Saturday, March 19, 2016

ಇವ್ರ ಬಾಳೊಂದ್ ಬಾಳಾ ತಿಮ್ಮಿ!

ಎಲ್ಲಿದ್ದೀಯೇ ಹೆಂಗಿದ್ದೀಯೇ ನನ್ನಾ ಮುದ್ದು ತಿಮ್ಮಿ
ಸುತ್ತಾಮುತ್ತಾ ಎಲ್ಲೇ ನೋಡು ಬರೀ ರಾಜಕೀಯ ತಿಮ್ಮಿ
ಜಾತಿ ಗೀತಿ ದಲಿತ ಬಲಿತ ಅಂತಾ ಸಾಯ್ತಾರಲ್ಲೇ ತಿಮ್ಮಿ!
ಎಲ್ಲೋ ಹುಟ್ದೋನು ಎಲ್ಲೋ ಬೆಳ್ದು ಬಲ್ತೋದೋನು
ಮಾನಾ ಬುಟ್ಟು ಪಕ್ಕದ್ ದೇಶಾದ್ ಬಾವ್ಟಾ ಹಿಡ್ದು
ತನ್ನ ಸ್ಥಾನಾ ಮರ್ತು ಜೈ ಜೈ ಅಂತಾನಲ್ಲೇ ತಿಮ್ಮಿ!

ಮಾನ್ಗೆಟ್ ಜನಾ ತಾವುಟ್ಟಿದ್ ದೇಶಾ ಮರ್ತು
ತಮ್ ಧರ್ಮಾ ಮರ್ತು ಮತ್ನಾಗಿದ್ದಂಗ್
ತೂರಾಡ್ಕೊಂಡು ಮಾತಾಡ್ತಾರಲ್ಲೇ ತಿಮ್ಮಿ!
ಇವ್ರಿಗಿಲ್ಲಿ ಅರಿವೇ ಇಲ್ಲಾ ಪ್ರಾಣ ಕೊಟ್ಟೋರ್ ಲೆಕ್ಕ
ಸ್ವಾತಂತ್ರ್ಯ ಅಂದ್ರೆ ಸ್ವೇಚ್ಛೆ ಅಂತಂದ್ಕೊಂಡವ್ರೆ
ಯಾರೇ ಹೇಳೋದ್ ಬುದ್ಧಿ ಇವ್ರಿಗ್ ತಿಮ್ಮಿ!

ಅಪ್ಪ ಯಾರೋ ಅಮ್ಮ ಯಾರೋ ಎಲ್ಲವ್ರೋ
ಅವ್ರ ಕಷ್ಟ ಸುಖ ನೋಡಂಗಿಲ್ಲಸುಮ್ನೆ ಮಾತು
ತುತ್ತು ಅನ್ನ ನೀಡಂಗಿಲ್ಲ ನ್ಯಾಯ ಏನೇ ತಿಮ್ಮಿ!
ಹೆತ್ತಮ್ಮಂಗೆ ಅನ್ನ ಹಾಕ್ದೆ ದೇಶ ಉದ್ಧಾರದ್ ಮಾತು
ಬೇರೇವ್ರ ತಟ್ಟೆ ನೋಡೋ ಇವ್ರಾ ತಟ್ಟೆ ದೊಡ್ಡ ತೂತು
ಬೇಕಿತ್ತೇನೆ ಇಂಥಾ ಕೆಟ್ ಬಾಳು ಇವ್ರಿಗಿಂದು ತಿಮ್ಮಿ! 

ರಟ್ಟೆ ಮುರ್ದು ದುಡ್ಯಾಕಾಗ್ದೆ ಬಿಟ್ಟಿ ದುಡ್ನಾಗ್ ಬದುಕ್ಕೊಂಡು
ಸಿಕ್ದೋರ್ ಕಾಲ್ನ ಹಿಡ್ಕೊಂಡಿವ್ರು ಎಲ್ಲಾರ್ನೂ ಬೈಕೊಂಡಿವ್ರು
ಬದ್ಕೋ ತಿರ್ಪೆ ಬಾಳು ಯಾವ ದೇವ್ರು ಮೆಚ್ತಾನೇಳು ತಿಮ್ಮಿ!
ಬಾಳೋರನ್ನ ಬಾಳೋಕ್ಕೆ ಬುಡ್ದೆ ಆಳೋರನ್ನ ಆಳೋಕ್ಕೆ ಬುಡ್ದೆ
ನಗೋರ್ನೆಲ್ಲಾ ಅಳುಸ್ತಾ ಅಳೋರ್ನೆಲ್ಲಾ ಸಾಯುಸ್ತಾ
ಬದ್ಕೋ ಇವ್ರ ಬಾಳೊಂದ್ ಬಾಳಾ ಹೇಳೇ ನೀನು ತಿಮ್ಮಿ!

(ಚಿತ್ರ: ಅಂತರ್ಜಾಲದಿಂದ)

No comments: