Saturday, September 12, 2015

ಮಾಂಗಲ್ಯಂ ತಂತು ನಾನೇನ,,,,,,,,,,,,

ಮಾಂಗಲ್ಯಂ ತಂತು ನಾನೇನ,,,,,ಮಮಜೀವನ ಹೇತುನಾ,,,,,,,! ಏನಾದರೂ ಅರ್ಥವಿದೆಯೇ ಈ ಮಂತ್ರಕ್ಕೆ! ಕೆಲವು ದಿನಗಳ ಹಿಂದೆ ದರ್ಶನ್ ಕುಟುಂಬದ ಜಗಳ ಎಲ್ಲರ ಬಿದ್ದು ಕಣ್ಮರೆಯಾಗುವ ಮುನ್ನವೇ ದುನಿಯಾ ವಿಜಯ್ ದಾಂಪತ್ಯದ ಕಥೆ ಹಾದಿರಂಪವಾಗಿತ್ತು! ಈಗ "ಕಿಚ್ಚ" ಸುದೀಪನ ಸರದಿ. ತೆರೆಯ ಮೇಲೆ ನಾಯಕರಾಗಿ ಎಲ್ಲಾ ಸದ್ಗುಣಗಳ ಖನಿಯಾಗಿ ಲಕ್ಷಾಂತರ ಜನ ಅಭಿಮಾನಿಗಳು ಆರಾಧಿಸುವ ನಿಮಗೆ ಏನಾಗಿದೆ? ಏಕೀ ಹೊಂದಾಣಿಕೆಯ ಕೊರತೆ? ಹೀರೋಗಳ ಕಥೆಯೇ ಹೀಗಾದರೆ ಇನ್ನು ಜನಸಾಮಾನ್ಯರ ಪಾಡೇನು?
ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಅದೆಷ್ಟೋ ಅನಿವಾಸಿಗಳದ್ದು ಇನ್ನೊಂದು ರೀತಿಯ ಕಥೆ. ಹೊಟ್ಟೆ ಬಟ್ಟೆ ಕಟ್ಟಿ ಸುಡುವ ಬಿಸಿಲಿನಲ್ಲಿ ತಮ್ಮವರಿಗಾಗಿ ದುಡಿಯುತ್ತಾ, ಸಂಬಳ ಬಂದೊಡನೆ ಮನೆಯವರಿಗೆ ಹಣ ಕಳುಹಿಸಿ ಅವರ ಏಳಿಗೆಯ ಕನಸು ಕಾಣುತ್ತಾ ದಿನದೂಡುವ ಅದೆಷ್ಟೋ ಅನಿವಾಸಿಗಳ ಎದೆ ಒಡೆದು ಹೋಗಿದೆ, ಭಾವನೆಗಳು ಸತ್ತು ಸಂಬಂಧಗಳು ಮುರುಟಿ ವಿಚ್ಚೇದನದ ಅಂಚಿಗೆ ಬಂದು ನಿಂತಿವೆ! ಪ್ರತಿ ತಿಂಗಳೂ ಅನಿವಾಸಿ ಕಳುಹಿಸುವ ಹಣಕ್ಕಾಗಿ ಕಾಯುವ ಕುಟುಂಬದವರು ಅವನನ್ನು ಕೇವಲ ಬಯಸಿದಾಗೆಲ್ಲ ಹಣ ನೀಡುವ ಏ.ಟಿ.ಎಮ್. ಯಂತ್ರವೆಂದೇ ಭಾವಿಸಿರುತ್ತಾರೆ , ಒಮ್ಮೆ ಹಣ ಕಳುಹಿಸುವುದರಲ್ಲಿ ಸ್ವಲ್ಪ ಏರುಪೇರಾದರೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ, ನಿಂದಿಸುತ್ತಾರೆ,,ಮಾತು ಬಿಡುತ್ತಾರೆ,,ಮುನಿಸಿಕೊಳ್ಳುತ್ತಾರೆ! ಆದರೆ ಇದಾವುದಕ್ಕೂ ಜಗ್ಗದ ಅನಿವಾಸಿ ದುಡಿಯುತ್ತಲೇ ಹೋಗುತ್ತಾನೆ, ಹಣ ಕಳುಹಿಸುತ್ತಲೇ ಇರುತ್ತಾನೆ, ಅಲ್ಲಿರುವವರು ನನ್ನವರು ಎಂಬ ಭ್ರಮೆಯಲ್ಲಿಯೇ ಜೀವನ ಸಾಗಿಸುತ್ತಿರುತ್ತಾನೆ! ಕೆಲವು ಪ್ರಕರಣಗಳಲ್ಲಿ ಎರಡು - ಮೂರು ವರ್ಷಗಳು ಊರಿಗೇ ಹೋಗದೆ ದುಡಿಯುತ್ತಿದ್ದವನ ಹೆಂಡತಿ ಊರಿನಲ್ಲಿ "ಪುತ್ರೋತ್ಸವ" ಆಚರಿಸಿರುತ್ತಾಳೆ! ನುಂಗಲಾರದ ಉಗುಳಲಾರದ ಬಿಸಿತುಪ್ಪದಂಥಾ ಕುಟುಂಬವನ್ನು ಕಣ್ಣೀರಿನೊಡನೆಯೇ ಆ ಅನಿವಾಸಿ ನಿಭಾಯಿಸುತ್ತಿರುತ್ತಾನೆ! ಕೊನೆಗೊಮ್ಮೆ ಬೇಸರವಾಗಿ ಹಣ ಕಳುಹಿಸುವುದನ್ನು ನಿಲ್ಲಿಸಿದಾಗ ಅದೇ ಕುಟುಂಬದವರು ಅವನ ಮೇಲೆ "ಕೌಟುಂಬಿಕ ದೌರ್ಜನ್ಯ"ದ ಕೇಸು ಜಡಿಯುತ್ತಾರೆ, ಊರಿಗೆ ರಜಕ್ಕೆಂದು ಹೋದ ಅದೆಷ್ಟೋ ಅನಿವಾಸಿಗಳು ಈ ರೀತಿಯ ಕೇಸುಗಳಲ್ಲಿ ಸಿಲುಕಿಕೊಂಡು, ತಮ್ಮ ಪಾಸ್ಪೋರ್ಟನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಸಮಯಕ್ಕೆ ಸರಿಯಾಗಿ ಹಿಂದಿರುಗಿ ಬರಲಾಗದೆ ಇಲ್ಲಿನ ಕೆಲಸವನ್ನೂ ಕಳೆದುಕೊಂಡು, ಇಲ್ಲಿಯೂ ಇಲ್ಲದೆ, ಅಲ್ಲಿಯೂ ಬಾಳಲಾಗದೆ ಒದ್ದಾಡುತ್ತಿದ್ದಾರೆ. ಕೊನೆಗೆ ವಿವಾಹ ವಿಚ್ಚೇದನಕ್ಕೆಂದು ಕೋರ್ಟ್ ಮೊರೆ ಹೋದಾಗ ಇವನು ದುಡಿದದ್ದನ್ನೆಲ್ಲಾ ಆ ಹೆಂಡತಿ ಮಕ್ಕಳ ಬಾಯಿಗೆ ಹಾಕಿ ಬರಿಕೈದಾಸನಾಗಿ ಗಲ್ಫಿಗೆ ಹಿಂದಿರುಗುತ್ತಾರೆ! ಹಿಂದಿರುಗಲು ಅವಕಾಶವಿಲ್ಲದವರು ಅಲ್ಲಿಯೇ ಅವರಿವರ ಸಹಾಯದೊಡನೆ ಜೀವನ ಮುಂದುವರಿಸುತ್ತಾರೆ, ಆದರೆ ಹೇಳಲಾಗದಂಥಾ ಖಿನ್ನತೆ ಅವರನ್ನು ಆವರಿಸಿ ಅವರು ಮಾನಸಿಕವಾಗಿ ಸತ್ತಿರುತ್ತಾರೆ, ದೈಹಿಕವಾಗಿ ಮಾತ್ರ ಬದುಕಿರುತ್ತಾರೆ. ಇಂಥಾ ಅದೆಷ್ಟೋ ಪ್ರಕರಣಗಳು ಗಲ್ಫಿನಲ್ಲಿರುವ ಅನಿವಾಸಿ ಭಾರತೀಯರ ಜೀವನವನ್ನು ನರಕವನ್ನಾಗಿಸಿವೆ, ಸುಂದರ ಕನಸುಗಳನ್ನು ಹೊಸಕಿ ಹಾಕಿ ಸ್ವಾರ್ಥಿ ಪ್ರಪಂಚದ ನಿಜರೂಪ ತೋರಿಸಿ ಕಂಗಾಲಾಗಿಸಿವೆ. ದುಡ್ಡು ಒಂದೇ ಮುಖ್ಯವಾ ಜೀವನದಲ್ಲಿ,,, ವ್ಯಕ್ತಿಗೆ ಬೆಲೆಯಿಲ್ಲವೇ?
ಈ ರೀತಿ ತೊಂದರೆಗೆ ಸಿಲುಕಿಕೊಂಡಿರುವ ದುಃಖಿಗಳಿಗಾಗಿ ಇತ್ತೀಚೆಗೆ ದುಬೈನಲ್ಲಿ ನ್ಯಾಯವಾದಿಗಳ ತಂಡವೊಂದು ಸಹಾಯ ಹಸ್ತ ಚಾಚಲು ತೊಡಗಿಕೊಂಡಿದೆ! "ಕೌಟುಂಬಿಕ ದೌರ್ಜನ್ಯ"ದ ಸುಳ್ಳು ಕೇಸುಗಳಲ್ಲಿ ಸಿಲುಕಿಕೊಂಡವರು, ಇಲ್ಲಿಂದಲೇ ಭಾರತದ ಯಾವುದೇ ನ್ಯಾಯಾಲಯದಲ್ಲಿ, ನಿಭಾಯಿಸಬಹುದಾಗಿದೆ. ಜೊತೆಗೆ ಕಿರುಕುಳ ನೀಡುವ ಪತ್ನಿಯರಿಗೆ ಇಲ್ಲಿದ್ದುಕೊಂಡೇ ಕಾನೂನು ರೀತಿಯಾಗಿ ವಿಚ್ಚೇದನ ನೀಡಬಹುದಾಗಿದೆ.
ಸುದೀಪ್ ಸಂಸಾರದ ಕಥೆಯನ್ನೋದಿ ಇದನ್ನೆಲ್ಲಾ ಹಂಚಿಕೊಳ್ಳಬೇಕನ್ನಿಸಿತು. ದುಡಿಯುವ ಗಂಡಿಗೂ ಒಂದು ಮನಸ್ಸಿದೆ, ಅವನಿಗೂ ಭಾವನೆಗಳಿರುತ್ತವೆ, ಅವನಿಗೂ ನೋವಾಗುತ್ತದೆ ಎಂದೇಕೆ ಹೆಂಡತಿಯಾದವಳು ಅರ್ಥ ಮಾಡಿಕೊಳ್ಳುವುದಿಲ್ಲ? ಪತಿ ಪತ್ನಿಯರ ಬಾಂಧವ್ಯವನ್ನು ನಿಭಾಯಿಸುವಲ್ಲಿ ಪತ್ನಿಯ ಪಾತ್ರ ಮುಖ್ಯವಲ್ಲವೇ? ಧರ್ಮೇಚ, ಅರ್ಥೇಚ, ಕಾಮೇಚ, ನಾತಿ ಚರಾಮಿ ಎಂದು ಮದುವೆಯಾಗುವಾಗ ಪುರೋಹಿತರು ಹೇಳಿ ಕೊಟ್ಟಂತೆ ಹೇಳಿ ಕೈ ಮುಗಿಯುವುದಕ್ಕೆ ಏನಾದರೂ ಅರ್ಥವಿದೆಯೇ??? 

No comments: