Friday, August 28, 2009

ಹೃದಯದ ಕದ ತಟ್ಟಿದ ನೇಪಾಳಿ ಹುಡುಗ..

ಬಹು ದಿನಗಳಿಂದ ಇವನು ನನ್ನ ಮನದಲ್ಲಿ ಕುಳಿತು ಕಾಡುತ್ತಿದ್ದ, ಇಂದು, ಅವನ ಕಾಟ ತಡೆಯಲಾಗದೆ, ಅವನ ಬಗ್ಗೆ ಬರೆದೇ ತೀರಬೇಕೆಂದು ನಿರ್ಧರಿಸಿ, ಕೊನೆಗೂ ಬರೆದು ಮುಗಿಸಿದೆ, ಇಲ್ಲಿ ಸುಡುತ್ತಿರುವ ಬೇಸಿಗೆಯ ದಿನಗಳಲ್ಲಿ, ಸತತ ಹದಿನಾರು ಘಂಟೆಗಳ ದುಡಿತದ ನಂತರ, ಈ ಬರೆಯಬೇಕೆಂಬ ತುಡಿತವೇ ಅಂಥಾದ್ದು ಎಂದು ನನ್ನ ಭಾವನೆ.

ಅವನೊಬ್ಬ ಬಡ ಹುಡುಗ, ನಾನು ನೇಪಾಳಕ್ಕೆ, ನಾನು ಕೆಲಸ ಮಾಡುವ ಸಂಸ್ಥೆಗೆ, ಯುವಕರನ್ನು ನೇಮಕಾತಿ ಮಾಡಲು ಹೋಗಿದ್ದಾಗ ನನ್ನ ಹಿಂದೆ ಬಿದ್ದಿದ್ದ, ಹೇಗಾದರೂ ಮಾಡಿ ಕೆಲಸ ಗಿಟ್ಟಿಸಬೇಕು, ದುಬೈಗೆ ಹೋಗಬೇಕು ಎಂದು. ಸುಮಾರು ಮೂರು ಸಾವಿರ ಜನ ಕೆಲಸ ಮಾಡುವ ನಮ್ಮ ಸಂಸ್ಥೆಯಲ್ಲಿ ಆಗಾಗ ಇದ್ದಕ್ಕಿದ್ದಂತೆ ಧಿಡೀರ್ ಕೆಲಸಗಾರರ ಕೊರತೆ ಎದುರಾಗಿ ಬಿಡುತ್ತದೆ. ಆಗ ನಾವು ನಾಲ್ಕಾರು ಮಂದಿ, ಎರಡು-ಮೂರು ತಂಡಗಳಲ್ಲಿ ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕ, ಫಿಲಿಫೈನ್ಸ್ ಮುಂತಾದ ದೇಶಗಳನ್ನು ಸುತ್ತಾಡಿ ನಮಗೆ ಬೇಕಾದಂಥ ಯುವಕರನ್ನು ನೇಮಿಸಿಕೊಂಡು ಬಂದು ಸಂಸ್ಥೆಯ ಕೆಲಸ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವುದು ಒಂದು ಮಾಮೂಲಿನ ಅಭ್ಯಾಸ. ಇದರಲ್ಲಿ ನನ್ನ ಪಾಲು ಹೆಚ್ಚಾಗಿ ನನ್ನ ನೆಚ್ಚಿನ ಭಾರತ ಹಾಗೂ ನೇಪಾಳ, ಹಾಗೆ ನಾನು "ಧಿಡೀರ್ ನೇಮಕಾತಿ" ಗಾಗಿ ಹೋದಾಗ ಸಿಕ್ಕಿದವನೇ ಈ ಅಪರೂಪದ ಹುಡುಗ.

ಮೂರು ದಿನಗಳ ಅವಿರತ ಪ್ರಯಾಣ, ಸಂದರ್ಶನಗಳು, ನೂರೆಂಟು ಪ್ರಶ್ನೆಗಳು, ಸಾವಿರಾರು ಉತ್ತರಗಳಿಂದ ರೋಸಿ ಹೋಗಿದ್ದ ಮನಸ್ಸಿಗೆ ಆ ಒಂದು ಸೋಮವಾರ, ಬಿಡುವಿನ ದಿನವಾಗಿತ್ತು. ಕಾಕತಾಳೀಯವಾಗಿ, ಅಂದು, " ವಿಶ್ವ ತಾಯಂದಿರ ದಿನ" ವೂ ಆಗಿತ್ತು. ಅಗಲಿ ಹೋದ ಅಮ್ಮನ ನೆನಪಿನಲ್ಲಿ ಅಂದು, ನಾನು ನೇಪಾಳದ ರಾಜಧಾನಿ, ಪುರಾಣ ಪ್ರಸಿದ್ಧ "ಭಾಗಮತಿ" ನದಿ ತೀರದಲ್ಲಿರುವ ಕಾಠ್ಮಂಡು ನಗರದ, ಪ್ರಖ್ಯಾತ ’ ಪಶುಪತಿನಾಥ’ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಕಾರ್ಯಕ್ರಮವನ್ನಿಟ್ಟುಕೊಂಡಿದ್ದೆ. ಅಲ್ಲಿಗೆ ಪ್ರವೇಶಿಸುವಾಗ ಅಲ್ಲಿನ ಪ್ರತಿಯೊಂದು ದೃಶ್ಯವೂ ನನಗೆ ಕುತೂಹಲಕಾರಿಯಾಗಿ ಕಾಣಿಸುತ್ತಿತ್ತು. ಅಲ್ಲಿ ಒಬ್ಬ ಹುಡುಗ ನನ್ನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸಿ, ನೇಮಕಾತಿ ಕಂಪನಿಯವರ ಆಜಾನುಬಾಹು ’ರಕ್ಷಕರ’ ಬೆದರಿಕೆಗೆ ಹೆದರಿ ದೂರ ಸರಿದಿದ್ದ. ಆಗ ನಾನು ಅವನನ್ನು ಅಷ್ಟಾಗಿ ಗಮನಿಸಿರಲಿಲ್ಲ. ಆ ದೇವಾಲಯದಲ್ಲಿ ನೂರಾರು ವರ್ಷಗಳಿಂದ ಪೂಜೆ ನೆರವೇರಿಸುತ್ತಿದ್ದ ಅರ್ಚಕರು, ನಮ್ಮ ಕನ್ನಡಿಗರು, ಗೋಕರ್ಣ ಮತ್ತು ಉಡುಪಿಯ ಸುತ್ತ ಮುತ್ತಿನ ಬ್ರಾಹ್ಮಣರು. ಇವರ ಬಗ್ಗೆ ನಾನು ಪತ್ರಿಕೆಗಳಲ್ಲಿ ಓದಿದ್ದೆ, ಅದರೆ ಕಣ್ಣಾರೆ ಕಾಣುವ ಅವಕಾಶ ಅಂದು ಒದಗಿ ಬಂದಿತ್ತು. ಅಲ್ಲಿನ ಜನ ಜಂಗುಳಿಯನ್ನು, ಆ ತಳ್ಳಾಟವನ್ನು ನೋಡಿ ಸಾಕಾದ ನನಗೆ ದೇವಾಲಯದ ಪ್ರವೇಶ ದ್ವಾರವನ್ನು ದಾಟುವಾಗ, ಅದೇನೋ ಆವೇಶ ಬಂದು ಆ ಅರ್ಚಕರಿಗೆ, ಜೋರಾಗಿ ಕೂಗಿ, ’ಸ್ವಾಮಿಗಳೆ, ನಾನು ಕರ್ನಾಟಕದವನು, ಹೇಗಾದರೂ ದರ್ಶನಕ್ಕೆ ಅವಕಾಶ ಮಾಡಿ ಕೊಡಿ’ ಎಂದು ಹೇಳಿದೆ. ನಿಜಕ್ಕೂ ಇದು ನಮ್ಮ " ಕನ್ನಡ ಭಾಷೆಯ" ಹಿರಿಮೆ. ಹಾಗೊಂದು ವೇಳೆ ನಾನು ಅವರಿಗೆ ಆ ರೀತಿ ಕೂಗಿ ಹೇಳದೆ ಇದ್ದಿದ್ದರೆ, ಆ ಜನ ಜಾತ್ರೆಯಲ್ಲಿ ನನಗೆ ದರ್ಶನ ಭಾಗ್ಯವೇ ಸಿಗುತ್ತಿರಲಿಲ್ಲವೇನೋ ?? ನಾನು ಅವರ ಬಳಿ ಸರಿದಂತೆ, ಅವರು ನನ್ನನ್ನು ಒಂದು ಪಕ್ಕದಲ್ಲಿ ನಿಲ್ಲಿಸಿ, ಅಭಿಷೇಕ ಹಾಗೂ ಪೂಜೆಗಳನ್ನು ಕಣ್ತುಂಬಾ ನೋಡಿ ಆನಂದಿಸಲು ಅವಕಾಶ ಮಾಡಿ ಕೊಟ್ಟರು. ಪ್ರಸಾದ ಸ್ವೀಕರಿಸಿದ ನಂತರ, ತಮ್ಮ ಪರಿಚಯ ಪತ್ರವೊಂದನ್ನು ಕೊಟ್ಟು, ಸಂಜೆಯ ಹೊತ್ತಿನಲ್ಲಿ ಮನೆಗೆ ಬಂದು ಭೇಟಿಯಾಗುವಂತೆ ಹೇಳಿ ಕಳುಹಿಸಿದಾಗ, ಮನಸ್ಸು ಹಕ್ಕಿಯಂತೆ ಹಗುರಾಗಿ ಹಿಮಾಲಯದ ಮೇಲೆ ಹಾರಾಡುತ್ತಿತ್ತು.

ಪ್ರಫುಲ್ಲವಾದ ಮನದೊಂದಿಗೆ ನಾನು ದೇಗುಲದಿಂದ ಹೊರ ಬರುತ್ತಿದ್ದೆ, ನನ್ನ ಜೊತೆಯಿದ್ದ ನೇಮಕಾತಿ ಕಂಪನಿಯ ಅಧಿಕಾರಿಗಳು ನಗುನಗುತ್ತಾ, ನನ್ನ ’ಪಶುಪತಿನಾಥನ’ ದರ್ಶನದ ಬಗ್ಗೆ, ಆ ದಿವ್ಯ ಅನುಭವದ ಬಗ್ಗೆ ಮಾತಾಡುತ್ತಿದ್ದರು. ಅಷ್ಟರಲ್ಲಿ ನಮ್ಮ ಮುಂದೆ ಹೋಗುತ್ತಿದ್ದ ನಮ್ಮ ’ರಕ್ಷಕರ’ ಪಡೆಗೂ ಮತ್ತೊಬ್ಬ ಯುವಕನಿಗೂ ಅದೇನೊ ಘರ್ಷಣೆಯಾಗುತ್ತಿತ್ತು. ಅದೇನೆಂದು ನೋಡಿದರೆ, ಮತ್ತೆ ಅದೇ ಹುಡುಗ!! ತದೇಕಚಿತ್ತನಾಗಿ ನನ್ನನ್ನೇ ನೋಡುತ್ತಾ, ಅದೇನನ್ನೋ ತನ್ನ ಕಣ್ಣುಗಳಲ್ಲೇ ಭಿನ್ನವಿಸಿಕೊಳ್ಳುತ್ತಾ, ನನ್ನತ್ತಲೇ ನೋಡುತ್ತಿದ್ದ. ಆದರೆ ಆ ನೇಪಾಳಿ ರಕ್ಷಕರ ಶಕ್ತಿಯನ್ನು ದಾಟಿ ಅವನು ನನ್ನ ಬಳಿ ಬರಲಾಗದೆ ಅಸಹಾಯಕನಾಗಿ ದೂರ ಸರಿದಿದ್ದ. ನಾನು ಆ ನೇಮಕಾತಿಯ ಕಂಪನಿಯ ವ್ಯವಸ್ಥಾಪಕರಿಗೆ ಕೇಳಿದಾಗ ಅವನೊಂದು ಉದಾಸೀನದ ನಗು ಚೆಲ್ಲಿ, "ಇವರೆಲ್ಲಾ ಹೀಗೆಯೇ ಸಾರ್, ಕೆಲಸ ಗಿಟ್ಟಿಸಲು ಎಲ್ಲ ರೀತಿಯ ನಾಟಕ ಮಾಡುತ್ತಾರೆ, ನೀವು ತಲೆ ಕೆಡಿಸಿಕೊಳ್ಳಬೇಡಿ" ಅಂದ. ಆದರೂ ಅದೇಕೋ ನನ್ನ ಮನಸ್ಸಿಗೆ ಸಮಾಧಾನವಾಗಲಿಲ್ಲ. ನಾನು ತಂಗಿದ್ದ ಹೋಟೆಲಿಗೆ ಬಂದ ನಂತರ ಸುಮ್ಮನೆ ಮಲಗಿಬಿಟ್ಟೆ, ಅದೇಕೋ ಆ ಬಡ ಹುಡುಗ ನನ್ನನ್ನು ಕಾಡ ಹತ್ತಿದ್ದ, ಕಣ್ಮುಚ್ಚಿದರೆ ಅವನ ಮುಗ್ಧ ಮುಖ, ಅದೇನೋ ಹೇಳಬೇಕೆಂದು ತವಕಿಸುತ್ತಿದ್ದ ಅವನ ಕಣ್ಣೋಟ ನೆನಪಾಗಿ, ಆ ರಜದ ದಿನ, ನನ್ನ ನಿದ್ದೆಯನ್ನೇ ಕಸಿದುಕೊಂಡು ಬಿಟ್ಟಿತು.

ಮರುದಿನ, ಮಾಮೂಲಿನಂತೆ ನಮ್ಮ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಯಿತು, ಬೆಳಗಿನಿಂದ ಸಂಜೆಯವರಿಗೂ ಸಾಕಷ್ಟು ಜನರನ್ನು ನೋಡಿ, ಅವರ ಪೂರ್ವಾಪರಗಳನ್ನೆಲ್ಲಾ ವಿಷ್ಲೇಶಿಸಿ, ಕೆಲವರನ್ನು ನೇಮಕಾತಿ ಮಾಡಿ, ಮತ್ತೆ ಹಲವರನ್ನು ಹಿಂದೆ ಕಳುಹಿಸಿ, ಸಾಕಾಗಿ, ಆ ಕಛೇರಿಯ ಬಾಲ್ಕನಿಗೆ ಬಂದು ಸಿಗರೇಟು ಹತ್ತಿಸಿದೆ, ಒಂದೆರಡು ದಮ್ಮೆಳೆದು ಹೊರಗೆ ನೋಡಿದರೆ, ಮತ್ತದೇ ಹುಡುಗ!!! ತನ್ನ ಕೈನಲ್ಲಿ ತನ್ನ ಕಡತವೊಂದನ್ನು ಹಿಡಿದು, ತಾನು ನಿಂತಿದ್ದಲ್ಲಿಂದಲೇ, ನನ್ನ ಕಡೆಗೇ ನೋಡುತ್ತಾ ಅದೇನೋ " ಮೇಘ ಸಂದೇಶ" ಕಳುಹಿಸಲು ಆರಂಭಿಸಿದ. ನನಗೆ ತಲೆ ಕೆಟ್ಟು ಹೋಯಿತು. ಒಳಗೆ ಬಂದು, ಆ ಸಂಸ್ಥೆಯ ವ್ಯವಸ್ಥಾಪಕರನ್ನು ಕರೆದು, ಬಾಲ್ಕನಿಗೆ ಕರೆ ತಂದು, ದೂರದಲ್ಲಿ, ರಸ್ತೆಯಲ್ಲಿ ನಿಂತಿದ್ದ ಆ ಹುಡುಗನನ್ನು ತೋರಿಸಿ, ಅವನನ್ನು ಸಂದರ್ಶನಕ್ಕೆ ಕಳುಹಿಸುವಂತೆ ಹೇಳಿದೆ. ಅದಕ್ಕೆ ಅವರು ಹೇಳಿದ್ದೇನು ಗೊತ್ತೇ ? " ಆ ಹುಡುಗನಿಗೆ ಆಂಗ್ಲ ಭಾಷೆ ಸ್ವಲ್ಪವೂ ಬರುವುದಿಲ್ಲ ಸಾರ್, ಜೊತೆಗೆ ಅವನು ಪೀಚಲು, ನಿಮ್ಮ ಕೆಲಸಕ್ಕೆ ಸರಿ ಹೋಗುವುದೇ ಇಲ್ಲ, ಅದಕ್ಕೇ ಅವನನ್ನು ನಾವು ಗೇಟಿನಿಂದ ಒಳಕ್ಕೇ ಬಿಟ್ಟಿಲ್ಲ".

" ಅವನು ಹೇಗಿದ್ದರೂ ಸರಿ, ಪರವಾಗಿಲ್ಲ, ಅವನನ್ನು ನನ್ನ ಬಳಿ ಕಳುಹಿಸು" ಎಂದು ತಾಕೀತು ಮಾಡಿ ಕಳುಹಿಸಿದೆ. ಕೊನೆಗೂ ಬಂದೇ ಬಿಟ್ಟ, ನನ್ನ ನಿದ್ದೆಗೆಡಿಸಿದ ಆ ಪೀಚಲು ದೇಹದ ಹುಡುಗ, ನನ್ನ ಮುಂದೆ. ಅವನನ್ನೇ ದಿಟ್ಟಿಸಿ ನೋಡಿದೆ, ಮುಖದ ತುಂಬಾ ನಿರಿಗೆಗಳು ಮೂಡಿ, ಇಪ್ಪತ್ತೈದು ವರ್ಷದ ಹುಡುಗ, ಎಪ್ಪತ್ತರ ಮುದುಕನಂತೆ ಕಾಣುತ್ತಿದ್ದ, ಅವನ ದೇಹದಲ್ಲಿ ಎಲುಬು ಮತ್ತು ಚರ್ಮವನ್ನು ಬಿಟ್ಟರೆ, ಎಲ್ಲಿಯೂ ಮಾಂಸವಿರುವ ಕುರುಹೇ ಕಾಣುತ್ತಿರಲಿಲ್ಲ. ನನ್ನ ತೀಕ್ಷ್ಣ ದೃಷ್ಟಿಯನ್ನೆದುರಿಸಲಾಗದೆ ಅವನು ತಲೆ ಬಗ್ಗಿಸಿದ. ಅವನನ್ನು ಕೇಳಿದೆ, " ನೀನ್ಯಾಕೆ ನನ್ನ ಹಿಂದೆ ಬಿದ್ದಿದ್ದೀಯಾ, ನನ್ನನ್ನೇ ಹಿಂಬಾಲಿಸಿ ನನ್ನ ನಿದ್ದೆಗೆಡಿಸುತ್ತಿದ್ದೀಯಾ" ಎಂದು. ಅದಕ್ಕೆ ಅವನು ಹೇಳಿದ," ನಾನ್ಯಾಕೆ ನಿಮ್ಮ ನಿದ್ದೆಗೆಡಿಸಲಿ ಸಾರ್, ತಾವು ದೊಡ್ಡವರು, ಕೃಪೆ ಮಾಡಿ ನನಗೊಂದು ಉದ್ಯೋಗ ಕೊಟ್ಟರೆ ನಿಮ್ಮ ಹೆಸರು ಹೇಳಿಕೊಂಡು ಬದುಕಿಕೊಳ್ಳುತ್ತೇನೆ, ನಾನು ನಿದ್ದೆ ಮಾಡಿ, ಹೊಟ್ಟೆ ತುಂಬಾ ಊಟ ಮಾಡಿ, ಅದ್ಯಾವುದೋ ಕಾಲವಾಯ್ತು ಸಾರ್, ನಾನು ಕೆಲಸ ಮಾಡಲು ದುಬೈಗೆ ಬರಬೇಕು, ಜೀವನದಲ್ಲಿ ಮುಂದುವರೆಯಬೇಕು, ಇದಷ್ಟೇ ನನ್ನ ಜೀವನದ ಉದ್ಧೇಶ, ಅದು ಸಾಧ್ಯವಾಗದಿದ್ದಲ್ಲಿ ಸಾವೊಂದೇ ನನಗೆ ಉಳಿದಿರುವ ದಾರಿ".

ಅವನ ತಾಯಿ ಅದ್ಯಾವುದೊ ಖಾಯಿಲೆಗೆ ತುತ್ತಾಗಿ ಸತ್ತಳಂತೆ, ಅವನಪ್ಪ ಇನ್ನೊಬ್ಬಳನ್ನು ಮದುವೆಯಾಗಿ, ಅವಳಿಗೆ ಮೂರು ಮಕ್ಕಳಾಗಿ, ಆ ಮಹಾ(ಲ)ತಾಯಿ ಇವನಿಗೆ ಹೊಟ್ಟೆಗೆ ಅನ್ನ ನೀಡದೆ ಭಾರೀ ಹಿಂಸೆ ಕೊಟ್ಟು ಇವನನ್ನು ನರಪೇತಲನನ್ನಾಗಿಸಿದಳಂತೆ. ನಮ್ಮಲ್ಲಿ ಕೆಲಸಕ್ಕೆ ಸೇರಬೇಕಾದರೆ, ಐದಡಿ ಏಳಿಂಚು ಎತ್ತರವಿರಬೇಕು, ೬೦ ಕಿಲೋ ತೂಕವಿರಬೇಕು, ಆಂಗ್ಲ ಭಾಷೆಯಲ್ಲಿ ಉತ್ತಮ ಸಂವಹನ ಸಾಮರ್ಥ್ಯವಿರಬೇಕು. ಇದರಲ್ಲಿ ಅವನಿಗಿದ್ದದ್ದು, ಎತ್ತರವೊಂದೇ, ದೇಹ ಪೀಚಲಾಗಿತ್ತು, ಅವನ ಆಂಗ್ಲ ಭಾಷೆಯಂತೂ ಏನಕ್ಕೂ ಬೇಕಿರಲಿಲ್ಲ, ಆದರೂ ಅವನ ಬಗ್ಗೆ ಅದೇಕೋ ನನ್ನ ಅಂತ:ಕರಣ ಮಿಡಿಯುತ್ತಿತ್ತು. ಅವನನ್ನು ಒಂದು ಪ್ರಶ್ನೆ ಕೇಳಿದೆ, ’ ನೀನು ಸಧ್ಯಕ್ಕಿರುವ ಪರಿಸ್ಥಿತಿಯಲ್ಲಿ ನಾನು ನಿನ್ನನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ, ಏನಾದರೂ ನಿನ್ನ "ವಿಶೇಷ" ಗುಣಗಳಿದ್ದರೆ ಹೇಳು’ ಅದಕ್ಕವನು ಹೇಳಿದ, ’ ನಾನು ತುಂಬಾ ಚೆನ್ನಾಗಿ ಹಾಡುತ್ತೇನೆ’ ಆಗ ನಾನವನಿಗೆ ಹೇಳಿದೆ, " ನೀನು ತುಂಬಾ ಮೆಚ್ಚುವ ಒಂದು ಹಾಡನ್ನು ಹಾಡಿ ತೋರಿಸು, ನೋಡೋಣ".

ಅದಕ್ಕಾಗಿಯೇ ಕಾಯುತ್ತಿದ್ದವನಂತೆ ಅವನು ಆರಂಭಿಸಿಯೇ ಬಿಟ್ಟ, ಭಾವ ತನ್ಮಯತೆಯಿಂದ ಹಾಡಲು, " ಜಿಂದಗೀ ಕಿ ರಾಹೋಂ ಮೆ, ರಂಜೊ ರಂಕಿ ಮೇಲೇ ಹೈ", ಪಂಕಜ್ ಉದಾಸ್ ರವರು ಹಾಡಿದ್ದ ಒಂದು ಹೃದಯಂಗಮ ಭಾವಗೀತೆ, " ಕನ್ನಡಿಯನ್ನು ನೂರು ತುಂಡು ಮಾಡಿದೆ, ಕಂಡೆ ಸಾವಿರಾರು ಪ್ರತಿಬಿಂಬ, ಅದರೆ ಕೊನೆಗೆ ನಾ ಒಂಟಿಯಾಗಿಯೇ ಉಳಿದಿದ್ದೆ" ಎಂಬ ಭಾವಾನುಭವದ ಆ ಗೀತೆ (http://www.youtube.com/watch?v=s-SY5s3Awxs&feature=related) ನನ್ನ ಹೃದಯವನ್ನೇ ಹಿಂಡಿ, ಸಹಸ್ರಾರು ತರಂಗಗಳ, ಭಾವ ದೀಪ್ತಿಯನ್ನೇ ಬೆಳಗಿಸಿ ಬಿಟ್ಟಿತ್ತು. ನಾನು ಹಾಗೇ ಆ ಹುಡುಗನನ್ನು ನೋಡುತ್ತಿದ್ದೆ, ಅವನು ಈ ಲೋಕದ ಪರಿವೆಯೇ ಇಲ್ಲದಂತೆ ಉಚ್ಛ ಸ್ವರದಲ್ಲಿ, ತಲ್ಲೀನನಾಗಿ ಹಾಡುತ್ತಿದ್ದ, ಮುಚ್ಚಿದ್ದ ಅವನ ಕಂಗಳಿಂದ ಅಶ್ರು ಧಾರೆ ಹರಿಯುತ್ತಿತ್ತು. ಆ ಹಾಡು ಅವನ ಜೀವನದಲ್ಲಿ ಅವನು ಅನುಭವಿಸಿದ್ದ ಎಲ್ಲಾ ನೋವಿಗೂ ಅಂದು ಸಾಕ್ಷಿಯಾಗಿ ಬಿಟ್ಟಿತ್ತು. ಅವನ ಆ ಭೀಕರ ಒಂಟಿತನದ ಪ್ರತಿರೂಪವಾಗಿತ್ತು.

ಕೊನೆಗೂ ನಾನು ಅವನನ್ನು ನಮ್ಮ ಸಂಸ್ಥೆಯ ಕೆಲಸಕ್ಕೆ ಆಯ್ಕೆ ಮಾಡಿದೆ. ನನ್ನ ನಿರ್ಧಾರವನ್ನು ಅವನಿಗೆ ತಿಳಿಸಿದಾಗ, ಅವನು ಭಾವ ತನ್ಮಯತೆಯಿಂದ ನನ್ನ ಕಾಲು ಹಿಡಿದು ನಮಸ್ಕರಿಸಲು ಬಂದ, ಅವನನ್ನು ತಡೆದು, ಮುಂದೆ ಅಲ್ಲಿ ಬಂದಾಗ, ಅವನು ಏನು ಮಾಡಬೇಕೆಂದು ತಿಳಿ ಹೇಳಿದೆ. ಅದಕ್ಕವನದು ಒಂದೇ ಉತ್ತರ, " ಅದೆಂಥದೇ ಕಷ್ಟವಿರಲಿ ಸಾರ್, ನಾನು ಖಂಡಿತ ಜಯ ಸಾಧಿಸುತ್ತೇನೆ ”. ಅಂದಿನ ಅವನ ಆ ಆತ್ಮ ವಿಶ್ವಾಸ ನನಗೆ ಮೆಚ್ಚಿಗೆಯಾಯಿತು.

ಇದಾದ ಸುಮಾರು ಎರಡು ಮೂರು ತಿಂಗಳ ನಂತರ ಆ ಹುಡುಗ ಅಬುಧಾಬಿಗೆ ಬಂದ. ಆಗ ನಮ್ಮ ಸಂಸ್ಥೆಯಲ್ಲಿನ ತರಬೇತಿ ಇಲಾಖೆಯ ಮುಖ್ಯಸ್ಥ, ಕಣ್ಣನ್, ಆ ಹುಡುಗ ಹಾಗೂ ಅವನ ಜೊತೆ ಬಂದಿದ್ದ ಇನ್ನೂ ಐವತ್ತು ಹುಡುಗರನ್ನು, ಅವರ ದೇಹ ಧಾರ್ಡ್ಯತೆ, ಆಂಗ್ಲ ಭಾಷಾ ವಿಶಾರದತೆ ಎಲ್ಲವನ್ನೂ ಪರೀಕ್ಷಿಸಿ, ಸಂಸ್ಥೆಯ ಮುಖ್ಯಸ್ಥರಿಗೆ ವರದಿ ಕೊಟ್ಟಿದ್ದ. ಅವನ ವರದಿಯ ಪ್ರಕಾರ ಈ ಹುಡುಗ ಎಲ್ಲರಿಗಿಂತ ಕೀಳು ಮಟ್ಟದಲ್ಲಿದ್ದ. ಸರಿ! ಹಾಗಾದರೆ, ಇಂತಹ ಕೀಳು ಮಟ್ಟದ ಹುಡುಗನನ್ನು ನೇಮಕಾತಿ ಮಾಡಿದ್ದು ಯಾರು ಎಂಬ ಪ್ರಶ್ನೆ ಎದ್ದು ಕೊನೆಗೆ ನನ್ನನ್ನು ಎಂಡಿ ಸಾಹೇಬರು ತಮ್ಮ ಕಛೇರಿಗೆ ಕರೆಸಿ, ಅವನನ್ನು ನೇಮಕಾತಿ ಹೇಗೆ ಮತ್ತು ಯಾವ ಆಧಾರದ ಮೇಲೆ ಮಾಡಿದ್ದು ಎಂದು ಪ್ರಶ್ನೆಗಳ ಮಳೆಯನ್ನೇ ಸುರಿಸಿದರು. ಅವನಲ್ಲಿ ಕಂಡ ಆತ್ಮ ವಿಶ್ವಾಸದಿಂದ ನಾನು ಅವನನ್ನು ನೇಮಕಾತಿ ಮಾಡಿದೆ ಎಂದರೂ ಸಮಾಧಾನವಾಗದ ಎಂಡಿ ಸಾಹೇಬರು, ಅವನು ಆಕಸ್ಮಾತ್ ಪೊಲೀಸ್ ಇಲಾಖೆಯ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿಬಿಟ್ಟರೆ, ಸಂಸ್ಥೆಗೆ ಆಗುವ ನಷ್ಟಕ್ಕೆಲ್ಲಾ ನಾನೇ ಹೊಣೆ ಎಂದು ಬರೆದು ಕೊಟ್ಟಲ್ಲಿ ಮಾತ್ರ ಆ ಹುಡುಗನನ್ನು ಪೊಲೀಸರ ಬಳಿಗೆ ಪರವಾನಗಿಗಾಗಿ ಕಳುಹಿಸುತ್ತೇವೆಂದಾಗ, ನಾನು ಮತ್ತೊಮ್ಮೆ ಆ ಹುಡುಗನ ಮುಖ ನೋಡಿದೆ. ದೈನ್ಯತೆಯೇ ಮೂರ್ತಿವೆತ್ತಂತೆ ಕಾಣುತ್ತಿದ ಅವನು ನನಗೆ ಧೈರ್ಯ ಹೇಳಿದ, " ಸಾರ್, ದಯವಿಟ್ಟು ನೀವು ಬರೆದು ಕೊಡಿ, ನಾನು ಆ ಪೋಲೀಸರ ಪರೀಕ್ಷೆಯನ್ನು ಖಂಡಿತ ಪಾಸು ಮಾಡಿ ತೋರಿಸುತ್ತೀನಿ" ಅವನ ಕಣ್ಗಳಲ್ಲಿ ಅದೇನೋ ಆತ್ಮ ವಿಶ್ವಾಸದ ಜ್ವಾಲೆ ಉರಿಯುತ್ತಿದ್ದುದನ್ನು ನೋಡಿ, ಅದನ್ನು ನಂಬಿ ನಾನು ನನ್ನ ಎಂಡಿಯವರಿಗೆ, ಅದೂ ಜೀವನದಲ್ಲಿ ಮೊದಲ ಬಾರಿಗೆ, ಕಂಡು ಕೇಳಿಲ್ಲದ ಒಬ್ಬ ಅಪರಿಚಿತನಿಗಾಗಿ ಬರೆದು ಕೊಟ್ಟೇ ಬಿಟ್ಟೆ. ಅದೇನಾಗುತ್ತದೋ ನೋಡೇ ಬಿಡೋಣವೆಂದು.

ಮುಂದಿನ ಕೆಲವು ದಿನಗಳು, ನನ್ನ ಕೆಲಸದ ಒತ್ತಡಗಳ ನಡುವೆ ನಾನು ಈ ಪ್ರಸಂಗವನ್ನು ಮರೆತೇ ಬಿಟ್ಟಿದ್ದೆ. ಒಂದು ದಿನ ಖುದ್ದು ಎಂಡಿಯವರೇ ಫೋನ್ ಮಾಡಿ ನನ್ನನ್ನು ತಮ್ಮ ಕಛೇರಿಗೆ ಬರ ಹೇಳಿದಾಗ, ಆತಂಕದಿಂದಲೇ ಅವರನ್ನು ಭೇಟಿಯಾಗಲು ಹೊರಟೆ. ಅಲ್ಲಿ, ಎಂಡಿಯವರ ಕಛೇರಿಯಲ್ಲಿ ಮತ್ತದೇ ಹುಡುಗ ಆಸೀನನಾಗಿದ್ದ. ಇದೇನೋ ಗ್ರಹಚಾರ ವಕ್ಕರಿಸಿಕೊಂಡಿತು ಅಂದುಕೊಳ್ಳುತ್ತಿರುವಾಗಲೇ, ನನ್ನನ್ನು ಕಂಡ ಎಂಡಿಯವರು, ತಮ್ಮ ಆಸನದಿಂದ ಎದ್ದು ಬಂದು, ನನ್ನ ಕೈ ಕುಲುಕಿ, " ನಿನ್ನ ಹೃದಯದೊಳಗಿನ ಮಾನವೀಯತೆಯನ್ನು ನಾನು ಮೆಚ್ಚುತ್ತೇನೆ ಮಂಜು, " ಎಂದಾಗ ನನಗೆ ತಲೆ ಬುಡ ಅರ್ಥವಾಗಲಿಲ್ಲ. ಆ ಬಡ ನೇಪಾಳಿ ಹುಡುಗ, ಪಿಳಿ ಪಿಳಿ ಕಣ್ಣು ಬಿಡುತ್ತಾ, ತನ್ನ ಕೈಲಿದ್ದ ದಾಖಲೆ ಪತ್ರವನ್ನು ನನ್ನ ಕೈಗಿತ್ತು, ನನಗೆ ಕೈ ಮುಗಿದಾಗಲೇ ನನಗೆ ಅರ್ಥವಾಗಿದ್ದು!!!

ಅವನು ಪೊಲೀಸರು ನಡೆಸಿದ ಪರೀಕ್ಷೆಯಲ್ಲಿ ನೂರಕ್ಕೆ ತೊಂಭತ್ತೆಂಟು ಅಂಕಗಳನ್ನು ಗಳಿಸಿ, ಆ ತಂಡದಲ್ಲಿಯೇ ಮೊದಲಿಗನಾಗಿ ಹೊರಬಂದಿದ್ದ. ಅಂದು ಅವನು ಹಾಡಿದ್ದ ಆ ಹಾಡನ್ನು ಕೇಳಿ, ಅದ್ಯಾವುದೋ ಕಾಣದ ಭರವಸೆಯಿಂದ ಅವನನ್ನು ನೇಮಕ ಮಾಡಿ, ಅವನ ಆತ್ಮ ವಿಶ್ವಾಸವನ್ನು ನಂಬಿದ್ದಕ್ಕೆ, ಆ ಹುಡುಗ ನನಗೆ ಅತ್ಯುತ್ತಮ ಉಡುಗೊರೆಯನ್ನೇ ನೀಡಿದ್ದ. ಅಂದು, ಅವನ ಕಂಗಳಲ್ಲಿ ಕಂಡಿದ್ದ ಆ ಜ್ವಾಲೆ, ಅದು ಬರೀ ಜ್ವಾಲೆಯಾಗಿರಲಿಲ್ಲ, ಅದು ಅವನ ಅಪ್ರತಿಮ ಆತ್ಮ ವಿಶ್ವಾಸದ ಪ್ರತೀಕವಾಗಿತ್ತು. ಅವನನ್ನು ಯಶಸ್ವಿಯಾಗುವಂತೆ ಮಾಡಿತ್ತು.

ಅವನು ಹಾಡಿದ ಒಂದು ಭಾವ ಪೂರ್ಣ ಗೀತೆಗೆ ಮರುಳಾಗಿ, ನೇಮಕಾತಿ ಮಾಡಿದ್ದರೂ, ಕೊನೆಗೆ ಅವನು ಗೆದ್ದ ರೀತಿ, ನನಗೆ ತುಂಬಾ ಹಿಡಿಸಿತು. ಅವನು ಈಗಲೂ ಇಲ್ಲೇ ಇದ್ದಾನೆ, ಕೆಲಸ ಮಾಡುತ್ತಾ, ಕೈ ತುಂಬಾ ಸಂಪಾದನೆ ಮಾಡುತ್ತಾ!

ಅಂದು ಕೇವಲ ಐವತ್ತು ಕೇಜಿಯಿದ್ದವನು ಈಗ ಚೆನ್ನಾಗಿ ತಿಂದುಂಡು, ಮೈ ಕೈ ತುಂಬಿಕೊಂಡು ಎಪ್ಪತ್ತೈದು ಕೇಜಿ ತೂಗುತ್ತಾನೆ. ನನ್ನನ್ನು ಕಂಡರಂತೂ ಅವನಿಗೆ ವಿಪರೀತ ಭಕ್ತಿ ಭಾವ !! ಅವನನ್ನು ಕಂಡರೆ ನನಗದೇನೋ ಒಂದು ರೀತಿಯ ಧನ್ಯತಾ ಭಾವ.

No comments: