Friday, August 28, 2009

ನೆನಪಿನಾಳದಿಂದ..೮.. ಎಂಟು ಕಣ್ಣಿನ ಪ್ರೇಮಿಗಳು.

ದ್ವಿತೀಯ ಪಿ.ಯು.ಸಿ ಮುಗಿಸಿ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭವಾಗಿದ್ದವು. ನಾವು ಐದೂ ಜನ ಪ್ರಾಣ ಸ್ನೇಹಿತರು, ಇತಿಹಾಸ, ಅರ್ಥಶಾಸ್ತ್ರ, ಮನ:ಶಾಸ್ತ್ರಗಳನ್ನು ಐಚ್ಚಿಕ ವಿಷಯಗಳನ್ನಾಗಿ ತೆಗೆದುಕೊಂಡಿದ್ದೆವು. ಸಾಂಗವಾಗಿ ತರಗತಿಗಳು ನಡೆಯುತ್ತಿದ್ದವು, ಕಾಲೇಜಿನ ದಿನಗಳು ನಮ್ಮ ಮಾಮೂಲಿನ ಹಾಸ್ಯ, ಮೂದಲಿಕೆ, ಪ್ರವಾಸ, ಸಾಹಸಗಳೊಂದಿಗೆ ನಿರುಮ್ಮಳವಾಗಿ ಸಾಗುತ್ತಿದ್ದವು. ಹೀಗಿರುವಾಗ ನನ್ನ ಜೀವನದಲ್ಲಿ ಪ್ರವೇಶ ಕೊಟ್ಟವಳು, " ಮೀನಾ ".

" ಉತ್ತುಂಗ ನಾಡಿನಿಂದ ಒಂದು ಚೆಲುವಿ ಬಂದಾಳವ್ವ, ಎಂಥ ಚೆಲುವಿ ಕಾಣ್ತಾಳವ್ವ, ಚೆಲುವೀಯವ್ವಾ " ಎಂಬ ಜಾನಪದ ಗೀತೆಯನ್ನು ನೂರಾರು ಸಾರಿ ಹಾಡಿ, ಅನುಭವಿಸಿ, ಅದರ ಭಾವಕ್ಕೆ ತಕ್ಕಂತೆ ನನಗೊಂದು ಚೈತನ್ಯದ ಚಿಲುಮೆಯಾಗಿದ್ದವಳು. ನನ್ನ ಕಾಲೇಜಿನ ದಿನಗಳ ಸಾಧನೆಗಳ ಬೆನ್ನೆಲುಬಾಗಿ ನಿಂತವಳು. ಉತ್ತುಂಗ ನಾಡಿನಿಂದ ನನಗಾಗಿ ಧರೆಗಿಳಿದು ಬಂದವಳು, ಮನದಲ್ಲಾಗಿದ್ದ ಮಾಯದ ಗಾಯಗಳಿಗೆ ದಿವ್ಯೌಷಧವಾಗಿ ಹೊಸ ಚೈತನ್ಯ ತುಂಬಿದವಳು,
ನನ್ನ " ಮತ್ಸ್ಯೆ " .

ದಾದಿಯಾಗಿದ್ದ ಅಮ್ಮನ ಮೇಲ್ವಿಚಾರಕಿಯೊಬ್ಬರಿಗೆ ಯಾವಾಗಲೂ ತಮ್ಮ ಇಲಾಖೆಯ ವರದಿಗಳನ್ನು ನನ್ನ ಮೂಲಕ ಕಳುಹಿಸುತ್ತಿದ್ದರು. ಗಾಂಧಿನಗರದಲ್ಲಿದ್ದ ನಮ್ಮ ಮನೆಗೂ, ಸರ್ಕಾರಿ ಆಸ್ಪತ್ರೆಯ ಬಳಿಯಿದ್ದ ಅವರ ವಸತಿಗೂ ಸುಮಾರು ನಾಲ್ಕು ಕಿಲೋಮೀಟರ್ ದೂರವಿತ್ತು. ಕಾಲೇಜಿಗೆ ಹೋಗುವಾಗ ದಾರಿಯಲ್ಲಿದ್ದ ಅವರ ಮನೆಗೆ ಅಮ್ಮನ ವರದಿಗಳನ್ನು ನಿಯಮಿತವಾಗಿ ನಾನು " ಕೊರಿಯರ್ ಬಾಯ್ " ನಂತೆ ತಲುಪಿಸಿಬಿಡುತ್ತಿದ್ದೆ. ಹಾಗೆಲ್ಲಾ ಹೋದಾಗ, ಕ್ರಿಶ್ಚಿಯನ್ನರಾಗಿದ್ದ,
ಸಹೃದಯರಾದ ಅವರು ನನಗೆ ಕಾಫಿ ಕುಡಿಸಿ, ನನ್ನ ಓದಿನ ಬಗ್ಗೆ, ಎನ್.ಸಿ.ಸಿ ಕ್ಯಾಂಪ್ ಗಳ ಬಗ್ಗೆ, ಅಪ್ಪನ ಆರ್ಭಟದ ಬಗ್ಗೆ ವಿಚಾರಿಸುತ್ತಿದ್ದರು. ಚೆನ್ನಾಗಿ ಓದಿ ಜೀವನದಲ್ಲಿ ನೆಲೆಯಾಗಿ ನಿಲ್ಲುವಂತೆ ಶುಭ ಹಾರೈಸುತ್ತಿದ್ದರು. ತಮ್ಮ ಮನೆಯ ಕಷ್ಟ ಸುಖಗಳನ್ನೂ ಹೇಳಿಕೊಳ್ಳುತ್ತಿದ್ದರು.

ಒಂದು ದಿನ ಹೀಗೆಯೇ ಹೋದಾಗ ಆಶ್ಚರ್ಯ ಕಾದಿತ್ತು. ಯಾವಾಗಲೂ ಕಾಫಿ ಕೊಡುತ್ತಿದ್ದ ಅವರ ಜಾಗದಲ್ಲಿ " ಕೃಷ್ಣ ಸುಂದರಿ " ಯೊಬ್ಬಳು ಕಾಫಿ ಲೋಟ ಹಿಡಿದು ವಯ್ಯಾರದಿಂದ ಬಳುಕುತ್ತಾ ನನ್ನತ್ತ ಬಂದಾಗ, ಯಾರೆಂದು ಗೊತ್ತಾಗದೆ ಕುಳಿತಿದ್ದವನು ಕಕ್ಕಾಬಿಕ್ಕಿಯಾಗಿ ಎದ್ದು ನಿಂತೆ ! ಮುದ್ದಾದ ದುಂಡು ಮುಖ, ವಿಶಾಲವಾದ ಭಾವ ಪೂರ್ಣ ನಯನಗಳು, ಸಂಪಿಗೆಯ ಎಸಳಿನಂಥ ಮೂಗು, ಎತ್ತರದ ನಿಲುವು, ಸ್ವಲ್ಪ ಕಪ್ಪಿದ್ದರೂ ಮತ್ತೆ ಮತ್ತೆ ನೋಡಬೇಕೆನ್ನುವಂಥ ಮೈ ಮಾಟದ ಈ ಸುಂದರಿ ಯಾರು ? ಹುಡುಗಿಯರೆಂದರೆ ಕಾಲೇಜಿನಲ್ಲಿ ಸ್ವಲ್ಪ ದೂರವೇ ಇರುತ್ತಿದ್ದ ನನಗೆ ಒಬ್ಬ ಅಪರಿಚಿತ ಹುಡುಗಿಯನ್ನು ಅಷ್ಟು ಹತ್ತಿರದಿಂದ ನೋಡಿ ಏನು ಮಾತಾಡಬೇಕೆಂದು ತಿಳಿಯದೆ ಒದ್ದಾಡುತ್ತಿದ್ದಾಗ, ಒಳಗಿನಿಂದ ಬಂದ ಅವರು, " ಇವಳು ನನ್ನ ದೊಡ್ಡ ಮಗಳು, ಮೀನಾ, ಬೆಂಗಳೂರಿನಲ್ಲಿ ಓದುತ್ತಿದ್ದಳು, ದ್ವಿತೀಯ ಪಿ.ಯು.ಸಿ ಫೇಲಾಗಿ ಬಂದಿದ್ದಾಳೆ " ಎಂದು ಪರಿಚಯ ಮಾಡಿಸಿದಾಗ ಜೀವ ನಿರಾಳವಾಯಿತು. ಫಿಲೋಮಿನಾ ಎಂಬ ಅವಳ ಹೆಸರನ್ನು ಕಟ್ ಮಾಡಿ ಮುದ್ದಾಗಿ
" ಮೀನಾ" ಎಂದು ಕರೆಯುತ್ತಿದ್ದರಂತೆ. ಅವಳು ಕೊಟ್ಟ ಕಾಫಿಯ ಲೋಟ ತೆಗೆದುಕೊಂಡು ಪೆಚ್ಚುಪೆಚ್ಚಾಗಿ ಅವಳ ಮುಖ ನೋಡಿದರೆ ಅವಳ ಕಣ್ಣಂಚಿನಲ್ಲಿ ತುಂಟನಗೆ ಹೊರ ಸೂಸುತ್ತಿತ್ತು.

ಹೀಗೆ ಆರಂಭವಾದ ನಮ್ಮ ಸ್ನೇಹ ತುಂಬಾ ಗಾಢವಾಯಿತು, ಫೇಲಾಗಿದ್ದ ಅವಳನ್ನು, ಅವರಮ್ಮನ ಆಣತಿಯಂತೆ, ನಮ್ಮದೇ ಕಾಲೇಜಿನ ಪರಿಚಿತ ಉಪನ್ಯಾಸಕರಲ್ಲಿ ಟ್ಯೂಷನ್ಗೆ ಸೇರಿಸಿದೆ. ಮತ್ತೆ ನಾನು ಟೈಪಿಂಗಿಗೆ ಹೋಗುತ್ತಿದ್ದ ಠಾಗೂರ್ ವಾಣಿಜ್ಯ ವಿದ್ಯಾಲಯದಲ್ಲಿ ಟೈಪಿಂಗಿಗೆ ಸೇರಿಸಿದೆ. ಹೀಗೆ ನಮ್ಮ ಓಡಾಟ ಶುರುವಾಗಿ, ಬೆಳಿಗ್ಗೆ ಮತ್ತು ಸಂಜೆ, ದಿನಕ್ಕೆರಡು ಬಾರಿ, ಟೈಪಿಂಗ್ನಲ್ಲಿ ಒಬ್ಬರಿಗೊಬ್ಬರು ಭೇಟಿಯಾಗತೊಡಗಿದೆವು. ಸಮೀಪ ದೃಷ್ಟಿ ದೋಷವಿದ್ದ ಅವಳು ಟೈಪಿಂಗಿಗೆ ಬರುವಾಗ ಕನ್ನಡಕ ಧರಿಸಿ ಬರುತ್ತಿದ್ದಳು. ಟೈಪಿಂಗ್ ಹಾಗೂ ಟ್ಯೂಷನ್ ಎರಡೂ ಅವರ ಮನೆಯಿಂದ ಸುಮಾರು ದೂರ ಇದ್ದುದರಿಂದ ಅವರಮ್ಮ ಒಂದು ಹೀರೋ ಸೈಕಲ್ ಕೊಡಿಸಿದ್ದರು. ಮೊದ ಮೊದಲು ಅವಳ ಆಂಗ್ಲ ಮಿಶ್ರಿತ ಬೆಂಗಳೂರು ಭಾಷೆಗೆ ಬೆದರಿದ ನಾನು ಅವಳ ಜೊತೆ ಮಾತಾಡಲು ತಡವರಿಸುತ್ತಿದ್ದೆ. ಏಕೆಂದರೆ ಅಪ್ಪಟ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ನನಗೆ ಆಂಗ್ಲದ ವ್ಯಾಮೋಹವಿರಲ್ಲಿಲ್ಲವಲ್ಲದೆ ಮಾತಾಡುವಷ್ಟು ಪ್ರೌಢಿಮೆಯೂ ಇರಲಿಲ್ಲ ! ಇದು ಅವಳಿಗೆ ಅರ್ಥವಾಗಿ ಸಾಧ್ಯವಾದಷ್ಟೂ ನನ್ನೊಂದಿಗೆ ಕನ್ನಡದಲ್ಲಿಯೇ ಮಾತಾಡಲು ಪ್ರಯತ್ನಿಸುತ್ತಿದ್ದಳು. ಚಿಕ್ಕಂದಿನಿಂದ ಬೆಂಗಳೂರಿನ ಹಾಸ್ಟೆಲಿನಲ್ಲಿದ್ದುಕೊಂಡು ಆಂಗ್ಲ ಮಾಧ್ಯಮದಲ್ಲಿ ಓದಿದ್ದ ಅವಳಿಗೆ ಅದೆಷ್ಟೋ ಕನ್ನಡ ಪದಗಳು ಗೊತ್ತೇ ಇರಲಿಲ್ಲ. ನಾನು ಅವಳಿಗೆ ಆತ್ಮೀಯ ಕನ್ನಡ ಮೇಷ್ಟ್ರಾದೆ ! ಅವಳ ಬೆಂಗ್ಳೂರ್ಗನ್ನಡಕ್ಕೂ, ನಮ್ಮ ಕಲ್ಪತರು ನಾಡಿನ ಕನ್ನಡಕ್ಕೂ ತುಂಬಾನೇ ಅಂತರವಿತ್ತು, ಕೆಲವೊಮ್ಮೆ ನನ್ನೊಡನೆ ತಪ್ಪು ತಪ್ಪಾಗಿ ಮಾತಾಡಿ, ಆಮೇಲೆ ಅದರರ್ಥ ಗೊತ್ತಾಗಿ ಬಾಯ್ತುಂಬಾ ನಗುತ್ತಿದ್ದಳು. ನಾನು ಅವಳ ನಗುವನ್ನೇ ನೋಡುತ್ತಾ, ಅವಳನ್ನು ನನ್ನ ಕಣ್ಗಳಲ್ಲಿ ತುಂಬಿಕೊಳ್ಳುತ್ತಾ ಅವಳ ಕೈಸೆರೆಯಾಗಿ ಹೋದೆ.

ಈ ನಮ್ಮ ಸ್ನೇಹದ ಸುದ್ಧಿ ನಮ್ಮ ಸ್ನೇಹಿತರ ಬಳಗದಲ್ಲೆಲ್ಲಾ ಕಾಡ್ಗಿಚ್ಚಿನಂತೆ ಹಬ್ಬಿ, ಎಲ್ಲರ ಬಾಯಲ್ಲಿ ಬಿಸಿ ಬಿಸಿ ಚರ್ಚೆಯಾಗತೊಡಗಿತು. ಯಾವಾಗಲೂ ದೂರ್ವಾಸ ಮುನಿಯಂತೆ ಮುಖ ಗಂಟು ಹಾಕಿಕೊಂಡು, ನಾನಾಯಿತು, ನನ್ನ ಕೆಲಸವಾಯಿತು ಎಂಬಂತೆ ಯಾರಿಗೂ ಕೇರ್ ಮಾಡದೆ, ಯಾರ ತಂಟೆಗೂ ಹೋಗದೆ, ಕೇವಲ ಗುರಿ ಸಾಧಿಸುವ ಬಗ್ಗೆ ಭಾಷಣ ಮಾಡುತ್ತಿದ್ದ ನಾನು, ಒಬ್ಬ ಕ್ರಿಶ್ಚಿಯನ್ ಹುಡುಗಿ, ಅದೂ ಬೆಂಗ್ಳೂರ್ ರಿಟರ್ನ್ಡ್ ಜೊತೆ ಸ್ನೇಹದಿಂದಿದ್ದೇನೆಂದರೆ, ಅದೊಂದು ದೊಡ್ಡ ಸುದ್ಧಿಯೇ ಆಗಿ ಹೋಯಿತು. ಅವಳ ಮೇಲೆ ಎಲ್ಲಾರ ಕಣ್ಣು ಬೀಳಲಾರಂಭಿಸಿ, ಸಣ್ಣ ಪುಟ್ಟ ತೊಂದರೆಗಳು ಶುರುವಾದವು. ಒಂದು ದಿನ ಅವಳು ಸಂಜೆಯ ಟೈಪಿಂಗ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಪುಂಡನೊಬ್ಬ ತನ್ನ ಗೆಳೆಯರೊಂದಿಗೆ ಅವಳ ಹಿಂದೆ ಬಿದ್ದು ಚುಡಾಯಿಸಿದ್ದಾನೆ, ಕೆಣಕಿದ್ದಾನೆ, ಇವಳು ಕೋಪದಿಂದ ಅವನ ಕೆನ್ನೆಗೆ ಹೊಡೆದು ಮನೆಗೆ ಹೋಗಿದ್ದಾಳೆ. ಅಂದಿನಿಂದ ಅವನು ಪ್ರತಿದಿನ ತನ್ನ ಗ್ಯಾಂಗಿನೊಂದಿಗೆ ಇವಳಿಗೆ ಕಾಟ ಕೊಡಲು ಆರಂಭಿಸಿದ್ದಾನೆ. ಇದನ್ನು ನನ್ನ ಜೊತೆ ಒಮ್ಮೆಯೂ ಹೇಳದ ಅವಳು ಮನೆಯಲ್ಲಿ ತನ್ನ ಅಮ್ಮನೊಂದಿಗೆ ಹೇಳಿದ್ದಾಳೆ. ಪಕ್ಕದ ನುಗ್ಗೇಹಳ್ಳಿಯಲ್ಲಿ ಅದೆಂಥದೋ ಒಂದು ಅಂಗಡಿ ಇಟ್ಟುಕೊಂಡಿದ್ದ ಅವರಪ್ಪ ಬೆಳಿಗ್ಗೆ ಹೋದರೆ ಬರುತ್ತಿದ್ದುದು ರಾತ್ರಿಗೆ ಮಾತ್ರ. ಹೀಗಿರುವಾಗ ಅವಳಿಗೆ ಯಾರು ರಕ್ಷಣೆ ? ಅದೇ ಸಮಯದಲ್ಲೆ ಅಮ್ಮನನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಅವರು ನನ್ನನ್ನು ಮನೆಗೆ ಕಳುಹಿಸುವಂತೆ ಕೋರಿದ್ದಾರೆ, ಅಮ್ಮ ನನಗೆ ಯಾಕೋ " ಭಾಗ್ಯರತ್ನ " ಅವರು ನಿನ್ನನ್ನು ಬರಹೇಳಿದರು, ಅದೇನು ಹೋಗಿ ನೋಡು ಅಂದಾಗ ಕುತೂಹಲದಿಂದ ಅವರ ಮನೆಗೆ ಹೋಗಿದ್ದೆ. ಅಮ್ಮ ಮಗಳಿಬ್ಬರೂ ಮನೆಯಲ್ಲೇ ಇದ್ದರು. ನಾನು ಹೋದೊಡನೆ ಆಕೆ ಉಪಚರಿಸಿ ಕುಳ್ಳಿರಿಸಿ, ನಡೆದ ಕಥೆ ಎಲ್ಲಾ ಹೇಳಿ, ಯಾವುದೇ ಗಲಾಟೆಯಾಗದಂತೆ ಆ ಹುಡುಗ ಮತ್ತು ಅವನ ಗ್ಯಾಂಗಿನಿಂದ ಮಗಳಿಗಾಗುತ್ತಿದ್ದ ತೊಂದರೆಯನ್ನು ತಪ್ಪಿಸುವಂತೆ ನಿವೇದಿಸಿಕೊಂಡರು. ನನಗೆ ಯಾಕೆ ಹೇಳಲಿಲ್ಲ ಎಂದು ಮೀನಾಳ ಮುಖ ನೋಡಿದರೆ ಮೌನವಾಗಿ ತಲೆ ತಗ್ಗಿಸಿದಳು. ಏನೂ ಹೆದರಬೇಡಿ, ನಾನಿದ್ದೇನೆ ಎಂದು ಧೈರ್ಯ ಹೇಳಿ ಕಾಲೇಜಿಗೆ ಬಂದೆ. ನನ್ನ ಸ್ನೇಹಿತರೊಡನೆ ಚರ್ಚಿಸಿದೆ, ಬಿಸಿರಕ್ತದ ನಾವು ಒಮ್ಮೆಲೇ ತೆಗೆದುಕೊಂಡ ತೀರ್ಮಾನ, ಅಂದು ಸಂಜೆಯೇ ಆ ಕೀಚಕರ ಗುಂಪನ್ನು ರಿಪೇರಿ ಮಾಡಬೇಕೆಂದು !

ಅಂದು ಸಂಜೆಗೆ ಕೀಚಕರ ಗುಂಪಿನ ದಮನಕ್ಕೆ ಮುಹೂರ್ತವಿಟ್ಟ ನಾವು ಆರೇಳು ಜನ ಸ್ನೇಹಿತರು, ಮೀನಾ, ಟೈಪಿಂಗ್ ಮುಗಿಸಿ ಮನೆಗೆ ಬರುವ ದಾರಿಯಲ್ಲಿ ಕಾದು ನಿಂತೆವು. ಅವಳು ಬರುವ ಸ್ವಲ್ಪ ಮುಂಚೆ ನಾಲ್ಕೈದು ಜನ " ಬಚ್ಚಾ" ಗಳ ಗುಂಪೊಂದು ನಮ್ಮಿಂದ ಸ್ವಲ್ಪ ದೂರದಲ್ಲಿ ನಿಂತು ಯಾರನ್ನೋ ಕಾಯುತ್ತಿದ್ದರು. ಸರಿಯಾಗಿ ಅವಳು ಅಲ್ಲಿಗೆ ಬಂದಾಗ, ಅವರೆಲ್ಲಾ ಜೋರಾಗಿ ಕೂಗಾಡುತ್ತಾ, ತಮ್ಮ ಸೈಕಲ್ಲುಗಳಲ್ಲಿ ಅವಳ ಹಿಂದೆಯೇ ಸ್ವಲ್ಪ ದೂರ ಹೋಗಿ ಅವಳನ್ನು ಚುಡಾಯಿಸಿ, ಗೋಳು ಹೊಯ್ದುಕೊಂಡು, ಸೀದಾ ನಮ್ಮ ಕಾಲೇಜಿನ ಮುಂದಿದ್ದ " ಹಾಸನ ಸರ್ಕಲ್ " ಕಡೆಗೆ ಹೋದರು. ಇದನ್ನೆಲ್ಲಾ ನೋಡುತ್ತಿದ್ದ ನನ್ನ ರಕ್ತ ಕುದಿಯುತ್ತಿತ್ತು, ಆದರೆ ನನ್ನ ಸ್ನೇಹಿತರು ಅವಳು ಮನೆಗೆ ಹೋಗುವವರೆಗೂ ಏನೂ ಮಾಡುವುದು ಬೇಡ ಎಂದು ತಡೆದು ನಿಂತಿದ್ದರು. ಅವಳು ಮನೆ ತಲುಪಿದ್ದನ್ನು ಖಚಿತಪಡಿಸಿಕೊಂಡು, ಸೀದಾ " ಹಾಸನ ಸರ್ಕಲ್ " ಗೆ ಬಂದ ನಾವು, ಅಲ್ಲಿ ಕುಳಿತು ತಮ್ಮ ಸಾಹಸಗಾಥೆಯ ಕುರಿತು ಮಾತಾಡಿಕೊಳ್ಳುತ್ತಾ, ತಮ್ಮದೇ ಲೋಕದಲ್ಲಿದ್ದ ಆ ಐವರು ಕೀಚಕರಿಗೆ ಹಿಗ್ಗಾ ಮುಗ್ಗಾ ಥಳಿಸಿ ಬಿಟ್ಟೆವು. ಅನಿರೀಕ್ಷಿತವಾಗಿ ಬಿದ್ದ ಒದೆಗಳಿಂದ ದಿಕ್ಕುಗೆಟ್ಟ ಅವರು ದಿಕ್ಕಿಗೊಬ್ಬೊಬ್ಬರಂತೆ ಓಡತೊಡಗಿದರು. ಅವರ ಬೆನ್ನಟ್ಟಿದ ನಾವು ಮತ್ತೆ ಅವರು ಜೀವನದಲ್ಲಿ ಇನ್ನೆಂದೂ ಯಾವ ಹುಡುಗಿಯ ತಂಟೆಗೂ ಹೋಗದಷ್ಟು ತದುಕಿ ಬಿಟ್ಟೆವು!! ಈ ವಿಚಾರ ಕಾಲೇಜಿನಲ್ಲಿ ಒಬ್ಬರಿಂದೊಬ್ಬರಿಗೆ ಹಬ್ಬಿ ಆ ದಿನಗಳಲ್ಲಿ ಬಹು ಆಸಕ್ತಿಯ, ಚರ್ಚೆಯ ವಿಷಯವಾಗಿ " ಮೀನಾ - ಮಂಜು " ಎಂಬ ಪ್ರಣಯ ಕಥೆ ಎಲ್ಲರ ಬಾಯಲ್ಲಿ ನಲಿದಾಡತೊಡಗಿತು.

ಮಾರನೆಯ ದಿನ ಬೆಳಿಗ್ಗೆ ಅವಳಿಗೆ ಹಿಂದಿನ ದಿನದ ನಮ್ಮ " ಬೊಂಬಾಟ್ ಸಾಹಸ " ದ ಬಗ್ಗೆ ಬಣ್ಣಿಸಿ ಹೇಳುತ್ತಿದ್ದರೆ, ಬಿಟ್ಟ ಕಣ್ಣು ಬಿಟ್ಟಂತೆ ಕೇಳುತ್ತಿದ್ದ ಅವಳು, ಸುತ್ತಲಿನ ಪರಿವೆಯೇ ಇಲ್ಲದೆ ಥಟ್ಟಂತ ನನ್ನ ಕೆನ್ನೆಗೊಂದು ಮುತ್ತನ್ನಿತ್ತು ಬಾಚಿ ತಬ್ಬಿಕೊಂಡು ಬಿಟ್ಟಳು! ಆ ದಿನ ಸೆಪ್ಟೆಂಬರ್, ೭, ೧೯೮೭, ನನ್ನ ಹೆಸರಿನೊಂದಿಗೆ ಅಂದಿನಿಂದ ಇಂದಿನವರೆಗೂ ಥಳುಕು ಹಾಕಿಕೊಂಡು ಬಿಟ್ಟಿದೆ!! ಅಲ್ಲಿಂದ ಮುಂದಕ್ಕೆ " ಹನಿ ಹನಿ ಪ್ರೇಮ್ ಕಹಾನಿ " ಆಗಿ ಹೋಯಿತು, ಕಾಲೇಜಿನ ನನ್ನೆಲ್ಲಾ ಗೆಳೆಯ ಗೆಳತಿಯರಿಗೂ ಅವಳು ಆತ್ಮೀಯಳಾದಳು, ಎಲ್ಲರೊಡನೆ ಬೆರೆತು, ತುಂಬಾ ಸ್ನೇಹದಿಂದಿರುತ್ತಿದ್ದಳು. ತಿಪಟೂರೆಂಬ ತಿಪಟೂರಿಗೆ ನಮ್ಮ ಪ್ರಣಯ ಕಥೆ ಗೊತ್ತಾಗಿ, ಎಲ್ಲೆಂದರಲ್ಲಿ ನಮ್ಮ ಸೈಕಲ್ ಗಳ ಮೇಲೆ ಸುತ್ತುತ್ತಿದ್ದ ನಮ್ಮಿಬ್ಬರಿಗೆ ಒಂದು ಅನ್ವರ್ಥಕ ನಾಮ ತಗುಲಿಕೊಂಡಿತು, " ಎಂಟು ಕಣ್ಣಿನ ಪ್ರೇಮಿಗಳು " . ಆಗ ತಿಪಟೂರಿನ ಗಣೇಷೋತ್ಸವ ತುಂಬಾ ಪ್ರಸಿದ್ಧವಾಗಿತ್ತು, ಪ್ರತಿದಿನ ಸಂಜೆ ಒಂದು ವಿಶೇಷ ಕಾರ್ಯಕ್ರಮವಿರುತ್ತಿತ್ತು, ತಪ್ಪದೆ ನಾವಿಬ್ಬರೂ ಸಂಜೆ ಗಣೇಷನ ಮುಂದೆ ಕುಳಿತು ಬಿಡುತ್ತಿದ್ದೆವು. ಕಾರ್ಯಕ್ರಮವನ್ನು ಆಸ್ವಾದಿಸಿ, ನಡುವೆ ಸಾಕಷ್ಟು ಮಾತಾಡಿ, ಕೊನೆಗೆ ಪ್ರಸಾದ ಸ್ವೀಕರಿಸಿ, ಅವಳನ್ನು ಅವರ ಮನೆಯವರೆಗೂ ಬಿಟ್ಟು ಬರುತ್ತಿದ್ದೆ. ನಾನು ೧೯೮೪ರಿಂದಲೂ ಕನ್ನಡಕಧಾರಿ, ಅವಳೂ ಸಹ ಯಾವಾಗಲೂ ಕನ್ನಡಕ ಧರಿಸುತ್ತಿದ್ದಳು. ಅವಳದೊಂದು ಫೋಟೊ ನನ್ನ ಪರ್ಸಿನಲ್ಲಿ ಭದ್ರವಾಗಿ ಕುಳಿತಿತು. ನಾನು ಸೈಕಲ್ ಟೂರ್ ಹೊರಟರೆ, ಎನ್. ಸಿ. ಸಿ. ಕ್ಯಾಂಪಿಗೆ ಹೊರಟರೆ, ಸಿಹಿ ಮುತ್ತನ್ನಿತ್ತು ಹೋಗಿ ಬಾ ಶುಭವಾಗಲಿ ಎಂದು ಹಾರೈಸಿ ಕಳುಹಿಸುತ್ತಿದ್ದಳು. ನಾನು ಹಿಂತಿರುಗಿ ಬಂದೊಡನೆ ಗಂಟೆಗಟ್ಟಲೆ ನನ್ನೊಡನೆ ಕುಳಿತು ನನ್ನ ಅನುಭವಗಳನ್ನು ಕೇಳಿ, ಭಾವನಾ ಲಹರಿಯಲ್ಲಿ ತೇಲಿ ಹೋಗುತ್ತಿದ್ದಳು. ನೀನು ಬಹಳ ದೊಡ್ಡ ವ್ಯಕ್ತಿಯಾಗಬೇಕು, ಜೀವನದಲ್ಲಿ ಬಹು ಮಹತ್ವವಾದುದನ್ನು ಸಾಧಿಸಬೇಕು, ಎಲ್ಲರಿಗಿಂತ ಎಲ್ಲದರಲ್ಲೂ ಮುಂದಿರಬೇಕು, ನಾನು " ನನ್ನ ಮಂಜು " ಇಂಥವನು ಎಂದು ಎದೆ ತಟ್ಟಿ ಹೇಳಬೇಕು ಎಂದೆಲ್ಲಾ ನನಗೆ ಸ್ಫೂರ್ತಿ ತುಂಬುತ್ತಿದ್ದಳು. ನಾನು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ, ಅಲ್ಲಿ ಬಂದು ಮುಂದಿನ ಸಾಲಿನಲ್ಲಿ ಕುಳಿತು ನನ್ನನ್ನು ಉತ್ತೇಜಿಸುತ್ತಿದ್ದಳು, ಗೆಲ್ಲುವಂತೆ ಪ್ರೇರೇಪಿಸುತ್ತಿದ್ದಳು, ನನ್ನ ಮೀನಾ.

ನಾನು ದೆಹಲಿಗೆ ಸೈಕಲ್ ಪ್ರವಾಸ ಹೊರಟಾಗ, ಸುಮಾರು ಒಂದೂವರೆ ತಿಂಗಳು ದೂರವಿರಬೇಕೆಂದು, ನನ್ನನ್ನು ಅಪ್ಪಿ ಗೋಳಾಡಿದ್ದಳು, ನಿನಗೇನು ಬೇಕು ದೆಹಲಿಯಿಂದ ಎಂದು ಕೇಳಿದರೆ, ಆಗ್ರಾದ ತಾಜಮಹಲಿನ ಪುಟ್ಟದೊಂದು ಪ್ರತಿಕೃತಿ ತಂದು ಕೊಡುವಂತೆ ಕೇಳಿದ್ದಳು. ನಾನು ದೆಹಲಿಯಿಂದ ಹಿಂತಿರುಗಿ ಬಂದಾಗ ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ, ಎಲ್ಲರಿಗೂ ಸಿಹಿ ತಿನ್ನಿಸಿ ತನ್ನ ಸಂಭ್ರಮವನ್ನು ವ್ಯಕ್ತ ಪಡಿಸಿದ್ದಳು. ನಾನು ಅವಳಿಗಾಗಿ ಆಗ್ರ‍ಾದಿಂದ ತಂದು ಕೊಟ್ಟ ಪುಟ್ಟ ತಾಜಮಹಲನ್ನು ಯಾವಾಗಲೂ ತನ್ನ ಹಾಸಿಗೆಯ ಪಕ್ಕದಲ್ಲೇ ಇಟ್ಟುಕೊಂಡಿರುತ್ತಿದ್ದಳು. ಅದು ಅವಳ ಜೀವನದ ಅತ್ಯಮೂಲ್ಯ ವಸ್ತುವಾಗಿ ಸ್ಥಾನ ಪಡೆದಿತ್ತು.

ಪದವಿ ತರಗತಿಗಳು ಕೊನೆಯ ಹಂತಕ್ಕೆ ಬಂದಾಗ ನಾನು ಪ್ರಥಮ ದರ್ಜೆಯಲ್ಲಿ ಕಾಲೇಜಿಗೇ ಮೊದಲಿಗನಾಗಿ ಬರಬೇಕೆಂದು ನನ್ನಿಂದ ಭಾಷೆ ತೆಗೆದುಕೊಂಡು, ಅದರಂತೆಯೇ ನಾನು ಓದಲು ಒತ್ತಾಯಿಸುತ್ತಿದ್ದಳು. ದ್ವಿತೀಯ ಪಿ.ಯು.ಸಿ ಫೇಲಾಗಿದ್ದ ಅವಳು ಮುಂದಿನ ಪ್ರಯತ್ನದಲ್ಲೆ ಉತ್ತೀರ್ಣಳಾಗಿ, ಬೆಂಗಳೂರಿನ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಬಿ.ಎಸ್ಸಿ ನರ್ಸಿಂಗಿಗೆ ಅರ್ಜಿ ಹಾಕಿ ಕಾಯುತ್ತಿದ್ದಳು. ನಾನು ಪದವಿ ಪರೀಕ್ಷೆ ಹಾಗೂ ಪ್ರೌಢ ದರ್ಜೆಯ ಕನ್ನಡ ಹಾಗು ಆಂಗ್ಲ ಬೆರಳಚ್ಚು ಪರೀಕ್ಷೆ, ಮೂರನ್ನೂ ಒಟ್ಟಿಗೆ ತೆಗೆದುಕೊಂಡು, ಮೂರರಲ್ಲೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ ಬಂದಾಗ ನನ್ನನ್ನು ಎತ್ತಿಕೊಂಡು ಕುಣಿದಾಡಿಬಿಟ್ಟಿದ್ದಳು. ನನ್ನ ಬಾಯ್ತುಂಬಾ ಸಕ್ಕರೆ ತುಂಬಿ ಮೌನದಲ್ಲೇ ಮಾತಾದಳು !

ಹೀಗೆ ನನಗೆ ಸ್ಫೂರ್ತಿಯ ಚಿಲುಮೆಯಾಗಿ, ನನ್ನ ಬೆನ್ನ ಹಿಂದಿನ ಅದೃಶ್ಯ ಶಕ್ತಿಯಾಗಿ ನಿಂತ ನನ್ನ ಮೀನಾ, ನನ್ನನ್ನು ಬಿಟ್ಟು ಮತ್ತೆ ಬೆಂಗಳೂರಿಗೆ ಹೋಗುವ ಕಾಲ ಬಂದೇ ಬಿಟ್ಟಿತು. ಅವಳು ಅರ್ಜಿ ಹಾಕಿದ್ದ ಬಿ.ಎಸ್ ಸಿ ನರ್ಸಿಂಗ್ ನಲ್ಲಿ ಅವಳಿಗೆ ಪ್ರವೇಶ ಸಿಕ್ಕಿ ಹೊರಟೇ ಬಿಟ್ಟಳು. ಪ್ರಶ್ನಾರ್ಥಕವಾಗಿ ನಿಂತ ನನ್ನನ್ನು ನೋಡಿ ನಗುತ್ತಾ, "ನೀನು ನಿನ್ನ ಗುರಿ ಸಾಧಿಸಿದೆಯಲ್ಲಾ, ನನಗೆ ಸಂತೋಷ, ಈಗ ನಾನು ನನ್ನ ಗುರಿ ಸಾಧಿಸಬೇಕಿದೆ, ನಾನು ಬಿಎಸ್ ಸಿ ನರ್ಸಿಂಗ್ ಮಾಡಬೇಕು, ಕೆಲಸಕ್ಕೆ ನಿಲ್ಲಬೇಕು, ನನ್ನ ತಮ್ಮ ತಂಗಿಯರ ಯೋಗಕ್ಷೇಮ ನೋಡಬೇಕು, ನೊಂದಿರುವ ಅಮ್ಮನಿಗೆ ಹೆಗಲು ಕೊಡಬೇಕು, ಅಲ್ಲಿಯವರೆಗೂ ನೀನು ನನಗಾಗಿ ಕಾಯಬೇಕು " ಅಂದಾಗ ಮೌನವಾಗಿ ಒಪ್ಪಿಗೆ ಸೂಚಿಸಿ ಅವಳಿಗೆ ಶುಭವಾಗಲೆಂದು ಹೃದಯ ತುಂಬಿ ಹಾರೈಸಿದೆ.

4 comments:

harshith said...

sir munde yen aitu...?

harshith said...

sir munde yen aitu...?

Latha Srinivas said...

heli sir munde nim mathu meena kathe en aythu, ega meena helidare? heli plz

manju said...

Mundina bhaga odi, Latha Srinivas. :-)