Sunday, May 10, 2015

ಅಮ್ಮನ ದಿನದ ಕೆಲ ನೆನಪುಗಳು.


ನನ್ನ ಬಾಲ್ಯದ ದಿನಗಳಲ್ಲಿ ಅಪ್ಪ ಕೋಳಿ ಸಾಕುತ್ತಿದ್ದರು, ಬೆಳಿಗ್ಗೆಯಿಂದ ಸಂಜೆಯವರೆಗೂ ನಮ್ಮ ಹೋಟೆಲ್ಲಿನ ಸುತ್ತ ಮೇಯುತ್ತಿದ್ದ ಕೋಳಿಗಳು ಸಂಜೆಯಾಗುತ್ತಿದ್ದಂತೆ ಬಂದು ಅವುಗಳಿಗಾಗಿ ಅಪ್ಪ  ಇಡುತ್ತಿದ್ದ ಬುಟ್ಟಿಯೊಳಗೆ ಕೂರುತ್ತಿದ್ದವು. ಆ ಬುಟ್ಟಿಯ ಮೇಲೊಂದು ಮುಚ್ಚಳವನ್ನು ಮುಚ್ಚಿ ಮನೆಗೆ ಸಾಗಿಸುವ ಕೆಲಸ ನನ್ನದಾಗಿತ್ತು!  ಹಾಗಾಗಿ ಆ ಕೋಳಿಗಳೊಡನೆ ನನಗೊಂದು ಆತ್ಮೀಯ ಭಾವ ಬೆಳೆದು ಬಿಟ್ಟಿತ್ತು.  ಗರ್ವದಿಂದ ನಡೆಯುತ್ತಿದ್ದ ಗಂಡು ಕೋಳಿ ಹುಂಜ ಹೆಣ್ಣು ಕೋಳಿಯ ಮೇಲೇರಿದಾಗ ಕೋಪದಿಂದ ನಾನು ಅಟ್ಟಾಡಿಸಿಕೊಂಡು ಹೋಗುತ್ತಿದ್ದೆ!  ಇದನ್ನು ಕಂಡ ನನ್ನ ಗೆಳೆಯರೆಲ್ಲ ಶಾಲೆಯಲ್ಲಿ ನನ್ನನ್ನು "ಮಂಜಾ,,ಮಂಜಾ,,ಕೋಳಿ ಹುಂಜಾ" ಎಂದು ಮೂದಲಿಸಿ ಆಡಿಕೊಂಡು ನಗುತ್ತಿದ್ದರು!  ಆಗೆಲ್ಲ ನನಗೆ ಬರುತ್ತಿದ್ದ ಕೋಪವನ್ನು ನಾನು ಸಂಜೆಯ ಹೊತ್ತು ಬುಟ್ಟಿಯಲ್ಲಿ ಬಂದು ಕುಳಿತ ಕೋಳಿ ಹುಂಜದ ತಲೆಯ ಮೇಲೆ ಹೊಡೆದು ತೀರಿಸಿಕೊಳ್ಳುತ್ತಿದ್ದೆ!  ಒಮ್ಮೆ ದೊಡ್ಡ ಹುಂಜವೊಂದು ನಾನದರ ತಲೆಯ ಮೇಲೆ ಮೊಟಕಿದಾಗ ನನ್ನ ಕೈಯನ್ನು ಕುಟುಕಿ ಗಾಯವನ್ನೂ ಮಾಡಿತ್ತು.  ಆಗ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ಅಮ್ಮ ನನ್ನ ಗಾಯಕ್ಕೆ ಮದ್ದು ಹಚ್ಚಿ, ಬ್ಯಾಂಡೇಜು ಬಟ್ಟೆ ಕಟ್ಟಿ, ಕೋಳಿ ಹುಂಜದ ಮೇಲೆ ನನಗಿದ್ದ ಕೋಪವನ್ನು ಶಮನಗೊಳಿಸುತ್ತಿದ್ದರು.   ಪೆರೇಸಂದ್ರದ ಸಂತೆಯ ದಿನ ಬುಡೇನ್ ಸಾಬಿ ಕೋಳಿಗಳನ್ನು ಕೊಳ್ಳಲು ಬಂದಾಗ ಮೊದಲು ಆ ಗರ್ವದ  ಹುಂಜವನ್ನು ಮಾರಿಬಿಡುವಂತೆ ನಾನು ಅಪ್ಪನಿಗೆ ದುಂಬಾಲು ಬೀಳುತ್ತಿದ್ದೆ!  ಆದರೆ ಕಿಲಾಡಿ ಅಪ್ಪ, ಹೆಣ್ಣು ಕೋಳಿಗಳನ್ನು ಮಾತ್ರ ಮಾರಿ ಹುಂಜವನ್ನು ಹಾಗೆಯೇ ಉಳಿಸಿಕೊಳ್ಳುತ್ತಿದ್ದರು.  

ಒಮ್ಮೆ ಹೆಣ್ಣು ಕೋಳಿ ಮೊಟ್ಟೆಗಳನ್ನಿಟ್ಟು ಮರಿ ಮಾಡಿದರೆ ಹದಿನೈದರಿಂದ ಇಪ್ಪತ್ತು ಮರಿಗಳಾಗುತ್ತಿದ್ದವು, ಆ ಪುಟ್ಟ ಪುಟ್ಟ ಕೋಳಿಮರಿಗಳೊಡನೆ ಆಡುವುದು ನನ್ನ ನೆಚ್ಚಿನ ಅಭ್ಯಾಸವಾಗಿತ್ತು.  ಹಾಗೆ ಮರಿಗಳನ್ನು ಆ ತಾಯಿ ಕೋಳಿ ಕಾಪಾಡುತ್ತಿದ್ದ ರೀತಿ, ಬಾಲ್ಯದ ದಿನಗಳಿಂದಲೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಮೇಲಿಂದ ಹಾರಿ ಬರುವ ಹದ್ದು  ಎಲ್ಲಿ ತನ್ನ ಮರಿಗಳನ್ನು  ಹಾರಿಸಿಕೊಂಡು ಹೋಗಿಬಿಡುತ್ತದೋ ಎಂದು ಆಕಾಶಕ್ಕೆ ಮುಖ ಮಾಡಿ ಗುಟುರು ಹಾಕುತ್ತಾ, ತನ್ನದೇ ಭಾಷೆಯಲ್ಲಿ ತನ್ನ ಮರಿಗಳೊಡನೆ ಸಂಭಾಷಿಸುತ್ತಾ ತನ್ನೊಡನೆಯೇ ಇರುವಂತೆ ನೋಡಿಕೊಳ್ಳುತ್ತಿದ್ದ ರೀತಿಯಂತೂ ಅನನ್ಯ.  ತನ್ನ ಕಾಲುಗಳಿಂದ ನೆಲವನ್ನು ಕೆದರಿ, ಏನಾದರೂ ಕಾಳುಗಳಿದ್ದಲ್ಲಿ ಮರಿಗಳಿಗೆ ತಿನ್ನಲು ಅವಕಾಶ ಮಾಡಿ ಕೊಡುತ್ತಿದ್ದ ರೀತಿಯಂತೂ ಅದ್ಭುತ!  ಒಮ್ಮೆ ಮರಿಯೊಂದನ್ನು ನುಂಗಲು ಬಂದ ಹಸಿದ ಹಾವಿನೊಡನೆ ಸೆಣಸಿ ಹಾವನ್ನು ಕೊಂದು ತನ್ನ ಮರಿಗಳನ್ನು ರಕ್ಷಿಸಿದ ಒಂದು ಕೋಳಿಯ ಚಿತ್ರವಂತೂ ಈಗಲೂ ಕಣ್ಣಿಗೆ ಕಟ್ಟಿದಂತಿದೆ!  ಬೆಳಿಗ್ಗೆ ಎದ್ದರೆ ಅಮ್ಮ ಬೇಗನೆ ಸಿದ್ಧರಾಗಿ  ತಮ್ಮ ಕೆಲಸಕ್ಕೆ ಹೊರಡುತ್ತಿದ್ದರು, ನಾನು ಮತ್ತು ನನ್ನಕ್ಕ ಶಾಲೆಗೆ ಹೋಗಲು ಸಿದ್ಧರಾಗಿ  ಹೋಟೆಲ್ಲಿಗೆ ಬಂದು ತಿಂಡಿ ತಿಂದು ನಂತರ ಶಾಲೆಗೇ ಹೋಗುತ್ತಿದ್ದೆವು.  ಮತ್ತೆ ನಮಗೆ ಅಮ್ಮನ ಸಂಜೆ ಶಾಲೆಯಿಂದ ಬಂದ ನಂತರವೇ!  ಕೆಲವೊಮ್ಮೆ ಗರ್ಭನಿರೋಧಕ  ಶಸ್ತ್ರಚಿಕಿತ್ಸಾ ಶಿಬಿರ ಅಥವಾ ನೇತ್ರಚಿಕಿತ್ಸಾ ಶಿಬಿರಗಳು ನಡೆದಾಗ ಅಮ್ಮನಿಗೆ ರಾತ್ರಿ ಡ್ಯೂಟಿ ಬೀಳುತ್ತಿತ್ತು.  ಆಗೆಲ್ಲ ಅಕ್ಕನೇ ನನಗೆ ಅಮ್ಮನಾಗಿ ಬಿಡುತ್ತಿದ್ದಳು. ಆಗ ನಾನು ಅಕ್ಕನನ್ನು ತಬ್ಬಿಕೊಂಡು ಬುಟ್ಟಿಯಲ್ಲಿದ್ದ ತಾಯಿ ಕೋಳಿಯನ್ನು ತೋರಿಸಿ ಹೇಳುತ್ತಿದ್ದೆ,,,,,ಆ ತಾಯಿಕೋಳಿಯಂತೆ ಅಮ್ಮನೂ ಇಲ್ಲಿ, ನಮ್ಮ ಜೊತೆಯಲ್ಲಿ ಇದ್ದಿದ್ದರೆ ನಾವೂ ಆ ಕೋಳಿ ಮರಿಗಳ ರೀತಿಯೇ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಬಹುದಿತ್ತಲ್ಲವೇ?  ಆಗ ಅಕ್ಕ ನನ್ನನ್ನು ಇನ್ನೂ ಬಲವಾಗಿ ತಬ್ಬಿಕೊಂಡು ಮುದ್ದಾಡಿ ಮಲಗಿಸುತ್ತಿದ್ದಳು. 

ಈಗಲೂ ನನಗೆ ಎಲ್ಲಿಯಾದರೂ ತಾಯಿಕೋಳಿ ಹಾಗೂ ಪುಟ್ಟ ಮರಿಗಳನ್ನು ಕಂಡ ತಕ್ಷಣ ಆ ನನ್ನ ಬಾಲ್ಯದ ದಿನಗಳು, ಆ ಕೋಳಿಯ ಕಥೆಗಳು, ನನ್ನ ಅಕ್ಕ, ಅಮ್ಮನ ಪ್ರೀತಿ ಎಲ್ಲವೂ ನೆನಪಾಗುತ್ತದೆ.  ಆದರೆ ನಿರ್ದಯಿ ವಿಧಿಯ ಅಟ್ಟಹಾಸದಲ್ಲಿ ಈಗ ಅಮ್ಮನೂ ಇಲ್ಲ, ಅಕ್ಕನೂ ಇಲ್ಲ!  ಅವರಿಬ್ಬರೂ ಈಗ ಕೇವಲ ನೆನಪುಗಳು ಮಾತ್ರ!  ಅಮ್ಮಂದಿರ ದಿನದಂದು ವಿಶ್ವದ ಎಲ್ಲ ಅಮ್ಮಂದಿರಿಗೂ ಹೃದಯಪೂರ್ವಕವಾದ ಹಾರ್ದಿಕ ಶುಭಾಶಯಗಳು.  ಎಲ್ಲೆಡೆಯೂ ತಾನು ಇರಲಾಗದ ಅಸಹಾಯಕತೆಯನ್ನು ದೇವರು ಅಮ್ಮನನ್ನು ಸೃಷ್ಟಿಸುವ  ಮೂಲಕ ಪರಿಹರಿಸಿಕೊಂಡ ಎನ್ನುತ್ತಾರೆ ತಿಳಿದವರು. ಆ ಮಾತೃಶಕ್ತಿಗೆ ನನ್ನ ನಮನಗಳು.  

No comments: