Thursday, May 7, 2015

ಭದ್ರತೆಯ ಲೋಕದಲ್ಲಿ - ೫

ಹೊಸಕೋಟೆಯ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿನ ಯಶಸ್ವಿ ಕಾರ್ಯ ನಿರ್ವಹಣೆಯಿಂದ ಸಂಸ್ಥೆಯಲ್ಲಿ ಎಲ್ಲರ ಕಣ್ಣು ನಮ್ಮ ಮೇಲಿತ್ತು.  ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರು ಯಾವುದೇ ಹೊಸ, ಮುಖ್ಯವಾದ ಸಂಸ್ಥೆಯ ಭದ್ರತಾ ಗುತ್ತಿಗೆ ಸಿಕ್ಕಿದಲ್ಲಿ ನಮ್ಮನ್ನು ಮೊದಲು ಭಡ್ತಿ ನೀಡುವುದಾಗಿ ಭರವಸೆ ಕೊಟ್ಟಿದ್ದರು.  ಬರಲಿರುವ ಪದೋನ್ನತಿಯ ಕನಸಿನಲ್ಲಿ ದಿನಗಳು ಕಳೆಯುತ್ತಿದ್ದವು, ಕೊನೆಗೂ ದಿನ ಬಂದೇ ಬಿಟ್ಟಿತು!  ಚಿಕ್ಕಬಳ್ಳಾಪುರದಿಂದ ಸುಮಾರು ೧೫ ಕಿಂಈ. ದೂರದಲ್ಲಿ ನಂದಿಬೆಟ್ಟದ ತಪ್ಪಲಿನಲ್ಲಿದ್ದ ಒಂದು ಪ್ರಖ್ಯಾತ ರೇಷ್ಮೆ ಕಾರ್ಖಾನೆಯ ಭದ್ರತಾ ರಕ್ಷಣೆಗಾಗಿ ಉತ್ತಮ ವೇತನದೊಡನೆ ನನ್ನನ್ನು ನಿಯೋಜಿಸಿದ್ದರು.  ನನ್ನ ಜೊತೆಗೆ ನನಗೆ ಆಪ್ತರಾಗಿದ್ದ ಹಲವರನ್ನು ಸಹಾಯಕರನ್ನಾಗಿ ಕಳುಹಿಸಿದ್ದರು. ಅಲ್ಲಿ ಕಳ್ಳತನಗಳಿಗಿಂತ ಹೆಚ್ಚಾಗಿ, ಸುತ್ತ ಮುತ್ತಲಿನ ಹಳ್ಳಿಗಳಿಂದ ಬರುತ್ತಿದ್ದ ಕಾರ್ಮಿಕರ ಅಶಿಸ್ತು, ಕಾರ್ಖಾನೆಯ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿತ್ತು.  ಯಾರಿಗೂ ಹೆದರದ, ಸಂಸ್ಥೆಯ ಯಾವುದೇ ನಿಯಮಾವಳಿಗಳನ್ನು ಪಾಲಿಸದ, ಗೂಂಡಾ ವರ್ತನೆಯ ಕಾರ್ಮಿಕರ ದೊಡ್ಡ ದಂಡೇ ಅಲ್ಲಿತ್ತು!  ಸಣ್ಣಪುಟ್ಟ ವಿಚಾರಗಳಿಗೂ, ಜಗಳ, ವಾಗ್ವಾದಗಳು ಸಾಮಾನ್ಯವಾಗಿದ್ದವು, ಅವರನ್ನು ನಿಯಂತ್ರಿಸಲು ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿಗಳು ಹಾಗೂ ವ್ಯವಸ್ಥಾಪಕರು ಸಹ ಭಯ ಬೀಳುತ್ತಿದ್ದರು.  ಇದು ನಿಜಕ್ಕೂ ನನ್ನ ಅನುಭವಕ್ಕೆ ಹಾಗೂ ಸಾಹಸಿ ಮನೋಭಾವಕ್ಕೆ ದೊಡ್ಡ ಸವಾಲೇ  ಆಗಿತ್ತು. 

ಕಾರ್ಖಾನೆಯ ಆವರಣದಲ್ಲಿಯೇ ನಮಗೆ ಇರಲು ವಸತಿಯ ವ್ಯವಸ್ಥೆಯಿತ್ತು. ದಿನಕ್ಕೆರಡು ಬಾರಿ ಟೀ ಮಾತ್ರ ಕಾರ್ಖಾನೆಯಲ್ಲಿ ಸಿಗುತ್ತಿತ್ತು, ಉಳಿದಂತೆ ಊಟ ತಿಂಡಿಯ ವ್ಯವಸ್ಥೆ ನಮ್ಮದೇ ಆಗಿತ್ತು.  ಅಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಐದು ನೂರು ಕಾರ್ಮಿಕರು ಕೆಲಸಕ್ಕೆ ಬರುವಾಗ ಮನೆಯಿಂದಲೇ ಊಟ ತರುತ್ತಿದ್ದರು, ಕೆಲವೊಮ್ಮೆ ಮನೆಯವರು ಮಧ್ಯಾಹ್ನದ ಹೊತ್ತಿಗೆ ಊಟದ ಡಬ್ಬಿ ತಂದು ಕೊಡುತ್ತಿದ್ದರು!  ಹೀಗಿರುವಾಗ ಒಮ್ಮೆ ನಡೆದ ಘಟನೆಯೊಂದು ಕಾರ್ಖಾನೆಯ ಶಾಂತಿಯನ್ನು ಕಲಕಿ ಬೀಗ ಹಾಕುವ ಪ್ರಸಂಗ ಬಂದೊದಗಿತ್ತು!  ಅದು ನಂದಿಬೆಟ್ಟದ ತಪ್ಪಲು ಪ್ರದೇಶವಾಗಿದ್ದುದರಿಂದ ಕೋತಿಗಳ ಸಂಖ್ಯೆ ಹೆಚ್ಚಾಗಿತ್ತು.  ನಮ್ಮ ಭದ್ರತಾ ತಂಡದವರು ತಾವು ಊಟ ಮಾಡು ಉಳಿದಿದ್ದನ್ನು ದಿನವೂ ತಪ್ಪದೆ ನಾಯಿಗಳಿಗೆ ಆಹಾರವಾಗಿ ಕೊಡುತ್ತಾ, ಸುಮಾರು ಐದಾರು ನಾಯಿಗಳನ್ನು ತಮ್ಮ ಸ್ವಂತ ನಾಯಿಗಳಂತೆ ಸಾಕಿಕೊಂಡಿದ್ದರು!  ಅವೂ ಸಹಾ ಪ್ರತಿನಿತ್ಯ ಪೊಗದಸ್ತಾಗಿ ಊಟ ಸಿಗುತ್ತಿದ್ದುದರಿಂದ ಕಾರ್ಖಾನೆಯ ಆವರಣವನ್ನು ಬಿಟ್ಟು ಹೊರಗೆ ಹೋಗದೆ, ತಮಗೆ ಊಟ ಹಾಕುತ್ತಿದ್ದ ಭದ್ರತಾ ರಕ್ಷಕರಿಗೆ ಅತೀವ ಸ್ವಾಮಿ ನಿಷ್ಠೆ ತೋರುತ್ತಾ ಅಲ್ಲಿಯೇ ಶಾಶ್ವತವಾಗಿ ನೆಲೆಸಿದ್ದವು.  ಹಗಲಿನಲ್ಲಿ ಸುಮ್ಮನಿದ್ದರೂ  ರಾತ್ರಿ ಸಮಯದಲ್ಲಿ ಮಾತ್ರ ಅತ್ಯಂತ ಜಾಗರೂಕತೆಯಿಂದ ಭದ್ರತಾ ರಕ್ಷಕರೊಡನೆ ಎಚ್ಚರವಾಗಿದ್ದು ಕಾರ್ಖಾನೆಗೆ ರಕ್ಷಣೆ ನೀಡುತ್ತಿದ್ದವು.

ಒಮ್ಮೆ ಕೋತಿಗಳ ಗುಂಪೊಂದು ಆಹಾರ ಹುಡುಕುತ್ತಾ ಕಾರ್ಖಾನೆಯ ಆವರಣದೊಳಕ್ಕೆ ಬಂದಾಗ ಐದಾರು ನಾಯಿಗಳು ಅವುಗಳ ಮೇಲೆ ಧಾಳಿ ಮಾಡಿದ್ದವು, ಆಗ ಎರಡೂ ಗುಂಪುಗಳ ನಡುವೆ ಪ್ರಬಲ ಹೋರಾಟವೇ ನಡೆದು, ಕೋತಿಯೊಂದು ಮರಣ ಹೊಂದಿತ್ತು!  ಇದನ್ನು ಗಮನಿಸಿದ ಕಾರ್ಮಿಕರಲ್ಲಿ ಒಂದು ಸಂಚಲನವೇ ಸೃಷ್ಟಿಯಾಗಿ, ಸ್ವಲ್ಪ ಸಮಯದಲ್ಲೇ ಕಾರ್ಖಾನೆಯ ಎಲ್ಲಾ ಕಾರ್ಮಿಕರು ಕೋತಿ ಸತ್ತ ಜಾಗದಲ್ಲಿ ಜಮಾಯಿಸಿದ್ದರು. ಇಲ್ಲಿ ಒಂದು ವಿಚಾರ ಹೇಳಲು ಬಯಸುತ್ತೇನೆ, ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚು ಶ್ರೀರಾಮ ಮಂದಿರಗಳು ಇರುವುದು ನಮ್ಮ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ!  ಅಲ್ಲದೆ ಇಲ್ಲಿನ ಜನ ಕೋತಿಯನ್ನು ಹನುಮಂತನ ಅಪರಾವತಾರವೆಂದೇ ಭಾವಿಸಿ ಪೂಜಿಸುತ್ತಾರೆ!  ಅಂದು ಶನಿವಾರ ಬೇರೆ, ಮೊದಲೇ ಆಂಜನೇಯನ ಭಕ್ತರಾಗಿದ್ದ ಕಾರ್ಮಿಕರು, ತಮ್ಮ ಕಾರ್ಖಾನೆಯ ಆವರಣದಲ್ಲಿಯೇ ಕೋತಿಯೊಂದು ನಾಯಿಗಳಿಂದ ಸತ್ತಿದ್ದನ್ನು ಕಂಡು ವ್ಯಗ್ರರಾಗಿದ್ದರು.  ಸತ್ತ ಕೋತಿಯ ಶರೀರವನ್ನು ಏನು ಮಾಡುವುದೆಂದು ಅವರವರಲ್ಲಿಯೇ ಚರ್ಚೆಯಾಗಿ, ಕೊನೆಗೆ ಅದನ್ನು ಕಾರ್ಖಾನೆಯ ಆವರಣದಲ್ಲಿಯೇ ಸಮಾಧಿ ಮಾಡಿ, ಚಿಕ್ಕದೊಂದು ಗುಡಿ ಕಟ್ಟಬೇಕೆಂದು ಒಕ್ಕೊರಲಿನಿಂದ ತೀರ್ಮಾನಿಸಿದರು. ಭದ್ರತಾ ಮುಖ್ಯಸ್ಥನಾಗಿದ್ದ ನನ್ನ ಬಳಿಗೆ ಬಂದ ಕಾರ್ಮಿಕರ ಗುಂಪನ್ನು ಸಮಾಧಾನಗೊಳಿಸಿ, ಅವರಲ್ಲಿ ಒಂದಿಬ್ಬರು ವಯಸ್ಕರನ್ನು ಕರೆದು, ನೀವಿಬ್ಬರು ಮಾತ್ರ ಕಾರ್ಖಾನೆಯ ಮುಖ್ಯಸ್ಥರ ಬಳಿಗೆ ಹೋಗಿ ವಿನಂತಿಸಿಕೊಌ, ಎಲ್ಲರೂ ಹೋಗಬೇಡಿ ಎಂದು ಸಲಹೆ ನೀಡಿ ಕಳುಹಿಸಿದೆ.  ನನ್ನ ಸಲಹೆಯಂತೆ ಇಬ್ಬರು ಹಿರಿಯ ಕಾರ್ಮಿಕರು ಮಾತ್ರ ವ್ಯವಸ್ಥಾಪಕರ ಕೊಠಡಿಗೆ ಹೋಗಿ ನಡೆದದ್ದನ್ನೆಲ್ಲ ವಿವರಿಸಿ, ಕಾರ್ಖಾನೆಯ ಆವರಣದಲ್ಲಿ ಚಿಕ್ಕದೊಂದು ಗುಡಿಯನ್ನು ಕಟ್ಟಲು ಅನುಮತಿ ನೀಡಬೇಕೆಂದು, ಅದಕ್ಕೆ ಬೇಕಾದ ಹಣಕಾಸಿನ ನೆರವನ್ನು ಸಂಸ್ಥೆಯಿಂದ ಒದಗಿಸಬೇಕೆಂದು ಭಿನ್ನವಿಸಿದ್ದರು.

ಕಾರ್ಖಾನೆಯ ವ್ಯವಸ್ಥಾಪಕ ಬಿಜಾಪುರದ ಕಡೆಯವನು, ಬಿಸಿರಕ್ತದ ಯುವಕ, ಅಷ್ಟೇನೂ ಅನುಭವವಿರಲಿಲ್ಲ!  ಕಾರ್ಮಿಕರ ವಿನಂತಿಯನ್ನು ಕೇಳಿ, ಸಿಟ್ಟಿಗೆದ್ದು, ಹೋಗಿ ನಿಮ್ಮ ಕೆಲಸ ನೋಡಿ, ಇವೆಲ್ಲ ತರಲೆ ಮಾತು ತೊಗೊಂಡು ನನ್ನ ಹತ್ತಿರ ಬರಬೇಡಿ, ಸಂಸ್ಥೆ ನಿಮಗೆ ಸಂಬಳ ಕೊಡುತ್ತಿರುವುದು ದೇವಸ್ಥಾನ ಕಟ್ಟುವುದಕ್ಕಲ್ಲ ಎಂದು ದಬಾಯಿಸಿ ಆಚೆಗಟ್ಟಿದ್ದಾನೆ. ಹಾಗೆ ಅವಮಾನಿತರಾಗಿ ಬಂದ ಹಿರಿಯ ಕಾರ್ಮಿಕರು ಮಧ್ಯಾಹ್ನ ಊಟದ ಬಿಡುವಿನಲ್ಲಿ ಎಲ್ಲರೊಂದಿಗೆ ವ್ಯವಸ್ಥಾಪಕರಿಂದ ತಮಗಾದ ಅವಮಾನದ ಬಗ್ಗೆ ಹೇಳಿಕೊಂಡಿದ್ದಾರೆ,  ಸತ್ತ ಕೋತಿಯ ದೇಹ ಇನ್ನೂ ಕಾರ್ಖಾನೆಯ ಆವರಣದಲ್ಲಿಯೇ ಇದೆ, ಮುಂದೆ ಏನು ಮಾಡಬೇಕೆಂದು ಚರ್ಚಿಸಿದ್ದಾರೆ!  ಎಲ್ಲರೂ ಒಮ್ಮತದಿಂದ ದೇವಸ್ಥಾನ ಕಟ್ಟಲು ಅವಕಾಶ ಕೊಡುವ ತನಕ ಕೆಲಸ ಮಾಡುವುದ ಬೇಡವೆಂದು ತೀರ್ಮಾನಿಸಿದ್ದಾರೆ!  ಊಟವಾದ ನಂತರ ಬಿಡುವಿನಲ್ಲಿ ನಿಂತಿದ್ದ ಯಂತ್ರಗಳು ಮತ್ತೆ ಚಾಲನೆಗೊಳ್ಳಲೇ ಇಲ್ಲ!  ಎಲ್ಲರೂ ಒಗ್ಗಟ್ಟಿನಿಂದ ವ್ಯವಸ್ಥಾಪಕರ ಕಛೇರಿಯ ಮುಂಭಾಗದಲ್ಲಿ ಕುಳಿತುಬಿಟ್ಟರು!   ಆಗ ತಾನೇ ಊಟ ಮುಗಿಸಿ ಬಂದ ಚಿಗುರುಮೀಸೆಯ ವ್ಯವಸ್ಥಾಪಕನಿಗೆ ತಕ್ಷಣ ಏನು ಮಾಡಬೇಕೆಂದು ತಿಳಿಯದಂತಾಗಿ, ಮಾನವ ಸಂಪನ್ಮೂಲ ಅಧಿಕಾರಿ ಹಾಗೂ ಭದ್ರತಾ ಮುಖ್ಯಸ್ಥನಾಗಿದ್ದ ನನ್ನನ್ನು ತಮ್ಮ ಕಚೇರಿಗೆ ಬರಲು ಆದೇಶಿಸಿದ್ದ.  ನಾವು ಏನೇ ಮಾತಾಡಿದರೂ, ಯಾವ ರೀತಿಯಲ್ಲಿ ಸಂಧಾನಕ್ಕೆ ಪ್ರಯತ್ನಿಸಿದರೂ ಕಾರ್ಮಿಕರು ಮಾತ್ರ ತಮ್ಮ ಪಟ್ಟು ಸಡಿಲಿಸಲಿಲ್ಲ!  ಹನುಮಂತ ನಮ್ಮ ಆರಾಧ್ಯ ದೈವ, ಅವನ ಗುಡಿ ಕಟ್ಟಲು ಅವಕಾಶ ನೀಡುವವರೆಗೂ ಯಾವುದೇ ಕಾರಣಕ್ಕೂ ನಾವು ಕೆಲಸ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿದರು.  ಸ್ವಲ್ಪ ಸಮಯ ಕಾಲಾವಕಾಶ ಕೇಳಿದ ವ್ಯವಸ್ಥಾಪಕ ಬೆಂಗಳೂರಿನಲ್ಲಿದ್ದ ಕೇಂದ್ರ ಕಛೇರಿಗೆ ಫೋನ್ ಮಾಡಿ, ಎಲ್ಲ ವಿದ್ಯಮಾನಗಳನ್ನೂ ತನ್ನ ಮೇಲಧಿಕಾರಿಗಳಿಗೆ ವರದಿ ಮಾಡಿದ್ದಾನೆ, ಅಲ್ಲಿಂದ ಯಾವುದೇ ಕಾರಣಕ್ಕೂ ಕಾರ್ಮಿಕರ ಬೇಡಿಕೆಗೆ ಬಗ್ಗಬಾರದೆಂದೂ, ಕೆಲಸ ಮಾಡಲು ಒಪ್ಪದ ಕಾರ್ಮಿಕರನ್ನು ಕಾರ್ಖಾನೆಯ ಆವರಣದಿಂದ ಹೊರಗೆ ಕಳುಹಿಸಬೇಕೆಂದು ಆದೇಶ ಬಂದಿತ್ತು!

ಮೇಲಧಿಕಾರಿಗಳ ಆದೇಶದಂತೆ ಕೆಲಸ ಮಾಡಲು ನಿರಾಕರಿಸಿದ ಎಲ್ಲ ಕಾರ್ಮಿಕರನ್ನು ಹೊರಗೆ ಕಳುಹಿಸಿ, ಕಾರ್ಖಾನೆಯ ಆಸ್ತಿ ಪಾಸ್ತಿಗೆ, ಯಂತ್ರೋಪಕರಣಗಳಿಗೆ ಹಾನಿಯಾಗದಂತೆ ಜೋಪಾನ ಮಾಡುವುದು ನಮ್ಮ ಕರ್ತವ್ಯವಾಗಿತ್ತು! ಸುಮಾರು ಐದುನೂರಕ್ಕೂ ಹೆಚ್ಚಿದ್ದ ಕಾರ್ಮಿಕರನ್ನು ಕೇವಲ ಇಪ್ಪತ್ತೈದು ಮಂದಿ ಭದ್ರತಾ ಸಿಬ್ಬಂದಿ ನಿಯಂತ್ರಿಸುವುದು ಕಷ್ಟಸಾಧ್ಯವಾಗಿತ್ತು.  ಕೆಲವು ಯುವಕರು ಸತ್ತ ಕೋತಿಯ ದೇಹವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು "ಆಂಜನೇಯ ಸ್ವಾಮೀಕಿ ಜೈ, ಹನುಮಾನ್ ಮಹಾರಾಜ್ ಕೀ ಜೈ" ಎಂದು ಕುಣಿಯುತ್ತಿದ್ದರು.  ಸಂಸ್ಥೆಯ ವ್ಯವಸ್ಥಾಪಕರ ಮೇಲೆ ಅಸಮಾಧಾನವಿದ್ದ ಕೆಲವರು ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡು ಸಂಸ್ಥೆಯ ವಿರುದ್ಧ, ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು!  ಕಾರ್ಖಾನೆಯ ಆವರಣದಲ್ಲಿ ಒಮ್ಮೆಲೇ ಉದ್ವೇಗದ ವಾತಾವರಣ ಸೃಷ್ಟಿಯಾಗಿ, ಕಾರ್ಮಿಕರೆಲ್ಲರೂ ಸಮೂಹಸನ್ನಿಗೆ ಒಳಗಾದಂತೆ ವರ್ತಿಸುತ್ತಿದ್ದರು!  ಯಾವುದೇ ಸಮಯದಲ್ಲಿಯೂ ಅನಾಹುತವಾಗಬಹುದಾದ ಸಾಧ್ಯತೆಗಳಿದ್ದವು!  ಸಮಯದಲ್ಲಿ ಹಿರಿಯರಾಗಿದ್ದ ಒಂದಷ್ಟು ಜನ ಕಾರ್ಮಿಕರೊಡನೆ ತೆಲುಗಿನಲ್ಲಿ ಮಾತನಾಡಿ, ಸತ್ತ ಕೋತಿಯನ್ನು ಕಾರ್ಖಾನೆಯ ಆಚೆ ರಸ್ತೆ ಬದಿಯಲ್ಲಿ ಹೂತು ಅಲ್ಲಿಯೇ ಒಂದು ಕಲ್ಲು ನೆಟ್ಟು ಸಧ್ಯಕ್ಕೆ ಸಮಾಧಿ ಮಾಡುವಂತೆಯೂ, ಆಡಳಿತ ಮಂಡಲಿಯೊಡನೆ ಸಂಧಾನವೇರ್ಪಟ್ಟು, ಹಣಕಾಸಿನ ವ್ಯವಸ್ಥೆ ಆದ ನಂತರ ಅಲ್ಲಿಯೇ ಒಂದು ಗುಡಿ ಕಟ್ಟುವಂತೆಯೂ ಸಲಹೆ ನೀಡಿದ್ದೆ!  ಅದಕ್ಕೆ ಸಮ್ಮತಿಸಿದ ಅವರುಗಳು ಎಲ್ಲರನ್ನೂ ಕಾರ್ಖಾನೆಯ ಮುಖ್ಯದ್ವಾರದೆದುರಿನ ರಸ್ತೆಯ ಆಚೆ ಬದಿಗೆ ಕರೆದೊಯ್ದು, ಅಲ್ಲಿಯೇ ಹಳ್ಳ ತೋಡಿ, ಕೋತಿಯನ್ನು ಸಮಾಧಿ ಮಾಡಿ, ದೊಡ್ಡದೊಂದು ಕಲ್ಲು ನೆಟ್ಟು, ಯಾರದ್ದೋ ಮನೆಯಿಂದ ಹೂವು, ಹಣ್ಣು, ಕಾಯಿ, ಅರಿಶಿನ, ಕುಂಕುಮ, ಕಡ್ಡಿ ಕರ್ಪೂರ ಎಲ್ಲಾ ತರಿಸಿ ಪೂಜೆಯನ್ನೂ ಮಾಡಿಬಿಟ್ಟರು!  ಮಹಾಪೂಜೆಯಾದ ನಂತರ ಭಕ್ತನೊಬ್ಬ ತಂದಿದ್ದ ಕಳ್ಳೆಪುರಿಯನ್ನು ಎಲ್ಲರಿಗೂ ಹಂಚಿ, ಕಾರ್ಖಾನೆಯ ಆಡಳಿತ ಮಂಡಳಿ ಅಲ್ಲಿ ಹನುಮಂತನ ದೇಗುಲ ಕಟ್ಟಲು ಹಣಕಾಸು ಸಹಾಯ ಮಾಡಬೇಕು, ಜೊತೆಗೆ ಬಾಕಿಯಿದ್ದ ತಮ್ಮ ವೇತನ, ಭತ್ಯೆ, ಬೋನಸ್ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕು, ಅಲ್ಲಿಯವರೆಗೂ ಯಾರೂ ಕಾರ್ಖಾನೆಯ ಆವರಣದೊಳಕ್ಕೆ ಕಾಲಿಡಬಾರದೆಂದು ತೀರ್ಮಾನಿಸಿದ್ದರು.  ಹಿರಿಯ ಕರ್ಮಿಕರಿಬ್ಬರು ಕಾರ್ಖಾನೆಯ ವ್ಯವಸ್ಥಾಪಕರ ಬಳಿಗೆ ತೆರಳಿ,ತಮ್ಮ ಬೇಡಿಕೆ ಈಡೇರುವವರೆಗೂ ತಾವು ಕೆಲಸ ಮಾಡುವುದಿಲ್ಲವೆಂದು ತಿಳಿಸಿ ಬಂದಿದ್ದರು.  ಅವರು ಬರುವ ತನಕ ಉಳಿದ ಕಾರ್ಮಿಕರೆಲ್ಲ ಕಾರ್ಖಾನೆಯ ಮುಖ್ಯದ್ವಾರದ ಮುಂದೆ ನಿಂತು ಘೋಷಣೆಗಳನ್ನು ಕೂಗುತ್ತಿದ್ದರು.  ಇದರಿಂದಾಗಿ ಕಾರ್ಖಾನೆಯ ಮುಂದೆ ಹಾದು ಹೋಗಿದ್ದ ಚಿಕ್ಕಬಳ್ಳಾಪುರ - ದೊಡ್ಡಬಳ್ಳಾಪುರ ರಸ್ತೆಯಲ್ಲಿ ಸಂಚಾರ ಬಂದ್ ಆಗಿ ಕಿಲೋಮೀಟರುಗಟ್ಟಲೆ ವಾಹನಗಳು ಸಾಲಾಗಿ ನಿಂತುಬಿಟ್ಟಿದ್ದವು! 
ಪ್ರತಿನಿತ್ಯ ನೂರಾರು ಕಾರ್ಮಿಕರ ಮಾತು, ನಗೆ, ಓಡಾಟಗಳಿಂದ ನಳನಳಿಸುತ್ತಿದ್ದ ಕಾರ್ಖಾನೆ ಒಮ್ಮೆಗೇ ಖಾಲಿ ಖಾಲಿಯಾಗಿತ್ತು!  ವಿದೇಶದಿಂದ ಆಮದಾಗಿದ್ದ ದೊಡ್ಡ ದೊಡ್ಡ ಯಂತ್ರಗಳು ಒಮ್ಮೆಗೇ ಸ್ತಬ್ಧವಾಗಿ ನಿಂತುಬಿಟ್ಟಿದ್ದವು! ಕಾರ್ಖಾನೆಯ ವ್ಯವಸ್ಥಾಪಕನೊಡನೆ ಕಛೇರಿಯಲ್ಲಿದ್ದ ಕೆಲವು ಅಧಿಕಾರಿಗಳು ಹಾಗೂ ಸಹಾಯಕರ ಮುಖದಲ್ಲಿ ಪ್ರೇತಕಳೆ ಎದ್ದು ಕಾಣುತ್ತಿತ್ತು!  ಎಲ್ಲರ ಮುಖದಲ್ಲೂ ಮುಂದೇನಾಗುವುದೋ ಎನ್ನುವ ಭಯ, ಒಬ್ಬರಿಗೊಬ್ಬರು ಮಾತನಾಡಲು ಸಹಾ ಭಯಪಡುವಂಥ ಸನ್ನಿವೇಶ ಸೃಷ್ಟಿಯಾಗಿತ್ತು!  ಆದರೆ ನಾನು ಮಾತ್ರ ನನ್ನ ಭದ್ರತಾ ಪಡೆಯೊಡನೆ ಕಾರ್ಖಾನೆಯ ಮುಂಭಾಗದ ಗೇಟುಗಳನ್ನು ಭದ್ರಪಡಿಸಿ, ಮುಂದಿನ ಆದೇಶ ಸಿಗುವವರೆಗೂ ಯಾವುದೇ ಕಾರಣಕ್ಕೂ, ಯಾರನ್ನೂ ಒಳಗೆ ಬಿಡಬಾರದೆಂದು ಆದೇಶಿಸಿ, ಗಸ್ತು ತಿರುಗುತ್ತಾ, ಆಗುತ್ತಿರುವ ಬೆಳವಣಿಗೆಗಳನ್ನೆಲ್ಲಾ ಗಮನಿಸುತ್ತಿದ್ದೆ!  ನಡೆದಿರುವ ಅವಘಡದ ಮಹತ್ವವನ್ನರಿತ ಐದಾರು ನಾಯಿಗಳು ಸಹಾ ಮುಖ್ಯದ್ವಾರಕ್ಕೆ ಬಂದು ಭದ್ರತಾ ರಕ್ಷಕರೊಡನೆ ಅತ್ತಿಂದಿತ್ತ ತಿರುಗುತ್ತಾ ಗೇಟು ಕಾಯುತ್ತಿದ್ದವು.  ಇದನ್ನೆಲ್ಲಾ ಗಮನಿಸುತ್ತಿದ್ದ ಹೊರಗಡೆ ಇದ್ದ ಕಾರ್ಮಿಕನೊಬ್ಬ ಒಮ್ಮೆಗೇ " ಸಕ್ರೂಟಿ ಅವ್ರು ನಮಗೆ ಎಗೇನಿಸ್ಟು ಕಣ್ರಲಾ, ನಾಯಿ ಬುಟ್ಕಂಡು ನಮ್ಮನ್ನ ಒಳಕ್ಕೋಗ್ದಂಗೆ ತಡ್ಯಾಕ್ ನೋಡ್ತಾ ಅವ್ರೆ" ಅಂದಿದ್ದ!  ಅದು ಇಡೀ ಕಾರ್ಮಿಕ ಸಮುದಾಯದಲ್ಲಿ ಬಣ್ಣ ಬಣ್ಣದ ಮಾತುಗಳೊಡನೆ ಹಂಚಿಕೆಯಾಗಿ ನಮ್ಮ ಇಡೀ ಭದ್ರತಾ ತಂಡ ಅವರ ದೃಷ್ಟಿಯಲ್ಲಿ "ಶತ್ರು"ಗಳಾಗಿ ಪರಿಗಣಿಸಲ್ಪಟ್ಟಿದ್ದರು! 

 ಕಾರ್ಖಾನೆಯಲ್ಲಿನ ಸನ್ನಿವೇಶ ಈಗ ಬಹಳ ಸೂಕ್ಷ್ಮವಾಗಿತ್ತು, ಅದುವರೆವಿಗೂ ಪಕ್ಕದ ಕೋಳಿ ಫಾರಂನಿಂದ ಪ್ರತಿದಿನ ಕಡಿಮೆಬೆಲೆಗೆ ಕೋಳಿ ತರಿಸಿಕೊಂಡು, ಚೆನ್ನಾಗಿ ತಿಂದುಂಡು, ಮೈ ಬೆಳೆಸಿಕೊಂಡಿದ್ದ ಭದ್ರತಾ ರಕ್ಷಕರಿಗೆ ಈಗ ನಿಜವಾದ ಸತ್ವ ಪರೀಕ್ಷೆ ಆರಂಭವಾಗಿತ್ತು!  ಕಾರ್ಖಾನೆಯ ಆಸ್ತಿಪಾಸ್ತಿಯ ರಕ್ಷಣೆಯ ಜೊತೆಗೆ ತಮ್ಮ ರಕ್ಷಣೆಯೂ ದೊಡ್ಡ ಸವಾಲಾಗಿ ಪರಿಣಮಿಸಿತ್ತು!  ಏಕೆಂದರೆ ಕಾರ್ಮಿಕರೆಲ್ಲರೂ ಅಕ್ಕಪಕ್ಕದ ಹಳ್ಳಿಯವರೇ ಆಗಿದ್ದರಲ್ಲದೆ, ಭದ್ರತಾ ರಕ್ಷಕರು ತಮ್ಮ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗಾಗಿ ಪಕ್ಕದ ಹಳ್ಳಿಯ ಅಂಗಡಿಗಳನ್ನೇ ಅವಲಂಬಿಸಿದ್ದರು!   ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಭದ್ರತಾ ರಕ್ಷಕರ ಊಟಕ್ಕೆ ಕುತ್ತು ಬರುವ ಸಂದರ್ಭವದಾಗಿತ್ತು!

(ಮುಂದೇನಾಯಿತು,,,,,ಮುಂದಿನ ಸಂಚಿಕೆಯಲ್ಲಿ!)
No comments: