Monday, August 31, 2015

ಭದ್ರತೆಯ ಲೋಕದಲ್ಲಿ - ೯




ಹೀಗೆ ದಿನಗಳು ಸಾಗುತ್ತಿರುವಾಗಲೇ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಡುವಿನ ಮಾತುಕತೆ ಮುರಿದುಬಿದ್ದು ಕಾವೇರಿ ನೀರಿನ ವ್ಯಾಜ್ಯ ತಾರಕಕ್ಕೇರಿತ್ತು. ತತ್ಸಂಬಂಧಿ ಗಲಾಟೆಗಳಲ್ಲಿ ಬೆಂಗಳೂರಿನಲ್ಲಿ ಒಂದಷ್ಟು ಜನ ತಮಿಳರ ಮೇಲೆ ಹಲ್ಲೆಯಾಗಿತ್ತು, ಕರ್ನಾಟಕದ ಬಸ್ಸುಗಳಿಗೆ ಚೆನ್ನೈನಲ್ಲೂ, ತಮಿಳುನಾಡಿನ ಬಸ್ಸುಗಳಿಗೆ ಬೆಂಗಳೂರಿನಲ್ಲೂ ಕಲ್ಲು ತೂರಿ ಜಖಂಗೊಳಿಸಲಾಗಿತ್ತು!  ಅದುವರೆಗೂ ನನ್ನ ಜೊತೆಗೆ ಸ್ನೇಹದಿಂದಿದ್ದ ಅಲ್ಲಿನ ಬಹುತೇಕ ತಮಿಳರು ಈಗ ನನ್ನನ್ನು ಹೊರಗಿನವನಂತೆ ಅನುಮಾನದ ಕಣ್ಣುಗಳಿಂದ ನೋಡುತ್ತಾ ಸಣ್ಣ ಪುಟ್ಟ ಕಿರುಕುಳ ನೀಡಲಾರಂಭಿಸಿದ್ದರು.  ಇದು ಯಾವ ಮಟ್ಟಕ್ಕೆ ಹೋಯಿತೆಂದರೆ ಬಚ್ಚಲು ಮನೆಯಲ್ಲಿ ನಾನು ಸ್ನಾನ ಮಾಡುತ್ತಿದ್ದರೆ, ಮನೆಯ ಮೇಲಿನಿಂದ ನಲ್ಲಿಯಲ್ಲಿ ನೀರು ನಿಲ್ಲಿಸಿ ಬಿಡುತ್ತಿದ್ದರು.  ಮಾರುಕಟ್ಟೆಗೆ ದಿನನಿತ್ಯದ ಸಾಮಾನು ತರಲು ಹೋಗುತ್ತಿದ್ದ ನನ್ನ ಮಡದಿಯನ್ನು ಅವಹೇಳನ ಮಾಡಿ ನಗುತ್ತಿದ್ದರು, ಕೆಲವು ಹೆಂಗಸರಂತೂ ಅದೇನೇನೋ ತಮಿಳಿನಲ್ಲಿ ಬೈಯ್ಯುತ್ತಲೂ ಇದ್ದರೆಂದು ನನ್ನ ಮಡದಿ ಹೇಳುತ್ತಿದ್ದಳು.  ಆದರೆ ಮನೆಯ ಮಾಲೀಕ ಮುನಿಸ್ವಾಮಿ ಮಾತ್ರ ನಮಗೆ ಧೈರ್ಯ ತುಂಬುತ್ತಿದ್ದ, ಯಾವುದಕ್ಕೂ, ಯಾರಿಗೂ ಹೆದರಬೇಡಿ, ನೀವು ನಮ್ಮ ಮನೆಯವರಿದ್ದಂತೆ, ನಿಮ್ಮ ರಕ್ಷಣೆ ನನ್ನ ಜವಾಬ್ಧಾರಿ ಅನ್ನುತ್ತಿದ್ದ.  ಆದರೂ ಮಡದಿ ಮತ್ತು ಪುಟ್ಟ ಮಗಳೊಡನೆ ಆ ಉದ್ರಿಕ್ತ ವಾತಾವರಣದಲ್ಲಿ ಮುಂದುವರೆಯಲು ನನ್ನ ಮನಸ್ಸು ಒಪ್ಪದಿದ್ದಾಗ ಬೆಂಗಳೂರಿನಲ್ಲಿದ್ದ ನಮ್ಮ ಕಚೇರಿಯಲ್ಲಿನ ವ್ಯವಸ್ಥಾಪಕರೊಂದಿಗೆ  ಮಾತನಾಡಿ ಒಂದು ದಿನ ರಾತ್ರಿ ಹೆಂಡತಿ ಮಗುವಿನೊಡನೆ ಬೆಂಗಳೂರಿನ ಬಸ್ಸು ಹತ್ತಿದ್ದೆ.  ಸುಂದರ ಮಹಾಬಲಿಪುರದೊಡನೆ ನಮ್ಮ ನಂಟು ಎರಡು ರಾಜ್ಯಗಳ ಕಾವೇರಿ ನೀರಿನ ವ್ಯಾಜ್ಯದೊಂದಿಗೆ ಮುಗಿದಿತ್ತು.

ಬಸ್ ನಿಲ್ದಾಣದವರೆಗೂ ನಮ್ಮೊಡನೆ ಬಂದು ನಮ್ಮ ಲಗೇಜನ್ನು ಬಸ್ಸಿಗೆ ಹಾಕಿ, ಸೀಟು ಮಾಡಿ ಕೊಟ್ಟ ಸಾರಾಯಿ ಮುನಿಸ್ವಾಮಿ ಮತ್ತು ಅವರ ಪತ್ನಿ ಕಣ್ಣೀರುಗರೆಯುತ್ತಿದ್ದರು.  ಭಾರವಾದ ಹೃದಯದೊಡನೆ ಅವರಿಗೆ ವಿದಾಯ ಹೇಳಿ ಬಂದವನು ಮತ್ತೆ ಅವರನ್ನು ಭೇಟಿಯಾಗಿದ್ದು ಇಪ್ಪತ್ತು ವರ್ಷಗಳ ನಂತರ!   ಮಹಾಬಲಿಪುರದಿಂದ ಅದೇ ಜಯಲಲಿತಾ ಟ್ರಾನ್ಸ್ಪೋರ್ಟ್ ಬಸ್ಸಿನಲ್ಲಿ ಲಗೇಜಿನೊಡನೆ ಹೆಂಡತಿ ಮಗಳ ಜೊತೆ ಬೆಂಗಳೂರಿಗೆ ಬಂದಿಳಿದ ನಾನು ಮಾರತ್ ಹಳ್ಳಿಯಲ್ಲಿದ್ದ ತಮ್ಮನ ರೂಮಿನಲ್ಲಿ ಲಗೇಜುಗಳನ್ನಿಟ್ಟು ನಮ್ಮ ಕಚೇರಿಗೆ ಬಂದಿದ್ದೆ.  ಬೆಂಗಳೂರಿನಲ್ಲಿಯೇ ಕೆಲಸ ಕೊಡುತ್ತೇನೆಂದಿದ್ದ ಮಲೆಯಾಳಿ ವ್ಯವಸ್ಥಾಪಕ ತನ್ನ ಮಾತನ್ನು ಉಳಿಸಿಕೊಳ್ಳದೆ ಕೈಯ್ಯೆತ್ತಿದ್ದ.  ಅವನೊಂದಿಗೆ ಜಗಳವಾಡಿ ಬರಬೇಕಾಗಿದ್ದ ಹಣವನ್ನೆಲ್ಲಾ ವಸೂಲಿ ಮಾಡಿಕೊಂಡು ಕೆಲಸಕ್ಕೆ ರಾಜೀನಾಮೆ ಬಿಸಾಕಿ ಬಂದವನು ತಲೆ ಕೆಟ್ಟಂತಾಗಿ ಹೆಂಡತಿ ಮಗಳೊಡನೆ ಸೀದಾ ಹೊಳೆನರಸೀಪುರಕ್ಕೆ ತೆರಳಿದ್ದೆ.  ಒಂದು ವಾರದ ವಿರಾಮದ ನಂತರ ಮತ್ತೆ ಬೆಂಗಳೂರಿಗೆ ಬಂದು ಬೇರೆ ಭದ್ರತಾ ಸಂಸ್ಥೆಗಳಲ್ಲಿ ಕೆಲಸಕ್ಕೆ ಪ್ರಯತ್ನ ನಡೆಸಿದ್ದೆ.  ಹಲವಾರು ದಿನ ಅಲ್ಲಿಲ್ಲಿ ಅಲೆದಾಡಿದ ನಂತರ ಒಂದು ಬಹುರಾಷ್ಟ್ರೀಯ ಭದ್ರತಾ ಸಂಸ್ಥೆಯಲ್ಲಿ ಭದ್ರತಾ ಮೇಲ್ವಿಚಾರಕನಾಗಿ ಕೆಲಸ ಸಿಕ್ಕಿತ್ತು.  ಒಂದು ತಿಂಗಳು  ಕೆಲಸ ಮಾಡಿ ಸಂಬಳ ಕೈಗೆ ತೆಗೆದುಕೊಂಡು ಪುಟ್ಟದೊಂದು ಮನೆ ಮಾಡಿ ಹೆಂಡತಿ- ಮಗಳನ್ನು ಬೆಂಗಳೂರಿಗೆ ಕರೆತಂದಿದ್ದೆ.  ಅದುವರೆಗೂ ಒಬ್ಬಂಟಿಯಾಗಿದ್ದುಕೊಂಡು ಕೆಲಸ ಮಾಡುತ್ತಿದ್ದ ನನ್ನ ತಮ್ಮನೂ ನನ್ನೊಡನೆ ಸೇರಿಕೊಂಡಿದ್ದ.  ನಮ್ಮ ಹೊಸಜೀವನ ಬೆಂಗಳೂರಿನಲ್ಲಿ ಆರಂಭವಾಗಿತ್ತು.  ಹೊಸಕೋಟೆ ಬಳಿಯ ಬಹುರಾಷ್ಟ್ರೀಯ ಸಂಸ್ಥೆಯೊಂದರ ೩೦ಜನರ ಭದ್ರತಾ ತಂಡಕ್ಕೆ ಮೇಲ್ವಿಚಾರಕನನ್ನಾಗಿ ನನ್ನನ್ನು ನೇಮಿಸಲಾಗಿತ್ತು.

ನಾನು ಕೆಲಸ ನಿರ್ವಹಿಸುತ್ತಿದ್ದ ಕಾರ್ಖಾನೆಯಲ್ಲಿ ಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ಕಾರ್ಮಿಕರು  ಕೆಲಸ ಮಾಡುತ್ತಿದ್ದರು, ಬಹುರಾಷ್ಟ್ರೀಯ ಸಂಸ್ಥೆಯಾದುದರಿಂದ ಕೈತುಂಬಾ ಸಂಬಳ, ಕಾರ್ಖಾನೆಗೆ ಬಂದು ಹೋಗಲು ವಾಹನ ಸೌಕರ್ಯ, ರುಚಿರುಚಿಯಾದ ಊಟ ತಿಂಡಿಗಾಗಿ ಉತ್ತಮ ಫಲಾಹಾರ ಮಂದಿರ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಆರೋಗ್ಯ ತಪಾಸಣೆಗಾಗಿ ವಿಮಾ ಸೌಲಭ್ಯ ಹೀಗೆ ಹತ್ತು ಹಲವು ವಿಶೇಷ ಸೌಲಭ್ಯಗಳಿದ್ದುದರಿಂದ ಅದೊಂದು ರೀತಿಯ ಕೊಬ್ಬಿದ ಗೂಳಿಗಳನ್ನು ಕೂಡಿ ಹಾಕಿದ್ದ ಕೊಟ್ಟಿಗೆಯಂತಿತ್ತು.  ಹಲವಾರು ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡುತ್ತಾ, ಆರ್ಥಿಕವಾಗಿ ಬಲಿಷ್ಠವಾಗಿದ್ದ ಕಾರ್ಮಿಕರು ಸಂಸ್ಥೆಯ ರೀತಿ ರಿವಾಜುಗಳನ್ನು ಪಾಲಿಸುತ್ತಿರಲಿಲ್ಲ, ಏನಾದರೂ ಭದ್ರತಾ ರಕ್ಷಕನೊಬ್ಬ ಪ್ರಶ್ನಿಸಿದರೆ ಬಾಯಿಗೆ ಬಂದಂತೆ ಬೈಸಿಕೊಳ್ಳಬೇಕಿತ್ತು!  ಅದರಲ್ಲೂ ಕೆಲವರು ಹೊಸಕೋಟೆಯ ಸುತ್ತಲಿನ ಹಳ್ಳಿಗಳಿಂದ ಬರುತ್ತಿದ್ದವರು ಕೆಲವು ರಾಜಕೀಯ ಪಕ್ಷಗಳ ನಾಯಕರಾಗಿದ್ದು ಹಳ್ಳಿಯ ರಾಜಕಾರಣವನ್ನು ಕಾರ್ಖಾನೆಗೂ ತಂದು ದೊಡ್ಡ ನಾಯಕರಂತೆ ಮೆರೆಯುತ್ತಿದ್ದರು.  ಅವರು ಕೆಲಸ ಮಾಡುವುದಿರಲಿ, ಸಧ್ಯ, ಇತರರನ್ನು ನೆಮ್ಮದಿಯಿಂದ ಕೆಲಸ ಮಾಡಲು ಸಹಾ ಬಿಡುತ್ತಿರಲಿಲ್ಲ!  ಇಂತಿಪ್ಪ ಆ ಕಾರ್ಖಾನೆಯಲ್ಲಿ ಗುಲ್ಬರ್ಗಾ ಕಡೆಯವನೊಬ್ಬ ನಿವೃತ್ತ ಸೈನಿಕ ಮುಖ್ಯ ಭದ್ರತಾ ಅಧಿಕಾರಿಯಾಗಿದ್ದ, ಅವನಿಗೆ ಸಹಾಯಕರಾಗಿ ಇನ್ನೂ ನಾಲ್ಕು ಜನ ನಿವೃತ್ತ ಸೈನಿಕರಿದ್ದರು, ಇವರ ಆಣತಿಗೆ ತಕ್ಕಂತೆ ಕಾರ್ಖಾನೆಯ ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲು ಬಹುರಾಷ್ಟ್ರೀಯ ಖಾಸಗಿ ಭದ್ರತಾ ಸಂಸ್ಥೆಯಿಂದ ಮುವ್ವತ್ತು ಜನ ಭದ್ರತಾ ರಕ್ಷಕರ ತಂಡವನ್ನು ನೇಮಿಸಿಕೊಳ್ಳಲಾಗಿತ್ತು.  ಆ ತಂಡಕ್ಕೆ ನಾನು ನಾಮಕಾವಾಸ್ತೆಯ ಮುಖಂಡನಾಗಿದ್ದೆ, ಎಲ್ಲವೂ ಸಂಸ್ಥೆಯ ಮುಖ್ಯ ಭದ್ರತಾ ಅಧಿಕಾರಿಯ ಇಚ್ಚೆಯಂತೆಯೇ ನಡೆಯುತ್ತಿತ್ತು.  ಈ ಐದು ಜನ ನಿವೃತ್ತ ಸೈನಿಕರು ಸೇರಿ ಮಾಡುತ್ತಿದ್ದ ಅನಾಚಾರಗಳನ್ನು ನೋಡಿ ಅದುವರೆಗೂ ನನಗೆ ನಿವೃತ್ತ ಸೈನಿಕರ ಮೇಲಿದ್ದ ಗೌರವವೆಲ್ಲ ಧೂಳೀಪಟವಾಗಿ ಹೋಯಿತು.  ಯಾವಾಗಲೂ ನ್ಯಾಯ, ನೀತಿ ಎಂದು ನೋಡುತ್ತಾ, ನಿಯತ್ತಿನಿಂದ ಕೆಲಸ ಮಾಡುತ್ತಿದ್ದ ನನಗೆ ಅವರು ಸಂಸ್ಥೆಯ ಸಾಮಾನುಗಳನ್ನು ಲೂಟಿ ಹೊಡೆಯುತ್ತಿದ್ದ ರೀತಿ ನೋಡಿ ಕಕ್ಕಾಬಿಕ್ಕಿಯಾಗಿತ್ತು.   ಅಲ್ಲಿ ಕೆಲಸ ಮಾಡಬೇಕಿದ್ದರೆ ಅವರ ಜೊತೆಗೆ ಶಾಮೀಲಾಗಬೇಕಿತ್ತು, ಇಲ್ಲದಿದ್ದರೆ ಬೇರೆ ಕಡೆಗೆ ಹೋಗಬೇಕಿತ್ತು.  ಇಂಥಾ ಮಾನಸಿಕ ತುಮುಲಾಟದಲ್ಲಿಯೇ ನನ್ನ ದಿನನಿತ್ಯದ ಕೆಲಸ ನಡೆಯುತ್ತಿತ್ತು.  ಆದಷ್ಟೂ ನನ್ನನ್ನು ಮುಖ್ಯದ್ವಾರದಿಂದ ದೂರವೇ ಇಡುತ್ತಿದ್ದ ಆ ಮುಖ್ಯ ಭದ್ರತಾ ಅಧಿಕಾರಿ, ತನ್ನ ಮಾತನ್ನು ಕೇಳುವ, ತನಗೆ ನಿಯತ್ತಾಗಿರುವ ಕೆಲವು ಆಯ್ದ ಭದ್ರತಾ ರಕ್ಷಕರನ್ನು ಮಾತ್ರ ಮುಖ್ಯದ್ವಾರದಲ್ಲಿ ಕೆಲಸಕ್ಕೆ ನಿಯೋಜಿಸಿದ್ದ!   ಯಾವುದೇ ಗೇಟ್ ಪಾಸ್ ಇಲ್ಲದೆ ಪ್ರತಿದಿನ ಸಾವಿರಾರು ರೂಪಾಯಿ ಬೆಲೆ ಬಾಳುವ ಸಂಸ್ಥೆಯ ವಸ್ತುಗಳು ನಿರಾತಂಕವಾಗಿ ಮುಖ್ಯದ್ವಾರದಿಂದ ಹೊರಹೋಗುತ್ತಿದ್ದವು.  ಈ ಬಗ್ಗೆ ಇತರ ಭದ್ರತಾ ರಕ್ಷಕರು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು, ಏನೂ ಮಾಡಲಾಗದ ತಮ್ಮ ಅಸಹಾಯಕತೆಗೆ ಕೈಕೈ ಹಿಸುಕಿಕೊಳ್ಳುತ್ತಿದ್ದರು.   ಹೀಗೊಮ್ಮೆ ಎಲ್ಲರೂ ಸೇರಿ ಯಾವುದೋ ಒಂದು ತರಬೇತಿ ಕಾರ್ಯಕ್ರಮದ ಬಗೆ ಚರ್ಚಿಸುತ್ತಿದ್ದಾಗ  ತಮ್ಮಲ್ಲಿದ್ದ ಅಸಮಾಧಾನವನ್ನು ಹೊರಹಾಕಿದ್ದರು.  ಕಾರ್ಖಾನೆಯಲ್ಲಿ ನಡೆಯುತ್ತಿದ್ದ ಅವ್ಯವಹಾರಗಳೆ ಸುದ್ಧಿ ತನ್ಮೂಲಕ ನಮ್ಮ ಕೆಂದ್ರ ಕಚೇರಿಯನ್ನು ತಲುಪಿತ್ತು. 
ಎಲ್ಲಾ ವಿಚಾರ ತಿಳಿದ ನಮ್ಮ ಭದ್ರತಾ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ, ಅವನೊಬ್ಬ ಮಲೆಯಾಳಿ,  ನನ್ನನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದ.  ಇದು ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು ವಿಶ್ವದೆಲ್ಲೆಡೆಯ ಅವರ ಕಾರ್ಖಾನೆಗಳಲ್ಲಿ ನಮ್ಮ ಸಂಸ್ಥೆಯೇ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿದೆ, ಅಲ್ಲಿ ಏನೇ ನಡೆಯುತ್ತಿದ್ದರೂ ನೀನು ಕಣ್ಣು ಮುಚ್ಚಿಕೊಂಡು ಕಂಡೂ ಕಾಣದವನಂತೆ ಇದ್ದು ಬಿಡಬೇಕು, ಯಾವುದೇ ಕಾರಣಕ್ಕೂ ಅಲ್ಲಿನ ಮುಖ್ಯ ಭದ್ರತಾ ಅಧಿಕಾರಿಯನ್ನು ಎದುರು ಹಾಕಿಕೊಳ್ಳಬೇಡ, ಅವನು ಹೇಳಿದಂತೆ ಕೇಳಿಕೊಂಡು ಹೋಗು ಎಂದು ಬುದ್ಧಿವಾದ ಹೇಳಿ ಕಳಿಸಿದ್ದ.  ಅದುವರೆಗೂ ಮಲೆಯಾಳಿ ಮಾಫಿಯಾದ ಬಗ್ಗೆ ಕೇಳಿದ್ದ ನಾನು ಈಗ ಅವರ ಪ್ರಭಾವ ಒಂದು ಬೃಹತ್ ಸಂಸ್ಥೆಯಲ್ಲಿ ಹೇಗಿರುತ್ತದೆಂದು ಕಣ್ಣಾರೆ ಕಾಣುವಂತಾಗಿತ್ತು.  ಸಂಸ್ಥೆಯಲ್ಲಿ ನಡೆಯುತ್ತಿದ್ದ ಕಳ್ಳತನಗಳನ್ನು ನೋಡಿಯೂ ನೋಡದವನಂತೆ ಸುಮ್ಮನಿರುವುದು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ, ಅದರಲ್ಲೂ ಬೇಲಿಯೇ ಎದ್ದು ಹೊಲ ಮೇಯ್ದಂತೆ, ನಿವೃತ್ತ ಸೈನಿಕನೊಬ್ಬ ನಮ್ಮನ್ನೆಲ್ಲಾ ಬೆದರಿಸಿ, ನಮ್ಮ ಭದ್ರತಾ ರಕ್ಷಕರ ಸಹಾಯದಿಂದಲೇ ಆ ಕಾರ್ಖಾನೆಯನ್ನು ಲೂಟಿ ಹೊಡೆಯುತ್ತಿದ್ದುದು ನನ್ನ ಹಲವು ನಿದ್ರಾಹೀನ ರಾತ್ರಿಗಳಿಗೆ ಕಾರಣವಾಗಿತ್ತು.   ಒಂದೆಡೆ ಸಂಸಾರದ ಜವಾಬ್ಧಾರಿ, ಮತ್ತೊಂದೆಡೆ ಎನೂ ಮಾಡಲಾಗದ ಅಸಹಾಯಕತೆ ಎರಡೂ ಸೇರಿ ನನ್ನನ್ನು ಬಹುವಾಗಿ ಘಾಸಿಗೊಳಿಸಿದ್ದವು.  ಕೊನೆಗೂ ಬಹಳ ಯೋಚಿಸಿದ ನಂತರ ಈ ಕಳ್ಳರ ಮಾಫಿಯಾವನ್ನು ಅಂತ್ಯಗೊಳಿಸಲೇಬೇಕೆಂದು ತೀರ್ಮಾನಿಸಿದ್ದೆ.   ನನಗೇನಾದರೂ ಚಿಂತೆಯಿಲ್ಲ, ಅವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಯೋಚಿಸಿ ಆ ನಿಟ್ಟಿನಲ್ಲಿ ಕಾರ್ಯಾರಂಭಿಸಿದೆ.  ಇದು ಪ್ರವಾಹದೆದುರಿಗೆ ಈಜುವ ಹುಚ್ಚು ಸಾಹಸವಾಗಲಿದೆಯೆಂದು ಗೊತ್ತಿದ್ದರೂ ರಾಜಿ ಮಾಡಿಕೊಳ್ಳಲು ನನ್ನ ಮನಸ್ಸು ಒಪ್ಪಿರಲಿಲ್ಲ!

ಮೊದಲ ಹೆಜ್ಜೆಯಾಗಿ ನಮ್ಮ ಭದ್ರತಾ ರಕ್ಷಕರ ತಂಡದಲ್ಲಿದ್ದ ಸಮಾನ ಮನಸ್ಕರನ್ನು ಒಂಡುಗೂಡಿಸಿದೆ,  ಹೇಗಾದರೂ ಮಾಡಿ ಈ ಕಳ್ಳವ್ಯವಹಾರವನ್ನು ತಡೆಯಬೇಕೆಂದು, ಶಾಮೀಲಾಗಿರುವ ಎಲ್ಲರನ್ನೂ ಮಾಲುಸಹಿತ  ಹಿಡಿದು ಕೊಡಬೇಕೆಂದು ಅವರ ಮನವೊಲಿಸಿದೆ.  ನನ್ನ ಮಾತಿಗೆ ಸರಿಯೆಂದವರನ್ನು ಒಬ್ಬೊಬ್ಬರನ್ನಾಗಿ ಆಯಕಟ್ಟಿನ ಜಾಗಗಳಲ್ಲಿ ನಿಯಮಿಸಲು ತೊಡಗಿದೆ.  ಆದರೆ ಮುಖ್ಯದ್ವಾರದಲ್ಲಿ ಮಾತ್ರ ಆ ಭ್ರಷ್ಟ ನಿವೃತ್ತ ಸೈನಿಕನಿಗೆ ನಿಷ್ಟರಾಗಿದ್ದವರನ್ನು ಬಿಟ್ಟು ಬೇರೆಯವರಿಗೆ ಕಾರ್ಯ ನಿರ್ವಹಿಸಲು ಅವಕಾಶ ಸಿಗಲಿಲ್ಲ!   ಅವನೊಡನೆ ಸೆಣಸಿ ಆನೆಯನ್ನು ಖೆಡ್ಡಾಗಿ ತಳ್ಳುವ ದುಸ್ಸಾಹಸಕ್ಕೆ ನಾನೇ ತಯಾರಾದೆ, ಮುಖ್ಯದ್ವಾರದ ಮೂಲಕ ಹೊರಹೋಗುವ ಎಲ್ಲಾ ಸರಕು ಸಾಗಣೆ ಹಾಗೂ ಇತರ ವಾಹನಗಳನ್ನು ನಾನೇ ಖುದ್ದಾಗಿ ತಪಾಸಣೆ ನಡೆಸಲು ತೊಡಗಿದೆ!  ಇದ್ದಕ್ಕಿದ್ದಂತೆ ನಾನು ಹೀಗೆ ಅಖಾಡಕ್ಕಿಳಿದಿದ್ದನ್ನು ಕಂಡ ಆ ಭ್ರಷ್ಟ ಮತ್ತವನ ಪಟಾಲಂ ಬೆಚ್ಚಿಬಿದ್ದರು, ಎಲ್ಲಿ ತಮ್ಮ ಅವ್ಯವಹಾರಗಳೆಲ್ಲ ನನಗೆ ಗೊತ್ತಾಗಿಬಿಡುತ್ತದೋ ಎಂದು ಅಂಡು  ಸುಟ್ಟ ಬೆಕ್ಕಿನಂತೆ ಓಡಾಡತೊಡಗಿದರು.  ನನ್ನ ಧಿಡೀರ್ ತಪಾಸಣೆಯಲ್ಲಿ ಗೇಟ್ ಪಾಸ್ ಇಲ್ಲದೆ ಹೊರಗೆ ಹೋಗುತ್ತಿದ್ದ ಹಲವಾರು ವಾಹನಗಳಲ್ಲಿದ್ದ ಅನಧಿಕೃತ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ನನ್ನದೇ ಆದ ವರದಿಯನ್ನು ಸಿದ್ಧಪಡಿಸಿ. ಅದೇ ಭ್ರಷ್ಟ ಮುಖ್ಯ ಭದ್ರತಾ ಅಧಿಕಾರಿಗೆ ಕೊಟ್ಟಿದ್ದಲ್ಲದೆ ಸಂಸ್ಥೆಯ ಆಡಳಿತಾಧಿಕಾರಿಗೂ ಒಂದು ಪ್ರತಿಯನ್ನು ತಲುಪಿಸಿದ್ದೆ. ಇದ್ದಕ್ಕಿದ್ದಂತೆ ತಮ್ಮಲ್ಲಿಗೆ ಬಂದ ಈ ರೀತಿಯ ವಿಶೇಷ ವರದಿಯನ್ನು ಕಂಡ ಸಂಸ್ಥೆಯ ಆಡಳಿತಾಧಿಕಾರಿಗೆ ಆಶ್ಚರ್ಯವಾಗಿ ನನ್ನನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು.  ಅದುವರೆವಿಗೂ ನನ್ನಲ್ಲಿ ಅದುಮಿಟ್ಟಿದ್ದ ಆಕ್ರೋಶವೆಲ್ಲಾ ಅಂದು ಒಂದಾಗಿ ಹೊರಹೊಮ್ಮಿತ್ತು!  ಅವರ ಮುಂದೆ ಸಂಸ್ಥೆಯಲ್ಲಿ ನಡೆಯುತ್ತಿದ್ದ ಅಕ್ರಮಗಳೆಲ್ಲವನ್ನೂ ಇಂಚಿಂಚಾಗಿ ಬಿಚ್ಚಿಟ್ಟಿದ್ದೆ!

ಕೊನೆಗೆ ಮುಖ್ಯ ಭದ್ರತಾ ಅಧಿಕಾರಿ ಮತ್ತವನ ತಂಡಕ್ಕೆ ಆಡಳಿತಾಧಿಕಾರಿಯ ಕಚೇರಿಯಿಂದ ವಿಚಾರಣೆಗಾಗಿ ಬುಲಾವ್ ಬಂದಿತ್ತು.  ಒಬ್ಬೊಬ್ಬರನ್ನಾಗಿ ಎಲ್ಲ ಐವರನ್ನೂ ಕರೆಸಿ ವಿಚಾರಣೆ ನಡೆಸಿದ ಅವರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಮುಖ್ಯದ್ವಾರದಲ್ಲಿ ನಡೆಯುವ ಎಲ್ಲ ಆಗುಹೋಗುಗಳನ್ನೂ  ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಹಾಗೂ ಪ್ರತಿದಿನವೂ ಅವರ ಕಚೇರಿಗೆ ಹೋಗಿ ಮುಖತಃ ವರದಿ ನೀಡುವಂತೆ ನನಗೆ ಆದೇಶಿಸಿದ್ದರು.   ಇದರಿಂದಾಗಿ ನನ್ನನ್ನು ಮುಖ್ಯದ್ವಾರದಿಂದ ಆದಷ್ಟೂ ದೂರವೇ ಇಟ್ಟಿದ್ದ ಆ ಭ್ರಷ್ಟ ನಿವೃತ್ತ ಸೈನಿಕನಿಗೆ ಭಾರೀ ಮುಖಭಂಗವಾಗಿತ್ತು!  ಪ್ರತಿಯೊಂದು ಗೇಟ್ ಪಾಸ್ ನನ್ನ ಮೂಲಕವೇ ಅವನಿಗೆ ಹೋಗುತ್ತಿತ್ತು ಹಾಗೂ ಸಂಸ್ಥೆಯಿಂದ ಹೊರಹೋಗುವ ಪ್ರತಿಯೊಂದು ವಾಹನವನ್ನು ನಾನು ಕೂಲಂಕುಷ ಪರಿಶೀಲಿಸಿಯೇ ಕಳುಹಿಸುತ್ತಿದ್ದೆ, ಅದಕ್ಕಾಗಿ ನನ್ನದೇ ತಂಡದಿಂದ ಮೂವರು ನಂಬಿಕಸ್ತರನ್ನು ಮೂರು ಪಾಳಿಗಳಲ್ಲಿ ಒಬ್ಬೊಬ್ಬರಂತೆ ನಿಯೋಜಿಸಿದ್ದೆ!  ಹಲವು ವರ್ಷಗಳಿಂದ ನಡೆದು ಬಂದಿದ್ದ ಅವರ ಲೂಟಿ ಅಚಾನಕ್ಕಾಗಿ ನಿಂತುಹೋಗಿತ್ತು.  ನಾನೀಗ ಅವರ ಪಾಲಿಗೆ ನುಂಗಲಾಗದ ಬಿಸಿತುಪ್ಪವಾಗಿಬಿಟ್ಟಿದ್ದೆ.
(ಮುಂದೇನಾಯ್ತು,,,ಮುಂದಿನ ಸಂಚಿಕೆಯಲ್ಲಿ..... )
 

2 comments:

ಶಾನಿ said...

ಹೇಗಿದ್ದೀರಿ ಮಂಜಣ್ಣಾ?

manju said...

ಚೆನ್ನಾಗಿದ್ದೇನೆ :-)