್ರೀಗಂಧದ ಮರವೊಂದನ್ನು ಅವರು ತಮ್ಮಲ್ಲಿದ್ದ ಗರಗಸದಿಂದ ಕತ್ತರಿಸಿ, ಎಲೆ ಹಾಗೂ ಕೊಂಬೆಗಳನ್ನೆಲ್ಲಾ ಸವರಿ, ಬಲಿತ ದಿಂಡುಗಳನ್ನು ಬೇರೆ ಮಾಡುವವರೆಗೂ ಉಸಿರು ಬಿಡದಂತೆ ಕಾದ ನಮ್ಮ ತಂಡ, ಅವರು ತಮ್ಮ ಆಯುಧಗಳನ್ನು ಬದಿಗಿಟ್ಟು ಬಲಿತ ಮರದ ತುಂಡುಗಳನ್ನೆಲ್ಲಾ ಒಟ್ಟು ಮಾಡುತ್ತಿರುವಾಗ, ಒಮ್ಮೆಗೇ ಅವರ ಮೇಲೆ ಧಾಳಿಯಿಟ್ಟು ಕೈಲಿದ್ದ ಲಾಠಿಗಳಿಂದ ಅವರನ್ನು ಮನಸೋ ಇಚ್ಛೆ ಥಳಿಸಿ, ಅವರು ತಂದಿದ್ದ ಹಗ್ಗಗಳಿಂದಲೇ ಅವರನ್ನು ಹೆಡೆಮುರಿ ಕಟ್ಟಿ ಹಾಕಿದ್ದೆವುಬಹಳ ದಿನಗಳಿಂದ ರಾಜಾರೋಷವಾಗಿ ಮರಗಳನ್ನು ಕಡಿಯುತ್ತಿದ್ದ ಅವರಿಗೆ ನಮ್ಮ ತಂಡ ರೀತಿ ಆಕ್ರಮಣ ಮಾಡಬಹುದೆನ್ನುವ ಕಲ್ಪನೆಯೇ ಇರಲಿಲ್ಲ!   ನಿಸ್ಸಹಾಯಕರಾಗಿ ನಮ್ಮ ಕೈಸೆರೆಯಾದ ಅವರನ್ನು ನಡೆಸಿಕೊಂಡು ಕಾರ್ಖಾನೆಯ ಮುಂಭಾಗಕ್ಕೆ ಕರೆತಂದು ಭದ್ರತಾ ಕಚೇರಿಯ ಪಕ್ಕದಲ್ಲಿದ್ದ ಪುಟ್ಟ ಕೊಠಡಿಯಲ್ಲಿ ಕೂಡಿ ಹಾಕಿದ್ದೆವುಕಾರ್ಖಾನೆಯ ದೂರವಾಣಿಯಿಂದ ಹೊಸಕೋಟೆಯ ಪೊಲೀಸ್ ಠಾಣೆಗೆ ಫೋನ್ ಮಾಡಿ ನಮ್ಮ ಸಾಹಸಗಾಥೆಯನ್ನು ವಿವರಿಸಿ ಬೇಗನೆ ಕಾರ್ಖಾನೆಗೆ ಬರುವಂತೆ ವಿನಂತಿಸಿದ್ದೆಮರಗಳ್ಳರು ತಂದಿದ್ದ ಆಯುಧಗಳು ಹಾಗೂ ಕಡಿದಿದ್ದ ಮರದ ತುಂಡುಗಳನ್ನು ಭದ್ರತಾ ಕಚೇರಿಯ ಪಕ್ಕದಲ್ಲಿಯೇ ಜೋಡಿಸಿಟ್ಟು ಪೊಲೀಸರ ಹಾದಿ ಕಾಯತೊಡಗಿದೆವು

ಇಡೀ ಭದ್ರತಾ ರಕ್ಷಕರ ತಂಡವೇ ಹೊಸ ಹುಮ್ಮಸ್ಸಿನಲ್ಲಿ ತೇಲುತ್ತಿತ್ತುಒಂದಷ್ಟು ಓದಿ, ಯಾವುದೂ ಕೆಲಸ ಸಿಗದಿದ್ದಾಗ, ಹೊಟ್ಟೆಪಾಡಿಗಾಗಿ ಸಿಕ್ಕ ಭದ್ರತೆಯ ಕೆಲಸಕ್ಕೆ ಸೇರಿದ್ದ ಅವರಲ್ಲಿ ಹೊಸ ಸಂಚಲನವೊಂದು ಮೂಡಿತ್ತುಮೊದಲ ಬಾರಿಗೆ ಜೀವನದಲ್ಲಿ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆಯ ಭಾವನೆಯನ್ನು ಇಡೀ ತಂಡ ಅನುಭವಿಸಿತ್ತುಸುಮಾರು ಬೆಳಗಿನ ಐದು ಘಂಟೆಯ ಹೊತ್ತಿಗೆ ಬಂದ ಹೊಸಕೋಟೆಯ ಪೊಲೀಸರ ತಂಡ ಮಹಜರು ನಡೆಸಿ, ಕಳ್ಳರನ್ನು ಬಂದಿಸಿ, ಅವರು ತಂದ್ದಿದ್ದ ಆಯುಧಗಳು ಹಾಗೂ ಕಡಿದಿದ್ದ ಗಂಧದ ಮರವನ್ನು ತಮ್ಮವಶಕ್ಕೆ ತೆಗೆದುಕೊಂಡಿದ್ದರುಸಬ್ ಇನ್ಸ್ಪೆಕ್ಟರ್ ಮುನಿಯಪ್ಪ ನಮ್ಮ ತಂಡವನ್ನು ಅಭಿನಂದಿಸಿ, ಇನ್ನು ಮುಂದೆ ರೀತಿ ಮಾಡುವುದಾದರೆ ಪೊಲೀಸರಿಗೆ ತಿಳಿಸಿಯೇ ಮಾಡಬೇಕು, ಇಲ್ಲದಿದ್ದರೆ ನಿಮ್ಮ ಪ್ರಾಣಕ್ಕೆ ಸಂಚಕಾರವಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದರುಇನ್ನು ಮುಂದೆ ಪೊಲೀಸರಿಗೆ ವಿಷಯ ತಿಳಿಸಿಯೇ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿ ಅವರನ್ನು ಬೀಳ್ಕೊಟ್ಟಿದ್ದೆವು. ನಂತರ ಎಲ್ಲರೂ ನಮ್ಮನಮ್ಮ ಮನೆಗಳಿಗೆ ತೆರಳಿ, ಸ್ವಲ್ಪ ಹೊತ್ತು ವಿಶ್ರಮಿಸಿ ಮತ್ತೆ ಮಾಮೂಲಿನಂತೆ ನಮ್ಮ ಕೆಲಸಕ್ಕೆ ಹಾಜರಾಗಿದ್ದೆವು.

ರಾತ್ರಿಯ ವಿಚಾರವೆಲ್ಲವನ್ನೂ ಕೂಲಂಕುಷವಾಗಿ ಕಾರ್ಖಾನೆಯ ಆಡಳಿತಾಧಿಕಾರಿಯವರಿಗೆ ವರದಿ ಒಪ್ಪಿಸಿದಾಗ ಮೂಕವಿಸ್ಮಿತರಾದ ಅವರು ತಮ್ಮ ಸೀಟಿನಿಂದ ಎದ್ದು ಬಂದು ನನ್ನನ್ನು ಅಪ್ಪಿಕೊಂಡು ಅಭಿನಂದಿಸಿದ್ದರುಅದುವರೆಗೂ ಅವರ ವೈಯಕ್ತಿಕ ಹಿನ್ನೆಲೆಯ ಅರಿವಿಲ್ಲದ ನನಗೆ ಅವರು ಕೊಡಗಿನವರೆಂದೂ, ಭಾರತೀಯ ಸೇನೆಯಲ್ಲಿ ಹದಿನೈದು ವರ್ಷ ಕೆಲಸ ಮಾಡಿ ಬಂದಿರುವುದಾಗಿಯೂ ಹೇಳಿ ನನ್ನ ಪೂರ್ವಾಪರ ವಿಚಾರಿಸಿದ್ದರುನಮ್ಮದು ಹೊಳೆನರಸೀಪುರ ಎಂದಾಗ ಬಹಳ ಖುಷಿಯಾಗಿದ್ದರುಅವರೊಡನೆ ಅವರ ಕಾರಿನಲ್ಲಿಯೇ ಹೊಸಕೋಟೆಯ ಪೊಲೀಸ್ ಠಾಣೆಗೆ ಹೋಗಿ ಅಧಿಕೃತವಾಗಿ ಮರಗಳ್ಳರ ವಿರುದ್ಧ ದೂರು ದಾಖಲಿಸಿದ್ದೆವು.          ತಾವು ಸೆರೆ ಹಿಡಿದಿದ್ದ ಮರಗಳ್ಳರಿಗೆ ಸರಿಯಾದ ರಾಜಾತಿಥ್ಯ ನೀಡಿದ್ದ ಹೊಸಕೋಟೆಯ ಪೊಲೀಸರಿಗೆ ನಾಲ್ವರಲ್ಲದೆ ಅವರ ಗುಂಪಿನಲ್ಲಿ ಇನ್ನೂ ಸಾಕಷ್ಟು ಜನರಿದ್ದು, ಹೊಸಕೋಟೆ, ವೈಟ್ ಫೀಲ್ಡ್, ಕಾಡುಗೋಡಿ, ಮಹದೇವಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಲವಾರು ಕಾರ್ಖಾನೆಗಳಲ್ಲಿ ಬೆಳೆದು ನಿಂತಿದ್ದ ಹಲವಾರು ಗಂಧದ ಮರಗಳನ್ನು ರಾತ್ರೋ ರಾತ್ರಿ ಕಡಿದು ಸಾಗಿಸಿದ್ದ ಮಾಹಿತಿ ಸಿಕ್ಕಿತ್ತುಪೊಲೀಸ್ ಹಾಗೂ ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಒಂದು ದೊಡ್ಡ ಮರಗಳ್ಳರ ತಂಡವೇ ಬಂಧನಕ್ಕೊಳಗಾಗಿತ್ತು.   "ಆಪರೇಷನ್ ಶ್ರೀಗಂಧ" ಯಶಸ್ವಿಯಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯವರು  ಖಾಸಗಿ ಭದ್ರತಾ ರಕ್ಷಕರ ಕಾರ್ಯಕ್ಷಮತೆಯನ್ನು ಹೊಗಳುವಂತಾಗಿತ್ತು.

   ಎಲ್ಲ ವಿಚಾರಗಳು ಕಾರ್ಖಾನೆಯಲ್ಲಿ ಬಾಯಿಂದ ಬಾಯಿಗೆ ಹಬ್ಬಿ ರೋಚಕವಾಗಿ ವರ್ಣಿಸಲ್ಪಡುತ್ತಾ ಪ್ರಚಾರಗೊಳ್ಳುತ್ತಿದ್ದವುಇದನ್ನೆಲ್ಲಾ ನೋಡುತ್ತಾ ಭ್ರಷ್ಟ ಮುಖ್ಯ ಭದ್ರತಾ ಅಧಿಕಾರಿಯ ರಕ್ತ ಕುದ್ದು ಹೋಗುತ್ತಿತ್ತುಎಲ್ಲರ ಮುಂದೆ ನಾವು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆಂದು ನಮ್ಮನ್ನು ಹೊಗಳುತ್ತಿದ್ದರೂ  ಅವನೆದೆಯಲ್ಲಿ ತುಂಬಿದ್ದ ಅಸಮಾಧಾನ ಅವನ ಕಣ್ಣುಗಳು ಪ್ರತಿಫಲಿಸುತ್ತಿದ್ದವು. ನಾವು ಎಷ್ಟೇ ದಕ್ಷತೆಯಿಂದ ಕೆಲಸ ಮಾಡಿದರೂ ಗುತ್ತಿಗೆಯ ಆಧಾರದಲ್ಲಿದ್ದುದರಿಂದ ಕಾರ್ಖಾನೆಯ ಸ್ವಂತ ಸಿಬ್ಬಂದಿಯಂತೆ ಬೀಗಲು ಸಾಧ್ಯವಿರಲಿಲ್ಲಮುಖ್ಯ ಭದ್ರತಾ ಅಧಿಕಾರಿಯ ಅಸಮಾಧಾನ ನಮ್ಮನ್ನು ಒಂದಲ್ಲಾ ಒಂದು ದಿನ ಕಾರ್ಖಾನೆಯಿಂದ ಹೊರಗಟ್ಟಬಹುದೆನ್ನುವ ಆತಂಕದಲ್ಲಿಯೇ ನಮ್ಮ ಭದ್ರತಾ ರಕ್ಷಕರು ಕಾರ್ಯ ನಿರ್ವಹಿಸಬೇಕಿತ್ತು!

(ಮುಂದೇನಾಯಿತು,,,,ಮುಂದಿನ ಭಾಗದಲ್ಲಿ..... )

No comments: