Friday, August 28, 2009

ನೆನಪಿನಾಳದಿಂದ.........೭. ಸಾಧನೆಯ ಹಾದಿಯಲ್ಲಿ,

ನಾನು ಹತ್ತನೆಯ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದರೂ ಅಪ್ಪ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಕಲ್ಲು ಹಾಕಿದಾಗ, ತಿಪಟೂರಿನಿಂದ ಹೊಳೆನರಸೀಪುರಕ್ಕೆ ಓಡಿ ಹೋಗಿ, ಚಿಕ್ಕಪ್ಪನ ಆಶ್ರಯದಲ್ಲಿ ಪ್ರಥಮ ಪಿ.ಯು.ಸಿ. ಮುಗಿಸಿದೆ. ಆ ಹೊತ್ತಿಗಾಗಲೆ, ಅಪ್ಪ - ಅಮ್ಮನ ಸಂಬಂಧದಲ್ಲಿ ದೊಡ್ಡ ಬಿರುಕೊಂದು ಶುರುವಾಗಿ ಅವರ ದಾಂಪತ್ಯ ಜೀವನ ಕೊನೆಗೊಳ್ಳುವ ಹಂತ ತಲುಪಿತ್ತು. ಅಪ್ಪನ ಆರ್ಭಟ, ಮಾಡುತ್ತಿದ್ದ ಸಾಲಗಳು, ಕಟ್ಟಬೇಕಿದ್ದ ಬಡ್ಡಿ, ಕೊನೆಗೆ ತುತ್ತಿಗೂ ಲಾಟರಿಯಾದಾಗಿನ ಅಸಹಾಯಕತೆಗಳಿಂದ ನೊಂದಿದ್ದ ಅಮ್ಮ ಇದಕ್ಕೊಂದು ಪೂರ್ಣ ವಿರಾಮ ಹಾಕಬೇಕೆಂದು ತೀರ್ಮಾನಿಸಿದ್ದರಂತೆ. ಆಗ ಮತ್ತೆ ಬಂದರು ಅಪ್ಪ! ನನ್ನನ್ನು ಹುಡುಕಿಕೊಂಡು, ಹೊಳೆನರಸೀಪುರಕ್ಕೆ. ಅಪ್ಪ ಬಂದಾಗ ನಾನು ಹೇಮಾವತಿಯ ದಡದಲ್ಲಿ, ನನ್ನ ಮೆಚ್ಚಿನ "ಕಲ್ಲಿನ" ಮೇಲೆ ಕುಳಿತು ಹರಿವ ನೀರಿನಲ್ಲಿ ಆಡುತ್ತಿದ್ದ ಮೀನುಗಳನ್ನೂ, ದೂರದಲ್ಲಿ ಮುಳುಗುತ್ತಿದ್ದ ಸೂರ್ಯನನ್ನೂ ನೋಡುತ್ತಾ ಕುಳಿತಿದ್ದೆ. ನನ್ನ ಪುಟ್ಟ ತಮ್ಮನೊಬ್ಬ ಬಂದು ಅಪ್ಪ ಬಂದಿರುವ ವಿಚಾರ ತಿಳಿಸಿ ಬರಹೇಳಿದರು ಅಂದಾಗ ಆತಂಕದಿಂದಲೇ ಮನೆಗೆ ಬಂದಿದ್ದೆ.

ಮನೆಗೆ ಬಂದವನು ಹಿತ್ತಿಲ ಬಾಗಿಲಿನಿಂದ ಸೀದಾ ಅಡುಗೆ ಮನೆಗೆ ಹೋದೆ, ನನ್ನ ಪ್ರೀತಿಯ ಚಿಕ್ಕಮ್ಮ, ನನಗೆ ಅಪ್ಪನೊಂದಿಗೆ ಸರಿಯಾಗಿ ಮಾತಾಡುವಂತೆ ಬುದ್ಧಿ ಹೇಳಿ ಕಳುಹಿಸಿದರು. ಹೊರಗೆ ಬಂದರೆ ಅಪ್ಪ, ಚಿಕ್ಕಪ್ಪನೊಂದಿಗೆ ಮಾತಾಡುತ್ತಾ ಕುಳಿತಿದ್ದರು. ನನ್ನನ್ನು ಕಂಡ ಅಪ್ಪ, ’ ಏನು, ಹೇಗಿದ್ದೀಯ ? ಚೆನ್ನಾಗಿ ಓದುತ್ತಾ ಇದ್ದೀಯ ಅಂತ ನನ್ನ ತಮ್ಮ ಹೇಳ್ತಿದ್ದಾನೆ’ ಅಂದರು. ನಾನು ಸುಮ್ಮನೆ ಹೂಗುಟ್ಟಿದೆ. ಮತ್ತೆ ಮುಂದುವರೆದ ಅಪ್ಪ ’ ಹೊರಡು, ನನ್ನ ಜೊತೆಗೆ, ನೀನು ಎಷ್ಟು ಓದ್ತೀಯಾ, ನಾನು ಓದಿಸ್ತೀನಿ, ನೀನು ನನ್ನ ಮಗ, ನನ್ನ ಮನೆಯಲ್ಲೇ ಇರಬೇಕು’ ಅಂದಾಗ ನನಗೆ ಏನು ಮಾಡಬೇಕೆಂದು ತಿಳಿಯದಾಗಿ ಚಿಕ್ಕಪ್ಪನ ಮುಖ ನೋಡಿದೆ. ಅವರು ನನಗೆ ಧೈರ್ಯ ಹೇಳಿ, ’ ನೀನು ಅಪ್ಪನ ಜೊತೆ ಹೋಗಿ ಅಲ್ಲೇ ಕಾಲೇಜಿಗೆ ಸೇರು, ಏನಾದರೂ ತೊಂದರೆಯಾದರೆ ನಾನಿದ್ದೇನೆ’ ಅಂದರು. ಒಳಗಿನಿಂದ ಚಿಕ್ಕಮ್ಮ ಅದೇ ಮಾತಿಗೆ ಬೆಂಬಲ ಸೂಚಿಸಿದರು. ಒಲ್ಲದ ಮನಸ್ಸಿನಿಂದಲೇ ಅಪ್ಪನ ಜೊತೆ ಮತ್ತೆ ತಿಪಟೂರಿಗೆ ಬಂದೆ, ಬರುವಾಗ ಅಪ್ಪಿ ತಪ್ಪಿಯೂ ಅಪ್ಪನ ಜೊತೆ ಒಂದೇ ಒಂದು ಮಾತನ್ನೂ ಆಡಲಿಲ್ಲ. ನನ್ನ ಮನ ಅನಿಶ್ಚಿತತೆಯಲ್ಲಿ ಹೊಯ್ದಾಡುತ್ತಿತ್ತು.

ನಾನು ಹಿಂದಿರುಗಿ ಬಂದಾಗ ಅಮ್ಮ ನನ್ನನ್ನು ನಗುಮುಖದಿಂದ ಸ್ವಾಗತಿಸಿದರು, ಆದರೆ ಅಪ್ಪ - ಅಮ್ಮನ ನಡುವೆ ಮಾತು ಕಥೆ ನಿಂತು ಹೋಗಿತ್ತು. ಅಮ್ಮನ ಮುಖ ನೋಡಿದಾಗ, ನನ್ನ ಕಣ್ಗಳಲ್ಲಿದ್ದ ಹಲವಾರು ಪ್ರಶ್ನೆಗಳಿಗೆ ಅವರ ಮೌನವೇ ಉತ್ತರವಾಯಿತು!

ನನ್ನ ಸ್ನೇಹಿತರೆಲ್ಲಾ ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅದಾಗಲೇ ಪ್ರಥಮ ಪಿ.ಯು.ಸಿ. ಮುಗಿಸಿ ಎರಡನೇ ವರ್ಷಕ್ಕೆ ಸಿದ್ಧವಾಗಿದ್ದರು. ನಾನು ಅವರೊಂದಿಗೆ ಸೇರಿ, ಅದೇ ಕಾಲೇಜಿನಲ್ಲಿ ಸೇರಿಕೊಂಡೆ. ನನ್ನ ಹಿಂದಿನ ಕಹಿ ಅನುಭವಗಳೆಲ್ಲಾ ಗೊತ್ತಿದ್ದ ನನ್ನ ಸ್ನೇಹಿತರು ನನಗೆ ಯಾವಾಗಲೂ " ಯಾವುದೇ ಕಾರಣಕ್ಕೂ ಇನ್ನು ಮುಂದೆ ಅಪ್ಪನಿಗೆ ಹೆದರದೆ, ಧೈರ್ಯದಿಂದ ಬದುಕುವಂತೆ" ನನಗೆ ಉಪದೇಶ ಮಾಡತೊಡಗಿದರು. ಕಾಲೇಜಿಗೆ ಸೇರಿದೊಡನೆ, ಸ್ನೇಹಿತರೊಡಗೂಡಿ, ಎನ್.ಸಿ.ಸಿಗೆ ಸೇರಿಕೊಂಡೆ. ಪ್ರತಿ ಭಾನುವಾರದ " ಪೆರೇಡಿಗೆ" ಆ ಖಾಕಿ ಸಮವಸ್ತ್ರದಲ್ಲಿ ಠಾಕುಠೀಕಾಗಿ ನಾವೆಲ್ಲ ಸ್ನೇಹಿತರು ಬರುತ್ತಿದ್ದರೆ, ಜನ ನಮ್ಮನ್ನು ನಿಂತು ನೋಡುತ್ತಿದ್ದರು! ಜೊತೆಗೆ ತಿಪಟೂರಿನ " ಯೂತ್ ಹಾಸ್ಟೆಲ್ ಅಸೋಸಿಯೇಷನ್ " ನ ಸಕ್ರಿಯ ಸದಸ್ಯರಾಗಿಯೂ ನಾವು ಐದು ಜನ ಸ್ನೇಹಿತರೂ ನೋಂದಾಯಿಸಿಕೊಂಡು ಬಿಟ್ಟೆವು. ಅದು ನಮ್ಮ "ಭಾರತ ದರ್ಶನ" ಯಾತ್ರೆಗೆ ನಾವು ಬರೆದ ಮುನ್ನುಡಿಯಾಗಿತ್ತು.

ನಾನು, ಬಸವರಾಜ, ಗಂಗಾಧರ, ಇನಾಯತ್, ಭೀಮೇಶ ಐದೂ ಜನ ಆಗ ಒಂದೆ ಜೀವ, ಐದು ದೇಹ ಎಂಬಂತಾಗಿಬಿಟ್ಟೆವು, ಒಬ್ಬನು ತರಗತಿಗೆ ಬರಲಿಲ್ಲವೆಂದರೆ ಐದೂ ಜನ ಚಕ್ಕರ್! ಯಾವುದೇ ಸಿನಿಮಾ ಬಿಡುಗಡೆಯಾದರೆ, ಐದೂ ಜನ ಜೊತೆಯಲ್ಲಿ ಮೊದಲ ದಿನವೇ ಹಾಜರ್! ರವಿಚಂದ್ರನ್ ಅಭಿನಯಿಸಿದ ರಣಧೀರ ಹಾಗು ಪ್ರೇಮಲೋಕ ಚಿತ್ರಗಳು ಬಹುಶ: ನಾನು ಜೀವನದಲ್ಲಿ ಅತಿ ಹೆಚ್ಚು ಬಾರಿ ನೋಡಿದ ಚಲನಚಿತ್ರಗಳಾಗಿ ಆ ದಿನಗಳಲ್ಲಿ ದಾಖಲಾಗಿ ಬಿಟ್ಟವು. ತರಗತಿಯಲ್ಲಿ ಕೊನೆಯ ಬೆಂಚು ನಮ್ಮದು, ಹಿಂದೆ ಕುಳಿತು, ಗೀತಾದೇವಿ, ಸರಿತಾ, ಕುಲ್ಸುಂ, ಪದ್ಮ, ಎಲ್ಲರಿಗೂ ತೀಟೆ ಮಾಡಿ, ಪೇಪರ್ ಬಾಣವೆಸೆದು, ಕುಚೋದ್ಯ ಮಾಡುತ್ತಾ ಕಳೆದ ದಿನಗಳದೆಷ್ಟೋ ! ಗಾಯತ್ರಿಬಾಯಿ,ತಂಗಮ್ಮ, ಪೂರ್ಣಾದೇವಿ, ಶಚೀದೇವಿ ಯಂತಹ ಮಹಿಳಾ ಉಪನ್ಯಾಸಕರಿಗೆ ನಾವು " ಪಂಚ ಮಹಾ ಪಾತಕಿ" ಗಳಾಗಿಯೂ, ರೇಣುಕಾರ್ಯ, ಫಾಲಾಕ್ಷ, ಶರಣಪ್ಪ, ಚನ್ನಬಸವಯ್ಯ, ರಮೇಶ್, ಶ್ರೀನಿವಾಸಮೂರ್ತಿ, ನಂಜುಂಡಪ್ಪನವರಂಥ ಪುರುಷ ಉಪನ್ಯಾಸಕರ ಪಾಲಿಗೆ "ಪಂಚ ನಕ್ಷತ್ರ"
( ಫೈವ್ ಸ್ಟಾರ್ಸ್) ಗಳಾಗಿಯೂ ನಾವು ಕಂಡು ಬರುತ್ತಿದ್ದೆವು. ಪ್ರಾಂಶುಪಾಲರಾಗಿದ್ದ ಶ್ರೀಮತಿ ಸುಜಯರವರು ನಮ್ಮ ಎಲ್ಲಾ ಪಠ್ಯೇತರ ಚಟುವಟಿಕೆಗಳಿಗೆ ತಮ್ಮ ತುಂಬು ಹೃದಯದ ಬೆಂಬಲವನ್ನು ನೀಡಿ ಹರಸುತ್ತಿದ್ದರು.

ಜೊತೆಗೆ, ಗ್ರಂಥಾಲಯದಲ್ಲಿ ಲಭ್ಯವಿದ್ದ ಎಲ್ಲಾ ಉತ್ತಮ ಪುಸ್ತಕಗಳನ್ನೂ ಓದುತ್ತಾ, ಎಲ್ಲಿಯೇ ಚರ್ಚಾ ಸ್ಪರ್ಧೆ, ಪ್ರಬಂಧ, ಆಶುಭಾಷಣ, ಸ್ವರಚಿತ ಕವನ ಸ್ಪರ್ಧೆಗಳು ನಡೆಯಲಿ, ಅಲ್ಲಿ ಹೋಗಿ ನಮ್ಮ ಕಾಲೇಜನ್ನು ಪ್ರತಿನಿಧಿಸಿ, ಒಂದಿಲ್ಲೊಂದು ಪ್ರಶಸ್ತಿ ಪಡೆದೇ ಬರುತ್ತಿದ್ದೆವು. ಎಲ್ಲಾ ಪರೀಕ್ಷೆಗಳಲ್ಲೂ ಅತಿ ಹೆಚ್ಚು ಅಂಕಗಳು ನಮ್ಮ ಗುಂಪಿಗೇ ಬರುತ್ತಿದ್ದುದುಒಂದು ವಿಶೇಷ!! ನಮಗಿಂತ ಒಂದೆರಡು ವರ್ಷಗಳು ಓದಿನಲ್ಲಿ ಮುಂದಿದ್ದ ಹಿರಿಯ ಸ್ನೇಹಿತರೂ ಕೂಡ ನಮ್ಮೆಡೆಗೆ ವಿಸ್ಮಯದ ದೃಷ್ಟಿ ಹರಿಸುವಂತೆ ಮಾಡಿದ್ದೊಂದು ದೊಡ್ಡ ಸಾಧನೆ. ಇದೇ ಸಮಯದಲ್ಲಿ ನಮ್ಮ ದೃಷ್ಟಿ ಬಿದ್ದಿದ್ದು ಸೈಕಲ್ ರೇಸ್ ಹಾಗೂ ಸೈಕಲ್ ಪ್ರವಾಸಗಳ ಕಡೆಗೆ!!

ಯೂತ್ ಹಾಸ್ಟೆಲ್ ನವರು ಪ್ರತಿವರ್ಷ ಆಯೋಜಿಸುತ್ತಿದ್ದ " ಕರ್ನಾಟಕ ದರ್ಶನ " ಸೈಕಲ್ ಪ್ರವಾಸದಲ್ಲಿ ಪಾಲ್ಗೊಳ್ಳುವಂತೆ ಅಂದಿನ ಕಾರ್ಯದರ್ಶಿಗಳಾಗಿದ್ದ ಬಸವರಾಜುರವರು ನಮ್ಮನ್ನು ಕೇಳಿದಾಗ ನಾವು ಐದೂ ಜನ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡು, ಜೀವನದ ಮೊದಲ ಸೈಕಲ್ ಪ್ರವಾಸವನ್ನು ಆರಂಭಿಸಿಯೇ ಬಿಟ್ಟೆವು. ತಿಪಟೂರಿನಿಂದ ಹೊರಟು, ಶ್ರವಣ ಬೆಳಗೊಳ, ಹಾಸನ, ಬೇಲೂರು, ಹಳೇಬೀಡು, ಚಿಕ್ಕಮಗಳೂರು, ಬಾಳೆ ಹೊನ್ನೂರು, ಶೃಂಗೇರಿ, ಆಗುಂಬೆ, ತೀರ್ಥಹಳ್ಳಿ, ಮಂಡಗದ್ದೆ, ಗಾಜನೂರು, ಶಿವಮೊಗ್ಗ, ಭದ್ರಾವತಿ, ಲಕ್ಕವಳ್ಳಿ, ತರೀಕೆರೆ, ಕೆಮ್ಮಣ್ಣುಗುಂಡಿ, ಬಾಬಾ ಬುಡೇನ್ ಗಿರಿ, ಹೀಗೆ ಒಂದು ಸುತ್ತು ಹೊಡೆದು ೧೫ ದಿನಗಳ ನಂತರ ತಿಪಟೂರಿಗೆ ಹಿಂತಿರುಗಿ ಬಂದಾಗ ನಮಗೆ ’ಅಭೂತ ಪೂರ್ವ ಸ್ವಾಗತ’, ಎಲ್ಲರಿಂದ ! ಹೀಗೆಯೇ ಸುಮಾರು ನಾಲ್ಕು ಬಾರಿ
" ಕರ್ನಾಟಕ ದರ್ಶನ " ಸೈಕಲ್ ಪ್ರವಾಸಗಳನ್ನು ಕೈಗೊಂಡು, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ, ಕರ್ನಾಟಕದಲ್ಲಿ ನಾವು ನೋಡದ ಸ್ಥಳವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇಡೀ ಕರ್ನಾಟಕವನ್ನೇ ಸುತ್ತಿ ಬಂದೆವು.

ಇದರ ಜೊತೆಗೆ ಎನ್.ಸಿ.ಸಿ.( ನ್ಯಾಷನಲ್ ಕೆಡೆಟ್ ಕೋರ್), ಭಾರತೀಯ ಸೈನ್ಯದ ಒಂದು ಅಂಗ, ವಿಶೇಷವಾಗಿ ಯುವಕರನ್ನು ತರಬೇತುಗೊಳಿಸಿ, ಅವರಲ್ಲಿ ಒಂದು ಶಿಸ್ತುಬದ್ಧ ಜೀವನವನ್ನು ರೂಪಿಸಿ, ಸೈನ್ಯದ ಅಧಿಕಾರಿಗಳ ಕೆಲಸಕ್ಕೆ ಸಿದ್ಧ ಮಾಡುವುದು, ಸೈನ್ಯಕ್ಕೆ ಸೇರದಿದ್ದರೂ ಒಂದು ಶಿಸ್ತಿನ ಜೀವನ ನಡೆಸಲು ಯುವಕರನ್ನು ಮಾನಸಿಕವಾಗಿ ತಯಾರು ಮಾಡುವುದು ಅದರ ಉದ್ಧೇಶ. ನಾವು ಐದೂ ಜನ ಸಕ್ರಿಯವಾಗಿ ಪ್ರತಿ ಭಾನುವಾರ " ಪೆರೇಡ್" ಗಳಲ್ಲಿ ಭಾಗವಹಿಸಿ, ತುವಕೂರು, ಬೆಂಗಳೂರುಗಳಲ್ಲಿ ನಡೆದ " ತರಬೇತಿ ಶಿಬಿರ " ಗಳಲ್ಲಿ , ಯಾವ್ಯಾವ ಪಂದ್ಯಾವಳಿಗಳಿದ್ದವೋ, ಅದು ಶೂಟಿಂಗ್, ಬೈನಟ್ ಫೈಟಿಂಗ್, ರನ್ನಿಂಗ್ ರೇಸ್, ಕ್ರಾಸ್ ಕಂಟ್ರಿ, ಫೈರ್ ಫೈಟಿಂಗ್, ಪ್ರಥಮ ಚಿಕಿತ್ಸೆ, ಯಾವುದೇ ಇರಲಿ, ಮನ:ಪೂರ್ತಿ ಭಾಗವಹಿಸಿ, ಜಯಗಳಿಸಿ, ಪದಕಗಳೊಂದಿಗೆ ಹಿಂತಿರುಗಿ ಬರುತ್ತಿದ್ದೆವು. ಆಗೆಲ್ಲಾ ನಮಗೆ
" ವೀರೋಚಿತ ಸತ್ಕಾರ, ಆದರ, ಉಪಚಾರ ". ಕೊನೆಗೆ ಪದವಿ ಮುಗಿಯುವ ಹೊತ್ತಿಗೆ ೧೬೦ ಕೆಡೆಟ್ ಗಳಿದ್ದ ನಮ್ಮ ಕಂಪನಿಗೆ ನಾನೇ " ಅಂಡರ್ ಆಫೀಸರ್ " ಆಗಿ ನಿಯುಕ್ತಿಗೊಂಡು, ಕರ್ನಾಟಕ ಹಾಗು ಗೋವಾ ವಲಯದಲ್ಲಿ " ಅತ್ಯುತ್ತಮ ಅಂಡರ್ ಆಫೀಸರ್ " ಎಂದು ಆಯ್ಕೆಗೊಂಡು, " ಸಿ " ಪ್ರಮಾಣಪತ್ರವನ್ನು ಪಡೆದೆ. ಅದೇ ಇಂದು ನನಗೆ ಅನ್ನ ನೀಡುತ್ತಿರುವುದು.

ನನ್ನ ಮತ್ತು ನನ್ನ ಸ್ನೇಹಿತರ ಈ ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅಪ್ಪ, ಈಗ ಆದಷ್ಟೂ ತಣ್ಣಗಾಗಿದ್ದರು, ಮನೆಯಲ್ಲಿ ನಿತ್ಯ ನಡೆಯುತ್ತಿದ್ದ ಜಗಳಗಳು ಕಣ್ಮರೆಯಾಗಿ, ಅದರ ಜಾಗದಲ್ಲಿ ಅದೇನೋ ಅಸಹನೀಯವಾದ ಮೌನ ಮನೆ ಮಾಡಿತ್ತು. ಅಮ್ಮನ ಮೊಗದಲ್ಲಿ ನಗು ಉಕ್ಕುತ್ತಿತ್ತು, ಈ ಮಗ ಏನಾದರೂ ಒಂದು ಸಾಧನೆ ಮಾಡಿ, ನಮಗೆ ಒಳ್ಳೆಯ ಹೆಸರನ್ನು ತರುತ್ತಾನೆಂದು ಎಲ್ಲರ ಬಳಿ ಹೇಳುತ್ತಿದ್ದರು, ಆದರೆ ಅಪ್ಪ ಒಮ್ಮೆಯೂ, ಅಪ್ಪಿ ತಪ್ಪಿ, ನನ್ನ ಸಾಧನೆಗಳ ಸಂತೋಷದಲ್ಲಿ ಭಾಗಿಯಾಗಲೇ ಇಲ್ಲ ! ಹಾಗೆಯೇ ನಾನು ಸಹಾ ಅಪ್ಪನನ್ನು ಯಾವುದಕ್ಕೂ ಏನನ್ನೂ ಕೇಳದೆ, ಆನೆ ನಡೆದದ್ದೇ ದಾರಿ ಎನ್ನುವಂತೆ, ನನ್ನದೇ ಆದ ಹಾದಿಯಲ್ಲಿ ನಡೆಯತೊಡಗಿದೆ. ದ್ವಿತೀಯ ಪಿ.ಯು.ಸಿ., ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುವ ಸಮಯಕ್ಕೆ ಸರಿಯಾಗಿ ನಾನು ಕನ್ನಡ ಮತ್ತು ಆಂಗ್ಲ ಬೆರಳಚ್ಚು ತರಗತಿಗಳ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಮುಗಿಸಿ, ಪದವಿ ತರಗತಿಗೆ ಕಾಲಿಟ್ಟೆ. ಈಗ ಅಪ್ಪ ಮತ್ತು ನನ್ನ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿತ್ತು.

ಅಪ್ಪನ ಬಳಿ ಮಾತಾಡುವುದಾಗಲಿ, ಏನಕ್ಕಾದರೂ ಹಣ ಕೇಳುವುದಾಗಲಿ, ಈಗ ಸಂಪೂರ್ಣ ನಿಂತು ಹೋಗಿತ್ತು. ಕನ್ನಡ ಮತ್ತು ಆಂಗ್ಲ ಎರಡೂ ಬೆರಳಚ್ಚಿನಲ್ಲಿ ಪಾರಂಗತನಾಗಿದ್ದ ನಾನು ನನ್ನ ಕಾಲೇಜು ಸಮಯ ಮುಗಿದ ನಂತರ, ಗೆಳೆಯ ರಂಗಸ್ವಾಮಿಯ ಅಂಗಡಿಯಲ್ಲಿ ಕುಳಿತು, ತಾಲ್ಲೂಕು ಕಛೇರಿ ಮತ್ತಿತರ ಸರ್ಕಾರಿ ಕಛೇರಿಗಳಿಂದ ಅವನಿಗೆ ಬರುತ್ತಿದ ಬೆರಳಚ್ಚು ಕೆಲಸಗಳಲ್ಲಿ ಪಾಲುದಾರನಾಗಿ ಸಾಕಷ್ಟು ಹಣ ಸಂಪಾದಿಸಲು ಆರಂಭಿಸಿದೆ. ಜೊತೆಗೆ ದಯಾಮಯಿ ಪ್ರಾಂಶುಪಾಲರಾದ ಶ್ರೀಮತಿ ಸುಜಯ ರವರು ಪ್ರತಿವರ್ಷ ನನಗೆ ನಾಲ್ಕೈದು ಸಾವಿರ " ಪ್ರತಿಭಾ ಶಿಷ್ಯ ವೇತನ " ಬರುವಂತೆ ಅನುಗ್ರಹಿಸಿದ್ದರು. ನನ್ನ ಪದವಿ ವ್ಯಾಸಂಗ, ಅಪ್ಪ-ಅಮ್ಮನ ಹಂಗಿಲ್ಲದೆ ಸ್ವತಂತ್ರವಾಗಿ ನಡೆಯತೊಡಗಿತು. ಹೀಗಿದ್ದಾಗ ನಮಗೆ ಸಿಕ್ಕ ಅವಕಾಶ, ೧೯೮೮ರ ಜನವರಿ ೧೨ ( ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ಭಾರತದ ರಾಷ್ಟ್ರೀಯ ಯುವಕರ ದಿನ) ರಂದು ನವದೆಹಲಿಯಲ್ಲಿ ನಡೆಯಲಿದ್ದ " ಅಖಿಲ ಭಾರತ ಯುವಕರ ಸೈಕಲ್ ರ‍್ಯಾಲಿ ಮತ್ತು ಭಾವೈಕ್ಯತಾ ಶಿಬಿರ " ದಲ್ಲಿ ಭಾಗವಹಿಸಲು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದವರಿಂದ. ಅದನ್ನು ಎರಡು ಕೈಗಳಲ್ಲೂ ಬಾಚಿಕೊಂಡ ನಾವು ಐದೂ ಜನರು ದೆಹಲಿಗೆ ಹೊರಡಲು ಸಿದ್ಧತೆಯನ್ನು ಆರಂಭಿಸಿದೆವು.

ಕೇವಲ ಐದು ಜನರು ಹೋದರೆ ಸಾಲದು ಎಂದ ಕಾರ್ಯದರ್ಶಿ ಬಸವರಾಜುರವರ ಮಾತಿಗೆ ಬೆಲೆ ಕೊಟ್ಟು ನಮ್ಮ ಸ್ನೇಹಿತರನ್ನು ಓಲೈಸಲು ಪ್ರಾರಂಭಿಸಿದೆವು, ಅವರ ಮನೆಗಳಿಗೆ ಹೋಗಿ, ಅವರ ಅಪ್ಪ ಅಮ್ಮಂದಿರೊಡನೆ ಮಾತಾಡಿ, ಅವರ ಮನವೊಲಿಸಿ, ಕೊನೆಗೆ ೩೧ ಜನರ ದೊಡ್ಡ ತಂಡವನ್ನು ಆ ಮಹಾನ್ ಸೈಕಲ್ ರ‍್ಯಾಲಿಗೆ ಸಿದ್ಧ ಮಾಡಿಯೇ ಬಿಟ್ಟೆವು. ಸಾಕಷ್ಟು ಸೈಕಲ್ ಪ್ರವಾಸಗಳ ಅನುಭವವಿದ್ದ ನನ್ನನ್ನು ಆ ತಂಡದ ನಾಯಕನಾಗಿ ನಿಯುಕ್ತಿ ಮಾಡಲಾಯಿತು. ಓಹ್! ಅದೊಂದು ಮಹಾನ್ ಅನುಭವ, ೧೯೮೭ರ ಡಿಸೆಂಬರಿನಲ್ಲಿ ಆರಂಭಿಸಿ, ೩೦ ದಿನಗಳು ತಿಪಟೂರಿನಿಂದ ನವದೆಹಲಿಯವರೆಗೆ ಸೈಕಲ್ ತುಳಿದು, ದಾರಿಯಲ್ಲಿ ಸಿಕ್ಕ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲಾ ನೋಡುತ್ತಾ, ಪ್ರತಿಯೊಂದು ಅನುಭವಗಳನ್ನೂ ನಮ್ಮೆದೆಯಲ್ಲಿ ದಾಖಲು ಮಾಡುತ್ತಾ, ಕೊನೆಗೆ ೧೯೮೮ರ ಜನವರಿ ೧೧ ರಂದು ದೆಹಲಿ ತಲುಪಿ, ಮಹಾತ್ಮ ಗಾಂಧಿಯವರ ಸಮಾಧಿ, " ರಾಜ್ ಘ್ಹಾಟ್" ನ ಪಕ್ಕದಲ್ಲಿರುವ ’ ಗಾಂಧಿ ದರ್ಶನ ’ ಮೈದಾನದಲ್ಲಿದ್ದ ನಮ್ಮ " ರಾಷ್ಟ್ರೀಯ ಭಾವೈಕ್ಯತಾ ಶಿಬಿರ " ವನ್ನು ತಲುಪಿದಾಗ ನಮಗೆಲ್ಲಾ ಜಗವನ್ನೇ ಗೆದ್ದ ಅನುಭವವಾಗಿ ರೋಮಾಂಚಿತವಾಗಿದ್ದೆವು. ಭಾರತದ ಎಲ್ಲಾ ರಾಜ್ಯಗಳಿಂದ ತಮ್ಮ ಸೈಕಲ್ಗಳಲ್ಲಿ ಬಂದಿದ್ದ ಸುಮಾರು ನಾಲ್ಕು ಸಾವಿರ ಯುವಕರೊಂದಿಗೆ ನಮ್ಮೆಲ್ಲಾ ಅನುಭವಗಳನ್ನು ಹಂಚಿಕೊಂಡು, ಅವರ ಅನುಭವಗಳ ಬುತ್ತಿಯನ್ನೂ ಕಟ್ಟಿಕೊಂಡೆವು.

೧೫ ದಿನಗಳ ಶಿಬಿರವನ್ನು ಮುಗಿಸಿ, ದೆಹಲಿಯ ಇಂಚಿಂಚನ್ನೂ ನಮ್ಮ ಸೈಕಲ್ಗಳೊಂದಿಗೆ ಸುತ್ತಾಡಿ ನೋಡಿ, ಆನಂದಿಸಿ, ಅನುಭವಿಸಿ, ತಿಪಟೂರಿಗೆ ಹಿಂತಿರುಗಿ ಬಂದಾಗ ಅದೆಂಥಾ ಸ್ವಾಗತ ನಮಗೆ ಕಾದಿತ್ತು ಗೊತ್ತೇ ?? ಈ ಜೀವದಲ್ಲಿ ಉಸಿರಿರುವವರೆಗೂ ಅದನ್ನು ಮರೆಯಲಾಗದು! ಕಲ್ಪತರು ನಾಡು ತಿಪಟೂರಿನ ಅಸಂಖ್ಯಾತ ಮಾತೆಯರ ಆಶೀರ್ವಾದ ನಮ್ಮ ಬೆನ್ನ ಹಿಂದೆ ನಿಂತು ನಮ್ಮನ್ನು ಸಾಧನೆಯ ಉತ್ತುಂಗಕ್ಕೆ ಎಳೆದೊಯ್ದಿತ್ತು. ಅಂದು ಹರಸಿದ ಆ ಮಾತೆಯರಿಗಿದೋ ನನ್ನ ನಮನ. ಆಗ ಕರ್ನಾಟಕ ಸರ್ಕಾರದ ಮಂತ್ರಿಗಳಾಗಿದ್ದ ಶ್ರೀ ಲಕ್ಷ್ಮೀನರಸಿಂಹಯ್ಯನವರು, ವಿಭಾಗಾಧಿಕಾರಿಗಳಾಗಿದ್ದ ಶಿವಪ್ಪನವರು, ಅಂದಿನ ಶಾಸಕರಾಗಿದ್ದ ಟಿ.ಎಂ.ಮಂಜುನಾಥ್ ರವರು ನೆರೆದಿದ್ದ ಸಾವಿರಾರು ಜನರೆದುರು ನಮ್ಮ ಸಾಹಸಯಾತ್ರೆಯನ್ನು ಕೊಂಡಾಡಿ, ನಮ್ಮನ್ನು ಸನ್ಮಾನಿಸಿದಾಗ, ನಮಗೆ ಜಗತ್ತನ್ನೇ ಗೆದ್ದ ಅನುಭವವಾಗಿತ್ತು. ದೂರದಲ್ಲಿ ಜನರ ಮಧ್ಯೆ ಕುಳಿತು ನೋಡುತ್ತಿದ್ದ ಅಮ್ಮನ ಕಣ್ಗಳಲ್ಲಿ ಕಂಬನಿ ಕಟ್ಟೆಯೊಡೆದಿತ್ತು.

ಆದರೆ ಅಂದೂ ಸಹಾ ಅಪ್ಪ ಬರದೆ ಇದ್ದ ನೋವು ನನ್ನ ಎದೆಯನ್ನು ಹಿಂಡುತ್ತಿತ್ತು!

No comments: