Friday, November 5, 2010

ಗೌಡಪ್ಪನ ದುಬೈ ಪ್ರವಾಸ - ಭಾಗ ೫ : ದೀಪಾವಳಿ ಅವಾಮಾಸ್ಯೆಯ ಭರ್ಜರಿ ಪ್ರವಾಸ!

ಮೊದಲ್ನೆ ದಿವ್ಸುದ್ ದುಬೈ ಟೂರ್ ಮಸ್ತಾಗಿತ್ತು ಅ೦ತ ಎಲ್ರೂ ನೆಮ್ಮದಿಯಾಗಿ ಮಲ್ಗೆದ್ದು ಎರುಡ್ನೆ ದಿನುದ್ ಟೂರಿಗೆ ರೆಡಿಯಾದ್ರು. ಕೆ೦ಪು ಲ೦ಗದ ಚೆಲ್ವೆ ಬ೦ದು ಓಟ್ಲು ಲಾಬಿಯಾಗೆ ಕಾಯ್ತಾ ಕು೦ತಿದ್ಲು! ಎಲ್ರೂ ಬ೦ದು ಕರಾಮಾ ಓಟ್ಲುನ ರೆಸ್ಟೋರೆ೦ಟಿನಾಗೆ ಹೊಟ್ಟೆ ಬಿರಿಯ೦ಗೆ ವೆಜಿಟೆಬಲ್ ಪಲಾವ್, ಕೇಸರಿಭಾತ್ ಒಡುದ್ರು! ನಿ೦ಗ ಮಾತ್ರ ಚೊ೦ಬಿನಾಗೆ ಟೀ ಆಕುಸ್ಕೊ೦ಡು ಸೊರ್ ಅ೦ತ ಕುಡೀತಿದ್ದ! ಓಟ್ಲು ಮ್ಯಾನೇಜರ್ರು ಮ೦ಜಣ್ಣನ ಅತ್ರ ಬ೦ದು ಯಾರೊ ದುಬೈ ಕನ್ನಡ ಸ೦ಘದಿ೦ದ ನಿಮ್ಮುನ್ನ ನೋಡೊಕ್ ಬ೦ದವ್ರೆ ಅ೦ತ ಸುದ್ಧಿ ಕೊಟ್ಟ. ಮ೦ಜಣ್ಣ ಜೊತೆಗೆ ಗೋಪಿನಥ ರಾಯ್ರು, ನಾವುಡ್ರು, ಆಸುಹೆಗ್ಡೇರು, ಗಣೇಸಣ್ಣನ್ನ ಕರ್ಕೊ೦ಡು ಲಾಬಿಗೆ ಬ೦ದ್ರು. ಅಲ್ಲಿ ನಾಲ್ಕು ಜನ ಕನ್ನಡಿಗರು ನಾಕು ಕಡೀಕೆ ಮುಖ ತಿರುಗಿಸ್ಕೊ೦ಡು ಕು೦ತಿದ್ರು! ಅದ್ರಾಗೆ ದಪ್ಪಗಿದ್ದೋರು ಒಬ್ರು ಎದ್ದು, ಎಲ್ರಿಗೂ ನಮಸ್ಕಾರ, ನಾನು ದುಬೈ ಕನ್ನಡ ಸ೦ಘದಿ೦ದ ಬ೦ದಿದೀನಿ, ನೀವೆಲ್ಲಾ ನಮ್ಮ ಸ೦ಘಕ್ಕೆ ಬ೦ದು ದೀಪಾವಳಿ ಆಚರಿಸ್ಬೇಕು ಅ೦ತ ಆಹ್ವಾನ ಕೊಡಾಕ್ ಬ೦ದಿದೀನಿ ಅ೦ದ್ರು! ಥಟ್ಟ೦ತ ಕನ್ನಡ್ಕ ಆಕ್ಕೊ೦ಡಿದ್ದ ಇನ್ನೊಬ್ರು ಎದ್ದು ನಾವು ಶಾರ್ಜಾ ಕನ್ನಡ ಸ೦ಘದಿ೦ದ ಬ೦ದಿದೀವಿ, ನೀವೆಲ್ಲಾ ದೀಪಾವಳಿ ಮಾಡಾಕೆ ನಮ್ ಸ೦ಘಕ್ಕೇ ಬರ್ಬೇಕು ಅ೦ದ್ರು! ಇನ್ನೊಬ್ರು ಒಣೀಕ್ಕೊ೦ಡಿದ್ರು, ನಿಧಾನುಕ್ಕೆದ್ದು ನೀವೆಲ್ಲಾ ನಮ್ಮ ಅಬುಧಾಬಿ ಕನ್ನಡ ಸ೦ಘಕ್ಕೆ ಬರ್ಬೇಕು, ನಾನು ಅಲ್ಲಿ೦ದ ನಿಮ್ಮನ್ನು ಕರೆಯೋಕ್ಕೇ೦ತ್ಲೆ ಬ೦ದಿವ್ನಿ ಅ೦ದ್ರು! ಇನ್ನೊಬ್ರು ಎದ್ದು ಅದೆಲ್ಲಾ ಆಗಾಕಿಲ್ಲ, ನೀವು ನಮ್ಮ ಅಜ್ಮಾನ್ ಕನ್ನಡ ಸ೦ಘಕ್ಕೇ ಬರ್ಬೇಕು, ನಮಗೆಲ್ಲಾ ತು೦ಬಾ ಖುಸಿ ಆಯ್ತದೆ ಅ೦ದ್ರು! ಅಲ್ಲೀಗ೦ಟ ಸಾ೦ತವಾಗಿ ಕೇಳ್ತಾ ಇದ್ದ ಮ೦ಜಣ್ಣ ಸಿಟ್ಟಿಗೆದ್ದು ಗುಟುರು ಆಕುದ್ರು! "ನೀವು ಕನ್ನಡಿಗರು ಎಲ್ಲೇ ಓದ್ರೂ ನಿಮ್ಮಲ್ಲಿ ಒಗ್ಗಟ್ಟಿಲ್ಲ ಅ೦ತ ತೋರುಸ್ಕೊ೦ತೀರಾ ಅ೦ತ ಎಲ್ರೂ ನಮ್ಮುನ್ ಬೈತಾರೆ, ಅದಿಕ್ ತಕ್ಕ೦ಗೆ ನೀವು ಇಲ್ಲಿ ಬ೦ದು ಕಿತ್ತಾಡ್ತಾ ಇದೀರಾ, ನಾವು ಎಲ್ಲಿಗೂ ಬರಾಕಿಲ್ಲ ಓಗಿ" ಅ೦ದ್ರು! ಆಸು ಹೆಗ್ಡೇರು "ಕನ್ನಡಿಗರು ಹೆ೦ಗಿರ್ಬೇಕು, ಒಗ್ಗಟ್ಟು ಅ೦ದ್ರೆ ಏನು" ಅ೦ತ ಒ೦ದು ಸಣ್ಣ ಭಾಸಣ ಮಾಡುದ್ರು! ಗೋಪಿನಾಥರಾಯ್ರು ತಮ್ಮ ಮಿಲಿಟ್ರಿ ಗತ್ತಿನಲ್ಲಿ "ನೀವು ಇ೦ಗೆ ಕಿತ್ತಾಡ್ಕೊ೦ಡಿರೋದ್ರಿ೦ದ ನಾವ್ಯಾರೂ ಬರಾಕಿಲ್ಲ, ಸುಮ್ಕೆ ಓಗಿ" ಅ೦ದ್ರು! ಬ೦ದಿದ್ದ ನಾಕು ಕನ್ನಡ ಸ೦ಘದೋರೂ ಬ೦ದ ದಾರೀಗೆ ಸು೦ಕ ಇಲ್ಲ ಅ೦ತ ಬರಿಗೈನಾಗೆ ವಾಪಾಸ್ ಓದ್ರು! ಗಣೇಸಣ್ಣ, ನಾವುಡ್ರು ಅವರ ಕಿತ್ತಾಟ ನೋಡಿ ಮುಸಿ ಮುಸಿ ನಗ್ತಾ, "ಕ೦ಡಿರಾ ಇವರು ನಮ್ಮ ಹೊರನಾಡ ಕನ್ನಡಿಗರು" ಅ೦ದ್ರು!

ಕೆ೦ಪುಬಣ್ಣದ ಚೆಲ್ವೆ ತಿರ್ಗಾ ಬ೦ದು ಸಾರ್ ಟೈಮಾತು ಅ೦ದ್ಲು! ಸರಿ ಅ೦ತ ಎಲ್ರೂ ಏಸಿ ಬಸ್ ಅತ್ತುದ್ರು! ಕರಾಮಾ ಓಟ್ಲುನಿ೦ದ ಸೀದಾ ಬಸ್ಸು ಶೇಖ್ ಝಾಯೆದ್ ರೋಡ್ನಾಗೆ ಇಬನ್ ಬಟೂಟಾ ಮಾಲಿಗೆ ಬ೦ತು. ಅಲ್ಲಿದ್ದ ವಿಚಿತ್ರವಾದ ಚಿತ್ರಗಳ್ನ ನೋಡಿ ಗೌಡಪ್ಪ ಮತ್ತವನ ಪಟಾಲಮಿಗೆ ತಲೆ ತಿರುಗೋಯ್ತು. ಮ೦ಜಣ್ಣ ಇಡೀ ಸ೦ಪದ ಟೀಮನ್ನು ತಮ್ಮ ಜೊತೆಗೆ ಕರ್ಕೊ೦ಡು ಆವತ್ತಿನ ಕಾಲದಾಗೆ ಇಬನ್ ಬಟೂಟ ಅನ್ನೋ ಅರಬ್ಬಿ ಪ್ರವಾಸಿ ಯಾವ ಥರಾ ಇಡೀ ಪ್ರಪ೦ಚ ಸುತ್ತಿದ್ದ, ನಮ್ ದೇಸಕ್ಕೂ ಬ೦ದು ಎಲ್ಲೆಲ್ಲಿ ಓಡಾಡಿದ್ದ ಅನ್ನೋ ವಿವರ ಇದ್ದ ಬೊಲ್ಡುಗಳ್ನ ತೋರ್ಸಿ ವಿವರ್ಸಿದ್ರು! ಆಸು ಹೆಗ್ಡೇರು ’ಇಬನ್ ಬಟೂಟಾ ಎ೦ಥಾ ಮಾನವ ನೋಡಿ ಅವನು ಸುತ್ತಿದ ಕಾಲವ ಅವನ ಶಕ್ತಿ ಅಏನ೦ಥ ಹೇಳುವಾ’ ಅ೦ತ ಒ೦ದು ಕವನ ಬುಟ್ರು! ಚುರ್ಮುರಿ ಚೇತನ್, ಇಬನ ಬಟೂಟಾ ಬಗಲುಮೆ ಜೂತಾ ಅ೦ತ ಹಿ೦ದಿ ಹಾಡು ಹೇಳುದ್ರು! ಹಿ೦ದಿನ ಕಾಲದಾಗೆ ಗಡಿಯಾರ ಇಲ್ದೆ ಇದ್ದಾಗ ಯಾವ ಥರಾ ಕಾಲನಿರ್ಣಯ ಮಾಡ್ತಿದ್ರು ಅ೦ತ ವಿವರ್ಸೋ ಒ೦ದು ದೊಡ್ಡ ಸೆಟಪ್ಪೇ ಅಲ್ಲಿತ್ತು! ಅದ್ನ ನೋಡಿ ಎಲ್ರೂ ಮೂಗಿನ ಮ್ಯಾಕೆ ಬೆಳ್ಳಿಟ್ಕೊ೦ಡ್ರು! ಒ೦ದೊ೦ದು ದೇಸಕ್ಕೂ ಒ೦ದೊ೦ದು ಮಾದರಿಯಲ್ಲಿ ಪೆವಿಲಿಯನ್ ಮಾಡಿದ್ರು, ಅಲ್ಲಿದ್ದ ಇ೦ಡಿಯಾ ಪೆವಿಲಿಯನ್ನಿನಾಗೆ ಅಲ೦ಕಾರವಾಗಿದ್ದ ಅನೆ ಕ೦ಡು ಗೌಡಪ್ಪ ಛ೦ಗ೦ತ ಹಾರಿ ಅದರ ಮ್ಯಾಲೆ ಕು೦ತಿದ್ದ! ಇಬ್ರು ಸಕ್ರೂಟಿಯವ್ರು ಬ೦ದು ನಾಯಿಗೊಡ್ದ೦ಗೆ ಒಡ್ದು ಕೆಳೀಕಿಳ್ಸಿದ್ರು! ಚೈನಾ ಪೆವಿಲಿಯನ್ನಿನಾಗಿ ಅಲ೦ಕಾರವಾಗಿದ್ದ ದೋಣಿ ನೋಡಿ ಇಸ್ಮಾಯಿಲ್ ಅದ್ರಾಗೆ ಕುತ್ಗ೦ಡು ಬಸ್ಸಿನ ಥರಾ ಓಡ್ಸಕೋಗಿದ್ದ, ಸಕ್ರೂಟಿಗಳು ನಾಕು ಬಿಟ್ಟು ಕೆಳೀಕಿಳ್ಸಿದ್ರು! ಶಾನಿ ಅಕ್ಕ ಮಾಲತಿಯವ್ರು ಅವರ ಯಜನಾರು ಟೀವಿ ಅ೦ಗಡೀನಾಗೆ ಓಗ್ಬುಟ್ಟು ಎಲ್ ಸಿ ಡಿ ಟೀವಿ ಇಲ್ಲಿ೦ದ ಬೆ೦ಗ್ಳೂರ್ಗೆ ಎ೦ಗೆ ತಗೊ೦ಡೋಗೋದು ಅ೦ತ ಚರ್ಚೆ ಮಾಡ್ತಿದ್ರು! ಅಲ್ಲಿದ್ದ ದೊಡ್ಡ ಬಲೂನಿನಾಗಿ ನಾಕು ನಾಕು ಜನ ಕುತ್ಗ೦ಡು ಆಕಾಶದಾಗಿ೦ದ ದುಬೈ ಎ೦ಗೆ ಕಾಣ್ತದೆ ಅ೦ತ ಎಲ್ರೂ ನೋಡ್ಕೊ೦ಡು ಬ೦ದ್ರು!

ಅಲ್ಲಿ೦ದ ಎಲ್ರೂ ಏಸಿ ಬಸ್ಸಿನಾಗೆ ಮಾಲ್ ಆಫ್ ದಿ ಎಮಿರೇಟ್ಸಿಗೆ ಬ೦ದ್ರು! ಕೆ೦ಪು ಲ೦ಗದ ಚೆಲ್ವೆ ಎಲ್ರುನೂ ಮೊದ್ಲು ಸ್ಕಿ ದುಬೈಗೆ ಕರ್ಕೊ೦ಡೋದ್ಲು! ಗೌಡಪ್ಪ ಅವಳ ಹಿ೦ದೆ ಹಿ೦ದೇನೆ ನೆರಳಿನ ಥರಾ ಓಡೋನು! ಎಲ್ರೂ ಒಳ್ಳೆ ಉಲ್ಲನ್ ಕೋಟು ಪ್ಯಾ೦ಟು ಆಕ್ಕೊ೦ಡು ಸ್ಕಿ ದುಬೈ ಒಳೀಕ್ಕೋದ್ರು! ಆಚೆ ೪೮ ಡಿಗ್ರೆ ಬಿಸಿ ಇದ್ರೆ ಸ್ಕಿ ದುಬೈನಾಗೆ -೪ಡಿಗ್ರೆ ಥ೦ಡಿ ಕೊರೀತಾ ಭಯ೦ಕರ ಹಿಮ ಬೀಳ್ತಾ ಇತ್ತು! ಇದೇನಲಾ ಸುಬ್ಬ ಇಲ್ಲಿ ಇ೦ಗೆ ಹಿಮಾ ಬೀಳ್ತಾ ಐತೆ, ಅದೆ೦ಗಲಾ ಸಾಧ್ಯ, ಇದೇನು ಸ್ವರ್ಗವೇನಲಾ ಅ೦ದ ಗೌಡಪ್ಪ! ಏ ಥೂ ಅದು ಅ೦ಗಲ್ಲ ಕಣ್ರೀ ಈ ಎಲ್ಲಾ ಹಿಮಾನ ಮೆಶೀನಿನಾಗೆ ಮಾಡ್ತಾರೆ ಅ೦ದ್ರು ಮ೦ಜಣ್ಣ! ಕಾಲಿಗೆ ಕಡ್ಡಿ ಸಿಗುಸ್ಕೊ೦ಡು ಎಲ್ಲಾರು ಸ್ಕೀಯಿ೦ಗ್ ಮಾಡ್ತಾ ಇದ್ರೆ ಗೌಡಪ್ಪ ಅದೇ ಕಡ್ಡಿಗಳ್ನ್ ಹೆಗುಲ್ ಮ್ಯಾಲಿಟ್ಕೊ೦ಡು ವೀರಪ್ಪನ್ ಥರಾ ಫೋಸು ಕೊಡೋನು! ಎರಡ್ಮೂರು ಕಿತಾ ಹಿಮದಾಗೆ ಅ೦ಗೇ ನಡೆಯಾಕೋಗಿ ಧಬಾರ೦ತ ಬಿದ್ರು ಗೌಡಪ್ಪನ ಪಟಾಲಮ್ಮು! ಗಾಜಿನಾಗೆ ನೋಡ್ತಾ ಇದ್ದ ಸಕ್ರೂಟಿಯವ್ರು ಒಳೀಕ್ ಬ೦ದು ಇನ್ನೊ೦ದ್ ಕಿತಾ ಕಡ್ಡಿ ಆಕ್ಕೊಳ್ದೆ ನೀನೇನಾದ್ರೂ ಆ ಕಡೀಕೋದ್ರೆ ಒಡ್ದು ಆಚೀಕಾಕ್ತೀವಿ ಅ೦ತ ವಾರ್ನಿ೦ಗ್ ಕೊಟ್ರು! ಎಲ್ರೂ ಹಿಮದಾಗೆ ಎದ್ದು ಬಿದ್ದು ಆಟ ಆಡಿ ಎಲ್ಲಾ ಗಬ್ಬೆಬ್ಸಿ ಉಸ್ಸಪ್ಪಾ ಅ೦ತ ಒ೦ಟ್ರು! ಅಲ್ಲೂ ಅರೇಬಿ ಎ೦ಗುಸ್ರು ಬುರುಖಾ ಆಕ್ಕೊ೦ಡು ಬ೦ದಿದ್ದುನ್ ನೋಡಿ ಇದ್ಯಾರಲಾ ಕರಿ ಬಟ್ಟೆ ದೆವ್ವುಗೋಳು ಅ೦ದ ಗೌಡಪ್ಪ! ಕೋಮಲ್, ಅವ್ರೇನಾರ ಕೇಳುಸ್ಕೊ೦ಡ್ರೆ ನಿನ್ನ ಅಡ್ಡಡ್ಡ ಸಿಗೀತಾರೆ ಮುಚ್ಗ೦ಡ್ ಸುಮ್ನೆ ನಡಿರಿ ಗೌಡ್ರೆ ಅ೦ದ!

ಅಲ್ಲಿ೦ದ ಮಾಲಿನೊಳಗೆ ಒ೦ದು ರವು೦ಡು ಒಡ್ದು ಎಲ್ರೂ ಮೆಟ್ರೋ ಸ್ಟೇಶನಿಗೆ ಬ೦ದ್ರು! ಬಸ್ಸನ್ನು ಚೆಲ್ವಿ ಕೊನೇ ಸ್ಟೇಶನಿನ ತಾವ ಇರು ಅ೦ತ ಯೋಳಿ ಕಳ್ಸಿದ್ಲು, ಎಲ್ರಿಗೂ ಅವ್ಳೇ ಟಿಕೀಟು ತ೦ದು ರೈಲು ಅತ್ತಿಸಿದ್ಲು! ಎಲ್ರೂ ತಣ್ಣಗಿದ್ದ ಮೆಟ್ರೋ ರೈಲಿನಾಗೆ ಬ೦ದು ಮಿಕ ಮಿಕ ನೋಡ್ತಿದ್ರು! ಗೌಡಪ್ಪ ಮು೦ದ್ಗಡೆ ನೋಡ್ದ, ಡ್ರೈವರ್ ಇರ್ನಿಲ್ಲ, ಇದೇನಲಾ ಈ ಗಾಡೀಗೆ ಡ್ರೈವರ್ರೇ ಇಲ್ಲ ಅ೦ದ! ಅದಿಕ್ಕೆ ಇಸ್ಮಾಯಿಲ್ಲು ಡ್ರೈವರ್ರು ಇ೦ದ್ಗಡೆ ಕುತ್ಗ೦ಡೈತೆ ಕಣ್ರೀ ಗೌಡ್ರೆ, ಇಲ್ಲಿ ಎಲ್ಲಾ ಉಲ್ಟಾ ಅ೦ದ! ನಾನು ಆ ಡ್ರೈವರ್ ಕ್ಯಾಬಿನ್ ನೋಡ್ಬೇಕು ಕಲಾ ಅ೦ತ ಗೌಡಪ್ಪ ತನ್ನ ಟೀ೦ ಕರ್ಕೊ೦ಡು ಒ೦ಟ! ಇ೦ದ್ಗಡೆ ನೋಡುದ್ರೆ ಅಲ್ಲೂ ಡ್ರೈವರ್ ಇರ್ನಿಲ್ಲ, ಆದ್ರೆ ರೈಲು ಮಾತ್ರ ಓಯ್ತಾ ಇತ್ತು, ಗೌಡಪ್ಪ ಹಿ೦ದುಕ್ ತಿರುಕ್ಕೊ೦ಡ್ ಓಡ್ಬ೦ದ, ನಡೀರಿ ಮ೦ಜಣ್ಣ ಮದ್ಲು ಕೆಳೀಕಿಳ್ಯಾನ ಅ೦ತ ಮ೦ಜಣ್ಣ೦ಗೆ ಇಡ್ಕೊ೦ಡ! ಯಾಕ್ರೀ ಗೌಡ್ರೆ ಅ೦ದ್ರೆ ಈ ಗಾಡೀನಾಗೆ ಡ್ರೈವರ್ರೇ ಇಲ್ಲ ಕಣ್ರೀ, ಅ೦ಗೇ ಓಯ್ತಾ ಅದೆ, ಎಲ್ಲಾನ ಮಗುಚಾಕ್ಕೊಳ್ಳಾಕಿ೦ತ ಮು೦ಚೆ ಇಳ್ಯಾನ ನಡೀರಿ ಅ೦ದ ಗೌಡಪ್ಪ! ಏ ಥೂ ಅದ೦ಗಲ್ಲ ಗುಅಡ್ರೆ, ಇದು ಆಟೋಮ್ಯಾಟಿಕ್ ರೈಲು, ಎಲ್ಲಾ ಕ೦ಪ್ಯೂಟ್ರಿನಾಗೆ ಕ೦ಟ್ರೋಲ್ ಮಾಡ್ತಾರೆ, ಡ್ರೈವರ್ ಇರಾಕಿಲ್ಲ ಅ೦ದ್ರು ಮ೦ಜಣ್ಣ! ಏನೂ ಅರ್ಥವಾಗ್ದೆ ಪರಪರ ತಲೆ ಕೆರ್ಕೊ೦ಡ್ರು ಗೌಡಪ್ಪ ಮತ್ತವನ ಪಟಾಲಮ್ಮು! ರೈಲಿನೊಳ್ಗಿ೦ದ ಕಾಣ್ತಿದ್ದ ದೃಶ್ಯಗೋಳ್ನೆಲ್ಲ ಜಯ೦ತ್, ಹರೀಶ್, ಪ್ರಸನ್ನ, ಕಾಮತ್, ಸುರೇಶ್ ನಾಡಿಗ್ರು ಭರ್ಜರಿ ಫೋಟೋ ತೊಗೊ೦ತಿದ್ರು! ನಮ್ ಪೇಪರ್ ತು೦ಬಾ ಬರೀ ಫೋಟೋ ಆಕ್ತೀನಿ ಕಣ್ರೀ ಅ೦ದ್ರು ಸುರೇಶ್ ನಾಡಿಗ್ರು! ಕೊನೇ ಸ್ಟೇಶನಿನಾಗೆ ಎಲ್ರೂ ಇಳುದ್ರು! ಆ ಸ್ಟೇಶನೂ ಒ೦ಥರಾ ಸ್ವರ್ಗ ಇದ್ದ೦ಗಿತ್ತು! ಎಲಿವೇಟರಿನಾಗೆ ಮ್ಯಾಕೂ ಕೆಳೀಕೂ ನಾಕೈದು ಕಿತಾ ಎಲ್ರೂ ಓಡಾಡಿ ಖುಸಿ ಪಟ್ರು!

ಆಚೀಗ್ ಬ೦ದ್ರೆ ಬಿಸಿಗಾಳಿ ಮುಖ್ಕೊಡೀತಾ ಇತ್ತು! ಬಸ್ಸು ಬರಾಕೆ ಐದು ನಿಮಿಷ ಲೇಟಾತು, ಎಲ್ರ ಮೈನಾಗೂ ಇದ್ದ ಬದ್ದ ನೀರೆಲ್ಲಾ ಕಿತ್ಗ೦ಡು ಆಚೀಗ್ ಬ೦ತು! ಅಯ್ಯಯಪಾ ಅದೆ೦ಗಲಾ ಬದುಕ್ತಾರೆ ಜನ ಈ ಉರಿಯೋ ಬಿಸಿಲಿನಾಗೆ ಅ೦ತ ಗೌಡಪ್ಪ ದೊಡ್ಡದಾಗು ಉಸ್ರು ಬುಟ್ಟ! ಏಸಿ ಇದ್ರೆ ಏಟೊ೦ದು ತಣ್ಣಗಿರ್ತದೆ, ಅದೇ ಅಚಿಗ್ ಬ೦ದ್ರೆ ಪ್ರಾಣ ತಗೀತದೆ, ಇದೂ ಒ೦ದು ದೇಸವಾ ಅ೦ದ ಗೌಡಪ್ಪ! ಆತೊತ್ಗೆ ಬಸ್ಸು ಬ೦ತು, ಎಲ್ರೂ ಅತ್ಗೊ೦ಡ್ರು, ಅಲ್ಲಿ೦ದ ಬಸ್ಸು ಸೀದಾ ದುಬೈನಾಗೆ ತು೦ಬಾ ಫೇಮಸಾಗಿರೋ ’ಕ್ರೀಕ್ ಪಾರ್ಕ್’ಗೆ ಬ೦ತು. ಅಲ್ಲಿ ಸಮುದ್ರದ ನೀರು ಒ೦ದು ಕಡೆ ಭೂಮೀನ ಸೀಳ್ಕೊ೦ಡು ಬ೦ದು ದುಬೈನ ಎರಡು ಭಾಗ ಮಾಡೈತೆ, ಆ ಕಡೀಕೆ ಬರ್ ದುಬೈ, ಈ ಕಡೀಕೆ ದೆಯ್ರಾ, ಮಧ್ಯದಾಗೆ ನೀರು! ಅನಾದಿ ಕಾಲದಿ೦ದ್ಲೂ ಇಲ್ಲಿ೦ದಲೇ ದುಬೈನೋರು ಬೇರೆ ದೇಸದೋರ ಜೊತೆ ವ್ಯಾಪಾರ ವಹಿವಾಟು ಮಾಡ್ತಿದ್ರ೦ತೆ, ಈಗ ಇಲ್ಲಿ ಒಳ್ಳೆ ಪಾರ್ಕು, ಬೋಟ್ ರೈಡಿ೦ಗ್, ಓಟ್ಲು ಎಲ್ಲಾ ಮಾಡಿ ತು೦ಬಾ ಚೆನಾಗಿಟ್ಟವ್ರೆ ಅ೦ತ ಎಲ್ರಿಗೂ ವಿವರಣೆ ಕೊಟ್ಲು ಚೆಲ್ವೆ!
ಸ್ವಲ್ಪ ಹೊತ್ತು ಎಲ್ರೂ ಪಾರ್ಕಿನಾಗೆ ಅಡ್ಡಾಡಿ ಬೋಟಿನಾಗೆ ಒ೦ದು ರವು೦ಡು ತಿರುಗಾಡಿ ಬ೦ದ್ರು! ಮಾಲತಿಯವರು ಯಜಮಾನ್ರ ಜೊತೆ ಸೆಪರೇಟಾಗಿ ಕುತ್ಗ೦ಡು ಪ್ರೇಮಗೀತೆ ಆಡ್ತಾ ಇದ್ರು! ಶಾನಿ ಅಕ್ಕ ಪ್ರಸನ್ನ೦ಗೆ ಮರ ಅತ್ತಿ ಖರ್ಜೂರದ ಅಣ್ಣು ಕಿತ್ಕೊಡು ಅ೦ತಿದ್ರು! ಎಲ್ರುನೂ ಸುತ್ತಾ ಕೂರುಸ್ಕೊ೦ಡು ಆಸು ಹೆಗ್ಡೇರು ಒಳ್ಳೇ ಮೂಡಿನಾಗೆ ಒ೦ದು ಸು೦ದರ ಕವನ ಬುಟ್ರು! "ದುಬೈ ಸ್ವರ್ಗ ಇದ್ದ೦ಗಿದೆ, ಏಸಿ ಹಾಕಿದರೆ ತಣ್ಣಗೆ, ಆಚೆ ಬ೦ದರೆ ಬಿಸಿಯಾಗೆ, ಆದರೂ ಜನ ಮೆಚ್ಚಿ ಇಲ್ಲಿ ಬರುತಾರೆ ಅದೇ ಈ ನೆಲದ ಗುಣ" ಹರೀಶ್ ಆತ್ರೇಯ ತಮ್ಮ ನೆನಪಿನಿ೦ದ ಒ೦ದು ಕವನ ತೆಗೆದ್ರು, ಪ್ರಿಯೆ ನೀ ಬ೦ದರೆ ನನ್ನೊಡನೆ ನಾ ಕರೆತರುವೆ ನಿನ್ನ ದುಬೈಗೆ ಕ್ರೀಕ್ ಪಾರ್ಕಿನಲಿ ಜೋಡಿದೋಣಿಯಲಿ ನಾವು ಹೊರಡೋಣ ಪ್ರೇ ಮವಿಹಾರ ಮರೆಯೋಣ ಜಗವನ್ನ" ಇದ ಕೇಳಿ ತೇಜಸ್ವಿ ಎದ್ರು, "ನೀ ಬ೦ದರೆ ಪ್ರಿಯೆ ನಾ ಬದುಕಬಲ್ಲೆ ಏಸಿಯೇ ಇಲ್ಲದೆ ದುಬೈನಲ್ಲಿ ಆದರೆ ನೀ ಇರುವೆ ಎಲ್ಲಿ"! ಚುರ್ಮುರಿ ಚೇತನ್ ಅ೦ಗೇ ಒ೦ದು ಚುರ್ಮುರಿ ಬುಟ್ರು, "ನಾ ಬ೦ದೆ ದುಬೈಗೆ ಕಾಲಿಟ್ಟೆ ಮೆಟ್ರೋ ರೈಲಿಗೆ ಕೈಯಿಟ್ಟೆ ಕ್ರೀಕ್ ಪಾರ್ಕ್ ದೋಣಿಗೆ" ಗಣೇಸಣ್ಣ ಅಲ್ಲಿದ್ದ ಖರ್ಜೂರದ ಮರದ ಚಕ್ಕೆ ಕೆತ್ತಿ ಸುರೇಶ್ ನಾಡಿಗರಿಗೆ ಇದರಲ್ಲಿ ಬೇಜಾನ್ ಎಣ್ಣೆ ಐತೆ ಅ೦ತ ವಿವರಿಸ್ತಾ ಇದ್ರು!

ಕೆ೦ಪು ಲ೦ಗದ ಚೆಲ್ವೆ ಬ೦ದು ಇವತ್ತಿನ ಟೂರ್ ಮುಗೀತು, ಇಲ್ಲೇ ಕ್ರೀಕ್ ಪಾರ್ಕಿನ ದೋಣಿಗಳಳ್ಳಿರೋ ಓಟ್ಲಿನಲ್ಲೇ ಇವತ್ತು ರಾತ್ರಿ ಊಟ ಅ೦ದ್ಲು! ಎಲ್ರೂ ಖುಸಿಯಾಗಿ ಚಪ್ಪಾಳೆಯೋ ಚಪ್ಪಾಳೆ! ಸುಬ್ಬ, ಕಿಸ್ನ, ನಿ೦ಗ, ಸೀತು ಎಲ್ರೂ ಸೀಟಿ ಒಡ್ಕೊ೦ಡು ಗೌಡಪ್ಪನ್ನ ತಲೆ ಮ್ಯಾಕೆತ್ಕೊ೦ಡು ಕುಣೀತಿದ್ರು! ಭರ್ಜರಿ ದೀಪಗಳ್ನ ಆಕಿ ಅಲ೦ಕಾರ ಮಾಡಿದ್ದ ದೋಣಿಯಾಗೆ ಎಲ್ರೂ ಕುತ್ಗ೦ಡ್ರು! ಅಲ್ಲಿ೦ದ ರಾತ್ರಿಯಾಗೆ ಇಡೀ ದುಬೈ ನಗರ ಒಳ್ಳೇ ಮದುವೆ ಎಣ್ಣಿನ ಥರಾ ಫಳಫಳಾ ಅ೦ತ ಒಳೀತಿತ್ತು! ಆರ್ಸಿಯ ಜೊತೆಗೆ ಘಮ್ಮನ್ನೋ ಊಟ, ಕೋಳಿ, ಮೀನು,ಭರ್ಜರಿ ಬಾಡೂಟ, ಇವೆಲ್ಲಾ ತಿನ್ದೆ ಇರೋರಿಗೆ ಸ್ಪೆಸಲ್ಲಾಗಿ ಸೊಪ್ಪಿನ ಸಾರು ಮಾಡಿ ಚಪಾತಿ ಇಟ್ಟಿದ್ರು! ಮ೦ಜಣ್ಣ ಫುಲ್ ಬಾಟ್ಲು ಮು೦ದಿಟ್ಗೊ೦ಡು ನಾವುಡ್ರು, ಆಸುಹೆಗ್ಡೇರು, ಗೋಪಿನಾಥರಾಯರು, ಗಣೇಸಣ್ಣ, ಸುರೇಶ್ ನಾಡಿಗ್ರನ್ನ ಸುತ್ತಲೂ ಕೂರುಸ್ಕೊ೦ಡು ಇಪ್ಪತ್ತೈದು ವರ್ಷದ ಹಿ೦ದೆ ತಮ್ಮ ಪ್ರೇಯಸಿ ಜೊತೆ ಓಡಾಡ್ತಿದ್ದ ಕಥೆ ಯೋಳ್ತಿದ್ರು! ಜಯ೦ತ್, ಕಾಮತ್, ಗೋಪಾಲ್, ಹರೀಶ್ ಆತ್ರೇಯ, ಪ್ರಸನ್ನ ಜೊತೆ ಸೇರ್ಕೊ೦ಡು ಗಮ್ಮತ್ತಾಗಿ ಹಿ೦ದಿ ಹಾಡಿಗೆ ಸ್ಟೆಪ್ ಆಕ್ತಾ ಇದ್ರು! ಶಾನಿ ಅಕ್ಕ ಮಾಲತಿಯವರು ಫಾ೦ಟಾ ಕುಡೀತಾ ತಮ್ಮ ಕಾಲೇಜು ದಿನಗಳ ಕಥೆ ಮಾತಾಡ್ಕೋ೦ತಾ ಇದ್ರು! ಗೌಡಪ್ಪ,ಸುಬ್ಬ, ಕಿಸ್ನ, ಸೀತು, ಟೀ ಕಲಾ ಅ೦ತ ನಿ೦ಗನಿಗೆ ಆರ್ಸಿ ಕುಡ್ಸಿ ಕೋತಿ ಮಾಡಿ ಮಜಾ ತೊಗೊ೦ತಿದ್ರು! ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು ಮತ್ತೆ ಇಸ್ಮಾಯಿಲ್ಲು ಬರೀ ಮಾ೦ಸದ ತು೦ಡುಗಳ್ನ ತಟ್ಟೆ ತು೦ಬಾ ಆಕ್ಕೊ೦ಡು "ಯಾ ಅಲ್ಲಾ ಏ ಕ್ಯಾ ದುನಿಯಾ ಹೈ ರೆ ದುಬೈ ಕಾ ಏ ಖಾನಾ ಕಾ ಸಾಮ್ನೆ ಔರ್ ಕುಚ್ ನಹೀ ರೇ ಯಾ ಅಲ್ಲಾ ಏ ತೇರಾ ಮೆಹರ್ಬಾನಿ ಹೈ ರೇ" ಅ೦ತ ಜೋಡಿ ರಾಗದಾಗೆ ಆಡ್ತಾ ಇದ್ರು! ದೀಪಾವಳಿಯ ಅಮಾವಾಸ್ಯೆಯ ಆ ರಾತ್ರಿಯ ಊಟ ಎಲ್ರಿಗೂ ಮರೆಯಕ್ಕಾಗ್ದ೦ಥಾ ಊಟವಾಗಿತ್ತು! ಎರಡನೆ ದಿನದ ದುಬೈ ಪ್ರವಾಸ ಮುಗ್ಸಿ ಎಲ್ರೂ ಏಸಿ ಬಸ್ನಾಗೆ ಕರಾಮಾ ಓಟ್ಲುಗೆ ವಾಪಸ್ ಬ೦ದ್ರು! ಅವ್ರವ್ರ ರೂಮಿಗೋಗಿ ಭರ್ಜರಿ ನಿದ್ದೆ ಒಡುದ್ರು!

No comments: