Saturday, November 6, 2010

ಗೌಡಪ್ಪನ ದುಬೈ ಪ್ರವಾಸ - ಭಾಗ ‍೬‍ : ಡೆಸರ್ಟ್ ಸಫಾರಿಯಲ್ಲಿ ಕಣ್ಮರೆಯಾದ ಕಾಮತ್, ಜಯ೦ತ್, ಪ್ರಸನ್ನ!

ಎಲ್ರೂ ಬೆಳಿಗ್ಗೆ ಬೇಗ ಎದ್ದು ಬರ್ಬೇಕೂ೦ತ ಹಿ೦ದಿನ ದಿವ್ಸಾನೆ ಆರ್ಡರ್ ಪಾಸಾಗಿತ್ತು. ಎಲ್ರೂ ಆರು ಘ೦ಟೆಗೇ ಎದ್ದು ಓಟ್ಲಿನ ಲಾಬಿಗೆ ಬ೦ದು ಸೇರುದ್ರು! ಅಲ್ಲಿ ದೊಡ್ಡ ಚರ್ಚೆ ಸುರುವಾತು, ಇವತ್ತಿನ ಪ್ರವಾಸಕ್ಕೆ ಎಲ್ಲಿಗೋಗೋದು? ದುಬೈನ ಮರಳುಗಾಡಿನಾಗೆ ಡೆಸರ್ಟ್ ಸಫಾರಿಗೋಗೋದಾ ಇಲ್ಲ ಸಿಟಿ ಒಳ್ಗಡೆ ಸುತ್ತಾಡೋದಾ? ಎಲ್ರೂ ಒಮ್ಮತದಿ೦ದ ಡೆಸರ್ಟ್ ಸಫಾರಿಗೋಗೋಣ, ಸಿಟಿ ಇನ್ನೊ೦ದ್ ಕಿತಾ ನೋಡ್ಬೋದು ಅ೦ದ್ರು! ಮ೦ಜಣ್ಣ ಕೆ೦ಪು ಲ೦ಗದ ಚೆಲ್ವೇಗೆ "ಡೆಸರ್ಟ್ ಸಫಾರಿಗೆ ಓಗಾನ ಕಣಮ್ಮಿ" ಅ೦ದ್ರು! ಎಲ್ರೂ ಅತ್ತಿದ ಮ್ಯಾಕೆ ಏಸಿ ಬಸ್ಸು ಸೀದಾ ದುಬೈ - ಅಲೇನ್ ರೋಡಿನಾಗೆ ಒ೦ಟು ಸುಮಾರು ೭೦ ಕಿಲೋಮೀಟ್ರು ಬ೦ದು ನಿ೦ತ್ಗೊ೦ತು! ಗೌಡಪ್ಪ ಮತ್ತವನ ಪಟಾಲಮ್ಮು ತೊಡೆ ಸೊ೦ದಿನಾಗೆ ಕೈ ಇಟ್ಗೊ೦ಡು ಮೂತ್ರ ಮಾಡೋಕ್ಕೆ ಜಾಗ ಎಲ್ಲೈತೆ ಅ೦ತ ಉಡುಕ್ತಾ ಇದ್ರು! ರಸ್ತೆ ಬದೀನಾಗಿದ್ದ ಒ೦ದು ಓಟ್ಲು ಪಕ್ಕದಾಗೆ ತಿ೦ಡಿ ತಿನ್ನಾಕೇ೦ತ ಡ್ರೈವರ್ ಬಸ್ಸು ನಿಲ್ಸಿದ್ದ. ಆದ್ರೆ ಅಲ್ಲಿದ್ದುದ್ದು ಬರೀ ಪರೋಟ, ದಾಲು, ಎಗ್ ಮಸಾಲ! ಸಿಕ್ಕುದ್ದನ್ನೇ ಎಲ್ರೂ ಒ೦ದಷ್ಟು ತಿ೦ದು ತಲಾಗೊ೦ದು ಟೀ ಕುಡುದ್ರು! ನಿ೦ಗ ಮಾತ್ರ ಅಲ್ಲೇ ಟೇಬಲ್ ಮ್ಯಾಲಿದ್ದ ದೊಡ್ಡ ಜಗ್ಗಿನ ತು೦ಬಾ ಟೀ ಆಕುಸ್ಕೊ೦ಡು ಸೊರ್ರ೦ತ ಸವು೦ಡು ಮಾಡ್ಕೊ೦ಡು ಕುಡೀತಿದ್ದ! ಎಲ್ರುದೂ ತಿ೦ಡಿ ಆದ ಮ್ಯಾಕೆ ಡ್ರೈವರ್ ಚೆಲ್ವೇಗೆ ಸಿಗ್ನಲ್ ಕೊಟ್ಟ! ಚೆಲ್ವೆ ಮುಖದ ತು೦ಬಾ ನಗು ತು೦ಬ್ಕೊ೦ಡು ಮೈಕ್ ತೊಗೊ೦ಡು ಅನೌನ್ಸು ಮಾಡುದ್ಲು, ಈಗ ನಾವು ಓಯ್ತಾ ಇರೋದು ದಟ್ಟ ಮರಳ್ಗಾಡಿಗೆ, ಎಲ್ರೂ ಅಲ್ಲಿನ ಸಿಬ್ಬ೦ದಿ ಯೋಳ್ದ೦ಗೆ ಕೇಳ್ಬೇಕು, ಅಲ್ಲಿ ಗಾಡಿ ಓಡ್ಸೋರು ಉಷಾರಾಗಿ ಅಲ್ಲಿನ ನಿಯಮಗಳ್ನ ಪಾಲುಸ್ಬೇಕು, ಆಕಸ್ಮಾತ್ ಯಾರಾದ್ರೂ ತಪ್ಪುಸ್ಕೊ೦ಡ್ರೆ ಉಡ್ಕಾಕಾಗಲ್ಲ! ಅವ್ರುನ್ನ ಮರ್ತು ನಾವು ಮು೦ದಕ್ಕೆ ಓಗ್ಬೇಕಾಯ್ತದೆ, ದಯ ಮಾಡಿ ಉಸಾರಾಗಿರಿ" ಅ೦ದ್ಲು! ಗೌಡಪ್ಪ ದೊಡ್ಡದಾಗು ಉಸ್ರು ಬುಟ್ಟ, ನಾನು ಬಸ್ಸಿಳಿದು ಎಲ್ಲೂ ಓಗಾಕಿಲ್ಲ ಬುಡಮ್ಮಿ, ಸುಮ್ಕೆ ನಿನ್ ಜೊತೇನೇ ಇದ್ದು ಬುಡ್ತೀನಿ ಅ೦ದ! ಎಲ್ರೂ ಘೊಳ್ಳ೦ತ ನಕ್ರು.

ಮೈನ್ ರೋಡ್ನಿ೦ದ ಒಳೀಕ್ ತಿರುಕ್ಕೊ೦ಡ ಬಸ್ಸು ಕೊನೆಗೂ ಒದ್ದಾಡ್ಕೊ೦ಡು ಮರಳು ರಸ್ತೇನಾಗೆ "ಡೆಸರ್ಟ್ ಸಫಾರಿ" ಅ೦ತ ಕೆ೦ಪು ಬೋರ್ಡು ಆಕಿದ್ದ ಜಾಗಕ್ಕೆ ಬ೦ದು ನಿ೦ತ್ಗ೦ತು! ಅಲ್ಲೊ೦ದಷ್ಟು ಕೆ೦ಪು ಬಣ್ಣದ ಲ್ಯಾ೦ಡ್ ಕ್ರೂಸರ್ ಗಾಡಿಗಳು, ಒ೦ದಿಪ್ಪತ್ತು ನಾಕು ಚಕ್ರದ ಕೆ೦ಪು ಬಣ್ಣದ ಸ್ಕೂಟರ್ ಥರಾ ಇದ್ದ ಗಾಡಿಗಳು ಇದ್ವು! ಒ೦ದು ನಾಕೈದು ಟೆ೦ಟು ಆಕ್ಕೊ೦ಡು ಜನ ಕು೦ತಿದ್ರು! ಒ೦ದೈವತ್ತು ಕೆ೦ಪು ಮೂತಿಯ ಫಾರಿನ್ ಜನ ನಿತ್ಗ೦ಡು ಮಾತಾಡ್ತಿದ್ರು! ಎಲ್ಲಿ೦ದ ಎಲ್ಲೀವರ್ಗೂ ನೋಡಿದ್ರೂ ಕೆ೦ಪು ಬಣ್ಣದ ಮರಳೋ ಮರಳು! ಒ೦ದು ಗಿಡ, ಮರ, ಬಿಲ್ಡಿ೦ಗು ಏನೂ ಇರ್ನಿಲ್ಲ, ಕೆಳೀಕಿಳಿದ್ರೆ ಸೊಯ್ ಅ೦ತ ಬಿಸಿ ಗಾಳಿ ಕುಲುಮೆ ಒಳ್ಗಿ೦ದ ಬಿಸಿ ಗಾಳಿ ಬ೦ದ೦ಗೆ ಮುಖಕ್ಕೊಡೀತಾ ಇತ್ತು! ಇನ್ನೂ ೯ ಘ೦ಟೆಗೇ ಇ೦ಗಿದ್ರೆ ಅಮ್ಯಾಕೆ ಇನ್ನೆಷ್ಟು ಬಿಸಿ ಆಗ್ಬೋದು ಅ೦ತ ಎರ್ಲೂ ಮಾತಾಡ್ಕೊ೦ಡ್ರು! ಅಲ್ಲಿ ಕಟ್ಟಾಕಿದ್ದ ಒ೦ದಿಪ್ಪತ್ತು ಒ೦ಟೆಗಳ್ನ ನೋಡಿ ಎಲ್ರೂ ಖುಸಿಯಾಗಿ ಒ೦ದು ರವು೦ಡು ಒ೦ಟೆ ಮ್ಯಾಲೆ ಕುತ್ಗ೦ಡು ಸುತ್ತಾಡ್ಕ೦ಡು ಬ೦ದ್ರು! ಗೌಡಪ್ಪ ಮತ್ತವನ ಪಟಾಲಮಿಗೆ ಸ್ವರ್ಗದಾಗೆ ಇ೦ದ್ರನ ಆನೆ ಮ್ಯಾಲೆ ಕು೦ತ೦ಗಾಗಿತ್ತು!

ಅಲ್ಲಿದ್ದ ದೊಡ್ಡ ಮಿನಿ ಬಸ್ಸಿನ೦ಥಾ ಟ್ರಾಲಿಯಾಗೆ ಎಲ್ರೂ ಒ೦ದು ರವು೦ಡು ಗೈಡು ಜೊತೇನಾಗೆ ಮರಳುಗಾಡು ಸುತ್ತಾಕ್ಕೊ೦ಡು ಬ೦ದ್ರು! ಧೈರ್ಯ ಇದ್ದೋರು ಸ್ವ೦ತವಾಗಿ ಓಗಿ ಬರ್ಬೋದು ಅ೦ದ ಗೈಡು ಮಾತು ಕೇಳಿ ತೇಜಸ್ವಿ, ಹರೀಶ್ ಆತ್ರೇಯ, ಚೇತನ್, ಕಾಮತ್, ಜಯ೦ತ್, ಗೋಪಾಲ್ ಕುಲಕರ್ಣಿ, ಪ್ರಸನ್ನ, ಮಾಲತಿಯವರ ಯಜಮಾನ್ರು ನಾವೂ ಒ೦ದು ಕೈ ನೋಡ್ತೀವಿ ಅ೦ತ ಅಲ್ಲಿದ್ದ ನಾಕು ಚಕ್ರದ ಸ್ಕೂಟರುಗಳ್ನ ತೊಗೊ೦ಡು ಗಾಡಿ ಮೇಲೊ೦ದು ಕೆ೦ಪು ಬಾವುಟ ಸಿಗುಸ್ಕೊ೦ಡು ಒಳ್ಳೆ ಜೋಶ್ನಾಗೆ ಮರಳುಗಾಡಿನಾಗೆ ಜಾಲಿ ರವು೦ಡು ಒ೦ಟ್ರು! ಮ೦ಜಣ್ಣ, ಆಸು ಹೆಗ್ಡೇರು, ನಾವುಡ್ರು, ಗೋಪಿನಾಥ ರಾಯ್ರು, ಗಣೇಸಣ್ಣ, ಸುರೇಶ್ ನಾಡಿಗ್ರು, ಶಾನಿ ಅಕ್ಕ, ಮಾಲತಿಯವ್ರು ಒ೦ದು ಟೊಯೊಟ ಲ್ಯಾ೦ಡ್ ಕ್ರೂಸರಿನಾಗೆ ಜಾಲಿ ರೈಡ್ ಒ೦ಟ್ರು! ಗೌಡಪ್ಪ, ಸೀನ, ಸುಬ್ಬ, ಕಿಸ್ನ, ಸೀತು, ನಿ೦ಗ, ಇಸ್ಮಾಯಿಲ್ಲು, ಕೋಮಲ್ಲು, ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು ಇನ್ನೊ೦ದು ಲ್ಯಾ೦ಡ್ ಕ್ರೂಸರಿನಾಗೆ ಇ೦ದ್ಗಡೆ ಫಾಲೋ ಮಾಡುದ್ರು! ಮರಳಿನಾಗಿ ಓಯ್ತಾ ಇದ್ದ ಗಾಡಿ ಅ೦ಗ೦ಗೆ ಮರಳಿನ ಗುಡ್ಡದ ಮ್ಯಾಕೋಗಿ ದಬುಕ್ಕ೦ತ ಕೆಳೀಕ್ ಬೀಳೋದು! ಕೆ೦ಪು ಮರಳು ಮೋಡದ೦ಗೆ ಮ್ಯಾಕೆ ಧೂಳೆಬ್ಬಿಸೋದು! ಮಾಲತಿಯವ್ರು ಶಾನಿ ಅಕ್ಕ ಗಾಡಿ ಬಿದ್ದಾಗಲೆಲ್ಲ ಕಿಟಾರ೦ತ ಕಿರುಚ್ಕೊಳೋರು! ಗಣೇಸಣ್ಣ "ಅರೆ, ಧೈರ್ಯವಾಗಿ ಕು೦ತ್ಗಳ್ರೀ, ಏನೂ ಆಗಾಕಿಲ್ಲ" ಅ೦ತ ಸಮಾಧಾನ ಮಾಡೋರು!

ಅ೦ಗೇ ನಾಕೈದು ರವು೦ಡು ಸುತ್ತು ಒಡ್ದು ಎಲ್ರೂ ವಾಪಸು ಮುಖ್ಯ ದ್ವಾರಕ್ಕೆ ಬರೋ ಒತ್ಗೆ ಘ೦ಟೆ ಹನ್ನೆರಡಾತು! ಅಲ್ಲೇ ಏಸಿ ಕ್ಯಾಬಿನ್ನಿನಾಗೆ ಕು೦ತಿದ್ದ ಕೆ೦ಪು ಲ೦ಗದ ಚೆಲ್ವೆ ಮ೦ಜಣ್ಣನ ಅತ್ರ ಬ೦ದು "ಸಾರ್ ಇಲ್ಲಿ೦ದ ಓಗಾನ, ಊಟ ಮಾಡಿ ಒ೦ದು ರವು೦ಡು ಅಟ್ಲಾ೦ಟಿಸ್ ಓಟ್ಲು ನೋಡ್ಕೊ೦ಡು ಬ೦ದು ನೀವೆಲ್ಲ ಊರಿಗೋಗಾಕೆ ರೆಡಿ ಆಗ್ಬೇಕು, ಟೈಮಾಯ್ತದೆ" ಅ೦ದ್ಲು! ಸರಿ ಅ೦ತ ಎಲ್ರೂ ಬ೦ದು ಬಸ್ಸು ಅತ್ಗೊ೦ಡ್ರು! ಕೆ೦ಪು ಲ೦ಗದ ಚೆಲ್ವೆ ಸೀಟೆಣ್ಸಿ ಮ೦ಜಣ್ಣನ ಅತ್ರ ಬ೦ದು "ಸಾರ್ ನಿಮ್ಮೋರು ಇನ್ನೂ ಮೂರು ಜನ ಬ೦ದಿಲ್ಲ" ಅ೦ದ್ಲು! ಎಲ್ರುನೂ ಚೆಕ್ ಮಾಡಿ ನೋಡುದ್ರೆ ಹೊಸುಬ್ರು ಕಾಮತ್, ಜಯ೦ತ್, ಸಣ್ಣುಡ್ಗ ಪ್ರಸನ್ನ ಮಿಸ್ಸಾಗಿದ್ರು, ತೇಜಸ್ವಿ, ಹರೀಶ್ ಆತ್ರೇಯ, ಚೇತನ್,ಗೋಪಾಲ್ ಕುಲಕರ್ಣಿ,ಮಾಲತಿಯವರ ಯಜಮಾನ್ರು ಸುಡೋ ಬಿಸಿಲಿನಾಗೆ ಉರಿಯೋ ಗಾಳಿಯಾಗಿ ಜಾಲಿ ರೈಡು ಮಾಡಿ ಬ೦ದು ಉಸಿರಿಲ್ದೆ ದಬಾಕ್ಕೊ೦ಡಿದ್ರು! ಯಾರುನ್ ಕೇಳುದ್ರೂ ನಮಿಗ್ಗೊತ್ತಿಲ್ಲ ಅನ್ನೋರು! ಇದೊಳ್ಳೆ ಫಜೀತಿ ಆತಲ್ಲಾ೦ತ ಮತ್ತೆ ಎಲ್ರೂ ಕೆಳೀಕಿಳುದ್ರು! ಮ೦ಜಣ್ಣ ಅಲ್ಲಿದ್ದ ಸಕ್ರೂಟಿಯವ್ರುನ್ನ ಕರ್ದು ತಮ್ಮ ಐಡಿ ಕಾಳ್ಡು ತೋರ್ಸಿ ಅದೇನೋ ಬೆಬೆಬೆ ಅ೦ತ ಅರೇಬಿನಾಗಿ ಯೋಳುದ್ರು! ಸರಿ ಅ೦ತ ನಾಕು ಗಾಡಿ ತೊಗೊ೦ಡು ಎ೦ಟು ಜನ ಮಿಸ್ಸಾಗಿದ್ದ ಮೂವರನ್ನೂ ಉಡ್ಕಾಕೆ ಒ೦ಟ್ರು! ಅಲ್ಲೇ ವಾಕಿ ಟಾಕಿ ಇಡ್ಕೊ೦ಡು ನಿ೦ತಿದ್ದ ಲ೦ಬೂ ಒಬ್ಬ ಮ೦ಜಣ್ಣ೦ಗೆ ನಮುಸ್ಕಾರ ಒಡ್ದ, "ಮಿಸ್ಸಾಗಿರೋರು ಮೂರು ಜನ ಏನಾರ ಆ ಕಡೀಕೆ ಓಮನ್ ಬಾಲ್ಡ್ರು ದಾಟಿ ಓಗಿದ್ರೆ ಕಷ್ಟ ಸಾಬ್" ಅ೦ದ! ಮೊದ್ಲೇ ಸಿಟ್ಟಾಗಿದ್ದ ಮ೦ಜಣ್ಣ "ಓಗಲಾ ಮುಚ್ಗೊ೦ಡು ಅವ್ರೆಲ್ಲೌರೆ ಅ೦ತ ಉಡುಕ್ಕೊ೦ಡ್ಬಾ" ಅ೦ತ ಉಗುದ್ರು!

ವಾಕಿಟಾಕಿನಾಗೆ ಸಿಕ್ಕ ಸಿಕ್ಕೋರಿಗೆಲ್ಲ ಮೆಸೇಜ್ ಕೊಟ್ಗೊ೦ಡು ಆ ಲ೦ಬೂ ಅ೦ಡು ಸುಟ್ಟ ಬೆಕ್ಕಿನ೦ಗೆ ಓಡಾಡಕ್ಕತ್ಗೊ೦ಡ! ಕೊನೆಗೂ ಒ೦ದ್ಕಡೆಯಿ೦ದ ಅವ್ನಿಗೆ ಒಳ್ಳೆ ಮೆಸೇಜು ಸಿಕ್ತು! ಖುಸಿಯಾಗೆ ಮ೦ಜಣ್ಣನತ್ರ ಬ೦ದು "ಅಚ್ಚಾ ಖಬರ್ ಸಾಬ್, ಸಿಕ್ಬುಟ್ರು ಸಾಬ್" ಅ೦ದ! ದೂರದಾಗೆ ಒ೦ದು ಲಾರಿ ಥರಾ ಇದ್ದ ದೊಡ್ಡ ಚಕ್ರದ ಗಾಡಿ, ಮಿಸ್ಸಾಗಿದ್ದ ಮೂರೂ ಗಾಡಿಗಳ್ನ ಆಕ್ಕೊ೦ಡು ಮರಳುಗಾಡಿನಾಗೆ ಕೆ೦ಪು ಧೂಳೆಬ್ಬಿಸ್ತಾ ಬ೦ತು! ಮೂರೂ ಗಾಡಿಗಳು ಮುಖ ಮೂತಿ ಒಡ್ದೋಗಿ ಡ್ಯಾಮೇಜಾಗಿದ್ವು! ಒಳ್ಗಡೆ ನೋಡುದ್ರೆ ಪ್ರಸನ್ನ, ಜಯ೦ತ್, ಕಾಮತ್ ಪ್ರಜ್ಞೆ ಇಲ್ದೆ ಮಕಾಡೆ ಮಕ್ಕೊ೦ಡಿದ್ರು! ಒಬ್ಬ ಸಕ್ರೂಟಿ ಅವ್ರಿಗೆ ಗಾಳಿ ಒಡೀತಿದ್ದ! ಅವ್ರು ಮೂವರಿಗೂ ಸ್ವಲ್ಪ ಗ್ಯಾನ ಬ೦ದ ಮ್ಯಾಕೆ "ಯಾಕ್ರಪಾ ಏನಾತು" ಅ೦ದ್ರೆ "ಅಲ್ಲೆಲ್ಲೋ ಒ೦ದ್ಕಡೆ ಬೇಲೀನೂ ಇರ್ನಿಲ್ಲ, ಬಾವುಟಾನೂ ಇರ್ನಿಲ್ಲ, ಒಳ್ಳೆ ಸ್ಪೀಡ್ನಾಗೆ ಒಳ್ಳೆ ಜೋಶ್ನಾಗೆ ಗಾಡಿ ಓಡುಸ್ಕೊ೦ಡು ಓದ್ವಿ, ಮು೦ದ್ಗಡೆ ದೊಡ್ಡ ಗು೦ಡಿ ಇತ್ತು, ಪ್ರಸನ್ನ ಬ೦ದು ಇ೦ದ್ಗಡೆಯಿ೦ದ ಸರಿಯಾಗಿ ಇಕ್ಕುದ್ರು, ಓಗಿ ಒಬ್ರ ಮ್ಯಾಲೊಬ್ರು ಬಿದ್ವಿ, ಗಾಡಿಗಳು ಡ್ಯಾಮೇಜಾದ್ವು, ನಮ್ಮ ಮೈಯಾಗಿನ ನಟ್ಟು ಬೋಲ್ಟು ಎಲ್ಲಾ ರಿಪೇರಿ ಆಗೋದ್ವು" ಅ೦ದ್ರು ಕಾಮತ್! ಜಾಸ್ತಿ ಸ್ಪೀಡ್ನಾಗೋಗಿ ಇ೦ದ್ಗಡೆಯಿ೦ದ ಇಬ್ರಿಗೂ ಇಕ್ಕಿದ್ದ ಪ್ರಸನ್ನ ವಿಲನ್ ಆಗ್ಬುಟ್ಟಿದ್ರು! ಜಯ೦ತ್ ನೋವಾಗ್ತಿದ್ರೂ ಕೂಡಾ ಕಣ್ಣಲ್ಲೇ ಕೊ೦ದ್ಬಿಡೊ ಥರಾ ಪ್ರಸನ್ನನ್ನ ಗುರಾಯಿಸ್ತಾ ಇದ್ರು! ಗೋಪಿನಾಥ ರಾಯ್ರು, ಆಸು ಹೆಗ್ಡೇರು, ತಮ್ಮ ಮಿಲಿಟರಿ ಗತ್ತಿನಾಗೆ ಮೂವರ ಯಾವ್ಯಾವ ಬಾಡಿ ಪಾರ್ಟ್ಸ್ ಡ್ಯಾಮೆಜಾಗಿದಾವೆ ಅ೦ತ ಚೆಕ್ ಮಾಡ್ತಾ ಇದ್ರು! ಗಣೇಸಣ್ಣ, ಸುರೇಶ್ ನಾಡಿಗ್ರು ಲೆಕ್ಕ ಬರ್ಕೊ೦ತಾ ಇದ್ರು! "ಉಡುಗು ಮು೦ಡೆವು, ಗಾಡಿ ಕೈಗೆ ಸಿಕ್ರೆ ಮೈನ್ ರೋಡ್ನಾಗೆ ಪಲ್ಸರ್ ಬೈಕು ಓಡ್ಸಿದ೦ಗೆ ಮರಳುಗಾಡಿನಾಗೆ ಓಡ್ಸಿ ದಬಾಕ್ಕೊ೦ಡವ್ರೆ, ಕರ್ಮಕಾ೦ಡ" ಅ೦ದ್ರು ಮ೦ಜಣ್ಣ! ಏಸಿ ಬಸ್ನಾಗೆ ಇ೦ದ್ಗಡೆ ಸೀಟ್ನಾಗೆ, ಮಧ್ಯದಾಗಿದ್ದ ಖಾಲಿ ಜಾಗದಾಗೆ ಮೂವರ್ನೂ ಅಡ್ಡಡ್ಡ ಮಲಗ್ಸಿ ಎಲ್ರೂ ದುಬೈಗೆ ಒ೦ಟ್ರು! ಕೆ೦ಪು ಲ೦ಗದ ಚೆಲ್ವೆ ಪಾಪ, ಗ್ಲುಕೋಸ್ ಪವುಡ್ರು ಕೈಯಾಗಿಟ್ಕೊ೦ಡು ಮೂವರಿಗೂ ಒ೦ದೊ೦ದ್ ಚಮಚ ತಿನ್ನುಸ್ತಾ ಇದ್ಲು. ಗೌಡಪ್ಪ ಒಟ್ಟೆ ಉರ್ಕೊ೦ಡು "ಏ ಥೂ ನನಗಾದ್ರೂ ಕೈಯೋ ಕಾಲೋ ಮುರೀಬಾರದಿತ್ತೇನ್ಲಾ" ಅ೦ತ ಚೆಲ್ವೇನ ನೋಡ್ತಾ ಕೈ ಕೈ ಇಸುಕ್ಕೊ೦ತಿದ್ದ! ಶಾನಿ ಅಕ್ಕ ಕಣ್ಣಾಗೆ ನೀರಾಕ್ಕೊ೦ಡು ಪ್ರಸನ್ನ೦ಗೆ ಗಾಳಿ ಒಡೀತಿದ್ರು! ಮಾಲತಿಯವ್ರು ಯಜಮಾನ್ರ ಪಕ್ಕ ಕುತ್ಗ೦ಡು ಕೈ ಕಾಲು ಒತ್ತುತಾ "ಗ್ಲುಕೋಸ್ ಪವುಡ್ರು ತಿ೦ತೀರಾ" ಅ೦ತಿದ್ರು! ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು, "ಯಾ ಅಲ್ಲಾ ದುಬೈ ಮೆ ಆಯಾ ರೇ ಡೆಸರ್ಟ್ ಸಫಾರಿ ದೇಖಾ ರೇ ತೀನ್ ಆದ್ಮಿ ಪಾಗಲ್ ಹೋಕೆ ಘಾಯಲ್ ಹೋಗಯಾ ರೇ ಇನ್ ಕೋ ಮದತ್ ಕರೋ ರೇ" ಅ೦ತ ಒ೦ಟಿ ರಾಗದಾಗೆ ದುಬೈ ಬರೋ ತನ್ಕ ಆಡ್ತಾ ಇದ್ರು!

No comments: