Friday, August 28, 2009

ನೆನಪಿನಾಳದಿಂದ.1. ಅಪ್ಪನಿಂದ ಒದೆ ತಿಂದು ಮನೆ ಬಿಟ್ಟು ಓಡಿ ಹೋದ ಪ್ರಸಂಗ.

ಇದು 1984ರಲ್ಲಿ ನಾವು ತಿಪಟೂರಿನಲ್ಲಿದ್ದಾಗ ನಡೆದ ಪ್ರಸಂಗ, ಸಂಪದ ಓದುಗರೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಅಮ್ಮ ಮೈಸೂರಿನವರು, ತುಂಬಾ ಸಾಧು ಸ್ವಭಾವ, ಅಪ್ಪನನ್ನು ಕಂಡರೆ ತುಂಬಾ ಪ್ರೀತಿ ಹಾಗೂ ಗೌರವ, ಮೈಸೂರಿನ ವಿಶೇಷಣವಾದ "ಏನೂಂದ್ರೆ" ಅನ್ನದೆ ಅಪ್ಪನೊಡನೆ ಮಾತೇ ಇಲ್ಲ. ಆಗ ಸರ್ಕಾರಿ ಆಸ್ಪತ್ರೆಯ ದಾದಿಯ ಕೆಲಸದಲ್ಲಿದ್ದರು. ಅಪ್ಪ ಸ್ವಭಾವತಹ ಮುಂಗೋಪಿ ಹಾಗೂ ಸದಾ ಸಿಡುಕು ಬುದ್ಧಿ, ಒಂದು ಸಣ್ಣ ಹೋಟೆಲ್ ನಡೆಸುತ್ತಿದ್ದರು. ನಾನಾಗ ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಓದುತ್ತಿದ್ದೆ. ಬೆಳಿಗ್ಗೆ ಬೇಗನೆ ಎದ್ದು ಅಪ್ಪನೊಂದಿಗೆ ಹೋಟೆಲಿಗೆ ಬಂದು ಅವರ ಕೆಲಸದಲ್ಲಿ ಸಹಾಯ ಮಾಡಿ ನಂತರ ತಿಂಡಿ ತಿಂದು ಸ್ಕೂಲಿಗೆ ಹೋಗಬೇಕಿತ್ತು. ಸಂಜೆ ಮತ್ತೆ ಬಂದು ಅವರ ಸಣ್ಣ ಪುಟ್ಟ ಕೆಲಸಗಳನ್ನು ಮುಗಿಸಿ ಕೊಟ್ಟು ಸಂಜೆ "ಸ್ಪೆಷಲ್ ಕ್ಲಾಸಿಗೆ" ಹೋಗಬೇಕಿತ್ತು. ಹೀಗೆ ನನ್ನ ವಿದ್ಯಾಭ್ಯಾಸ ಸಾಗಿತ್ತು. ಅಪ್ಪನ ಹೋಟೆಲಿನಲ್ಲಿ ಕೆಲವು ಬಡ ಮೇಷ್ಟ್ರುಗಳು ಲೆಕ್ಕ ಬರೆಸಿ ತಿಂಗಳೆಲ್ಲಾ ಊಟ - ತಿಂಡಿ ಮಾಡಿ ಸಂಬಳ ಬಂದಾಗ ಲೆಕ್ಕ ಚುಕ್ತಾ ಮಾಡುತ್ತಿದ್ದರು.

ಅಂಥ ಮೇಷ್ಟ್ರುಗಳಲ್ಲಿ ಒಬ್ಬರು, ಗುಂಡಣ್ಣ ಮೇಷ್ಟ್ರು, ನಾನು ಹತ್ತನೆ ತರಗತಿಯ ಪರೀಕ್ಷೆ ಮುಗಿಸಿ ಬಂದು ಅಪ್ಪನೊಂದಿಗೆ ಮಾತಾಡುವಾಗ ಬಂದವರು ಹೇಳಿದರು, "ನಿನ್ನ ದಾಖಲಾತಿ ಸಂಖ್ಯೆ ಕೊಡು, ನಾನು ಮೌಲ್ಯಮಾಪನಕ್ಕೆ ಹೋಗುತ್ತಿದ್ದೇನೆ, ನಿನಗೆ ಹೆಚ್ಚು ಅಂಕ ಹಾಕಿಸುತ್ತೇನೆ " ಅದಕ್ಕೆ ನಾನು ಹೇಳಿದೆ, " ನಾನು ಚೆನ್ನಾಗಿ ಓದಿ ಪರೀಕ್ಷೆ ಬರೆದಿದ್ದೇನೆ, ಆ ರೀತಿ ಪುಕ್ಕಟೆ ಹೆಚ್ಚು ಅಂಕಗಳು ನನಗೆ ಬೇಕಾಗಿಲ್ಲ". ಆಗ ಅಪ್ಪ ನನಗೆ ಸುಮ್ಮನೆ ಹೆಚ್ಚು ಮಾತಾಡದೆ ನನ್ನ ದಾಖಲಾತಿ ಸಂಖ್ಯೆಯನ್ನು ಕೊಡುವಂತೆ ಹೇಳಿದರು. ಅದಕ್ಕೆ ನಾನು ನಿರಾಕರಿಸಿದೆ. ಹಿಂದೆಯೇ ಬಿದ್ದವು ನೋಡಿ ಅಪ್ಪನ ಕೈಯಿಂದ ದಬದಬ ಒದೆಗಳು, ನನಗೆ ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ, ಚೆನ್ನಾಗಿ ಓದಿ ಪರೀಕ್ಷೆ ಬರೆದಿದ್ದ ಹಾಗೂ ಖಂಡಿತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುವ ಭರವಸೆಯಿಂದಿದ್ದ ನನಗೆ ಆ ಒದೆಗಳು ಅನಿರೀಕ್ಷಿತ,

ಆ ಸಮಯದಲ್ಲಿ ಹೋಟೆಲಿನಲ್ಲಿದ್ದ ನಾಲ್ಕಾರು ಜನರ ಮುಂದೆ ಬಿದ್ದ ಒದೆಗಳು ನನ್ನ ಪುಟ್ಟ ಮನಸ್ಸಿಗೆ ಆರದ ಗಾಯವನ್ನೇ ಮಾಡಿ ಬಿಟ್ಟಿದ್ದವು. ಆ ಒದೆಗಳು ನನ್ನ ಸ್ವಾಭಿಮಾನಕ್ಕೆ, ಏನನ್ನಾದರೂ ಸಾಧಿಸಬಲ್ಲೆನೆಂಬ ಭರವಸೆಯ ಬುಡಕ್ಕೆ ಬಿದ್ದ ಕೊಡಲಿ ಪೆಟ್ಟುಗಳಾಗಿದ್ದವು. ಆದರೆ ಅದು ಸಿಡುಕು ಬುದ್ಧಿಯ ಅಪ್ಪನಿಗೆ ಅರ್ಥವಾಗಿರಲಿಲ್ಲ. ಆ ಕ್ಷಣವೇ ನಿರ್ಧರಿಸಿದ್ದು ನಾನು, "ಇಂಥ ಅಪ್ಪನೊಂದಿಗೆ ಇರಬಾರದು", ಅಳುತ್ತಾ ಮನೆಗೆ ಬಂದು ಒಂದು ಬ್ಯಾಗಿಗೆ ಎರಡು ಬಟ್ಟೆಗಳನ್ನು ಹಾಕಿಕೊಂಡು ಬಟ್ಟೆ ಒಗೆಯುತ್ತಿದ್ದ ಅಮ್ಮನಿಗೆ ಹೊರಗಿನಿಂದಲೇ ಹೋಗಿ ಬರುತ್ತೇನೆಂದು ಹೇಳಿ ದೂರದ ದಾವಣಗೆರೆಗೆ ಹೋಗಿ ಬಿಟ್ಟೆ. ಗೊತ್ತಿದ್ದದ್ದು ಆಗ ಹೋಟೆಲ್ ಕೆಲಸ ಮಾತ್ರ, ಒಂದು ಹೋಟೆಲಿನಲ್ಲಿ ಮಾಣಿಯ ಕೆಲಸಕ್ಕೆ ಸೇರಿಕೊಂಡು ಅಲ್ಲೇ ಇದ್ದು ಬಿಟ್ಟೆ.

ಕೆಲ ದಿನಗಳು ಕಳೆದ ನಂತರ ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾಯಿತು. ದಾವಣಗೆರೆಯಿಂದ ತಿಪಟೂರಿಗೆ ಬಂದು ಸೀದಾ ಶಾಲೆಯ ಬಳಿ ಹೋದೆ, ನನ್ನ ಫಲಿತಾಂಶ ನೋಡಿದೆ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದೆ, ಆನಂದದಿಂದ ಕಣ್ಗಳು ಒದ್ದೆಯಾದವು. ಅಂದು ಮುಖ್ಯೋಪ್ೞ್ಧ್ಯಾಯರಾಗಿದ್ದ ಜಿ. ಆರ್. ಮಹಲಿಂಗಯ್ಯನವರು ನನ್ನನ್ನು ಕರೆದು ಅಭಿನಂದಿಸಿ ಅಂಕಪಟ್ಟಿಯನ್ನು ಕೈಗಿತ್ತು ಶುಭ ಹಾರೈಸಿದ್ದರು. ಅಂಕಪಟ್ಟಿಯೊಡನೆ ಸೀದಾ ಮನೆಗೆ ಬಂದೆ, ಅಲ್ಲಿ ಇಲ್ಲಿ ನನಗಾಗಿ ಹುಡುಕಾಡಿ ಅಪ್ಪ ಅಮ್ಮ ಸೋತಿದ್ದರು, ಅಮ್ಮ ಕೊಂಚ ಸೊರಗಿದ್ದರು, ಅಮ್ಮನಿಗೆ ಹೇಳಿದೆ, "ನಾನು ಪ್ರಥಮ ದರ್ಜೆಯಲ್ಲಿ ಹತ್ತನೆ ತರಗತಿಯಲ್ಲಿ ಉತ್ತೀರ್ಣನಾಗಿದ್ದೇನೆ, ನೋಡಮ್ಮ, ಆ ದಿನಾ ವಿನಾ ಕಾರಣ ಅಪ್ಪ ನನ್ನನ್ನು ಎಲ್ಲರ ಮುಂದೆ ಹೊಡೆದರು". ಅಮ್ಮ ಕಣ್ಣಲ್ಲಿ ನೀರು ತುಂಬಿಕೊಂಡು ನನ್ನನ್ನು ಸಂತೈಸಿದರು, ನಿನ್ನಪ್ಪ ಮುಂಗೋಪಿ, ಅವರನ್ನು ಕ್ಶಮಿಸಿಬಿಡು ಎಂದರು. ಸಂಜೆ ಮನೆಗೆ ಬಂದ ಅಪ್ಪ ನನ್ನನ್ನು ಸಿಟ್ಟಿನಿಂದ ಕೆಕ್ಕರಿಸಿ ನೋಡಿ ಇಷ್ಟು ದಿನ ಎಲ್ಲಿ ಹಾಳಾಗಿ ಹೋಗಿದ್ದೆ ಎಂದು ಹೊಡೆಯಲು ಬಂದರು, ಅಮ್ಮನ ಸೀರೆಯ ಹಿಂದೆ ಅಡಗಿ ಅಂಕಪಟ್ಟಿ ತೋರಿಸಿದೆ, ಅಂಕಪಟ್ಟಿ ನೋಡಿದ ಅಪ್ಪನ ಕಣ್ಣಲ್ಲೂ ಕಂಬನಿ ತುಂಬಿ ಹರಿಯಿತು. ನಿನ್ನ ಭರವಸೆಯ ಮಾತನ್ನು ಅಂದು ಅರ್ಥ ಮಾಡಿಕೊಳ್ಳದೆ ಅನ್ಯಾಯವಾಗಿ ನಿನ್ನನ್ನು ಹೊಡೆದು ಮನೆ ಬಿಟ್ಟು ಹೋಗುವಂತೆ ಮಾಡಿ ಬಿಟ್ಟೆನಲ್ಲ, ನನ್ನನ್ನು ಕ್ಶಮಿಸು ಮಗನೇ ಎಂದಾಗ ನಾನು ಪಟ್ಟ ಕಷ್ಟಗಳೆಲ್ಲ ನನಗೆ ಮರೆತೇ ಹೋಯಿತು.

ಅಂದು ನನಗೆ ಅರ್ಥವಾಗದಿದ್ದ ಆ ಅಪ್ಪ ಇಂದಿಗೂ ನನಗೆ ಅರ್ಥವಾಗಿಯೇ ಇಲ್ಲ, ಅಮ್ಮ ಈಗಿಲ್ಲ, ಅಪ್ಪ ಕಲ್ಲು ಗುಂಡಿನಂತೆ ದೂರವೇ ಉಳಿದು ಹೋದರು. 25 ವರ್ಷಗಳ ನಂತರ ದುಬೈನಲ್ಲಿ ಕುಳಿತು ಆ ಪ್ರಸಂಗವನ್ನು ನೆನಪಿಸಿಕೊಂಡಾಗ ಕಣ್ಗಳು ಒದ್ದೆಯಾದವು.

No comments: