Friday, August 28, 2009

ಅಪ್ಪನ ದಿನದ ನೂರೊಂದು ನೆನಪು, ಎದೆಯಾಳದಿಂದ....

ಇಂದು ವಿಶ್ವ ಅಪ್ಪನ ದಿನ. ಈ ಸಂದರ್ಭಕ್ಕಾಗಿ ಈ ಲೇಖನ.

ನಮ್ಮ ಮನೆಯಲ್ಲಿ ನಾವು ನಾಲ್ಕು ಜನ ಮಕ್ಕಳು, ಇಬ್ಬರು ಅಕ್ಕಂದಿರು, ನಾನು, ನನ್ನ ಪುಟ್ಟ ತಮ್ಮ. ಅಪ್ಪ ಅಮ್ಮನನ್ನು ತುಂಬಾನೇ ಪ್ರೀತಿಸುತ್ತಿದ್ದರು. ಅಮ್ಮನಿಗೆ ದಾದಿಯ ಕೆಲಸ ಸಿಕ್ಕ ನಂತರವಂತೂ ಅವರನ್ನು ನೆರಳಿನಂತೆ ಕಾಯ್ದು, ಅವರ ಕೆಲಸದಲ್ಲಿ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಯಾವಾಗಲೂ ಮನೆಯಲ್ಲಿ ಇಂಥದ್ದು ಇಲ್ಲ ಅನ್ನಬಾರದು ಎನ್ನುವ ರೀತಿಯಲ್ಲಿ ಮನೆಯ ಅಗತ್ಯಗಳನ್ನು ಪೂರೈಸಲು ಯತ್ನಿಸುತ್ತಿದ್ದರು. ಯಾವುದಾದರೂ ವಸ್ತುವನ್ನು ಒಂದು ಜಾಗದಲ್ಲಿಟ್ಟರೆ ಅದು ಅಲ್ಲಿಯೇ ಇರಬೇಕು, ಅವರಿಗೆ ಬೇಕೆಂದಾಗ ಥಟ್ಟನೆ ಕೈಗೆ ಸಿಗಬೇಕು, ಆ ರೀತಿ ಇರುವಂತೆ ನಮ್ಮನ್ನು ಯಾವಾಗಲೂ ತಿದ್ದುತ್ತಿದ್ದರು. ಅವರ ಆ ಶಿಸ್ತು ಇಂದಿಗೂ ಅನುಕರಣೀಯ.

ಊಟ - ತಿಂಡಿಯ ವಿಚಾರದಲ್ಲಿ ಅಪ್ಪ ಯಾವಾಗಲೂ ಮುತುವರ್ಜಿ ವಹಿಸುತ್ತಿದ್ದರು. ಆಗ ನಮ್ಮೆಲ್ಲರ ಊಟ - ತಿಂಡಿ ಅಪ್ಪನ ಹೋಟೆಲಿನಲ್ಲೇ ಆಗಿ ಬಿಡುತ್ತಿತ್ತು. ಮಕ್ಕಳಲ್ಲಿ ಯಾರಾದರೊಬ್ಬರು ಊಟ ಮಾಡಿಲ್ಲವೆಂದರೆ, ಸ್ವಲ್ಪವಾದರೂ ಸರಿ, ತಿನ್ನುವವರೆಗೂ ಬಿಡುತ್ತಿರಲಿಲ್ಲ. ಕೆಲವೊಮ್ಮೆ ಸೊಗಸಾದ ಅಡುಗೆ ಮಾಡಿ " ಮೈಸೂರು " ಶೈಲಿಯ ತಿನಿಸುಗಳನ್ನು ತಿನ್ನಿಸುತ್ತಿದ್ದರು. ಅವರು ವಿಶೇಷವಾಗಿ ಮಾಡುತ್ತಿದ್ದ "ಮದ್ದೂರು ವಡೆ, ಗರಂ ಪಕೋಡ, ಕಜ್ಜಾಯಗಳು" ಈಗಲೂ ನನ್ನ ಬಾಯಲ್ಲಿ ನೀರೂರಿಸುತ್ತವೆ. ಯಾವುದೇ ಹಬ್ಬ - ಹರಿದಿನಗಳಲ್ಲಿ ಎಲ್ಲರಿಗೂ ಹೊಸ ಬಟ್ಟೆ ಖಂಡಿತ ಕೊಡಿಸುತ್ತಿದ್ದರು. ಕೆಲವೊಮ್ಮೆ ತಾವು ತೆಗೆದುಕೊಳ್ಳದಿದ್ದರೂ ಮಕ್ಕಳಿಗೆ ಎಂದೂ ತಪ್ಪಿಸುತ್ತಿರಲಿಲ್ಲ. ದೈವ ಭಕ್ತರಾಗಿದ್ದ ಅಪ್ಪ ನಮ್ಮ ಮನೆ ದೇವರಾದ " ಗೌತಮಗಿರಿಯ ತಿಮ್ಮರಾಯಸ್ವಾಮಿ ಹಾಗೂ ಧರ್ಮಸ್ಥಳದ ಮಂಜುನಾಥ ಸ್ವಾಮಿಯ" ಬಗ್ಗೆ ಅಪಾರ ಒಲವನ್ನು ಹೊಂದಿದ್ದು ಸೋಮವಾರ, ಶನಿವಾರಗಳಂದು ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದರು. ನಮ್ಮನ್ನೆಲ್ಲ ಆಗಾಗ್ಗೆ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು.

ಪ್ರತಿ ದಿನ ಪ್ರಜಾವಾಣಿ ಪತ್ರಿಕೆ ಓದುತ್ತಿದ್ದರು. ಅವರಿಗೆ ಬಹುಶ: ನಡೆಯುತ್ತಿದ್ದ ಎಲ್ಲಾ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಅರಿವಿರುತ್ತಿತ್ತು, ರಾಜಕೀಯ, ಸಿನಿಮಾ ವಿಚಾರಗಳ ಬಗ್ಗೆ ತಮ್ಮ ಹೋಟೆಲಿನಲ್ಲಿ ಸ್ನೇಹಿತರ ಜೊತೆ, ಗಿರಾಕಿಗಳ ಜೊತೆ, ನಿರರ್ಗಳವಾಗಿ ಮಾತಾಡುತ್ತಿದ್ದರು. ಸುಧಾ, ತರಂಗ, ವಾರ ಪತ್ರಿಕೆ, ಮಂಗಳ, ಮಯೂರ, ಮಲ್ಲಿಗೆಗಳನ್ನು ತಪ್ಪದೆ ತರಿಸಿ ಅದರಲ್ಲಿ ಬರುತ್ತಿದ್ದ ಕಥೆಗಳು, ಧಾರಾವಾಹಿಗಳನ್ನು ಒಂದೂ ಬಿಡದಂತೆ ಓದುತ್ತಿದ್ದರು. ಸುಧಾದಲ್ಲಿ ಬರುತ್ತಿದ್ದ ಹೆಚ್. ಕೆ. ಅನಂತರಾವ್ ಬರೆದ "ಅಂತ" ಅವರಿಗೆ ತುಂಬಾ ಪ್ರಿಯವಾದ ಧಾರಾವಾಹಿಯಾಗಿತ್ತು. ಮಕ್ಕಳಿಗಾಗಿ ಬಾಲಮಿತ್ರ, ಚಂದಮಾಮಗಳನ್ನು ಮರೆಯದೆ ತರುತ್ತಿದ್ದರು. ಹೀಗೆ ನಮಗೆ ಓದಿನ ಹುಚ್ಚು ಹಿಡಿಸಿದ್ದು ಅಪ್ಪ. ಈಗಲೂ ಅಪ್ಪನ ಹೋಟೆಲಿನಲ್ಲಿ ಈ ಪುಸ್ತಕಗಳನ್ನು ಕಾಣಬಹುದು. ಇಂದಿಗೂ ಅಪ್ಪ ತಮ್ಮ ಓದುವ ಹವ್ಯಾಸ ಮುಂದುವರಿಸಿದ್ದಾರೆ.

ಅಪ್ಪನ ಇನ್ನೊಂದು ಮುಖ್ಯ ಅಭ್ಯಾಸ, "ರೇಡಿಯೋ", ಆಕಾಶವಾಣಿಯ ' ವಿವಿಧ ಭಾರತಿ' ಅವರ ನೆಚ್ಚಿನ ಚಾನಲ್. ಯಾವಾಗಲೂ ಅದು ಹೋಟೆಲಿನಲ್ಲಿ ಹಾಡುತ್ತಲೇ ಇರಬೇಕು, ವಾರ್ತೆಗಳು ಬರುವ ಸಮಯಕ್ಕೆ ಸರಿಯಾಗಿ ಚಾನಲ್ ಬದಲಿಸಿ ವಾರ್ತೆಗಳನ್ನು ಕೇಳಿದ ನಂತರ ಮತ್ತೆ ವಿವಿಧ ಭಾರತಿಗೆ ಮರಳುತ್ತಿದ್ದರು. ಘಂಟಸಾಲರ ತೆಲುಗು ಹಾಗೂ ಪಿ. ಬಿ. ಶ್ರೀನಿವಾಸ್ ಅವರ ಕನ್ನಡ ಹಾಡುಗಳು, ಮಹಮದ್ ರಫಿ ಹಾಡಿದ ಹಿಂದಿ ಗೀತೆಗಳೆಂದರೆ ಅಪ್ಪನಿಗೆ ಬಹಳ ಇಷ್ಟ. ಅಂದು, ಬಾಲ್ಯದಲ್ಲಿ ಅಪ್ಪ ಹಿಡಿಸಿದ " ಹಾಡು ಕೇಳುವ ಗೀಳು" ಇಂದಿಗೂ ನನ್ನನ್ನು ಬಿಟ್ಟಿಲ್ಲ.

ಆಜಾನುಬಾಹುವಾಗಿದ್ದ ಅಪ್ಪ, ಯಾರಿಗೂ ಹೆದರುತ್ತಿರಲಿಲ್ಲ, ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಇರುತ್ತಿದ್ದರು. ಆಕಸ್ಮಾತ್ ಯಾರಾದರೂ ಹೋಟೆಲಿನಲ್ಲಿ ಏನಕ್ಕಾದರೂ ಕ್ಯಾತೆ ತೆಗೆದರೆ ಹಿಂದು ಮುಂದೆ ನೋಡದೆ ಜಾಡಿಸಿ ಬಿಡುತ್ತಿದ್ದರು. ಬಾಲ್ಯದಲ್ಲಿ ನಡೆದ ಅದೆಷ್ಟೋ " ಬಾಕ್ಸಿಂಗ್"ಗಳು ಇನ್ನೂ ನನ್ನ ನೆನಪಿನಿಂದ ಮಾಸಿಲ್ಲ.

ಹೇಗಿದ್ದರು ಬಾಲ್ಯದ ಆ ಅಪ್ಪ ! ಆ ನೆನಪುಗಳೇ ಮಧುರ.
ಆದರೆ ಹೇಗಾದರು ಮುಂದೆ, ಅದು ಬಹಳ ಘೋರ!!

No comments: