Sunday, February 1, 2015

ಭದ್ರತೆಯ ಲೋಕದಲ್ಲಿ - ೨ ಭದ್ರತೆಯ ಲೋಕದಲ್ಲಿ ನಾನು ಕಾಲಿಟ್ಟದ್ದು ಕೂಡಾ ಅನಿರೀಕ್ಷಿತವೇ!  ೧೯೮೯ರಲ್ಲಿ ಪದವಿ ವ್ಯಾಸಂಗ ಮುಗಿಸಿ, ಉನ್ನತ ವ್ಯಾಸಂಗಕ್ಕೆ ಮನೆಯವರ ಪ್ರೋತ್ಸಾಹ ಸಿಗದೇ ಹೋದಾಗ ಮುಂದೇನು ಎಂದು ಚಿಂತಿಸುತ್ತಾ ಕುಳಿತುಕೊಳ್ಳದೆ ಯಾವುದಾದರೂ ಕೆಲಸ ಹಿಡಿದು ಬದುಕಬೇಕೆಂದು ಬೆಂಗಳೂರಿನ ಬಸ್ ಹತ್ತಿದ್ದೆ!  ಆಗ ನನ್ನ ಜೊತೆ ವ್ಯಾಸಂಗ ಮಾಡಿದ್ದ ಕೆಲವು ಗೆಳೆಯರು ಗುಬ್ಬಿ ತೋಟದಪ್ಪನವರ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರು.  ಬೆಂಗಳೂರಿಗೆ ಬಂದವನಿಗೆ ಕೆಲವು ದಿನ ಉಳಿದುಕೊಳ್ಳಲು ಅದೇ ವಿದ್ಯಾರ್ಥಿನಿಲಯ ಆಶ್ರಯದಾಣವಾಗಿತ್ತು.  ಬೆಳಿಗ್ಗೆ ಮತ್ತು ಸಂಜೆ ನನ್ನ ಸ್ನೇಹಿತನ ಊಟವಾದ ನಂತರ ಅವನ ಕೆಂಪು ಟವಲ್ಲು ಮತ್ತು ಜನಿವಾರಕ್ಕೆ ಕಟ್ಟಿದ ಲಿಂಗವನ್ನು ಧರಿಸಿ ಸಾಲಿನಲ್ಲಿ ನಿಂತು, ರಾಗಿ ಮುದ್ದೆ, ಹುರುಳಿಕಾಳು ಸಾರು, ಕೆಂಪಕ್ಕಿ ಅನ್ನದ ಊಟ ಮಾಡಿ ಬರುತ್ತಿದ್ದೆ!  ಆ ಕಾಲಕ್ಕೆ ಅದೇ ನಮಗೆ ಮೃಷ್ಟಾನ್ನ ಭೋಜನವಾಗಿತ್ತು.  ಹಾಗೆ ನನಗೆ ಆಶ್ರಯ ಕೊಟ್ಟ ಗೆಳೆಯನಿಂದು ಕರ್ನಾಟಕ ಆಡಳಿತ ಸೇವೆಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಜಿಲ್ಲಾಧಿಕಾರಿಯಾಗಿದ್ದಾನೆ.  ನಾನು ಭದ್ರತೆಯ ಲೋಕದಲ್ಲಿಯೇ ಸುತ್ತು ಹೊಡೆಯುತ್ತಾ ಬಂದು ದುಬೈ ತಲುಪಿದ್ದೇನೆ!!

ಬೆಳಿಗ್ಗೆ ಮಿತ್ರರೆಲ್ಲ ವಿಶ್ವವಿದ್ಯಾನಿಲಯಕ್ಕೆ ಹೊರಟರೆ ನಾನು ಕೆಲಸದ ಹುಡುಕಾಟದಲ್ಲಿ ತೊಡಗುತ್ತಿದ್ದೆ.  ಪ್ರಥಮ ಶ್ರೇಣಿಯಲ್ಲಿ ಪದವಿ ಜೊತೆಗೆ ಕನ್ನಡ ಮತ್ತು ಆಂಗ್ಲದಲ್ಲಿ ಪ್ರೌಢದರ್ಜೆಯ ಬೆರಳಚ್ಚಿನಲ್ಲಿ ಉತ್ತೀರ್ಣನಾಗಿದ್ದ ನನಗೆ ಖಂಡಿತ ಒಂದು ಕೆಲಸ ಗಿಟ್ಟಿಸುತ್ತೇನೆಂಬ ಅತಿಯಾದ ಆತ್ಮವಿಶ್ವಾಸವಿತ್ತು.  ಆದರೆ ದಿನಗಳೆದಂತೆ ಆ ನನ್ನ ಆತ್ಮವಿಶ್ವಾಸಕ್ಕೆ ಕೊಡಲಿ ಪೆಟ್ಟುಗಳು ಬೀಳುತ್ತಾ ಹೋಗಿ ನನ್ನನ್ನು ಖಿನ್ನತೆಯ ಅಂಚಿಗೆ ತಂದು ನಿಲ್ಲಿಸಿತ್ತು!  ನನಗೆ ಕೆಲಸ ಸಿಗದಿದ್ದುದಕ್ಕೆ ಮುಖ್ಯ ಕಾರಣ ನಾನು ಓದಿದ್ದ ಕನ್ನಡ ಮಾಧ್ಯಮವಾಗಿತ್ತು.  ಆಂಗ್ಲದಲ್ಲಿ ನಿರರ್ಗಳವಾಗಿ ಓದುತ್ತಿದ್ದೆ, ಬರೆಯುತ್ತಿದ್ದೆ, ಬೆರಳಚ್ಚಿಸುತ್ತಿದ್ದೆ, ಆದರೆ ಸರಾಗವಾಗಿ ಮಾತನಾಡಲು ಬರುತ್ತಿರಲಿಲ್ಲ!  ಏಕೆಂದರೆ ತಿಪಟೂರಿನಂಥ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿದ್ದ ನನಗೆ ಅಲ್ಲಿಯವರೆಗೂ ಆಂಗ್ಲ ಭಾಷೆಯಲ್ಲಿ ಯಾರೊಂದಿಗೂ ಸಂವಹಿಸಬೇಕಾದ ಜರೂರತ್ತೇ ಬಂದಿರಲಿಲ್ಲ!  ಮೊದಲ ಬಾರಿಗೆ ಆಂಗ್ಲ ಭಾಷೆಯಲ್ಲಿಯೇ ವ್ಯವಹರಿಸಬೇಕಾದ ಪರಿಸ್ಥಿತಿ , ಅದೂ ಉದ್ಯೋಗಕ್ಕಾಗಿ, ನನ್ನನ್ನು ಧೃತಿಗೆಡಿಸಿತ್ತು!  ನಮ್ಮ ಕರ್ನಾಟಕದ ರಾಜಧಾನಿಯಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ಸಿಗುವುದಿಲ್ಲ ಎನ್ನುವ ಕಠೋರ ಸತ್ಯ ಅಂದು ನನಗೆ ಮನದಟ್ಟಾಗಿತ್ತು.  ಸಾಕಷ್ಟು ಕಡೆ ಆಂಗ್ಲಭಾಷೆಯಲ್ಲಿ ಮಾತನಾಡಲು ಬರುವುದಿಲ್ಲ ಎನ್ನುವ ಕಾರಣಕ್ಕಾಗಿ ಅವಮಾನಿತನಾಗಿ,ಅಸಹಾಯಕನಾಗಿ ಹೊರಬಂದಿದ್ದೆ, ಇದಕ್ಕೆ ಪೂರಕವಾಗಿ ಒಂದು ಘಟನೆಯನ್ನಿಲ್ಲಿ ವಿವರಿಸುತ್ತೇನೆ.

ಕೆಂಪೇಗೌಡ ರಸ್ತೆಯಲ್ಲಿದ್ದ ಅಲಂಕಾರ್ ಸಿನಿಮಾ ಮಂದಿರವನ್ನು ಕೆಡವಿ ಅಲ್ಲಿ ಒಂದು ದೊಡ್ಡ ವ್ಯಾಪಾರ ಸಂಕೀರ್ಣವನ್ನು ಕಟ್ಟಿದ್ದರು.  ಆ ಕಟ್ಟಡದ ಮುಂದೆ ವಿವಿಧ ಹುದ್ದೆಗಳಿಗೆ ಪದವೀಧರರು, ಬೆರಳಚ್ಚುಗಾರರು, ಸ್ವಾಗತಕಾರರು, ಇತ್ಯಾದಿ ಬೇಕಾಗಿದ್ದಾರೆ ಎಂಬ ಒಂದು ದೊಡ್ಡ ಫಲಕ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿತ್ತು, ಆದರೆ ಒಳಗೆ ಹೋಗಿ ಕೆಲಸ ಕೇಳಲು ನನ್ನ ಆಂಗ್ಲ ಭಾಷಾ ಪ್ರಾವೀಣ್ಯತೆಯ ಕೀಳರಿಮೆ ನನಗೆ ಅಡ್ಡಿಯಾಗಿತ್ತು!  ಆದರೂ ಕೊನೆಗೊಮ್ಮೆ ಧೈರ್ಯ ಮಾಡಿ ಒಂದು ದಿನ ಆ ಕಛೇರಿಯೊಳಗೆ ಕಾಲಿಟ್ಟೆ!  ಮುಖ್ಯದ್ವಾರಕ್ಕೆದುರಾಗಿ ಕುಳಿತಿದ್ದ ಸುಂದರ ಯುವತಿ ನನ್ನನ್ನು ನೋಡಿ "ಎಸ್" ಅಂದಳು.  ಕೆಲಸಕ್ಕಾಗಿ ಬಂದಿದ್ದೇನೆ, ಪದವಿಯ ಜೊತೆಗೆ ಆಂಗ್ಲ ಮತ್ತು ಕನ್ನಡ ಬೆರಳಚ್ಚು ಮಾಡಿದ್ದೇನೆ ಎಂದೆ, ನನ್ನನ್ನು ಕುಳಿತುಕೊಳ್ಳಲು ಹೇಳಿ ಒಳಗಿದ್ದ ಮೇಲಧಿಕಾರಿಗೆ ನನ್ನ ಬಗ್ಗೆ ಫೋನಿನಲ್ಲಿ ತಿಳಿಸಿದಳು.  ಸೂಟು  ಬೂಟು ತೊಟ್ಟು ಠೀವಿಯಿಂದ ಬಂದ ಮೇಲಧಿಕಾರಿ ನನ್ನನ್ನು ಸಂದರ್ಶನ ಕೊಠಡಿಗೆ ಕರೆದೊಯ್ದ, ನನ್ನ ಬಗ್ಗೆ ಎಲ್ಲ ವಿವರವನ್ನು ಕೇಳಿದ, ನಾನು ಗಿಣಿಮರಿಯಂತೆ ಅಚ್ಚ ಕನ್ನಡದಲ್ಲಿ ಸ್ವಚ್ಚವಾಗಿ ನನ್ನ ಬಗ್ಗೆ ವಿವರಿಸಿದೆ. ಸಮಾಧಾನದಿಂದ ಎಲ್ಲಾ ವಿವರವನ್ನೂ ಕೇಳಿದ ಆತ ಎಲ್ಲಾ ಓಕೆ, ನೀನು ಇದುವರೆಗೂ ನನಗೆ ಹೇಳಿದ್ದನ್ನೆಲ್ಲಾ ಆಂಗ್ಲಭಾಷೆಯಲ್ಲಿ ಹೇಳು ಅಂದ!  ಬರೋದಿಲ್ಲ ಸಾರ್ ಅಂದೆ, ಯಾಕೆ ಅಂದ, ನಾನು ಓದಿರುವುದು ಕನ್ನಡ ಮಾಧ್ಯಮದಲ್ಲಿ ಸಾರ್, ಆಂಗ್ಲ ಭಾಷೆಯಲ್ಲಿ ಮಾತನಾಡಿ ಅಭ್ಯಾಸವಿಲ್ಲ, ತಾವು ಕೆಲಸ ಕೊಟ್ಟರೆ ಪ್ರತಿದಿನ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡು ಪರಿಣಿತನಾಗುತ್ತೇನೆ ಎಂದು ಹೇಳಿದೆ. ಇದ್ದಕ್ಕಿದ್ದಂತೆ ಸಿಟ್ಟಿಗೆದ್ದ ಅವನು ಯಾರ್ರೀ ನಿಮಗಿಲ್ಲಿ ಕೆಲಸ ಖಾಲಿ ಇದೆ ಅಂತ ಹೇಳಿದ್ದು, ನಮಗೇನಿದ್ರೂ ಆಂಗ್ಲಭಾಷೆಯಲ್ಲಿ ಮಾತಾಡುವವರು ಮಾತ್ರ ಬೇಕು, ನಿಮ್ಮಂಥಾ ಹಳ್ಳಿ ಗೌಡರಿಗೆಲ್ಲಾ  ಕೆಲಸ ಕೊಡೋಕ್ಕಾಗೋದಿಲ್ಲ, ಮೊದಲು ಆಚೆಗೆ ಹೋಗ್ರೀ ಎಂದು ಉಗಿದು ಆಚೆಗಟ್ಟಿದ್ದ! ಮಾಡಲು ಕೆಲಸವಿಲ್ಲದ, ಜೇಬಲ್ಲಿ ದುಡ್ಡಿಲ್ಲದ ಅಸಹಾಯಕತೆಯಲ್ಲಿ ಹೊರಗೆ ಬಂದವನು ಸೀದಾ ಹೋಗಿ ಕೂತಿದ್ದು ಅಲ್ಲೇ ಹತ್ತಿರದಲ್ಲಿದ್ದ ಉದ್ಯಾನವನದಲ್ಲಿ!  ನನ್ನಂತೆಯೇ ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದು ಒದ್ದಾಡುತ್ತಿದ್ದ ಹತ್ತಾರು ನಿರುದ್ಯೋಗಿಗಳು ಅಲ್ಲಿಯೇ ಕಡ್ಲೇಕಾಯಿ ತಿನ್ನುತ್ತಾ ಕುಳಿತಿದ್ದರು. ಅವರಲ್ಲೊಬ್ಬನ ಬಳಿಯಿದ್ದ ಪ್ರಜಾವಾಣಿ ದಿನಪತ್ರಿಕೆಯನ್ನು ಕೇಳಿ ಪಡೆದು ಅದರಲ್ಲಿನ ವರ್ಗೀಕೃತ ಜಾಹೀರಾತುಗಳ ಮೇಲೆ ಕಣ್ಣಾಡಿಸಿದೆ, ಅಲ್ಲಿತ್ತು ನೋಡಿ "ಭದ್ರತೆಯ ಲೋಕಕ್ಕೆ ಆಹ್ವಾನ!"

ಹಲವಾರು ಖಾಸಗಿ ಭದ್ರತಾ ಸಂಸ್ಥೆಗಳು ತಮ್ಮಲ್ಲಿದ್ದ ಖಾಲಿ ಹುದ್ದೆಗಳಿಗೆ ೧೦ನೆ ತರಗತಿ ಉತ್ತೀರ್ಣರಾದವರು ಹಾಗೂ ಪದವೀಧರರು ಬೇಕಾಗಿದ್ದಾರೆಂದು ಜಾಹೀರಾತು ನೀಡಿದ್ದರು.  ಅವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ಬರೆದಿಟ್ಟುಕೊಂಡು ಪತ್ರಿಕೆಯನ್ನು ಅವರಿಗೆ ಹಿಂದಿರುಗಿಸಿದೆ, ನಾನು ಬರೆದುಕೊಂಡಿದ್ದನ್ನು  ಗಮನಿಸಿದ್ದ ಅವರು ಎಲ್ಲಿಗೆ ಹೋಗ್ತಿದೀರಾ, ಯಾವುದಾದರೂ ಕೆಲಸ ಸಿಗೋ ಹಾಗಿದೆಯಾ ಅಂದರು.  ಸುಮಾರು ಒಂದು ತಿಂಗಳಿನಿಂದ ನಾನು ಪಟ್ಟ ಪಾಡನ್ನು ಅವರಿಗೆಲ್ಲಾ ವಿವರಿಸಿದೆ.  ಬೇರೆ ಯಾವ ಕೆಲಸವೂ ಸಿಗುವ ಹಾಗೆ ಕಾಣುತ್ತಿಲ್ಲ, ಇದನ್ನಾದರೂ ಹೋಗಿ ಒಂದು ಕೈ ನೋಡುತ್ತೇನೆ ಅಂದೆ.  ನನ್ನಂತೆಯೇ ಕೆಲಸಕ್ಕಾಗಿ ಅಲೆದು ಬಸವಳಿದಿದ್ದ ಅವರೂ ಸಹ ನಾವೂ ಒಮ್ಮೆ ಪ್ರಯತ್ನಿಸುತ್ತೇವೆಂದು ನನ್ನೊಂದಿಗೆ ಹೊರಟರು. ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟವರು ಜಯಚಾಮರಾಜೇಂದ್ರ ರಸ್ತೆಯಲ್ಲಿ ಬಸ್ ಇಳಿದು ರವೀಂದ್ರ ಕಲಾಕ್ಷೇತ್ರದ ಎದುರಿಗಿನ "ಮೈಶುಗರ್" ಕಟ್ಟಡದಲ್ಲಿದ್ದ ಲಿಂಗೇಗೌಡ ಡಿಟೆಕ್ಟಿವ್ ಅಂಡ್ ಸೆಕ್ಯೂರಿಟಿ ಸರ್ವಿಸಸ್ ಎಂಬ ಖಾಸಗಿ  ಸಂಸ್ಥೆಯೊಳಕ್ಕೆ ಕಾಲಿಟ್ಟೆವು.  ಸುಂದರವಾಗಿದ್ದ ಸ್ವಾಗತಕಾರಿಣಿ ನಮ್ಮ ಗುಂಪನ್ನು ನೋಡಿ ಖುಷಿಯಾಗಿ ತನ್ನ ಮೇಲಧಿಕಾರಿಗೆ ತಿಳಿಸಿದಳು.  ನಮ್ಮನ್ನು ನೋಡಲು ಬಂದ ನಿವೃತ್ತ ಸೇನಾಧಿಕಾರಿಯೊಬ್ಬರು ನಮ್ಮೆಲ್ಲರ ವಿವರ ತಿಳಿದುಕೊಂಡು ಎಲ್ಲರಿಗೂ ಕೆಲಸ ಕೊಡುವುದಾಗಿ ಹೇಳಿದಾಗ ನಮಗೆ ಸ್ವರ್ಗ ಕೈಗೆ ಸಿಕ್ಕಷ್ಟು ಸಂತೋಷವಾಗಿತ್ತು!  ಬಂದಿದ್ದ ಹತ್ತೂ ಜನರಲ್ಲಿ ಪದವಿಯ ಜೊತೆಗೆ ಎನ್.ಸಿ.ಸಿ. ಪ್ರಮಾಣಪತ್ರವಿದ್ದ ನನ್ನನ್ನು ಮೇಲ್ವಿಚಾರಕನಾಗಿಯೂ, ಉಳಿದವರನ್ನೆಲ್ಲಾ ಭದ್ರತಾ ರಕ್ಷಕರನ್ನಾಗಿಯೂ ನೇಮಿಸಿಕೊಂಡು ನಮಗೆ ಇರಲು ವಸತಿ  ಹಾಗೂ ಊಟದ ವ್ಯವಸ್ಥೆಯಿರುವ ಕಡೆಯಲ್ಲಿಯೇ ಕೆಲಸಕ್ಕೆ ನಿಯೋಜಿಸುವ ಭರವಸೆಯನ್ನೂ ಕೊಟ್ಟಿದ್ದರು.

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕೆಲಸ ಕೊಡುವುದಿಲ್ಲವೆಂಬ ತಾತ್ಸಾರವನ್ನೇ ಕಂಡಿದ್ದ ನನಗೆ ಅಂದು ಈ ಭದ್ರತೆಯ ಲೋಕ ಆತ್ಮೀಯತೆಯಿಂದ ಕೈ ಬೀಸಿ ಕರೆದು, ಉದ್ಯೋಗವನ್ನು ನೀಡಿ, ಬದುಕುವ ದಾರಿಯನ್ನು ತೋರಿಸಿತ್ತು.  ಇದು ಕೇವಲ ನನ್ನೊಬ್ಬನ ಕಥೆಯಾಗಿರದೆ ನನ್ನಂತೆಯೇ ಅಸಹಾಯಕ ಪರಿಸ್ಥಿತಿಯಲ್ಲಿದ್ದ ಅದೆಷ್ಟೋ ನಿರುದ್ಯೋಗಿಗಳ ಕಥೆಯಾಗಿದೆ.  ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ, ಕೆಲಸ ಗಿಟ್ಟಿಸುತ್ತಾರೆ, ಜಗವೆಲ್ಲ ಮಲಗಿರಲು ಇವರು ಮಾತ್ರ ಎದ್ದಿರುತ್ತಾರೆ, ಎಲ್ಲರೂ ನಿಶ್ಚಿಂತೆಯಿಂದ ಮಲಗಿರುವಾಗ ಇವರು ಜಾಗ್ರತೆಯಿಂದ ಪರರ ವಸ್ತುಗಳನ್ನು, ಆಸ್ತಿಗಳನ್ನು, ಜೀವಗಳನ್ನು ಕಾಯುತ್ತಾರೆ!  ತಮ್ಮ ಕರ್ತವ್ಯದ ವೇಳೆಯಲ್ಲಿ ಅದೆಷ್ಟೋ ಜನ ಭದ್ರತಾ ರಕ್ಷಕರು ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ, ಮತ್ತೆ ಕೆಲವರು ಕಳ್ಳರ, ಕುತಂತ್ರಿಗಳ ಏಟಿಗೆ ಸಿಕ್ಕಿ ಸತ್ತಿದ್ದಾರೆ. ಇವರಿಗೆ ರಕ್ಷಣೆ ಮತ್ತು ಸಹಕಾರ ನೀಡಬೇಕಾದ ಆರಕ್ಷಕರು ಸಹಾ ಇವರೊಡನೆ ತುಂಬಾ ಅಮಾನವೀಯವಾಗಿ ವರ್ತಿಸಿದ ಉದಾಹರಣೆಗಳು ಸಾಕಷ್ಟಿವೆ. ಮುಂದಿನ ಲೇಖನಗಳಲ್ಲಿ ಅಂತಹ ಸಾಕಷ್ಟು ಸನ್ನಿವೇಶಗಳನ್ನು ವಿವರಿಸುತ್ತೇನೆ.

No comments: