Friday, August 28, 2009

ಎಂಟು ಕಣ್ಣಿನ ಪ್ರೇಮಿಗಳು - ೨

ಬೆಂಗಳೂರಿಗೆ ಹೊರಟು ನಿಂತ ನನ್ನ ಮೀನಾ ಮತ್ತೆ ನನ್ನನ್ನು ಯಾವಾಗ ಕಾಣುವಳೋ, ಯಾವಾಗ ತನ್ನ ಅಳಿಸದ ಮುಗುಳ್ನಗುವಿನೊಂದಿಗೆ ನನ್ನೊಡನೆ ಮಾತಾಡುವಳೋ ಗೊತ್ತಿಲ್ಲದೆ ಮನ ಕಂಗಾಲಾಗಿತ್ತು. ಈ ನಡುವೆ ನಮ್ಮ ಪ್ರಾಂಶುಪಾಲರ ಸಲಹೆಯಂತೆ ಮೈಸೂರು ವಿಶ್ವ ವಿದ್ಯಾಲಯದಲ್ಲೇ ಮನ: ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಮಹದಾಸೆಯಿಂದ ಅರ್ಜಿ ಹಾಕಿ ಕಾಯುತ್ತಿದ್ದೆ. ಒಂದೆರಡು ಸಲ ಏನಾಯ್ತೆಂದು ತಿಳಿಯಲು ಮೈಸೂರಿಗೂ ಹೋಗಿ ಬಂದೆ. ಆಗಿನ ಮನ:ಶಾಸ್ತ್ರ ವಿಭಾಗದ ಮುಖ್ಯಸ್ಥರು, ಬೇರೆ ವಿಶ್ವ ವಿದ್ಯಾಲಯಗಳಲ್ಲಿ ಪದವಿ ವ್ಯಾಸಂಗ ಮಾಡಿದವರಿಗೆ ಸ್ನಾತಕೋತ್ತರ ಪದವಿಯಲ್ಲಿ ಕೇವಲ ಎರಡು ಸೀಟುಗಳನ್ನು ಮಾತ್ರ ನೀಡಲು ಸಾಧ್ಯವೆಂದೂ, ಉದ್ಧನೆಯ ಪಟ್ಟಿ ತೋರಿಸಿ, ೭೪% ಅಂಕಗಳಿದ್ದರೂ ೧೪ನೆ ಸ್ಥಾನದಲ್ಲಿದ್ದ ನನಗೆ ಬಹುಶ: ಸೀಟು ಸಿಗುವ ಅವಕಾಶ ಇಲ್ಲವೇ ಇಲ್ಲ ಎಂದಾಗ, ನಿರಾಸೆಯಿಂದ ತಿಪಟೂರಿಗೆ ಮರಳಿದೆ.

ಮೀನಾ ಹಾಗೂ ನನ್ನ ಪ್ರಣಯ ಕಥೆ ಗೊತ್ತಾಗಿದ್ದ ಅಪ್ಪ ಈಗ ನನ್ನ ಬಗ್ಗೆ ಇನ್ನೂ ಹೆಚ್ಚು ಉದಾಸೀನ ತೋರಿಸಲಾರಂಭಿಸಿದರು, ಅಮ್ಮನದು ಅದೇ ಮಾಮೂಲಿನ ಅಸಹಾಯಕತೆ. ಇದರಿಂದ ಬೇಸತ್ತ ನಾನು ಒಂದು ದಿನ, ನನ್ನ ಗೆಳೆಯರೊಂದಿಗೆ ಚರ್ಚಿಸಿ, ಮುಂದಿನ ವಿದ್ಯಾಭ್ಯಾಸಕ್ಕೆ ಕಲ್ಲು ಹಾಕಿ ಬೆಂಗಳೂರಿಗೆ ಹೋಗಿ ಕೆಲಸಕ್ಕೆ ಸೇರಿ, ಹಾಗೆಯೇ ಆಗಾಗ್ಗೆ ಮೀನಾಳನ್ನು ಭೇಟಿಯಾಗುತ್ತಾ, ಜೀವನದಲ್ಲಿ ನೆಲೆ ಕಂಡುಕೊಳ್ಳಬೇಕೆಂದು ನಿರ್ಧರಿಸಿದೆ. ಹಾಗೆ ಹೊರಟಾಗ ಮನೆಯಲ್ಲಿ ಯಾವುದೇ ಬೆಂಬಲ ಸಿಗಲಿಲ್ಲ, ಆದರೂ ಧೃತಿಗೆಡದೆ, ಸಹಪಾಠಿ ಬಸವರಾಜುವಿನ ಜೊತೆಯಲ್ಲಿ ಕೆಲವು ದಿನ ಇರಬಹುದೆಂದು ಭರವಸೆ ಸಿಕ್ಕ ನಂತರ ಬೆಂಗಳೂರಿನ ಬಸ್ಸು ಹತ್ತಿದೆ. ಬೆಂಗಳೂರಿಗೆ ಬಂದವನು ಮೊದಲು ಹೋಗಿದ್ದು ಗುಬ್ಬಿ ತೋಟದಪ್ಪನವರ ವಿದ್ಯಾರ್ಥಿ ನಿಲಯಕ್ಕೆ, ಅಲ್ಲಿದ್ದ ಸ್ನೇಹಿತ ಬಸವರಾಜುವಿನ ರೂಮಿನಲ್ಲಿ ಕೆಲವು ದಿನ ಇದ್ದು ಒಂದು ಕೆಲಸ ಹುಡುಕಿಕೊಂಡೆ. ಮೊದಲ ಸಂಬಳ ಬಂದ ನಂತರ ಮೀನಾಳನ್ನು ಭೇಟಿಯಾಗಲು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಬಂದೆ. ಸ್ವಲ್ಪ ಹೊತ್ತು ಕಾದ ನಂತರ ತನ್ನ ಸಹಪಾಠಿ ದಾದಿಯರೊಂದಿಗೆ ಶ್ವೇತವಸ್ತ್ರಧಾರಿಣಿಯಾಗಿ ಬಂದವಳನ್ನು ಹಾಗೇ ಬೆರಗುಗಣ್ಣುಗಳಿಂದ ನೋಡುತ್ತಾ ನಿಂತೆ. ನನ್ನನ್ನು ನೋಡದವಳಂತೆ ಮುಂದೆ ಹೋದದ್ದನ್ನು ಕಂಡು ಮೊದಲು ಮನಸ್ಸಿಗೆ ಬೇಜಾರಾದರೂ, ಅಲ್ಲಿನ ರೀತಿ ರಿವಾಜುಗಳು ಏನಿರುತ್ತವೋ ಅದಕ್ಕೆ ಹೀಗೆ ಹೋಗಿರಬಹುದೆಂದು ಸಮಾಧಾನ ಮಾಡಿಕೊಂಡೆ. ನಾನಂದುಕೊಂಡಂತೆ ಕೆಲ ಕ್ಷಣಗಳ ನಂತರ ಹಿಂದಿರುಗಿ ಬಂದಳು, ನನ್ನ ಮೀನಾ !

ಬಹುದಿನಗಳ ನಂತರ ಅವಳನ್ನು ನೋಡಿ ನನಗೆ ಮಾತೇ ಹೊರಬರದಂತಾಗಿತ್ತು, ತನ್ನ ತರಬೇತಿಯ ಬಗ್ಗೆ, ಗೆಳತಿಯರಬಗ್ಗೆ, ಅಲ್ಲಿನ ಕಟ್ಟುನಿಟ್ಟಾದ ರೀತಿ ನೀತಿಗಳ ಬಗ್ಗೆ ವರ್ಣಿಸಿದ ಅವಳು, ಒಳ್ಳೆಯ ಕೆಲಸ ಹಿಡಿದು ಜೀವನದಲ್ಲಿ ಮುಂದೆ ಬಾ, ನಾನು ನಿನಗಾಗಿ ಕಾಯುತ್ತಿರುತ್ತೇನೆ ಎಂದು ಕೈ ಬೀಸಿ ಹೊರಟಾಗ ಮನಸ್ಸು ಮೂಕವಾಗಿ ರೋದಿಸಿತ್ತು. ಹೀಗೆ ತಿಂಗಳಲ್ಲಿ ಎರಡು ಮೂರು ಬಾರಿ ಅವಳ ಭೇಟಿಯ ಭಾಗ್ಯ ಸಿಗುತ್ತಿತ್ತಷ್ಟೇ, ಮಿಕ್ಕಂತೆ ನಾನಾಯಿತು, ನನ್ನ ಕೆಲಸವಾಯಿತು ಎಂಬಂತೆ ಜೀವನ ಯಾಂತ್ರಿಕವಾಗಿ ನಡೆಯುತ್ತಿತ್ತು. ಅದೇ ಸಮಯದಲ್ಲಿ ಬೆಂಗಳೂರಿನಲ್ಲಿಯೇ ಕೆಲಸ ಸಿಕ್ಕಿ ಮುಂಬೈನಿಂದ ಹಿಂತಿರುಗಿ ಬಂದ ಆತ್ಮೀಯ ಸ್ನೇಹಿತ ಇನಾಯತ್ ನನ್ನ ಪಾಲಿಗೆ ದೇವದೂತನಾದ. ಬಿಡುವಾದಾಗಲೆಲ್ಲಾ ನಾವಿಬ್ಬರೂ ಒಟ್ಟಿಗೆ ಕುಳಿತು ಮುಂದಿನ ಜೀವನದ ಬಗ್ಗೆ ಸಾಕಷ್ಟು ಚರ್ಚಿಸುತ್ತಿದ್ದೆವು. ಒಮ್ಮೆ ಅವನೂ ನನ್ನ ಜೊತೆ ಆಸ್ಪತ್ರೆಗೆ ಬಂದು ಮೀನಾಳನ್ನು ಭೇಟಿಯಾಗಿ ಬಂದ. ಏನೇ ಬಂದರೂ ಬೇರೆಯಾಗಬೇಡಿ, ನಿಮ್ಮ ಗುರಿ ಸಾಧಿಸಿ, ಒಟ್ಟಿಗೆ ಬದುಕಿ ಎಂದು ನಮ್ಮಿಬ್ಬರಿಗೂ ಉಪದೇಶ ಮಾಡುತ್ತಿದ್ದ.

ಈ ಮಧ್ಯೆ ಅಪ್ಪನಿಂದ ಬಂದ ಕಾಗದ ನನ್ನನ್ನು ಸ್ವಲ್ಪ ವಿಚಲಿತನಾಗಿಸಿ, ಆತುರಾತುರವಾಗಿ ತಿಪಟೂರಿಗೆ ಹೋಗುವಂತೆ ಮಾಡಿತ್ತು. ನಾನು ಬೆಂಗಳೂರಿಗೆ ಕೆಲಸಕ್ಕೆ ಬಂದ ನಂತರ ಮೈಸೂರು ವಿಶ್ವ ವಿದ್ಯಾಲಯದಿಂದ ನಿಮಗೆ ಸ್ನಾತಕೋತ್ತರ ಪದವಿಗೆ ಸೀಟು ಕೊಡಲಾಗಿದೆ, ಒಡನೆ ಬಂದು ಸೇರಿಕೊಳ್ಳಿ ಎಂದು ಕಾಗದ ಬರೆದಿದ್ದರಂತೆ. ಅಪ್ಪ ಅದನ್ನು ನೋಡಿ, ನನಗೆ ಕಾಗದ ಬರೆದು, ನಾನು ಅಲ್ಲಿಗೆ ಹೋಗಿ ಮುಟ್ಟುವಾಗ, ತುಂಬಾ ತಡವಾಗಿ, ನನಗೆ ಸಿಗಬೇಕಿದ್ದ ಜಾಗ ಕೇವಲ ೬೩% ಅಂಕಗಳಿದ್ದವನ ಪಾಲಾಗಿತ್ತು. ನನ್ನ ಅವಕಾಶದ ಬಾಗಿಲು ಮುಚ್ಚಿತ್ತು. ಮೀನಾಳ ಹಿಂದೆ ಬೆಂಗಳೂರಿಗೆ ಬಂದ ನನಗೆ "ಜೀವನದ ಮೊದಲ ರೈಲು, ಮಿಸ್ಸಾಗಿತ್ತು" !

ನಿರಾಶೆಯಿಂದ ಮತ್ತೆ ಬೆಂಗಳೂರಿಗೆ ಹಿಂತಿರುಗಿದೆ. ಮತ್ತೊಮ್ಮೆ ಮೀನಾಳನ್ನು ಭೇಟಿಯಾದಾಗ ಅವಳಿಗೆ ಈ ಬಗ್ಗೆ ಹೇಳಿದೆ, ಉದಾಸೀನದಿಂದ ಪ್ರತಿಕ್ರಿಯಿಸಿದ ಅವಳು ಹೋಗಲಿ ಬಿಡು, ಏನ್ಮಾಡೋಕ್ಕಾಗುತ್ತೆ ಅಂದಾಗ ಅವಳ ಮುಖವನ್ನೇ ದಿಟ್ಟಿಸಿದೆ. ನಿರ್ಭಾವುಕವಾಗಿದ್ದ ಅವಳ ಮುಖ, ಏಕೋ ಎಂದಿನಂತಿಲ್ಲ ಅನ್ನಿಸಿತು. ಅಲ್ಲಿಂದ ಹೊರಟವನು ಸೀದಾ ಇನಾಯತ್ ಮನೆಗೆ ಹೋದೆ. ಆಗ ಅವನು ಹೇಳಿದ ಮಾತುಗಳು ನನ್ನ ಮನಕ್ಕೆ ಕಿಚ್ಚು ಹಚ್ಚಿದ್ದವು. ನಾನು ಮೈಸೂರಿಗೆ ಹೋಗಿದ್ದಾಗ ಅವನು ಆಸ್ಪತ್ರೆಗೆ ಹೋಗಿ ಅವಳನ್ನು ಭೇಟಿಯಾಗಿದ್ದನಂತೆ, ನನ್ನ ಬಗ್ಗೆ ತುಂಬಾ ಮಾತಾಡಿ, ಅವನು ನೊಂದಿದ್ದಾನೆ, ಅವನಿಗೆ ಮೋಸ ಮಾಡಬೇಡ, ನಿನ್ನನ್ನು ತುಂಬಾ ಹಚ್ಚಿಕೊಂಡಿದ್ದಾನೆ ಎಂದವನಿಗೆ ಮೀನಾ, ನಾನು ಅವನಿಗೆ ಒಬ್ಬ ಒಳ್ಳೆಯ ಗೆಳತಿಯಾಗಿ ಮಾತ್ರ ಇರಬಲ್ಲೆ, ಅವನಿಗೆ ಜೀವನ ಸಂಗಾತಿಯಾಗಲು ಸಾಧ್ಯವಿಲ್ಲ ಎಂದಳಂತೆ. ಅದಲ್ಲದೆ ಇವನು ಹೋಗಿ ಅವಳನ್ನು ಭೇಟಿಯಾಗಿದ್ದು ಅವರ ಹಾಸ್ಟೆಲ್ ವಾರ್ಡನ್ಗೆ ಗೊತ್ತಾಗಿ, ಅವರಪ್ಪ-ಅಮ್ಮನನ್ನು ಕರೆಸಿ ಮಂಗಳಾರತಿ ಮಾಡಿ, ಇನ್ನೊಮ್ಮೆ ಹೀಗಾದರೆ ಹಾಸ್ಟೆಲಿನಿಂದ ಅವಳನ್ನು ಹೊರಹಾಕುವ ಎಚ್ಚರಿಕೆಯನ್ನೂ ಕೊಟ್ಟಿದ್ದರಂತೆ. ಕೇವಲ ಹದಿನೈದಿಪ್ಪತ್ತು ದಿನಗಳಲ್ಲಿ ಏನೆಲ್ಲಾ ಆಗಿ ಹೋಯ್ತೆಂದು ಯೋಚಿಸುತ್ತಾ, ಮುಂದೆ ಏನು ಮಾಡಬೇಕೆಂದು ತಿಳಿಯದೆ, ಕಬ್ಬನ್ ಪಾರ್ಕಿನ ದೊಡ್ಡ ಮರದ ಕೆಳಗೆ ಸುಮ್ಮನೆ ಅಂಗಾತ ಮಲಗಿ ಬಿಟ್ಟೆ. ಅವಳೊಡನೆ ಮತ್ತೆ ಮನ ಬಿಚ್ಚಿ ಮಾತಾಡುವವರೆಗೂ ನನಗೆ ಸಮಾಧಾನವಾಗುವಂತಿರಲಿಲ್ಲ.

ಮತ್ತೊಮ್ಮೆ ಅವಳನ್ನು ಭೇಟಿಯಾದೆ, ಅವಳು ಹೇಳಿದ್ದು ಒಂದೇ ಮಾತು, " ನಾನು ನೀನು ಈ ಜೀವನದಲ್ಲಿ ಸಮಾನಾಂತರ ರೇಖೆಗಳು, ನಾವಿಬ್ಬರೂ ಒಂದಾಗಲು ಸಾಧ್ಯವಿಲ್ಲ. ನಾನು ಕ್ರಿಶ್ಚಿಯನ್, ನೀನು ಹಿಂದೂ, ಮುಂದೆ ನಾವು ಮದುವೆಯಾಗಿ ಎರಡು ಮಕ್ಕಳಾದರೆ ಅವರ ಸಾಮಾಜಿಕ ಬದುಕು ಏನಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀಯಾ" ? ಎಂದವಳ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಆದರೂ ಅವಳಿಗೆ ಸಮಾಧಾನ ಹೇಳಲು ಯತ್ನಿಸಿದೆ, "ನಿನ್ನ ಧರ್ಮ ನೀನು ಪಾಲಿಸು, ನನ್ನ ಧರ್ಮ ನಾನು ಪಾಲಿಸುತ್ತೇನೆ, ಯಾವಾಗಲೂ ಅದಕ್ಕೆ ನಾನು ಅಡ್ಡಿ ಪಡಿಸುವುದಿಲ್ಲ" ಎಂದೆ. ಅವಳು ಮುಂದಿಟ್ಟ ಒಂದು ಪ್ರಶ್ನೆಗೆ ಉತ್ತರ ಕೊಡಲಾಗಲಿಲ್ಲ, "ನನ್ನನ್ನು ಇಷ್ಟೆಲ್ಲಾ ಪ್ರೀತಿಸುವ ನೀನೇಕೆ ನನ್ನ ಧರ್ಮಕ್ಕೆ ಮತಾಂತರವಾಗಬಾರದು" ? ಎಂದವಳ ಮುಖ ನೋಡಿದೆ, ಅಲ್ಲಿ ಅಸಹಾಯಕತೆಯಿತ್ತೋ, ಅವಳ ಧರ್ಮದ ಬಗ್ಗೆ ಅಪಾರ ಪ್ರೀತಿಯಿತ್ತೋ ಅಥವಾ ನನ್ನ ತಾಳ್ಮೆಯನ್ನು ಪರೀಕ್ಷಿಸಬೇಕೆಂಬ ತುಂಟ ಬುದ್ಧಿಯಿತ್ತೋ, ಏನೂ ಅರ್ಥವಾಗಲಿಲ್ಲ. ಆದರೂ ಸಾವರಿಸಿಕೊಂಡು ಅವಳಿಗೆ ಹೇಳಿದೆ, "ನಾನು ಅಪಾರವಾಗಿ ಪ್ರೀತಿಸುವ ನನ್ನ ಧರ್ಮವನ್ನು ಬಿಡುವ ಮಾತೇ ಇಲ್ಲ, ಅದು ಕೇವಲ ಕನಸು. ಆ ಮಾತು ಬಿಡು, ನಿನ್ನ ಜೀವನ ಚೆನ್ನಾಗಿರುವಂತೆ ನೋಡಿಕೊಳ್ಳುವ ಹೊಣೆ ನನ್ನದು, ಎಂದಿಗೂ ನಿನ್ನ ಧರ್ಮಕ್ಕೆ, ನಿನ್ನ ನಂಬಿಕೆಗಳಿಗೆ ಅಪಚಾರವಾಗದಂತೆ ನಾನು ನಡೆದುಕೊಳ್ಳುತ್ತೇನೆಂಬ ಭರವಸೆಯನ್ನು ನಾನು ನಿನಗೆ ಕೊಡಬಲ್ಲೆ, ಆದರೆ ನನ್ನ ಧರ್ಮವನ್ನು ಬಿಡುವ ಮಾತನ್ನು ಎಂದೂ ನನ್ನ ಮುಂದೆ ಹೇಳಬೇಡ" ಎಂದ ನನ್ನನ್ನು ಒಮ್ಮೆ ದೀರ್ಘವಾಗಿ ನೋಡಿ ಎದ್ದು ನಿಂತವಳು, " ಸರಿ ಹಾಗಾದರೆ ನನ್ನನ್ನು ಮರೆತು ಬಿಡು, ಇನ್ನೆಂದೂ ನನ್ನ ದಾರಿಗೆ ದಯವಿಟ್ಟು ಅಡ್ಡ ಬರಬೇಡ, ನಾನು ಸಾಧಿಸಬೇಕಾದ್ದು ಬಹಳಷ್ಟಿದೆ, ಇನ್ನು ಮುಂದೆ ನಿನ್ನಿಂದ ನನಗೆ ಸಹಾಯಕ್ಕಿಂತ ತೊಂದರೆಯೇ ಹೆಚ್ಚಾಗಬಹುದು. ಅದಕ್ಕಿಂತ ನಾವಿಬ್ಬರೂ ದೂರವೇ ಉಳಿದು, ಒಬ್ಬರು ಇನ್ನೊಬ್ಬರ ಏಳ್ಗೆಯನ್ನು ನೋಡಿ ಸಂತೋಷ ಪಡೋಣ, ಈ ಜನ್ಮಕ್ಕೆ ನನ್ನ ನಿನ್ನ ಸಂಬಂಧ ಇಷ್ಟೇ " ಎಂದು ಕೈಗೊಂದು ಮುತ್ತನಿತ್ತು ಹೊರಟೇ ಬಿಟ್ಟಳು. ಹಾಗೆ ಹೋದವಳ ದಾರಿಯನ್ನೇ ನೋಡುತ್ತಾ ಅದೆಷ್ಟೋ ಹೊತ್ತು ಆ ಆಸ್ಪತ್ರೆಯ ಮುಂದಿನ ಕಲ್ಲು ಬೆಂಚಿನ ಮೇಲೆ ನಾನು ಕುಳಿತೇ ಇದ್ದೆ, ಕಲ್ಲಿನಂತೆ.

ಅಂದು, ಧರ್ಮದೆದುರು ನಮ್ಮ ಪ್ರೀತಿ ಸೋತಿತ್ತು. ಒಬ್ಬ ಹಿಂದೂ ಹುಡುಗ, ಮತ್ತೊಬ್ಬ ಕ್ರಿಶ್ಚಿಯನ್ ಹುಡುಗಿಯನ್ನು ಒಂದಾಗಿಸಲು ಮತ್ತೊಬ್ಬ ಮುಸ್ಲಿಂ ಗೆಳೆಯ ಕೈ ಮೀರಿ ಪ್ರಯತ್ನಿಸಿದ್ದ. ಧರ್ಮಗಳ ಸಾಮರಸ್ಯ ಸಾಧಿಸಲು ಯಶಸ್ವಿಯಾದ ಪ್ರೀತಿಗೆ, ಜೀವಗಳನ್ನು ಒಂದುಗೂಡಿಸುವಲ್ಲಿ ಎಂದೂ ಕಾಣದ ಸೋಲಾಗಿತ್ತು! ನಾವು ಕಟ್ಟಿ ಬೆಳೆಸಿದ ಧರ್ಮಗಳು, ನಮ್ಮ ನಡುವೆಯೇ ಗೋಡೆಯಂತೆ ಎದ್ದು ನಿಂತು, ವಿಕಟಾಟ್ಟಹಾಸ ಮಾಡಿದಂತಾಯ್ತು.

" ಜೀವನದಲ್ಲಿ ಎರಡನೆಯ ಬಾರಿ ಅತ್ಯಮೂಲ್ಯ ರೈಲುಗಾಡಿ, ಮಿಸ್ಸಾಗಿತ್ತು " !! ಮನಸ್ಸು ಬರಿದಾಗಿತ್ತು, ಭಾವನೆಗಳು ಚಿಂದಿಯಾಗಿದ್ದವು, ಪ್ರೀತಿ ಪ್ರೇಮದ ಮಾತುಗಳೆಲ್ಲ ಅರ್ಥ ಕಳೆದುಕೊಂಡು, ಪ್ರೇತಾತ್ಮಗಳು ನನ್ನ ಸುತ್ತ ಕುಣಿಯುತ್ತಿರುವಂತೆ ಭಾಸವಾಗತೊಡಗಿತು. ಕೆಲವು ದಿನ ಇದೇ ಯೋಚನೆಯಲ್ಲಿದ್ದ ನಾನು, ಕಬ್ಬನ್ ಪಾರ್ಕಿನ ಆ ದೈತ್ಯ ಮರದ ಕೆಳಗೆ ಕುಳಿತು ಕಡಲೆಕಾಯಿ ತಿನ್ನುತ್ತಾ, ಆಗಿದ್ದೆಲ್ಲವನ್ನೂ ಮನನ ಮಾಡುತ್ತಾ, ಬೆಂಗಳೂರಿನ ಯಾಂತ್ರಿಕ ಜೀವನಕ್ಕೆ ನಿಧಾನವಾಗಿ ಹೊಂದಿಕೊಂಡು, ಆದದ್ದನ್ನೆಲ್ಲಾ ಮರೆತು, ಮುಂದಿನ ಜೀವನ ಕಟ್ಟುವ ನಿರ್ಧಾರ ತೆಗೆದುಕೊಂಡೆ. ಮತ್ತೆಂದೂ ಅವಳನ್ನು ನೋಡುವ ಪ್ರಯತ್ನವನ್ನೇ ಮಾಡಲಿಲ್ಲ. " ಮಹಾ ಒರಟ " ನೆಂಬ ಅನ್ವರ್ಥಕವನ್ನು ಅದಾಗಲೇ ಹೊತ್ತುಕೊಂಡಿದ್ದ ನಾನು, ಈ ಪ್ರೇಮ ವೈಫಲ್ಯದಿಂದ ಕುಗ್ಗದೆ, ಇನ್ನೂ ಹೆಚ್ಚು ಒರಟನಾಗಿ, ಎಲ್ಲಕ್ಕಿಂತ ನನ್ನ ಕೆಲಸವೇ ಹೆಚ್ಚೆಂದು ಪರಿಗಣಿಸಿ, ಯಶಸ್ವಿಯಾಗಿ ಇಂದು ದುಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ತನ್ನ ಗುರಿ ಸಾಧಿಸಲು ತನ್ನ ಧರ್ಮಕ್ಕಾಗಿ ತನ್ನ ಪ್ರೀತಿಯನ್ನು ಬಲಿ ಹೊಡೆದ ನನ್ನ ಮೀನಾ, ತನ್ನ ತರಬೇತಿ ಮುಗಿಸಿ, ಬೆಂಗಳೂರಿನಲ್ಲೇ ಕೆಲ ಕಾಲ ಕೆಲಸ ಮಾಡಿ, ಇತ್ತೀಚೆಗೆ ನನಗೆ ಸಿಕ್ಕ ಸುದ್ಧಿಯಂತೆ, ಈಗ ದೂರದ ಅಮೇರಿಕಾದ ಯಾವುದೋ ಆಸ್ಪತ್ರೆಯಲ್ಲಿದ್ದಾಳಂತೆ. ವೃತ್ತಿ ಜೀವನದಲ್ಲಿ ಇಬ್ಬರೂ ಯಶಸ್ವಿಯಾಗಿದ್ದೇವೆ, ನಮ್ಮ ನಮ್ಮ ಗುರಿ ಸಾಧಿಸಿದ್ದೇವೆ.

ಆದರೆ ನಡುವೆ ಸೋತಿದ್ದು,,,, ಪ್ರೀತಿ !!

No comments: