Wednesday, March 4, 2015

ಭದ್ರತೆಯ ಲೋಕದಲ್ಲಿ - ೩

 ಕನ್ನಡ ಮಾಧ್ಯಮದಲ್ಲಿ ಓದಿದ ತಪ್ಪಿಗೆ ರಾಜಧಾನಿ ಬೆಂಗಳೂರಿನಲ್ಲಿ ಸಾಕಷ್ಟು ಅವಮಾನವನ್ನು ಅನುಭವಿಸಿದ ನಂತರ ಕೈ ಹಿಡಿದು ಉದ್ಯೋಗ ನೀಡಿದ್ದು ಭದ್ರತಾ ಲೋಕ.  ಇಲ್ಲಿ ನನ್ನಂತೆಯೇ ಡಿಪ್ಲೊಮಾ,ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿ ಕೆಲಸ ಸಿಗದೆ, ಅಲ್ಲಿ ಇಲ್ಲಿ ಅಲೆದು ಬೇಸತ್ತು ಕೊನೆಗೆ ಸಂಸಾರದ ಜವಾಬ್ಧಾರಿ ಹೊರಲೇಬೇಕಾದ ಅನಿವಾರ್ಯತೆಯಲ್ಲಿ  ಕೆಲಸಕ್ಕೆ ಸೇರಿದ ನೂರಾರು ಜನರಿದ್ದರು.  ಒಬ್ಬೊಬ್ಬರದ್ದು ಒಂದೊಂದು ಕಥೆ,,ಹೀಗೆ ಆರಂಭವಾದ ಉದ್ಯೋಗ ಪರ್ವದ ಮೊದಲ ಅನುಭವವೇ ರೋಮಾಂಚನಕಾರಿಯಾಗಿತ್ತು.  ಉದ್ಯಾನ ನಗರಿಯ ಪ್ರತಿಷ್ಠಿತ ತಾಂತ್ರಿಕ ಕಾಲೇಜಿನಲ್ಲಿ ಸುಮಾರು ೬೦ ಜನ ಭದ್ರತಾ ರಕ್ಷಕರು, ಮೇಲ್ವಿಚಾರಕರ ತಂಡದ ಮುಖ್ಯಸ್ಥನನ್ನಾಗಿ ನನ್ನನ್ನು ನೇಮಿಸಲಾಗಿತ್ತು.   ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಾಲೇಜಿನಲ್ಲಿ ಆಡಳಿತ ಮಂಡಳಿಯ  ಸದಸ್ಯರ ನಡುವೆ ಕಿತ್ತಾಟವಿದ್ದು ಮೊದಲನೆಯ ಗುಂಪು ತನ್ನದೇ ಆದ ಭದ್ರತಾ ರಕ್ಷಕರ ತಂಡವನ್ನು ಹೊಂದಿದ್ದರೆ ಅವರಿಗೆ ವಿರುದ್ಧವಾಗಿದ್ದ ಎರಡನೆಯ ತಂಡ ಕಾಲೇಜಿನ ಆಸ್ತಿ ಪಾಸ್ತಿಗಳ ರಕ್ಷಣೆಗೆ ನಮ್ಮ ಸಂಸ್ಥೆಯಿಂದ ಭದ್ರತಾ ರಕ್ಷಕರನ್ನು ಗುತ್ತಿಗೆಯ ಮೇಲೆ ನೇಮಿಸಿಕೊಂಡಿದ್ದರು.  ಅಲ್ಲಿ ಪ್ರತಿದಿನವೂ ಕಾಲೇಜಿನ ಆಡಳಿತ ಮಂಡಳಿಯ ಕಚೇರಿಯಲ್ಲಿ ಸದಸ್ಯರ, ಅಧ್ಯಕ್ಷರ, ಕಾರ್ಯದರ್ಶಿಯ ನಡುವೆ ಜಗಳ, ಕಿತ್ತಾಟ, ಕೂಗಾಟ ಸರ್ವೇಸಾಮಾನ್ಯವಾಗಿತ್ತು!  ಕೆಲವೊಮ್ಮೆ ಅದು ಕೈ ಕೈ ಮಿಲಾಯಿಸುವ ಮಟ್ಟಕ್ಕೂ ಹೋಗಿದ್ದುಂಟು!

 ದೇಶದೆಲ್ಲೆಡೆಯಿಂದ ಬಂದಿದ್ದ ಸಾವಿರಾರು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಓದುತ್ತಿದ್ದರು.  ಸಾಕಷ್ಟು ಹಣವಂತರ ಮಕ್ಕಳೇ ಅಲ್ಲಿ ಓದಲು ಬಂದಿದ್ದುದರಿಂದ ಎಲ್ಲ ರೀತಿಯ ಅಕ್ರಮಗಳೂ ಅಲ್ಲಿ ನಡೆಯುತ್ತಿದ್ದವು.  ಹೆಣ್ಣು, ಹೆಂಡ, ಮಾದಕದ್ರವ್ಯಗಳು ಬಹಳ ಸುಲಭವಾಗಿ ಕಾಲೇಜಿನ ಆವರಣದಲ್ಲಿ ದೊರಕುತ್ತಿದ್ದವು, ಇವುಗಳನ್ನು ಹಣವಂತ ವಿದ್ಯಾರ್ಥಿಗಳಿಗೆ ಪೂರೈಸುವ ಒಂದು ಗ್ಯಾಂಗು ಅಲ್ಲಿ ಕಾರ್ಯನಿರತವಾಗಿತ್ತು. ಹೆಂಡ ಮತ್ತು ಮಾದಕದ್ರವ್ಯಗಳ ನಶೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ವಿದ್ಯಾರ್ಥಿಗಳ ವಸತಿಗೃಹದಲ್ಲಿದ್ದ ಕಿರಿಯ ವಿದ್ಯಾರ್ಥಿಗಳನ್ನು ಪ್ರತಿದಿನ ರಾತ್ರಿಯ ಹೊತ್ತಿನಲ್ಲಿ ರ್ಯಾಗಿಂಗ್ ಮಾಡಿ ಗೋಳು ಹೊಯ್ದುಕೊಳ್ಳುತ್ತಾ ಮಜಾ ತೆಗೆದುಕೊಳ್ಳುವುದು ಮಾಮೂಲಾಗಿತ್ತು. ವಸತಿಗೃಹಕ್ಕೆ ಹೆಂಡ ಮತ್ತು ಮಾದಕ ವಸ್ತುಗಳನ್ನು ಪೂರೈಸುವುದನ್ನು ತಡೆಯುವುದು ನಮ್ಮ ಮುಂದಿದ್ದ ಬಹು ದೊಡ್ಡ ಸವಾಲಾಗಿತ್ತು. ಹೀಗೆ ಆರಂಭವಾದ ನಮ್ಮ ಭದ್ರತಾ ಉಸ್ತುವಾರಿಯ ಕಾರ್ಯ ದಿನೇ ದಿನೇ ರಂಗೇರುತ್ತಿತ್ತು. ಕಾಲೇಜಿನ ಆವರಣದಲ್ಲಿಯೇ ಒಂದು ಕಟ್ಟಡದಲ್ಲಿ ನಮ್ಮ ಭದ್ರತಾ ರಕ್ಷಕರಿಗೂ ವಸತಿ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಮತ್ತು ಹಗಲು ಎರಡೂ ಪಾಳಿಗಳಲ್ಲಿ ನಮ್ಮ ಭದ್ರತಾ ರಕ್ಷಕರು ಕಾರ್ಯ ನಿರ್ವಹಿಸುತ್ತಿದ್ದರು, ಹದ್ದು ಮೀರಿ ವರ್ತಿಸುತ್ತಿದ್ದ ಹಿರಿಯ ವಿದ್ಯಾರ್ಥಿಗಳನ್ನು ಹಿಡಿದು ಪೊಲೀಸರ ವಶಕ್ಕೆ ಕೊಡುವಂತೆ ನಮಗೆ ಆಡಳಿತ ಮಂಡಳಿಯ ಅಧ್ಯಕ್ಷರಿಂದ ನಿರ್ದೇಶನವಿತ್ತು.

ಕಾಲೇಜಿನಲ್ಲಿದ್ದಾಗ ಎನ್.ಸಿ.ಸಿ.ಯಲ್ಲಿ,ಸೈಕಲ್ ಪ್ರವಾಸಗಳಲ್ಲಿ ನಾಯಕನಾಗಿದ್ದ ನನಗೆ ಭದ್ರತಾ ರಕ್ಷಕರ ತಂಡದ ಹೊಣೆಗಾರಿಕೆ ಹೊಸದಾಗಿದ್ದರೂ ಅಪ್ರತಿಮ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸುತ್ತಿದ್ದೆ. ಹೇಗಾದರೂ ಸಮಾಜಘಾತುಕರ ಗ್ಯಾಂಗನ್ನು ಹಿಡಿಯಲೇಬೇಕೆಂಬ ಧೃಡ ಸಂಕಲ್ಪ ನನ್ನದಾಗಿತ್ತು, ಅದಕ್ಕಾಗಿ ಹಗಲಿನಲ್ಲಿ ಸ್ವಲ್ಪ ಹೊತ್ತು ಕಚೇರಿಯಲ್ಲಿದ್ದು ಹೆಚ್ಚಿನ ಸಮಯವನ್ನು ರಾತ್ರಿ ಪಾಳಿಯಲ್ಲಿ ಗಸ್ತು ಹೊಡೆಯುತ್ತಿದ್ದೆ, ಕಾಲೇಜಿನ ವಸತಿಗೃಹದ ಯಾವುದೇ ಕೊಠಡಿಯಲ್ಲಿ ಸ್ವಲ್ಪ ಸದ್ದಾದರೂ ಸಾಕು, ನಾನು ನನ್ನ ತಂಡದೊಡನೆ ಅಲ್ಲಿ ಹಾಜರಿರುತ್ತಿದ್ದೆ.  ಹೀಗಾಗಿ ನಾವು ಕಾರ್ಯಾರಂಭ ಮಾಡಿದ ಒಂದೇ ವಾರದಲ್ಲಿ ನಾಲ್ಕಾರು ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಕಿರಿಯ ವಿದ್ಯಾರ್ಥಿಗಳನ್ನು ರ್ಯಾಗಿಂಗ್ ಮಾಡುತ್ತಿದ್ದ ನಾಲ್ಕಾರು ಪ್ರಕರಣಗಳನ್ನು ಬೇಧಿಸಿ ಅವರನ್ನು ಆಡಳಿತ ಮಂಡಳಿಯ ಮುಂದೆ ನಿಲ್ಲಿಸಿದ್ದೆ, ಮೊದಲು ಒಂದೆರಡು ಪ್ರಕರಣಗಳಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಮೌಖಿಕ ಎಚ್ಚರಿಕೆ ಕೊಟ್ಟು ಛೀಮಾರಿ ಹಾಕಿ ಕಳುಹಿಸಿದ್ದ ಆಡಳಿತ ಮಂಡಳಿಯವರು ಕೊನೆಗೆ ರ್ಯಾಗಿಂಗ್ ಪ್ರಕರಣಗಳು ಹೆಚ್ಚಾದಂತೆ ಒಂದಿಬ್ಬರು ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರ ಹಾಕಿದ್ದರು.  ಇದು ಹಲವಾರು ಹಿರಿಯ ವಿದ್ಯಾರ್ಥಿಗಳ ಕಣ್ಣು ಕೆಂಪಗಾಗಿಸಿತ್ತು. ಆಡಳಿತ ಮಂಡಳಿಯ ಮೇಲಿನ ಅವರ ಕೋಪ ಕ್ರಮೇಣ ನಮ್ಮ ಭದ್ರತಾ ರಕ್ಷಕರ ಮೇಲೆ ತಿರುಗಿತ್ತು.  ಕಾಲೇಜಿನ ಆವರಣದಲ್ಲಿ ಸಿಕ್ಕಸಿಕ್ಕಲ್ಲಿ ಭದ್ರತಾ ರಕ್ಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು,  ಅವಕಾಶ ಸಿಕ್ಕರೆ ಅವರ ಮೇಲೆ ಕೈ ಮಾಡುವುದು ಶುರುವಾಯಿತು.  ದಿನವೂ ಬಗ್ಗೆ ನನ್ನ ಬಳಿಗೆ ದೂರುಗಳು ಬರುತ್ತಲೇ ಇದ್ದವು,

ಸಂಜೆಯ ಹೊತ್ತಿನಲ್ಲಿ ಕಾಲೇಜಿನ ಆವರಣದ ಮುಂಭಾಗದಲ್ಲಿದ್ದ ಹೋಟೆಲ್ಲೊಂದರಲ್ಲಿ ದಿನವೂ ಟೀ ಕುಡಿಯಲು ಹೋಗುವ ಹವ್ಯಾಸ ನನಗಿತ್ತು.  ಎಂದಿನಂತೆ ಅಂದೂ ಸಹ ಹೋಟೆಲ್ಲಿನಲ್ಲಿ ಟೀ ಕುಡಿದು ಹೊರಬಂದು ಸಿಗರೇಟು ಹಚ್ಚಿದ ನನಗೆ ಅನತಿ ದೂರದಲ್ಲಿ ಬೈಕಿನ ಮೇಲೆ ಕುಳಿತಿದ್ದ ಒಬ್ಬ ಯುವಕ ಇನ್ನೊಬ್ಬ ಯುವಕನಿಗೆ ಒಂದು ಬ್ಯಾಗಿನಲ್ಲಿ ಅದೇನನ್ನೋ ಕೊಟ್ಟು ಕಾಲೇಜಿನ ವಸತಿಗೃಹಕ್ಕೆ ತಲುಪಿಸುವಂತೆ ಹೇಳಿದ್ದು ಕೇಳಿಸಿತು.  ಚೀಲ ಹಿಡಿದು ಹೊರಟ ಯುವಕನನ್ನು ಹಿಂಬಾಲಿಸಿದ ನನಗೆ ಅಂದು ಭರ್ಜರಿ ಶಿಕಾರಿಯೇ ಸಿಗಲಿರುವ ಮುನ್ಸೂಚನೆ ಸಿಕ್ಕಿತ್ತು! ಗೇಟಿನ ಬಳಿಗೆ ಬಂದವನು ಅಲ್ಲಿದ್ದ ಫೋನಿನಲ್ಲಿ ಕಚೇರಿಯಲ್ಲಿದ್ದ ನನ್ನ ಇಬ್ಬರು ಸಹಾಯಕರಿಗೆ ಕಾಲೇಜಿನ ವಸತಿಗೃಹಕ್ಕೆ ಬರುವಂತೆ ಹೇಳಿ ಯುವಕನನ್ನು ಸ್ವಲ್ಪ ದೂರದಿಂದ ಹಿಂಬಾಲಿಸಿದೆ.  ನೂರಾರು ಎಕರೆ ಜಮೀನಿನಲ್ಲಿ ಕಟ್ಟಿದ್ದ ಕಾಲೇಜಿನ ಮುಖ್ಯದ್ವಾರದಿಂದ ವಸತಿಗೃಹಕ್ಕೆ ಸುಮಾರು ದೂರವಿತ್ತಲ್ಲದೆ ಪೊಗದಸ್ತಾಗಿ ಬೆಳೆದಿದ್ದ ಹುಲ್ಲು ಮತ್ತು ಕುರುಚಲು ಗಿಡಗಳು ಅದನ್ನೊಂದು ಕಾಡಿನಂತೆ ಕಾಣಿಸುತ್ತಿದ್ದವು.  ನಾನು ಹಿಂಬಾಲಿಸುತ್ತಿರುವ ಪರಿವೆಯಿಲ್ಲದೆ ಕಾಲೇಜಿನ ವಸತಿಗೃಹ ಪ್ರವೇಶಿಸಿದ ಯುವಕ ಸೀದಾ ಮೂರನೆಯ ಮಹಡಿಯಲ್ಲಿದ್ದ ಹಿರಿಯ ವಿದ್ಯಾರ್ಥಿಯೊಬ್ಬನ ಕೊಠಡಿ ಪ್ರವೇಶಿಸಿದ, ನನ್ನ ನಿರ್ದೇಶನದಂತೆ  ಅದಾಗಲೇ ಅಲ್ಲಿಗೆ ಬಂದು  ಕಾಯುತ್ತಿದ್ದ ನನ್ನ ಸಹಾಯಕರೊಡನೆ ಕೊಠಡಿಯ ಬಾಗಿಲಿನ ಬಳಿ ಬಂದ ನಾನು ನಿಶ್ಯಬ್ಧವಾಗಿ ಬಾಗಿಲಿನ ಬೀಗದ ಕೈ ತೂತಿನಿಂದ ಒಳಗಿನ ದೃಶ್ಯವನ್ನು ನೋಡುತ್ತಿದ್ದೆ, ಚೀಲ ಹಿಡಿದು ಬಂದ ಯುವಕ ಕೊಠಡಿಯಲ್ಲಿದ್ದ ಮೂವರು ಹಿರಿಯ ವಿದ್ಯಾರ್ಥಿಗಳಿಗೆ ತಾನು ಚೀಲದಲ್ಲಿ ತಂದಿದ್ದ  ವಸ್ತುಗಳನ್ನು ಒಂದೊಂದಾಗಿ ತೋರಿಸುತ್ತಿದ್ದ. ಕೆಲವು ವಿಸ್ಕಿ, ಬಿಯರ್ ಬಾಟ್ಲಿಗಳ ಜೊತೆಗೆ ಹತ್ತಾರು ಸಣ್ಣ ಸಣ್ಣ ಕಾಗದದ ಪೊಟ್ಟಣಗಳು ಅಲ್ಲಿದ್ದವು.  ಜಾಸ್ತಿ ಸಮಯ ವ್ಯರ್ಥ ಮಾಡುವ ಹಾಗಿರಲಿಲ್ಲ, ಒಬ್ಬ ಸಹಾಯಕನನ್ನು ಕರೆದು ಒಂದು ಬೀಗ ತರಿಸಿ ಕೊಠಡಿಯ ಬಾಗಿಲಿಗೆ ಬೀಗ ಜಡಿದು ಅವರನ್ನು ಹೊರಕ್ಕೆ ಬರದಂತೆ ನಿರ್ಬಂಧಿಸಿದೆ,  ಬಾಗಿಲಿಗೆ ಬೀಗ ಹಾಕಿದ ಸದ್ದು ಕೇಳಿದ ಹಿರಿಯ ವಿದ್ಯಾರ್ಥಿಗಳು ಸಿಟ್ಟಿಗೆದ್ದು ತಮ್ಮ ಕಾಲು ಕೈಗಳಿಂದ ಬಾಗಿಲನ್ನು ಒದ್ದು ಝಾಡಿಸುತ್ತಾ ಬಾಗಿಲು ತೆಗೆಯುವಂತೆ ಬೊಬ್ಬೆ ಹೊಡೆಯುತ್ತಿದ್ದರು. ಕಚೇರಿಗೆ ಹಿಂದಿರುಗಿ ಬಂದ ನಾನು ಅಲ್ಲಿದ್ದ ಸ್ಥಿರ ದೂರವಾಣಿಯಿಂದ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಫೋನ್ ಮಾಡಿ ಪರಿಸ್ಥಿತಿಯನ್ನು ವಿವರಿಸಿದೆ, ಜಯನಗರದ ತಮ್ಮ ಮನೆಯಲ್ಲಿದ್ದ  ಅವರು ತಾವು ಕಾಲೇಜಿಗೆ ಬರುವುದಾಗಿಯೂ, ಅಷ್ಟರಲ್ಲಿ ಪಕ್ಕದ ಪೊಲೀಸ್ ಠಾಣೆಗೆ ಫೋನ್ ಮಾಡಿ ವಿಷಯ ತಿಳಿಸಿ, ಪೊಲೀಸರನ್ನು ಕರೆಸುವಂತೆ ನಿರ್ದೇಶಿಸಿದ್ದರು.  ಅದರಂತೆ ಪೊಲೀಸ್ ಠಾಣೆಗೂ ಫೋನ್ ಮಾಡಿ ತಕ್ಷಣ ಕಾಲೇಜಿಗೆ ಬರುವಂತೆ ವಿನಂತಿಸಿ ಮತ್ತೆ ನಾನು ವಸತಿಗೃಹದತ್ತ ಧಾವಿಸಿದೆ.   

ನಾನು ವಸತಿಗೃಹಕ್ಕೆ ಬರುವಷ್ಟರಲ್ಲಿ ಬಾಗಿಲು ಒಡೆದು ಹೊರಬರಲು ಯತ್ನಿಸುತ್ತಿದ್ದ ವಿದ್ಯಾರ್ಥಿಗಳು ಸುಸ್ತಾಗಿ ಸುಮ್ಮನಾಗಿದ್ದರು. ನನ್ನ ಸಹಾಯಕರು ಅದಾಗಲೇ ಮತ್ತಷ್ಟು ರಕ್ಷಕರೊಡನೆ ಆಕಸ್ಮಾತ್ ಅವರೇನಾದರೂ ಬಾಗಿಲು ಒಡೆದು ಹೊರಬಂದರೆ ಎದುರಿಸಲು ಲಾಠಿಗಳೊಡನೆ ಸಜ್ಜಾಗಿ ನಿಂತಿದ್ದರು. ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಆಗಮಿಸಿದ ಪೊಲೀಸ್ ಇನ್ಶ್ಪೆಕ್ಟರ್ ಮತ್ತವರ ತಂಡಕ್ಕೆ ಒಳಗಿನ ಪರಿಸ್ಥಿತಿಯನ್ನು ವಿವರಿಸಿದೆ, ನನ್ನಿಂದ  ಬೀಗದ ಕೈ ಪಡೆದ ಪೊಲೀಸ್ ಇನ್ಸ್ಪೆಕ್ಟರ್ ಒಳಗಿದ್ದವರಿಗೆ  ತಾವು ಪೊಲೀಸರೆಂದು, ಯಾವುದೇ ರೀತಿಯ ಆಕ್ರಮಣಕ್ಕೆ ಯತ್ನಿಸದೆ ಸುಮ್ಮನೆ ಶರಣಾಗಬೇಕೆಂದು, ಒಂದು ವೇಳೆ ಆಕ್ರಮಣಕ್ಕೆ ಯತ್ನಿಸಿದರೆ ಗುಂಡು ಹಾರಿಸುವುದಾಗಿಯೂ ಎಚ್ಚರಿಕೆ ನೀಡಿ ಬಾಗಿಲು ತೆಗೆದರು, ತಮ್ಮ ಕೈಗಳನ್ನು ತಲೆಯ ಮೇಲಿಟ್ಟುಕೊಂಡು ಪ್ಯಾದೆಗಳಂತೆ ನಾಲ್ವರು ಕೊಠಡಿಯೊಳಗೆ ನಿಂತಿದ್ದರು, ತಮ್ಮ ಸರ್ವೀಸ್ ರಿವಾಲ್ವರನ್ನು ಕೈಯಲ್ಲಿ ಸಿದ್ಧವಾಗಿ ಹಿಡಿದೆ ಕೊಠಡಿಯೊಳಕ್ಕೆ ಪ್ರವೇಶಿಸಿದ ಇನ್ಸ್ಪೆಕ್ಟರ್ ನಾಲ್ವರನ್ನು ಬಂಧಿಸುವಂತೆ ತಮ್ಮ ಸಿಬ್ಬಂದಿಗೆ ಆದೇಶಿಸಿದ್ದರು!  ಯುವಕ ತಂದಿದ್ದ ಚೀಲದಲ್ಲಿದ್ದ ವಿಸ್ಕಿ, ಬಿಯರು ಬಾಟಲಿಗಳ ಜೊತೆಗಿದ್ದ ಕಾಗದದ ಪೊಟ್ಟಣಗಳು ಮಾತ್ರ ಕಾಣೆಯಾಗಿದ್ದವು!  ಹಿರಿಯ ವಿದ್ಯಾರ್ಥಿಗಳನ್ನು ಬಗ್ಗೆ ಕೇಳಿದರೆ ರೀತಿ ನಮಗೆ ಯಾವುದೇ ಪೊಟ್ಟಣಗಳನ್ನು ತಂದು ಕೊಟ್ಟಿಲ್ಲ, ಕೇವಲ ವಿಸ್ಕಿ ಮತ್ತು ಬಿಯರ್ ತರಿಸಿದ್ದು ಮಾತ್ರ ನಿಜ ಎಂದಿದ್ದರು.  ಆದರೂ ನನಗೆ ಮಾತ್ರ ಅನುಮಾನದ ಗುಂಗಿಹುಳ ಕೊರೆಯುತ್ತಲೇ ಇತ್ತು, ಇನ್ಸ್ಪೆಕ್ಟರಿಗೆ ಬಗ್ಗೆ ಹೇಳಿಯೂ ಬಿಟ್ಟೆ!  ಸರಿ, ಮತ್ತೆ ಶುರುವಾಯಿತು, ಪೊಟ್ಟಣಗಳಿಗಾಗಿ ಹುಡುಕಾಟ!  ಇಡೀ ಕೊಠಡಿಯನ್ನೆಲ್ಲಾ ಜಾಲಾಡಿದರೂ ಕಾಗದದ ಪೊಟ್ಟಣಗಳು ನಮಗೆ ಸಿಗಲಿಲ್ಲ!  ನಿರಾಶನಾಗದೆ ಕೊಠಡಿಯ ಕಿಟಕಿಯಿಂದ ಬಗ್ಗಿ ನೋಡಿದೆ, ಹುಲ್ಲು, ಕುರುಚಲು ಗಿಡಗಳಿಂದ ತುಂಬಿದ್ದ ಅಪಾಯಕಾರಿ ಜಾಗ ಅದಾಗಿತ್ತು!  ಹಗಲು ಹೊತ್ತಿನಲ್ಲಿಯೇ ಎರಡು ಮಾರುದ್ಧದ ಸಾಕಷ್ಟು ಹಾವುಗಳು ಸಂಚರಿಸುತ್ತಿದ್ದ ಕಾಲೇಜಿನ ಆವರಣದಲ್ಲಿ ಮುಸ್ಸಂಜೆಯ ಮಬ್ಬುಗತ್ತಲಿನಲ್ಲಿ ಪ್ರದೇಶದಲ್ಲಿ ಕಾಲಿಡುವುದು ತುಂಬಾ ಅಪಾಯಕಾರಿಯಾಗಿತ್ತು!   ಅಷ್ಟು ಹೊತ್ತಿಗೆ ಅಲ್ಲಿಗೆ ತಲುಪಿದ ಆಡಳಿತ ಮಂಡಳಿಯ ಅಧ್ಯಕ್ಷರು ಮೂವರು ಹಿರಿಯ ವಿದ್ಯಾರ್ಥಿಗಳು ಹಾಗೂ ಹೊರಗಿನಿಂದ ಮಾಲು ತಂದಿದ್ದ ಯುವಕನನ್ನೂ ಬಂಧಿಸುವಂತೆ, ಅವರನ್ನು ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ ಕೊಟ್ಟು ಮಾದಕವಸ್ತುಗಳ ಸರಬರಾಜಿನ ಬಗ್ಗೆ ಬಾಯಿ ಬಿಡಿಸುವಂತೆ ವಿನಂತಿಸಿದ್ದರು.  ಅದರಂತೆ ಪೊಲೀಸರು ನಾಲ್ವರನ್ನು ತಮ್ಮ ಜೀಪಿನಲ್ಲಿ ತುಂಬಿಕೊಂಡು ಠಾಣೆಗೆ ಕರೆದೊಯ್ದರು.  ಕಿಟಿಕಿಯ ಹಿಂಭಾಗದಲ್ಲಿ ಮರುದಿನ ಬೆಳಿಗ್ಗೆ ಬೆಳಕಿನಲ್ಲಿ ಹುಡುಕಿ ಏನಾದರೂ ದೊರೆತಲ್ಲಿ ಠಾಣೆಗೆ ತರುವಂತೆ ಹೇಳಿದ್ದರು.

ಮೂವರು ಹಿರಿಯ ವಿದ್ಯಾರ್ಥಿಗಳನ್ನು ಮಾಲು ಸಹಿತ ಪೊಲೀಸರು ಬಂಧಿಸಿದ ಸುದ್ಧಿ ಇಡೀ ಕಾಲೇಜಿನ ಆವರಣದಲ್ಲಿ ಕಾಳ್ಗಿಚ್ಚಿನಂತೆ  ಹಬ್ಬಿತ್ತು, ಕೆಲವರು ಅವರಿಗೆ ತಕ್ಕ ಶಾಸ್ತಿ ಆಯಿತು ಅಂದುಕೊಂಡರೆ ಮತ್ತೆ ಕೆಲವರು ಅದಕ್ಕೆ ಕಾರಣನಾದ ನನಗೆ ಹಿಡಿಶಾಪ ಹಾಕುತ್ತಿದ್ದರು. ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಾನು ನನ್ನ ತಂಡದೊಡನೆ ವಸತಿಗೃಹದ ಹಿಂಭಾಗವನ್ನು ಜಾಲಾಡಲು ತೊಡಗಿದ್ದೆ, ಪಕ್ಕದ ಹಳ್ಳಿಯಿಂದ ಹುಲ್ಲು ಕೊಯ್ಯುವುದಕ್ಕಾಗಿ ಕೆಲವು ಕೆಲಸದವರನ್ನು ಕರೆಯಿಸಿ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿ ಕಿಟಕಿಯ ಹಿಂಭಾಗದಲ್ಲಿ ಕಾಣೆಯಾದ ಕಾಗದದ ಪೊಟ್ಟಣಗಳಿಗಾಗಿ ಹುಡುಕಿದಾಗ ಕಂಡ ದೃಶ್ಯ ನನ್ನನ್ನು ಕೆಲಕಾಲ ಅಧೀರನನ್ನಾಗಿಸಿತ್ತು.  ವಸತಿಗೃಹದ ಹಿಂಭಾಗದ ಖಾಲಿ ಪ್ರದೇಶದ ತುಂಬಾ ಹುಲ್ಲು ಮತ್ತು ಕುರುಚಲು ಗಿಡಗಳ ನಡುವೆ ಕುಡಿದು ಎಸೆದಿದ್ದ  ನೂರಾರು ಮಧ್ಯದ ಬಾಟಲಿಗಳು ಹಾಗೂ ಬಳಸಿ ಎಸೆದ ಸಾಕಷ್ಟು ಕಾಗದದ ತುಂಡುಗಳು ಪತ್ತೆಯಾದವು. ಅವುಗಳ ನಡುವೆಯೇ ನಾನು ಹುಡುಕುತ್ತಿದ್ದ ಕಾಗದದ ಪೊಟ್ಟಣಗಳೂ ಸಿಕ್ಕಿದ್ದವು, ಕೆಲವು ಪೊಟ್ಟಣಗಳಲ್ಲಿ ಗಾಂಜಾ ಇದ್ದರೆ ಇನ್ನೂ ಕೆಲವು ಪೊಟ್ಟಣಗಳಲ್ಲಿ ಎಂಥದ್ದೋ ಬಿಳಿಯ ಪುಡಿ ಇತ್ತು!  ಜೋಪಾನವಾಗಿ ಪೊಟ್ಟಣಗಳನ್ನು ತೆಗೆದುಕೊಂಡು ಬಂದು ಆಡಳಿತ ಮಂಡಳಿಯ  ಅಧ್ಯಕ್ಷರಿಗೆ ತೋರಿಸಿದ್ದೆ. ಪೊಲೀಸ್ ಠಾಣೆಗೆ ಹೋಗಿ ಇನ್ಸ್ಪೆಕ್ಟರಿಗೆ ಪೊಟ್ಟಣಗಳನ್ನು ಕೊಟ್ಟು ಕೂಲಂಕುಷವಾಗಿ ತನಿಖೆ ನಡೆಸಿ ಗ್ಯಾಂಗನ್ನು ಪತ್ತೆ ಮಾಡುವಂತೆ ತಿಳಿಸು ಎಂದು ಆದೇಶಿಸಿದ್ದರು.  ಅದರಂತೆ ಪೊಲೀಸ್ ಠಾಣೆಗೆ ಬಂದು ಇನ್ಸ್ಪೆಕ್ಟರಿಗೆ ಪೊಟ್ಟಣಗಳನ್ನು ಕೊಟ್ಟಿದ್ದೆ.  ಮುಂದೆ ಪೊಲೀಸರ ತನಿಖೆಯಲ್ಲಿ ಇಡೀ ಮಾದಕವಸ್ತು ಸರಬರಾಜು ಮಾಡುತ್ತಿದ್ದ ತಂಡದ ಬಂಧನವಾಗಿತ್ತು.

ಪ್ರಕರಣದ ನಂತರ ಕಾಲೇಜಿನಲ್ಲಿ ರ್ಯಾಗಿಂಗ್ ಪಿಡುಗು ನಿಂತುಹೋಗಿತ್ತು, ಇಡೀ ಭದ್ರತಾ ರಕ್ಷಕರ ತಂಡ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.  ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಿದ ಆತ್ಮಸಂತೃಪ್ತಿ ನಮ್ಮದಾಗಿತ್ತು.

No comments: