Thursday, December 10, 2009

ಚದುರಿದ ಚಿತ್ರಗಳು,,,,,,,,,,,,,,,,,

ಚದುರಿದ ಚಿತ್ರಗಳು, ಹಲವೊಮ್ಮೆ ಧುತ್ತೆಂದು ಕಣ್ಮುಂದೆ ಬರುವ ಹಲವಾರು ಪಾತ್ರಗಳು, ಮನದಾಳದ ಮಧುರ ನೆನಪುಗಳ ಸುಳಿಗಳು, ಕಾಡುವ ಸುಂದರ ಕಣ್ಣುಗಳು, ಜೀವನದ ಹಲವಾರು ಮೆಟ್ಟಿಲುಗಳು, ಏಳುಬೀಳುಗಳು, ಹೋರಾಟಗಳು, ನೋವುಗಳು, ಕಾಣದ ಕೈಗಳು ತಂದ ಸಾಂತ್ವನಗಳು, ಎದೆಯೊಳಗೆಲ್ಲೋ ಸಣ್ಣಗೆ ಉರಿಯುತ್ತಲೇ ಇರುವ ಅತೃಪ್ತಿಯ ಬೆಂಕಿಯ ಕಾವು, ಅಸಮಾಧಾನದ ಹೊಗೆ. ಅದೆಷ್ಟು ಚಿತ್ರಗಳು, ಚಿತ್ತದಲಿ ಸುತ್ತು ಹೊಡೆಯುವ "ಜಯಂಟ್ ವ್ಹೀಲ್"ಗಳು!

"ಬಾಲ್ಯ" ಎಲ್ಲರ ಜೀವನದಲ್ಲಿ ಒಂದು ಸುಂದರ ನೆನಪು, ಆ ಹಳ್ಳಿ, ಪುಟ್ಟ ಶಾಲೆ, ಜೊತೆಗಾರರು, ಕುಂಟೆಬಿಲ್ಲೆ, ಲಗೋರಿ, ಸೂರ್ಚೆಂಡು, ಚಿನ್ನಿದಾಂಡು, ಜಗಳ, ಗದ್ದಲ, ಹೊಡೆದಾಟಗಳು, ಮುನಿಸುಗಳು, ತುಂಟಾಟಗಳು, ನಗು, ಅಳು, ಅಮ್ಮನ ಪ್ರೀತಿ, ಅಪ್ಪನ ಗದರುವಿಕೆ, ಅಜ್ಜಿ ತಾತನ ವಾತ್ಸಲ್ಯ, ಶಾಲೆಯ ಮಾಸ್ತರ ಪ್ರೀತಿಯ ನುಡಿ, ಹೇಳಿದ್ದನ್ನು ಬರೆಯದಿದ್ದಾಗ ಬಿದ್ದ ಬೆತ್ತದ ಹೊಡೆತ, ಹಿತ್ತಿಲ ಸೀಬೆಗಿಡದ ಹಣ್ಣಿನ ರುಚಿ, ಅಲ್ಲಿ ಹಾರಾಡುತ್ತಿದ್ದ ಗಿಳಿ, ಪಾರಿವಾಳಗಳು, ಮುದ್ದಾದ ನಾಯಿಮರಿ, ಅದರ ಜೊತೆಗೊಂದು ಬೆಕ್ಕಿನ ಮರಿ, ತನ್ನಿಡೀ ಹಿಂಡಿಗೆ ತಾನೇ ರಾಜನೆನ್ನುವಂತೆ ಗತ್ತಿನಿಂದ ಕತ್ತೆತ್ತಿ ನಡೆಯುವ ಕೋಳಿ ಹುಂಜ, ತಾನು ಮೊಟ್ಟೆಯಿಟ್ಟು ಕಾವು ಕೊಟ್ಟು ಜನ್ಮವಿತ್ತ ಮರಿಗಳನ್ನು ಎಲ್ಲೂ ಬಿಡದೆ ರಕ್ಷಿಸುವ ಹೇಂಟೆ ಕೋಳಿ, ಆ ಮರಿಗಳನ್ನು ಕಬಳಿಸಲು ಮೇಲೆ ಸುತ್ತು ಹೊಡೆಯುತ್ತಾ ಗಿರಕಿ ಹೊಡೆಯುವ ಹದ್ದು, ಆ ಹದ್ದಿಗೆ ಗುರಿಯಿಟ್ಟು ಹೊಡೆಯಲು ಸಜ್ಜಾಗಿ ನಿಂತ ಕ್ಯಾಟರ್ ಪಿಲ್ಲರ್ ಹಿಡಿದು ನಿಂತ ಹಿರಿಯ ಗೆಳೆಯರು, ಕೆರೆಯ ಕೆಂಪು ನೀರು, ಅಲ್ಲಿನ ಈಜಾಟ, ಮುಳುಗುತ್ತಾ, ಆ ಕೆಂಪು ನೀರು ಕುಡಿಯುತ್ತಾ ಕಲಿತ ಈಜು, ಬೆನ್ನ ಮೇಲೆ ಕುಳಿತವರನ್ನು ನೀರಲ್ಲಿ ತಲೆಯೆತ್ತಿ ಧಿಮ್ಮನೆ ಕೆರೆಯ ಮಧ್ಯಕ್ಕೆ ಕರೆದೊಯ್ದ ಧಡಿಯ ಎಮ್ಮೆ, ಒಂದೇ ಎರಡೇ, ಅದೆಷ್ಟು ಚಿತ್ರಗಳು ಚದುರಿ ನಿಂತಿವೆ ಮನದಲ್ಲಿ. ಎಂದೋ ಒಮ್ಮೆ ಕನಸಿನಂತೆ ಒಂದೊಂದು ಬಾಲ್ಯದ ಚಿತ್ರಗಳೂ ಕಣ್ಮುಂದೆ ಬರುತ್ತವೆ, ಧೀಂತನನ ಕುಣಿಯುತ್ತವೆ, ಹಾಡುತ್ತವೆ, ಮನವನ್ನು ಕಾಡುತ್ತವೆ.

ಪ್ರೇಮ ಕವಿ ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್.ನರಸಿಂಹಸ್ವಾಮಿಯವರು "ಮನೆಯಿಂದ ಮನೆಗೆ" ಕವನದಲ್ಲಿ ವರ್ಣಿಸಿದಂತೆ ನನ್ನ ಬಾಲ್ಯದ ಚಿತ್ರಗಳು ಬಿಚ್ಚಿಕೊಳ್ಳುತ್ತವೆ. ಕೇವಲ ಒಂದೂವರೆ ವರ್ಷದವನಿದ್ದಾಗ ಅಮ್ಮನಿಗೆ ದೊರೆತ ದಾದಿಯ ತರಬೇತಿ ಅಮ್ಮನಿಂದ ಅಗಲಿಸಿತು. ಅಮ್ಮನ ಜಾಗದಲ್ಲಿ ತುತ್ತು ಮಾಡಿ ತಿನ್ನಿಸಿದವಳು, ಲಾಲಿ ಹಾಡಿ ಮುದ್ದುಗರೆದವಳು ಹಿರಿಯಕ್ಕ ಮಂಜುಳ. ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ಒಂದನೆ ತರಗತಿ ಓದುತ್ತಿದ್ದಾಗ ಮಾರ್ಚಿ ತಿಂಗಳಿನಲ್ಲಿ ಕೆಲಸದ ಆದೇಶ ಸಿಕ್ಕಿದಾಗ ಮೈಸೂರಿನ ಸಂಬಂಧ ಕಡಿತ.

ದೂರದ ಆಂಧ್ರಪ್ರದೇಶದ ಗಡಿಗೆ ಹತ್ತಿರವಿರುವ ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ಲಿಗೆ ನಮ್ಮ ಪ್ರಯಾಣ. ಅಲ್ಲಿ ಕನ್ನಡ ಓದುವ, ಬರೆಯುವ ಆದರೆ ಬರೀ ತೆಲುಗನ್ನೇ ಮಾತಾಡುವ ಜನರ ನಡುವೆ ನನ್ನ ಬಾಲ್ಯ, ವಿಧಿಯಿಲ್ಲದೆ ಅವರೊಡನೆ ಆಡುತ್ತಾ, ಬೆಳೆಯುತ್ತಾ ತೆಲುಗು ನನ್ನ ಎರಡನೆ ಮಾತೃಭಾಷೆಯಾಗಿ ಬಿಟ್ಟಿತು. ಪ್ರಾಥಮಿಕ ಶಾಲೆ ಮುಗಿಯುವ ಹೊತ್ತಿಗೆ ಅಮ್ಮನಿಗೆ ವರ್ಗಾವಣೆ, ತುಮಕೂರು ಜಿಲ್ಲೆಯ ಕೊರಟಗೆರೆಗೆ. ಮಂಡಿಕಲ್ಲಿನ ಸಂಬಂಧ ಕಡಿತ.

ಕೊರಟಗೆರೆಯಲ್ಲಿ ಮೂರು ವರ್ಷ ಮಾಧ್ಯಮಿಕ ಶಾಲೆಯ ಅವಧಿ ಕಾಲ್ಗಳಿಗೆ ಚಕ್ರ ಮೂಡಿಸಿತ್ತು, ಗೋಪಾಲಶೆಟ್ಟರ ಅಂಗಡಿಯ ಎಲ್ಲಾ ತರದ ಸೈಕಲ್ಗಳನ್ನೂ ದಿನಕ್ಕೊಂದು ಘಂಟೆಯಂತೆ ಎಂಟಾಣೆ ಬಾಡಿಗೆಗೆ ತೆಗೆದುಕೊಂಡು, ಹಲವಾರು ಸಲ ಬಿದ್ದು, ಮಂಡಿ ಚಿಪ್ಪುಗಳ್ಳನ್ನು ಒಡೆದುಕೊಂಡು, ಕೊನೆಗೂ ಸೈಕಲ್ ಕಲಿತು, ಅಪ್ಪನಿಂದ ಒಂದು ಸೈಕಲ್ ತೆಗೆಸಿಕೊಂಡು ಆರನೆಯ ತರಗತಿಗೆ ಸೈಕಲ್ ಮಾಲೀಕನಾಗಿದ್ದೆ. ಮುಂದೆ ಭಾರತ ಸುತ್ತುವ ನಮ್ಮ ಸೈಕಲ್ ಪ್ರವಾಸಕ್ಕೆ ಮುನ್ನುಡಿ ಬರೆದಿದ್ದೆ. ಏಳನೆಯ ತರಗತಿ ಮುಗಿಸುವ ಹೊತ್ತಿಗೆ ಅಮ್ಮನಿಗೆ ಮತ್ತೆ ಅಲ್ಲಿಂದ ವರ್ಗಾವಣೆ, ಕೊರಟಗೆರೆಯ ಸಂಬಂಧ ಕಡಿತ.

ಕಲ್ಪತರು ನಾಡು, ತಿಪಟೂರಿಗೆ ವರ್ಗಾವಣೆ, ಪ್ರೌಢಶಾಲೆಯಿಂದ ಪದವಿ ಮುಗಿಸುವವರೆಗೂ ತಿಪಟೂರು ಮತ್ತು ಪಕ್ಕದ ಚಿಕ್ಕನಾಯಕನಹಳ್ಳಿಗಳಲ್ಲಿ ನಮ್ಮ ವಾಸ. ಬಾಲ್ಯ ಕಳೆದು ಯೌವ್ವನಕ್ಕೆ ಕಾಲಿಟ್ಟು, ಚಿಗುರುಮೀಸೆಯ ಜೊತೆಗೆ ಹರಿದು ಬಂದ ಭಾವನೆಗಳ ಮಹಾಪೂರ, ಪ್ರೇಮ, ಪ್ರೀತಿಯ ಹುಚ್ಚು, ಬೊಗಸೆ ಕಂಗಳ ಚೆಲುವೆಯ ಕಣ್ಸೆಳೆತದ ಮಾಟ, ಏನಾದರೂ ಸಾಧಿಸಬೇಕೆಂಬ ಕೆಚ್ಚಿನಿಂದ ಸೈಕಲ್ ಪ್ರವಾಸಗಳು, ಚಾರಣಗಳು, ಎನ್.ಸಿ.ಸಿಯ ತರಬೇತಿ ಶಿಬಿರಗಳು, ಸಾಕಷ್ಟು ಸಾಧನೆಗಳು, ಹೊಗಳಿಕೆ ತೆಗಳಿಕೆಗಳ ಮಹಾ ಮಿಶ್ರಣ. ಕಣ್ಣಾರೆ ಕಂಡ ಹಲವಾರು ಗೆಳೆಯರ ಸಾವುಗಳು, ಅವು ಕಲಿಸಿದ ಪಾಠಗಳು, ಓಹ್, ಎಷ್ಟೊಂದು ಚದುರಿದ ಚಿತ್ರಗಳು. ಕಾಡುವ ನೆನಪುಗಳು. ಪದವಿ ಮುಗಿಸಿದ ನಂತರ ಅಪ್ಪನ ಜೊತೆ ಗುದ್ದಾಡಿಕೊಂಡು ನನ್ನ ಕಾಲ ಮೇಲೆ ನಾನು ನಿಲ್ಲುತ್ತೇನೆಂದು ಹಠ ತೊಟ್ಟು ಬೆಂಗಳೂರಿಗೆ ಪಯಣ. ತಿಪಟೂರಿನ ಸಂಬಂಧ ಕಡಿತ.

ಹದಿನೇಳು ವರ್ಷ ನಮ್ಮ ಉದ್ಯಾನನಗರಿಯಲ್ಲಿ ಕೆಲಸ ಮಾಡಿ ಪ್ರೀತಿಯ ಮಡದಿ, ಮಗ ಮಗಳೊಂದಿಗೆ ಜೀವನ ಸಾಗಿಸಿ ಮತ್ತೊಂದು ಮಹತ್ವಾಕಾಂಕ್ಷೆಯಲ್ಲಿ, ಕಾಣದ ’ಮೋಹನ ಮುರಳಿಯ ಗಾನದ ಪಾಶಕ್ಕ” ಸಿಲುಕಿ, ಸಾಗರ ದಾಟಿ ಬೆಂಗಳೂರಿನಿಂದ ದುಬೈಗೆ ಹಾರಿದೆ, ಈಗ ಬೆಂಗಳೂರಿನ ಸಂಬಂಧ ಕಡಿತ, ದುಬೈ, ಅಬುಧಾಬಿಗಳ ಜೊತೆ ಸತತ ಒಡನಾಟ. ಏನೀ ಚದುರಿದ ಚಿತ್ರಗಳ ಮಾಟ! ಇದೆಂಥಾ ಜೀವನದ ಓಟ!!

No comments: