Tuesday, April 12, 2016

ಕನ್ನಡಕ್ಕೊಬ್ಬರೆ ರಾಜಣ್ಣ,,,,,,,,,,,,,,,,,




ಕನ್ನಡಕ್ಕೊಬ್ಬರೆ ರಾಜಣ್ಣ,,,,ಅದೆಷ್ಟು ಬೇಗ ಹತ್ತು ವರ್ಷಗಳಾಗಿ ಹೋದವು ಕನ್ನಡದ ಧೃವತಾರೆ ಮರೆಯಾಗಿ?  ಅಂದು,,,,ಏಪ್ರಿಲ್ ೧೨, ೨00೬, ಬೆಂಗಳೂರಿನ ಹಲಸೂರಿನ ಆದರ್ಶ ಚಿತ್ರಮಂದಿರದ ಹತ್ತಿರದಲ್ಲಿದ್ದ ಕಚೇರಿಯಲ್ಲಿ ಆಗ ತಾನೇ ಊಟ ಮಾಡಿ ಬಂದು ಕುಳಿತಿದ್ದೆ.  ಸುಮಾರು ೨ ಘಂಟೆಯ ಹೊತ್ತಿಗೆ ಕನ್ನಡದ ಕಣ್ಮಣಿ ಡಾ. ರಾಜ್ ಕುಮಾರ್ ಇನ್ನಿಲ್ಲವೆಂಬ ಸುದ್ಧಿ ದೊರಕಿತ್ತು.  ಜೊತೆಗೆ ತಕ್ಷಣವೇ ಹಲಸೂರು ಹಾಗೂ ಅಶೋಕ್ ನಗರ ಪೊಲೀಸ್ ಠಾಣೆಗಳಿಂದ ದೂರವಾಣಿ ಕರೆಗಳು ಬಂದು, ಪ್ರಮುಖ ಸ್ಥಳಗಳಲ್ಲಿ ಹೆಚ್ಚು ಭದ್ರತಾ ರಕ್ಷಕರನ್ನು ನಿಯೋಜಿಸಿ ಯಾವುದೇ ಅವಘಡವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ನಿರ್ದೇಶನ ಬಂದಿತ್ತು!   ನನ್ನ ನೆಚ್ಚಿನ ನಟ, ಗಾಯಕ, ಇಡೀ ಕರ್ನಾಟಕದ ಕಣ್ಮಣಿ ಹಠಾತ್ತಾಗಿ ನಿಧನರಾಗಿದ್ದು ಕ್ಷಣಕಾಲ ನನ್ನನ್ನು ದಂಗುಬಡಿಸಿದ್ದರೂ ಕರ್ತವ್ಯಪ್ರಜ್ಞೆ ಜಾಗೃತವಾಗಿ ನಮ್ಮ ಎಲ್ಲಾ ಭದ್ರತಾ ಸಿಬ್ಬಂದಿಗೂ ಒಂದು ಸುತ್ತು ದೂರವಾಣಿ ಕರೆ ಮಾಡಿ ಎಲ್ಲಾ ಕಡೆಯಲ್ಲಿಯೂ ಹುಶಾರಾಗಿರುವಂತೆ ನಿರ್ದೇಶನ ನೀಡಿ, ಕೆಲವು ಪ್ರಮುಖ ಗುತ್ತಿಗೆಗಳಿದ್ದ ಬ್ಯಾಂಕ್, ಚಿನ್ನಾಭರಣಗಳ ಮಳಿಗೆಗಳು ಹಾಗೂ ಕಾಲ್ ಸೆಂಟರ್ಗಳಿಗೆ ಭೇಟಿ ನೀಡಲೆಂದು ನನ್ನ ರೋಡ್ ಕಿಂಗ್ ಬೈಕನ್ನೇರಿದ್ದೆ!  ಹಲಸೂರಿನಿಂದ ರಿಚ್ಮಂಡ್ ವೃತ್ತಕ್ಕೆ ಬರುವಷ್ಟರಲ್ಲಿ ಸಾಕು ಸಾಕಾಗಿತ್ತು.  ಎಲ್ಲೆಲ್ಲಿಯೂ ಟ್ರಾಫಿಕ್ ಜಾಮ್, ಹುಚ್ಚೆದ್ದಂತೆ ಧಾವಿಸುತ್ತಿದ್ದ ಜನಸಮೂಹ, ಅಲ್ಲೊಂದು ಸಮೂಹ ಸನ್ನಿಯೇ ಸೃಷ್ಟಿಯಾಗಿತ್ತು!    

ಅದೆಷ್ಟೇ ಜಾಗ್ರತೆ ವಹಿಸಿದ್ದರೂ, ಇಡೀ ಬೆಂಗಳೂರಿನ ಪೊಲೀಸ್ ಸಿಬ್ಬಂದಿ, ಗೃಹರಕ್ಷಕರು ಹಾಗೂ ಖಾಸಗಿ ಭದ್ರತಾ ರಕ್ಷಕರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಅಂದು ಕರ್ತವ್ಯ ನಿರ್ವಹಿಸಿದರೂ, ಹರಿದು ಬಂದ ಆ ಮಹಾನ್ ಜನಸಾಗರವನ್ನು ನಿಯಂತ್ರಿಸಲು ಅಸಾಧ್ಯವಾಗಿತ್ತು.   ಆ ಸಮೂಹಸನ್ನಿಯಲ್ಲಿ ದೇವರು ಹಾಗೂ ದೆವ್ವಗಳೆರಡೂ ಮೈಮೇಲೆ ಬಂದಂತೆ ಆಡುತ್ತಿದ್ದ ಅಭಿಮಾನಿ ದೇವರುಗಳನ್ನು, ಅವರ ಕಂಬನಿಯನ್ನು ದುಃಖವನ್ನು, ಆವೇಶವನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವಿಲ್ಲದೆ ಹೋಯಿತು.  ಇಡೀ ಬೆಂಗಳೂರು ನಗರ ಅಘೋಷಿತ ಬಂದ್ ಆಚರಿಸಿತ್ತು.  ಅಂಗಡಿ ಮುಂಗಟ್ಟುಗಳೆಲ್ಲಾ ಮುಚ್ಚಿದ್ದವು, ಅಲ್ಲಿಲ್ಲಿ ತೆರೆದಿದ್ದ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು.  ಅಸಾಧ್ಯ ಕರೆಗಳ ಪರಿಣಾಮದಿಂದಾಗಿ ಎಲ್ಲಾ ಮೊಬೈಲ್ ನೆಟ್ವರ್ಕ್ಗಳು  ಸ್ಥಗಿತಗೊಂಡಿದ್ದವು.  ಯಾರಿಗೂ ಮೊಬೈಲಿನಲ್ಲಿ ಕರೆ ಮಾಡಲಾಗುತ್ತಿರಲಿಲ್ಲ, ಸಂದೇಶ ಕಳಿಸಲಾಗುತ್ತಿರಲಿಲ್ಲ,  ಸಾಕಷ್ಟು ಕಟ್ಟಡಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. 

ಅದೆಷ್ಟೇ ಎಚ್ಚರಿಕೆ ವಹಿಸಿದರೂ ತಮ್ಮ ನೆಚ್ಚಿನ ನಟನ ಸಾವಿನ ಸುದ್ಧಿಯಿಂದ ಆಘಾತಗೊಂಡಿದ್ದ ಅಭಿಮಾನಿ ದೇವರುಗಳನ್ನು ನಿಯಂತ್ರಿಸಲಾಗದೆ ಪೊಲೀಸರು ಸಹ ಅಶಾಯಕರಾಗಿದ್ದರು.  ಸದಾಶಿವನಗರದ ಅವರ ಮನೆಯ ಮುಂದೆ ದೊಡ್ಡ ಜಾತ್ರೆಯೇ ನೆರೆದಿತ್ತು, ಇತ್ತ ಕಂಠೀರವ ಸ್ಟೇಡಿಯಂಗೆ ಅವರ ಶರೀರವನ್ನು ಕೊಂಡು ತರಲಿದ್ದಾರೆಂಬ ಸುದ್ಧಿಯಿಂದಾಗಿ ಅಲ್ಲಿಯೂ ಸಹಸ್ರಾರು ಜನರು ನೆರೆದಿದ್ದರು.  ಒಟ್ಟಾರೆ ಇಡೀ ಬೆಂಗಳೂರು ನಗರವೇ ಅವ್ಯವಸ್ಥೆಯ  ಆಗರವಾಗಿ ಹೋಗಿತ್ತು.  ಕೊನೆಗೆ ದುಃಖದಿಂದ ಆಕ್ರೋಶಭರಿತರಾಗಿದ್ದ ಅಭಿಮಾನಿಗಳು ಕಲ್ಲು ತೂರಾಟಕ್ಕೂ ಇಳಿದಿದ್ದರು, ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದರು.  ಈ ನಡುವೆ ನಾವು ಭದ್ರತೆ ನೀಡಿದ್ದ ಹಲವು ಕಟ್ಟಡಗಳು ಅಭಿಮಾನಿ ದೇವರುಗಳ ಆಕ್ರೋಶಕ್ಕೆ ಗುರಿಯಾಗಿದ್ದವು, ನಮ್ಮ ಭದ್ರತಾ ರಕ್ಷಕರ ತಲೆಗಳು ಸಹಾ ಅವರ ಕಲ್ಲೇಟಿಗೆ ಸಿಕ್ಕಿ ತೂತು ಬಿದ್ದಿದ್ದವು!  ಹತ್ತಿರದ ಬೌರಿಂಗ್ ಆಸ್ಪತ್ರೆಗೆ ಕೊಂಡೊಯ್ದರೆ ಅಲ್ಲಿ ನೂರಾರು ಗಾಯಾಳುಗಳು ಚಿಕಿತ್ಸೆಗಾಗಿ ಕಾದಿದ್ದರು!  ಯಾವುದು ಆಗಬಾರದೆಂದು ಇಡೀ ಪೊಲೀಸ್ ಪಡೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದಿದ್ದರೋ ಅದೇ ಆಗಿ ಹೋಗಿತ್ತು!  ಅಭಿಮಾನಿ ದೇವರುಗಳ ಹಿಂಸಾಚಾರದಲ್ಲಿ ನೂರಾರು ವಾಹನಗಳು ಸುಟ್ಟು ಕರಕಲಾಗಿ ಹೋದರೆ, ಅಮೂಲ್ಯವಾದ ಎಂಟು ಜೀವಗಳು ಬಲಿಯಾಗಿ ಹೋಗಿದ್ದವು. 

ಆ ಎಂಟು ಜನರಲ್ಲಿ ಮಂಜುನಾಥ ಎಂಬ ನನ್ನದೇ ಹೆಸರಿನ ಪೊಲೀಸ್ ಇನ್ಸ್ಪೆಕ್ಟರ್ ಕೂಡಾ ಸೇರಿದ್ದರು.  ಬೆಳಿಗ್ಗೆ ಎಂಟು ಘಂಟೆಗೆ ಮನೆ ಬಿಟ್ಟಿದ್ದ ನಾನು ಈ ಗಲಾಟೆಗಳೆಲ್ಲಾ ಶುರುವಾಗುವ ಹೊತ್ತಿಗೆ ಮೊಬೈಲಿನಲ್ಲಿ ಕರೆ ಮಾಡಿ ಮಕ್ಕಳನ್ನು ಶಾಲೆಯಿಂದ ಕರೆ ತಂದು ಮನೆಯೊಳಗೇ ಇರುವಂತೆ ನನ್ನ ಪತ್ನಿಗೆ ಹೇಳಿದ್ದೆ!  ಆನಂತರ ಮತ್ತೆ ಅವಳೊಡನೆ ಮಾತನಾಡಲು ಸಾಧ್ಯವೇ ಆಗಿರಲಿಲ್ಲ,  ಯಾವಾಗ ಮಂಜುನಾಥ ಎನ್ನುವ ಹೆಸರಿನೊಡನೆ ಸಾವಿನ ಸುದ್ಧಿ ಪ್ರಸಾರವಾಯಿತೋ ಆಗಿನಿಂದ ನಾನು ಮಧ್ಯರಾತ್ರಿ ೧೨ರ  ನಂತರ ಮನೆ ತಲುಪುವವರೆಗೂ ಅವಳ ಅಳು ನಿಂತಿರಲಿಲ್ಲ!  

ಇಪ್ಪತ್ತೆಂಟು ವರ್ಷಗಳ ನನ್ನ ವೃತ್ತಿಜೀವನದಲ್ಲಿ ನಾನೆಂದೂ ಕಂಡರಿಯದಿದ್ದ ಸಮೂಹ ಸನ್ನಿ, ದುಃಖ, ಆಕ್ರೋಶ, ಅವೇಶ,ಆವೇಗ, ದೊಂಬಿ, ಹಿಂಸಾಚಾರವನ್ನು ಅಂದು, ನನ್ನ ನೆಚ್ಚಿನ ನಟಸಾರ್ವಭೌಮನ ಸಾವಿನ ದಿನದಂದು ಕಂಡಿದ್ದೆ!  ಅಬ್ಬಾ,,,ಆ ಕರಾಳ ನೆನಪುಗಳಿಗೆ ಅದೆಷ್ಟು ಬೇಗ ಹತ್ತು ವರ್ಷಗಳಾಗಿ ಹೋಯಿತು?   ನಮ್ಮ ನೆಚ್ಚಿನ ನಟಸಾರ್ವಭೌಮನ ಆತ್ಮಕ್ಕೆ ಶಾಂತಿ ಸಿಗಲಿ,  ಅವರು ಪಾಲಿಸಿದ ಆದರ್ಶಗಳು, ಬಳಸಿದ ಭಾಷೆ, ಕನ್ನಡ ಭಾಷೆಗೆ, ಕರ್ನಾಟಕಕ್ಕೆ ಅವರು ತಂದಿತ್ತ ಮೌಲ್ಯ ಇಂದಿನ ಕಂಗ್ಲೀಷ್ ನಟರ ಕಣ್ಣುತೆರೆಸಲಿ, ಸ್ವಚ್ಚ ಕನ್ನಡ ಮಾತಾಡುವಂತಾಗಲಿ.
ಬಾಳಲಿ ಕನ್ನಡ ತಾಯಿ, ಬೆಳಗಲಿ ನೂರ್ಕಾಲ ಕನ್ನಡತಾಯಿ. :-)   

No comments: